ನಾವು ಈಗ ಬದುಕುತ್ತಿರುವುದು ಮಾಹಿತಿ ಕ್ರಾಂತಿಯ ಯುಗದಲ್ಲಿ. ಮಾಹಿತಿ ಅಂದರೆ ಸಂಪತ್ತು ಎನ್ನುವ ಕಾಲ ಇದು. ನಮ್ಮ ಪ್ರಪಂಚ ದಲ್ಲಿರುವ ಪ್ರತಿಯೊಂದು ವಿಷಯಕ್ಕೂ ಸಂಬಂಧಿಸಿದಂತೆ ಅಪಾರ ಪ್ರಮಾಣದ ಮಾಹಿತಿ ಲಭ್ಯವಿರುವ ಈ ಕಾಲದಲ್ಲಿ ಅದೆಲ್ಲ ಮಾಹಿತಿಯನ್ನೂ ಸರಿಯಾಗಿ ಸಂಗ್ರಹಿಸಿಡುವ ಹಾಗೂ ಬೇಕಾದಾಗ ತಕ್ಷಣ ದೊರಕುವಂತೆ ಮಾಡುವ ಅಗತ್ಯ ಬಹಳ ತೀವ್ರವಾಗಿದೆ.

ಈಗ ನಿಮ್ಮ ವಿಷಯವನ್ನೇ ತೆಗೆದುಕೊಳ್ಳಿ. ನಿಮ್ಮ ಮನೆಯ ಸಮೀಪದಲ್ಲಿರುವ ಬ್ಯಾಂಕಿನಲ್ಲಿ ನೀವೊಂದು ಖಾತೆ ತೆರೆದಿರಿ ಎಂದುಕೊಳ್ಳೋಣ. ಆಗ ಆ ಬ್ಯಾಂಕು ನಿಮ್ಮ ಹಾಗೂ ನಿಮ್ಮ ಖಾತೆಯ ಬಗ್ಗೆ ಮಾಹಿತಿ ಸಂಗ್ರಹಣೆ ಪ್ರಾರಂಭಿಸುತ್ತದೆ – ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಇಮೇಲ್ ವಿಳಾಸ, ಪ್ಯಾನ್ ಸಂಖ್ಯೆ ಇವುಗಳಿಂದ ಪ್ರಾರಂಭಿಸಿ ನೀವು ಬ್ಯಾಂಕಿನಿಂದ ಏನೇನು ಸೌಲಭ್ಯಗಳನ್ನು ಬಳಸಿಕೊಂಡಿದ್ದೀರಿ, ಸಾಲ ತೆಗೆದುಕೊಂಡಿದ್ದೀರಾ, ತೆಗೆದುಕೊಂಡಿದ್ದರೆ ಸರಿಯಾಗಿ ವಾಪಸ್ ಕಟ್ಟುತ್ತಿದ್ದೀರಾ, ಇನ್ನು ಮುಂದೆಯೂ ನಿಮಗೆ ಸಾಲ ಕೊಡುವುದನ್ನು ಮುಂದುವರಿಸಬಹುದಾ – ಹೀಗೆ.

