ಬಲಗೈ ಬೆರಳುಗಳನ್ನು ಚೂರು ಚೂರೇ ಮಡಿಸುತ್ತ ಬಿಚ್ಚುತ್ತ ಹಸ್ತವನ್ನು ಅಲ್ಲಾಡಿಸಲು ಕೃಷ್ಣಪ್ಪ ಪ್ರಯತ್ನಿಸಲು ಶುರು ಮಾಡಿದ. ನಂತರ ಒಂದು ಬೆಳಿಗ್ಗೆ ಮೊಣಕೈಯನ್ನು ಮತ್ತು ಕಾಲನ್ನು ಮಡಿಸುವುದು ಕೂಡ ತನಗೆ ಸಾಧ್ಯವಾಗಬಹುದೆಂಬ ಭರವಸೆ ಮೂಡಿದಾಗ ಸಣ್ಣದಾಗಿ ಗೆಲುವು ಅವನಲ್ಲಿ ಹುಟ್ಟಿತು. ಅಮೇರಿಕಾದಿಂದ ಹಿಂದಕ್ಕೆ ಬಂದು ದೆಹಲಿಯ ಮಿರಾಂಡದಲ್ಲಿ ಇಂಗ್ಲಿಷ್ ಕಲಿಸಿಕೊಡುತ್ತಿದ್ದ ದೇಶಪಾಂಡೆಗೆ ನಾಲ್ಕು ದಿನಗಳ ಮಟ್ಟಿಗೆ ಬಂದು ತನ್ನನ್ನು ನೋಡಿ ಹೋಗುವಂತೆ ಬರೆಸಬೇಕೆನ್ನಿಸಿತು. ಅವಳನ್ನು ನೋಡಿ ಕೊನೆಪಕ್ಷ ಹದಿನೈದು ವರ್ಷಗಳ ಮೇಲಾಗಿತ್ತು. ಇನ್ನೂ ಅವಳು ಮಕ್ಕಳಾಗದೆ ಮದುವೆಯಾಗದೆ ಇದ್ದಾಳೆ. ಫಿಲಡೆಲ್ಫಿಯಾದಲ್ಲಿ ಅವಳು ಓದುತ್ತಿದ್ದಾಗ ತಾನೊಬ್ಬ ಅಮೆರಿಕನ್‌ಜೊತೆ ಬದುಕುತ್ತಿರುವುದಾಗಿ ಬರೆದಿದ್ದಳು. ಮೂರು ವರ್ಷಗಳ ನಂತರ ಅವನಿಗೆ ಸ್ವಂತ ಮಕ್ಕಳು ಬೇಕೆಂಬ ಆಸೆಯಿರುವುದಾಗಿಯೂ, ಅದನ್ನು ಅವನ ಹೇಳಿಕೊಳ್ಳದಿದ್ದರೂ ತನ್ನಿಂದ ಅವನು ನಿರಾಶನಾಗಕೂಡದೆಂದು ಅವನಿಂದ ಬೇರೆಯಾಗುತ್ತಿದ್ದೇನೆಂದೂ ಬರೆದಿದ್ದಳು. ಅಂದ ಮೇಲೆ ಅವತ್ತು ಗೌರಿ ಮಾತಾಡುವಾಗ ಮಕ್ಕಳು ಬೇಡವೆಂಬುದಕ್ಕೆ ಅವಳ ಅಪಕ್ವತೆ ಕಾರಣವಿರಬಹುದೆಂಬ ತನ್ನ ಊಹೆ ಸರಿಯಲ್ಲವೆಂದು ಕ್ರಮೇಣ ಅವನಿಗೆ ಖಾತ್ರಿಯಾಗಿತ್ತು.

ಅಂತೂ ಅವು ಕೃಷ್ಣಪ್ಪನ ಪಾಲಿಗೆ ಅತ್ಯಂತ ಆತಂಕದ ದಿನಗಳು. ಆಳವರಿಯದ ಪ್ರಪಾತದ ಅಂಚಿನಲ್ಲಿ ತುದಿಗಾಲಿನ ಮೇಲೆ ನಿಂತವನಂತೆ ಆಗ ಅವನು ಇರುತ್ತಿದ್ದ. ಲಘುವಾಗಿ ಉಲ್ಲಾಸವಾಗಿ ಗೌರಿ ಅವನ ಜೊತೆ ಇರಲು ಪ್ರಯತ್ನಿಸಿ ಸೋತಿದ್ದಳು. ಇಬ್ಬರೂ ಒಟ್ಟಿಗಿದ್ದಾಗ ಒಬ್ಬರನ್ನೊಬ್ಬರು ದೀಪದಂತೆ ಚೂಪಾಗಿ ಉರಿಸಿಕೊಳ್ಳುತ್ತಿದ್ದುದು ಇತ್ತೇ ವಿನಾ ಆರಾಮಾಗಿ ಒಬ್ಬರ ಬಸಿಗೆ ಇನ್ನೊಬ್ಬರು ಕರಗಿ ಮೆತ್ತಗಾದದ್ದು ಇಲ್ಲ. ಗೌರಿ ತನ್ನನ್ನು ಕೃಷ್ಣಪ್ಪ ಸ್ವೀಕರಿಸಲು ಅಗತ್ಯವಾದ ಮಾತೆಂದು ಏನೋ ಶುರು ಮಾಡುವಳು:

‘ನಿಮಗೆ ನಾನು ಹೇಳಿಲ್ಲ ಅಲ್ಲವ? ನನ್ನ ತಂದೆ ಬೆಳಗಾಂನಲ್ಲಿದ್ದಾಗ ನಂಜಪ್ಪನವರು ಅವರೂ ಸ್ನೇಹಿತರು. ಒಟ್ಟಿಗೇ ಏನೋ ಬಿಸಿನೆಸ್‌ಮಾಡ್ತಿದ್ದರು. ನಮ್ಮನೇಲೇ ನಂಜಪ್ಪ ಇಳ್ಕೊತ್ತ ಇದ್ದುದ್ದು. ನನ್ನ ತಂದೆಗೆ ಇನ್ನೊಬ್ಬ ಪ್ರೇಯಸಿಯೂ ಇದ್ದಳಂತೆ –’

ಕೃಷ್ಣಪ್ಪನಿಗೆ ಇವೆಲ್ಲ ಅನಗತ್ಯ ವಿವರಣೆಗಳೆನ್ನಿಸಿ ಅನ್ಯಮನಸ್ಕನಾಗಿಬಿಡುತ್ತಿದ್ದ. ತನ್ನ ಜೊತೆ ಯಾವುದೋ ಉತ್ಕರ್ಷ ಬಯಸಿ ಬಂದ ಕೃಷ್ಣಪ್ಪನನ್ನು ತಾನು ಸಣ್ಣ ವಿಷಯಗಳಿಗೆ ಎಳೆಯುತ್ತಿದ್ದೇನೆಂದು ಅವಳಿಗೆ ಪಶ್ಚಾತ್ತಾಪವಾಗಿಬಿಡುತ್ತಿತ್ತು. ಅವನಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಮಾಡಿಸಿ ಬಡಿಸುವುದರಲ್ಲಷ್ಟೆ, ಈ ನೆಲದ ಕೆಲಸಗಳನ್ನು ಅವನ ಜೊತೆ ಅವಳು ಮಾಡುತ್ತಿದ್ದುದು.

