ನಿನ್ನ ಸಂಗದಲ್ಲಿ ಅವನ ದೇಹ ಅರಳುವಂತಾಗಲಿ ಎಂದು ಮನಸ್ಸಲ್ಲೇ ಹಾರೈಸುತ್ತಾನೆ. ಕಾಮದ ಸಂದರ್ಭದಲ್ಲಿ ಇನ್ನೊಬ್ಬ ಗಂಡೂ ಸುಖಪಡಬೇಕೆಂದು ತನಗೀತ ಹಠಾತ್ತನೆ ಅನ್ನಿಸಿದ್ದಕ್ಕಾಗಿ ಚಕಿತನಾಗುತ್ತಾನೆ. ಈ ತನಕ ಅವನು ಬೇರೊಬ್ಬ ಕಾಮದಲ್ಲಿ ಸಾರ್ಥಕವಾಗಬೇಕೆಂಬ ಆಸೆ ಮೂಡಲಾರದಂಥ ಅಸೂಯೆ ತನ್ನಲ್ಲಿನ್ನೂ ಉಳಿದಿರಬಹುದು ಎಂದುಕೊಂಡಿದ್ದ. ಆದರೆ ಈಗ ತನ್ನ ಎದುರು ಸುಂದರವಾಗಿ ನಿಂತ ಹೆಣ್ಣು ಇನ್ನೊಬ್ಬನಿಂದ ಸುಖಪಡಲೆಂದು ಆಸೆ ತನ್ನಲ್ಲಿ ಉಕ್ಕಿತೆಂದು ಸಂತೋಷಪಟ್ಟ.

***

ಅವತ್ತು ರಾತ್ರೆ ಮಹೇಶ್ವರಯ್ಯ ಮನೆಗೆ ಬಂದವರು ಊಟ ಬೇಡವೆಂದು ಮುಸುಕು ಹೊದ್ದು ಮಲಗಿದ್ದರು. ನಾಗೇಶನಿಂದ ವೀಲ್‌ಚೇರನ್ನು ತಳ್ಳಿಸಿಕೊಂಡು ಅವರನ್ನು ಎಬ್ಬಿಸಿದ. ಮಹೇಶ್ವರಯ್ಯ ಕುಡಿದಿದ್ದರು. ಅವರ ಕಣ್ಣುಗಳು ಕೆಂಪಾಗಿದ್ದವು. ಮುಖ ಕಳೆಗುಂದಿತ್ತು. ಬೆಳಿಗ್ಗೆಯೇ ಅವರ ಕೈಗಳು ನಡುಗುವುದನ್ನು ಕೃಷ್ಣಪ್ಪ ಗಮನಿಸಿದ್ದ.

‘ಏನು ವಿಷಯ? ಯಾಕೆ ಹೀಗಾಗಿದ್ದೀರಿ ನೀವು?’ ಎಂದ.

ಅವರಿಗೆ ಕೇಳಿದ ಪ್ರಶ್ನೆ ತಾನೇ ಕೇಳಿಕೊಂಡ ಪ್ರಶ್ನೆ ಎನ್ನಿಸುವಂಥ ದಾಟಿಯಲ್ಲಿ ಕೃಷ್ಣಪ್ಪ ಮಾತಾಡಿದ್ದ. ಸಹಾನುಭೂತಿ ಕನಿಕರಗಳ ಧಾಟಿಯಲ್ಲಿ ಅವರ ಜೊತೆ ಮಾತಾಡುವುದು ಕೃಷ್ಣಪ್ಪನಿಗೆ ಸಾಧ್ಯವೇ ಇರಲಿಲ್ಲ. ಅಂಥ ಭಾವನೆಗಳನ್ನು ತನ್ನಲ್ಲಿ ಉಂಟುಮಾಡುತ್ತಿದ್ದೇನೆಂದು ಮಹೇಶ್ವರಯ್ಯ ತಿಳಿದರೆ ಅವರಿಗೆ ನೋವಾಗುತ್ತದೆಂದು ಕೃಷ್ಣಪ್ಪನಿಗೆ ಗೊತ್ತು. ತನ್ನೆದುರು ಅವರು ಇದರಿಂದ ಸಣ್ಣವರಾದಂತೆ ಎಂಬುದೂ ಅಲ್ಲ ಇದಕ್ಕೆ ಕಾರಣ. ತನಗಿರುವಂತೆ ಮಹೇಶ್ವರಯ್ಯನಿಗೆ ತಾನು ಯಾವಾಗಲೂ ಗಟ್ಟಿ. ದೃಢ ಎಂದು ತೋರಿಸಿಕೊಳ್ಳುವ ಅಗತ್ಯವಿರಲಿಲ್ಲ. ‘ಬೆಟ್ಟದಡಿ ಹುಲ್ಲಾಗು’ ಎನ್ನುವ ಮಂಕುತಿಮ್ಮನ ಕಗ್ಗದ ಸಾಲು ಅವರಿಗೆ ತುಂಬ ಪ್ರಿಯವೆಂದು ಕೃಷ್ಣಪ್ಪನಿಗೆ ಗೊತ್ತು. ಯಾರ ಕಣ್ಣಿಗೂ ಬೀಳದಂತೆ ಪುಟ್ಟಗೆ, ಸಣ್ಣಗೆ, ಯಾವ ಸ್ಪಷ್ಟ ಬಣ್ಣವೂ ಇಲ್ಲದೆ ತನ್ನೊಳಗೇ ಹಾಡಿಕೊಳ್ಳುತ್ತ ಇರುವ ಹಕ್ಕಿಯಂತೆ ಇರಬೇಕೆಂಬುದು ಅವರ ನಿಲುವು. ಯಕ್ಷಗಾನದ ಕೋಡಂಗಿಯಂತೆ ಬಳಕುತ್ತ, ಬಾಗುತ್ತ, ಲಾಗ ಹಾಕಿ ನಗಿಸುತ್ತ ಕೊಬ್ಬಿದವನ ಎದುರು ಕಣ್ ಕಣ್ ಬಿಡುತ್ತ ತನ್ನ ಬಳಗನ್ನು ರಕ್ಷಿಸಿಕೊಳ್ಳಬೇಕೆಂಬ ಜೀವನ ಕಲೆಯ ತತ್ತ್ವ ಅವರದು. ವಾರಂಗಲ್ ಠಾಣೆಯಲ್ಲಿ ದಪ್ಪಮೋರೆಯ ಅಧಿಕಾರಿ ಕೃಷ್ಣಪ್ಪನ ಬಿಡುಗಡೆಯನ್ನು ಮುಂದೂಡಲು ಏನೇನೋ ನೆವಗಳನ್ನೊಡ್ಡಿದಾಗ ಅವನಿಗೆ ಹ್ಯಾಪಮೋರೆಯಲ್ಲಿ ಕೈಮುಗಿದು ತಾನೊಬ್ಬ ಕ್ಷುದ್ರಜಂತು ಎಂಬ ಭಾವನೆ ಹುಟ್ಟಿಸಿ ಅವನನ್ನಿಷ್ಟು ಕೊಬ್ಬಿಸಿ ತೃಪ್ತಿಪಡಿಸಿ ಕೃಷ್ಣಪ್ಪನನ್ನು ಬಿಡಿಸಿಕೊಂಡಿದ್ದರಂತೆ. ಠಾಣೆಯ ಅನುಭವ ಕೃಷ್ಣಪ್ಪನನ್ನು ಮಂಕಾಗಿಸಿದ್ದ ದಿನಗಳಲ್ಲ ದಪ್ಪಮೋರೆಯ ಅಧಿಕಾರಿಯನ್ನು ರಾಕ್ಷಸನನ್ನಾಗಿಯೂ, ತನ್ನನ್ನು ವಿದೂಷಕನನ್ನಾಗಿಯೂ ಮಾಡಿಕೊಂಡು ತಾನು ಉಪಾಯದಲ್ಲಿ ಅವನನ್ನು ಗೆದ್ದುದನ್ನು ಯಕ್ಷಗಾನದ ರೀತಿಯಲ್ಲಿ ಅಭಿನಯಿಸಿ ತೋರಿಸಿ ಕೃಷ್ಣಪ್ಪನನ್ನು ನಗಿಸಿದ್ದರು. ಕೃಷ್ಣಪ್ಪನ ಮೂಲದಲ್ಲಿ ಆತ್ಮಾಭಿಮಾನವನ್ನು ನಾಶಮಾಡಲು ಪ್ರಯತ್ನಿಸಿದ್ದ ಕ್ರೌರ್ಯ ಮಹೇಶ್ವರಯ್ಯನ ಅಭಿಪ್ರಾಯದಲ್ಲಿ ಕಾಲಾನುಕಾಲದಿಂದಲೂ ಉಬ್ಬುತ್ತ ಹೋಗುವುದರಿಂದಲೇ ಒಡೆಯುವ ಒಂದು ರಾಕ್ಷಸ ಬಣ್ಣದ ವೇಷವಾಗಿ ಮಾತ್ರ ಕಂಡು, ಕೃಷ್ಣಪ್ಪ ತನ್ನ ಜೀವದ ಸೂಕ್ಷ್ಮ ಬೇರುಗಳಿಗಾಗಿದ್ದ ಆಘಾತದಿಂದ ಚೇತರಿಸಿಕೊಂಡಿದ್ದ. ಮಹೇಶ್ವರಯ್ಯ ಉಮೇದು ಬಂದಾಗ ಮಾಡುವ ಈ ವಿದೂಷಕ ಅಭಿನಯ ಕಂಡು ಗೋಪಾಲರೆಡ್ಡಿ ಕೃಷ್ಣಪ್ಪನಿಗೆ ಹೇಳಿದ್ದ: ‘ಕೋಡಂಗಿ ನೋಡು – ಹೇಗೆ ನೀನು ಹೇಳೋ ಒಳಗೆ ಉರಿಯೋ ದೀಪಾನ ಉಳಿಸಿಕೋತಾನೆ! ಅಂದ ಹಾಗೆ ನಮ್ಮೂರಿನ ರೈತರಲ್ಲೂ ಈ ಗುಣ ಕಂಡಿದೀನಿ ನಾನು. ನನ್ನ ಅಪ್ಪನ ಕಣ್ಣಿಗೇ ಬೀಳದಂತೆ ಇದ್ದು ಬಿಡ್ತಾರೆ. ಬಿದ್ದರೂ ತಾವು ಅಲ್ಪರು ಅನ್ನೋ ಹಾಗೆ ನಟಿಸ್ತಾರೆ. . . .’ ಕೃಷ್ಣಪ್ಪ ಈ ವಿಧಾನವನ್ನು ಒಪ್ಪುವುದಿಲ್ಲ. ಅವನ ಮನೋಧರ್ಮಕ್ಕೆ ಅದು ವಿರುದ್ಧವಾದ್ದು.

