ಇನ್ನೂ ಐವತ್ತು ತುಂಬುವುದಕ್ಕೆ ಮುಂಚೆಯೇ ಅವನು ಸಾಯುತ್ತಾ ಮಲಗಿದ್ದಾನೆ. ಸಾವಿನ ಜತೆ ಹೋರಾಡುತ್ತ ಅವನು ನೆನಪು ಮಾಡಿಕೊಂಡು ಹೇಳುವ ಕೆಲವು ಘಟನೆಗಳಿಂದ ಅವನ ಮನಸ್ಥಿತಿ ಊಹಿಸಬಹುದು. ಹುಡುಗಾಟಿಕೇಲಿ ಕೃಷ್ಣಪ್ಪಗೌಡ ಬಹಳ ಒಳ್ಳೆ ಈಜುಗಾರ. ನದಿ ತುಂಬಿ ಹರೀತಿದ್ದಾಗ ಒಂದು ದಂಡೆಯಿಂದ ಧುಮುಕಿ ಇನ್ನೊಂದು ದಂಡೆ ಸೇರತ ಇದ್ದ. ಅವನು ಒಮ್ಮೆ ಹೀಗೆ ಈಜು ಬಿದ್ದಾಗ – ಇನ್ನೇನು ಅರ್ಧ ಹೊಳೆ ದಾಟಿಯಾಗಿದೆ, ಅವನ ಜತೆ ಈಜು ಬಿದ್ದ ಗೆಳೆಯ ಒಂದು ಮಾರಿ ಹಿಂದಿದಾನೆ – ಕೃಷ್ಣಪ್ಪನ ಕೈ ಬತ್ತಿ ಬಂತಂತೆ. ಮುಂದೆ ಹೋಗಲಿಕ್ಕೆ ಆಗ್ಲಿಲ್ಲಂತೆ. ‘ಮಾರಾಯ ನಾನು ಮುಳುಗ್ತಿದೀನಿ. ನೀನು ಹೋಗಯ್ಯ’ ಅಂತ ಅವಸರ ಅವಸರವಾಗಿ ಕೂಗಿ ಮುಳುಗೇ ಬಿಟ್ಟನಂತೆ. ಅವನ ಗೆಳೆಯ – ಹನುಮನಾಯ್ಕನೆಂದು ಅವನ ಹೆಸರು – ಸಾಹಸ ಮಾಡಿ ಉಳಿಸಿದನಂತೆ. ಆದರೆ ಒಂದು ಕ್ಷಣ ತಾನು ಸತ್ತೇ ಸಾಯ್ತೀನಿ ಅನ್ನಿಸಿದಾಗ ತನ್ನ ಮನಸ್ಸು ನಿರ್ವಿಕಾರವಾಗಿತ್ತಲ್ಲ ಅದನ್ನು ಕೃಷ್ಣಪ್ಪ ನೆನೆಸಿಕೊಳ್ಳುವಾಗು ಪಾರ್ಶ್ವವಾಯು ಬಡಿದು ಮಲಗಿದವನ ಎರಡು ದೊಡ್ಡ ಕಣ್ಣುಗಳಲ್ಲೂ ನೀರು ತುಂಬುವುದುಂಟು.

ಕೃಷ್ಣಪ್ಪ ಕಡುಕೋಪಿ ಬೇರೆ. ಹೈಸ್ಕೂಲು ಓದುತ್ತ ಇದ್ದಾಗ ತನ್ನ ಸ್ನೇಹಿತನೊಬ್ಬನ ರಿಪೇರಿಗೆ ಕೊಟ್ಟ ವಾಚು ತರೋಕ್ಕೆ ಅಂತ ಅಂಗಡಿಗೆ ಹೋದ. ಅಂಗಡಿಯವನಿಗೂ ಈತ ಗೊತ್ತು. ಚೆನ್ನಾಗಿಯೇ ಗೊತ್ತು. ಆದರೆ ಬಡವನಾಗಿದ್ದ ಈ ಕೃಷ್ಣಪ್ಪನ ಓಡಾಟದ ಗತ್ತು ಕಂಡರೆ ಈ ಅಂಗಡಿಯವನಿಗೆ ಅಸೂಯೆ ‘ನಿಮ್ಮನ್ನು ನಂಬಿ ಹೇಗೆ ಕೊಡೋಕೆ ಸಾಧ್ಯರೀ ಈ ವಾಚನ್ನು?’ ಎಂದನಂತೆ ಒಂದು ಕಣ್ಣಿಗೆ ಭೂತ ಕನ್ನಡಿಯ ಗಾಜು ಸಿಕ್ಕಿಸಿಕೊಂಡು – ವಕ್ರವಾಗಿ ನೋಡುತ್ತ. ‘ರೀ ನಿಮ್ಮ ಈ ಗಾಜಿನ ಗೂಡನ್ನು ಪುಡಿ ಪುಡಿ ಮಾಡಿಬಿಡ್ತೀನೆ ಇನ್ನೊಂದು ಸಾರಿ ನೀವು ಹಾಗೆ ಅಂದರೆ’ ಅಂದನಂತೆ ಕೃಷ್ಣಪ್ಪ. ‘          ಬಡವನ ಸಿಟ್ಟು ದವಡೆಗೆ ಮೂಲ’ ಅಂದನಂತೆ ಅಂಗಡಿಯವನು – ಚಿಮಟದಿಂದ ಏನೋ ಕೆದಕುತ್ತ. ಹಾಗಂದಿದ್ದೇ ರಿಪೇರಿ ಸಲಕರಣೆಗಳನ್ನೂ ಬಿಚ್ಚಿದ ವಾಚುಗಳನ್ನೂ ಇಟ್ಟಿದ್ದ ಗಾಜಿನ ಗೂಡನ್ನು ಎತ್ತಿ ಕೃಷ್ಣಪ್ಪ ಫಳ್‌ಅಂತ ನೆಲಕ್ಕೆ ಒಗೆದು ನಡೆದು ಬಿಟ್ಟನಂತೆ. ಅವನ ಕೋಪ ಕಂಡಾಗ ಎಂಥವರಾದರೂ ನಡುಗಿಬಿಡ್ತ ಇದ್ದರು.

ಇಂಥ ದೂರ್ವಾಸ ಮುನಿ ಕೈಕಾಲು ಎತ್ತಲಿಕ್ಕೆ ಆಗದೇ ಮಲಗಿರೋದನ್ನು ನೋಡೋಕೆ ಕಷ್ಟ ಆಗಿತ್ತು. ಈಗ ಕೋಪ ಬಂದರೆ ಅವನ ತುಟಿಗಳು ನಡುಗಿ, ಮೂಗಿನ ಸೊಳ್ಳೆ ಹಿಗ್ಗಿ, ಕಣ್ಣುಗಳಲ್ಲಿ ನೀರು ತುಂಬುವುದು ಅಷ್ಟೆ.

ಅಥವಾ ಮಲಗಿದಲ್ಲಿಂದಲೇ ಕೋಲನ್ನೆತ್ತಿ ಹೆಂಡತಿಯನ್ನು ಜಪ್ಪಲು ಪ್ರಯತ್ನಿಸುತ್ತಾನೆ. ಖಾಹಿಲೆ ಹಿಡಿದ ಗಂಡನ ಶುಶ್ರೂಷೆ ಇತ್ತ, ಅತ್ತ ಬ್ಯಾಂಕಿನಲ್ಲಿ ಗುಮಾಸ್ತೆ ಕೆಲಸ, ಈ ನಡುವೆ ವರಾತ ಹಿಡಿದು ಮೂಲೆಯಲ್ಲಿ ಸಿಂಬಳ ಸುರಿಸುತ್ತ ಕೂತ ಐದು ವರ್ಷದ ಮಗಳು – ಇವೆಲ್ಲ ಕೂಡಿಕೊಂಡು ಹೆಂಡತಿ ಹುಚ್ಚಾಗುವಳು. ಅವಳ ಕೂದಲು ಯಾವಾಗಲೂ ಕೆದರಿರುವುದು ‘ನಿಮ್ಮ ಒಣಗರ್ವಕಷ್ಟು ಬೆಂಕಿ ಹಾಕ’ ಎಂದು ಗಂಡನ ಮೇಲೆ ಗೊಣಗುತ್ತ ಅವಳು ಒಮ್ಮೆ ತನ್ನ ಮಗಳ ತುಟಿ ಹರಿದು ರಕ್ತ ಸೋರುವಷ್ಟು ಬಿರುಸಾಗಿ ಅವಳ ಮೂತಿಯನ್ನು ಹಿಂಡಿದ್ದುಂಟು. ಇಷ್ಟೊಂದು ರಂಪದಲ್ಲೂ ಕೃಷ್ಣಪ್ಪನ ಮನಸ್ಸು ನಿರ್ವಿಕಾರವಾಗಿ ಬಿಡುವುದೂ ಇಲ್ಲವೆಂದಲ್ಲ. ಅವನ ಜೀವನ ಚರಿತ್ರೆ ಬರೆಯಲೆಂದು ನಿತ್ಯ ಬರುತ್ತಿದ್ದ ಭೋಳೆ ಸ್ವಭಾವದ ನಾಗೇಶನಿಗೆ ಕೃಷ್ಣಪ್ಪ ತನ್ನ ಹಿಂದಿನ ಕಥೆ ಹೇಳಲು ಶುರು ಮಾಡುವ. ತನ್ನ ಸದ್ಯದ ಸ್ಥಿತಿಯನ್ನು ಅರಿಯುವುದಕ್ಕಾಗಿ ಅವನು ಹೇಳಿಕೊಳ್ಳುತ್ತಿದ್ದುದರ ಆಳ ಅಗಲ ಎಳೆಯನಾದ ನಾಗೇಶನಿಗೆ ತಿಳಿಯುತ್ತಿತ್ತೊ ಇಲ್ಲವೊ ಎಂಬುದು ಕೃಷ್ಣಪ್ಪನ್ನೇನೂ ಬಾಧಿಸಿದಂತೆ ಕಾಣುವುದಿಲ್ಲ.

