ವಿಶ್ವವ್ಯಾಪಿ ಜಾಲ ಅಥವಾ ವರ್ಲ್ಡ್‌ವೈಡ್ ವೆಬ್ (WWW) – ನಮ್ಮೆದುರಿಗೆ ಕನಸುಗಳ ಮೂಟೆಯನ್ನೇ ತೆರೆದಿಡುವ ಮಾಯಾ ಲೋಕ. ಸಾವಿರಾರು ವಿಷಯಗಳನ್ನು ಕುರಿತಾದ ಲಕ್ಷಾಂತರ ತಾಣ ಗಳನ್ನು ನಮ್ಮ ಮುಂದೆ ಅನಾವರಣಗೊಳಿಸುವ ಈ ಮಾಯಾ ಲೋಕದ ಅತ್ಯಂತ ಪ್ರಮುಖ ಕಲಾಕಾರರೇ ವೆಬ್ ಡಿಸೈನರ್‌ಗಳು.

ವೆಬ್‌ಡಿಸೈನರ್‌ಗಳ ಕಾರ್ಯವ್ಯಾಪ್ತಿ ಜಾಲತಾಣಗಳ (ವೆಬ್‌ಸೈಟ್) ವಿನ್ಯಾಸ, ಅಲ್ಲಿರುವ ಚಿತ್ರಗಳ ರಚನೆ, ಛಾಯಾಚಿತ್ರಗಳ ಆಯ್ಕೆ, ಧ್ವನಿ, ಅನಿಮೇಷನ್ ಇತ್ಯಾದಿಗಳಿಂದ ಪ್ರಾರಂಭಿಸಿ ಅವುಗಳಲ್ಲಿ ಅಗತ್ಯ ಮಟ್ಟದ ತಾಂತ್ರಿಕತೆಯನ್ನು ಅಳವಡಿಸುವವರೆಗೂ ಇರುತ್ತದೆ.

ವೆಬ್‌ಡಿಸೈನ್‌ನಲ್ಲಿ ತೊಡಗಿಕೊಳ್ಳಲು ಬಯಸುವರಲ್ಲಿ ಉನ್ನತ ಮಟ್ಟದ ಕಲ್ಪನಾಶಕ್ತಿ ಇರುವುದು ಅಪೇಕ್ಷಣೀಯ. ವಿನ್ಯಾಸ ಹಾಗೂ ಬರವಣಿಗೆಯಲ್ಲಿ ಮಾತ್ರವಲ್ಲದೆ ವೆಬ್‌ಡಿಸೈನರ್‌ಗಳು ತಾಂತ್ರಿಕವಾಗಿ ಕೂಡ ಪರಿಣತಿ ಹೊಂದಿರಬೇಕಾಗುತ್ತದೆ. ವೆಬ್‌ಸೈಟ್‌ಗಳನ್ನು ನಿರ್ಮಿಸಲು ಹಾಗೂ ವಿಶ್ವವ್ಯಾಪಿ ಜಾಲದಲ್ಲಿ ಪ್ರಕಾಶಿಸಲು ಬೇಕಾದ ತಂತ್ರಾಂಶಗಳ ಜ್ಞಾನ ಅಗತ್ಯ. ಅಂತರಜಾಲ ಸಂಪರ್ಕಗಳ ಮೂಲಕ ವೆಬ್‌ಸೈಟ್‌ಗಳು ತೆರೆದುಕೊಳ್ಳುವ ವೇಗ, ಸರ್ಚ್ ಇಂಜನ್‌ಗಳಲ್ಲಿ ಅವುಗಳ ಜನಪ್ರಿಯತೆ, ಜಾಹಿರಾತುಗಳ ಬಳಕೆ ಮುಂತಾದ ಕ್ಷೇತ್ರಗಳಲ್ಲೂ ಪ್ರಾವೀಣ್ಯ ಇದ್ದರೆ ಒಳ್ಳೆಯದು.

