ಅವಧಾರಣೆ ಮತ್ತು ವಿಶಂಕೆ

ದ್ರುತವಿಳಂಬಿತವೃತ್ತಂ || ನಿ[1]ಯಮಿತಾನ್ವಯ-ಜಾತಿ-ಗುಣ-ಕ್ರಿಯಾ-

ಶ್ರಯಮಿದಾಯವಧಾರಣ-ಲಕ್ಷಣಂ |

ನಯ-ನಿಯೋಗ-ವಿಕಲ್ಪನೆಯೊಳ್ ವಿ[2]ಶಂ-

ಕೆಯೆ ವಿಶೇಷ-ಗುಣಕ್ಕುಪಲಕ್ಷಣಂ

ಅವಧಾರಣೆಯ ದೋಷ

ದ್ರುತವಿಳಂಬಿತವೃತ್ತಂ || ಕುಲಜನೀತನೆ ಪಂಡಿತನೀತನು-

ಜ್ಜ್ವಲ-ಯಶೋಧಿಕನೀತನೆ ತಿಬ್ಬಮೆಂ- |

ದಲಸಿ ಪೇ[3]ೞ್ವವಧಾರಣ-ದೊಷಮಂ

ನೆಲಸಲೀಯದಿರಿಂ ಕೃತಿ-ನಾರಿಯಳ್ ||೧೩೯||

ಈ ದೋಷ ಹೋಗಿ ಗುಣವಾದುದಕ್ಕೆ ಲಕ್ಷ್ಯ

ವೀರವೃತ್ತಂ  || ಶೂರನೀತನೆ ಪಂಡಿತನೀತನೇ

ಕ್ಷೀರ-ಗೌರ-ಯಶೋ-ಧಿಕನೀತನೇ

ಧಾ[4]ರಿಣೀ-ತಳದೊಳ್ ಧ್ರುವಮೆಂಬುದಾ-

ಧಾರಮಿಂತವಧಾರಣದೊಳ್ ಗುಣಂ ||೧೪೦||

೧೩೮. ‘ಅವಧಾರಣ’ ಸೂಚಕವು (=‘ಎ’ ಇತ್ಯಾದಿ) ಜಾತಿವಾಚಕ, ಗುಣವಾಚಕ, ಕ್ರಿಯಾವಾಚಕ ಶಬ್ದಗಳಿಗೆ ಒಂದೇ ರೀತಿ ಅನ್ವಿತವಾಗಿ ಬರಬೇಕೆಂಬುದು ನಿಯಮ. *ಹಾಗೆ ಬಂದಾಗ ಅದು ಗುಣ.* ‘ವಿಶಂಕೆ’ ಅಥವಾ ಸಂದೇಹದ ಸೂಚಕವು (=‘ಓ’ ಇತ್ಯಾದಿ) ಕೂಡ ಹಾಗೆಯೇ ತರ್ಕಿತವಾದ ವಿಚಾರಪ್ರಕಾರಗಳ ವಿಕಲ್ಪಗಳನ್ನು ಹೇಳುವಾಗ ಅನ್ವಿತವಾಗಿ ಬಂದರೆ ಮಾತ್ರ ಗುಣವೆಂದೆನಿಸುವುದು *‘ನಯ’=ತರ್ಕವಾಕ್ಯ; ಹೋಲಿಸಿ-‘ಸಪ್ತಭಂಗೀನಯ’ (ಜೈನ ದರ್ಶನದಲ್ಲಿ); ‘ನಿಯೋಗ’=ಸಂಯೋಗ, ಒಂದಾದ ಮೇಲೆ ಒಂದು ಬರುತ್ತಿರುವುದೆಂಬ ಯೌಗಿಕಾರ್ಥವೇ ಇಲ್ಲಿ ಪ್ರಸ್ತುತ.*

