ಬೌದ್ಧ ಧರ್ಮ ಎಂದರೆ ಒಂದೇ ಎಂಬ ಭಾವನೆ ಸಾಮಾನ್ಯವಾಗಿ ಪ್ರಚಲಿತದಲ್ಲಿದ್ದರೂ ಅದರಲ್ಲೂ ಕೆಲವು ಪಬೇಧಗಳಿವೆ. ಗೌತಮ ಬುದ್ಧನ ಭೋದನೆಗಳಿಗೆ ಮನಸೋತ ನೇರ ಅನುಯಾಯಿಗಳು ಹೀನಯಾನ ಪಂಥದವರಾದರೆ ಬುದ್ಧನ ನಂತರ ಆತನ ನೇರ ಅನುಯಾಯಿಗಳ ಹೀನಯಾನ ಪಂಥವು ಕಾಲಕ್ರಮೇಣ ಪರಿವರ್ತನೆಗೊಳಗಾಗಿ ಮಹಾಯಾನ ಪಂಥವಾಗಿ ಕವಲೊಡೆಯಿತು. ಮುಂದೆ ಅದೂ ಸಹಾ ಪರಿವರ್ತನೆಗೊಳಗಾಗುತ್ತಾ ತಾಂತ್ರಿಕ ಪ್ರಭಾವಕ್ಕೆ ಸಿಲುಕಿ ವಜ್ರಯಾನ ಪಂಥವಾಗಿ ರೂಪಾಂತರಗೊಂಡಿತು. ವಜ್ರಯಾನವು ಬಂಗಾಳ ಪ್ರಾಂತ್ಯದಲ್ಲಿ ಹುಟ್ಟಿ ನಂತರ ಪದ್ಮಸಂಭವ ಎಂಬುವನಿಂದ ಹಿಮಾಲಯದ ಸುತ್ತಮುತ್ತಲ ಪ್ರದೇಶಗಳಲ್ಲಿ ಹಾಗೂ ಟಿಬೆಟ್ ನಲ್ಲಿ ಜನಪ್ರಿಯಗೊಂಡಿತು.  ನಂತರ ಅದು ಹೊರದೇಶಗಳಿಗೂ ಹಬ್ಬಿತು. ಭಾರತದಲ್ಲೂ ಪ್ರಚಲಿತದಲ್ಲಿದ್ದ ಈ ಪಂಥವು ಕ್ರಿ.ಶ.೧೩ನೇ ಶತಮಾನದ ಸುಮಾರಿನಲ್ಲಿ ಭಾರತದಿಂದ ಕಣ್ಮರೆಯಾಯಿತು. ಆದರೂ ವಜ್ರಯಾನವು ತಾನು ಪಸರಿಸಿದ್ದ ಭೂಭಾಗಗಳಲ್ಲಿ ತನ್ನ ವಿಶಿಷ್ಟ ಶಿಲ್ಪಕಲೆಗಳ ಮೂಲಕ ತನ್ನ ಅಸ್ತಿತ್ವಕ್ಕೆ ಕುರುಹುಗಳನ್ನು ಉಳಿಸಿಹೋಗಿದೆ.

ಹೀನಯಾನ ಹಾಗೂ ವಜ್ರಯಾನದ ಪ್ರಮುಖ ವ್ಯತ್ಯಾಸವೆಂದರೆ ಪೂಜಾ ಸಂಸ್ಕೃತಿ. ಹೀನಯಾನದಲ್ಲಿ ಮುಕ್ತಿಗೆ ಮಾರ್ಗವೆಂದರೆ ಧ್ಯಾನ ಮಾತ್ರಾ. ಆದರೆ ವಜ್ರಯಾನದ ಮುಕ್ತಿಮಾರ್ಗದಲ್ಲಿ ಪೂಜೆಗೇ ಪ್ರಾಮುಖ್ಯತೆ. ಹಾಗಾಗೆ ವಜ್ರಯಾನದಲ್ಲಿ ಪೂಜೆಗಾಗಿ ವಿಗ್ರಹಗಳ ಕಲ್ಪನೆಯಿದೆ ಹಾಗೂ ಪೂಜಾಕ್ರಮಗಳೂ ಇವೆ. ವಜ್ರಯಾನ ಪಂಥದ ಆರಾಧಕರು ತಮ್ಮ ಕಲ್ಪನೆಗಳಿಗನುಗುಣವಾಗಿ ಸಾವಿರಾರು ದೇವತಾಬಿಂಬಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಅವುಗಳಲ್ಲಿ ಎಲ್ಲ ಅಲ್ಲವಾದರೂ ಕೆಲವು ನೂರು ದೇವತೆಗಳಿಗಾದರೂ ಪೂಜೆ ಸಲ್ಲುತ್ತದೆ. ಅಂತಹ ಮೂರ್ತಿಗಳಲ್ಲಿ ಅವಲೋಕಿತೇಶ್ವರನ ಕಲ್ಪನೆಯು ಬಹಳ ಜನಪ್ರಿಯವಾದುದು.

