***

‘ಏ ನಾಗೇಶ – ಈ ಸಾರಿಯ ಇಲ್ಲಸ್ಟ್ರೇಟಡ್‌ವೀಕ್ಲಿ ಆಫ್‌ಇಂಡಿಯಾ ಓದಿದ್ದಿಯ?’

ಕೃಷ್ಣಪ್ಪ ಸಂಭ್ರಮದಿಂದ ಕೇಳುತ್ತಾನೆ. ಸಾಯಂಕಾಲದ ಹೊತ್ತಲ್ಲಿ ಕೃಷ್ಣಪ್ಪನನ್ನು ನೋಡಲೆಂದು ಬಂದ ಅವನ ಪಕ್ಷದ ಇಪ್ಪತ್ತು ಎಂ. ಎಲ್‌. ಎ. ಗಳ ಮಾತುಗಳನ್ನು ಕೇಳಿಸಿಕೊಳ್ಳುತ್ತ ವರಾಂಡದಲ್ಲಿ ಕೂತ ನಾಗೇಶ ‘ಯಾಕೆ ಗೌಡರೆ’ ಎಂದು ಕೋಣೆಯೊಳಗೆ ಬರುತ್ತಾನೆ.

‘ನೋಡು’ ಎಂದು ಮಾಡಿಸಿದ ವೀಕ್ಲಿಯನ್ನು ಕೊಡುತ್ತಾನೆ. ಕೃಷ್ಣಪ್ಪನ ಮುಖ ಮೋಜಿನಿಂದ ಹಿಗ್ಗಿದ್ದನ್ನು ನಾಗೇಶ ಗಮನಿಸಿ ಓದಲು ಶುರುಮಾಡುತ್ತಾನೆ.

ಕೌಪೀನಧಾರಿಯಾದ ಬೈರಾಗಿಯ ದೊಡ್ಡದೊಂದು ಚಿತ್ರದ ಕೆಳಗೆ ಸರ್ಪ ಸಿದ್ದೇಶ್ವರಾನಂದನೆಂದು ಬರೆದಿತ್ತು. ಬೈರಾಗಿಗೆ ಉದ್ದವಾದ ಬಿಳಿ ಗಡ್ಡ ಜಡೆಗಳು ಬೆಳೆದಿದ್ದವು. ಅವನು ಈ ಚಿತ್ರದಲ್ಲಿ ನಗುತ್ತಿದ್ದ. ಇನ್ನೊಂದು ಚಿತ್ರವಿತ್ತು – ಅದರಲ್ಲಿ ಬೈರಾಗಿ ಮರದ ಕೊಂಬೆಯೊಂದರ ಮೇಲೆ ಕೂತು ಮೈ ಕೆರೆದುಕೊಳ್ಳುವ ಕಪಿಯಂತಿದ್ದ. ಹಲ್ಲುಬಿದ್ದ ಬಾಯನ್ನು ಇಷ್ಟಗಲ ತೆಗೆದು ಪರಮ ಸಖಿಯಂತೆ ಕಾಣುತ್ತಿದ್ದ.

‘ನಾನು ಹೇಳ್ತ ಇದ್ದನಲ್ಲ – ನಮ್ಮ ಜಿಲ್ಲೆಯ ಭೈರಾಗಿ, ಮೌನಿ ಇವನೇ. ಗಟ್ಟಿಯಾಗಿ ಓದು.’

ಬರೆದವನು ಉಪ್ಪು ಖಾರ ಬೆರೆಸಿರಬಹುದೆಂದು ಸಂಶಯವಾದರೂ ಲೇಖನ ಕೃಷ್ಣಪ್ಪನನ್ನು ಆಕರ್ಷಿಸಿತು. ಗೀತಾ ಪಠನಕ್ಕಾಗಿ ಮಾತ್ರ ತನ್ನ ಮೌನವನ್ನು ಮುರಿಯುತ್ತಿದ್ದ ಬೈರಾಗಿ ಕ್ರಮೇಣ ಪ್ರಸಿದ್ದನಾದ ಕಥೆ ಲೇಖನದಲ್ಲಿತ್ತು. ಭಕ್ತರ ಕನಸಿನಲ್ಲಿ ಕಾಣಿಸಿಕೊಂಡು ಮಾತಾಡುವನೆಂಬ ಪ್ರತೀತಿ ಹುಟ್ಟಿ ಜನ ಜಮಾಯಿಸುವುದು ಹೆಚ್ಚಾದಂತೆ ಒಂದು ದಿನ ಬೈರಾಗಿ ಗುಹೆ ಸೇರಿಬಿಟ್ಟ. ಹೊರಕ್ಕೆ ಬರಲೇ ಇಲ್ಲ. ಎರಡು ಮೂರು ದಿನಗಳಾದ ಮೇಲೆ ಬೆಟ್ಟದಲ್ಲಿ ನೆರೆದಿದ್ದ ಜನಸಮೂಹದಲ್ಲಿ ಒಬ್ಬಾತ ಈ ಮಹಿಮರೇನು ಮಾಡುತ್ತಿದ್ದಾರೆಂದು ನೋಡಲು ಗುಹೆಯಲ್ಲಿ ಇಣುಕಿದ. ಸರ್ಪದೋಪಾದಿಯಲ್ಲಿ ಬುಸ್ಸೆನ್ನುವ ಶಬ್ದ ಗುಹೆಯಿಂದ ಕೇಳಿಸಿತು. ಮಹಾತ್ಮರು ಈಶ್ವರನ ಶಿರಸ್ಸಿನ ಮೇಲಿನ ಸರ್ಪದ ಭಾವ ತಾಳಿ ತಪಸ್ಸಿನಲ್ಲಿದ್ದಾರೆಂದು ಅವನು ನೆರೆದಿದ್ದ ಜನರಿಗೆ ಸಾರಿದ. ಪ್ರತಿದಿನ ಅವರು ನೈವೇದ್ಯವನ್ನು ಗುಹೆಯ ಬಾಯಲ್ಲಿ ತಳ್ಳಿ ಕಾಯುವರು. ಒಂದಷ್ಟನ್ನು ತಿಂದು ಉಳಿದಿದ್ದನ್ನು ಬೈರಾಗಿ ಹೊರಗಸೆಯುವನು. ಆ ಪ್ರಸಾದವನ್ನು ಭಕ್ತರೆಲ್ಲ ಒಂದೊಂದು ಅಗಳಾಗಿ ಹಂಚಿಕೊಳ್ಳುವರು. ಕೆಲವು ದಿನ ನೈವೇದ್ಯವನ್ನು ಬೈರಾಗಿ ಸ್ವೀಕರಿಸುತ್ತಿಲ್ಲವೆಂಬುದನ್ನು ಕಂಡ ಜನ ಗುಹೆಯ ಬಾಯಿಗೆ ಹೋಗಿ ಇಣುಕಿದರು. ಕತ್ತಲಲ್ಲಿ ಏನೂ ಕಾಣಲಿಲ್ಲ. ಆದರೆ ಬುಸ್ಸೆಂಬ ಶಬ್ದ ಜೋರಾಗಿ ಬಂತು – ಸಿಟ್ಟಿನಲ್ಲಿ ಇಣುಕಿದವರನ್ನು ಅಟ್ಟುವ ಥರ. ಮಹಾತ್ಮರು ಈಗ ಸರ್ಪವೇ ಆಗಿದ್ದಾರೆಂದು ಭಕ್ತಾದಿಗಳೆಲ್ಲ ತಿಳಿದರು. ಆಮೇಲಿಂದ ಹಾಲನ್ನಿಡಲು ಶುರುಮಾಡಿದರು.

ಹೀಗೆ ಮೂರು ಪಕ್ಷಗಳು ಕಳೆದ ಮೇಲೆ ಗುಹೆಯಿಂದ ಉಜ್ವಲವಾದ ಪ್ರಕಾಶದ ಮಹಿಮರು ಹೊರಗೆ ಬಂದರು. ಈಗವರು ಗೀತೆಯನ್ನು ಓದುವುದಿಲ್ಲ. ಮಾತೂ ಆಡುವುದಿಲ್ಲ. ಒಮ್ಮೊಮ್ಮೆ ಗಹಗಹಿಸಿ ನಗುವುದುಂಟು. ಅಥವಾ ಮರಹತ್ತಿ ಕೂತಿರುತ್ತಾರೆ.

ಸಹಸ್ರ ಸಂಖ್ಯೆಯಲ್ಲಿ ಪ್ರತಿನಿತ್ಯ ಈ ಸರ್ಪಸಿದ್ದೇಶ್ವರಾನಂದರ ದರ್ಶನ ಪಡೆಯಲು ದೇಶಾದ್ಯಂತ ಜನ ನೆರೆಯುತ್ತಿದ್ದಾರೆ. ಇಲ್ಲಿ ಅನೇಕ ಪವಾಡಗಳು ನಡೆಯುತ್ತಾವೆಂಬ ಕಥೆಗಳಿವೆ. ಕೆಲವು ಸಾರಿ ಸರ್ಪಸಿದ್ದೇಶ್ವರಾನಂದರು ಮತ್ತೆ ಗುಹೆ ಸೇರಿಬಿಡತ್ತಾರೆ – ತಮ್ಮ ಸರ್ಪಸ್ವರೂಪಕ್ಕ ಮರಳಲೆಂದು. ಸರ್ಪರೂಪದಲ್ಲಿರುವ ಅವರನ್ನು ನೋಡಕೂಡದೆಂದೂ ನೋಡಿದರೆ ಸಾವು ಖಂಡಿತವೆಂದೂ ಜನರ ತಿಳಿವಳಿಕೆ. ಕೆಲವು ದಿನ ಕಳೆದ ಮೇಲೆ ಮಹಿಮರೇ ಹೊರಬರುತ್ತಾರೆ – ನಗುತ್ತಾರೆ. ಮರ ಹತ್ತಿ ಕೂರುತ್ತಾರೆ.

‘ಏನನ್ನಿಸತ್ತೊ ನಿಂಗೆ?’

ಕೃಷ್ಣಪ್ಪ ಕುತೂಹಲದಿಂದ ಕೇಳುತ್ತಾನೆ.

‘ಮೂಡನಂಬಿಕೆ ಅಷ್ಟೆ’

‘ಈ ಬೈರಾಗಿ ಹುಚ್ಚನೂ ಇರಬಹುದು. ದೊಡ್ಡ ದ್ರಷ್ಟಾರನೂ ಇರಬಹುದು ಅಂತ ಅನುಮಾನ ನಿನಗಾಗಲ್ಲ, ನಾಗೇಶ?’

‘ಇಂಥದನ್ನು ನಂಬಿಕೊಂಡೇ ನಮ್ಮ ದೇಶ ಹೀಗಾಗಿದ್ದು.’

‘ಸರಿ’

‘ನಮಗೆ ಬೇಕಾಗಿರೋದು ಅನ್ನ – ಆಧ್ಯಾತ್ಮ ಅಲ್ಲ.’