ಈ ಬಗೆಯ ಮಾಹಿತಿ ಸಂಗ್ರಹಣೆ ಎಲ್ಲ ಕ್ಷೇತ್ರಗಳಲ್ಲೂ ನಡೆಯುತ್ತದೆ: ತಾವು ತಮ್ಮ ಗ್ರಾಹಕರಿಗೆ ಎಷ್ಟು ಸಾಲ ಒದಗಿಸಿದ್ದೇವೆ ಹಾಗೂ ಅದರ ವಾಪಸಾತಿ ಹೇಗಿದೆ ಎನ್ನುವುದರ ಬಗ್ಗೆ  ಹಣಕಾಸು ಸಂಸ್ಥೆಗಳು ಮಾಹಿತಿ ಸಂಗ್ರಹಿಸುತ್ತವೆ; ವಿವಿಧ ಸಂಸ್ಥೆಗಳ ಶೇರುಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಣೆ ಶೇರು ಮಾರುಕಟ್ಟೆಯಲ್ಲಿ ನಡೆಯು ತ್ತಿರುತ್ತದೆ; ತಮ್ಮ ಸಂಪರ್ಕಗಳನ್ನು ಬಳಸಿ ಯಾರು ಯಾವಾಗ ಎಲ್ಲಿಗೆ ಎಷ್ಟುಬಾರಿ ಕರೆಮಾಡಿದರು ಎಂಬ ವಿಷಯ ದೂರಸಂಪರ್ಕ ಸಂಸ್ಥೆಗಳಲ್ಲಿ ಸಂಗ್ರಹವಾಗಿರುತ್ತದೆ; ಚಿಲ್ಲರೆ ಮಾರುಕಟ್ಟೆಗಾಗಿ ವಿವಿಧ ವಸ್ತುಗಳನ್ನು ತಯಾರಿಸುವ ಸಂಸ್ಥೆ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನ ಗಳ ಪ್ರದರ್ಶನ ಹೇಗಿದೆ ಎನ್ನುವುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತದೆ.

ಇಷ್ಟೆಲ್ಲ ಕಡೆಗಳಲ್ಲಿ ನಡೆಯುವ ಇವೆಲ್ಲ ಮಾಹಿತಿ ಸಂಗ್ರಹಣೆಯ ಅಂತಿಮ ಉದ್ದೇಶ ಮಾತ್ರ ಒಂದೇ – ಈ ಚಾರಿತ್ರಿಕ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ತಮ್ಮ ಮುಂದಿನ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವುದು. ಯಾವುದೋ ಒಬ್ಬ ವ್ಯಕ್ತಿ ಸಾಲಕ್ಕಾಗಿ ಅರ್ಜಿ ಹಿಡಿದು ಬಂದಾಗ ಅವನಿಗೆ ಸಾಲ ಕೊಡಬಹುದೋ ಇಲ್ಲವೋ ಎಂದು ನಿರ್ಧರಿಸುವುದು, ಯಾವುದೋ ಶೇರಿನ ಬೆಲೆ ಅಸಹಜವಾಗಿ ಜಾಸ್ತಿಯಾಗುತ್ತಿದ್ದರೆ ಅದರ ಬಗ್ಗೆ ಒಂದು ಕಣ್ಣಿಡುವುದು, ತಮ್ಮ ದೂರವಾಣಿ ಸಂಪರ್ಕಗಳ ಬಳಕೆಯನ್ನು ಆಧರಿಸಿ ಹೊಸಹೊಸ ಕಾರ್ಯಕ್ರಮಗಳನ್ನು ರೂಪಿಸುವುದು, ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳ ಪ್ರದರ್ಶನ ಆಧರಿಸಿ ತಮ್ಮ ಮುಂದಿನ ಚಟುವಟಿಕೆಗಳನ್ನು ತೀರ್ಮಾನಿಸುವುದು – ಹೀಗೆ ಇಂತಹ ಮಾಹಿತಿಯ ಉಪಯೋಗ ಹಲವು ಬಗೆಗಳಲ್ಲಿ ನಡೆಯುತ್ತದೆ.

ಈ ಮಾಹಿತಿಯನ್ನು ಸಂಗ್ರಹಿಸಿಡುವ ವ್ಯವಸ್ಥೆಯೇ ’ಡೇಟಾ ವೇರ್‌ಹೌಸ್’, ಸರಳವಾಗಿ ಹೇಳಬೇಕಾದರೆ ಮಾಹಿತಿಯ ಗೋದಾಮು! ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಚಾರಿತ್ರಿಕ ಮಾಹಿತಿಯನ್ನು ಸಂಗ್ರಹಿಸಿಡುವ ಈ ವ್ಯವಸ್ಥೆಯಲ್ಲಿ ಸಂಗ್ರಹವಾಗುವ ಮಾಹಿತಿ ಇನ್ನೆಂದೂ ಬದಲಾಗುವುದಿಲ್ಲ, ಅಳಿಸಿಹೋಗುವುದೂ ಇಲ್ಲ. ಸಮಯ ಸರಿದಂತೆ ಸಂಗ್ರಹವಾಗುವ ಮಾಹಿತಿಯ ಪ್ರಮಾಣ ಮಾತ್ರ ಹೆಚ್ಚುತ್ತಲೇ ಹೋಗುತ್ತದೆ.

