ಅವರೆಕಾಯಿ ಮತ್ತು ಕಾಳು ಪೌಷ್ಟಿಕ ಹಾಗೂ ರುಚಿಕರ ತರಕಾರಿಗಳು. ಒಳ್ಳೆಯ ಪ್ರೊಟೀನ್ ಮೂಲ. ಕರ್ನಾಟಕದಲ್ಲಿ ಅವರೆಯನ್ನು ಹೊಲದ ಬೆಳೆಯಾಗಿ ಬೆಳೆಯುವುದೇ ಹೆಚ್ಚು.

ಪೌಷ್ಟಿಕ ಗುಣಗಳು: ಅವರೆಕಾಯಿ ಮತ್ತು ಕಾಳುಗಳು ಶರ್ಕರಪಿಷ್ಟ, ಪ್ರೊಟೀನ್ ಹಾಗು ಖನಿಜ ವಸ್ತುಗಳು ಒಳ್ಳೆಯ ಮೂಲ.

೧೦೦ ಗ್ರಾಂ ಅವರೆ ಕಾಯಿಗಳಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ-೮೬.೧ ಗ್ರಾಂ.
ಶರ್ಕರಪಿಷ್ಟ-೬.೭ಗ್ರಾಂ
ಪ್ರೊಟೀನ್-೩.೫ ಗ್ರಾಂ
ಕೊಬ್ಬು-೦.೭ ಗ್ರಾಂ
ಖನಿಜ ಪದಾರ್ಥ-೦.೯ಗ್ರಾಂ
ರಂಜಕ-೬೮ ಮಿ.ಗ್ರಾಂ
ಕ್ಯಾಲ್ಸಿಯಂ-೨೧೦ ಮಿ.ಗ್ರಾಂ
ಕಬ್ಬಿಣ-೧.೭ ಮಿ.ಗ್ರಾಂ
ಪೊಟ್ಯಾಷಿಯಂ-೭೪ ಮಿ.ಗ್ರಾಂ
’ಎ’ ಜೀವಸತ್ವ-೩೧೨ ಐಯು
ರೈಬೊಫ್ಲೇವಿನ್-೦.೦೬ ಮಿ.ಗ್ರಾಂ
ಥಯಮಿನ್-೦.೧೦ ಮಿ.ಗ್ರಾಂ
’ಸಿ’ ಜೀವಸತ್ವ-೯ ಮಿ. ಗ್ರಾಂ

 

ಔಷಧೀಯ ಗುಣಗಳು: ಎಳೆಯ ಕಾಯಿಗಳಲ್ಲಿ ಹೆಚ್ಚಿನ ನಾರು ಇರುವ ಕಾರಣ ತಿಂದ ಆಹಾರ ಕರುಳುಗಳಲ್ಲಿ ಚಲಿಸುವಂತೆ ಮಾಡಬಲ್ಲದು. ಸಿಪ್ಪೆ ಸುಲಿದ ಕಾಳು ವಾತಕರ.

ಉಗಮ ಮತ್ತು ಹಂಚಿಕೆ: ಅವರೆಯ ತವರೂರು ಭಾರತ: ಹಲವಾರು ಕಾಡುಬಗೆಗಳು ನಮ್ಮಲ್ಲಿ ಕಂಡುಬರುತ್ತವೆ. ಇದರ ಬೇಸಾಯ ಮತ್ತು ಬಳಕೆಗಳು ದೇಶದ ಎಲ್ಲಾ ಕಡೆ ಕಂಡುಬರುತ್ತವೆ.

