ನಮ್ಮೀ ತೋಟದ ಬೇಲಿಯ ದಾಟುತ
ನಡೆದರೆ ಎರಡೇ ಮಾರು
ಆಳದೊಳೆಲ್ಲೋ ಬಾವಿಯ ಪಾತ್ರದ
ಒಳಗಡೆ ಮಲಗಿದ ನೀರು.

ವಾರವಾರಕ್ಕೂ ತಪ್ಪದೆ ಬರುತಾನೆ
ನನ್ನ ಮೆಚ್ಚಿನ ಹುಡುಗ ಮನೆಗೆ
ಈ ಬಾವಿ ನೀರೆಂದರವನಿಗೆಷ್ಟಿಷ್ಟವೊ
ಮರುಳುಗೊಂಡಿದ್ದಾನೆ ರುಚಿಗೆ.

ಕೊಂಬೆಯ ಮಡಿಲಲ್ಲಿ ಮಲಗಿದ ಹಣ್ಣಂತೆ
ನಿದ್ದೆಯೊಳದ್ದಿದೆ ಲೋಕ
ಈಗ ನಾನೊಬ್ಬಳೆ; ಮನೆಯೊಳ್ಯಾರೂ ಇಲ್ಲ.
ಎಚ್ಚತ್ತು ಕಾದಿದೆ ಹೃದಯ.

ಬೆಳ್ಳಿ ಬಂಗಾರದ ತಿಳಿನೀರು ತುಳುಕುವ
ಪಾತ್ರೆಯ ಜತೆಯಲ್ಲಿ ನಾನು
ಕಾಯುತ್ತಾ ಇದ್ದೇನೆ ನನ್ನ ನಲ್ಲನಿಗಾಗಿ
ಅದೊ, ಅಲ್ಲಿ ಬರುವವನ್ಯಾರು?

ಹಬ್ಬಿದ ಮಬ್ಬಿನ ಮಧ್ಯೆ ಏನದು ಸದ್ದು?
ಕೇವಲ ಹಕ್ಕಿಯ ದನಿಯೆ?
ಬಾ ನನ್ನ ಗೆಣೆಕಾರ, ಇಲ್ಲಿ ಯಾರೂ ಇಲ್ಲ
ದೂರ ನಿಲ್ಲುವುದಿನ್ನು ಸರಿಯೆ?

ತೊಟ್ಟಿಯ ಪಕ್ಕದೊಳಿಬ್ಬರೆ ಕೂತೆವು
ಗಲ್ಲಗಲ್ಲಕೆ ಹಚ್ಚಿ ಕೈಯ್ಯ ಹೆಣೆದು.
‘ಬಿಂದಿಗೆಗೇತಕೆ ಬಾವಿ ನೀರಿನ ಬಯಕೆ?’
ಈ ಒಗಟಿನರ್ಥವ ಬಿಡಿಸು.
ನಾ ಬಲ್ಲೆ; ನೀನಿದಕುತ್ತರ ಕೊಡಲಾರೆ
ಪಾತ್ರೆ ಅಳುವುದು ಯಾಕೆ ಗೊತ್ತೆ?
ಬೆಳಗೂ ಬೈಗೂ ತಟತಟ ಕಣ್ಣೀರು
ನೀನು ನಿಲ್ಲಿಸಲಾರೆ ಮತ್ತೆ.
ಹೇಳು ಹಾಗಾದರೆ ಹಗಲು-ಇರುಳೂ ನನಗೆ
ತಳಮಳವೇತಕೆ ಹೀಗೆ ?
ನನ್ನ ತಾಯಿಗು ಗೊತ್ತು ; ‘ನಿನ್ನ ಮನಸ್ಸೆಲ್ಲ
ನನ್ನಿಂದಾಚೆಗೆ ಹೊರಗೇ’.
ನನ್ನ ನಂಬಿಸುವಂತೆ ಹತ್ತಿರ ಹಿಡಿದೊತ್ತಿ
ನಂಬುಗೆಗೊಟ್ಟನು ಹೀಗೆ :
“ಆಗದ ಮಂದಿಯ ಚಾಡಿಯ ಮಾತಿಗೆ
ನೀನು ಕಿವಿಗೊಟ್ಟರೆ ಹೇಗೆ?
ಏನಾದರಾಗಲಿ, ಮುಂದಿನ ವರ್ಷವೆ
ನನಗೂ ನಿನಗೂ ಮದುವೆ
ಇಲ್ಲದ ಸಲ್ಲದ ಯೋಚನೆ ಮಾಡುತ
ಶಂಕಿಸಬೇಡೆನ್ನ ಒಲವೆ.
ನಮ್ಮ ಮದುವೆಯ ದಿನವ ನೆಂಟರ ಇಷ್ಟರ
ಎಳೆಯರ ಹಳೆಯರ ಬೆಸುಗೆ
ಹಾಡುತ್ತ ಕುಣಿಯುತ್ತ ಸಂಭ್ರಮಗೊಳ್ಳಲಿ
ನಡೆಸುತ್ತ ನಮ್ಮನು ಜೊತೆಗೆ.
ಅಂದಿನ ಚಿನ್ನದ ದಿನದ ಮೇಲಾಡಲಿ
ಹೊಳೆವ ವಸಂತದ ಬಿಸಿಲು,
ಹೂ ಹಣ್ಣು ತೂಗುವ ಮರದ ಕೊಂಬೆಗಳಿಂದ
ಹರಡಲಿ ಹರಕೆಯ ನೆರಳು.

ನಾಚಿ ತಲೆ ಬಾಗಿದ ಮದುವಣಗಿತ್ತಿಯ
ಮುಸುಕನ್ನು ಮೆಲ್ಲಗೆ ತೆಗೆವೆ
ನಾನೀಗ ಹಿಡಿದಿರುವ ಈ ಕೈಯ ಬೆರಳಿಗೆ
ಬಂಗಾರದುಂಗುರ ಇಡುವೆ.

ಸಾರಿಹೇಳುತ್ತೇನೆ : ದೇವರು ನಿನ್ನನ್ನು
ಮೀಸಲಿಟ್ಟಿದ್ದಾನೆ ನನಗೇ.
ತಂತಮ್ಮ ಹೊಟ್ಟೆಯ ಕಿಚ್ಚಲ್ಲಿ ಬೇಯಲಿ
ನಮಗಾಗದ ಮಂದಿ ಕೊನೆಗೆ.”

ಜನತೆಯ ಹಾಡು’ಗಳಿಂದ (ಹಿಬ್ರೂ)