ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಸಮಯದ ಜೊತೆಗೆ ಜೀವನಶೈಲಿಯ ಬದಲಾವಣೆ ಕೂಡ ಬಹಳ ಸಾಮಾನ್ಯವಾಗಿಬಿಟ್ಟಿದೆ. ನಮ್ಮ ದೈನಂದಿನ ಬದುಕಿನ ಪ್ರತಿಯೊಂದು ಕ್ಷಣದಲ್ಲೂ ವಿಭಿನ್ನ ಬಗೆಯ ಉಪಕರಣಗಳ ಹಾಗೂ ಸಲಕರಣೆಗಳ ಬಳಕೆ ವ್ಯಾಪಕವಾಗಿದೆ. ಇದರ ಜೊತೆಗೆ ಕೈಗಾರಿಕಾ ಕ್ಷೇತ್ರ ಕೂಡ ತೀವ್ರಗತಿಯಲ್ಲಿ ಬೆಳೆಯುತ್ತಿದೆ.

ಕೈಗಾರಿಕಾ ಕ್ಷೇತ್ರದ ಬೆಳವಣಿಗೆಯ ಜೊತೆಗೆ ರೂಪಗೊಂಡಿರುವ ಹೊಸ ಕಲ್ಪನೆ ಡಿಸೈನ್ ಔಟ್‌ಸೋರ್ಸಿಂಗ್‌ನದು. ಈ ಬೆಳವಣಿಗೆಯ ದೆಸೆಯಿಂದಾಗಿ ನಮ್ಮ ದೇಶ ಇದೀಗ ಪ್ರಪಂಚದ ಅತ್ಯಂತ ಆಧುನಿಕ ಉಪಕರಣಗಳನ್ನು ವಿನ್ಯಾಸಗೊಳಿಸುವ ಕೆಲಸದಲ್ಲಿ ತೊಡಗಿಕೊಂಡಿದೆ.

ವಿದ್ಯುನ್ಮಾನ ಉಪಕರಣಗಳ ವಿಶ್ವವಿಖ್ಯಾತ ನಿರ್ಮಾತೃಗಳು ತಮ್ಮ ಉತ್ಪಾದನಾ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಸಕಲ ಪ್ರಯತ್ನಗಳನ್ನೂ ಕೈಗೊಳ್ಳುತ್ತಿರುವುದು ಅವಕಾಶಗಳ ಈ ಹೊಸ ಅಲೆಗೆ ಕಾರಣವಾಗಿರುವ ಅಂಶ. ಪ್ರಪಂಚದ ಬೇರೆಬೇರೆ ಕಡೆಗಳಲ್ಲಿರುವ ಗ್ರಾಹಕರಿಗಾಗಿ ವಿಭಿನ್ನರೀತಿಯ ಉಪಕರಣಗಳನ್ನು ನಿರ್ಮಿಸಲು ಹೊರಡುವ ಈ ಉದ್ದಿಮೆಗಳು ಅವುಗಳನ್ನು ವಿನ್ಯಾಸಗೊಳಿಸುವ ಕೆಲಸವನ್ನು ಇದೀಗ ಭಾರತಕ್ಕೆ ಹೊರಗುತ್ತಿಗೆ ನೀಡುತ್ತಿದ್ದಾರೆ. ಜೊತೆಗೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳ ಮರು ವಿನ್ಯಾಸದ ಕೆಲಸ ಕೂಡ ಇಲ್ಲಿಗೆ ಬರುತ್ತಿದೆ. ವಿದ್ಯುನ್ಮಾನ ಉಪ ಕರಣಗಳ ಜೊತೆಗೆ ವಾಹನ ಹಾಗೂ ಯಂತ್ರಗಳ ವಿನ್ಯಾಸ ಕೂಡ ಹೊರಗುತ್ತಿಗೆ ಪಡೆಯುತ್ತಿರುವ ಕೆಲಸಗಳ ಪಟ್ಟಿಗೆ ಸೇರುತ್ತಿವೆ.

