ಇತ್ತೀಚೆಗೆ ಒಂದು ಅಂತರಜಾಲ ತಾಣದ ಚರ್ಚಾವೇದಿಕೆಯಲ್ಲಿ ಒಬ್ಬ ಅಮೇರಿಕನ್ ಪ್ರಜೆ ಕೇಳಿದ ಒಂದು ಪ್ರಶ್ನೆ ಇಲ್ಲಿ ಪ್ರಸ್ತುತ. ಆತ ಕೇಳಿದ್ದ – ನಾನು ಭಾರತಕ್ಕೆ ಹೋಗುವುದಾದರೆ ಯಾವ ಭಾರತೀಯ ಭಾಷೆ ಕಲಿಯುವುದು ನನ್ನ ಉದ್ಯೋಗಕ್ಕೆ ಹೆಚ್ಚು ಪ್ರಯೋಜನಕಾರಿಯಾಗುವುದು?  ಆತನ ಉದ್ಯೋಗವನ್ನು ಇಲ್ಲಿ ದಾಖಲಿಸುವುದು ಅವಶ್ಯ. ಆದುವೇ ಮಾಹಿತಿ ತಂತ್ರಜ್ಞಾನ. ಒಂದು ಕಾಲದಲ್ಲಿ ಭಾರತೀಯರು ಅಮೇರಿಕಾಕ್ಕೆ ಹೋಗಲಿಕ್ಕೆಂದೇ ಇಂಗ್ಲಿಷ್ ಭಾಷೆ ಕಲಿಯುತ್ತಿದ್ದರು. ಈಗ ಭಾರತ ದೇಶವು ಪ್ರಪಂಚದ ಮಾಹಿತಿ ತಂತ್ರಜ್ಞಾನ ನಕಾಶೆಯಲ್ಲಿ ಪ್ರಮುಖ ಸ್ಥಾನ ಗಳಿಸಿದೆ. ವಿದೇಶೀಯರೂ ಈಗ ಭಾರತಕ್ಕೆ ಉದ್ಯೋಗಕ್ಕೆ ಬರಲಾರಂಭಿಸಿದ್ದಾರೆ. ಅದಕ್ಕಾಗಿ ಯಾವ ಭಾರತೀಯ ಭಾಷೆಯನ್ನು ಕಲಿಯಬೇಕೆಂದು ಚಿಂತಿಸುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಸಾಧಿಸಿದ ಪ್ರಗತಿಗಿದು ದ್ಯೋತಕ.

ಇಪ್ಪತ್ತನೆಯ ಶತಮಾನದ ಅತ್ಯದ್ಭುತ ಸಂಶೋಧನೆ ಮಾಹಿತಿ ತಂತ್ರಜ್ಞಾನ ಎಂದು ಖಂಡಿತವಾಗಿಯೂ ಕರೆಯಬಹುದು. ಈ ಮಾತು ಸ್ವಲ್ಪ ಕ್ಲೀಷೆ ಎಂದು ಅನ್ನಿಸಿದರೂ ಅದನ್ನು ಮತ್ತೆ ಮತ್ತೆ ಹೇಳಿದರೆ ತಪ್ಪೇನಿಲ್ಲ. ಮಾಹಿತಿ ತಂತ್ರಜ್ಞಾನದ ಸೌಲಭ್ಯಗಳು ಈಗೀಗ ಜನ ಸಾಮಾನ್ಯರನ್ನೂ ತಲುಪುತ್ತಿದೆ. ಹಳ್ಳಿ ಹಳ್ಳಿಗೂ ಮೊಬೈಲ್ ಫೋನು ಬಂದಿದೆ. ರೈತನೊಬ್ಬ ತನ್ನ ಭೂಮಿಯ ಪಹಣಿ ಪತ್ರ ಬೇಕಿದ್ದರೆ ಜಿಲ್ಲಾ ಕೇಂದ್ರಕ್ಕೆ ಹತ್ತು ಸಲ ಅಲೆಯಬೇಕಾಗಿಲ್ಲ. ಸಮೀಪದ ಕಿಯೋಸ್ಕ್‌ಗೆ ಭೇಟಿ ನೀಡಿದರೆ ಸಾಕು. ಅರ್ಧ ಘಂಟೆಯ ಒಳಗೆ ಅಗತ್ಯ ಕಾಗದ ಪತ್ರಗಳನ್ನು ಗಣಕದ ಮೂಲಕ ಪಡೆಯಬಹುದು. ಜನನ ಮರಣದ ದಾಖಲಾತಿ, ಪ್ರಮಾಣ ಪತ್ರ ಪಡೆಯುವಿಕೆ, ತೆರಿಗೆ ಪಾವತಿಸುವಿಕೆ, ಇತ್ಯಾದಿ ಹಲವು ಕೆಲಸಗಳನ್ನು ದೊಡ್ಡ ಪಟ್ಟಣಗಳಿಗೆ ಪಯಣಿಸದೆ ತಮ್ಮ ಊರಿನಲ್ಲೇ ಹಳ್ಳಿಯ ಜನರು ನೆರವೇರಿಸಿ ಕೊಳ್ಳಬಹುದು. ಇವೆಲ್ಲ ಸಾಧ್ಯವಾಗಿರುವುದು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ.