ಕೃಷ್ಣಪ್ಪ ಸುಮ್ಮನಾದ್ದು ಕಂಡು ನಾಗೇಶ ಅವನನ್ನು ಹಾಸ್ಯ ಮಾಡುವ ಧೈರ್ಯ ತೋರಿಸುವನು!

‘ಯಾಕೋ ಇತ್ತೀಚೆಗೆ ಗೌಡರು ಹಾಸಿಗೆ ಹಿಡಿದ ಮೇಲೆ ಈ ಮುಟ್ಟಾಳ ಢಾಂಭಿಕರನ್ನು ನಂಬೋ ಹಾಗೆ ಕಾಣತ್ತೆ.’

‘ಅಣ್ಣಾಜೀನೂ ಹಾಗೇ ಹೇಳ್ತ ಇದ್ದ ಕಣಯ್ಯ.’

ಕೃಷ್ಣಪ್ಪ ಆಲೋಚನೆಯಲ್ಲಿ ಮಗ್ನನಾಗಿದ್ದು, ಮೆಲ್ಲಗೆ ಹೇಳುವನು:

‘ನೋಡು ನಾಗೇಶ, ದೇವರು ಇದ್ದೇ ಇದಾನೆ ಅಂತ ಒಬ್ಬನಿಗೆ ಗೊತ್ತು ಅನ್ನು, ನಂಬಿಕೆಯಲ್ಲ ನಾನು ಹೇಳೋದು – ನಿಶ್ಚಯವಾಗಿ ಗೊತ್ತು ಅನ್ನು, ಹಾಗೆ ಗೊತ್ತಿರೋದು ಸಾಧ್ಯವಿದ್ದರೆ ಅಂಥವರು ರಿಲಿಜಸ್‌ಆಗೋದು ದೊಡ್ಡ ವಿಷಯ ಅಲ್ಲವೋ. ಬ್ಯಾಂಕಲ್ಲಿ ದುಡ್ಡಿಟ್ಟ ಹಾಗೆ ಅದು – ಬಡ್ಡಿ ಗ್ಯಾರಂಟಿ. ಆದರೆ ದೇವರು ಇದಾನೊ ಇಲ್ವೊ ಅನ್ನುವ ಆತಂಕದಲ್ಲೂ ದೇವರನ್ನ ನಂಬೋ ನಿರ್ಧಾರ ಮಾಡೋದಿದೆ ನೋಡು – ಅದು ನಿಜವಾದ ಶೌರ್ಯ. ಹಾಗೇನೇ ರಾಜಕೀಯದಲ್ಲಿ ನಮ್ಮ ಹೋರಾಟದಿಂದ ಪ್ರಗತಿಯಾಗತ್ತೆ, ಈ ಪ್ರಗತೀಂದ ಎಲ್ಲ ಒಳ್ಳೆದೇನೆ ಸಲೀಸಾಗಿ ಆಗ್ತಾ ಆಗ್ತಾ ಹೋಗತ್ತೆ ಅಂತ ತಿಳಿದು ಬಡವರ ಪರ ನಿಂತು ಕ್ರಾಂತಿಗೆ ಕೆಲಸಮಾಡೋದು ಒಂದು ವಿಧ. ಬಹಳ ಜನರ ಮಾರ್ಗ ಅದು. ಆದರೆ ನಾನು ವಾರಂಗಲ್‌ನಿಂದ ಹಿಂದೆ ಬಂದ ಮೇಲೆ ರಾಜಕೀಯಕ್ಕೆ ಧುಮುಕೋ ಮೂಚೆ ನಾವು ತರೋ ಪ್ರಗತಿಯೆಲ್ಲ ಒಳ್ಳೇದನ್ನೇ ಮಾಡ್ತಾ ಹೋಗತ್ತೆ ಅಂತ ನಿಶ್ವಯವಾಗಿ ತಿಳಿಯೋದು ನನಗೆ ಸಾಧ್ಯವಾಗ್ತಿರ್ಲಿಲ್ಲ. ಈಗಲೂ ಸಾಧ್ಯವಾಗ್ತಿಲ್ಲ. ಆದರೆ ಸುತ್ತಮುತ್ತಲಿನ ಕ್ಷುದ್ರತೆ, ದುಃಖ ಕಂಡಾಗ ಇದರ ವಿರುದ್ಧ ಹೋರಾಡೋದು ಅಗತ್ಯ ಅನ್ನೋದು ಮಾತ್ರ ನನಗೆ ಸ್ವಯಂಸಿದ್ದ. ದೈನಿಕ ಜೀವನವೇ ಹೊಳೀಬೇಕು ಅಂತ ನನಗಿದ್ದ ಆಸೆ ಮಾತ್ರ ಸಫಲವಾಗಿಲ್ಲ. ನನ್ನ ಪ್ರಯತ್ನದಿಂದ ಅವತ್ತು ಒದೆಸಿಕೋತಿದ್ದ ಬೀರೇಗೌಡ ಇವತ್ತು ಇನ್ನೊಬ್ಬನನ್ನ ಒದೀತಿದಾನೆ. ಆದರೆ ಈ ಮಾತನ್ನ ಹೇಳೋವಾಗ ಸಮಾಜ ಚಲಿಸೋದರಲ್ಲಿ ಏನೂ ಅರ್ಥವಿಲ್ಲ ಅನ್ನೋ ಧ್ವನಿ ಹೊರಟರೆ ಅದೂ ಕೂಡ ಬಹಳ ಸುಲಭವಾದ ಸಲೀಸಾದ ಮಾತಾಗಿಬಿಡುತ್ತೆ. ಏನನ್ನೂ ಕ್ರೂರಿಯೂ ಇದೇ ಮಾತಾಡ್ತಾನೆ ಅಲ್ವ? ಅಂದ್ರೆ ನಾನು ಹೇಳಬೇಕೂಂತಿರೋದು ನಾಗೇಶ. . . .’

ನಾಗೇಶ ಅರ್ಥವಾಗದೆ ಕೃಷ್ಣಪ್ಪನನ್ನು ನೋಡುತ್ತಾನೆ. ಬರಕೊಳ್ಳಲು ಪೆನ್ಸಿಲ್ ಎತ್ತಿಕೊಂಡದ್ದು ನೋಡಿ ಕೃಷ್ಣಪ್ಪ ಕಣ್ಣಿಂದ ಅದನ್ನು ತಡೆದು ಹೇಳುತ್ತಾನೆ:

‘ಅಪಾರ್ಥಕ್ಕೆ ಎಡೆಗೊಡದೆ ನಾನು ಹೇಳಬೇಕೂಂತ ಇರೋದನ್ನ ಹೇಳಕ್ಕೇ ಆಗಲ್ವೊ ನಾಗೇಶ. ಹುಟ್ಟಿದ ಮೇಲೆ ಕರ್ಮದಲ್ಲಿ ತೊಡಗಲೇಬೇಕು, ಹೋರಾಡಲೇ ಬೇಕು. ಜೀವನಾನ್ನ ಕ್ಷುದ್ರಗೊಳಿಸೋ ತಮಸ್ಸನ್ನ ನೂಕತಾನೇ ಇರಬೇಕು. ಅಂದರೆ ನಮ್ಮ ಕ್ರಿಯೆಗಳ ಪರಿಣಾಮ ಹೀಗೂ ಆಗಬಹುದು ಹಾಗೂ ಆಗಬಹುದು ಅನ್ನೋ ಆತಂಕಾನ ಕಳಕೊಳ್ಳದಂತೆ. . . . .’

ಕೃಷ್ಣಪ್ಪ ಮಾತು ಮುಗಿಸದೆ ಮುಖ ತಿರುಗಿಸಿ,

‘ಹೊರಕೂತವರನ್ನ ಬರಹೇಳು’ ಅನ್ನುತ್ತಾನೆ.

ಸದ್ಯದಲ್ಲೇ ಆಗಬಹುದಾದ ಪಕ್ಷಾಂತರದ ಗಲಿಬಿಲಿಯಲ್ಲಿ ತಾವು ಯಾವ ಪಾತ್ರ ವಹಿಸಬೇಕೆಂದು ಚರ್ಚಿಸಲು ಅವನ ಪಕ್ಷದ ಎಂ.ಎಲ್‌.ಎ.ಗಳು ಬಂದಿದ್ದರು. ಅವರಲ್ಲಿ ಕೆಲವರು ಆಳುವ ಪಕ್ಷದಲ್ಲಿರುವ ಒಡಕು ತಮಗೆ ಅಸಂಬದ್ದವೆಂದೂ, ತಮ್ಮ ಕ್ರಾಂತಿಯ ಹಾದಿಯಲ್ಲಿ ಯಾರನ್ನೂ ಜೊತೆಗೆ ಕಟ್ಟಿಕೊಳ್ಳದೆ ಸಾಗಬೇಕೆಂದೂ ವಾದಿಸುವ ಉಗ್ರ ಧೋರಣೆಯವರು. ಹಲವರು ಆಳುವ ಪಕ್ಷದ ಒಡಕನ್ನು ಉಪಯೋಗಿಸಿಕೊಂಡು ಬೇರೊಂದು ಮಂತ್ರಿಮಂಡಲದ ರಚನೆಗೆ ತಾವು ಬೆಂಬಲ ಕೊಡಬೇಕೆಂದೂ ಹೀಗೆ ಬೆಂಬಲಿಸುವಾಗ ಒಂದು ಟೈಮ್‌ಬೌಂಡ್‌ಮಿನಿಮಮ್‌ಪ್ರೋಗ್ರಾಂಗೆ ಬದ್ಧರಾಗಬೇಕೆಂದು ವಾದಿಸುವವರು. ಇವರಲ್ಲೂ ಈಗಿರುವ ಮುಖ್ಯಮಂತ್ರಿಗೇ ಬೆಂಬಲ ಕೊಡಬೇಕೆಂದು ಕೆಲವರ ವಾದ. ಮುಖ್ಯಮಂತ್ರಿಯ ಪ್ರತಿಸ್ಪರ್ಧೀಗೆ ಬೆಂಬಲಕೊಡಬೇಕೆಂದು ಉಳಿದವರ ವಾದ. ಮುಖ್ಯಮಂತ್ರಿಯ ಜೊತೆ ಈಗಾಗಲೇ ಮಾತಾಡಿರಬೇಕೆಂದು ಉಳಿದವರ ವಾದ. ಮುಖ್ಯಮಂತ್ರಿಯ ಜೊತೆ ಈಗಾಗಲೇ ಮಾತಾಡಿರಬೇಕೆಂದು ‘ಆ’ ಗುಂಪಿನ ಮೇಲೆ ‘ಈ’ ಗುಂಪಿಗೆ ಸಂಶಯವಾದರೆ, ಭಯಂಕರ ದುಡ್ಡು ಚೆಲ್ಲುತ್ತಿರುವ ಪ್ರತಿಸ್ಪರ್ಧಿಯ ಜೊತೆ ಒಪ್ಪಂದವಾಗಿರಬೇಕೆಂದು ‘ಈ’ ಗುಂಪಿನ ಮೇಲೆ ‘ಆ’ ಗುಂಪಿನ ಸಂಶಯ. ವೀರಣ್ಣ ಕೃಷ್ಣಪ್ಪನ ಮೇಲೆ ತನಗಿರುವ ಪ್ರಭಾವ ಉಪಯೋಗಿಸಿ ‘ಆ’ ಗುಂಪಿಗೆ ಬೆಂಬಲ ಕೊಡುವಂತೆ ಮಾಡಲು ಪ್ರಯತ್ನಿಸುತ್ತಿದ್ದ. ಈ ರಾಜಕೀಯವೇ ಅಸಂಬದ್ಧ ಎನ್ನುವ ಉಗ್ರರು ಹೆಚ್ಚಾಗಿ ಮಾತಿನ ಚಟದವರು. ಆ ಪಕ್ವ ಯುವಕರು, ಆದರೆ ಆದರ್ಶವಾದಿಗಳು; ಉಳಿದವರು ಜನಹಿತಕ್ಕಾಗಿ ನಿಜವಾಗಿ ದುಡಿದವರು. ದುಡಿದು ಸುಸ್ತಾದವರು; ಖದೀಮರು. ಕ್ರಾಂತಿಯ ಅಸ್ಪೋಟದಲ್ಲಿ ಮಾತ್ರ ಬದಲಾವಣೆ ಸಾಧ್ಯವೆಂದು ಒಬ್ಬರ ವಾದವಾದರೆ, ಆಡಳಿತದಲ್ಲಿ ಭಾಗವಹಿಸುವದರ ಮೂಲಕ ಜನರನ್ನು ಕ್ರಾಂತಿಯ ದಿಕ್ಕಲ್ಲಿ ಹಚ್ಚಬಹುದೆಂದು ಇನ್ನೊಬ್ಬರ ವಾದ.

