***

ಈಗ ಐದೂವರೆ, ಆರು ಗಂಟೆಗೆ ವಿಮಾನದಿಂದ ಗೌರಿ ಇಳಿದಿರುತ್ತಾಳೆ. ನಾಗೇಶ ಅವಳು ಬಿಳಿಸೀರೆಯುಟ್ಟಿದ್ದ ಚಿತ್ರ ನೋಡಿದ್ದಾನೆ ಗುರುತಿಸುತ್ತಾನೆ. ಅವಳು ತನ್ನ ತೀವ್ರತೆ ತೋರಿಸಿಕೊಳ್ಳದಂತೆ ‘ಕೃಷ್ಣಪ್ಪ ಗೌಡರು ಹೇಗಿದ್ದಾರೆ?’ ಎಂದು ಸಭ್ಯ ನುಡಿಗಳಲ್ಲಿ ವಿಚಾರಿಸಿಕೊಳ್ಳುತ್ತಾಳೆ. ನಾಗೇಶನಿಗೆ ಗೊತ್ತಿದೆ; ವೀರಣ್ಣನ ಕಾರಲ್ಲಿ ಅವಳನ್ನು ತಡಮಾಡದೆ ಸೀದ ಇಲ್ಲಿಗೆ ಕರೆದುಕೊಂಡು ಬರಬೇಕೆಂದು. ಆಮೇಲೆ ಗೆಸ್ಟ್‌ಹೌಸಿಗೆ ಕರೆದುಕೊಂಡು ಹೋಗಬೇಕೆಂದು.ದಾರಿಯಲ್ಲಿ ತನ್ನ ಬಗ್ಗೆ ಎಲ್ಲಾ ನಾಗೇಶನೇ ಹೇಳುತ್ತಾನೆ; ಸ್ಟ್ರೋಕ್ ಬಡಿದದ್ದು: ಮುಖ್ಯಮಂತ್ರಿಯಾಗಬಹುದಾದ್ದು; ಆದರೆ ಅದಕ್ಕಾಗಿ ಆಸೆಪಡುವುದಿಲ್ಲ ಎಂಬುದು; ತತ್ತ್ವಕ್ಕಾಗಿ ಒಪ್ಪಿಕೊಳ್ಳಲೂಬಹುದು ಎಂದು. ನಿಲ್ದಾಣದಿಂದ ಇಲ್ಲಿ ಬರಲು ಅರ್ಧ ಗಂಟೆಯಾದರೂ ಬೇಕು. ವಿಮಾನ ಲೇಟಾದರೆ?. . . . ಅಥವಾ ಅವಳೇ ಬಟ್ಟೆ ಬದಲಾಯಿಸಲು ಮೊದಲು ಗೆಸ್ಟ್‌ಹೌಸಿಗೆ ಹೋಗಬೇಕೆಂದರೆ.

ಹೊರಗೆ ಕಾರು ನಿಂತ ಶಬ್ದವಾಯಿತು. ಹಾಗಾದರೆ ವಿಮಾನವೇನಾದರೂ ಬೇಗ ಬಂದುಬಿಟ್ಟಿತೆ? ಒಳಗೆ ಯಾರೋ ಬರುತ್ತಿದ್ದಾರೆ. ಹೆಣ್ಣಿನ ಹೆಜ್ಜೆ ಸಪ್ಪಳವಲ್ಲ.

‘ನಮಸ್ಕಾರ’

ಕೃಷ್ಣಪ್ಪನಿಗೆ ಎದುರು ನಿಂತವರನ್ನು ಕಂಡು ನಿರಾಸೆಯಾಯಿತು. ವೀರಣ್ಣನ ಜೊತೆ ನರಸಿಂಹಭಟ್ಟ ಮತ್ತು ರಾಮೇಗೌಡರು ಬಂದಿದ್ದರು. ಮಗುವಿಗೆಂದು ಒಲೆಯ ಮೇಲಿದ್ದ ಹಾಲನ್ನು ತಿಪ್ಪೆಗೆ ಚೆಲ್ಲಿದ್ದ ನರಸಿಂಹಭಟ್ಟ – ಅವನ ಜೊತೆಗೆ ಮೊದಲನೇ ಚುನಾವಣೆಯಲ್ಲಿ ತನ್ನನ್ನು ಸೋಲಿಸಲು ಭೂಮಾಲೀಕರ ಪರವಾಗಿ ನಿಂತಿದ್ದ ರಾಮೇಗೌಡ.