ಮಾಹಿತಿ ತಂತ್ರಜ್ಞಾನದ ಬೆಳವಣಿಗೆ ಜೊತೆ ಜೊತೆ ಅದರಲ್ಲಿನ ಉದ್ಯೋಗಾವಕಾಶಗಳೂ ಬೆಳೆದಿವೆ. ಎಷ್ಟರ ಮಟ್ಟಿಗೆ ಎಂದರೆ ಪ್ರತಿಯೊಬ್ಬನಿಗೂ ಈ ಕ್ಷೇತ್ರದಲ್ಲೇ ಕೆಲಸ ಬೇಕು. ಮದುವೆ ಪ್ರಾಯಕ್ಕೆ ಬಂದ ಮಗಳಿಗೆ ಹುಡುಗ ಹುಡುಕುವಾಗ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಉಳ್ಳ ಹುಡುಗನೇ ಬೇಕು. ಎಷ್ಟು ಖರ್ಚಾದರೂ ಸರಿ, ತಮ್ಮ ಮಕ್ಕಳನ್ನು ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೇ ಕಳುಹಿಸಬೇಕು. ಅಷ್ಟು ಕಲಿತ ಮೇಲೂ ಕೆಲಸ ಸಿಗದಿದ್ದರೆ ನಂತರ ಹಲವು ವಿಶಿಷ್ಟ ಕೋರ್ಸುಗಳಿಗೆ ಸೇರಿ ಮತ್ತೆ ಹಣ ಖರ್ಚು ಮಾಡ ಬೇಕು. ಹೀಗಿದೆ ಈ ಕ್ಷೇತ್ರದ ಆಕರ್ಷಣೆ. ಈ ಎಲ್ಲ ಆಕರ್ಷಣೆಗಳಿಗೆ ಕಾರಣ ಈ ಕ್ಷೇತ್ರದಲ್ಲಿ ಉದ್ಯೋಗದಿಂದ ಸಿಗುವ ತೃಪ್ತಿಯಲ್ಲ. ಪ್ರತಿಯಬ್ಬ ತಂತ್ರಜ್ಞನೂ ತನ್ನ ಉದ್ಯೋಗದಲ್ಲಿ ತೃಪ್ತಿಯಿಂದ ಇದ್ದಾನೆ ಎಂದುಕೊಳ್ಳಬೇಕಾಗಿಲ್ಲ. ಈ ಉದ್ಯೋಗಿಗಳಿಗೆ ಸಿಗುವ ಕೈತುಂಬ ಸಂಬಳವೇ ಈ ಕ್ಷೇತ್ರಕ್ಕೆ ಜನರನ್ನು ಆಕರ್ಷಿಸಲು ಪ್ರಮುಖ ಕಾರಣ. ಪ್ರತಿಯೊಬ್ಬ ವ್ಯಕ್ತಿಗೂ ತಾನು ಬದುಕಲು, ತನ್ನ ಸಂಸಾರ ನಡೆಸಲು ಉದ್ಯೋಗ ಬೇಕು. ಅದರಲ್ಲೇನೂ ತಪ್ಪಿಲ್ಲ. ಕೋಟಿಗಟ್ಟಲೆ ಜನ ಸಂಖ್ಯೆಯ ನಮ್ಮ ದೇಶದಲ್ಲಿ ಪ್ರತಿಯೊಬ್ಬನಿಗೂ ತನಗೆ ತೃಪ್ತಿ ನೀಡುವ ಉದ್ಯೋಗ ಸಿಗುವುದು ಮತ್ತು ಅದರ ಸಂಪಾದನೆಯಿಂದಲೇ ಸಂಸಾರ ನಡೆಸುವುದು ಕಷ್ಟಸಾಧ್ಯ. ಆದುದರಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಡೆಗೆ ಎಲ್ಲರ ಒಲವು ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಉದ್ಯೋಗಾವಕಾಶಗಳಿರು ವುದೇನೋ ಸತ್ಯ. ಆದರೆ ಇಂತಹ ಕ್ಷೇತ್ರದಲ್ಲಿರುವ ಉದ್ಯೋಗಾ ವಕಾಶಗಳೇನೇನು? ಅವನ್ನು ಪಡೆಯಬೇಕಾದರೆ ನಮ್ಮಲ್ಲಿರಬೇಕಾದ ಅರ್ಹತೆಗಳೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಶ್ರೀನಿಧಿ ಯವರ ಈ ಪುಸ್ತಕವಿದೆ. ಹಲವು ನಮೂನೆಯ ಕೆಲಸಗಳಿಗೆ ವಿವಿಧ ಅರ್ಹತೆಗಳಿವೆ. ಅವೆಲ್ಲವನ್ನು ಈ ಚಿಕ್ಕ ಪುಸ್ತಕದಲ್ಲಿ ಪಟ್ಟಿ ಮಾಡಲಾಗಿದೆ. ಉದ್ಯೋಗಾರ್ಥಿಗಳು ತಮ್ಮ ಆಸಕ್ತಿಗೆ ಸಮೀಪ ವಾಗಿರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಸೇರಲು ಬೇಕಾದ ಅರ್ಹತೆಯನ್ನು ಸಂಪಾದಿಸಲು ಪ್ರಯತ್ನಿಸಬಹುದು.