ಪ್ರತಿ ಸಂಜೆ ಬಂದು ಬಿಡುತ್ತಿದ್ದ ಕೃಷ್ಣಪ್ಪ ಗೌರಿ ತನಗೆ ಅಪರಿಚಿತಳೋ ಎನ್ನುವಂತೆ –

‘ಕ್ಷಮಿಸಿ. ನಿಮಗೆ ಓದಬೇಕಿತ್ತೊ ಏನೋ. ಪರೀಕ್ಷೆ ಹತ್ತಿರವಾಗುತ್ತದೆಯಲ್ಲವೇ?’ ಎನ್ನುವನು. ಹೀಗೆ ಸಲಿಗೆಯಲ್ಲೂ ದೂರ ಉಳಿಯುವ ಕೃಷ್ಣಪ್ಪ ಅವಳಿಗೆ ಇಷ್ಟವೂ ಆಗುವುದು.

‘ಇಲ್ಲ ಬನ್ನಿ’ ಎನ್ನುವಳು. ಕೃಷ್ಣಪ್ಪ ಏನೂ ಮಾತಾಡದೆ ಅವನ ವಿಶಾಲವಾದ ಕಣ್ಣುಗಳನ್ನು ರೂಮಿನಲ್ಲಿ ವಿರಾಮವಾಗಿ ಹರಿಸುತ್ತ ಕೂತರೆ,

‘ಹಾಡಲ?’ ಎಂದು ಗೌರಿ ಕೇಳುವಳು. ಹಾಡಿನಿಂದ ಕೃಷ್ಣಪ್ಪ ಸಡಿಲವಾಗುವನೆಂದು ಅವಳಿಗೆ ಗೊತ್ತು. ಮಗಳು ಕೃಷ್ಣಪ್ಪನ ಎದುರು ಹಾಡುತ್ತ ಕೂತಿರುವುದನ್ನು ಅನಸೂಯಾಬಾಯಿ ಇಳಿದು ಬಂದು ಕೇಳಿಸಿಕೊಳ್ಳುವಳು. ಅವಳು ಮೂಲೆಯಲ್ಲಿದ್ದ ಮೋಡದ ಮೇಲೆ ಯಾರಿಗೂ ಆತಂಕವಾಗದ ರೀತಿಯಲ್ಲಿ ಶಾಂತವಾಗಿ ಕೂತಿರುವುದು ಕೃಷ್ಣಪ್ಪನಿಗೆ ಪ್ರಿಯವಾಗುವುದು. ಗುಂಗುರು ಕೂದಲಿನ ಕಪ್ಪು ವಿಗ್ರಹದಂತಿದ್ದ ದೃಢಕಾಯಕನಾದ ಕೃಷ್ಣಪ್ಪನನ್ನೂ, ಹಾಲಿನ ಬಣ್ಣದ ತೀವ್ರ ಭಾವನೆಗಳ ತನ್ನ ಮಗಳನ್ನೂ ಕಣ್ತುಂಬ ನೋಡುತ್ತ ಅನಸೂಯಾಬಾಯಿ ಖುಷಿಪಡುವರು. ಅವರು ಸದಾ ಓದುತ್ತಿದ್ದ ಶರತ್‌ಕಾದಂಬರಿಯ ಪ್ರಸಂಗಗಳಲ್ಲಿ ಈ ಇಬ್ಬರನ್ನೂ ಇಡುವರು. ನಂಜಪ್ಪನವರು ಈ ನಡುವೆ ಬಂದರೆ ಯಾರಿಗೂ ಮುಜುಗರವಾಗುವುದಿಲ್ಲ. ಬಡವನಾದ ಕೃಷ್ಣಪ್ಪನ ಜೊತೆಗಿನ ಸ್ನೇಹ ಮೊದಲಲ್ಲಿ ಅವರಿಗೆ ಇಷ್ಟವಾಗದಿದ್ದರೂ ಗೌರಿ ಎಂದರೆ ಹೆದರುತ್ತಿದ್ದ ನಂಜಪ್ಪ ಸುಮ್ಮನಾಗಿದ್ದರು. ಈಚೀಚೆಗೆ ಮಹಾದೈವಭಕ್ತರಾಗಿದ್ದ ನಂಜಪ್ಪ ಸಂಜೆ ಗಣಪತಿ ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ಕುಂಕುಮ ಪ್ರಸಾದ ತಂದಿರುತ್ತಿದ್ದರು. ಈ ಪ್ರಸಾದವನ್ನು ಮೂವರಿಗೂ ಕೊಟ್ಟು ಅವರು ಮಹಡಿ ಹತ್ತಿ ಹೋಗುವರು. ಯಾವಾಗ ಅನಸೂಯಾಬಾಯಿ ಎದ್ದು ಹೋಗುತ್ತಿದ್ದರೋ ಗೌರಿಗಾಗಲೀ ಕೃಷ್ಣಪ್ಪನಿಗಾಗಲೀ ಗೊತ್ತಾಗುತ್ತಿರಲಿಲ್ಲ.

ಯಾಕೆ ಗೌರಿಯನ್ನು ತಾನು ಆಗ ಪಡೆಯಲಿಲ್ಲ? ಕೃಷ್ಣಪ್ಪನಿಗೆ ಒಂಟಿಯಾಗಿದ್ದಾಗ ಅವಳನ್ನು ಕೂಡುವ ತೀವ್ರ ಆಸೆಯಾಗುತ್ತಿತ್ತು. ಆದರೆ ತಾನು ಚತುಷ್ಪಾದಿಯಾಗಿ ಅವಳನ್ನು ಸಂಭೋಗಿಸುವುದನ್ನು ಕಲ್ಪಿಸಿಕೊಳ್ಳುತ್ತಿದ್ದಂತೆಯೇ ತನ್ನ ಬಗ್ಗೆ ಅತ್ಯಂತ ಜುಗುಪ್ಸೆಯಾಗಿ ಬಿಡುತ್ತಿತ್ತು. ಅವನನ್ನು ಇಂಥ ಪಾಪ ಭಾವನೆಯಿಂದ ಬಿಡುಗಡೆ ಮಾಡಿದವಳೆಂದರೆ ಲೂಸಿನಾ – ಮೈಯ ಚಳಿಯನ್ನು ಬಿಡಿಸಿ ಅದರ ಪ್ರತಿ ಸಂದಿ ಮೂಲೆಯನ್ನೂ ಜೀವಂತವೆಂದು ತೋರಿಸಿದವಳು. ಆದರೆ ಅದು ಮೊದಲೇ ಗೌರಿಯಿಂದ ಆಗಿದ್ದರೆ. . . .

