ನಿಮಗೆ ಗೊತ್ತಿರಬಹುದು, ದುರುದ್ದೇಶಪೂರಿತವಾಗಿ ಬೇರೊಬ್ಬರ ಗಣಕ ಅಥವಾ ಗಣಕ ಜಾಲವನ್ನು ಪ್ರವೇಶಿಸಿ ಅಲ್ಲಿರುವ ಮಾಹಿತಿಯನ್ನು ಕದಿಯುವುದು ಅಥವಾ ಹಾಳುಗೆಡವುವುದನ್ನು ’ಹ್ಯಾಕಿಂಗ್’ ಎಂದು ಕರೆಯುತ್ತಾರೆ. ಗಣಕ ಲೋಕದಲ್ಲಿ ಹ್ಯಾಕರ್‌ಗಳ ಬಗೆಗೆ ಇರುವುದು ನಾಗರಿಕ ಪ್ರಪಂಚದಲ್ಲಿ ಭಯೋತ್ಪಾದಕರ ಬಗೆಗೆ ಇರುವಂತಹ ಅಭಿಪ್ರಾಯವೇ.

ಆದರೆ ಹ್ಯಾಕಿಂಗ್ ಕೂಡ ಒಂದು ಉದ್ಯೋಗ ಎನ್ನುವುದು ಅಚ್ಚರಿಯ ವಿಷಯ. ರೋಗಗಳಿಂದ ಪಾರಾಗಲು ಅದೇ ರೋಗದ ರೋಗಾಣುಗಳನ್ನು ಪ್ರತಿರೋಧಕ ಔಷಧವಾಗಿ ನೀಡುವಂತೆ, ಸಂಸ್ಥೆಗಳು ಹ್ಯಾಕಿಂಗ್‌ನ ಹಾವಳಿಂದ ಪಾರಾಗಲು ಹ್ಯಾಕರ್‌ಗಳದ್ದೇ ನೆರವು ಪಡೆಯುತ್ತಾರೆ. ಇಂತಹ ಹ್ಯಾಕಿಂಗ್‌ನ ಉದ್ದೇಶ ಒಳ್ಳೆಯದಾಗಿರುವುದರಿಂದ ಅದನ್ನು ’ಎಥಿಕಲ್ ಹ್ಯಾಕಿಂಗ್’ ಎಂದು ಕರೆಯುತ್ತಾರೆ.

ದುರುದ್ದೇಶಪೂರಿತ ಹ್ಯಾಕರ್‌ಗಳು ತಮ್ಮ ಸಂಸ್ಥೆಯ ಗಣಕ ವ್ಯವಸ್ಥೆಯನ್ನು ಹಾಳುಗೆಡವಲು ಏನೇನೆಲ್ಲ ಮಾಡಬಹುದು ಎಂದು ಊಹಿಸಿ, ಅವರ ಕುತಂತ್ರಗಳು ಸಫಲವಾಗದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಈ ಎಥಿಕಲ್ ಹ್ಯಾಕರ್‌ಗಳ ಕೆಲಸ. ಈ ಕೆಲಸಕ್ಕಾಗಿ ಎಥಿಕಲ್ ಹ್ಯಾಕರ್‌ಗಳು ಬೇರೆ ಹ್ಯಾಕರ್‌ಗಳು ಮಾಡುವ ಬಹುತೇಕ ಎಲ್ಲ [ಕೆಟ್ಟ] ಕೆಲಸಗಳನ್ನೂ ಮಾಡಬೇಕಾಗುತ್ತದೆ. ಆದರೆ ಅವರಿಗೆ ಆ ಸಂಸ್ಥೆಯ ವತಿಯಿಂದ ಇದಕ್ಕೆ ಸಂಪೂರ್ಣ ಅನುಮತಿ ಇರುತ್ತದೆ ಎನ್ನುವುದೊಂದೇ ವ್ಯತ್ಯಾಸ. ಹೀಗೆ ಗಣಕ ವ್ಯವಸ್ಥೆಗಳ ’ಒಳನುಗ್ಗಿದ’ ನಂತರ ಹೀಗೆ ಅತಿಕ್ರಮ ಪ್ರವೇಶ ಮಾಡುವುದು ಬೇರೆಯವರಿಗೆ ಸಾಧ್ಯವಾಗದಂತೆ ನೋಡಿಕೊಳ್ಳಲು ಅಗತ್ಯವಾದ ಸಲಹೆ-ಸೂಚನೆಗಳನ್ನು ನೀಡುವ ಜವಾಬ್ದಾರಿ ಕೂಡ ಇದೇ ಎಥಿಕಲ್ ಹ್ಯಾಕರ್‌ನದಾಗಿರುತ್ತದೆ. ಒಂದೊಮ್ಮೆ ಯಾವನೋ ಒಬ್ಬ ಹ್ಯಾಕರ್ ಅತಿಕ್ರಮ ಪ್ರವೇಶ ಮಾಡಿಯೇ ಬಿಟ್ಟ ಎನ್ನುವ ಸನ್ನಿವೇಶದಲ್ಲಿ ಅವನನ್ನು ಪತ್ತೆಹಚ್ಚುವಲ್ಲೂ ಎಥಿಕಲ್ ಹ್ಯಾಕರ್‌ಗಳು ನೆರವಾಗುತ್ತಾರೆ.

