ನಿಮಗೆ ’ಸ್ಟುವರ್ಟ್ ಲಿಟ್ಲ್’ ಚಲನಚಿತ್ರ ನೆನಪಿರಬಹುದು. ಒಂದು ಇಲಿಮರಿಯನ್ನು ಕುಟುಂಬವೊಂದು ದತ್ತು ತೆಗೆದುಕೊಂಡು ಸಾಕುವ ಕತೆ ಅದು. ಆ ಪುಟ್ಟ ಇಲಿಮರಿ ಮನುಷ್ಯರ ಜೊತೆಗೆ ಮಾತನಾಡಿ ಕೊಂಡು, ಆಟವಾಡಿಕೊಂಡು, ಕೊನೆಗೆ ಕಾರನ್ನೂ ಚಲಾಯಿಸಿಕೊಂಡು ಸಾಗುವ ದೃಶ್ಯಗಳನ್ನು ನೋಡಿ ನೀವು ಆಶ್ಚರ್ಯಪಟ್ಟಿರಲೂ ಸಾಕು. ಇಂತಹುದೇ ಇನ್ನೊಂದು ಚಿತ್ರ ’ಜುರಾಸಿಕ್ ಪಾರ್ಕ್’. ಸಾವಿರಾರು ವರ್ಷಗಳ ಹಿಂದೆ ಅಳಿದುಹೋದ ಹತ್ತಾರು ಬಗೆಯ ಡೈನೋಸಾರ್‌ಗಳು ಈ ಚಿತ್ರದಲ್ಲಿ ಜೀವಂತವಾಗಿ ಬಂದು ಅಭಿನಯಿಸಿದ್ದವು!

ಅಸಾಧ್ಯವೆನಿಸುವ ಈ ಸನ್ನಿವೇಶಗಳೆಲ್ಲ ಅತ್ಯಂತ ನೈಜವಾಗಿ ಪರದೆಯ ಮೇಲೆ ಮೂಡಿಬರಲು ಕಾರಣವಾದದ್ದೇ ’ಅನಿಮೇಷನ್’. ಚಿತ್ರಗಳು ಹಾಗೂ ಗಣಕ ತಂತ್ರಜ್ಞಾನದ ನೆರವಿನಿಂದ ಅತ್ಯಾಕರ್ಷಕ ದೃಶ್ಯಗಳನ್ನು ಸೃಷ್ಟಿಸುವ ಈ ಕಲೆ, ಕಲ್ಪನೆಯನ್ನು ವಾಸ್ತವದ ತಲೆಯ ಮೇಲೆ ಹೊಡೆದಂತೆ ಸೃಷ್ಟಿಸಿ ಜನರನ್ನು ಮಾಯಾಲೋಕಕ್ಕೆ ಕೊಂಡು ಹೋಗುತ್ತದೆ.

ಅನಿಮೇಷನ್‌ನಲ್ಲಿ ಪರಿಣತಿ ಬರಬೇಕಾದರೆ ಚಿತ್ರಕಲೆಯಲ್ಲಿ ಆಸಕ್ತಿ ಇರಬೇಕಾದದ್ದು ಅಗತ್ಯ. ಜೊತೆಗೆ ಸಾಕಷ್ಟು ಪರಿಶ್ರಮವನ್ನೂ ಪಡಬೇಕಾಗುತ್ತದೆ. ದಿನಕ್ಕೆ ಹನ್ನೆರಡರಿಂದ ಹದಿನಾರು ಗಂಟೆಗಳ ಕಾಲ ದುಡಿಮೆ ಈ ಕ್ಷೇತ್ರದಲ್ಲಿ ಅಪರೂಪವೇನೂ ಅಲ್ಲ.

ಅನಿಮೇಷನ್ ಸೃಷ್ಟಿ ಎರಡು ಅಥವಾ ಮೂರು ಆಯಾಮಗಳಲ್ಲಿ (೨ಡಿ ಅಥವಾ ೩ಡಿ) ಸಾಧ್ಯ. ಇವುಗಳಲ್ಲಿ ಮೂರು ಆಯಾಮದ (೩ಡಿ) ಅನಿಮೇಷನ್‌ಗೆ ಅತ್ಯಂತ ಹೆಚ್ಚು ಬೇಡಿಕೆ; ಆದರೂ ಒಬ್ಬ ಪರಿಪೂರ್ಣ ಅನಿಮೇಷನ್ ತಜ್ಞರಾಗಿ ರೂಪಗೊಳ್ಳಲು ೨ಡಿ ಅನಿಮೇಷನ್‌ನ ಸಂಪೂರ್ಣ ಪರಿಚಯ ಅವಶ್ಯಕವಾಗಿರುತ್ತದೆ. ವೆಬ್ ಸೈಟ್ ವಿನ್ಯಾಸದಲ್ಲಿ ಈ ವಿಧದ ಅನಿಮೇಷನ್‌ನ ಬಳಕೆ ಹೆಚ್ಚು. ಸ್ಥಿರಚಿತ್ರಗಳನ್ನು ವಿನ್ಯಾಸಗೊಳಿಸಲು ಅಡೋಬ್ ಫೋಟೋಶಾಪ್ ಹಾಗೂ ಗಣಕ ಆಧರಿತ ಅನಿಮೇಟೆಡ್ ಚಿತ್ರಗಳನ್ನು ತಯಾರಿಸಲು ಮ್ಯಾಕ್ರೋಮೀಡಿಯಾ ಫ್ಲ್ಯಾಷ್, ಇಲ್ಲಿ ಬಳಕೆಯಾಗುವ ಪ್ರಮುಖ ತಂತ್ರಾಂಶಗಳು.

