ಅವನೀಂದ್ರನಾಥ ಠಾಕೂರ್ಭಾರತದ ಪ್ರಸಿದ್ಧ ಚಿತ್ರಕಾರರು. ಭಾರತದಲ್ಲಿ ಆಧುನಿಕ ಯುಗದ ಪ್ರವರ್ತಕರಲ್ಲಿ ಒಬ್ಬರು. ಅಸೀಮ ದೇಶಾಭಿಮಾನಿ, ಆದರೆ ಎಲ್ಲ ಕಡೆಗಳಿಂದ ಜ್ಞಾನವನ್ನು ಸ್ವಾಗತಿಸಿದರು. ಸ್ವತಃ ಶ್ರೇಷ್ಟ ಚಿತ್ರಗಳನ್ನು ರಚಿಸಿದರು, ಅಲ್ಲದೆ ಶ್ರೇಷ್ಠ ಚಿತ್ರಕಾರರಿಗೆ ಮಾರ್ಗದರ್ಶನ ಮಾಡಿದರು.

ಅವನೀಂದ್ರನಾಥ ಠಾಕೂರ್

“ನನಗೆ ಚಿತ್ರದ ಹುಚ್ಚು ಹಿಡಿದಿದೆ. ತೋಪುಗಳ ಗರ್ಜನೆ ಕೇಳಿದೊಡನೆ ಯುದ್ಧದ ಕುದುರೆ ಕುತೂಹಲದಿಂದ ಕತ್ತೆತ್ತಿ ನೋಡುವಂತೆ ಚಿತ್ರಗಳನ್ನು ನೋಡಿದಾಕ್ಷಣ ನನ್ನ ಹೃದಯ ಹುಚ್ಚೆದ್ದು ಕುಣಿಯುತ್ತದೆ.”

ಹೀಗೆಂದವರು ಈ ಶತಮಾನದ ಆದಿ ಭಾಗದಲ್ಲಿ ಭಾರತೀಯ ಚಿತ್ರಕಲೆಯ ಪುನರುಜ್ಜೀವನಕ್ಕೆ ಕಾರಣರಾದ ಅವನೀಂದ್ರನಾಥ ಠಾಕೂರರು.

ಹತ್ತೊಂಬತ್ತನೆ ಶತಮಾನ ಅನೇಕ ಬದಲಾವಣೆ ಮತ್ತು ಸುಧಾರಣೆ ಕಂಡ ಕಾಲ. ಈ ಬದಲಾವಣೆ ಮತ್ತು ಸುಧಾರಣೆಗೆ ಬಂಗಾಲದ ಠಾಕೂರ್ ಮನೆತನದ ಕಾಣಿಕೆ ಅಪಾರ. (‘ಠಾಕೂರ್’ ಮನೆತನದ ಹೆಸರು ಇತ್ತೀಚೆಗೆ ಠಾಗೋರ್ ಎಂದು ಪರಿಚಿತವಾಗಿದೆ.) ಸಾಹಿತ್ಯರಂಗದಲ್ಲಿ ರವೀಂದ್ರನಾಥ ಠಾಕೂರರು ಹೊಸ ಅಲೆ ಎಬ್ಬಿಸಿದರೆ, ಕಲಾರಂಗದಲ್ಲಿ ಅವನೀಂದ್ರನಾಥ ಠಾಕೂರರು ತಮ್ಮದೇ ಆದ ಶೈಲಿ ರೂಪಿಸಿದರು.

ಬಾಲ್ಯ

ಅವನೀಂದ್ರ ಠಾಕೂರ್‌ರವರು ಅಬನೀಂದ್ರ ಠಾಕೂರ್ ಎಂದೇ ಕರೆಯಲ್ಪಡುತ್ತಿದ್ದರು. ಬಂಗಾಳಿಯಲ್ಲಿ ‘ವ’ ಮತ್ತು ‘ಬ’ಗಳಲ್ಲಿ ಹೆಚ್ಚು ಭೇದವಿಲ್ಲ. ರವೀಂದ್ರನಾಥ ಠಾಕೂರರನ್ನು ರಬೀಂದ್ರನಾಥ ಠಾಕೂರ್ ಎನ್ನುವುದುದಿಲ್ಲವೇ ? ಹಾಗೆ.

ಕಲ್ಕತ್ತೆಯ ಠಾಕೂರ್ ಮನೆತನ ಬಹಳ ಪ್ರಸಿದ್ಧ. ಅದು ರಾಜವಂಶವೂ ಕೂಡ.

ರಾಜಕುಮಾರ ದ್ವಾರಕಾನಾಥರದು ದೊಡ್ಡ ಸಂಸಾರ. ಇವರ ಎರಡನೇ ಮಗ ಗಿರೀಂದ್ರನಾಥ.

ಗಿರೀಂದ್ರನಾಥರ ಕೊನೇ ಮಗ ಗುಣೇಂದ್ರನಾಥ. ಇವರೇ ಅವನೀಂದ್ರನಾಥರ ತಂದೆ. ವಿಶ್ವಕವಿ ರವೀಂದ್ರರು ಗುಣೇಂದ್ರನಾಥರ ತಮ್ಮ. ಅಂದರೆ ಅವನೀಂದ್ರರ ಚಿಕ್ಕಪ್ಪ. ಅವನೀಂದ್ರರು ಗುಣೇಂದ್ರನಾಥರ ಮೂರನೇ ಮಗ. ಗಗನೇಂದ್ರನಾಥ ಮತ್ತು ಸಮರೇಂದ್ರನಾಥರು ಇವರ ಅಣ್ಣಂದಿರು.

ಕಲ್ಕತ್ತೆಯ ಜೋರಾಸಾಂಕೋದಲ್ಲಿದ್ದ ಠಾಕೂರ್ ಮನೆತನದ ಪುರಾತನ ಕಟ್ಟಡದಲ್ಲಿ ೧೮೭೧ರಲ್ಲಿ ಆಗಸ್ಟ್ ೭ ರಂದು ಅವನೀಂದ್ರರ ಜನನ.

ತಂದೆ-ತಾಯಿ

ಅವನೀಂದ್ರನಿಗೆ ಬಾಲ್ಯದಲ್ಲಿಯೇ ಚಿತ್ರ ಬಿಡಿಸುವ ಹವ್ಯಾಸ. ‘ಕೈಗೆ ಸಿಕ್ಕಿದ ಬಣ್ಣ. ಕಣ್ಣಿಗೆ ಕಂಡ ಜಾಗ. ಮನಸ್ಸಿಗೆ ಬಂದ ಗೆರೆಗಳು. ಇದಕ್ಕೆ ಅವನ ತಂದೆ ತಾಯಿಯರಲ್ಲಿದ್ದ ಚಿತ್ರಕಲೆಯ ಸಂಸ್ಕಾರ, ಮನೆತನದ ಹಿನ್ನೆಲೆ ಕಾರಣ.

ಗುಣೇಂದ್ರನಾಥರಿದ್ದರೆ ಮನೆ ಎಲ್ಲ ತುಂಬಿರುತ್ತಿತ್ತು. ಎಂದು ರವೀಂದ್ರರು ಹೇಳಿದ್ದಾರೆ. ಗುಣೇಂದ್ರರದು ಬಹು ಉದಾರವಾದ, ಹೃದಯವಂತಿಕೆಯ ಸ್ವಭಾವ. ನೆಂಟರು ಸ್ನೇಹಿತರು, ಅತಿಥಿಗಳು, ಸೇವಕರು ಎಲ್ಲರನ್ನೂ ವಿಶ್ವಾಸದಿಂದ ಕಾಣುವರು. ಅವರ ಮನೆಗೆ ಕರೆಸಿಕೊಳ್ಳದೆಯೇ ಬರುವ ಜನ ಹೆಚ್ಚು. ಎಲ್ಲರನ್ನೂ ಸ್ನೇಹದಿಂದ ಬರಮಾಡಿಕೊಂಡು, ಎಲ್ಲರ ಜೊತೆಗೆ ಸರಸದಿಂದ ಬೆರೆತು, ನಕ್ಕು ನಗಿಸುವ ಸ್ವಭಾವ ಗುಣೇಂದ್ರರದು. ಕಲೆಗಳಲ್ಲಿ ಬಹು ಪ್ರೀತಿ. ಕಲೆಯನ್ನು ಕಲಿಯಬೇಕೆಂದು ಬಯಸುವವರಿಗೆ ಅವರದು ಬಹು ಪ್ರೋತ್ಸಾಹ. ಹಬ್ಬ ಹರಿದಿನಗಳ ಸಂಭ್ರಮ, ನಾಟಕವಾಡುವುದು, ಇತರ ಮನರಂಜನೆ – ಯಾವ ಸಲಹೆ ಬಂದರೂ ಅದನ್ನು ಕಾರ್ಯಗತ ಮಾಡಲು ಗುಣೇಂದ್ರರು ಸಿದ್ಧ. ಎಷ್ಟೋ ಬಾರಿ ಅವನೀಂದ್ರರೂ, ರವೀಂದ್ರರೂ ಮನೆಯ ಇತರ ಹುಡುಗರೂ ದೂರದಲ್ಲಿ ನಿಂತು ದೊಡ್ಡವರು ಸೇರಿದ್ದ ಕೊಠಡಿಗಳಿಂದ ಕೇಳಿಬರುತ್ತಿದ್ದ ನಗು, ಸಂಗೀತ ಇವನ್ನು ಮೈಯೆಲ್ಲ ಕಿವಿಯಾಗಿ ಕೇಳುತ್ತಿದ್ದದ್ದೂ ಉಂಟು. ಗುಣೇಂದ್ರ ಮಕ್ಕಳಿಗೆ ಸ್ವಾರಸ್ಯವಾಗಿ ಕಥೆಗಳನ್ನು ಹೇಳುವರು. ರವೀಂದ್ರರು ಬರೆದ ಕವನಗಳನ್ನು ಆಸಕ್ತಿಯಿಂದ ಕೇಳಿ ಹೊಗಳಿ ಪ್ರೋತ್ಸಾಹಿಸುವರು. ಒಟ್ಟಿನಲ್ಲಿ ಗುಣೇಂದ್ರರದು ಸ್ನೇಹದ, ಸಂತೋಷದ, ಔದಾರ್ಯದ ಸ್ವಭಾವ.

ಅವನೀಂದ್ರರ ತಂದೆ ತಾಯಿ ಇಬ್ಬರೂ ಚಿತ್ರ ಕಲಾವಿದರು. ಕಲ್ಕತ್ತದ ‘ಸ್ಕೂಲ್ ಆಫ್ ನ್ಯಾಚುರಲ್ ಆರ್ಟ್ಸ್’ ಸಂಸ್ಥೆಯ ಪ್ರಾರಂಭದ ದಿನಗಳಲ್ಲಿ ಅವನೀಂದ್ರರ ತಂದೆ ವಿದ್ಯಾರ್ಥಿಯಾಗಿ ಸೇರಿ ಚಿತ್ರಕಲೆಯನ್ನು ಅಭ್ಯಾಸ ಮಾಡಿದ್ದರು. ತಾಯಿ ಸೌದಾಮಿನಿ ದೇವಿ ಶಿಸ್ತಿನ ಹೆಂಗಸು. ಮಕ್ಕಳ ಮೇಲೆ ಅವರ ಶಿಸ್ತಿನ ಮುದ್ರೆ ಅಚ್ಚಳಿಯದಂತೆ ಬಿದ್ದಿತ್ತು. ಹಳೆಯದಾಗಿದ್ದ ಬಂಗಲೆಯ ಗೋಡೆಗಳ ಮೇಲೆಲ್ಲಾ ಭಾರಿ ಭಾರಿ ಚಿತ್ರಗಳು. ಕಣ್ಣು ತಿರುಗಿಸಿದಲ್ಲೆಲ್ಲಾ  ತೈಲ ಚಿತ್ರಗಳು. ದೃಷ್ಟಿ ಹಾಯಿಸಿದ ಕಡೆಯಲ್ಲೆಲ್ಲಾ ಬಣ್ಣ ಬಣ್ಣದ ಬೊಂಬೆಗಳು ವಿಚಿತ್ರ ಕಲಾಕೃತಿಗಳು. ಅರಮನೆಯಂತಹ ಮನೆ, ಮನೆ ತುಂಬ ಜನ.

