‘ನಾಗೇಶ – ನಾಗೇಶಾ’

ಹೊರಗೆ ಪೇಪರ್ ಓದುತ್ತ ಕೂತ ನಾಗೇಶ ಅವಸರವಾಗೆದ್ದು ಕೃಷ್ಣಪ್ಪ ಮಲಗಿದ ಕೋಣೆಗೆ ಬರುತ್ತಾನೆ. ತಾನು ಕರೆದರೇ ಖುಷಿಯಾಗುವ ನಾಗೇಶನನ್ನು ಕಂಡು ಕೃಷ್ಣಪ್ಪನಿಗೆ ಗೆಲುವಾಗುತ್ತದೆ. ಕಿಶೋರ ಕುಮಾರ ಹಾಸ್ಟೆಲಲ್ಲಿ ಹೀಗೇ ತನ್ನ ಸೇವೆ ಮಾಡಿದ್ದ – ಈಗ ಎಂಜಿನಿಯರ್ ಆಗಿದ್ದಾನೆ – ವರ್ಗ ಮಾಡಿಸಿಕೊಡಿರೆಂದು ಕೇಳಲು ಬಂದಿದ್ದ. ನಾಗೇಶ ಬಂದು ನಿಂತಾಗ ಯಾಕೆ ಕರೆದದ್ದು ಎಂಬುದೇ ಮರೆತು ಹೋಗುತ್ತದೆ. ಅವನೇ ಕೇಳುತ್ತಾನೆ:

‘ಪೇಪರ್ ಓದಬೇಕ ಗೌಡರೆ ? ಇವತ್ತೇನೂ ಮುಖ್ಯ ಸುದ್ದಿ ಇರುವಂತಿಲ್ಲ.’

‘ಈ ದೇಶದಲ್ಲಿ ಅದೇನು ಸುದ್ದಿ ಇರುತ್ತೊ ?’

ಕೃಷ್ಣಪ್ಪ ಕಿಟಕಿಯಾಚೆಗೆ ನೋಡುತ್ತ ಹೇಳಿದ. ತನ್ನಿಂದ ಪ್ರತಿಕ್ರಿಯೆ ಬಯಸಿ ಗೌಡರು ಮಾತಾಡಿಲ್ಲವೆಂದು ಅರಿತ ನಾಗೇಶ ಸುಮ್ಮನೆ ನಿಂತ. ಮಾತಿನ ಅಗತ್ಯ ಯಾವಾಗ ಇಲ್ಲವೆಂದು ತಿಳಿದ ಈ ನಾಗೇಶನಂಥವರು ರಾಜಕೀಯ ಕ್ಷೇತ್ರದಲ್ಲಿ ದುರ್ಲಭವೆಂದು ಕೃಷ್ಣಪ್ಪನಿಗೆ ಅವನೆಂದರೆ ಇಷ್ಟ.

‘ಸೀತ ಬ್ಯಾಂಕಿಗೆ ಹೋದಳೇನೊ ?

‘ಹೋದರು ಗೌಡರೆ, ವೀರಣ್ಣನವರು ಅವರಿಗೆ ಕಾರ್ ಕಳಿಸಿದ್ದರು. ಗೌರೀನೂ ನರ್ಸರಿಗೆ ಹೋದಳು.’

‘ಬೆಳಗಾತ ಅದೇನೋ ರಂಪ ಹಿಡಿದಿತ್ತು.’

‘ಸ್ಕೂಲಿಗೆ ಹೋಗಲ್ಲ ಅಂತ – ’

ಕೃಷ್ಣಪ್ಪನ ಮುಖ ಮೃದುವಾಯಿತು!

‘ನಂಗೂ ಅವಳ ವಯಸ್ಸಿನಲ್ಲಿ ಸ್ಕೂಲಿಗೆ ಹೋಗಲಿಕ್ಕೆ ಇಷ್ಟವಿರಲಿಲ್ಲ ಮಾರಾಯ. ಜೋಯಿಸರು ಭಾರತ ಓತ್ತೀನಿ ಕಣೊ ಅಂತ ಪುಸಲಾಯಿಸಿ ಕರೆದುಕೊಂಡು ಹೋಗ್ತಿದ್ದರು.’

ನಾಗೇಶ ಕುರ್ಚಿಯನ್ನೆಳೆದು ಕೂತುಕೊಂಡ.

‘ಹೇಳ್ತೀರ. ಬರಕೋತಿನಿ ಎಂದು ಒತ್ತಾಯವಿಲ್ಲದ ಧ್ವನಿಯಲ್ಲಿ ಕೇಳಿದ.

‘ಬರಕೊಳ್ಳುವಿಯಂತೆ. ಇವತ್ತೇನೂ ಹೇಳಬೇಕೂಂತಲೆ ಅನ್ನಿಸಲ್ಲೊ ನಾಗೇಶ. ಕಾಲನ್ನ ಇನ್ನಷ್ಟು ಎತ್ತಬಹುದು ಅನ್ನಿಸ್ತು. ಪ್ರಯತ್ನ ಮಾಡಿದೆ. ಆಗತ್ತೆ ಭ್ರಮೆಯೋ ನಿಜವೋ ಅಂತ ನಿನ್ನ ಕೇಳಾಣ ಅಂತ ಕರೆದೆ – ನೋಡು.’

ಕೃಷ್ಣಪ್ಪ ಪಾದವನ್ನು ಎಳೆದುಕೊಳ್ಳಲು ಪ್ರಯತ್ನಿಸುತ್ತ ಏಕಾಗ್ರನಾದ.

‘ನಿನ್ನೆಗಿಂತ ಹೆಚ್ಚು ಏಳಕೋತಿದೀನ ನಾಗೇಶ’

ಸುಳ್ಳು ಹೇಳಿದರೆ ಕೃಷ್ಣಪ್ಪನಿಗೆ ಪ್ರಿಯವಾಗುವುದಿಲ್ಲವೆಂದು ತಿಳಿದ ನಾಗೇಶ – ‘ನನಗೆ ಹಾಗನ್ನಿಸಲ್ಲ ಗೌಡರೆ, ಕೈ ಹೇಗಿದೆ’ ಎಂದ.

‘ಕೈಯಿ’ ಎಂದು ಕೃಷ್ಣಪ್ಪ ನಾಗೇಶ ಕೊಟ್ಟ ರಬ್ಬರ್ ಬಾಲಿನ ಸುತ್ತ ಬೆರಳುಗಳನ್ನೆಲ್ಲ ಮಡಿಸಲು ಪ್ರಯತ್ನಿಸಿದ. ತನ್ನ ಪ್ರಾಣವನ್ನೆಲ್ಲ ತೀವ್ರವಾಗಿ ಬೆರಳುಗಳಲ್ಲಿ ನೂಕುತ್ತ ಅವಡುಕಚ್ಚಿದ. ಬಾಲಿನ ತಂಪಾದ ನುಣುಪಾದ ಹೊರಮೈ ಸುತ್ತ ಬೆರಳುಗಳು ಮಡಚಿಕೊಂಡರು. ಮೃದುವಾಗಿ ಬಾಲನ್ನು ಅಮುಕುವ ಅಪೇಕ್ಷೆ ದೇಹದಲ್ಲೆಲ್ಲ ಹುರಿಯಾಗಿ ಬೆರಳುಗಳಿಗೆ ಇಳಿಯಿತು. ಬಾಲು ಮುಷ್ಟಿಗೆ ದಕ್ಕುತ್ತಿದೆ ಎನ್ನಿಸಿ ಗೆಲುವಾಯಿತು. ಈ ಗೆಲುವು ನಾಗೇಶನ ಕಣ್ಣುಗಳಲ್ಲೂ ಮಿಂಚಿದ್ದರಿಂದ ಕೃಷ್ಣಪ್ಪನಿಗೆ ಹರ್ಷವಾಯಿತು. ಹಾಗೆ ಬಾಲನ್ನು ಹಿಡಿದು ತನ್ನ ಹಠಕ್ಕೆ ಅದರ ಮೃದುವಾದ ವಿರೋಧವನ್ನೂ ಒಪ್ಪಿಗೆಯನ್ನೂ ಸವಿಯುತ್ತ.

‘ನಾನು ತುಂಬ ಚೆನ್ನಾಗಿ ಬುಗುರಿ ಬಿಡುತ್ತಿದ್ದೆ ಕಣೊ’ ಎಂದ. ವಾರಂಗಲ್‌ನಿಂದ ಹಿಂದುರಿಗಿದ ಮೇಲೆ ಗದ್ದೆಯ ಕೆಸರಿನಲ್ಲಿ ಕೈಗಳನ್ನು ಹುಗಿದು ನೆಟ್ಟಿಯ ಸಮಯದಲ್ಲಿ ಭತ್ತದ ಸಸಿಯನ್ನು ನೆಡುತ್ತಿದ್ದುದ್ದು ನೆನಪಾಯಿತು. ಹಳ್ಳಿಗೆ ಹೋಗುವ ಮುಂಚೆ ಮಹೇಶ್ವರಯ್ಯನ ಜೊತೆ ಗೌರಿ ದೇಶಪಾಂಡೆಯನ್ನು ನೋಡಲು ಹೋಗಿದ್ದ. ಪರೀಕ್ಷೆಗೆಂದು ಓದುತ್ತಿದ್ದವಳು ಹೊರಗೆ ಬಂದು ಸ್ವಾಗತಿಸಿದಳು. ಅವಳ ತಲೆ ಬಾಚದೆ ಕೆದರಿಕೊಂಡಿತ್ತು. ಓದುತ್ತಿದ್ದುದರಿಂದ ಮುಖ ಬಾಡಿತ್ತು. ನಿಸ್ಸಹಾಯಕಳಾಗಿ ಸುಂದರಳಾಗಿ ಕಂಡಿದ್ದಳು. ನರಕದಿಂದ ಬಂದಿದ್ದ ಕೃಷ್ಣಪ್ಪ ಏನೂ ಮಾತಾಡಲಾರದೆ ಅವಳನ್ನು ನೋಡುತ್ತ ನಿಂತ. ತನ್ನ ಈಗಿನ ಅನುಭವಗಳಿಂದಾಗಿ ಅವಳಿಗೆ ಭಾರವಾಗುತ್ತೇನೆಂದು ಅನ್ನಿಸಿ ಮನಸ್ಸು ಕಲ್ಲಾಯಿತು.

‘ಇವರು ಮಹೇಶ್ವರಯ್ಯ. ಹಳ್ಳಿಗೆ ಹೋಗೋ ಮುಂಚೆ ನಿಮ್ಮನ್ನು ಬಂದು ನೋಡಾಣ ಅನ್ನಿಸ್ತು’ ಎಂದ.

ಅನಸೂಯಾಬಾಯಿ ಕಾಫಿಯನ್ನು ತಂದು ಉಪಚರಿಸಿದಳು. ಕೃಷ್ಣಪ್ಪ ಇಳಿದು ಕಂದಿದ್ದರ ಕಾರಣ ಕೇಳಿದರು. ಮಹೇಶ್ವರಯ್ಯನೇ ಕೃಷ್ಣಪ್ಪನಿಗೆ ಮುಜುಗರವಾಗದ ರೀತಿಯಲ್ಲಿ ಸೂಕ್ಷ್ಮವಾಗಿ ಆದದ್ದನ್ನು ವಿವರಿಸಿದರು. ತೇವವಾದ ಕಾತರವಾದ ಕಣ್ಣುಗಳಿಂದ ಗೌರಿ ತನ್ನನ್ನು ಆಗ ನೋಡುತ್ತ ಕೂತಿದ್ದಳಲ್ಲವೆ ?

‘ಪರೀಕ್ಷೆ ಮುಗಿಸಿ ನಮ್ಮ ಹಳ್ಳಿಗೆ ಬಂದು ಹೋಗಿ’

ಕೃಷ್ಣಪ್ಪ ಉಪಚಾರದ ಧ್ವನಿಯಲ್ಲಿ ಹೇಳಿದ್ದ. ಯಾಕೆ ಒತ್ತಾಯಪೂರ್ವಕವಾಗಿ ಹೇಳಲಾಗಲಿಲ್ಲ ತನಗೆ ? ಗೌರಿ ತನ್ನ ಹಗುರಾದ ಮಾತಿನಿಂದ ನಿರಾಶಳಾದಂತೆ ಕಂಡಳು ಅಲ್ಲವೆ ? ಈ ಸೂಕ್ಷ್ಮಗಳೆಲ್ಲ ಈಗ ಕೃಷ್ಣಪ್ಪನನ್ನು ಬಾಧಿಸುತ್ತವೆ. ನನ್ನ ಜೀವನ ಹೊರಳಿಕೊಳ್ಳುವ ಸಮಯದಲ್ಲಿ ಎಲ್ಲ ಸಾಧ್ಯತೆಗಳಿಗೂ ತಾನು ಪೂರ್ಣ ಎಚ್ಚರದಿಂದ ತೆರೆದುಕೊಂಡಿದ್ದನೋ ಇಲ್ಲವೋ ಎಂದು ಅನುಮಾನವಾಗುತ್ತದೆ. ಯಾವ ಕಾರಣದಿಂದ ತಾನು ಆಗ ಆಡಬೇಕಾದ್ದನ್ನು ಆಡಲಾರದೆ ಹೋದೆ ? ನೀನು ಬೇಕು ಎಂದು ಹೇಳಿಕೊಳ್ಳಲಾಗದ ಗರ್ವವೆ ? ಒಡನಾಡಿಗಾಗಿ ಹಾತೊರೆಯಬಾರದೆಂಬ ತನ್ನ ನಿಷ್ಠುರ ವ್ರತವೆ ಅಥವಾ ವಾರಂಗಲ್‌ನ ಪೋಲೀಸ್ ಠಾಣೆಯ ನರಕದಿಂದ ಎದ್ದು ಬಂದ ತಾನು ಪ್ರೇತದಂತಿದ್ದೆ ಎಂದು ಅನ್ನಿಸಿದ್ದೆ ? ಹೌದು – ತನ್ನ ದೇಹ ಮಲಿನವಾಗಿದೆ ಎನ್ನಿಸಿತ್ತು – ಶುಭ್ರವಾದ ಕಾಂತಿಯ ಕೆದರಿದ ತಲೆಯ ಗೌರಿಯನ್ನು ನೋಡುತ್ತ ನಿಂತಂತೆ. ಅವಳು ಮೂಕವಾಗಿ ನಿಂತದ್ದು ನೋಡಿ,

‘ನೀವೇನು ಮುಂದೆ ಮಾಡ್ತೀರಿ?’

ಎಂದು ಕೃಷ್ಣಪ್ಪ ಕೇಳಿದ್ದ. ಪ್ರಾಯಶಃ ತನ್ನ ಪ್ರಶ್ನೆಯ ಗತ್ತು ಲೋಕಾಭಿರಾಮವಾಗಿತ್ತೆಂದು ಗೌರಿಗೆ ದುಃಖವಾಗಿರಬೇಕು. ಅವಳೇನೂ ಅದಕ್ಕೆ ಉತ್ತರ ಕೊಡಲಿಲ್ಲ.

‘ಯಾಕೋ ನಾಗೇಶ, ನಾವು ತೀವ್ರವಾಗಿ ಪ್ರೀತಿಸಿದ್ದನ್ನು ಪಡೆಯೋ ಧೈರ್ಯ ಮಾಡಲ್ಲ? ಪಡೆದ ಮೇಲೆ ಅದು ಅಷ್ಟೇ ಅಮೂಲ್ಯವಾಗಿ ಉಳಿಯಲ್ಲ ಅಂತ ಭಯವ ?’

ನಾಗೇಶನ ಅಳವಿಗೆ ಈ ಪ್ರಶ್ನೆ ಮೀರಿತ್ತು. ಆದರೆ ಕೃಷ್ಣಪ್ಪ ಏನು ಯೋಚಿಸುತ್ತಿರಬಹುದೆಂದು ಊಹಿಸಿ ಹೇಳಿದ.

‘ಗೌರಿ ದೇಶಪಾಂಡೆಯವರಿಗೆ ಬರಲಿಕ್ಕೆ ಬರ್ದಿದೀನಿ ದೆಹಲಿ ವಿಳಾಸಕ್ಕೆ’

ಕೃಷ್ಣಪ್ಪ ಕಾತರವಾದ ಕಣ್ಣುಗಳಿಂದ ನಾಗೇಶನನ್ನೇ ನೋಡಿ ದೀರ್ಘವಾಗಿ ಉಸಿರಾಡಿದ. ಅವಳು ಬರುವ ಮುಂಚೆ ಕಾಲು ಕೈಗಳು ಇನ್ನಷ್ಟು ಚಲಿಸುವಂತಾದರೆ ಎಂದು ಆಸೆಯಾಯಿತು. ಚಲಿಸುವಂತಾದರೆ ಮತ್ತೆ ಹಳ್ಳಿಗೆ ಹೋಗುವೆ. ಕೆಸರಿನಲ್ಲಿ ಕಾಲನ್ನ ಹುಗಿದು ಮತ್ತೆ ಭತ್ತದ ಸಸಿಗಳನ್ನು ನೆಡುವೆ. ದನ ಮೇಯಿಸುತ್ತ ಕೂತಿರುತ್ತಿದ್ದ ಅಶ್ವತ್ಥದ ಮರದ ಬುಡದಲ್ಲಿ ಮತ್ತೆ ಕೂರುವೆ. ಎದುರಿನ ಪೇರಳೆ ಮರಕ್ಕೆ ಮತ್ತೆ ಪಂಚವರ್ಣದ ಗಿಣಿಗಳು ಬುರುವುದಕ್ಕಾಗಿ ಕಾಯುವೆ.

