ಡೇಟಾಬೇಸ್ ಅಥವಾ ದತ್ತಸಂಚಯ – ಅಂದರೆ, ಯಾವುದೇ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿಯ ಸಂಗ್ರಹ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು, ಬ್ಯಾಂಕಿನಲ್ಲಿರುವ ಖಾತೆಗಳು ಹಾಗೂ ಹಣಕಾಸಿನ ಲೆಕ್ಕಾಚಾರ, ಸಂಸ್ಥೆಯೊಂದರ ಗ್ರಾಹಕರ ವಿವರ, ನಮ್ಮ ದೇಶದಲ್ಲಿ ಆದಾಯ ತೆರಿಗೆ ಪಾವತಿಸುತ್ತಿರುವ ಎಲ್ಲರ ವೈಯುಕ್ತಿಕ ವಿವರಗಳು – ಹೀಗೆ ಯಾವುದೇ ಬಗೆಯ ಮಾಹಿತಿ ಯನ್ನು ಡೇಟಾಬೇಸ್‌ಗಳಲ್ಲಿ ಶೇಖರಿಸಿಡಬಹುದು. ತಮ್ಮ ಕೆಲಸದಲ್ಲಿ ಗಣಕ ತಂತ್ರಾಂಶಗಳನ್ನು ಬಳಸುವ ಬಹುತೇಕ ಎಲ್ಲ ಸಂಸ್ಥೆಗಳೂ ಡೇಟಾಬೇಸ್‌ಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಅವಲಂಬಿಸಿ ರುತ್ತವೆ.

ಹೀಗಿರುವಾಗ ಇಂತಹ ಡೇಟಾಬೇಸ್‌ಗಳನ್ನು ನಿಭಾಯಿಸಬಲ್ಲವರಿಗೆ ಮಾರುಕಟ್ಟೆಯಲ್ಲಿ ಸಹಜವಾಗಿಯೇ ಬೇಡಿಕೆ ಕಾಣಿಸುತ್ತಿದೆ. ಬೇರೆಬೇರೆ ರೀತಿಯ ಡೇಟಾಬೇಸ್‌ಗಳನ್ನು ರೂಪಿಸಿ, ಅವುಗಳ ಕಾರ್ಯಕ್ಷಮತೆ ಉತ್ತಮವಾಗಿರುವಂತೆ ನೋಡಿಕೊಂಡು, ಅವುಗಳಲ್ಲಿ ಕಾಣಿಸಿಕೊಳ್ಳಬಹುದಾದ ತಾಪತ್ರಯಗಳನ್ನು ನಿವಾರಿಸಿಕೊಂಡು ಹೋಗುವ ವ್ಯಕ್ತಿಯೇ ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ ಅಥವಾ ಡಿಬಿಎ. ಇದು ಬಹಳ ಜವಾಬ್ದಾರಿಯುತವಾದ ಕೆಲಸವೂ ಹೌದು. ಹೊಸ ಡೇಟಾಬೇಸ್‌ಗಳನ್ನು ಅತ್ಯಂತ ಸಕ್ಷಮವಾದ ರೀತಿಯಲ್ಲಿ ನಿರ್ಮಿಸುವುದು, ಅಲ್ಲಿ ಸಂಗ್ರಹವಾಗುವ ಮಾಹಿತಿಗೆ ಅಗತ್ಯವಾದ ಸ್ಥಳಾವಕಾಶವನ್ನು ಯೋಜಿಸುವುದು, ಡೇಟಾಬೇಸ್‌ನ ಕಾರ್ಯಕ್ಷಮತೆ ಹೆಚ್ಚಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು, ಈ ನಡುವೆ ಕಾಣಿಸಿಕೊಳ್ಳುವ ತೊಂದರೆಗಳನ್ನು ಚುರುಕಾಗಿ ಸರಿಪಡಿಸುವುದು – ಇವೆಲ್ಲ ಡೇಟಾಬೇಸ್ ಅಡ್ಮಿನಿಸ್ಟ್ರೇಟರ್‌ಗಳ ಕೆಲಸ.

ಬೇರೆಬೇರೆ ರೀತಿಯ ಡೇಟಾಬೇಸ್‌ಗಳ ರಚನೆಯ ಬಗೆಗೆ ಉತ್ತಮ ಮಟ್ಟದ ಜ್ಞಾನ ಇರಬೇಕಾದದ್ದು ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ ಆಗಲು ಬೇಕಾದ ಪ್ರಾಥಮಿಕ ಅರ್ಹತೆ. ಒರ್ಯಾಕಲ್, ಡಿಬಿ೨, ಆಕ್ಸೆಸ್, ಎಸ್‌ಕ್ಯೂಎಲ್ ಸರ್ವರ್ ಮೊದಲಾದ ಯಾವುದೇ ಡೇಟಾಬೇಸ್‌ನಲ್ಲಿ ಪ್ರಾವೀಣ್ಯ ಕೂಡ ಇರಬೇಕು. ಡೇಟಾಬೇಸ್‌ಗಳ  ರಚನೆ ಹಾಗೂ ಅವುಗಳ ನಿರ್ವಹಣೆಯಲ್ಲಿ ಬೇಕಾಗುವ ವಿವಿಧ ಟೂಲ್‌ಗಳ ಬಳಕೆಯನ್ನು ಕೂಡ ಕಲಿತಿರಬೇಕಾಗುತ್ತದೆ. ಗಣಕವಿಜ್ಞಾನದಲ್ಲಿ ಪದವಿ ಅಪೇಕ್ಷಣೀಯ; ಆದರೆ ಇತ್ತೀಚೆಗೆ ಬೇರೆ ಪದವೀಧರರಿಗೂ ಡಿಬಿಎ ಕ್ಷೇತ್ರದಲ್ಲಿ ಅವಕಾಶಗಳು ತೆರೆದುಕೊಳ್ಳುತ್ತಿವೆ.

ಡೇಟಾಬೇಸ್ ಅಡ್ಮಿನಿಸ್ಟ್ರೇಷನ್ ಕ್ಷೇತ್ರದಲ್ಲಿ ತರಬೇತಿ ನೀಡುವ ಹಲವಾರು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂಸ್ಥೆಗಳಷ್ಟೇ ಅಲ್ಲದೆ ಮೈಕ್ರೋಸಾಫ್ಟ್ ಹಾಗೂ ಒರ್ಯಾಕಲ್ ಸಂಸ್ಥೆಗಳು ಕೂಡ ಪರೀಕ್ಷೆಗಳನ್ನು ನಡೆಸಿ ಪ್ರಮಾಣಪತ್ರಗಳನ್ನು ನೀಡುತ್ತವೆ. ಇಂತಹ ಸರ್ಟಿಫಿಕೇಷನ್‌ಗಳನ್ನು ಪಡೆದವರಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಆದ್ಯತೆಯೂ ಸಿಗುತ್ತದೆ.

ಬೇರೆಲ್ಲ ಕ್ಷೇತ್ರಗಳಂತೆ ಇಲ್ಲೂ ಕೂಡ ಅನುಭವಕ್ಕೇ ಹೆಚ್ಚಿನ ಪ್ರಾತಿನಿಧ್ಯ. ಹೀಗಾಗಿ ಡಿಬಿಎಗಳಿಗೆ ದೊರಕುವ ಸಂಬಳವೂ ಬಹುತೇಕ ಅವರ ಅನುಭವ ಹಾಗೂ ಜ್ಞಾನವನ್ನು ಅವಲಂಬಿಸಿರುತ್ತದೆ.

(ಮೇ ೨೦೦೬)