ಮಧ್ಯಾಹ್ನ ಒಂದು ದಿನ ಕೃಷ್ಣಪ್ಪ ಅಣ್ಣಾಜಿಯನ್ನು ನೋಡಲೆಂದು ಹೊರಟ. ಈಚೆಗೆ ಅಣ್ಣಾಜಿ ದುಡ್ಡಿಗೆ ಪರದಾಟವಾಡಬೇಕಾಗಿರಲಿಲ್ಲ. ಬೇಕಾದ್ದಕ್ಕಿಂತ ಹೆಚ್ಚು ದುಡ್ಡು ಅವನ ಹತ್ತಿರ ಓಡಾಡುತ್ತಿತ್ತು. ಕೃಷ್ಣಪ್ಪ ತಂದು ಕೊಟ್ಟ ಸಾಲವನ್ನೆಲ್ಲ ಹಿಂದಕ್ಕೆ ಕೊಟ್ಟಿದ್ದ. ಎಲ್ಲಿಂದ ಇಷ್ಟು ಹಣವೆಂದು ಕೃಷ್ಣಪ್ಪ ಕೇಳದಿದ್ದರೂ, ಅವನೇ ಉಮೆಯ ಔದಾರ್ಯವನ್ನು ಹೊಗಳಿದ್ದ. ಅವಳು ಗಂಡನಿಗೆ ತಿಳಿಯದಂತೆ ಕಪ್ಪು ಹಣವನ್ನು ತಿಜೋರಿಯಿಂದ ಕದ್ದು ಕೊಡುತ್ತಿರಬಹುದು. ಅಣ್ಣಾಜಿಯನ್ನು ಇದರ ಅನೈತಿಕತೆ ಬಾಧಿಸುವುದಿಲ್ಲ. ಕೃಷ್ಣಪ್ಪನ ಜೊತೆ ಮಾರ್ಕ್ಸ್ ಲೆನಿನ್ ವಾದಗಳ ಅತ್ಯಂತ ಸೂಕ್ಷ್ಮ ಸಮಸ್ಯೆಗಳ ಬಗ್ಗೆ ಈಗಲೂ ಮೈ ಮರೆತು ಮಾತಾಡುವನು. ಉಮೆ ಇದನ್ನು ಕೇಳಿಸಿಕೊಳ್ಳುತ್ತ ತನ್ನ, ಎಣ್ಣೆಗೆಂಪು ಬಣ್ಣದ ದುಂಡುಮುಖವನ್ನು ಕೈಗಳಲ್ಲಿಟ್ಟು, ಕೂತಿರುವಳು. ಅತ್ಯಂತ ಜಟಿಲವಾದ ವಾದಗಳನ್ನು ಅವಳ ಕಡೆ ತಿರುಗಿ ಅಣ್ಣಾಜಿ ಮಂಡಿಸುವನು. ಆರಾಧನೆಯಲ್ಲಿ ಹೂವೆಸೆಯುವಂತೆ ವಿಚಾರಗಳನ್ನು ಉಮೆಗೆ ಎಸೆಯುತ್ತ ಅಣ್ಣಾಜಿ ದೇವಿಯ ವಿಗ್ರಹವನ್ನು ಪೂಜಿಸುತ್ತ ಕೂತವನಂತೆ ಆಗ ಕೃಷ್ಣಪ್ಪನಿಗೆ ಕಾಣುವನು.

ಅವನು ಮಧ್ಯಾಹ್ನ ಹೋಗಿ ಬಾಗಿಲೆದುರು ನಿಂತಿದ್ದಾಗ ಉಮೆ ನರಳುತ್ತಿದ್ದಂತೆಯೂ ಮತ್ತು ಅಣ್ಣಾಜಿ ಗುಟ್ಟಾಗಿ ಏನೋ ಹೇಳುತ್ತಿದ್ದಂತೆಯೂ ಕೇಳಿಸಿತು. ಬಾಗಿಲು ತಟ್ಟ ಹೋದವನು ಹಿಂದೆಗೆದ. ತನ್ನ ಹೆಜ್ಜೆ ಸಪ್ಪಳ ಕೇಳಿಸಿರಬೇಕು. ಇಬ್ಬರೂ ಎದ್ದು ಆವೇಗದಿಂದ ಉಸಿರಾಡುತ್ತ ಗಡಿಬಿಡಿಯಲ್ಲಿ ಒಡಾಡುತ್ತಿರುವುದನ್ನು ಬಾಗಿಲ ಹೊರಗಿಂದ ಕೇಳಿಸಿಕೊಂಡ ಕೃಷ್ಣಪ್ಪನಿಗೆ ಮುಜುಗರವಾಯಿತು. ತಾನೀಗ ಹೊರಟು ಹೋಗುವುದೂ ಸರಿಯಲ್ಲ; ನಿಂತಿರುವುದೂ ತಪ್ಪು. ಏನು ಮಾಡುವುದೆಂದು ತಿಳಿಯದೆ – ‘ನಾನು ಕೃಷ್ಣಪ್ಪ. ಆಮೇಲೆ ಬರ್ತೀನಿ. ಸುಮ್ಮನೆ ಬಂದಿದ್ದೆ – ಅಷ್ಟೇ’ ಎಂದ. ಅಣ್ಣಾಜಿಗೆ ಇದರಿಂದ ತುಂಬ ಸಮಾಧಾನವಾದದ್ದು ಅವನ ಧ್ವನಿಯಿಂದಲೇ ಹೊಳೆಯಿತು:

‘ಓ ಕೃಷ್ಣಪ್ಪನ ? ಇರು. ಹೋಗಬೇಡ’

ಕೃಷ್ಣಪ್ಪನಿಗೆ ಇನ್ನಷ್ಟು ಕಷ್ಟವಾಯಿತು. ಈಗ ತಾನು ಹೋಗುವಂತಿಲ್ಲ. ಏನೂ ಆಗದಿದ್ದ ರೀತಿಯಲ್ಲಿ ಅಣ್ಣಾಜಿ ಊಮೆಯರ ಮುಖ ನೋಡಬೇಕು. ಅವರಿಬ್ಬರೂ ಮುಚ್ಚಿಟ್ಟುಕೊಳ್ಳುವುದು ಕಷ್ಟವಾಗದಂತೆ, ಇದೆಲ್ಲ ತಿಳಿಯದ ಪೆದ್ದನಂತೆ ತಾನು ಕಾಣಿಸಿಕೊಳ್ಳಬೇಕು.