ಸಸ್ಯ ವರ್ಣನೆ: ಲೆಗ್ಯೂಮಿನೋಸೀ ಕುಟುಂಬದ ಫ್ಯಾಬೇಸಿ ಉಪಕುಟುಂಬಕ್ಕೆ ಸೇರಿದ ಮೂಲಿಕೆ ಸಸ್ಯ. ಸಾಮಾನ್ಯವಾಗಿ ವಾರ್ಷಿಕ ಬೆಳೆ. ಗಿಡಗಳನ್ನು ಹಾಗೆಯೇ ಬೆಳೆಯಲು ಬಿಟ್ಟರೆ ಉದ್ದ ಹಂಬುಗಳ ಬಳ್ಳಿಯಂತೆ ಆಸರೆಗೆ ಸುತ್ತಿ ಉದ್ದಕ್ಕೆ ಇಲ್ಲವೇ ಮೇಲಕ್ಕೆ ಸಾಗುತ್ತವೆ. ಕಾಂಡಭಾಗ ಬಲಹೀನ, ಹಸುರು ಬಣ್ಣ, ದುಂಡು, ಉದ್ದಕ್ಕೂ ಎಲೆಗಳು ಹಾಗೂ ಕವಲುಗಳು. ಎಲೆಗಳಿಗೆ ಉದ್ದ ತೊಟ್ಟು, ಬಿಡಿ ಎಲೆಗಳಲ್ಲಿ ತಲಾ ಮೂರು ಉಪಎಲಗಳು, ಅವುಗಳಿಗೂ ಸಹ ಸಣ್ಣ ತೊಟ್ಟು ಇರುತ್ತದೆ. ಎಲೆಗಳು ಆಕಾರದಲ್ಲಿ ಭಲ್ಲೆಯಂತೆ. ಅವುಗಳಲ್ಲಿ ಮೃದುವಾದ ತುಪ್ಪಳ. ಹೂಗೊಂಚಲು ಉದ್ದ. ಹೂವು ಬೆಳ್ಳಗೆ, ಹೂತೆನೆಯ ಉದ್ದಕ್ಕೆ ಪೋಣಿಸಿದಂತೆ ವ್ಯವಸ್ಥಿತವಾಗಿರುತ್ತದೆ. ಹೂವು ದ್ವಿಲಿಂಗಿಗಳು, ಹೆಚ್ಚಿನ ಪ್ರಮಾಣದಲ್ಲಿ ಸ್ವ-ಪರಾಗಸ್ಪರ್ಶ, ಸಸ್ಯಬಾಗಗಳನ್ನು ತಡವಿದರೆ ವಿಶಿಷ್ಟ ಕಂಪಿನ ಅನುಭವ. ಕಾಯಿ ಅದುಮಿದಂತೆ, ಚಪ್ಪಟೆಸ, ಗಂಟುಗಂಟಾಗಿರುತ್ತವೆ. ಬಿಲ್ಲಿನಂತೆ ಬಾಗಿರುತ್ತವೆ. ಕಾಯಿಗಳು ಹಸುರು ಇಲ್ಲವೇ ಬಿಳಿ ಬಣ್ಣ. ಸುಲಿದಾಗ ಬಿಡಿ ಕಾಳುಗಳು ಒಳ ಮಗ್ಗುಲ ಗೋಡೆಗೆ ಅಂಟಿರುತ್ತವೆ. ಇದು ದ್ವಿದಳ ಧಾನ್ಯ ತರಕಾರಿ ಬೆಳೆಯಾದ  ಕಾರಣ ಬೇರುಗಳಲ್ಲಿ ಸಾಕಷ್ಟು ಗಂಟು ಗಳಿದ್ದು ಗಾಳಿಯಲ್ಲಿನ ಸಾರಜನಕವನ್ನು ಹೀರಿ ಹಿಡಿದಿಟ್ಟು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಲ್ಲದು.