ಅವಲೋಕಿತೇಶ್ವರನ ಬಗ್ಗೆ ತಿಳಿಯುವ ಮೊದಲು ಅವಲೋಕಿತೇಶ್ವರ ಹಾಗೂ ಅದರಂತಹ ಸಾವಿರಾರು ದೇವತೆಗಳ ಕಲ್ಪನೆ ಅಂಕುರಗೊಂಡ ಬಗ್ಗೆ ತಿಳಿಯಬೇಕಾಗುತ್ತದೆ.

ಈ ಹಿಂದೆ ಹೇಳಿದಂತೆ ವಜ್ರಯಾನದ ಪರಂಪರೆಯು ಹೀನಯಾನಕ್ಕಿಂತ ಬೇರೆಯಾದುದುದು. ಮೂರ್ತಿಪೂಜೆ ಈ ಕವಲಿನ ಬಹು ಮುಖ್ಯ ಅಂಶ. ಅದುವರೆಗೆ ಹೀನಯಾನವು ಹೇಳುತ್ತಿದ್ದಂತೆ ಧ್ಯಾನವೇ ಮುಕ್ತಿಗೆ ಮಾರ್ಗ ಎನ್ನುವುದು ಬದಲಾಗಿ ಪೂಜೆಯೇ ಮುಕ್ತಿಯ ಸಾಧನ ಎಂದಾಯಿತು. ವಿಗ್ರಹಾರಾಧನೆ ವಜ್ರಯಾನದ ಮುಖ್ಯ ಕೊಡುಗೆ. ಆ ಕಾಲದ ತಾಂತ್ರಿಕ ಉಪಾಸಕರಿಂದ ಪ್ರಭಾವಿತವಾದ ವಜ್ರಯಾನ ವಿಗ್ರಹಾರಾಧನೆಯನ್ನು ವೈಭವೀಕರಿಸಿತು.ಬೌದ್ಧ ಧರ್ಮದ ಮೇಲಾದ ಶೈವಧರ್ಮದ ಅಥವಾ ಇನ್ನೂ ನಿಖರವಾಗಿ ಹೇಳಾಬೇಕೆಂದರೆ, ತಾಂತ್ರಿಕ ಶೈವ ಧರ್ಮದ ಪ್ರಭಾವದಿಂದ ಅನೇಕ ದೇವತೆಗಳೂ ರೂಪುಗೊಂಡರು. ಹಾಗಾದರೆ ಹೊಸದಾಗಿ ಹುಟ್ಟಿಕೊಂಡ ವಜ್ರಯಾನದ ಈ ದೇವತೆಗಳೆಲ್ಲ ಯಾರು? ಕನ್ನಡದ ಶ್ರೇಷ್ಟ ವಿದ್ವಾಂಸರಾದ ಎಂ.ಗೋವಿಂದ ಪೈ ಅವರು ಹೇಳುವಂತೆ “ಇವೆಲ್ಲ ಭೋಧಿಸತ್ವರ ವಿಗ್ರಹಗಳು. ಭೋಧಿಸತ್ವ್ವರೆಂದರೆ ಸ್ವತಃ ಬುದ್ಧರಲ್ಲ. ಬುದ್ಧನ ಅಂಶವಿರುವವರು ಹಾಗೂ ಮುಂದೆ ಬುದ್ಧರಾಗಬಲ್ಲ ಮಹಾಗುಣಗಳಿರುವವರು.”

೧) ಅವಲೋಕಿತೇಶ್ವರನ ಮುಖಭಾವ, ೨) ಸಿಂಹನಾದ ಅವಲೋಕಿತೇಶ್ವರನ ಕೆತ್ತನೆಗೆ ಮೊದಲು ಮಾಡಿಕೊಂಡ ರೇಖಾಚಿತ್ರ

