* * *

ಇದು ಹುಚ್ಚಾದರೆ ಕೊನೆಯಲ್ಲಿ ಎದುರು ನೋಡುತ್ತ ಮಲಗಿರುವ ಕೃಷ್ಣಪ್ಪನಿಗೆ ಇಂಥ ಉನ್ಮಾದ ಈಗಲೂ ಶಕ್ಯವಾಗಿದೆಯೆಂದೇ  ಹೇಳಬೇಕು. ಅವನನ್ನು ತಿರಸ್ಕಾರದಿಂದ ನೋಡುವುದು ಯಾರಿಗೂ ಸಾಧ್ಯವಿಲ್ಲ. ಅವನ ಹೆಸರೂ ಕೂಡ ಅವನ ಮಿತಿಯನ್ನು ಸಾರುವಂತಿತ್ತಲ್ಲವೇ? ರಿಜಿಸ್ಟರಿನಲ್ಲಿ ಅವನ ಹೆಸರು ಕೃಷ್ಣಪ್ಪಗೌಡ. ‘ಕೃಷ್ಣಪ್ಪಗೌಡ’ ಎಂದರೆ ಸಲಿಗೆಯನ್ನೂ, ಅವನು ಶೂದ್ರ ಎಂಬುದನ್ನೂ ಸೂಚಿಸುವಂತಿತ್ತಾದ್ದರಿಂದ ಅವನನ್ನು ಹೇಗೆ ಕರೆಯಬೇಕೆಂಬುದೇ ಅವನ ಉಪಾಧ್ಯಾಯರಿಗೆ ಸಮಸ್ಯೆಯಾಗುತ್ತಿತ್ತು. ಕೃಷ್ಣಪ್ಪ ಎಂದರೆ ತೀರ ಸಲಿಗೆಯಾಗುತ್ತಿತ್ತು. ಹಾಗಾಗಿ ಎಲ್ಲರೂ ಆತನಿಗೊಂದು ಹೆಸರೇ ಇಲ್ಲವೆನ್ನುವಂತೆ ‘ಗೌಡರೇ’ ಎಂದು ಕರೆಯುವುದು.

ಅವನು ತನ್ನ ಕ್ಷುದ್ರತೆಯನ್ನು ಹೀಗೇ ಹಠಾತ್ತನೆ ಮೀರಿ ಎಲ್ಲರಿಗೂ ದಂಗು ಬಡಿಸಿ ಬಿಡುತ್ತಿದ್ದು, ಒಮ್ಮೆ ರಾಜ್ಯಪಾಲರ ಭಾಷಣದಲ್ಲಿ ದೇಶದ ಕ್ಷಾಮ ಪರಿಸ್ಥಿತಿ ಬಗ್ಗೆ ಯಾವ ಕಾಳಜಿಯೂ ವ್ಯಕ್ತವಾಗಿಲ್ಲವೆಂದು ಕೋಪೋದ್ರಿಕ್ತನಾಗಿ, ಭಾಷಣದ ಪ್ರತಿಯನ್ನು ನೆಲದ ಮೇಲೆ ಹಾಕಿ, ಕಾಲಿನಿಂದ ಮೆಟ್ಟಿ ನಿಂತ ಅವನ ಉಗ್ರಮೂರ್ತಿಯನ್ನು ಉಳಿದ ಜನಪ್ರತಿನಿಧಿಗಳು ಒಂದು ನಿಮಿಷ ಏನು ಮಾಡುವುದು ತಿಳಿಯದೇ ಎವೆಯಿಕ್ಕದೆ ನೋಡಿದ್ದರು. ನಂತರ ಸಭೆಗೆ ಅವಮಾನ ಇತ್ಯಾದಿ ಕೂಗಾಡಿ ಅವನನ್ನು ಹೊರಗೆ ಹಾಕಿದ್ದರು. ಖದೀಮರಿಗೆ ಮಾತ್ರ ಸೌಜನ್ಯ ಅಗತ್ಯ ಎಂದು ಕೃಷ್ಣಪ್ಪನ ನಿಲುವು. ಆದರೆ ತನಗೆ ಪರಿಚಿತನೊಬ್ಬ ವೈರಿಯಾಗಿರಲಿ, ಅವನು ಖಾಹಿಲೆಯಿಂದ ಮಲಗಿದ್ದಾನೆಂದು ಗೊತ್ತಾದರೆ ಹಣ್ನು ಕಟ್ಟಿಸಿಕೊಂಡು ಹೋಗಿ ಅವನನ್ನು ನೋಡುತ್ತಿದ್ದ – ಹೀಗೆ ಕೃಷ್ಣಪ್ಪ ಬಂದು ನೋಡಿದರೆ ಅತ್ಯಂತ ಹರ್ಷತರಾಗಿ ಬಿಡುತ್ತಿದ್ದರು.

ಒಂದು ಬೆಳಿಗ್ಗೆ ಕೃಷ್ಣಪ್ಪನಿಗೆ ಉಚ್ಚೆಗೆ ಅವಸರವಾಯಿತು. ಆದರೆ ಏಳಲಾರ. ‘ಸೀತಾ, ಸೀತಾ’ ಎಂದು ಹೆಂಡತಿಯನ್ನು ಪ್ಯಾನ್‌ಕೊಡಲು ಕೂಗಿದ. ಅವಳು ಸ್ನಾನ ಮಾಡುತ್ತಿದ್ದಿರಬೇಕು. ದುರ್ಬಲವಾಗಿದ್ದ ದೇಹವಲ್ಲವೇ, ತಡೆಯಲಾರದೆ ಮಲಗಿದ್ದಲ್ಲೆ ಉಚ್ಚೆ ಮಾಡಿಕೊಂಡ. ಅವಳು ಸ್ನಾನ ಮುಗಿಸಿಕೊಂಡು ಬಂದು ಖಿನ್ನವಾಗಿದ್ದ ಅವನ ಮುಖ ಕಂಡು ‘ಏನು’? ಅಂದಳು. ಕೃಷ್ಣಪ್ಪ ಹೇಳಿಕೊಳ್ಳದಿದ್ದರೂ ವಾಸನೆಯಿಂದ ಆಕೆಗೆ ತಿಳಿಯಿತು. ಇದರಿಂದ ಆಕೆಗೆ ಸಂತೋಷವಾಗಿರಬೇಕೆಂದು ಊಹಿಸಿ ಕೃಷ್ಣಪ್ಪನಿಗೆ ಕೋಪ ಬಂತು. ಹೆಂಡತಿ ಲಗುಬಗೆಯಿಂದ ಬೇರೆ ಹಾಸಿಗೆಗೆ ಅವನನ್ನು ಎತ್ತಿ ವರ್ಗಾಯಿಸುತ್ತ ‘ನನ್ನನ್ನು ಕಂಡರೆ ಸಿಡಿಮಿಡಿ ಅಂತೀರಲ್ಲ – ಬೇರೆ ಯಾರು ನಿಮ್ಮ ಉಚ್ಚೆ ಹೇಲು ಬಳೀತಿದ್ದರು ಹೇಳಿ? ನಿಮಗಾಗಿ ಕಾದಿಕೊಂಡಿದ್ದಳು ಅಂತೀರಲ್ಲ, ಆ ಆಕಿ ಈ ಕೆಲಸ ಮಾಡುತ್ತಿದ್ದಳ? ಅಥವಾ ಆ ಲೂಸಿಯೋ ಪೂಸಿಯೋ ಇದ್ದಳಂತಲ್ಲ ಅವಳು ಮಾಡ್ತಿದ್ದಳ?’ ಹೆಂಡತಿ ರಮಿಸಲು ಆಡಿದ ಮಾತೆಂದು ತಿಳಿದು ಕೃಷ್ಣಪ್ಪ ಒಳಗಿಂದೊಳಗೆ ಇನ್ನಷ್ಟು ಉರಿದ. ಈ ಹೆಂಗಸು ತನ್ನ ಸೇವೆಯಲ್ಲಿ ಕೊನೆಗೂ ತನ್ನನ್ನು ಗೆಲ್ಲುತ್ತಿದೆ ಎನ್ನಿಸಿತು. ಗೌರಿ ದೇಶಪಾಂಡೆ ಮತ್ತು ಲೂಸಿನಾರ ವಿಷಯವನ್ನು ಹೆಂಡತಿಗೆ ಹೇಳಿದವನೂ ಕೃಷ್ಣಪ್ಪನೆ. ಅಂಥ ಸಂಗತಿಗಳನ್ನು ಹೇಳಿ ಅವಳ ಸಣ್ಣತನ ಗೆಲ್ಲಲು ಅವನು ಪ್ರಯತ್ನಿಸಿದ್ದ. ಅವನು ಮಾತನಾಡುವಾಗ ಅವಳು ಹಾ ಹೂ ಅನ್ನುವವಳಲ್ಲ. ‘ಏನೊ ನಂಗೆದಲ್ಲ ತಿಳೀದು. ನಿಮ್ಮ ಮಧ್ಯಾಹ್ನದ ಔಸ್ತಿ ತಗೊಂಡ್ರ’ ಎನ್ನುತ್ತಾಳೆ. ಅಥವಾ ಪಕ್ಕದ ಮನೆ ಹೆಂಗಸು ಮ್ಯಾಟನಿಗೆ ಕರೆದಿದಾರೆ ಹೋಗಿ ಬರ್ತೇನೆಅನ್ನುತ್ತಾಳೆ. ಗೃಹಕೃತ್ಯದ ನಿತ್ಯದ ಉಪದ್ವ್ಯಾಪಗಳು, ಹೆಚ್ಚೆಂದರೆ ಬ್ಯಾಂಕಿನ ಉಳಿದ ಕೆಲಸಗಾರರ ಮದುವೆ, ಮುಂಜಿ, ಮಕ್ಕಳು, ಬಾಣಂತನ ಇತ್ಯಾದಿ ಸಂಗತಿಗಳು ಇಷ್ಟೇ ಅವಳ ಪ್ರಪಂಚ. ಇವಳ ಜೊತೆ ಕೃಷ್ಣಪ್ಪ ಮದುವೆಯಾದ ವರ್ಷ ಒಬ್ಬ ಮಗಳನ್ನು ಪಡೆದಿದ್ದ ಅಷ್ಟೇ. ಆಮೇಲೆ ದೇಹ ಸಂಬಂಧವನ್ನೂ ಇಟ್ಟುಕೊಳ್ಳಲಾರದೆ ಹೋಗಿದ್ದ. ಆದರೆ ಈಗ ಅವನ ಮೈ ತೊಳೆಯುವುದರಿಂದ ಹಿಡಿದು, ಉಚ್ಛೆ ಹೇಲು ಎತ್ತುವವಳೂ ಅವಳೆ. ಅವಳು ಗೆಲ್ಲುತ್ತಿದ್ದಳು ಎಂದು ಕೃಷ್ಣಪ್ಪನಿಗೆ ಗೊತ್ತಾಗಿತ್ತು. ತಾನು ಕ್ರೂರವಾಗಿ ನಡೆದುಕೊಂಡಾಗ ಈಚೆಗೆ ಅವಳು ಶಾಂತವಾಗಿ ಸಹಿಸಿಕೊಂಡಿರುವುದನ್ನು ಕಂಡಾಗಲಂತೂ ಕೃಷ್ಣಪ್ಪನಿಗೆ ತನ್ನ ವ್ಯಕ್ತಿತ್ವವೇ ಪೊಳ್ಳಾಗಿಬಿಡುತ್ತಿದೆ ಎಂದು ಭಯವಾಗುತ್ತಿತ್ತು.

ಪ್ರಾರಂಭದಿಂದಲೇ ಅವಳು ಗೆದ್ದಿದ್ದಳು. ಇಲ್ಲದಿದ್ದಲ್ಲಿ ಲೂಸಿನಾ ಮತ್ತು ಗೌರಿಯರ ಕತೆಯನ್ನು ಹೆಂಡತಿಗೆ ಅವನು ಹೇಳಿ ಅವಳ ಗೌರವ ಸಂಪಾದಿಸಲು ಪ್ರಯತ್ನ ಪಡಬೇಕಾಗಿರಲಿಲ್ಲ. ಹೆಂಡತಿಯನ್ನು ಸಂಭೋಗಿಸುವ ಮುಂಚೆ ಈ ತನ್ನ ಮೈ ಈ ತನ್ನ ಮನಸ್ಸು ಸಾಮಾನ್ಯವಾದ್ದಲ್ಲ ಎಂದು ಅವಳಿಗೆ ಅನ್ನಿಸುವಂತೆ ಮಾಡುವ ಕೃಷ್ಣಪ್ಪನ ಉಪಾಯಗಳು ಸೀತೆಯ ದಡ್ಡತನದಿಂದಾಗಿ ಅವನಿಗೇ ಹಾಸ್ಯಾಸ್ಪದವಾಗಿ ಕಂಡು ಬಿಡುತ್ತಿದ್ದವು. ಸಾವಿತ್ರಮ್ಮ ತಾನು ಬರೆಯುತ್ತಿದ್ದ ದಿನಚರಿ ಸುಟ್ಟಿದ್ದನ್ನು ಹೇಳಿದಾಗ ‘ದಿನಚರಿಯಲ್ಲೇನು ಮಹಾ ಇರೋಕ್ಕೆ ಸಾಧ್ಯ’ ಎಂದು ಅವಳು ಆಶ್ಚರ್ಯಪಟ್ಟಿದ್ದಳು. ನಿಧಾನವಾಗಿ ಕಚ್ಚೆ ಕಟ್ಟಿದ ಪಂಚೆ ಅಂಗಿಗಳನ್ನು ಬಿಚ್ಚುತ್ತ ಅವನು ಆಡುತ್ತಿದ್ದ ಮಾತುಗಳಿಂದ ಬೋರಾದ ಸೀತೆ, ‘ಬೇಗ ಬನ್ನಿ. ಹೆಚ್ಚು ಹೊತ್ತು ಸತಾಯಿಸಬೇಡಿ ನನ್ನ. ಬೆಳಿಗ್ಗೆ ಒಂಬತ್ತು ಗಂಟೆಗೇ ಬ್ಯಾಂಕಿಗೆ ಹೋಗಬೇಕಲ್ಲ’ ಎಂದು ರಮಿಸುವಂತೆ ನಕ್ಕಾಗ ಕೃಷ್ಣಪ್ಪನಿಗೆ ಅವಳ ಮೇಳಿನ ಆಸೆಯೇ ಬತ್ತಿಬಿಡುತ್ತಿತ್ತು. ಮೂಲದಲ್ಲಿ ಇವಳ ಮಟ್ಟದವನೇ ನಾನು ಇರಬೇಕು. ಇಲ್ಲದಿದ್ದಲ್ಲಿ ಇವಳನ್ನು ಮದುವೆಯಾಗುತ್ತಿದ್ದೆನೆ? ನನ್ನ ನಿಜವಾದ ಮಟ್ಟ ನಾನು ಮುಟ್ಟಿದೆ ಎಂದು ಖಿನ್ನವಾಗಿ ಮಲಗುತ್ತಿದ್ದ. ಅಥವಾ ಅವಳ ಸಂಗ ಮಾಡಬೇಕೆನ್ನಿಸಿದಾಗ ಅದಕ್ಕೆ ಮುಂಚೆ ಚೆನ್ನಾಗಿ ಕುಡಿದು ಬಿಡುತ್ತಿದ್ದ.