ಮಾಹಿತಿ ತಂತ್ರಜ್ಞಾನ ಎಷ್ಟು ವೇಗದಲ್ಲಿ ಬೆಳೆಯುತ್ತಿದೆಯೆಂದರೆ ಈಗ ಕಲಿತ ವಿಷಯಗಳು ಎರಡೇ ವರ್ಷಗಳಲ್ಲಿ ಅಪ್ರಸ್ತುತವಾಗುವ ಸಾಧ್ಯತೆಗಳಿವೆ. ಈ ಪುಸ್ತಕದಲ್ಲಿರುವ ಲೇಖನಗಳು ದಿನ ಪತ್ರಿಕೆ ಯೊಂದರಲ್ಲಿ ಈಗಾಗಲೇ ಅಂಕಣ ರೂಪದಲ್ಲಿ ಪ್ರಕಟವಾದ ಬರೆಹಗಳು. ಅವು ಪ್ರಕಟವಾದ ಕಾಲಕ್ಕೆ ಅವು ಹೆಚ್ಚು ಪ್ರಸ್ತುತ ವಾಗಿದ್ದವು. ಈ ಪುಸ್ತವನ್ನು ನೀವು ಓದುವಾಗ ಅವುಗಳಲ್ಲಿ ಹಲವು ವಿಷಯಗಳು ಮಾರ್ಪಾಡು ಹೊಂದಿರುವ ಸಾಧ್ಯತೆಗಳಿವೆ.