ವಜ್ರಯಾನದಲ್ಲಿ ಒಂದರಹಿಂದೊಂದರಂತೆ ಬೆಳೆದ ಮೂರ್ತಿಗಳ ಕಲ್ಪನೆಗೆ ಮೂಲ ಆದಿಬುದ್ಧ. ಅಲ್ಲಿಂದ ಮುಂದೆ ಆಕ್ಷೋಭ್ಯ, ರತ್ನಸಂಭವ, ವೈರೋಚನ, ಅಮಿತಾಭ, ಅಮೋಘಸಿದ್ಧಿ ಎಂಬ ಐವರು ಧ್ಯಾನಿಬುದ್ಧರು ಉಧ್ಭವಿಸಿದರು. ಅವರಿಂದಾಗಿ ಸಾವಿರಾರು ಬೋಧಿಸತ್ವರು. ಈ ಐವರು ಧ್ಯಾನಿಬುದ್ಧರಿಗೆ ಸೇರಿದಂತೆ ನಿಶ್ಚಿತ ಗುಂಪುಗಳಿವೆ. ಬೋಧಿಸತ್ವರ ವಿಗ್ರಹಗಳು ಯಾವ ಧ್ಯಾನಿಬುದ್ಧರ ಕುಲಕ್ಕೆ ಸೇರಿವೆಯೋ ಆ ಕುಲದ ಧ್ಯಾನಿಬುದ್ಧನ ಚಿಕ್ಕ ವಿಗ್ರಹವೊಂದು ಆ ವಿಗ್ರಹದ ಶಿರೋಭಾಗದಲ್ಲಿರುತ್ತದೆ. ವಜ್ರಯಾನದ ಹಾದಿಯಲ್ಲಿ ಒಂದರ ಹಿಂದೊಂದರಂತೆ ಅವರವರ ಭಾವಕ್ಕೆ ತಕ್ಕಂತೆ ಬೆಳೆದ ಮೂರ್ತಿಗಳ ಕಲ್ಪನೆಯಲ್ಲಿ ಉಂಟಾದ ದೇವತೆಗಳ ಸಂಖ್ಯೆ ಏಳೆಂಟು ಸಾವಿರದಷ್ಟಾಯಿತಂತೆ. “ಇವರಲ್ಲಿ ನಿಜಕ್ಕೂ ಬದುಕಿದ್ದು ತಮ್ಮ ಬದುಕಿನ ರೀತಿಯಿಂದ ದೈವತ್ವಕ್ಕೇರಿದವರು ಹಲವರಾದರೆ ಉಳಿದ ಹೆಚ್ಚಿನ ರೂಪಗಳು ವಜ್ರಯಾನದ ಯೋಗಿಗಳು ತಮ್ಮ ಸಾಧನೆಯ ಹಾದಿಯಲ್ಲಿ ಕಲ್ಪಿಸಿಕೊಂಡ ಮೂರ್ತಿಗಳು” ಎಂದು ಪ್ರೊ.ಎಸ್.ಕೆ.ರಾಮಚಂದ್ರ ರಾವ್ ಅಭಿಪ್ರಾಯಪಡುತ್ತಾರೆ. ಇಂತಹ ದೇವತೆಗಳಲ್ಲಿ ಅವಲೋಕಿತೇಶ್ವರ, ಮಂಜುಶ್ರೀ, ಕುರುಕುಲ್ಲಾ, ವಜ್ರಸತ್ವ ವಜ್ರಪಾಣಿ, ಅಪರಾಜಿತಾ, ಚಾಮುಂಡಾ, ಉಗ್ರತಾರಾ, ಮೈತ್ರೇಯ ಇತ್ಯಾದಿ ಹೆಚ್ಚು ಪ್ರಚಾರದಲ್ಲಿದ್ದರೂ ಅವುಗಳ ಪೈಕಿ ಅವಲೋಕಿತೇಶ್ವರ ಹೆಚ್ಚು ಜನಪ್ರಿಯ!

ಏಕೆ ಜನಪ್ರಿಯ.

ಐವರು ಧ್ಯಾನಿಬುದ್ಧರಿಂದ ಹುಟ್ಟಿದ ಸಾವಿರಾರು ಬೋಧಿಸತ್ವರಲ್ಲಿ ಅವಲೋಕಿತೇಶ್ವರನೇ ಯಾಕೆ ಹೆಚ್ಚು ಜನಪ್ರಿಯ ಎಂಬುದಕ್ಕೆ ಉತ್ತರ ಸುಲಭ. ಬೇರೆಲ್ಲ ಮೂರ್ತಿಗಳಿಗಿಂತ ಈತ ಶಾಂತ, ಸೌಮ್ಯ, ಕರುಣಾಮಯಿ. ವಜ್ರಯಾನದ ಶಿಲ್ಪಗಳಲ್ಲೇ ಈತನದು ಸುಂದರ ಕಲ್ಪನೆ. ಜನರ ನೋವು ನಿವಾರಿಸಿ ಅವರಿಗೆ ಮುಕ್ತಿಮಾರ್ಗ ತೋರಿಸಲೆಂದೇ ಹುಟ್ಟಿದವನು. ಮುಂದೆ ಸ್ವತಃ ಬುದ್ಧನಾಗಬಲ್ಲವನಾದರೂ ಜಗದ ನೋವೆಲ್ಲಾ ಪರಿಹಾರವಾಗುವವರೆಗೂ ತನ್ನ ನಿರ್ವಾಣವನ್ನೇ ಮುಂದೂಡುತ್ತಿರುವವನು. ಜನರ ಭಾವನೆಗಳಿಗನುಸಾರವಾಗಿ ರೂಪಧಾರಣ ಮಾಡುತ್ತಾನಾದ್ದರಿಂದ ಜನರಿಗೆ ಹೆಚ್ಚು ಹತ್ತಿರ ಮತ್ತು ಹೆಚ್ಚು ಜನಪ್ರಿಯ. ಅವಲೋಕಿತ ಎಂದರೆ ಸದಾ ಕೆಳಗೆ ನೋಡುವವನು ಎಂದರ್ಥ. ಅವಲೋಕಿತೇಶ್ವರನಿಗೆ ಹೆಚ್ಚು ಮಾನ್ಯತೆ ಇರುವ ಟಿಬೆಟ್ಟಿನಲ್ಲಿ ಈತನಿಗೆ ಇರುವ ಹೆಸರು ಚೆನ್ರೆಜ಼ಿಗ್(chenrezig) ಎಂದು. ಅದರ ಅರ್ಥವೂ ಕೆಳಗೆ ನೋಡುವವನು ಎಂದೇ. ವಜ್ರಯಾನದ ಸಾವಿರಾರು ದೇವತೆಗಳಲ್ಲಿ ಅವಲೋಕಿತೇಶ್ವರ ಒಬ್ಬನಾದರೂ ಭಕ್ತರ-ಆರಾಧಕರ ಭಾವನೆಗಳಿಗೆ ತಕ್ಕುದಾದ ರೂಪಧಾರಣ ಮಾಡುವ ಕಾರಣ ಸ್ವತಃ ಅವಲೋಕಿತೇಶ್ವರನಿಗೆ ನೂರೆಂಟು ಅಕಾರಗಳಿವೆ.

