ಇಂದಿನ ಪ್ರಪಂಚದಲ್ಲಿ ಮಾಹಿತಿಯ ಮಹತ್ವ ಅದೆಷ್ಟಿದೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ವಿಶ್ವದ ಮೂಲೆಮೂಲೆ ಗಳಲ್ಲಿನ ಅದೆಷ್ಟೋ ಸಂಸ್ಥೆಗಳ ಕಾರ್ಯನಿರ್ವಹಣೆಯೆಲ್ಲ ಸೂಕ್ತ ಮಾಹಿತಿಯ ಸಂಗ್ರಹಣೆ ಹಾಗೂ ಆ ಮಾಹಿತಿಯ ಸರಿಯಾದ ಬಳಕೆಯ ಮೇಲೆ ಆಧರಿತವಾಗಿರುತ್ತದೆ.

ಸೋಪು, ಪೇಸ್ಟು ಇತ್ಯಾದಿಗಳನ್ನೆಲ್ಲ ಉತ್ಪಾದಿಸುವ ಒಂದು ಸಂಸ್ಥೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ಕಳೆದ ಒಂದು ತಿಂಗಳಿನಲ್ಲಿ ತಮ್ಮ ಯಾವ ಉತ್ಪನ್ನ ಯಾವ ಪ್ರದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಖರ್ಚಾಗಿದೆ ಎಂಬ ವಿಷಯ ಗೊತ್ತಿಲ್ಲದೆ ಆ ಸಂಸ್ಥೆ ತನ್ನ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುವುದು ಬಹಳ ಕಷ್ಟವಾಗುತ್ತದೆ ಅಲ್ಲವೆ?

ಬೇರೆಬೇರೆ ವಿಷಯಗಳಿಗೆ ಸಂಬಂಧಿಸಿದ ಇಂತಹ ಮಾಹಿತಿಯನ್ನೆಲ್ಲ ಅಗತ್ಯಬಿದ್ದ ತಕ್ಷಣ ಸೂಕ್ತವಾದ ರೂಪದಲ್ಲಿ ಒದಗಿಸಲು ಸಹಾಯಮಾಡುವ ಕ್ಷೇತ್ರವೇ ಬಿಸಿನೆಸ್ ಇಂಟೆಲಿಜೆನ್ಸ್ ಅಥವಾ ಬಿಐ.

ವ್ಯಾವಹಾರಿಕ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹ, ಶೇಖರಣೆ, ಸಂಸ್ಕರಣೆ ಹಾಗೂ ವಿತರಣೆಗಾಗಿ ಬಳಕೆಯಾಗುವ ಕ್ರಮಗಳು ಹಾಗೂ ತಂತ್ರಾಂಶಗಳು ಈ ಕ್ಷೇತ್ರದ ಪ್ರಮುಖ ಅಂಗಗಳು. ಈ ಕ್ರಮಗಳು ಹಾಗೂ ತಂತ್ರಾಂಶಗಳ ಸೂಕ್ತ ಬಳಕೆ, ವ್ಯಾಪಾರ-ವಹಿವಾಟಿಗೆ ಸಂಬಂಧಿಸಿದ ಪರಿಣಾಮಕಾರಿ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಸಹಕಾರಿಯಾಗುತ್ತದೆ. ವ್ಯಾಪಾರ-ವಹಿವಾಟಿನ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಮಾಹಿತಿ ಸಂಗ್ರಹಣೆ ಹಾಗೂ ಸಂಸ್ಕರಣೆಯ ಮಹತ್ವ ಹೆಚ್ಚುತ್ತಿರುವುದರಿಂದ ಬಿಸಿನೆಸ್ ಇಂಟೆಲಿಜೆನ್ಸ್ ಬಲ್ಲ ತಂತ್ರಜ್ಞರಿಗೂ ಈಗ ಮಾರುಕಟ್ಟೆಯಲ್ಲಿ ಬೇಡಿಕೆ ಕಂಡುಬರುತ್ತಿದೆ.

ಬಿಸಿನೆಸ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಅವಕಾಶ ಅರಸುವವರು ಕಂಪ್ಯೂಟರ್ ಸೈನ್ಸ್ ಹಿನ್ನೆಲೆ ಹೊಂದಿರಬೇಕಾದದ್ದು ಅವಶ್ಯಕ. ಡೇಟಾಬೇಸ್‌ಗಳು, ಡೇಟಾ ಮಾಡೆಲಿಂಗ್, ಆನ್‌ಲೈನ್ ಅನಲಿಟಿಕಲ್ ಪ್ರಾಸೆಸಿಂಗ್ (OLAP) ಹಾಗೂ ಆನ್‌ಲೈನ್ ಟ್ರಾನ್ಸಾಕ್ಷನ್ ಪ್ರಾಸೆಸಿಂಗ್ (OLTP) ಮುಂತಾದವುಗಳ ಅರಿವು ಕೂಡ ಇರಬೇಕು. ಡೇಟಾ ವೇರ್‌ಹೌಸಿಂಗ್ ಹಾಗೂ ಡೇಟಾ ಮೈನಿಂಗ್‌ನಂತಹ ಸಂಬಂಧಿತ ಕ್ಷೇತ್ರಗಳಲ್ಲಿಯೂ ಜ್ಞಾನ ಅಪೇಕ್ಷಣೀಯ. ಬಿಸಿನೆಸ್ ಆಬ್ಜೆಕ್ಟ್ಸ್, ಇನ್‌ಫರ್ಮ್ಯಾಟಿಕಾ ಮೊದಲಾದವುಗಳ ಜೊತೆಗೆ ಒರ್ಯಾಕಲ್, ಎಸ್‌ಎಪಿ ಹಾಗೂ ಐಬಿಎಂನಂತಹ ಸಂಸ್ಥೆಗಳು ಹೊರತಂದಿರುವ ಬಿಸಿನೆಸ್ ಇಂಟೆಲಿಜೆನ್ಸ್ ತಂತ್ರಾಂಶಗಳ ಪೈಕಿ ಕೆಲವದರ ಪರಿಚಯ ವಾದರೂ ಇರಬೇಕಾದದ್ದು ಕಡ್ಡಾಯ.

ಕೆಲ ಸಂಸ್ಥೆಗಳು ಈ ಕ್ಷೇತ್ರಗಳಲ್ಲೂ ತರಬೇತಿ ನೀಡಲು ಪ್ರಾರಂಭಿಸಿರುವುದು ಗಮನಾರ್ಹ ಸಂಗತಿ. ಆದರೆ ಇಲ್ಲಿ ಕೆಲಸದ ಅನುಭವ ಇರುವವರಿಗೇ ಹೆಚ್ಚಿನ ಆದ್ಯತೆ ಎಂಬ ವಿಷಯವನ್ನು ಕೂಡ ದೃಷ್ಟಿಯಲ್ಲಿಟ್ಟುಕೊಳ್ಳಬೇಕಾಗುತ್ತದೆ. ಕೆಲಸದ ಮಹತ್ವ, ಮಾಹಿತಿಯ ಪ್ರಮಾಣ ಹಾಗೂ ನಿಮ್ಮ ಅನುಭವದ ಮೇಲೆ ಸಂಬಳ ನಿರ್ಧಾರವಾಗುತ್ತದೆ.

(ಮೇ ೨೦೦೬)