* * *

ಕೃಷ್ಣಪ್ಪ ಬಿ.ಎ. ಓದುವಾಗ ಕಾಲೇಜಿನ ಕೊನೆ ವರ್ಷದಲ್ಲಿ ಅವನ ಸಹಪಾಠಿಯಾಗಿದ್ದ ಗೌರಿ ದೇಶಪಾಂಡೆ ಜೊತೆ ಅವನ ಸಖ್ಯ ಶುರುವಾಯಿತು. ಸ್ಕೂಲಿಗೆ ಲೇಟಾಗಿ ಸೇರಿದ್ದರಿಂದ ಕೃಷ್ಣಪ್ಪ ಅವಳಿಗಿಂತ ಏಳೆಂಟು ವರ್ಷಗಳಾದರೂ ಹಿರಿಯ. ನಲವತ್ತೆರಡು, ನಲವತ್ತೇಳರ ಚಳುವಳಿಗಳಲ್ಲಿ ಕೃಷ್ಣಪ್ಪ ವಿದ್ಯಾರ್ಥಿ ನಾಯಕನಾಗಿದ್ದವನಾದ್ದರಿಂದ ಹುಡುಗಿಯರಿಗೆಲ್ಲ ಅವನೊಂದು ಲೆಜೆಂಡು. ಅವನ ಸಿಟ್ಟು, ಗರ್ವ, ಅವನಿಗೆ ಹುಚ್ಚು ಹಿಡಿದ ಕ್ರಮ ಇತ್ಯಾದಿಗಳನ್ನು ತಿಳಿದಿದ್ದ ಹುಡುಗಿಯರಲ್ಲಿ ಸೂಕ್ಷ್ಮ ಮನಸ್ಸಿನವರು ಅವನನ್ನು ತಮ್ಮ ಅಧ್ಯಾಪಕರಿಗಿಂತಲೂ ಹೆಚ್ಚಾಗಿ ಗೌರವಿಸುತ್ತಿದ್ದರು. ಅವನು ಕ್ಲಾಸಿಗೆ ಬರುವುದೇ ಕಡಿಮೆ. ಬಂದಾಗ ಅಧ್ಯಾಪಕರೂ ತಮ್ಮ ಚಿಲ್ಲರೆ ಹಾಸ್ಯಗಳನ್ನು ಮಾಡದೆ ಗಂಭೀರವಾಗಿ ಪಾಠ ಮಾಡುತ್ತಿದ್ದರು. ಪರೀಕ್ಷೆ ಗಿರೀಕ್ಷೆಗಳೆಂದು ತಲೆಕೆಡಿಸಿಕೊಳ್ಳದ ಕೃಷ್ಣಪ್ಪ ಅಸಮಾನ್ಯ ಬುದ್ಧಿಶಾಲಿ, ಸ್ವತಂತ್ರವಾಗಿ ಯೋಚಿಸುತ್ತಾನೆ, ವಯಸ್ಸಾದವ ಇತ್ಯಾದಿ ಕಾರಣಗಳಿಂದ ಅಧ್ಯಾಪಕರು ಅವನ ಬಗ್ಗೆ ಮುಜುಗರ ಪಡುತ್ತಿದ್ದರು.

ಕೃಷ್ಣಪ್ಪ ಕರ‍್ರನೆಯ ಗಟ್ಟಿಮುಟ್ಟಾದ ಆಳು. ಶುಭ್ರವಾದ ಖಾದಿ ಪಂಚೆಯನ್ನುಟ್ಟು ಜುಬ್ಬ ತೊಟ್ಟು ಕಾಲೇಜಿಗೆ ಬರುತ್ತಿದ್ದ. ಈ ಬಿಳಿಯ ಬಟ್ಟೆಯಲ್ಲಿ ಅವನು ಮಾಟವಾಗಿ ಕಡೆದು ನಿಲ್ಲಿಸಿದ ಕಪ್ಪು ವಿಗ್ರಹದಂತೆ ಕಾಣುತ್ತಿದ್ದ. ಅವನ ಪ್ರಶಾಂತ ಮುಖ ದುರುಗುಟ್ಟಿ ನೋಡುವಾಗ ಮಾತ್ರ ಕ್ರೂರವಾಗಿ ಭಯ ಹುಟ್ಟಿಸುವಂತೆ ಇರುತ್ತಿತ್ತು. ಮಾತು ಮೃದು. ದಪ್ಪವಾದ ಹಾಡುಗಾರನ ಗಂಟಲು ಅವನದು. ಆಫ್ರಿಕಾದ ಪ್ರಿನ್ಸ್‌ಎಂದು ಹುಡುಗಿಯರು ಅವನನ್ನು ಕರೆಯೋದು. ‘ಪ್ರಿನ್ಸ್‌ಬಂದಿದ್ದಾನೆ ಕಣೆ ಇವತ್ತು’ ಎಂದು ಅವನನ್ನು ಅಪರೂಪವಾಗಿ ಕಂಡಾಗ ಹುಡುಗಿಯರು ಗೆಲುವಾಗುತ್ತಿದ್ದರು.

ಗೌರಿ ದೇಶಪಾಂಡೆ ಕಾಲೇಜಿನಲ್ಲಿ ಹೆಸರಾದ ನರ್ತಕಿ, ಸಂಗೀತಗಾರ್ತಿ, ಕ್ಲಾಸಿನಲ್ಲಿ ಮೊದಲನೆಯವಳು. ಅವಳಿಗೆ ಕೃಷ್ಣಪ್ಪನೆಂದರೆ ಇಷ್ಟವೆಂದು ಊಹಿಸಿದ್ದ ಜಾಣೆಯರು ಅವಳನ್ನು ರಾಧೆಯೆಂದು ಕಿಚಾಯಿಸುತ್ತಿದ್ದರು. ಎದುರಿಗಲ್ಲ – ಹಿಂದೆ. ಇದಕ್ಕೆ ಕಾರಣ ಗೌರಿ ಯಾರ ಜೊತೆಯೂ ಹೆಚ್ಚು ಬಳಸದೆ ಒಂಟಿಯಾಗಿರುತ್ತಿದ್ದುದು.

ಇದರಿಂದ ಉಳಿದ ಹುಡುಗಿಯರಿಗೆ ಆಶ್ಚರ್ಯವಾಗಲೂ ಕಾರಣವಾಗಿತ್ತು. ಗೌರಿಯ ತಾಯಿ ಗಂಡನನ್ನು ಬಿಟ್ಟು ಓಡಿ ಬಂದು ಅಡಿಕೆ ಮಂಡಿ ಸಾಹುಕಾರನಾದ ನಂಜಪ್ಪನ ಸೂಳೆಯಾಗಿ ಬದುಕುತ್ತಿದ್ದಾಳೆಂದು ಗೊತ್ತಿದ್ದೂ ಗೌರಿಯನ್ನು ನಿಕೃಷ್ಟವಾಗಿ ಕಾಣುವುದು ಸಾಧ್ಯವಿರಲಿಲ್ಲ – ಗೌರಿ ಅಷ್ಟು ಗಂಭೀರವಾಗಿರುವಳು. ಸಾಹುಕಾರ ನಂಜಪ್ಪ ಗೌರಿಯ ತಾಯಿ ಅನಸೂಯಾ ಬಾಯಿಯನ್ನು ಬಂಗಲೆ ಕಟ್ಟಿ ಇರಿಸಿದ್ದ. ಅವಳ ಓಡಾಟಕ್ಕೆಂದು ಪ್ರತ್ಯೇಕವಾಗಿ ಒಂದು ಕಾರ್ ಮತ್ತು ಡ್ರೈವರನ್ನೂ ಇಟ್ಟಿದ್ದ. ಊಟಿಯ ಗುಲಾಬಿಗಳನ್ನು ಬೆಳೆಸಿದ್ದ ವಿಶಾಲವಾದ ಕಾಂಪೌಂಡಿನ ಆಕೆಯ ಮನೆ ಊರಲ್ಲಿ ಪ್ರಸಿದ್ಧವಾದದ್ದು. ಅನುಸೂಯಾ ಬಾಯಿಯನ್ನು ಹೊರಗೆ ನೋಡಿದವರೇ ಕಡಿಮೆ, ಅವಳನ್ನು ನೋಡದವರೂ ಅವಳ ಸೌಂದರ್ಯವನ್ನು ಹೊಗಳುತ್ತಿದ್ದರು. ಗೌರಿಯೇ ಇಷ್ಟು ಸುಂದರಿಯಾಗಿರಬೇಕಾದರೆ ಅವಳ ತಾಯಿಯೆಷ್ಟು ಇರಬೇಕೆಂದು ಊಹಿಸುತ್ತಿದ್ದರು.

ಅನಸೂಯಾಬಾಯಿ ಕಾರಿನಲ್ಲಿ ಊರಿನ ಒಳಗೆ ಬರುತ್ತಿರಲಿಲ್ಲ. ಊರ ಹೊರಗಿದ್ದ ಬಂಗಲೆಯಿಂದ ಕೆಮ್ಮಣ್ಣುಗುಂಡಿಗೋ, ಮಂಗಳೂರಿಗೋ ಹೋಗಲು ಮಾತ್ರ ಅವಳು ಕಾರನ್ನು ಬಳಸುವುದು. ಗೌರಿ ದೇಶಪಾಂಡೆ ಈ ಕಾರಲ್ಲೇ ನಿತ್ಯ ಕಾಲೇಜಿಗೆ ಬಂದು ಹೋಗುವುದು. ಇದರಿಂದ ಉಳಿದ ಹುಡುಗಿಯರಿಗೆ ಅವಳ ಬಗ್ಗೆ ಇನ್ನಷ್ಟು ಅಸೂಯೆ. ದೇಶಪಾಂಡೆ ಎಂಬ ಅವಳ ಕೊನೆ ಹೆಸರಿನಿಂದಾಗಿ ಅವಳಿಗೊಬ್ಬ ಆ ಹೆಸರಿನ ತಂದೆಯಿರಬೇಕೆಂದೂ, ಅಪ್ಪನ ಜೊತೆಗೆ ಬದುಕದೇ ಯಾವನೋ ತಾಯಿಯ ಮಿಂಡಿನ ಜೊತೆ ಬದುಕುವ ಗೌರಿ ಎಂಥ ನತದೃಷ್ಟೆಯೆಂದೂ, ಇಷ್ಟಿದ್ದೂ ಸಭೆಯಲ್ಲಿ ಕುಣಿಯುವ ಹಾಡುವ ಹುಡುಗಿ ನಾಚಿಕೆಗೆಟ್ಟವಳೆಂದೂ ಹುಡುಗಿಯರೆಲ್ಲ ಆಡಿಕೊಳ್ಳುವರು. ಜೊತೆಗೆ ಗೌರಿಯ ವರ್ತನೆಯಿಂದ ತಬ್ಬಿಬ್ಬಾಗುವರು.

ಈ ಹುಡುಗಿಯರ ಜಗತ್ತಿಗೂ ತನಗೂ ಸಂಬಂಧವೇ ಇಲ್ಲವೆನ್ನುವಂತೆ ಗೌರಿ ಇರುವಳು. ಮೈಮೇಲೆ ಒಡವೆಯನ್ನೂ ಧರಿಸದೆ ಬಿಳಿಯ ಸೀರೆಯುಟ್ಟು, ಬಿಳಿ ಕುಪ್ಪಸ ತೊಟ್ಟು, ತನ್ನ ಉದ್ದನೆಯ ಕಪ್ಪು ಜಡೆಗೆ ಒಂದು ಬಿಳಿ ಗುಲಾಬಿ ಸಿಕ್ಕಸಿಕೊಂಡು ಅವಳು ಗಂಭೀರವಾಗಿ ಕ್ಲಾಸಲ್ಲಿ ಕೂರುವಳು. ಲೇಡಿಸ್‌ರೂಮಿನಲ್ಲಿದ್ದಾಗ ಏನಾದರೊಂದು ಪುಸ್ತಕ ಹಿಡಿದು ಓದುತ್ತಿರುವಳು. ಸಾಮಾನ್ಯವಾಗಿ ಹುಡುಗಿಯರು ಪರಸ್ಪರ ಏಕ ವಚನದಲ್ಲಿ ಮಾತನಾಡಿಕೊಂಡರೂ ತನ್ನನ್ನು ಏಕವಚನದಲ್ಲಿ ಮಾತನಾಡಿಸಭಂದವರನ್ನೂ ಮೃದುವಾಗಿ ಬಹು ವಚನದಲ್ಲಿ ಸಂಭೋಧಿಸಿ ತನ್ನ ದೂರವನ್ನು ಕಾಯ್ದುಕೊಳ್ಳುವಳು. ಕೃಷ್ಣಪ್ಪ ಇವಳನ್ನು ಎಂದೂ ಮಾತನಾಡಿಸದಿದ್ದರೂ ತನ್ನ ಸರೀಕಳು ಎಂಬಂತೆ ಅವಳನ್ನು ನೋಡುವನು.

