ಅವರು ಕಟ್ಟಿದರು ಮನೆಯೊಂದನ್ನು
ಘಟ್ಟಿ ಬಂಡೆಯ ಮೇಲೆ.
ಮುಂಗಾರು: ಘೀಳಿಡುವ ಗಾಳಿ
ಭೋರೆಂಬ ಮಳೆ; ಹುಚ್ಚು ಹೊಳೆ
ಸುತ್ತಲೂ. ಆದರೂ ಭದ್ರವಾಗಿತ್ತು
ಮನೆ. ಯಾಕೆಂದರದು ಘಟ್ಟಿ ಬಂಡೆಯ
ಮೇಲೆ ನಿಂತಿತ್ತು.

ಇವರು ಕಟ್ಟಿದರು ಮನೆಯೊಂದನ್ನು
ಮಳಲ ತಳಹದಿಯ ಮೇಲೆ.
ಮುಂಗಾರು: ಘೀಳಿಡುವ ಗಾಳಿ
ಭೋರೆಂಬ ಮಳೆ; ಹುಚ್ಚು ಹೊಳೆ
ನುಗ್ಗಿ ನಿಮಿಷಾರ್ಧದಲಿ ಕುಸಿದೇ ಬಿತ್ತು
ಮನೆ. ಯಾಕೆಂದರದು ಮಳಲ ತಳಹದಿಯ
ಮೇಲೆ ನಿಂತಿತ್ತು.

ಕೇಳಿಕೊಳ್ಳುವ ಪ್ರಶ್ನೆ: ಈ ನಾವು
ಯಾವುದರ ಮೇಲೆ ಕಟ್ಟಿದ್ದೇವೆ
ನಮ್ಮ ಮನೆಯನ್ನು?
ಘಟ್ಟಿ ಬಂಡೆಯ ಮೇಲೋ, ಅಥವಾ
ಮಳಲ ತಳಹದಿಯ ಮೇಲೋ?

(ಪ್ರೇರಣೆ: ಬೈಬಲ್, ಸಂತಮ್ಯಾಥ್ಯೂ ೭, ೨೪-೨೭)