‘ಮಹೇಶ್ವರಯ್ಯನು ಬಂದಿದ್ರೆ ಚೆನ್ನಾಗಿರ್ತಿತ್ತೊ’

‘ಬರೆಯೋಣ ಅಂದ್ರೆ ಅವರಿಗೆ ವಿಳಾಸವೇ ಇಲ್ವಲ್ಲ.’

‘ಅವರು ಹಾಗೇನೇ. ಇದ್ದಕ್ಕಿದ್ದಂತೆ ಬಂದು ಬಿಡ್ತಾರೆ. ಮಾರಾಯ್ರಿಗೆ ಈಗ ರೇಸಿನ ಹುಚ್ಚು ಹಿಡಿದು ಬಿಟ್ಟಿದೆ. ಬೆಂಗಳೂರಲ್ಲಿ ನಾಳೇಂದ ಸೀಸನ್‌ಅಲ್ವ – ಬಂದರೂ ಬಂದರೆ. . . . .’ ಎಂದು ಕೃಷ್ಣಪ್ಪ ಮಗ್ಗುಲಾಗಲು ಇಚ್ಛಿಸುತ್ತ ಮಲಗಿದ. ಯಾವತ್ತು ಹೊರಳುವಷ್ಟು ಶಕ್ತಿ ಈ ದೇಹಕ್ಕೆ ಬರುತ್ತದೊ? ಅಷ್ಟರಲ್ಲಿ ಇನ್ನೊಂದು ಸ್ಟ್ರೋಕ್‌ಹೊಡೆದು ಸಾಯಲೂ ಬಹುದು. ಎಲ್ಲೋ ಒಂದು ರಕ್ತದ ಬಿಂದು ಸಿಕ್ಕಿಬಿದ್ದಿದೆ. ಅದು ತಾನಾಗಿಯೇ ಚಲಿಸಲೂ ಬಹುದು, ಚಲಿಸದೆ ಅಲ್ಲೆ ನಿಂತು ಬಿಡಲೂ ಬಹುದು. ಪ್ರತಿಕ್ಷಣ ಪ್ರಜ್ಞಾಪೂರ್ವಕವಾಗಿ ಬದುಕುವುದಷ್ಟೇ ಈಗ ತನಗೆ ಉಳಿದದ್ದು. ಅನಾಮತ್ತಾಗಿ ಈ ದೇಹ ಈ ಸ್ಥಿತಿಗೆ ಬಂದಿದೆ. ಹೇಳದೆ ಕೇಳದೆ ಎಚ್ಚರಿಕೆ ಕೊಡದೆ.

ಕೃಷ್ಣಪ್ಪನ ಜೀವನದಲ್ಲಿ ಪ್ರವೇಶಿಸಿದ ಯಾರು ಇಡಿಯಾಗಿ ಉಳಿದಿದ್ದಾರೆ. ಯಾರು ಇಲ್ಲ – ಅವನಿಗೆ ತಿಳಿಯುವುದಿಲ್ಲ. ಬಾಹ್ಯದಲ್ಲಿ ನೋಡಿ ಯಾರು ಹೇಗೆ ಎಂದು ಹೇಳುವುದು ಶಕ್ಯವಿಲ್ಲ. ಉದಾಹರಣೆಗೆ ಉಮೆ ? ಅಣ್ಣಾಜಿಯ ಸಾವಿನಿಂದ ಅವಳಿಗೆ ಆದ ಆಘಾತ ಕೃಷ್ಣಪ್ಪನಿಗೆ ಮಾತ್ರ ಗೊತ್ತು. ಅವಳು ಯಾರಿಗೂ ಹೇಳಿಕೊಳ್ಳಲಾರದೆ ಆರೋಗ್ಯವಿಲ್ಲೆಂಬ ನೆವ ಹೂಡಿ ತವರಿಗೆ ಹೋಗಿದ್ದಳು. ಆಗ ಅವಳು ಬಸುರಿ. ಅಂದರೆ ಅಣ್ಣಾಜಿಯ ಮಗ ಈಗ ಬೆಳೆದಿದ್ದಾನೆ. ಮೋಟಾರ್ ಸೈಕಲ್‌ಮೇಲೆ ಹಿಪ್ಪಿಯ ಹಾಗೆ ಕೂದಲು ಬಿಟ್ಟು ಅವನು ವಿಜೃಂಭಿಸುವುದನ್ನು ಕೃಷ್ಣಪ್ಪ ಕಂಡಿದ್ದಾನೆ. ಅವನಾದ ಮೇಲೆ ಉಮೆಗೆ ಇನ್ನೆರಡು ಮಕ್ಕಳಾಗಿದ್ದಾವಂತೆ. ಅವಳ ಗುಟ್ಟನ್ನು ಇಷ್ಟು ದಿನ ಕೃಷ್ಣಪ್ಪ ಮುಚ್ಚಿಟ್ಟುಕೊಂಡಿದ್ದಾನೆ. ತನ್ನ ಜೀವನ ಚರಿತ್ರೆ ಬರೆಸುವಾಗ ಈ ಘಟನೆಯನ್ನು ನಾಗೇಶನಿಗೂ ಅವನು ಹೇಳಿಲ್ಲ. ಪ್ರಾಯಶಃ ಅಣ್ಣಾಜಿಯ ಮನಸ್ಸು ರಾಜಕೀಯದಿಂದ ವಿಮುಖವಾಗಿ ದಾಂಪತ್ಯದ ನೆಮ್ಮದಿಯನ್ನು ಬಯಸಿದ್ದಾಗ ಅವನನ್ನು ಕೊಂದರು. ಅವನ ಆಯ್ಕೆಯಾದರೂ ಪ್ರಜ್ಞಾಪೂರ್ವಕವಾಗಿತ್ತೆ ಎಂದು ಅನುಮಾನವಾಗುತ್ತದೆ. ಆದರೆ ಸತ್ತಿದ್ದರಿಂದ ಅವನು ತನ್ನ ಪ್ರಶ್ನೆ ಅನುಮಾನಗಳಿಗೆ ಅತೀತನಾಗಿ ನಿಂತಂತೆಯೂ ಅನ್ನಿಸುತ್ತದೆ. ತಾನು ಕಂಡ ಒಬ್ಬ ದೃಷ್ಟಾರನೆಂದರೆ ಅವನೇ. ಎಷ್ಟೊಂದು ಕ್ಷುಲ್ಲಕತೆಗೆ ಒಳಗಾಗಿದ್ದರೂ ಅವನ ಬುದ್ದಿ ಮಾತ್ರ ಪ್ರಖರವಾಗಿ ಬೀರುತ್ತಿತ್ತು. ಅವನು ಬದುಕಿದ್ದಾಗ ಪ್ರಾಮಾಣಿಕತೆಯ ಪ್ರಶ್ನೆ ಕೃಷ್ಣಪ್ಪನನ್ನು ಬಾಧಿಸಿದ್ದರೂ ಈಗ ಅಣ್ಣಾಜಿ ತನಗೆ ಮೀರಿದ್ದಕ್ಕಾಗಿ ದುಡಿದು ಸತ್ತವನಂತೆ ಕಾಣುತ್ತಾನೆ. ಉಮೆ? ಅವಳು ತನಗೆ ಎದುರಾದ್ದನ್ನು ಒಪ್ಪಿಕೊಂಡು ಬದುಕಿದಂತಿದೆ.

ಇನ್ನು ಆ ಬೈರಾಗಿ. ಅವನ ಬಗ್ಗೆ ಮಾತ್ರ ಕೃಷ್ಣಪ್ಪನಿಗೆ ಈಗಲೂ ಅರ್ಥವಾಗುವುದಿಲ್ಲ. ಅವನ ಒಳ ಬಾಳು ಉಜ್ವಲವಾಗಿ ಉರಿಯುತ್ತಿತ್ತೋ, ಅಥವಾ ಅವನೊಂದು ಠೊಳ್ಳು ತಿರುಳಿನ ತರಕಾರಿಯಂತವನೋ ಹೇಳುವುದು ಹೇಗೆ ? ಜನ ಮಾತ್ರ ಅವನನ್ನು ಬಿಡಲಿಲ್ಲ. ಅವನು ಇದ್ದಲ್ಲಿ ಒಂದು ದೇವಸ್ಥಾನ ಕಟ್ಟಿದ್ದಾರೆ. ಕನಸಿನಲ್ಲಿ ಅವನು ಬಂದು ಪ್ರಶ್ನೆಗಳಿಗೆ ಉತ್ತರ ಹೇಳುವನೆಂದು ಪ್ರತೀತಿ ಹಬ್ಬಿ ಎಲ್ಲೆಲ್ಲಿಂದಲೋ ಜನರು ಬರತೊಡಗಿದ್ದಾರೆ. ಅವನು ಮಾತ್ರ ಯಾರ ಹತ್ತಿರವೂ ಮಾತಾಡುವುದಿಲ್ಲ. ನಿತ್ಯ ವಿಧಿಯಂತೆ ಬೆಳಿಗ್ಗೆ ಎದ್ದು ಅವನು ಬೀದಿ ತುದಿ ನಿಂತು ಭಗವದ್ಗೀತೆ ಹಾಡುತ್ತಾನೆ. ತನ್ನ ಆಹಾರ ಸಂಪಾದಿಸಿ ಬೇಯಿಸಿಕೊಂಡು ತಿನ್ನುತ್ತಾನೆ. ಇದು ನಿಂತಿಲ್ಲ. ಆದರೆ ಇದು ಹಿಂದಿನಂತೆ ಸರಳವಾಗಿ ಉಳಿದಿಲ್ಲ. ಅವನು ಹೋಗುವ ಬೀದಿಗೆ ತೋರಣ ಕಟ್ಟಿರುತ್ತದೆ. ಅವನು ಗೀತೆಯನ್ನು ಓದಲು ನಿಲ್ಲುವ ಜಾಗದಲ್ಲಿ ಪ್ಲಾಟ್‌ಫಾರಂ ಹಾಕಿ ಮೈಕನ್ನು ಇಟ್ಟಿರುತ್ತಾರೆ. ಬೈರಾಗಿಯನ್ನು ಸಿದ್ದೇಶ್ವರ ಎಂದು ಕರೆಯುತ್ತಾರೆ. ಏನನ್ನೂ ಬೈರಾಗಿ ನಿರಾಕರಿಸುವುದಿಲ್ಲ. ಬೇಕೆಂದು ಕೇಳುವುದೂ ಇಲ್ಲ. ಆದರೆ ಜನರ ಅಗತ್ಯ ತನ್ನಿಂದ ಹೀಗೆ ಪೂರೈಕೆಯಾಗುತ್ತಿರುವುದಕ್ಕಾಗಿ ಅವನು ಸಂತೋಷ ಪಡುವಂತೆ ಕಾಣುತ್ತದಲ್ಲವೆ ? – ಅವನು ಮೈ ಕೈ ತುಂಬಿಕೊಲ್ಳುತ್ತ ಹೋದದ್ದನ್ನು ನೋಡಿದರೆ. ಇಕ್ಕಿದ್ದನ್ನು ಸ್ವೀಕರಿಸುವೆನೆಂಬ ಅವನ ವ್ರತವೇ ವಿಶೇಷವಾದ ಪೌಷ್ಟಿಕ ಆಹಾರ ಅವನಿಗೆ ದೊರೆಯುವಂತೆಯೂ ಮಾಡಿರಬೇಕು.

ಅವನಿಗೆ ಉತ್ತರ ಕೊಡಬೇಕೆನ್ನಿಸುವಂಥ ಪ್ರಶ್ನೆಯನ್ನು ಕೇಳಲು ತನಗೆ ಹೊಳೆಯಲೇ ಇಲ್ಲವೆಂದು ಬಹಳ ಸಾರಿ ಕೃಷ್ಣಪ್ಪ ತನ್ನ ಆಗಿನ ಮನಸ್ಥಿತಿಯ ಬಗ್ಗೆ ಸಂಶಯ ಪಡುವುದುಂಟು ಆಗ ವ್ಯಗ್ರನಾಗಿದ್ದದು ನಿಜ. ಆದರೆ ಅದಕ್ಕೆ ಕಾರಣವೆಂದು ತನಗೆ ಹೊಳೆಯುತ್ತಿದ್ದುದೆಲ್ಲ ಪೊಳ್ಳಿರಬಹುದು. ಆದ್ದರಿಂದಲೇ ಬೈರಾಗಿ ಹತ್ತಿರ ಪ್ರಶ್ನೆ ಕೇಳಲಾರದೆ ಹೋದೆ ಎಂದುಕೊಳ್ಳುತ್ತಾನೆ. ಬೈರಾಗಿ ಒಂದು ಬಗೆಯಲ್ಲಿ ಕೃಷ್ಣಪ್ಪನಿಗೆ ಹೀಗೆ ತನ್ನನ್ನು ಅಳೆಯುವ ಮಾನದಂಡವಾಗಿ ಕಂಡರೆ ಸರ್ಪ ಅವನ ಗುಹೆಯನ್ನು ಹೊಕ್ಕಾಗ ಅವನಿಗೆದುರಾದ ಹಿಂಸೆಯನ್ನು ಅವನು ತಾಳಲಾರದೇ ಹೋದ ಎಂಬುದು ಕೂರ್ಮ ರೂಪದ ಅವನ ತಪಸ್ಸಿನ ಬಗ್ಗೆ ಆಳವಾದ ಅನುಮಾನವನ್ನು ಹುಟ್ಟಿಸುತ್ತದೆ. ಎಲ್ಲ ಸಾಧ್ಯತೆಗಳಿಗೂ ಚುರುಕಾಗಿ ಸ್ಪಂದಿಸುತ್ತ ಬದುಕಬೇಕೆನ್ನುವ ಕೃಷ್ಣಪ್ಪನ ಆದರ್ಶಕ್ಕೆ ಅವನು ಕಂಡಿದ್ದರಲ್ಲಿ ಯಾವುದೂ ಸರಿಸಾಟಿಯಲ್ಲವೆನ್ನಿಸುತ್ತದೆ.

ತನ್ನಲ್ಲಿ ಬಿರುಕು ಎಲ್ಲಿ, ಹೇಗೆ ಕಾಣಿಸಿಕೊಂಡಿತು ? ಸಾಯುವ ಮುಂಚೆ ಇದನ್ನು ತಿಳಿಯಬೇಕು. ಅಷ್ಟೇ ಉಳಿದದ್ದು ನನ್ನ ಪಾಲಿಗೆಂದು ಯೋಚಿಸುತ್ತಲೆ ತನ್ನ ಪಾರ್ಶ್ವಕ್ಕೆ ಪ್ರಾಣ ಶಕ್ತಿಯನ್ನು ಹರಿಸಲು ಉದ್ಯುಕ್ತನಾಗುತ್ತಾನೆ.

‘ನಾಗೇಶ ನನ್ನ ಅಮ್ಮನನ್ನು ಕರಕೊಂಡು ಬರಕ್ಕೆ ಯಾರನ್ನಾದರು ಕಳಿಸಬೇಕಲ್ಲೋ – ’

‘ನಾನೇ ಹೋಗಿ ಬರಲು ಗೌಡರೆ?’

‘ಬೇಡ ನೀನಿಲ್ಲಿ ಇರೋದು ಅಗತ್ಯ. ನಿನ್ನ ಸೇಹಿತರಲ್ಲಿ ಯಾರನ್ನಾದರೂ ಕಳಿಸು.’