ಒಂದು ಸಂಜೆ ಕೃಷ್ಣಪ್ಪ ಒಂಟಿಯಾಗಿ ಕಾಲೇಜು ಕಡೆ ವಾಕಿಂಗ್‌ಬಂದ. ಫುಟ್‌ಬಾಲ್‌ಟೀಮೊಂದು ಆಟ ಮುಗಿಸಿಕೊಂಡು ಮನೆ ಕಡೆ ಹೊರಟಿತ್ತು. ಈ ಟೀಮಿನ ಕ್ಯಾಪ್ಟನ್‌ಆಗಿದ್ದ ಧಾಂಡಿಗನೊಬ್ಬ ತನ್ನ ತಂಡವನ್ನು ಬೆನ್ನ ಹಿಂದೆ ನಿಲ್ಲಿಸಿಕೊಂಡು ಗೋಡೆಯ ಮೇಲೇನೊ ಬರೆಯುತ್ತಿದ್ದ. ಎಲ್ಲರೂ ನಗುತ್ತಿದ್ದುದು ಕಂಡು ಕೃಷ್ಣಪ್ಪನ ಗಮನ ಆ ಕಡೆ ಹೋಯಿತು. ಧಾಂಡಿಗನ ಹೆಸರು ರಾಮು – ಕಾಲೇಜಿನ ಪುಂಡನೆಂದು ಪ್ರಸಿದ್ಧ. ಅವನಿಗೂ ಹೆಚ್ಚು ಕಡಿಮೆ ಕೃಷ್ಣಪ್ಪನ್ನಷ್ಟೇ ವಯಸ್ಸಾದ್ದರಿಂದ, ಅವನ ತಂದೆ ಊರಿನ ದೊಡ್ಡ ರೈಸ್‌ಮಿಲ್‌ಮಾಲೀಕನಾಗಿದ್ದರಿಂದ ಕೃಷ್ಣಪ್ಪನಿಗೆ ಸಿಗುತ್ತಿದ್ದ ಗೌರವ ಕಂಡರೆ ಅವನಿಗೆ ಅಸೂಯೆ. ಕೃಷ್ಣಪ್ಪ ಇಂಥ ವಿದ್ಯಾರ್ಥಿ ಪುಂಡರ ಜತೆ ಬೆರೆಯುತ್ತಿರಲಿಲ್ಲ – ಅವರನ್ನು ಮುಖವೆತ್ತಿ ನೋಡುತ್ತಲೂ ಇರಲಿಲ್ಲ. ತನಗಿಲ್ಲಿ ಸರೀಕರು ಯಾರೂ ಇಲ್ಲವೆನ್ನುವಂತೆಯೇ ಅವನು ಕಾಲೇಜಿನಲ್ಲಿ ನಡೆದುಕೊಳ್ಳುತ್ತಿದ್ದುದು. ಯಾರ ಜೊತೆಗೂ ಪೈಪೋಟಿ ಮಾಡದ ಕೃಷ್ಣಪ್ಪನ ಜೊತೆ ಹೇಗೆ ನಡೆದುಕೊಳ್ಳಬೇಕೆಂದು ಇಂಥ ವಿದ್ಯಾರ್ಥಿಗಳಿಗೆ ತಿಳಿಯದು.

ಅವನು ದೊಡ್ಡ ಅಕ್ಷರಗಳಲ್ಲಿ ಬರೆಯುತ್ತಿದ್ದುದನ್ನು ಓದಿದ ಕೃಷ್ಣಪ್ಪನಿಗೆ ಕೋಪದಿಂದ ಮೈ ಬಿಸಿಯಾಯಿತು. ‘ಗೌರಿ ಸೂಳೆ ಮಗಳು. ಏ ಗೌರಿ ನಿನ್ನ ಮುತ್ತಿಗೆಷ್ಟು ಬೆಲೆ?’ ಎಂಬ ತನ್ನ ವ್ಯಾಕ್ಯಗಳನ್ನು ಸವಿಯುತ್ತಿದ್ದ ನಿಂತಿದ್ದ ರಾಮುವಿನ ಬಳಿ ಹೋಗಿ ಕೃಷ್ಣಪ್ಪ, ‘ನೀವು ಬರೆದದ್ದನ್ನು ಅಳಿಸಿ’ ಎಂದ – ಅವನ ಗಂಭೀರ ದಪ್ಪ ಸ್ವರದಲ್ಲಿ.

ರಾಮುಗೆ ಒಂದು ಕ್ಷಣ ಏನು ಹೇಳಬೇಕೆಂದು ತಿಳಿಯಲಿಲ್ಲ. ‘ಯಾರು ಬರೆದಿದ್ದು ಅಂತ ನಿಮಗೇನು ಗೊತ್ತರಿ?’ ಎಂದ ಕ್ಷೀಣವಾಗಿ. ತಾನು ಬುದ್ಧಿವಂತಿಕೆಯ ಮಾತನ್ನಾಡಿಬಿಟ್ಟೆನೆಂದು ಅನುಯಾಯಿಗಳು ತಿಳಿಯಲಿ ಎಂದು ಹೀಯಾಳಿಸುವಂತೆ ನಕ್ಕ.

‘ನೀನೇ ಬರೀತ ಇದ್ದದ್ದನ್ನ ನಾನು ನೋಡಿದೆ.’ ಕೃಷ್ಣಪ್ಪ ತನ್ನ ಸಿಟ್ಟನ್ನು ಅದುಮಿ ಗಂಭೀರವಾಗಿ ಹೇಳಿದ.

ರಾಮು ಪೈಲ್ವಾನ್‌, ದೊಡ್ಡ ಮೀಸೆ ಬಿಟ್ಟಿದ್ದ, ಒಳಗಿಂದೊಳಗೆ ತಾನು ಕೃಷ್ಣಪ್ಪನಿಗೆ ಹತ್ತಿರದವನಾಗಬೇಕೆಂಬ ಅಸೂಹೆ ಇದ್ದಿರಬಹುದು. ಇನ್ನೊಬ್ಬ ಗಟ್ಟಿ ಕುಳದ ಜೊತೆ ಜಗಳವಾಡಿದ ಮೇಲೆ ಸಮಸಮದ ಗೆಳೆತನ ಪ್ರಾಪ್ತಿಯಾಗುತ್ತದೆಂಬುದನ್ನು ಅರಿತ ಅನುಭವಿ ಅವನು. ಆದರೆ ಕೃಷ್ಣಪ್ಪ ತನ್ನನ್ನು ನಿಕೃಷ್ಟವಾಗಿ ಕಾಣುತ್ತಿದ್ದಾನೆ ಹೊರತು ಒಂದು ಹೊಡೆದು ತಿರುಗಿ ಹೊಡೆತ ತಿಂದು ಆಪ್ತನಾಗುವುದಕ್ಕೆ ತಯ್ಯಾರಿದ್ದಂತೆ ಕಾಣಲಿಲ್ಲ. ರಾಮು ಕೆಣಕುವ ಧೈರ್ಯ ಮಾಡಿದ.

‘ಅವಳೇನು ನಿಮ್ಮ ರಾಧೆಯೇನ್ರಿ?’

ಈಗಲಾದರೂ ತನ್ನನ್ನು ಕೃಷ್ಣಪ್ಪ ಹೊಡೆಯಬಹುದು. ಆಗ ಅವನ ಮೇಲೆ ಬಿದ್ದು ತನ್ನ ಮರ್ಯಾದೆ ಉಳಿಸಿಕೊಳ್ಳಬಹುದು ಎಂದು ರಾಮು ಬಗೆದಿದ್ದು ವ್ಯರ್ಥವಾಯಿತು. ಕೃಷ್ಣಪ್ಪ ಅಲ್ಲೇ ಇದ್ದ ನಲ್ಲಿಯಲ್ಲಿ ತನ್ನ ಕರ್ಚೀಪನ್ನು ಒದ್ದೆ ಮಾಡಿಕೊಂಡು ಬಂದು ಗೋಡೆಯ ಮೇಲೆ ಬರೆದದ್ದನ್ನು ಒರೆಸಲು ಪ್ರಾರಂಭಿಸಿದ. ರಾಮು ಕಾದುನಿಂತ – ಇನ್ನಷ್ಟು ಕೆಣಕಲು.

‘ನಿಮಗೆ ಪುಕ್ಕಟೆ ಕೊಡ್ತಾಳೇಂತ ಕಾಣುತ್ತೆ’ ಎಂದ. ಅವನ ಮಾತಿಗೆ ಸಂಗಡಿಗರು ಸಿಳ್ಳೆ ಹೊಡೆದರು. ಆದರೆ ಅವರು ಯಾರೂ ಇಲ್ಲವೇ ಇಲ್ಲ ಎಂಬಂತೆ ಕೃಷ್ಣಪ್ಪ ಅವರ ಕಡೆ ನೋಡದೆ ನಡದೇ ಬಿಟ್ಟ. ಇನ್ನೊಮ್ಮೆ ಬರೆಯಬಹುದೆಂದು ಅಷ್ಟು ದೂರ ಹೋದ ಮೇಲೆ ಅವನಿಗೆ ಅನುಮಾನವಾಯಿತು. ತಿರುಗಿ ನೋಡಬೇಕೆಂಬ ಆಸೆಯನ್ನು ಅದುಮಿಕೊಂಡ. ತನ್ನ ಸುತ್ತಲಿನ ಕ್ಷುದ್ರತೆಯನ್ನು ತಾನು ಗೆಲ್ಲುತ್ತಿಲ್ಲವೆ; ಹಾಗೇ ಗೌರಿಯೂ ಗೆಲ್ಲಲಿ ಎನ್ನಿಸಿತು.

ಮಾರನೇ ದಿನ ಗೋಡೆ ಬರಿದಾಗಿತ್ತಾದ್ದರಿಂದ ತಾನು ಗೆದ್ದಿದ್ದೇನೆ ಎಂದು ಕೃಷ್ಣಪ್ಪ ಅಂದುಕೊಂಡರೆ ಅದರ ಮಾರನೇ ದಿನ ‘ಗೌರಿ ಕೃಷ್ಣಪ್ಪನಿಗೆ ಪುಕ್ಕಟೆ ಕೊಡುತ್ತಾಳೆ. ಕೃಷ್ಣಪ್ಪ ಗೌರಿಯ ತಲೆಹಿಡುಕ’ ಇತ್ಯಾದಿ ಟಾರಿನಲ್ಲಿ ಕಾಣಿಸಿಕೊಂಡವು. ಇಡೀ ಕಾಲೇಜಿನಲ್ಲಿ ಈ ಬಗ್ಗೆ ಗುಸುಗುಸು ಎದ್ದಿತ್ತು. ಕ್ಲಾಸುಗಳೆಲ್ಲ ಶುರುವಾದ ಮೇಲೆ ಟಾರಿನಿಂದ ಬರೆದದ್ದನ್ನು ಕೆತ್ತಿ ತೆಗೆದು ಜವಾನರು ಈ ಬರವಣಿಗೆಯನ್ನು ಗೋಡೆಯ ಮೇಲೆ ಇನ್ನಷ್ಟು ಆಳವಾಗಿ ಅಚ್ಚಿಸಿದ್ದರು. ಕೃಷ್ಣಪ್ಪ ತನಗಿದು ಸಂಬಂಧವಿಲ್ಲವೆನ್ನುವಂತೆ ಓಡಾಡುತ್ತ ಗೌರಿಯ ಮುಖ ನೋಡಿದ. ಅವಳಿಗೆ ಅದರಿಂದ ದುಃಖವಾಗಿದೆಯೆ ಎಂದು ಅನುಮಾನವಾಯಿತು. ಆದರೆ ಅವಳೂ ವಿಚಲಿತವಾದಂತೆ ಕಾಣಲಿಲ್ಲ. ಅವತ್ತು ಸಂಜೆ ಅವನೇ ಅವಳ ಮನೆಗೆ ಹೋಗಿ ಬೆಲ್‌ಒತ್ತಿದ.

ಹಾಡುತ್ತಿದ್ದ ಗೌರಿ ಹೊರಗೆ ಬಂದು ಕೃಷ್ಣಪ್ಪನನ್ನು ನೋಡಿ ಆದ ಸಂತೋಷ ತೋರಗೊಡದೆ ಒಳಗೆ ಕರೆದುಕೊಂಡು ಹೋಗಿ ಕೂರಿಸಿದಳು. ತೋರುಗಾಣಿಕೆಯಿಲ್ಲದೆ ಅವಳಲ್ಲಿ ಗುಪ್ತವಾಗಿ ಅರಳಿದ ಭಾವ ಗುರುತಿಸಿ ಉತ್ತೇಜಿತನಾದ ಕೃಷ್ಣಪ್ಪ ಕಾರ್ಪೆಟ್ಟನ್ನು ನೋಡುತ್ತ ನಿಧಾನವಾಗಿ ಹೇಳಿದ:

‘ನನ್ನ ಸರೀಕರು ಈ ಕಾಲೇಜಿನಲ್ಲಿ ನೀವೊಬ್ಬರೆ ಅನ್ನೋದು ಇವತ್ತ ಖಾತ್ರಿಯಾಯ್ತು.’