ಇವತ್ತು ಕೃಷ್ಣಪ್ಪನಲ್ಲಿ ಈ ವಾದ ವಿವಾದದಲ್ಲಿ ಭಾಗವಹಿಸುವ ಉಮೇದಿಲ್ಲದಿದ್ದರೂ ಅವರ ಜೊತೆ ಚರ್ಚಿಸಲು ಸನ್ನದ್ಧನಾದ.

***

ಸಹದ್ಯೋಗಿಗಳಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ತನ್ನ ಮಾತು ಅವರು ಮೀರುವುದಿಲ್ಲವೆಂದು ಕೃಷ್ಣಪ್ಪನಿಗೆ ಸಮಾಧಾನವಾಗಿತ್ತು. ಬದುಕು ಮತ್ತು ಸಾವಿನ ಹೊಸ್ತಿಲಲ್ಲಿದ್ದೂ ತನ್ನ ವರ್ಚಸ್ಸು ಕುಗ್ಗಿರಲಿಲ್ಲ. ದೆಹಲಿಯ ಡಾಕ್ಟರ್ ಪರೀಕ್ಷೆ ಮಾಡಿ ಎಕ್ಸ್‌ಟೆಂನ್ಸಿವ್‌ಡ್ಯಾಮೇಜ್ ಆಗಿಲ್ಲ – ಫಿಸಿಯೋಥರಪಿ ಈಗ ಮುಖ್ಯ ಎಂದಿದ್ದರು. ಕೃಷ್ಣಪ್ಪ ಒಟ್ಟಿನಲ್ಲಿ ಈ ಎಲ್ಲದರಿಂದ ಗೆಲುವಾಗಿದ್ದಾಗ ರಾತ್ರೆ ಗೌರಿ ದೇಶಪಾಂಡೆಯ ಟೆಲಿಗ್ರಾ ಬಂತು – ನಾಡಿದ್ದು ಭಾನುವಾರ ಸಂಜೆ ವಿಮಾನದಲ್ಲಿ ಬರುತ್ತಿದ್ದೇನೆಂದು. ಅವಳು ದೆಹಲಿಗೆ ಅಮೇರಿಕಾದಿಂದ ಬಂದು ಆರು ತಿಂಗಳು ಮೇಲಾಗಿತ್ತು. ಅವಳನ್ನು ನೋಡಿ ಎಷ್ಟೋ ವರ್ಷಗಳಾಗಿಬಿಟ್ಟಿದ್ದವು. ಈಗ ಹೇಗೆ ಕಾಣುವಳೊ. ದೆಹಲಿಗೆ ಬಂದವಳೇ ತನ್ನನ್ನು ನೋಡುವಳೆಂದು ಆಸೆಪಟ್ಟಿದ್ದ. ಬರಲಿಲ್ಲವಾದ್ದರಿಂದ ಅವಳು ತನ್ನ ಬಗ್ಗೆ ತಣ್ಣಗಾಗಿರಬಹುದೆಂದು ಭಾವಿಸಿದ್ದ. ಈಗ ಬರುತ್ತಿದ್ದಾಳೆ; ಎರಡು ದಿನ ಕಳೆದು. ಅಂದರೆ ಅವಸರಪಡದೆ, ಖಾಯಿಲೆ ಹಿಡಿದು ಮಲಗಿದ ಮೇಲೆ ನನ್ನ ಆತ್ಮರತಿ ಉಲ್ಬಣವಾಗಿದ್ದರಿಂದ ಹೀಗೆ ಯೋಚಿಸುತ್ತಿದ್ದೀನಲ್ಲವೆ ಎಂದು ಹೇಸಿಗೆ ಪಟ್ಟ.

ಸೀತೆ ತಂದಿಟ್ಟ ಪ್ಯಾನ್‌ನಲ್ಲಿ ಬೆಳಗಿನ ತನ್ನ ವಿಸರ್ಜನೆಗಳಲ್ಲಿ ತೊಡಗಿದ್ದಾಗ ಮಹೇಶ್ವರಯ್ಯ ಬಂದುಬಿಟ್ಟರು. ಕೃಷ್ಣಪ್ಪ ಆವೇಗದಿಂದ ಉಸಿರಾಡುತ್ತ ಹೊರಗೆ ಅವರು ಮಾತಾಡುವುದನ್ನು ಕೇಳಿಸಿಕೊಂಡ. ನಾಗೇಶ ಖಾಹಿಲೆ ವಿಷಯ ಹೇಳುತ್ತಿದ್ದಾನೆ. ಮಹೇಶ್ವರಯ್ಯ ಮಾತಾಡುವುದೇ ಇಲ್ಲ. ತನ್ನ ಭಾವವನ್ನು ತೋರಿಸಿಕೊಳ್ಳುವ ಮನುಷ್ಯನೂ ಅಲ್ಲ ಅವರು, ಅವರಿಗಾಗಿರುವ ಆಘಾತ ಊಹಿಸುತ್ತ ಕೃಷ್ಣಪ್ಪನಿಗೆ ಸಂಕಟವಾಯಿತು. ಎಪ್ಪತ್ತರ ಅವರ ವಯಸ್ಸಲ್ಲಿ ತನ್ನಿಂದ ಈ ದುಃಖ ಅವರಿಗಾಗಬಾರದಿತ್ತು.

ಬಿಸಿನೀರಿನಲ್ಲಿ ಒದ್ದೆ ಮಾಡಿದ ಬಟ್ಟೆಯಿಂದ ಸೀತೆ ಕೃಷ್ಣಪ್ಪನ ಮೈಯನ್ನು ಒರೆಸುತ್ತಿದ್ದಳು. ನಾಳೆಯಿಂದ ಈ ಕೆಲಸ ಮಾಡಲು ನರ್ಸ್‌ಬರುತ್ತಾಳೆ. ಕಿರಿಕಿರಿಪಡುತ್ತ ಬ್ಯಾಂಕಿಗೆ ಹೋಗುವ ಅವಸರದಲ್ಲಿ ಸೀತೆ ಮಾಡುವ ಸೇವೆ ಕೃಷ್ಣಪ್ಪನಿಗೆ ಇಷ್ಟವಾಗುವುದಿಲ್ಲ. ಇವತ್ತು ಅವಳ ಮುಖದಲ್ಲಿ ಉರಿಯುವಂತೆ ಕಂಡ ದುಗುಡಕ್ಕೆ ಬೇರೆ ಕಾರಣವಿದೆ. ತನಗೆ ತುಂಬ ಪ್ರಿಯರಾದವರು ಯಾರು ಮನೆಗೆ ಬಂದರೂ ಅವಳಿಗೆ ಕರೆಕರೆ – ಅಭದ್ರ ಭಾವನೆ.

‘ಕುದುರೆ ಬಾಲಾನ ಅಟ್ಟಿಕೊಂಡು ಬಂದಿರ್ಬೇಕು. ಈವಯ್ಯನ ಮುಖ ಕಂಡು ವರ್ಷ ಮೇಲಾಯ್ತು’ ಬೆನ್ನನ್ನು ಒರೆಸುತ್ತ ಸೀತೆ ಹೇಳುತ್ತಾಳೆ.

ಕೃಷ್ಣಪ್ಪನಿಗೆ ರುಮ್ಮನೆ ಸಿಟ್ಟು ಬಂತು. ತಾನೇನು ಮಾಡುತ್ತಿದ್ದೇನೆಂದು ತಿಳಿಯೋದರ ಒಳಗೆ ಇನ್ನೂ ಶಕ್ತಿಯಿಂದ ತನ್ನ ಬಲಗೈಯಿಂದ ಅವಳನ್ನು ಗುದ್ದಿದ. ಅವಳು ಆದ ನೋವಿಗಿಂತ ಹೆಚ್ಚು ಸಂಕಟಪಡುತ್ತ’ಅಯ್ಯೋ’ ಎಂದು ಕೂತು ಅಳತೊಡಗಿದಳು. ಕೃಷ್ಣಪ್ಪನಿಗೆ ತನ್ನ ಬಗ್ಗೆ ಅವಳ ಬಗ್ಗೆ ಅತ್ಯಂತ ಹೇಸಿಗೆಯಾಗಿ ಸತ್ತುಬಿಡಬೇಕೆನ್ನಿಸಿತು. ‘ಹೆಣ್ಣು ಹೆಂಗಸಿನ ಮೇಲೆ ಕೈ ಮಾಡೋ ಇವರು ಕ್ರಾಂತಿಮಾಡ್ತಾರಂತೆ’ – ಶುರುವಾಯಿತು ಸೀತೆಯ ಗೊಣಗಾಟ. ಹೊಡೆದ ಮೇಲೆ ಅವನಿಗೆ ಕುಡ ಹಾಗೆನ್ನಿಸುವುದರಿಂದ ಮಂಕಾಗಿ ಕೂತು ಕಾದ. ಅವಳೇ ಬಟ್ಟೆ ತೋಡಿಸಬೇಕು ಇನ್ನು. ಅವನ ಒಂದು ತಿಂಗಳ ಬಿಳಿಕಪ್ಪು ಮಿಶ್ರವಾದ ಗಡ್ಡದಲ್ಲಿ ಬಲಗೈಯ ಬೆರಳಾಡಿಸುತ್ತ ಸುಮ್ಮನೆ ಕೂರುತ್ತಾನೆ. ಸ್ಟ್ರೋಕ್‌ಹೊಡೆದ ಮೇಲೆ ಬೆಳೆದ ಗಡ್ಡ ಇದು. ಈ ಗಡ್ಡ ಮೆಚ್ಚಿಗೆಯಾಗಿರೋದು ತನ್ನನ್ನು ಲೆನಿನ್ನಾಗಿ ನೋಡಲು ಬಯಸುವ ನಾಗೇಶನೊಬ್ಬನಿಗೇ. ಹೀಗೆ ಏನೇನೋ ಯೋಚಿಸುತ್ತ ಮೂಗನ್ನು ಸೀನಿಕೊಂಡು ಅಳುತ್ತ ಕೂತ ಸೀತೆಯನ್ನು ಮರೆಯಲು ಪ್ರಯತ್ನಿಸುತ್ತಾನೆ. ಆಗಲ್ಲ. ಅವಳು ಗೊಣಗುತ್ತ ಪಂಚೆಯುಡಿಸಿ ಜುಬ್ಬ ಹಾಕಿ ತಲೆ ಬಾಚಿಕೊಳ್ಳಲು ಬಾಚಣಿಗೆಯನ್ನು ಬಲಗೈಯಲ್ಲಿ ಇಡುತ್ತಾಳೆ. ಅವನು ಕೂತಿದ್ದ ವೀಲ್‌ಚೇರನ್ನು ರೂಮಿಗೆ ತಳ್ಳಿ ಗೊಣಗುತ್ತಲೇ ಅಡಿಗೆ ಮನೆಗೆ ಹೋಗುತ್ತಾಳೆ. ಅಡಿಗೆ ಮನೆಯಲ್ಲಿ ಮಗಳು ಗೌರಿ ವರಾತ ಹಿಡಿದ್ದಾಳೆ. ಈಗ ಅವಳಿಗೆ ದಬದಬನೆ ಏಟು ಬೀಳುವುದಿದೆ.