ಬಾಲಕನಾಗಿದ್ದಾಗ ಕೃಷ್ಣಪ್ಪನಿಗೆ ದನ ಕಾಯುವ ಕೆಲಸ. ಕಂಬಳಿಕೊಪ್ಪೆ ಹಾಕಿಕೊಂಡು ಕೈಯಲ್ಲೊಂದು ಕತ್ತಿ ಕೊಳಲು ಹಿಡಿದು ತನ್ನ ಹಳ್ಳಿಯ ದನಗಳನ್ನೆಲ್ಲ ಮೇಯಿಸಿಕೊಂಡು ಬರುತ್ತಿದ್ದ ಕಥೆಯನ್ನವನು ಅದರಲ್ಲೇನೋ ತನಗೆ ಮಾತ್ರ ತಿಳಿಯುವ ಅರ್ಥಗಳು ತುಂಬಿವೆ ಎನ್ನುವಂತೆ ಹೇಳುವುದು. ಸಾಯುತ್ತಿರುವ ಅವನಿಗೆ ತನ್ನ ಹಿಂದಿನ ಬದುಕಿನಲ್ಲಿ ಆಗೀಗ ದಿವ್ಯವಾದದ್ದು ಪ್ರವೇಶಿಸಿದ್ದಿದೆ ಎಂದು ಈಗ ಅನ್ನಿಸುವುದು ವಸ್ತು ನಿಷ್ಠ ಸತ್ಯವೋ, ಅಥವಾ ಅಂಥ ನಂಬಿಕೆ ಸದ್ಯದ ಕ್ಷುದ್ರ ದೆಸೆಯನ್ನು ಗೆಲ್ಲಲು ಅಗತ್ಯವೋ ಹೇಗೆ ಹೇಳುವುದು? ವೈಚಾರಿಕವಾಗಿ ಕೃಷ್ಣಪ್ಪ ನಿರೀಶ್ವರವಾದಿ; ಜೊತೆಗೇ, ಕಬೀರ, ಅಲ್ಲಮ, ನಾನಕ, ಮೀರ, ಪರಮಹಂಸ ಇತ್ಯಾದಿ ದೈವಿಕ ತಲೆ ತಿರುಕರನ್ನು ಮೆಚ್ಚುಗೆ ಹಾಸ್ಯ ಅನುಮಾನಗಳಿಂದ ಅವರೆಲ್ಲ ತನಗೆ ಪರಮ ಆಪ್ತರೆಂಬಂತೆ ಕಿಚಾಯಿಸುವವನು. ಆದ್ದರಿಂದ ಅವನ ಒಟ್ಟು ನಿಲುವೇನು ಎಂದು ಹೇಳುವುದು ಕಷ್ಟದ ವಿಷಯವೇ. ಹುಡುಗಾಟಿಕೆಯಲ್ಲಿ ಬೆಳಗಿನ ಜಾವ ಮನೆಯ ಎದುರು ನಿಂತು ದನಕರುಗಳನ್ನು ಬಿಡಿಸಿಕೊಂಡು, ಗುಡ್ಡ ಹೊಳೆ ಬಯಲುಗಳಲ್ಲಿ ಅವುಗಳನ್ನು ಮೇಯಿಸುತ್ತ ಓಡಾಡಿಸಿಕೊಂಡಿದ್ದು, ಸಂಜೆ ಹಿಂದಕ್ಕೆ ಓಡಿಸಿಕೊಂಡು ಬರುವುದು. ಮರದ ಕೆಳಗೆ ಕೂತು ಆಲಸ್ಯದ ಕಣ್ಣುಗಳಲ್ಲಿ ಮೇಯುವ ದನಕರಗಳನ್ನು ಗಮನಿಸುತ್ತ, ಕೊಳಲಿನಲ್ಲಿ ತನ್ನ ಮನಸ್ಸಿನ ಲಹರಿಯನ್ನು ನುಡಿಸುತ್ತ ತಾನೇನು ಯೋಚಿಸುತ್ತಿದ್ದೆ ಆಗ ಎಂಬುದನ್ನವನು ನೆನಪು ಮಾಡಿಕೊಳ್ಳಲು ಪ್ರಯತ್ನಿಸುವಾಗ ಒಂದು ಮುಖ್ಯ ಘಟನೆ ಅವನ ಕಣ್ಣೆದುರು ನಿಲ್ಲುತ್ತದೆ. ಅದನ್ನು ಹೇಳುವ ಮುಂಚೆ ಇದ್ದಕ್ಕಿದ್ದಂತೆ ಅವನು ‘ಮಾರಾಯರೆ – ಆಗ ನಾನೇನು ಸುಖವಾಗಿದ್ದೇಂತ ತಿಳೀಬೇಡಿ – ಗದ್ದೇಲಿ ಹಸಿರು ಕಾಣಿಸ್ತು ಅಂದರೆ ನನ್ನ ಕಥೆ ಮುಗಿತು ಅಂತ ತಿಳಿಕೊಳ್ಳಿ. ದನಕರಗಳು ಹುಚ್ಚೆದ್ದು, ಬೇಲಿ ಗೀಲಿ ಕಿತ್ತು ನುಗ್ಗಿ ಬಿಡ್ತಿದ್ದುವು ಗದ್ದಗೆ. ನಾನೊಬ್ಬನೆ ತಲೆ ಕೆಟ್ಟವನ ಹಾಗೆ ಅವುಗಳನ್ನು ಅಟ್ಟುತ್ತ ಕೊನೆಗೆ ಕೈಸಾಗದೆ ಕೂತುಬಿಡ್ತಿದ್ದೆ – ‘ಧೂ’ ಎಂಬ ಎಂಬ ಮಳೆಯಲ್ಲಿ ಮಂಕು ಬಡಿದವನ ಹಾಗೆ. ಬೀಳ್ತಿತ್ತು ನೋಡಿ ಆಗ ಬೆನ್ನ ಮೇಲೆ’ – ಹೇಳುತ್ತ ಕೃಷ್ಣಪ್ಪ ನಗುತ್ತಾನೆ ಈಗ. ಕಣ್ಣುಗಳಲ್ಲಿ ಆಗಿನ ದಿಗಿಲನ್ನೂ ಬೀಳುತ್ತಿದ್ದ ಪೆಟ್ಟುಗಳ ನೋವನ್ನೂ ನಟಿಸಿ ತೋರಿಸುತ್ತಾನೆ. ಇದನ್ನು ನೆನಪಿಸುತ್ತಿದಂತೆ ದನ ಕಾಯುವದನ್ನು ತನ್ನಿಂದ ಪಾರು ಮಾಡಿದ ಮಹೇಶ್ವರಯ್ಯ ಅವನಿಗೆ ನೆನಪಾಗುತ್ತಾರೆ.

ಮಹೇಶ್ವರಯ್ಯ ಯಾರೋ ಎತ್ತ ಕಡೆಯವರೋ ತಿಳಿಯದು. ಯಾವುದೋ ಊರಿಗೆ ಬರುತ್ತಾರೆ ಅನ್ನಿ. ಮನೆ ಗಿನೆ ಓರಣ ಮಾಡಿಕೋತಾರೆ. ಇರುವುದು ಒಬ್ಬರೆ ಆದರೂ ಅಡಿಗೆಯವನನ್ನು ಇಟ್ಟುಕೊಳ್ಳುತ್ತಾರೆ. ತನ್ನ ಬಟ್ಟೆ ಮಾತ್ರ ತಾನೇ ಒಗೆದುಕೊಳ್ಳುತ್ತಾರೆ. ಅವರ ಬಾಯಿಂದ ಕಾಳಿದಾಸನ ಸಂಸ್ಕೃತಿ ಕೇಳಬೇಕು, ಹಿಂದೂಸ್ತಾನಿ ಗಾಯನ ಕೇಳಬೇಕು – ದೊಡ್ಡ ರಸಿಕ. ತಾಂಬೂಲದಿಂದ ಕೆಂಪಾದ ಅವರ ತುಟಿಗಳ ಮೇಲಿನ ಗಿರಿಜಾ ಮೀಸೆ, ಅವರ ಕಿವಿಯಲ್ಲಿನ ಹೊಳೆಯುವ ವಜ್ರದ ಒಂಟಿಗಳು, ಅವರ ಮುಚ್ಚುಕೊಟು, ಶುಭ್ರವಾದ ಕಚ್ಚೆ ಹಾಕಿದ ಪಂಚೆ, ಅವರು ಹಿಡಿದ ಬೆಳ್ಳಿ ಕಟ್ಟಿದ ಬೆತ್ತ, ಅವರ ಕಣ್ಣಿನ ಪ್ರಶಾಂತ ಭಾವ – ಇತ್ಯಾದಿಗಳನ್ನು ವಿವರಿಸುತ್ತಿದ್ದಂತೆಯೇ ಅವರು ದೊಡ್ಡ ವಿರಾಗಿಗಳು ಎಂದೂ ಕೃಷ್ಣಪ್ಪ ಹೇಳುತ್ತಾನೆ. ಅವರು ಸ್ಪಷ್ಟ ಹೇಳಿಕೊಂಡಿರದಿದ್ದರೂ ಕೃಷ್ಣಪ್ಪನ ಊಹೆ ಅವರ ಹೆಂಡತಿ ಯಾರನ್ನೋ ಇಟ್ಟುಕೊಂಡಿದ್ದು ತಿಳಿದು ಮಹೇಶ್ವರಯ್ಯ ಮನೆ ಬಿಟ್ಟಿದ್ದು ಎಂದು. ಲಕ್ಷಾಧೀಶ ಮನುಷ್ಯ ಹೆಂಡತಿಗಷ್ಟು, ಆಸ್ತಿ ಬಿಟ್ಟು, ಉಳಿದ ಹಣ ಬ್ಯಾಂಕಲ್ಲಿಟ್ಟು, ಹೀಗೆ ನಿವೃತ್ತರಾಗಿ ಊರೂರು ಅಲಿಯುತ್ತಿದ್ದರು. ಯಾವಾಗಲೂ ಓದುತ್ತಿರುತ್ತಿದ್ದರು. ಆತ ತ್ರಿಕಾಲ ಜ್ಞಾನಿಯೆಂದು ಕೃಷ್ಣಪ್ಪನ ನಂಬಿಕೆ. ಮಹೇಶ್ವರಯ್ಯ ಎಲ್ಲಾದರೂ ಬಂದರು ಎನ್ನಿ. ಬಂದು ಕೂತವರು ಇದ್ದಕಿದ್ದಂತೆ ‘ಭೋ’ ಎನ್ನುವುದುಂಟು. ಆಗ ಅವರ ಮುಖದಲ್ಲಿ ಕಳವಳ ಕಾಣಿಸಿಕೊಳ್ಳುತ್ತದೆ. ಅವರನ್ನು ಕಂಡರೆ ಎಲ್ಲಿ ಅವರು ‘ಭೋ’ ಎಂದು ಬಿಡುವರೋ ಎಂದು ಜನ ಹೆದರುತ್ತಿದ್ದರು. ಹಾಗೆ ಅನ್ನದೆ ಕೂಡ ಅವರು ಇರಲಾರರು. ಆದ್ದರಿಂದಲೇ ಬನ್ನಿ ಎಂದರೆ ಮಹೇಶ್ವರಯ್ಯ ‘ಆ ಗ್ರಹಸ್ಥನಿಗೆ ಏನು ಅನಿಷ್ಟ ಕಾದಿದೆಯೋ ಗೊತ್ತಿಲ್ಲಯ್ಯ – ಆದ್ದರಿಂದ ನಾನು ಅವನ ಮನೆಗೆ ಬರಲ್ಲ’ ಎಂದು ಬಿಡುತ್ತಿದ್ದರು.

ಮುಂದಿನ ಅನಿಷ್ಟ ಕಂಡು ‘ಭೋ’ ಅನ್ನುತ್ತಿದ್ದ ಮಹೇಶ್ವರಯ್ಯನ ದುರಂತವೆಂದರೆ ಅವರಿಗೆ ಭವಿಷ್ಯದಲ್ಲಿ ಒಳ್ಳೆಯದು ಕಾಣಿಸುತ್ತಿದ್ದುದೇ ತೀರ ಅಪರೂಪ. ಕೃಷ್ಣಪ್ಪನ ಬಗ್ಗೆ ಮಾತ್ರ ಅವರು ಒಮ್ಮೆ ಒಳ್ಳೆಯದನ್ನು ಕಂಡದ್ದುಂಟು. ಅದು ನಡೆದದ್ದು ಹೀಗೆ:

ಕೊಳಕು ಚಡ್ಡಿ ಬನೀನು ಹಾಕಿಕೊಂಡು ಹೊಳೆದಂಡೆಯ ಅಶ್ವತ್ಥ ಮರದ ಕೆಳಗೆ ಕೃಷ್ಣಪ್ಪ ಕೂತಿದ್ದ. ಕೊಯಿಲು ಮುಗಿದಿದ್ದರಿಂದ ಅವನಿಗೆ ದನಗಳು ಗದ್ದೆ ನುಗ್ಗುವ ಭಯವಿರಲಿಲ್ಲ. ನದಿಯ ಝಳಝಳ ಶಬ್ದ, ದನಗಳ ಕೊರಳಿನ ಗಂಟೆ ಇವುಗಳು ಕಿವಿಗಳ ಮೇಲೆ ಬೀಳುತ್ತಲಿದ್ದಾಗ ಕೃಷ್ಣಪ್ಪನಿಗೆ ಖುಷಿಯಾಗಿರಬೇಕು. ಎಂದಿಗಿಂತ ಹೆಚ್ಚು ಖುಷಿಯಾಗಿರಬೇಕು. ಕೊಳಲನ್ನೂದುವ ಬದಲು ಕುಮಾರವ್ಯಾಸ ಭಾರತ ಹಾಡಬೇಕೆನ್ನಿಸಿತ್ತು. ನಾಲ್ಕು ವರ್ಷ ಸ್ಕೂಲ್‌ಗೆ ಹೋಗಿದ್ದ ಕೃಷ್ಣಪ್ಪ ಭಾರತವನ್ನು ಓದಿ ಕಲಿತದ್ದಲ್ಲ; ಅವನ ಮಾಸ್ತರರಾಗಿದ್ದ ಜೋಯಿಸರು ಓದುವುದನ್ನು ಆಗೀಗ ಕೇಳಿ ಕಲಿತಿದ್ದು. ಭಾವವಶವಾಗಿ ಹಾಡಿಕೊಳ್ಳಲು ಪ್ರಾರಂಭಿಸಿದ. ಅವನ ಹಳ್ಳಿಯ ಹತ್ತಿರದ ಪೇಟೆಯೊಂದರಲ್ಲಿ ಆಗ ಬೀಡುಬಿಟ್ಟಿದ್ದ ಮಹೇಶ್ವರಯ್ಯ ತಮ್ಮ ಕೋಟನ್ನು ಒಗೆಯುತ್ತ ನದಿಯಲ್ಲಿ ಇದ್ದರು. ಅವರು ಅಲ್ಲಿಗೇ ಯಾಕೆ ಒಗೆಯಲು ಬಂದಿದ್ದರೆಂಬುದೂ ಆಶ್ಚರ್ಯ. ಅವತ್ತು ಬೆಳಿಗ್ಗೆ ಅವರು ಪೇಟೆಯಲ್ಲಿ ನಡೆಯುತ್ತಿದ್ದಾಗ ಅರೆ ಹುಚ್ಚನಾಗಿಬಿಟ್ಟಿದ್ದ ನಿವೃತ್ತ ಶಾಲಾ ಮಾಸ್ತರನೊಬ್ಬ ಅವರನ್ನು ನಿಲ್ಲಿಸಿದನಂತೆ. ಕೋಟನ್ನು ಬೇಡಿದನಂತೆ ‘ಕೊಡ್ತೀನಿ ಮಾರಾಯರೆ. ಆದರೆ ತೊಟ್ಟಿದ್ದಲ್ಲವೆ? ಒಗೀಬೇಕು’ ಎಂದು ಸೋಪುಕೊಂಡು ಹಾಗೇ ನಡೆಯುತ್ತ ಈ ಹೊಳೆಯ ಈ ದಂಡೆಗೆ ಬಂದಿದ್ದರಂತೆ. ಎರಡು ಮೈಲಿಯಾದರೂ ಆಗತ್ತೆ, ಪೇಟೆಗೂ, ಈ ನದಿಗೂ.

