* * *

ತಗಣಿಗಳು ಮೈಯ ಮೇಲೆ ಹರಿದು ಕಚ್ಚಿದಾಗ ಆಶ್ಚರ್ಯವಾಗಲಿಲ್ಲ. ಮೈಯನ್ನು ಉಜ್ಜಿಕೊಳ್ಳುತ್ತ ಸಿಮೆಂಟ್‌ನ ಮಂಚದ ಮೇಲೆ ಕೂತ ಈ ತಗಣಿಗಳಿಂದಾದರೂ ಮೈಯ ಎಚ್ಚರ ಉಳಿಯುತ್ತದಲ್ಲ. ಊರಿನ ಹವಾಕ್ಕೆ ಒಗ್ಗಿರುವುದರಿಂದಲೋ ಏನೋ ಮೈ ಅಷ್ಟೇನೂ ಬೆವರುತ್ತಿಲ್ಲ. ಹಾಗೇ ಕೂತಿದ್ದಂತೆ ಕಣ್ಣುಗಳು ಬಾಡಿದವು. ಯಾರಾದರೂ ಥಟ್ಟನೆ ಎಬ್ಬಿಸಿ ಬಿಡುತ್ತಾರೆಂದು ದಿಗಿಲುಪಡುತ್ತ, ಅಷ್ಟರೊಳಗೆ ದೇಹಕ್ಕೆ ಬೇಕಾದ ನಿದ್ದೆಯನ್ನೆಲ್ಲ ಪಡೆದುಬಿಡಬೇಕೆಂದು ಏಕಾಗ್ರನಾಗುತ್ತ, ಕಣ್ಣುಗಳನ್ನು ಮುಚ್ಚಿ ಗೋಡೆಗೆ ಒರಗಿದ. ತಗಣಿಗಳು ಇವೆ. ಅವು ಕಚ್ಚುತ್ತಲೇ ಇರುತ್ತವೆ, ಇದು ಅನಿವಾರ್ಯ ಎಂದು ತಿಳಿಯಲು ಯತ್ನಿಸುತ್ತಿದ್ದಂತೆ ಕೃಷ್ಣಪ್ಪನಿಗೆ ಗಾಢವಾದ ನಿದ್ದೆ ಬಂತು.

ಎಚ್ಚರಾದಾಗ ಇದು ಅದೇ ದಿನವೋ, ಮೂರನೇ ದಿನವೋ, ಹಗಲೋ, ರಾತ್ರೆಯೋ ತಿಳಿಯದೇ ಕಸಿವಿಸಿಯಾಯಿತು. ಮೂಗಿನ ಎರಡು ಸೊಳ್ಳೆಗಳಿಗೂ ಮೂಗು ಬಟ್ಟಿಟ್ಟುಕೊಂಡು, ತಲೆಗೆ ಸಣ್ಣದೊಂದು ಗಂಟುಹಾಕಿ ಅದರಲ್ಲಿ ಸಂಪಿಗೆ ಮುಡಿದುಕೊಂಡು’ಮಡಿ ದೂರವಿರು’ ಎನ್ನುತ್ತ ತನಗೆ ದೂರದಿಂದ ಕೋಡಬಳೆ ಎಸೆಯುತ್ತಿದ್ದ ರುಕ್ಮಿಣಿಯಮ್ಮನ ನೆನಪಾಗಿ ಅವರ ಜೊತೆ ನಡೆದ ನಗಬಲ್ಲಂಥ ಯಾವುದಾದರೊಂದು ಘಟನೆಗಾಗಿ ಹುಡುಕುತ್ತ ಕೂತ. ಅವನು ಯೋಚಿಸಲು ಇಚ್ಚೆಪಡದೇ ಇದ್ದುದೊಂದು ನೆನಪಾಗಿ ಅವನನ್ನು ಕಾಡಿತು.

ಕೃಷ್ಣಪ್ಪ ಹೊಟ್ಟೆಯಲ್ಲಿರುವಾಗಲೇ ಅವನ ಅಪ್ಪ ಸತ್ತಿದ್ದು, ಬಾಲಕನಾಗಿದ್ದಾಗ ಕೃಷ್ಣಪ್ಪ ತನ್ನ ಅಪ್ಪ ಎಲ್ಲರಂತೆಯೇ ಮುದುಕನಾಗಿ ಸತ್ತಿರಬೇಕೆಂದು ಭಾವಿಸಿದ್ದ. ಆದರೆ ಮಹೇಶ್ವರಯ್ಯ ತನ್ನನ್ನು ದನಕಾಯುವುದರಿಂದ ಬಿಡಿಸಿ ಸ್ಕೂಲಿಗೆ ಸೇರಿಸಲು ಪೇಟೆಗೆ ಕರೆದುಕೊಂಡು ಹೋಗುವ ದಿನ ತಾಯಿ ಅವನನ್ನು ಊರ ಹೊರಗಿದ್ದ ಆಲದಮರದ ಕೆಳಗೆ ಕೂರಿಸಿಕೊಂಡು ಅಪ್ಪ ಸತ್ತದ್ದು ಹೇಗೆ ಎಂಬುದನ್ನು ಅಳುತ್ತ ವಿವರಿಸಿದ್ದಳು. ಅಪ್ಪ ಹಠಮಾರಿ. ಅವನಿಗೂ ದಾಯಾದಿಗಳಿಗೂ ಪಾಲಾಗಿದ್ದರೂ ಎಷ್ಟೋ ದಿನಗಳ ತನಕ ಒಂದು ಅಡಿಕೆ ತೋಟದ ಬಗ್ಗೆ ಜಗಳ ನಡದೇ ಇತ್ತು – ಅವನ ದೊಡ್ಡಪ್ಪನ ಮಗನ ಜೊತೆಗೆ. ಈ ಪುಟ್ಟಣ್ಣ ಗೌಡನಿಗೆ ತುಂಬ ಅಸೂಯೆ. ಹುಲ್ಲಿನ ಮೆದೆಗೆ ಬೆಂಕಿ ಹತ್ತಿಸುವುದು ಇತ್ಯಾದಿ ಕಿರುಕುಳ ಕೊಡುತ್ತಲೇ ಇದ್ದ.

ಅಪ್ಪ ಹಠಮಾರಿಯಾದ್ದರಿಂದ ಇದಕ್ಕೆಲ್ಲ ಜಗ್ಗಲಿಲ್ಲ. ಒಂದು ಕೋರ್ಟಿನಿಂದ ಇನ್ನೊಂದು ಕೋರ್ಟಿಗೆ ಅಲೆದೂ ಅಲೆದೂ ಅಂತೂ ಕೊನೆಗೆ ತೋಟದ ಹಕ್ಕು ತನ್ನದೆಂದು ಸ್ಥಾಪಿಸಿಕೊಂಡ ಅದಾದ ಮೂರನೇ ದಿನ ಅಪ್ಪ ಮನೆಗೆ ಬರಲಿಲ್ಲ. ದನಕಾಯುವ ಹುಡುಗನೊಬ್ಬ ಭಯಂಕರ ವಾದೊಂದು ಕಥೆಯನ್ನು ತಂದ. ಹೋಗಿ ನೋಡಿದರೆ ಬಿದಿರು ಮೆಳೆಯೊಂದರ ಬುಡದಲ್ಲಿ ಅಪ್ಪನನ್ನು ಕಡಿದು ಚೂರು ಚೂರು ಮಾಡಿ ಬಿಸಾಕಿದ್ದರು. ಪೋಲೀಸ್‌ಕೇಸಾಯಿತು. ಪುಟ್ಟಣ್ಣ ಗೌಡನಿಗೆ ಫಾಸಿಯಾಯಿತು. ಅದಾದ ಮೇಲೆಯೇ ಅವನ ಅಮ್ಮ ತನ್ನ ಅಣ್ಣನ ಮನೆ ಸೇರಿದ್ದು.

ಈ ಕಥೆ ಕೇಳಿದ ಮೇಲೆಯೇ ಕೃಷ್ಣಪ್ಪನಿಗೆ ಯಾಕೆ ಅತ್ತೆ ಸಿಟ್ಟು ಬಂದಾಗಲೆಲ್ಲ’ಅಪ್ಪನನ್ನು ತಿಂದು ಹುಟ್ಟಿದ ಶನಿ’ ಎಂದು ತನ್ನನ್ನು ಬಯ್ಯುತ್ತಿದ್ದುದು ಎಂದು ತಿಳಿದಿದ್ದು.

ಈ ಘಟನೆ ತನ್ನನ್ನು ಭಾದಿಸದಂತೆ ನೋಡಿಕೊಂಡಿದ್ದ. ಯಾರಿಗೂ ತನ್ನ ಅಪ್ಪ ಕೊಲೆಯಾದ್ದನ್ನ ಹೇಳಿಕೊಳ್ಳಬೇಕೆಂದು ಅವನಿಗೆ ಅನ್ನಿಸಿದ್ದಿಲ್ಲ. ಮಹೇಶ್ವರಯ್ಯ ಕೂಡ ಅದನ್ನು ಕೇಳಿದ್ದಿಲ್ಲ – ಆದರೆ ತನ್ನ ಜೀವನವನ್ನು ಹುಟ್ಟಿದಾರಭ್ಯ ತಮಸ್ಸು ಕವಿದು ನಾಶ ಮಾಡಲು ಪ್ರಯತ್ನಿಸುತ್ತಿರುವುದಾಗಿಯೂ, ಅದನ್ನು ತಾನು ಛಲದಿಂದ ಗೆಲ್ಲುತ್ತ ಹೋಗಬೇಕೆಂದೂ ಅಸ್ಪಷ್ಟವಾಗಿ ಕೃಷ್ಣಪ್ಪನಿಗೆ ಅನ್ನಿಸಿದೆ.