ಮನೆಯ ಹೊರಗೆ ಕಾರು ಬಂದು ನಿಂತಿತು. ಅದರಿಂದ ವೀರಣ್ಣ ಇಳಿದ. ಖಾದಿ ಸಿಲ್ಕಿನ ಕ್ಲೋಸ್‌ಕಾಲರ್ ಕೋಟು ಪ್ಯಾಂಟು ತೊಟ್ಟ ವೀರಣ್ಣಿನಿಗೆ ಸುಮಾರು ಅರವತ್ತು ವರ್ಷಗಳಿರಬಹುದು. ಬೆಂಗಳೂರಿನ ಎರಡು ದೊಡ್ಡ ಹೋಟೆಲುಗಳ, ಮೂರು ಥಿಯೇಟರುಗಳ ಮಾಲೀಕ ಈ ವೀರಣ್ಣ. ಅವನ ತಂದೆ ಒಬ್ಬ ಸಣ್ಣ ಕಂಟ್ರ್ಯಾಕ್ಟರ್‌ ಆಗಿದ್ದವನು. ವೀರಣ್ಣ ತನ್ನ ಚಾಕಚಕ್ಯತೆಯಿಂದ ಲಕ್ಷಾಧೀಶನಾಗಿ ಬೆಳೆದಿದ್ದ. ತಿರುಪತಿಯ ವೆಂಕಟರಮಣನ ಪರಮಭಕ್ತನಾದ ವೀರಣ್ಣ ದೇಶ ವಿದೇಶಗಳಲ್ಲಿ ಅವನ ದೇವಾಲಯಗಳನ್ನು ಕಟ್ಟಿಸುವುದಕ್ಕೆ ಮುಂದಾಗಿದ್ದ. ಸೋಷಲಿಸ್ಟ್‌ನಾಯಕನೆಂದೂ, ಶ್ರೀಮಂತ ವರ್ಗದ ವಿರೋಧಿಯೆಂದೂ ಹೆಸರಾದ ಕೃಷ್ಣಪ್ಪನನ್ನು ಈ ವೀರಣ್ಣ ಆರಾಧಿಸುವುದನ್ನು ಕಂಡು ಎಲ್ಲರೂ ಬೆರಗಾಗಿದ್ದರು. ಎಂಥೆಂಥ ಮಂತ್ರಿಗಳೂ ವೀರಣ್ಣನ ಕೃಪೆಗೆ ಕೈಯೊಡ್ಡುವಾಗ, ಯಾವುದನ್ನೂ ಯಾರ ಹತ್ತಿರವೂ ಬೇಡದ ಗರ್ವಿಷ್ಠ, ಕೃಷ್ಣಪ್ಪನ ಬಳಿ ಮಾತ್ರ ವೀರಣ್ಣ ಅತ್ಯಂತ ವಿನಯದಿಂದ ನಡೆದುಕೊಳ್ಳುವನು. ಕೃಷ್ಣಪ್ಪನಿಗೆ ಸ್ಟ್ರೋಕ್‌ಹೊಡೆದಾಗ ಅವನು ವಾಸವಾಗಿದ್ದುದು ಗಾಂಧೀ ಬಜಾರಿನ ಹತ್ತಿರವಿದ್ದ ಒಂದು ಹಳೆಯ ಮನೆಯಲ್ಲಿ. ರೆಂಟ್‌ಕಂಟ್ರೋಲಿಂದ ಪಡೆದಿದ್ದ ಮನೆ ಅದು. ತಿಂಗಳಿಗೆ ಒಂದುನೂರು ರೂಪಾಯಿ ಬಾಡಿಗೆ. ಮನೆಯಿಂದ ಹೊರಕ್ಕೆ ಕಕ್ಕಸು. ಕೃಷ್ಣಪ್ಪನಿಗೆ ಇದು ತೀರಾ ಅನಾನುಕೂಲವೆಂದು ವೀರಣ್ಣ ಸದಾಶಿವ ನಗರದಲ್ಲಿರುವ ತಾನು ಬಾಡಿಗೆಗೆ ಕೊಟ್ಟಿರುವ ಫ್ಲಾಟುಗಳಲ್ಲಿ ಒಂದನ್ನು ತೆಗೆದುಕೊಳ್ಳುವಂತೆ ಬೇಡಿಕೊಂಡ. ಕೃಷ್ಣಪ್ಪನ ಹೆಂಡತಿ ಸೀತೆಯೂ ಅದು ತನ್ನ ಬ್ಯಾಂಕಿಗೆ ಹತ್ತಿರವೆಂದು ವಾದಿಸಿದಳು. ಆದರೆ ತನಗೆ ಎಂ. ಎಲ್‌. ಎ. ಆಗಿ ಬರುವ ಸಂಬಳದಲ್ಲಿ ನೂರು ರೂಪಾಯಿಗಿಂತ ಹೆಚ್ಚಿನ ಬಾಡಿಗೆಯ ಮನೆಯಲ್ಲಿ ಇರುವುದು ಸಾಧ್ಯವೇ ಇಲ್ಲೆಂದು ಕೃಷ್ಣಪ್ಪ ನಿರಾಕರಿಸಿದಾಗ –

‘ಹಾಗಾದರೆ ನೂರೇ ನನಗೆ ಬಾಡಿಗೆ ಕೊಡಿ – ಸಾಕು’

ಎಂದು ವೀರಣ್ಣ ಪ್ರಾರ್ಥಿಸಿದ.

‘ಆದರೆ ಅದಕ್ಕೆಷ್ಟು ಬಾಡಿಗೆ? ಏಳುನೂರು ಅಲ್ವ ವೀರಣ್ಣ?’

‘ನಾನೇನು ಮಾಡ್ಬೇಕಾಗಿದೆ ಅಷ್ಟು ದುಡ್ಡು ತಗೊಂಡು? ನಾನೇನು ನಿಮಗೆ ಪುಗಸಟ್ಟೆಗೆ ಕೊಡ್ತ ಇಲ್ವಲ್ಲ?’

ಕೃಷ್ಣಪ್ಪ ತಾನಿದ್ದ ಅಸಹಾಯಕ ದೈಹಿಕ ಪರಿಸ್ಥಿತೀಲಿ ಸದಾಶಿವ ನಗರದ ಪ್ಲಾಟಿಗೆ ಒಲ್ಲದ ಮನಸ್ಸಿಂದ ಬಂದಿದ್ದ. ಸೀತೆ ಪ್ರತಿನಿತ್ಯ ರಗಳೆ ಮಾಡುವುದು ತಪ್ಪುವುದಲ್ಲ ಎಂಬುದೂ ಹೀಗೆ ಬರಲು ಕಾರಣವಾಗಿತ್ತು. ಗೌರಿಗೆ ಹತ್ತಿರದಲ್ಲೆ ಇಂಗ್ಲೀಷ್‌ನರ್ಸರಿ ಬೇರೆ ಇತ್ತೆಂದು ಸೀತೆಗೆ ಸಂತೋಷವಾಗಿತ್ತು.

ಕೃಷ್ಣಪ್ಪನಿಗೆ ಸ್ಟ್ರೋಕ್‌ಹೊಡೆದಾಗ ದೇಶದಲ್ಲಿ ಅವನೆಷ್ಟು ದೊಡ್ಡ ಮನುಷ್ಯನೆಂಬುದು ಎಲ್ಲರಿಗೂ ಪ್ರತ್ಯಕ್ಷವಾಗಿ ಗೊತ್ತಾಗಿತ್ತು. ರಾಜ್ಯಪಾಲರೇ ಸ್ವತಃ ಹಾಸ್ಪಿಟಲ್‌ಗೆ ಬಂದು ಅವನನ್ನು ನೋಡಿದ್ದರು. ಕೃಷ್ಣಪ್ಪ ಅತ್ಯಂತ ಕಟುವಾಗಿ ಟೀಕಿಸುತ್ತಿದ್ದ ಮುಖ್ಯಮಂತ್ರಿ ಬೊಂಬಾಯಿಯಿಂದ ಒಬ್ಬ ಸ್ಪೇಶಲಿಸ್ಟನ್ನು ಕರೆಸಿದ್ದ. ದೇಶದ ಎಲ್ಲ ವಿ. ಐ. ಪಿ. ಗಳೂ ಅಸ್ಪತ್ರೆಗೆ ಬಂದು ಅವನನ್ನು ನೋಡಿದ್ದರು.

ತಾನು ಏನನ್ನೂ ಬೇಡದೆ ಎಲ್ಲವೂ ತನಗೆ ದಕ್ಕುತ್ತಿರುವುದನ್ನು ಕಂಡು ಕೃಷ್ಣಪ್ಪನೇ ಬೆರಗಾಗಿದ್ದ. ಯಾವ ಫಲಾಪೇಕ್ಷೆಯೂ ಇಲ್ಲದೆ ವೀರಣ್ಣ ತನ್ನ ಸೇವೆ ಮಾಡುತ್ತಿದ್ದಾನೆಂದು ಕೃಷ್ಣಪ್ಪ ತಿಳಿದ. ಅವನಿಗೆ ತಾನೇನು ಹೆಚ್ಚು ಮಾಡಬಲ್ಲೆ? ಅಲ್ಲದೆ ಕೃಷ್ಣಪ್ಪ ವಿರೋಧಿಸುತ್ತಿದ್ದುದು ವ್ಯವಸ್ಥೆಯನ್ನೇ ಹೊರತಾಗಿ ವ್ಯಕ್ತಿಗಳನ್ನಲ್ಲವಲ್ಲ. ವೀರಣ್ಣ ಕೂಡ ಈ ವ್ಯವಸ್ಥೆಯಲ್ಲಿ ಎಲ್ಲರಂತೆ ಒಬ್ಬನಲ್ಲವೆ?

ಆದರೆ ಹೀಗೆಲ್ಲ ತರ್ಕ ಹೂಡಿಕೊಂಡು ತಾನು ವೀರಣ್ಣನನ್ನು ಒಪ್ಪಿಕೊಳ್ಳತೊಡಗಿದ್ದೆ ಎಂಬುದೇ ಕೃಷ್ಣಪ್ಪನನ್ನು ಆಗೀಗ ಬಾಧಿಸುವುದುಂಟು. ಅವನ ವಿನಯ ಧೂರ್ತ ಲಕ್ಷಣ ಎಂದು ಅನುಮಾನಿಸುವನು. ಅವನ ಕ್ಷೌರ ಮಾಡಿದ ನುಣುಪಾದ ಮುಖ, ಕಿವಿಯ ಮೇಲಿನ ಕೂದಲು, ಮೂಗಿನ ಮೇಲೆ ಕೂಡಿಕೊಂಡ ಪೊದೆ ಹುಬ್ಬು, ದಪ್ಪವಾದ ಕತ್ತು, ಹತ್ತಿರ ಹತ್ತಿರ ಹೆಜ್ಜೆಯಿಡುತ್ತ ತನ್ನ ಸುತ್ತಲೂ ಅವನು ನಡೆದಾಡುವ ರೀತಿ, ‘ಅಮ್ಮ’ ‘ಅಮ್ಮ’ ಎಂದು ಸೀತೆಯನ್ನು ಕರೆದು ಅವಳಿಗೆ ತಾನು ಮಾರ್ಕೇಟ್ಟಿಂದ ಕಟ್ಟಿಸಿ ತಂದ ತರಕಾರಿ ಬುಟ್ಟಿಯನ್ನು ಕೊಡುತ್ತ ಅವಳ ಮೆಚ್ಚುಗೆ ಪಡೆಯುವ ಮತಿನ ಸೇಳೆ – ಎಲ್ಲವೂ ಕೃಷ್ಣಪ್ಪನಿಗೆ ಕಿರಿಕಿರಯನ್ನುಂಟುಮಾಡುವುದು. ತನ್ನ ಕ್ರಾಂತಿಕಾರೀ ವ್ಯಕ್ತಿತ್ವಕ್ಕೆ ಒಲಿದ ನಾಗೇಶನಂಥ ಯುವಕರು ತನ್ನ ಬಳಿ ಇದ್ದಾಗ ಪರಮಾಪ್ತನಂತೆ ಬಂದು ವೀರಣ್ಣ ನಡೆದುಕೊಳ್ಳುವುದು ಕೃಷ್ಣಪ್ಪನಿಗೆ ತುಂಬ ಮುಜುಗರವಾಗಿಬಿಡುವುದು.

‘ಹೇಗಿದೀರಿ ಗೌಡರೆ’ ಎನ್ನುತ್ತ ವೀರಣ್ಣ ಒಳಗೆ ಬಂದು ‘ದಿನೇ ದಿನೇ ಇಂಪ್ರೂವ್‌ಆಗ್ತಿದೀರಿ ನಮ್ಮ ದೇಶದ ಪುಣ್ಯ’ ಎಂದು ಕುರ್ಚಿಯನ್ನೆಳೆದು ಕೂತ. ತನ್ನ ದೇಹಸ್ಥಿತಿ ಬಗ್ಗೆ ಬಂದವರೆಲ್ಲ ಸಾಮಾನ್ಯವಾಗಿ ಸುಳ್ಳನ್ನೇ ಹೇಳುತ್ತಿದ್ದರು. ಕೃಷ್ಣಪ್ಪ ಇಂಥ ಔಪಚಾರಿಕ ಮಾತಿಗೆ ಉತ್ತರ ಕೊಡುವುದಿಲ್ಲ.

‘ಸುಮ್ಮನೇ ನೋಡಿ ಹೋಗೋಣ ಅಂತ ಬಂದೆ ಗೌಡರೆ, ಇವತ್ತು ಮಧ್ಯಾಹ್ನ ದೆಹಲೀಂದ ಒಬ್ಬರು ಸ್ಪೆಷಲಿಸ್ಟ್ ಬಂದಿದ್ದಾರೆ – ಅವರನ್ನ ಕರಕೊಂಡು ಬಂದು ನಿಮ್ಮನ್ನ ತೋರಿಸ್ತಿದೀನಿ – ಎಕ್ಸ್‌ಪರ್ಟ್‌ಒಪೀನಿಯನ್‌ಗೆ. ಅಮ್ಮಾವರಿಗೆ ಕಷ್ಟವಾಗ್ತಿದೇಂತ ನಾಳೇಂದ ಒಬ್ಬಳು ನರ್ಸಮ್ಮ ಬಂದು ನಿಮ್ಮನ್ನ ನೋಡ್ಕಂಡು ಹೋಗ್ತಾರೆ ಈಗ ನಾನು ಹೋಗಲ?’

ವೀರಣ್ಣ ಎದ್ದು ನಿಂತು ಹೊರಟ. ರೂಮಿಂದ ಹೊರಗೆ ಹೋದವನು ಏನೋ ನೆನಸಿಕೊಂಡು ಹಿಂದಕ್ಕೆ ಬಂದ.

‘ಮರತೇ ಬಟ್ಟೆ ಗೌಡರೆ. ನಿಮಗೊಂದು ಕಾರು ಬೇಕೆ ಬೇಕು. ಅಮ್ಮಾವ್ರಿಗೆ ಮನೆಕೆಲಸ ಮುಗಿಸಿ ಬ್ಯಾಂಕಿಗೆ ಹೋಗಬೇಕು. ಅಸೆಂಬ್ಲಿ ಶುರುವಾದ ಮೇಲೆ ನಿಮ್ಮನ್ನ ಕರಕೊಂಡು ಹೋಗ್ಲಿಕ್ಕೆ ಬೇಕು. ಟ್ಯಾಕ್ಸಿಗೆ ತುಂಬ ಖರ್ಚಾಗತ್ತೆ, ನನ್ನ ಕಾರಿದೆ ಅನ್ನಿ. ಆದರೆ ಸಮಯಕ್ಕದು ಇರಬೇಕಲ್ಲ? ಆದ್ರಿಂದ ಈ ಫಾರಂಗೆ ಒಂದು ಸೈನ್‌ಮಾಡಿ. ನಿಮಗೊಂದು ಫಿಯಟ್ಟನ್ನ ಸರ್ಕಾರ ಕೂಡ್ಲೆ ಮಂಜೂರು ಮಾಡಬೇಕು. ಎಂ. ಎಲ್‌. ಎ. ಆಗಿ ನಿಮ್ಮ ಹಕ್ಕು ಅದು . . . . . . . .’

ವೀರಣ್ಣ ಭರ್ತಿ ಮಾಡಿದ್ದ ಅಪ್ಲಿಕೇಶನ್ನನ್ನು ಪೆನ್ನನ್ನು ರೆಡಿಮಾಡಿಕೊಂಡು ಕೃಷ್ಣಪ್ಪನ ಸಹಿ ತೆಗೆದುಕೊಳ್ಳಲು ಅವನ ಮಂಚದ ಮೇಲ್ಭಾಗವನ್ನು ಎತ್ತಲು ಹೋದ.

‘ಬೇಡ ವೀರಣ್ಣನೋರೆ. ಕಾರು ತಗೊಳ್ಳುವಷ್ಟು ದುಡ್ಡು ನನ್ನ ಹತ್ರ ಇಲ್ಲ.’

‘ಅಯ್ಯೋ ದುಡ್ಡು ದುಡ್ಡು. ಯಾಕೆ ಯಾವಾಗ್ಲೂ ದುಡ್ಡಿನ ವಿಷ್ಯ ಮಾತಾಡ್ತೀರಿ? ಅದನ್ನ ನನಗೆ ಬಿಡಿ.’

‘ಅದೆಲ್ಲ ಸಾಧ್ಯವಿಲ್ಲ. ಸಾಲ ಮಾಡೋಕೆ ನನಗೆ ಇಷ್ಟವಿಲ್ಲ.’

‘ಬ್ಯಾಡ. ಸಾಲ ಮಾಡೋದು ಬ್ಯಾಡ. ನಿಮ್ಮ ಕಾರನ್ನ ನಾನೇ ಕೊಂಡಿಟ್ಟುಕೋತೇನೆ. ನನ್ನ ಮಗನೂ ಒಂದು ಫಿಯಟ್‌ಬೇಕೂಂತ ಸತಾಯಿಸ್ತ ಇದಾನೆ. ಅಷ್ಟುಪಕಾರ ನೀವು ಮಾಡಿದ್ದಕ್ಕೆ ನಾನು ಬೇಕಾದಾಗ ನಿಮಗೆ ಉಪಯೋಗಿಸಿಕೊಳ್ಳಕ್ಕೆ ಕಾರನ್ನ ಕೊಡಬಹುದಲ್ಲ. . . . .’

ನಾಗೇಶ ರೂಮಿಂದ ಎದ್ದು ಹೋದ. ತನ್ನ ಮನಸ್ಸು ಈ ವೀರಣ್ಣನ ಉಪಕಾರಕ್ಕೆ ಕೃತಜ್ಞತೆಯಲ್ಲಿ ದುರ್ಬಲವಾಗೋದನ್ನ ಅವನು ಗಮನಿಸಿದ್ದಾನೆ. ತನಗೆ ಸುಲಭವಾಗಲೆಂದು ಅವನು ಹೊರಗೆ ಹೋಗಿದ್ದಾನೆ.

ಕೃಷ್ಣಪ್ಪ ಬೇಡವೇ ಬೇಡ ಎಂದು ತಲೆಯಲ್ಲಾಡಿಸುತ್ತ ವೀರಣ್ಣನಿಗೆ ಹೇಳಿದ.

‘ಹೋಗಿಲಿ ನಿಮಗೆ ಬೇಡ, ಆದರೆ ನನಗೊಂದು ಉಪಕಾರ ಮಾಡಬಹುದಲ್ಲ ನೀವು?’