ಮಹೇಶ್ವರಯ್ಯ ಹಾಡುತ್ತಿದ್ದ ಹುಡುಗನ ಎದುರು ನಿಂತು ‘ಭೋ’ ಎಂದರು. ಕೃಷ್ಣಪ್ಪ ನಾಚಿಕೆಯಿಂದ ಹಾಡು ನಿಲ್ಲಿಸಿದ. ಎತ್ತಲೋ ದೂರ ನೋಡುತ್ತ, ಕೈಯಲ್ಲಿ ನೀರು ಸೋರುತ್ತಿದ್ದ ಕೋಟು ಹಿಡಿದ ಮಹೇಶ್ವರಯ್ಯ ‘ಏ ಹುಡುಗ ದನಗಳನ್ನು ಕಟ್ಟಿ ಹಾಕಿದ ಮೇಲೆ ಸಾಯಂಕಾಲ ಇಲ್ಲಿ ಬಂದು ನನಗೆ ಕಾದಿರು’ ಎಂದು ಕೋಟನ್ನು ಹಿಂಡಿ ಅಲ್ಲಿಂದ ಹೊರಟು ಹೋದರು. ತಾನು ಕೂತಿದ್ದು ಅಶ್ವತ್ಥ ಮರದ ಬುಡದಲ್ಲಿ; ಎದುರಿಗಿದ್ದ ಪೇರಳೆ ಮರದಲ್ಲಿ ಎರಡು ಪಂಚವರ್ಣದ ಗಿಳಿಗಳಿದ್ದವು ಎಂದು ಕೃಷ್ಣಪ್ಪ ನೆನಪು ಮಾಡಿಕೊಳ್ಳುತ್ತಾನೆ. ಆ ಮರದ ಮೇಲೆ ಅಪರೂಪದ ಬಣ್ಣದ ಹಕ್ಕಿಯೊಂದನ್ನು ತಾನು ಕಂಡದ್ದುಂಟು ಎಂದು ಹೇಳುತ್ತಾನೆ.

ಸಾಯಂಕಾಲ ಕೃಷ್ಣಪ್ಪ ಕಾದ. ಕೋಲು ಬೀಸಿಕೊಂಡು ಬಂದ ಮಹೇಶ್ವರಯ್ಯ ‘ಅಯ್ಯೋ ಪೆದ್ದು ಹುಡುಗ, ನೀನು ಯಾರೆಂದು ನಿನಗೆ ಇಷ್ಟು ದಿನವೂ ತಿಳಿಯದೇ ಹೋಯಿತೆ? ಬಾ ನನ್ನ ಹಿಂದೆ’ ಎಂದು ಸೀದ ಕೃಷ್ಣಪ್ಪನ ಮನೆಗೆ ಹೋದರು. ಕೃಷ್ಣಪ್ಪನಿಗೆ ತಂದೆ ಇಲ್ಲ. ತಾಯಿ ಅವಳ ಅಣ್ಣನ ಮನೆಯಲ್ಲಿ ಅಣ್ಣನ ಹೆಂಡತಿಯಂದ ಮೂದಲಿಸಿಕೊಳ್ಳುತ್ತ, ಪ್ರತಿನಿತ್ಯ ಕಡುಬಿಗೆ ತಿರುವುತ್ತ, ದನ ಕರುವಿಗೆ ಮುರ ಬೇಯಿಸುತ್ತ, ಗೊಬ್ಬರಕ್ಕೆ ಸೊಪ್ಪು ಹೊತ್ತು ತಂದು ಹಾಕುತ್ತ ಬದುಕುವುದು. ಕೈಯಲ್ಲಿ ಉಂಗುರ, ಹರಳಿನ ಒಂಟಿ, ಬೆಳ್ಳಿ ಕಟ್ಟಿದ ಬೆತ್ತ – ಇವುಗಳನ್ನು ಕಂಡೇ ಕೃಷ್ಣಪ್ಪನ ಮಾವ ದಂಗುಬಡಿದು ನಿಂತ. ಮಹೇಶ್ವರಯ್ಯ ಬೈದರು. ‘ಎಂಥ ಮುಟ್ಠಾಳ ಜನ ನೀವು. ಮನೆಯಲ್ಲಿರುವ ಮಾಣಿಕ್ಯ ನಿಮ್ಮ ಕಣ್ಣಿಗೆ ಬೀಳದೇ ಹೋಯಿತಲ್ಲ’ ಎಂದು ಅವರಿಗೆ ದುಡ್ಡು ಕೊಟ್ಟು, ಗದರಿಸಿದ. ಕೃಷ್ಣಪ್ಪನನ್ನು ಹತ್ತು ಮೈಲಿಯಾಚೆಯ ಊರಲ್ಲಿದ್ದ ಹಾಸ್ಟೆಲಲ್ಲಿ ಬಿಟ್ಟು ಸ್ಕೂಲ್‌ಸೇರಿದರು. ಹಣದ ವ್ಯವಸ್ಥೆ ಮಾಡಿ ಕಣ್ಮರೆಯಾದರು. ವರ್ಷಕ್ಕೊಮ್ಮೆ ಬಂದು ನೋಡುತ್ತಿದ್ದರು. ಕೃಷ್ಣಪ್ಪ ಹೀಗೆ ಬಿ.ಎ. ತನಕ ಓದಿದ್ದು. ತನಿಗೆ ಸಲಿಗೆ ಬೆಳೆದ ಮೇಲೂ ಮಹೇಶ್ವರಯ್ಯ ಆಶ್ಚರ್ಯಕರ ವ್ಯಕ್ತಿಯಾಗಿ ಉಳಿದಿದ್ದರು ಎಂದು ಹಿಂದಿನಿದನ್ನು ನೆನಸಿಕೊಳ್ಳುತ್ತಿದ್ದ ಕೃಷ್ಣಪ್ಪ. ‘ನನಗೆ ಕಷ್ಟ ಬಂದಾಗಲೆಲ್ಲ ಅವರು ಪ್ರತ್ಯಕ್ಷವಾಗಿ ಬಿಡುತ್ತಾರೆ. ನಾನು ಜೈಲಿಗೆ ಹೋದಾಗ ಅವರು ಹಾಜರು. ಹಾಗೆಯೇ ಜ್ವರಗಿರ ಬಂದು ಮಲಗಿದಾಗ. ಮೊದಲನೇ ಚುನಾವಣೆಗೆ ನಿಂತಾಗ ಖರ್ಚಿಗೆಂದು ಸಾವಿರ ರೂಪಾಯಿ ಕೊಟ್ಟುಹೋದರು. ಅವರು ಹೇಗೆ ಬಂದು ಯಾವುದಾದರೂ ಊರಲ್ಲಿ ನೆಲೆಸುತ್ತಿದ್ದರೋ ಹಾಗೇ ಊರನ್ನು ಬಿಟ್ಟೂ ಹೋಗುತ್ತಿದ್ದರು. – ಮನೆಯಲ್ಲಿದ್ದ ಪಾತ್ರೆ, ಪರಟೆ, ಫರ್ನಿಚರು ಎಲ್ಲವನ್ನೂ ಕಂಡಕಂಡವರಿಗೆ ಕೊಟ್ಟು. ವಿಚಿತ್ರ ಮನುಷ್ಯ. ಅವರು ಯಾವ ಜಾತಿ, ಯಾವ ಪಂಗಡ ನನಗೆ ಈಗಲೂ ತಿಳಿಯದು. ಬ್ರಾಹ್ಮಣರೋ ಲಿಂಗಾಯತರೋ ಇದ್ದಿರಬಹುದು – ನಾನು ಮಾಂಸ ತಿನ್ನುವುದು ಬಿಟ್ಟಿದ್ದರಿಂದ ಅವರಿಗೆ ಸಂತೋಷವಾಯಿತೆಂದು ಈ ನನ್ನ ಊಹೆ. ಅವರಿಗೆ ಕುಲೀನ ಹೆಣ್ಣುಗಳೆಂದರೆ ಕಣ್ಣೆತ್ತಿ ನೋಡಲಾರದ ಮರ್ಯಾದೆ. ಆದರೆ ಸೂಳೆಯರೆಂದರೆ ಬಲು ಚಪಲ. ಸಂಸ್ಕೃತದಲ್ಲಿ ಅವರಿಗೆ ಗೊತ್ತಿಲ್ಲದ ಪೋಲಿ ಪದ್ಯವೇ ಇರಲಿಲ್ಲ. ಮಹಾನುಭವ. ಅವರಿಗೆ ರಾಜಕೀಯ ಅಂದರೆ ಚೂರೂ ಆಸಕ್ತಿಯಿರಲಿಲ್ಲ.’