ತನ್ನ ಅಪ್ಪನನ್ನು ಕೊಲ್ಲಬೇಕೆನ್ನಿಸುವಷ್ಟು ದ್ವೇಷ ಯಾಕೆ ಅವನ ದಾಯಾದಿಗೆ ಹುಟ್ಟಿತು ? ಇಂಥ ದ್ವೇಷವನ್ನು ಬೇರವರಲ್ಲಿ ತಾನೂ ಹುಟ್ಟುವಂತೆ ಮಾಡುತ್ತಿರಬಹುದು. ಕೆಲವರನ್ನು ನೋಡಿದಾಗ ತಾನು ಕ್ಷುಲ್ಲಕ, ಕ್ಷುದ್ರ, ತಮಸ್‌ಎಂದು ತಿಳಿದದ್ದೆಲ್ಲ ಅವರಲ್ಲಿ ಕ್ರೋಢೀಕರಿಸಿದಂತೆ ಕಾಣುತ್ತದೆ. ಹೀಗೆ ತಾನು ಕಂಡದ್ದೆಲ್ಲ ಇಲ್ಲಿ – ಈ ನೆಲದ ಧೂಳಿನಲ್ಲಿ, ಈ ಸೆಖೆಯಲ್ಲಿ, ಈ ತಗಣಿಗಳಲ್ಲಿ, ಈ ಗಾಳಿಯಿಲ್ಲದ ಕತ್ತಲಲ್ಲಿ – ಕೇಂದ್ರೀಕರಿಸಿದಂತೆ ಅನ್ನಿಸುತ್ತದೆ. ಇದನ್ನು ನಾನು ಗೆಲ್ಲಬಲ್ಲೆನೋ ಎಂದು ಕೃಷ್ಣಪ್ಪ ಅವಡು ಕಚ್ಚಿ ಎದ್ದು ನಿಂತ.

ಅಣ್ಣಾಜಿ ಹೇಳಿದ್ದ : ಕ್ಷುದ್ರತೇನ್ನ ಗೆಲ್ಲಬೇಕಾದ್ದು ನಿನ್ನ ಮನಸ್ಸಲ್ಲಿ ಅಲ್ಲ, ಹೊರಗಿನ ಪ್ರಪಂಚದಲ್ಲಿ. ಅದರ ಮೂಲ ಇರೋದು ಅಲ್ಲಿ. ಅವನು ಹೇಳಿದ್ದು ನಿಜವಿರಬಹುದು. ಆದರೆ ತಾನು ಈ ಸಧ್ಯದಲ್ಲಿ ತನ್ನ ಮನಸ್ಸು ಅದರಿಂದ ನಾಶವಾಗದಂತೆ ಮೀರಿ ನಿಲ್ಲುವ ಉಪಾಯಗಳನ್ನು ಹುಡುಕಲೇಬೇಕಾಗಿದೆ. ಇಲ್ಲೆ ತಾನು ಪ್ರಾಯಃ ಸಾಯಬೇಕಾಗಿ ಬಂದರೆ ಅವಡು ಕಚ್ಚಿಕೊಂಡೇ ಸಾಯಬೇಕು. ಕೊನೆ ಘಳಿಗೆ ತನಕ ತನ್ನ ಮನಸ್ಸನ್ನು ಈ ತಮಸ್ಸು ಆವರಿಸಿದಂತೆ ಕಾಯ್ದುಕೊಳ್ಳಬೇಕು.

ಮಹೇಶ್ವರಯ್ಯ ಹೇಳುವರು: ಅವಧಾನಿಯಾಗಬೇಕು. ಸಿಕ್ಕಿಬೀಳಬಾರದು. ಬಳುಕುವ ಶಕ್ತಿ ಕಳೆದುಕೊಳ್ಳಬಾರದು. ಒಳಗೂ ಇರಬೇಕು, ಹೊರಗೂ ಇರಬೇಕು. ಹಣ್ಣನ್ನು ತಿನ್ನಲೂ ಬೇಕು, ನೋಡುತ್ತಲೂ ಇರಬೇಕು. ಹಗುರಾದ ಮೈ, ಬಲವಾದ ರೆಕ್ಕೆ, ಹರಿತವಾದ ಉಗುರು, ಚೂಪಾದ ಆಕಾಶಕ್ಕೆತ್ತಿದ ಕೊಕ್ಕು, ಅಪಾಯ ಅಷ್ಟು ದೂರ ಇದ್ದಾಗಲೂ ಅದು ತಿಳಿಯುತ್ತೆ. ಒಡನಾಡಿಗೆ ಹಾತೊರೆಯುವುದಿಲ್ಲ, ತನ್ನಷ್ಟಕ್ಕೆ ಹಾಡಿಕೊಳ್ಳುತ್ತೆ.

ಹೀಗೆ ಯೋಚಿಸುತ್ತ ಸ್ವಲ್ಪ ಹೊತ್ತು ಕಳೆದ ಮೇಲೆ ಕಾಲದ ಪರಿವೆಯನ್ನು ತಾನು ಕಳೆದುಕೊಂಡೇ ಬಿಟ್ಟೆ ಎನ್ನಿಸಿತು. ಈ ರೂಮಿನ ಗೋಡೆಯ ಆಚೆ ಇನ್ನೊಂದು ರೂಮಿರಬೇಕು – ಬೀದಿಯಲ್ಲ. ಆ ಅಂಗಳದ ಆಚೆಯಿಂದ ಕೇಳುವಂತೆ ಇಲ್ಲಿಂದ ಏನೂ ಕೇಳಿಸುವುದಿಲ್ಲ. ಆ ದಪ್ಪ ಮೋರೆಯ ಅಧಿಕಾರಿ ತನ್ನನ್ನು ಮರೆತು ಬಿಟ್ಟಿರಬೇಕು. ಕಣ್ಣೆದುರಿಗೆ ಇದ್ದಾಗಲೇ ಇನ್ನೇನು ಅತ್ಯಂತ ಕ್ರೂರವಾಗಿ ಅವನು ಮೇಲೆರಗಬಹುದು ಅನ್ನಿಸುತ್ತಿದ್ದಂತೆಯೇ ಅವನು ತನ್ನನ್ನು ಅಲಕ್ಷಿಸಿ ಇನ್ನೆಲ್ಲೋ ಗಮನ ಹರಿಸಿದ್ದು ನೆನಪಿಗೆ ಬಂದು ದಿಗಿಲಾಯಿತು. ಅವನು, ಜೋಷಿ, ಮತ್ತೊಬ್ಬ ತನ್ನನ್ನು ಮರೆತುಬಿಟ್ಟು ಬೇರೆ ಯಾರನ್ನೋ ಹುಡುಕುತ್ತಲೋ ಶಿಕ್ಷಿಸುತ್ತಲೋ ಇರಬಹುದು. ತನ್ನಲ್ಲೇನು ಹುರುಳಿಲ್ಲದ್ದರಿಂದ ಬಿಡುಗಡೆ ಮಾಡಬೇಕೆಂದು ನಿಶ್ಚಯಿಸಿ, ಮಾಡಿದ್ದೇವೆಂದು ತಿಳಿದಿರಬಹುದು. ಇನ್ನೊಮ್ಮೆ ಶಿಕ್ಷಿಸಲು ತನ್ನನ್ನು ಹೊರಗೆ ಒಯ್ದಾರೆ ಎಂದು ಆಸೆಯಾಯಿತು.

ಎಷ್ಟು ಉಜ್ಜಿಕೊಂಡರೂ ಯಾವುದೋ ಮೂಲೆಯಿಂದ ತಗಣಿಗಳು ಕತ್ತಿನ ಪಟ್ಟಿ, ಕಂಕುಳ ಸಂದು, ತೊಡೆಯ ಸಂದುಗಳಲ್ಲಿ ಕಚ್ಚಿದುವು. ಈ ಕತ್ತಲಿನ ಕೋಣೆಯೊಂದು ಉದರವಿದ್ದಂತೆ, ಈ ಉದರದಲ್ಲಿ ತಾನು ಕ್ರಮೇಣ ಜೀರ್ಣವಾಗುತ್ತ ಹೋಗುತ್ತಿದ್ದಂತೆ ಭಾಸವಾಯಿತು.

ಈ ಬಗೆಯ ಯೋಚನೆ ಲೋಲುಪತ ಎಂದು ನಾಚಿಕೆಯಾಯಿತು. ಚಿತ್ರಹಿಂಸೆಗಳನ್ನು ಅತ್ಯಂತ ಸಂದಿಗ್ಧವಾಗಿ ನೆರವೇರಿಸುವ ಯಂತ್ರವನ್ನು ಕಲ್ಪಿಸುತ್ತ ಕೂತ. ಇದರಿಂದಲೂ ಸುಸ್ತಾಯಿತು. ಉಪವಾಸ ಮಾಡುತ್ತ ಎಷ್ಟು ದಿನಗಳಾದವೊ ? ಮೂರೊ ? ನಾಲ್ಕೊ ? ಬಾಯಾರಿಕೆ ಪ್ರಾರಂಭವಾಗಿತ್ತು. ಕತ್ತಲಿನಲ್ಲಿ ಪರದಾಡುತ್ತ ಹೋಗಿ ಬೋಗುಣಿಯಲ್ಲಿ ಉಳಿದಿದ್ದ ನೀರಿನಿಂದ ಬಾಯನ್ನು ಒದ್ದೆಮಾಡಿಕೊಂಡ.