ಕೃಷ್ಣಪ್ಪ ಗೌರಿಯ ಮುಖ ನೋಡದೆ ಗಾಜಿನ ಟೇಬಲ್‌, ಗೋಡೆಯ ಮೇಲಿನ ದೇವರ ಚಿತ್ರಗಳು, ತಂಬೂರಿ ಇತ್ಯಾದಿಗಳನ್ನು ಗಮನಿಸಲು ಪ್ರಯತ್ನಿಸಿದ. ದೊಡ್ಡ ಗಾಜಿನ ಕಿಟಕಿಯಾಚೆಗೆ ಅರಳಿದ ಗುಲಾಬಿ ಹೂಗಳು ಕಂಡವು. ತಾನು ಹೀಗೆ ಬಂದು ಹೀಗೆ ಮಾತಾಡಿ ಅಗ್ಗವಾಗಿ ಬಿಟ್ಟನೆಂದು ಅವನಿಗೆ ವಿಷಾದವಾಯಿತು.

‘ನಾನು ಆಡಿದ್ದನ್ನು ಹಚ್ಚಿಕೋಬೇಡಿ. ಮಾತಾಡಿ ನಾನು ಚೀಪಾದೆ. ನಿಮ್ಮನ್ನೂ ಚೀಪ ಮಾಡಿದೆ’ ಎಂದು ಎದ್ದ.

‘ಇಲ್ಲ – ಕೂರಿ’ ಎಂದು ಗೌರಿ ತಡವರಿಸುತ್ತ ಹೇಳಿದಳು. ‘ನಿಜ – ನನ್ನ ತಾಯಿ ನನ್ನ ತಂದೇನ್ನ ನಾನು ಮಗುವಾಗಿದ್ದಾಗ ಬಿಟ್ಟು ಬಂದರು. ನಂಜಪ್ಪನವರು ಅವರನ್ನು ಇಟ್ಟುಕೊಂಡಿದ್ದಾರೆ. ನೋಡಿ, ಇವೆಲ್ಲ ಅವರದೇ ವಸ್ತುಗಳು’ ಎಂದು ಎದ್ದು ನಿಂತಳು. ‘ಇಷ್ಟು ತಿಳಿದ ಮೇಲೆ ನಿಮಗೆ ಹೇಗೆ ಅನ್ನಿಸ್ತ ಇದೆಯೊ ನನಗೆ ಗೊತ್ತಿಲ್ಲ’ ಗೌರಿಯ ಮುಖ ತನ್ನ ಉದ್ವೇಗವನ್ನು ಬಚ್ಚಿಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಕಂಡಿತು.

‘ನಿಮಗೆ ಸಮಾಧಾನ ಹೇಳಲಿಕ್ಕೆ ನಾನು ಬಂದದ್ದಲ್ಲ. ನೀವೊಬ್ಬ ವಿಶಿಷ್ಟ ವ್ಯಕ್ತೀಂತ ತಿಳಿದು ನಿಮ್ಮನ್ನು ಗೌರವಿಸ್ತೀನಿ’ ಎಂದು ಕೃಷ್ಣಪ್ಪ ಎದ್ದು ಒಂದು ಹೆಜ್ಜೆಯಿಟ್ಟ.

‘ನನಗೆ ತಂದೆಯಾಗಿದ್ದೋರು ದೇಶಪಾಂಡೆ ಅಂತ. ಅವರೂ ನನ್ನ ತಾಯೀನ್ನ ಇಟ್ಟುಕೊಂಡಿದ್ದರು. ಬ್ಯಾಂಕಿನಲ್ಲಿ ದುಡ್ಡು ಕದ್ದು ಜೈಲಿಗೆ ಹೋದರು. ಗಂಡನಿಲ್ಲದೆ ನನ್ನ ಅಮ್ಮ ಬದುಕಲಾರರು. ಆದ್ದರಿಂದ.’

ಈಗ ಗೌರಿಯನ್ನು ದುರುಗುಟ್ಟಿ ನೋಡುತ್ತ ಕೃಷ್ಣಪ್ಪ ಹೇಳಿದ:

‘ನನ್ನ ನೀವು ಪರೀಕ್ಷೆ ಮಾಡ್ತಿದೀರಲ್ಲವೆ? ಹೀಗೆಲ್ಲ ಮಾಡೋದು ಚೀಪ್‌’

ಗೌರಿ ಬಾರ ಕಳೆದಂತಾಗಿ ನಕ್ಕುಬಿಟ್ಟಳು. ಹೀಗೆ ನಕ್ಕಾಗ ಅವಳು ತುಂಟು ಹುಡುಗಿಯಂತೆ ಕಂಡು ಕೃಷ್ಣಪ್ಪನಿಗೆ ಕಸಿವಿಸಿಯಾಯಿತು. ಒಂದೋ ನೀನು ನಿನ್ನ ಸುತ್ತಲಿನ ದಿನನಿತ್ಯದ ಕ್ಷುದ್ರತೆ ಗೆಲ್ಲುತ್ತಿ; ಅಥವಾ ಈ ಕ್ಷುದ್ರತೆಗೆ ತುತ್ತಾಗುತ್ತಿ – ಇದು ಬದುಕಿನ ನಿಯಮ ಎನ್ನುವ ಮಾತನ್ನು ಈ ಹುಡುಗಿಗೆ ಹೇಳಿ ತನ್ನ ಒಳಗನ್ನು ತೆರೆಯಬೇಕೆಂದಿದ್ದ ಕೃಷ್ಣಪ್ಪನಿಗೆ ಅವಳ ಸ್ವಭಾವದಲ್ಲಿದ್ದ ತುಂಟತನ ತಡೆಯಾಗಿ ಕಂಡು ನಿರಾಸೆಯಾಯಿತು. ಕೃಷ್ಣಪ್ಪನ ಮುಖದ ಮೇಲಿನ ಭಾವ ‘ನಾನು ನಿನಗೆ ಅಗಮ್ಯ’ ಎಂದು ಸೂಚಿಸಿದ್ದನ್ನು ಕಂಡು

‘ನೀವು ತುಂಬ ಅಹಂಕಾರಿಗಳು ಅಲ್ವ?’ ಎಂದಳು.

ಕೃಷ್ಣಪ್ಪ ಬೇಸರದಿಂದ ಮುಖ ತಿರುಗಿಸಿದ. ಹಣೆಯ ಮೇಲೆ ಕುಂಕುಮದ ಬದಲು ವಿಭೂತಿಯನ್ನಿಟ್ಟುಕೊಂಡು ತಾನು ಬರುವ ಮುಂಚೆ ಅವಳು ಹಾಡುತ್ತಿದ್ದಳು. ಈಗ ಸೊಂಟದ ಮೇಲೆ ಕೈಯನ್ನಿಟ್ಟು ತ್ರಿಭಂಗಿಯಲ್ಲಿ ನರ್ತಕಿಯಂತೆ ನಿಂತಿದ್ದಾಳೆ. ಅವಳು ತನ್ನನ್ನು ಗೆಲ್ಲಲು ಪ್ರಯತ್ನಿಸುತ್ತಿರಬಹುದು. ತನ್ನನ್ನು ರಮಿಸಲು ಸುಮ್ಮನೇ ಕೆಣಕುತ್ತಿದ್ದಾಳೊ ಅಥವಾ ಅದು ಗಂಭೀರವಾದ ಪ್ರಶ್ನೆಯೊ? ಅವಳು ತುಂಟಾಗಿ ಕೇಳಿದ್ದರೆ ತನ್ನ ಉತ್ತರ ಜಂಬಗಾರಿಕೆಯಾಗಿ ಬಿಡುತ್ತೆ. ಕೃಷ್ಣಪ್ಪ ಎತ್ತಲೋ ದುರುಗುಡತ್ತ ನಿಂತಿರುವುದು ಕಂಡು –

‘ತಮಾಷೆಗಲ್ಲ ನಾನು ಹೇಳಿದ್ದು. ನನ್ನ ಅಮ್ಮ ಒಳ್ಳೆಯವಳು. ನಂಜಪ್ಪನವರೂ ಒಳ್ಳೆಯವರು, ಆದರೆ ಯಾರಿಗೂ ನಿಲುಕದ ಹಾಗೆ ನಾನು ಇದ್ದು ಬಿಡಿತೀನಿ. ನಾನು ಅಳದೆ ಬಹಳ ವರ್ಷ ಆಯ್ತು. ಆದ್ದರಿಂದ ನಾನೂ ನಿಮ್ಮ ಹಾಗೇ ಅಹಂಕಾರಿ ಅನ್ನಿಸುತ್ತೆ’ ಎಂದಳು.

ಕೃಷ್ಣಪ್ಪನ ಮುಖ ಕಠಿಣವಾಗಿ ಅವನ ಕಣ್ಣುಗಳು ಕಿರಿದಾದವು.

‘ನನ್ನ ಅಮ್ಮನ ನೋಡತೀರ? – ಮೇಲಿದಾರೆ ಕರೀತೀನಿ’

ಗೌರಿ ಆತಿಥ್ಯ ಮಾಡುವವರ ಧಾಟಿಯಲ್ಲಿ ಕೇಳಿದಳು. ಜುಬ್ಬದ ಜೋಬುಗಳಲ್ಲಿ ಕೈಯಿಟ್ಟು, ನಿರ್ಭಾವದಿಂದ ಗೌರಿಯನ್ನು ನೋಡುತ್ತ,

‘ಬೇಡ ನನಗೇನು ಮಾತಡಬೇಕು ಗೊತ್ತಾಗಲ್ಲ. ಹಿಂಸೆಯಾಗಿ ಬಿಡ್ತದೆ’ ಅಂದು ಕೃಷ್ಣಪ್ಪ ಹೊರಟು ಹೋದ.

* * *

ಸೀದ ರೂಮಿಗೆ ಹೋಗಿ ಒಂದು ಕಾಗದ ಬರೆದ.

‘ಪ್ರಿಯ ಶ್ರೀಮತಿ ಗೌರಿ ದೇಶಪಾಂಡೆ,

ನೀವು ನನ್ನ ಮೇಲೆ ಪರಿಣಾಮ ಮಾಡಲೆಂದು ಮಾತಾಡಿದಿರಿ ಎಂದು ಅನುಮಾನವಾಗಿ ನಾನು ಉತ್ತರ ಕೊಡಲಿಲ್ಲ. ನಾವು ಒಂಟಿಯಾಗಿದ್ದಾಗ ನಮಗೇ ಆಡಿಕೊಳ್ಳದ ಮಾತುಗಳನ್ನು ಬೇರೊಬ್ಬರಿಗೆ ಯಾಕೆ ಹೇಳಬೇಕು? ಎದುರೊಬ್ಬರು ಇದ್ದಾರೆ ಎಂಬ ಭಾವನೆಯಿಂದ ಹುಟ್ಟುವ ಮಾತುಗಳಲ್ಲೆ ಪಡಪೋಶಿ ಇದೆ. ಆದ್ದರಿಂದ ನಾನು ಸೌಜನ್ಯದ ವಿರೋಧಿ. ದುಡ್ಡು ಮಾಡುವವರಿಗೆ, ಜನಪ್ರಿಯತೆ ಬಯಸುವವರಿಗೆ ಸೌಜನ್ಯದ ಅಗತ್ಯವಿದೆ. ಆಳವಾದ ಸಂಬಂಧಗಳಿಗೆ ಸೌಜನ್ಯ ಅಡ್ಡವಾಗುತ್ತದೆ. ನಾನು ನಿಮ್ಮನ್ನು ಹುಡುಕಿಕೊಂಡು ಬಂದು ಹೇಳಿದ್ದರ ಉದ್ದೇಶ ಬರೀ ಒಬ್ಬರನೊಬ್ಬರು ಗುರುತಿಸಿಕೊಳ್ಳಬೇಕೆಂಬುದು. ಆದರೆ ನಿಮ್ಮ ಸಹಾನುಭೂತಿ ಬೇಡುವ ದೌರ್ಬಲ್ಯದ ಅಂಶ ನನ್ನ ಕ್ರಿಯೆಯಲ್ಲೂ ಇದ್ದಿರಬಹುದು.

