ದೂರವಾಣಿ – ಅದು ಸ್ಥಾವರವಾಗಿರಲಿ (ಫಿಕ್ಸ್ಡ್ ಲೈನ್) ಅಥವಾ ಜಂಗಮವಾಗಿರಲಿ (ಮೊಬೈಲ್) – ನಮ್ಮ ನಿಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿಹೋಗಿದೆ ಎನ್ನುವುದು ಮಾತ್ರ ನಿಜ. “ಫೋನ್ ತೊಗೊಳ್ಳಿ, ಮಾತನಾಡಿ, ಬಿಲ್ ಬಂದಾಗ ಕಟ್ಟಿ” ಎಂಬ ಸರಳ ಸೂತ್ರ ಈಗ ಚಿಕ್ಕ ಮಕ್ಕಳಿಗೂ ಗೊತ್ತು. ಆದರೆ ಈ ಟೆಲಿಫೋನ್ ಬಿಲ್ಲನ್ನು ಸಿದ್ಧಪಡಿಸುವುದು ಅದೆಷ್ಟು ಸಂಕೀರ್ಣವಾದ ಕೆಲಸ ಎಂಬುದರ ಬಗ್ಗೆ ನೀವೆಂದಾದರೂ ಯೋಚಿಸಿದ್ದೀರಾ?

ನೀವು ಯೋಚಿಸಿದ್ದೀರೋ ಇಲ್ಲವೋ, ದೂರಸಂಪರ್ಕ ಉದ್ಯಮದ ಪಾಲಿಗಂತೂ ಟೆಲಿಕಾಂ ಬಿಲ್ಲಿಂಗ್ ಎನ್ನುವುದು ಹೊಟ್ಟೆಪಾಡಿನ ವಿಷಯ – ತಾನು ಒದಗಿಸುವ ಸೇವೆಗಳಿಗೆ ಸರಿಯಾಗಿ ಬಿಲ್ ಕಳುಹಿಸಿದರೆ ತಾನೆ ಅವುಗಳಿಗೆ ಕಾಸು ಹುಟ್ಟುವುದು! ಹಾಗೆಯೇ ಈ ಕ್ಷೇತ್ರದಲ್ಲಿ ಗಣಕೀಕರಣ ಅತ್ಯುನ್ನತ ಮಟ್ಟದಲ್ಲಿರುವುದರಿಂದ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಪಾಲಿಗೂ ಟೆಲಿಕಾಂ ಬಿಲ್ಲಿಂಗ್ ಅತ್ಯಂತ ಮಹತ್ವದ ಕೆಲಸಗಳಲ್ಲೊಂದು.

ನೀವು ಮಾಡಿದ ದೂರವಾಣಿ ಕರೆ ಮೊದಲು ಹೋಗುವುದು ನಿಮ್ಮ ಮನೆಯ ಸಮೀಪದಲ್ಲಿರುವ ದೂರವಾಣಿ ವಿನಿಮಯ ಕೇಂದ್ರಕ್ಕೆ. ಇಲ್ಲಿರುವ ಸ್ವಿಚ್ ಎಂಬ ಉಪಕರಣದಲ್ಲಿ ನಿಮ್ಮ ಕರೆಯ ಸಂಪೂರ್ಣ ವಿವರಗಳು ದಾಖಲಾಗುತ್ತವೆ – ನಿಮ್ಮ ದೂರವಾಣಿ ಸಂಖ್ಯೆ ಏನು, ನೀವು ಕರೆಮಾಡಿದ ಸಂಖ್ಯೆ ಯಾವುದು, ನೀವು ಯಾವಾಗ ಕರೆಮಾಡಿ ಎಷ್ಟು ಹೊತ್ತು ಮಾತನಾಡಿದಿರಿ – ಹೀಗೆ.

ಈ ಮಾಹಿತಿಯನ್ನು ಆಗಿಂದಾಗ್ಗೆ ಸಂಗ್ರಹಿಸಿ ಸಂಸ್ಕರಿಸುವುದು ಮೀಡಿಯೇಷನ್ ತಂತ್ರಾಂಶದ ಕೆಲಸ. ಇಂಟೆಕ್ ಸಂಸ್ಥೆಯ ’ಇಂಟರ್ ಮೀಡಿಯೇಟ್’, ಓಪನೆಟ್‌ನ ’ಫ್ಯೂಷನ್‌ವರ್ಕ್ಸ್ ಮೀಡಿಯೇಷನ್’ ಮೊದಲಾದವು ಮೀಡಿಯೇಷನ್ ತಂತ್ರಾಂಶಗಳಿಗೆ ಉದಾಹರಣೆಗಳು.