ಲಕ್ಷಾಧೀಶನಾದ ವೀರಣ್ಣನಿಗೆ ಹತ್ತೋ ಹನ್ನೆರಡೊ ಸಾವಿರ ಹೆಚ್ಚು ಕೊಟ್ಟು ಒಂದು ಫಿಯಟನ್ನ ಕೊಳ್ಳುವುದು ಕಷ್ಟವೆ? ಅಷ್ಟಕ್ಕಾಗಿ ಅವನು ತನಗೆ ಕೈಯೊಡ್ಡುವ ಮನುಷ್ಯನೆ? ಆದರೂ ಉಪಕಾರ ಮಾಡಿ ಎನ್ನುವ ರೀತಿಯಲ್ಲಿ ಬೇಡುತ್ತಿದ್ದಾನೆ ಎಂದು ಕೃಷ್ಣಪ್ಪ, ಮೃದುವಾಗಿ, ಫಾರಂಗೆ ಸೈನ್‌ಮಾಡಿದ. ವೀರಣ್ಣ ಹೊರಟುಹೋದ ಮೆಲೆ ನಾಗೇಶ ಒಳಗೆ ಬಂದ.

‘ಇದೂ ಕೂಡ ಕರೆಪ್ಷನ್‌ಕಣೋ ನಾಗೇಶ. ವೀರಣ್ಣ ಹತ್ತು ಸಾವಿರವಾದ್ರೂ ಈ ಕಾರಿಂದ ಲಾಭ ಮಾಡಿಕೋತಿದಾನೆ. ನನಗೋಸ್ಕರ ಕೊಳ್ತಿದೀನಿ ಅಂತಾನೆ. ನಿಜವಿದ್ರೂ ಇರಬಹುದು. . . . . . . .’

‘ಬಿಡಿ ಗೌಡರೆ. ಆ ಕಾರೇನು ಅವನಿಗೆ ದೊಡ್ಡದ? ನಿಮ್ಮ ಅಗತ್ಯಕ್ಕೇಂತ ಕೊಳ್ತಿದಾನೆ. ಅಂಥವರು ಮಾಡಬೇಕಾದ ಡ್ಯೂಟಿ ಅದು.’

ನಾಗೇಶನ ಮಾತಿನಿಂದ ಕೃಷ್ಣಪ್ಪನಿಗೆ ಸಮಾಧಾನವಾಯಿತು. ಆದ್ದರಿಂದಲೇ ಕಟುವಾಗಿ ಮಾತಾಡುವುದು ಅವನಿಗೆ ಸುಲಭವಾಯಿತು.

‘ನಿಂಗಿನ್ನೂ ಅನುಭವ ಸಾಲದು ನಾಗೇಶ. ನಾನು ಮೆತ್ತಗಾಗ್ತ ಆಗ್ತ ಬಂದಿದೀನಿ. ಒಳಗಿಂದ ಕೊಳೀತ ಇದೀನಿ. ಹತ್ತು ವರ್ಷದ ಕೆಳಗೆ ಇಂಥವರ ನೆರಳೂ ನನ್ನ ಹತ್ರ ಸುಳೀತ ಇರಲಿಲ್ಲ.’

ಈ ಮಾತಿಂದ ನಾಗೇಶನ ಮೆಚ್ಚುಗೆ ಇನ್ನಷ್ಟು ಹೆಚ್ಚಿದ್ದು ಕಂಡು ತನ್ನ ಬಗ್ಗೆ ಹೇಸಿಗೆ ಪಡುತ್ತ ಕೃಷ್ಣಪ್ಪ ಕಣ್ಣು ಮುಚ್ಚಿ –

‘ನನ್ನ ವೀಲ್‌ಚೇರಿನ ಮೇಲೆ ಕೂರಿಸ್ತಿಯಾ ನಾಗೇಶ. ಹೊರಗ್ಯಾರೋ ಇದಾರೆ ಅವರನ್ನೂ ಕರಕೊ ಸಹಾಯಕ್ಕೆ’ ಎಂದು.

***

ಅಕ್ಟೋಬರ್ ತಿಂಗಳಿನ ಹವೆ ಬೆಂಗಳೂರಿನಲ್ಲಿ ಹಿತವಾಗಿತ್ತು. ಸಿಮೆಂಟಿನ ಅಂಗಳದ ಬಿಸಿಲಲ್ಲಿ ಬರಿದಾದ ಕಾಲನ್ನೂ ಕೈಗಳನ್ನೂ ಕಾಯಿಸಿಕೊಳ್ಳುತ್ತ ಅವುಗಳಲ್ಲಿ ರಕ್ತ ಹರಿಯುವುದನ್ನು ಕಲ್ಪನೆಯಲ್ಲಿ ಅನುಭವಿಸಲು ಯತ್ನಿಸುತ್ತ ಕೃಷ್ಣಪ್ಪ ಕೂತ.

ವಾರಂಗಲ್‌ನಿಂದ ಹಳ್ಳಿಗೆ ಹಿಂದಕ್ಕೆ ಬಂದ ಮೇಲೆ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಮಾವನಿಂದ ತನ್ನ ತಂದೆಗೆ ಸೇರಿದ್ದ ಗದ್ದೆಗಳನ್ನು ಬಿಡಿಸಿಕೊಂಡು ತಾಯಿಯ ಜೊತೆ ಸಂಸಾರ ಹೂಡಿದ್ದ. ಕೊಟ್ಟಿಗೆಯಲ್ಲಿ ಹಾಲು ಕರೆಯುವ ಎರಡು ದನಗಳಿದ್ದುವು. ಹೊತ್ತಾರೆ ಎದ್ದು ಕೃಷ್ಣಪ್ಪನೇ ಹಾಲು ಕರೆಯುವುದು. ಈಗ ಜೀವವಿಲ್ಲದಂತಿರುವ ಬೆರಳುಗಳು ಆಗ ದನದ ಮೊಲೆಗಳನ್ನು ಪುಸಲಾಯಿಸಿ ಹಾಲಿಳಿಸಿಕೊಂಡು, ಮೇಲಿನಿಂದ ಕೆಳಕ್ಕೆ ಎರಡೂ ಕೈಗಳಲ್ಲೂ ಎರಡು ಮೊಲೆಗಳನ್ನೂ ಲಯಬದ್ಧವಾಗಿ ಒತ್ತಾಯಪೂರ್ವಕವಾಗಿ, ಆದರೆ ಮೃದುವಾಗಿ ಜಗ್ಗುತ್ತಿದ್ದುದು, ಮೊದಮೊದಲು ಕೈ ಬೇಗ ಬತ್ತುತ್ತಿತ್ತು. ಕ್ರಮೇಣ ಕಪ್ಪು ಬಿಳಿ ಚುಕ್ಕೆಗಳ ಕಾವೇರಿ ಹಿಂಗಾಲನ್ನು ಅಗಲಿಸಿ ನಿಂತು ತನ್ನ ಕೆಚ್ಚಲಿನ ಭಾರ ಕೃಷ್ಣಪ್ಪನ ಲಯಬದ್ಧವಾದ ಎಳೆತಕ್ಕೆ ಧಾರೆ ಧಾರೆ ಇಳಿಯುವುದನ್ನು ಸುಖಿಸುತ್ತ ದೀರ್ಘವಾಗಿ ಉಸಿರಾಡುತ್ತಿತ್ತು. ಒತ್ತುವಾಗ ಕ್ರಮೇಣ ಮೃದುವಾಗುತ್ತಾ ಹಲ್ಲಿನಿಂದ ಸೆಟೆದೂ ತರಿತರಿಯಾಗಿಯೂ ಇರುತ್ತಿದ್ದ ಕೆಚ್ಚಲು. ತಾಯಿ ಕಾಯಿಸಿಕೊಟ್ಟ ಹಾಲು ಕುಡಿದು ಕೃಷ್ಣಪ್ಪ ಗದ್ದೆಗೆ ಹೋಗುವನು. ಬೇಸಗೆಯಲ್ಲಿ ಬಾವಿ ಬತ್ತಿ ಕಾಲು ಮುಳುಗುವಷ್ಟು ಮಾತ್ರ ನೀರಿದ್ದಾಗ ಬಾವಿಗೆ ಇಳಿಯುವನು. ಕೆಸರನ್ನು ಬಾಚಿ ಬಾಚಿ ಬಕೆಟ್ಟಿನಲ್ಲಿ ತುಂಬಿದರೆ ಮೇಲಿನಿಂದ ಶೇಷಪ್ಪ ಹಗ್ಗದಲ್ಲದನ್ನು ಎತ್ತಿಕೊಳ್ಳುವನು. ಉಸಿರುಕಟ್ಟಿದ ಚಿಲುಮೆಗಳನ್ನು ಮುಟ್ಟಿ ಎಬ್ಬಿಸಲು ಕೈಗಳು ಕೆಸರು ಬಾಚುತ್ತ ಬಾಚುತ್ತ ಹೊತೊರೆಯುವುವು. ಮೊರಿಗೆಯಿಂದ ಹೀಗೆ ಕೆಸರು ನೀರು ಎತ್ತುವಾಗ ತಣ್ಣನೆಯ ನೀರಿನ ಚಿಲುಮೆ ಥಟ್ಟನೆ ಪುಟಿದು ಬೆರಳ ತುದಿಗಳಿಗೆ ತಾಕಿ ಇಡೀ ದೇಹವನ್ನು ರೋಮಾಂಚಗೊಳಿಸುವುದು.

‘ಯಾಕ್ರೋ ಈ ಕಲ್ಕುಟಕನ ಪೂಜೆ ಮಾಡ್ಕೊಂಡು ಮಂಕಾಗಿ ಕೂತಿದೀರಿ. ಅದೊಂದು ಕಲ್ಲು ಅಲ್ವ? ಎತ್ತಿ ಬಿಸಾಕಿ, ನಿಮ್ಮನ್ನು ಕಾಡೋ ದೆವ್ವ ಏಜೆಂಟ್‌ನರಸಿಂಹ ಭಟ್ಟ. ನೀವು ಗೆಯ್ದಿದ್ದನೆಲ್ಲ ಬಂದು ತಗೊಂಡು ಹೋಗ್ತಾನೆ.’

ಕೃಷ್ಣಪ್ಪ ತನ್ನ ಸುತ್ತಲಿನ ರೈತರಿಗೆ ಹೇಳುವನು. ಇದು ಜೋಯಿಸರ ಕಿವಿ ಮುಟ್ಟುವುದು.

‘ಕಿಟ್ಟಪ್ಪ’ ಎಂದು ಬಾಲೆಲೆ ಕೇಳುವ ನೆಪದಲ್ಲಿ ಜೋಯಿಸರು ಬಂದು ಚಾವಡಿಯ ಮೆಲೆ ಕೂತು, ಕೃಷ್ಣಪ್ಪ ಕೊಟ್ಟ ಹಾಲು ಕುಡಿದು ಅದೂ ಇದೂ ಮಾತಾಡುತ್ತ, ‘ಏನೋ ಕಿಟ್ಟಪ್ಪ? ಕಲ್ಕುಟಕ ಬರೀ ಕಲ್ಲು, ಎಸೀರಿ ಅಂದಿಯಂತೆ ಹೌದ?’ ಎನ್ನುವರು.

ಜೋಯಿಸರ ಕೃಶವಾದ ಮೈಯನ್ನೂ, ಅವರ ಕುರುಚಲು ಬಿಳಿಗಡ್ಡ ದೊಡ್ಡ ಜುಟ್ಟುಗಳ ಮುಖದಲ್ಲಿ ಯಾವಾಗಲೂ ಸೌಮ್ಯವಾಗಿರುವ ಕಣ್ಣುಗಳನ್ನೂ ನೋಡುತ್ತ ಕೃಷ್ಣಪ್ಪ ನಿಧಾನವಾಗಿ ಹೇಳುವನು. ಜೋಯಿಸರು ಬಂದರೆಂದು ಎಲೆಯಡಿಕೆ ಮೆಲ್ಲುತ್ತ ತಾಯಿಯೂ ಚಾವಡಿಯಲ್ಲಿ ಕೂತಿರುವಳು.

‘ನೀವು ನರಸಿಂಹ ದೇವರ ಒಕ್ಕಲಾಗಿದ್ದಿರಿ ಅಲ್ವ? ಅದು ಹೇಗೆ ನಿಮ್ಮ ತೋಟ ಕಳಕೊಂಡಿರಿ ಹೇಳಿ, ಯಾರು ಅದಕ್ಕೆ ಕಾರಣ?’

‘ಇರೋದು ನಾನು ನನ್ನ ಹೆಂಡತಿ. ಒಂದಷ್ಟು ಪೆನ್‌ಶನ್‌ಸಿಗುತ್ತೆ. ನಿನ್ನ ಮಾವ ಮತ್ತೆ ನಾಲ್ಕೈದು ಗೌಡರ ಮನೇವ್ರು ಏನೋ ಜೋತಿಷ್ಯ ಹೇಳ್ತಾನಲ್ಲ, ಊರಲ್ಲೊಬ್ಬ ಬ್ರಾಹ್ಮಣ ಇರಲಿ ಅಂತ ಮನೇಗೆ ಬೇಕಾದ ಸೌದೆ, ಅಕ್ಕಿ, ತರಕಾರಿ, ಬಾಳೆಲೆ, ಹಣ್ಣು ಹಂಪಲು ಒದಗಿಸ್ತೀರಿ. ನಂಗೆ ಯಾಕೆ ತೋಟ ಬೇಕು ಹೇಳು?’.

‘ಸರಿ ಜೋಯಿಸ್ರೆ. ನರಸಿಂಹ ದೇವರ ಮಠದ ಏಜೆಂಟ್‌ಭಟ್ಟ ಇದಾನಲ್ಲ ಅವ ಅಲ್ವ ನಿಮ್ಮನ್ನ ತೋಟದಿಂದ ಬಿಡಿಸಿ ತನ್ನ ಸ್ವಂತ ಸಾಗುವಳಿಗೇಂತ ಇಟ್ಕೊಂಡದ್ದು?’

‘ಗೇಣಿ ಸಂದಾಯ ಆಗ್ಲಿಲ್ಲಾಂತ ಇಟ್ಕೊಂಡ ಸರಿ. ಅದನ್ನ ತಪ್ಪಿಸಕ್ಕಾಗತ್ತ?’

‘ಆಗತ್ತೆ ಜೋಯಿಸ್ರೆ’

‘ಈಗಿನ ಕಾನೂನುಗಳು ನನಗೆ ಗೊತ್ತಿಲ್ಲಪ್ಪ. ಆದರೆ ಕೋರ್ಟು ಮೆಟ್ಟಿಲು ಹತ್ತಿ ಉದ್ಧಾರವಾದವ್ರನ್ನ ನಾನು ಕಾಣೆ. ಹೋಗಲಿ ಬಿಡು. ನಾನು ಕೇಳಿದ ಪ್ರಶ್ನೆಗೂ ನಿನ್ನ ಈ ಪಾಟೀ ಸವಾಲಿಗೂ ಯಾಕೋ ನನಗೆ ಸಂಬಂಧಾನೇ ಹೊಳೀಲಿಲ್ಲ.’

‘ಸಂಬಂಧ ಇದೆ’

‘ಹಾಗಾದರೆ ಹೇಳು ಮಾರಾಯ. ಶಿಷ್ಯಾದಿಚ್ಛೇತ್‌ಪರಾಜಯಮ್‌ಅಂತಾರೆ.’

‘ಹೇಗೇಂದ್ರೆ ಜೋಯಿಸರೆ – ಈಗ ನೋಡಿ ಕಲ್ಕುಟಕನ್ನ ನಂಬಿಕೊಂಡು ಈ ನಮ್ಮ ಮೂರ್ಖ ಶೂದ್ರ ಜನ ಆ ನರಸಿಂಹ ಭಟ್ಟನಿಗೆ ಹೆದರ್ತಾರೆ. ತಮ್ಮ ಐಹಿಕ ಪಾಡಿನಲ್ಲಿ ಏನೂ ಮಾರ್ಪಾಟಾಗಲಿಕ್ಕೆ ಸಾಧ್ಯವಿಲ್ಲ ಅಂದುಕೋತಾರೆ. ಆ ಕುರಿ ಕೋಳೀ ತಿನ್ನೊ ಕಲ್ಕುಟಕನೇ ತಮ್ಮನ್ನ ಉದ್ಧಾರ ಮಾಡಬೇಕೂಂತ ತಿಳೀತಾರೆ.’

‘ನಿಮ್ಮ ಜನಾನೂ ನಿರಾಕಾರ ನಿರ್ಗುಣ ಬ್ರಹ್ಮನನ್ನು ಅರಿಯೋ ಮಟ್ಟಕ್ಕೆ ಬರಬೇಕೂಂತ ಅನ್ನೋದನ್ನ ನಾನೂ ಒಪ್ತೀನೋ ಕಿಟ್ಟಣ್ಣ. ಧರ್ಮಕರ್ಮಗಳ ಮುಖೇನ ಅವರು ಮೇಲಕ್ಕೆ ಬರಬೇಕೇ ವಿನಹ – ’

‘ಅದಲ್ಲ ನಾನು ಹೇಳ್ತಿರೋದು ಜೋಯಿಸ್ರೆ – ಕೇಳಿ, ನರಸಿಂಹಭಟ್ರನ್ನ ಎದುರಿಸಿ ಅವರು ತನ್ನ ಐಹಿಕ ಬದುಕನ್ನು ಊರ್ಜಿತಗೊಳಿಸಿಕೊಂಡರೆ ಕ್ರಮೇಣ ಈ ಕುರಿಕೋಳಿ ತಿನ್ನೊ ದೆವ್ವಗಳ ಪೂಜೇಂದ ಮುಕ್ತರಾಗ್ತಾರೆ. ಆದ್ರೆ ನರಸಿಂಹಭಟ್ಟನನ್ನ ಧಿಕ್ಕರಿಸಿ ನಡಕೊಳ್ಳೋಕೆ ಈ ಕಲ್ಕಟುಕನಲ್ಲಿರೋ ನಂಬಿಕೆ ಅಡ್ಡಬರತ್ತಲ್ಲ ಹೇಳಿ. ಆದ್ರಿಂದ ನಂಗೆ ಎದ್ದಿರೋ ಪ್ರಶ್ನೆ ಕಲ್ಕುಟಕನನ್ನ ಅವರು ಕಿತ್ತೆಸೆದು, ಅದ್ರಿಂದ ಬಂದ ಧೈರ್ಯದಿಂದ ನರಸಿಂಹ ಭಟ್ಟನ ಡೊಳ್ಳು ಹೊಟ್ಟೇನ ಕರಗಿಸಬೇಕೋ, ಅಥವಾ ಎರಡನೇದನ್ನ ಮೊದಲು ಮಾಡಿ ಕಲ್ಕುಟಕನ್ನ ಪೂಜಿಸೋ ಸ್ಥಿತೀಂದ ಮೇಲೇಳಬೇಕೋ. . . . . .’