ಮಹೇಶ್ವರಯ್ಯ ಒಳಗೆ ಬಂದು ಕೂತರು. ಮಾತಾಡಲಿಲ್ಲ. ಒಂದು ವರ್ಷದಲ್ಲೇ ಎಷ್ಟು ಮುದಿಯಾಗಿಬಿಟ್ಟಿದ್ದಾರೆಂದು ಅವರ ಮುಖವನ್ನೆ ದಿಟ್ಟಿಸಿದ. ಅವರ ನಡಿಗೆಯಲ್ಲಿ ಮುಖದಲ್ಲಿ ಹಿಂದಿದ್ದ ದೃಢತೆ ಇರಲಿಲ್ಲ. ಕಣ್ಣಿನ ಕೆಳಗೆ ಗಲ್ಲದ ಬಳಿ ಚರ್ಮ ಜೋತು ಬಿದ್ದಿತ್ತು. ಉಟ್ಟಬಟ್ಟೆಯಲ್ಲಿ ಹಿಂದಿನ ಶುಚಿ ಇರಲಿಲ್ಲ, ಹಣೆಯ ಮೇಲೆ ಕುಂಕುಮವಿರಲಿಲ್ಲ.

‘ಎಲ್ಲಿ ಉಳ್ಕೊಂಡಿದೀರಿ?’

‘ಅದೇ ನಿನ್ನ ಹಿಂದಿನ ಮನೆ – ಗಾಂಧೀ ಬಜಾರಿನಲ್ಲಿ ಇದ್ದದ್ದು – ಅಲ್ಲಿಗೆ ಹೋದೆ. ಅಲ್ಲಿಂದ ನೀನು ಬಿಟ್ಟದ್ದು ತಿಳಿದು ದಾರೀಲಿ ಸಿಕ್ಕ ಒಂದು ಹೋಟೆಲಲ್ಲಿ ಟ್ರಂಕನ್ನಿಟ್ಟು ಸ್ನಾನ ಮಾಡಿ ಬಂದೆ’ ಎಂದು ಕೃಷ್ಣಪ್ಪನನ್ನು ಅಕ್ಕರೆಯಿಂದ ನೋಡಿದರು.

‘ಆದರೆ ಅಲ್ಲಿ ಬರ್ತಿದ್ದವರು ಯಾರೂ ಇಲ್ಲಿಗೆ ಬರಲ್ಲ. ರೈತಾಪಿ ಜನಕ್ಕೆ ಇಲ್ಲಿಗೆ ಬರೋದಕ್ಕೆ ಬಸ್ಸಿನ ಸೌಕರ್ಯ ಸಾಲದು. ದೊಡ್ಡ ಜನರಿರೋ ಜಾಗವಲ್ವ? ಬಂದರೂ ದಂಗು ಬಡಿದು ನಿಲ್ಲುತ್ತಾರೆ. ಹಿಂದಿನಂತೆ ನೆಲದ ಮೇಲೆ ಕೂತು ಮಾತಾಡಲ್ಲ. . . . . .’

ಕೃಷ್ಣಪ್ಪ ಕೊರಗುತ್ತ ಮಾತಾಡಿದ್ದನ್ನು ಕೇಳಿಸಿಕೊಳ್ಳುತ್ತ ಮೇಶ್ವರಯ್ಯ,

‘ಈಗ ನಿನಗೆ ಇಷ್ಟಾದರೂ ಸೌಕರ್ಯ ಬೇಡವೆ ?’ ಎಂದು ಅವನ ಮಾತನ್ನು ತಳ್ಳಿಹಾಕಿದರು. ಮತ್ತೆ ಇಬ್ಬರೂ ಮೌನವಾಗಿ ಕೂತರು. ಗೌರಿ ದೊಡ್ಡದಾಗಿ ಅಳುತ್ತ ಕೋಣೆಗೆ ಓಡಿ ಬಂದು ಅಲ್ಲಿ ಮಹೇಶ್ವರಯ್ಯನನ್ನು ಕಂಡು ಅಳು ನಿಲ್ಲಿಸಿ ಅಪ್ಪನ ಪಕ್ಕದಲ್ಲಿ ನಿಂತು ಬಿಕ್ಕಿದಳು: ಮಹೇಶ್ವರಯ್ಯ ಕೈಚೀಲದಿಂದ ದೊಡ್ಡದೊಂದು ಚಾಕಲೇಟುಗಳನ್ನು ಕಟ್ಟಿದ ಪೊಟ್ಟಣವನ್ನು ಅವಳ ಕೈಯಲ್ಲಿತ್ತು, ‘ಅಮ್ಮನ ಹತ್ತಿರ ಕೊಡು. ಈಗ ನೀನೊಂದು ತಿನ್ನು’ ಎಂದು ಒಂದು ಚಾಕಲೇಟನ್ನು ಸುಲಿದು ಅವಳ ಬಾಯಲ್ಲಿಟ್ಟರು.

ಮಹೇಶ್ವರಯ್ಯ ಏನನ್ನೋ ಹೇಳಲು ಪ್ರಯತ್ನಿಸುತ್ತಿರುವಂತೆ ಕಂಡಿತು. ಅವರು ನಿಶ್ಚಲವಾಗಿ ಕೂತು ಯಾವುದಾದರೊಂದು ವಸ್ತುವನ್ನು ದುರುಗಟ್ಟಿ ನೋಡತೊಡಗಿದರೆ ಏನನ್ನೋ ಹೇಳಲು ಸಿದ್ದರಾಗುತ್ತಿದ್ದಾರೆ ಎಂದು ಅರ್ಥ. ಈಗ ಏನನ್ನಾದರೂ ಹೇಳಬೇಕಾದ ತನ್ನ ಒತ್ತಾಯ ಅವರ ಮೇಲಿಲ್ಲವೆಂದು ಸೂಚಿಸಲು ಕೃಷ್ಣಪ್ಪ ಬೆಳಗಿನ ಪತ್ರಿಕೆಯನ್ನು ಓದುತ್ತ ಕೂತ. ಕೈಕಾಲುಗಳನ್ನು ಎತ್ತಲು ಪ್ರಯತ್ನಿಸುವ ವ್ಯಾಯಾಮ ಕೂಡ ಅವರ ಏಕಾಗ್ರತೆಗೆ ಭಂಗ ತರುವಂತೆ ವಾತಾವರಣದಲ್ಲಿ ಒತ್ತಡವನ್ನುಂಟು ಮಾಡೀತು.

ಮೈಯೆಲ್ಲ ಕಿವಿ ಕಣ್ಣುಗಳಾಗಿ ಕೂರುವ ಹಕ್ಕಿಯನ್ನು ತೋರಿಸಿ ಮಹೇಶ್ವರಯ್ಯ ಅನ್ನುತ್ತಿದ್ದರು – ‘ಹಾಗಿರಬೇಕು ನಾನು’ ‘ಪ್ರಪಂಚ ನಮ್ಮ ಕಣ್ಣೆದುರಿಗಿರುತ್ತೆ. ಆದರೆ ಏನನ್ನೋ ನೋಡಲ್ವೋ ನಾವು, ನೋಡೋದೂಂದ್ರೆ ಪ್ರವೇಶ – ಹಿಡಿಯೋದು – ಗಪ್ಪಂತ ಹಿಡಿಯೋದು.’ ಪೇಪರ್ ಓದುತ್ತ ಮಹೇಶ್ವರಯ್ಯ ಅಂದಿದ್ದ ಮಾತುಗಳನ್ನು ನೆನೆಯುತ್ತಿದ್ದಂತೆ ಯಾರೋ ಕೋಣೆಯೊಳಗೆ ‘ನಮಸ್ಕಾರ ಗೌಡರಿಗೆ’ ಎಂದು ದೊಡ್ಡದಾಗಿ ಮಾತಾಡುತ್ತಾ ವಕ್ಕರಿಸಿದರು. ಮಹೇಶ್ವರಯ್ಯ ಕೃಷ್ಣಪ್ಪ ಬೆಚ್ಚಿ ನೋಡಲು ಎದುರು ಪಂಚಲಿಂಗಯ್ಯ ನಿಂತಿದ್ದರು. ಚಿಕ್ಕಮಗಳೂರಿನಲ್ಲಿ ಕಾಫಿ ತೋಟದ ಮಾಲೀಕರು.

‘ಏನು ಗೌಡರೆ – ಛೇ ಛೇ ಇದೇನು ನಿಮಗಾಗಿದ್ದು? ಎಷ್ಟು ಗಟ್ಟಿಮುಟ್ಟಾಗಿ ಇದ್ದಿರಿ? ಕೃಷ್ಣಪ್ಪ ಕುಗ್ಗುತ್ತ ಕೂತ.

‘ಇಲ್ಲೊಬ್ರು ಸ್ಪೆಶಲಿಸ್ಟ್ ನಂಗೆ ಗುರ್ತಿದಾರೆ. ಕಾರಲ್ಲಿ ಹೋಗಿ ಕರ್ಕೊಂಬರ್ತಿನಿ’. ಪಂಚಲಿಂಗಯ್ಯನ ಒತ್ತಾಯವನ್ನು ತಳ್ಳುತ್ತ ‘ಬೇಡಿ – ಪರೀಕ್ಷೆ ಮಾಡಿಸಿಕೊಂಡಿದೀನಿ. ಏನು ಬಂದರಲ್ಲ?’ ಎಂದು ಕೃಷ್ಣಪ್ಪ ಕೇಳಿದ.