ಆದುದರಿಂದ ಓದುಗರು ಹೆಚ್ಚಿನ ಮತ್ತು ಇತ್ತೀಚಿನ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ಮೂಲ ಮಾಹಿತಿಗಳನ್ನು ಪಡೆಯಲು ಅಂತರಜಾಲ ತಾಣಗಳನ್ನು ವೀಕ್ಷಿಸುವುದು ಒಳ್ಳೆಯದು. ಹಾಗೆಂದು ಹೇಳಿ ಈ ಪುಸ್ತಕ ಅಪ್ರಸ್ತುತವೆಂದೇನಲ್ಲ. ಯಾವುದೇ ಒಂದು ಪುಸ್ತಕ ಯಾವುದೇ ಒಂದು ಕ್ಷೇತ್ರದ ಬಗ್ಗೆ ಸಮಗ್ರ ಮಾಹಿತಿ ನೀಡುವುದು ಅಸಾಧ್ಯ. ಹಾಗೆಯೇ ಈ ಪುಸ್ತಕ ಕೂಡ. ಈ ಕ್ಷೇತ್ರದಲ್ಲಿ ಉದ್ಯೋಗ ಹುಡುಕುವವರಿಗೆ ಇದು ಒಂದು ರೀತಿಯ ಮಾರ್ಗಸೂಚಿ. ಮುಂದಿನ ದಾರಿಯಲ್ಲಿ ಸಾಗುವುದು ಅವರಿಗೇ ಬಿಟ್ಟದ್ದು.

ಎರಡು ಸಾವಿರಕ್ಕಿಂತ ಹೆಚ್ಚು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಬೆಳವಣಿಗೆಯು ಆಗಬೇಕಿದ್ದರೆ ಅದನ್ನು ಮಾಹಿತಿ ತಂತ್ರ ಜ್ಞಾನಕ್ಕೆ ಅಳವಡಿಸುವುದು ಅಗತ್ಯ. ಅದಕ್ಕೆ ಬೇಕಾದ ಹಲವು ಕೆಲಸಗಳು ಈಗಾಗಲೇ ಅಗಿವೆ. ಕನ್ನಡ ಭಾಷೆಯೆಂದರೆ ಪಂಪ ರನ್ನರಿಂದ ಪ್ರಾರಂಭಿಸಿ ಬೇದ್ರೆ, ಕುವೆಂಪುಗೆ ನಿಲ್ಲಿಸಬೇಕಾಗಿಲ್ಲ. ಕನ್ನಡ ಸಾಹಿತ್ಯದಲ್ಲಿ ಇತ್ತೀಚಿನ ವಿಷಯಗಳು ಸೇರಿಕೊಳ್ಳಬೇಕಾಗಿದೆ. ಈ ವಿಷಯಗಳಲ್ಲಿ ಮಾಹಿತಿ ತಂತ್ರಜ್ಞಾನವು ಪ್ರಮುಖವಾಗಿದೆ.

ಈ ವಿಷಯದ ಬಗ್ಗೆ ಲೇಖನ ಬರೆಯುವ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ಶ್ರೀನಿಧಿ ಒಬ್ಬರು. ಅವರು ಈ ಕ್ಷೇತ್ರದಲ್ಲೇ ಉದ್ಯೋಗಿಯಾಗಿರುವ ಕಾರಣ ಎಲ್ಲ ಒಳಹೊರಗುಗಳನ್ನು ಬಲ್ಲವರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವ ಲಕ್ಷಕ್ಕಿಂತ ಅಧಿಕ ಕನ್ನಡಿಗರಲ್ಲಿ ಕೆಲವು ನೂರು ಮಂದಿಯಾದರೂ ಶ್ರೀನಿಧಿಯವರ ಮೇಲ್ಪಂಕ್ತಿಯನ್ನು ಅನುಸರಿಸಿದರೆ ಕನ್ನಡಕ್ಕೆ ನಿಜವಾಗಿಯೂ ಉಪಕಾರವಾಗುತ್ತಿತ್ತು.

ಡಾ. ಯು.ಬಿ. ಪವನಜ
pavanaja@gmail.com