ಬಾಗಿಲು ತೆರೆಯಿತು. ಕೂದಲು ಕೆದರಿದ್ದ ಉಮ ಬಟ್ಟೆಯಿಂದ ಪುಸ್ತಕಗಳ ಧೂಳು ಹೊಡೆಯುತ್ತ ಸ್ಟೂಲಿನ ಮೇಲೆ ನಿಂತಿದ್ದಳು. ಅವಳು ಈ ಕೆಲಸದಲ್ಲಿದ್ದುದರಿಂದ ಕೂಡಲೇ ಬಾಗಿಲು ತೆರೆಯಲಾಗಲಿಲ್ಲವೆಂದು ತಾನು ತಿಳಿಯಬೇಕು. ಆದರೆ ಅಣ್ಣಾಜಿ ಈಗ ತಾನೇ ಎದ್ದವನಂತೆ ಕಣ್ಣುಜ್ಜಿಕೊಳ್ಳುತ್ತಿರುವುದು ಮಾತ್ರ ಅಭಾಸವಾಗಿತ್ತು. ಆದರೆ ಒಂದೆರಡು ನಿಮಿಷಗಳಲ್ಲಿ ಅಣ್ಣಾಜಿ ಲೆನಿನ್ನಿನ ‘ಡೆಮೊಕ್ರಟಿಕ್‌ಸೆಂಟ್ರಲಿಸಂ’ ತತ್ವದಲ್ಲಿದ್ದ ಕಾಂಟ್ರಡಿಕ್ಷನ್ನುಗಳನ್ನು ನಿಜವಾಗಿಯೂ ಮಗ್ನವಾಗಿ ಚರ್ಚಿಸುತ್ತಿದ್ದ. ನಡುವೆ ಲೆನಿನ್ ಹೇಳಿದ ಮಾತೊಂದು ಸರಿಯಾಗಿ ನೆನಪಾಗದೆ, ‘ಉಮ, ಲೆನಿನ್‌ನ ಕಲೆಕ್ಟಡ್‌ವರ್ಕ್ಸ್ ಇದೆಯಲ್ಲ – ಕೊಡು’ ಎಂದ. ಉಮೆ ಪುಸ್ತಕ ತಂದು ಎದುರಿಟ್ಟಳು. ‘ಮಿಸ್ಟರ್ ಚನ್ನವೀರಯ್ಯನಿಗಿಂತ ಇವಳೇ ಬೇಗ ಕಲಿತಿದ್ದಾಳೆ. ಇವಳಿಗೆ ವಿಚಾರಶಕ್ತಿಯೂ ಇದೆ’ ಎಂದು ಅಣ್ಣಾಜಿ ಹೊಗಳಿ, ಪುಸ್ತಕದಲ್ಲಿ ತನಗೆ ಬೇಕಾದ ಮಾತನ್ನು ಹುಡುಕಿದ. ಉಮೆ ಕಾಫಿ ಮಾಡಿ ತರಲು ಕೆಳಗೆ ಹೋದಳು.

ಕೃಷ್ಣಪ್ಪ ತನ್ನ ಜೀವನದಲ್ಲೆಲ್ಲ ಅತ್ಯಂತ ತೀವ್ರವಾದ ಅಸೂಯೆಯನ್ನು ಅವತ್ತು ಅನುಭವಿಸಿದ. ಉಮೆಯ ನಡಿಗೆಯಲ್ಲಿ ಕಂಡ ಹಿತವಾದ ಆಯಾಸ ಅವನನ್ನು ವಿಚಲಿತಗೊಳಿಸಿತು. ಅಣ್ಣಾಜಿಯ ಹಾಗೆ ತಾನು ಯಾಕಿಲ್ಲವೆಂದು ತೀವ್ರ ಅತೃಪ್ತನಾದ. ಇವನಿಗೊಂದು ಹಸಿವು ಬಾಯಾರಿಕೆಗಳ ದೇಹವೇ ಇಲ್ಲವೋ ಏನೊ ಅನ್ನಿಸುವಂತಿದ್ದ ಅಣ್ಣಾಜಿ ತನಗೆ ಬೇಕಾದ್ದನ್ನು ಹೆಣ್ಣಿನಿಂದ ಇಷ್ಟು ಸುಲಭವಾಗಿ ಪಡೆಯುವಾಗ ತನಗೇಕೆ ಸಾಧ್ಯವಾಗುತ್ತಿಲ್ಲ? ಕಲ್ಪನೆಯಲ್ಲೂ ಅವನು ಗೌರಿಯನ್ನು ಬತ್ತಲಾಗಿ ನೋಡಲಾರ. ಅಣ್ಣಾಜಿ ಸತ್ತ ಮೇಲೂ ಈ ಅಸೂಯೆ ಕೃಷ್ಣಪ್ಪನಲ್ಲಿ ಉಳಿದಿತ್ತು. ಅದನ್ನು ಅವನು ಕಳಕೊಂಡಿದ್ದೆಂದರೆ ಲೂಸಿನಾ ಅವನ ಇಡೀ ದೇಹವನ್ನು ಅವಳ ತುಟಿ ಮತ್ತು ನಾಲಿಗೆಯ ತುದಿಗಳಿಂದ ಬೆಂಕಿಯ ಹಾಸಿಗೆ ಮಾಡಿ ಅದರ ಮೇಲೆ ತನ್ನ ಚಿರತೆಯಂತೆ ಮಾಟವಾದ ದೇಹವನ್ನು ನೀಡಿದಾಗ. ಕೃಷ್ಣಪ್ಪ ಇದ್ದಕ್ಕಿದ್ದಂತೆ ಎದ್ದು ನಿಂತಿದ್ದು ನೋಡಿ ಅಣ್ಣಾಜಿ ಯಾವ ದೈನ್ಯವೂ ಇಲ್ಲದೆ:

‘ಹೋಗಬೇಡ – ಕೂತಿರು. ಉಮೆ ಅನುಮಾನದಿಂದ ಒದ್ದಾಡಿಯಾಳು. ನಿನ್ನ ಊಹೆ ಸರಿ. ಆದರೆ ಇವೆಲ್ಲ ನನ್ನ ಕೈ ಮೀರಿದ್ದು’

ಎಂದ. ಇಷ್ಟು ಸರಳವಾಗಿ ಬಿಡಬಲ್ಲ ಅಣ್ಣಾಜಿಯನ್ನು ಕಂಡು ಕೃಷ್ಣಪ್ಪ ಚಕಿತನಾದ.