೧೩೯. ‘ಈತನೇ ಕುಲೀನನು, ಈತನು ಪಂಡಿತನು, ಈತನೇ ಅತಿ ಉಜ್ವಲ ಯಶೋವಂತನು’, ಎಂದು ಕ್ರಮತಪ್ಪಿ ಹೇಳುವ ಅವಧಾರಣೆಯ ದೋಷವನ್ನು ಕೃತಿ ವಧುವಿನಲ್ಲಿ ಸೇರಿಸಬಾರದು. *ಇಲ್ಲಿ ಮೊದಲಿಗೂ ಕಡೆಗೂ ‘ಈತನೇ’ ಎಂದು ಅವಧಾರಣೆ ಹೇಳಿ, ನಡುವೆ ‘ಈತನು’ ಎಂಬಾಗ ಹೇಳದಿರುವುದು ದೋಷಕ್ಕೆ ಕಾರಣವಾಗಿದೆ.

೧೪೦. ‘ಭೂತಳದಲ್ಲೆಲ್ಲ ನಿಜವಾಗಿಯೂ ಈತನೇ ಶೂರ, ಈತನೇ, ಪಂಡಿತ, ಈತನೇ ಹಾಲಿನಂತೆ ಬೆಳ್ಳಗಿರುವ ಯಶಸ್ಸಿನ ಭಾಜನ’ ಎಂದು ಹೇಳಿದರೆ ಅವಧಾರಣೆ ಗುಣಕ್ಕೆ ಆಧಾರವಾಗುವುದು *ಇಲ್ಲಿ ಹಿಂದೆ ಹೇಳಿದ ದೋಷವನ್ನು ಸರಿಪಡಿಸಲಾಗಿರುವುದು ಸ್ಪಷ್ಟ.*