‘ಉಡುಪೀಲೊಂದು ಮೆಡಿಕಲ್ ಕಾಲೇಜಿದೆಯಲ್ಲ – ಅದನ್ನ ನಡೆಸೋವ್ರಿಗೆ ನೀವೊಂದ್ರೆ ಭಾರಿ ಗೌರವವಂತೆ. ಎಷ್ಟು ಡೊನೇಶನ್ ಕೇಳಿದರೂ ಕೊಡ್ತೀನಿ ಮಾರಾಯ್ರೆ – ಅದ್ರೂ ನಿಮ್ದೂ ಒಂದು ಮಾತು ಬೇಕು ನೋಡಿ ನನ್ನ ಮಗನಿಗೆ ಸೀಟ್ ಸಿಗಾಕೆ. ಎಲ್ಲ ಹೇಳ್ತಾರೆ – ಗೌಡರು ಜಪ್ಪಯ್ಯಾಂದ್ರೂ ಹೇಳಲ್ಲ ಅಂತ. ಅದಕ್ಕೇ ನಿಮ್ಮ ಮಾತಿಗಷ್ಟು ಬೆಲೆ ನೋಡಿ. . . ಹೌದ? ಒಂದು ಸುದ್ದಿ ಕೇಳಿ ಬಾಳ ಸಂತೋಷ ಆತು. ಆದರೆ ನೀವು ಹೀಗೆ ಮಲಗಿ ಬಿಟ್ಟಿದ್ದೀರಲ್ಲ?’

ಕೃಷ್ಣಪ್ಪ ಅವರ ಮಾತು ತನಗರ್ಥವಾಗಲಿಲ್ಲೆಂದು ಪ್ರಶ್ನಾರ್ಥಕವಾಗಿ ನೋಡಿದ. ಪಂಚಲಿಂಗಯ್ಯ ನಕ್ಕರು. ತಮ್ಮ ಹಿಂದೆ ನಿಂತ ಮಗನನ್ನು ತೋರಿಸಿ – ‘ಇವನೇ ಫಸ್ಟ್‌ಅಂಟೆಂಪ್ಟಲ್ಲೇ ಪಾಸಾಗಿದ್ದಾನೆ. ಪರೀಕ್ಷೇಲಿ ಸ್ವಲ್ಪ ಮೈ ಸರಿಯಿರಲಿಲ್ಲ. ಇಲ್ದಿದ್ರೆ ಫಸ್ಟ್‌ಕ್ಲಾಸ್‌ತಗೋತಿದ್ದ. ನನ್ನ ಹತ್ತಿರ ಇರೋ ದುಡ್ಡನ್ನ ಕಟ್ಟಿಕೊಂಡು ಸಾಯಲಾ ನಾನು? ಇರೋನು ಒಬ್ಬನೇ ಮಗ. ಫಾರಿನ್‌ಗೂ ಹೋಗಬೇಕೂಂತ ಆಸೆ. ಮೆಡಿಕಲ್ ಮೆಡಿಕಲ್ ಅಂತ ದುಂಬಾಲು ಬಿದ್ದಿದ್ದಾನೆ. ಏನು ಮಾಡಬೇಕು ಹೇಳಿ ದುಡ್ಡನ್ನ? ನಿಮ್ಮಂಥೋರು ಮಾಡೋ ಒಳ್ಳೇ ಕೆಲಸಕ್ಕೋ ವಿದ್ಯೆಗೋ ಅದನ್ನೆಲ್ಲ ಚಲ್ಲೋದೂಂತ ಮನಸ್ಸು ಮಾಡಿದೀನಿ. . . . ಹೌದ? ನಿಮಗೆ ಗೊತ್ತೇ ಇಲ್ಲವ? ಇಡೀ ಬೆಂಗಳೂರೇ ಮಾತಾಡ್ಕೋತಿದೆ. ನಿನ್ನೆ ಗಾಲ್ಫ್‌ಕ್ಲಬ್ಬಲ್ಲಿ ಅದೇ ಮಾತು. ನಿಮಗೇ ಗೊತ್ತಿಲ್ಲಾಂದ್ರೆ ಆಶ್ಚರ್ಯ ಮಾರಾಯ್ರ. ನೀವೇ ಮುಖ್ಯಮಂತ್ರಿ ಆಗ್ತೀರೀಂತ ಸುದ್ದಿ ಇದೆ. ಸಂತೋಷ. ಆದರೆ ನಿಮ್ಮನ್ನ ಆಮೇಲೆ ಹಿಂಗೆ ಮಾತಾಡಿಸಾಕೆ ಸಾಧ್ಯವೆ ಇಲ್ಲ. . . . ಏನೋ ಮಾತಾಡ್ತ ಇದ್ರಿ. ಸಾಯಂಕಾಲ ಬಂದು ನೋಡ್ತೀನಿ. ಈಗ ನೀವು ಹೂಂತ್ಲೂ ಅನ್ನಬೇಡಿ ಉಹೂಂತ್ಲೂ ಅನ್ನಬೇಡಿ. ನೀವೇ ಖುದ್ದು ಹೇಳೋದೂ ಕೂಡದು. ಚೀಪಾಗಿ ಬಿಡ್ತದೆ – ನಂಗೊತ್ತು. ಅದಕ್ಕೊಂದು ಬೇರೆ ಮಾರ್ಗ ಇದೆ. ವೀರಣ್ಣನ ಹತ್ರ ಮಾತಾಡ್ತೀನಿ – ಸಾಯಂಕಾಲ ನೋಡಾನ. . . . ಬಾಳ ಒಳ್ಳೆ ಡಾಕ್ಟ್ರು ಅವರು ಮಾರಾಯ್ರ. ಸಾಯಂಕಾಲ ಕರ್ಕೊಂಬರ್ತೀನ್ರಿ. . . .’ ಎಂದು ಪಂಚಲಿಂಗಯ್ಯ ನಮಸ್ಕಾರ ಮಾಡಿ ನಗುತ್ತ ಮಗನ ಜೊತೆ ಕೋಣೆಯಿಂದ ಹೊರಬಿದ್ದರು.

‘ನೋಡಿ ಇಂಥವ್ರೆ ನನ್ನ ಹತ್ರ ಬರೋದು ಈಗ’

ಕೃಷ್ಣಪ್ಪ ದುಃಖದಿಂದ ಮಾತಾಡಿದ್ದು ಕೇಳಿ ಮಹೇಶ್ವರಯ್ಯ,

‘ನನಗೆ ಈಚೆಗೆ ಮನಸ್ಸನ್ನು ಒಂದು ಕಡೆ ನಿಲ್ಲಿಸೋಕೇ ಸಾಧ್ಯ ಆಗ್ತಾ ಇಲ್ಲ ಕಣಯ್ಯ. ಕಚ್ಚೆ ಹರಕನಂತೆ ಸುಮ್ಮನೆ ಅಲೆಯುತ್ತೆ ದರಿದ್ರದ್ದು’ ಎಂದು ನಕ್ಕರು. ಕ್ಷಣ ಮೌನವಾಗಿದ್ದು,

‘ನಿಂಗೆ ಮತ್ತೆ ಆ ಮರದ ಕೆಳಗೆ ಕೂತಿರಬೇಕೂಂತ ಅನ್ನಿಸತ್ತೆ ಕಣ್ಣಯ್ಯ. ಪೇರಳೇ ಗಿಡದ ಮೇಲೆ ಬರೋ ಹಕ್ಕಿಗಳಿಗಾಗಿ ಕಾಯ್ತಾ ಕೂತಿರಬೇಕೂಂತ ಹಂಬಲಿಸಕ್ಕೆ ಶುರುಮಾಡ್ತಿ ನೀನು. ಅದೇನು ಹೇಳಬೇಕೂಂತ ಇದ್ದೆ ಗೊತ್ತಾ? ಹೀಗೇ ನಾನು ಯೋಚಿಸ್ತಾ ಇದ್ದೆ! ನಿನಗೆ ಸ್ಟ್ರೋಕ್ ಆದಾಗ ನನಗೆ ಏನಾದರೂ ಅನ್ನಿಸಬೇಕಿತ್ತಲ್ಲ ಅಂತ. ಆದರೆ ನೋಡು ಈಗ ನನ್ನ ಮನಸ್ಸಿಗೆ ಕುದುರೆ ಚಪಲ ಹತ್ತಿಕೊಂಡಿದೆ. ಯಾವಾಗಲೂ ಏನಾರೂ ಉದ್ರೇಕಬೇಕು ಅನ್ನಿಸತ್ತೆ. ಕುಡೀಲಿಕ್ಕೆ ಶುರುಮಾಡಿದ್ರೆ ದಿನವಿಡೀ ಕುಡೀತ ಕೂತಿರ್ತೀನಿ. ಇಲ್ಲ ಹೀಗೆ ಅಲೀಲಿಕ್ಕೆ ಶುರುಮಾಡ್ತೀನಿ. ನೋಡು – ಈಗ್ಲೇ ನೋಡು ನನ್ನ – ಹೇಗೆ ಮನಸ್ಸು ಅಲೀತಿದೆ ಅಂತ. ಈಗ ಯೋಚಿಸ್ತ ಯೋಚಿಸ್ತ ಏನೋ ಹೇಳಬೇಕೂಂತಿದ್ದಾಗ ಆ ನಾಲ್ಕು ಬೆರಳಿಗೂ ಉಂಗುರ ಹಾಕ್ಕೊಂಡವರು ಬಂದು ಬಿಟ್ರು. . . . ಅದೇನಿಲ್ಲ – ನೀನು ಹುಷಾರಾಗ್ತಿ ಅಂತ ಕಾಣಿಸುತ್ತೆ ನಂಗೆ – ಅದನ್ನೇ ಹೇಳಲಿಕ್ಕೆ ಹೋಗಿದ್ದೆ.’

ಕೊನೆಯ ವಾಕ್ಯವನ್ನು ಸಪ್ಪೆಯಾದ ಧ್ವನಿಯಲ್ಲಿ ಹೇಳಿದರು.

‘ನನ್ನ ಸಮಾಧಾನಕ್ಕಲ್ಲವಲ್ಲ ನೀವು ಹೇಳೋದು?’

ಮಹೇಶ್ವರಯ್ಯ ಕೃಷ್ಣಪ್ಪನನ್ನು ನೋಡುತ್ತ ಗಂಭೀರವಾಗಿ ‘ಅಲ್ಲ’ ಎಂದರು. ಸ್ವಲ್ಪ ತಡೆದು ಗೆಲುವಾಗಿ ‘ನೋಡಯ್ಯಾ ಈ ಕುದುರೆ ವ್ಯವಹಾರದಲ್ಲಿ ಮಾತ್ರ ನಂದೇ – ನನಗೆ ಕಾಣಿಸಲ್ಲ: ಏನೂಂದ್ರೇ ಏನೂ ಕಾಣಿಸಲ್ಲ. ಒಟ್ಟಿನಲ್ಲಿ ಬುದ್ಧಿ ತೆಳಗಾಗಿಬಿಟ್ಟಿದೆ. ಈಗ ಆದ್ದು ಮುಂದಿನ ಕ್ಷಣ ಮರೆತು ಹೋಗಿರುತ್ತೆ.’