ನರಸಿಂಹ ಭಟ್ಟನನ್ನ ಏಕವಚನದಲ್ಲಿ ತಾನು ಹೀಯಾಳಿಸದ್ದರಿಂದ ಬ್ರಾಹ್ಮಣರಾದ ಜೋಯಿಸರಿಗೆ ಖೇದವಾದದ್ದನ್ನ ಕೃಷ್ಣಪ್ಪ ಗಮನಿಸುತ್ತಾನೆ. ಜೋಯಿಸರೇ ಸ್ವತಃ ನರಸಿಂಹ ಭಟ್ಟನ ಲೋಭವನ್ನ ಬೇಸರದಿಂದ ಜರೆಯಹುತ್ತ ಮಠವೇ ಧರ್ಮದ ದಾರಿಬಿಟ್ಟ ಮೆಲೆ ಏನು ಗತಿಯೆಂದು ಕೃಷ್ಣಪ್ಪನ ಎದುರು ನಿಟ್ಟುಸಿರಿಟ್ಟಿದ್ದಿದೆ. ಮಠದ ಸ್ವಾಮಿ ಸೂಳೆಯನ್ನಿಟ್ಟುಕೊಂಡು, ವ್ಯವಹಾರವನ್ನು ತನ್ನ ತಮ್ಮನಾದ ಈ ಭಟ್ಟನ ಕೈಯಲ್ಲಿ ಕೊಟ್ಟು ಜೋಯಿಸರಂಥ ಧರ್ಮಭೀರುಗಳಿಗೆ ಅಸಹ್ಯವಾಗುವಂತೆ ಮಾಡಿದ್ದ. ಅಣ್ಣಾಜಿ ತನ್ನಲ್ಲಿ ಬಿತ್ತಿದ ವಿಚಾರಗಳನ್ನಾಗಲೀ, ಅಥವಾ ತಾನು ವಾರಂಗಲ್‌ಠಾಣೆಯಲ್ಲಿ ಕಂಡಿದ್ದ ನರಕವನ್ನಾಗಲೀ ಈ ಬ್ರಾಹ್ಮಣನೆದುರು ಹೇಳಿ ಅವರಿಗೆ ಮನದಟ್ಟು ಮಾಡುವುದು ಅಸಾಧ್ಯವೆಂದು ಕೃಷ್ಣಪ್ಪ ಕೈಬಿಟ್ಟಿದ್ದ. ಆದರೂ ಜೋಯಿಸರು ಮತ್ತು ಅವರ ಹೆಂಡತಿ ಕೃಷ್ಣಪ್ಪನಲ್ಲಿ ತನ್ನವರು ಎಂಬ ಭಾವನೆ ಹುಟ್ಟಿಸುವರು. ಹಳ್ಳಿಗೆ ಬಂದ ಪ್ರಾರಂಭದಲ್ಲಿ ಜೋಯಿಸರು ಚಳಿಯಲ್ಲಿ ಬರೀ ಪಂಚೆಯುಟ್ಟು ಧೋತ್ರ ಹೊದ್ದಿರುವುದನ್ನು ಕಂಡು ಕೃಷ್ಣಪ್ಪ ಅವರಿಗೊಂದು ಉಣ್ಣೆಯ ಶಾಲು ತಂದುಕೊಟ್ಟು ರುಕ್ಮೀಣಿಯಮ್ಮನ ಕಣ್ಣುಗಳಲ್ಲಿ ಬೆಳಕನ್ನೂ ನೀರನ್ನೂ ಉಕ್ಕುವಂತೆ ಮಾಡಿದ್ದ.

ಮಾಂಸ ತಿನ್ನದ್ದರಿಂದ ಕೃಷ್ಣಪ್ಪ ಜೋಯಸರಿಗೆ ಇನ್ನಷ್ಟು ಆತ್ಮೀಯನಾಗಿದ್ದ. ಈ ಲೋಕದಲ್ಲಿ ಈಗಲೂ ಮಳೆ ಬೆಳೆಯಾಗುತ್ತಿರುವುದು ಕೆಲವೋ ಕೆಲವು ಬ್ರಾಹ್ಮಣರಾದರೂ ತ್ರಿಕಾಲ ಸ್ನಾನ ಸಂಧ್ಯಾವಂದನೆ ಮಾಡುತ್ತಿರುವುದರಿಂದ ಎಂಬ ಜೋಯಿಸರ ತಿಳುವಳಿಕೆಯನ್ನು ಪ್ರೀತಿಯಿಂದ ಕೃಷ್ಣಪ್ಪ ಸಹಿಸಿಕೊಳ್ಳುವನು. ತನ್ನ ಜಪತಪಾದಿಗಳಿಂದ ಕೃಷ್ಣಪ್ಪ ಶ್ರೇಯೋವಂತನಾಗುತ್ತಿದ್ದಾನೆ ಎಂದು ಜೋಯಿಸರು ತಿಳಿದಿದ್ದಾರೆಂದು ಕೃಷ್ಣಪ್ಪನಿಗೆ ಗೊತ್ತು. ಅದನ್ನೂ ಅವನು ಸಹಿಸಿಕೊಳ್ಳುವನು. ಅವರ ಜಪತಪದ ಫಲವಾದ ಈ ತಾನು ನರಸಿಂಹ ಭಟ್ಟ ಎಷ್ಟೇ ಕೊಳಕನಾದರೂ ಅವನಿಗೆ ಪೂರ್ವಜನ್ಮದ ಪುಣ್ಯದಿಂದ ಲಭಿಸಿದ ಬ್ರಾಹ್ಮಣ್ಯಕ್ಕೆ ಚೂರು ಮರ್ಯಾದೆ ಕೊಡದೇ ಇರುವುದು ಜೋಯಿಸರಿಗೆ ಸಮಸ್ಯೆಯಾಗಿದೆ ಎಂದೂ ಅವನಿಗೆ ಗೊತ್ತಿದೆ.

ವಸೂಲಿಯ ಕಾಲ ಬಂತೆಂದರೆ ನರಸಿಂಹ ಭಟ್ಟ, ಅವನ ಕಡೆ ಅಮೀನ, ಅವನ ಶಾನುಭೋಗ ಹಳ್ಳಿಯ ರೈತರಿಗೆ ಸಿಂಹಸ್ವಪ್ನವಾಗಿ ಬಿಡುವರು. ಈ ಸಾರಿ ಒಂದು ಘಟನೆ ನಡೆಯಿತು. ಸಂದಾಯವಾಗಬೇಕಿದ್ದ ಗೇಣಿಯನ್ನು ಕೊಡಲಿಲ್ಲೆಂದು ಬೀರೇಗೌಡ ಎಂಬ ರೈತನ ಮನೆಯನ್ನು ನರಸಿಂಹಭಟ್ಟ ತನ್ನ ಜವಾನರ ಜೊತೆ ಸ್ವತಃ ನುಗ್ಗಿದ. ಬೀರೇಗೌಡನ ಮಗುವಿಗೆ ಜ್ವರ ಬಂದಿತ್ತು. ಅವನ ಹೆಂಡತಿ ಮಗುವಿಗೆಂದು ಕಂಚಿನ ಪಾತ್ರೆಯಲ್ಲಿ ಹಾಲನ್ನು ಕಾಯಿಸುತ್ತಿದ್ದಳು. ಒಳಗೆಲ್ಲೋ ಅಡಿಕೆಯನ್ನು ಬೀರೇಗೌಡ ಬಚ್ಚಿಟ್ಟಿದ್ದಾನೆ ಎಂಬ ಗುಮಾನಿಯಿಂದ ಒಳಗೆ ನುಗ್ಗಿದ ಭಟ್ಟನಿಗೆ ಬರಿದಾದ ಮನೆ ಕಂಡು ಕಡುಕೋಪ ಬಂತು. ಇನ್ನೆಲ್ಲೋ ಅಡಿಕೆಯನ್ನು ಈ ಗೌಡ ಸಾಗಿಸಿದ್ದಾನೆ ಎಂದು ಕಟಕಟನೆ ಹಲ್ಲು ಕಡಿಯುತ್ತ ಭಟ್ಟ ಒಳಗಿದ್ದುದನ್ನೆಲ್ಲ ಅಂಗಳಕ್ಕೆ ಎಸೆಯಲು ಜವಾನರಿಗೆ ಹೇಳಿ, ಗೌಡನ ಹೆಂಡತಿ ಕಾಲು ಹಿಡಿದುಕೊಂಡರೂ ಕರಗದೆ, ಒಲೆಯ ಮೇಲಿದ್ದ ಹಾಲನ್ನೂ ಎತ್ತಿಸಿ ಅಂಗಳದಲ್ಲಿ ಚೆಲ್ಲಿಸಿದ್ದ. ಈ ಘಟನೆ ಹಳ್ಳಿಯ ಜನರನ್ನು ಅವಾಗಕ್ಕಾಗಿಸಿತ್ತು. ಕಿವಿಯಲ್ಲಿ ಒಂಟಿ ತೊಟ್ಟು, ಹಣೆಗೆ ವಿಭೂತಿಯಿಟ್ಟು, ಕಚ್ಚೆ ಪಂಚೆಯ ಮೇಲೆ ಕರಿಯ ಸರ್ಜಕೋಟನ್ನು ಹಾಕಿಕೊಂಡು ಕೈಯಲ್ಲಿ ದೊಣ್ಣೆ ಹಿಡಿದು ನಿಂತ ಉಬ್ಬು ಹಲ್ಲಿನ ಕಡುಕಪ್ಪು ಬಣ್ಣದ ಈ ಭಟ್ಟ ಬೀರೇಗೌಡನಿಗೆ ಯಮನಂತೆ ಕಂಡಿದ್ದ. ಅವತ್ತು ಸಂಜೆಯೇ ಜ್ವರ ಬಂದಿದ್ದ ಮಗು ಸತ್ತಿತು ಬೇರೆ.

ವಾರಂಗಲ್‌ಠಾಣೆಯ ಹಿಂಸೆಯ ಬೇರುಗಳನ್ನು ತನ್ನ ಸುತ್ತುಮುತ್ತಲೆಲ್ಲ ಕಂಡಿದ್ದ ಕೃಷ್ಣಪ್ಪ ಬೀರೇಗೌಡನ ಮಗುವನ್ನು ಹೂಳಲು ತಾನೇ ಹೋದ. ಅಲ್ಲಿ ನೆರೆದಿದ್ದ ರೈತರಿಗೆ ಹೇಳಿದ: ಮಠದ ಭಟ್ಟ ಪ್ರತಿವರ್ಷ ಹೆಚ್ಚು ಹೆಚ್ಚು ಗೇಣಿಯನ್ನು ಪಡೆಯುತ್ತಿದ್ದಾನೆ. ಅವನು ಗೇಣಿ ಅಳೆಯಲು ತರುತ್ತಿರುವ ಕೊಳಗ ವರ್ಷೇ ವರ್ಷೇ ದೊಡ್ಡದಾಗುತ್ತ ಹೋಗಿದೆ. ಹಿಂದಿನ ಕೊಳಗದಲ್ಲಿ ಮಾತ್ರ ನೀವು ಗೇಣಿ ಅಳೆಯುತ್ತೀರೆಂದು ಹಠಮಾಡಿ. ಅವನು ಹಿಂಸೆ ಮಾಡಲು ಬರುತ್ತಾನೆ. ಮೊದಲೇ ನಿಮ್ಮ ಮನೆ ಹೆಂಗಸರಿಗೆ ಒಂದು ಪಾತ್ರೆಯಲ್ಲಷ್ಟು ಸಗಣಿ ನೀರನ್ನು ಬೆರಸಿ ಅದರಲ್ಲಿ ಪೊರಕೆಯನ್ನು ಅದ್ದಿಡಲು ಹೇಳಿ. ಭಟ್ಟ ಒಳನುಗ್ಗಿದರೆ ಪೊರಕೆಯಲ್ಲಿ ಅವನಿಗೆ ಹೊಡೆಯಿರಿ. ಬ್ರಾಹ್ಮಣ ಇದರಿಂದ ಕಂಗಾಲಾಗುತ್ತಾನೆ.

ಮಾರನೇ ದಿನವೇ ಒಬ್ಬ ಬಡಗೌಡನ ಮನೆಯಲ್ಲಿ ಭಟ್ಟನ ಬಿಳಿ ಅಂಗಿ ಸ‌ರ್ಜ್‌ಕೋಟಿನ ಮೇಲೆ ಸಗಣಿ ನೀರಲ್ಲದ್ದಿದ ಪೊರಕೆಯ ಪ್ರಕ್ಷಾಳನ ನಡೆಯಿತು. ಈ ಸುದ್ದಿ ತಾಲ್ಲೂಕಿನಲ್ಲೆಲ್ಲಾ ಹಬ್ಬಿತು. ಈ ಘಟನೆಯಿಂದ ಅನೇಕ ಬೆಳವಣಿಗೆಗಳಾದುವು.

ಪೋಲೀಸ್‌ಸಹಾಯ ಪಡೆದು ಭಟ್ಟ ಒಕ್ಕಲೆಬ್ಬಿಸಲು ಶುರುಮಾಡಿದ. ರೈತರು ಸಂಘಟಿತರಾಗಿ ತಮ್ಮ ಹೊಲದಲ್ಲಿ ಉಳಲು ಹೋದರು. ಅವರನ್ನು ಕಾನೂನಿನ ಪ್ರಕಾರ ಬಂಧಿಸಲಾಯಿತು. ಈ ಸುದ್ದಿ ಹರಡಿ ದೇಶದ ಅನೇಕ ಕಡೆಗಳಿಂದ ಸಮಾಜವಾದಿಗಳು ಬಂದು ಕೃಷ್ಣಪ್ಪನ ಹುಲಿಯೂರಲ್ಲಿ ದಸ್ತಗಿರಿಯಾಗತೊಡಗಿದರು. ಹುಲಿಯೂರು ಇಂಡಿಯಾದಲ್ಲೆಲ್ಲ ಈ ಘಟನೆಯಿಂದ ಕರ್ನಾಟಕದ ತೆಲಂಗಾಣವೆಂದು ಪ್ರಸಿದ್ಧವಾಯಿತು.

ರೈತರು ತಮ್ಮ ಹೋರಾಟದಲ್ಲಿ ಸಂಪೂರ್ಣ ಗೆಲ್ಲದಿದ್ದರೂ ಮಠ ಸ್ವಲ್ಪ ತಣ್ಣಗಾಯಿತು. ಕೊಳಗದ ಗಾತ್ರ ಹಿಗ್ಗುವುದು ನಿಂತು ಐದು ವರ್ಷಗಳ ಹಿಂದಿನ ತನ್ನ ಗಾತ್ರಕ್ಕೆ ಮರಳಿತು. ಈ ಘಟನೆ ಮೂಲಕ ರೈತರೆಲ್ಲರೂ ಸಂಘಟಿತರಾದರು. ಜನರ ಒತ್ತಾಯಕ್ಕೆ ಸಿಕ್ಕಿಬಿದ್ದು, ಕೃಷ್ಣಪ್ಪ ಚುನಾವಣೆಗೆ ನಿಂತು ಗೆದ್ದು ಬಂದ. ಇದು ಮೂರನೇ ಬಾರಿ ಅವನು ಅಸೆಂಬ್ಲಿಗೆ ಆಯ್ಕೆಯಾಗಿರುವುದು. ಇಷ್ಟಿಷ್ಟೇ ರೈತರ ಸಮಸ್ಯೆಗಳು ಬಗೆ ಹರಿಯುತ್ತ ಬಂದಿದ್ದರಲ್ಲಿ ಕೃಷ್ಣಪ್ಪನ ಪಾತ್ರ ಮಹತ್ತ್ವದ್ದೆಂದು ದೇಶದಲ್ಲಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಮೊದಲು ಬ್ರಾಹ್ಮಣರ ವಿರುದ್ಧವಿದ್ದ ಸರ್ಕಾರ ಇನಾಂದಾರಿಯನ್ನು ರದ್ದು ಮಾಡಿತು. ಆದರೆ ಜಮೀಂದಾರ ವರ್ಗವಾದ ಒಕ್ಕಲಿಗ ಲಿಂಗಾಯರು ಅಧಿಕಾರದಲ್ಲಿದ್ದುದರಿಂದ ಭೂ ಹಿಡುವಳಿಗೆ ಸೀಲಿಂಗ್‌ಹಾಕುವ ಹೋರಾಟ ಉಗ್ರವಾಗುತ್ತ ಹೋಗಬೇಕಾಯಿತು. ಉಳುವವನೇ ಹೊಲದೊಡೆಯ ಎಂಬ ಸ್ಲೋಗನನ್ನು ಮಾತಿನ ಮಟ್ಟದಲ್ಲಾದರೂ ಸರ್ಕಾರ ಈಗ ಒಪ್ಪಿಕೊಳ್ಳುತ್ತಿದೆ. ಆದರೆ ಎಲ್ಲಾ ಉಳುವವರೂ ಹೊಲದೊಡೆಯರಾಗಿಲ್ಲ. ಈಚೀಚೆಗೆ ಆದವರು ಉಳಿದವರು ಆಗುವುದನ್ನು ಇಷ್ಟಪಡುವುದಿಲ್ಲ.