ಮಹೇಶ್ವರಯ್ಯ ಸೋಲುವರಲ್ಲ ಎಂದು ಕೃಷ್ಣಪ್ಪ ತಿಳಿದಿದ್ದ. ಖಾಹಿಲೆಯಿಂದ ಮಲಗಿದ ಮೇಲೆ ತನ್ನ ಹಾದಿ ದುರ್ಗಮವೆನ್ನಿಸತೊಡಗಿದ್ದರಿಂದ ಮಹೇಶ್ವರಯ್ಯನೂ ಹೀಗೆ ಕಳೆಗುಂದಿರುವುದು ಅವನಿಗೆ ಸಮಸ್ಯೆಯಾಗಿತ್ತು. ಆದ್ದರಿಂದ ಮಹೇಶ್ವರಯ್ಯನನ್ನು ಅವನು ಪ್ರಶ್ನಿಸಿದಾಗ ಅವರಿಗೆ ತಮ್ಮ ಸ್ಥಿತಿಯ ಮೇಲೆ ಇನ್ನೂ ಪೂರ್ಣ ಸ್ವಾಮ್ಯವಿದೆಯೆಂದು ತಿಳಿದಿದ್ದ.

ಮಹೇಶ್ವರಯ್ಯ ಎದ್ದು ಕೂತು ಸ್ವಲ್ಪ ಯೋಚಿಸಿ ಹೇಳಿದರು.

‘ಬೇಡ ನಿನಗೆ ಹೇಳಬಾರದು ನಾನು. ನಿನಗದರಿಂದ ತೊಂದರೆಯುಂಟು.’

ಕೃಷ್ಣಪ್ಪನಿಗೆ ಥಟ್ಟನೇ ಮಹೇಶ್ವರಯ್ಯ ಅಸಹಾಯಕರಾಗಿದ್ದರೆಂದು ಗೊತ್ತಾಯಿತು. ತನ್ನ ಸಹಾಯ ಅವರಿಗೆ ಅಗತ್ಯವಿದ್ದರೂ ಕೇಳುತ್ತಿಲ್ಲ. ಇದರಿಂದ ಅವನಿಗೆ ಅವಮಾನವಾದಂತೆ ಎನ್ನಿಸಿತು. ಸಿಟ್ಟುಬಂತು.

‘ನನಗೆ ಅವಮಾನವಾಗುವಂತೆ ಮಾಡ್ತಿದೀರಿ ನೀವು’

ಮಹೇಶ್ವರಯ್ಯ ತಲೆಯಲ್ಲಾಡಿಸುತ್ತ ಕನಿಕರದಿಂದ ಅವನನ್ನು ನೋಡುತ್ತ ಹೇಳಿಕೊಂಡರು.

ಈಚೀಚೆಗೆ ಅವರಿಗೆ ಜೂಜಿನ ಉದ್ರೇಕವಿಲ್ಲದೆ ಬದುಕುವುದೇ ಸಾಧ್ಯವಾಗುತ್ತಿರಲಿಲ್ಲ. ದೇವಿಯ ಪೂಜೆಗೆ ಎಷ್ಟೋ ಬಾರಿ ಕೂತು ನೋಡಿದರು. ಓಡುವ ಕುದುರೆಯೇ ಅವರಿಗೆ ಕಾಣುವುದು. ತಮಗಿದ್ದ ಆಸ್ತಿಯೆಲ್ಲ ಇದರಿಂದ ಕರಗಿತು. ಜೀವನ ದುಸ್ತರವಾಗುತ್ತ ಹೋಯಿತು. ಮೊನ್ನೆ ಯಾರ್ಯಾರೋ ಮಿತ್ರರಿಂದ ಹತ್ತುಸಾವಿರ ರೂಪಾಯಿ ಸಾಲ ಪಡೆದು ಬಂದರು. ತಾನು ಕಳಕೊಂಡದ್ದನ್ನೆಲ್ಲ ಗೆಲ್ಲುವೆನೆಂದು ಖಾತ್ರಿಯಾಗಿ ನಂಬಿ ಜೂಜಾಡಲು ಬಂದಿದ್ದರು. ಆದರೆ ತಂದಿದ್ದ ಹಣವನ್ನೆಲ್ಲ ಕಳೆದುಕೊಂಡರು.

‘ಅಷ್ಟೇನಾ? ನಿಮಗೆ ಆ ಹತ್ತು ಸಾವಿರ ನಾನು ಕೊಡ್ತೇನೆ?’

ಕೃಷ್ಣಪ್ಪನಿಗೆ ತಾನಿಷ್ಟು ಮಾಡಬಹುದೆಂದು ತುಂಬ ಖುಷಿಯಾಗಿತ್ತು. ಮಹೇಶ್ವರಯ್ಯ ತನ್ನ ಮೇಲೆ ಸುರಿದ ಹಣಕ್ಕೆ ಲೆಕ್ಕವಿರಲಿಲ್ಲ. ಅವನು ಈ ತನಕ ಅವರಿಗೆ ಒಂದೇ ಒಂದು ಕಾಸು ಕೊಟ್ಟಿರಲಿಲ್ಲ.

‘ಕೊಡ್ತೀಯಾಂತ ನನಗೆ ಗೊತ್ತು. ಆದರೆ ಈ ಹಣಾನ್ನೂ ನಾನು ನಾಳೆ ಜೂಜಾಡ್ತೀನಲ್ಲ?’

‘ಆಡಿ. ನೀವು ಗೆಲ್ಲಲೂಬಹುದಲ್ಲ?’

ಮಹೇಶ್ವರಯ್ಯನ ಕಣ್ಣುಗಳು ಭರವಸೆಯಲ್ಲಿ ಹೊಳೆದವು!

‘ಹೌದು. ಆದರೆ ಸೋಲಲೂಬಹುದು – ’

‘ಸೋಲಿ – ’ ಕೃಷ್ಣಪ್ಪ ನಗುತ್ತ ಹೇಳಿದ.

‘ಇಲ್ಲ – ಧಾರವಾಡದ ಹತ್ತಿರ ಒಂದು ಹಳ್ಳೀಲಿ ನನಗೆ ಸ್ವಲ್ಪ ತೋಟವಿದೆ. ಒಂದು ಗುಡಿಸಲಿದೆ. ಅಲ್ಲಿ ತನ್ನ ಉಳಿದ ಕಾಲವನ್ನು ಕಳೆಯೋಣ, ಈ ಜೂಜನ್ನು ಬಿಟ್ಟುಬಿಡೋಣ ಅಂತಿದ್ದೆ – ’

‘ನಾಳೆ ಸೋತರೆ ಹಾಗೇ ಮಾಡಿ – ’

ಮಹೇಶ್ವರಯ್ಯ ತುಂಬ ಗೆಲುವಾಗಿಬಿಟ್ಟಿದ್ದು ಕಂಡು ಕೃಷ್ಣಪ್ಪನಿಗೆ ಸಂತೋಷವಾಯಿತು. ಇಬ್ಬರೂ ಹಿಂದಿನಂತೆಯೇ ಪರಸ್ಪರ ನೋಡಿ ನಕ್ಕರು. ಆದರೆ ಕ್ಷಣ ಕಳೆದು ಮಹೇಶ್ವರಯ್ಯ ಚಿಂತಾಕ್ರಾಂತರಾಗಿ ‘ಭೋ’ ಎಂದು,

‘ನಿನಗೆ ಇದರಿಂದ ತೊಂದರೆಯುಂಟು’ ಎಂದು ಎದುರಿಗಿದ್ದ ಬಾಗಿಲನ್ನು ದುರುಗುಟ್ಟಿದರು.

‘ಇರಲಿ ಬಿಡಿ’ ಎಂದು ಕೃಷ್ಣಪ್ಪ ನಾಗೇಶಾ ಎಂದು ಕರೆದು ತನ್ನ ವೀಲ್‌ಚೇರನ್ನು ರೂಮಿಗೆ ತಳ್ಳಿಸಿಕೊಂಡು ಹೋಗಿ ಹೆಂಡತಿಯನ್ನು ಬರಹೇಳಿದ. ಬಾಗಿಲು ಮುಚ್ಚುವಂತೆ ಹೇಳಿ,

‘ಸೀತ ಬ್ಯಾಂಕಲ್ಲಿ ನಿನ್ನ ಹೆಸರಲ್ಲಿ ಹತ್ತು ಸಾವಿರ ಇದೆಯಲ್ಲ – ಅದು ನಾಳೆ ಬೆಳಿಗ್ಗೆ ನನಗೆ ಬೇಕು’.

ಹೆಂಡತಿಯನ್ನು ಹೆಸರು ಹಿಡಿದು ಕೃಷ್ಣಪ್ಪ ಕರೆಯುವವನಲ್ಲ. ಅವಳಿಗೆ ಆಶ್ಚರ್ಯವಾಗಿತ್ತು.

‘ಯಾಕೆ?’ ಎಂದಳು.

‘ಮಹೇಶ್ವರಯ್ಯನಿಗೆ ಕೊಡಬೇಕಿತ್ತು.’

‘ನೀವು ಸೋಷಲಿಸ್ಟ್ ಆಗಿ ಕುದುರೆ ಬಾಲಕ್ಕೆ ಹಣ ಕಟ್ಟೋದನ್ನ. . . .’

‘ಅದೆಲ್ಲ ಬೇಡ ಕೊಡು’ ಕೃಷ್ಣಪ್ಪ ಗುಡುಗಿದ.

‘ಇಲ್ಲ – ಕೋಡೋಕೆ ದುಡ್ಡಿಲ್ಲ’

ಕೃಷ್ಣಪ್ಪ ಕೈಎತ್ತಿದ್ದು ಕಂಡು ದೂರ ಸರಿದಳು.

‘ಇದೆ – ಕೊಡು’

ಅವನ ಮನಸ್ಸು ನೆಗೆದು ಅವಳ ಕೈ ಹಿಡಿದು ಜಗ್ಗುವ ಸನ್ನಾಹ ಮಾಡಿತು. ಆದರೆ ದೇಹ ಹಂದಲಿಲ್ಲ. ಕೃಷ್ಣಪ್ಪನ ಕಣ್ಣುಗಳಲ್ಲಿ ನೀರು ಉಕ್ಕಿ ತುಟಿಗಳು ಅದುರತೊಡಗಿದುವು.

ಸೀತ ಮೆತ್ತಗಾಗಿ ಹೇಳಿದಳು:

‘ಜಯಮಹಲ್‌ಬಡಾವಣೆಯಲ್ಲಿ ಟ್ರಸ್ಟ್‌ಬೋರ್ಡು ನನಗೊಂದು ಸೈಟ್ ಸ್ಯಾಂಕ್ಷನ್ ಮಾಡಿದೆ. ಅದನ್ನ ಕೊಳ್ಳೋಕೆ ಆ ಹಣ ಇಟ್ಟಿದೀನಿ. . . .’

ಕೃಷ್ಣಪ್ಪನ ಕಣ್ಣುಗಳಲ್ಲಿ ನೀರಿಳಿದುವು. ಬಲಗೈಯಿಂದ ಒರೆಸಿಕೊಳ್ಳುತ್ತ –

‘ಯಾವ ಸೈಟು?’ ಎಂದು ಬಿಕ್ಕಿದ.

‘ವೀರಣ್ಣ ಅಪ್ಲಿಕೇಷನ್ ಹಾಕ್ಸಿದ್ದು. ಸ್ಯಾಂಕ್ಷನ್ ಆಯ್ತು.’