ತಾನೇನು ಮಾಡುತ್ತಿದ್ದೇನೆಂಬುದು ಪತ್ತೆಯಾಗದಂತೆಯೇ ಕೈಯ ಬೆರಳಿಂದ ನೆಲದ ಮೇಲಿನ ಧೂಳಿನಲ್ಲಿ ಅವನು ಸಮಯ ಮತದ ಸೃಷ್ಟಿ ಕ್ರಮದಲ್ಲಿ ಚಕ್ರವನ್ನು ಬರೆಯತೊಡಗಿದ್ದ. ಮಹೇಶ್ವರಯ್ಯ ಎದುರೇ ಕೂತು ವಿವರಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಪ್ರಾಯಃ ಹಿಂದೊಮ್ಮೆ ಆದಂತೆ ಬುದ್ಧಿ ಭ್ರಮಣೆ ಆಗುತ್ತಿದೆ; ನಾನು ದೇವರನ್ನು ನಂಬುವುದಿಲ್ಲ ಎಂದುಕೊಳ್ಳುತ್ತಲೇ ಚಕ್ರವನ್ನು ಸೃಷ್ಟಿ ಮಾಡುತ್ತ ತಗಣಿಗಳನ್ನು ಮೈಯಿಂದ ಉಜ್ಜಿ ಕೊಳ್ಳುತ್ತ ಕೂತ. ಮೂಡಲು ಮುಖದ ತ್ರಿಕೋಣ ಮೊದಲು. ಮಧ್ಯೆ ಬಿಂದು, ಅದರ ಮೇಲೆ ಮೊದಲಿನ ತ್ರಿಕೋಣದ ಮಧ್ಯವನ್ನು ಭೇದಿಸಿ ಮೂಡಲ ಮುಖದ ಇನ್ನೊಂದು ತ್ರಿಕೋಣ. ಮೊದಲ ತ್ರಿಕೋಣಾಗ್ರದಿಂದ ಪಡುವಲು ಮುಖವಾಗಿ ಮತ್ತೊಂದು ತ್ರಿಕೋಣ ಬರೆದು. . . . ಮಹೇಶ್ವರಯ್ಯನ ಕಣ್ಣುಗಳು ಏಕಾಗ್ರವಾಗಿ ಹೊಳೆಯುತ್ತಿದ್ದವು. ಹಣೆಯ ಮೇಲೆ ಅಗಲವಾದ ಕುಂಕುಮ, ಒದ್ದೆಯಾದ ಉದ್ದನೆಯ ಕೊದಲು ಬೆನ್ನಿನ ಮೇಲೆ. ಕೆಂಪು ಅಂಚಿನ ಪಂಚೆಯನ್ನು ಕಚ್ಚೆಹಾಕಿ ಉಟ್ಟು, ಬತ್ತಲಾದ ಎದೆಯ ಮೇಲೆ ರುದ್ರಾಕ್ಷಿ ತೊಟ್ಟಿರುತ್ತಿದ್ದರು.

ಸಮಯಿಗಳಿಗೆ ಹೃದಯ ಕಮಲದಲ್ಲಿಯೇ ಪೂಜೆ – ಎಂದು ಮಹೇಶ್ವರಯ್ಯ ಹೇಳಿದ್ದರು. ಅಂಥ ಪೂಜೆಗೆ ಕೃಷ್ಣಪ್ಪ ಅಣಿಯಾಗುತ್ತಲಿದ್ದಾಗ ಮಹೇಶ್ವರಯ್ಯ ಚಿಂತಾಮಣಿ ಗೃಹವನ್ನು ವರ್ಣಿಸಿದ್ದರು. ಇದಕ್ಕೆ ಎಂಟು ಧಾತುಮಯವಾದ ಪ್ರಾಕಾರ, ಹನ್ನೊಂದು ರತ್ನಮಯವಾದ ಪ್ರಾಕಾರ, ಆರು ತತ್ವಮಯವಾದ ಪ್ರಾಕಾರ. ಹೀಗೆ ಒಟ್ಟು ಇಪ್ಪತ್ತೈದು ಪ್ರಾಕಾರಗಳು. ಒಂದಕ್ಕಿಂತ ಇನ್ನೊಂದು ಎತ್ತರ. ಯಾವುದೇ ಪ್ರಾಕಾರದಲ್ಲಿ ಪ್ರವೇಶ ಕಷ್ಟ. . . . .

ತಾನು ಅಂಥ ಒಂದು ವ್ಯೂಹದಲ್ಲಿದ್ದೇನೆಂದು ಕೃಷ್ಣಪ್ಪ ಅರ್ಧ ಮತ್ತಿನಿಂದ ಅರ್ಧ ಹಾಸ್ಯದಿಂದ ಅಂದುಕೊಂಡ. ನಗಲು ಪ್ರಾರಂಭಿಸಿದ. ಮೂಲಾಧಾರ ಕಂದ ಮಧ್ಯದಲ್ಲಿ ಮದನಾಗಾರ ರೂಪವಾದ ತ್ರಿಕೋಣವಿದೆ. ಅಲ್ಲಿ ಊರ್ಧ್ವ ಮುಖವಾಗಿ ಸ್ವಯಂಭೂ ಲಿಂಗವಿದೆ. ಅದನ್ನು ಸರ್ಪಾಕಾರವಾಗಿ ಮೂರುವರೆ ಸುತ್ತಿಕೊಂಡು ಇಂಪಾಗಿಯೂ ಅಸ್ಫುಟವಾಗಿಯೂ ಕುಂಡಲಿನೀ ಶಕ್ತಿ ಶಬ್ದ ಮಾಡುತ್ತಿದೆ. ಅಂಥ ಶಬ್ದ ನಗುತ್ತ ಹೊಟ್ಟೆ ಕುಲುಕುವಾಗ ತನ್ನಿಂದ ಹೊರಡುತ್ತಿದೆ ಎನ್ನಿಸಿತು. ಪರಮಶಿವ ಕಾಮೇಶ್ವರ, ಪಾವರ್ತಿ ಕಾಮೇಶ್ವರಿ ಇವರನ್ನು ಸಮಭಾವದಲ್ಲಿ ಇನ್ನು ಪೂಜಿಸುವುದು ಎಂದು ಸಿದ್ಧನಾದ. ಹೇ ಭಗವತಿ, ನಿನ್ನೊಡನೆ ಕೂಡದಿದ್ದರೆ ಆ ಪರಶಿವನು ಚಲಿಸುವುದಕ್ಕೂ ಸಮರ್ಥನಲ್ಲ ಎಂದು ಧ್ಯಾಣಿಸಿದ. ಸಮಯೆ ಎಂದು ದೇವಿಯನ್ನು ಕಣ್ಣೆದುರು ಕಟ್ಟಿಸಿಕೊಳ್ಳುತ್ತ ಹೋದ. ಮಹೇಶ್ವರಯ್ಯ ಬಾಯಿಪಾಠ ಮಾಡಿಸಿದ್ದ ಶ್ಲೋಕಗಳನ್ನು ಕಿರೀಟದಿಂದ ಕೆಳಗಿಳಿಯುತ್ತ ಗಟ್ಟಿಯಾಗಿ ಹಾಡತೊಡಗಿದ. ಹೊಳೆಯುವ ಕಿರೀಟ; ಅವಳೆ ಪಾರಿಜಾತ ಪುಷ್ಪದ ವಾಸನೆಯ ಕೂದಲು; ಮುಖದ ಕಾಂತಿ ಉಕ್ಕಿ ಹರಿಯುವುದಕ್ಕಾಗಿ ಇರುವ ದಾರಿಯಂತೆ ಕಾಣುವ ಅವಳ ಬೈತಲೆ; ಮನ್ಮಥನನ್ನು ಸುಟ್ಟ ಕಣ್ಣುಗಳು ತುಂಬಿಗಳಂತೆ ಮತ್ತವಾಗಿರುವ ಅವಳ ಮುಖಕಮಲ; ಮನ್ಮಥನ ಬಿಲ್ಲಿನಂತೆ ಹುಬ್ಬು; ಶೃಂಗಾರ – ವಿಸ್ಮಯ – ಭೀತಿ – ಹಾಸ್ಯಗಳನ್ನು ಮಿಂಚಬಲ್ಲ ಕಣ್ಣುಗಳು; ಅವಳ ಮೂಗುತ್ತಿ; ಅವಳ ಅಧರ; ನಾಲಿಗೆ ತಾಂಬೂಲ; ಕಂಠನಾಳ; ಕಂಠನಾಳದ ಮೂರು ರೇಖೆಗಳು; ಅವಳ ನಾಲ್ಕು ಕೈಗಳು; ಹಸ್ತ; ಸ್ತನ; ರೋಮಾವಳಿ; ಗಂಗಾನದಿಯ ಸ್ಥಿರವಾದ ಸುಳಿಯಂತಹ, ಶಿವನ ಕಣ್ಣಿಗೆ ತಪಸ್ಸಿನ ಸಿದ್ಧಿಯ ಬಿಲದ್ವಾರದಂತಿರುವ ಅವಳ ನಾಭಿ; ಅವಳ ಸ್ತನಭಾರದಿಂದ ಬಳಲಿದ ಮೆಲ್ಲಗೆ ಮುರಿಯುತ್ತಿದೆಯೋ ಎನ್ನುವಂತಿದ್ದ ನಡು; ಅದನ್ನು ರಕ್ಷಿಸಲಂತಿದ್ದ ತ್ರಿವಳಿ; ಲಘುವಾಗಿಯೂ ಅಗಲವಾಗಿಯೂ ಇರುವ ನಿತಂಬ; ಅವಳ ಪಾದಗಳು – ಎಲ್ಲವನ್ನೂ ನೆನೆಯುತ್ತ ಶ್ಲೋಕಗಳನ್ನು ನೆನಪು ಮಾಡಿಕೊಂಡು ಹಾಡುತ್ತ ಉನ್ಮತ್ತನಾಗಿ ಕೂತ. ಈ ತಗಣಿಗಳು, ಈ ಕತ್ತಲ ಕೋಣೆ, ಈ ಧೂಳು ಎಲ್ಲವನ್ನೂ ನಿಕೃಷ್ಷವಾಗಿ ಕಂಡು ತಾನು ಗೆಲ್ಲುತ್ತಿದ್ದೇನೆ ಎನ್ನಿಸಿತು. ತನ್ನಿಂದ ಹೊರಡುವ ನಾದ ಸರ್ಪಾಕಾರವಾದ ಕುಂಡಲಿನಿಯದು ಎಂದು ತಿಳಿಯಲು ಏಕಾಗ್ರನಾಗಿ ತನ್ನೊಳಗೆ ಚಿತ್ತವನ್ನು ನಿಲ್ಲಿಸಲು ನೋಡಿದ. ಇಲ್ಲ – ಇದು ಬುದ್ದಿಭ್ರಮಣೆಯಲ್ಲ ಎಂದು ಮತ್ತೆ ಮತ್ತೆ ಅಂದುಕೊಳ್ಳುತ್ತ ರಗಳೆಯಾಗತೊಡಗಿದ್ದರಿಂದ ನಿಟ್ಟುಸಿರಿಟ್ಟು ಎದ್ದುನಿಂತ.