ಚಂಪಾದಾನಿ

ಕೆಲವು ತಿಂಗಳುಗಳಲ್ಲಿ ಅವನೀಂದ್ರರ ತಂದೆ ತಾಯಿಗಳು ಸಂಸಾರ ಸಮೇತ ಕಲ್ಕತ್ತೆಯಿಂದ ಕೆಲವು ಮೈಲಿ ದೂರವಿದ್ದ  ಚಂಪಾದಾನಿ ಎಂಬಲ್ಲಿಗೆ ಬಂದು ನೆಲಸಿದರು.

ಚಂಪಾದಾನಿ ಗಂಗಾನದಿ ತೀರದ ಸುಂದರ ಪ್ರದೇಶ. ದೊಡ್ಡ ತೋಟವೊಂದರ ನಡುವೆ ಭಾರಿ ಬಂಗಲೆ. ಸುತ್ತ ವಿವಿಧ ಜಾತಿಯ ಮರ ಗಿಡಗಳು. ಹಕ್ಕಿಗಳ ಚಿಲಿಪಿಲಿ, ಪ್ರಾಣಿಗಳ ಗಲಿಬಿಲಿ. ಬಾಲಕ ಅವನೀಂದ್ರನಿಗೆ ಸ್ವಚ್ಛಂದ ವಿಹಾರಕ್ಕೆ ಅವಕಾಶ. ಓಡುತ್ತಿರುವ ಮೊಲ, ಆಡುತ್ತಿರುವ ಅಳಿಲು, ಕುಪ್ಪಳಿಸುವ ಕೋತಿಗಳು, ಗಾಬರಿಯಿಂದ ನೋಡುವ ಜಿಂಕೆಗಳು ಬಾಲಕ ಅವನೀಂದ್ರನಿಗೆ ಮನರಂಜನೆ ಒದಗಿಸುತ್ತಿದ್ದವು. ಕೆಲವೊಮ್ಮೆ ನದಿಗೆ ನೀರು ಕುಡಿಯಲು ಬರುತ್ತಿದ್ದ ಹುಲಿಗಳನ್ನು ನೋಡಿ ಅವನೀಂದ್ರ ಹೆದರುತ್ತಿದ್ದ. ಬಂಗಾಲದ ಹುಲಿ ನೋಡಲು ಭಯಂಕರ ಮತ್ತು ಅಷ್ಟೇ ಕ್ರೂರ ಎಂದು ಪ್ರಸಿದ್ಧಿ.

ಗಂಗಾನದಿಯ ತೀರದಲ್ಲಿ

ಮೊಣ ಕಾಲವರೆಗೆ ನೀರಿನಲ್ಲಿ ನಿಂತು ಮೀನಿಗಾಗಿ ಧ್ಯಾನ ಮಾಡುತ್ತಿದ್ದ  ಕೊಕ್ಕರೆಯನ್ನೇ ನೋಡುತ್ತ ಹುಲ್ಲಿನ ಮೇಲೆ ಅವನೀಂದ್ರ ಕುಳಿತು ಬಿಡುತ್ತಿದ್ದ. ನಿಂಬೆ ಗಿಡದಿಂದ ಹಣ್ಣು ಕಿತ್ತು ಅಳಿಲು ತಿನ್ನುತ್ತಿದ್ದರೆ ಅದನ್ನು ಓಡಿಸದೆ ಹಾಗೇ ನೋಡುತ್ತಾ ನಿಲ್ಲುತ್ತಿದ್ದ. ಮನೆಗೆ ಬಂದು ನೆಲದ ಮೇಲೋ ಗೋಡೆಯ ಮೇಲೋ ನಿಂತ ಕೊಕ್ಕರೆಯ, ಕುಳಿತ ಅಳಿಲಿನ ಚಿತ್ರ ಬಿಡಿಸುತ್ತಲಿದ್ದ. ಬಿಡಿಸಿದ ಚಿತ್ರ ಹಿರಿಯರಿಗೆ ತೋರಿಸಬೇಕು. ಅವರು ಶಹಬಾಸ್ ಎನ್ನಬೇಕು. ಯಾರಿಗೆ ತೋರಿಸದಿದ್ದರೂ ಚಿಕ್ಕಪ್ಪ  ರವೀಂದ್ರರಿಗೆ ತೋರಿಸಲೇಬೇಕು ಎಂಬ ಆಸೆ ಬಾಲಕ ಅವನೀಂದ್ರನಿಗೆ.

ಮನೆಯ ವಾತಾವರಣ

ಬಾಲಕ ಅವನೀಂದ್ರನಿಗೆ ಬಾಲ್ಯದಲ್ಲಿಯೇ ಒದಗಿದ ವಿಪತ್ತು ಪಿತೃವಿಯೋಗ. ಅವನೀಂದ್ರನು ಇನ್ನೂ ಹುಡುಗನಾಗಿದ್ದಾಗಲೇ ತಂದೆ ತೀರಿಕೊಂಡರು. ಇದರಿಂದ ಹುಡುಗ ಇನ್ನು ಏಕಾಂಗಿಯಾದ, ಅಂತರ್ಮುಖಿಯಾದ. ಹಾಗೆಂದು ಮೂಕನೇನಲ್ಲ. ಚಿಕ್ಕ ಮಕ್ಕಳಿಗೆ ಕಥೆ ಹೇಳುವುದರಲ್ಲಿ ಇತರರನ್ನು ಅನುಕರಿಸಿ ತಮಾಷೆ ಮಾಡುವುದರಲ್ಲಿ ಜಾಣ.

ಕೆಲ ಕಾಲದ ನಂತರ ಅವನೀಂದ್ರ, ತಾಯಿ ಮತ್ತು ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಕಲ್ಕತ್ತೆಗೆ ಬಂದು ನೆಲಸಿದರು.

ಹತ್ತಾರು ಹಿರಿಕಿರಿಯ ಬಾಲಕರಿದ್ದ ದೊಡ್ಡ ಮನೆ. ಅಣ್ಣ ತಮ್ಮಂದಿರು, ಅಣ್ಣ ತಮ್ಮಂದಿರ ಮಕ್ಕಳು ಓರಗೆಯವರಾ ಗುತ್ತಿದ್ದರು. ರವೀಂದ್ರರು ಅವನೀಂದ್ರರಿಗಿಂತ ಹತ್ತು ವರ್ಷ ಹಿರಿಯ. ಆದರೆ ಸಂಬಂಧದಲ್ಲಿ ಅವನೀಂದ್ರರ ಚಿಕ್ಕಪ್ಪ. ಹಿರಿಯ ಕಿರಿಯ ಬಾಲಕರು ಕಲೆತು ಒಟ್ಟಿಗೆ ಆಡುವುದು, ಹಾಡುವುದು ನಡೆದಿತ್ತು. ಆದರೆ ಎಲ್ಲವೂ ಗಂಭೀರವಾಗಿ ಶಿಸ್ತಿನಿಂದ. (ಸುನಾಯಿನಿ, ವಿನಾಯಿನಿ ಅವನೀಂದ್ರರ ತಂಗಿಯರು) ಮನೆ ಮಂದಿಯೆಲ್ಲಾ ಸೇರಿ ನಾಟಕ ಆಡಿದರೆ, ಪಾತ್ರಧಾರಿಗಳೆಲ್ಲಾ ಮನೆಯವರೆ. ಸಂಗೀತ ಕಛೇರಿ ನಡೆಸಿದರೆ ಎಲ್ಲ ತರದ ವಾದ್ಯಗಾರರು, ಗಾಯಕರು ಮನೆಯವರೇ. ನೃತ್ಯ ಪ್ರದರ್ಶನವೂ ಹಾಗೆ.

ಮನೆಯ ಹಿರಿಯರೆಲ್ಲ ಒಂದಲ್ಲ ಒಂದು ಲಲಿತ ಕಲೆಯ ಆರಾಧಕರು. ಠಾಕೂರು ಮನೆತನವೇ ಹಾಗೆ. ಬಂಗಾಳದ ಪ್ರಸಿದ್ಧ ಕವಿಗಳು, ಗಾಯಕರು ಚಿತ್ರ ಕಲಾವಿದರು ಠಾಕೂರರ ಮನೆಗೆ ಆಗಾಗ ಬರುತ್ತಿದ್ದರು. ಗಂಟೆಗಟ್ಟಲೆ ಸಂಗೀತ, ಕಾವ್ಯವಾಚನ ಸಾಗುತ್ತಿದ್ದವು. ಆಗಾಗ ಮನೆಯವರು ಸ್ನೇಹಿತರು ಎಲ್ಲ ಸೇರಿ ಮನೆಯಲ್ಲೆ ನಾಟಕಗಳನ್ನು ಆಡುತ್ತಿದ್ದರು. ಕಲೆ ಆ ಮನೆಯ ಗಾಳಿಯಲ್ಲಿಯೇ ಸೇರಿಹೋಗಿತ್ತು.

ಅಂತರ್ಮುಖಿ

ಆದರೆ ಮಕ್ಕಳಿಗೆ ಮನಬಂದಂತೆ ವರ್ತಿಸುವ ಅವಕಾಶವಿತ್ತೇ ? ಇರಲಿಲ್ಲ. ಮನೆತನದ ಗೌರವ, ಅಂತಸ್ತಿಗೆ ಅನುಗುಣವಾದ ಶಿಸ್ತು, ಕಟ್ಟುನಿಟ್ಟುಗಳು. ಸೇವಕರ ಸರ್ಪಗಾವಲು. ಎಲ್ಲೇ ಹೋಗಲಿ ಜೊತೆಗೊಬ್ಬ ಆಳು. ಸ್ವಾತಂತ್ರ್ಯವಿತ್ತು, ಸ್ವಚ್ಛಂದಕ್ಕೆ ಅವಕಾಶ ಇರಲಿಲ್ಲ. ದೊಡ್ಡ ಕುಟುಂಬ ವ್ಯವಸ್ಥೆಯ ಇಂತಹ ಸ್ಥಿತಿಯಲ್ಲಿ ಕೆಲವು ಮಕ್ಕಳು ಅಂತರ್ಮುಖಿಗಳಾಗುವುದು ಅನಿವಾರ್ಯ. ತಾವು ಒಂಟಿಯಾಗಿದ್ದು, ಹೊರಗೆ ಹೋಗಲು ಅವಕಾಶ ಇಲ್ಲದಾಗ ಒಬ್ಬರೇ ಕುಳಿತು ಯೋಚಿಸುವುದು, ಕನಸು ಕಾಣುವುದು ಎಲ್ಲ ಸಹಜ.