ಮೂವರೂ ಕೂತು ವಟವಟ ಮಾತಾಡಿದರು. ನೀವು ದೊಡ್ಡ ನಾಯಕರು. ದೇಶಸೇವೆಗಾಗಿ ನಿಮ್ಮ ಆರೋಗ್ಯವನ್ನು ಭಗವಂತ ಕಾಯಬೇಕು – ಇತ್ಯಾದಿ. ಗೇಣಿಶಾಸನದ ಬಗ್ಗೆ ನನ್ನ ತಿಳುವಳಿಕೆ ಅಲ್ಪವಾಗಿತ್ತೆಂದೂ, ಬಲಾಚ ಪೃಥಿವೀ ಎನ್ನುವ ತತ್ತ್ವ. ಈಗ ಸಲ್ಲದೆಂದೂ, ಕೃಷ್ಣಪ್ಪಗೌಡರ ಹೋರಾಟದಿಂದ ಈಗ ತಾನು ಕೂಡ ಮಠದ ಸ್ವಲ್ಪ ತೋಟದ ಮಾಲೀಕನಾಗುವುದು ಸಾಧ್ಯವಾಯಿತೆಂದೂ; ಸ್ವಾಮಿಗಳಿಗೂ ತನಗೂ ಈಗ ಅಷ್ಟಕ್ಕಷ್ಟೇ ಎಂದೂ ನರಸಿಂಹಭಟ್ಟ ಹೇಳಿದ. ಮಕ್ಕಳು ತನ್ನಂತೆ ಪೂಜೆ ಪುನಸ್ಕಾರದಲ್ಲಿ ಬದುಕನ್ನು ಕಳೆಯೋದು ಶಕ್ಯವೇ? ಅವರನ್ನು ಓದಿಸಬೇಕಲ್ಲ – ಭಟ್ಟ ಶಿವಮೊಗ್ಗದಲ್ಲಿ ಮನೆ ಮಾಡಿದ್ದ. ಅವನಿಗೆ ಸಿಹಿಮೂತ್ರ ರೋಗ ಬೇರೆ. ದಿನಾ ಇಂಜಕ್ಷನ್ ಆಗಬೇಕು. ಮಠದ ಪಾರುಪತ್ಯಕ್ಕೆ ಅವನೇ ತನ್ನ ಅಕ್ಕನ ಗಂಡನನ್ನು ಗೊತ್ತುಮಾಡಿ ಪೇಟೆ ಸೇರಿದ್ದ. ಗುರುಗಳ ಸೇವೆ ಮಾಡಿದ್ದಕ್ಕೆಂದು ಅವನು ಸ್ವಂತ ಸಾಗುವಳಿಗೆ ಇಟ್ಟುಕೊಂಡ ಹತ್ತೇಹತ್ತು ಎಕರೆ ತೋಟವನ್ನೂ ಬಿಟ್ಟುಕೊಡೆಂದು ಸ್ವಾಮಿಗಳ ಕೇಳುವುದೆ? ತನ್ನ ಮಗನಿಗೇ ಆಶ್ರಮ ಕೊಡಬಹುದಿತ್ತು – ಲಕ್ಷಣಸಂಪನ್ನನಾದ ಹುಡುಗ – ಹೋಗಲಿ ಬೇಡ – ಅವರ ಅಕ್ಕನ ಮಗನಿಗೇ ಕೊಡಲಿ – ಆದರೆ ಅವರ ಸೇವೆ ಮಾಡಿದ್ದಕ್ಕೆ ತೋಟವೂ ಬೇಡವೆ? ಕೃಷ್ಣಪ್ಪಗೌಡರು ಹೋರಾಡಿದ ಫಲವಾದ ಗೇಣಿಶಾಸನವಿಲ್ಲದಿದ್ದಲ್ಲಿ ಖಂಡಿತ ನರಸಿಂಹಭಟ್ಟನಿಗೆ ತೋಟ ದಕ್ಕುತ್ತಿರಲಿಲ್ಲ. ರಾಮೇಗೌಡರಿಗೂ ಅಷ್ಟೆ – ಮಠದ ತೋಟ ಈ ಶಾಸನದಿಂದ ಸ್ವಂತದ್ದಾಯಿತು. ಯಾರ್ಯಾರೋ ಅವರ ಕಿವಿಯಲ್ಲಿ ಊದಿದ್ದರು: ಈ ಕೃಷ್ಣಪ್ಪಗೌಡರು ಗೆದ್ದರೆ ನಿಮಗೆಲ್ಲ ಕೈಯಲ್ಲಿ ಕರಟ ಕೊಟ್ಟು ತಿರುಪೆಯೆತ್ತಿಸುತ್ತಾರೆ ಅಂತ. ಈಗ ಎಲ್ಲರಿಗೂ ತಿಳಿದಿದೆ ಎನ್ನಿ.