ಸೀತೆ ಮೃದುವಾಗಿ ಹೇಳಿ ತಲೆ ತಗ್ಗಿಸಿದಳು. ಈ ಜಯಮಹಲ್ ಸೈಟುಗಳ ಬಗ್ಗೆ ಅಸೆಂಬ್ಲಿಯಲ್ಲಿ ಕೃಷ್ಣಪ್ಪ ಗಲಾಟೆ ಮಾಡಿದ್ದ. ಓಪನ್ ಮಾರ್ಕೆಟ್ಟಲ್ಲಿ ನಲವತ್ತು ಐವತ್ತು ಸಾವಿರ ಬೆಲೆಬಾಳುವ ಸೈಟುಗಳನ್ನು ಮಂತ್ರಿಗಳು ತಮ್ಮಲ್ಲಿ ತಮ್ಮ ಬಳಗದವರಲ್ಲಿ ಹಂಚಿಕೊಳ್ಳಬಹುದೆಂದು ಗುಮಾನಿ ಪಟ್ಟಿದ್ದ. ಈಗ ಮಂತ್ರಿ ಮಂಡಳ ತನ್ನ ಹೆಂಡತಿಗೂ ಒಂದು ಸೈಟ್ ಕೊಟ್ಟು, ತನ್ನ ಬಾಯಿ ಮುಚ್ಚಿಸಲು ಪ್ರಯತ್ನಿಸಿದೆ. ತನ್ನ ಉಮ್ಮಳವನ್ನು ಹತ್ತಿಕ್ಕಿಕೊಂಡು ಕೃಷ್ಣಪ್ಪ ಹೇಳಿದ.

‘ಸೀತ – ನೀನು ಈ ಸೈಟನ್ನು ಕೊಂಡುಕೋಬಾರದು.’

‘ಯಾಕೆ? ನೀವೇನೂ ನನಗೆ ಮಾಡಬೇಡಿ. ಆದರೆ ಸೈಟ್‌ಕೊಳ್ಳೋದು ನನ್ನ ಹಕ್ಕು. ಅದಕ್ಕೆ ಅಡ್ಡ ಬರಬೇಡಿ.’

‘ಸೀತ, ಈ ಸೈಟು ನಮಗೆ ಬೇಡ. ನಾನು ಬೇರೆ ನಿನಗೆ ಕೊಂಡುಕೊಡ್ತೀನಿ’ ಕೃಷ್ಣಪ್ಪ ಸಮಾಧಾನದಿಂದ ಹೇಳಿದ.

‘ಕೊಡ್ತೀರಿ. ಕೊಡ್ತೀರಿ. ನಾಳೆ ನಿಮಗೇನಾದ್ರೂ ಆದ್ರೆ ನಾನು ನಿಮ್ಮ ಮಗಳು ಬಾಯಿಗೆ ಮಣ್ಣು ಹಾಕಿಕೊ ಬೇಕ?’

ಕೃಷ್ಣಪ್ಪ ಕಣ್ಣುಗಳನ್ನು ಮುಚ್ಚಿದ.

‘ಹೋಗು, ಹೋಗು, ನನ್ನ ಹತ್ತಿರ ಸುಳೀಬೇಡ ಹೋಗು’ ಎಂದು ಸಣ್ಣ ದನಿಯಲ್ಲಿ ಕರ್ಕಶವಾಗಿ ಕಿರುಚಿದ.

ಅವಳು ಹೋದ ಮೇಲೆ ನಾಗೇಶ ಎಂದು ಕೂಗಿದ. ಕಣ್ಣುಗಳನ್ನು ಮುಚ್ಚಿದ್ದೇ ಹೇಳಿದ. ‘ಈಗಲೇ ಹೋಗಿ ವೀರಣ್ಣನ ಹತ್ತಿರ ಹತ್ತು ಸಾವಿರ ಬೇಕೂಂತ ಕೇಳಿ ತಗೊಂಬಾ. ಆಟೋ ಮಾಡಿಕೊಂಡು ಹೋಗು. ಪರ್ಸ್‌‌ನಲ್ಲಿ ದುಡ್ಡಿರಬೇಕು ತಗೋ.’

ನಾಗೇಶ ತನ್ನಲ್ಲೇ ಹಣವಿದೆಯೆಂದು ಹೋದ. ಮುಕ್ಕಾಲು ಗಂಟೆಯಲ್ಲಿ ಹಿಂದಕ್ಕೆ ಬಂದು ದೊಡ್ಡದೊಂದು ಕವರನ್ನು ಕೃಷ್ಣಪ್ಪನಿಗೆ ಕೊಟ್ಟ. ವೀರಣ್ಣ ದುಡ್ಡಿನ ಜೊತೆ ಒಂದು ಚೀಟಿಯಿಟ್ಟಿದ್ದ.

‘ಇದರಲ್ಲಿ ಹದಿನೈದು ಸಾವಿರವಿದೆ. ಹೆಚ್ಚು ಬೇಕಾದರೆ ನಾಳೆ ಬೆಳಿಗ್ಗೆ ಹೇಳಿಕಳಿಸಿ. ತಮ್ಮ ವಿಧೇಯ ವೀರಣ್ಣ.’

‘ತಳ್ಳು ಎಂದು ಮಹೇಶ್ವರಯ್ಯನ ಕೋಣೆಗೆ ಹೋದ. ಅವರು ಎದ್ದು ಕೂತು ತಾನು ಬರುವ ಮುಂಚೆ ಧ್ಯಾನದಲ್ಲಿದ್ದಂತೆ ಕಂಡಿತು.

‘ಹದಿನೈದು ಸಾವಿರ ಇದೆ. ನಾಳೆ ಬೇಕಾದರೆ ಇನ್ನಷ್ಟು ಕೊಡ್ತೇನೆ’ ಎಂದು ಅವರ ಉತ್ತರಕ್ಕೆ ಕಾಯದೆ ನಾಗೇಶನಿಂದ ತಳ್ಳಿಸಿಕೊಂಡು ರೂಮಿಗೆ ಹೋಗಿ ಮಲಗಿದ.

***

ಕೃಷ್ಣಪ್ಪ ಸೀತೆಯ ಜೊತೆ ಜಗಳವಾಡಿದಾಗ್ಗೆಲ್ಲ ಮಗುವಿಗೆ ಹೋಗೋ ಅದು ಗೊತ್ತಾಗಿಬಿಡುವುದು. ಮಗಳು ತುಟಿಪಿಟಿಕ್ಕೆನ್ನದೆ ಕೊಟ್ಟದ್ದನ್ನು ತಿಂದು, ತಾಯಿ ತಲೆಯ ಸಿಕ್ಕು ಬಿಡಿಸುತ್ತ ಬಾಚಣಿಗೆಯಿಂದ ಅವಸರದಲ್ಲಿ ಜಗ್ಗುವಾಗ ಚೂರೂ ಪ್ರತಿಭಟಿಸದೆ ಮಂಕಾಗಿ ಕೂತಿದ್ದನ್ನು ಕಂಡು ಕೃಷ್ಣಪ್ಪನಿಗೆ ದುಃಖವಾಯಿತು. ನೀಟಾಗಿ, ಎರಡು ಜಡೆ ಹಾಕಿಕೊಂಡು ಯುನಿಫಾರಂ ಧರಿಸಿ ಸ್ಕೂಲಿಗೆ ಹೊರಟ ಗೌರಿಯನ್ನು ‘ಗೌರಾ’ ಎಂದು ಕರೆದ. ತನ್ನ ಹತ್ತಿರ ಬರಲು ಮಗಳು ಅಂಜುತ್ತಿದ್ದಾಳೆಂದು ಅನುಮಾನವಾಯಿತು. ಇನ್ನೊಮ್ಮೆ ಕರೆದ. ಹತ್ತಿರ ಬಂದು ನಿಂತಳು. ಅವಳ ಬೆನ್ನಿನ ಮೇಲೆ ಕೈಯಿಟ್ಟು ತಡವಿದ. ತಿರುಗಿಸಿ ನಿಲ್ಲಿಸಿಕೊಂಡು ಅವಳ ಮುಖ ನೋಡಿದ. ತನ್ನ ಕಣ್ಣುಗಳು – ಆದರೆ ತಾಯಿಯ ಗುಜ್ಜು ಮೂಗು, ತಾಯಿ ಕೋಪದಲ್ಲಿ ಹರಿದು ಬಾತುಕೊಂಡಿದ್ದ ತುಟಿ ಈಗ ಸರಿಹೋಗಿದೆ. ಮೂಗಿನಲ್ಲಿ ಸಿಂಬಳ ಸುರಿಯುತ್ತಿಲ್ಲ. ನಿರ್ಭಾವದಲ್ಲಿ ನಿಂತ ಎಳೆ ಮಗುವಿನ ಮುಖದಲ್ಲಿ ವಯಸ್ಸಿಗೆ ಮೀರಿದ ಪ್ರಬುದ್ಧತೆ ಮೂಡಿದಂತೆ ಕಂಡು ಅವನಿಗೆ ಕಸಿವಿಸಿಯಾಯಿತು. ಮಗು ಒಂಟಿಕಾಲಿನಲ್ಲಿ ಕುಣಿಯುತ್ತಲೋ ಬೀರುವಿನಲ್ಲಿದ್ದುದನ್ನು ಎಳೆದು ಬೀಳಿಸಿ ತಾಯಿಯಿಂದ ಬೈಸಿಕೊಂಡು ಎಗ್ಗಿಲ್ಲದೆ ಓಡುತ್ತಲೋ ಇರುವುದನ್ನು ಕಂಡು ಬಹಳ ದಿನಗಳಾದವು ಎನ್ನಿಸಿತು.

ಗೌರಿ ಸ್ಕೂಲಿಗೆ ಹೋದ ಮೇಲೆ ಶುಭ್ರವಾದ ಸಿಲ್ಕ್ ಜುಬ್ಬ ಧರಿಸಿ ಹಣೆಗೆ ವಿಭೂತಿಯಿಟ್ಟು ಬಂದು ವೀರಣ್ಣ ಅದೊಂದು ಸಾಮಾನ್ಯ ಪ್ರಶ್ನೆ ಎನ್ನುವಂತೆ

‘ಇನ್ನಷ್ಟು ಬೇಕ’ ಎಂದ.

ಬೇಡವೆಂದ ಕೃಷ್ಣಪ್ಪ, ಅವತ್ತು ರಾತ್ರೆ ಬರುವ ಗೌರಿ ದೇಶಪಾಂಡೆಯನ್ನು ನಿಲ್ದಾಣದಿಂದ ಕರೆತಂದು ಅವರ ಗೆಸ್ಟ್‌ಹೌಸಲ್ಲಿ ಇಳಿಸಬೇಕೆಂದೂ, ಜ್ಯೋತಿಯ ಬಾಯ್‌ಫ್ರೆಂಡಿಗೂ ನಾಗೇಶನ ಅಕ್ಕನಿಗೂ ಕೆಲಸದ ವ್ಯವಸ್ಥೆ ಮಾಡಬೇಕೆಂದೂ ಹೇಳಿದ. ಅದೇನು ಮಹತ್ವದ ವಿಷಯವಲ್ಲವೆನ್ನುವಂತೆ’ಆಗಲಿ’ ಎಂದ ವೀರಣ್ಣ. ಪಂಚಲಿಂಗಯ್ಯ ಬಂದಿದ್ದರೆಂದೂ ಗೌಡರ ಹತ್ತಿರ ಅಂಥ ಕೆಲಸ ಮಾಡಿಸಕೂಡದೆಂದು ಹೇಳಿ ತಾನೇ ಸೀಟಿಗೆ ವ್ಯವಸ್ಥೆ ಮಾಡುತ್ತೇನೆಂದು ಹೇಳಿದ್ದಾಗಿಯೂ ತಿಳಿಸಿ,

‘ನೀವು ಬೇಗ ಗುಣವಾಗಬೇಕು’

ಎಂದ. ಹೇಳಿದ ಮಾತು ಸಾಮಾನ್ಯವಾದರೂ ಹೇಳಿದ ರೀತಿ ಅರ್ಥಗರ್ಭಿತವಾಗಿತ್ತು.