೩) ಪದ್ಮಪಾಣಿ ಅವಲೋಕಿತೇಶ್ವರನ ಕೆತ್ತನೆಗೆ ಮೊದಲು ಮಾಡಿಕೊಂಡ ರೇಖಾಚಿತ್ರ, ೪) ವಜ್ರಯಾನದ ಗುರು ಪದ್ಮಸಂಭವ

ಕೋಟ್ಯಾಂತರ ದೀನರ ಮೊರೆ ಕೇಳಲು ಹಾಗೂ ಸಂತೈಸಲು ಎರಡು ಕಿವಿ, ಎರಡು ಕಣ್ಣು, ಎರಡು ಕೈಸಾಲದೆಂದು ಹನ್ನೊಂದು ತಲೆ ಹಾಗೂ ಸಾವಿರ ಕೈಗಳಿರುವ ಅವಲೋಕಿತೇಶ್ವರ ಟಿಬೆಟ್ಟಿನಲ್ಲಿ ಮತ್ತು ಚೀನಾದಲ್ಲಿ ಜನಪ್ರಿಯ. ಪದ್ಮಾಸನದಲ್ಲಿರುವ ಅಥವಾ ನಿಂತ ಭಂಗಿಯಲ್ಲಿರುವ ಮೂರ್ತಿಗಳು ಭಾರತದಲ್ಲಿ ಜನಪ್ರಿಯ. ಜೊತೆಗೆ ಸಿಂಹವಾಹನನಾಗಿ ಹುಲಿಯ ಚರ್ಮ ಧರಿಸಿ, ತ್ರಿಶೂಲಪಾಣಿಯಾಗಿ ಕಾಣಿಸಿಕೊಳ್ಳುವ ಸಿಂಹನಾದ ಅವಲೋಕಿತೇಶ್ವರ ಸಹಾ ಭಾರತದಲ್ಲಿ ಜನಪ್ರಿಯನಾಗಿದ್ದ.  ಧರ್ಮಪಾಲ, ಪದ್ಮಪಾಣಿ, ತ್ರಿಲೋಕೇಶ್ವರ,ಸರ್ವಶೋಕತಮೋನಿರ್ಘಾತ, ಮೊಜಂಗಾಬಲ, ಅಮೋಘಪಾಶ, ಖಸರ್ಪಣ ಎಂಬುವವು ಇನ್ನಿತರ ರೂಪಗಳು. ಹಿಂದೂ ದೇವತೆಗಳಿಗಿಂತ ಶ್ರೇಷ್ಟ ಎಂಬ ಭಾವನೆಯಲ್ಲಿ ವಿಷ್ಣುವನ್ನೇರಿಕುಳಿತ “ಹರಿಹರಿಹರಿವಾಹನೋಧ್ಬವ ಅವಲೋಕಿತೇಶ್ವರ” ಎಂಬ ವಿಶಿಷ್ಟ ಕಲ್ಪನೆಯ ಬಗ್ಗೆ ಪ್ರೊ.ಎಸ್.ಕೆ.ರಾಮಚಂದ್ರರಾವ್ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ. ಈತನ ಜನಪ್ರಿಯವಾದ ಶಾಂತರೂಪಗಳಲ್ಲದೆ ರಕ್ತಲೋಕೇಶ್ವರ, ಪ್ರೀತಸಂಪ್ರೀತ, ಮಾಯಾಜಾಲ ಇತ್ಯಾದಿ ಉಗ್ರರೂಪಗಳೂ ಇವೆಯಂತೆ! ಉತ್ತಮರನ್ನು ಸನ್ಮಾರ್ಗದೆಡೆಗೊಯ್ಯಲು ಸೌಮ್ಯರೂಪ, ಸದ್ಭೋದನೆಯಿಂದ ದಾರಿಗೆ ಬಾರದವರನ್ನು ಬೆದರಿಸಿಯಾದರೂ ದಾರಿಗೆ ತರಲು ಉಗ್ರರೂಪ! ಇದು ಆತನಿಗಿರುವ ಸೌಮ್ಯ ಹಾಗೂ ಉಗ್ರ ರೂಪಗಳಿಗೆ ವಿದ್ವಾಂಸರು ಕೊಡುವ ಸಮರ್ಥನೆ. ಇವುಗಳ ಜೊತೆಗೆ ಚೀನ, ಕೊರಿಯ ಮೊದಲಾದೆಡೆ ಗ್ವಾನ್ಯಿನ್ ಹೆಸರಿನ ಸ್ತ್ರೀರೂಪಿ ಅವಲೋಕಿತೇಶ್ವರನ ವಿಗ್ರಹಗಳೂ ಇವೆಯಂತೆ.