‘ನೀವು ಇಲ್ಲೆ ಬಂದಿರಿ – ’

‘ನಿನ್ನ ಹೆಂಡತಿಗೆ ತೊಂದರೆಯಾಗಬಹುದು ಕಣೊ’

‘ಬನ್ನಿ’

ಆಗಲೆಂದು ಮಹೇಶ್ವರಯ್ಯ ನಿಂತು –

‘ಇವತ್ತು ನನ್ನ ಅದೃಷ್ಟ ಪರೀಕ್ಷೆ ಮಾಡ್ಕೋತಿದೀನಿ. ರಾತ್ರೆ ಬರ್ತೀನಿ’ ಎಂದು ಹೋದರು.

ಕೃಷ್ಣಪ್ಪನಲ್ಲಿ ತುಂಬ ಲವಲವಿಕೆ ಮೂಡಿತು. ಖಷಿಯಿಂದ ‘ನಾಗೇಶಾ’ ಎಂದು ಕರೆದ. ನಾಗೇಶ ಸಪ್ಪಗಿರೋದು ಕಂಡು ‘ಯಾಕೋ’ ಎಂದ. ‘ಯಾಕಿಲ್ಲ ಗೌಡರೆ’ ಎಂದದ್ದಕ್ಕೆ’ಹೇಳೋ’ ಎಂದು ಒತ್ತಾಯ ಮಾಡಿದ.

‘ಅದೇ ನನ್ನ ಅಕ್ಕ ಕ್ಲಾರ್ಕ್‌ಆಗಿದ್ದಳಲ್ಲ ಅವಳ ಕೆಲಸ ಹೋಯ್ತಂತೆ’

‘ಅದಕ್ಯಾಕೆ ಯೋಚಿಸ್ತಿ. ವೀರಣ್ಣನಿಗೆ ಹೇಳಿ ಅವರ ಥಿಯೇಟರಿನಲ್ಲಿ ಕೊಡಿಸ್ತೀನಿ’

‘ನಿಮ್ಮ ಹತ್ರ ಇಂಥ ಕೆಲಸ ಮಾಡಿಸೋಕೆ ಇಷ್ಟವಿಲ್ಲ ನಂಗೆ ಗೌಡ್ರೆ’

‘ಭೇಷ್ ನಿಂಗೊಬ್ಬನಿಗಾದ್ರೂ ಹಾಗನ್ನಿಸತ್ತಲ್ಲ. ಗೌರಿ ದೇಶಪಾಂಡೆ ನಾಳೆ ರಾತ್ರೆ ಬರೋದು ಅಲ್ವೇನೊ?

‘ಹೌದು’

‘ಅವಳನ್ನೆಲ್ಲಿ ಇಳಿಸುವುದೆಂದು ಚಿಂತೆಯಾಯ್ತು. ಮನೆಯಲ್ಲೆ ಇಳಿಸಬಹುದು. ಅದರೆ ಸೀತೆ ರಂಪ ಮಾಡಿಯಾಳು. ಹೋಟಲಲ್ಲಿ ಒಬ್ಬಳೇ ಇರೂಂತ ಹೇಗೆ ಹೇಳೋದು? ಎಲ್ಲಿ ಇಳಿಸೋದು ಅವಳನ್ನ?’

‘ವೀರಣ್ಣನೋರ ಗೆಸ್ಟ್‌ಹೌಸ್‌ಇದೆಯಲ್ಲ ಗೌಡರೆ’

‘ನೋಡಿದೆಯಾ ಹೇಗೆ ಕ್ರಮೇಣ ನಾನು ವೀರಣ್ಣನೋರ ಬಲೇಲಿ ಸಿಕ್ಕಿಹಾಕಿಕೋತಿದೀನಿ ಅಂತ’.

‘ನಿಮ್ಮನ್ನ ಯಾರಿಗೆ ಕಟ್ಟಿಹಾಕಲಿಕ್ಕೆ ಸಾಧ್ಯ?’

‘ನಿಂಗೊತ್ತಿಲ್ಲ ಅಷ್ಟೆ – ಇವೆಲ್ಲ ನನ್ನ ಅವನತಿಯ ಚಿಹ್ನೆಗಳು.’

ನರ್ಸ್‌ಬಂದಳು. ವೀರಣ್ಣ ಒಬ್ಬಳು ಮೃದುವಾದ ಕಣ್ಣುಗಳ ಹುಡುಗಿಯನ್ನೇ ಗೊತ್ತು ಮಾಡಿದ್ದ. ಅವಳು ಸದ್ದುಗದ್ದಲವಿಲ್ಲದೆ ಕ್ಯಾನ್‌ವಾಸ್‌ಶೂಸಿನ ಮೇಲೆ ಓಡಾಡುತ್ತಾ ಕೃಷ್ಣಪ್ಪನ ಎಡಗೈ ಎಡಗಾಲುಗಳನ್ನು ನಾನಾ ವಿಧದಲ್ಲಿ ತಿಕ್ಕಿದಳು. ಪೆಟ್ಟಾಗದಂತೆ ಮೇಲಿಂದ ಕೆಳಕ್ಕೆ ಕೆಳಗಿನಿಂದ ಮೇಲಕ್ಕೆ ತಾಡನ ಮಾಡಿದಳು. ವೀಲ್‌ಚೇರನ್ನು ತಳ್ಳುತ್ತ ಎಷ್ಟು ಬೇಕೋ ಅಷ್ಟು ಮಾತಾಡಿ ನೆಮ್ಮದಿಯಾಗುವಂತೆ ಮಾಡಿದಳು.

ಕೃಷ್ಣಪ್ಪನಿಗೆ ಗೋಪಾಲರೆಡ್ಡಿಯ ಸಖ್ಯದಲ್ಲಿ ತನಗೆ ಒಂದಿಡೀ ವರ್ಷ ಜೊತೆಗಾತಿಯಾಗಿದ್ದ ಲೂಸಿನಾಳ ನೆನಪಾಗುತ್ತದೆ – ಮತ್ತೆ, ಮತ್ತೆ. ಲೂಸಿನಾ ದೆಹಲಿಯಲ್ಲಿ ನರ್ಸ್‌ಶಿಕ್ಷಣ ಪಡೆಯುತ್ತಿದ್ದಳು. ಅವಳ ಕಥೆ ದಾರುಣವಾಗಿತ್ತು. ಮಧ್ಯಮವರ್ಗದ ಮನೆ ಹುಡುಗಿ ಅವಳು. ವರ್ತಕನ ಮಗನೊಬ್ಬ ಅವಳನ್ನು ನಂಬಿಸಿ ಕಲ್ಕತ್ತದಿಂದ ದೆಹಲಿಗೆ ಕರೆದುಕೊಂಡು ಬಂದು ಮದುವೆಯಾಗುವೆನೆಂದು ಮೋಸಮಾಡಿ ತನ್ನ ಗೆಳೆಯರಲ್ಲಿ ಅವಳನ್ನು ಹಂಚಿಕೊಳ್ಳಲು ಪ್ರಯತ್ನಿಸಿದ್ದ. ಇದನ್ನು ಕೆಲವು ದಿನ ಸಹಿಸಿ, ಅದು ಅತಿರೇಕಕ್ಕೆ ಹೋದಾಗ ಅವನ ಬಂಧನದಲ್ಲಿದ್ದ ಲೂಸಿನಾ ಒಂದು ರಾತ್ರಿ ತಪ್ಪಿಸಿಕೊಂಡು ಎಲ್ಲಿ ಹೋಗುವುದೆಂದು ತಿಳಿಯದೆ ಪಾರ್ಲಿಮೆಂಟ್ ಸದಸ್ಯರ ನಿವಾಸವೊಂದರಲ್ಲಿ ಇಳಿದುಕೊಂಡಿದ್ದ ಗೋಪಾಲರೆಡ್ಡಿ ಕೃಷ್ಣಪ್ಪರ ಬಾಗಿಲು ತಟ್ಟಿದಳು. ಭೀತಳಾಗಿ ನಿಂತ ಹುಡುಗಿಯನ್ನು ಸಮಾಧಾನ ಪಡಿಸಿ ತಾವಿದ್ದ ಬಂಗಲೆಯ ರೂಮೊಂದರಲ್ಲಿ ಮಲಗುವಂತೆ ಹೇಳಿದ. ಲೂಸಿನಾ ಇಡೀ ರಾತ್ರೆ ಇಬ್ಬರಲ್ಲಿ ಒಬ್ಬ ತನ್ನ ಕೋಣೆಗೆ ಬರಬಹುದೆಂದು ಹೆದರಿಕೊಂಡು ಕಾದಿದ್ದಳು. ಬೆಳಗಾಯಿತು. ಅವಳು ಕೃತಜ್ಞಳಾಗಿ ಇವರನ್ನು ಹುಡುಕಿಕೊಂಡು ಡೈನಿಂಗ್ ಹಾಲಿಗೆ ಬಂದು ಅತ್ತಳು. ರಡ್ಡಿ ಅವಳನ್ನು ನರ್ಸಿಂಗ್ ಕಾಲೇಜಿಗೆ ಸೇರಿಸಿದ. ಕ್ರಮೇಣ ಅವಳಿಗೆ ಕೃಷ್ಣಪ್ಪನ ಮೇಲೆ ಮನಸ್ಸಾಯಿತು. ಕೃಷ್ಣಪ್ಪನಿಗೂ ಅವಳೆಂದರೆ ಇಷ್ಟವಾಯಿತು. ಆದರೆ ರೆಡ್ಡಿಯ ಋಣದಲ್ಲಿದ್ದೇನೆಂಬ ಕಾರಣಕ್ಕಾಗಿ ಅವಳು ತನ್ನನ್ನು ಇಷ್ಟಪಡುವುದೊ ಎಂದು ಸಂಕೋಚವಾಗಿ ಅವನು ಆಕೆಯನ್ನು ದೂರವಿರಿಸುತ್ತಲೇ ಇದ್ದ. ರಜೆಯಲ್ಲಿ ಒಮ್ಮೆ ಅವಳು ಅವನಿಗೆ ಬರೆದು ಬೆಂಗಳೂರಿಗೆ ಬಂದಳು. ರೆಡ್ಡಿಯ ಬಂಗಲೆಯಲ್ಲಿ ಆಗ ಕೃಷ್ಣಪ್ಪ ವಾಸವಾಗಿದ್ದುದು. ಒಂದು ರಾತ್ರೆ ಲೂಸಿನಾ ಬಾಗಿಲನ್ನು ಮೆತ್ತಗೆ ತೆರೆದು ಕೃಷ್ಣಪ್ಪನ ಮಗ್ಗುಲಲ್ಲಿ ಬಂದು ಮಲಗಿದಳು.

