ಏಳೆಂಟು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿದ್ದ ಗಣಕದ ಪ್ರಾಸೆಸರ್ ಮುನ್ನೂರು ಮೆಗಾಹರ್ಟ್ಸ್ ವೇಗದಲ್ಲಿ ಕೆಲಸಮಾಡುತ್ತಿತ್ತು, ಅರುವತ್ತನಾಲ್ಕು ಮೆಗಾಬೈಟ್ ರ್ಯಾಮ್ ಹೊಂದಿತ್ತು. ಆದರೆ ಹೋದ ತಿಂಗಳು ನಾವು ಕೊಂಡ ಗಣಕದ ಪ್ರಾಸೆಸರ್ ಮೂರು ಗಿಗಾಹರ್ಟ್ಸ್ ಸಾಮರ್ಥ್ಯದ್ದು, ಅದರಲ್ಲಿರುವ ರ್ಯಾಮ್ ಸಾಮರ್ಥ್ಯ ಬರೋಬ್ಬರಿ ಒಂದು ಗಿಗಾಬೈಟ್. ಒಟ್ಟಿನಲ್ಲಿ ಆ ಹಳೆಯ ಗಣಕಕ್ಕಿಂತ ಹತ್ತು ಪಟ್ಟು ವೇಗವಾಗಿ ಕೆಲಸಮಾಡುವ ಸಾಮರ್ಥ್ಯ ಈ ಗಣಕಕ್ಕಿದೆ.

ನಿಜ, ಇತ್ತೀಚಿನ ವರ್ಷಗಳಲ್ಲಿ ಗಣಕಗಳ ಸಂಸ್ಕರಣಾ ಸಾಮರ್ಥ್ಯ ನಿರಂತರವಾಗಿ ಏರುತ್ತಲೇ ಹೋಗಿದೆ. ಆದರೆ ಇಷ್ಟೊಂದು ದೊಡ್ಡ ಪ್ರಮಾಣದ ಸಾಮರ್ಥ್ಯದ ಬಳಕೆ ನಮ್ಮನಿಮ್ಮ ಮನೆಗಳಲ್ಲಿ ಸಮರ್ಪಕವಾಗಿ ಆಗುತ್ತಿದೆಯೋ ಇಲ್ಲವೋ ಎಂದು ನೋಡಿದಾಗ ಇಲ್ಲ ಎಂಬ ಉತ್ತರವೇ ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತದೆ.

ಕೇವಲ ನಮ್ಮ ಮನೆಯಷ್ಟೇ ಅಲ್ಲ, ಗಣಕ ಬಳಸುವ ಪ್ರತಿಯೊಂದು ಮನೆಯಲ್ಲೂ ಪರಿಸ್ಥಿತಿ ಹೀಗೆಯೇ ಇದೆ. ವಿಶ್ವದಾದ್ಯಂತ ಗಣಕಗಳಲ್ಲಿ ಹೀಗೆ ಉಪಯೋಗಕ್ಕೆ ಬಾರದೆ ಹೋಗುವ ಸಂಸ್ಕರಣಾ ಸಾಮರ್ಥ್ಯವನ್ನೆಲ್ಲ ಒಟ್ಟುಸೇರಿಸಿದರೆ ಅದೆಷ್ಟು ದೊಡ್ಡ ಪ್ರಮಾಣದ ಸಂಪನ್ಮೂಲ ದೊರಕಬಹುದು ಎಂಬ ಆಲೋಚನೆಯ ಪರಿಣಾಮವಾಗಿ ಹುಟ್ಟಿಕೊಂಡಿರುವ ಕ್ಷೇತ್ರವೇ ಗ್ರಿಡ್ ಕಂಪ್ಯೂಟಿಂಗ್.