ವಿಶಂಕೆಯ ದೋಷ

ದ್ರುತವಿಳಂಬಿತವೃತ್ತಂ || ದಿವಿಜನೋ ಫಣಿ-ನಾಯಕನೋ ಮನೋ

ಭವನಿವಂ ಕರಮೊಪ್ಪಿದನೆಂಬುದಂ |

ಕವಿಗಳಿಟ್ಟ ವಿಶಂಕೆಯ ಪಾೞೆಯಂ

ತವಿಸಿ ನಿಲ್ಕೆ ಮನೋಹರ-ಕಾವ್ಯದೊಳ್ ||೧೪೧||

ಅದೇ ಗುಣವಾದುದಕ್ಕೆ ಲಕ್ಷ್ಯ

ದ್ರುತವಿಳಂಬಿತವೃತ್ತಂ || ಸುರ-ಗಣಾಧಿಪನೋ ಫಣಿ-ನಾಥನೋ

ನಿರುತಮಾ ಸ್ಮರನೋ ಸೊಗಯಿಪ್ಪರೀ |

ದೊ[5]ರೆಯರಿಲ್ಲ ನರರ್ ಪೆಱರೆಂಬುದಾ-

ದರದಿನಕ್ಕೆ ಗುಣೋದಯ-ಕಾರಣಂ ||೧೪೨||

ಉಪಮಾವಾಚಕದ ದೋಷ ಹಾಗು ಗುಣಗಳು

ದ್ರುತವಿಳಂಬಿತವೃತ್ತಂ || ಅಪರಿಮೇಯಮೆ ದೋಷ-ಗುಣೌಘಮಿಂ-

ತುಪಚಿತ-ಕ್ರಮದಾ[6]ರಯೆ ಕಾವ್ಯದೊಳ್ |

ವಿಪುಳ-ವೃತ್ತಿಯೊಳೊಂದಿರೆ ಪೇ[7]ೞ್ವೆನ-

ಭ್ಯುಪಮಿತೋಕ್ತಿ-ಗುಣಾವಗುಣಂಗಳಂ ||೧೪೩||

೧೪೧. *‘ವಿಶಂಕೆ’ಯ ಪ್ರಯೋಗದಲ್ಲಿ ದೋಷಕ್ಕೆ ಉದಾಹರಣೆ*‘ಇವನು ದಿವಿಜನೋ (ಇಲ್ಲವೆ) ನಾಗರಾಜನೋ (ಇಲ್ಲವೆ) ಮನ್ಮಥನು ತುಂಬಾ ಚೆಲುವಾಗಿರುವನು’-ಎಂಬಲ್ಲಿ ಕವಿಗಳು ಮಾಡಿರುವ ವಿಶಂಕೆಯ ಪ್ರಯೋಗ ಕ್ರಮ (ಸರಿಯಲ್ಲದ್ದರಿಂದ) ಅದನ್ನು ತೊಲಗಿಸಿ ರಮಣೀಯ ಕಾವ್ಯದಲ್ಲಿ ಬಳಸಬೇಕು. *ಇಲ್ಲಿ ಮೊದಲು ಎರಡು ವಿಕಲ್ಪಗಳಿಗೆ ಯಥಾವತ್ತಾಗಿ ‘ಓ’ ಎಂಬ ವಿಶಂಕಾಸೂಚಕವನ್ನು ಬಳಸಿ, ಮೂರನೆಯದಕ್ಕೆ ಬಳಸದಿರುವುದು ದೋಷವಾಗಿದೆ.*

೧೪೨. *ಅದನ್ನು ತಿದ್ದಿಕೊಂಡಾಗ ಹೀಗಾಗುತ್ತದೆ-* ‘ಸುರಗಣಗಳಿಗೆ ಅಧಿಪತಿಯೋ (ಇಲ್ಲವೆ) ನಾಗರಾಜನೋ (ಇಲ್ಲವೆ) ಮನ್ಮಥನೋ-ಅಂತೂ ಇವನಂತೆ ಚೆಲುವಾದ ಬೇರೆ ಮನುಷ್ಯರಿಲ್ಲ’ ಎಂದು ಸರಿಮಾಡಿಕೊಂಡಾಗ ವಿಶಂಕೆಯ ಪ್ರಯೋಗವೇ ಗುಣಾತಿಶಯವನ್ನು ತಳೆಯುವುದು. *ಇಲ್ಲಿ ಮೂರನೆಯ ವಿಕಲ್ಪಕ್ಕೂ ‘ಮನ್ಮಥನೋ’ ಎಂದು ವಿಶಂಕಾಸೂಚಕವನ್ನು ಬಳಸಿರುವುದು ಸ್ಪಷ್ಟ.*

೧೪೩. ಯುಕ್ತಕ್ರಮದಿಂದ ವಿಚಾರಿಸುವುದಾದರೆ ಕಾವ್ಯದಲ್ಲಿ ದೋಷ-ಗುಣಗಳ ಸಮೂಹ ಅಳತೆಗೆ ಮೀರಿದ್ದೇ (ನಿಜ). ಈಗ ವಿವರವಾದ ರೀತಿಯಿಂದ ಉಪಮಾವಾಚಕಗಳ ಪ್ರಯೋಗದ ಗುಣ-ದೋಷಗಳನ್ನು

ಹೇಳುವೆನು.

ದ್ರುತವಿಳಂಬಿತವೃತ್ತಂ || ಪೊಳೆವ ಮಿಂಚುಗಳಂತೆರೆ ಕೇತುಗಳ್

ಜಳದ-ವೃಂದದವೋಲಿರೆ ಹಸ್ತಿಗಳ್ |

ಗಳಿತ-ಧಾ[8]ರೆಗಳಂತಿರೆ ಪತ್ತಿಗಳ್

ಬಳಸಿ ಕಾರ್ಗೆಣೆಯಾಯ್ತು ಮಹಾಹವಂ ||೧೪೪||

*ಇಲ್ಲಿಯೇ ಎರಡನೆಯ ಸಾಲನ್ನು ‘ಜಳದ-ಸಂಹತಿಯಂತಿರೆ ಹಸ್ತಿಗಳ’ ಎಂದು ತಿದ್ದಿ ದೋಷವನ್ನು ದೂರೀಕರಿಸಿದ ಪಾಠ ಂ ಪ್ರತಿಯಲ್ಲಿ ಸೂಚಿತವಾಗಿದೆ.*