ಕೃಷ್ಣಪ್ಪ ಹೇಳಿದ:

‘ನೀವು ಮನಸ್ಸಲ್ಲೇನೋ ವಿಶೇಷವಿದೆ. ಹೇಳಿ.’

‘ನಿಮ್ಮ ತಲೆಕೆಡಿಸಬಾರದೆಂದು ನಿಮ್ಮ ಹತ್ತಿರ ಹೇಳ್ತಾ ಇಲ್ಲ. ನೀವು ತುಂಬ ದೊಡ್ಡ ಜವಾಬ್ದಾರಿ ಹೊರೋ ಕಾಲ ಬಹಳ ದೂರವೇನೂ ಇಲ್ಲ.’

‘ನಾನೂ ಅದನ್ನ ಕೇಳಿಸಿಕೊಂಡೆ. ಆದರೆ ಪಕ್ಷಾಂತರ ಮಾಡೋವ್ರ ಜೊತೆ ನಾನು ಸೇರಲ್ವಲ್ಲ’

‘ಸೇರಬೇಡಿ. ನೀವೇ ಮಂತ್ರಿಮಂಡಳ ರಚಿಸಿ. ನಿಮಗೆ ಹೊಸ ಗೇಣಿ ಶಾಸನ ತರಲಿಕ್ಕೆ ಇಷ್ಟ ಅಲ್ವ? ತನ್ನಿ. ಬೆಂಬಲ ಕೊಡೋವರು ಕೊಡ್ತಾರೆ. ಬೆಂಬಲ ಸಿಗಲಿಲ್ಲ ಅನ್ನಿ. ರಾಜೀನಾಮೆ ಕೊಟ್ಟರಾಯ್ತು. . . . ಏನೇನೋ ತಮಗೆ ಬುದ್ಧಿವಾದ ಹೇಳೋ ಹಾಗೆ ಮಾಡ್ತಾದೀನಿ, ಕ್ಷಮಿಸಬೇಕು.’

‘ವೀರಣ್ಣ – ಒಂದು ಮಾತು. ಅದು ಯಾಕೆ ಸೀತೆ ಹತ್ತಿರ ನೀವು ಸೈಟ್‌ಗೆ ಅಪ್ಲೈ ಮಾಡಿಸಿದ್ರಿ?’

‘ಒಳ್ಳೆ ತಮಾಷೆಯಾಯ್ತು ನೀವು ಹೇಳೋದು, ಆಕೆಯೇನು ಈ ದೇಶದ ಪ್ರಜೆ ಅಲ್ವ?’

ವೀರಣ್ಣ ನಕ್ಕು ಕೃಷ್ಣಪ್ಪನ ಮುಖ ಗಂಭೀರವಾಗಿರುವುದನ್ನು ಕಂಡು ಅವನೂ ಗಂಭೀರವಾಗಿ ಹೇಳಿದ:

‘ಗೌಡರೆ ನೀವು ಎಷ್ಟೇ ದೊಡ್ಡವರಾಗಿರಿ ಹೆಂಗಸರಿಗೆ ಅದು ಗೊತ್ತಾಗೋದು ಇಂಥದೇನಾದ್ರೂ ಸಿಕ್ಕಾಗ. ಅವರನ್ನ ದೂರಿಯೇನು ಪ್ರಯೋಜನ ಹೇಳಿ? ಅವರಿಗಾಗಿ ಅದನ್ನವರು ಬಯಸ್ತಾರ? ಹೆಣ್ಣಿನ ಮೇಲೆ ಗೂಡುಕಟ್ಟೋ ಜವಾಬ್ದಾರಿ, ನಿಮಗೆ ವಿಶಾಲ ಆಕಾಶದಲ್ಲಿ ಹಾರಾಡೋ ಕೆಲಸ – ಇದು ಧರ್ಮ ಅಲ್ಲವ?’

‘ಏನೇ ಹೇಳಿ – ಇದು ಕೂಡ ಕರಪ್ಷನ್’

‘ಶಿವನೇ ನಿಮ್ಮ ಮಾತು ಚೆನ್ನಾಯ್ತು. ನಿಮ್ಮ ಹೆಂಡ್ತಿ ಕಷ್ಟಪಟ್ಟು ದುಡಿದ ಹಣದಲ್ಲೊಂದು ಸೈಟ್ ತಗೊಂಡರೆ ಕರಪ್ಷನ್ ಆದರೆ, ಸ್ಪೀಡ್‌ಮನಿ ಮಣ್ಣು ಮಶಿ ಅಂತ ಕಟ್ಕೊಂಡು ನಮ್ಮಂಥೋರು ಬಿಸಿನೆಸ್ ಮಾಡಬೇಕಲ್ಲ ಅದಕ್ಕೇನು ಅಂತೀರಿ ನೀವು. ಅವರವರಿಗೆ ಅವರವರ ಧರ್ಮ ಸರಿ ಅಲ್ಲವ?’

‘ಇಲ್ಲ ನೀವು ಮಾಡ್ತಿರೋದೂ ತಪ್ಪೂಂತ ನಾನು ಅನ್ನೋದು.’

‘ತಪ್ಪಾದರೆ ತಪ್ಪು ಬಿಡಿ. ಸರಿಹೋಗೋದು ಹೇಗೆ? ನಾನು ಸರಿಯಾದಾಗ್ಲ? ಅಥವಾ ದೇಶ ಸರಿಯಾದಾಗ್ಲ? ಈಗ ಪಿ. ಡಬ್ಲ್ಯೂ. ಡಿ. ಇದೆ – ಅದು ಸರಿಹೋಗ್ದೆ ನಾನು ಸರಿಹೋಗೋದು ಸಾಧ್ಯಾನ? ಹೇಳಿ ನೀವೆ. ಯಾರು ಇದನ್ನೆಲ್ಲ ಕೂಲಂಕುಶ ಸರಿ ಮಾಡೋವ್ರು? – ನಿಮ್ಮಂಥವರು. ಅದಕ್ಕೇ ನಾನು ಹೇಳಿದ್ದು – ನೀವು ನಾಯಕರಾಗಬೇಕು, ಮಂತ್ರಿಮಂಡಳ ರಚಿಸಬೇಕೂಂತ. ಥಿಯೇಟರ್ ಹತ್ರ ಕೆಲಸವಿದೆ. ಹೋಗಬೇಕು. ಬರ್ಲ ನಾನು?’

ವೀರಣ್ಣ ಹೊರಟು ಹೋದ. ತನ್ನನ್ನು ಹೊಗಳುವಾಗಲೂ, ಕೈಕಟ್ಟಿ ವಿನಯದಿಂದ ನಿಂತಾಗಲೂ ವೀರಣ್ಣ ತನ್ನನ್ನು ಸಂಪೂರ್ಣ ವಹಿಸಿಕೊಂಡವನಂತೆ ಕಾಣುತ್ತಿದ್ದ. ತನ್ನ ನಿರಾಕರಣೆಗೆ, ಅಸಹನೆಗೆ, ಕೋಪಕ್ಕೆ ಕೂಡ ಅವಕಾಶ ಕೊಟ್ಟು, ಆ ಮೂಲಕ ಉಬ್ಬಿಸಿ, ಅದನ್ನೇ ಹೊಗಳಿ ಕೊನೆಗೆ ಗೆಲ್ಲುವ ಸನ್ನಾಹ ಮಾಡಿದ್ದ. ಅವನ ಸ್ವಂತಕ್ಕಾಗಿ ಮಾತ್ರ ಇದನ್ನೆಲ್ಲ ಅವನು ಮಾಡುತ್ತಿದ್ದಾನೆಂದು ಹೇಳುವುದೂ ಕೃಷ್ಣಪ್ಪನಿಗೆ ಸಾಧ್ಯವಿರಲಿಲ್ಲ. ಈಗಿರುವ ಮುಖ್ಯಮಂತ್ರಿಯಿಂದಲೇ ಅವನು ಜಲಾಶಯ ಯೋಜನೆಯೊಂದರ ಕಾಂಟ್ರ್ಯಾಕ್ಟ್ ಪಡೆದಿದ್ದನಲ್ಲವೆ? ವೀರಣ್ಣನಲ್ಲದಿದ್ದರೆ ಇನ್ನೊಬ್ಬ ಪಡೆಯಬಹುದಾಗಿದ್ದ ಕಾಂಟ್ರ್ಯಾಕ್ಟ್ಅದು.

ಕೃಷ್ಣಪ್ಪನಿಗೆ ವೀರಣ್ಣನ ಆಳ ಅಗಲ ತಿಳಿಯಲಾರದೆ ತಬ್ಬಿಬ್ಬಾಗಿ ವೀಲ್‌ಚೇರಿನ ಮೇಲೆ ಕೂತಿದ್ದಾಗ ಜ್ಯೋತಿ ಬಂದಳು. ಸದ್ದಿಲ್ಲದೆ ಅವನ ಸುತ್ತ ಸುಳಿದಾಡುತ್ತ ಹಾಸಿಗೆಗೆ ಹೊಸ ಶೀಟ್ ಹೊದೆಸಿ, ತಾನು ತಂದ ಗುಲಾಬಿ ಹೂಗಳನ್ನು ಕುಂಡದಲ್ಲಿ ಸುಂದರವಾಗಿ ಜೋಡಿಸಿ ಕೃಷ್ಣಪ್ಪನನ್ನು ತುಂಬ ಕೌಶಲದಿಂದ ಎಬ್ಬಿಸಿ ಮಲಗಿಸಿದಳು. ದೇಹವನ್ನು ಮಸಾಜ್ ಮಾಡುತ್ತ ಗೆಲುವಾಗಿ ತಾನು ರಾತ್ರಿ ನೋಡಿದ ಸಿನೆಮಾದ ಕಥೆ ಹೇಳತೊಡಗಿದಳು. ಸಿನಿಮಾ ನಾಯಕರ ವಿರಹದ ಕಥೆಯನ್ನು ಹೇಳುವ ಕ್ರಮದಲ್ಲೇ, ತನ್ನ ಒಳಗನ್ನೂ ಅಲ್ಲಿ ಸೊರಗುತ್ತಿದ್ದ ತನ್ನ ಸುಖದ ಅಪೇಕ್ಷೆಯನ್ನೂ ಸೂಚಿಸಿದಳು. ಕೆಲಸ ಸಿಗುವ ತನಕ ತನ್ನ ನಾಯಕನಿಗೆ ಅರಳದ ಮೊಗ್ಗಾಗಿ ಉಳಿದಿದ್ದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಿದ್ದಾನೆಂದು ಚಕಿತನಾದ. ಬಾಯ್‌ಫ್ರೆಂಡಿಗೆ ಕೆಲಸ ಸಿಗುತ್ತಿದೆಯೆಂದು ಅವಳು ಇವತ್ತು ಖುಷಿಯಾಗಿದ್ದಳು. ಪ್ರಾಯಶಃ ಇವತ್ತು ರಾತ್ರಿ ಅವನಿಗೆ ಅರಳುತ್ತಾಳೆ. ಅವಳ ಸಂಭ್ರಮ ಅವಳ ಮೃದುವಾದ ಕೈಗಳಿಂದ ತನ್ನ ಜಡವಾದ ಭುಜ, ತೋಳು, ಪಕ್ಕೆ, ಸೊಂಟ, ತೊಡೆ, ಕಾಲು, ಬೆರಳುಗಳಿಗೆ ಲಯಬದ್ಧವಾಗಿ ಇಳಿಯುತ್ತಿತ್ತು. ತನ್ನ ಸುತ್ತಮುತ್ತಲಿನ ಆರೋಗ್ಯವನ್ನೆಲ್ಲ ತಾನು ಹೀರುತ್ತಿದ್ದೇನೆಂದು ಕೃಷ್ಣಪ್ಪನಿಗೆ ಅನ್ನಿಸಿತು.