ನಾನು ಅಹಂಕಾರಿಯಲ್ಲ. ನೀವೂ ಅಲ್ಲ. ಕ್ಷುದ್ರತೆಗೆ ತುತ್ತಾದವರಿಗೆ ನಾನು ಹಾಗೆ ಕಾಣಿಸಬಹುದು. ಒಂದು ಮರ, ಒಂದು ಪಕ್ಷಿ, ಒಂದು ಮೃಗ, ಒಬ್ಬ ತಿರುಕ – ಯಾರನ್ನೇ ನೋಡಿದಾಗಲೂ ನಾನು ಎಲ್ಲರಿಗಿಂತಲೂ ಅನ್ಯ ಅನ್ನಿಸುತ್ತದೆಯೇ ಹೊರತು ಅವುಗಳಿಗಿಂತ ದೊಡ್ಡವನು ಅನ್ನಿಸುವುದಿಲ್ಲ. ಇತರರು ತನ್ನನ್ನು ಅಕ್ರಮಿಸಲು ಬಂದಾಗ ಮಾತ್ರ ಹಾವು ತನ್ನ ವಿಷವನ್ನು ಬಳಸುವಂತೆ ನಾನು ನನ್ನ ಗರ್ವವನ್ನು ವ್ಯಕ್ತಪಡಿಸುತ್ತೇನೆ. ನಾನು ಹುಟ್ಟಿ ಬಂದ ವಾತಾವರಣದಲ್ಲಿ ಕ್ಷುದ್ರತೆ ಗೆಲ್ಲಲು ಇದು ನನಗೆ ಅಗತ್ಯವಾದ್ದಕ್ಕೆ ನಾನು ಕಾರಣನಲ್ಲ. ನಿಮ್ಮ ಹಿನ್ನೆಲೆ ನೋಡಿದರೆ ನಿಮ್ಮ ಬಗ್ಗೆಯೂ ಇದು ನಿಜ ಎನ್ನಿಸುತ್ತದೆ. ಈ ಹೊರಗಿನ ಕ್ಷುದ್ರತೆ ಹೊರಗಿನದು ಮಾತ್ರವಲ್ಲ – ನಮ್ಮ ಒಳಗೂ ಇರುವಂಥಾದ್ದು. ನಮ್ಮ ತೀವ್ರತೆಯನ್ನು ಕೊಲ್ಲಲು ಇಂಥ ಸಂಚು ನಮ್ಮ ಒಳಗೂ ಹೊರಗೂ ನಡೆಯುತ್ತಲೇ ಇರುವುದರಿಂದ ಸದಾ ಎಚ್ಚರವಾಗಿರುವ ನಿಲುವು ಸಂಪನ್ನರಿಗೆ ಗರ್ವದಂತೆ ಕಾಣಬಹುದು. ಇದು ಅನಿವಾರ್ಯ, ಮೋಹಕ್ಕೆ ವಶವಾಗದ ನಿಷ್ಠುರತೆ, ನಮ್ಮ ಸುತ್ತ ಸಾಯುತ್ತ ಹುಟ್ಟುತ್ತ ಇರುವುದಕ್ಕೆಲ್ಲ ತೆರೆದುಕೊಂಡ ಎಚ್ಚರ – ಇದೇ ಯೋಗ. ಚೈತನ್ಯ ಮತ್ತು ಜಡತ್ವ ಜೋಡಿಗಳು ಎಂಬುದನ್ನು ಮರೆಯಬೇಡಿ.

– ಕೃಷ್ಣಪ್ಪ’

ಕಾಗದ ಬರೆದು ಅಂಚೆಗೆ ಹಾಕಿ ಕೃಷ್ಣಪ್ಪ ಕುಂಬಾರ ಕೊಪ್ಪಲಿಗೆ ಹೋದ. ಕಡಿದಾದ ಬೀದಿಯಲ್ಲಿ ನಡೆಯುತ್ತ ಧಾನ್ಯಗಳನ್ನು ಮಾರುವ ಅಂಗಡಿಯೊಂದರ ಮೇಲಿನ ಉಪ್ಪರಿಗೆಯಲ್ಲಿ ದೀಪವಿದ್ದುದನ್ನು ಕಂಡು ತೀರ ದುರವಸ್ಥೆಯಲ್ಲಿದ್ದ ಉಪ್ಪರಿಗೆ ಮೆಟ್ಟಿಲುಗಳನ್ನು ಕೊಳಚೆ ಗಲ್ಲಿಯೊಂದರಿಂದ ಹತ್ತಿ ಹೋದ. ಹತ್ತಿ ಹೋಗುವಾಗ ಉಚ್ಚೆಯ ನಾತ ಅಸಹನೀಯವಾಗಿತ್ತು. ಮಹಡಿ ಬಾಗಿಲು ತಟ್ಟಿದ.

ಕಚ್ಚೆಪಂಚೆಯುಟ್ಟು ಜುಬ್ಬ ತೊಟ್ಟ ಅಣ್ಣಾಜಿ ಯಾರು ಎಂದು ಕೇಳಿ ಕೃಷ್ಣಪ್ಪನೆಂದು ಗುರುತಿಸಿದ ಮೇಲೆ ಬಾಗಿಲು ತೆರೆದ. ಅಣ್ಣಾಜಿ ರೂಮಿನಲ್ಲಿ ಊದಿನಕಡ್ಡಿ ಉರಿಯುತ್ತಿದ್ದರಿಂದ ವಾಸನೆ ಹಿತವೆನ್ನಿಸಿತು. ಅಣ್ಣಾಜಿ ಇಂಗ್ಲಿಷಲ್ಲಿ ‘ಬಾ ಕೂತುಕೊ’ ಎಂದು ನೆಲದ ಮೇಲೆ ಹಾಕಿದ್ದ ಹಾಸಿಗೆಯ ಒಂದು ತುದಿಯನ್ನು ತೋರಿಸಿ ಇನ್ನೊಂದು ತುದಿಯಲ್ಲಿ ತಾನು ಕೂತ.

ನಡುವಯಸ್ಸಿನ ಅಣ್ಣಾಜಿ ಆಕರ್ಷಕ ವ್ಯಕ್ತಿ. ಎದ್ದು ಕಾಣುವ ಚೂಪಾದ ಗಲ್ಲ – ಪೊದೆ ಹುಬ್ಬುಗಳು – ತೆಳ್ಳಗೆ ಎತ್ತರವಾಗಿದ್ದ. ಕೂದಲನ್ನು ಉದ್ದವಾಗಿ ಬೆಳೆಸಿ ಹಿಂದಕ್ಕೆ ಬಾಚಿದ್ದ. ಅವನು ಗಡ್ಡ ಬೆಳೆಸುತ್ತಿದ್ದನೆಂಬುದು ಮುಖದ ಮೇಲೆ ಬೆಳೆದಿದ್ದ ಒಂದು ತಿಂಗಳಿನ ಕೂದಲಿನಿಂದ ತಿಳಿಯಬಹುದಿತ್ತು. ಚಾರ್ಮಿನಾರ್ ಸಿಗರೇಟನ್ನು ಹೊತ್ತಿಸಿ ಅಣ್ಣಾಜಿ ಕೃಷ್ಣಪ್ಪನ ಮಾತಿಗೆ ಕಾದ.

ಕೃಷ್ಣಪ್ಪ ಅಣ್ಣಾಜಿ ಓದುತ್ತಿದ್ದ ಟ್ರಾಟ್ಸ್ಕಿ ಪುಸ್ತಕವೊಂದನ್ನು ಹಾಸಿಗೆ ಮೇಲೆ ಗಮನಿಸಿದ. ನಾಡಹೆಂಚಿನ ಇಳಿಜಾರದ ಸೂರಿನ ಸಣ್ಣ ರೂಮಿನಲ್ಲಿ ಹಾಸಿಗೆ, ಒಂದು ಟ್ರಂಕು, ಕೆಲವು ಪುಸ್ತಕಗಳನ್ನು ಬಿಟ್ಟು ಬೇರೇನೂ ಇರಲಿಲ್ಲ.

ಕೃಷ್ಣಪ್ಪ ಜೇಬಿನಿಂದ ಇನ್ನೂರು ರೂಪಾಯಿಗಳನ್ನು ಎತ್ತಿ ಕೊಟ್ಟ. ಕೃಷ್ಣಪ್ಪನ ಸ್ವಭಾವ ತಿಳಿದ ಅಣ್ಣಾಜಿ ‘ಥ್ಯಾಂಕ್ಸ್‌’ ಅನ್ನದೆ ಜೇಬಿನಲ್ಲಿ ಹಾಕಿಕೊಂಡು ತನಗಾದ ಸಮಾಧಾನವನ್ನೂ ತೋರಿಸಿಕೊಳ್ಳದೆ ಇಂಗ್ಲಿಷಲ್ಲಿ ಹೇಳಿದ:

‘ನಾನು ಈ ರೂಮನ್ನೂ ಬದಲಾಯಿಸಬೇಕಾಗಿ ಬಂದಿದೆ.’

ಅಣ್ಣಾಜಿ ಎದ್ದು ಬೀದಿಗೆ ತೆರೆಯುವ ಮರದ ಸಣ್ಣ ಕಿಟಕಿಯ ಕೊಳಕಾದ ಫರದೆ ಸರಿಸಿ ತೋರಿಸಿದ:

‘ಮಫ್ತಿಯಲ್ಲಿರೋ ಪೋಲೀಸ್‌. ನಿನ್ನೆಯಿಂದ ಈ ರೂಮಿಗೆ ಯಾರು ಬರ್ತಾರೆ ಹೋಗ್ತಾರೆ ಗಮನಿಸ್ತ ಇದೆ ಹಂದಿ.’

‘ನನ್ನ ಹಾಸ್ಟೆಲ್‌ರೂಮಿಗೆ ಬಂದಿರು’

ಕೃಷ್ಣಪ್ಪನ ಮಾತಿಗೆ ಅಣ್ಣಾಜಿ ಅದೂ ಕ್ಷೇಮವಲ್ಲವೆನ್ನುವಂತೆ ತಲೆಯಲ್ಲಾಡಿಸಿದ. ಅವನನ್ನು ಅಣ್ಣಾಜಿಯೆಂದು ಕೃಷ್ಣಪ್ಪ ಕರೆಯುವುದಿಲ್ಲ. ಯಾಕೆಂದರೆ ಅವನ ನಿಜವಾದ ಹೆಸರೇನೆಂಬುದು ಕೃಷ್ಣಪ್ಪ ಕೇಳಿಲ್ಲ. ಪೋಲೀಸರಿಂದ ತಲೆ ಮರೆಸಿಕೊಂಡು ತಿರುಗುತ್ತಿದ್ದ ಅಣ್ಣಾಜಿ ಪ್ರತಿ ಊರಲ್ಲೂ ಒಂದೊಂದು ಹೆಸರಿಟ್ಟುಕೊಂಡು ಇರುತ್ತಿದ್ದ. ಗೋವಾದ ಪೋರ್ಚುಗೀಸ್‌ಜೈಲಿನಿಂದ ತಪ್ಪಿಸಿಕೊಂಡು ಬಂದ ಅಣ್ಣಾಜಿ ಮಹಾರಾಷ್ಟ್ರದವನು. ಗೋವಾದಿಂದ ತೆಲಂಗಾಣ ಪ್ರದೇಶಕ್ಕೆ ಹೋಗಿ ಅಲ್ಲಿ ಹಳ್ಳಿಯೊಂದರಲ್ಲಿ ರೈತ ಸಂಘಟನೆ ಮಾಡುತ್ತಿದ್ದಾಗ ಜಮೀಂದಾರನೊಬ್ಬನನ್ನು ಇವನ ಅನುಯಾಯಿಗಳು ಕೊಲ್ಲಲು ಪ್ರಯತ್ನಿಸಿದ್ದರು. ಜಮೀಂದಾರ ಕಾಲು ಮುರಿದುಕೊಂಡು ಬದುಕಿಕೊಂಡ. ಅಣ್ಣಾಜಿಯ ಯೋಜನೆಗೆ ಮೀರಿ ರೈತರಲ್ಲಿ ಕೆಲವರು ಮುಂದುವರೆದಿದ್ದರು. ಸಿಕ್ಕಿಬಿದ್ದ ರೈತರ ಮೇಲೆ ಕೊಲೆಯತ್ನದ ಆಪಾದನೆಯ ವಿಚಾರಣೆ ನಡೆಯುತ್ತಿತ್ತು. ಒಬ್ಬ ಆಪಾದಿತ ರೈತನನ್ನು ಅಪ್ರೂವರ್ ಮಾಡಿಕೊಂಡು ಅಣ್ಣಾಜಿಯ ಬಗ್ಗೆ ಪೋಲೀಸರು ಮಾಹಿತಿ ಸಂಗ್ರಹಿಸಿದ್ದರು. ಅಣ್ಣಾಜಿ ಊರಿಂದ ಊರಿಗೆ ತಪ್ಪಿಸಿಕೊಂಡು ತಿರುಗುತ್ತ ಈ ಊರಿಗೆ ಬಂದಿದ್ದ. ಇಂಗ್ಲಿಷ್‌ಪಾಠ ಹೇಳಿಕೊಡುತ್ತೇನೆಂದು ನಾಲ್ಕೈದು ಮನೆಗಳಲ್ಲಿ ಟ್ಯೂಶನ್ ಇಟ್ಟುಕೊಂಡಿದ್ದ. ಆಂಧ್ರ ಪೋಲೀಸರು ಆರ್. ಎಲ್‌. ನಾಯಕ್‌ಎಂಬ ಹೆಸರಲ್ಲಿ ಇವನನ್ನು ಹುಡುಕುತ್ತಿದ್ದರು. ಗೋವಾದ ಪೋರ್ಚುಗೀಸರು ಪಿ. ಟಿ. ದೇಶಪಾಂಡೆ ಎಂಬ ಹೆಸರಿನ ಇವನನ್ನು ಗಲ್ಲಿಗೆ ಏರಿಸಲೂ ಸಿದ್ಧರಾಗಿ ಕಾಯುತ್ತಿದ್ದರು. ಅವನು ಹೇಳಿಕೊಂಡಿದ್ದಕ್ಕಿಂತ ಹೆಚ್ಚನ್ನು ಕೃಷ್ಣಪ್ಪ ಕೇಳುತ್ತಿರಲಿಲ್ಲ. ತನ್ನ ಜೀವನಕ್ಕೊಂದು ಉದ್ದೇಶ ಹುಡುಕುತ್ತಿದ್ದ ಕೃಷ್ಣಪ್ಪನಿಗೆ ನೂರಾರು ಕ್ರಾಂತಿಕಾರಕ ಪುಸ್ತಕಗಳನ್ನು ಓದಿದ್ದ ಅಣ್ಣಾಜಿ ಮಹೇಶ್ವರಯ್ಯನಂತೆಯೇ ಗುರುವಾಗಿ ಕಂಡಿದ್ದ ಎಂದು ಹೇಳಬಹುದು.

