ಎಂಬತ್ತಾದರೇನು ಎಂಟು ನೂರಾದರೇನು
ಬಿದ್ದಲ್ಲೇ ಬಿದ್ದು ಕೊನರದ ಕೊರಡಿಗೆ?
ಯಾವಾಗಲೋ ನಟ್ಟ ನಡುರಾತ್ರಿ ಥಟ್ಟನೆ
ಅರಳಿ, ಬೆಳುದಿಂಗಳಿನ ದಳ ತೆರೆದು, ಮುಂ-
ಜಾನೆಯೊಳಗಾಗಿಯೇ ಮುದುರಿಕೊಳ್ಳುವ
ಬ್ರಹ್ಮಕಮಲಕ್ಕೆ ಯಾವುದು ಹೋಲಿಕೆ?

ನಿಜವಾಗಿಯೂ ಸೃಜನಶೀಲವಾಗಿ ನಾವು
ಬದುಕಿದ್ದೆಷ್ಟು? ಅಂಥ ಘಳಿಗೆಗಳ ಮೊತ್ತವೆ
ಕವಿ-ಕಲಾವಿದರ ಸಾರ್ಥಕವಾದ ಆಯುಷ್ಯ.
ಈ ಲೆಕ್ಕದಲ್ಲಿ ನನಗೀಗ ಎಷ್ಟು ವರ್ಷ?

ಆದರೂ ನನಗಾಯಿತೆಂಬತ್ತು
ಅದಕ್ಕೆ ನಾನಲ್ಲ ಜವಾಬ್ದಾರ,
ಇಷ್ಟುದಿನ ಹೇಗೋ ನಗುನಗುತ್ತ
ನಾನು ಬದುಕಿದ್ದರೆ, ನಿಮ್ಮಂಥವರ
ಪ್ರೀತಿಯೊಂದೇ ಅದಕ್ಕೆ ಮೂಲಾಧಾರ.

ಯಾವತ್ತೂ ಬೆನ್ನಟ್ಟಿ ಹೋದವನಲ್ಲ
ನಾನು, ಬಂಗಾರದ ಜಿಂಕೆಯ ಹಿಂದೆ.
ಅಥವಾ ಯಾವ್ಯಾವುದೋ ಕಣಿವೆ-
ಯಿಕ್ಕಟ್ಟುಗಳಲ್ಲಿ ಕಾಯಲಿಲ್ಲ ಅವರಿವರ ಮಂದೆ

ನಾನು ನನ್ನದೇ ಆದೊಂದಿಷ್ಟು ನೆಲವ-
ನ್ನುತ್ತು ಬಿತ್ತಿ ಫಸಲು ತೆಗೆದಿದ್ದೇನೆ.
ಕತ್ತಲೆಯ ಓಣಿಗಳಲ್ಲಿ ಹಣತೆ ಹಚ್ಚಿದ್ದೇನೆ.
ಮಲಗಿದ್ದ ತಂತಿಗಳ ಮೇಲೆ ಬೆರಳಾಡಿಸಿದ್ದೇನೆ
ಈ ನೂರು ಮರ ನೂರು ಸ್ವರಗಳ ನಡುವೆ
ನನ್ನದೂ ಒಂದು ಸ್ವರ ಎಂದು ತಿಳಿದಿದ್ದೇನೆ.