ಶ್ರೀಚಕ್ರದಲ್ಲಿ ಮೂರು ರೇಖೆ ಕೂಡಿದ ಇಪ್ಪತ್ತನಾಲ್ಕು ಮರ್ಮಸ್ಥಾನಗಳಾದರೆ ಎರಡು ರೇಖೆ ಕೂಡಿದ ಇಪ್ಪತ್ತನಾಲ್ಕು ಸಂಧಿ ಸ್ಥಾನಗಳು. ಅಲ್ಲದೆ ಸೃಷ್ಟಿಕ್ರಮ ಮತ್ತು ಸಂಹಾರ ಕ್ರಮವೆಂದು ಎರಡು ಪ್ರಕಾರಗಳಿವೆ. ಸಂಹಾರಕ್ರಮದಲ್ಲಿ ಬರೆಯುವುದು ವಾಮಾಚಾರಿಗಳಾದ ಕೌಲಮತದವರದ್ದು.

ನನ್ನದು ಸಮಯಮತವಾದರೆ ದಪ್ಪ ಮುಖದ ಅಧಿಕಾರಿಯದು ಕೌಲಮತವಿರಬಹುದು. ಸಂಭೋಗ ಯಕ್ಷಿಣೀ ಸಿದ್ಧಿ, ಪರಸ್ತ್ರೀಗಮನೆ, ಮಕ್ಕಳ ನಾಲಿಗೆ ಕೊಯ್ಯುವ ಮಹಾ ಸಂಮೋಹನಾತಂತ್ರ ಇತ್ಯಾದಿ ವಾಮಮಾರ್ಗಗಳಿಂದ ದೇವಿಯನ್ನು ಪೂಜಿಸುತ್ತಿರುವ ಅವನು ಈ ತೆಲಗು ನಾಡಿನ ಪ್ರಸಿದ್ಧ ಕಾಪಾಲಿಕನಿರಬಹುದು. ಹೀಗೆ ಯೋಚಿಸುತ್ತ ಕೃಷ್ಣಪ್ಪನಿಗೆ ಮತ್ತೆ ನಗು ಉಕ್ಕಿ ಬಂತು. ಕತ್ತಲೆಯಲ್ಲಿ ಬಹುಬೇಗ ಸುಸ್ತಾಗಿ ಸಿಮೆಂಟ್‌ಹಾಸಿಗೆ ಮೇಲೆ ಕೂತು ಕಣ್ಣು ಮುಚ್ಚಿದ. ಬೆವರಿನಲ್ಲಿ ತೊಯ್ದ ತನ್ನ ಪಂಚೆ ಜುಬ್ಬಗಳು ಧೂಳಿನಲ್ಲಿ ಅಸಹ್ಯವಾಗಿದ್ದರಿಂದ ಅವುಗಳನ್ನು ಬಿಚ್ಚಿ ಎಸೆಯಬೇಕೆನ್ನಿಸಿತು. ಜುಬ್ಬವನ್ನು ಬಿಚ್ಚಿ ಅದನ್ನು ತಲೆಗಿಟ್ಟುಕೊಂಡು ಮಲಗಿದ. ತಳವಿಲ್ಲದ ಅಂತರಾಳದಲ್ಲಿ ತೇಲುತ್ತಿರುವಂತೆ ಅನ್ನಿಸಿತು.

***

ಮತ್ತೆ ಎಷ್ಟು ಹೊತ್ತಾಯಿತೋ. ಪೇದೆಯೊಬ್ಬ ಬಂದು ಕೈಯನ್ನೆಳೆಯುತ್ತಿದ್ದ. ಕೃಷ್ಣಪ್ಪ ಎದ್ದುಕೂತು ತಾನೆಲ್ಲಿದ್ದೇನೆಂದು ನೆನಪು ಮಾಡಿಕೊಂಡ. ಅವನು ಎಳೆಯುತ್ತಲೇ ಇದ್ದುದರಿಂದ ಅವನು ಎಳೆದ ದಿಕ್ಕಿನಲ್ಲಿ ಹೋದ. ಉರ್ದುವಿನಲ್ಲಿ ಏನೋ ಬಯ್ಯುತ್ತಿದ್ದ ಅವನು ಕೀರಲು ದನಿಯ ಪೇದೆಯೆಂಬುದನ್ನು ಗಮನಿಸಿದ.

ಕೋಣೆಯ ಹೊರಗೂ ಕತ್ತಲಿತ್ತು. ಆದರೆ ರಾತ್ರೆಯ ಗಾಳಿ ಹಿತವಾಗಿತ್ತು. ಯಥೇಚ್ಛ ಗಾಳಿಯನ್ನು ಹೀರುತ್ತ ಕೃಷ್ಣಪ್ಪ ನಡೆದ.

ದೀಪಗಳಿಂದ ಅಂಗಳ ಪ್ರಕಾಶಮಾನವಾಗಿತ್ತು. ಏರೋಪ್ಲೇನ್‌ಹತ್ತಿಸುವ ರಾಟೆಯಿಂದ ಇಳಿದಿದ್ದ ಹಗ್ಗ ಅಲ್ಲಾಡುತ್ತಿತ್ತು. ಒಂದು ಕುರ್ಚಿಯ ಮೇಲೆ ದಪ್ಪ ಮೋರೆಯ ಅಧಿಕಾರಿ ಕೂತು ಬಾಟಲಿನಿಂದ ರಮ್ಮನ್ನು ಗ್ಲಾಸಿಗೆ ಸುರಿದುಕೊಳ್ಳುತ್ತಿದ್ದ. ಅವನ ಕಾಲಿನ ಕೆಳಗೆ ಹೂಮೂಡಿದ್ದ ಇಬ್ಬರು ಹೆಂಗಸರು ಕೂತಿದ್ದರು. ಅವರ ಕೈಯಲ್ಲೂ ಗ್ಲಾಸುಗಳಿದ್ದುವು. ಇಬ್ಬರು ಉಟ್ಟಿದ್ದ ಸೀರೆಗಳೂ ದೀಪದಲ್ಲಿ ಮಿರುಗುತ್ತಿದ್ದುವು. ಅವರ ತುಟಿಗಳು ಕೆಂಪಾಗಿದ್ದವು. ಕಿವಿಯಲ್ಲಿ ಮಿರುಗುವ ಬೆಂಡೋಲೆಗಳಿದ್ದವು. ಕೈಗಳ ತುಂಬ ಹೈದರಾಬಾದಿನ ಪ್ರಸಿದ್ಧ ಕಲ್ಲಿನ ಬಳೆಗಳಿದ್ದುವು.