‘ಯಾಕಿದನ್ನ ನೀನು ಮಾಡ್ತಿದಿ?’ ಎಂದು ಕೇಳಿದ.

‘ನಿನ್ನ ಮೇಲೆ ಇಷ್ಟ ನನಗೆ. ಅಷ್ಟೂ ನಿನಗೆ ಗೊತ್ತಾಗಲ್ವಲ್ಲ?’

‘ನನ್ನ ಮದುವೆಯಾಗ್ತೀಯೇನು ಹಾಗಾರೆ?’

‘ಮುಂದೆ ಓದಕ್ಕೆ ಇಂಗ್ಲೆಂಡಿಗೆ ಹೋಗೋ ಆಸೆ ನನಗೆ. ನೀನು ಒತ್ತಾಯ ಮಾಡಿದ್ರೆ ಆಗ್ತೀನಿ.’

ಅವಳನ್ನು ತಬ್ಬಿಕೊಂಡ ಕೃಷ್ಣಪ್ಪನಿಗೆ ನಗು ಬಂತು.

‘ಬೇರೆ ಹುಡುಗಿಯರ ಜೊತೆ ನಾನು ಮಲಗ್ತೀನಿಂತ ನಿನಗೆ ಗೊತ್ತಲ್ವ?’

‘ಗೊತ್ತು, ಆದ್ರೆ ನಿನ್ನೆ ಬಂದಿದ್ದಳಲ್ಲ – ಅವಳೇನು ಚೆನ್ನಾಗಿದಾಳೇಂತ ನೀನು ಅವಳ ಜೊತೆ ಮಲಗಿದ್ದು?’ ಮುನಿಸಿನಿಂದ ಲೂಸಿನಾ ಅವನ ಕೆನ್ನೆಗೆ ಹೊಡೆದಳು.

‘ನೀನು ಮಹಡಿ ಮೇಲೆ ಮಲಗಿದ್ದೀಯಲ್ಲ – ನಿಂಗೆ ಗೊತ್ತಿರಲಿಲ್ಲ ಅಂತ ತಿಳ್ಕೊಂಡಿದ್ದೆ. ಇಷ್ಟು ಸಲಿಗೆಯಿಂದ ಯಾವ ಹುಡುಗಿಯೂ ಅವನನ್ನು ಮಾತಾಡಿಸಿದ್ದಿಲ್ಲ.

‘ನಾನೇನೂ ಪೆದ್ದಲ್ಲ. ಈಗ ನಾನಿಲ್ಲಿ ಇರೋ ತನಕ ನೀನು ಯಾರನ್ನೂ ಹತ್ತಿರ ಸೇರಿಸ್ಬಾರ್ದು. ನಾನು ನರ್ಸಿಂಗ್ ಸೇರಿದ ಮೇಲೆ ನಿನ್ನ ಮೇಲೆ ಆಸೆಯಾದ ದಿನದಿಂದ ಯಾರನ್ನೂ ನನ್ನ ಹತ್ತಿರ ಸೇರಿಸಿಲ್ಲ. ಗೊತ್ತ?’

‘ಗೊತ್ತು’

ಅವಳೂ ತನ್ನಿಂದ ಸುಖಪಡುವುದನ್ನು ಕಂಡಿದ್ದರಿಂದ ಅವನನ್ನು ಪಾಪಭಾವನೆ ಭಾಧಿಸಲಿಲ್ಲ. ಹಿಂದೆ ಹೆಣ್ಣಿನ ಸಂಗಕ್ಕೆ ಮುಂಚೆ ಅವನು ಚೆನ್ನಾಗಿ ಕುಡಿದಿರುತ್ತಿದ್ದ. ಮತ್ತಿನಲ್ಲಿ ತನ್ನ ದೇಹದ ಬಯಕೆಯನ್ನು ಕಳೆದುಕೊಂಡು ಬೆಳಿಗ್ಗೆ ರಾತ್ರಿಯ ವ್ಯಭಿಚಾರವನ್ನು ಮರೆಯಲೆಂದೇ ತೀವ್ರವಾಗಿ ರೆಡ್ಡಿಯ ಜೊತೆ ಏನೇನೋ ಅಮೂರ್ತ ವಿಷಯಗಳನ್ನು ಚರ್ಚಿಸಲು ಪ್ರಯತ್ನಿಸುತ್ತಿದ್ದ. ಆದರೆ ಲೂಸಿನಾ ಬರಿ ಇರುವುದೇ ಸುಖವೆನ್ನಿಸಿದ್ದಳು. ತನ್ನ ಗಾಂಭೀರ್ಯವನ್ನು ಸಂಭೋಗದಲ್ಲೂ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಹಿಂದಿನ ತಾನು ಎಂಥ ಹಾಸ್ಯಾಸ್ಪದ ವ್ಯಕ್ತಿಯೆಂದು ಈಗ ತಿಳಿಯತೊಡಗಿತು. ಅವಳ ಮೃದುವಾದ ಬೆಚ್ಚಗಿನ ಯೋನಿ, ಪುಟ್ಟಗಿದ್ದರೂ ದೃಢವಾಗಿದ್ದ ಮೊಲೆಗಳು, ಸ್ವಲ್ಪ ದಪ್ಪವಾದ ತುಟಿಗಳು, ಎಣ್ಣೆಗೆಂಪು ಬಣ್ಣದ ಚರ್ಮ, ಅವಳ ಅಂಡಿನ ಮೇಲಿದ್ದ ಮಚ್ಚೆ, ಅವಳ ಪ್ರಶಾಂತ ಕಣ್ಣುಗಳು, ಬೆನ್ನಿಡೀ ಚೆಲ್ಲುವಷ್ಟು ಉದ್ದದ ಅವಳ ಕಪ್ಪು ಕೂದಲು – ಎಲ್ಲವನ್ನೂ ವಾರಂಗಲ್ ಠಾಣೆಯಲ್ಲಿ ಅವನು ಧ್ಯಾನಮಾಡುತ್ತಿದ್ದ ದೇವಿಯ ನಖಶಿಖಾಂತದ ವರ್ಣನೆಯ ಜೊತೆ ಹೋಲಿಸುವನು. ಸಂಸ್ಕೃತದ ಆ ಶ್ಲೋಕಗಳನ್ನು ಮೃದುವಾಗಿ ಹಾಡಿ ಅವಳಿಗೆ ಮೋಜೆನ್ನಿಸುವಂತೆ ಮಾಡುವನು. ಸಂಭೋಗವೆಂದರೆ ಅವಸರದ ವಿಸರ್ಜನೆಯೆಂದು ತಿಳಿದಿದ್ದ ಕೃಷ್ಣಪ್ಪನಿಗೆ ದೇಹದ ಎಲ್ಲ ಭಾಗಗಳೂ ಅಪೇಕ್ಷೆ, ಉದ್ರೇಕ, ತಣಿವುಗಳ ಬುಗ್ಗೆಯೆಂಬುದನ್ನು ಲೂಸಿನಾ ಕಲಿಸಿದಳು. ಸಂಭೋಗ ಮೈಥುನಾವಾಯಿತು. ಎಷ್ಟೆಂದರೆ ಅಷ್ಟು ವಿಸ್ತರಿಸುವ ಹಾಡಾಯಿತು.

ಆದರೆ ಕ್ರಮೇಣ ಅವಳನ್ನು ತಾನು ಬಿಟ್ಟಿರಲಾರೆ ಎಂಬ ವ್ಯಾಮೋಹ ಹುಟ್ಟಿಕೊಂಡಿತು. ಅದರಿಂದ ಅವನ ಹಿಗ್ಗಿನ ತೀವ್ರತೆಯೂ ಇಳಿಯುತ್ತ ಬಂತು. ಅವಳು ಯಾಕೆ ತನ್ನ ತಂದೆಯನ್ನು ದ್ವೇಷಿಸುತ್ತಾಳೆಂದು ಅವನು ಕುತೂಹಲ ಬೆಳೆಯುತ್ತ ಹೋದಂತೆ ಇದರಿಂದ ಅವಳಿಗೆ ಕರಕರೆಯಾಗುವುದನ್ನು ಗಮನಿಸಿದ. ಒಂದು ದಿನ ಅವಳು ತನ್ನ ತಂದೆಯೇ ತನ್ನನ್ನು ಬಯಸುತ್ತಿದ್ದ ಅದರಿಂದಾಗಿ ತಾಯಿ ತನ್ನನ್ನು ದ್ವೇಷಿಸುತ್ತಿದ್ದಳು – ಮನೆ ನರಕವಾಗತೊಡಗಿತ್ತು ತನಗೆ ಎಂದು ಹೇಳಿದಳು. ಅವಳ ತಂದೆ ಹಾಗಾದರೆ ಅವಳ ಜೊತೆ ಮಲಗಿದ್ದನೊ? ಅದನ್ನು ಕೇಳುವುದು ಹೇಗೆ? ಈ ಬಗೆಯಲ್ಲಿ ಕೃಷ್ಣಪ್ಪ ಕೊರಗುವುದು ಕಂಡು ಲೂಸಿನಾ,

‘ನೀನು ಬೇರೆ ಥರದ ಗಂಡಸೂಂತ ತಿಳಿದಿದ್ದೆ’ ಎಂದು ನಿರಾಶೆಯಲ್ಲಿ ಒಮ್ಮೆ ಹೇಳಿದಳು.

‘ಬೇರೆ ಥರಾ ಅಂದ್ರೆ. . . .’

‘ಈ ಕ್ಷಣ ನಿನಗೆ ಸಾಲದ? ನನ್ನ ಭೂತ ಯಾಕೆ ನಿನಗೆ?’

‘ನಿನ್ನ ನಾನು ಮದುವೆಯಾಗಬೇಕು – ಅದಕ್ಕೇ’

‘ನಾನು ಮದುವೇಂದ್ರೆ ದ್ವೇಷಿಸುತ್ತೇನೆ’

‘ಗೌರಿನೂ ಹೀಗೇ ಹೇಳ್ತ ಇದ್ದಳು’, ಕೃಷ್ಣಪ್ಪ ಚಿಂತಾಕ್ರಾಂತನಾಗಿ ಮಾತಾಡಿದರೆ ಲೂಸಿನಾ ಇನ್ನೇನೋ ಭಾವಿಸುವಳು.

‘ಅವಳಿಗೆ ಹೀಗೆಲ್ಲಾ ನಿನ್ನ ಜೊತೆ ಮಾಡ್ಲಿಕ್ಕೆ ಬರ್ತಿತ್ತ?’