ಅವಲೋಕಿತೇಶ್ವರನ ಬಣ್ನ ಬಿಳಿ. ಚಿತ್ರಮಾಧ್ಯಮದಲ್ಲಿ ಶ್ವೇತವರ್ಣನಾಗಿ ಕಾಣಿಸಿಕೊಂಡರೂ ಇತರೆ ಮಾಧ್ಯಮ ಗಳಾದ ಲೋಹ, ಶಿಲೆ, ಟೆರ್ರಾಕೋಟಾ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವಾಗ ಆತನ ವರ್ಣವು ಆಯಾ ಮಾಧ್ಯಮದ ಬಣ್ಣವನ್ನವಲಂಬಿಸಿರುತ್ತದೆ. ಅವಲೋಕಿತೇಶ್ವರನ ವಿಗ್ರಹಗಳನ್ನಿರಿಸಿಕೊಳ್ಳುವುದು ಶುಭ ಎಂಬ ನಂಬಿಕೆಯಿರುವುದರಿಂದ ಆತನ ವಿವಿಧ ರೂಪದ ವಿಗ್ರಹಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಹಾಗಾಗಿ ವಿವಿಧ ರೀತಿಯ ಅವಲೋಕಿತೇಶ್ವರನ ವಿಗ್ರಹಗಳನ್ನು ತಯಾರಿಸಿ ಮಾರುವ ಹಲವಾರು ಕಂಪೆನಿಗಳೂ ಅವುಗಳಿಗಾಗೇ ವಿಶೇಷ ವೆಬ್‌ಸೈಟ್‌ಗಳೂ ಇವೆ.

