ಇಂದಿನ ಪ್ರಪಂಚದಲ್ಲಿ ಮಾಹಿತಿ ಎಂದರೆ ಸಂಪತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿದಿನವೂ ಅನೇಕ ಹೊಸ ತಂತ್ರಜ್ಞಾನಗಳು ಸೃಷ್ಟಿಯಾಗುತ್ತಿರುತ್ತವೆ. ಅನೇಕ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ಅವರು ಸೃಷ್ಟಿಸುವ ಇಂತಹ ತಂತ್ರಜ್ಞಾನಗಳೇ ಆದಾಯದ ಮೂಲಗಳು.

ಆದರೆ ಇಷ್ಟೆಲ್ಲ ಕಷ್ಟಪಟ್ಟು ಸೃಷ್ಟಿಸಿದ ತಂತ್ರಜ್ಞಾನವನ್ನು ಬೇರೊಬ್ಬ ವ್ಯಕ್ತಿ ಲಪಟಾಯಿಸಿಬಿಟ್ಟರೆ? ಪಟ್ಟ ಕಷ್ಟವೆಲ್ಲ ನದಿ ನೀರಿನಲ್ಲಿ ತೊಳೆದ ಹುಣಿಸೆಹಣ್ಣಿನಂತೆ ಆಗುವುದಿಲ್ಲವೆ?

ಹಾಗಾಗದಂತೆ ತಡೆಯುವುದೇ ಪೇಟೆಂಟ್ ಕಾನೂನು. ‘ಈ ತಂತ್ರ ಜ್ಞಾನವನ್ನು ಮೊದಲು ನಾನೇ ಕಂಡುಹಿಡಿದದ್ದು. ಇದನ್ನು ಯಾರಾದರೂ ಉಪಯೋಗಿಸಬೇಕಾದರೆ ರಾಯಧನ ಕೊಡ ಬೇಕಾದದ್ದು ನನಗೇ’ ಎನ್ನುವ ಅಂಶಕ್ಕೆ ಅಧಿಕೃತ ಒಪ್ಪಿಗೆ ನೀಡುವುದು ಇದೇ ಕಾನೂನು. ಹೀಗೆ ಸಂರಕ್ಷಿಸಲ್ಪಡುವ ಯಾವುದೇ ವಸ್ತು ಅಥವಾ ವಿಷಯ ಇಂಟಲೆಕ್ಚುಯಲ್ ಪ್ರಾಪರ್ಟಿ ಅಥವಾ ಬೌದ್ಧಿಕ ಸಂಪತ್ತು ಎಂದು ಕರೆಸಿಕೊಳ್ಳುತ್ತದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸಹೊಸ ಅನ್ವೇಷಣೆಗಳು ಹೆಚ್ಚುತ್ತಿದ್ದಂತೆ ಅವುಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಪೇಟೆಂಟ್ ಹಾಗೂ ಇಂಟಲೆಕ್ಚುಯಲ್ ಪ್ರಾಪರ್ಟಿಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಚೆನ್ನಾಗಿ ಅರಿತ ತಜ್ಞರಿಗಾಗಿ ಹುಡುಕಾಟ ಹೆಚ್ಚುತ್ತಿದೆ.

ಹೊಸ ಅನ್ವೇಷಣೆಗಳನ್ನು ಕೈಗೊಳ್ಳುವವರ ಜೊತೆಗೆ ನಿಂತು, ಅವರ ಅನ್ವೇಷಣೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು, ಅದಕ್ಕೆ ಪೂರಕವಾಗುವಂತೆ ಅರ್ಜಿಯನ್ನು ತಯಾರಿಸಿ ಪೇಟೆಂಟ್ ದೊರಕಿಸಿ ಕೊಡುವುದು ಇಂತಹ ತಜ್ಞರ ಜವಾಬ್ದಾರಿಯಾಗಿರುತ್ತದೆ. ಕಾನೂನು ಕ್ಷೇತ್ರದ ಉತ್ತಮ ಜ್ಞಾನದ ಜೊತೆಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಆಗುಹೋಗುಗಳನ್ನೂ ಅರ್ಥೈಸಿಕೊಳ್ಳಬಲ್ಲವರಿಗೆ ಇಲ್ಲಿ ಅವಕಾಶ ಹೆಚ್ಚು. ಹೀಗಾಗಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಹಿನ್ನೆಲೆಯುಳ್ಳವರು ಬೌದ್ಧಿಕ ಸಂಪತ್ತು ಸಂರಕ್ಷಣೆಗೆ ಸಂಬಂಧಪಟ್ಟ ಕಾನೂನುಗಳನ್ನು ಅರಿತುಕೊಂಡು ಈ ಕ್ಷೇತ್ರಕ್ಕೆ ಕಾಲಿಡುವುದೂ ಉಂಟು. ಉತ್ತಮ ಫಲಿತಾಂಶಗಳನ್ನು ದೊರಕಿಸಿಕೊಡಬಲ್ಲವರಿಗೆ ಅತ್ಯುತ್ತಮವಾದ ಸಂಬಳವೂ ದೊರಕುತ್ತದೆ ಎಂದು ಬೇರೆಯಾಗಿ ಹೇಳಬೇಕಾಗಿಲ್ಲ.

ಪೇಟೆಂಟ್ ಹಾಗೂ ಇಂಟಲೆಕ್ಚುಯಲ್ ಪ್ರಾಪರ್ಟಿಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಗೂಗಲ್‌ನಂತಹ ಸರ್ಚ್ ಇಂಜನ್‌ಗಳನ್ನು ಬಳಸಬಹುದು.

(ಅಕ್ಟೋಬರ್ ೨೦೦೬)