ಮನೆಯಲ್ಲಿ ಎಪ್ಪತ್ತು ದಾಟಿದವರಿಬ್ಬರೇ.
ದೊಡ್ಡ ಮನೆ. ನಡುಮನೆಯ ಗೋಡೆಯ ಮೇಲೆ
ಹತ್ತು ವರ್ಷದ ಹಿಂದೆ ಮದುವೆಯಾಗಿದ್ದ
ಮಗ-ಸೊಸೆ ಇಬ್ಬರೂ ಕೈ ಕೈ ಹಿಡಿದು ನಗುತ್ತಾರೆ.

ಈಗವರು ದೂರದಮೆರಿಕದಲ್ಲಿ, ತಮ್ಮ
ಪಾಡಿಗೆ ತಾವು. ಇಲ್ಲಿ ಹೊತ್ತು ಕಳೆಯುವುದಕ್ಕೆ ಇವೆಯಲ್ಲ
ಟಿ.ವಿ. ಪೇಪರ್, ಪುಸ್ತಕ.
ಸಂಜೆ ಮನೆಯ ಅಂಗಳದಲ್ಲೆ ಒಂದಷ್ಟು ಸುತ್ತಾಟ.
ತಿಂಗಳಿಗೋ ಹದಿನೈದು ದಿನಕ್ಕೋ ಒಂದುಸಲ
ಟ್ರಿನ್ ಟ್ರಿನ್ ಫೋನು. ಹಲೋ ಹ್ಯಾಗಿದೀಯಪ್ಪ?
ಜತೆಗೆ ತನ್ನ ಕಂಪೆನಿಯಲ್ಲಿ ಪ್ರಮೋಷನ್
ದೊರಕಿದ ವಿಷಯ. ಸೊಸೆಯ ಮಾತಿನಲ್ಲಿ
ಏನೋ ಬಿಗುಮಾನ. ಮೊಮ್ಮಗಳು ಅಮೆರಿಕನ್
ಇಂಗ್ಲಿಷಿನಲ್ಲಿ : ‘ಹಾಯ್ ತಾತಾ ಹೌ-ಆರ್-ಯು.’


ಒಮೊಮ್ಮೆ ಅಪ್ಪನಿಗೆ ಸಿಡಿಮಿಡಿ:
ಇದಕ್ಕೇ ಏನು ಹೊಟ್ಟೆ ಬಟ್ಟೆಯ ಕಟ್ಟಿ
ನಾನು ಇವನನ್ನು ಓದಿಸಿದ್ದು?
ನಿರೀಕ್ಷಿಸಿಯೇ ಇರಲಿಲ್ಲ, ಗರಿ ಬಲಿತ
ಕೂಡಲೇ ಈ ಹಕ್ಕಿಗಳು ಹೀಗೆ ಗೂಡಿಂದಾಚೆ
ಹಾರಿ ಹೋಗುವುದನ್ನು ; ಈ ನೆಲದ ಬೆವರಿಂದ
ಶಿಕ್ಷಣ ಪಡೆದು ಬೇರೊಂದು ನಾಡನ್ನು
ಉದ್ಧಾರ ಮಾಡುವುದನ್ನು ; ವಿದೇಶೀ ಹಣಕ್ಕೆ
ತಮ್ಮನ್ನು ತಾವೇ ಮಾರಿಕೊಳ್ಳುವುದನ್ನು ;
ಹಳೆಯ ನೆನಪುಗಳನ್ನು ಇಷ್ಟು ಸಲೀಸಾಗಿ
ಕತ್ತ್ತರಿಸಿಕೊಂಡು ಬೇರೆಲ್ಲೋ ಬದುಕುವುದನ್ನು.

ಮುದುಕಿ ಹೇಳುತ್ತಾಳೆ : ಹೋಗಲಿ ಬಿಡಿ
ಎಲ್ಲಿ ತಮಗೆ ಸಂತೋಷವೋ ಅಲ್ಲೇ ಇರಲಿ
ಈ ನಮ್ಮ ಮಕ್ಕಳು. ಹಳೆಯ ಕಾಲದವರಾದ ನಾವೆಲ್ಲ
ಎಷ್ಟಾದರೂ ವಿನಾಯಕನ ಒಕ್ಕಲು. ನವಿಲನ್ನೇರಿ ಪ್ರಪಂಚ
ಪರ್ಯಟನಕ್ಕೆ ಹೊರಟವರಿಗಾದರೋ, ತಾವು
ನಿಂತದ್ದೇ ನೆಲೆ, ಪಡೆದದ್ದೇ ಬೆಲೆ.
ಕಟ್ಟಿ ಹಾಕುವುದು ಸರಿಯೆ ಅವರ ಭವಿಷ್ಯತ್ತನ್ನು
ನಮ್ಮ ಭೂತಕಾಲದ ಜತೆಗೆ? ಬಿಟ್ಟುಬಿಡಿ.
ಅವರವರ ದಾರಿ ಅವರಿಗೆ.