ತಳಿ ಅಭಿವೃದ್ಧಿ: ಮೈದಾನ ಪ್ರದೇಶಗಳಲ್ಲಿ ಇದರ ಬೇಸಾಯ ಸಾಕಷ್ಟು ವ್ಯಾಪಕವಾಗಿದ್ದಾಗ್ಯೂ ಸಹ ಇದರ ತಳಿ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿಲ್ಲ. ಹೊಸದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ಪೂಸಾಅರ್ಲಿಪ್ರಾಲಿಫಿಕ್ ಎಂಬ ತಳಿಯನ್ನು ಉತ್ಪಾದಿಸಿದೆ. ಹೆಸರಘಟ್ಟದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಐಐಎಚ್‌ಆರ್-೯೫ ಮತ್ತು ಐಐಎಚ್‌ಆರ್‌೧೪೦ ಎಂಬ ಸುಧಾರಿತ ತಳಿಗಳನ್ನು ಉತ್ಪಾದಿಸಿದೆ. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯವು ಹೆಬ್ಬಾಳ ಅವರೆ-೧ ಮತ್ತು ಹೆಬ್ಬಾಳ ಅವರೆ-೨ ಎಂಬ ತಳಿಗಳನ್ನು ಈ ಸರಣಿಗೆ ಸೇರಿಸಿದೆ. ಇವುಗಳೇ ಅಲ್ಲದೆ ಅಲ್ಲಲ್ಲಿ ಕೆಲವೊಂದು ಸ್ಥಳೀಯ ಬಗೆಗಳೂ ಸಹ ಬೇಸಾಯದಲ್ಲಿವೆ.

ಹವಾಗುಣ: ಈ ಬೆಳೆಗೆ ಹೆಚ್ಚು ಮಳೆಯಾಗುವ ಪ್ರದೇಶಗಳು ಸೂಕ್ತವಲ್ಲ. ಹೂವು ಬಿಟ್ಟು ಕಾಯಿಕಚ್ಚುವ ದಿನಗಳಲ್ಲಿ ಮಂಜು ಅಥವಾ ಇಬ್ಬನಿ ಸುರಿದರೆ ಉತ್ತಮ. ಅಂತಹ ಹವಾಗುಣದಲ್ಲಿ ಸೊಗಡು ಚೆನ್ನಾಗಿದ್ದು ಫಸಲಿನ ಗುಣಮಟ್ಟ  ಉತ್ಕೃಷ್ಟವಿರುತ್ತದೆ. ಮೋಡ  ಕವಿದಲ್ಲಿ ಇಲ್ಲವೇ ಒಂದೇ ಸಮನೆ ಮಳೆಯಾಗುತ್ತಿದ್ದಲ್ಲಿ ಬಹಳಷ್ಟು ಹೂವು ಉದುರಿ ಬೀಳುತ್ತವೆ. ಹೂವು ಬಿಡುವ ಕಾಲದಲ್ಲಿ ಕಡಿಮೆ ಅವಧಿಯಲ್ಲಿ ಬೆಳಕು ಇದ್ದರೆ ಅನುಕೂಲ. ಚಳಿಗಾಲದ ಉದ್ದಕ್ಕೆ ಹೂವು ಬಿಟ್ಟು ಕಾಯಿಸಿಗುತ್ತಿರುತ್ತವೆ. ಬಿತ್ತನೆಗೆ ಜೂನ್-ಆಗಸ್ಟ್, ಸೆಪ್ಟೆಂಬರ್-ಅಕ್ಟೋಬರ್ ಮತ್ತು ಫೆಬ್ರುವರಿ-ಮಾರ್ಚ್‌ಸೂಕ್ತ.

ಭೂಗುಣ: ಬೆಳೆಗೆ ಯಾವುದೇ ತೆರನಾದ ಮಣ್ಣಾದರೂ ಸರಿಯೇ. ಸಾಧಾರಣ ಫಲವತ್ತತೆ ಇದ್ದರೂ ಅಡ್ಡಿಯಿಲ್ಲ. ಬಹಳಷ್ಟು ತೇವ ಹಿಡಿದಿಡುವ ಮಣ್ಣಿನ ಭೂಮಿ ಇದಕ್ಕೆ ಅಷ್ಟಾಗಿ ಒಪ್ಪುವುದಿಲ್ಲ. ಮಳೆ ಕಡಿಮೆ ಇದ್ದರೂ ಸ್ವಲ್ಪಮಟ್ಟಿಗೆ ಸಹಿಸಬಲ್ಲದು. ನೀರು ನಿಂತರೆ ಇದಕ್ಕಾಗದು. ಇದನ್ನು ಹೊಲದ ಬೆಳೆಯಾಗಿ ಇತರ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಯುವುದೇ ಹೆಚ್ಚು. ಕೆಲವಡೆಗಳಲ್ಲಿ ಗದ್ದೆ ಭೂಮಿಯಲ್ಲಿ ಸ್ವಲ್ಪಮಟ್ಟಿಗೆ ಬೆಳೆಯುತ್ತಾರೆ. ಮಣ್ಣು ಹೆಚ್ಚು ಆಳವಾಗಿರಬೇಕಾಗಿಲ್ಲ. ಮರಳುಮಿಶ್ರಿತ ಗೋಡು ಹೆಚ್ಚು ಸೂಕ್ತ.