ಅವನೀಂದ್ರ ಇಂಥ ಅಂತರ್ಮುಖಿ. ಮನೆಮಂದಿಯನ್ನು ಮಾತ್ರವಲ್ಲ, ಸುತ್ತಮುತ್ತಲಿನ ಎಲ್ಲವನ್ನೂ ಮೂಕನಂತೆ ನೋಡುವುದು, ನೋಡಿದ್ದನ್ನೇ ಪದೇ ಪದೇ ನೋಡುವುದು, ಕುಳಿತಲ್ಲೇ ಕುಳಿತುಬಿಡುವುದು ಅವನೀಂದ್ರನ ಸ್ವಭಾವವಾಯಿತು.

ಇಂತಹ ಎಕಾಂತ ಪ್ರವೃತ್ತಿ, ಸೂಕ್ಷ್ಮ ಗ್ರಹಣ ಶಕ್ತಿ, ಚಿತ್ರ ರಚನೆಗೆ ಪುಟ ಕೊಟ್ಟಿತು. ಪ್ರಕೃತಿ ಪಾಠ ಕಲಿಸಿತು, ನೆಲ ಜಲಗಳು ಬಣ್ಣ ಒದಗಿಸಿದವು.

ಚಿತ್ರಗಾರನಾಗುವ ಬಯಕೆ

ಕಥೆಗಳಲ್ಲಿ ಬರುವ ಪಾತ್ರಗಳನ್ನು ಇದಿರಿಗೇ ಬಳಪ, ಇದ್ದಲುಗಳನ್ನು ಚಿತ್ರಿಸಿಯೂ ತೋರಿಸಬಲ್ಲ.

ಒಂಭತ್ತು ವರ್ಷದ ಬಾಲಕ ಅವನೀಂದ್ರ ಒಂದು ಚಿತ್ರ ರಚಿಸಿದ. ತನ್ನ ಚಿಕ್ಕಪ್ಪ ರವೀಂದ್ರನಾಥರ ಮುಂದೆ ತಂದು ತೋರಿಸಿ “ಚಿಕ್ಕಪ್ಪಾ ಹೇಗಿದೆ” ಎಂದು ಕೇಳಿದ. ಹರಿಯುವ ಹೊಳೆಯ ದಂಡೆಯ ರಮಣೀಯ ಚಿತ್ರ. ಬಾಲಕನ ಕಲ್ಪನಾಶಕ್ತಿ ಕಂಡು ರವೀಂದ್ರರಿಗೆ ಸಂತೋಷವಾಯಿತು. ಅಣ್ಣನ ಮಗನಾದರೂ ತಮ್ಮನಂತೇ ಪ್ರೀತಿಸುತ್ತಿದ್ದ ಅವನೀಂದ್ರನಿಗೆ ತಮ್ಮ ಮೆಚ್ಚುಗೆಯ ಕುರುಹಾಗಿ ಚಿತ್ರ ಬರೆಯುವ “ಹಲಗೇ”ಯೊಂದನ್ನು ಉಡುಗೊರೆ ನೀಡಿದರು.

ಅವನೀಂದ್ರ ಕಲ್ಕತ್ತೆಯ ಸಂಸ್ಕೃತ ಕಾಲೇಜಿಗೆ ಸೇರಿದಾಗ ಹತ್ತು ವರ್ಷ. ಅಲ್ಲಿ ಅವನ ಜೊತೆಗಾರ ಅನುಕೂಲ ಚಕ್ರವರ್ತಿ. ಆತನಿಗೂ ಚಿತ್ರ ಬರೆಯುವ ಹುಚ್ಚು. ದೊಡ್ಡ ಚಿತ್ರ ಕಲಾವಿದನಾಗಬೇಕೆಂಬ ಹೆಬ್ಬಯಕೆ. ಅನುಕೂಲ ಚಕ್ರವರ್ತಿಯ ಸ್ನೇಹ ದೊರಕಿದ್ದು ಅವನೀಂದ್ರನಿಗೆ ಅನುಕೂಲವೇ ಆಯ್ತು. ಇಬ್ಬರೂ ಆತ್ಮೀಯ ಮಿತ್ರರಾದರು.

ಅನುಕೂಲ ಚಿತ್ರ ಬರೆಯುತ್ತಿದ್ದುದು ಸೀಸದ ಕಡ್ಡಿಯಿಂದ. ಸೀಸದ ಕಡ್ಡಿಯಿಂದ ಚಿತ್ರ ಬರೆಯುವುದು ಹೇಗೆ ಎಂಬ ಕುತೂಹಲ ಅವನೀಂದ್ರನಿಗೆ, ಆತ ಸೀಸದಕಡ್ಡಿಯಿಂದ ಚಿತ್ರ ರಚಿಸುವುದನ್ನು ಕಲಿಸಿದ. ಬಣ್ಣಗಳ ಬದಲಿಗೆ ಸೀಸದಕಡ್ಡಿ ! ಅದೂ ಒಂದು ತಂತ್ರವಲ್ಲವೇ ?

ಸಂಸ್ಕೃತದ ಒಲವು

ಅವನೀಂದ್ರನಿಗೆ ಇಂಗ್ಲಿಷ ವಿದ್ಯಾಭ್ಯಾಸ ಅಷ್ಟಾಗಿ ಹಿಡಿಸಲಿಲ್ಲವೆಂದು ಆಗಲೆ ಹೇಳಿದೆ. ಸಂಸ್ಕೃತ ಸಾಹಿತ್ಯದಲ್ಲಿ ಅವನ ಒಲವು. ೧೮೮೧ರಲ್ಲಿ ಅವನು ಸಂಸ್ಕೃತ ಕಾಲೇಜಿಗೆ ಸೇರಿದ. ಆಗ ಅವನಿಗೆ ಹತ್ತು ವರ್ಷ. ಅಲ್ಲಿ ಒಂಬತ್ತು ವರ್ಷಗಳ ಕಾಲ ಸಂಸ್ಕೃತ ಸಾಹಿತ್ಯವನ್ನು ಅಭ್ಯಾಸ ಮಾಡಿದ. ಸಂಸ್ಕೃತ ಕಾವ್ಯಗಳಲ್ಲಿ ಬರುವ ಸುಂದರವಾದ ಅಲಂಕಾರಿಕ ವರ್ಣನೆ. ಕಾಳಿದಾಸನ ಮಹಾಕಾವ್ಯ ಗಳಾದ ಕುಮಾರ ಸಂಭವ, ಮೇಘ ಸಂದೇಶಗಳಲ್ಲ್ನಿ ಪ್ರಕೃತಿ ವರ್ಣನೆ, ವಾಲ್ಮೀಕಿ ರಾಮಾಯಣದಲ್ಲಿ ಬರುವ ಮಾನವೀಯ ಸ್ವಭಾವಗಳ ವರ್ಣನೆಗಳು, ತಾಯಿ ಹೇಳುತ್ತಿದ್ದ ಕೃಷ್ಣನ ಬಾಲಲೀಲೆಯ ಕಥೆಗಳು, ಇವೆಲ್ಲ ತಾರುಣ್ಯದ ಹೊಸ್ತಿಲಿನಲ್ಲಿ ಕಾಲಿಡುತ್ತಿದ್ದ ಅವನೀಂದ್ರರಲ್ಲಿ ಹುದುಗಿದ್ದ ಕಲ್ಪನಾಶಕ್ತಿಗೆ, ಚಿತ್ರಕ ಶಕ್ತಿಗೆ ಮೆರಗು ನೀಡಿದವು.

ಪ್ರಾರಂಭದ ಗುರುಗಳು

ಕಲ್ಕತ್ತೆಯಲ್ಲಿ ಗಿಲ್ ಹಾರ್ಡಿ ಎಂಬ ಇಟಾಲಿಯನ್ ಚಿತ್ರ ಕಲಾವಿದನಿದ್ದ. ಆತ ಕಲ್ಕತ್ತ ಕಲಾ ಶಾಲೆಯ ಅಧ್ಯಾಪಕ. ಅವನೀಂದ್ರ ಆತನ ಗೆಳೆತನ ಸಂಪಾದಿಸಿದ. ಗೆಳೆತನ ಬಲಿತು ಗುರುತನವಾಯ್ತು. ಬಣ್ಣ ಕುಂಚಗಳ ಮೇಲೆ ಹಿಡಿತ ಸಾಧಿಸಿದ್ದ ಅವನೀಂದ್ರ ಹಾರ್ಡಿಯ ಅಂತಃಕರಣ ಗೆದ್ದುಕೊಂಡು ಆತನಿಂದ ವರ್ಣವಿನ್ಯಾಸಗಳ ತಂತ್ರ ಕಲಿತ. ಅವನೀಂದ್ರರ ಪ್ರತಿಭೆ, ಚುರುಕುತನ ಕಂಡು ಹಾರ್ಡಿಗೂ ಅಭಿಮಾನವೆನ್ನಿಸಿತು.

ಅವನಿಂದ್ರ ರಚಿಸಿದ ಚಿತ್ರಗಳನ್ನು ನೋಡಿ ಮೆಚ್ಚಿ ಬೇರೆಯವರಿಗೆ ತೋರಿಸಿ ಹಾಗಿರಬೇಕಿತ್ತು, ಹೀಗಿರಬೇಕಿತ್ತು ಎಂಬ ಸಲಹೆ ನೀಡುವುದರಲ್ಲಿ ರವೀಂದ್ರರ ಪಾಲು ಹಿರಿದು. ಸಂಬಂಧದಲ್ಲಿ ಚಿಕ್ಕಪ್ಪನಾದರೂ ಸಲಿಗೆಯಲ್ಲಿ ಗೆಳೆಯನಂತೆಯೇ ಇದ್ದ ರವೀಂದ್ರರು ತಮ್ಮ ಕವಿತಾ ಸಂಕಲನಗಳಿಗೆ ಅವನೀಂದ್ರರಿಂದಲೇ ಚಿತ್ರ ಬರೆಸುತ್ತಿದ್ದರು.

ಚಿತ್ರಕಲೆಯ ಹಾಗೆ ಅವನೀಂದ್ರರಿಗೆ ಅಭಿನಯವೂ ಇಷ್ಟ . ರವೀಂದ್ರರು ನಾಟಕ ಬರೆದು ಅವರೇ ಪಾತ್ರ ವಹಿಸುತ್ತಿದ್ದರು. ಜೊತೆಗೆ ಅವನೀಂದ್ರರೂ ಇರಬೇಕು. ರವೀಂದ್ರರದು ಧೀರಗಂಭೀರ ಪಾತ್ರವಾದರೆ, ಅವನೀಂದ್ರರದು ಲಘುಹಾಸ್ಯದ ಪಾತ್ರಗಳು.

೧೮೮೧ರಿಂದ ೧೮೯೦ರವರೆಗಿನ ಒಂಬತ್ತು ವರ್ಷಗಳು ಅವನೀಂದ್ರರ ಜೀವನದಲ್ಲಿ ಕಲಿಕೆಯ ಕಾಲ.

ಅತ್ತ ಸಂಸ್ಕೃತ ಸಾಹಿತ್ಯ, ಇತ್ತ ಚಿತ್ರಕಲೆ. ಪಾಶ್ಚಾತ್ಯನಾದ ಗಿಲ್ ಹಾರ್ಡಿಯ ಜೊತೆಗಿದ್ದು ತರಬೇತಿ ಪಡೆದಿದ್ದರಿಂದ ಅವರ ಚಿತ್ರಗಳಲ್ಲಿ ಪಾಶ್ಚಾತ್ಯ ಮಾದರಿ ಕಾಣಬಹುದು. ಆದರೆ ಭಾರತೀಯ ದೇವತೆಗಳ ಸುಂದರ ಚಿತ್ರಗಳು ಶುದ್ಧ ಭಾರತೀಯ ಕಲ್ಪನೆಯಂತೆಯೇ ಮೂಡಿಬಂದವು. ಜಲವರ್ಣ, ತೈಲವರ್ಣಗಳ ವಿನ್ಯಾಸ, ಹೊಂದಾಣಿಕೆಗಳಲ್ಲಿ ವಿದೇಶೀಯರ ಅನುಭವ, ತಾಂತ್ರಿಕತೆಯನ್ನು ಅವರು ಬಳಸಿಕೊಂಡರು. ಹಳೆ ಬೇರಿನಲ್ಲಿ ಹೊಸ ಚಿಗುರು ಚಿಗುರಿಸಿದರು.