ಕುಂಡದಲ್ಲಿ ಸೊಕ್ಕಿ ಉಳಿದವಕ್ಕಿಂತ ಮೇಲೆ ನಿಂತ ಅರಳುತ್ತಿದ್ದ ಗುಲಾಬಿ ಹೂವೊಂದು ಅವನ ಕಣ್ಣು ಸೆಳೆಯಿತು. ಒದ್ದೆಯಾದ್ದರಿಂದ ಹೊಳೆಯುವ ದಳಗಳ ಕಟುವಾದ ಕೆಂಪು: ದೃಷ್ಟಿಯನ್ನು ಒಳಕ್ಕೆಳೆದುಕೊಳ್ಳುವಂತೆ ಅಂಚಿನಲ್ಲಿ ಮುರಿಯುತ್ತ, ತಿರುವಿಕೊಳ್ಳುತ್ತ, ಸಣ್ಣದಾಗುತ್ತ, ಕೇಂದ್ರವನ್ನು ಬಚ್ಚಿಟ್ಟುಕೊಳ್ಳುವ ಈ ದಳಗಳ ಮೃದು ಮತ್ತು ಬಿಗಿ; ಆಹ್ವಾನ ಮತ್ತು ರಹಸ್ಯ; ಈ ಬಣ್ಣ ಈ ಬೆಡಗಿಗೂ ಒರಟಾದ ಎಲೆ, ಚೂಪು ಮುಳ್ಳುಗಳ ಹುರಿಯಾದ ಕಾಂಡ – ಹೀಗೇ ಏಕಾಗ್ರವಾಗಿ ಗುಲಾಬಿಯನ್ನು ನೋಡುತ್ತ ಜ್ಯೋತಿಯ ಇಂಪಾದ ಹರಟೆಗೆ ಕಿವಿಗಳನ್ನು ಒಡ್ಡಿದ. ತಣ್ಣಗೆ ಉರಿಯುವ ಜ್ವಾಲೆಯಂತಿತ್ತು ಗುಲಾಬಿ. ಏನೋ ಹೇಳುತ್ತ ಏನೋ ಬಚ್ಚಿಡುತ್ತ ಇರುವಂತೆ ಅದು ಇದ್ದುದರಿಂದ ಕೃಷ್ಣಪ್ಪನಿಗೆ ಅದನ್ನು ನೋಡುವುದು ಕಷ್ಟವಾಗತೊಡಗಿತು. ಜ್ಯೋತಿಯ ಮುಖವನ್ನು ನೋಡಿದ. ಆಯಾಸಪಡದೆ ಅವಳು ತನ್ನನ್ನು ಒತ್ತುತ್ತ ತೀಡುತ್ತ ತನ್ನ ಮಾತಿಗೆ ತಾನೇ ಹಸನ್ಮುಖಿಯಾಗಿರುವಂತೆ ಕಂಡಳು. ಅನಾಯಾಸೇನ ಮರಣಂ ಎಂದು ತಾನು ಆಗೀಗ ಬಯಸಿದ್ದನ್ನು ನೆನೆದ. ಇಲ್ಲ – ಈಗ ಜಡವಾಗಿದ್ದ ದೇಹವನ್ನು ಹುರಿದುಂಬಿಸಬೇಕೆನ್ನಿಸುತ್ತದೆ. ಮರ ಹತ್ತಬೇಕು, ಬಾವಿಯಲ್ಲಿಳಿದು ಕೆಸರು ತೋಡಬೇಕು, ಈಜಬೇಕು, ಗದ್ದೆಯಲ್ಲಿ ಸಸಿ ನೆಡಬೇಕು, ಹೂವಿನಂಥ ಪುಟ್ಟ ಕೋಳಿ ಮರಿಗಳನ್ನು ಅಂಗೈಮೇಲೆ ಇರಿಸಿಕೊಳ್ಳಬೇಕು – ಹೀಗೆ ಏನೇನೋ ಚಪಲಗಳು ಮೂಡುತ್ತವೆ. ವೀರಣ್ಣ ಹೇಳಿದ್ದನ್ನು ತಾನು ಕಿವಿಗೆ ಹಚ್ಚಿಕೊಳ್ಳದಂತೆ ಇದ್ದದ್ದು ಬರೀ ನಟನೆಯಲ್ಲವೆ? ಅಧಿಕಾರದಲ್ಲಿ ಈ ಜಡವಾದ ದೇಹ ಮತ್ತೆ ಚೈತನ್ಯದ ಬುಗ್ಗೆಯಾದೀತೆಂದು ಆಸೆಯಾಗುತ್ತದೆ. ತಾಯಿ ಅವಳ ಮಡಿಲಲ್ಲಿ ಹಲಸಿನ ಹಣ್ಣಿನ ಕಡುಬನ್ನು ಕದ್ದುತಂದು ಕೊಡುತ್ತಿದ್ದುದು ನೆನಪಾಗುತ್ತದೆ.

ನಾಗೇಶ ವಿಷಣ್ಣನಾಗಿ ತನ್ನೆದುರು ಸುಳಿದದ್ದನ್ನು ಕಂಡ ‘ಅದೇನೋ ನಾಗೇಶ’ ಎಂದ. ಜ್ಯೋತಿ ಸಂಜೆ ಬರ್ತೇನೆ ಎಂದು ಹೊರಟಳು. ನಾಗೇಶ ಉತ್ತರ ಕೊಡಲಿಲ್ಲ. ತನ್ನ ಕಣ್ಣು ತಪ್ಪಿಸಿಕೊಳ್ಳುವ ಅವನ ಹವಣಿಕೆಯಿಂದ ಕಿರಿಕಿರಿಯಾಗಿ ಮತ್ತೆ ಕರೆದ. ನಾಗೇಶ ದುಗುಡದಿಂದ ಕೃಷ್ಣಪ್ಪನಿಗೆ ಅವನು ಜೇಬಿನಲ್ಲಿ ಮಡಿಸಿಟ್ಟಿದ್ದ ಹತ್ತು ಪೈಸೆದ ಕಿಡಿ ಎಂಬ ಪತ್ರಿಕೆಯನ್ನು ಕೊಡುತ್ತ ‘ನಾಯಿ ಸೂಳೇಮಕ್ಕಳು. ಏನೋ ಬರೆದಿದ್ದಾವೆ. ಮನಸ್ಸಿಗೆ ಹಚ್ಚಿಕೋಬೇಡಿ’ ಎಂದ.

ಕೃಷ್ಣಪ್ಪ ಓದಿದ: ಇಂಥ ಆಪಾದನೆಯನ್ನು ಯಾರೂ ಈವರೆಗೆ ಅವನ ಮೇಲೆ ಹೊರಿಸಿದ್ದಿಲ್ಲ. ‘ಮುಖ್ಯಮಂತ್ರಿಯಾಗಲು ಕೃಷ್ಣಪ್ಪ ಗೌಡರ ಸಂಚು’ ಎಂಬ ಶಿರೋನಾಮೆಯಲ್ಲಿ ಆಪಾದನೆಗಳ ಪಟ್ಟಿಯಿತ್ತು. ಹೆಂಡತಿಯ ಹೆಸರಿನಲ್ಲಿ ಜಯಮಹಲ್ ಬಡಾವಣೆಯಲ್ಲಿ ಸೈಟ್ ಪಡೆದದ್ದು; ವೀರಣ್ಣನೆಂಬ ಕಂಟ್ರಾಕ್ಟರ್ಗೆ ಪ್ರಸ್ತುತ ಸರ್ಕಾರ ಕೋಟಿಗಟ್ಟಲೆ ಲಾಭವಿರುವ ಜಲಾಶಯದ ಕಾಮಗಾರಿಯನ್ನು ಟೆಂಡರ್ ತಿದ್ದಿ ಕೊಟ್ಟಿದ್ದರೂ ಈ ಬಗ್ಗೆ ಗೌಡರು ಯಾಕೆ ಸೊಲ್ಲೆತ್ತಿಲ್ಲ. ?; ಗತಿಸಿದ ಭಾರೀ ಜಮೀಂದಾರ ಗೋಪಾಲರೆಡ್ಡಿ, ದುಡ್ಡಿನ ಚೀಲದ ವೀರಣ್ಣ ಇಂಥವರೇ ಯಾಕೆ ಗೌಡರಿಗೆ ಆಪ್ತರು?; ತನ್ನ ಹೆಸರಿನಲ್ಲಿ ಫಿಯಟ್ ಪಡೆದು ಅದನ್ನು ವೀರಣ್ಣ ವ್ಯಭಿಚಾರೀ ಪುತ್ರನ ನಿಶಾಚರ ವೃತ್ತಿಗಳಿಗೆ ಕೊಟ್ಟಿರುವುದು ನಿಜವೆ?; ಗೌಡರ ಹೆಂಡತಿ ಬ್ಯಾಂಕೊಂದರಲ್ಲಿ ಗುಮಾಸ್ತೆಯಾಗಿದ್ದವರು ಮ್ಯಾನೇಜರ್ ಸ್ಥಾನಕ್ಕೇರುತ್ತಿರುವುದು ಬರೀ ಗುಸು ಗುಸು ಸುದ್ದಿಯೆ?; ಆಳುವ ಪಕ್ಷ ಒಡೆಯುತ್ತಿರುವಾಗ ಸದ್ಯದ ಮುಖ್ಯಮಂತ್ರಿಯ ಗುಂಪು ಕ್ರಾಂತಿಕಾರನೆಂದು ಪ್ರತೀತಿ ಪಡೆದ ಗೌಡರನ್ನು ನಾಯಕನನ್ನಾಗಿ ಆರಿಸಿ ತಮ್ಮ ಸರ್ಕಾರ ಉಳಿಸಿಕೊಳ್ಳಲು ನಡೆಯುತ್ತಿರುವ ನಾಟಕದ ಹಿನ್ನೆಲೆಯಲ್ಲಿ ವೀರಣ್ಣ ಎಂ.ಎಲ್.ಎ. ಗಳನ್ನು ಎಷ್ಟೆಷ್ಟು ಹಣಕೊಟ್ಟು ಕೊಳ್ಳುತ್ತಿದ್ದಾನೆ?; ಮುಖ್ಯಮಂತ್ರಿಗೆ ವಿರೋಧವಾದ ಎಡಪಂಥೀಯರ ಜೊತೆ ಸೇರಬೇಕೆನ್ನುವ ಗೌಡರ ಪಕ್ಷದ ಗುಂಪನ್ನೂ ಹೆಚ್ಚು ದುಡ್ಡು ಕೊಟ್ಟು, ವೀರಣ್ಣ ಕೊಳ್ಳುತ್ತಿರುವುದು ನಿಜವೇ?; ವಿಚಾರವಾದಿಯೆಂದು ಖ್ಯಾತರಾದ ಗೌಡರು ರಹಸ್ಯದಲ್ಲಿ ಮಹೇಶ್ವರಯ್ಯ ಎಂಬ ಶಾಕ್ತ ಸಂಪ್ರದಾಯದವನ ಮೂಲಕ ವಾಮಾಚಾರದ ಪೂಜೆಗಳನ್ನು ಮಾಡಿಸಿ ಮುಖ್ಯಮಂತ್ರಿತ್ವ ಗಿಟ್ಟಿಸಿಕೊಳ್ಳಲು ಅದನ್ನು ಕರಪ್ಟ್ ವ್ಯವಸ್ಥೆಯನ್ನು ಎತ್ತಿ ಹಿಡಿಯಲು ಬಳಸುವುದು – ಇವೆಲ್ಲ ಕ್ರಾಂತಿಕಾರನ ಲಕ್ಷಣಗಳೆ?; ಒಂದಾನೊಂದು ಕಾಲದಲ್ಲಿ ನಿಜವಾಗಿಯೂ ಗೇಣಿದಾರರಿಗಾಗಿ ಶ್ರಮಿಸಿದ ರೈತ ಕುಟುಂಬದಲ್ಲಿ ಹುಟ್ಟಿದವನೊಬ್ಬ ಹೀಗೆ ಭ್ರಷ್ಟಾಚಾರಿಗಳ ಕೈಗೊಂಬೆ ಆದದ್ದಾದರೂ ಹೇಗೆ? – ಲೇಖನ ಕೊನೆಯಲ್ಲಿ ತುಂಬ ವ್ಯಥೆಯಿಂದ ಕೊನೆಯಾಗಿತ್ತು. ಕೊನೆಯ ವಾಕ್ಯ ಮಾರ್ಮಿಕವಾಗಿ ಗೌಡರ ಅನಾರೋಗ್ಯವೇ ಹೇಗೆ ಜನ ಶತ್ರುಗಳಿಗೂ ಗೌಡರಿಗೂ ಜನರ ಭಾವನೆಯನ್ನು ದೋಚುವ ಸಾಧನವಾಗಿದೆ ಎಂಬುದನ್ನು ದಪ್ಪಕ್ಷರದಲ್ಲಿ ವಿವರಿಸಿತ್ತು.