ತಳಿಗಳು

. ಪೂಸಾಅರ್ಲಿಪ್ರಾಲಿಫಿಕ್: ಹಬ್ಬುತಳಿ: ಕಾಯಿಗಳು ಗೊಂಚಲುಗಳಲ್ಲಿ, ಬಿಡಿಕಾಯಿಗಳು ಉದ್ದ, ಚಪ್ಪಟೆಯಾಗಿರುತ್ತವೆ.

. ಐಐಎಚ್ಆರ್೯೫: ಇದು ಅಧಿಕ ಇಳುವರಿಯಿಂದ ಕೂಡಿದ ತಳಿ. ಫಸಲಿನ ಗುಣಮಟ್ಟ ಉತ್ತಮ. ಈ ತಳಿ ತುಕ್ಕುರೋಗ ನಿರೋಧಕ.

. ಐಐಎಚ್ಆರ್೧೪೦: ಉತ್ತಮ ಗುಣಮಟ್ಟದ ಫಸಲು ಸಾಧ್ಯ; ಇಳುವರಿ ಅಧಿಕ. ತುಕ್ಕುರೋಗಕ್ಕೆ ನಿರೋಧಕ.

. ಹೆಬ್ಬಾಳ ಅವರೆ: ಗಿಡ್ಡ ಹಾಗೂ ಪೊದೆ ತಳಿ; ಗಿಡಗಳು ಹಬ್ಬುವುದಿಲ್ಲ. ಹೂವು ಉದ್ದ ತೆನೆಗಳಲ್ಲಿ, ಗೊಂಚಲು ಗೊಂಚಲಾಗಿ ಬಿಡುತ್ತವೆ, ಬಣ್ಣ ಕನೆಬಿಳುಪು. ಕಾಯಿಗಳು ಬಿಳಿ ಹಸುರು ಬಣ್ಣ, ಗಾತ್ರದಲ್ಲಿ ದೊಡ್ಡವು. ಇದಕ್ಕೆ ನಿರ್ದಿಷ್ಟ ಋತುಮಾನವೆಂದೇನಿಲ್ಲ. ವರ್ಷದ ಯಾವ ಕಾಲದಲ್ಲಾದರೂ ಬಿತ್ತಿಬೆಳೆಯಬಹುದು.

. ಹೆಬ್ಬಾಳ ಅವರೆ: ತರಕಾರಿಗಾಗಿಯೇ ರೂಪಿಸಿದ ತಳಿ ಇದಾಗಿದೆ. ಕಾಯಿ ದೊಡ್ಡವಿರುತ್ತವೆ.

ಭೂಮಿ ಸಿದ್ಧತೆ ಮತ್ತು ಬಿತ್ತನೆ: ಗೊಬ್ಬರಗಳನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಬೆರೆಸಬೇಕು. ನೇಗಿಲ ಸಾಲಿನಲ್ಲಿ ಕಾಲನ್ನು ಬಿತ್ತಬಹುದು. ಮಳೆಗಾಲದ ಬೆಳೆಗೆ ಸ್ವಲ್ಪ ಹೆಚ್ಚಿನ  ಅಂತರವನ್ನೂ ಮತ್ತು ಚಳಿಗಾಲದ ಬೆಳೆಗೆ ಸ್ವಲ್ಪ ಕಡಿಮೆ ಅಂತರವನ್ನೂ ಕೊಡಬೇಕು. ಮಳೆಗಾಲದ ಬೆಳೆಗೆ ಸಾಲುಗಳು ಮತ್ತು ಸಸಿಗಳ ನಡುವೆ ೪೫ ಸೆಂ.ಮೀ. ಅಂತರ ಇದ್ದರೆ ಉತ್ತಮ. ಚಳಿಗಾಲದ ಬೆಳೆಗೆ ಸಾಲುಗಳು ಮತ್ತು ಸಸಿಗಳು ಸಸಿಗಳ ನಡುವೆ ೩೦ ಸೆಂ.ಮೀ. ಅಂತರ ಇದ್ದು ಕಾಳನ್ನು ೨ ಸೆಂ.ಮೀ ಆಳಕ್ಕೆ ಬಿತ್ತಿದರೆ ಸಾಕು. ಅವು ೩-೪ ದಿನಗಳಲ್ಲಿ ಮೊಳೆಯುತ್ತವೆ. ಹೆಕ್ಟೇರಿಗೆ ೨೫ ರಿಂದ ೩೦ ಕಿ.ಗ್ರಾಂ ಬೇಕಾಗುತ್ತದೆ.