ಅಣ್ಣಾಜಿಗೆ ಅವನು ಬಿಟ್ಟ ಬಂದ ಊರಲ್ಲೆಲ್ಲ ಒಬ್ಬಬ್ಬ ಪ್ರೇಯಸಿ. ಪ್ರತಿ ತಿಂಗಳೂ ಅವರಿಗೆಲ್ಲ ಅಷ್ಟಿಷ್ಟು ಹಣ ಅವನು ಕಳಿಸಬೇಕು. ಹೀಗಾಗಿ ಹುಲಿಯ ಹುಣ್ಣಿನಂತೆ ಅವನ ಸಾಲ. ಕೃಷ್ಣಪ್ಪನೇ ಮನಿಯಾರ್ಡರ್ ಮಾಡುವುದು. ಕೊಲ್ಹಾಪುರದಲ್ಲಿ ದರ್ಜಿಯ ಮಗಳೊಬ್ಬಳಿಗೆ ಅವಳ ಬಿ. ಟಿ. ವಿದ್ಯಾಭ್ಯಾಸಕ್ಕಾಗಿ ತಿಂಗಳಿಗೆ ಇಪ್ಪತೈದು, ಗೋವಾದಲ್ಲಿ ಇವನಿಂದ ಮಗುವನ್ನು ಪಡೆದ ಗುಮಾಸ್ತೆಯೊಬ್ಬಳಿಗೆ ಇಪ್ಪತ್ತೈದು, ಚಿಕ್ಕ ವಯಸ್ಸಲ್ಲೆ ಇವನನ್ನು ಮದುವೆಯಾಗಿ ಒಂದು ಗಂಡು ಮಗು ಹೆತ್ತು ತಾಯಿ ಮನೆ ಸೇರಿ ನಾಗಪುರದಲ್ಲಿದ್ದ ಖಾಸ ಹೆಂಡತಿಗೆ ಇಪ್ಪತ್ತೈದು, ಹದಿನೈದು ವರ್ಷಗಳಿಂದಾದರೂ ಇದಕ್ಕಾಗಿ ಇವನಿಗೆ ಸಾಲ ಕೊಟ್ಟ ಇವನ ಆ ಬಡ ಅನುಯಾಯಿಗಳಿಗೆ ಆಗೀಗ ತೀರಿಸಲು ಇನ್ನಷ್ಟು – ಹೀಗೆ ಮೈಯೆಲ್ಲ ಸಾಲ ಅಣ್ಣಾಜಿಗೆ. ಬರೀ ಚಹಾ ಸಿಗರೇಟಲ್ಲೆ ಬದುಕುತ್ತ, ಈಚಲು ಚಾಪೆ ಮೇಲೆ ಮಲಗಿ ನಿದ್ರಿಸಬಲ್ಲ ಅಣ್ಣಾಜಿಗೆ ಇನ್ನು ಯಾವ ದುಶ್ಚಟವೂ ಇರಲಿಲ್ಲ.

ಪ್ರತಿ ದಿನವೂ ಅಣ್ಣಾಜಿ ದುಡ್ಡಿಗೆ ಪರದಾಡುತ್ತ ಮುಂದಿನವಾರ ಕೊಟ್ಟುಬಿಡುವೆ ಇತ್ಯಾದಿ ಸುಳ್ಳುಗಳನ್ನು ಹೇಳುತ್ತ ಜನರನ್ನು ವಂಚಿಸಲು ತನ್ನೆಲ್ಲ ಆಕರ್ಷಣೆಗಳನ್ನೂ ಬಳಸುವುದು ಕಂಡು ಕೃಷ್ಣಪ್ಪನಿಗೆ ಜಿಗುಪ್ಸೆಯಾಗುತ್ತಿತ್ತು. ಆದರೆ ತನ್ನ ಹೆಸರಿನ ವ್ಯಾಮೋಹವನ್ನೂ ಬಿಟ್ಟ ವ್ಯಕ್ತಿ ಈತ. ಪರಿಚಯವಾದ ಪ್ರಾರಂಭದಲ್ಲಿ ಅಣ್ಣಾಜಿ ಕೇಳುತ್ತಿದ್ದ ದುಡ್ಡನ್ನು ಅವರಿವರಿಂದ ಪಡೆದು ಕೊಡುವಾಗ ಅವನು ಹೇಳುವ ಸುಳ್ಳುಗಳಿಂದಾಗಿ ಕೃಷ್ಣಪ್ಪ ಕ್ಷುದ್ರನಾಗಿ ‘ನಿನ್ನ ಮೇಲೆ ನನಗೆ ಗೌರವವಿದೆ. ನನ್ನ ಹತ್ತಿರ ಸುಳ್ಳು ಹೇಳಬೇಡ’ ಎಂದಿದ್ದ. ಕ್ಷಣ ಮಂಕಾಗಿ ಕೂತು ಅಣ್ಣಾಜಿ ತನ್ನ ಕಥೆ ಹೇಳಲು ತೊಡಗಿದಾಗ, ‘ಸಾಕು ಬಿಡು. ನಾನು ಪ್ರತಿ ತಿಂಗಳೂ ಆದಷ್ಟು ಹಣ ನಿನಗೆ ಒಟ್ಟು ಮಾಡಿಕೊಡುವೆ’ ಎಂದಿದ್ದ. ಜೊತೆಗೇ ಇಂಗ್ಲಿಷ್‌ಟ್ಯೂಷನ್‌ಹೇಳುವುದರಿಂದಲೂ ಅಣ್ಣಾಜಿಗೆ ಸುಮಾರು ನೂರೈವತ್ತು ಸಿಗುತ್ತಿತ್ತು.

‘ಯಾವುದೋ ತತ್ವಕ್ಕಾಗಿ ಮೈಮರೆತು ಇರುವ ನೀನು ಯಾಕೆ ಈ ಕ್ಷುದ್ರ ವಿಷಯಗಳಿಗೆ ಸಿಕ್ಕಿಹಾಕಿಕೊಂಡಿದ್ದು?’ ಎಂದು ಉತ್ತರ ಬಯಸದೆ ತನಗೇ ಕೇಳಿಕೊಳ್ಳುವಂತೆ ಕೃಷ್ಣಪ್ಪ ಹೇಳಿದ.

ಅಣ್ಣಾಜಿ ಚಾರ್ಮಿನಾರ್ ಹೊತ್ತಿಸಿ

‘ನಿನ್ನಲ್ಲೇ ನೀನು ಸಂಪೂರ್ಣ ಎನ್ನುವ ಗರ್ವ ನಿನಗೆ. ನೀನು ಮೂಲಭೂತವಾಗಿ ಫ್ಯಾಸಿಸ್ಟ್‌ಮನೋಧರ್ಮದವ’ ಎಂದ.

ಮುಸ್ಲಿಂ ಹೋಟೆಲಲ್ಲಿ ಬಾಂಬೆ ಟೀ ಕುಡಿಯುತ್ತ ಇಬ್ಬರೂ ಮಾತನಾಡುತ್ತಿದ್ದರು. ರೇಡಿಯೋ ಗದ್ದಲದಲ್ಲಿ ಧ್ವನಿ ಎತ್ತರಿಸಿ ಮಾತಾಡಬೇಕಿತ್ತು. ಕೃಷ್ಣಪ್ಪನಿಗಿದು ಇಷ್ಟವಿಲ್ಲದಿದ್ದರೂ ಹೇಳಿದ:

‘ಕ್ರಾಂತಿಗಾಗಿ ಬದುಕೋವನು ವ್ಯಾಮೋಹಿಯಾಗಿರಕೂಡದು. ದುಡ್ಡಿನ ವ್ಯವಹಾರ ಹಚ್ಚಿಕೊಂಡು ಬೂರ್ಶ್ವಾ ಆಗಬಾರದು.’ ಈ ಹೊಸ ಶಬ್ದಗಳನ್ನು ಅಣ್ಣಾಜಿಯಿಂದಲೇ ಕೃಷ್ಣಪ್ಪ ಕಲಿತಿದ್ದು.

‘ನಿಜ ನೀನು ಹೇಳೋದು. ನಾನು ಸುಮ್ಮನಿದ್ದರೂ ಹೆಂಗಸರು ನನ್ನ ಹಚ್ಚಿಕೋತಾರೆ.’ ತನಗೇ ಅದು ರಹಸ್ಯ ಎನ್ನುವಂತೆ ಅಣ್ಣಾಜಿ ಎದ್ದು ನಿಂತ. ನಡೆನುಡಿಯಲ್ಲಿ ಅಣ್ಣಾಜಿ ಚುರುಕು. ಕೃಷ್ಣಪ್ಪ ನಿಧಾನ.

ಇವು ಕೃಷ್ಣಪ್ಪನ ಜೀವನದಲ್ಲಿ ಬಹಳ ಮುಖ್ಯ ದಿನಗಳು ಎನ್ನಬೇಕು. ಪಾರ್ಕಿನಲ್ಲಿ ಕೂತು ನೆಲಗಡಲೆ ಸುಲಿದು ತಿನ್ನುತ್ತ ಕೃಷ್ಣಪ್ಪ ಅಣ್ಣಾಜಿ ಗಂಭೀರವಾಗಿ ಚರ್ಚಿಸುವರು. ಅಣ್ಣಾಜಿ ತನ್ನ ಪಾಠವನ್ನು ಮಾರ್ಕ್ಸ್‌‌ನ ಒಂದು ಮಾತಿನಿಂದ ಶುರು ಮಾಡಿದ್ದ: ‘ಈ ವರೆಗೆ ತಾತ್ವಿಕರು ಪ್ರಪಂಚದ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ; ಆದರೆ ನಮ್ಮ ಈ ಕೆಲಸ ಈ ಪ್ರಪಂಚವನ್ನು ಬದಲಿಸುವುದು.’ ಇಂಥ ಅನೇಕ ಮಾತುಗಳು ಕೃಷ್ಣಪ್ಪನನ್ನು ಆಳವಾದ ವಿಚಾರಗಳಿಗೆ ಹಚ್ಚಿದ್ದವು. ನಮ್ಮ ಪ್ರಜ್ಞೆ ಸ್ವತಂತ್ರ ವಸ್ತುವಲ್ಲ – ಉತ್ಪಾದನೆಗಾಗಿ ನಾವು ತೊಡಗುವ ಅನೇಕ ಸಂಬಂಧಗಳಿಂದ ಉಂಟಾದದ್ದು ಎಂದು ಅಣ್ಣಾಜಿ ಕೆಣಕಿದಾಗ ಜಡಪ್ರಪಂಚದಿಂದ, ದೈನಿಕಗಳಿಂದ ಸೋಲಬಾರದೆಂಬ ಹಠವಾದಿ ಕೃಷ್ಣಪ್ಪ ಒಪ್ಪಿರಲಿಲ್ಲ. ಪಾರ್ಶ್ವವಾಯುವಿನಿಂದ ನರಳುತ್ತಿರುವಾಗಲೂ ಈ ಬಗ್ಗೆ ಅವನಿಗೆ ಅನುಮಾನ ಉಳಿದೇ ಇತ್ತು. ವಾದಿಸಿದ್ದ:

‘ಮನುಷ್ಯ ತನ್ನ ಪರಿಸರಾನ್ನ ಮೀರುತಾನೆ – ಇದನ್ನು ನಾನು ವಾದಿಸಲಾರೆ. ನನ್ನ ಅನುಭವದ ಮಾತು ಇದು. ಆ ವಿಷಯ ಬಿಡು. ಕೂಲಿಕಾರರನ್ನು ರೈತರನ್ನು ನೀನು ಒಟ್ಟು ಮಾಡಿ ಹೋರಾಟಕ್ಕೆ ಹಚ್ಚುವುದು ಯಾವ ಪುರಷಾರರ್ಥಕ್ಕೆ? ಅವರ ಕೂಲಿ ಇನ್ನಷ್ಟು ಹೆಚ್ಚಿ, ಮನೆಗೊಂದು ರೇಡಿಯೋ, ಸ್ಟ್ಯೆನ್‌ಲೆಸ್‌ಪಾತ್ರೆಗಳನ್ನು ಅವರು ಕೊಂಡುಬಿಡುವಂತಾದರೆ ಅವರ ಜೀವನ, ಈ ಪ್ರಪಂಚ ಬದಲಾದಂತೆಯೊ? ಪ್ರತಿ ನಿತ್ಯದ ಬದುಕಿನ ಅದೇ ಕೆಲಸಗಳು, ಅದೇ ಜಂಜಾಟಗಳು, ಅದೇ ತರಲೆ ತಾಪತ್ರೆಯಗಳು ಹೋಗಿಬಿಡ್ತಾವ? ಅವರು ಇನ್ನಷ್ಟು ಆಸೆಬುರಕರಾಗುತ್ತಾರೆ – ನಿನ್ನಂಥವರಿಂದ.’

‘ಹಾಗಲ್ಲ, ನೀನು ವ್ಯಕ್ತಿವಾದಿಯ ಹಾಗೆ ಮಾತಾಡ್ತಿದ್ದಿ.’