ಉರ್ದುವಿನಲ್ಲೇನೋ ಅವನು ಹೇಳಿ ಗಹಗಹಿಸಿ ನಕ್ಕ. ಇಬ್ಬರು ಹೆಂಗಸರೂ ಒಬ್ಬರನ್ನೊಬ್ಬರು ಚೂಟಿಕೊಂಡು ಮುಗುಳ್ನಕ್ಕರು. ತನ್ನನ್ನೂ ಒಂದು ಕುರ್ಚಿಯ ಮೇಲೆ ಪೇದೆ ಕೂರಿಸಿದನೆಂದು ಕೃಷ್ಣಪ್ಪನಿಗೆ ಆಶ್ಚರ್ಯವಾಯಿತು. ದಪ್ಪ ಮುಖದ ಅಧಿಕಾರಿ ಕಾಲುಗಳನ್ನು ಚಾಚಿ ಆರಾಮಾಗಿ ಕೂತಿದ್ದರಿಂದ ಮಾನವೀಯವಾಗಿ ಕೃಷ್ಣಪ್ಪನಿಗೆ ಕಂಡ. ಪ್ರಾಯಶಃ ಹಾಗೆಂದು ಅನ್ನಿಸಲು ಇನ್ನೊಂದು ಮುಖ್ಯ ಕಾರಣ ಅವನು ಈಗ ಕ್ಯಾಪ್‌ಧರಿಸಿದ್ದರಿಂದ ಸಣ್ಣದಾಗಿ ಕತ್ತರಿಸಿದ ಅವನ ತಲೆ ಗೋಟಾಗಿದೆ ಎಂದು ಕೃಷ್ಣಪ್ಪನಿಗೆ ಕಾಣಿಸಿದ್ದು. ಮಗುವಾಗಿದ್ದಾಗ ತಲೆದೆಸೆಯಲ್ಲಿ ಬಟ್ಟೆಯನ್ನು ಉರುಟಾಗಿ ಸುತ್ತಿ ಮಧ್ಯೆದಲ್ಲಿ ತೂತುಬಿಟ್ಟು ಮಲಗಿಸುತ್ತಾರೆ. – ತಲೆ ಹೀಗೆ ಗೋಟಾಗದಿರಲೆಂದು. ತನ್ನ ತಲೆ ಚೆಂದಾಗಿರುವ ಬಗ್ಗೆ ಅಮ್ಮ ಕೊಟ್ಟಿದ್ದ ವ್ಯಾಖ್ಯಾನ ಇದು.

‘ಕುಡೀತೀಯ ?’

ಇವನು ಕಾಪಾಲಿಕನೇ, ‘ಕುಡೀತೀಯ’ ಎಂದು ಕೇಳುತ್ತಿದ್ದಾನೆ ಎಂಬ ಯೋಚನೆ ಬಂದಿದ್ದರಿಂದ ತನ್ನ ಕಠಿಣವಾದ ಮುಖ ಮೃದುವಾದ್ದನ್ನು ಅವನೂ ಗಮನಿಸಿರಬೇಕು.

‘ನೀನು ಅಡ್ರೆಸ್‌ಗಳನ್ನು ಕೊಡದೇ ಇದ್ದರೆ ನನಗೆ ಪೀಕಲಾಟ ಗೊತ್ತ ? ಆ ಜೋಷಿ ಇದಾನಲ್ಲ, ನನ್ನನ್ನ ಇನ್‌ಎಫಿಶಿಯಂಟ್‌ಅಂತ ಕಾನ್‌ಫಿಡೆನ್ಸಿಯಲ್ ರಿಪೋರ್ಟ್‌‌ನಲ್ಲಿ ಬರೆದು ಬಿಡ್ತಾರೆ.’

ತನ್ನ ಮಾತಿಂದ ಅಧಿಕಾರಿ ಈ ಖುಷಿಯಾಗಿದ್ದ ಸಂದರ್ಭದಲ್ಲಿ ತೃಪ್ತನಾಗಬಹುದೆಂದು, ಕೃಷ್ಣಪ್ಪ

‘ನನಗೇನೂ ಗೊತ್ತಿಲ್ಲ – ನಿಜವಾಗಿ’ ಎಂದ.

‘ಹಾಗಾದರೆ ಅವನೇನು ನಿನ್ನ ಅಕ್ಕನ ಗಂಡನ, ಅಥವಾ ಮಿಂಡನ? ಇಷ್ಟು ದೂರ ಬಂದಿರಿ ಅವನಿಗಾಗಿ?’

ಅಧಿಕಾರಿ ತನ್ನ ಕಾಲಿನ ಬುಡ ಕೂತವಳನ್ನು ಒದ್ದು ನಗತೊಡಗಿದ.

‘ಅವನಿಗೆ ಭಾರಿ ಹೆಂಗಸರ ಹುಚ್ಚೂಂತ ಕೇಳಿದೇನೆ. ಇಲ್ಲಿಯಂತೆ ನಿಮ್ಮಲ್ಲೂ ಗುರುಗಳಿಗೆ ಸಪ್ಲೈ ಮಾಡಬೇಕ? ನೀನ ಅವನಿಗೆ ಪಿಂಪ್‌ಕೆಲಸ ಮಾಡಿದೀಯ? ನನಗೇಂತ ತಂದಿದಾರೆ ನೋಡು ಈ ಇಬ್ರನ್ನ. ಫಸ್ಟ್‌ಕ್ಲಾಸ್‌ರಂಡೆಯರು ಇವರು. ಹೇಗೆ ಕಾಲೆತ್ತುತ್ತಾರೆ ಗೊತ್ತ? ನಿನ್ನ ಅಂಡು ಪಕ ಪಕ ಕುಣೀಬೇಕು – ಹಾಗೆ. ಇವರಲ್ಲಿ ಒಬ್ಬಳನ್ನು ತಗೊ – ನಂಗೆ ಅಡ್ರೆಸ್‌ಗಳನ್ನು ಕೊಡು. ಇಲ್ಲದಿದ್ರೆ ನನ್ನ ಪ್ರಮೋಶನ್‌ಗೆ ಸಂಚಕಾರವಾಗುತ್ತೆ. ನಿನಗೇನು ನನ್ನ ಕಷ್ಟ ಗೊತ್ತು? ನನಗೆ ಹತ್ತು ಮಕ್ಕಳು. ಟ್ವೆಂಟಿಫೋರ್ ಆವರ್ಸ್ ಡ್ಯೂಟಿ. ಆ ಜೋಷಿ ಕರೆದಾಗ ಇಲ್ಲಿ ಬಂದಿರಬೇಕು. ಜೋಷಿ ಮಂತ್ರಿಗಳಿಗೆ ಮಾತು ಕೊಟ್ಟಿದ್ದಾನೆ. ಆ ಮಂತ್ರಿ ದೊಡ್ಡ ದೈವಭಕ್ತ. ವಾರಕ್ಕೊಂದು ಸಾರಿ ತಿರುಪತಿಗೆ ಹೋಗ್ತಾನೆ. ಕಮ್ಯುನಿಸ್ಟರನ್ನ ನಿರ್ನಾಮ ಮಾಡ್ತೀನಿಂತ ಜೋಷಿ ಮಾತು ಕೊಟ್ಟು ಬಿಟ್ಟು ನೋಡು ನನಗೂ ನಿನಗೂ ಹೀಗೆ ಪಿಕಲಾಟಕ್ಕೆ ಬಂದಿದೆ. ತಗೋ ಇವಳನ್ನ – ಹೂ.’

ಅವನು ಬಾಗಿ ಹೆಂಗಸಿನ ಸೆರಗನ್ನು ಎಳೆದ. ರವುಕೆ ಬಿಚ್ಚಲು ಹೋದಾಗ ಅವಳು ಅವನನ್ನು ತಡೆದಳು. ಅವನು ತೂರಾಡುತ್ತ ಎದ್ದುನಿಂತ. ಕೃಷ್ಣಪ್ಪ ಕೆಕ್ಕರಿಸಿ ನೋಡುತ್ತಿದ್ದುದನ್ನು ಕಂಡು ಅವನು:

‘ನೋಡಿ ಈ ಬಡವ ಹೇಗೆ ರೋಫ್ ಹಾಕ್ತಿದಾನೆ – ಬಿಚ್ಚಿರೋ ಆ ಸುವರ್ ಬಟ್ಟೇನ್ನ’ ಎಂದ ಇದ್ದಕ್ಕಿದ್ದಂತೆ ಕೃಷ್ಣಪ್ಪ ಕೊಸರಿಕೊಂಡರೂ ಬಿಡದೆ ಇಬ್ಬರು ಪೇದೆಗಳು ಅವನ್ನು ಹಿಡಿದುಕೊಂಡು ಬಟ್ಟೆಯನ್ನು ಬಿಚ್ಚಿ ನಗ್ನಗೊಳಿಸಿದರು.

‘ಇವತ್ತು ನಿನ್ನಿಂದ ಹೇಗಾದರೂ ಪತ್ತೆಮಾಡು ಅಂದಿದಾನೆ ಜೋಷಿ. ನಾನು ನಿನಗೆ ಗೊತ್ತಿಲ್ಲ. . . .’

ಎಂದು ತೂರಾಡುತ್ತಾ ತನ್ನೆದುರು ಬಂದು ನಿಂತ. ಅವನ ಕೋಲಿನಿಂದ ಲಿಂಗವನ್ನು ಚುಚ್ಚುತ್ತ, ಹೆಂಗಸರ ಕಡೆ ನೋಡುತ್ತ

‘ತರಡನ್ನ ಒಡೆದುಬಿಡ್ತೀನಿ ಹುಷಾರ್’ ಎಂದು ಗಹಗಹಿಸಿ ನಕ್ಕ.