. . . . . . . . .

ಪೂರ್ಣ ಸೆರಗು ಹೊದ್ದು, ದೊಡ್ಡ ಕುಂಕುಮವಿಟ್ಟು ಮೂಗುಬೊಟ್ಟನ್ನಿಟ್ಟ ಮೂಗನ್ನು ಚೂರು ತಗ್ಗಿಸಿ ಕಾಫಿ ಹಿಡಿದು ನಿಂತ ಉಮೆಯನ್ನು ನೋಡಿ ಕೃಷ್ಣಪ್ಪನಿಗೆ ಇನ್ನೂ ಹೆಚ್ಚಿನ ಆಶ್ಚರ್ಯವಾಯಿತು. ಪಾಪಪ್ರಜ್ಞೆಯಿಂದ ನರಳದೆ ಸಾಮಾಜಿಕ ಕಟ್ಟುಗಳನ್ನು ಹೆಣ್ಣು ಮೀರಬಲ್ಲಳು ಹಾಗಾದರೆ. ಅಣ್ಣಾಜಿ ತುಂಬ ಸ್ನೇಹ ಧ್ವನಿಯಲ್ಲಿ,

‘ಕುತಕೋ ಉಮ. ಒಂದು ಸೀರಿಯಸ್ಸಾದ ವಿಷಯ ನಿಮ್ಮಿಬ್ಬರಿಗೂ ಹೇಳೋದಿದೆ’

ಎಂದು ಅವಳನ್ನು ಎದುರು ಕೂರಿಸಿಕೊಂಡು ತನಗೆ ವಿಶಿಷ್ಟವಾದ ರೀತಿಯಲ್ಲಿ ಕ್ಲಾಸ್ ತಗೊಂಡ.

‘ಈ ವರೆಗೆ ಸಮಾಜ ಸೃಷ್ಟಿಸಿದ ಎಲ್ಲ ಉತ್ಪಾದನಾ ಸಂಬಂಧಗಳೂ ಮನುಷ್ಯನ ಸ್ವಾತಂತ್ರ್ಯವನ್ನು ಮಿತಗೊಳಿಸುವಂಥವು. ಉದಾಹರಣೆಗೆ ಗಂಡು ಹೆಣ್ಣಿನ ಸಂಬಂಧ ನೋಡುವ. ಉಳಿದ ಪದಾರ್ಥಗಳಂತೆಯೇ ಹೆಣ್ಣು ಕೂಡ ಒಂದು ಸ್ವತ್ತಾಗಿದೆ. ಆದ್ದರಿಂದಲೇ ಇದು ಸ್ವಂತದ ಹೆಣ್ಣು ಇದು ಪರ ಹೆಣ್ಣು ಎಂಬ ವಿಂಗಡಣೆಗಳ ಮುಖಾಂತರ ತನ್ನ ಸ್ವತ್ತನ್ನು ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ಮನುಷ್ಯ ಫ್ಯೂಡಲ್ ಪದ್ಧತಿಯಲ್ಲೂ ಕ್ಯಾಪಿಟಲಿಸ್ಟ್‌ಪದ್ಧತಿಯಲ್ಲೂ ಮಾಡಿಕೊಂಡಿದ್ದಾನೆ. ಈ ಎಲ್ಲ ಪದ್ಧತಿಗಳೂ ಮನುಷ್ಯನ ಸಹಜ ವಿಕಾಸವನ್ನು ತಡೆಗಟ್ಟುತ್ತವೆ. ಹಾಗೆಯೇ ನಮ್ಮ ಈ ಲಿಬಿಡೊ – ಈ ನಮ್ಮ ಕಾಮ ಜೀವನ – ಅನೈಸರ್ಗಿಕವಾದ ಕಟ್ಟುಪಾಡುಗಳಿಗೆ ಒಳಗಾಗುತ್ತದೆ. ಕೊರತೆಯ ಆಧಾರದ ಮೇಲೆ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ನಿಂತಿದೆ – ಕೃತಕವಾದ ಕೊರತೆ ಮತ್ತು ಶೋಷಣೆ. ಇದು ಕಾಮ ಜೀವನಕ್ಕೂ ಅನ್ವಯಿಸುತ್ತದೆ. ಈಗ ನೋಡಿ ಸಮೃದ್ಧಿಯಲ್ಲಿ ಮನುಷ್ಯನ ಹೊಟ್ಟೆ, ಬಟ್ಟೆ, ವಸತಿ ವಿರಾಮಗಳ ಅಗತ್ಯಗಳು. ಸಾಂಸ್ಕೃತಿಕ ಅಗತ್ಯಗಳು, ಪೂರೈಕೆಯಾಗುತ್ತ ಹೋದಂತೆ ಮನುಷ್ಯನ ಅಂತಿಮವಾದ ಬಿಡುಗಡೆಗೆ ಅವನು ಸಿದ್ಧನಾಗುತ್ತಾನೆ. ತಮ್ಮನ್ನು ತೀವ್ರವಾದ ನೋವು ಸಂಕಟಗಳಿಗೆ ಗುರಿ ಮಾಡುವ ಕಾಮಜೀವನಕ್ಕೆ ಸಂಬಂಧಪಟ್ಟ ನಿಷೇಧಗಳನ್ನು ಹರಿದು ಗಂಡು ಹೆಣ್ಣು ಬಿಡುಗಡೆ ಪಡೆಯುತ್ತಾರೆ. ಮದುವೆಯಾದವಳಲ್ಲಿ ಮಾತ್ರ. ಅದೂ ನಿಯಮಕ್ಕನುಸಾರವಾಗಿ ಈ ದೇಹ ಕೆಲವೇ ಬಗೆಯ ಸುಖಗಳನ್ನು ಪಡೆಯಬಹುದೆಂಬ ಅಡಚಣೆಗಳು ಮಾಯವಾಗುತ್ತವೆ. ಆಸ್ತಿಯ ಅಗತ್ಯ ವರ್ಗರಹಿತ ಸಮಾಜದಲ್ಲಿ ಮಾಯವಾದಂತೆ, ಆಗ ಇಡೀ ದೇಹವೂ ಬಿಡುಗಡೆ ಹೊಂದಿ ಸುಖದ ಬುಗ್ಗೆಯಾಗುತ್ತದೆ. ಈ ಸುಖದ ಸಾಧನೆಯೇ ಮನುಷ್ಯನಿಗೆ ನೈತಿಕತೆಯನ್ನೂ ತರುತ್ತದೆ. ತಾನು ಭೋಗಿಸುವುದು ಅತ್ಯಂತ ಅಮೂಲ್ಯವಾದದ್ದು, ಸ್ವತಂತ್ರವಾದದ್ದು ಎನ್ನುವ ಧೋರಣೆಗಿಂತ ದೊಡ್ಡ ನೈತಿಕತೆ ಎಲ್ಲಿದೆ.’