ಕೃಷ್ಣಪ್ಪನ ಮುಖ ಲೇಖನವನ್ನು ಓದುತ್ತ ಕಾಂತಿಹೀನವಾದ್ದನ್ನು ಕಂಡು ನಾಗೇಶ ಅವನಿಗೆ ಹುರುಪು ತುಂಬಲು ಪ್ರಯತ್ನಿಸಿದ:

‘ನಾಗರಾಜ್ ಇದನ್ನು ಬರೆಸಿದ್ದು ಗೌಡರೆ.’

‘ನಾಗರಾಜ್ ನನ್ನ ವಿರೋಧಿಸ್ತಾನೆ ನಿಜ. ಆದರೆ ಹೆಸರು ಹಾಕದೇ ಬರೆಯುವ ವ್ಯಕ್ತಿಯಲ್ಲ’

ಕೃಷ್ಣಪ್ಪ ಗಂಭೀರವಾಗಿ ಹೇಳಿದ.

‘ಅವನೇ ಬರೆದದ್ದು. ಬೆಳ್ಳಗಿರೋದೆಲ್ಲ ಹಾಲೂಂತ ನೀವು ತಿಳೀತೀರಿ. . . .’

‘ಅವರನ್ನು ಬರಹೇಳು. ಹೋಗೋಕೆ ಮುಂಚೆ ಪ್ಯಾಡು ಪೆನ್ನು ಕೊಡು’

ನಾಗರಾಜ್ ತನ್ನ ಹರೆಯದ ದಿನಗಳನ್ನು ನೆನಪು ಮಾಡುವಂತಿದ್ದ – ಅವನ ಉಗ್ರವಾದ ನಿಷ್ಠುರವಾದ ನಿಲುವಿನಲ್ಲಿ, ಅವನ ಅಸಹನೆಯಲ್ಲಿ. ವ್ಯತ್ಯಾಸವೆಂದರೆ, ತಾನು ರಾಜಕೀಯಕ್ಕೆ ಇಷ್ಟವಿಲ್ಲದೇ ಬಂದಿದ್ದೆ, ಜೀವನ ಸಫಲವಾಗಲು ಬೇರು ದಿಕ್ಕು ಕಾಣದೆ. ನಾಗರಾಜ್‌ಗೆ ರಾಜಕೀಯವಲ್ಲದೆ ಬೇರೆನೂ ಕಾಣಿಸುವುದೇ ಇಲ್ಲ. ಕ್ರಾಂತಿಯಲ್ಲಿಲ್ಲದೇ ಜೀವನ ಸಫಲವಾಗುವ ಬೇರೆ ಮಾರ್ಗಗಳೇ ಇಲ್ಲವೆಂದು ತಿಳಿದಿದ್ದಾನೆ. ಒಂದರ ಮೇಲೆ ಒಂದು ಚಾರ್ಮಿನಾರ್ ಸೇದುತ್ತ ಎಲ್ಲರೂ ತನ್ನ ಮೇಲೆ ಉರಿದು ಬೀಳುವಂತೆ ಮಾತಾಡುತ್ತಾನೆ. ತಾನು ಅದೇ ಮಾತನ್ನು ಅದೇ ದಾಟಿ ತೀವ್ರಗತಿಗಳಲ್ಲಿ ಮಾತಾಡಿದಾಗ ಸಹಿಸಿಕೊಳ್ಳುವ ಸಹೋದ್ಯೋಗಿಗಳು ನಾಗರಾಜ್ ಬಾಯಿ ತೆರೆದದ್ದೆ ಅವನ ಮೇಲೆ ಬೀಳುತ್ತಾರೆ. ಅವನು ಒಬ್ಬ ಶ್ರೀಮಂತ ಕ್ರಿಮಿನಲ್ ವಕೀಲರ ಮಗ – ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಓದುತ್ತ ಮಾರ್ಕ್ಸಿಸ್ಟ್ ಆಗಿ, ಕಮ್ಯುನಿಸ್ಟ್‌ಬಣವನ್ನು ಸೇರಿದವ. ಸೋಷಲಿಸ್ಟ್‌ರೆಂದರೂ ಅವನಿಗೆ ಅಲರ್ಜಿ. ತಾನು ಸದ್ಯಕ್ಕೆ ಮಾತ್ರ ಇಲ್ಲಿದ್ದೇನೆ ಎಂದು ಮುಚ್ಚುಮರೆ ಮಾಡದೆ ಹೇಳುತ್ತಿದ್ದ. ತುಮಕೂರಿನ ರೈತರ ಕ್ಷೇತ್ರದಿಂದ ಭಾರಿ ಬೆಂಬಲ ಪಡೆದು ಗೆದ್ದು ಬಂದಿದ್ದನೆಂದು ಉಳಿದವರು ಅವನನ್ನು ಸಹಿಸುತ್ತಾರೆ. ಕೃಷ್ಣಪ್ಪನ ನಾಯಕ ಸ್ಥಾನಕ್ಕೆ ಆತ ಪ್ರತಿಸ್ಪರ್ಧಿಯೆಂದು ಉಳಿದವರು ಯಾವಾಗಲೂ ಕೃಷ್ಣಪ್ಪನಿಗೆ ಚಾಡಿ ತರುತ್ತಾರೆ. ತನಗೆ ಯಾರೂ ಸಮವಲ್ಲವೆನ್ನುವಂತೆ ಕೃಷ್ಣಪ್ಪ ನಡೆದುಕೊಳ್ಳುವ ಠೀವಿಯನ್ನು ನಾಗರಾಜ್ ಸಹಿಸುವುದಿಲ್ಲ. ಪಕ್ಷದ ಸಭೆಯಲ್ಲಿ ಅವನು ಕೃಷ್ಣಪ್ಪನನ್ನು ಫ್ಯೂಡಲ್ ಎಂದು ಜರೆದದ್ದಿದೆ. ಆಡಳಿತ ಜೊತೆ ಯಾವ ಒಪ್ಪಂದಕ್ಕೂ ತಯಾರಿಲ್ಲದ ಅವನಿಗೆ ಕೃಷ್ಣಪ್ಪ ಹೇಳುವುದುಂಟು: ‘ಆಕಾಶ ಹಂಚಿಕೊಳ್ಳೋತನಕ ಭೂಮಿ ಹಂಚಿಕೊಂಡೇನು ಪ್ರಯೋಜನಾಂತ ಅಂದ ಹಾಗುತ್ತೆ – ನಿಮ್ಮ ವಾದದ ಕ್ರಮದಲ್ಲಿ.’ ನಾಗರಾಜ್ ಕಟುವಾಗಿ ಹಂಗಿಸುತ್ತಾನೆ; ‘ಮಾವೋ ಹೇಳೋದು ನಿಜ; ಎನಿಮಿಗಿಂತ ರಿವಿಷನಿಸ್ಟ್ ಹೆಚ್ಚು ಅಪಾಯಕಾರಿ.’ ಈ ನಾಗರಾಜ್ ಕ್ರಮೇಣ ಮೆದುವಾಗಿ ಒಪ್ಪಂದದ ದಾರಿಹಿಡಿದು ತಪ್ಪುಗಳನ್ನು ಮಾಡಿಯಾನೆಂದು ಗುಪ್ತನಾಗಿ ಕೃಷ್ಣಪ್ಪ ಬಯಸಿದ್ದಿದೆ. ಆದರೆ ಸುಖ, ಸವಲತ್ತು, ದ್ರಾಕ್ಷಿಣ್ಯಗಳಿಂದ ಸಂಪೂರ್ಣ ವಿಮುಖನಾಗಿ ಈವರೆಗೆ ನಾಗರಾಜ್ ಬದುಕಿದ್ದ, ಒಂಟಿ ಪಿಶಾಚಿಯಂತೆ. ಕೆಂಪಗೆ ಕಾದ ಕಬ್ಬಿಣದ ಸಲಾಕೆಯಂತೆ. ಕೃಷ್ಣಪ್ಪನಿಗೆ ಅವನನ್ನು ಕಂಡು ಅಸೂಯೆಯಾಗುತ್ತಿತ್ತು; ಅವನ ಅಪಕ್ವತೆ ಕಂಡು ಗೊಂದಲವಾಗುತ್ತಿತ್ತು.

ಕೃಷ್ಣಪ್ಪ ಬರೆದದ್ದನ್ನು ಇನ್ನೊಮ್ಮೆ ಓದಿ, ಅದರ ಮೇಲೆ ಪ್ಯಾಡಿಟ್ಟು ನಾಗರಾಜ್‌ಗೆ ಕಾದ. ಇಸ್ತ್ರಿಯಿಲ್ಲದ ಜುಬ್ಬ ತೊಟ್ಟು ಪ್ಯಾಂಟ್ ಹಾಕಿದ ನಾಗರಾಜ್ ಕೆದರಿದ ತಲೆಯನ್ನು ತುಸು ತಗ್ಗಿಸಿ, ಕೆಂಪುಕಣ್ಣುಗಳಲ್ಲಿ ದುರುಗುಡುತ್ತ, ಒಳಗೆ ಬಂದು, ಖುರ್ಚಿ ಎಳೆದು ಕೂತ. ನಾಗೇಶನಿಗೆ ಬಾಗಿಲು ಹಾಕಿಕೊಂಡು ಹೋಗುವಂತೆ ಕೃಷ್ಣಪ್ಪ ಕಣ್ಸನ್ನೆ ಮಾಡಿದ.