ಕೀರಲುದನಿಯ ಪೇದೆ ಓಡಿಹೋಗಿ ಗ್ಲಾಸಿಗೆ ಇನ್ನಷ್ಟು ರಮ್‌ಸುರಿದು ತಂದು ಅಧಿಕಾರಿಯನ್ನು ಮೆಲ್ಲನೆ ನಡೆಸಿಕೊಂಡು ಹೋಗಿ ಕುರ್ಚಿ ಮೇಲೆ ಕೂರಿಸಿದ. ತೇಗುತ್ತ ಕೂತ ಅಧಿಕಾರಿ ಗೆಲುವಿನ ಧ್ವನಿಯಲ್ಲಿ ‘ಏಯ್‌ಅವನ ಬಾಯಿಗೆ ಉಚ್ಚೆ ಹೊಯ್ಯೊ’ ಎಂದು ಇಂಗ್ಲಿಷಿನಲ್ಲಿ ಹೇಳಿದ. ಪೇದೆ ಸುಮ್ಮನೇ ನಿಂತದ್ದು ಕಂಡು ಊರ್ದುವಿನಲ್ಲಿ ಮತ್ತೆ ಕೂಗಿ ಹೇಳಿದ. ಒಬ್ಬ ಹೆಂಗಸು ಎದ್ದು ಬಂದು ಅವನ ತೊಡೆ ಮೇಲೆ ಕೂತು ಕೈಗಳಿಂದ ಅವನ ಕತ್ತು ಬಳಸಿ ಏನೋ ಹೇಳಿದಳು.

‘ಏಯ್‌’ – ಎಂದು ಅಧಿಕಾರಿ ಯಾರನ್ನೋ ಕರೆದ. ಮೈಕೈ ತುಂಬಿಕೊಂಡ ಹರೆಯದ ಒಬ್ಬ ಎದುರು ಬಂದು ನಿಂತ. ಅಧಿಕಾರಿ ನಗುತ್ತ ಏನೋ ಹೇಳಿದ. ಅವನು ಕೇಳದಿರಲು ತಾನೇ ಎದ್ದು ಹೋಗಿ ಮುದುಡಿ ಕೂತಿದ್ದ ಇನ್ನೊಬ್ಬಳನ್ನು ಎಬ್ಬಿಸಿ ಅವಳ ಬಟ್ಟೆಯನ್ನು ಬಿಚ್ಚಿದ. ಯುವಕನೂ ತನ್ನ ಬಟ್ಟೆಯನ್ನು ಬಿಚ್ಚಿದ. ಕೃಷ್ಣಪ್ಪ ಕಣ್ಣು ಮುಚ್ಚಿದ. ಓಡಲೆಂದು ಎದ್ದು ನಿಂತ. ಅಧಿಕಾರಿ ನುಗ್ಗಿ ಬಂದು ಕೃಷ್ಣಪ್ಪನನ್ನು ಹಿಡಿದುಕೊಂಡು ಅವನ ಕೈಕಾಲುಗಳನ್ನು ಕಟ್ಟಿಸಿ, ನೆಲದ ಮೇಲೆ ಮಲಗಿಸಿ, ತನ್ನ ಕೋಲಿನಿಂದ ಅವನ ಲಿಂಗವನ್ನು ಎತ್ತಿ ಹಿಡಿದು ‘ಪ್ಲಾಗ್‌ಹಾಯಿಸ್ಟ್‌ಮಾಡಿಸ್ತೀನಿ – ಸೆಲ್ಯೂಟ್‌’ ಎಂದು ಅಬ್ಬರಿಸಿದ. ಎಲ್ಲರೂ ನಗಲು ಖುಷಿಯಾಗಿ, ಬೆತ್ತಲೆಯಾಗಿದ್ದ ಯುವಕನ ಅಂಡನ್ನು ಸವರುತ್ತ ತಟ್ಟುತ್ತ ನಿಂತ. ಕೃಷ್ಣಪ್ಪ ಬಿಟ್ಟ ಕಣ್ಣುಗಳನ್ನು ಮತ್ತೆ ಮುಚ್ಚಿ. ಅಧಿಕಾರಿ ನಗುವುದನ್ನೂ ಹುರಿದುಂಬಿಸುವುದನ್ನೂ ಕೇಳಿಸಿಕೊಂಡ. ಅಧಿಕಾರಿ ಮತ್ತೆ ಕೀರಲು ದನಿಯ ಪೇದೆಯನ್ನು ಕೂಗಿ ಕರೆದು ಉಚ್ಚೆ ಹೊಯ್ಯುವಂತೆ ಹೇಳಿದ. ಕೃಷ್ಣಪ್ಪ ಗಾಬರಿಯಿಂದ ಕಣ್ಣು ಬಿಡಲು ಹೆಂಗಸಿನ ಮೇಲೆ ಬೆತ್ತಲೆ ಎಗರಿದ್ದ ತರುಣನೂ ಅವರನ್ನು ಬಗ್ಗಿ ನೋಡುತ್ತ ಕೇಕೆ ಹಾಕುತ್ತಿದ್ದ ಅಧಿಕಾರಿಯೂ ಕಂಡರು. ಅಧಿಕಾರಿ ಈ ದೃಶ್ಯ ನೋಡುತ್ತಲೇ ದೊಣ್ಣೆಯಿಂದ ಕೀರಲು ದನಿಯವನನ್ನು ನೂಕುತ್ತಿದ್ದ.

ಇಬ್ಬರು ಪೇದೆಗಳು ಬಂದು ಬಲಾತ್ಕಾರವಾಗಿ ಸಟ್ಟುಗ ಹಾಕಿ ತನ್ನ ಬಾಯಿ ಅಗಲಿಸಿದರು. ಅಧಿಕಾರಿಯ ಪ್ಯಾಂಟನ್ನು ಇನ್ನೊಬ್ಬಳು ಹೆಂಗಸು ಈಗ ಬಿಚ್ಚತೊಡಗಿದಳು. ಕೀರಲುದನಿಯವ ತನ್ನ ಖಾಕಿ ಚಡ್ಡಿಯ ಗುಂಡಿ ಬಿಚ್ಚಿ ತನ್ನಡೆಗೆ ಏನೋ ಶಪಿಸುತ್ತ ಬಂದ. ತನ್ನ ಎದೆಯ ಮೇಲೆ ಕುಕ್ಕುರು ಕೂತ. ಒದ್ದಾಡದಂತೆ ಇಬ್ಬರು ಪೇದೆಗಳು ಹಿಡಿದುಕೊಂಡದ್ದರಿಂದ ಕೃಷ್ಣಪ್ಪ ಸುಮ್ಮನಾದ. ಬಾಯಿಗೆ ಬೀಳಲಿರುವುದನ್ನು ನುಂಗದಂತೆ ಉಸಿರು ಕಟ್ಟಿದ.

ಅಧಿಕಾರಿ ಅಟ್ಟಹಾಸದಿಂದ ಕಿರುಚುತ್ತ, ಯುವಕನನ್ನು ಹುರಿದುಂಬಿಸುತ್ತ, ಬೆತ್ತಲಾಗಿ ನಿಂತ ಇನ್ನೊಬ್ಬ ಹೆಂಗಸನ್ನು ಹಿಸುಕುತ್ತಿದ್ದ, ‘ಆಯಿತಾ’ ಎಂದು ಕೀರಲು ದನಿಯ ಪೇದೆಯನ್ನು ಕರೆದು ಕೇಳಿದ. ಪೇದೆ ಆಯಿತು ಎಂದು ಎದ್ದು ನಿಂತು ಗುಂಡಿ ಹಾಕಿಕೊಂಡ. ಅವನು ಉಚ್ಚೆಯನ್ನು ಹೊಯ್ಯಲಿಲ್ಲವೆಂಬುದು ಕೃಷ್ಣಪ್ಪನಿಗೆ ಆಶ್ಚರ್ಯವನ್ನುಂಟುಮಾಡಿತು. ಇದಾದನಂತರ ಅಧಿಕಾರಿ ತನ್ನನ್ನು ಮರತೇಬಿಟ್ಟು ಬೆತ್ತಲೆ ಹೆಂಗಸರನ್ನು ಪಕ್ಕದಲ್ಲಿ ಕೂರಿಸಿಕೊಂಡು ಕುಡಿಯುತ್ತ ಕೂತ. ಕೃಷ್ಣಪ್ಪನಿಗೆ ಎಲ್ಲವೂ ಅಸ್ಪಷ್ಟವಾಗುತ್ತ ಹೋಯಿತು.