ಅವಲೋಕಿತೇಶ್ವರನ ಕನ್ನಡದ ನಂಟು

ಹಿಂದೆ ಕರ್ನಾಟಕ ಹಾಗೂ ಅದರ ಅಕ್ಕಪಕ್ಕದ ಗೋವಾ ಮತ್ತು ಕೇರಳಗಳಲ್ಲಿ ಬೌದ್ಧಮತದ ಅಸ್ಥಿತ್ವ ಪ್ರಭಲವಾಗಿಯೇ ಇತ್ತು. ಕಳಿಂಗ ಯುಧ್ಧಾನಂತರ ಅಶೋಕನು ಬೌದ್ಧಧರ್ಮ ಪ್ರಸಾರಕ್ಕೆ ಭಾರತದಾದ್ಯಂತ ಹಲವಾರು ಭಿಕ್ಷುಗಳನ್ನು ನಿಯೋಜಿಸಿದ್ದ. ಆ ಸಮಯದಲ್ಲೇ ರಕ್ಷಿತನೆಂಬ  ಬೌದ್ಧಬಿಕ್ಷುವನ್ನು ಕರ್ನಾಟಕ ಪ್ರಾಂತ್ಯಕ್ಕೂ ಕಳಿಸಲಾಗಿತ್ತು. ಅವನ ಬೋಧನೆಯಿಂದಾಗಿ ಈ ಭಾಗದ ಲಕ್ಷಾಂತರಜನ ಬೌದ್ಧಧರ್ಮವನ್ನು ಸ್ವೀಕರಿಸಿದ್ದಲ್ಲದೆ ಸಾವಿರಾರು ಜನರು ಪರಿತ್ಯಾಗಿಗಳಾಗಿ ಭಿಕ್ಷುಗಳೂ ಆಗಿದ್ದರು. ಅವರಿಗಾಗಿ ಹಲವಾರು ಬೌದ್ಧವಿಹಾರಗಳೂ ಇಲ್ಲಿನಿರ್ಮಾಣವಾಗಿದ್ದವು. ಇದಲ್ಲದೆ ಕರ್ನಾಟಕದ ಗೋಕರ್ಣ, ಬನವಾಸಿ, ಅಂಕೋಲ, ಮೂಡಬಿದರೆ, ಕಾಪು, ಮಂಗಳೂರು ಇಲ್ಲೆಲ್ಲಾ ಬುದ್ಧನ ವಿಗ್ರಹಗಳು ದೊರೆತಿವೆ. ಅವುಗಳಲ್ಲಿ ಅವಲೋಕಿತೇಶ್ವರನ ಬಿಂಬಗಳೂ ಇವೆ. ತುಳುನಾಡಿನ ಪಕ್ಕದಲ್ಲಿದ್ದ, ಈಗ ಕೇರಳದಲ್ಲಿರುವ ಪರ್ವತವೊಂದು ಅವಲೋಕಿತೇಶ್ವರನ ನೆಲೆಯೆಂದೇ ಪ್ರಸಿದ್ಧವಾಗಿದೆ. ಮಂಗಳೂರಿನ ಕದಿರೆ ದೇವಾಲಯದಲ್ಲಿರುವ ಪಂಚಲೋಹದ ಅವಲೋಕಿತೇಶ್ವರನ ಮೂರ್ತಿಯಂತೂ ದಕ್ಷಿಣಭಾರತದಲ್ಲೇ ಅತ್ಯಂತ ಸುಂದರವಾದ ಲೋಹ ಮಾಧ್ಯಮದ  ಪ್ರಾಚೀನ ಮೂರ್ತಿಯೆಂದು ಪ್ರಖ್ಯಾತವಾಗಿದೆ.

ಕದಿರೆ ಎಂದೇ ಹೆಸರಾಗಿದ್ದ ಮಂಗಳೂರಿನ ಕದ್ರಿಯು ಬೌದ್ಧರ ವಿಹಾರವಾಗಿತ್ತಂತೆ. (ಅದಕ್ಕೆ ಸಾಕ್ಷಿಯಾಗಿ ಈಗಲೂ ಕದಿರೆಯು ನಾಥಪಂಥದವರ ಪ್ರಮುಖ ಸ್ಥಾನವಾಗಿದೆ) ಕದಿರೆಯು ಬೌದ್ಧರ ಪ್ರಮುಖ ಸ್ಥಳವಾಗಿತ್ತೆಂಬುದರ ನೆನಪಿಗೆ ಉಳಿದಿರುವ ಸಾಕ್ಷಿಗಳಲ್ಲಿ ಈ ಅವಲೋಕಿತೇಶ್ವರನ ಪಂಚಲೋಹದ ಮೂರ್ತಿಯೂ ಒಂದು. ಧ್ಯಾನಭಂಗಿ, ಹಿತಮಿತವಾದ ಆಭರಣ, ಜನಿವಾರ, ಮೂರು ಮುಖಗಳು,ಆರು ಕೈಗಳು, ಎರಡು ಕೈನಲ್ಲಿ ಕಮಲದ ಮೊಗ್ಗುಗಳು, ವರದ ಹಾಗೂ ವ್ಯಾಖ್ಯಾನ ಮುದ್ರೆಯ ಹಸ್ತಗಳು ಎಲ್ಲಕ್ಕಿಂತ ಮುಖ್ಯವಾಗಿ ಶಿರದಲ್ಲಿರುವ ಆತನ ಆಧ್ಯಾತ್ಮಿಕ ಗುರು ಅಮಿತಾಭನ ಚಿಕ್ಕ ಮೂರ್ತಿ ಇವು ಕದಿರೆ ಅವಲೋಕಿತೇಶ್ವರನ ವಿವರಗಳು. ತಂಜಾವೂರಿನ ಶೈಲಿಯಲ್ಲಿ ರಚಿತವಾಗಿರುವ ಈ ಸುಂದರ ಪಂಚಲೋಹದ ವಿಗ್ರಹವನ್ನು ತುಳುವಂಶದ ರಾಜ ಕುಂದವರ್ಮನೆಂಬುವವನು ಕ್ರಿ.ಶ.೧೦೬೮ ರಲ್ಲಿ ಪ್ರತಿಷ್ಠಾಪಿಸಿದನೆಂದು ಸಂಶೋಧಕ-ಲೇಖಕರಾಗಿದ್ದ ಎಂ.ಗೋವಿಂದ ಪೈ ಅವರು ತಮ್ಮ “ತುಳುನಾಡು ಪೂರ್ವ ಸ್ಮೃತಿ”ಯಲ್ಲಿ ನಿರೂಪಿಸಿದ್ದಾರೆ.