‘ನಿಮ್ಮ ಆರೋಗ್ಯ ಹೇಗಿದೆ?’ ಎಂದು ಕೂಡ ನಾಗರಾಜ್ ಕೇಳಲಿಲ್ಲ. ನಿಜವಾಗಿಯೂ ಇವನು ತನ್ನ ಹರೆಯದ ವ್ಯಂಗ್ಯ ಚಿತ್ರವೇ. ಕೃಷ್ಣಪ್ಪ ತನ್ನ ಮೇಲೆ ಬಂದ ಲೇಖನವನ್ನು ನಾಗರಾಜ್‌ಗೆ ಕೊಟ್ಟ.

‘ನೋಡಿದ್ದೇನೆ’ ಎಂದ ನಾಗರಾಜ್

‘ನೀವೇ ಇದನ್ನು ಬರೆಸಿದ್ದು ಅಂತ ಉಳಿದವರು ನನಗೆ ಹೇಳಿಯಾರು’

‘ನೀವದನ್ನ ನಂಬದಿದ್ದರೆ ಸಾಕು’

ನಾಗರಾಜ್ ಬಹು ಸರಳವಾಗಿ ನೇರವಾಗಿ ಮಾತಾಡಿದ್ದ. ಅವತ್ತಿನ ರಾತ್ರೆಯ ಮೀಟಿಂಗಲ್ಲೂ ಸಹ ಕೊನೆಯ ತನಕ ಸುಮ್ಮನಿದ್ದು,

‘ಪಾರ್ಲಿಮೆಂಟರಿ ರಾಜಕೀಯದ ಗತಿಯೇ ಇದು. ಯಾವ ಗುಂಪಿಗೆ ಸೇರಿ ನಾವು ಸರ್ಕಾರ ರಚಿಸಿದರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈ ಸೈಟ್ ಆಳುವ ವರ್ಗಗಳ ಸಾಧನ. ಬೇರೆ ಥರ ಅದನ್ನು ಬಳಸೋದು ಪಾರ್ಲಿಮೆಂಟ್ ರಾಜಕೀಯದಲ್ಲಿ ಸಾಧ್ಯವಿಲ್ಲ’ ಎಂದಿದ್ದ. ಅದರಿಂದ ರೇಗಿದ ಉಳಿದವರು.

‘ನೀವೇನು ಮಾಡುತ್ತಿದ್ದೀರಿ ಹಾಗಾದರೆ?’ ಎಂದು ಮೇಲೆ ಬಿದ್ದಿದ್ದರು.

‘ನಾನಾ? ನಮ್ಮ ಪಕ್ಷ ಸರ್ಕಾರ ರಚಿಸುವಾಗ ನಾನು ಅದರಿಂದ ಹೊರಗುಳಿತೇನೆ. ಪ್ರಾಯಶಃ ಅಸೆಂಬ್ಲಿ ಸದಸ್ಯತ್ವಕ್ಕೂ ರಾಜೀನಾಮೆ ಕೊಡ್ತೇನೆ. ಆ ಬಗ್ಗೆ ಇನ್ನೂ ನನ್ನ ಧೋರಣೆ ಸ್ಪಷ್ಟವಾಗಿಲ್ಲ’ ಎಂದಿದ್ದ.

‘ಪಾರ್ಲಿಮೆಂಟರಿ ರಾಜಕೀಯದ ಬಗ್ಗೆ ನಿಮ್ಮ ಧೋರಣೆ ಹಾಗಿದ್ದರೆ ಹೀಗೆ ಹೊಂಚು ಹಾಕ್ಕೊಂಡು ಇರೋದು ನೈತಿಕವಾಗಿ ಸರಿಯಲ್ಲ. ನಿಮ್ಮನ್ನೇ ಮೋಸ ಮಾಡ್ಕೋತಿದೀರಿ’ ಎಂದು ಕೃಷ್ಣಪ್ಪ ಆಗ ಕೆಣಕಿದ್ದ.

‘ನೀವು ಹೇಳ್ತಿರೋದ್ರಲ್ಲಿ ನಿಜವಿದೆ. ನನ್ನ ವರ್ಗದ ಭ್ರಾಂತಿಗಳಿಂದ ಇನ್ನೂ ನಾನು ಬಿಡುಗಡೆ ಪಡೆದಿಲ್ಲ’ ಎಂದು ನಾಗರಾಜ್ ಸರಳವಾಗಿ ಹೇಳಿದಾಗ ಉಳಿದವರು ನಕ್ಕಿದ್ದರು. ಆದರೆ ಕೃಷ್ಣಪ್ಪನನ್ನ ಒಳಗಿಂದ ಆ ಮಾತು ಮುಟ್ಟಿತ್ತು, ಮತ್ತೆ ಮತ್ತೆ ನೆನಪಾಗಿತ್ತು.

ಈಗಲೂ ಅದನ್ನು ನೆನೆದು ಕೃಷ್ಣಪ್ಪ ಉದ್ರೇಕಗೊಳ್ಳದೆ ಹೇಳಿದ:

‘ನಾಗರಾಜ್ ಈ ಲೇಖನ ಓದಿದ ಮೇಲೆ ನಿಮ್ಮನ್ನು ಕೇಳಬೇಕೂಂತ ಅನ್ನಿಸ್ತು. ನನ್ನ ಬಗ್ಗೆ ನಿಮಗೂ ಹೀಗನ್ನಿಸುತ್ತ? ನನಗೇ ಗೊಂದಲವಾದ್ರಿಂದ ಕೇಳ್ತಾ ಇದೀನಿ’

‘ವ್ಯಕ್ತಿಗಳ ಪ್ರಶ್ನೆ ಇಲ್ಲಿ ಮುಖ್ಯವಲ್ಲ. ಈ ವ್ಯವಸ್ಥೇಲಿ ಯಾರು ಎಷ್ಟು ಪ್ರಾಮಾಣಿಕರೂಂತ ಅನ್ನೋದು ರಿಲೇಟಿವ್ ಅಷ್ಟೆ. ನಿಮ್ಮನ್ನು ಈ ವ್ಯವಸ್ಥೆ ತನ್ನ ಬಲೇಲಿ ಸಿಕ್ಕಿಸ್ತ ಇದೇಂತ ನನಗೂ ಅನ್ನಿಸುತ್ತೆ. ನಿಮಗೊಂದು ಇಮೇಜ್ ಇದೆ. ಆ ಇಮೇಜ್ ಈ ವ್ಯವಸ್ಥೇಗೆ ಈಗ ಅಗತ್ಯವಾಗಿದೆ – ತನ್ನನ್ನು ಕಾಪಾಡಿಕೊಳ್ಳೋಕೆ.’

‘ಹಾಗಾದರೆ ಏನು ಮಾಡಬೇಕು ನಾನು ನಿಮ್ಮ ಪ್ರಕಾರ? ನಿಮ್ಮ ವಿಚಾರಾನ್ನ ನಾನು ಒಪ್ಪಲ್ಲ. ಆದರೆ ನಿಜವಾಗಿಯೂ ನಿಮ್ಮ ಅಡ್ವೈಸ್ ನನಗೆ ಬೇಕಾಗಿದೆ.’

‘ನಮ್ಮಪಕ್ಷದ ರಾಜಕೀಯದ ಮಾರ್ಗ ಈ ವರೆಗೆ ಸರಿಯಾಗಿ ಇದ್ದಿದ್ರೆ ನಿಮ್ಮನ್ನ ಸೀಕ್ ಮಾಡಬೇಕೂಂತ್ಲೇ ವೀರಣ್ಣನಂಥೋರಿಗೆ ಅನ್ನಿಸ್ತ ಇರಲಿಲ್ಲ – ಅಲ್ಲವೇ?’

ಕೃಷ್ಣಪ್ಪನಿಗೆ ಥಟ್ಟನೆ ಸಿಟ್ಟು ಬಂತು.

‘ನಾಗರಾಜ್, ವೀರಣ್ಣ ನನಗೆ ಸಹಾಯ ಮಾಡಿರೋದು ನಿಜ, ಆದರೆ ಅದಕ್ಕೆ ನಾನು ಕೈಯೊಡ್ಡಲಿಲ್ಲ. ನೀವು ಶ್ರೀಮಂತರ ಮನೇಲಿ ಹುಟ್ಟಿದವ್ರು. ನನ್ನ ಹಾಗೇ ಹುಟ್ಟಿ ಬೆಳಿದಿದ್ರೆ ನೀವು ನನ್ನಷ್ಟು ಪ್ರಮಾಣಿಕವಾಗಿ ಉಳೀತಿದ್ರೂ ನೋಡ್ತಿದ್ದೆ.’

ನಾಗರಾಜ್ ಸಿಟ್ಟಾಗಲಿಲ್ಲ.

‘ನೀವು ವ್ಯಕ್ತಿವಾದಿಯಾಗಿ ಮಾತಾಡ್ತೀರಿ. ನಿಮಗೆ ತಾತ್ವಿಕ ಕ್ಲಾರಿಟಿ ಇಲ್ಲ. ನಾನು ಆ ಪ್ರಶ್ನೇನ್ನ ಎತ್ತಲೇ ಇಲ್ಲ. ನಾನು ಪ್ರಾಮಾಣಿಕನಾಗಿದ್ರೆ ಇಲ್ಲಿ ಇರ್ತಿದ್ನ ಹೇಳಿ?’

‘ದೇಶದ ಪ್ರಧಾನಿ ಡಿಕ್ಟೇಟರ್ ಆಗಲಿಕ್ಕೆ ನೋಡ್ತಿದಾರೆ, ಪ್ರಧಾನಿ ಗುಂಪಿನವರು ಇಲ್ಲಿ ಅಧಿಕಾರಕ್ಕೆ ಬಂದರೆ ಜನರಿಗೆ ಈಗಿರೋ ಸಿವಿಲ್‌ರೈಟ್‌ಗಳೂ ನಾಶವಾಗ್ತಾವೆ. ಈಗಿರೋ ಮುಖ್ಯಮಂತ್ರಿ ರಿಯಾಕ್ಷನರಿ ನಿಜ. ಆದರೆ ಅವನ ಬೆಂಬಲದಲ್ಲಿ ನಾವು ಮಿನಿಮಮ್ ಟೈಂ ಬೌಂಡ್ ಕಾರ್ಯಕ್ರಮ ಹಾಕ್ಕೊಂಡು ಸರ್ಕಾರ ರಚಿಸಿದ್ರೆ ಅಲ್ಪಸ್ವಲ್ಪವಾದರೂ ಸಾಧಿಸಬಹುದು ಅನ್ನೋದರಲ್ಲಿ ತಿರುಳೇ ಇಲ್ಲವೇನೂ ಹಾಗಾದ್ರೆ. . . .’

‘ಇಲ್ಲ. ದೇಶದ ಸ್ಥಿತಿ ಇನ್ನಷ್ಟು ಹದಗೆಟ್ಟಾಗಲೇ ಪಾರ್ಲಿಮೆಂಟರಿ ಸಿಸ್ಟಮ್‌ಬಗ್ಗೆ ಇರೋ ಭ್ರಾಂತಿ ಜನರಲ್ಲಿ ನಾಶವಾಗುತ್ತೆ. ತೇಪೆ ಹಾಕೋ ಕೆಲಸ ನನಗಿಷ್ಟವಿಲ್ಲ.’