ಇದರಿಂದಾಗಿ ಭಾರತದಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗು ತ್ತಿರುವುದರ ಜೊತೆಗೆ ಈ ಉದ್ದಿಮೆದಾರರಿಗೂ ಅಪಾರ ಪ್ರಮಾಣದ ಉಳಿತಾಯವಾಗುತ್ತಿದೆ. ಅಮೆರಿಕಾದಂತಹ ದೇಶಗಳಲ್ಲಿ ಈ ಕೆಲಸಕ್ಕಾಗಿ ಗಂಟೆಗೆ ಎಂಟುನೂರು ಡಾಲರುಗಳ ಶುಲ್ಕವಿದ್ದರೆ ಭಾರತ ದಲ್ಲಿ ಅಷ್ಟೇ ಗುಣಮಟ್ಟದ ಕೆಲಸಕ್ಕಾಗಿ ಕೇವಲ ಅರುವತ್ತು ಡಾಲರು ಗಳ ವೆಚ್ಚ ತಗುಲುತ್ತದೆ! ಈ ಭಾರೀ ಪ್ರಮಾಣದ ಉಳಿತಾಯದಿಂದ ಸ್ಫೂರ್ತಿಗೊಂಡ ಡಿಸೈನ್ ಔಟ್‌ಸೋರ್ಸಿಂಗ್ ಉದ್ದಿಮೆಯ ವಹಿವಾಟು ಅತಿ ಶೀಘ್ರದಲ್ಲೇ ವಾರ್ಷಿಕ ಮುನ್ನೂರು ಕೋಟಿ ರೂಪಾಯಿಗಳನ್ನು ತಲುಪುವ ನಿರೀಕ್ಷೆಯಿದೆ.

ಆಟೋಮೋಟಿವ್, ಏರೋಸ್ಪೇಸ್ ಹಾಗೂ ಇಂಡಸ್ಟ್ರಿಯಲ್ ಡಿಸೈನ್ ಜೊತೆಗೆ ಮೂರು ಆಯಾಮದ (ತ್ರೀಡಿ) ಮಾಡೆಲಿಂಗ್‌ನಲ್ಲಿ ಲಭ್ಯವಿರುವ ಭಾರತೀಯರ ಪ್ರತಿಭೆಯನ್ನು ಈ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ.

ಇಂಜಿನಿಯರಿಂಗ್ ಜೊತೆಗೆ ಡಿಸೈನ್ ಕ್ಷೇತ್ರದಲ್ಲೂ ಪರಿಣತಿ ಹೊಂದಿರುವವರಿಗೆ ಇಲ್ಲಿ ಅವಕಾಶಗಳು ಲಭ್ಯ. ಕ್ಯಾಡ್, ಕ್ಯಾಮ್, ಸಿಎಇಗಳ ಜ್ಞಾನ, ಪ್ರಾಡಕ್ಟ್ ಲೈಫ್‌ಸೈಕಲ್ ಮ್ಯಾನೇಜ್‌ಮೆಂಟ್ ಅನುಭವ ಹಾಗೂ ಉತ್ತಮ ಮಟ್ಟದ ಕಂಪ್ಯೂಟರ್ ಜ್ಞಾನ ಅಗತ್ಯ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್‌ನಂತಹ ಸಂಸ್ಥೆಗಳಲ್ಲಿ ತರಬೇತಿ ಪಡೆದವರಿಗೆ ಹೆಚ್ಚಿನ ಆದ್ಯತೆಯಿದೆ.

ಸದ್ಯದಲ್ಲಿ ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ತಜ್ಞರ ಕೊರತೆ ತೀವ್ರವಾಗಿ ಕಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇದು ಅಪಾರ ಪ್ರಮಾಣದ ಅವಕಾಶಗಳನ್ನು ಸೃಷ್ಟಿಸುವ ಉದ್ದಿಮೆಯಾಗಿ ಹೊರಹೊಮ್ಮುವುದಂತೂ ಖಂಡಿತ.

(ಆಗಸ್ಟ್ ೨೦೦೬)