೫) ಡಾ.ರಂಜಾಳ ಗೋಪಾಲ ಶೆಣೈ ಕೆತ್ತಿದ ಪ್ರಸಿದ್ಧ ವಿಗ್ರಹ, ೬) ಕದಿರೆ(ಮಂಗಳೂರು)ಯಲ್ಲಿನ ೧೦ನೇ ಶತಮಾನದ ಪಂಚಲೋಹದ ವಿಗ್ರಹ, ೭) ದೇವಲಕುಂದ ವಾದಿರಾಜರು ಕೆತ್ತಿದ ಪದ್ಮಪಾಣಿ ಅವಲೋಕಿತೇಶ್ವರ

ಇದರ ಜೊತೆಗೆ ಕರ್ನಾಟಕದಲ್ಲಿ ಅಲ್ಲಲ್ಲಿ ಅವ್ಲೋಕಿತೇಶ್ವರನ ಕುರುಹುಗಳು ಕಾಣುತ್ತವೆ. ಹೀಗೆ ಅವಲೋಕಿತೇಶ್ವರನ ಪ್ರಭಾವವು ಅಲ್ಲಲ್ಲಿ ಕಂಡುಬರುವುದರಿಂದ, ಅವಲೋಕಿತೇಶ್ವರನು ನಮ್ಮವನೆಂಬ ಭಾವನೆಯು ನವಿರಾಗಿ ಇರುವುದರಿಂದ ಕರ್ನಾಟಕದ ಕೆಲವು ಶಿಲ್ಪಿಗಳು ಅವಲೋಕಿತೇಶ್ವರನ ವಿಗ್ರಹಗಳ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ಶಿಲ್ಪ್ಪಿಗಳಲ್ಲಿ ಮಾನ್ಯ ದೇವಲಕುಂದ ವಾದಿರಾಜ ಹಾಗೂ ಕಾರ್ಕಳದ ಮಾಸ್ಟರ್ ಕ್ರಾಫ಼್ಟ್ಸ್‌ಮನ್ ಡಾ.ರಂಜಾಳ ಗೋಪಾಲ ಶೆಣೈ ಅವರ ಕೆತ್ತನೆಗಳು ಪ್ರಮುಖವಾಗಿ ಕಾಣುತ್ತವೆ.

ಶಿಲ್ಪಿ ದೇವಲಕುಂದ ವಾದಿರಾಜರು ಹಲವಾರು ಭಂಗಿಯ ಅವಲೋಕಿತೇಶ್ವರನನ್ನು ಶಿಲಾಮಾಧ್ಯಮದಲ್ಲಿ ಕೆತ್ತಿದ್ದಾರೆ .ಅವುಗಳಲ್ಲಿ ಸಿಂಹನಾದ ಅವಲೋಕಿತೇಶ್ವರ ಎಂಬುದೊಂದು ಪ್ರಸಿದ್ಧ ಶಿಲ್ಪ. ಪದ್ಮಪಾಣಿಯಾಗಿ ಹಾಗೂ ಸರ್ಪ ಸಹಿತ ತ್ರಿಶೂಲಗಳನ್ನೊಳಗೊಂಡು, ತೆಳುವಸ್ತ್ರ ಮತ್ತು ಜನಿವಾರ ಧರಿಸಿ ಸೌಮ್ಯಮುಖಭಾವದಿಂದ ಕೆಳಗೆ ನೋಡುತ್ತಾ ಸಿಂಹದಮೇಲೆ ಮಹಾರಾಜನಂತೆ ಕುಳಿತಿರುವ ಭಂಗಿಯ ಈ ವಿಗ್ರಹವು ಅತ್ಯಂತ ಸುಂದರವಾಗಿದೆ. ಇದಲ್ಲದೆ ದೇವಲಕುಂದ ವಾದಿರಾಜರು ಕೆತ್ತಿರುವ ಹಲವಾರು ಅವಲೋಕಿತೇಶ್ವರನ ವಿಗ್ರಹಗಳು ಜಪಾನ್ ಮತ್ತು ಚೀನಾಗಳಲ್ಲಿಸ್ಥಾಪಿತವಾಗಿವೆ.