ಕೃಷ್ಣಪ್ಪ ಒಂದು ನಿಮಿಷ ಸು‌ಮ್ಮನಿದ್ದು ಹೇಳಿದ:

‘ನಿಮ್ಮ ವಿಚಾರ ನಾನು ಒಪ್ಪಲ್ಲ. ಇರೋ ಮನೆಗೆ ಬೆಂಕಿ ಇಕ್ಕಿ ಮೈಕಾಯಿಸಿಕೊಳ್ಳೋ ಅಪಕ್ವ ಧೋರಣೆ ನಿಮ್ಮದು. ಆದರೆ ವೈಯಕ್ತಿಕವಾಗಿ ನನಗೆ ಕೆಲವು ಸಮಸ್ಯೆಗಳಿವೆ – ಅವು ನನ್ನ ಪ್ರಾಮಾಣಿಕತೆಗೆ ಸಂಬಂಧಪಟ್ಟದ್ದು. ಅದಕ್ಕಾಗಿ ನಿಮಗೆ ಹೇಳಿ ಕಳಿಸಿದೆ. ನಾನು ಯಾರದೋ ಬಲೇಲಿ ಸಿಕ್ಕಿಹಾಕಿಕೋತಿದೀನಿ ಅಂತ ನಿಮಗೂ ಅನ್ನಿಸಿದ್ರೆ ಇಕೊಳ್ಳಿ ಈ ಕಾಗದದಲ್ಲಿ ಅಸೆಂಬ್ಲಿ ಸದಸ್ಯತ್ವಕ್ಕೇ ನನ್ನ ರಾಜೀನಾಮೆ ಬರ್ದಿದೀನಿ. ಇದನ್ನು ತಗೊಂಡು ಹೋಗಿ. ಒಂದು ಗಂಟೆ ನೀವೇ ಕೂಲಾಗಿ ವಿಚಾರ ಮಾಡಿ, ನಿಮಗೂ ಹಾಗೆನ್ನಿಸಿದರೆ ಈ ಕಾಗದಾನ್ನ ಸ್ಪೀಕರ್‌ಗೆ ಪೋಸ್ಟ್ ಮಾಡಿ’.

ಎಂದು ಕಾಗದ ಕೊಟ್ಟ. ನಾಗರಾಜ್ ಎದ್ದು ನಿಂತು ಯಾವ ಭಾವನೆಯನ್ನೂ ತೋರಿಸಿಕೊಳ್ಳದೇ ಹೇಳಿದ:

‘ನೀವು ವ್ಯಕ್ತಿವಾದಿಯಾದ್ರಿಂದ ಪ್ರಾಮಾಣಿಕತೇಂತ ವಿಪರೀತ ಬಾದರ್ ಮಾಡ್ಕೋತೀರಿ. ಇದೊಂದು ಥರದ ಸಿಕ್ಲಿ ಇಂಡಲ್‌ಜನ್ಸ್‌. . . . ಪ್ರಾಮಾಣಿಕತೆ ಪ್ರಶ್ನೆ ಬಂದರೆ. . . . ನೀವು ನನಗಿಂತ ದೊಡ್ಡವರು. . . . ಜನರಿಗೆ ನೀವೇ ನನಗಿಂತ ಹತ್ತಿರ. ಅದಕ್ಕೇ ನಿಮ್ಮ ವ್ಯಕ್ತಿತ್ವ ಮುಖ್ಯ ನನಗೆ. ಆದ್ದರಿಂದ ನೀವು ಶುದ್ಧವಾಗಿ ಉಳ್ದಿದೀರೋ ಇಲ್ಲವೊ ಅನ್ನೋ ಕಾರಣಕ್ಕಾಗಿ ರಾಜೀನಾಮೆ ಕೊಡೋದು ನನ್ನ ದೃಷ್ಟಿಯಲ್ಲಿ ಇರ್ರೆಲವಂಟ್. ಬೂರ್ಶ್ವಾ ಸಮಾಜದಲ್ಲಿ ಶುದ್ಧವಾಗಿರೋಕೆ ಎಲ್ಲಿ ಸಾಧ್ಯ? ಪಾರ್ಲಿಮೆಂಟರಿ ಹಾದಿ ಸರಿಯೋ ಅಲ್ವೋ ಅನ್ನುವ ವಿಚಾರದಲ್ಲಿ ನಮಗೀಗ ಕ್ಲಾರಿಟಿ ಬೇಕು.’

ನಾಗರಾಜ್ ಕೃಷ್ಣಪ್ಪ ಕೊಟ್ಟ ಕಾಗದವನ್ನು ಹಿಂದಕ್ಕೆ ಕೊಡುತ್ತ ಸಪ್ಪೆಯಾದ ಧಾಟಿಯಲ್ಲಿ ಮುಂದುವರಿಸಿದ:

‘ನಿಮ್ಮ ಅನುಭವ ಅದಕ್ಕೇ ಮುಖ್ಯ. ನಾನಿನ್ನೂ ಹಸಿ ಮನುಷ್ಯ. ನೀವು ಈ ವಿಚಾರದಲ್ಲಿ ಒಂದು ನಿರ್ಧಾರಕ್ಕೆ ಬಂದಾಗ ನನಗೆ ಹೇಳಿಕಳಿಸಿ. ತಾತ್ಕಾಲಿಕವಾಗಿ ಫ್ಯಾಸಿಸ್ಟರನ್ನು ತಡೆಯೋಕೆ ಪಾರ್ಲಿಮೆಂಟರಿ ಮಾರ್ಗ ಅಗತ್ಯ ಅಂತ ನಿಜವಾಗಿ ನಿಮಗನ್ನಿಸುತ್ತ? ಯಾಕೆಂದ್ರೆ ನನ್ನ ಅಸಹನೆ ಕೂಡ ಅಡ್‌ವೆಂಚರಿಸ್ಟ್ ಇಂಡೆಲ್ಜನ್ಸ್‌ಇರಬಹುದು. ಆದ್ದರಿಂದ ಜನರೊಡನೆ ಒಡನಾಡಿದ ನಿಮ್ಮ ನಿರ್ದೇಶನ ಈಗ ಬೇಕು.’

ನಾಗರಾಜ್ ಮಾತಾಡುತ್ತ ಗೊಂದಲಕ್ಕೆ ಸಿಕ್ಕಿಹಾಕಿಕೊಂಡಂತೆ ಅನ್ನಿಸಿತು. ಹಾಗೇ ನಿಂತಿದ್ದು, ಹೋಗುತ್ತೇನೆಂದೂ ಹೇಳದೆ ಅವನು ಹೊರಟು ಹೋದ.

ನಾಗರಾಜ್‌ನ ಮಾತುಗಳು ಕೃಷ್ಣಪ್ಪನನ್ನು ತೀವ್ರವಾಗಿ ಬಾಧಿಸಿದುವು. ಸಾವು ಬದುಕಿನ ಹೊಸ್ತಿಲಲ್ಲಿರುವ ತಾನೀಗ ನಿಶ್ಚಯ ಮಾಡಬೇಕು; ತಾನು ದೇಶದ ಮುಖ್ಯಮಂತ್ರಿಯಾಗುವುದು ಫ್ಯಾಸಿಸ್ಟರ ಸಂಚನ್ನು ಮುರಿಯಲು ಅಗತ್ಯವೆ? ಅಂಥ ಬಯಕೆ ತನ್ನಲ್ಲಿ ಈಗ ಹುಟ್ಟಿದ್ದಕ್ಕೆ ಅದಕ್ಕೆ ಕಾರಣ ಸಾಯುತ್ತಿರುವ ತನಗೆ ಅಧಿಕಾರದ ಮೂಲಕ ಚೈತನ್ಯವನ್ನು ಪಡೆಯಬೇಕೆಂಬ ಇಚ್ಛೆಯೆ? ಅಥವಾ ವಾರಂಗಲ್ ಠಾಣೆಯಲ್ಲಿ ಕಂಡ ಅಧಿಕಾರದ ಕ್ರೂರ ಸ್ವರೂಪವನ್ನು ನಾಶಮಾಡಬೇಕೆಂಬ ಆಸೆಯೆ? ವೀರಣ್ಣನ ವರ್ಗ ಹಿತದ ಮೂಲಕವೂ ಫ್ಯಾಸಿಸ್ಟರನ್ನು ವಿರೋಧಿಸುವುದು ಸಾಧ್ಯವೆ? ಹೀಗೆ ತಾನು ಪ್ರಶ್ನೆ ಕೇಳುವಾಗ ತನ್ನ ವೈಯಕ್ತಿಕ ಹಿತಕ್ಕೆ ವೈಚಾರಿಕ ಕುಮ್ಮಕ್ಕು ಕೊಡುತ್ತಿದ್ದೇನೆಯೆ?

‘ನಾಗರಾಜ್ – ನೀನು ಮೂರ್ಖ; ದೊಡ್ಡ ಮೂರ್ಖ; ನಿನಗೆ ಬದುಕಿನ ಸಂಕೀರ್ಣ ರೂಪವೇ ತಿಳಿಯದು; ಇವತ್ತು ರಾತ್ರೆ ಜ್ಯೋತಿ ಮತ್ತು ಅವಳ ಗೆಳೆಯ ತಮ್ಮ ದೇಹಗಳ ರಹಸ್ಯ ಸುಖಗಳನ್ನು ಅನುಭವಿಸಲಿ ಎಂದೇ ನಾನು ವೀರಣ್ಣನ ‘ವರ್ಗಹಿತ’ಗಳನ್ನು ಅಲಕ್ಷ್ಯದಿಂದ ಕಂಡೇನು’ ಎಂದೆಲ್ಲ ಕಿರುಚಿಕೊಳ್ಳಬೇಕೆನ್ನಿಸಿತು. ‘ಉಣ್ಣುವುದು, ನಿದ್ದೆ ಮಾಡುವುದು, ಸಂಭೋಗದಲ್ಲಿ ಮೈಗಳನ್ನು ಬೆಸೆಯುವುದು, ದೇವಿಯೋ ದಿಂಡೆಯೋ ಯಾವುದೋ ನೆವದಲ್ಲಿ ಅವ್ಯಕ್ತಕ್ಕೆ ಲಗ್ಗೆ ಹಾಕುವುದು, ಈ ಕ್ಷಣಿಕವಾದ ಬದುಕಿನಲ್ಲಿ ಸೊಂಟದಲ್ಲಿರುವ ಅಯ್ಯ ಮೆತ್ತಗಾದಾಗ ಕುದುರೆಬಾಲ ಹಿಡಿದು ಅಲೆಯುತ್ತ ಉದ್ರೇಕಗೊಳ್ಳುವುದು – ಇವನ್ನೆಲ್ಲ ಬಿಟ್ಟು ಇನ್ನೇನು ಇದೆಯೋ ಮೂರ್ಖ?’ – ಜ್ಯೋತಿ ತೀಡಿದ್ದ ಕಾಲನ್ನು ಎತ್ತಲು ಪ್ರಯತ್ನಿಸುತ್ತ ಕೃಷ್ಣಪ್ಪ ಉಸಿರುಕಟ್ಟಿದ.