‘ನಿನ್ನ ಜೀವನ ಕ್ರಮವನ್ನು ಜಸ್ಟಿಫೈ ಮಾಡಿಕೊಳ್ಳೋಕೆ ನೀನು ಹೀಗೆ ವಾದಿಸುತ್ತ ಎಂದು ಹೇಳಬಹುದಲ್ಲ’?

ಕೃಷ್ಣಪ್ಪ ಉಮೆ ಅಲ್ಲಿರುವುದನ್ನು ಮರೆತು ಕಟುವಾಗಿ ಹೇಳಿದ್ದ.

‘ನನ್ನ ವಿಷಯ ಬಿಟ್ಟು ಯೋಚಿಸು. ನೋಡು ಕೃಷ್ಣಪ್ಪ ನೀನು ರೈತ ಜನಾಂಗದವನು. ನಿನ್ನ ಪೂರ್ವಿಕರು ಭೂ ಮಾಲೀಕರು. ಆದ್ದರಿಂದ ಹೆಣ್ಣಿನ ಬಗ್ಗೆ ಮೂಲತಃ ನೀನು ಪ್ಯೂಡಲ್’ ಅಣ್ಣಾಜಿ ಅರ್ಧ ಹಾಸ್ಯದಲ್ಲಿ ಹೇಳಿದ್ದ.

‘ಸ್ವಚ್ಛಂದ ಜೀವನ ನಡೆಸಬಾರದು ಅಂತ ನಂಬೋದು, ಹೆಣ್ಣನ್ನ ಪವಿತ್ರ ಅಂತ ತಿಳಿಯೋದು ಫ್ಯೂಡಲ್‌ಆದರೆ ಯಾಕಾಗಬಾರದು?’

‘ಹೆಣ್ಣು ಯಾಕೆ ಪವಿತ್ರ ಹೇಳು? ಅವಳು ಸೊತ್ತಾದ್ದರಿಂದ. ಹೀಗೆ ಹೇಳೋವರೆ ಹೆಂಗಸರನ್ನ ಹೊಡೆಯೋವರು. ಅಡಿಗೆ, ಅಲಂಕಾರ, ಸಂಗೀತಕ್ಕೆ ಮಾತ್ರ ಹೆಂಗಸರು ಲಾಯಕ್ಕು ಅಂತ ತಿಳಿಯೋವರು. ತನ್ನ ಜೊತೆ ಸಂಭೋಗಕ್ಕೆ ಒಪ್ಪೊ ಹೆಣ್ಣು ಕಳಪೆಯವಳು ಅಂತ ಭಾವಿಸೋವರು. . . .’

ಕೃಷ್ಣಪ್ಪನಿಗೆ ಅಣ್ಣಾಜಿಯ ಕೊನೆಯ ಮಾತಿನಿಂದ ಮರ್ಮಸ್ಥಳಕ್ಕೆ ಏಟು ಬಿದ್ದಂತೆ ನೋವಾಗಿತ್ತು. ಅಣ್ಣಾಜಿಯ ಎದುರು ಉಮೆ ಯಾವ ಕಲ್ಮಷವೂ ಇಲ್ಲದ ಹೆಣ್ಣಿನಂತೆ ಕೂತಿದ್ದಳು ನಿಜ. ಆದರೆ ರಾತ್ರೆ ಅವಳು ತನ್ನ ಗಂಡನಿಗೂ ಮೈಯನ್ನು ತೆರಬೇಕಲ್ಲವೆ? ಚಿನ್ನದ ಹಲ್ಲಿನ ಚನ್ನವೀರಯ್ಯನಿಂದಲೂ ಅವಳ ದೇಹ, ಸುಖದ ಬುಗ್ಗೆಯಾಗುವುದೇ? ಅಣ್ಣಾಜಿಯಿಂದ ಆದಷ್ಟೆ? ಇಲ್ಲದಿದ್ದಲ್ಲಿ ಹೇಗೆ ಅವಳು ಗಂಡನಿಗೆ ಮೈ ಒಡ್ಡುತ್ತಾಳೆ? ಕೃಷ್ಣಪ್ಪನ ಇಡೀ ವ್ಯಕ್ತಿತ್ವ ಇಬ್ಬರಲ್ಲಿ ಒಂದು ಹೆಣ್ಣು ಒಡೆದುಕೊಳ್ಳಲಾರದು ಎಂದು ಪ್ರತಿಭಟಿಸಿತ್ತು. ಆದರೆ ಹೇಳಲಿಲ್ಲ. ಪ್ರಾಯಶಃ ಉಮೆ ಗಂಡನ ಜೊತೆ ಯಾಂತ್ರಿಕವಾಗಿದ್ದು, ಅಣ್ಣಾಜಿ ಜೊತೆ ಮಾತ್ರ ನಿಜವಾಗಿ ಅರಳಬಹುದು. ಹಾಗಿದ್ದಲ್ಲಿ ಅವಳು ಗಂಡನನ್ನು ಬಿಡಬೇಕು. ಉಮೆಯಿಲ್ಲದಿದ್ದಲ್ಲಿ ಅಣ್ಣಾಜಿಯ ಜೊತೆ ಹೀಗೆ ವಾದಿಸಬಹುದಿತ್ತು ಎಂದುಕೊಂಡು ಸುಮ್ಮನೇ ಕೂತ.