‘ವ್ಯಕ್ತಿವಾದಿ’ ಇತ್ಯಾದಿ ಶಬ್ದಗಳಲ್ಲಿ ತನ್ನ ಅನುಮಾನ ಬಗೆಹರಿಸಲು ಪ್ರಯತ್ನಿಸುವ ಅಣ್ಣಾಜಿಯ ವಾದ ಕ್ರಮದಿಂದ ಕೃಷ್ಣಪ್ಪನಿಗೆ ಬೇಸರ ಬರುತ್ತಿತ್ತು. ಅಣ್ಣಾಜಿ ಸಮಾಧಾನದಿಂದ ವಿವರಿಸುತ್ತಿದ್ದ:

‘ತಮ್ಮ ಜೀವನದ ಸುಧಾರಣೆಗಾಗಿ ಬಡವರನ್ನು ಹೋರಾಡಕ್ಕೆ ಸಿದ್ಧ ಮಾಡ್ತೀವಿ ಅನ್ನು – ಈ ಹೋರಾಟ ಅಷ್ಟಕ್ಕೆ ನಿಲ್ಲಲ್ಲ. ನಮ್ಮ ವರ್ಗದ ಜೀವನಮಟ್ಟ ಹಚ್ಚಿಸಿಕೊಳ್ಳೊ ಆಸೆಬುರಕತನಕ್ಕೂ ಅವರ ಆಸೆಗೂ ಮೂಲಭೂತ ವ್ಯತ್ಯಾಸವಿದೆ. ಆದರೆ ಆಸೆ ಚಲನಶೀಲ. ಅವರ ಆಸೆ ಹೆಚ್ಚುತ್ತ ಹೋದಂತೆ ಈ ಪ್ರಪಂಚದ ಸ್ವರೂಪಾನೇ ಬದಲಾಗಬೇಕಾಗಿ ಬರುತ್ತೆ. ಅವರ ದುಡಿಮೆಯೇ ಈ ಸಮಾಜದ ಸ್ಥಿತಿಗೂ ಗತಿಗೂ ದ್ರವ್ಯ ಅನ್ನೋದನ್ನ ಒಪ್ಪಿಕೊಂಡಿದ್ದಿತಾನೆ? ನಮ್ಮ ಪುರುಷಾರ್ಥಗಳಿಗೆಲ್ಲ ಮೂಲ ಈ ದುಡಿಮೆ. ಆದರೆ ಈ ದುಡಿಮೆಯ ಲಾಭ ಹೋಗೋದು ಬಂಡವಾಳಶಾಹಿಗೆ. ಶೋಷಣೇನೇ ಈ ವ್ಯವಸ್ಥೆಗೆ ಆಧಾರ. ಬಡವರು ಶೋಷಣೆಗೂ ಒಳಗಾಗ್ತಾರೆ; ಬರ್ತಾ ಬರ್ತಾ ತಮ್ಮ ಕೈಯಿಂದ ಬೆಳೆದದ್ದಕ್ಕೂ ತಮಗೂ ಸಂಬಂಧಾನೇ ಇಲ್ಲವೆನ್ನೋದನ್ನ ಅರೀತಾರೆ. ಮನುಷ್ಯನಿಂದಲೇ ಮನುಷ್ಯನಿಗೆ ಇವೆಲ್ಲ ಆಗ್ತಿರೋದೂಂತ ಅರ್ಥವಾಗ್ತ ಹೋದ ಹಾಗೆ ತನ್ನ ನಿತ್ಯಜೀವನಾನ್ನ ಶುಷ್ಕವಾಗಿ ಮಾಡೋ ವ್ಯವಸ್ಥೆನೇ ಬದಲಾಗಬೇಕು. ಸುಧಾರಣೆಗಳಿಂದ ಇದು ಸಾಧ್ಯವಾಗದು ಅನ್ನೋದನ್ನ ಅರೀತಾರೆ. ಮೇಲಿನ ವರ್ಗದ ನಮ್ಮಂಥ ಕೆಲವರಿಗೆ ಅದು ಬುದ್ಧಿಪೂರ್ವಕವಾಗಿ ಅರ್ಥವಾದರೆ ರೈತರಿಂದ ಹುಟ್ಟಿ ಬಂದ ನಿನ್ನಂಥ ಸೂಕ್ಷ್ಮ ಮನಸ್ಸಿನವರಿಗೆ ಅದು ಅನುಭವದಿಂದ ಗೊತ್ತಾಗತ್ತೆ. ನಿನ್ನಂಥವರು ಅದನ್ನು ಉಳಿದವರಲ್ಲಿ ಬಿಡುತ್ತೀರಿ. ಹಾಗೇ ಕ್ರಾಂತಿ ಆಗುತ್ತೆ. ನಾವಾಗಬೇಕೂಂತ ಬಯಸೋದ್ರಿಂದ ಮಾತ್ರ ಕ್ರಾಂತಿಯಾಗುತ್ತೆ ಅನ್ನೋದು ವ್ಯಕ್ತಿವಾದವಾಗಿಬಿಡತ್ತೆ. ತನ್ನ ಕೋಳಿ ಕೂಗಿದ್ರಿಂದ ಬೆಳಗಾಯ್ತು ಅಂತ ತಿಳಿಯೋ ಮುದುಕಿ ಕಥೆ ಹಾಗೆ ಅದು. ಕ್ರಾಂತಿಯಾಗುತ್ತೆ ಅನ್ನೋದು ಸಮಾಜದ ಚಲನೆಯ ನಿಯಮ. ಅದನ್ನ ತ್ವರಿತಗೊಳಿಸೋ ವೇಗವರ್ಧಕಗಳು, ಅಥವಾ ಸೂಲಗಿತ್ತಿಯರು ನಾವು.’

ಅಣ್ಣಾಜಿಯ ಕಣ್ಣುಗಳು ಹೊಳೆಯುತ್ತಿದ್ದವು. ಪಾರ್ಕನಲ್ಲಿ ಕಡಲೇಕಾಯಿ ಬೆಲ್ಲವನ್ನು ಕೊಳ್ಳಿರೆಂದು ಬೇಡುತ್ತ ಕಾಡುತ್ತ ನಿಂತ ಹುಡುಗನನ್ನು ನೋಡುತ್ತ ಕೃಷ್ಣಪ್ಪ,

‘ಇಂಥ ದೈನ್ಯದ ಹುಡುಗರೂ ರೊಚ್ಚೆದ್ದು ಕ್ರಾಂತಿ ಮಾಡ್ತಾರೆ ಅನ್ನು,’

ಎಂದು ಅರ್ಧ ಅನುಮಾನದಿಂದ ಕೇಳುತ್ತಿದ್ದ.

‘ಖಂಡಿತವಾಗಿ, ಫ್ರಾನ್ಸಿನ ಜೈಲಿನ ಗೇಟು ಒಡೆದಿದ್ದು ಗೊತ್ತಲ್ಲ,’

‘ಯಾವತ್ತೋ ಒಂದು ದಿನ ಆವೇಶದಿಂದ ಕುಣಿದು ಮತ್ತೆ ಪ್ರಪಂಚ ಅದೇ ಅರ್ಥಹೀನ ದೈನಿಕಗಳ ಜಾಡಿಗೆ ಸಿಕ್ಕಿ ಹಾಕಿಕೊಳ್ಳುತ್ತಲ್ಲ?’

‘ಇಲ್ಲ – ಕ್ರಾಂತಿಯಿಂದ ನಮ್ಮ ದೈನಿಕವೂ ಸೃಷ್ಟಿಶೀಲವಾಗುತ್ತೆ.’ ತನ್ನ ತರ್ಕ ಎಲ್ಲ ಅನುಮಾನಗಳಿಗೆ ಪ್ರೂಫ್‌ಎಂಬ ಅಣ್ಣಾಜಿಯ ಯೋಚನಾಕ್ರಮದಿಂದ ಕೃಷ್ಣಪ್ಪನಿಗೆ ಕರೆಕರೆಯಾಗುತ್ತಿತ್ತು.

‘ಹುಟ್ಟೋದು, ಸಾಯೋದು, ಉಣ್ಣೋದು, ಉಳೋದು, ಸಂಭೋಗ ಮಾಡೋದು ಎಲ್ಲವುದಕ್ಕೂ ಒಂದೊಂದು ಹಬ್ಬ ಮಾಡಿದೆಯಲ್ಲ – ನಮ್ಮ ಹಿಂದು ಧರ್ಮ, ನಮ್ಮ ಭೂಮಿ ಹುಣ್ಣಿಮೆ ಹಬ್ಬದ ಅರ್ಥ ಗೊತ್ತ ನಿನಗೆ?’

ಬೇಸರದಿಂದ ಕೃಷ್ಣಪ್ಪ ಹೇಳುತ್ತಿದ್ದ, ಅದನ್ನೂ ಗಂಭಿರವಾಗಿ ಅಣ್ಣಾಜಿ ವಿಶ್ಲೇಷಿಸುತ್ತಿದ್ದ:

‘ಶುಷ್ಕವಾಗಿ ಬಿಡುವ ದೈನಿಕಗಳನ್ನು ಭ್ರಮೇಲಿ ಗೆಲ್ಲೋದಕ್ಕೂ ನಿಜದಲ್ಲಿ ವಾಸ್ತವವಾಗಿ ಗೆಲ್ಲೋದಕ್ಕೂ ವ್ಯತ್ಯಾಸವಿದೆ. ಉತ್ಪಾದನೆಯ ಸಂಬಂಧಗಳು ಬದಲಾದಾಗ ದುಡಿಮೆ ಸೃಷ್ಟಿಶೀಲವಾಗುತ್ತೆ. ಅಹಂಕಾರದಲ್ಲಿ ಸೆಟೆದು ದೊಣ್ಣೆ  ನಾಯಕನಂತೆ ಓಡಾಡ್ತ ಕ್ಷುದ್ರತೆಯಿಂದ ಹೊರಗೆ ನಿಲ್ತೀನಿ ಅಂತ ನೀನು ತಿಳಿದಿರೋದು ಭ್ರಮೆ. ಹೋಗಿ ರೈತರ ನಡುವೆ ಕೆಲಸ ಮಾಡು. ಅವರನ್ನು ಹೋರಾಟಕ್ಕೆ ಸಂಘಟಿಸು. ನೀನೊಬ್ಬ ಸೂಲಗಿತ್ತೀಂತ ತಿಳಕೊ – ತಾವು ಉಳೋ ನೆಲಕ್ಕವರು ಒಡೆಯರಾಗೋದೇ ನಿಜವಾದ ಭೂಮಿ ಹುಣ್ಣಿಮೆ.’

ಕೃಷ್ಣಪ್ಪನಿಗೆ ತನ್ನ ಅನುಭವದ ಸತ್ಯವೇ ಬೇರೆ ಎಂದು ಕಂಡರೂ ಅಣ್ಣಾಜಿಯ ವಾದವೂ ಸರಿಯಾಗಿ ಕಂಡು ತಬ್ಬಿಬ್ಬಾಗಿಬಿಡುತ್ತಿದ್ದ.

‘ಹಾಗಾದರೆ ರಷ್ಯಾದಲ್ಲಿ ದುಡಿಮೆಯೆಲ್ಲ ಸೃಷ್ಟಿಶೀಲವಾಗಿ ಬಿಟ್ಟಿದೆಯೋ?’

ಕೃಷ್ಣಪ್ಪ ಅಣ್ಣಾಜಿಯನ್ನು ಹಂಗಿಸುವಂತೆ ಕೇಳುತ್ತಿದ್ದ.

‘ನೋಡು ಕೃಷ್ಣಪ್ಪ, ಆಗಬೇಕಾದ್ದೆಲ್ಲ ರಷ್ಯಾದಲ್ಲೆ ಆಗಿಲ್ಲ ನಿಜ. ಕ್ರಾಂತಿಗೆ ಜನರನ್ನು ಸಿದ್ಧಮಾಡಿದ ಪಕ್ಷ ತಾನೇ ಒಡೆಯನಾಗಿ ಬಿಟ್ಟಿದೆ ಅಲ್ಲಿ. ಕ್ರಾಂತಿ ಒಂದು ದಿನದ ಕೆಲಸವಲ್ಲ. ಆದ ತಪ್ಪನ್ನು ಸದಾ ತಿದ್ದಿಕೊಳ್ಳಾನೇ ಹೋಗಬೇಕು. ಈಗ ಚೈನಾದಲ್ಲಿ ನೋಡು. . .’

ಕಾಡುತ್ತಿದ್ದ ಕಡಲೇಕಾಯಿ ಮಾರುವ ಹುಡುಗನನ್ನು ‘ಗೆಟ್‌ಅವೇ’ ಎಂದು ಗದರಿಸಿ ಅಣ್ಣಾಜಿ ಸಿಗರೇಟು ಹಚ್ಚಿದ. ಬಾಯಲ್ಲಿ ಸಿಗರೇಟು ಸಿಕ್ಕಿಸಿ ತನ್ನ ಜುಬ್ಬದ ಸಡಿಲವಾದ ತೋಳುಗಳನ್ನು ಮುಡಿಸಿಕೊಂಡು ಜೇಬಿನಿಂದ ಪೆನ್ಸಿಲ್‌ಕಾಗದ ತೆಗೆದ. ಚೈನಾದ ಮ್ಯಾಪನ್ನು ಬರೆದು ಲಾಂಗ್‌ಮಾರ್ಚನ್ನು ವಿವರಿಸುತ್ತಿದ್ದಂತೆಯೇ ಕೃಷ್ಣಪ್ಪ ರೇಗಿದ ಧ್ವನಿಯಲ್ಲಿ ಹೇಳಿದ:

‘ನಮ್ಮ ದೇಶದ ಕಮ್ಯುನಿಸ್ಟರು ದೇಶದ್ರೋಹಿಗಳು. ನಲವತ್ತೆರಡರ ಚಳುವಳೀಲಿ ಯಾಕೆ ಬ್ರಿಟಿಷರ ಪರವಾಗಿ ಕೆಲಸ ಮಾಡಿದ್ರು ಹೇಳು? ನನಗಂತೂ ರಷ್ಯಾಕ್ಕೂ ಚೈನಾಕ್ಕೂ ತಲೆಹಿಡುಕನಾಗಿ ಕೆಲಸ ಮಾಡೋದು ಸಾಧ್ಯವಿಲ್ಲ.’