೧೮೮೯ರಲ್ಲಿ ಅವನೀಂದ್ರರ ವಿವಾಹವಾಯಿತು. ರಾಜಾಪ್ರಸನ್ನ ಕುಮಾರರ ಮಗಳು ಸುಹಾಸಿನೀ ದೇವಿ ವಧು.

ಪ್ರಭಾವಗಳು

ಆಗ ಕಲ್ಕತ್ತೆಯಲ್ಲಿ ಕಲಾ ಶಾಲೆಯೊಂದಿತ್ತು. ಅವನೀಂದ್ರರ ಚಿತ್ರ ರಚನಾಪ್ರವೃತ್ತಿ ಕಲೆಯನ್ನು ಬೆಳೆಸಿಕೊಂಡು ತಮ್ಮ ಕಲಾ ಪ್ರತಿಭೆಯನ್ನು ಹೆಚ್ಚು ಶ್ರೀಮಂತಗೊಳಿಸಿಕೊಳ್ಳುವ ಹಂಬಲ ಆ ಕಡೆಗೆ ಸೆಳೆಯಿತು. ಕಲಾ ಶಾಲೆಯ ಉಪಪ್ರಧಾನಾಚಾರ್ಯ ರಾದ ಹಾರ್ಡಿಯವರ ಗುರುತ್ವವನ್ನು ಮೊದಲೇ ಒಪ್ಪಿಕೊಂಡಿದ್ದ ಅವನೀಂದ್ರರು ಅಲ್ಲಿದ್ದ ಇನ್ನೊಬ್ಬ ಅಧ್ಯಾಪಕ ಸಿ.ಎಲ್. ಪಾಮರ್‌ರವರನ್ನು ತಮ್ಮ ಮಾರ್ಗದರ್ಶಕರಾಗಿ ಆರಿಸಿಕೊಂಡರು.

ಅವನೀಂದ್ರರ ಕಲೆಯ ಮೇಲೆ ಪ್ರಭಾವ ಬೀರಿದ ಇನ್ನೊಂದು ದೇಶ ಜಪಾನ್. ಆಗ ಜಪಾನ್ ವಿಶ್ವದಲ್ಲಿಯೇ ಅತ್ಯಂತ ಪ್ರಭಾವಶಾಲಿ ದೇಶ. ಒಕಾಕುರಕುಕುಜೋ ಎಂಬ ಜಪಾನೀ ಕಲಾವಿದ ೧೯೦೨ರಲ್ಲಿ ಭಾರತಕ್ಕೆ ಭೇಟಿ ನೀಡಿದ. ಕಲ್ಕತ್ತೆಗೆ ಬಂದ ಆತ ಕೆಲವು ದಿನ ಅವನೀಂದ್ರರ ಅತಿಥಿಯಾಗಿದ್ದ.

ಅವನೀಂದ್ರರ ಕಲಾಪ್ರತಿಭೆ, ಅವರು ಬಳಸಿದ ಮಾರ್ಗ ವಿನ್ಯಾಸಗಳಿಂದ ಪ್ರಭಾವಿತನಾದ ಕುಕುಜೋ ಅವರ ಕಲೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ.

ತನ್ನೂರಿಗೆ ಹಿಂತಿರುಗಿದ ನಂತರ ಅಲ್ಲಿನ ಇಬ್ಬರು ಉತ್ತಮ ಚಿತ್ರ ಕಲಾವಿದರುಗಳಾದ ಟೈಕಾನ್ ಮತ್ತು ಹಿಷಿಡಾ ಎಂಬುವವರನ್ನು ಕಲ್ಕತ್ತೆಗೆ ಕಳುಹಿಸಿಕೊಟ್ಟ. ಅವರು ಅವನೀಂದ್ರರ ಜೊತೆಗೂಡಿ ಚಿತ್ರ ರಚನೆಯ ಕ್ಷೇತ್ರದಲ್ಲಿ ಹೊಸತನ ರೂಪಿಸಿಕೊಂಡರು. ವಿಚಾರ ವಿನಿಮಯ ಮಾಡಿಕೊಂಡರು. ಹಾಗೆಯೇ ಅವನೀಂದ್ರರೂ ಅವರಿಂದ ಸಾಕಷ್ಟು ಪ್ರಭಾವಿತರಾದರು.

ಎಲ್ಲ ತರದ ಗೊಬ್ಬರಗಳನ್ನು ಅರಗಿಸಿಕೊಂಡರೂ ಮಾವು ತನ್ನ ಮೂಲ ರುಚಿ ಬಿಡುವುದಿಲ್ಲ. ಹಸುರು ಹುಲ್ಲೇ ತಿನ್ನಲಿ, ಒಣ ಹುಲ್ಲೇ ತಿನ್ನಲಿ, ಬೂಸಾತಿನ್ನಲಿ ಹಸುವಿನ ಹಾಲಿನ ಬಣ್ಣ ಬದಲಾಯಿಸುವುದಿಲ್ಲ.

ಹೀಗೆ ಇಟಲಿಯವರಿಂದ ಕಲಿತರೇನು, ಇಂಗ್ಲೆಂಡಿ ನವರಿಂದ ಅರಿತರೇನು, ಜಪಾನೀಯರ ಪ್ರಭಾವ ವಾದರೇನು, ಅವನೀಂದ್ರರ ಕಲೆ ತನ್ನದೇ ಆದ ವಿಶಿಷ್ಟ ಭಾರತೀಯ ಶೈಲಿಯಲ್ಲಿ ಬೆಳೆಯಿತು. ಆಳುವ ಆಂಗ್ಲರೂ ಈತನನ್ನು ಕುತೂಹಲದಿಂದ ಗಮನಿಸಿದರು.

ಶ್ರೀಕೃಷ್ಣನ ಲೀಲೆಗಳ ಪ್ರಭಾವ ಬಂಗಾಳದಲ್ಲಿ ದಟ್ಟವಾಗಿ ಹರಡಿತ್ತು. ಜನಜೀವನದಲ್ಲಿ ಕೃಷ್ಣ ಭಕ್ತಿರಸದ ಹೊನಲನ್ನು ಹರಿಸಿದ ಚೈತನ್ಯ ಪ್ರಭುವಿನ ಭಕ್ತಿ ಗೀತೆಗಳು ಬಂಗಾಳದಲ್ಲಿ ಜನಜನಿತ. ಮನುಷ್ಯ ಮಾನಸಿಕ ನೋವಿಗೆ ಒಳಗಾದಾಗ, ಕಷ್ಟ ದುಃಖದಲ್ಲಿ ಸಿಲುಕಿದಾಗ ಭಕ್ತಿಯಿಂದ ಮೊರೆಹೋಗುವುದು ಸಹಜ.

ಶ್ರೀಕೃಷ್ಣನ ಲೀಲೆಗಳು ಕಥೆಗಳು ಅವನೀಂದ್ರರನ್ನು ಆಕರ್ಷಿಸಿದವು. “ಶ್ರೀಕೃಷ್ಣಲೀಲಾ” ಅವನೀಂದ್ರರ ಮೊಟ್ಟ ಮೊದಲ ಸಂಪೂರ್ಣ ಕೃತಿ. ೧೮೯೫ರಲ್ಲಿ ರಚಿಸಿದ ಈ ಕೃತಿ ಅವನೀಂದ್ರರನ್ನು ಕಲಾಜಗತ್ತಿಗೆ ಪರಿಚಯ ಮಾಡಿಕೊಟ್ಟಿತು.

ಪ್ರಸಿದ್ಧ ವಿದೇಶಿ ಮತ್ತು ಸ್ವದೇಶೀ ಚಿತ್ರ ಕಲಾವಿದರು ಅವನೀಂದ್ರರ ಚಿತ್ರವನ್ನು ನೋಡಿ ಮೆಚ್ಚಿದರು. ಅವರಲ್ಲಿ ಅಡಗಿರುವ ಅಸಾಧಾರಣ ಸಾಮರ್ಥ್ಯವನ್ನು ಗುರುತಿಸಿದರು.

ಇದೇ ರೀತಿ ೧೮೯೬ರಲ್ಲಿ ರಚಿಸಿದ “ಶಕುಂತಲಾ” ಚಿತ್ರವೂ ಅವನೀಂದ್ರರ ಖ್ಯಾತಿಯ ಕಿರೀಟಕ್ಕೆ ಗರಿ ಸೇರಿಸಿತು. ಕಾಳಿದಾಸನ ಶಕುಂತಲೆ ಅವನೀಂದ್ರರ ಕುಂಚದಿಂದ ಪ್ರತ್ಯಕ್ಷಳಾದಳು.

ಅವನೀಂದ್ರನಾಥರು, ನಂದಲಾಲ್ ಬಸು ಮತ್ತು ವೆಂಕಟಪ್ಪ ಅವರೊಡನೆ

ಅಧ್ಯಾಪಕ

ಕಲ್ಕತ್ತೆಯ ಕಲಾಶಾಲೆಯ ಪ್ರಾಚಾರ‍್ಯ ಇ.ಟಿ. ಹ್ಯಾವೆಲ್‌ರವರೂ ಅವನೀಂದ್ರರ ಚಿತ್ರಗಳನ್ನು ನೋಡಿ ಮೆಚ್ಚಿದವರಲ್ಲಿ ಒಬ್ಬರು. ಈ ಭಾರತೀಯ ತರುಣ ಚಿತ್ರ ಕಲಾವಿದನಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿದ ಅವರು ಅವನೀಂದ್ರರಿಗೆ ೧೮೯೮ರಲ್ಲಿ ತಮ್ಮ ಕಲಾಶಾಲೆಯ ಉಪಪ್ರಾಚಾರ‍್ಯನ ಹುದ್ದೆ ನೀಡಿ ಗೌರವಿಸಿದರು. ಅಲ್ಲಿಯತನಕ ಯಾವ ಭಾರತೀಯನಿಗೂ ಆ ಹುದ್ದೆ ಸಿಕ್ಕಿರಲಿಲ್ಲ. ಕಲಾ ಶಾಲೆಯ ಹುದ್ದೆಗಳೆಲ್ಲ ಕೇವಲ ಪಾಶ್ಚಾತ್ಯರಿಗೆ ಮೀಸಲು. ತಮ್ಮ ಪ್ರತಿಭೆಯ ಬಲದಿಂದ ಅವನೀಂದ್ರರು ಕಲಾ ಶಾಲೆಯ ಉಪಪ್ರಾಚಾರ‍್ಯರಾಗುವ ಗೌರವ ಪಡೆದರು.