ಅಂತರಜಾಲ ಸಂಪರ್ಕ ಹೊಂದಿರುವ ಗಣಕಗಳು ಕೆಲಸ ಮಾಡುತ್ತಿರುವಾಗ ಅವುಗಳಲ್ಲಿ ಲಭ್ಯವಿರುವ ಹೆಚ್ಚುವರಿ ಸಂಸ್ಕರಣಾ ಸಾಮರ್ಥ್ಯವನ್ನು ಒಟ್ಟುಗೂಡಿಸಿ ಬಳಸಿಕೊಳ್ಳುವುದು ಗ್ರಿಡ್ ಕಂಪ್ಯೂಟಿಂಗ್‌ನ ಉದ್ದೇಶ. ದೇಶದಲ್ಲೆಲ್ಲ ಹರಡಿರುವ ವಾಹಕ ತಂತಿಗಳ ಬಲೆಯನ್ನು ಬಳಸಿ ವಿದ್ಯುತ್ ಜಾಲಗಳು (ಗ್ರಿಡ್) ಕೆಲಸಮಾಡುವಂತೆ ಇಲ್ಲಿ ವಿಶ್ವದಾದ್ಯಂತ ಅಂತರಜಾಲದ ಬಲೆಯ ಮೂಲಕ ಸಂಪರ್ಕದಲ್ಲಿರುವ ಗಣಕಗಳನ್ನು ಅತ್ಯಂತ ಸಂಕೀರ್ಣವಾದ ಲೆಕ್ಕಾಚಾರಗಳು ಹಾಗೂ ಮಾಹಿತಿ ಸಂಸ್ಕರಣೆಗಾಗಿ ಬಳಸಿಕೊಳ್ಳ ಲಾಗುತ್ತದೆ.

ಗ್ರಿಡ್ ಕಂಪ್ಯೂಟಿಂಗ್‌ನ ಕಲ್ಪನೆ ಮೊದಲಿಗೆ ಬಂದದ್ದು ಇಯಾನ್ ಫಾಸ್ಟರ್ ಹಾಗೂ ಕಾರ್ಲ್ ಕೆಸ್ಸೆಲ್‌ಮ್ಯಾನ್ ಎಂಬ ತಂತ್ರಜ್ಞರಿಗೆ, ೧೯೯೦ರ ಸುಮಾರಿನಲ್ಲಿ. ನಂತರ ಇವರ ಜೊತೆಗೂಡಿದ ಸ್ಟೀವ್ ಟ್ಯೂಕ್ ಎಂಬಾತನ ಜೊತೆಯಲ್ಲಿ ಇವರು ಗ್ರಿಡ್ ಕಂಪ್ಯೂಟಿಂಗ್ ಕುರಿತ ಕನಸುಗಳನ್ನು ವಾಸ್ತವಕ್ಕೆ ಬದಲಿಸಲು ಶ್ರಮಿಸಿದರು.  ಹೀಗಾಗಿಯೇ ಈ ತ್ರಿವಳಿಯನ್ನು ಒಟ್ಟಾಗಿ ಗ್ರಿಡ್ ಪಿತಾಮಹರೆಂದು ಗುರುತಿಸ ಲಾಗುತ್ತದೆ.

ಪ್ರಪಂಚದಾದ್ಯಂತ ವಾತಾವರಣದಲ್ಲಿ ಉಂಟಾಗುತ್ತಿರುವ ಬದಲಾವಣೆಗಳ ಬಗೆಗೆ ಅಧ್ಯಯನ ನಡೆಸುತ್ತಿರುವ ಕ್ಲೈಮೇಟ್ ಪ್ರೆಡಿಕ್ಷನ್.ನೆಟ್, ಭೂಮಿಯಾಚೆಗಿನ ಬದುಕಿಗಾಗಿ ಹುಡುಕಾಟ ನಡೆಸುವ ಸೆಟಿ@ಹೋಮ್, ರಸಾಯನಶಾಸ್ತ್ರದಲ್ಲಿ ಉನ್ನತ ಅಧ್ಯಯನಗಳನ್ನು ಕೈಗೊಂಡಿರುವ ಫೋಲ್ಡಿಂಗ್@ಹೋಮ್, ಆಕಾಶದಲ್ಲಿರುವ ತಾರೆಗಳ ಕುರಿತು ಸಂಶೋಧನೆ ಮಾಡುತ್ತಿರುವ ಐನ್‌ಸ್ಟೈನ್@ಹೋಮ್ ಮುಂತಾದ ಅನೇಕ ಕಾರ್ಯಕ್ರಮಗಳು ಇದೇ ಸಿದ್ಧಾಂತದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿವೆ.