ಕಣ್ಣು ತೆರೆದಾಗ ಇಡೀ ಅಂಗಳದಲ್ಲಿ ಏನೋ ಮೃದುವಾಗಿ ಬಿರಿದುಕೊಳ್ಳಲು ಸಿದ್ಧತೆ ನಡೆಯುತ್ತಿದೆ ಎನ್ನಿಸುವಂತಿತ್ತು. ಕುರ್ಚಿ ಅಲ್ಲೇ ಇತ್ತು; ತ್ರೀ ಎಕ್ಸ್‌ರಮ್ಮಿನ ಬಾಟಲಿ ಗ್ಲಾಸುಗಳೂ ಇದ್ದವು. ದೀಪಗಳನ್ನೆಲ್ಲ ಆರಿಸಿದರೂ ಅವು ಅಸ್ಪಷ್ಟವಾಗಿ ಕನಸಿನಲ್ಲಿ ಎಂಬಂತೆ ಕಾಣುತ್ತಿದ್ದವು. ಆಕಾಶದಲ್ಲಿ ಸ್ಫುಟವಾದ ನಕ್ಷತ್ರಗಳು ಮಂದವಾಗುತ್ತ ಹೋದವು. ಚಿಲಿಪಿಲಿ ಶಬ್ದ ; ಏನೋ ಫಲವತ್ತಾಗುತ್ತಿರುವುದರ ಸೂಚನೆ; ಕೃಷ್ಣಪ್ಪ ದೀರ್ಘವಾಗಿ ಉಸಿರೆಳೆದುಕೊಂಡ. ಒಂದು ದೊಡ್ಡ ಸುಖ ತನಗೀಗ ಸಿಗುತ್ತದೆ ಎಂಬ ಆಶ್ವಾಸನೆ ಕೊಡುವಂಥ ವಾಸನೆಯನ್ನು ಗಮನಿಸಿದ. ಈ ಅಂಗಳದಲ್ಲಿ ಬೆಳೆದಿದ್ದ ಒಂದು ಗುಂಪು ಚೆಂಡು ಹೂವಿನ ಗಿಡಗಳು ಕಂಡವು. ಅಂಗಳದಲ್ಲಿ ಬೆಳೆದುಕೊಂಡ ಒಂದೊಂದು ಕಾಡು ಗಿಡವನ್ನೂ ಕೃತಜ್ಞತೆಯಿಂದ ನೋಡುತ್ತ ಬಿರಿಯುವ ಮುಹೂರ್ತಕ್ಕಾಗಿ ಕಾದ. ಆಕಾಶ ಕೆಂಪಾಯಿತು. ಸೂರ್ಯನ ಕಿರಣಗಳು ಅಂಗಳ ಹೋಗುವುದನ್ನು ನಿರೀಕ್ಷಿಸಿದ. ತನ್ನ ಮೈಮೇಲೆ ಪಂಚೆ ಹೊದಿಸಿದ್ದರು – ಯಾರೊ – ಕೀರಲು ದನಿಯ ಪೇದೆಯಿದ್ದರೂ ಇರಬಹುದು, ಬೆಳಕು ಆಕಾಶವನ್ನೆಲ್ಲ ತೊಳೆಯುತ್ತ ಅರಳುತ್ತಿತ್ತು.

ಈ ಕ್ಷಣ ಆದಿ ಅಂತ್ಯವಿಲ್ಲದ್ದು; ಪ್ರಾಯಶ: ತಾನೀಗ ಸತ್ತಿರಬಹುದು ಎಂದು ಅನ್ನಿಸಿತು.

***

ಕತ್ತಲೆಯ ಕೋಣೆಗೆ ನೂಕಿದ ಮೇಲೆ, ಎಷ್ಟು ಹೊತ್ತಾಯಿತೆಂಬ ಪರಿವೆ ತನಗೆ ಮತ್ತೆ ಮರೆತು ಹೋಗಬಹುದೆಂದು ದಿಗಿಲಾಗಲು ಪ್ರಾರಂಭವಾದಾಗ, ಪೂರ್ವಸೂಚನೆಯಿಲ್ಲದೆ ಬಾಗಿಲು ತೆರೆಯಿತು. ಕೀರಲು ದನಿಯ ಪೇದೆ ಬಟ್ಟೆಗಳನ್ನು ಕೊಟ್ಟ. ಹೊರಗೆ ಕರೆದುಕೊಂಡು ಹೋದ. ಆಫೀಸಿನಲ್ಲಿ ಮಹೇಶ್ವರಯ್ಯ ಕಾದಿದ್ದರು. ಒಂದೂ ಮಾತಾಡದೆ ಅವರು ಕಾರಿನಲ್ಲಿ ಕೂರಿಸಿಕೊಂಡು ಹೋದರು. ಹೋಟೆಲೊಂದರ  ಎದುರು ಕಾರನ್ನು ನಿಲ್ಲಿಸಿ ರೂಮಿಗೆ ಅವನನ್ನು ಒಯ್ದರು. ಅಲ್ಲಿ ಅವರೇ ಸ್ನಾನ ಮಾಡಿಸಿ, ಹೊಸ ಅಂಗಿ ಪಂಚೆಗಳನ್ನು ಉಡಿಸಿ, ಕಿತ್ತಲೆ ರಸವನ್ನು ಕುಡಿಸಿದರು.

ನಿದ್ದೆ ಮಾಡಿ ಎದ್ದಾಗ ಸಂಜೆಯಾಗಿತ್ತು. ಮಹೇಶ್ವರಯ್ಯ ರೂಮಿಗೇ ಊಟ ತರಿಸಿದರು. ಗಾಜಿನ ಕಿಟಕಿಗಳ ಎದುರು ಕೂತು ಊರಿನ ಕ್ಷುದ್ರ ಬೀದಿಗಳನ್ನೂ, ಬಣ್ಣ ಕಳೆದುಕೊಂಡ ಕಟ್ಟಡಗಳನ್ನೂ ನೋಡುತ್ತ ಕೃಷ್ಣಪ್ಪ ಅನ್ನಕ್ಕಷ್ಟು ಮೊಸರು ಕಲಿಸಿಕೊಂಡು ತಿಂದ. ಮಹೇಶ್ವರಯ್ಯ ನಿಧಾನವಾಗಿ ತಮ್ಮ ಭಾವನೆಗಳನ್ನು ತೋರಗೊಡದಂತೆ ಕೃಷ್ಣಪ್ಪನ ಬಿಡುಗಡೆಯ ಕಥೆಯನ್ನು ಹೇಳಿದರು.

ಜೋಷಿಯಿಂದ ಪ್ರಯೋಜನವಿಲ್ಲೆಂದು ತಿಳಿದ ಮೇಲೆ ಮಹೇಶ್ವರಯ್ಯ ವಾರಂಗಲ್‌ನಲ್ಲಿ ನೆಲಸಿದ್ದ ಒಬ್ಬ ಪ್ರಸಿದ್ಧ ಕವಿಯ ಬಳಿ ಹೋದರು. ಮಹೇಶ್ವರ ಮತ್ತು ಪಾರ್ವತಿಯ ಲಗ್ನವನ್ನು ಕುರಿತು ಮಹಾಕಾವ್ಯ ಬರೆದಿದ್ದ ಈ ಕವಿ ತೆಲಗು ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದವನಾಗಿದ್ದ. ಕೀರ್ತಿವಂತ ವೈದಿಕ ಮನೆತನದಲ್ಲಿ ಹುಟ್ಟಿದವ. ಅಷ್ಟಾವಧಾನಿಗಳೆಂದರೆ ಇವರು ಹೆಸರಲ್ಲಿ ಮಾತ್ರವಲ್ಲ – ನಿಜದಲ್ಲೂ. ಈ ಕವಿಯೂ ದೈವಭಕ್ತ, ದೇವಿಯ ಉಪಾಸಕ, ರಸಿಕ ಎಂಬುದಷ್ಟೇ ಮಹೇಶ್ವರಯ್ಯನ ಆಸಕ್ತಿಗೆ ಕಾರಣವಾಗಿರಲಿಲ್ಲ. ಗೃಹಮಂತ್ರಿಗೆ ಈ ಕವಿ ಅಚ್ಚುಮೆಚ್ಚು. ಪಾರ್ವತಿ ಪರಿಣಯವನ್ನು ಅವಧಾನಿ ಗೃಹಮಂತ್ರಿಗೆ ಅರ್ಪಿಸಿದ್ದ. ಮಂತ್ರಿ ಆ ಮಹಾಕಾವ್ಯಕ್ಕೆ ಅತ್ಯುಚ್ಛ ಬಹುಮಾನಗಳನ್ನು ಕೊಡಿಸಿದ್ದ.

ಅವಧಾನಿ ರಾತ್ರೆಯಾದ ಮೇಲೆ ನಡೆಸುತ್ತಿದ್ದ ದರ್ಬಾರಿಗೆ ಮಹೇಶ್ವರಯ್ಯ ಒಂದು ದೊಡ್ಡ ಬಾಟಲು ವಿಸ್ಕಿ ತೆಗೆದುಕೊಂಡು ಹೋದರು. ಅವಧಾನಿ ಸುಶ್ರಾವ್ಯವಾಗಿ ತನ್ನ ಕವನಗಳನ್ನು ಪಠಿಸುತ್ತಿದ್ದ. ಸೇರಿದವರು ಮೆಚ್ಚುಗೆಯಿಂದ ತಲೆಹಾಕುತ್ತಿದ್ದರು. ತಾನು ಕರ್ನಾಟಕದಲ್ಲಿ ಅವಧಾನಿಯ ಅಭಿಮಾನಿಯೆಂದು ಹೇಳಿಕೊಂಡು ವಿಸ್ಕಿಯನ್ನು ಕೊಡಲಾಗಿ ಕವಿ ಹಸನ್ಮುಖಿಯಾಗಿ ಹೇಳಿದ;

‘ನನ್ನ ಸುರಾಪಾನದ ಕೀರ್ತಿಯೂ ಕರ್ನಾಟಕದ ತನಕ ಹಬ್ಬಿದೆ ಎನ್ನಿ.’