ಹೀಗೆ ಮಾಹಿತಿಯನ್ನು ಸಂಗ್ರಹಿಸುವುದು, ಸರಿಯಾಗಿ ಶೇಖರಿಸಿಡುವುದು ಹಾಗೂ ಬೇಕಾದಾಗ ಬೇಕಾದ ರೂಪದಲ್ಲಿ ಬಳಕೆದಾರರಿಗೆ ಒದಗಿಸುವುದು ಮಕ್ಕಳಾಟದ ವಿಷಯವೇನೂ ಅಲ್ಲ. ಸಂಸ್ಥೆಗಳು ಎಷ್ಟೋ ವಿಷಯಗಳ ಬಗ್ಗೆ ಕೈಗೊಳ್ಳುವ ನಿರ್ಧಾರಗಳು ಈ ಮಾಹಿತಿಯನ್ನೇ ಆಧರಿಸಿರುವುದರಿಂದ ಬಹಳಷ್ಟು ಸಾರಿ ಅವುಗಳ ಭವಿಷ್ಯವೇ ಈ ಮಾಹಿತಿಯನ್ನು ಅವಲಂಬಿಸಿರುತ್ತದೆ.

ಹೀಗಾಗಿಯೇ ಡೇಟಾ ವೇರ್‌ಹೌಸಿಂಗ್ ಕ್ಷೇತ್ರದಲ್ಲಿ ಈಗ ಅವಕಾಶಗಳ ಮಹಾಪೂರ. ಡೇಟಾ ವೇರ್‌ಹೌಸ್‌ನ ರಚನೆಯಿಂದ ಪ್ರಾರಂಭಿಸಿ, ಬೇಕಾದ ರೂಪದಲ್ಲಿ ವರದಿಗಳನ್ನು ತಯಾರಿಸುವವರೆಗೆ ಎಲ್ಲ ಕೆಲಸಗಳಲ್ಲೂ ಪರಿಣತರಿಗಾಗಿ ಹುಡುಕಾಟ ಸತತವಾಗಿ ನಡೆದಿದೆ.

ಈ ಡೇಟಾ ವೇರ್‌ಹೌಸ್‌ಗಳ ರಚನೆ ಹೇಗಿರಬೇಕು ಎಂದು ತೀರ್ಮಾನಿಸುವುದು ಅತ್ಯಂತ ಪ್ರಮುಖವಾದ ಕೆಲಸ. ಯಾವ ರೀತಿಯ ಡೇಟಾಬೇಸ್ (ದತ್ತಸಂಚಯ) ಅನ್ನು ಬಳಸಬೇಕು, ಅದರ ಕಾರ್ಯ ನಿರ್ವಹಣೆ ಉತ್ತಮವಾಗಿರಬೇಕಾದರೆ ಮಾಹಿತಿಯನ್ನು ಹೇಗೆ ವಿಂಗಡಿಸ ಬೇಕು ಮೊದಲಾದ ತೀರ್ಮಾನಗಳನ್ನು ಕೈಗೊಳ್ಳಲು ವಿವಿಧ ಡೇಟಾ ಬೇಸ್‌ಗಳ ಹಾಗೂ ಅವುಗಳ ರಚನೆಯ ಬಗ್ಗೆ ಸಾಕಷ್ಟು ಪರಿಜ್ಞಾನ ಇರಬೇಕಾದದ್ದು ಆವಶ್ಯಕ.