ಗೊಬ್ಬರ: ಹೆಚ್ಚಿನ ಪ್ರಮಾಣದ ಗೊಬ್ಬರಗಳು ಬೇಕಾಗಿಲ್ಲ. ಹೆಕ್ಟೇರಿಗೆ ೧೦ ಟನ್ ತಿಪ್ಪೆಗೊಬ್ಬರ, ೨೫ ಕಿ.ಗ್ರಾಂ ಸಾರಜನಕ ಮತ್ತು ೫೦ ಕಿ.ಗ್ರಾಂ ರಂಜಕಾಂಶಗಳನ್ನು ಕೊಟ್ಟರೆ ಸಾಕು.

ನೀರಾವರಿ: ವಾರಕ್ಕೊಮ್ಮೆ ಅಥವಾ ಎರಡು ವಾರಗಳಿಗೊಮ್ಮೆ ನೀರು ಹಾಯಿಸುವುದು ಲಾಭದಾಯಕ.

ಅಂತರ ಬೇಸಾಯ ಮತ್ತು ಕಳೆ ಹತೋಟಿ: ಕಳೆಗಳನ್ನು ಕಿತ್ತು ತೆಗೆದು, ಗಿಡಗಳು ಸಾಕಷ್ಟು ಬೆಳೆದ ನಂತರ ಹಂಬುಗಳೇನಾದರೂ ಇದ್ದರೆ ಅವುಗಳನ್ನು ಸವರಿ ಮೊಟಕು ಮಾಡಬೇಕು.

ಕೊಯ್ಲು ಮತ್ತು ಇಳುವರಿ: ಹೆಬ್ಬಾಳ-೧ ತಳಿಗಳು ಬೇಗ ಫಸಲು ಬಿಟ್ಟು ಕೊಯ್ಲಿಗೆ ಬರುತ್ತವೆ. ಕೊಯ್ಲುಗಾಲ ಸಾಕಷ್ಟು ದೀರ್ಘವಿರುತ್ತದೆ. ಕಾಯಿಗಳು ಸಾಕಷ್ಟು ಬಲಿತಾಗ ಕಿತ್ತು ತೆಗೆಯಬೇಕು. ಹೆಕ್ಟೇರಿಗೆ ೫ರಿಂದ ೭.೫ ಟನ್ನುಗಳಷ್ಟು ಹಸಿಕಾಯಿ ಸಾಧ್ಯ. ಕಾಳು ಮಾಡುವುದಿದ್ದಲ್ಲಿ ಕಾಯಿ ಗಿಡಗಳಲ್ಲಿಯೇ ಚೆನ್ನಾಗಿ ಬಲಿತು, ಒಣಗಬೇಕು. ಆಗ ಅವುಗಳನ್ನು ಬಿಡಿಸಿ ತೆಗೆಯಬೇಕು.

ಕೀಟ ಮತ್ತು ರೋಗಗಳು: ಕೀಟಗಳಲ್ಲಿ ಕಾಯಿಕೊರೆಯುವ ಹುಳು ಮತ್ತು ಸಸ್ಯಹೇನು ಮುಖ್ಯವಾದುವು.