ಯಾವುದೇ ಪದವಿ ಅಥವಾ ವೆಬ್‌ಡಿಸೈನ್ ತರಬೇತಿ ಪಡೆದಿರುವ ವ್ಯಕ್ತಿಗಳು ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬಹುದು. ವೆಬ್‌ಡಿಸೈನಿಂಗ್ ತಂತ್ರಾಂಶಗಳ ಪರಿಚಯದ ಜತೆಗೆ ಪ್ರೋಗ್ರಾಮಿಂಗ್ ಪರಿಣತಿ, ಡೇಟಾಬೇಸ್‌ಗಳ ಬಗ್ಗೆ ಅರಿವು, ಅನಿಮೇಷನ್ ಹಾಗೂ ಗ್ರಾಫಿಕ್ ಡಿಸೈನ್ ಜ್ಞಾನ ಕೂಡ ಅಗತ್ಯ. ಈ ಕ್ಷೇತ್ರದಲ್ಲಿ ತರಬೇತಿಗಾಗಿ ಯಾವುದೇ ಹೆಸರಾಂತ ತರಬೇತಿ ಸಂಸ್ಥೆಗಳನ್ನು ಸಂಪರ್ಕಿಸಬಹುದು.

ವೆಬ್‌ಡಿಸೈನಿಂಗ್ ಕ್ಷೇತ್ರದಲ್ಲೂ ಸರ್ಟಿಫಿಕೇಷನ್‌ಗಳ ಭರಾಟೆ ಜೋರಾಗಿದೆ. ಡ್ರೀಮ್‌ವೀವರ್, ಫ್ಲ್ಯಾಷ್ ಮುಂತಾದ ನಿರ್ದಿಷ್ಟ ತಂತ್ರಾಂಶಗಳಿಗೆ ಸೀಮಿತವಾದ ಸರ್ಟಿಫಿಕೇಷನ್‌ಗಳಿಂದ ಪ್ರಾರಂಭಿಸಿ ಸರ್ಟಿಫೈಡ್ ಇಂಟರ್‌ನೆಟ್ ವೆಬ್‌ಮಾಸ್ಟರ್‌ನಂತಹ ಸಾರ್ವತ್ರಿಕ ಸರ್ಟಿಫಿಕೇಷನ್‌ಗಳು ಕೂಡ ಲಭ್ಯವಿದೆ.

ಕಳೆದ ದಶಕದಲ್ಲಿ ಡಾಟ್‌ಕಾಮ್ ಭರಾಟೆಯ ದಿನಗಳಲ್ಲಿ ವೆಬ್ ಡಿಸೈನರ್‌ಗಳಿಗಿದ್ದ ಬೇಡಿಕೆ ಈಗ ಇಲ್ಲ. ಹೀಗಾಗಿ ಕೆಲಸಗಳ ಲಭ್ಯತೆ ಹಾಗೂ ಪ್ರಾರಂಭದಲ್ಲಿ ದೊರೆಯುವ ಸಂಬಳಗಳೂ ಕಡಿಮೆ ಯಿರಬಹುದು. ಆದರೂ ವಿಶ್ವವ್ಯಾಪಿ ಜಾಲದ ಬಳಕೆ ಎಲ್ಲ ಕ್ಷೇತ್ರ ಗಳಲ್ಲೂ ಹೆಚ್ಚುತ್ತಿರುವ ಈ ದಿನಗಳಲ್ಲಿ ವೆಬ್‌ಡಿಸೈನಿಂಗ್ ಒಂದು ಉತ್ತಮ ಆಯ್ಕೆಯಾಗುವ ಸಕಲ ಸಾಧ್ಯತೆಗಳೂ ಇವೆ.

ಸ್ವಂತ ಉದ್ಯೋಗ ಕೈಗೊಳ್ಳುವ ಇಚ್ಛೆಯಿರುವವರಿಗೂ ಇದು ಒಂದು ಉತ್ತಮ ಅವಕಾಶ. ಸಣ್ಣ ಪಟ್ಟಣಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಉದ್ಯಮಿಗಳನ್ನು ವಿಶ್ವವ್ಯಾಪಿ ಜಾಲಕ್ಕೆ ಪರಿಚ ಯಿಸುವ ಮೂಲಕ ತಮ್ಮ ಉದ್ಯೋಗವನ್ನು ಹೆಚ್ಚಿಸಿಕೊಳ್ಳುವುದಷ್ಟೇ ಅದೆ ಅವರ ಉದ್ದಿಮೆಗಳ ಉನ್ನತಿಗೂ ಕಾರಣಕರ್ತರಾಗಬಹುದು.

ಹೆಚ್ಚಿನ ತಾಂತ್ರಿಕ ನೈಪುಣ್ಯತೆ ಹಾಗೂ ಸಾಧಿಸಿ ತೋರಿಸುವ ಛಲ ಇರಬೇಕು, ಅಷ್ಟೆ!

(ಜುಲೈ ೨೦೦೬)