‘ನೀನು ಎಲ್ಲ ಕಷ್ಟ ಎಲ್ಲ ಬವಣೆ ಪಟ್ಟು ನಿನ್ನ ಊರಲ್ಲೇ ಬೆಳೆಯಬೇಕು’ ಎಂದು ಅವರು ಹೇಳಿದ್ದರಂತೆ. ಕೃಷ್ಣಪ್ಪ ತನ್ನ ಹಳ್ಳಿಯ ಹತ್ತಿರದ ನಗರದಲ್ಲೇ ಬೆಳೆದ. ಅವನಿಗಾಗುತ್ತಿದ್ದ ಅವಮಾನಗಳೇನೂ ಮಹೇಶ್ವರಯ್ಯ ಕಳಿಸುತ್ತಿದ್ದ ಹಣದಿಂದ ನಿಲ್ಲಲಿಲ್ಲ. ಬಡವರ ಮನೆ ಹುಡುಗನಲ್ಲವೇ? ಅವನು ಹೈಸ್ಕೂಲು ಓದುವಾಗ ಹಾಸ್ಟೆಲಿನ ವಾರ್ಡ್‌‌ನ್‌ಒಬ್ಬ – ತುಂಬ ಶ್ರೀಮಂತ ಜಮೀಂದಾರ – ಕೃಷ್ಣಪ್ಪನನ್ನು ಅತ್ಯಂತ ತಾತ್ಸಾರದಿಂದ ಕಾಣುತ್ತಿದ್ದ. ಕೃಷ್ಣಪ್ಪನ ಠೀವಿ ಎಲ್ಲರಿಗೂ ಕಣ್ಣು ಕುಕ್ಕುವಂಥದ್ದು. ನಾವು ಇರುವ ಸ್ಥಿತಿಗೂ ಆಗಬೇಕೆಂದು ಹಂಬಲಿಸುವ ಸ್ಥಿತಿಗೂ ಅಂತರವಿದ್ದಾಗ, ಮುಖವಾಡ ನಿಜವಾದ ಮುಖ ಆಗುವ ಮುನ್ನ ಏನೇನು ಸಂಕಟ ಪಡಬೇಕಾಗುತದೆ ಎಂಬುದನ್ನು ಕೃಷ್ಣಪ್ಪ ಹಲವು ಘಟನೆಗಳಿಂದ ವಿವರಿಸುತ್ತಿದ್ದ. ಈಗ ಸಾಯುತ್ತಿರುವಾಗಲೂ ಅಂಥ ಸಂಕಟದಿಂದ ಅವನಿಗೆ ಬಿಡುಗಡೆಯಿರಲಿಲ್ಲ. ಅವನ ಬಡಪಾಯಿ ಹೆಂಡತಿ ಅವನಿಂದ ಪೆಟ್ಟು ತಿಂದು ಅಡಿಗೆ ಮನೆಯಲ್ಲಿ ತೆಲೆ ಕೆದರಿ ನಿಂತು, ‘ಇವರೊಬ್ಬ ಮಹಾನಾಯಕರಂತೆ, ಕ್ರಾಂತಿ ಮಾಡ್ತಾರಂತೆ. ಹೆಂಡಿತೀನ್ನ ಹೊಡೆಯೋದು ಮೊದಲು ನಿಲ್ಲಿಸಲಿ ನೋಡುವ’ ಎಂದು ಗೊಣಗುವಾಗ ಕೃಷ್ಣಪ್ಪ ಖಿನ್ನನಾಗುತ್ತಾನೆ. ತನ್ನ ದುರಹಂಕಾರವನ್ನು ಹದ್ದಿನಲ್ಲಿಡಲು ಮಹೇಶ್ವರಯ್ಯ ಕಲಿಸಿದ್ದ ಹಾಸ್ಯಪ್ರವೃತ್ತಿ, ಈ ತನ್ನ ತೇಜಸ್ಸುಕಳೆದುಕೊಂಡ ದೇಹದಿಂದ ಬಿಟ್ಟೇ ಹೋಯಿತೆ ಎಂದು ತಬ್ಬಿಬ್ಬಾಗುತ್ತಾನೆ.

ಯಾವುದೋ ಸಣ್ಣ ತಪ್ಪಿಗಾಗಿ ಹಾಸ್ಟೆಲ್‌ವಾರ್ಡನ್‌ಒಮ್ಮೆ ಕೃಷ್ಣಪ್ಪನಿಗೆ ಹೊಡೆಯುವ ಧೈರ್ಯ ಮಾಡಿದನಂತೆ. ಕೊಂದು ಬಿಡುವಂತೆ ಅವಡುಗಚ್ಚಿ ಬೆತ್ತ ತೆಗೆದುಕೊಂಡು ಉಳಿದ ಎಲ್ಲ ಹುಡುಗರ ಎದುರು ಅವನು ರೌದ್ರಾವತಾರ ತಾಳಿ ನಿಂತ. ಚಾಚಿದ ಗಲ್ಲ, ಗುಳಿಬಿದ್ದ ಕಣ್ಣುಗಳು, ಮೈಲೆ ಕಜ್ಜಿಯಿಂದ ತೂತಾದ ಮುಖದ ಈ ಕುಳ್ಳ ವಾರ್ಡ್‌‌ನ್‌ಸ್ವಭಾವತಃ ಪುಕ್ಕ. ಅವನ ಕೀರಲು ದನಿಯ ಆರ್ಭಟ ಕೇಳಿ ಕೃಷ್ಣಪ್ಪನಿಗೆ ಹೇಸಿಗೆ ಉಂಟಾಯಿತು. ತನ್ನ ನಾಯಕತ್ವ ಒಪ್ಪಿಕೊಂಡಿದ್ದ ಹುಡುಗರೆಲ್ಲ ಬೆರಗಾಗಿ ಮುಂದೇನು ತಿಳಿಯದೆ ನಿಂತಿದ್ದರು. ಕೃಷ್ಣಪ್ಪ ವಾರ್ಡನ್‌ಗೆ ಬೆನ್ನು ತಿರುಗಿಸಿದ. ಚಡ್ಡಿಯನ್ನು ಬಿಚ್ಚಿದ. ಅಂಡಿನ ಮೇಲೆ ಹಣ್ಣಾಗಿ ಕೆಂಪಗೆ ಗುಂಡಗೆ ಇದ್ದ ಕುರ ಒಂದನ್ನು ಬೆರಳಿನಿಂದ ತೋರಿಸುತ್ತ, ಕತ್ತು ತಿರುಗಿಸಿ, ‘ಸ್ವಾಮಿ ಈ ಕುರ ಇರೋ ಜಾಗ ಬಿಟ್ಟು ಇನ್ನೆಲ್ಲಾದರೂ ಹೊಡೀರಿ’ ಎಂದು ಪೃಷ್ಠವನ್ನೊಡ್ಡಿ ಬಾಗಿದ. ಹುಡುಗರೆಲ್ಲ ಗೊಳ್‌ಎಂದು ನಕ್ಕರು. ವಾರ್ಡನ್‌ಅವಮಾನ, ಸಿಟ್ಟುಗಳಲ್ಲಿ ನಡುಗುತ್ತ ತನ್ನನ್ನು ಸುತ್ತುವರಿದ ತಿರಸ್ಕಾರ ಕಂಡು ಹೆದರಿ ಹೊರಟು ಹೋದ. ಸ್ಥಾನ ಶ್ರೀಮಂತಿಕೆಗಳ ದವಲತ್ತನ್ನು ಹೀಗೇ ಕೃಷ್ಣಪ್ಪ ಬಹಳ ಸಾರಿ ಗೆದ್ದಿದ್ದಾನೆ.

‘ನಿನ್ನೊಳಗೊಂದು ಹುಲಿಯಿದೆಯೊ’ ಎಂದು ಮಹೇಶ್ವರಯ್ಯ ಹೇಳುತ್ತಿದ್ದರಂತೆ. ಮಹೇಶ್ವರಯ್ಯ ದುರ್ಗಿ ಗುಪ್ತ ಭಕ್ತರು. ಯಾವಾಗಾದರೊಮ್ಮೆ ಇದ್ದಕಿದ್ದಂತೆ ಯಾರೂ ತನ್ನನ್ನು ತಿಳಿಯದ ಜಾಗ ಹುಡುಕಿ  ದುರ್ಗಿಯ ಆರಾಧನೆಗೆ ತೊಡಗಿ ಬಿಡುವರು. ಹಗಲು ರಾತ್ರೆ ನಡೆಯುವ ಈ ಆರಾಧನೆ ತಿಂಗಳುಗಟ್ಟಲೆ ಅವರನ್ನು ಒಂದೇ ಜಾಗಕ್ಕೆ ಕಟ್ಟಿಹಾಕಿದ್ದುಂಟು. ಇಂಥ ಒಂದು ಆರಾಧನೆ ಕೃಷ್ಣಪ್ಪನ ಸಮ್ಮುಖದಲ್ಲಿ ನಡೆದಿದೆ. ‘ಹುಲಿಯನ್ನು ಸವಾರಿ ಮಾಡಬೇಕೊ’ – ಎಂದು ಮಹೇಶ್ವರಯ್ಯ ಕೃಷ್ಣಪ್ಪನಿಗೆ ಆಪ್ತವಾಗಿ ಹೇಳಿದ್ದಾರೆ. ಕೆಂಪು ಪಟ್ಟೆ ಮಡಿಯುಟ್ಟು, ಹಣೆಯ ಮೇಲೆ ದೊಡ್ಡ ಕುಂಕುಮವಿಟ್ಟು, ಒದ್ದೆಯಾದ ಬೆಳೆಸಿದ ತಲೆಗೂದಲನ್ನು ಭುಜದ ಮೇಲೆ ಚೆಲ್ಲಿದ ಈ ದೇವಿಯ ಆರಾಧಕನ ಹೊಳೆಯುವ ಕಣ್ಣುಗಳನ್ನು ಕೃಷ್ಣಪ್ಪ ಸಂಶಯದಿಂದ ನೋಡಲು ಪ್ರಯತ್ನಪಟ್ಟಿದ್ದ. ಅವನಿಗೆ ಯಾವ ದೇವರ ಪೂಜೆಯೂ ಸಾಧ್ಯವಿರಲಿಲ್ಲ. ತನ್ನ ಮುಖವಾಡವನ್ನು ಮುಖವೇ ಮಾಡಬಲ್ಲ ಮಹೇಶ್ವರಯ್ಯನ ನೆಚ್ಚುಗೆಯೂ ಕೃಷ್ಣಪ್ಪನಿಗೆ ಬೇಕಿತ್ತಲ್ಲವೇ? ಆದ್ದರಿಂದ ದಿವ್ಯವಾದದ್ದೊಂದು ತನ್ನನ್ನು ಹೊಗುವುದಕ್ಕಾಗಿ ಸಂಶಯವನ್ನೂ ಮೀರಿ ಏಕಾಗ್ರನಾಗಿ ಕೂತು ಅವರ ಮಾತು ಕೇಳಿಸಿಕೊಳ್ಳುತ್ತಿದ್ದ. ಕೃಷ್ಣಪ್ಪನನ್ನು ಬದಲಿಸುತ್ತ ಬೆಳೆಸಲು ಮಹೇಶ್ವರಯ್ಯ ಅವನನ್ನು ಹೀಯಾಳಿಸಿದ್ದೂ ಇಲ್ಲವೆಂದಲ್ಲ. ಸದಾ ಕನ್ನಡಿಯ ಎದುರು ನಿಂತು ತಲೆ ಬಾಚುತ್ತಲೋ ಮುಖ ಹಿಂಡಿಕೊಳ್ಳುತ್ತಲೋ ಇರುತ್ತಿದ್ದ ಕೃಷ್ಣಪ್ಪನ ಆತ್ಮ ರತಿಯನ್ನು ಹೀಗೆ ಜರಿದು ಅವರು ಬಿಡಿಸಿದ್ದು.

ನಗುತ್ತಲೋ, ಘರ್ಜಿಸುತ್ತಲೋ ಕೃಷ್ಣಪ್ಪನ ಒಳಹುಲಿ ನೆಗೆಯುತ್ತಿತ್ತು. ದುಷ್ಕರ್ಮಿಗಳಿಗೆ ತಾವು ಹುಳ ಎನ್ನಿಸುವ ಹಾಗೆ ಮಾಡಬಲ್ಲ ಶಕ್ತಿಯನ್ನು ಕ್ರಮೇಣ ಕೃಷ್ಣಪ್ಪ ಗಳಿಸಿಕೊಂಡಿದ್ದ. ಅವನು ರಾಜ್ಯದಲ್ಲಿ ದೊಡ್ಡ ಹೆಸರು ಮಾಡಿದ್ದ ವಿರೋಧ ಪಕ್ಷದ ನಾಯಕನಲ್ಲವೇ? ಆದ್ದರಿಂದ ಆತನಬಾಯಿ ಕಟ್ಟಿಸಲು ಕೊಳಕರು, ಖದೀಮರು ಏನೇನೋ ಪ್ರಯತ್ನ ಮಾಡುವರು. ಇದರಿಂದ ಕೃಷ್ಣಪ್ಪನಿಗೆ ಸದಾ ಅವಡುಕಚ್ಚಿಕೊಂಡೇ ಬದುಕಬೇಕಾಗಿ ಬಂದುದು.