ಅವತ್ತು ಸಂಜೆ ಗೌರಿ ಮನೆಗೆ ಹೋದವನು ಇದನ್ನೇ ಚಿಂತಿಸುತ್ತಿದ್ದ. ತನಗೆ ಗೌರಿ ಬೇಕು – ಆದರೆ ಅವಳು ತನ್ನೊಡನೆ ಹಳ್ಳಿಗೆ ಬರುವವಳಲ್ಲ. ಮದುವೆಯಾಗದೆ ನನ್ನ ಜೊತೆ ಮಲಗೆಂದು ಕೇಳುವುದು ಅವಳನ್ನು ಒಂದು ಭೋಗದ ವಸ್ತುವಾಗಿ ಕಂಡಂತೆ. ಅದಕ್ಕವಳು ಒಪ್ಪಿದರೂ ನಂತರ ಆಕೆ ಕೀಳೆಂದು ತಾನು ಯೋಚಿಸುವುದು ಖಂಡಿತ. ಈ ಬಗೆಯಲ್ಲಿ ಒದ್ದಾಡುತ್ತ ಕೃಷ್ಣಪ್ಪ ಗೌರಿಯ ಪ್ರಶ್ನೆಗಳಿಗೆ ಹಾ ಹೂ ಎಂದಷ್ಟೇ ಉತ್ತಿರಿಸಿ ಹಿಂದಕ್ಕೆ ಬಂದಿದ್ದ. ಮಾರನೇ ದಿನ ಬೆಟ್ಟಕ್ಕೆ ಹೋಗಿ ಬೈರಾಗಿಯ ಜೊತೆ ಕೂತ. ಅವನು ಅದೇ ಪುಸ್ತಕ ಓದುತ್ತಿದ್ದ. ಅವನನ್ನೇನು ಕೇಳುವುದು ಎಂದು ಬೇಸರವಾಯಿತು. ಅವನು ಅಡಿಗೆ ಮಾಡಲು ಪ್ರಾರಂಭಿಸಿದಾಗ ಎದ್ದು ನಿಂತ. ತನ್ನನ್ನು ಕೂತಿರುವಂತೆ ಕೇಳಲು ಬೈರಾಗಿಗೆ ಆಸೆಯಾಗಿರಬಹುದು. ಆದರೆ ಅವನ ನಿಯಮದ ಪ್ರಕಾರ ಕೇಳಲಾರದೆ ಸುಮ್ಮನಿದ್ದಾನೆ ಎಂದು ಅವನ ಮುಖದ ಮೇಲಿನ ಭಾವದಿಂದ ಅನುಮಾನವಾಯಿತು. ಹೀಗೆ ಪ್ರಯತ್ನಪೂರ್ವಕವಾಗಿ ಒಣಗುವ ಮಾರ್ಗ ತನ್ನದಲ್ಲವೆಂದು ಬೆಟ್ಟವನ್ನಿಳಿದ.

ಆದರೆ ವೀಲ್‌ಚೇರಿನ ಮೇಲೆ ಅವನನ್ನು ಕೂರಿಸಿ ಅವನ ಹೆಂಡತಿ ನೂಕುವಾಗ ಕೃಷ್ಣಪ್ಪ ಯೋಚಿಸುತ್ತಾನೆ: ನಾನು ಹೆಂಡತಿಯನ್ನು ಹೊಡೆಯಲು ಹೋಗಿದ್ದೇನೆ. ಒಂದೇ ಉದ್ದೇಶಕ್ಕಾಗಿ ಬದುಕಿ ಅದರಲ್ಲೂ ಸಫಲನಾಗದೆ ಒಣಗುತ್ತಿದೇನೆ. ನಿಧಾನವಾಗಿ ಸಾಯುತ್ತಿದ್ದೇನೆ. ಯಾರೂ ನನ್ನ ಹತ್ತಿರ ಬಂದು ತಮ್ಮ ಪ್ರೇಮದ ಕಥೆಯನ್ನು ಹೇಳಿಕೊಳ್ಳುವುದಿಲ್ಲ; ಪಕ್ಷಾಂತರ ಮಾಡಿದವರ, ಮಾಡಲಿರುವವರ ಸುದ್ದಿಯನ್ನು ಮಾತ್ರ ತರುತ್ತಾರೆ. ಯಾಕೆ ನನಗೆ ಹೀಗಾಯಿತು?

ಮೈ ದುರ್ಬಲವಾದ್ದರಿಂದ ಇಂಥ ಯೋಚನೆಗಳು ಕಾಡುತ್ತವೆ ಎಂದು ರೇಗುತ್ತದೆ.

‘ಏ ನಾಗೇಶ’ ಎಂದು ಕರೆಯುತ್ತಾನೆ. ಯುವಜನ ಸಭಾದ ಕಾರ್ಯದರ್ಶಿ ನಾಗೇಶ ಎದುರು ನಿಂತು. ‘ಏನು ಗೌಡರೇ’ ಅನ್ನುತ್ತಾನೆ. ‘ಯಾವುದಾದರೂ ಹುಡುಗೀನ್ನ ಪ್ರೀತಿ ಗೀತಿ ಮಾಡಿಲ್ವೇನೋ ನೀನು?’ ಅಂದು ನಗುತ್ತಾನೆ. ‘ನಾನಾ ಗೌಡರೆ? ಅದಕ್ಕೆಲ್ಲಿ ಬಿಡುವಿದೆ ಹೇಳಿ. ಇಷ್ಟೊಂದು ದೇಶದ ಸಮಸ್ಯೆಗಳ ಮಧ್ಯೆ. . .’ ನಾಗೇಶ ಹಾಸ್ಯದ ಸೋಂಕಿಲ್ಲದಂತೆ ಗಂಭೀರವಾಗಿ ಮಾತಾಡಲು ತೊಡಗಿದಾಗ ‘ಹೋಗಲಿ ಬಿಡು ಈ ಸ್ಟೇಟ್ ಮೆಂಟ್‌ಬರ್ಕೊ’ ಎಂದು ಅವತ್ತಿಗೆ ಅಗತ್ಯವಾದ ಬೇರೆ ರಾಜಕಾರಣಿಗಳು ಗಮನಿಸುವುದಕ್ಕೆ ಹೆದರುವ ಮಾತುಗಳನ್ನು ಹೇಳುತ್ತಾನೆ. ನಾಗೇಶ ಪುಳಕಿತನಾಗಿ ಬರೆದುಕೊಳ್ಳುತ್ತಾನೆ. ಚಿಗುರು ಮೀಸೆ, ಚಿಗುರಿದ ಗಡ್ಡಗಳ ನಾಗೇಶನ ಮಾಟವಾದ ಮುಖ, ಅವನು ಬೆನ್ನಿನ ತನಕ ಬೆಳೆಸಿದ ಕೂದಲುಗಳನ್ನು ಕೃಷ್ಣಪ್ಪ ಅರ್ಧ ಪ್ರೀತಿ ಅರ್ಧ ಹಾಸ್ಯಗಳಲ್ಲಿ ನೋಡುತ್ತಾನೆ. ಅವನ ವಯಸ್ಸಿನಲ್ಲಿ ತಾನೊಬ್ಬ ಮನುಷ್ಯ, ಇಂಥವ ಎಂದು ಅನ್ನಿಸಿಕೊಳ್ಳಲು ಪ್ರಾಯಶಃ ತಾನೂ ರಾಜಕೀಯಕ್ಕೆ ಇಳಿದಿದ್ದವನಲ್ಲವೇ? ಕಾಲನ್ನು ಮಡಿಸಲು ಪ್ರಯತ್ನ ಪಡುತ್ತ, ಗೌರಿ ದೇಶಪಾಂಡೆಗೆ ಬರುವಂತೆ ನಾಳೆ ಬರೆಸುವುದು ಎಂದುಕೊಳ್ಳುತ್ತಾನೆ. ಅವಳಿಗೆ ತನ್ನ ಮೇಲೆ ಇನ್ನೂ ಇಷ್ಟವಿದ್ದಿದ್ದಲ್ಲಿ ಅವಳೇ ಬರದೆ ಇರುತ್ತಿದ್ದಳೆ? ಡೆಲ್ಲಿಯಲ್ಲಿ ಈಗ ತಾಯಿ ಜೊತೆ ಇರುವಳಂತೆ, ಪ್ರತಿ ದಿನ ಕಾಗದ ಬರೆಸಬೇಕೆಂದುಕೊಂಡರೂ ತನ್ನ ಈ ಅವಸ್ಥೆಯನ್ನವಳು ನೋಡಕೂಡದೆಂದು ಮುಂದೂಡುತ್ತಾನೆ.

