ಅವರಿಬ್ಬರೂ ಪರಸ್ಪರ
ಪ್ರೀತಿಸಿದರು;
ಆತ ಯುದ್ಧದ ವರದಿಗಾರ
ಆಕೆ ಸೈನ್ಯದಲ್ಲಿ ಡಾಕ್ಟರು.

ಅವಳು ಅವನಿಗೆ ಕೊಟ್ಟದ್ದು
ಎರಡನೆ ಜನ್ಮ
ಅವನು ಅವಳಿಗೆ ನೀಡಿದ್ದು
ರಣರಂಗದ ದಿನಚರಿಯ ವರದಿ.

ಅವನ ಜ್ವಲಂತ ನೋಟವೇ
ಸದಾ ಅವನ ಕೋರಿಕೆಯಾಗಿತ್ತು
ಹಿಂಜರಿವ ಮಂದಹಾಸವೇ
ಅವಳ ಒಪ್ಪಿಗೆಯಾಗಿತ್ತು
‘ಯುದ್ಧ ಮುಗಿಯಲಿ, ಕಾಯೋಣ,
ಅನ್ನುವುದು ಅವರಿಬ್ಬರ ಬಯಕೆ
ಮಾತಿಲ್ಲದ ಒಪ್ಪಂದ.

ಆದರೆ ಅವರಿಬ್ಬರೂ ಎಂದೂ
ಮುದುವೆಯಾಗಲೇ ಇಲ್ಲ.
ಆತ ಯುದ್ಧದ ಬಗ್ಗೆ ವರದಿ ಮಾಡುತ್ತಲೇ
ಗುಂಡಿಗೆ ಬಲಿಯಾದ.
ಆಕೆ ಗಾಯಗೊಂಡವರನ್ನು
ರಕ್ಷಿಸುವಾಗ ಕೊಲೆಯಾದಳು.

ಇಲ್ಲ, ಅವರಿಬ್ಬರೂ ಸತ್ತಿಲ್ಲ,
ಇನ್ನೂ ಬದುಕಿದ್ದಾರೆ:
ಯಾವುದೋ ದೂರದ ಗುಡ್ಡಗಾಡಿನ ನಡುವೆ
ಕೆಂಪು ಹೂವುಗಳು ಅವಳ ಗುಲಾಬಿ ಕೆನ್ನೆಯ ಹಾಗೆ
ಕಂಗೊಳಿಸುವಲ್ಲಿ,
ಪಚ್ಚೆಗೆಂಪಿನ ಎತ್ತರದ ವೃಕ್ಷಗಳು
ಅವನಂತೆಯೇ ನೆಟ್ಟಗೆ ನಿಂತಿರುವಲ್ಲಿ.

ಅವರಿಬ್ಬರೂ ಇನ್ನೂ ಬದುಕಿದ್ದಾರೆ
ಅವರ ತಾರುಣ್ಯಕ್ಕೆ ಮತ್ತೆ ಪ್ರೀತಿಗೆ
ಚ್ಯುತಿಯೇ ಇಲ್ಲ.
ಅವಳಿಗೆ ಇಪ್ಪತ್ಮೂರು
ಅವನಿಗೆ ಇಪ್ಪತ್ತನಾಲ್ಕು
ಇಬ್ಬರೂ ಇದನ್ನು ದಾಟಿಯೇ ಇಲ್ಲ

– ಜಾಂಗ್ ಜಿಮಿನ್(ಚೀನಾ)