ಯಂತ್ರಮಾನವ ಅಥವಾ ರೋಬಾಟ್‌ಗಳ ಕಲ್ಪನೆ ಬಹಳ ಹಿಂದಿನಿಂದಲೂ ನಮ್ಮಲ್ಲಿ ಮುಗಿಯದ ಕುತೂಹಲವನ್ನು ಮೂಡಿಸುತ್ತ ಬಂದಿದೆ. ಸೆಕ್ಯೂರಿಟಿ ಗಾರ್ಡ್‌ನಂತೆ ಕೆಲಸಮಾಡುವ ರೋಬಾಟ್, ನಾಯಿಯಂತೆ ವರ್ತಿಸುವ ರೋಬಾಟ್, ಡ್ಯಾನ್ಸ್ ಮಾಡುವ ರೋಬಾಟ್ – ಹೀಗೆ ವಿವಿಧ ಬಗೆಯ ರೋಬಾಟ್‌ಗಳು ಸದಾ ನಮ್ಮ ಕುತೂಹಲಕ್ಕೆ ಗ್ರಾಸವಾಗುತ್ತಲೇ ಇರುತ್ತವೆ.

ಆದರೆ ರೋಬಾಟ್ ಎಂಬ ಪದದ ಅರ್ಥ ಇಷ್ಟಕ್ಕೇ ಸೀಮಿತ ವಾದುದಲ್ಲ. ಯಾವುದೇ ಒಂದು ಸ್ವಯಂಚಾಲಿತವಾಗಿ ನಿರ್ವಹಿಸಬಲ್ಲ ಯಂತ್ರವನ್ನು ರೋಬಾಟ್ ಎಂದು ಕರೆಯಬಹುದು ಎಂದು ಇಂಟರ್‌ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಷನ್ (ಐಎಸ್‌ಒ) ಹೇಳುತ್ತದೆ. ಹೀಗಾಗಿ ಇಂದಿನ ಪರಿಸ್ಥಿತಿಯಲ್ಲಿ ರೋಬಾಟ್‌ಗಳ ಕುರಿತಾದ ಅಧ್ಯಯನಗಳು ಬಹಳ ಮಹತ್ವ ಪಡೆದುಕೊಂಡಿವೆ.

ರೋಬಾಟ್‌ಗಳ ವಿನ್ಯಾಸ ಹಾಗೂ ಅವುಗಳ ಕಾರ್ಯವಿಧಾನವನ್ನು ಕುರಿತಾದ ವಿಜ್ಞಾನವೇ ರೋಬಾಟಿಕ್ಸ್. ರೋಬಾಟ್‌ಗಳ ಕುರಿತು ಅಧ್ಯಯನ ನಡೆಸಲು, ಹೊಸ ಹೊಸ ಸಂಶೋಧನೆಗಳನ್ನು ಕೈಗೊಳ್ಳಲು ವಿಜ್ಞಾನದ ಈ ಅಂಗದಲ್ಲಿ ಪರಿಣತಿ ಹೊಂದಿರಬೇಕಾದದ್ದು ಅಗತ್ಯ. ಯಂತ್ರಗಳಲ್ಲಿ ಕೊಂಚಮಟ್ಟಿಗಿನ ಬುದ್ಧಿವಂತಿಕೆಯನ್ನು ಅಳವಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವ ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ಕೂಡ ರೋಬಾಟಿಕ್ಸ್‌ಗೆ ಸಂಬಂಧಪಟ್ಟ ಮತ್ತೊಂದು ರೋಚಕ ಕ್ಷೇತ್ರ. ಮಾನವಯಂತ್ರ ’ಸೈಬರ್ಗ್’ನಂತಹ ಕಲ್ಪನೆಗಳನ್ನು ಬೆಳೆಸುವ ಮೂಲಕ ಮಾನವರು ಹಾಗೂ ರೋಬಾಟ್‌ಗಳ ನಡುವೆ ಇರುವ ವ್ಯತ್ಯಾಸಗಳನ್ನು ಕಡಿಮೆಮಾಡುವ ನಿಟ್ಟಿನಲ್ಲಿ ಪ್ರಯತ್ನಿ ಸುತ್ತಿರುವ ಸೈಬರ್‌ನೆಟಿಕ್ಸ್ ಕೂಡ ರೋಬಾಟಿಕ್ಸ್‌ಗೆ ಸಂಬಂಧಿಸಿದ ವಿಜ್ಞಾನದ ಮತ್ತೊಂದು ಶಾಖೆ.