ಕಾರ್ಕಳದ ಮಾಸ್ಟರ್ ಕ್ರಾಫ಼್ಟ್ಸ್‌ಮನ್ ಎಂದೇ ಹೆಸರಾಗಿದ್ದ ಶಿಲ್ಪಿ ಡಾ.ರಂಜಾಳ ಗೋಪಾಲ ಶೆಣೈಯವರು ಕೆತ್ತಿರುವ ಅವಲೋಕಿತೇಶ್ವರನ ಬೃಹತ್ ವಿಗ್ರಹವಂತೂ ಅಪೂರ್ವವಾದುದು. ೬೭ ಅಡಿ ಎತ್ತರದ, ನಿಂತಿರುವ ಭಂಗಿಯ, ಬಿಳಿಯ ವಸ್ತ್ರ ಧರಿಸಿ, ಹಿತಮಿತವಾದ ಆಭರಣಗಳಿಂದ ಅಲಂಕೃತನಾಗಿ ಅರ್ಧನಿಮೀಲಿತ ನೇತ್ರಗಳಿಂದ ಕೆಳಗೆ ನೋಡುತ್ತಿರುವ ಹಾಗೂ ಶಿರದಲ್ಲಿ ಧ್ಯಾನಿಬುದ್ಧ ಅಮಿತಾಭನ ಚಿಕಣಿ ವಿಗ್ರಹವಿರುವ ಅವಲೋಕಿತೇಶ್ವರನ ವಿಗ್ರಹವು ತುಂಬಾ ಸುಂದರವಾದುದು. ಕಾರ್ಕಳದಲ್ಲಿ ಸಿಗುವ ಗ್ರಾನೈಟ್ ಶಿಲೆಯಲ್ಲಿ ಸುಮಾರು ನಾಲ್ಕೂವರೆ ವರ್ಷಗಳ ಕಾಲ ನಿರಂತರವಾಗಿ ಕಟೆದು ನಿರ್ಮಿಸಿದ ಈ ಅಪರೂಪದ ವಿಗ್ರಹವು ಈಗ ಜಪಾನ್‌ನಲ್ಲಿನ ನಾರಾ ಜಿಲ್ಲೆಯ ತಕಾತೋರಿಚೋಕ್ ಎಂಬ ಊರಿನಲ್ಲಿರುವ ತ್ಸುಬೋತ್ಸಕಾ ಎಂಬ ಬೌದ್ಧ ದೇವಾಲಯದಲ್ಲಿ ಸ್ಥಾಪಿತಗೊಂಡಿದೆ. ಡಾ.ರಂಜಾಳ ಗೋಪಾಲ ಶೆಣೈ ಹಾಗೂ ಅವರ ಮೊಮ್ಮಗ ಶಿಲ್ಪಿ ರಾಧಾಮಾಧವ ಶೆಣೈ ಅವರು ತಮ್ಮ ಭುವನೇಂದ್ರ ಶಿಲ್ಪಶಾಲೆಯಲ್ಲಿ ನಿರ್ಮಿಸಿದ ನಾಲ್ಕು ಸಾವಿರಕ್ಕೂ ಹೆಚ್ಚು ಬುದ್ಧನ ವಿಗ್ರಹಗಳು ವಿದೇಶಗಳಿಗೆ ರಫ಼್ತಾಗಿವೆ!

ಜಪಾನ್, ಕೊರಿಯ, ಚೀನಾ. . . ಹೀಗೆ ಬೌದ್ಧಧರ್ಮ ಪ್ರಧಾನವಾಗಿರುವ ಯಾವುದೇ ದೇಶವಾದರೂ ಬುದ್ಧನ  ವಿಗ್ರಹಗಳು ಬೇಕಾದಾಗ ನೋಡುವುದು ಕರ್ನಾಟಕದ ಶಿಲ್ಪಿಗಳ ಕಡೆಗೆ! ಹಾಗಾಗೇ ಕರ್ನಾಟಕದ ಶಿಲ್ಪಿಗಳು ಕಡೆದ ಸಾವಿರಾರು ಶಿಲ್ಪಗಳು ಆ ದೇಶಗಳ ಬೌದ್ಧಾಲಯಗಳಲ್ಲಿ ಸ್ಠಾಪಿತವಾಗಿವೆ. ಬೌದ್ಧಧರ್ಮ ವಿದೇಶಗಳಿಗೆ ರಫ಼್ತಾದದ್ದು ಭಾರತದಿಂದಲೇ.ಹಾಗೇ ವಿದೇಶಗಳಿಗೆ ಬುದ್ಧನ ವಿಗ್ರಹಗಳು ರಫ಼್ತಾಗುವುದೂ ಸಹಾ ಭಾರತದಿಂದಲೇ ಎಂಬ ಹಿರಿಯರೊಬ್ಬರ ಮಾತು ಇಲ್ಲಿ ಉಲ್ಲೇಖಾರ್ಹ ಅನ್ನಿಸುತ್ತದೆ.

(ಚಿತ್ರಗಳು: ಯಜ್ಞ-ಮಂಗಳೂರು, ಶಿಲ್ಪಿರಾಧಾಮಾಧವ ಶೆಣೈ ಸಂಗ್ರಹ, ಶಿಲ್ಪಿ ಗಣೇಶ ಭಟ್ಟರ ಸಂಗ್ರಹ ಮತ್ತು ಕೇಶವಕುಡ್ಲ)