ಮುಂಬರುವ ದಿನಗಳಲ್ಲಿ ವಿಜ್ಞಾನ ಪ್ರಪಂಚಕ್ಕೆ ಭಾರೀ ಕೊಡುಗೆ ನೀಡಲಿದೆಯೆಂದು ನಿರೀಕ್ಷಿಸಲಾಗಿರುವ ಗ್ರಿಡ್ ಕಂಪ್ಯೂಟಿಂಗ್‌ನ ಬಗೆಗೆ ಭಾರತದಲ್ಲೂ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ ಹಾಗೂ ಸಿ-ಡ್ಯಾಕ್ ಸಹಭಾಗಿತ್ವದಲ್ಲಿ ಭಾರತದ ಮೊದಲ ಕಂಪ್ಯೂಟರ್ ಗ್ರಿಡ್ ’ಗರುಡ’ ಕೂಡ ಸಿದ್ಧವಾಗುತ್ತಿದೆ.

ಸದ್ಯದಲ್ಲಿ ಗ್ರಿಡ್ ಕಂಪ್ಯೂಟಿಂಗ್‌ನ ಬಗೆಗೆ ನಡೆಯುತ್ತಿರುವ ಅನ್ವೇಷಣೆ ಹಾಗೂ ಸಂಶೋಧನೆಗಳು ಹೆಚ್ಚಾಗಿ ಅಧ್ಯಯನ ಕೇಂದ್ರಗಳು ಹಾಗೂ ಸಾಫ್ಟ್‌ವೇರ್ ಸಂಸ್ಥೆಗಳಿಗೆ ಸೀಮಿತವಾಗಿದೆ. ಹೀಗಾಗಿ ಗಣಕ ವಿಜ್ಞಾನದಲ್ಲಿ ಪದವಿ ಹಾಗೂ ಉನ್ನತ ಅಧ್ಯಯನ ಕೈಗೊಂಡವರಿಗೆ ಸಹಜವಾಗಿಯೇ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತಿವೆ. ಕೆಲವು ವಿದೇಶೀ ವಿಶ್ವವಿದ್ಯಾನಿಲಯಗಳಲ್ಲಿ ಗ್ರಿಡ್ ಕಂಪ್ಯೂಟಿಂಗ್ ಪದವಿಗಳೂ ಲಭ್ಯವಿವೆ. ಗಣಕವಿಜ್ಞಾನದ ಹಿನ್ನೆಲೆಯುಳ್ಳ ಸಂಶೋಧನಾಸಕ್ತರಿಗೆ ಗ್ರಿಡ್ ಕಂಪ್ಯೂಟಿಂಗ್ ಒಂದು ಉತ್ತಮ ಅವಕಾಶದ ಹೆದ್ದಾರಿಯಾಗಲಿದೆ ಎಂಬುದರಲ್ಲಿ ಖಂಡಿತವಾಗಿಯೂ ಎರಡನೆಯ ಮಾತೇ ಇಲ್ಲ.

ಈ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನಮ್ಮ ದೇಶದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲು www.garudaindia.in ತಾಣಕ್ಕೆ ಭೇಟಿನೀಡಬಹುದು.

(ಜೂನ್ ೨೦೦೬)

ಪರಿಷ್ಕರಣೆ: ಡಿಸೆಂಬರ್ ೨೦೦೭