ಡೇಟಾ ವೇರ್‌ಹೌಸ್‌ನಲ್ಲಿ ಸಂಗ್ರಹಿಸಲು ವಿವಿಧ ಮೂಲಗಳಿಂದ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆಯೇ ಎಕ್ಸ್‌ಟ್ರಾಕ್ಷನ್. ಈ ಪ್ರಾಥಮಿಕ ಮಾಹಿತಿಯನ್ನು ಬೇಕಾದ ರೂಪಕ್ಕೆ ಬದಲಾಯಿಸುವುದಕ್ಕೆ ಟ್ರಾನ್ಸ್‌ಫಾರ್ಮೇಷನ್ ಎಂದು ಹೆಸರು. ಅಂತಿಮವಾಗಿ ಈ ಮಾಹಿತಿಯನ್ನು ಡೇಟಾ ವೇರ್‌ಹೌಸಿನ ಒಳಕ್ಕೆ ಕೊಂಡೊಯ್ದು ಶೇಖರಿಸುವ ಪ್ರಕ್ರಿಯೆ ಲೋಡಿಂಗ್. ಈ ಹಂತಗಳಲ್ಲಿ ಪ್ರೋಗ್ರಾಮಿಂಗ್ ಜ್ಞಾನ ಬಹಳ ಮುಖ್ಯವಾಗುತ್ತದೆ. ಒರಾಕಲ್, ಡಿಬಿ/೨ ಮುಂತಾದ ಡೇಟಾಬೇಸ್‌ಗಳ ಪರಿಚಯ ಹಾಗೂ ಯೂನಿಕ್ಸ್ ಕಾರ್ಯಾಚರಣ ವ್ಯವಸ್ಥೆಯ ಅನುಭವ ಇಲ್ಲಿ ಉಪಯುಕ್ತವಾಗಬಲ್ಲದು. ಅಷ್ಟೇ ಅಲ್ಲದೆ, ಡೇಟಾವೇರ್‌ಹೌಸಿಂಗ್‌ನ ಈ ಮೂರು ಪ್ರಕ್ರಿಯೆಗಳನ್ನು ನಡೆಸಲಿಕ್ಕಾಗಿಯೇ ಅನೇಕ ತಂತ್ರಾಂಶಗಳು ತಯಾರಾಗಿವೆ (ಇನ್‌ಫರ್‌ಮ್ಯಾಟಿಕಾ ಎನ್ನುವುದು ಇಂತಹ ತಂತ್ರಾಂಶಗಳಲ್ಲಿ ಪ್ರಮುಖವಾದದ್ದು). ಈ ತಂತ್ರಾಂಶಗಳನ್ನು ಬಲ್ಲವರಿಗಂತೂ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಡೇಟಾ ವೇರ್‌ಹೌಸ್ ಸಿದ್ಧವಾದ ನಂತರ ಅದರಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಸರಿಯಾಗಿ ಬಳಸಲು ಅನುವುಮಾಡಿಕೊಡುವುದು ಮತ್ತೊಂದು ಮಹತ್ವದ ಭಾಗ. ’ಬಿಸಿನೆಸ್ ಇಂಟಲಿಜೆನ್ಸ್’ ಎಂಬ ಹೆಸರಿನಲ್ಲಿ ಈ ಕ್ಷೇತ್ರ ಈಗ ತೀವ್ರವಾಗಿ ಬೆಳೆದುನಿಂತಿದೆ. ಡೇಟಾ ವೇರ್‌ಹೌಸ್‌ನಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಬಳಸಿ ಬೇಕಾದ ರೂಪದ ವರದಿಗಳನ್ನು (ರಿಪೋರ್ಟ್) ತಯಾರಿಸಲು ಹಲವಾರು ತಂತ್ರಾಂಶಗಳು ಲಭ್ಯವಿವೆ (ಬಿಸಿನೆಸ್ ಆಬ್ಜೆಕ್ಟ್ಸ್,  ಕ್ರಿಸ್ಟಲ್ ರಿಪೋರ್ಟ್ಸ್, ಒರಾಕಲ್ ಡಿಸ್ಕವರರ್ ಇತ್ಯಾದಿ). ಇವನ್ನೆಲ್ಲ ಕಲಿತವರಿಗೂ ಈಗ ಅಪಾರ ಪ್ರಮಾಣದ ಅವಕಾಶಗಳು ಲಭ್ಯವಿವೆ.

(ಫೆಬ್ರವರಿ ೨೦೦೬)