ಭಾರತದಲ್ಲಿರುವ ಎಲ್ಲಾ ಐಐಟಿಗಳಲ್ಲಿ ಹಾಗೂ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಜಿ (ಎನ್‌ಐಟಿ)ಗಳಲ್ಲಿ ರೋಬಾಟಿಕ್ಸ್ ಹಾಗೂ ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ಕುರಿತಾದ ಅಧ್ಯಯನ ನಡೆಸಬಹುದು. ಇವಲ್ಲದೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ,  ಬಿರ್ಲಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಸೈನ್ಸ್ (ಬಿಟ್ಸ್ ಪಿಲಾನಿ) ಮೊದಲಾದ ಅನೇಕ ಸಂಸ್ಥೆಗಳಲ್ಲೂ ಈ ಬಗ್ಗೆ ಅಧ್ಯಯನ ಕೈಗೊಳ್ಳಬಹುದು. ಈ ಕ್ಷೇತ್ರದಲ್ಲಿ ಅಧ್ಯಯನ ನಡೆಸುವವರು ಹೆಚ್ಚಾಗಿ ಮೆಕ್ಯಾನಿಕಲ್, ಇಲೆಕ್ಟ್ರಾನಿಕ್ಸ್ ಅಥವಾ ಕಂಪ್ಯೂಟರ್ ಸೈನ್ಸ್‌ಗೆ ಸಂಬಂಧಿಸಿದ ಶಾಖೆಗಳ ಹಿನ್ನೆಲೆ ಹೊಂದಿರುತ್ತಾರೆ.

ರೋಬಾಟಿಕ್ಸ್‌ನಲ್ಲಿ ಪರಿಣತಿ ಹೊಂದಿರುವವರಿಗೆ ಅನೇಕ ವೈಜ್ಞಾನಿಕ ಸಂಸ್ಥೆಗಳಲ್ಲಿ, ಕೈಗಾರಿಕೆಗಳಲ್ಲಿ, ಸಂಶೋಧನಾಲಯಗಳಲ್ಲಿ ಕೆಲಸ ಮಾಡುವ ಅವಕಾಶಗಳು ಲಭ್ಯವಾಗುತ್ತವೆ. ತಮ್ಮ ಕ್ರಿಯಾಶೀಲ ಅಧ್ಯಯನದ ನೆರವಿನಿಂದ ನಮ್ಮಂತಹ ಸಾಮಾನ್ಯ ಜನರ ಜೀವನ ಶೈಲಿಯನ್ನೇ ಬದಲಿಸಿಬಿಡುವ ಅವಕಾಶವೂ ಇವರ ಬಳಿ ಇರುತ್ತದೆ.

ಭಾರತದಲ್ಲಿ ರೋಬಾಟಿಕ್ಸ್ ಇನ್ನೂ ನಿಧಾನವಾಗಿ ಬೆಳವಣಿಗೆ ಹೊಂದುತ್ತಿರುವ ಕ್ಷೇತ್ರ. ಆದರೆ ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರ ಸಂಖ್ಯೆಯೂ ಅಷ್ಟೇ ಕಡಿಮೆ ಇರುವುದರಿಂದ ಅವಕಾಶಗಳಿಗೇನೂ ಕೊರತೆಯಿಲ್ಲ. ವಿದೇಶಗಳಲ್ಲೂ ರೋಬಾಟಿಕ್ಸ್ ತಜ್ಞರಿಗೆ ಅಪಾರ ಬೇಡಿಕೆಯಿದೆ. ಈ ಬಗೆಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ತಾಣ: www.roboticsindia.com

(ಏಪ್ರಿಲ್ ೨೦೦೬)