. ಕಾಯಿ ಕೊರೆಯುವ ಹುಳು: ಇದರ ಕಂಬಳಿಹುಳುಗಳು ಕಾಯಿಗಳನ್ನು ಕೊರೆದು ಬೀಜ ಅಥವಾ ಕಾಳುಗಳನ್ನು ತಿನ್ನುತ್ತವೆ. ತೀವ್ರಹಾನಿ ಇದ್ದಾಗ ಬಹಳಷ್ಟು ಫಸಲು ಹಾಳಾಗುತ್ತದೆ. ಹೂವು ಬಿಡುವ ಸಮಯದಲ್ಲಿ ೧೫ ದಿನಗಳಿಗೊಮ್ಮೆ ೧೦ ಲೀಟರ್ ನೀರಿಗೆ ೧೦ ಮಿ.ಲೀ. ಮೆಟಾಸಿಡ್ ಅಥವಾ ಮಾನೋಕ್ರೋಟೊಫಾಸ್ ಕೀಟನಾಶಕ ಬೆರೆಸಿ ಸಿಂಪಡಿಸಬೇಕು.

. ಸಸ್ಯಹೇನು: ಈ ಕೀಟಗಳು ಎಲೆ, ಕುಡಿ ಮತ್ತು ಹೂಗೊಂಚಲುಗಳಲ್ಲಿ ಗುಂಪು ಗುಂಪಾಗಿದ್ದು, ಆ ಭಾಗಗಳನ್ನು ಕಚ್ಚಿ ರಸ ಹೀರುತ್ತವೆ.  ಆ ಭಾಗಗಳು ನಿಸ್ತೇಜಗೊಂಡು ಅನಂತರ ಸೊರಗುತ್ತವೆ. ಪ್ರಾರಂಭದಲ್ಲಿಯೇ ಹತೋಟಿಮಾಡುವುದು ಒಳ್ಳೆಯದು. ಹತೋಟಿಗೆ ೧೦ ಲೀಟರ್‌ನೀರಿಗೆ ೧೫ ಮಿ.ಲೀ ಮೆಟಾಸಿಸ್ಟಾಕ್ಸ್ ಬೆರೆಸಿ ಸಿಂಪಡಿಸಬೇಕು. ಕೀಟನಾಶಕ ಸಿಂಪಡಿಸದ ಒಂದೆರಡು ವಾರಗಳವರೆಗೆ ಕಾಯಿ ಕೀಳಬಾರದು ಹಾಗೂ ದನಗಳಿಗೆ ಸೊಪ್ಪು ಕೊಡಬಾರದು.

ಈ ಬೆಳೆಗೆ ಹಾನಿಯನ್ನುಂಟು ಮಾಡುವ ರೋಗಗಳು ಕಡಿಮೆ.

ಬೀಜೋತ್ಪಾದನೆ: ಇದು ಸ್ವ-ಪರಾಗಸ್ಪರ್ಶದ ಬೆಳೆ. ಯಾವುದೇ ಎರಡು ತಳಿಗಳ ನಡುವೆ ಮೂಲ ಬೀಜಕ್ಕಾದರೆ ೫೦ ಮೀಟರ್ ಮತ್ತು ಪ್ರಮಾಣೀಕೃತ ಬೀಜಕ್ಕಾದರೆ ೨೫ ಮೀಟರ್ ಅಂತರ ಇರುವುದು ಅಗತ್ಯ. ಇತರ ತಳಿಗಳ ಗಿಡಗಳೇನಾದರೂ ಕಂಡು ಬಂದಿದ್ದೇ ಆದರೆ ಅವುಗಳನ್ನು ಕಿತ್ತು ಹಾಕಬೇಕು. ಈ ಕೆಲಸವನ್ನು ಹೂವು ಬಿಡುವ ಮುಂಚೆ ಮತ್ತು ಹೂ ಬಿಡುವಾಗ ಮಾಡಬೇಕು. ಹೆಕ್ಟೇರಿಗೆ ೧ರಿಂದ ೧.೨೫ ಟನ್ ಕಾಳು ಸಿಗುತ್ತವೆ.

* * *