ಈಗ, ಪ್ರಾಯಶಃ ಸಾಯಬಹುದಾದ ಈಗ, ತಾನು ಇಡಿಯಾಗಿ ಉಳಿದಿದ್ದೇನೆಯೆ? ಎಂಬ ಪ್ರಶ್ನೆ ಅವನನ್ನು ಕಾಡುತ್ತಲೆ ಇರುತ್ತದೆ.

* * *

ವೀಲ್‌ಚೇರಿನ ಮೇಲೆ ಕೂತು ಹೀಗೆ ಯೋಚಿಸುತ್ತಿರುವ ಕೃಷ್ಣಪ್ಪನ ಕಣ್ಣೆದುರು ಅವನು ತೀವ್ರವಾಗಿ ದ್ವೇಷಿಸಿದ ಮಠದ ಪಾರುಪತ್ತೆದಾರನಾಗಿದ್ದ ನರಸಿಂಹಭಟ್ಟ, ದೊಡ್ಡ ಅಡಿಕೆ ತೋಟದ ಮಾಲೀಕ ಶಿವನಂಜಗೌಡ. ಪಿ. ಡಬ್ಲ್ಯೂ. ಡಿ. ಇಲಾಖೆಯಲ್ಲಿ ಲಕ್ಷಗಟ್ಟಲೆ ತಿಂದು ದೇಶದ ಮುಖ್ಯಮಂತ್ರಿಯಾದ ವೀರಭದ್ರಪ್ಪ, ದಪ್ಪ ಮುಖದ ವಾರಂಗಲ್‌ಪೋಲೀಸ್ ಅಧಿಕಾರಿ ನಿಲ್ಲುತ್ತಾರೆ. ಕೃಶವಾದ ಕೈಕಾಲುಗಳ ಮಕ್ಕಳನ್ನು ಬಗಲಲ್ಲಿ ಹೊತ್ತ, ಕೆದರಿದ ತಲೆಯ ಹೆಂಗಸರು, ಮಂಡಿತನಕ ಮಾಸಲು ಪಂಚೆಯುಟ್ಟ ರೈತರು ಇವರ ಮೇಲೆ ಆವೇಶದಿಂದ ನುಗ್ಗುತ್ತಾರೆ. ಚೂರುಚೂರೇ ಅವರನ್ನು ಹಿಂಸಿಸುತ್ತ ನಿಧಾನವಾಗಿ ಕೊಲ್ಲುತ್ತಾರೆ. ಅವರ ರಕ್ತ ತಂದು ತನ್ನ ಪಾರ್ಶ್ವವಾಯು ಬಡಿದ ಕಾಲಿಗೂ ಪಕ್ಕಕ್ಕೂ ತಿಕ್ಕುತ್ತಾರೆ. ಈ ರಕ್ತವಲ್ಲ ಕಣ್ರೋ – ಪಾರಿವಾಳದ ರಕ್ತ. ಬಿಸಿಯಾಗಿರಬೇಕು ಎಂದು ಯಾರೋ ಅನ್ನುತ್ತಾರೆ. ಕೃಷ್ಣಪ್ಪ ನಗುತ್ತಾನೆ.

ಹೀಗೆ ಕನಸು ಕಾಣುತ್ತ ಕೃಷ್ಣಪ್ಪನ ಕಣ್ಣುಗಳು ಕ್ರೂರವಾಗಿ ದುರುಗುಟ್ಟುವುದನ್ನು ಅಪ್ಪನಿಗೆ ಏನೋ ಹೇಳಲು ಬಂದ ಅವನ ಮಗಳು ಗೌರಿ ಕಂಡು ಹೆದರುತ್ತಾಳೆ. ಕೃಷ್ಣಪ್ಪ ತನ್ನ ಕಾಲನ್ನು ಈಗ ಎತ್ತಬಲ್ಲೆ ಎಂದು ತಿಳಿಯುತ್ತ ಇಡೀ ಮನಸ್ಸನ್ನು ತನ್ನ ಪಾದವಾಗಿ ಏಕಾಗ್ರಗೊಳಿಸುತ್ತಾರೆ. ಎತ್ತಲು ನೋಡುತ್ತಾನೆ. ಸೊಂಟದಿಂದ ಮೇಲಕ್ಕೆ ಈಗ ಎತ್ತಿಬಿಡುತ್ತೇನೆ ಎಂದು ತಿಳಿದ ಕಾಲು ಸ್ವಲ್ಪ ಪಾದದ ಉಂಗುಷ್ಟದಲ್ಲಿ ಮೇಲಕ್ಕೇರುತ್ತದೆ. ಕೃಷ್ಣಪ್ಪ ನಿಟ್ಟುಸಿರಿಟ್ಟು ಮತ್ತೆ ಇನ್ನೊಂದು ಹಗಲುಗನಸಿಗೆ ಮರಳುತ್ತಾನೆ. ಈಗ ರೈತರು ಕೊಲ್ಲುತ್ತಿಲ್ಲ. ಗಂಭೀರವಾಗಿ ಹೊಟ್ಟೆ ಡುಬ್ಬರಾದ ವೈರಿಗಳನ್ನು ಎದುರು ನಿಲ್ಲಿಸಿ ಶಿಸ್ತಿನಿಂದ ಅವರ ವಿಚಾರಣೆ ನಡೆಸುತ್ತಿದ್ದಾರೆ.