ಮನುಷ್ಯನ ಸ್ವಾಭಿಮಾನ ಬೆಳೆಯಲು ಈ ಆಸ್ತಿಯ ಹೋರಾಟ ಅಗತ್ಯವೆಂದು ಅಣ್ಣಾಜಿ ಹೇಳಿದ್ದು ಕೃಷ್ಣಪ್ಪ ಗೌಡನ ಅನುಭವಕ್ಕೆ ಬಂದಿದೆ. ಆದರೆ ತಾನು ಮುಳುಗಿರುವ ರಾಜಕೀಯ ಹೋರಾಟ ಕ್ರಮೇಣವಾಗಿ ಮನುಷ್ಯನನ್ನು ಕ್ಷುಲ್ಲಕವಾದ್ದರಿಂದ ಬಿಡುಗಡೆ ಮಾಡುತ್ತೆಂಬುದರಲ್ಲಿ ಅವನಿಗಿನ್ನೂ ಅನುಮಾನ ಉಳಿದಿದೆ. ಮೂರು ಹೊತ್ತೂ ಜನರ ಮಧ್ಯವಿದ್ದು ಅವನ ಉಪದ್ವ್ಯಾಪಗಳನ್ನು ಕೇಳಿಸಿಕೊಳ್ಳುತ್ತಲೇ ಇರುವದರಿಂದ ಅವನಿಗೆ ಸುಸ್ತಾಗುತ್ತದೆ. ಒಂಟಿಯಾಗಿರಬೇಕೆಂಬ ಆಸೆ ಮೊಳೆಯುತ್ತದೆ. ಸದಾ ಹೋರಾಟದಲ್ಲಿ ಮಗ್ನವಾಗಿರುವ ತನಗೆ ಪ್ರತಿಕ್ಷಣವೂ ಎಲ್ಲೆಲ್ಲೋ ಸದಾ ಫಲಿಸುತ್ತಲೇ ಇರುವ ಜೀವನದ ಸಣ್ಣ ಖುಷಿಗಳು ಕಾಣದೇ ಹೋಗುತ್ತಿವೆ ಎಂದು ಆತಂಕವಾಗುತ್ತದೆ. ಅವನು ಬಾಡಿಗೆಗಿದ್ದ ಗಾಂಧೀ ಬಜಾರಿನ ಬಡಾವಣೆಯಲ್ಲಿ ಯಾವತ್ತಾದರೂ ಸಂಜೆ ಒಂಟಿಯಾಗಿರುವುದು ಸಾಧ್ಯವಾದಾಗ ಹೊರಗೆ ಕಾಂಪೌಂಡಿನಲ್ಲಿ ಕೂತು ನೋಡುತ್ತಾನೆ. ಉದ್ದೇಶರಹಿತ ಸಂಭ್ರಮದಲ್ಲಿ ಉದ್ದ ಲಂಗ ಉಟ್ಟ ಹುಡುಗಿಯರು ಓಡಾಡುವುದು ಕಂಡು ಅಸೂಯೆಯಾಗುತ್ತದೆ. ಜೀವನದಲ್ಲಿ ಮುಂದೆ ಬರುವ ಸಂದಿಗ್ಧಗಳು, ಮಧ್ಯಮವರ್ಗದ ತಾಯಿತಂದೆಯರ ಆತಂಕಗಳು ಅವರನ್ನು ಬಾಧಿಸುವಂತೆ ಕಾಣುವುದಿಲ್ಲ. ಜಡೆಗಳಿಗೆ ಮಲ್ಲಿಗೆ ಮುಡಿದು ಗುಂಪಾಗಿ ಗಲಿಬಿಲಿಮಾಡುತ್ತ ದೀಪಗಳ ಕೆಳಗೆ ಮರಗಳ ಕೆಳಗೆ ಅವರ ಒಯ್ಯಾರದ ಅರ್ಧ ತಾಸನ್ನು ಕೃಷ್ಣಪ್ಪ ಅಕ್ಕರೆಯಿಂದ ಗಮನಿಸುತ್ತಾನೆ. ಹುಡುಗರನ್ನು ಕಂಡರೆ ನಾಚುವ ಹುಡುಗಿಯರು ಹಲವರಾದರೆ, ಅವರನ್ನು ಚುಡಾಯಿಸುವವರೂ ಕೆಲವರು. ಕೃಷ್ಣಪ್ಪನನ್ನೆ ಅವನ ಜೊತೆ ಹುಡುಗಿಯರು ಆಫ್ರಿಕನ್‌ಪ್ರಿನ್ಸ್‌ಎನ್ನುತ್ತಿರಲಿಲ್ಲವೆ? ಆದರೆ ಯಾವತ್ತೂ ತಾನು ಮಾತ್ರ ಬಿಗಿ.

ಗೌರಿ ದೇಶಪಾಂಡೆ ಫಿಲಡೆಲ್ಪಿಯಾದಲ್ಲಿ ಏನು ಮಾಡುತ್ತಿರಬಹುದೆಂದು ಯೋಚಿಸುತ್ತಾನೆ. ಅವಳಿಂದ ಕಾಗದವಿಲ್ಲದೆ, ತಾನು ಬರೆಯದೆ ಬಹಳ ದಿನಗಳಾದವು. ಅವಳೂ ಈಚೆಗೆ ರಾಜಕೀಯದಲ್ಲಿ ಆಸಕ್ತಳಾಗಿದ್ದಾಳಂತೆ. ಅವಳ ಜೊತೆಗಾರ ಮಾಕ್ಸ್‌ವಾದಿ ಸೋಶಿಯಾಲಜಿಸ್ಟ್‌ಅಂತೆ. ಪಾರ್ಲಿಮೆಂಟರಿ ರಾಜಕೀಯದಿಂದ ಇಂಡಿಯಾಕ್ಕೆ ಸುಖವಿಲ್ಲವೆಂದು ಅವಳು ವಾದಿಸುತ್ತಾಳೆ. ಗೌರಿ ಹಿಂದೆ ಹೀಗಿರಲಿಲ್ಲ. ಈಗಿನ ನಿಲುವು ಅವಳು ಕಡ ಪಡೆದದ್ದೋ ಅಥವಾ ನಿಜವೋ ತಿಳಿಯುವುದಿಲ್ಲ. ಅಂತೂ ಅವಳನ್ನು ಮುದುವೆಯಾಗೆಂದು ನಾನು ಕೇಳಲೇ ಇಲ್ಲ ಎಂದು ನೋವಾಗುತ್ತದೆ. ತಾನು ಮುದುವೆಯಾಗೆಂದು ಕೇಳಿದ ಲೂಸಿನಾ ಅದನ್ನು ಗಂಭೀರವಾಗಿ ಮನಸ್ಸಿಗೆ ತೆಗೆದುಕೊಳ್ಳಲೇ ಇಲ್ಲ. ಆದರೆ ಈ ನೋವುಗಳೂ ಈಗ ತೀವ್ರವಾಗಿ ಉಳಿದಿಲ್ಲ. ಖಾಸಗಿ ವ್ಯಕ್ತಿಯಾಗಿ ತಾನು ಖಾಲಿಯಾಗುತ್ತ ಹೋಗುತ್ತಿದ್ದೇನೆಂದು ಭಯವಾಗುತ್ತದೆ. ಇಲ್ಲವಾದಲ್ಲಿ ನನಗೊಂದು ಒಳಬಾಳು ಇದೆ ಎಂಬುದನ್ನೂ ಚೂರು ಅರಿಯಲಾರದ ಸೀತೆಯನ್ನು ಮದುವೆ ಮಾಡಿಕೊಳ್ಳುತ್ತಿದ್ದೇನೆ ಎಂದು ಕಸಿವಿಸಿಯಾಗುತ್ತದೆ. ಗೋಪಾಲ ರೆಡ್ಡಿ ಸತ್ತ ಮೇಲೆ ಒಂಟಿಯಾಗಿರುವುದು ಅಸಾಧ್ಯವೆನ್ನಿಸಿ ಮದುವೆ ಆದದ್ದಲ್ಲವೆ? ಅವನ ಹಿತೈಷಿಗಳು ಊಟ ಉಪಚಾರಗಳನ್ನು ನೋಡಿಕೊಳ್ಳಬಲ್ಲ ಹೆಣ್ಣೆಂದು ಸೀತೆಯನ್ನು ಮದುವೆ ಮಾಡಿಕೊ ಎಂದಾಗ ಅಷ್ಟಕ್ಕೇ ಲಾಯಕ್ಕಾದವಳನ್ನು ಮಾಡಿಕೊಳ್ಳುವುದನ್ನು ಅವನು ಕೂಡ ಬಯಸಿದ್ದ. ಅಂದರೆ ಹೆಣ್ಣಿನ ಸಂಗದಲ್ಲಿ ತೀವ್ರತೆಗೆ ಹೆದರಿ ಸೀತೆಯಂಥವಳನ್ನು ಮದುವೆಯಾಗಿ, ಆಮೇಲೆ ತೀವ್ರತೆ ಬೇಕೆಂದು ಬಯಸುವ ತನ್ನ ವ್ಯಕ್ತಿತ್ವದಲ್ಲಿ ಎಲ್ಲೋ ಕೊರೆಯಿರಲೇಬೇಕು. ಪ್ರಾಯಶಃ ಅಣ್ಣಾಜಿ ಹೇಳಿದಂತೆ ನಾನು ಪ್ಯೂಡಲ್‌, ಮುದವೆಯ ಅಗತ್ಯವಿಲ್ಲೆಂದು ಕಂಡದ್ದರಿಂದಲೇ ಲೂಸಿನಾ ಜೊತೆ ತೀವ್ರವಾದ ಪ್ರಣಯ ತನಗೆ ಸಾಧ್ಯವಾಗಿದ್ದಿರಬಹುದು. ಮದುವೆಯಲ್ಲಿ ತೊತ್ತನ್ನು ಬಯಸಿದೆನೇ ವಿನಹ ಸಖಿಯನ್ನಲ್ಲ, ಆದ್ದಿರಂದಲೇ ಬಹುಶಃ ಗೌರಿಯನ್ನು ಕಳಕೊಂಡೆ ಎಂದು ಸಿಗರೇಟ್‌ಹತ್ತಿಸುತ್ತಾನೆ. ಹುಡುಗರು ಹುಡುಗಿಯರೆಲ್ಲ ಬೀದಿಯಿಂದ ಮರೆಯಾಗುತ್ತಾರೆ. ಪಕ್ಕದ ಮನೆಯಲ್ಲಿ ಮಗು ಮಗ್ಗಿ ಕಲಿಯುತ್ತಿದೆ. ಒಳಗೆ ಸೀತೆ ಏನೋ ಪರಚಿಕೊಳ್ಳುತ್ತಿದ್ದಾಳೆ, ಗಂಡ ಒಂಟಿಯಾಗಿ ಸಿಗೋದೇ ದುರ್ಲಭವಾದ್ದರಿಂದ ಸಿಕ್ಕಿದ ಈ ಸಮಯದಲ್ಲಿ ತನ್ನ ಸಿಟ್ಟನ್ನೆಲ್ಲ ಅವನ ಕಿವಿಗೆ ತಲ್ಪಿಸುತ್ತಿದ್ದಾಳೆ. ಕೃಷ್ಣಪ್ಪ ಒಳಗೆ ಹೋಗಿ ಪ್ರತಿ ಸಂಜೆ ತಾನು ಕುಡಿಯುವ ಕ್ವಾರ್ಟರ್‌ವ್ಹಿಸ್ಕಿಯನ್ನು ಎದುರಿಗಿಟ್ಟುಕೊಂಡು ಮೇಜಿನ ಎದುರು ಕೂರುತ್ತಾನೆ.

ಇವತ್ತಾದ್ದು ನಾಳೆ ನೆನಪಿರುವುದಿಲ್ಲ. ದಿನಗಳ ಮೇಲೆ ದಿನಗಳು ಉರುಳುತ್ತವೆ. ಅಸೆಂಬ್ಲಿಯಲ್ಲಿ ಉಗ್ರಭಾಷಣ, ಹೊರಗೆ ಉಗ್ರಭಾಷಣ, ಅದರ ವಿರುದ್ಧ ಇದರ ವಿರುದ್ಧ ಸಹಿ, ಇದನ್ನು ಸಮರ್ಥಿಸಿ ಸಹಿ – ತೇಯುತ್ತಾ ಹೋಗುತ್ತಾನೆ. ಈ ಮಧ್ಯೆ ಕೃಷ್ಣಪ್ಪನಿಗೆ ಆಗರ್ಭ ಶ್ರೀಮಂತನೊಬ್ಬ ಸ್ನೇಹಿತನಾಗಿದ್ದ. ಕೋಲಾರದ ಕಡೆಯಿಂದ ಆಯ್ಕೆಯಾದ ಈ ಗೋಪಾಲರೆಡ್ಡಿ ಶ್ರೀಮಂತನಾದರೂ ಮಾಕ್ಸ್‌ವಾದಿ. ಶುಭ್ರವಾದ ಬಿಳಿಪಂಚೆಯನ್ನು ಕಚ್ಚೆಹಾಕಿ ಉಟ್ಟು, ತೆಳುವಾದ ಜುಬ್ಬ ತೊಟ್ಟು ಬೆನ್ಸ್‌ಕಾರಲ್ಲಿ ಓಡಾಡಿಕೊಂಡಿದ್ದ ಸಪುರ ಮೈ ನೀಳವಾದ ಮುಖಗಳ ಈ ಮಾರ್ಕ್ಸ್‌‌ವಾದಿ ತನ್ನ ವರ್ಗದ ನಾಶವನ್ನು ಬಯಸುವ ಉತ್ಕಟತೆಗೆ ಕೃಷ್ಣಪ್ಪ ಮಾರುಹೋಗಿದ್ದ. ಗೋಪಾಲರೆಡ್ಡಿ ಒಮ್ಮೆ ತನ್ನ ಸಂಗಡ ಜೈಲಿನಲ್ಲಿದ್ದಾಗ ಅವನ ಲವಲವಿಕೆ ಕಷ್ಟಸಹಿಷ್ಣುತೆ ಗಮನಿಸಿ ಚಕಿತನಾಗಿದ್ದ. ಹಣ, ಆಸ್ತಿ, ಸ್ಥಾನಗಳನ್ನು ಅಸಡ್ಡೆಯಿಂದ ಕಾಣುವ ಗೋಪಾಲರೆಡ್ಡಿ ಸಿನಿಮಾ, ಸಂಗೀತ, ಸಾಹಿತ್ಯ ಎಲ್ಲದರಲ್ಲೂ ಅತ್ಯುತ್ಕೃಷ್ಟವಾದದ್ದನ್ನು ಬೆನ್ನು ಹತ್ತಿದವ. ಕಲ್ಕತ್ತದಲ್ಲಿ ಆಲಿ ಅಕ್ಬರನ ಕಛೇರಿಯಿದೆ ಎಂದು ಪೇಪರಿನಲ್ಲಿ ಓದಿ ಕೃಷ್ಣಪ್ಪನನ್ನು ವಿಮಾನದಲ್ಲಿ ಕಲ್ಕತ್ತೆಗೆ ಕರೆದುಕೊಂಡು ಹೋದಂಥ ಹುಚ್ಚು ಅವನದು. ಬೊಂಬಾಯಿಯ ತಾಜ್‌ನಲ್ಲಿರುವಷ್ಟೇ ಸಲೀಸಾಗಿ ಸುಖವಾಗಿ ಗುಡಿಸಲಲ್ಲೂ, ಜೈಲಲ್ಲೂ ಅವನು ಇರಬಲ್ಲ, ಹಚ್ಚಿಕೊಳ್ಳದಂತೆ ಭೋಗಿಸಬಲ್ಲ. ಬೈನೆ ಮರದ ಹೆಂಡ ಮೆಣಸಿನಕಾಯಿ ಬೋಂಡಗಳು ಸ್ಕಾಚ್‌ಮತ್ತು ಚೀಸಿನಷ್ಟೇ ಅವನಿಗೆ ಪ್ರಿಯ. ಅಪಾರವಾದ ಐಶ್ವರ್ಯ ಬದುಕಿಗಷ್ಟು ಮೆರಗು ಮಾತ್ರ ತರುತ್ತದೆ ಎಂಬ ಕೃಷ್ಣಪ್ಪನ ಅಭಿಪ್ರಾಯ ಗೋಪಾಲರೆಡ್ಡಿಯ ಸಹವಾಸದಲ್ಲಿ ಬದಲಾಯ್ತು – ಐಶ್ವರ್ಯವಿದ್ದಲ್ಲಿ ಜೀವನದ ಗುಣಲಕ್ಷಣಗಳೇ ಭಿನ್ನವಾಗಿರುತ್ತವೆ ಎಂಬುದನ್ನು ಕಂಡ. ಕೃಷ್ಣಪ್ಪನ ಚುನಾವಣೆಗೆ ಹುಲಿಯೂರಿಗೆ ಬಂದು ಯುವ ರೈತನ ಚಾವಡಿಯಲ್ಲಾದರೂ ಮಲಗಿ, ಬೆಳಿಗ್ಗೆ ಬಾಳೆಲೆ ಮೇಲೆ ಬಡಿಸಿದ ಗಂಜಿಗೆ ಮಾವಿನ ಮಿಡಿ ಉಪ್ಪಿನಕಾಯನ್ನು ಬಡಿಸಿಕೊಂಡು ಅತ್ಯಂತ ರುಚಿಯಿಂದ ತಿನ್ನಬಲ್ಲ ಕೌಶಲ ಅವನದು. ಹುಲ್ಲಿನ ಚಾಪೆ, ಹಾಳೆಯ ಟೊಪ್ಪಿ, ಗೊರಬು, ಹಲಸಿನ ಹಣ್ಣಿನ ಕಡಬು, ಬಿದಿರಿನ ಉಣಗೋಲು – ದೈನಿಕದಲ್ಲಿ ನಿಕೃಷ್ಟವೆನ್ನಿಸಿದ್ದೆಲ್ಲವೂ ಅವನ ನಿರ್ಲಿಪ್ತ ಮೆಚ್ಚುಗೆಯಲ್ಲಿ ಹಾಡುತ್ತಿದ್ದುವು – ಅವನು ಭೋಗಿಸುವ ಹೆಣ್ಣಿನ ದೇಹ ಹಾಡಿದಂತೆ.