ಆದ್ದರಿಂದಲೇ ಏನೋ ಸಮಾಜಕ್ಕೆ ತನ್ನನ್ನು ಒಡ್ಡಿಕೊಳ್ಳದ ಮಹೇಶ್ವರಯ್ಯನಂಥ ಆತ್ಮಾರಾಮರು ಕೃಷ್ಣಪ್ಪನಿಗೆ ಅಚ್ಚುಮೆಚ್ಚಾಗಿ ಉಳಿದಿದ್ದು. ಕೊಳೆಯುವುದೇ ಜಾಯಮಾನವಾದ ನಿತ್ಯ ಜೀವನದ ಕ್ಷೇತ್ರದಲ್ಲಿ ಪೂರ್ಣ ಶುದ್ಧಿ ಹುಡುಕೋದೇ ಅಸಂಬದ್ಧವಿರಬಹುದೆ ಎಂಬ ಪ್ರಶ್ನೆ ಅವನನ್ನು ಬಾಧಿಸಿದ್ದಿದೆ. ಬಜೆಟ್ಟು, ಕಾಮಗಾರಿ, ಲಂಚ, ಭಡ್ತಿ, ವರ್ಗ, ನೌಕರಿ ಇತ್ಯಾದಿಗಳಲ್ಲಿ ಮುಳಗಿಸುವ ರಾಜಕೀಯದಿಂದ ಮೇಲೇಳಲು ಕೃಷ್ಣಪ್ಪ ಸದಾ ಪ್ರಯತ್ನಿಸುತ್ತಾನೆ. ಕ್ರಾಂತಿಯ ಕನಸು ಕಾಣುತ್ತಾನೆ. ಆದರೆ ತನ್ನ ಕ್ರಾಂತಿಕಾರಕತೆ ಕ್ರಮೇಣ ತೇಪೆ ಕೆಲಸವಾಗಿಬಿಟ್ಟಿದೆ. ತನ್ನನ್ನು ತೇಲಿಸುವ ಮಹೇಶ್ವರಯ್ಯನೂ ಈಚೆಗೆ ಬರುವುದಿಲ್ಲ. ಒಂದೋ ಭಯಂಕರ ಜಗಳಗಂಟನೂ ಅಹಂಕಾರಿಯೂ ಆಗಬೇಕು; ಅಥವಾ ಸಮಾಜದಿಂದ ಮುಖ ತಿರುಗಿಸಿದ ಆತ್ಮಾರಾಮ ನಾಗಬೇಕು. ಲೋಭಿಗಳನ್ನು ಕಸವಾಗಿ ಕಾಣುವಂಥ ಮಾತಾಡಿ ಕೃಷ್ಣಪ್ಪ ಹಿಗ್ಗುತ್ತಾನೆ. ಹೀಗೆ ಹಿಗ್ಗುವುದು ತನಗೆ ಚಾಳಿಯಾಗಿಬಿಟ್ಟಿತಲ್ಲ ಎಂದು ಹೆದರುತ್ತಾನೆ. ತನ್ನ ಕೋಪದಿಂದ ಸುತ್ತಲಿನ ವಾತಾವರಣದಲ್ಲಿ ಚೂರೂ ಬದಲಾವಣೆಯಾಗದಿದ್ದಾಗ ಕೋಪ ತೀಟೆಯಾಗದೆ ಬೇರೆ ಮಾರ್ಗವಿದೆಯೆ ಎಂದು ಸಮಾಧಾನಪಡುತ್ತಾನೆ. ಇಂಥ ಕೋಪ, ತಾಪ, ಪ್ರೇಮಗಳ ತೀವ್ರತಗೆ ಕಬೀರ ಅಲ್ಲಮರಂಥ ಅರೆಹುಚ್ಚರ ಕವಿತೆಯೇ ರಾಜಕೀಯಕ್ಕಿಂತ ಉತ್ತಮ ಮಾಧ್ಯಮ ಎಂದುಕೊಳ್ಳುತ್ತಾನೆ.

ಆದರೆ ಕೃಷ್ಣಪ್ಪ ಸಾಹಿತಿಯಾಗಲು ಪ್ರಯತ್ನಿಸಿ ಸೋತವ. ಒಮ್ಮೆ ಬೀಳಿ ಕಾಗದದ ಮೇಲೆ ದುಂಡನೆಯ ಅಕ್ಷರದಲ್ಲಿ ಅರ್ಧವಾಕ್ಯವೊಂದನ್ನು ಬರೆದು ಅದನ್ನು ಮುಗಿಸಲಾರದೇ ಹೋಗಿದ್ದ. ‘ಸುಗ್ಗಿಯ ಕಾಲದಲ್ಲಿ ಬೆಳಗಿನ ಹೊತ್ತು ಕರಿಯ ಎನ್ನುವ ಹೊಲೆಯನ್ನೊಬ್ಬ ತನ್ನ ತೆಲೆಯ ಮೇಲೆ ಹೇಲಿನ ಕುಕ್ಕೆ ಇಟ್ಟುಕೊಂಡು ಹೋಗುತ್ತಿದ್ದಾಗ’ ಎಂದು ವಾಕ್ಯ ಕೊನೆಯಾಗದೆ ನಿಂತಿತ್ತು. ಹೀಗೆ ಹೋಗುತ್ತಿದ್ದಾಗ ಅವನಲ್ಲಿ ಲೋಕದ ಕೊಳಕನ್ನು ಸುಡಬಲ್ಲ ಬೆಂಕಿಯಂಥ ಸಿಟ್ಟು ಹುಟ್ಟಿತೆಂದು ಬರೆಯುವುದು ಸಾಧ್ಯವೇ? ಸಾಧ್ಯವಾಗಲು ಒಂದೋ ನಿಜಜೀವನದಲ್ಲಿ ಅಂಥ ಸಿಟ್ಟು ಹುಟ್ಟಿದ್ದರ ದಾಖಲೆ ಇರಬೇಕು; ಅಥವಾ ಅಂಥದು ಹುಟ್ಟುವುದು ನಿಜವೆಂದು ಅನ್ನಿಸುವಂತೆ ಮಾಡಬಲ್ಲ ವಾಕ್ಸಿದ್ಧಿ ತನಗೆ ಬೇಕು. ಕೈಸಾಗದೇ ಇರೋವರು ಮಾತಲ್ಲಿ ತೀಟೆ ತೀರಿಸ್ಕೋತಾರೆ ಎಂದು ಕವಿಗಳನ್ನು ಅವನು ಜರೆಯುತ್ತಿದ್ದ. ಇದರಲ್ಲಿ ಅಸೂಹೆ ಕಂಡ ಮಹೇಶ್ವರಯ್ಯ, ‘ಸುಡುವ ತಾಕತ್ತಿದ್ದರೆ ಸುಡಯ್ಯ, ವಾಗ್ದೇವಿಯನ್ನು ಜರಿಯಬೇಡ’ ಎಂದಿದ್ದರು. ಎಲ್ಲೆಲ್ಲೋ ಕೋಪವನ್ನು ಚೆಲ್ಲುವುದರ ಬದಲು ಅದನ್ನು ಮಾತಿನಲ್ಲೆ ಒಳಚಾಚಿದ ಬೆಂಕಿಯ ನಾಲಗೆ ಮಾಡಿ ಉರಿಸುವುದೇ ಶ್ರೇಷ್ಠವೆಂದು ಮಹೇಶ್ವರಯ್ಯನ ಅಭಿಪ್ರಾಯ. ಆದರೆ ಕೃಷ್ಣಪ್ಪನಿಗೆ ಗೊತ್ತು: ತನ್ನ ಮಾತುಗಳು ತನ್ನ ಗರ್ವಕ್ಕೇ ಅಂಟಿಕೊಂಡು ಬಿಡುತ್ತಿದ್ದವು; ಮೈತುಂಬ ಏಳುವ ಪಿತ್ಥಗಂಧೆಯಂತೆ ತನ್ನಿಂದ ಹೊರ ಬೀಳುತ್ತಿದ್ದವು.

* * *

ಪೊರೆ ಬಿಡುವಾಗಿನ ಸಂಕಟಗಳಿಂದ ಕೃಷ್ಣಪ್ಪನಿಗೊಮ್ಮೆ ಹುಚ್ಚು ಹಿಡಿದದ್ದೂ ಇದೆ. ಇಂಟರ್ ಮೀಡಿಯಟ್‌ಕಾಲೇಜ್‌ನಲ್ಲಿ ಆಗ ಕೃಷ್ಣಪ್ಪ ಓದುತ್ತಿದ್ದ. ಅವನ ಜಾತಿಯ ಹಾಸ್ಟೆಲಲ್ಲಿ ಆಗ ಅವನಿಗೆ ಬಿಟ್ಟಿ ಊಟ, ವಸತಿ. ವಯಸ್ಸು ಇಪ್ಪತ್ತೈದು ಇದ್ದರೂ ಇರಬಹುದು. ಅವನು ಹುಟ್ಟಿದ ತಾರೀಖು ಯಾರಿಗೆ ಸರಿಯಾಗಿ ಗೊತ್ತು? ಅನಕ್ಷರಸ್ಥಳಾಗಿದ್ದ ತಾಯಿಯನ್ನು ಕೇಳಿದರೆ ನೆರೆ ಬಂದ ವರ್ಷ ಎನ್ನುತ್ತಾಳೆ. ಕೃಷ್ಣಪ್ಪ ಫ್ರೀ ಬೋರ್ಡರಾಗಿದ್ದರೂ ಆ ಹಾಸ್ಟೆಲಿನಲ್ಲಿ ಇದ್ದ ಶ್ರೀಮಂತ ಹುಡುಗರಿಗೆಲ್ಲ ನಾಯಕ. ಯಾರಿಗಿಲ್ಲದಿದ್ದರೂ ಅವನಿಗೆ ಮಾತ್ರ ಸ್ವತಂತ್ರವಾದ ರೂಮು – ಹುಡುಗರೆಲ್ಲ ಕೂಡಿ ಬಿಟ್ಟುಕೊಟ್ಟಿದ್ದು. ಒಮ್ಮೆ ಕೃಷ್ಣಪ್ಪನಿಗೆ ತುಂಬ ಜ್ವರ ಬಂತು. ಅವನಿಗೆ ಗುರಪ್ಪ ಎಂಬ ಶ್ರೀಮಂತ ಅನುಯಾಯಿ ಇದ್ದ. ಅವನು ಕೃಷ್ಣಪ್ಪನ ಶುಶ್ರೂಷೆ ಮಾಡುತ್ತಿದ್ದಾಗ, ತುಂಬ ಜ್ವರದಲ್ಲಿ ಕೃಷ್ಣಪ್ಪ ‘ನನಗೊಂದು ಹೊಸ ಹಾಸಿಗೆ ಮಾಡಿಸಿಕೊಡು’ ಎಂದ. ಗುರಪ್ಪ ಸ್ವಲ್ಪ ಜುಗ್ಗು ಸ್ವಭಾವದವನೆಂದು ಕೃಷ್ಣಪ್ಪನಿಗೆ ಗೊತ್ತು. ಹಾಸಿಗೆ ಹೇಗಿರಬೇಕೆಂದು ವಿವರಿಸಿದ: ‘ಏಯ್‌ಗುರಪ್ಪ – ಜುಗ್ಗುತನ ಮಾಡಬೇಡ. ಹಾಸಿಗೆ ಸುತ್ತ ಬೇರೆ ಬಟ್ಟೇನೇ ಉಪಯೋಗಿಸಿ ಅಂಚು ಕಟ್ಟಿಸಬೇಕು. ಹಾಸಿಗೆ ಬಾಕ್ಸ್‌ತರ ಇರಬೇಕು. ಗೊತ್ತಾಯ್ತೇನೋ?’ ಅಂದ. ಗುರಪ್ಪ ‘ಹೂ’ ಎಂದು ಹಾಸಿಗೆ ಹೊಲಿಸಿ ತಂದ. ಕೃಷ್ಣಪ್ಪನಿಗೆ ಜ್ವರ ಏರಿತ್ತು. ಏನೇನೋ ಬಡಬಡಿಸುತ್ತಿದ್ದವ ಹೊಸ ಹಾಸಿಗೆಯ ಅಂಚುಗಳನ್ನು ಮುಟ್ಟಿ ನೋಡಿದ. ‘ಹಾವಿನ ಮೋತಿ ಥರ ಚೂಪಾಗಿದೆಯಲ್ಲೋ? ಬಾಕ್ಸ್‌ಹಾಗೆ ಇರಬೇಕು – ಬಾಕ್ಸ್‌ಹಾಗೆ’ ಎಂದು ಕಣ್ಣುಗಳನ್ನು ತೆಗೆಯಲಾಗದಿದ್ದರೂ ಗುರುಪ್ಪನ ಮುಖ ಹುಡುಕುತ್ತ ಏಳಲು ಪ್ರಯತ್ನಿಸಿದ. ಅವನು ಹೇಳಿದಂಥ ಹಾಸಿಗೆಯನ್ನೇ ಹೊಲಿಸಿದ್ದೇನೆ ಎಂಬ ಗುರುಪ್ಪನ ವಿವರಣೆಯಿಂದ ಅವನಿಗೆ ಸಿಟ್ಟು ಬಂತು. ಹಾಸಿಗೆಯೇ ಬೇಡವೆಂದು ನೆಲದ ಮೇಲೆ ಮಲಗಿದ. ಥಂಡಿಯಾಗುತ್ತದೆಂದು ಗುರಪ್ಪ ಬೇಡಿಕೊಂಡರೂ ಏಳಲಿಲ್ಲ. ಕೆಲವು ತಿಂಗಳುಗಳ ಹಿಂದೆ ಹೀಗೇ ಗುರುಪ್ಪನಿಗೆ ಜ್ವರ ಬಂದಿತ್ತು. ಆಗ ಕೃಷ್ಣಪ್ಪ ಅವನ ಪಕ್ಕದಲ್ಲಿ ಸದಾ ಕೂತಿದ್ದು ಹಣೆಗೆ ಒದ್ದೆ ಬಟ್ಟೆ ಹಾಕಿದ್ದ; ಅವನು ಮಾಡಿಕೊಂಡ ವಾಂತಿಯನ್ನು ಬಾಚಿದ್ದ. ಇದರಿಂದ ಗುರಪ್ಪನಿಗೆ ಕೃಷ್ಣಪ್ಪನನ್ನು ಪೂಜಿಸುವಂಥ ಭಕ್ತಿ ಹುಟ್ಟಿತು. ಆದರೂ ಜಿಪುಣನಾದ ಗುರಪ್ಪನಿಗೆ ಒಳ್ಳೆಯ ಹಾಸಿಗೆ ಹೊಲಿಸುವುದು ಅನಗತ್ಯ ದುಂದು ಎನ್ನಿಸಿರಬಹುದು. ಸನ್ನಿಯಲ್ಲಿದ್ದವನ ಮಾತಿಗೇಕೆ ಬೆಲೆ ಕೊಡಬೇಕು ಎಂದು ವಂಚನೆ ಮಾಡುವ ಧೈರ್ಯವೂ ಇದ್ದಿರಬಹುದು. ಈ ಸಣ್ಣತನ ಕೃಷ್ಣಪ್ಪನನ್ನು ಅತೀವವಾಗಿ ಬಾಧಿಸಿರಬೇಕು. ಗುರಪ್ಪ ಅನಂತರ ಅತ್ಯಂತ ದೈನ್ಯದಿಂದ ಬೇರೆ ಹಾಸಿಗೆ ಹೊಲಿಸಿಕೊಂಡು ಬಂದು ಬೇಡಿಕೊಂಡರೂ ಅದರ ಮೇಲೆ ಕೃಷ್ಣಪ್ಪ ಮಲಗಲಿಲ್ಲ. ತನ್ನ ಹಳೆ ಹಾಸಿಗೆ ಮೇಲೂ ಮಲಗಲಿಲ್ಲ. ಈಚಲು ಚಾಪೆಯ ಮೇಲೆ ಮಲಗಿದ. ಗುರಪ್ಪ ಜೋಲು ಮೋರೆ ಹಾಕಿಕೊಂಡು ಪಕ್ಕದಲ್ಲಿ ಸದಾ ಕೂತಿರುತ್ತಿದ್ದರೂ ಅವನನ್ನು ಮಾತನಾಡಿಸುತ್ತಿರಲಿಲ್ಲ.

