ವಿಮಾನ ನಿರ್ಮಾಣ ಸಂಸ್ಥೆಗಳಿಗೆ ಭಾರತ ಈಗ ಬಹು ಆಕರ್ಷಕ ಮಾರುಕಟ್ಟೆ. ನಮ್ಮ ದೇಶದ ನಾಗರಿಕ ವಿಮಾನಯಾನ ಕ್ಷೇತ್ರ ಬಹಳ ವೇಗವಾಗಿ ಬೆಳೆಯುತ್ತಿರುವುದರಿಂದ ವಿಮಾನಗಳನ್ನು ತಯಾರಿಸುವ ಸಂಸ್ಥೆಗಳು ತಮ್ಮ ಗ್ರಾಹಕರ ಪಟ್ಟಿಗೆ ಭಾರತೀಯ ಸಂಸ್ಥೆಗಳನ್ನು ಸೇರಿಸಿಕೊಳ್ಳಲು ತುರುಸಿನ ಸ್ಪರ್ಧೆಗಿಳಿದಿವೆ. ಹೀಗೆ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಅವು ತಮ್ಮ ತಂತ್ರಜ್ಞಾನವನ್ನು ಅತ್ಯಂತ ಕ್ಷಿಪ್ರ ಗತಿಯಲ್ಲಿ ಉತ್ತಮಪಡಿಸಿಕೊಳ್ಳಬೇಕಾದ ಸನ್ನಿವೇಶ ಎದುರಾಗಿದೆ.

ಈ ಸ್ಪರ್ಧೆಯಿಂದ ನಮ್ಮದೇ ದೇಶದ ಐಟಿ ಸಂಸ್ಥೆಗಳಿಗೆ ಹೊಸತೊಂದು ಅವಕಾಶ ಸೃಷ್ಟಿಯಾಗಿರುವುದು ತಮಾಷೆಯ ವಿಷಯ.

ಕಡಿಮೆ ವೆಚ್ಚದಲ್ಲಿ ಉನ್ನತಮಟ್ಟದ ತಂತ್ರಜ್ಞಾನವನ್ನು ಪಡೆಯುವ ಉದ್ದೇಶದಿಂದ ಹುಟ್ಟಿಕೊಂಡ ಏರೋಸ್ಪೇಸ್ ಟೆಕ್ನಾಲಜಿ ಔಟ್ ಸೋರ್ಸಿಂಗ್ ಕ್ಷೇತ್ರ ಇದೀಗ ಬೆಳೆಯುತ್ತಿದ್ದು, ಅನೇಕ ಭಾರತೀಯ ಸಂಸ್ಥೆಗಳು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿವೆ. ವಿಮಾನಗಳ ವಿನ್ಯಾಸ, ಅವುಗಳ ನಿರ್ಮಾಣದಲ್ಲಿ ಬಳಸಬಹುದಾದ ಹೊಸ ವಿಧಾನಗಳು, ವಿಮಾನಗಳಲ್ಲಿ ಬಳಕೆಯಾಗುವ ಯಂತ್ರಾಂಶ ಹಾಗೂ ತಂತ್ರಾಂಶಗಳ ತಯಾರಿ – ಹೀಗೆ ವಿಭಿನ್ನ ರೀತಿಯ ಚಟುವಟಿಕೆಗಳಲ್ಲಿ ಭಾರತೀಯ ಸಂಸ್ಥೆಗಳು ಸಕ್ರಿಯವಾಗಿವೆ.

ಕಳೆದ ವರ್ಷ ಭಾರತದಲ್ಲಿ ಈ ಕ್ಷೇತ್ರದ ವಹಿವಾಟು ಸುಮಾರು ಹತ್ತರಿಂದ ಹದಿನೈದು ಕೋಟಿ ಡಾಲರುಗಳಷ್ಟಿತ್ತು ಎಂದು ನ್ಯಾಸ್‌ಕಾಮ್ ಅಂದಾಜುಗಳು ಹೇಳುತ್ತವೆ. ಮುಂದಿನ ವರ್ಷಗಳಲ್ಲಿ ಈ ಕ್ಷೇತ್ರದಿಂದ ಕನಿಷ್ಟ ನೂರು ಕೋಟಿ ಡಾಲರುಗಳವರೆಗಿನ ವಹಿವಾಟನ್ನು ನಿರೀಕ್ಷಿಸ ಬಹುದು ಎಂಬುದು ನ್ಯಾಸ್‌ಕಾಮ್ ಅಂದಾಜು.

ಮೆಕಾನಿಕಲ್, ಇಲೆಕ್ಟ್ರಾನಿಕ್ಸ್ ಹಾಗೂ ಏವಿಯಾನಿಕ್ಸ್ ಇಂಜಿನಿಯರಿಂಗ್ ಹಿನ್ನೆಲೆಯುಳ್ಳವರಿಗೆ ಈ ಕ್ಷೇತ್ರದಲ್ಲಿ ಅವಕಾಶಗಳು ಲಭಿಸಲಿವೆ. ಗಣಕವಿಜ್ಞಾನದಲ್ಲಿ ಉತ್ತಮ ಮಟ್ಟದ ಪರಿಣತಿ ಇರಬೇಕಾದದ್ದು ಅವಶ್ಯಕ. ಇಲ್ಲಿ ಕೆಲಸ ಮಾಡುವವರು ಯಂತ್ರಾಂಶ ವಿನ್ಯಾಸ ಹಾಗೂ ತಂತ್ರಾಂಶ ನಿರ್ಮಾಣದಂತಹ ಕೆಲಸಗಳ ಜೊತೆಗೆ ಟೆಸ್ಟಿಂಗ್, ಡಾಕ್ಯುಮೆಂಟೇಷನ್, ಮೇಂಟೆನೆನ್ಸ್ ಮೊದಲಾದ ಜವಾಬ್ದಾರಿಗಳನ್ನೂ ಹೊರಬೇಕಾಗುತ್ತದೆ.

ಮುಂದಿನ ದಿನಗಳಲ್ಲಿ ಫ್ಲೈಟ್ ಕಂಟ್ರೋಲ್ ವ್ಯವಸ್ಥೆ, ಕಾಕ್‌ಪಿಟ್ ಡಿಸ್ಪ್ಲೇ ಹಾಗೂ ಇನ್‌ಫರ್ಮೇಷನ್ ವ್ಯವಸ್ಥೆ, ಇಂಜಿನ್ ನಿಯಂತ್ರಣ ಹಾಗೂ ಅಪಾಯ ಮುನ್ನೆಚ್ಚರಿಕೆ ವ್ಯವಸ್ಥೆ, ಏರ್ ಟ್ರಾಫಿಕ್ ನಿರ್ವಹಣೆ ಮುಂತಾದ ಅತ್ಯಾಧುನಿಕ ತಂತ್ರಜ್ಞಾನ ಆಧರಿತ ಕ್ಷೇತ್ರಗಳಲ್ಲೂ ಭಾರತೀಯ ಸಂಸ್ಥೆಗಳು ಕೆಲಸಮಾಡಲಿವೆ ಎಂದು ನ್ಯಾಸ್‌ಕಾಮ್ ಅಂದಾಜುಗಳು ಹೇಳುತ್ತವೆ.

ಚೆನ್ನೈನ ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ಏವಿಯಾನಿಕ್ಸ್ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು ನಡೆಸುತ್ತಿದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ www. mitindia.edu/avionics.htm ತಾಣವನ್ನು ಸಂದರ್ಶಿಸಬಹುದು.

(ಆಗಸ್ಟ್ ೨೦೦೬)