ಗೋಪಾಲರೆಡ್ಡಿಯ ಊರಿಗೇ ಹೋದಾಗ ಮಾತ್ರ ಕೃಷ್ಣಪ್ಪ ತನ್ನ ಗೆಳೆಯನ ಮಿತಿಯನ್ನು ಕಂಡದ್ದು. ಅಲ್ಲಿ ಅವನು ಧಣಿ. ಅವನ ಅಪ್ಪ ಟೈರೆಂಟ್‌. ಜವಾನರು ಬೆನ್ನು ತೋರಿಸಿ ನಡೆಯುವುದಿಲ್ಲ. ಅರಮನೆಯಂಥ ಅವನ ಮನೆಯಲ್ಲಿ ಮಕ್ಕಳು ಅಳುವುದು ಕೇಳುವಿದಲ್ಲ. ಹೆಂಗಸರು ನಗುವುದು ಕೇಳುವಿದಿಲ್ಲ. ರೆಡ್ಡಿಯ ಅಪ್ಪ ನಿಂತಲ್ಲಿ ಕೂತಲ್ಲಿ ಎಲ್ಲವೂ ಸ್ತಬ್ಧವಾಗಿರುತ್ತಿತ್ತು. ಗೋಪಾಲರೆಡ್ಡಿ ತುಂಬ ಮುಜುಗರದಿಂದ ಕೃಷ್ಣಪ್ಪನನ್ನು ಒಂದು ದಿನ ಮಾತ್ರ ಅಲ್ಲಿರಿಸಿಕೊಂಡಿದ್ದ ಅಷ್ಟೆ. ತನ್ನ ಶ್ರೀಮಂತಿಕೆಯಿಂದ ಕೃಷ್ಣಪ್ಪ ಹೇಸಿದ್ದು ಕಂಡು ಗೋಪಾಲರೆಡ್ಡಿಗೆ ಅವನ ಮೇಲಿನ ಅಭಿಮಾನ ಹೆಚ್ಚಿತು. ಇಂಥದನ್ನು ರಕ್ಷಿಸಲೆಂದೇ ವಾರಂಗಲ್‌ನಲ್ಲಿ ಕಂಡಂಥ ಪೋಲೀಸ್‌ಠಾಣೆಗಳು ಇದ್ದಾವೆಂಬುದು ಗೋಪಾಲರೆಡ್ಡಿಗೂ ತಿಳಿಯದ ವಿಚಾರವೆ?

ಗೋಪಾಲರೆಡ್ಡಿಯ ವ್ಯಾಪಕವಾದ ಅಭಿಮಾನದಲ್ಲಿ ಕೃಷ್ಣಪ್ಪ ಸಡಿಲವಾದ, ಹಿಗ್ಗಿದ; ತೇಲಿದ. ಕುಡಿಯುವುದನ್ನು ಕಲಿತ. ಹುಡುಗಿಯರ ಜೊತೆ ಮಲಗಿದ. ದೇಹದ ಬೆವರಿನಂತೆ ವ್ಯಕ್ತವಾಗುತ್ತಿದ್ದ ಕೃಷ್ಣಪ್ಪನ ವ್ಯವಸ್ಥೆಯ ವಿರುದ್ಧದ ಕೋಪ, ಅದರ ಮೊದಲಿನ ತೀವ್ರತೆ, ಮಿತಿಗಳನ್ನು ಕಳೆದುಕೊಂಡು ಇಡಿಯಾಗಿ ಕಾಣಬಲ್ಲ ವಿಚಾರಗಳಾದವು. ಗೋಪಾರೆಡ್ಡಿ ಸದಾ ಕೃಷ್ಣಪ್ಪನ ವಿಪ್ಲವಕಾರಕ ಆರ್ತತೆಗೆ ತನ್ನ ಚುರುಕಾದ ವಿಚಾರವನ್ನೂ ಬೆಸೆಯುತ್ತಿದ್ದುದರಿಂದ, ಒಂದು ಇನ್ನೊಂದರಿಂದ ಕುಮ್ಮಕ್ಕು ಪಡೆದು ಬೆಳೆಯುತ್ತ ಹೋತ್ತಿದ್ದುದರಿಂದ ಹೆಣ್ಣು, ವ್ಹಿಸ್ಕಿ, ಸಂಗೀತ ಕಛೇರಿಗಳು, ವಿಮಾನ ಸಂಚಾರಗಳೂ ಕೃಷ್ಣಪ್ಪನನ್ನು ನೈತಿಕವಾಗಿ ಬಾಧಿಸಲಿಲ್ಲ. ಕ್ಷುಲ್ಲಕ ವಿಷಯಗಳಿಂದ ಅಬಾಧಿತನಾಗಿರುವುದು, ಹಣಕ್ಕಾಗಿ ಪರದಾಡುದಿರುವುದು, ನಿಷ್ಠುರವಾಗಿ ಮಾತಾಡುವುದು, ದೇಹವನ್ನು ಹೆಣ್ಣು ಊಟ ವ್ಹಿಸ್ಕಿಗಳಿಂದ ತಣಿಸಿಕೊಳ್ಳುವುದು, ಹಾತೊರೆಯದೆ ಬೇಕೆನ್ನಿಸಿದ್ದನ್ನ ಪಡೆಯುವುದು – ಎಲ್ಲವೂ ಒಟ್ಟಿಗೇ ಏಕಕಾಲದಲ್ಲೇ ಸಿಕ್ಕಿದ್ದರಿಂದ ಕೃಷ್ಣಪ್ಪ ತೇಲಿದ. ತಾನು ಅತ್ಯುನ್ನತ ಶಿಖರದಲ್ಲಿದ್ದೇನೆಂದು ಭಾವಿಸಿದ. ನಿನ್ನೆ ಯಾವ ಹುಡುಗಿಯ ಜೊತೆ ರಮಿಸಿದ್ದು ಎಂಬುದು ಇವತ್ತು ಮರೆಯುವುದೂ ಇತ್ತು. ಅಚ್ಚಳಿಯದೆ ಉಳಿದಿರುವುದೆಂದರೆ ಚಿರತೆಯ ಸೌಂದರ್ಯವನ್ನು ನೆನಪಿಗೆ ತರುವ ಲೂಸಿನಾ ಮಾತ್ರ. ಆಗೀಗ ವಾರಂಗಲ್‌ಠಾಣೆಯಲ್ಲಿ ಕಳೆದ ಹಗಲು ರಾತ್ರೆಗಳು ನೆನಾಪಾಗುವುದಿತ್ತು. ಆದರೆ ಜೀವನವನ್ನು ಕಳೆಗುಂದಿಸುವ ಕ್ಷುಲ್ಲಕ ವಿಷಯಗಳನ್ನು ಅಪಾರವಾದ ಐಶ್ವರ್ಯ ಮತ್ತು ಔದಾರ್ಯಗಳ ಸಹಾಯದಿಂದ ಸುಡಬಲ್ಲ ಕೌಶಲ ಗೋಪಾಲರೆಡ್ಡಿಗೆ ಸಾಧಿಸತ್ತಲ್ಲವೆ? ಆಸ್ತಿಪಸ್ತಿಗಳಿಂದ ಅಬಾಧಿತವಾದ ತನ್ನ ಕನಸಿನ ಭವಿಷ್ಯದ ಹೊಸ ಬದುಕು ಅದರ ದೈನಿಕ ಸ್ವರೂಪದಲ್ಲಿ ಹೀಗೆ ನಿರಂಬಳವಾಗಿತ್ತುದೆಂದು ಕೃಷ್ಣಪ್ಪ ಭಾವಿಸಿದ.

ಮಹೇಶ್ವರಯ್ಯ ಒಮ್ಮೆ ಬಂದವರು ಇಬ್ಬರನ್ನು ಒಟ್ಟಿಗೇ ಕಂಡು ಏನನ್ನೊ ನುಂಗಿಕೊಂಡಂತೆ ಅನ್ನಿಸಿತು. ಹೆಣ್ಣೆಂದರೆ ಲಂಪಟಪಡುವ ಅವರು ತಾನು ಪಡುತಿದ್ದ ಸುಖವನ್ನು ಜರೆದಿರಲಾರರು. ಹಾಗಾದರೆ ಮತ್ತೇನೆಂದು ಅವರನ್ನು ಪೀಡಿಸಲು, ‘ಕೃಷ್ಣಪ್ಪ ಇದು ಬಹಳ ಕಾಲ ಉಳಿಯಲ್ಲೊ – ನಿನಗೆ ಮತ್ತೆ ಅಶ್ವತ್ಥಮರದ ಕೆಳಗೆ ದನಗಳನ್ನು ಕಾಯುತ್ತ ಕೂರಬೇಕೆನ್ನಿಸುತ್ತೋ’ ಎಂದಿದ್ದರು. ಹೌದು ಅವರೆಂದಂತೆ ಇದು ಉಳಿಯಲಿಲ್ಲ. ಗೋಪಾಲರೆಡ್ಡಿ ಕ್ಯಾನ್ಸರ್ ಆಗಿ ಸತ್ರ. ಆಮೇಲೆ ಕೃಷ್ಣಪ್ಪ ಬಹಳ ದಿನ ಮಂಕಾಗಿದ್ದು ಹಿತೈಷಿಗಳ ಒತ್ತಾಯಕ್ಕೆ ಒಪ್ಪಿ ಸೀತೆಯನ್ನು ಮದುವೆಯಾದ್ದು.

ಗೋಪಾಲರೆಡ್ಡಿಯಿಂದ ಪಡೆದ ಸಖ್ಯ ಈಗ ಭ್ರಮೆಯೆನ್ನಿಸುತ್ತದೆ. ತನಗಿಂಗ ಹೆಚ್ಚು ಓದಿದ್ದ ಜ್ಞಾನಿ ಅವನು. ಒಳ್ಳೆಯ ಆಟಗಾರ. ಸಂಗೀತದಲ್ಲಿ ಸೂಕ್ಷ್ಮವಾದ ಅಭಿರುಚಿಯಿದ್ದವ. ಜೊತೆಗಿರುವ ಹೆಣ್ಣು ದುಡ್ಡು ಕೊಟ್ಟು ಪಡೆದವಳು ಎಂಬುದು ಹೆಣ್ಣಿಗೇ ಮರೆಯುವಂತೆ ಮಾಡಬಲ್ಲ ಕೌಶಲಿ. ಅವನ ಶ್ರೀಮಂತಿಕೆಗೆ ತಾನು ಅವಕ್ಕಾಗುವಂಥವನಲ್ಲೆಂದು ಗೊತ್ತಾದ್ದರಿಂದಲೇ ಅವನು ತನ್ನ ಸಖ್ಯ ಬಯಸಿದ್ದಿರಬೇಕು. ತನ್ನಂಥವನ ಸಾಕ್ಷಿಯಲ್ಲಿ ಅವನಿಗೆ ಹಣವನ್ನು ಯಃಕಶ್ಚಿತ್ ಆಗಿ ಕಂಡು ಸುಡುವುದರಲ್ಲಿ ತೀವ್ರವಾದ ಬಿಡುಗಡೆಯ ಸುಖ ಸಿಕ್ಕಿರಬೇಕು. ಸಖನಾಗಿದ್ದೂ ತನ್ನನ್ನು ಅವನು ಒಂದು ಬಗೆಯ ಆರಾಧನಾಭಾವದಿಂದ ಕಾಣುತ್ತಿದ್ದ. ತನ್ನ ಬಿಗಿಗಳು ಸಡಿಲವಾಗಲು ಅಂಥ ಕಣ್ಣುಗಳು ಅಗತ್ಯವಾಗಿದ್ದುವು. ಮಹೇಶ್ವರಯ್ಯ, ಅಣ್ಣಾಜಿ, ಗೌರಿಯರಂತೆಯೇ ಇವನೂ ತನ್ನಲ್ಲಿ ಏನೋ ದಿವ್ಯವಾದ್ದಿದೆ ಎಂದು ಕಂಡಿದ್ದ. ಒಳಗೇ ಉಜ್ಜಿ ತನ್ನಲ್ಲಿ ಉರಿಯುತ್ತಿದ್ದುದರಲ್ಲಿ ಅವನು ಮೈಕಾಯಿಸಿಕೊಂಡಿದ್ದ. ಅಮುಕುತ್ತಿದ್ದ ತನ್ನ ತೀವ್ರತೆಯ ಬಾಧೆಗಳನ್ನು ಅವನ ಸಖ್ಯದಲ್ಲಿ ಹಾಡುವಂತೆ ಮಾಡಿದ್ದ. ಇದರಿಂದ ಕೃಷ್ಣಪ್ಪನಿಗೆ ತನ್ನ ಒಳ ಬಾಳಿನಲ್ಲಿ ತನಗೇ ಹೊಮ್ಮುತ್ತಿದ್ದ ಚೊಗರಿನಂಥ ಒಂದು ವಿಶೇಷವಾದ ರುಚಿ – ಅದರ ಅಸಹನೀಯ ಉತ್ಕಟ ರುಚಿ – ಕಡಿಮೆಯಾಗುತ್ತ ಹೋಯಿತು. ಗೋಪಾಲರೆಡ್ಡಿ ಸತ್ತಿದ್ದೇ ತಾನು ತಬ್ಬಲಿಯಾದೆನೆನ್ನಿಸಿತು.

‘ನಾಗೇಶಾ’

ತನ್ನನ್ನು ಬಿಸಿಲಿನಲ್ಲಿ ಬಿಟ್ಟು ಒಳಗೆ ಕೂತಿದ್ದ ನಾಗೇಶ ಬಂದು ನಿಂತ.

‘ಒಳಗೆ ಹೋಗೋಣ ಬಿಸಿಲು ಹೆಚ್ಚಾಯ್ತು’

ನಾಗೇಶ ತಳ್ಳಿಕೊಂಡು ರೂಮಿಗೆ ಕರೆದುಕೊಂಡು ಹೋದ.

‘ಡ್ರಾನಲ್ಲಿ ಪರ್ಸಿದೆ ಕೊಡು’

ನಾಗೇಶ ಎತ್ತಿಕೊಟ್ಟ ಪರ್ಸಿನಿಂದ ಇನ್ನೂರು ರೂಪಾಯನ್ನು ತೆಗೆದು ಅವನಿಗೆ ಕೊಟ್ಟ. ನಾಗೇಶ ಅರ್ಥವಾಗದ ಕೃಷ್ಣಪ್ಪನ ಮುಖ ನೋಡಲು,

‘ನಿನ್ನ ಹತ್ತಿರ ಇನ್ನೊಂದು ಜತೆ ಬಟ್ಟೆ ಇರೋ ಹಾಗೆ ಕಾಣಿಸಿಲ್ಲ. ಹೊಲಿಸಕೋ’ ಎಂದ.

‘ಬೇಡ ಗೌಡರೆ’

‘ತಗಳ್ಳೊ. ನನ್ನ ಹತ್ತಿರ ಬಡಿವಾರ ಮಾಡಬೇಡ.’

‘ನಿಮ್ಮ ಪರ್ಸಲ್ಲಿ ಇಷ್ಟೇ ಇರೋದು.’

‘ನೋಡು ನಾಗೇಶ. ಬಲಗೈ ಇನ್ನೂ ಚಲಿಸ್ತ ಇದೆ. ಅದಕ್ಕೂ ಸ್ಟ್ರೋಕ್‌ಹೊಡಿಯೋ ಮುಂಚೆ. . . . . .’

ತಾನು ನಗುತ್ತ ಹೇಳಿದ ಈ ಮಾತಿನಿಂದ ನಾಗೇಶ ಖಿನ್ನನಾದ್ದು ಕಂಡು –

‘ಹುಚ್ಚಪ್ಪ – ನಿಂಗೊತ್ತಿಲ್ಲ. ನನ್ನ ಹೆಂಡತಿ ಇದಾಳಲ್ಲ, ಮಹಾ ಜಿಪುಣಿ, ನನ್ನ ಸಂಬಳದಲ್ಲಿ ಉಳಿಸೀ ಉಳಿಸೀ ಬ್ಯಾಂಕಲ್ಲಿ ಹತ್ತು ಸಾವಿರ ಕೂಡಿಟ್ಟಿದ್ದಾಳೆ. ತಗೋ ಈ ಹಣಾನ್ನ ನೀನು ಬಾಯಿ ಮುಚ್ಚಿಕೊಂಡು’ ಎಂದ.