ಜ್ವರ ಸ್ವಲ್ಪ ಇಳಿದ ಮೇಲೆ ತನ್ನ ಮಾವನ ಹಿರಿಯ ಮಗನಿದ್ದ ಊರಲ್ಲಿ ಶುಶ್ರೂಷೆ ಪಡೆಯಲೆಂದು ಹೊರಟ. ಆ ಊರಿಗೆ ಹೋಗಲು ಟ್ರೈನ್‌ಹಿಡಿಯಬೇಕು. ಮುವ್ವತ್ತು ಮೈಲಿಯ ನಂತರ ಟ್ರೈನ್‌ಇಳಿದು ಬಸ್‌ಹಿಡಿಯಬೇಕು. ಇರುವ ಒಂದೇ ಬಸ್ಸಿಗೆ ನಿಗದಿಯಾದ ಕಾಲವಿಲ್ಲ. ಸ್ಟೇಶನ್ನಿನಲ್ಲಿ ಇಳಿದ ಕೃಷ್ಣಪ್ಪ ಬಸ್ಸಿಗೆ ಕಾಯುತ್ತ ಒಂದು ಹೋಟೆಲಿನ ಬೆಂಚಿನ ಮೇಲೆ ಮಲಗಿದ.

ಇನ್ನೂ ಸಣ್ಣಗೆ ಜ್ವರವಿತ್ತು. ಬೆಂಚಿನ ಮೇಲೆ ಮಲಗಿದ ಕೃಷ್ಣಪ್ಪನನ್ನು ಹೋಟೆಲು ಯಜಮಾನ ನೋಡಿ, ಹೊಗೆಸೊಪ್ಪಿನ ರಸ ತುಂಬಿದ ತನ್ನ ಬಾಯನ್ನು ಮೇಲಕ್ಕೆತ್ತಿ, ಗಡ್ಡ ಕೆರೆದುಕೊಳ್ಳುತ್ತ ಏಳುವಂತೆ ಸನ್ನೆ ಮಾಡಿದ. ಕೃಷ್ಣಪ್ಪ ದುರುಗುಟ್ಟಿ ನೋಡಿದ. ಯಜಮಾನನಿಗೆ ಕೋಪ ಬಂತು. ಹೊಗೆಸಪ್ಪು ಉಗುಳಿ ಬಂದು ‘ಏಳಯ್ಯ, ಇಲ್ದಿದ್ರೆ ಎಳೆಸಿಹಾಕ್ತೀನಿ’ ಎಂದ. ಕೃಷ್ಣಪ್ಪ ಹಿಂದಿನಂತೆ ದುರುಗುಟ್ಟಿ ನೋಡುತ್ತಲೇ ಪ್ರಶಾಂತವಾದ ಧ್ವನಿಯಲ್ಲಿ ಹೇಳಿದ: ‘ನನಗೆ ಜ್ವರ. ಹೊರಗೆ ಬಿಸಿಲಲ್ಲಿ ಮಲಗಲಾರೆ. ಬಸ್ಸು ತರುವ ತನಕ ಇಲ್ಲಿ ಮಲಗಿರಲು ತಾವು ಅನುಮತಿ ಕೊಡಬೇಕು.’ ಮಾತಿನಲ್ಲಿದ್ದ ಸೌಜನ್ಯ ಅವನ ಕಣ್ಣುಗಳಲ್ಲಿರಲಿಲ್ಲ. ‘ಇವನನ್ನು ಎಳೆದು ಹಾಕ್ರೋ, ದಿಕ್ಕಿಲ್ಲದ ಸೂಳೇ ಮಕ್ಕಳಿಗೆ ಮಲಗಕ್ಕಲ್ಲ ಈ ಹೋಟೆಲಿರೋದು’ ಎಂದ. ಮಾಣಿಯೊಬ್ಬ ಬಂದು ಕೃಷ್ಣಪ್ಪನ ತಲೆಯಿಂದ ಟ್ರಂಕನ್ನೆಳೆದ. ಯಜಮಾನ ಅದನ್ನು ಇಸಕೊಂಡು ಹೊರಗೆಸದಾಗ ಟ್ರಂಕಿನಲ್ಲಿದ್ದದ್ದೆಲ್ಲ ಮಧ್ಯಾಹ್ನದ ಬಿಸಿಲಲ್ಲಿ ಚೆಲ್ಲಿತ್ತು. ಕೃಷ್ಣಪ್ಪನನ್ನು ಎಳೆಯಲು ಹೋದಾಗ ‘ನನ್ನ ಮೈ ಮುಟ್ಟೀರಿ – ಜೋಕೆ’ ಎಂದು ತೂರಾಡುತ್ತ ಹೊರಗೆ ಹೋದ. ಗಂಭೀರವಾಗಿ ತನ್ನ ಜುಬ್ಬದ ತೋಳನ್ನು ಸರಿಸಿಕೊಂಡು ಟ್ರಂಕಿಗೆ ಚೆಲ್ಲಾಪಿಲ್ಲಿಯಾದ್ದನ್ನು ತುಂಬಿದ, ಉರಿಯುವ ಬಿಸಿಲಿನಲ್ಲಿ ಟ್ರಂಕಿನ ಮೇಲೆ ಕೂತು, ಪೂರ್ವ ಕಾಲದ ಉಗ್ರಮುನಿಕುಮಾರನಂತೆ ಹೋಟೆಲಿನ ಕಟ್ಟಡವನ್ನು ದಿಟ್ಟಿಸುತ್ತ ‘ಇದಕ್ಕೆ ಬೆಂಕಿ ಬಿದ್ದು ಎಲ್ಲ ಸುಟ್ಟು ಹೋಗುತ್ತೆ – ತಿಂಗಳ ಒಳಗ’ ಎಂದ ಪ್ರಶಾಂತವಾಗಿ. ಯಜಮಾನ ಥೂ ಎಂದು ಉಗುಳಿದಾಗ ಕೃಷ್ಣಪ್ಪ ಕರುಣೆಯಿಂದ ನಕ್ಕ. . . . . . . . .

ಇಂಥ ಮಾತನ್ನಾಡಬಲ್ಲ ಶಕ್ತಿ ಈಗಲೂ ಅವನಿಗೆ ಇದೆ. ಓಡಾಡಲಾಗದಿದ್ದರೂ, ಕುರ್ಚಿಯಲ್ಲಿ ಎತ್ತಿಸಿಕೊಂಡು ಹೋಗಿ ಅಸೆಂಬ್ಲಿಯಲ್ಲಿ ಹೇಳಿದ್ದಾನೆ: ಯಾರ ಕಡೆಯೂ ನೋಡದೆ, ಕಣ್ಣೆತ್ತಿ: ‘ನಾನೀಗ ಪ್ರವಾದಿಯಂತೆ ಹೇಳುತ್ತಿರುವೆ – ಕೇಳಿ – ಬಿಡಿ – ನನಗದು ಅಲ್ಪ ವಿಷಯ. ಬಡವರು ಸಿಟ್ಟಿಗೇಳುತ್ತಾರೆ. ನಿಮ್ಮ ಮನೆಗಳಿಗೆ ಬೆಂಕಿ ಹಚ್ಚುತ್ತಾರೆ’ ದೈನಿಕ ಪತ್ರಿಕೆಗಳಲ್ಲಿ ಇದನ್ನು ಹಾಸ್ಯಪ್ರಿಯ ಸಂಪಾದಕರು ಬಾಕ್ಸ್‌ಮಾಡಿ ಆಶ್ಚರ್ಯ ಸೂಚಕ ಚಿಹ್ನೆಯಿಂದ ಕೊನೆ ಮಾಡಿ ಪ್ರಕಟಿಸಿದರು. ಅವನ ಮುಖ, ಅವನ ದನಿ, ಅವನ ಗಂಭೀರ ಧಾಟಿಗಳ ಜೊತೆ ಈ ಮಾತುಗಳನ್ನು ಖುದ್ದು ಕೇಳಿದವರಿಗೆ ಅದೇನೂ ಹಾಸ್ಯವೆನಿಸುವುದಿಲ್ಲ. ಆದರೆ ನಿತ್ಯ ಜೀವನದ ತರಲೆ ತಾಪತ್ರಯಗಳ ಸುದ್ದಿಗಳ ಆಶಾದಾಯಕವೆನ್ನಿಸುವ ಯಥಾಸ್ಥಿತಿಯ ಆವರಣದಲ್ಲಿ ಮಾತ್ರ ಕೃಷ್ಣಪ್ಪನ ಮಾತುಗಳನ್ನು ಅಚ್ಚಿನಲ್ಲಿ ಕಂಡಾಗ ಅಭಾಸವೆನಿಸುತ್ತದೆ. ಅಹಂಕಾರಿಯೊಬ್ಬನ ಗೊಣಗಾಟವೆನಿಸುತ್ತದೆ. ಅದು ಕೃಷ್ಣಪ್ಪನಿಗೆ ಗೊತ್ತಿರುವುದರಿಂದ ಬಡವರು ಸಿಟ್ಟಿಗೇಳುವ ತನಕ ತನ್ನ ತಿರಾಸ್ಕಾರ ದ್ವೇಷಗಳನ್ನು ಮೊನಚಾಗಿ ಉಳಿಸಿಕೊಳ್ಳಬೇಕೆಂದು ಸೊರಗುತ್ತಿರುವ ದೇಹದಲ್ಲಿ ಹೆಣಗುತ್ತಾನೆ. . . . . . .