ಲೂಸಿನಾಳ ಮೊಗ್ಗಿನಂತಹ ಮೊಲೆಗಳಿಗೆ ಮುತ್ತಿಡುತ್ತ ಕೃಷ್ಣಪ್ಪ ಅವಳ ಮಾತಿನ ಧಾಟಿಯಲ್ಲಿದ್ದ ತುಂಟತನವನ್ನು ಕಂಡು,

‘ನೀನು ಗೌರಿ ಹಾಗೇನೇ. ಆದರೆ ಅವಳು ಸೀರಿಯಸ್ಸಾಗಿಯೂ ಇರ್ತ ಇದ್ದಳು. ನೀನು ಮಾತ್ರ ಚೆಲ್ಲು ಹುಡುಗಿ’ ತನಗಾಗಿದ್ದ ನಿರಾಶೆಯನ್ನು ಮರೆಯಲು ಕೃಷ್ಣಪ್ಪ ಪ್ರಯತ್ನಿಸುತ್ತಿದ್ದ.

‘ಇದನ್ನೆಲ್ಲ ಮಾಡ್ತಾ ರಾಜಕೀಯಾನ್ನೂ ಚರ್ಚಿಸೋ ಹುಡುಗಿ ನಿನಗೆ ಬೇಕ?’

‘ನಾನು ಹೇಳೋದು ನಿನಗೆ ಅರ್ಥವಾಗಲ್ಲ.’

ಈ ಲೂಸಿನಾ ಇದನ್ನೆಲ್ಲ ಎಲ್ಲಿ ಕಲಿತಳೆಂದು ಕೃಷ್ಣಪ್ಪನಿಗೆ ಅಸೂಯೆಯಾಗುತ್ತದೆ ಯಾವ ಗಂಡು ಇವಳಿಗಿದನ್ನು ಕಲಿಸಿದ?

‘ಮದುವೆ ಮಾತು ನೀನು ಶುರುಮಾಡಿದ ಮೇಲೆ ನಿನ್ನ ದೇಹದಲ್ಲಿದ್ದ ಪುಳಕವೆಲ್ಲ ಬತ್ತಿ ಹೋಯ್ತು, ನಂದೂ ಹೋಯ್ತು.’

ಲೂಸಿನಾ ಎದ್ದು ಶವರ್ ತೆಗೆದುಕೊಳ್ಳಲು ಹೋಗುವಳು. ಕೃಷ್ಣಪ್ಪನೂ ಅವಳ ಹಿಂದೆ ಹೋಗಿ ಅವಳ ಜೊತೆ ಶವರ್ನ ತಂಪಾದ ನೀರಲ್ಲಿ ನಿಂತು ಅವಳ ಮೈಗೆ ಸೋಪನ್ನು ಬಳಿಯುವನು. ಮತ್ತೆ ಚುರುಕಾಗುವನು. ಇವಳ ನಿಸ್ಸಹಾಯಕತೆಯನ್ನು ತಾನು ದುರುಪಯೋಗಪಡಿಸಿಕೊಳ್ಳುತ್ತಿದ್ದೇನೆಯೆ ಎಂಬ ಸಂಶಯವನ್ನು ತಳ್ಳಲು ಅವಳನ್ನು ಮುತ್ತಿಡುತ್ತ ಆರಾಧಿಸುವನು. ಈ ಹೆಣ್ಣು ಗಂಡಿನ ಸಂಬಂಧದಲ್ಲಿ ಸಮತೋಲ ಸಾಧ್ಯವೇ ಇಲ್ಲವೆ ಎಂದು ಯೋಚಿಸುತ್ತ, ಅಣ್ಣಾಜಿಯ ವಿವರಣೆಯನ್ನು ನೆನೆಯುವನು. ತನ್ನನ್ನು ಪ್ರವೇಶಿಸಿದ ಕೃಷ್ಣಪ್ಪ ಬೇರೇನೋ ಯೋಚಿಸುತ್ತಿರುವುದು ಕಂಡು ಲೂಸಿನಾ ಸಿಟ್ಟಾಗುವಳು. ಈ ಪ್ರೀತಿಯನ್ನು ಮೀರಿದ್ದು ತನ್ನಲ್ಲಿದೆ ಎಂದು ಲೂಸಿನಾಗೆ ತಿಳಿಯುವಂತೆ ಮಾಡುವ ದಾರಿ ಕಾಣದೆ ಕೃಷ್ಣಪ್ಪ ತಬ್ಬಿಬ್ಬಾಗುವನು.

ನಾನು ಅಣ್ಣಾಜಿಗೆ ಈಗ ನಿಜವಾಗಿ ಹತ್ತಿರವಾದೆ ಎಂದು ಕೃಷ್ಣಪ್ಪನಿಗೆ ಆ ದಿನಗಳಲ್ಲಿ ಖುಷಿಯೂ ಇತ್ತು. ಆದರೆ ಲೂಸಿನಾ ಎಷ್ಟು ಸಂಭ್ರಮದಲ್ಲಿ ತನ್ನ ದೇಹವನ್ನು ಹಾಡಿಸಿದ್ದಳೊ ಅಷ್ಟೇ ಸಂಭ್ರಮದಲ್ಲಿ ಇಂಗ್ಲೆಂಡಿಗೆ ಹೋದಳು. ಒಂದು ವರ್ಷದ ನಂತರ ತಾನು ಮದುವೆಯಾಗಿರುವುದಾಗಿ ಬರೆದು ತಮ್ಮಿಬ್ಬರ ಸಂಬಂಧಗೊತ್ತಿದ್ದ ತಾನು ಮದುವೆಯಾದ ಡಾಕ್ಟರ್ ಎಡ್ಡಿಗ್ರೀನೋ ಎಷ್ಟು ಉದಾರಿಯೆಂದು ಹೊಗಳಿದಳು. ಕೃಷ್ಣಪ್ಪ ಇದನ್ನೆಲ್ಲ ನೆನೆಯುತ್ತ ಚಕಿತನಾಗಿ ಶುದ್ಧ ಪ್ರತಿವ್ರತೆಯಾದ ಸೀತೆ ಎಷ್ಟು ಬರಡೆಂದು ಕೊರಗುತ್ತಾನೆ. ಪ್ರಾಯಶಃ ಮದುವೆಯಾಗಿದ್ದರೆ ಲೂಸಿನಾಳೂ ಹೀಗೆ ಆಗುತ್ತಿದ್ದಳೊ ಏನೊ – ಹೇಳುವುದು ಹೇಗೆ?

ನರ್ಸಿನ ಕಡೆ ನೋಡುತ್ತ’ನಿಮ್ಮ ಹೆಸರು? ಮರತೇಬಿಟ್ಟೆ’ ಎನ್ನುತ್ತಾನೆ.

‘ಜ್ಯೋತಿ’ – ಅವಳು ಮುಗುಳ್ನಗುತ್ತ ಹೇಳುತ್ತಾಳೆ.

‘ನಿಮಗೆ ಮದುವೆಯಾಗಿದೆಯೇ? ನನ್ನ ಕುತೂಹಲವನ್ನ ಕ್ಷಮಿಸಿ’

ಹೀಗೆ ಹೆಣ್ಣಿನ ಹತ್ತಿರ ಸಭ್ಯವಾಗಿ ಮಾತಾಡುವ ಕಲೆಯನ್ನು ಕೃಷ್ಣಪ್ಪ ಗೋಪಾಲರೆಡ್ಡಿಯಿಂದ ಕಲಿತಿದ್ದು. ಸಭ್ಯತನದಲ್ಲಿ ತೀವ್ರತೆ ಕುಗ್ಗುತ್ತದೆ ಎಂಬ ಅವನ ಭಾವನೆಯನ್ನು ಹಾಸ್ಯಮಾಡಿ ಮಾಡಿ ಗೋಪಾಲರೆಡ್ಡಿ ಹೆಚ್ಚು ಕಮ್ಮಿ ಹೋಗಲಾಡಿಸಿದ್ದ.

‘ಇಲ್ಲ ಆಗಬೇಕೂಂತ ಇದೀನಿ, ನನ್ನ ಬಾಯ್‌ಫ್ರೆಂಡ್ ಎಂಜಿನಿಯರ್ ಪರೀಕ್ಷೆ ಮುಗಿಸಿ ಎರಡು ವರ್ಷಗಳಿಂದ ಕೆಲಸಕ್ಕಾಗಿ ಅಲೀತ ಇದಾನೆ. ಐದು ವರ್ಷಗಳಿಂದ ನಾವು ಕಾದಿದ್ದೇವೆ. ಕೆಲಸ ಸಿಕ್ಕದೆ ಮದುವೆಯಾಗಲ್ಲ ಅಂತಾನೆ ಅವನು.’

ಹೆಣ್ಣು ಎಷ್ಟೊಂದು ಬೇರೆ ಬೇರೆ ರೀತಿಯಲ್ಲಿ ಈ ದೇಹಕ್ಕೆ ಜೀವ ಸಂಚಾರ ತರುತ್ತಾಳೆಂದು ಆಶ್ಚರ್ಯಪಡುತ್ತ ಕೃಷ್ಣಪ್ಪ ಜ್ಯೋತಿಯ ಚಕಿತ್ಸಕ ಸ್ಪರ್ಶಕ್ಕೆ ಮೈಯನ್ನು ಒಡ್ಡುತ್ತಾನೆ.

‘ನಾನು ಅವನಿಗೆ ಕೆಲಸ ಕೊಡಿಸಲಿಕ್ಕೆ ಪ್ರಯತ್ನ ಮಾಡಲ?’

ಬೆರಳುಗಳನ್ನು ಮೃದುವಾಗಿ ಮಡಿಸಲು ಕಲಿಸುತ್ತಿದ್ದ ಜ್ಯೋತಿಯ ಮುಖ ಖುಷಿಯಿಂದ ಅರಳಿದ್ದನ್ನು ಕಂಡು ಕೃಷ್ಣಪ್ಪನಿಗೆ ಅವಳ ಬಗ್ಗೆ ತೀವ್ರವಾದ ವಾತ್ಸಲ್ಯ ಮೂಡುತ್ತದೆ.

‘ವೀರಣ್ಣ ಅಂತ ಒಬ್ಬ ದೊಡ್ಡ ಕಾಂಟ್ರಾಕ್ಟರ್ ನನ್ನ ಸ್ನೇಹಿತರಿದ್ದಾರೆ. ಅವರೇ ನಿಮ್ಮನ್ನ ಗೊತ್ತು ಮಾಡಿದ್ದು. ಅವರ ಹತ್ರಾನೇ ನಿಮ್ಮ ಬಾಯ್‌ಫ್ರೆಂಡಿಗೆ ಕೆಲಸ ಕೊಡಿಸ್ತೇನೆ – ಆಗಬಹುದ’

ಜ್ಯೋತಿಯ ಕಣ್ಣುಗಳು ಒದ್ದೆಯಾಗುತ್ತವೆ!

‘ಅವನ ಕಾನ್ಫಿಡೆನ್ಸೇ ಹೊರಟು ಹೋಗಿದೆ ಗೊತ್ತ ಕೆಲಸ ಸಿಗ್ದೆ? ತಿಂಗಳಿಗೆ ಮುನ್ನೂರಾದರೂ ಸಾಕು ನಮಗೆ, ದಯವಿಟ್ಟು. . . .’

ಕೃಷ್ಣಪ್ಪ ಅವಳ ಮುಂದಿನ ಮಾತನ್ನು ತಡೆಯುತ್ತಾನೆ.