ಕೃಷ್ಣಪ್ಪನಿಗೆ ನಾಗೇಶನ ಹಿನ್ನೆಲೆ ಗೊತ್ತಿತ್ತು. ಬಡ ಬ್ರಾಹ್ಮಣ ಕುಟುಂಬ. ಅಪ್ಪ ಸದಾ ವ್ಯಗ್ರನಾಗಿರುತ್ತಿದ್ದ ಗುಮಾಸ್ತ. ಅಣ್ಣನೊಬ್ಬ ಎಂಜಿನಿಯರ್. ಅವನ ಹೆಂಡತಿ ಜಿಪುಣಿಯಾದ್ದರಿಂದ ಅವನಿಂದಾಗುವ ಸಹಾಯ ಅಷ್ಟಕ್ಕಷ್ಟೇ. ಆರು ಮದುವೆಯಾಗದ ಅಕ್ಕತಂಗಿಯರು. ಮಗ ಅರ್ಧಕ್ಕೆ ಓದು ನಿಲ್ಲಿಸಿ, ಮೆರವಣಿಗೆ ಮಣ್ಣು ಮಸೀ ಅಂತ ರಾಜಕೀಯದಲ್ಲಿ ಕಾಲ ಕಳೀತಾನೇಂತ ತಾಯಿಗೆ ದುಗುಡ. ನಾಗೇಶ ಮಲಗೋದು ಪಾರ್ಟಿ ಆಫೀಸಲ್ಲಿ. ಉಣ್ಣೋದು ಅಲ್ಲಿ ಇಲ್ಲಿ. ಕಾಫಿಗೆ ಸಿಗರೇಟಿಗೆ ಕಾಸಾದರೆ ಸಾಕು ಅವನಿಗೆ. ಬರಲಿರುವ ಸಮತಾ ವ್ಯವಸ್ಥೇಲಿ ತನ್ನ ಪಾಡು ಸುಧಾರಿಸುತ್ತದೆ ಎಂದು ಅವನು ಕನಸು ಕಟ್ಟುತ್ತಾನೆ. ಕಾಲಹರಣ ಮಾಡೋದು ಅವನಿಗೆ ಒಗ್ಗಿಹೋಗಿದೆ. ಎಚ್‌. ಎಂ. ಟೀಲಿ ಕೆಲಸ ಕೊಡಿಸಲೇನಯ್ಯ ಎಂದು ಕೇಳಿದರೆ ಬೇಡವೆನ್ನುತ್ತಾನೆ. ಹಾಗೆ ಕೇಳಿದ್ದರಿಂದ ಅವಮಾನವಾಗಿ ಸಿಟ್ಟಾಗುತ್ತಾನೆ; ಎಲ್ಲರಂತೆ ಉದ್ಯೋಗಿಯಾಗಿ ಬದುಕೋದು ಕಳಪೇಂತ ಅವನ ಅಭಿಪ್ರಾಯ. ಅಂಥ ಪ್ರತಿಭಾಶಾಲಿಯೂ ಅಲ್ಲ. ಆದರೆ ಕೃಷ್ಣಪ್ಪನ ವ್ಯಕ್ತಿತ್ವದ ಪ್ರಭೆಗೆ ಮರುಳಾದ ಯುವಕರಲ್ಲಿ ಇವನೂ ಒಬ್ಬ. ತನ್ನ ರಾಜಕೀಯ ವಿಚಾರ, ಜೀವನ ಕ್ರಮ ಇಂಥ ಮೋಡಿಯಲ್ಲಿ ಹಲವು ಯುವಕರನ್ನು ಸಿಕ್ಕಿಸಿದೆ ಎಂದು ಕೃಷ್ಣಪ್ಪನಿಗೆ ಪಶ್ಚಾತ್ತಾಪವಾಗುತ್ತದೆ. ಇಂಥವರಿಗೆ ವಯಸ್ಸಾಗುವುದನ್ನು ನೆನೆದರೆ ಹೆದರಿಕೆಯಾಗುತ್ತದೆ.

‘ನಾಗೇಶ ನಿಂಗೊಂದು ಕಥೆ ಹೇಳ್ತೇನೆ’ ಎಂದು ಜೋಯಿಸರ ವಿಷಯ ಥಟ್ಟನೆ ನೆನಪಿಗೆ ಬಂದ ಕೃಷ್ಣಪ್ಪ ಶುರು ಮಾಡುತ್ತಾನೆ. ನಾಗೇಶ ನೋಟ್‌ಬುಕ್‌ಇಟ್ಟುಕೊಂಡು ಇವನ್ನೆಲ್ಲ ಗುರುತು ಮಾಡಿಕೊಳ್ಳುತ್ತ ಹೋಗುತ್ತಾನೆ.

ಹುಲಿಯೂರಿನ ರೈತರು ಪೊರಕೇನ್ನ ಸಗಣಿಯಲ್ಲದ್ದಿ ಭಟ್ಟನನ್ನು ಅಟ್ಟಲು ಶುರುಮಾಡಿದಾಗ ಪ್ರತಿದಿನ ಅವನು ಜನಿವಾರ ಬದಲಾಯಿಸಬೇಕಾಗಿ ಬಂತು. ಬ್ರಾಹ್ಮಣನ ಮೇಲೆ ಇಂಥ ಹಲ್ಲೆ ಮಾಡುವುದನ್ನು ತಾಳಲಾರದೆ ದುಃಖಿತರಾದ ಜೋಯಿಸರಿಗೆ, ‘ನೀವು ಮಾಡೋ ಜನಿವಾರ ಈಗ ಹೆಚ್ಚು ಮಾರಾಟವಾಗ್ತಾ ಇದೆಯಲ್ಲ – ನೀವು ಯಾಕೆ ದುಃಖ ಪಡಬೇಕು’ ಎಂದು ಗೇಲಿ ಮಾಡಬೇಕೆನ್ನಿಸಿದ್ದನ್ನು ಕೃಷ್ಣಪ್ಪ ತಡೆದುಕೊಂಡ. ಕೃಷ್ಣಪ್ಪನ ತಾಯಿಯೂ ಇದರಿಂದ ಭಯಪಟ್ಟಿದ್ದರಿಂದ ಕೃಷ್ಣಪ್ಪ ನಿಧಾನವಾಗಿ ಕೇಳಿದ:

‘ನಾನು ನಿಮ್ಮ ಮಗ ಇದ್ದ ಹಾಗೆ ಅಂತ ನೀವು ತಿಳಿದಿದ್ದೀರಿ ಅಲ್ಲವ ಜೋಯಿಸ್ರೆ – ’

‘ಅದೆಂಥ ಪ್ರಶ್ನೆ ನೀನು ಕೇಳೋದು? ಇಲ್ದಿದ್ರೆ ನಾನು ನಿನಗೆ ಬುದ್ಧಿವಾದ ಹೇಳಕ್ಕೆ ಬರ್ತಿದ್ನ?’

‘ಸಾಯ್ತಾ ಇರೋ ಮಗೂಗೇಂತ ಇಟ್ಟ ಹಾಲನ್ನ ಎಸೆಯೋದು ಹೆಚ್ಚು ತಪ್ಪೋ, ಅಥವಾ ಅಂಥ ಬ್ರಾಹ್ಮಣನನ್ನ ಪೊರಕೇಲಿ ಹೊಡೆಯೋದೋ?’

‘ಎರಡೂ ತಪ್ಪು, ಭಟ್ಟ ಅವನು ಮಾಡಿದ ಪಾಪಕ್ಕೆ ನರಕಕ್ಕೆ ಹೋಗ್ತಾನೆ. ಆದರೆ ಅದು ಬ್ರಾಹ್ಮಣ ಜನ್ಮವಲ್ಲ? ಅವನನ್ನ ಪೊರಕೇಲಿ ಹೊಡೆಸಿ ನೀನು ಯಾಕೆ ಪಾಪ ಕಟ್ಟಿಕೋಬೇಕು?’

ಕೃಷ್ಣಪ್ಪನ ತಾಯಿಯೂ ಜೋಯಿಸರ ಮಾತು ಕೇಳಿಸಿಕೊಳ್ಳುತ್ತ ಹೊಗೆಸೊಪ್ಪಿಗೆ ಸುಣ್ಣ ಹಚ್ಚಿ ಬಾಯಿಗೆ ಹಾಕಿಕೊಂಡು ಆತಂಕದಿಂದ ತನ್ನ ಒಪ್ಪಿಗೆ ಸೂಚಿಸಿದಳು. ಇವರ ಹತ್ತಿರ ಮಾತು ಅಸಾಧ್ಯವೆನ್ನಿಸಿತ್ತು. ಉಪನಿಷತ್ತುಗಳನ್ನೆಲ್ಲ ಓದಿದ್ದ ಈ ಕಡು ಬಡವ ಬ್ರಾಹ್ಮಣನೂ ಎಷ್ಟು ಮೂರ್ಖನಾಗಬಲ್ಲನೆಂದು ಕೃಷ್ಣಪ್ಪನಿಗೆ ದುಃಖವಾಗಿತ್ತು.

‘ನೀವೂನೂ ಜಾತಿ ಅನ್ನೋ ಕಾರಣಕ್ಕೆ ಭಟ್ಟನ ಪರವಾಗಿ ಮಾತಾಡೋದು ಕಂಡ್ರೆ ದುಃಖವಾಗತ್ತೆ ಜೋಯಿಸ್ರೆ’

ಕೃಷ್ಣಪ್ಪ ನಿಜವಾಗಿ ವ್ಯಥೆಯಿಂದ ಮಾತಾಡಿದ್ದು ಕೇಳಿ ಜೋಯಿಸರು ತಬ್ಬಿಬ್ಬಾಗಿದ್ದರು.

‘ಈ ಮಾಯಾ ಪ್ರಪಂಚದಲ್ಲಿ ಸಿಕ್ಕಿರೋ ತನಕ ಜಾತಿ ಗೀತಿ ಎಲ್ಲ ನಿಜವೇ ಅಲ್ವೇನಪ್ಪ?’

‘ಹಾಗಾದರೆ ನಾನೇನು ಪಾಪಮಾಡಿ ಶೂದ್ರನಾಗಿ ಹುಟ್ಟಿದೇಂತ ನಿಮ್ಮ ಭಾವನೆಯೋ? ನನ್ನ ಕಂಡರೆ ನಿಮಗೂ ದೊಡ್ಡವ್ವನಿಗೂ ಯಾಕೆ ಮಗಾಂತ ಅನ್ನಿಸತ್ತೆ ಹೇಳಿ – ’

ರುಕ್ಮಿಣಿಯಮ್ಮ ನನ್ನ ಕೃಷ್ಣಪ್ಪ ದೊಡ್ಡವ್ವ ಅನ್ನೋದು.

‘ಭಟ್ಟನಂಥ ಪಾಷಂಡಿಗಳಿಂದ ನಮ್ಮ ಪೂರ್ವಜರು ಮಾಡಿದ ಪುಣ್ಯವೆಲ್ಲ ನೀರಲ್ಲಿ ಹೋಮಮಾಡಿದಂತಾಯ್ತು. ನಿನ್ನನ್ನ ಅಂದೇನು ಪ್ರಯೋಜನ ಹೇಳು? ಸ್ವತಃ ಆದಿ ಶಂಕರರೇ ಕಾಲಟಿಯಿಂದ ಬದರಿಗೆ ಹೋಗೋ ಮಾರ್ಗದಲ್ಲಿ ದಿವ್ಯವಾದ್ದೊಂದು ಪ್ರಭೆಯನ್ನು ಕಂಡು ಈ ನರಸಿಂಹದೇವರನ್ನ ಸ್ಥಾಪಿಸಿದರು ಅಂತ ಐತಿಹ್ಯ ಇದೆ. ಹೇಗಿದ್ದ ಮಠ ಈಗ ಹೇಗಾಗಿ ಬಿಡ್ತು? ಮೂಕ ಪಶು ಪಕ್ಷಿಗಳನ್ನೂ ಹಿಂಸೆ ಮಾಡಬಾರ್ದು ಅಂತ ವೈದಿಕ ಧರ್ಮ ಹೇಳುತ್ತೆ. . . . . .’

ಜೋಯಿಸರ ಕಣ್ಣುಗಳು ಒದ್ದೆಯಾದವು. ಅವರು ರುದ್ರಾಕ್ಷಿ ಧರಿಸಿದ ಎಲುಬುಗಳು ಕಾಣುವ ಎದೆಯನ್ನು ನೋಡುತ್ತ ಕೃಷ್ಣಪ್ಪನ ಮನಸ್ಸು ಕರಗಿತು.

‘ದೂರದಿಂದ ನೋಡಿದಾಗ ಹಿಂಸೆಯಷ್ಟೇ ಪ್ರತಿಹಿಂಸೇನೂ ಕೊಳಕಾಗಿ ಕಾಣತ್ತೆ ಜೋಯಿಸರೆ. ಆದರೆ ಪೊರಕೇಲಿ ಹೊಡೆಯೋಕ್ಕೂ ತಯಾರಾದಾಗ ಅವರಲ್ಲೆಷ್ಟು ಸ್ವಾಭಿಮಾನ ಬೆಳದಿರತ್ತೆ ನಿಮಗೆ ಕಾಣಿಸ್ತ ಇಲ್ಲ. ಅವರೆಲ್ಲ ಹುಳಗಳಂತೆ ಸಹಿಸ್ತ ಇದ್ದಿದ್ರಿಂದ್ಲೇನೇ ಮಠಾನೂ ಕೊಳೀತ ಬಂತು, ನಿಮ್ಮ ಭಟ್ಟಾನೂ ಸಣ್ಣ ಹುಳಾನ ತಿನ್ನೋ ದೊಡ್ಡ ಹುಳ ಆಗೋದು ಸಾಧ್ಯ ಆಯ್ತು’

ಜೋಯಿಸರು ಮಂಕಾಗಿ ಎದ್ದು ನಿಂತರು. ಕೃಷ್ಣಪ್ಪ ಹಾಸ್ಯದ ಧಾಟಿಯಲ್ಲಿ ಅವರನ್ನು ಒಲಿಸಲು ಪ್ರಯತ್ನಿಸಿದ.

‘ಬ್ರಾಹ್ಮಣರು ಅಂದ್ರೆ ನಮ್ಮ ಜನಕ್ಕೆ ಇನ್ನೂ ಗೌರವ ಉಳಿದಿದೆ ಜೋಯಿಸ್ರೆ. ಪೊರಕೇಲಿ ಹೋಡಿತಾರೆ ನಿಜ. ಆದ್ರೆ ಒಳಗೆ ಮನಸ್ಸಲ್ಲೆ ಕಲ್ಕುಟಕನಿಗೆ ತಪ್ಪು ಕಾಣಿಕೇನೂ ಕಟ್ತಾರೆ. . . .’

‘ನೀನು ಧರ್ಮಿಷ್ಠಾಂತ ನನಗೆ ಗೊತ್ತಪ್ಪ. ಆ ಭಟ್ಟ ಎಲ್ಲಿ – ನೀನೆಲ್ಲಿ ? ಆದರೆ. . . .’

ಜೋಯಿಸರಿಗೆ ಮಾತು ಹೊಳೆಯದೆ ಎದ್ದು ಹೋಗಿದ್ದರು. ಕೃಷ್ಣಪ್ಪ ಈ ಘಟನೆಯನ್ನು ಮರೆಯಲಾರ. ತನ್ನ ಆರೋಗ್ಯಕ್ಕಾಗಿ ಊರಿನ ಜನ ಕಲ್ಕುಟಕನಿಗೆ ಕೋಲ ಕಟ್ಟಿಸುವ ಹರಕೆ ಹೊತ್ತ ಸುದ್ದಿ ಕೇಳಿ ಪ್ರಾಯಶಃ ತನಗೆ ಇವತ್ತು ಎಲ್ಲ ನೆನಪಾಗುತ್ತಿರಬಹುದು.

ನಾಗೇಶ ಹೇಳಿದ:

‘ಇನ್ನಷ್ಟು ಒದೀಬೇಕು ಗೌಡರೆ ಬ್ರಾಹ್ಮಣರನ್ನ, ಆಗಲೇ ಈ ಜಾತಿ ವ್ಯವಸ್ಥೇನ್ನ ನಾಶಮಾಡೋದು ಸಾಧ್ಯ.’

ಕೃಷ್ಣಪ್ಪ ನಗತೊಡಗಿದ. ನಾಗೇಶ ತಬ್ಬಿಬಾಗಿ ಯಾಕೆಂದು ಕೇಳಿದ:

‘ಹಂದಿ ಕುರಿ ತಿನ್ನೋ ನಮ್ಮ ಗೌಡರು ನಿನ್ನಂಥ ಒಬ್ಬ ಪುಳಚಾರು ತಿನ್ನೊ ಬಡಪಾಯಿಯನ್ನು ಒದೀಬೇಕೂಂತ ಅಂತೀಯಲ್ಲ – ಅದನ್ನು ಕಲ್ಪಿಸಿಕೊಂಡು ನಗು ಬಂತು. ನಮ್ಮ ಜಾತಿ ಜಮೀಂದಾರರೇನು ಯೋಗ್ಯರು ಅಂತ ನೀನು ತಿಳ್ದಿರೋದ?’