ಮಾಹಿತಿ ತಂತ್ರಜ್ಞಾನ ಆಧಾರಿತ ವಹಿವಾಟು ನಡೆಸುವ ಅನೇಕ ದೊಡ್ಡ ಸಂಸ್ಥೆಗಳಲ್ಲಿ ಎಥಿಕಲ್ ಹ್ಯಾಕರ್‌ಗಳು ಉದ್ಯೋಗ ಅರಸಬಹುದು. ಅಂದಾಜು ಸಂಬಳ ಹತ್ತರಿಂದ ಮೂವತ್ತು ಸಾವಿರ ರೂಪಾಯಿಗಳ ಆಸುಪಾಸಿನಲ್ಲಿರುತ್ತದೆ.

ಎಥಿಕಲ್ ಹ್ಯಾಕಿಂಗ್‌ನ ಬಗ್ಗೆ ಹಲವಾರು ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ನಿಟ್ಟಿನಲ್ಲಿ ತರಬೇತಿ ನೀಡುವ ಕೆಲವು ಸಂಸ್ಥೆಗಳೂ ಕಾರ್ಯನಿರತವಾಗಿವೆ – ಹೈದರಾಬಾದಿನ ಇ೨ ಲ್ಯಾಬ್ಸ್ ಹಾಗೂ ಪುಣೆಯ ’ಏಷ್ಯನ್ ಸ್ಕೂಲ್ ಆಫ್ ಸೈಬರ್ ಲಾಸ್’ ಇವುಗಳಲ್ಲಿ ಕೆಲವು. ’ಸರ್ಟಿಫೈಡ್ ಎಥಿಕಲ್ ಹ್ಯಾಕರ್’ನಂತಹ ಕೆಲವಾರು ಸರ್ಟಿಫಿಕೇಷನ್‌ಗಳೂ ಲಭ್ಯವಿವೆ.

ಸತತ ಪ್ರಯತ್ನದಿಂದಲೇ ಈ ಕ್ಷೇತ್ರದಲ್ಲಿ ಮುಂದೆಬರುವುದು ಸಾಧ್ಯ ಎಂದು ಪರಿಣತರು ಹೇಳುತ್ತಾರೆ. ಆದರೆ ಈ ಕ್ಷೇತ್ರಕ್ಕೆ ಕಾಲಿಡುವ ನಿರ್ಧಾರ ಮಾಡುವ ಮೊದಲು ನೀವು ನೆನಪಿನಲ್ಲಿಡಬೇಕಾದ ಅಂಶವೊಂದಿದೆ: ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಪೂರ್ವಾನುಮತಿ ಇಲ್ಲದೆ ಅವರ ಗಣಕ ವ್ಯವಸ್ಥೆಯೊಳಕ್ಕೆ ಅತಿಕ್ರಮ ಪ್ರವೇಶ ಮಾಡುವುದು ಅಥವಾ ’ಹ್ಯಾಕ್’ ಮಾಡುವುದು ಶಿಕ್ಷಾರ್ಹ ಅಪರಾಧ, ಎಚ್ಚರಿಕೆ!

(ಜೂನ್ ೨೦೦೬)