ದ್ರುತವಿಳಂಬಿತವೃತ್ತಂ || ನಿಯಮಿತಾಕ್ಷರದಿಂದುಪಮಾ-ಪ್ರತಿ

ಜ್ಞೆಯನೆ ತಿರ್ದುವುದೞ್ತೆಯಿನಿರ್ದುಮಾ |

ಬಯಕೆ ತೀರದ ಕಾರಣದಿಂ ವಿಪ-

ರ್ಯಯಮಿದಭ್ಯುಪಮೋಕ್ತ್ಯುಪದೂಷಣಂ ||೧೪೫||

ದ್ರುತವಿಳಂಬಿತವೃತ್ತಂ || ಉಪಮಿತಾಕ್ಷರಮೆಲ್ಲಿಯುಮೇಕರೂ-

ಪ-ಪರಿವೃತ್ತಿಯೊಳೊಂದಿದ ಮಾೞ್ಕೆಯಿಂ- |

ದುಪಚಿತ-ಕ್ರ[9] ಮಮಕ್ಕುಮಿದೆಂದುಮ-

ಭ್ಯುಪಮಿತಕ್ಕೆ ಗುಣೋದಯ-ಕಾರಣಂ ||೧೪೬||

೧೪೪.ಧ್ವಜಗಳು ಹೊಳೆಯುವ ಮಿಂಚುಗಳಂತೆ ಇರಲು, ಆನೆಗಳು ಮೇಘ-ಮಾಲೆಗಳ ಹಾಗೆ ಇರಲು, ಪದಾತಿಸೈನ್ಯಗಳು ಸುರಿಯುವ ಮಳೆಯಂತೆ ಇರಲು ಆ ಮಹಾಯುದ್ಧವು ಮಳೆಗಾಲಕ್ಕೆ ಸದೃಶವಾಗಿದ್ದಿತು. *ಇಲ್ಲಿ ಮೊದಲ ಮತ್ತು ಕಡೆಯ ಉಪಮಾವಾಚಕಗಳು ‘ಅಂತೆ’ ಎಂದಿದ್ದು, ನಡುವಿನದು ಮಾತ್ರ ‘ಹಾಗೆ’ ಎಂದು ಬೇರೆಯಾಗಿರುವುದು ಸ್ವಷ್ಟ.*

೧೪೫. ನಿಯತವಾದ ಅದೇ ವಾಚಕಗಳಿಂದ ಉಪಮಾಪ್ರತೀತಿ ಸರಿಯಾಗಿ ಬರುತ್ತಿರಬೇಕೆಂದು ನಮ್ಮ ನಿರೀಕ್ಷೆಯಿರುತ್ತದೆ; ಆ ಬಯಕೆ ತೀರದೆ ಹೊಗುವುದರಿಂದ ನಿರೀಕ್ಷೆಗೆ ವಿರುದ್ಧವಾದ ಇದು (=ಬೇರೊಂದು ಉಪಮಾವಾಚಕದ ಪ್ರಯೋಗ) ಉಪಮಾವಾಚಕದ ದೋಷವೆನಿಸುವುದು. *ಇಲ್ಲಿಯ ಲಕ್ಷ್ಯದಲ್ಲಿ ಮಧ್ಯದ ವಾಚಕವನ್ನೂ ‘ಹಾಗೆ’ ಬದಲು ‘ಅಂತೆ’ ಎಂದು ತಿದ್ದಿಕೊಳ್ಳುವುದು ಸುಲಭ ಸಾಧ್ಯ. ಮೂಲದಲ್ಲಿ ಕೂಡ ‘ಜಳದವೃಂದದವೋಲಿರೆ’ ಎಂಬುದರ ಬದಲು ‘ಜಳದಸಂಹತಿಯಂತಿರೆ’ ಎಂದು ಸುಲಭವಾಗಿ ತಿದ್ದಿಕೊಳ್ಳಬಹುದಾಗಿದೆ.*

೧೪೬. ಹೀಗೆ ಉಪಮಾವಾಚಕವು ಎಲ್ಲೆಡೆಯಲ್ಲಿಯೂ ಏಕರೂಪವಾಗುವಂತೆ ತಿದ್ದಿಕೊಂಡ ಲಕ್ಷ್ಯವು ಕ್ರಮಬದ್ಧವೆನಿಸುವುದಲ್ಲದೆ ಗುಣಾತಿಶಯಕ್ಕೂ ಕಾರಣವಾಗುವುದು.