ಮೂರು ಆಯಾಮದ (೩ಡಿ) ಅನಿಮೇಷನ್‌ನಲ್ಲಿ ಮಾಯಾ, ತ್ರೀಡಿ ಮ್ಯಾಕ್ಸ್, ಸಾಫ್ಟ್‌ಇಮೇಜ್ ಮುಂತಾದ ತಂತ್ರಾಂಶಗಳನ್ನು ಬಳಸಿ ಮೂರು ಆಯಾಮದ ಚಿತ್ರಣಗಳನ್ನು ಸಿದ್ಧಪಡಿಸಲಾಗುತ್ತದೆ. ಚಲನ ಚಿತ್ರಗಳಲ್ಲಿ ಬಳಕೆಯಾಗುವುದು ಇದೇ ತಂತ್ರಜ್ಞಾನ. ಅಡೋಬ್ ಪ್ರೀಮಿಯರ್ ಹಾಗೂ ಫೋಟೋಶಾಪ್‌ನಂತಹ ತಂತ್ರಾಂಶಗಳೂ ಇಲ್ಲಿ ಬಳಕೆಯಾಗುತ್ತದೆ.

ಅನಿಮೇಷನ್‌ಗೆ ಅಗತ್ಯವಾದ ಸಿದ್ಧತೆಗಳನ್ನೆಲ್ಲ ಮಾಡಿಕೊಂಡು, ’ಚಿತ್ರಕಥೆ’ಯನ್ನು ಸಿದ್ಧಪಡಿಸುವುದು  ಸ್ಟೋರಿಬೋರ್ಡ್ ಕಲಾವಿದರ ಕೆಲಸ. ಅಂತೆಯೇ ವಿವಿಧ ದೃಶ್ಯಗಳ ಹಿನ್ನೆಲೆಯನ್ನು ಸಿದ್ಧಪಡಿಸುವುದು ಲೇಔಟ್ ಕಲಾವಿದರ ಹೊಣೆ. ಇವರು ಸಿದ್ಧಪಡಿಸಿದ ವಿನ್ಯಾಸವನ್ನು ಆಧಾರವಾಗಿಟ್ಟುಕೊಂಡು ಚಿತ್ರಗಳನ್ನು ಸಿದ್ಧಪಡಿಸುವವರು ಅನಿ ಮೇಟರ್‌ಗಳು. ಈ ಚಿತ್ರಗಳನ್ನು ನೈಜವಾಗಿ ಕಾಣುವಂತಹ ಅನಿಮೇಷನ್ ಆಗಿ ಬದಲಿಸಲು ಹಲವಾರು ಚಿತ್ರಗಳ ಸಂಯೋಜನೆಯನ್ನು ಬಳಸ ಬೇಕಾಗುತ್ತದೆ. ಉದಾಹರಣೆಗೆ ಒಬ್ಬ ಮನುಷ್ಯ ಓಡುವುದನ್ನು ತೋರಿಸಬೇಕಾದರೆ ಆತನ ಓಟದ ಪ್ರತಿಯೊಂದು ಭಂಗಿಯನ್ನೂ ಚಿತ್ರಿಸಬೇಕಾದದ್ದು ಅನಿವಾರ್ಯ. ಈ ಉದ್ದೇಶಕ್ಕಾಗಿ ಬೇಕಾದ ಹೆಚ್ಚುವರಿ ಚಿತ್ರಗಳನ್ನು ಸಿದ್ಧಪಡಿಸುವವರನ್ನು ಇನ್‌ಬಿಟ್‌ವೀನರ್‌ಗಳೆಂದು ಕರೆಯುತ್ತಾರೆ. ೩ಡಿ ಅನಿಮೇಷನ್‌ನಲ್ಲಿ ಅನೇಕ ಬಾರಿ ಇನ್‌ಬಿಟ್‌ವೀನರ್‌ಗಳ ಕೆಲಸವನ್ನು ತಂತ್ರಾಂಶಗಳೇ ಮಾಡುತ್ತವೆ.