ಪ್ರಾಚಾರ‍್ಯ ಹ್ಯಾವೆಲ್‌ರವರ ಮಾರ್ಗದರ್ಶನದಲ್ಲಿ ಅವನೀಂದ್ರರು ಮೊಗಲ್ ಮತ್ತು ರಜಪೂತ ಶೈಲಿಯ ಕಲೆಯ ಅಭ್ಯಾಸ ಮಾಡತೊಡಗಿದರು. ಹ್ಯಾವೆಲ್ ಆಂಗ್ಲರಾದರೂ ಅವರಿಗೆ ಭಾರತೀಯ ಕಲೆ, ಸಂಸ್ಕೃತಿಗಳ ಬಗ್ಗೆ ಆಸಕ್ತಿ ಇತ್ತು, ಗೌರವವಿತ್ತು. ೧೯೦೫ರಲ್ಲಿ ಹ್ಯಾವೆಲರು ನಿವೃತ್ತರಾದ ನಂತರ ಅವನೀಂದ್ರರು ಕಲಾ ಶಾಲೆಯ ಪ್ರಾಚಾರ‍್ಯರಾದರು.

ತಮ್ಮ ವಿದ್ಯಾರ್ಥಿಗಳನ್ನು ಎದುರಿಗೆ ಕೂಡಿಸಿಕೊಂಡು ಭಾರತೀಯ ಪುರಾಣಗಳ, ರಾಮಾಯಣ, ಮಹಾಭಾರತಗಳ ಕಥೆಗಳನ್ನು ಸ್ವಾರಸ್ಯವಾಗಿ ಹೇಳುವುದರಲ್ಲಿ ಅವನೀಂದ್ರರು ನಿಪುಣರು.

ಅವರು ಕಥೆ ಹೇಳುತ್ತಿದ್ದರೆ ಚಿತ್ರ ಬಿಡಿಸಿದಂತೆ ಇರುತ್ತಿತ್ತೆಂದು ಅವರ ಶಿಷ್ಯರೊಬ್ಬರು ನೆನೆದುಕೊಳ್ಳುತ್ತಾರೆ.

ಕಲ್ಕತ್ತೆಯ ಕಲಾಶಾಲೆಯ ಉಪ ಪ್ರಾಚಾರ‍್ಯ ಹುದ್ದೆಯ ಅನುಭವ ಅವನೀಂದ್ರರ ಕಲಾರಚನೆಗೆ ಹೊಸ ತಿರುವು ನೀಡಿತು.

“ಋತು ಸಂಹಾರ” ಚಿತ್ರಮಾಲಿಕೆಗಳಲ್ಲಿ “ಬುದ್ಧ ಸುಜಾತ” ಹಾಗೂ “ವಜ್ರಮಕುಟ” ಮುಂತಾದ ಕೃತಿಗಳಲ್ಲಿ ಬದಲಾವಣೆ ಕಾಣಿಸಿತು.

ಹೊಸ ಸಂಸ್ಥೆ

೧೯೦೭ರಲ್ಲಿ ಭಾರತ ಹಾಗೂ ಬ್ರಿಟನ್ನಿನ ಕೆಲವು ಉತ್ಸಾಹೀ ಕಲಾವಿದರು ಸೇರಿ “ಇಂಡಿಯನ್ ಸೊಸೈಟಿ ಫಾರ್ ಓರಿಯಂಟಲ್ ಆರ್ಟ್ಸ್” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇದರಲ್ಲಿ ಅವನೀಂದ್ರರದೇ ಪ್ರಧಾನ ಪಾತ್ರ. ಅಲ್ಲಿ ಭಾರತೀಯ ಸಾಂಪ್ರದಾಯಿಕ ರೀತಿಯ ಕಲಾ ಬೋಧನೆ ಪ್ರಾರಂಭಿಸಿದರು. ಈ ಸಂಸ್ಥೆ ಹೊಸ ರೀತಿಯ ಚಿತ್ರಕಲಾ ಪ್ರದರ್ಶನಕ್ಕೆ ಒಂದು ವೇದಿಕೆ ಯಾಯ್ತು. ಈ ಸಂಸ್ಥೆ ಹಲವು ಚಿತ್ರ ಪ್ರದರ್ಶನಗಳನ್ನು ಏರ್ಪಡಿಸಿತು.

ಪೌರಾಣಿಕ ದೇವತೆಗಳು ಅವನೀಂದ್ರರ ಕಲ್ಪನೆಯ ಕುಂಚದಿಂದ ಬಣ್ಣಗಳ ಮೂಲಕ ಮೈದಾಳಿದರು. ಪಾಶ್ಚಾತ್ಯ ಹಾಗೂ ಇತರ ದೇಶೀಯ ಶೈಲಿಗಳ ಪ್ರಭಾವ ಅವನೀಂದ್ರರ ಮೇಲೆ ಇದ್ದರೂ ಅವರು ನಿರೂಪಿಸುತ್ತಿದ್ದ ಚಿತ್ರಗಳು ಸ್ವಚ್ಛ ಭಾರತೀಯ ಶೈಲಿ ಮತ್ತು ಬಣ್ಣದವು ಗಳಾಗಿದ್ದವು.

ಇತ್ತ ರವೀಂದ್ರು ೧೯೦೨ರಲ್ಲೇ ಸ್ಥಾಪಿಸಿದ ಶಾಂತಿನಿಕೇತನ ಚಿಗುರೊಡೆದು, ಮೊಳಕೆ ಮೂಡಿ, ಗಿಡವಾಗಿ ಬೆಳೆಯತೊಡಗಿತ್ತು. ಭಾರತೀಯ ಗುರುಕುಲ ಪದ್ಧತಿಯ ಶಿಕ್ಷಣದಲ್ಲಿ ರವೀಂದ್ರನಾಥ ಠಾಕೂರರಂತೆ ಅವನೀಂದ್ರನಾಥ ಠಾಕೂರರಿಗೂ ಬಹಳ ವಿಶ್ವಾಸ.

ರವೀಂದ್ರರ ಸಲಹೆ, ಮಾರ್ಗದರ್ಶನ, ಸಹಕಾರಗಳು ಅವನೀಂದ್ರರಿಗೆ ಸದಾ ದೊರಕುತ್ತಿದ್ದವು. ವಿದೇಶ ಪ್ರಯಾಣ ಮಾಡಿ ಅಪಾರ ಅನುಭವ ಸಂಪಾದನೆ ಮಾಡಿದ್ದ ರವೀಂದ್ರನಾಥ ಠಾಕೂರರು ಅವನೀಂದ್ರರಿಗೆ ಆಗಾಗ್ಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುತ್ತಿದ್ದರು.

೧೯೧೨ರಲ್ಲಿ ರವೀಂದ್ರನಾಥ ಠಾಕೂರರಿಗೆ ಅವರ ಕೃತಿ ‘ಗೀತಾಂಜಲಿ’ಗೆ ನೊಬೆಲ್ ಪಾರಿತೋಷಕ ದೊರೆಯಿತು. ಈ ಪಾರಿತೋಷಕ ಪಡೆದ ಪ್ರಪ್ರಥಮ ಭಾರತೀಯರು. ಅದೇ ವರ್ಷ ಠಾಕೂರ್ ಮನೆತನದ ಸಭೆಯಲ್ಲಿ “ವಿಚಿತ್ರ ಸಭಾ” ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಲಾಯಿತು. ಒಂದೇ ಮನೆತನದ ಕೆಲವು ಜನ ಕಲಾವಿದರು ಹಾಗೂ ಅವರ ಗೆಳೆಯರು ಇದರ ಸದಸ್ಯರು.

ರಾಷ್ಟ್ರಪ್ರೇಮ, ರಾಷ್ಟ್ರಾಭಿಮಾನ, ರಾಷ್ಟ್ರ ಪ್ರಜ್ಞೆಗಳನ್ನು ಬೆಳೆಸಿ, ಬೆಳಗಿಸುವ ಸಲುವಾಗಿ ಕಲಾ ಸಂಗ್ರಹಾಲಯವೊಂದನ್ನು ಈ ಸಂಸ್ಥೆಯ ಮೂಲಕ ಸ್ಥಾಪಿಸಲಾಯಿತು.

ಇಲ್ಲಿ ನಿರ್ಮಾಣ ಹಾಗೂ ಸಂಗ್ರಹ ಕಾರ್ಯಗಳು ನಡೆದವು. ಕ್ರಮೇಣ ಈ ಸಂಸ್ಥೆ ಬೆಳದು ರಾಷ್ಟ್ರೀಯ ಕಲಾ ಸಂಗ್ರಹಾಲಯವಾಗಿ ಪರಿಣಮಿಸಿತು. ಮುಂದೆ ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿಮರ್ಶಕ ಮತ್ತು ಲೇಖಕ ಆನಂದ ಕೆ. ಕುಮಾರಸ್ವಾಮಿಯವರಿಗೆ “ಭಾರತೀಯ ಚಿತ್ರಕಲೆ” ಕುರಿತು ಬರೆದ ಪ್ರಬುದ್ಧ ಗ್ರಂಥಕ್ಕೆ ಸಾಮಗ್ರಿ ಈ ಸಂಗ್ರಹಾಲಯದಲ್ಲಿ ದೊರಕಿತು.

ಪ್ರಾಚೀನ ಚಿತ್ರಗಳ ಶಿಲ್ಪಗಳ ಪ್ರತಿಕೃತಿಗಳು, ಅನುಕೃತಿಗಳು, ಹಾಗೂ ಇತರ ಐತಿಹಾಸಿಕ ಸಂಗತಿಗಳ ಚಿತ್ರಗಳು ಅವನೀಂದ್ರರ ಸಂಗ್ರಹದಲ್ಲಿ ಸೇರಿದವು.

ಅವನೀಂದ್ರ ಹಾಗೂ ಅವರ ಅನುಯಾಯಿ ಶಿಷ್ಯರು ಇತಿಹಾಸದ, ಪ್ರಕೃತಿಯ, ಪುರಾಣಗಳ ದೃಶ್ಯಗಳನ್ನೆಲ್ಲಾ ವರ್ಣಗಳಲ್ಲಿ ಸೆರೆ ಹಿಡಿದು ಶಿಲ್ಪದಲ್ಲಿ  ಕಡೆದರು. ೧೯೧೩ರಲ್ಲಿ ಅವನೀಂದ್ರರ, ಅವರ ಅನುಯಾಯಿ ಶಿಷ್ಯರ ಚಿತ್ರಕಲಾ ಪ್ರದರ್ಶನವೊಂದು ಲಂಡನ್ನಿನಲ್ಲಿ ನಡೆಯಿತು. ಸಹಸ್ರಾರು ವಿದೇಶೀಯರು, ವಿದೇಶೀ ಕಲಾವಿದರು ಈ ಭಾರತೀಯ ಕಲಾವಿದರ ವರ್ಣವಿನ್ಯಾಸ, ರೇಖಾ ವಿನ್ಯಾಸ ಹಾಗೂ ಕಲಾ ಫ್ರೌಢಿಮೆ ಕಂಡು ಬೆರಗಾಗಿ ಮನಸಾರೆ ಹೊಗಳಿದರು.

ಶಾಂತಿನಿಕೇತನಕ್ಕೆ

೧೯೧೯ರಲ್ಲಿ ರವೀಂದ್ರನಾಥ ಠಾಕೂರರು ಶಾಂತಿನಿಕೇತನದಲ್ಲಿ ಭಾರತೀಯ ಕಲಾ ಪೀಠ ಸ್ಥಾಪಿಸಿದಾಗ ಅವನೀಂದ್ರರು ಕಲ್ಕತ್ತೆಯ ಕಲಾಶಾಲೆಯ ಪ್ರಾಚಾರ‍್ಯ ಪದವಿಗೆ ರಾಜಿನಾಮೆ ನೀಡಿ ಶಾಂತಿನಿಕೇತನದ ಕಲಾಪೀಠದ ಮುಖ್ಯಸ್ತನ ಹುದ್ದೆ ವಹಿಸಿಕೊಂಡರು. ಶಾಂತಿನಿಕೇತನ ಅವರಿಗೆ ನೆಮ್ಮದಿ ನೀಡಿತು. ಅಲ್ಲಿ ಸಜ್ಜುಗೊಳಿಸಿದ ವಸ್ತು ಸಂಗ್ರಹಾಲಯ, ಕಲಾಗ್ರಂಥ ಭಂಡಾರಗಳಿಗೆ ಅವನೀಂದ್ರರ ಶಿಷ್ಯ ನಂದಲಾಲ ಬಸುರವರನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಯಿತು.