ಉಪಸಂಹಾರ

ಪುಷ್ಟಿತಾಗ್ರಾವೃತ್ತಂ || ಸಮುಚಿತ-ನೃಪತುಂಗ-ದೇವ-ಮಾರ್ಗ-

ಕ್ರ[10]ಮ-ಗಮನಾಭಿಮುಖರ್ಕಳಪ್ಪ ಧೀರರ್ |

ಕ್ರಮ-ಸಹಿತಮಗಮ್ಯ-ರೂಪ-ಕಾವ್ಯಾ

ಶ್ರ[11]ಮ-ಪದಮಂ ನಿರಪಾಯಮೆಯ್ದಲಾರ್ಪರ್ ||೧೪೭||

ಪುಷ್ಟಿತಾಗ್ರಾವೃತ್ತಂ || ಅತಿಶಯ-ಧವಳೋರ್ವಿಪೋದಿತಾಳಂ

ಕೃ[12]ತಿ-ಮತಿ-ನೀತಿ-ನಿರಂತರ-ಪ್ರತೀತಂ

ಶ್ರುತ[13]-ಯುವತಿ-ಕೃತೋಪಚಾರ-ಸಾರ-

ಸ್ವ[14]ತ-ಗುಣದಿಂ ಕೃತ-ಕೃತ್ಯಮಾರ್ಗನಕ್ಕುಂ ||೧೪೮||

೧೪೭. ಹೀಗೆ ಸಮುಚಿತ (ರೀತಿಯಿಂದ ಉಕ್ತ)ವಾದ ನೃಪತುಂಗ ದೇವನ ಮಾರ್ಗದ ಅನುಸಾರವಾಗಿ ನಡೆಯಲು ಅಭಿಮುಖರಾಗುವ ವಿಬುಧರು ಅಗಮ್ಯವೂ ಕ್ರಮಬದ್ಧವೂ ಆದ ಕಾವ್ಯ ನಿರ್ಮಾಣ-ಕ್ಷಮತೆಯನ್ನು ಕ್ಲೇಶವಿಲ್ಲದೆಯೇ ಪಡೆಯಬಲ್ಲವರಾಗುತ್ತಾರೆ.

೧೪೮. ‘ಅತಿಶಯಧವಳ’ ‘ನೀತಿನಿರಂತರ’ ‘ಕೃತಕೃತ್ಯಮಲ್ಲ’ ಇತ್ಯಾದಿ ಬಿರುದಾಂಕಿತ ರಾಜನಿಂದ ‘ಪ್ರತೀತ’ವಾದ (=ನಿರ್ಣೀತವಾದ) ಈ (ಕಾವ್ಯ) ಮಾರ್ಗವು *‘ಕೃತಕೃತ್ಯ+ಮಾರ್ಗಂ’ ಎಂಬ ಪದವಿಭಾಗದಂತೆ ‘ಕೃತಕೃತ್ಯ+ಆರ್ಗಂ’ ಎಂದೂ ಭಂಗಶ್ಲೇಷೆಯಿಂದ ಮಾಡಿಕೊಳ್ಳಬಹುದಾದ್ದರಿಂದ* ಯಾರಿಗೇ ಆಗಲಿ ವಿದ್ಯಾದೇವಿಯ ಉಪಾಸನೆಯಿಂದ ಬರುವ ಸಾರಸ್ವತ ಸಂಪತ್ತಿಯಿಂದ ಕೃತಾರ್ಥತೆಯನ್ನೊದಗಿಸುವುದು. *ಇದು ಫಲಶ್ರುತಿಯ ಪದ್ಯ. ಉದ್ದೇಶಪೂರ್ವಕವಾಗಿ ರಾಜನ ಬಿರುದಾವಳಿಗಳ ಉಲ್ಲೇಖ ಬಂದಿರುವುದು ಗಮನಾರ್ಹ*.