ಕಾರ್ಟೂನ್ ಚಿತ್ರಗಳು, ಚಲನಚಿತ್ರಗಳು, ಜಾಹೀರಾತುಗಳು, ಜಾಲ ತಾಣಗಳು (ವೆಬ್‌ಸೈಟ್), ಕಂಪ್ಯೂಟರ್ ಆಟಗಳು, ಗಣಕ ಕ್ರಮ ವಿಧಿಗಳು ಮುಂತಾದವುಗಳ ತಯಾರಿಯಲ್ಲಿ ಭಾಗಿಯಾಗಲು ಅನಿಮೇಷನ್ ತಜ್ಞರಿಗೆ ಅವಕಾಶಗಳಿರುತ್ತವೆ.

ಅನಿಮೇಷನ್ ಕ್ಷೇತ್ರದಲ್ಲಿ ತರಬೇತಿ ನೀಡುವ ಅನೇಕ ಸಂಸ್ಥೆಗಳು ಈಗ ಕಾರ್ಯನಿರತವಾಗಿವೆ. ಇಂತಹ ಯಾವುದೇ ಸಂಸ್ಥೆಯಲ್ಲಿ ನೀವು ತರಬೇತಿ ಪಡೆಯಬಹುದು. ಆದರೆ ನೆನಪಿಡಿ, ಈ ಕ್ಷೇತ್ರದಲ್ಲಿ ಉದ್ಯೋಗ ನೀಡುವಾಗ ನಿಮ್ಮ ತಾಂತ್ರಿಕ ಪರಿಣತಿಯಷ್ಟೇ ಮಹತ್ವ ವನ್ನು ನಿಮ್ಮ ಕ್ರಿಯಾಶೀಲತೆಗೂ ನೀಡುತ್ತಾರೆ. ಹೀಗಾಗಿ ಚಿತ್ರ ಕಲೆಯಲ್ಲೂ ನಿಮಗೆ ಸಾಕಷ್ಟು ಪರಿಶ್ರಮ ಇರಬೇಕಾಗುತ್ತದೆ. ಗಣಕಗಳ ಕುರಿತಾದ ಪ್ರಾಥಮಿಕ ಜ್ಞಾನ ಕೂಡ ಅಪೇಕ್ಷಣೀಯ. ಯಥೇಚ್ಚವಾಗಿ ಕಲ್ಪನಾ ಶಕ್ತಿಯೂ ಇರಬೇಕಾದದ್ದು ಕಡ್ಡಾಯ.

ಬೇರೆಲ್ಲ ಕ್ಷೇತ್ರಗಳಂತೆ ಈ ಕ್ಷೇತ್ರದಲ್ಲೂ ಹೊರಗುತ್ತಿಗೆಯ ಪ್ರಭಾವ ಹೆಚ್ಚುತ್ತಿದೆ. ಹೀಗಾಗಿ ಭಾರತದಲ್ಲಿ ಹೆಚ್ಚುಹೆಚ್ಚು ಅವಕಾಶಗಳು ಸೃಷ್ಟಿಯಾಗುತ್ತಿವೆ.

ಈ ದಶಕದ ಅಂತ್ಯದ ವೇಳೆಗೆ ಅನಿಮೇಷನ್ ಉದ್ಯಮ ಭಾರತದಲ್ಲಿ ವಾರ್ಷಿಕ ನಾಲ್ಕು ಸಾವಿರ ಕೋಟಿ ರೂಪಾಯಿಗಳ ವಹಿವಾಟು ನಡೆಸಲಿದೆ ಎಂದು ಅಂದಾಜಿಸಲಾಗಿದೆ. ಈ ಕ್ಷೇತ್ರದಲ್ಲಿನ ಪ್ರಾರಂಭಿಕ ಸಂಬಳಗಳು, ನಿಮ್ಮ ಅರ್ಹತೆ ಹಾಗೂ ಸಾಮರ್ಥ್ಯವನ್ನು ಅವಲಂಬಿಸಿ, ಐದು ಸಾವಿರ ರೂಪಾಯಿಗಳಿಂದ ಇಪ್ಪತ್ತೈದು ಸಾವಿರ ರೂಪಾಯಿಗಳವರೆಗೂ ಇರಬಹುದು.

(ಮಾರ್ಚ್ ೨೦೦೬)
ಪರಿಷ್ಕರಣೆ: ಡಿಸೆಂಬರ್ ೨೦೦೭