ಪ್ರಪಂಚದಾದ್ಯಂತ ಎಲ್ಲ ಕ್ಷೇತ್ರಗಳಲ್ಲೂ ಗಣಕಗಳ ಬಳಕೆ ತೀವ್ರವಾಗಿ ಹೆಚ್ಚುತ್ತಿರುವುದು ಗೊತ್ತಿರುವ ವಿಷಯವೇ. ಈ ಹೆಚ್ಚಳದ ಜೊತೆಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮೂಲಸೌಕರ್ಯಕ್ಕಾಗಿ ಹೂಡಲಾಗು ತ್ತಿರುವ ಬಂಡವಾಳ ಕೂಡ ಹೆಚ್ಚುತ್ತಿದೆ. ಜೊತೆಗೆ ಇಷ್ಟೆಲ್ಲ ಸೌಲಭ್ಯ ವನ್ನು ಸುಲಲಿತವಾಗಿ ನಿರ್ವಹಿಸಿಕೊಂಡು ಹೋಗಲು ಅಗತ್ಯವಾದ ಪರಿಶ್ರಮ ಕೂಡ ತೀವ್ರವಾಗಿ ಹೆಚ್ಚುತ್ತಿದೆ.

“ಇಷ್ಟೊಂದು ಪರಿಶ್ರಮಪಡಲು ನಮ್ಮ ಕೈಯಲ್ಲಿ ಆಗೋದಿಲ್ಲ” ಎನ್ನುವ ಸಂಸ್ಥೆಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿರುವಂತೆ ರೂಪಗೊಳ್ಳುತ್ತಿರುವ ಹೊಸ ಕ್ಷೇತ್ರವೇ ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್ ಮೆಂಟ್ ಸರ್ವಿಸಸ್ ಅಥವಾ ಐಎಂಎಸ್.

ವಿಶಾಲ ಅರ್ಥದಲ್ಲಿ ಹೇಳುವುದಾದರೆ ಯಾವುದೇ ಒಂದು ಸಂಸ್ಥೆಯ ಗಣಕಗಳು, ಜಾಲಗಳು ಹಾಗೂ ಮಾಹಿತಿ ಸಂಗ್ರಹಣಾ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್ ಎಂದು ಕರೆಯಬಹುದು. ಗಣಕಗಳು ಸರಿಯಾಗಿ ಕೆಲಸಮಾಡುವಂತೆ ನೋಡಿಕೊಳ್ಳುವುದು, ಗಣಕ ಜಾಲಗಳಲ್ಲಿ ಏನಾದರೂ ತೊಂದರೆ ಕಾಣಿಸಿಕೊಂಡಾಗ ಅತ್ಯಲ್ಪ ಅವಧಿಯಲ್ಲಿ ಅದನ್ನು ಸರಿಪಡಿಸುವುದು, ಈ ಸಂಪೂರ್ಣ ವ್ಯವಸ್ಥೆಯನ್ನು ಅತ್ಯುತ್ತಮ ಕಾರ್ಯಕ್ಷಮತೆಯೊಂದಿಗೆ ನಿರ್ವಹಿಸುವುದು – ಇವೆಲ್ಲ ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್‌ನ ಅಡಿಯಲ್ಲಿ ಬರುವ ಕೆಲಸಗಳು. ಗಣಕ ಬಳಕೆದಾರರಿಗೆ ಸಣ್ಣಪುಟ್ಟ ತೊಂದರೆ ಎದುರಾದಾಗ ದೂರವಾಣಿ ಹಾಗೂ ಅಂತರಜಾಲದ ಮೂಲಕ ನೆರವು ನೀಡುವ ಕೆಲಸ ಕೂಡ ಇರುತ್ತದೆ. ಅಲ್ಲದೆ ಯಾವುದೇ ಆಕಸ್ಮಿಕ ಸಂಭವಿಸಿದಾಗ ಆದಷ್ಟು ಬೇಗ ಆ ಸಂಸ್ಥೆಯ ವ್ಯವಹಾರಗಳನ್ನು ಮರುಸ್ಥಾಪಿಸಲು ಅನುವುಮಾಡಿಕೊಡುವ ಡಿಸಾಸ್ಟರ್ ರೆಕವರಿ ಯೋಜನೆ ಸಿದ್ಧಪಡಿಸುವುದು ಹಾಗೂ ಅದನ್ನು ಅನುಷ್ಠಾನಕ್ಕೆ ತರುವುದು ಕೂಡ ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್‌ನ ಭಾಗವೇ.