ಮೀಡಿಯೇಷನ್ ತಂತ್ರಾಂಶಗಳು ಹೀಗೆ ಸಂಗ್ರಹಿಸಿದ ಮಾಹಿತಿ ಮುಂದೆ ಬಿಲ್ಲಿಂಗ್ ತಂತ್ರಾಂಶಕ್ಕೆ ಹೋಗಿ ತಲುಪುತ್ತದೆ. ಪ್ರತಿಯೊಂದು ಕರೆಯ ಬಗೆಗೂ ಮೀಡಿಯೇಷನ್ ತಂತ್ರಾಂಶ ಒದಗಿಸುವ ಮಾಹಿತಿ ಹಾಗೂ ಆ ಬಗೆಯ ಕರೆಗಳಿಗೆ ಅನ್ವಯವಾಗುವ ದರದ ಆಧಾರದ ಮೇಲೆ ಬಳಕೆದಾರ ತೆರಬೇಕಾದ ಮೊತ್ತವನ್ನು ಈ ತಂತ್ರಾಂಶ ಲೆಕ್ಕಹಾಕುತ್ತದೆ. ತಿಂಗಳ ಕೊನೆಯಲ್ಲಿ ಎಲ್ಲಾ ಕರೆಗಳ ಒಟ್ಟು ಮೊತ್ತವನ್ನು ಲೆಕ್ಕಹಾಕಿ, ಬಾಡಿಗೆ-ತೆರಿಗೆ ಇತ್ಯಾದಿಗಳನ್ನು ಸೇರಿಸಿ ಬೇಕಾದ ರೂಪದಲ್ಲಿ ಫೋನ್ ಬಿಲ್ಲನ್ನು ಸಿದ್ಧಪಡಿಸುವ ಕೆಲಸವೂ ಇದೇ ತಂತ್ರಾಂಶದ್ದು. ಜಿನೇವಾ, ಕಾಮ್‌ವರ್ಸ್, ಸಿಂಗಲ್ ವ್ಯೂ, ಪೋರ್ಟಲ್, ಅಮ್‌ಡಾಕ್ಸ್, ಪ್ರೋಗ್ರೆಸರ್ ಮುಂತಾದವು ಬಿಲ್ಲಿಂಗ್ ತಂತ್ರಾಂಶಗಳಿಗೆ ಕೆಲ ಉದಾಹರಣೆಗಳು.

ಗಣಕ ವಿಜ್ಞಾನದ ಹಿನ್ನೆಲೆ ಹಾಗೂ ಪ್ರೋಗ್ರಾಮಿಂಗ್‌ನಲ್ಲಿ ಉತ್ತಮ ಪರಿಣತಿಯುಳ್ಳವರು ಬಿಲ್ಲಿಂಗ್ ಕ್ಷೇತ್ರದ ತಂತ್ರಾಂಶಗಳ ಅಭಿವೃದ್ಧಿ ಯಲ್ಲಿ ಅವಕಾಶಗಳನ್ನು ಅರಸಬಹುದು. ಇಷ್ಟೇ ಅಲ್ಲದೆ ವಿವಿಧ ದೂರಸಂಪರ್ಕ ಸಂಸ್ಥೆಗಳಲ್ಲಿ ಈಗಾಗಲೇ ಬಳಕೆಯಲ್ಲಿರುವ ಇಂತಹ ತಂತ್ರಾಂಶಗಳ ದೈನಂದಿನ ನಿರ್ವಹಣೆಯ ಕೆಲಸದಲ್ಲಿ ಕೂಡ ಅನೇಕ ಅವಕಾಶಗಳು ಲಭ್ಯವಿರುತ್ತವೆ. ಇಲ್ಲಿ ಬೇರೆ ಬೇರೆ ಬಿಲ್ಲಿಂಗ್ ತಂತ್ರಾಂಶಗಳ ಪರಿಚಯ ಇರಬೇಕಾದದ್ದು ಅಗತ್ಯ. ಈ ಕ್ಷೇತ್ರದಲ್ಲಿ ಲಭ್ಯವಿರುವ ಸಂಬಳ ಕೂಡ ಅನುಭವ ಹಾಗೂ ಕಾರ್ಯಕ್ಷಮತೆಯನ್ನು ಆಧರಿಸಿರುತ್ತದೆ.

(ಅಕ್ಟೋಬರ್ ೨೦೦೬)