ಚಂಪಕಮಾಲಾವೃತ್ತಂ || ನುಡಿಗಳೊಡಂಬಡಲ್ ಬಗೆದವೋಲ್ ಬಗೆಯಂ ಮಿಗಲೀಯದೊಂದೆ ನಾ[15]

ೞ್ನುಡಿಯ ಬೆಡಂಗೆ ಕನ್ನಡದ ಮಾತಿನೊಳಾ ವಿಕಟಾಕ್ಷರಂಗಳೊಳ್

ತೊಡರದೆ ಸಕ್ಕದಂಗಳ ಪದಂ ಪವಣಾಗಿರೆ ಮೆಲ್ಪುವೆತ್ತು ದಾಂ-

ಗು[16]ಡಿವಿಡುವಂತೆ ನೀಳ್ದು ನಿಲೆ ಪೇೞ್ವುದುನೀತಿನಿರಂತರಕ್ರಮಂ ||೧೪೯||

ಮತ್ತೇಭವಿಕ್ರೀಡಿತವೃತ್ತಂ || ಸಕಳಾಳಾಪ-ಕಳಾ-ಕಳಾಪ-ಕಥಿತ-ವ್ಯಾವೃತ್ತಿಯೊಳ್ ಕೂಡಿ ಚಿ-

ತ್ರಕರಂಬೋಲ್ ಪರ-ಭಾಗ-ಭಾವ-ವಿಲಸದ್ವರ್ಣ-ಕ್ರಮಾ ವೃತ್ತಿಯಂ |

ಪ್ರಕಟಂ ಮಾಡಿರೆ ಪೇೞ್ದ ಚಿತ್ರ-ಕೃತಿಯಂ ವ್ಯಾವರ್ಣಿಸುತ್ತುಂ ಕವಿ

ಪ್ರಕರಂ ಶ್ರೀವಿಜಯ-ಪ್ರಭೂತಮನಿದಂ ಕೈಕೊಳ್ವುದೀಮಾೞ್ಕೆಯಿಂ ||೧೫೦||

ಗದ್ಯ || ಇದು ಪರಮ ಶ್ರೀ ನೃಪತುಂಗನದೇವಾನುಮತಮಪ್ಪ

ಕವಿರಾಜಮಾರ್ಗದೊಳ್

ದೋಷಾದೋಷಾನುವರ್ಣನನಿರ್ಣಯಂ

ಪ್ರಥಮಪರಿಚ್ಛೇದಂ ||

೧೪೯. *‘ನೀತಿನಿರಂತರ’ ಅಥವಾ ನೃಪತುಂಗನ ಕಾವ್ಯಮಾಗ್ಯದ ಪರಿಯಿದು-* ಎಳ್ಳಷ್ಟೂ ಮೀರದೆ ಉದ್ದೇಶಿಸಿದಷ್ಟೇ ಅರ್ಥವನ್ನು ಬೋಧಿಸುವಂತಹ ಉಚಿತ ಶಬ್ದಗಳು ಕೂಡಿಬಂದಿರಬೇಕು; ಕನ್ನಡದ ಮಾತುಗಳ ಬಳಕೆಯಲ್ಲಿ ನಾಣ್ನುಡಿಗಳ ಬೆಡಗಿರ ಬೇಕು; ಪರುಷಾಕ್ಷರಗಳು ತುಂಬಿರುವ ಸಂಸ್ಕೃತವನ್ನು ಬಳಸಿ ತೊಡರಿಸಬಾರದು; ಪದರಚನೆ ಹವಣಾಗಿರಬೇಕು; ಮೆಲ್ಪುವೆತ್ತಿರಬೇಕು. ಬಳ್ಳಿ ಸಹಜವಾಗಿ ಕುಡಿಚಾಚುವಂತೆ ನೀಳವಾಗಿ ಸಾಗುತ್ತಿರಬೇಕು-ಹೀಗೆ ಹೇಳುವುದು ಮಾತ್ರ ನೃಪತುಂಗನಿಗೆ ಅಭಿಮತವಾದ ಕಾವ್ಯಮಾರ್ಗ.