ಹೊರದೇಶದ ಸಂಸ್ಥೆಗಳಿಗೆ ಇಂತಹ ಸೇವೆಗಳನ್ನು ನಮ್ಮ ದೇಶದಿಂದಲೇ ಒದಗಿಸುವ ಮೂಲಕ ನಮ್ಮ ಐಟಿ ಸಂಸ್ಥೆಗಳು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ. ಅತ್ಯುನ್ನತ ತಂತ್ರಜ್ಞಾನ ಬಳಸಿ ಹೊರದೇಶದ ಸಂಸ್ಥೆಗಳ ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್ ಅಗತ್ಯ ಗಳನ್ನು ಇದೀಗ ನಮ್ಮ ಊರುಗಳಿಂದಲೇ ಪೂರೈಸಲಾಗುತ್ತಿದೆ. ಈ ವರ್ಷದಲ್ಲಿ ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್ ಕ್ಷೇತ್ರದ ವಹಿವಾಟು ಸುಮಾರು ೨೮೦ ಮಿಲಿಯನ್ ಡಾಲರುಗಳನ್ನು ಮೀರಿ ನಡೆಯಲಿದೆ ಎಂಬ ಅಂದಾಜಿದೆ. ಬ್ಯಾಂಕಿಂಗ್, ಹಣಕಾಸು ಹಾಗೂ ಟೆಲಿಕಾಮ್ ಕ್ಷೇತ್ರಗಳಿಂದ ಇಲ್ಲಿ ಭಾರೀ ಹೂಡಿಕೆ ನಡೆಯುವ ನಿರೀಕ್ಷೆಯೂ ಇದೆ.

ನೀವೂ ಕೂಡ ಈ ಕ್ಷೇತ್ರಕ್ಕೆ ಕಾಲಿರಿಸಬೇಕಾದರೆ ನಿಮಗೆ ಕಂಪ್ಯೂಟರ್ ಸೈನ್ಸ್ ವಿಷಯದ ಶೈಕ್ಷಣಿಕ ಹಿನ್ನೆಲೆ ಇರಬೇಕಾದದ್ದು ಅಗತ್ಯ. ಸಿಸ್ಟಂ ಅಡ್ಮಿನಿಸ್ಟ್ರೇಷನ್ ಹಾಗೂ ನೆಟ್‌ವರ್ಕ್ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಪರಿಣತಿ ಅಪೇಕ್ಷಣೀಯ. ಈ ವಿಷಯಗಳ ಬಗೆಗೆ ವಿವಿಧ ಸಂಸ್ಥೆಗಳು ನೀಡುವ ಪ್ರಮಾಣಪತ್ರಗಳನ್ನು ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ಇರುತ್ತದೆ. ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್‌ಗೆ ಬೇಕಾದ ತಂತ್ರಾಂಶಗಳನ್ನು (ಟೂಲ್) ಸ್ವಂತವಾಗಿ ಅಭಿವೃದ್ಧಿಪಡಿಸಿಕೊಳ್ಳುವ ಪರಿಪಾಟವೂ ಇರುವುದರಿಂದ ಪ್ರೋಗ್ರಾಮಿಂಗ್ ಜ್ಞಾನ ಕೂಡ ಇರಬೇಕಾಗುತ್ತದೆ. ತಪ್ಪುಗಳಿಗೆ ಅವಕಾಶವೇ ಇಲ್ಲದ ವಾತಾವರಣದಲ್ಲಿ ವರ್ಷದ ಮುನ್ನೂರ ಅರವತ್ತೈದು ದಿನಗಳೂ ದುಡಿಯಲು ಸಿದ್ಧರಾಗಿರಬೇಕಾದದ್ದು ಅತ್ಯಗತ್ಯ.

ಇಲ್ಲಿ ದೊರಕುವ ಸಂಬಳವನ್ನು ಸಾಫ್ಟ್‌ವೇರ್ ಇಂಜಿನಿಯರ್‌ಗಳ ಸಂಬಳಕ್ಕೆ ಧಾರಾಳವಾಗಿ ಹೋಲಿಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್‌ನಲ್ಲಿ ತೊಡಗಿಸಿ ಕೊಂಡಿರುವ ಸಂಸ್ಥೆಗಳೇ ತಮ್ಮ ಅಗತ್ಯಕ್ಕೆ ತಕ್ಕಂತೆ ಉದ್ಯೋಗಿಗಳಿಗೆ ತರಬೇತಿ ನೀಡುವುದರಿಂದ ಈ ಕ್ಷೇತ್ರದಲ್ಲಿ ತರಬೇತಿ ನೀಡುವ ಸಂಸ್ಥೆಗಳು ಇನ್ನೂ ಹೆಚ್ಚಾಗಿ ಹುಟ್ಟಿಕೊಂಡಿಲ್ಲ.

(ಜೂನ್ ೨೦೦೬)