ಕೃಷ್ಣಪ್ಪನ ಮಾವನ ಮಗ ರಂಗಪ್ಪ ಸಣ್ಣಪುಟ್ಟ ಲಂಚಗಳಿಗೆ ಕೈಯೊಡ್ಡಿ ಬದುಕುತ್ತಿದ್ದ ಒಬ್ಬ ಬಡಪಾಯಿ ಗುಮಾಸ್ತ. ಮನೆಯಲ್ಲಿ ಎಂಟು ಸಣ್ಣ ಮಕ್ಕಳು. ಕೇವಲ ಎರಡು ರೂಮುಗಳಿದ್ದ ನಾಡಹೆಂಚಿನ ಸೋರುವ ಈ ಮನೆಯ ಒಡತಿ ಸಾವಿತ್ರಮ್ಮ. ತನ್ನ ಸೀತಬುರಕ ಮೂಗನ್ನು ಕೈಯಿಂದ ಸೀನಿ ಗೋಡೆಗೆ ಒರೆಸುತ್ತ ಯಾವಾಗಲೂ ಗೊಣಗುವ, ತನ್ನ ಗಂಡನಿಗೂ ಕೃಷ್ಣಪ್ಪನಿಗೂ ಊಟ ಬಡಿಸುವಾಗ ಗಂಡನಿಗೆ ಗಟ್ಟಿ ಮಜ್ಜಿಗೆಯನ್ನೂ ಕೃಷ್ಣಪ್ಪನಿಗೆ ನೀರ ಮಜ್ಜಿಗೆಯನ್ನೂ ಯಾವ ನಾಚಿಕೆಯಿಲ್ಲದೆ ಸುರಿಯುವ ಹೆಂಗಸು – ಅವಳು. ಈ ಹೆಂಗಸನ್ನು ತನ್ನ ದುರುಗುಟ್ಟುವ ಕೋಪದ ಕಣ್ಣುಗಳಿಂದ ಕೃಷ್ಣಪ್ಪ ಗೆಲ್ಲಲಾರದೆ ಹೋದ. ಈ ಪೇಟೆಗೆ ಅವನು ಚಿಕಿತ್ಸೆಗೆಂದು ಬಂದದ್ದು. ಇಲ್ಲವಾದಲ್ಲಿ ತಾಯಿ ಊರಿಗೆ ಹೋಗಬಹುದಿತ್ತು. ಮಕ್ಕಳು ಮಲಗುವ ರೂಮಿನಲ್ಲಿ ಸದಾ ತನ್ನ ಕಣ್ಣಿಗೆ ಕಾಣುವ ಹಾಗೆ ಮಲಗಿರುತ್ತಿದ್ದ ಕೃಷ್ಣಪ್ಪನ ನಿರುಪಯೋಗತನವನ್ನೂ, ಎಲ್ಲರಂತೆ ಹಿಟ್ಟು ತಿನ್ನದೆ ಅನ್ನ ಬಯಸುತ್ತಿದ್ದ ಅವನ ರೋಗವನ್ನೂ ತಮ್ಮ ಬಡತನವನ್ನೂ ರಾಗವಾಗಿ ತನ್ನ ಪಾಡಿಗೆ ತಾನು ಆಡಿಕೊಳ್ಳುತ್ತ ಅಡಿಗೆ ಮನೆಯ ಹಿತ್ತಾಳೆ ಪಾತ್ರೆಗಳನ್ನು ಕುಕ್ಕುತ್ತ ಕೃಷ್ಣಪ್ಪನ ಗರ್ವ ಇನ್ನೂ ಹೆಚ್ಚು ಬೆಳೆಯುವಂತೆ ಮಾಡಿದಳು.

ತನ್ನ ಸುತ್ತಲಿನ ಕ್ಷುದ್ರತೆ ಗೆಲ್ಲಲು ಅನ್ಯ ಮಾರ್ಗವಿರದೆ ಕೃಷ್ಣಪ್ಪ ಗಾಢವಾದ ಮೌನ ತಾಳಿದ. ಮಕ್ಕಳ ಉಚ್ಚೆ, ಹೇಲು, ಗಂಡನ ಹೊಟ್ಟೆಬಾಕತನ, ಸದಾ ಬೀಳುವ ಕಸ ಇವುಗಳ ಜೊತೆ ದಿನನಿತ್ಯ ಹೋರಾಡುವ ಎಲ್ಲ ಸಾಮಾನ್ಯ ಕ್ಷುದ್ರ ಹೆಣ್ಣುಗಳಂತೆ ಇವಳು ಒಬ್ಬಳು ಎಂದು ಆಕೆಯನ್ನು ಮೊದಲಿನಂತೆ ದುರುಗುಟ್ಟಿ ನೋಡುವುದನ್ನೂ, ಅವಳಿಗೆ ಪ್ರತ್ಯುತ್ತರ ಕೊಡುವುದನ್ನು ನಿಲ್ಲಿಸಿದ. ಅವಳ ಕ್ಷುದ್ರತೆ ತನ್ನ ಶಕ್ತಿ ಹೀನ ದೇಹವನ್ನೂ ಮನಸ್ಸನ್ನೂ ಆಕ್ರಮಿಸದಿರಲೆಂದು ದಯಾವಂತನಾದ. ಹೀಗಿರುವಾಗ ಎರಡು ಘಟನೆಗಳು ಒಂದೇ ದಿನ ನಡೆದು ಕೃಷ್ಣಪ್ಪನಲ್ಲಿ ಒಂದು ವಿಸ್ಮಯಕಾರಿಯಾದ ಪರಿವರ್ತನೆಯಾಯಿತು.

ಕೃಷ್ಣಪ್ಪ ತನ್ನ ದಿನಚರಿ ಬರೆದಿಡುತ್ತಿದ್ದ ಒಂದು ಕಡತವಿತ್ತು. ತಾನು ಗೊಣಗುವಾಗಲೆಲ್ಲ ಈ ಪುಸ್ತಕ ಹಿಡಿದು ಗುಂಡನೆಯ ಅಕ್ಷರದಲ್ಲಿ ಏನೇನೋ ಬರೆಯುತ್ತ ಪ್ರಸನ್ನ ಮುಖದಿಂದ ಇರುತ್ತಿದ್ದ ಕೃಷ್ಣಪ್ಪನನ್ನು ಅವಳು ಸಿಡಿಮಿಡಿಗೊಳ್ಳುತ್ತ, ದುರುಗುಟ್ಟಿ ನೋಡುತ್ತ ನಿಂತುಬಿಡುವಳು. ಅನಕ್ಷರಸ್ಥೆಯಾದ ಸಾವಿತ್ರಮ್ಮನಿಗೆ ಕೃಷ್ಣಪ್ಪನನ್ನು ಮಗ್ನಗೊಳಿಸುವ ಈ ಕಸುಬು ಯಾವುದೋ ಮಾಟ ಮಾಡುವ ವಿಧಿಯಂತೆ ಕಾಣುತ್ತಿತ್ತು. ಒಂದು ಬೆಳಿಗ್ಗೆ ಅವನಿನ್ನೂ ನಿದ್ದೆಯಲ್ಲಿದ್ದಾಗ ಆ ಪುಸ್ತಕವನ್ನು ತೆಗೆದುಕೊಂಡು ಹೋಗಿ ನೀರಿನ ಒಲೆ ಹೊತ್ತಿಸಿದಳು. ಕೇಳಿದರೆ ಅವತ್ತು ಬೆಂಕಿ ಹೊತ್ತಿಸಲು ಕುರುಳು ಇರಲಿಲ್ಲವೆಂದು ಹೇಳುವುದೆಂದುಕೊಂಡಳು.

ಕೃಷ್ಣಪ್ಪ ಎಚ್ಚರಾದವನು ಮಾವಿನ ಎಲೆಯಿಂದ ಹಲ್ಲು ಉಜ್ಜಿ, ನಡುಮನೆಗೆ ಬಂದು ‘ಎಲ್ಲಿ ನನ್ನ ಪುಸ್ತಕ?’ ಎಂದ. ಅನುಮಾನವಾಗಿ ಬಚ್ಚಲಿಗೆ ಮತ್ತೆ ಹೋಗಿ ನೋಡಿದ ಪುಸ್ತಕದ ರಟ್ಟಿನ ಚೂರೊಂದು ಕರಕಲಾಗಿದ್ದುದು ಕಂಡು ಸಾವಿತ್ರಮ್ಮನ ಎದುರು ನಿಂತು ಮಾತಾಡದೆ ದುರುಗಟ್ಟಿ ನೋಡಿದ. ಸಾವಿತ್ರಮ್ಮ ನಿಷ್ಕಳಂಕ ಭಾವದಿಂದ ‘ಕುರುಳು ಇರಲಿಲ್ಲ’ ಎಂದಳು. ಕೃಷ್ಣಪ್ಪ ಅಚಲವಾಗಿ ನಿಂತ. ಈ ಹೆಂಗಸನ್ನು ಕೊಲ್ಲಬಹುದು ಎನ್ನಿಸಿತು. ಜೊತೆಗೇ ಕಣ್ಣುಗಳಲ್ಲಿ ನೀರು ತುಂಬಿ ಬಂದವು. ಈ ನೀರನ್ನು ನೋಡಿ ಸಾವಿತ್ರಮ್ಮ ತನ್ನ ಬಗ್ಗೆ ಪಶ್ಚಾತ್ತಾಪ ಪಟ್ಟಾಳೆಂದು ಹಾಸಿಗೆ ಮೇಲೆ ಹೋಗಿ ಮಲಗಿದ. ಕಣ್ಣು ಮುಚ್ಚಿದ. ಅವನಿಗೆ ಅರ್ಥವಾಗದಂಥ ಭಾವನೆಗಳು ಮನಸ್ಸಲ್ಲಿ ಏಳತೊಡಗಿದವು. ತನ್ನ ಸುತ್ತಲಿನ ಕ್ಷುದ್ರತೆ ತನ್ನನ್ನು ನಾಶ ಮಾಡದೇ ಬಿಡದು ಎಂಬ ಭಾವನೆ ಬಲವಾಗುತ್ತ ತಾನು ತೀರ ದುರ್ಬಲ ಎಂದು ಅನ್ನಿಸತೊಡಗಿತು. ತನ್ನ ಬೆರಳನ್ನು ಕತ್ತರಿಸಿ ಹಾಕಬೇಕೆನ್ನಿಸಿ ಪೆಟ್ಟಿಗೆಯಿಂದ ಬ್ಲೇಡ್‌ತೆಗೆದ. ಈಗ ಅಂಜದೆ ಬೆರಳು ಕತ್ತರಿಸಿಕೊಳ್ಳಬಲ್ಲೆನಾದರೆ ನಾನು ಎಲ್ಲಕ್ಕಿಂತ ಗಟ್ಟಿ ಎಂದರ್ಥ ಎಂದು ಬೆರಳು ಕೊಯ್ಯಲು ಸಿದ್ಧನಾಗುತ್ತಿದ್ದಂತೆಯೇ ಪಕ್ಕದ ಮನೆಯ ಹೆಂಗಸೊಬ್ಬಳು ‘ಕೇಳಿದರಾ ಸಾವಿತ್ರಮ್ಮ’ ಎಂದು ಒಳಗೆ ನುಗ್ಗಿ ‘ಅರಸಾಳಲ್ಲಿ ಹೋಟೆಲ್ಲಿಟ್ಟುಕೊಂಡಿದ್ದರಲ್ಲ ಉಡುಪರು – ಅವರ ಹೋಟೆಲಿಗೆ ಬೆಂಕಿ ಬಿತ್ತಂತೆ. ಅವರ ಮೈ ಕೈಯಲ್ಲ ಸುಟ್ಟು ಆಸ್ಪತ್ರೆಗೆ ಸೇರಿದ್ದಾರಂತೆ’ ಎಂದಳು.