೧೫೦. ಸತ್ಕಾವ್ಯ ರಚನೆಯ ಕಲಾಪ್ರಪಂಚದ ವಿವರಣೆಯಲ್ಲಿ ಚಿತ್ರಕಾರನ ಹಾಗೆ ಶ್ರೇಷ್ಠವಾದ ‘ಭಾಗ’ ಮತ್ತು ‘ಭಾವ’ಗಳ ‘ವರ್ಣ’ಕ್ರಮದ (ವರ್ಣನಾಕ್ರಮದ ಎಂಬರ್ಥವೂ ಇದೆ) ಪರಿಯನ್ನು ಪ್ರಕಟಮಾಡಿ ಹೇಳಿರುವ ‘ಚಿತ್ರ’ಕೃತಿ (ಮತ್ತು ವೈಚಿತ್ರ್ಯಪೂರ್ಣ ಕೃತಿ) ಯೆಂದು ಬಣ್ಣಿಸುತ್ತ, ಕವಿಗಣವು ಶ್ರೀವಿಜಯನಿಂದ ಸಂಭೂತವಾದ ಇದನ್ನು ಈ ರೀತಿಯಾಗಿ ಸ್ವೀಕರಿಸಬೇಕು.

ಇಲ್ಲಿಗೆ ಪರಮ ಶ್ರೀ ನೃಪತುಂಗದೇವನಿಂದ ಅನುಮತವಾದ

ಕವಿರಾಜಮಾರ್ಗದಲ್ಲಿ ದೋಷಮತ್ತು ಅದೋಷಗಳ

ನಿರ್ಣಯವೆಂಬ ಮೊದಲ ಪರಿಚ್ಛೇದ ಮುಗಿದುದು.


[1] ನಿಯಮಿತಾನ್ವಿತ ‘ಪಾ’

[2] ವಿಶಂಕೆಯ ‘ಮ’.

[3] ಪೇೞ್ದವಧಾರಣ ‘ಕ’.

[4] ಧಾರುಣೀ ‘ಪಾ’.

[5] ದೊರೆಯಲಿಲ್ಲ ‘ಕ’.

[6] ದಾರೆಯ ‘ಸೀ’.

[7] ಪೇೞ್ವೆನಭ್ಯುಪಗಮೋಕ್ತಿ ‘ಪಾ’, ಮ’. ಇದು ಈ ಸಂದರ್ಭಕ್ಕೆ ಅನ್ವಯಿಸದೇ ಹೋಗುವುದರಿಂದ ಅಪಪಾಠ; ‘ಸೀ ಸೂಚಿತಪಾಠ ಇಲ್ಲಿ ಅಂಗೀಕೃತ.

[8] ದಾರೆ ‘ಪಾ’.

[9] ಕ್ರಮದಕ್ಕು ‘ಅ, ಬ’.

[10] ಈಸಾಲಿನ ಮುದ್ರಿತಪಾಠಗಳಲ್ಲೆಲ್ಲ ಸಂಧಿದೋಷ, ಛಂದೋಭಂಗ ಇಲ್ಲವೆ ಅರ್ಥಬಾಧೆಯಿದೆ-‘ಕ್ರಮ’+‘ನ’ ಬಂದಾಗ ವ್ಯಾಕರಣ ನಿಯಮದಂತೆ ‘ನ’ ಹೋಗಿ ‘ಣ’ ಆಗಬೇಕಾಗುವುದರಿಂದ ಆ ಅಕ್ಷರ ತಪ್ಪು. ಕ್ರಮಕ್ಕೆ ನಮಿಸುವುದರಲ್ಲಿ ಅರ್ಥೌಚಿತ್ಯವೊ ಇಲ್ಲ. ಕ್ರಮನಮನಾಭಿಮುಖರ್ಕಳಪ್ಪ….‘ಪಾ’, ಕ್ರಮನಮುಮನಭೀಮುಖರ್ಕಳಪ್ಪರ್ ‘ಮ’, ಕ್ರಮಮನಭಿಮುಖರ್ಕಳಪ್ಪರಾ ‘ಸೀ’, ಯಾರೂ ‘ಅರ್ಧಸಮ’ವಾದ ಪುಷ್ಪಿತಾಗ್ರಾವೃತ್ತದಲ್ಲಿ ೧, ೩ನೆಯ ಸಾಲುಗಳಲ್ಲಿ ‘ನ’ ‘ನ’ ‘ರ’ ‘ಯ’ ಗಣಗಳು, ೩, ೪ನೆಯ ಸಾಲುಗಳಲ್ಲಿ ‘ನ’ ‘ಜ’ ‘ಜ’ ‘ರ’ ಗಣಗಳು+ಒಂದು ಗುರು ಎಂಬ ಪಿಂಗಳನ ಲಕ್ಷಣವನ್ನು ಗಮನಿಸಿದಂತಿಲ್ಲ. ಇಲ್ಲಿ ಸೂಚಿತಪಾಠ, ಅಲ್ಪ ಮಾರ್ಪಾಟಿಂದ ಎರಡೂ ದೋಷಗಳನ್ನು ನಿವಾರಿಸುತ್ತದೆ. ಳಪ್ಪರೆಲ್ಲರ್’ ‘ಸೀ’ಸೂಚಿತಪಾಠ, ಮೈಸೂರು ಆವೃತ್ತಿಯಲ್ಲಿ ‘ಸೀ’ ಪಾಠವೂ ‘ಕ್ರಮನಮನಾಭಿಮುರ್ಕಳಪ್ಪರೆಲ್ಲರ್’ ಎಂದಿದೆ.