೧೯೧೯ರಲ್ಲಿಯೇ ಅವನೀಂದ್ರರ ಹಾಗೂ ಅವರ ಶಿಷ್ಯರ ಮತ್ತು ಆಪ್ತ ಕಲಾವಿದರ ಚಿತ್ರಕಲಾ ಪ್ರದರ್ಶನವೊಂದು ಟೋಕಿಯೋದಲ್ಲಿ ನಡೆಯಿತು. ಆ ಪ್ರದರ್ಶನದಿಂದ ಅವನೀಂದ್ರರ ಖ್ಯಾತಿ ದೇಶ ವಿದೇಶಗಳಲ್ಲಿ ಇನ್ನಷ್ಟು ಹರಡಿತು.

೧೯೨೦ರ ದಶಕದಲ್ಲಿ ಅವನೀಂದ್ರರ ಚಿತ್ರಕಲೆಯ ಶೈಲಿ ಹಾಗೂ ತಂತ್ರ ಒಂದು ಕ್ರಾಂತಿಯನ್ನೇ ಮಾಡಿತು.

ಚಿತ್ರಕಲೆಯಲ್ಲಿ ಸಿದ್ಧಿಯ ಹಂತ ತಲಪುವ ವೇಳೆಗೆ ಅವನೀಂದ್ರರು “ವಿಶ್ವ ಭಾರತಿ”ಯ ಕುಲಪತಿಗಳಾಗಿದ್ದರು.

ಕಡೆಯ ದಿನಗಳು

೧೯೪೦ರಲ್ಲಿ ಅಲ್ಲಿಂದ ನಿವೃತ್ತಿ ಹೊಂದಿದ ನಂತರ ಅವರ ಚಟುವಟಿಕೆ ಆಟಿಕೆಗಳನ್ನು ತಯಾರಿಸುವ ಕಡೆ ಹರಿಯಿತು.

ಮಕ್ಕಳಿಗಾಗಿ ಹೊಸತರದ ಆಕರ್ಷಣೀಯ ಚಿಕ್ಕ ಚಿಕ್ಕ ಆಟಿಕೆಗಳನ್ನು ನಿರ್ಮಿಸುವುದು, ಚಿತ್ರ ವಿಚಿತ್ರ ಆಕೃತಿಗಳ ಮರದ ಕೊಂಬೆಗಳನ್ನು ಸಂಗ್ರಹಿಸುವುದು, ನಾನಾತರಹೆಯ ಶಂಖ, ಕಪ್ಪೆಚಿಪ್ಪುಗಳನ್ನು ಕಲೆ ಹಾಕುವುದು ಅವರ ಪ್ರವೃತ್ತಿಯಾಗಿ ಬೆಳೆಯಿತು.

ಪ್ರಕೃತಿಯ ಜಡವಸ್ತುಗಳಿಗೆ ಕಲಾತ್ಮಕ ರೂಪ, ವರ್ಣ, ವಿನ್ಯಾಸ ನೀಡಿ ಅವುಗಳಲ್ಲಿ ಪ್ರಕೃತಿಯ ಜೀವಂತ ಪ್ರತಿಬಿಂಬಗಳನ್ನು ಗುರುತಿಸುವ ಕಲೆಗೆ ಅವನೀಂದ್ರರು ಜನಕ ಶಕ್ತಿಯಾದರು. ಹಾಗೇ ಅವರೇ ತಯಾರಿಸಿದ ಆಟಿಕೆಗಳು ಬಾಲಜಗತ್ತಿಗೆ ಅವರು ನೀಡಿದ ವಿಶಿಷ್ಟ ಕೊಡಿಗೆಗಳು.

೧೯೪೧ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯ ಅವನೀಂದ್ರನಾಥ ಠಾಕೂರರವರಿಗೆ “ಡಾಕ್ಟರ್ ಆಫ್ ಲೆಟರ‍್ಸ್” (ಡಿ. ಲಿಟ್) ಎಂಬ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿತು.

ಅವನೀಂದ್ರನಾಥ ಠಾಕೂರರು ತಮ್ಮ ಜೀವನದ ಕೊನೆಯ ದಿನಗಳನ್ನು ಕಲ್ಕತ್ತೆಯ ಬಳಿಯ ಬ್ಯಾರಕ್ ಪುರದ ತಮ್ಮ ಮನೆಯಲ್ಲಿ ಕಳೆದರು. ಅಲ್ಲಿದ್ದಾಗಿನ ಅವರ ಜೀವನ ಋಷಿಜೀವನ ಸದೃಶವಾದುದು. ಕಡೆಯ ವರ್ಷಗಳಲ್ಲಿ ಅವರಿಗೆ ತುಂಬ ಅನಾರೋಗ್ಯ. ಆದರೆ ಕಡೆಯವರೆಗೆ ಅವರು ಬೇಸರಪಟ್ಟು ಕೊಳ್ಳಲಿಲ್ಲ, ಗೊಣಗಾಡಲಿಲ್ಲ.

ಅವರು ತಮ್ಮ ಜೀವನದ ಅಂತಿಮ ದಿನಗಳಲ್ಲಿ ರಚಿಸಿದ ಚಿತ್ರ “ಸ್ಮಶಾನಯಾತ್ರೆ”.

ಎಪ್ಪತ್ತೆಂಟು ವರ್ಷಗಳ ಸಾರ್ಥಕವಾದ ದೀರ್ಘ ಜೀವನ ನಡೆಸಿದ ಅವನೀಂದ್ರನಾಥ ಠಾಕೂರರು ೧೯೫೧ರಲ್ಲಿ ಸ್ವರ್ಗಸ್ಥರಾದರು.

ವ್ಯಕ್ತಿತ್ವ

ಅನೀಂದ್ರನಾಥರು ಎತ್ತರದ ವ್ಯಕ್ತಿ. ನೋಡುತ್ತಲೇ ಗೌರವ ಮೂಡುವಂತಹ ವ್ಯಕ್ತಿತ್ವ ಅವರದು. ತಾಳ್ಮೆಯ ಸ್ವಭಾವ. ಅವರಿಗೆ ಕೋಪ ಬರುತ್ತಿದ್ದುದೇ ಕಡಮೆ. ಯಾವಾಗಲೂ ಚಿಂತನಶೀಲರು.

ತಮ್ಮ ಮನೆಯ ವಿಶಾಲವಾದ ಹಜಾರದಲ್ಲಿ ಹಿಂದೆ ಕೈ ಕಟ್ಟಿಕೊಂಡು ತುಸು ಮುಂದೆ ಬಾಗಿ, ಹಿಂದೆಮುಂದೆ ಓಡಾಡುತ್ತಾ ಚಿಂತನೆ ಮಾಡುತ್ತಲಿದ್ದರು ಅವನೀಂದ್ರರು. ಕೋನಾರ್ಕದ ದೇವಾಲಯ, ಎಲ್ಲೋರ-ಅಜಂತಾದ ಗುಹಾಂತರ್ಗತ ದೇವಾಲಯಗಳ, ಅಸ್ಸಾಂ ಮತ್ತು ಬಿಹಾರದ ಕೆಲವು ಪ್ರದೇಶಗಳಲ್ಲಿ ಸಂಚರಿಸಿದ್ದರು. ಕೆಲವು ಕಾಲ ಡಾರ್ಜಲಿಂಗಿಗೂ ಭೇಟಿ ನೀಡಿದ್ದರು. ಮಿಕ್ಕೆಲ್ಲಾ ಕಾಲ ತಮ್ಮ ಕಲಾಲೋಕದಲ್ಲಿ ತಪೋನಿರತರಾಗಿದ್ದರು.

ಚಿತ್ರಗಾರರಾಗಿ

ಅವನೀಂದ್ರರ ಚಿತ್ರಕಲೆ ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಭಾರತೀಯ ಕಲಾಪ್ರಪಂಚದಲ್ಲಿ ಒಂದು ಬಗೆಯ ಕ್ರಾಂತಿಯನ್ನು ಉಂಟುಮಾಡಿತು. ಅಂದಿನ ಮಂಕುಕವಿದ ವಾತಾವರಣದಲ್ಲಿ ಎಲ್ಲ ರೀತಿಯಲ್ಲಿಯೂ ಭಾರತೀಯರು ಪಾಶ್ಚಾತ್ಯರನ್ನೇ ಅನುಕರಿಸುತ್ತಿದ್ದರು. ಅವನೀಂದ್ರರ ಚಿತ್ರಕಲೆಯೊಂದೇ ಭಾರತೀಯತೆಯನ್ನು ಎತ್ತಿ ಸಾರಿತು.

ಅವನೀಂದ್ರರು ಸೂಕ್ಷ್ಮ ಹೃದಯದ ಕಲಾವಿದ. ಅವರ ಕಲಾ ಕೃತಿಗಳಲ್ಲಿ ಹಿಂದೂವಿನ ಮಾರ್ಮಿಕ ಪ್ರಜ್ಞಾ ಸಾಮರ್ಥ್ಯ ಹಾಗೂ ಸುಂದರ ಜಪಾನೀ ಕಲಾಶೈಲಿಯ ಸಂಗಮವಾಗಿದೆ. ಅವರು ಭಾರತೀಯ ಶೈಲಿಯಲ್ಲಿ ಆಧ್ಯಾತ್ಮಿಕತೆಯನ್ನೂ, ಜಪಾನೀ ಶೈಲಿಯಲ್ಲಿ ಸೌಂದರ್ಯವನ್ನೂ ಒತ್ತಟ್ಟಾಗಿ ಸಮನ್ವಯಗೊಳಿಸಿ ಹೊಸ ಶೈಲಿಯಲ್ಲಿ ತನ್ನತನವನ್ನು ಸಾರಿದರು. ಅವರ ಚಿತ್ರಗಳು ಆಕಾರದಲ್ಲಿ ಚಿಕ್ಕವು. ಅವುಗಳಲ್ಲಿ ಎದ್ದು ಕಾಣುವುದು ವ್ಯಕ್ತಿಗಳ ಚೈತನ್ಯ. ಲವಲವಿಕೆಯ, ಶಕ್ತಿವಂತರಾದ ಸ್ತ್ರೀಪುರುಷರನ್ನು ಅವರು ಚಿತ್ರಿಸಿದರು. ಕೃಷ್ಣ ಕಾಳಿಂಗನನ್ನು ಕೊಲ್ಲುವ ಚಿತ್ರದಲ್ಲಂತೂ ಕೃಷ್ಣನ ಮುಖಭಾವ, ಕೈಕಾಲುಗಳ ವಿನ್ಯಾಸ ಹೋರಾಟವನ್ನು ನಮ್ಮ ಕಣ್ಣಮುಂದೆ ನಿಲ್ಲಿಸುತ್ತವೆ.