ಕೃಷ್ಣಪ್ಪನಿಗೆ ಇದನ್ನು ಕೇಳುತ್ತಿದ್ದಂತೆಯೇ ತನ್ನ ಶಾಪ ನೆನಪಾಗಿ ತಾನು ದೈವಾಂಶ ಸಂಭೂತ ಎನ್ನಿಸಿತು. ಶಾಪದ ಪ್ರಕಾರ ಒಂದು ತಿಂಗಳಾಗಬೇಕಿತ್ತು. ಈಗ ತಿಂಗಳ ಮೇಲೆ ಹತ್ತು ದಿನಗಳಾಗಿದ್ದವು. ಕೃಷ್ಣಪ್ಪನ ಉದ್ವೇಗದಲ್ಲಿ ಇದು ಅವನನ್ನು ಬಾಧಿಸಲಿಲ್ಲ. ತಾನು ದೇವಾಂಶ ಸಂಭೋತ, ಈ ಅಂಶ ಬೆಳೆದು ತಾನು ದೇವರೇ ಆಗಿ ಬಿಡಬೇಕು ಎಂದು ಗಹಗಹಿಸಿ ನಕ್ಕ. ಪಕ್ಕದ ಮನೆ ಹೆಂಗಸು, ಸಾವಿತ್ರಮ್ಮ ನೋಡುತ್ತಿದ್ದಂತೆಯೇ ಪೆನ್ಸಿಲ್ ಕೆತ್ತುವಂತೆ ಕಾಲಿನ ಕಿರು ಬೆರಳನ್ನು ಕೆತ್ತಿದ. ಅದರಿಂದ ರಕ್ತ ಚಿಮ್ಮುವಾಗ ನಗುತ್ತಲೇ ಇದ್ದ.

ಅಲ್ಲಿಂದ ಶುರುವಾಯಿತು, ಕೃಷ್ಣಪ್ಪನ ಹುಚ್ಚು. ಮಹೇಶ್ವರಯ್ಯನಂತೆ ನಡು ಮನೆಯಲ್ಲಿ ಕೂತು ರಂಗೋಲೆಯಿಂದ ದೊಡ್ಡದೊಂದು ಮಂಡಳ ಬರೆದು ಅದನ್ನು ಅರಿಸಿನ ಕುಂಕುಮದಿಂದ ತುಂಬಿದ. ನಡುವೆ ಒಂದು ಬೆಳಗಿದ ಗಿಂಡಿಯಿಟ್ಟು ದೇವಿಯನ್ನು ಪ್ರತಿಷ್ಠಾಪಿಸಿದ. ಬರಿ ಕೌಪೀನ ಧರಿಸಿ ಕೂತು ಮಹೇಶ್ವರಯ್ಯ ಕೊಟ್ಟಿದ್ದ ಸೌಂದರ್ಯ ಲಹರಿಯನ್ನು ಓದಲು ಪ್ರಾರಂಭಿಸಿದ. ಶೂದ್ರರು ಮಂತ್ರ ಹೇಳುವುದೇ ಎಂದು ಸಾವಿತ್ರಮ್ಮ ರೇಗಿದಳು. ಹೆದರಿದಳು. ಸ್ಪಷ್ಟವಾಗಿ ಮಂತ್ರೋಚ್ಚಾರ ಮಾಡುತ್ತಿದ್ದ ಅವನ ಹತ್ತಿರ ಹೋಗಲಾರದೆ ಕಂಗಾಲಾಗಿ ನಿಂತಳು. ಸ್ಕೂಲಿಂದ ಬಂದ ಮಕ್ಕಳನ್ನು ಹಿತ್ತಲಿಂದಲೇ ಅಡಿಗೆ ಮನೆಗೆ ಕರೆದು ಕೃಷ್ಣಪ್ಪನ ಹತ್ತಿರ ಹೋಗಬೇಡೆಂದಳು. ಗಣಮಗನಂತೆ ಕುಂತ ಕೃಷ್ಣಪ್ಪನನ್ನು ಕಂಡು ಅವಳ ಗಂಡ ರಂಗಪ್ಪನೂ ತಬ್ಬಿಬ್ಬಾದ. ತೋರಣ ಕಟ್ಟಿ ಎಂದು ಕೃಷ್ಣಪ್ಪ ನಡುವೆ ಕೂಗಿ ಹೇಳಿದಾಗ ರಂಗಪ್ಪನೇ ಸ್ವತಃ ಹೋಗಿ ಮಾವಿನ ಎಲೆ ತಂದು ತೋರಣ ಕಟ್ಟಿದ.

ಯಾರೂ ನಡುಮನೆಯಲ್ಲಿ ಸುಳಿಯಲಿಲ್ಲ. ಹೀಗೆ ಮೂರು ದಿನ ಪೂಜೆಗೆ ಸಾವಿತ್ರಮ್ಮ ತುಟಿಪಿಟಕ್ಕೆನ್ನದೆ ಮಡಿಯಾಗಿ ಪಾಯಸ ಕೋಸುಂಬರಿಗಳ ನೈವೇದ್ಯ ತಯಾರಿಸಿದಳು. ಈ ಅನಿರೀಕ್ಷಿತವಾದ ಸಂದರ್ಭವನ್ನು ಹೇಗೆ ಎದುರಿಸಬೇಕೆಂಬುದು ಅಕ್ಕಪಕ್ಕದ ಯಾರಿಗೂ ತಿಳಿಯಲಿಲ್ಲ. ಕಛೇರಿಯಲ್ಲಿದ್ದ ಉಳಿದ ಬ್ರಾಹ್ಮಣ ಗುಮಾಸ್ತರು ಇದರಿಂದ ನಿನಗೆ ಕೆಡಕಾಗುತ್ತೆ  ಎಂದು ರಂಗಪ್ಪನನ್ನು ಹೆದರಿಸಿದರು. ಇನ್ನು ಕೆಲವರು ದ್ವಿಜನಲ್ಲದವನು ದೇವಿಯನ್ನು ಆವಾಹಿಸುವುದೇ ಶಕ್ಯವಲ್ಲೆಂದರು. ಈ ದೀಕ್ಷೆಯನ್ನು ಕೃಷ್ಣಪ್ಪನಿಗೆ ಕೊಟ್ಟಿರಬಹುದಾದ ಮಹೇಶ್ವರಯ್ಯ ಯಾವ ಜನ ಎಂಬ ಊಹಾಪೋಹಗಳಿಗೆ ಸಮಂಜಸ ಉತ್ತರವಿರಲಿಲ್ಲ. ಬಂಗಾಳದ ಶಕ್ತಿಪಂಥದ ಉಪಾಸನೆ ಇದಾದಲ್ಲಿ ಕೃಷ್ಣಪ್ಪನಿಗೂ ಉಳಿದವರಿಗೂ ಕೆಡುಕು ಕಟ್ಟಿಟ್ಟದ್ದೆ ಎಂದ ಮಂತ್ರಗಳ ಅಲ್ಪ ಸ್ವಲ್ಪ ಪರಿಚಯವಿದ್ದ ಗುಮಾಸ್ತನೊಬ್ಬ. ರಂಗಪ್ಪನ ಜೊತೆ ಬಂದು, ಹೊರಗೆ ನಿಂತು ಮಂತ್ರ ಕೇಳಿಸಿಕೊಂಡು  ಅರ್ಥಗರ್ಭಿತವಾಗಿ ಇದು ತಾಂತ್ರಿಕ ಉಪಾಸನೆ ಎಂದು ತಲೆಯಾಡಿಸಿದ. ರಂಗಪ್ಪ ಇದರ ನಿವಾರಣೆಗೆ ಉಪಾಯವೇನೆಂದು ಕೈಮುಗಿದು ಬೇಡಿದ. ‘ಇದೇ – ನೋಡಿ ಹೇಳ್ತೀನಿ. ಆವಾಹನೆ ಮಾಡಿದ ಮೇಲೆ ಸರಿಯಾದ ವಿಸರ್ಜನೆಯೂ ಆಗಬೇಕು. ಈ ಮಾಟ ಮಂತ್ರಗಳು ನೋಡಿ ಅದಕ್ಕೆ ಕೈ ಹಾಕಿದವರನ್ನೆ ನುಂಗಿ ಬಿಡುತ್ತವೆ’ ಎಂದ. ಆತ ನಿಜವಾಗಿ ಹೆದರಿದಂತೆ ಕಂಡು ರಂಗಪ್ಪ ಕಂಗಾಲಾದ.

ಕೃಷ್ಣಪ್ಪ ನಿದ್ದೆಯನ್ನೂ ಮಾಡುತ್ತಿರಲಿಲ್ಲ. ದಿನಕ್ಕೆ ಮೂರು ಸಾರಿ ಬಾವಿಯಿಂದ ನೀರು ಸೇದಿ ತಲೆ ಮೇಲೆ ಸುರಿದುಕೊಂಡು ಕೂತುಬಿಡುತ್ತಿದ್ದ. ಗಟ್ಟಿಯಾಗಿ ಮಂತ್ರಗಳನ್ನು ಹಗಲು ರಾತ್ರೆ ಓದುತ್ತಲೆ ಇರುತ್ತಿದ್ದ. ನಿದ್ದೆ ಮಾಡುತ್ತಿರಲಿಲ್ಲ. ದೇವಿಗೆ ನೈವೇದ್ಯ ಮಾಡಿದ ಪಾಯಾಸವನ್ನು ಚೂರು ತಿನ್ನುತ್ತಿದ್ದ – ಅಷ್ಟೆ. ರಂಗಪ್ಪ ಪ್ರತಿದಿನ ಬೆಳಿಗ್ಗೆ ಹೋಗಿ ಒಂದು ಬುಟ್ಟಿ ತುಂಬ ಹೂವು ತರುತ್ತಿದ್ದ – ದೇವಿಗೆ ಪ್ರಿಯವಾದ ದಾಸವಾಳ ಹೂವಿಗಾಗಿ ನಾಲ್ಕು ಮೈಲಿ ಹೋಗಿ ಬರುತ್ತಿದ್ದ. ಇಡೀ ಮನೆ ಕೃಷ್ಣಪ್ಪ ಹೇಳಿದಂತೆ ಮೂರು ದಿನ ನಡೆದುಕೊಂಡಿತು.

ದೈವಾರಾಧನೆಯನ್ನು ಬುದ್ಧಿಪೂರ್ವಕವಾಗಿ ನಿರಾಕರಿಸುವ ಕೃಷ್ಣಪ್ಪನಿಗೆ ಈಗಲೂ ಆಗ ತಾನು ಪಡೆದ ಸ್ವಚ್ಛಂದ ಸ್ಥಿತಿ ರಹಸ್ಯಮಯವಾಗಿ ಕಾಣುತ್ತದೆ. ಮೂರು ದಿನ ಹೀಗೆ ದೇವಿ ಪೂಜೆ ಮಾಡಿದ ಮೇಲೆ ತನ್ನ ಮರ್ತ್ಯ ಶರೀರಕ್ಕಿಂತ ತಾನು ಬೇರೆ ಎನ್ನಿಸಿತಂತೆ. ಅನ್ನಿಸಿದ್ದೇ ಪೂಜೆಯನ್ನು ಬಿಟ್ಟು ಎದ್ದು, ತೊಟ್ಟ ಕೌಪೀನವನ್ನು ಬಿಚ್ಚಿ ಹಾಕಿ ಹೊರಬಂದನಂತೆ. ಬೆತ್ತಲೆಯಾಗಿ ಬೀದಿಯಲ್ಲಿ ನಡೆದನಂತೆ. ಆಗ ಅರ್ಧ ಭಯ, ಅರ್ಧ ಗೌರವಗಳಲ್ಲಿ ಜನ ತನ್ನನ್ನು ನೋಡುವಾಗ ಅವನ ಉನ್ಮಾದ ಹೆಚ್ಚಾಗಿ ಊರಿನ ತುದಿಯಲ್ಲಿದ್ದ ಗಣಪತಿ ಕಟ್ಟೆಯ ಮೇಲೆ ಹೋಗಿ ಕೂತು ಬಿಟ್ಟನಂತೆ.

ಮುಂದಿನದು ಕೃಷ್ಣಪ್ಪನಿಗೆ ನೆನಪಿಲ್ಲ. ಮಹೇಶ್ವರಯ್ಯ ಎಲ್ಲಿಂದ ಬಂದರೋ, ತನ್ನನ್ನು ಒಯ್ದು ಏನು ಚಿಕಿತ್ಸೆ ಮಾಡಿಸಿದರೋ – ಕೃಷ್ಣಪ್ಪ ಅಂತೂ ಕೊನೆಗೆ ಸರಿಹೋದ.