[11] ಈ ಸಾಲಿನಲ್ಲೂ ಎರಡನೆಯ ಸಾಲಿನಂತೆಯೇ ಗೊಂದಲವಿದೆ;-‘ಶ್ರಮಪದಮಂ ನಿರಪಾಯನೆಯ್ದ ಲಾರ್ಪಂ’-‘ಪಾ’; ‘ಶ್ರಮಪದಮಂ ನಿರಪಾಯಕೆಯ್ದಲಾರ್ಪರ್’- ‘ಮ’; ‘ಶ್ರಮಮಂ ನಿರಪಾಯದೆಯ್ದ ಲಾರ್ಪರ್’- ‘ಸೀ’. ಸೂಚಿತ ಪಾಠದಲ್ಲಿ ಉಕ್ತ ಎರಡೂ ದೋಷಗಳಿಲ್ಲ.

[12] ‘ಮ, ಪಾ’ದಲ್ಲಿ ಸರಿಯಾಗಿದ್ದರೂ ‘ಸೀ’ ಇದನ್ನು ‘ಕೃತಿಮತಿಯೆ ನಿರಂತರ ಪ್ರತೀತಂ’ ಎಂದು ತಿದ್ದಿ ಛಂದೋಭಂಗಮಾಡಿದೆ.

[13] ಶ್ರುತಿ-‘ಪಾ, ಸೀ’.

[14] ಇಲ್ಲಿಯೂ ಗೊಂದಲವಿದೆ. ಮೇಲಿನಂತೆಯೇ-‘ಸ್ವತ ಗುಣದಿಂ ಕೃತಕೃತ್ಯಮಕ್ಕುಂ’ ‘ಸೀ. ಇಲ್ಲಿ ಪರಿಷ್ಕೃತಪಾಠ ಛಂದೋಬದ್ಧ ಹಾಗೂ ಅರ್ಥಶುದ್ಧವಾಗಿದೆ. ಮೈಸೂರು ಆವೃತ್ತಿಯಲ್ಲಿ ‘ಸೀ’ ಪಾಠವೂ ‘ಕೃತಕೃತ್ಯ ಮೆಲ್ಲ ಮಕ್ಕು’ ಎಂದು ಛಂದೋಬದ್ಧವಾಗಿ ಪರಿಷ್ಕೃತವಾಗಿದೆ. ಆದರೆ ಅರ್ಥಋಷ್ಟಿ ಕಡಿಮೆ.

[15] ನಾಣ್ನುಡಿ ‘ಪಾ’, ನಾಣ್ಣುಡಿಯ ‘ಮ’

[16] ಗುಡಿವಿಡಿಸಂತೆ ನೀೞ್ವನಿತುವೇೞ್ವುದು ‘ಮ’.