ಅಣ್ಣಾಜಿ ಸಮಾಧಾನ ಕಳೆದುಕೊಳ್ಳದೆ ಹೇಳಿದ:

‘ನಮ್ಮ ದೇಶದ ಕಮ್ಯುನಿಸ್ಟರು ಬಂಜೆಯರು – ಒಪ್ಪಿದೆ. ಆದರೆ ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನೀನ್ನ ಸೋಲಿಸೋದು ಮುಖ್ಯವಾಗಿತ್ತು. ಅನ್ನೋದನ್ನೂ ನಾನು ಒಪ್ಪುತ್ತೀನಿ. ಆದರೂ ನಾನು ಆಗ ಪಾರ್ಟಿ ಬಿಟ್ಟು ಗಾಂಧಿ ಚಳವಳೀಲಿ ಭಾಗವಹಿಸಿದ್ದೆ – ಇವೆಲ್ಲ ಕಾಂಟ್ರಿಡಿಕ್ಷನ್ನುಗಳು. ನೋಡು ಕೃಷ್ಣಪ್ಪ ನನ್ನ ಉದ್ದೇಶ ಇದು: ಆಸೆ ಬುರುಕರ ಬಗ್ಗೆ ಪ್ರಚಂಡ ತಿರಸ್ಕಾರ ಇರೋದನ್ನ ನಿನ್ನಲ್ಲಿ ನಾನು ಕಂಡಿದೇನೆ. ಈ ತಿರಸ್ಕಾರ, ಈ ಗರ್ವ ದಲಿತರ ಕ್ರಾಂತಿಗೆ ಅತ್ಯಗತ್ಯವಾದ ಡ್ರೈವಿಂಗ್‌ಫೋರ್ಸ್. ನನಗಿಂತ ನೀನೇ ಗಟ್ಟಿಯಾಗಿ ಉಳೀತಿ ಅಂತ ಅನ್ನಿಸೋದರಿಂದ ಈ ಕ್ರಾಂತಿಯ ಬೀಜಾನ್ನ ಬಿತ್ತಲಿಕ್ಕೆಂತ ನಿನಗಿದೆಲ್ಲ ನಾನು ಹೇಳ್ತಿದೇನೆ. ನನ್ನ ಜೀವನ ಈಗ ನೂರು ತರಲೆ ತಾಪತ್ರಯಗಳಲ್ಲಿ ಗಂಟುಗಂಟಾಗಿ ಬಿಟ್ಟಿದೆ. ನಾನಾಗಿ ಇದನ್ನೆಲ್ಲ ಹರಕೊಳ್ಳಲಾರೆ. ದೇಶದಲ್ಲಿ ಜನ ಕ್ರಾಂತಿಗೆ ಸಿದ್ಧರಾದಾಗ ನಾನೆಲ್ಲ ಹರಕೊಂಡು ಅವರ ಜೊತೆ ನಿಂತಿರ್ತೇನಿ ಅಂತ ನನಗೆ ಗೊತ್ತು. ಗೋವಾದಲ್ಲಿ ಪೋಲೀಸರು ಒಂದು ಹೆಜ್ಜೆ ಮುಂದಿಟ್ಟೆ. ಗುಂಡಿನ ಶಬ್ದಕ್ಕಾಗಿ ಕಾದೆ. ಆಗ ಹಿಮ್ಮೆಟ್ಟುತ್ತಿದ್ದ ನನ್ನ ಹಿಂದಿದ್ದ ಜನರೆಲ್ಲ ಇದ್ದಕ್ಕಿದ್ದಂತೆ ನುಗ್ಗಿಬಂದರು. ಪೋಲೀಸರು ಶೂಟ್‌ಮಾಡಲಾರದೆ ಸುಮ್ಮನೆ ನಿಂತರು. ನನ್ನ ಗರ್ವದ ಮಿತೀನ್ನ ನಾನು ಇಂಥ ಸಂದರ್ಭಗಳಲ್ಲಿ ಮೀರದರೆ ನೀನು ಮಾತ್ರ ಪ್ರತಿಕ್ಷಣಾನೂ ಮೀರತ ಹೋಗಬಲ್ಲೆ; ರೈತರವನಾದ್ದರಿಂದ ನೂರಾರು ಜನರನ್ನು ನಿನ್ನ ಜೊತೇಲಿ ತಗೊಂಡು ಹೋಗಬಲ್ಲೆ ಅಂತ ತಿಳಿದಿದ್ದೀನಿ. ಹೋಗಬಲ್ಲೆ ಅಲ್ಲ – ಹೋಗಲೇ ಬೇಕಾಗುತ್ತೆ. ಇದು ಸೈಂಟಿಫಿಕ್‌ಸತ್ಯ. ವ್ಯಕ್ತಿವಾದಿಯಾದರೆ ನಿನ್ನ ಸ್ವಭಾವ ಫ್ಯಾಸಿಸ್ಟ್‌ಆಗ್ತಾ ಹೋಗುತ್ತೆ. ಆದ್ರಿಂದ ನೀನು ಮಾಸ್‌ಮ್ಯಾನ್‌ಆಗಬೇಕು. ವರ್ಗಹೋರಾಟದ ಮುಂಚೂಣಿಯಲ್ಲಿ ನಿನ್ನಂಥವರು ನಿಲ್ಲಬೇಕು. ಕಮ್ಯುನಿಸ್ಟರನ್ನು ಮರೆತು ಬಿಡು. ಈ ನೆಲದ ಸಾರವನ್ನು ಹೀರಿದ, ಈ ಕ್ಷುದ್ರ ಚರಿತ್ರೇನ್ನ, ಹಾಗೇ ವೈಭವವನ್ನು ಅರ್ಥಮಾಡಿಕೊಂಡ ಒಂದು ಹೊಸ ಕ್ರಾಂತಿಕಾರಿ ಪಕ್ಷಾನ್ನ ಈ ದೇಶದಲ್ಲಿ ನಾವು ಕಟ್ಟಬೇಕು. . . .’

ಅಣ್ಣಾಜಿ ಸ್ಫೂರ್ತಿಯಿಂದ ಮಾತಾಡುತ್ತ ಪರವಶನಾಗಿದ್ದ. ಕೃಷ್ಣಪ್ಪನನ್ನು ಅದು ಆವರಿಸಿತ್ತಾದರೂ ತನ್ನ ಆಳವಾದ ಸಂಶಯವನ್ನು ಹೇಳದೇ ಅವನಿಗೆ ವಿಧಿಯಿರಲಿಲ್ಲ.

‘ಜನ ಇನ್ನಷ್ಟು ಸರಾಗವಾಗಿ ಉಣ್ಣೋ ಮಲಗೋ ಸಾಯೋ ಕೆಲಸ ಮಾಡಿಕೋತ ಹೋಗಲಿಕ್ಕೆ ಈ ಉಪದ್ವ್ಯಾಪವೆಲ್ಲ ಯಾಕೆ ಹೇಳು.’

ಅಣ್ಣಾಜಿಗೆ ಕೋಪ ಬಂತು.

‘ಮುಚ್ಚು ಬಾಯಿ. ಗರ್ವದ ಮಾತಾಡಬೇಡ. ಜೀವನಕ್ಕಿಂತ ನೀನು ಶ್ರೇಷ್ಠ ಅಂತ ತಿಳಿಯೋಕೆ ನೀನು ಯಾರು? ದೇವರ? ಕ್ಷುದ್ರವಾದ ದೈನಿಕ, ದೈನಿಕ ಅಂತ ಗೋಳಿಡ್ತೀಯಲ್ಲ – ಅದನ್ನು ಬಿಟ್ಟು ಉಳಿದದ್ದೇನಿದೆ? ಈ ದೈನಿಕ ಜೀವನಕ್ಕೆ ಪ್ರಭೇನ್ನ ತರೋದಕ್ಕಿಂತ ದೊಡ್ಡ ಕೆಲಸ ಏನಿದೆ? ಸಮಾಧಿಯಲ್ಲೋ, ಭಕ್ತಿಯ ಪರವಶತೇಲೊ ಎಲ್ಲಕ್ಕಿಂತ ಮೇಲೆ ಹೋಗ್ತಿನಿ ಅಂತ ತಿಳಿದಿರೋ ಹಿಂಜಿದ ಬುದ್ಧಿಯ ಈಡಿಯಟ್ಟರಂತೆ ಮಾತಾಡಬೇಡ.’

ಈ ವರೆಗೆ ಯಾರೂ ಕೃಷ್ಣಪ್ಪನನ್ನು ಹೀಗೆ ಜರೆದಿರಲಿಲ್ಲ. ಈ ಮಾತಾಡುವಾಗ ಅಣ್ಣಾಜಿ ಅವನ ಬದುಕಿನ ಮಿತಿಗಳನ್ನು ಮೀರಿದ್ದು ಕಂಡು ಕೃಷ್ಣಪ್ಪ ಗೌರವದಿಂದ ಹೇಳಿದ – ತಾನು ಹೇಳೋದು ಅಪ್ರಸ್ತುತ ಎನ್ನಿಸಿದರೂ.

‘ನೋಡು ನನಗೆ ಇಬ್ಬರು ಹತ್ತಿರದವರು ಇದಾರೆ. ಬುದ್ಧ ಮತ್ತು ಕ್ರಿಸ್ತ. ತಾಯಿಗೆ ಕ್ರಿಸ್ತ ಹೇಳಿದನಲ್ಲ ‘ಏ ಹೆಂಗಸು ನೀನು ಯಾರು?’ ಅಂತ – ಅದ ನನಗೆ ಇಷ್ಟವಾದ ನಿಲುವು. ಹಾಗೇನೇ ನಮ್ಮ ಅಲ್ಲಮ, ನಾನಕ, ಕಬೀರರಂಥ ಅರೆ ಹುಚ್ಚರೂ ಯಾವುದೋ ದೊಡ್ಡ ಸತ್ಯಾನ್ನ ತಮ್ಮ ಮಾತಲ್ಲಿ ಆರದಂತೆ ಬಚ್ಚಿಟ್ಟಿದ್ದಾರೆ ಅಂತ ನನಗನ್ನಿಸುತ್ತೆ. ಆದ್ರಿಂದ ಜನರ ಹೊಟ್ಟೆ, ಬಟ್ಟೆ ಉಪದ್ವ್ಯಾಪಗಳಲ್ಲಿ ಮುಳುಗೋದೂಂದ್ರೆ. . . . .’

ತಾನು ಮಾತನ್ನು ಪೂರ್ಣ ಮಾಡಿದರೆ ತನ್ನ ಮನಸ್ಸಿನಲ್ಲಿ ನಿಜವಾಗಿ ಇರೋ ಗೊಂದಲಾನ್ನ ಸರಳಗೊಳಿಸದಂತೆ ಆದೀತೆಂದು ಕೃಷ್ಣಪ್ಪ ಅರ್ಧಕ್ಕೆ ನಿಲ್ಲಿಸಿದ.

ಅಣ್ಣಾಜಿ ಸುಮ್ಮನಿದ್ದ. ಕೃಷ್ಣಪ್ಪನೂ ಸುಮ್ಮನೇ ಕೂತ. ಪಾರ್ಕಿನಲ್ಲಿ ಗಾಳಿ ಹಿತವಾಗಿತ್ತು. ಹೊಸದಾಗಿ ಮದುವೆಯಾದ ದಂಪತಿಗಳು, ಚಿಕ್ಕ ಮಕ್ಕಳನ್ನು ಸಂತೈಸುತ್ತ ಕೂತ ಹೆಂಗಸರು, ಅವಳ ಡೊಳ್ಳು ಹೊಟ್ಟೆಯ ಗಂಡಂದಿರು, ನಿವೃತ್ತರಾದ ಮೇಲೆ ತಮ್ಮ ಬೆಳೆದ ಮಕ್ಕಳ ಜೊತೆ ಕಾದಾಡುವ ಮುದುಕರು, ಇಂಥ ಜೀವನ ಇನ್ನಷ್ಟೂ ಉಜ್ವಲವಾಗುತ್ತದೆ ಎಂದು ಅಣ್ಣಾಜಿ ಹೇಳುತ್ತಾನಲ್ಲ ಅದು ಹೇಗೆ ಎಂದು ಆಶ್ಚರ್ಯಪಡುತ್ತ ಕೃಷ್ಣಪ್ಪ ಕೂತ. ಅಣ್ಣಾಜಿ ಮೃದುವಾಗಿ ಹೇಳಿದ:

‘ನೀನು ಹೇಳಿದ ಯಾರೂ ಸಮಾಜ ಬಿಟ್ಟು ನಿಲ್ಲಲಿಲ್ಲ ಕೃಷ್ಣಪ್ಪ. ಅವರಿಗೂ ನಮಗೂ ಇರೋ ವ್ಯತ್ಯಾಸ ಅಂದ್ರೆ ಅವರು ಭ್ರಮೇಲಿ ಗೆಲ್ಲಲಿಕ್ಕೆ ನೋಡಿದರು. ನಾವು ಕಾರ್ಖಾನೇಲಿ, ಹೊಲದಲ್ಲಿ ನಿಜವಾಗಿ ಗೆಲ್ಲಲಿಕ್ಕೆ ಪ್ರಯತ್ನಪಡ್ತೇವೆ. ನೀನು ಹೀಗೆ ಪ್ರಾಮಾಣಿಕವಾಗಿ ಉಳಿದರೆ ನೀನೂ ನನ್ನ ಥರಾನೇ ಯೋಚನೆ ಮಾಡಲೇಬೇಕಾಗತ್ತೆ – ಇವತ್ತಲ್ಲ ನಾಳೆ.’

* * *