ವಾತ್ಸಲ್ಯಮಯಿ ತಾಯಿ ಪಾರ್ವತಿಯು ಗಣೇಶನನ್ನು ತೊಡೆಯ ಮೇಲೆ ಕೂಡಿಸಿಕೊಂಡು ಆಡಿಸುತ್ತಿರುವ ಚಿತ್ರ, “ಗಣೇಶ ಜನನ”, “ವೃದ್ಧ ಚಕ್ರವರ್ತಿ”, “ಆಲಂಗೀರ್”ನ ಚಿತ್ರ, ಅಶೋಕನ ರಾಣಿ ನೆಟ್ಟ ನೋಟದಿಂದ ಬೋಧಿವೃಕ್ಷ ನೋಡುತ್ತಿರುವ ಚಿತ್ರ, ಕೃಷ್ಣಲೀಲೆಯ ಚಿತ್ರಗಳು, ಉಮರ ಖಯಾಮನ್ ರೂಬಾಯತ್ (ಗೇಯ ಗೀತೆಗಳು)ಗಳಿಗೆ ರಚಿಸಿದ ಚಿತ್ರಗಳು, ಜಹಾಂಗೀರ್, ಸಿಂದಬಾದ್ ನಾವಿಕ, ಅಲಿಬಾಬ ಮತ್ತು ನಲ್ವತ್ತು ಕಳ್ಳರು, ದೇಶ ಭ್ರಷ್ಠನಾದ ಯಕ್ಷ ಮುಂತಾದ ಚಿತ್ರಗಳು ಅವನೀಂದ್ರರ ಚಿತ್ರ ಕಲಾಕ್ಷೇತ್ರದ ವಿಸ್ತಾರ, ವೈವಿಧ್ಯ ಹಾಗೂ ವಿಶಿಷ್ಟತೆಗಳನ್ನು ಸಾರುವ ಕೆಲವು ಶಿಖರಗಳು.

ಚಿತ್ರಕಾರನಾಗಿ ಅವನೀಂದ್ರರು ಭಾರತೀಯ ಕಲಾವಿದರಲ್ಲಿ ಅಗ್ರಗಣ್ಯರು. ಮಾತ್ರವಲ್ಲ ಭಾರತೀಯ ಚಿತ್ರಕಲೆಗೆ ಅಂತರರಾಷ್ಟ್ರೀಯ ಖ್ಯಾತಿ ದೊರಕಿಸಿಕೊಟ್ಟವರು ಅವನೀಂದ್ರರೇ.

ಅವನೀಂದ್ರರ ಭಾರತೀಯ ಶೈಲಿಯ ಕಲೆಯ ಬಗ್ಗೆ ಜಗತ್‌ಪ್ರಸಿದ್ಧ ಚಿತ್ರ ಕಲಾವಿದ ಹ್ಯಾವೆಲ್, ಅಂತರರಾಷ್ಟ್ರೀಯ ಕಲಾತಜ್ಞ ಮತ್ತು ಕಲಾವಿಮರ್ಶಕ ಆನಂದ ಕೆ. ಕುಮಾರಸ್ವಾಮಿ, ಸ್ವಾಮಿ ವಿವೇಕಾನಂದರ ಶಿಷ್ಯೆ ಸೋದರಿ ನಿವೇದಿತಾ ಮುಂತಾದವರು ಮುಕ್ತ ಕಂಠದ ಶ್ಲಾಘನೆ ಮಾಡಿದ್ದಾರೆ.

ಅವನೀಂದ್ರರು ತಾವು ರಚಿಸಿದ ಕಲಾಕೃತಿಗಳನ್ನು ರಚಿಸಿ ಯಾರಾದರೂ ಕೇಳಿದರೆ ಹಾಗೆಯೇ ಕೊಟ್ಟು ಬಿಡುತ್ತಿದ್ದರು. ಯಾರಿಂದಲೂ ಹಣ ಪಡೆಯುತ್ತಿರಲಿಲ್ಲ. ಪ್ರತಿಫಲ ಬಯಸದ ಕರ್ಮಯೋಗಿ.

ಅವನೀಂದ್ರರು ರಚಿಸಿದ ಇನ್ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ‘ಕವಿಕಂಕಣ್’, ‘ಕೃಷ್ಣಮಂಗಳ’, ಕಾಳಿಂಗ ಮರ್ಧನ’ ಮುಂತಾದ ಚಿತ್ರಗಳು ಭಾರತೀಯ ಪರಂಪರೆಯನ್ನು ಸ್ಪಷ್ಟವಾಗಿ ರೂಪಿಸುವ ಕೃತಿಗಳು.

ಗುರುವಾಗಿ

ನಂದಲಾಲ ಬಸು, ಮುಕುಲ್‌ಡೇ, ಪ್ರಮೋದ ಕುಮಾರಚಟರ್ಜಿ, ಅಸಿತಕುಮಾರ ಹಲಧರ, ಕರ್ನಾಟಕದ ಖ್ಯಾತ ಕಲಾವಿದ ವೆಂಕಟಪ್ಪ ಮುಂತಾದವರು ಅವನೀಂದ್ರರ ಪ್ರತಿಭಾವಂತ ಶಿಷ್ಯರು. ಇವರಲ್ಲಿ ಯಾರೂ ಗುರುವಿನ ದಾರಿಯನ್ನೇ ಅನುಕರಣೆ ಮಾಡುತ್ತಾ ಚಿತ್ರ ರಚಿಸಲಿಲ್ಲ. ಎಲ್ಲರೂ ತಮ್ಮ ತಮ್ಮ ಸ್ವಂತ ಶೈಲಿ ರೂಪಿಸಿಕೊಂಡರು.

“ನಿಮ್ಮ ನಿಮ್ಮ ದಾರಿ ನೀವು ನೋಡಿಕೊಳ್ಳಿ. ಯಾರನ್ನೂ ಅನುಕರಣೆ ಮಾಡಬೇಡಿ” ಎಂದೇ ಅವನೀಂದ್ರರು ತಮ್ಮ ಶಿಷ್ಯರಿಗೆ ಹೇಳುತ್ತಿದ್ದರು.

“ನಿಮ್ಮ ಕಲೆಯ ಗುರಿಯನ್ನು ನೀವು ನಿರ್ಧರಿಸಿಕೊಳ್ಳಬೇಕು. ಪ್ರಕೃತಿಯ ವೈವಿಧ್ಯ, ಪ್ರಪಂಚದ ವೈಚಿತ್ರ್ಯಗಳನ್ನು ನೀವು ಕಂಡುಕೊಳ್ಳಿ. ಮನಸ್ಸಿನ ಸೌಂದರ್ಯದ ಜೊತೆಗೆ ಹಿರಿಯ ಕಲ್ಪನೆಗಳನ್ನೂ, ನೀವು ಚಿತ್ರಿಸಬೇಕಾದ ವಸ್ತುಗಳನ್ನೂ ರೂಪಿಸಿಕೊಳ್ಳಿ. ಮಹಾ ಕಾವ್ಯಗಳನ್ನು ಓದಿ. ಈ ನಮ್ಮ ಮಹಾನ್ ಸಂಸ್ಕೃತಿಯ ಘಟನೆಗಳನ್ನೂ, ಸನ್ನಿವೇಶಗಳನ್ನೂ ನೆನಪಿಗೆ ತಂದುಕೊಂಡು, ಅವುಗಳಿಂದ ಮನಸ್ಸು ತುಂಬಿಸಿಕೊಳ್ಳಿ, ಹೃದಯ ವೈಶಾಲ್ಯ ಬೆಳೆಸಿಕೊಳ್ಳಿ’ ಎಂದು ಅವನೀಂದ್ರರು ಶಿಷ್ಯರಿಗೆ ಹೇಳುತ್ತಿದ್ದರು. ಮಹಾಕಾವ್ಯಗಳ ಮತ್ತು ಪುರಾಣಗಳ ಕಥೆಗಳನ್ನು ತಾವೇ ತಮ್ಮ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು. ಅಲ್ಲದೆ ಕಾವ್ಯಗಳ ರಸಾನುಭವ ಮೂಡಿಸಲು ಒಬ್ಬ ಗಮಕಿಯನ್ನು ನೇಮಿಸಿ, ಅವರು ಕಾವ್ಯಗಳನ್ನು ಓದಿ ಹೇಳಲು ಏರ್ಪಾಡು ಮಾಡಿದರು. ಹಿಂದಿನ ಗುರು-ಶಿಷ್ಯ ಸಂಬಂಧವನ್ನು ಅವನೀಂದ್ರರು ಉಳಿಸಿಕೊಂಡು ಬಂದರು. ಶಿಷ್ಯರಿಗೆ ಅವರಲ್ಲಿ ಭಕ್ತಿ, ಗೌರವ. ಆದರೆ ಶಿಷ್ಯರು ಸ್ವತಃ ಯೋಚನೆ ಮಾಡದೆ ಇರುವುದು ತಪ್ಪಾಗುತ್ತದೆ ಎಂದು ಭಾವಿಸಿದ ಅವನೀಂದ್ರರು ಅವರು ಯೋಚಿಸಿ, ತಮ್ಮ ಶೈಲಿಯನ್ನು ರೂಪಿಸಿಕೊಳ್ಳಲು ಪ್ರೋತ್ಸಾಹ ಕೊಡುತ್ತಿದ್ದರು.

ಕುಂಚದಿಂದ ಲೇಖನಿಗೆ

ಅವನೀಂದ್ರರು ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಕಷ್ಟು ಕೆಲಸ ಮಾಡಿದ್ದಾರೆ. ಮಕ್ಕಳನ್ನು ಕಂಡರೆ ಅವರಿಗೆ ಬಹಳ ಅಕ್ಕರೆ. ಮಕ್ಕಳ ಜೊತೆ ಇದ್ದರೆ ಇತರ ಎಲ್ಲ ಕೆಲಸಗಳನ್ನೂ ಮರೆತುಬಿಡುತ್ತಿದ್ದರು. ಬಾಲ್ಯದಿಂದಲೂ ಕಥೆ ಹೇಳುವ ಕಲೆ ಕರೆಗತ ಮಾಡಿಕೊಂಡಿದ್ದ ಅವನೀಂದ್ರರು ಮಕ್ಕಳಿಗಾಗಿ ಅನೇಕ ಕಥೆಗಳನ್ನು ಬರೆದಿದ್ದಾರೆ. ಅವರ ಕಥೆಗಳು ಚಿತ್ರಾತ್ಮಕವಾಗಿರುತ್ತಿದ್ದವು.

ಅವರ ಕಥೆಗಳಲ್ಲಿ ಅವರಲ್ಲಿದ್ದ ರಾಷ್ಟ್ರಾಭಿಮಾನ ಎದ್ದು ಕಾಣಿಸುತ್ತಿತ್ತು.

ವಿನೋದಪ್ರಿಯರಾದರೂ ಅವನೀಂದ್ರರು ಗಂಭೀರ ವ್ಯಕ್ತಿ. ಅವರು ನಾಟಕಗಳಲ್ಲಿ ಹಾಸ್ಯಪಾತ್ರಗಳನ್ನೇ ವಹಿಸುತ್ತಿದ್ದರು.

ಚಿತ್ರಕಲೆಯನ್ನು ಕುರಿತು

ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಪಡೆದಿದ್ದ ಅವನೀಂದ್ರರು ಪ್ರಾಚೀನ ಸಂಸ್ಕೃತ ಗ್ರಂಥಗಳನ್ನು ಸಂಶೋಧಿಸಿ ಅವುಗಳಲ್ಲಿ ಅಡಗಿರುವ ಚಿತ್ರಕಲೆಗೆ ಸಂಬಂಧಪಟ್ಟ ಅಂಶಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ.