ಮಹೇಶ್ವರಯ್ಯನೂ ಆತನೂ ಬಹಳ ಹೊತ್ತು ಸರ್ವಜ್ಞ ವೇಮನರ ಬಗ್ಗೆ ಮಾತನ್ನಾಡಿದರು. ಅವಧಾನಿ ರಾತ್ರೆ ಬೆಳೆದಂತೆ ಹುರುಪಾಗುತ್ತಾ ಹೋದ. ತನಗೆ ತಿಳಿದ ತೆಲುಗು ಸಾಲದೇ ಹೋದಾಗ ಮಹೇಶ್ವರಯ್ಯ ಸಂಸ್ಕೃತದಲ್ಲಿ ಮಾತಾಡಲು ತೊಡಗಿದರು. ಸಂಸ್ಕೃತ ತಿಳಿಯದ ಅವಧಾನಿಯ ಉಳಿದ ಅಭಿಮಾನಿಗಳ ಬಳಗ ಈ ಇಬ್ಬರ ಸಂಸ್ಕೃತ ಸಂಭಾಷಣೆಯಿಂದ ಪುಳಕಿತರಾಗಿ ವಿಸ್ಕಿಯನ್ನು ಹೀರಿದರು. ಬಾಟಲು ಮುಗಿಯುತ್ತಿದ್ದಂತೆ ಅವರಲ್ಲಿ ದೊಡ್ಡ ವ್ಯಾಪಾರಿಯೂ ವೈಶ್ಯ ಜನಾಂಗದವನೂ ಆಗಿದ್ದ ವೆಂಕಟರಮಣಯ್ಯ ಎಂಬಾತ ಕಾರಿನಲ್ಲಿ ಹೋಗಿ ಇನ್ನೊಂದು ಬಾಟ್ಲಿಯನ್ನು ತಂದ. ಅವರಿಗೆಲ್ಲ ಇದೊಂದು ಮಹತ್ವದ ರಾತ್ರೆ ಎನ್ನಿಸಿತ್ತು. ಬಹಳ ಹೊತ್ತಾದ ಮೇಲೆ ಅವಧಾನಿ ಮಹೇಶ್ವರಯ್ಯನನ್ನು ಬಂದ ಕಾರಣ ವಿಚಾರಿಸಿದ. ಮಹೇಶ್ವರಯ್ಯ ಮುಗ್ಧನಾದ ಕೃಷ್ಣಪ್ಪನ ಬಂಧನ ಹೇಳಲಾಗಿ ಅವಧಾನಿಯು ಈಗಿಂದೀಗಲೇ ಗೃಹಮಂತ್ರಿಗೆ ಫೋನ್‌ಮಾಡುವ ನಿಶ್ಚಯ ಮಾಡಿ ಎದ್ದುನಿಂತ. ವೆಂಕಟರಮಣಯ್ಯ ತನ್ನ ಕಾರಿನಲ್ಲಿ ಇಬ್ಬರನ್ನೂ ಮನೆಗೆ ಒಯ್ದು ಗೃಹಮಂತ್ರಿಗೆ ಲೈಟನಿಂಗ್‌ಕಾಲ್‌ಬುಕ್‌ಮಾಡಿದ. ಅವಧಾನಿ ಫೋನೆತ್ತಿದ್ದಾಗ ಬಹಳ ವಿರಾಮವಾದ ಸಂಭಾಷಣೆ ಸುಮಾರು ಐದು ನಿಮಿಷ ನಡೆಯಿತು. ಗೃಹಮಂತ್ರಿ ಈಗೇನು ಬರೆಯುತ್ತಿದ್ದೀರೆಂದು ಅವಧಾನಿಯನ್ನು ಕೇಳಿರಬೇಕು. ಅವಧಾನಿ ಸುಶ್ರಾವ್ಯವಾದ ಧ್ವನಿಯಲ್ಲಿ ತನ್ನ ಈಚೀನ ಪದ್ಯವನ್ನು ಹಾಡುತ್ತಿದ್ದಾಗ ವೆಂಕಟರಮಣಯ್ಯ ಹಿಗ್ಗುತ್ತ ತುದಿಗಾಲಿನ ಮೇಲೆ ನಿಂತಿದ್ದ.

ಮಹೇಶ್ವರಯ್ಯನಿಗೆ ಗಾಬರಿ. ಎಲ್ಲಿ ಅವಧಾನಿ ಕೃಷ್ಣಪ್ಪನ ಬಗ್ಗೆ ಮರೆಯುವನೋ ಎಂದು. ಪದ್ಯ ಮುಗಿಯುತ್ತಿದ್ದಂತೆ ಅವಧಾನಿಯನ್ನು ಹಗುರವಾಗಿ ಮುಟ್ಟಿ ‘ಹೆಸರು ಕೃಷ್ಣಪ್ಪ ಗೌಡ ಅಂತ’ ಎಂದರು. ಅವಧಾನಿ ಇದೊಂದು ಸಾಮಾನ್ಯ ಸಂಗತಿ ಎನ್ನುವಂತೆ ಬಂಧನದ ವಿಷಯ ಹೇಳಿ ಏನನ್ನೋ ಕೇಳಿಸಿಕೊಳ್ಳುತ್ತ ತಾನು ಫೋನ್‌ಮಾಡುವ ನಂಬರನ್ನೂ, ಅದು ಗೃಹಮಂತ್ರಿಯ ಪರಮ ಅಭಿಮಾನಿಗಳಾದ ವೆಂಕಟರಮಣಯ್ಯನದೆಂದೂ ತಿಳಿಸಿದ. ವೆಂಕಟರಮಣಯ್ಯ ಇದರಿಂದ ಹಿರಿ ಹಿರಿ ಹಿಗ್ಗಿದಂತೆ ಕಂಡಿತು. ಅವಧಾನಿ ಫೋನನ್ನು ಕೆಳಗಿಟ್ಟು ಇನ್ನು ಹತ್ತು ನಿಮಿಷಗಳ ಒಳಗಾಗಿ ನಿಮ್ಮ ಕೆಲಸವಾಗುತ್ತೆ ಎಂದು ಮಹೇಶ್ವರಯ್ಯನಿಗೆ ಹೇಳಿದ. ವೆಂಕಟರಮಣಯ್ಯ ಕಪಾಟಿನಿಂದ ಸ್ಕಾಚನ್ನು ತೆಗೆದು ಮೂವರಿಗೂ ಸುರಿದ. ಈಗಾಗಲೇ ಮಧ್ಯ ರಾತ್ರೆ ಕಳೆದಿತ್ತು. ಇವೆಲ್ಲ ತನ್ನ ಪಾಲಿಗೆ ಭೀಕರವಾಗಿದ್ದ ರಾತ್ರೆ ಹೊತ್ತಲೆ ನಡೆದದ್ದೆಂದು ಕೃಷ್ಣಪ್ಪ ಆಶ್ಚರ್ಯಪಡುತ್ತ ಕೇಳಿಸಿಕೊಂಡ. ಹತ್ತು ನಿಮಿಷಗಳ ನಂತರ ಫೋನ್‌ಬಂತು. ಜೋಷಿ ಫೋನಲ್ಲಿ ಸಿಗುತ್ತಿಲ್ಲವೆಂದು ಬೆಳಗಾದೊಡನೆ ಮಂತ್ರಿಗಳೇ ಖುದ್ದು ಅವನಿಗೆ ಫೋನ್‌ಮಾಡುವುದಾಗಿಯೂ, ವೆಂಕಟರಮಣಯ್ಯನ ಮನೆಗೆ ಜೋಷಿಯಿಂದಲೇ ಫೋನ್‌ಬರುವುದೆಂದೂ ಮಂತ್ರಿಯ ಪಿ. ಎ. ತಿಳಿಸಿದ. ಮಹೇಶ್ವರಯ್ಯ ವೆಂಕಟರಮಣಯ್ಯ ಮನೆಯಲ್ಲೆ ರಾತ್ರೆ ಮಲಗಿದ್ದರು. ಬೆಳಗಾದ ಮೇಲೂ ಫೋನ್‌ಬರಲಿಲ್ಲ. ವೆಂಕಟರಮಣಯ್ಯ ಸ್ನಾನ ಮಾಡಿ ಅಂಗಡಿಗೆ ಹೊರಟು ಹೋದ. ಅವಧಾನಿ ಏಳುವುದು ಮಧ್ಯಾಹ್ನದ ಮೇಲೆ. ಮಹೇಶ್ವರಯ್ಯ ದೇವಿಯನ್ನು ಮನಸ್ಸಿನಲ್ಲೆ ಸ್ಮರಿಸುತ್ತ ಕಾದರು.

‘ಅಂತೂ ಕೊನೆಗೆ ಫೋನ್‌ಬಂತು. ನಿನ್ನ ಬಿಡುಗಡೆಯಾಯ್ತು. ನೋಡು ಕೃಷ್ಣಪ್ಪ ಯಾವತ್ತೂ ರಾಜನ ಕಣ್ಣಿಗೆ ಬೀಳದಂತೆ ಬದುಕಬೇಕು. . . . ಆದರೆ ಅದು ನಿನ್ನ ಜಾಯಮಾನಕ್ಕೆ ಸಾಧ್ಯವಿಲ್ಲ. ನಿನ್ನ ಹಣೆಯಬರಹ. . . ಬಿಡು – ಇನ್ನು ಆ ಮಾತೇ ಬೇಡ. ಸಂಜೆ ಹೋಗುವ’ ಎಂದು ನಿಟ್ಟುಸಿರಿಟ್ಟರು.