೧೯೧೪ರಲ್ಲಿ ಅವರು ರಚಿಸಿದ “ಷಡಂಗ” (ಚಿತ್ರಕಲೆಯ ಆರು ಅಂಗಗಳು), “ಭಾರತೀಯ ಚಿತ್ರಕಲೆಯ ಅಂಗರಚನೆಗೆ ಬೇಕಾದ ಕೆಲವು ಅಗತ್ಯಗಳು”, ಎಂಬ ಗ್ರಂಥಗಳು ಬಹಳ ಮುಖ್ಯವಾದವು.

೧೯೧೯ರಲ್ಲಿ “ಬಾಂಗ್ಲಾರ್ ಬ್ರತಾ” ಎಂಬ ಶೀರ್ಷಿಕೆಯ ಭಾರತೀಯ ಶಿಲ್ಪಕಲೆಯ ಪರಿಚಯ ಗ್ರಂಥ, “ಭಾರತೀಯ ಚಿತ್ರಕಲೆ” ಎಂಬ ಭಾರತೀಯ ಚಿತ್ರಕಲೆಯ ಪರಿಚಯ ಮೂಡಿಸುವ ಗ್ರಂಥಗಳನ್ನು ಬರೆದರು. ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಅವನೀಂದ್ರರು ಭಾರತೀಯ ಶಿಲ್ಪಕಲೆಯ ಬಗೆಗೆ ನೀಡಿದ ಉಪನ್ಯಾಸಗಳ ಸಂಗ್ರಹವನ್ನು “ಶಿಲ್ಪಪ್ರಬಂಧಾವಳಿ” ಎಂಬ ಹೆಸರಿನಿಂದ ಕಲ್ಕತ್ತಾ ವಿಶ್ವವಿದ್ಯಾಲಯ ಪ್ರಕಟಿಸಿದೆ.

ಚಿತ್ರಕಲೆಯ ಬಗೆಗೆ ಅವನೀಂದ್ರರು ಸಂಸ್ಕೃತದಿಂದ ಬಂಗಾಳಿಗೆ ಅನುವಾದ ಮಾಡಿ ಬರೆದ “ಷಡಂಗ” ಪುಸ್ತಕವು ಇಂಗ್ಲಿಷ್, ಫ್ರೆಂಚ್, ಜರ‍್ಮನ್ ಬಾಷೆಗಳಲ್ಲಿ ಅನುವಾದಗೊಂಡು ಕಲಾ ಪ್ರಪಂಚದಲ್ಲಿ ಮಾರ್ಗದರ್ಶಿ ಗ್ರಂಥವಾಗಿ ಉಳಿದಿದೆ.

ವಿಶ್ವಭಾರತಿಯ ಕುಲಪತಿಯಾಗಿ ಅವನೀಂದ್ರರು ತಮ್ಮ ಚಿಕ್ಕಪ್ಪ ರವೀಂದ್ರರ ಸಹವಾಸದಲ್ಲಿದ್ದಾಗ ಹಲವು ಕೃತಿಗಳನ್ನು ರಚಿಸಿದರು.

ಅವುಗಳಲ್ಲಿ ಮುಖ್ಯವಾದುವು “ಅಪನ್ ಕಥಾ”, “ಘರೋವ” ಎಂಬ ಎರಡು ಕೃತಿಗಳು. “ಜೋರಾ ಸಾಂಕೋರ್‌ದಾರೆ” ಎಂಬ ಹೆಸರಿನ ಪುಸ್ತಕದಲ್ಲಿ ತಮ್ಮ ಬಾಲ್ಯದ ದಿನಗಳ ಸವಿ ನೆನಪುಗಳನ್ನು ಮೆಲಕು ಹಾಕಿದ್ದಾರೆ. ಇದು ಅಂದಿನ ಸಾಮಾಜಿಕ ಜೀವನದ ಪರಿಚಯ ಮಾಡಿಕೊಡುತ್ತದೆ. ಚಿತ್ರಕಲಾವಿದರಾಗಿ ಸ್ವಂತಿಕೆ, ವೈವಿಧ್ಯಗಳನ್ನು ತೋರಿದ ಅವನೀಂದ್ರರ ಸಾಹಿತ್ಯದಲ್ಲಿಯೂ ಸ್ವಂತಿಕೆ, ವೈವಿಧ್ಯಗಳು ಕಾಣುತ್ತವೆ.

ಅಸೀಮ ರಾಷ್ಟ್ರಾಭಿಮಾನಿ

ಒಮ್ಮೆ ಒಬ್ಬ ಪಾಶ್ಚಾತ್ಯ ಅವನೀಂದ್ರರನ್ನು ಪ್ರಶ್ನಿಸಿದ :

“ಅವನೀಂದ್ರರೆ ಭಾರತೀಯ ಚಿತ್ರ ಕಲಾವಿದರು ಬಿಡಿಸುವ ಚಿತ್ರಗಳಲ್ಲಿ ಹೆಚ್ಚಿನ ಬೆಳಕು ಇರುವ, ನೆರಳು-ಬೆಳಕಿನ ಚಿತ್ರಗಳು ಕಾಣಿಸುವುದಿಲ್ಲ. ಎಲ್ಲವೂ ಮಬ್ಬಾಗಿ ಇರುತ್ತವಲ್ಲ, ಯಾಕೆ ?”

ಅದಕ್ಕೆ ಅವನೀಂದ್ರರು ನಸುನಗುತ್ತಾ,

“ಮಿತ್ರಾ, ನಮಗಿನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ, ನಮ್ಮ ಪಾಲಿಗೆ ಸೂರ್ಯ ಕಾಣಿಸುವುದಿಲ್ಲ. ನಮ್ಮ ಹೃದಯ ಮನಸ್ಸುಗಳಲ್ಲಿ ಹರ್ಷವಿಲ್ಲ. ಶೋಕದ ಕತ್ತಲು ತುಂಬಿದೆ. ಹಾಗಾಗಿ ನಮ್ಮ ಕೃತಿಗಳಲ್ಲಿ ಪ್ರಕಾಶ ಕಡಿಮೆ” ಎಂದರು.

‘ನಮಗಿನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ನಮ್ಮ ಪಾಲಿಗೆ ಸೂರ್ಯ ಕಾಣಿಸುವುದಿಲ್ಲ’

ಈ ಉತ್ತರ ಕೇಳಿ ಆ ವಿದೇಶೀಯ ತುಟಿ ಬಿಚ್ಚಲಿಲ್ಲ.

ಅವನೀಂದ್ರರು ರಚಿಸಿದ “ಭಾರತಮಾತಾ” ಚಿತ್ರ ಹಲವಾರು ಕ್ರಾಂತಿಕಾರಿಗಳ ಆರಾಧ್ಯ ದೇವತೆಯಾಯಿತು.

ಅವನೀಂದ್ರರು ಅಸೀಮ ದೇಶಾಭಿಮಾನಿಯಾದರು. ಅವರದು ಸಂಕುಚಿತ ದೃಷ್ಟಿಯಲ್ಲ. “ಒಳ್ಳೆಯದು ಯಾರಿಂದಲೇ ಬಂದರೂ, ಯಾವ ದೇಶದಿಂದಲೇ ಬಂದರೂ ಅದನ್ನು ಸ್ವೀಕರಿಸಬೇಕು. ಅದನ್ನು ಅರಗಿಸಿಕೊಂಡು ನಮ್ಮದನ್ನಾಗಿ ಮಾಡಬೇಕು” ಎಂಬ ಅಭಿಪ್ರಾಯ ಉಳ್ಳವರು.

ಸಂಗೀತದಲ್ಲಿಯೂ ಆಸಕ್ತಿ ಹೊಂದಿದ್ದ ಅವನೀಂದ್ರರು ಸಿತಾರ್, ಶಹನಾಯ್, ತಬಲ ನುಡಿಸುವುದನ್ನು ಕಲಿತ್ತಿದ್ದರು. ರವೀಂದ್ರರು ಸಭೆ ಸಮಾರಂಭಗಳಲ್ಲಿ ಹಾಡಿದಾಗ ಅವನೀಂದ್ರರು ಪಿಟೀಲ್ ಅಥವಾ ಸಿತಾರ್ ನುಡಿಸುತ್ತಿದ್ದರು.

ಹೊಸ ಯುಗದ ಒಂದು ಶಕ್ತಿ

ಹತ್ತೊಂಬತ್ತನೆಯ ಶತಮಾನದ ಕಡೆಯ ದಶಕಗಳು, ಇಪ್ಪತ್ತನೆಯ ಶತಮಾನದ ಪ್ರಾರಂಭದ ವರ್ಷಗಳು ಇವು ಭಾರತದಲ್ಲಿ ಆಧುನಿಕ ಯುಗವನ್ನು ರೂಪಿಸಿದ ಕಾಲ. ದಾಸ್ಯವನ್ನು ತಿಳಿದು ಮೈಕೊಡವಿ ಕೊಂಡೆದ್ದು ಭಾರತೀಯರು ತಮ್ಮ ಸ್ವಂತಿಕೆಯನ್ನು ತೋರಿಸಲು ಪ್ರಾರಂಭಿಸಿದ ಕಾಲ. ವಿವೇಕಾನಂದರು, ರವೀಂದ್ರರು, ಜಗದೀಶ್ ಚಂದ್ರಬೋಸ್, ಬಾಲಗಂಗಾಧರ ತಿಲಕರು ಎಲ್ಲ ಈ ಯುಗಕ್ಕೆ ಸೇರಿದವರು. ಸಮಾಜ ಸುಧಾರಣೆ, ಸಾಹಿತ್ಯ ವಿಜ್ಞಾನ, ಧಾರ್ಮಿಕ ಚಿಂತನೆ, ಎಲ್ಲ ಕ್ಷೇತ್ರಗಳಲ್ಲಿ  ಈ ಹೊಸ ಚೈತನ್ಯ ಪ್ರಕಟವಾಯಿತು. ಚಿತ್ರಕಲೆಯಲ್ಲಿ ಈ ಹೊಸ ಚೈತನ್ಯ ಅವನೀಂದ್ರನಾಥ ಠಾಕೂರರ ಚಿತ್ರಗಳಲ್ಲಿ ಕಾಣಿಸಿಕೊಂಡಿತು. ಭಾರತೀಯ ಸಾಹಿತ್ಯ, ಸಂಸ್ಕೃತಿಗಳನ್ನು ಆಳವಾಗಿ ಅಭ್ಯಾಸ ಮಾಡಿದರು ಅವರು, ಆದರೆ ಪಾಶ್ಚಾತ್ಯ ಕಲೆಯನ್ನು ಮೆಚ್ಚಿಕೊಂಡರು, ಪಾಶ್ಚಾತ್ಯ ಚಿತ್ರಕಲೆಯಿಂದ ಎಷ್ಟೋ ಸಂಗತಿಗಳನ್ನು ಕಲಿತುಕೊಂಡರು. ತಮ್ಮ  ಪ್ರತಿಭೆಗೆ ಎಲ್ಲ ದೇಶಗಳ ಬೆಳಕಿನಿಂದ ಪ್ರಯೋಜನ ಪಡೆದುಕೊಂಡರು, ಶ್ರೇಷ್ಠ ಚಿತ್ರಗಳನ್ನು ಸೃಷ್ಟಿಸಿದರು. ಅಲ್ಲದೆ ಭಾರತಕ್ಕೆ ನಂದಲಾಲ್ ಬಸು, ಮುಕುಲ್ ಡೇ, ಕೆ. ವೆಂಕಟಪ್ಪ ಇಂತಹ ಚಿತ್ರಗಾರರನ್ನು ನೀಡಿದರು.