‘ಏನು ನೀವು ಬಂದ ಕೆಲಸ?’

ಕೃಷ್ಣಪ್ಪನಿಗೆ ಆಯಾಸವಾಗಿತ್ತು. ವೀರಣ್ಣ ವಿವರಿಸಿದ. ಕೃಷ್ಣಪ್ಪನ ಕ್ಷೇತ್ರದಲ್ಲಿ ರೈತರೆಲ್ಲ ಕೂಡಿ ದೊಡ್ಡದೊಂದು ಸನ್ಮಾನ ಏರ್ಪಡಿಸಿದ್ದಾರೆ. ಏಳು ದಿನಗಳೂ ರಾತ್ರೆ ಯಕ್ಷಗಾನ ನಡೆಯಲಿದೆ. ಹಗಲು ಭಾಷಣಗಳು – ರೈತರ ಸಮಸ್ಯೆ ಬಗ್ಗೆ. ಮೊದಲನೇ ದಿನ ಕೃಷ್ಣಪ್ಪಗೌಡರಿಗೆ ಒಂದು ಲಕ್ಷ ರೂಪಾಯಿಯನ್ನು ಅರ್ಪಿಸಲಾಗುತ್ತೆ. ಪ್ರತಿ ರೈತನಿಂದಲೂ ಒಂದೋ ಎರಡೋ ರೂಪಾಯಿ ಪಡೆದು ಒಟ್ಟಾದ ಹಣ ಇದು. ಮೊದಲನೇ ದಿನದ ಸಭೆಗೆ ಮುಖ್ಯಮಂತ್ರಿಯೇ ಪ್ರಧಾನ ಭಾಷಣಕಾರರು. ಕೃಷ್ಣಪ್ಪಗೌಡರ ಜನಪ್ರಿಯತೆ ಎಂಥದೆಂದರೆ ಈ ಮುಖ್ಯಮಂತ್ರಿಯ ವೈರಿ ಚಂದ್ರಯ್ಯನೂ ಈ ಸಭೆಗೆ ಬರುವ ಆಶಯ ತೋರಿಸಿದ್ದಾರಂತೆ. . . . ಒಟ್ಟಿನಲ್ಲಿ ಇದು ದೇಶದ ಬಡ ರೈತರಿಗೆ ಒಂದು ದೊಡ್ಡ ಜಾತ್ರೆಯಾಗಲಿದೆ. ದೆಹಲಿಯಿಂದ ಕೃಷ್ಣಪ್ಪಗೌಡರ ಪಕ್ಷದ ನಾಯಕರೂ ಬರಲು ಒಪ್ಪಿದ್ದಾರೆ. ಗೌಡರಿಗೆ ಇದನ್ನೊಂದು ಸರ್‌ಪ್ರೈಸ್ ಆಗಿ ಮಾಡಬೇಕೆಂದು ಇಷ್ಟು ದಿನಗಳೂ ಅವರ ಅಭಿಮಾನಿಗಳು ತೆರೆಯಮರೆಯಲ್ಲಿ ಈ ಎಲ್ಲವನ್ನೂ ಸಿದ್ಧಪಡಿಸಿದ್ದಾರೆ.

ವೀರಣ್ಣನ ನಯವಾದ ಮಾತಿಗೆ ವಜ್ರದ ಒಂಟಿಗಳ ಭಟ್ಟನೂ, ಹೊಸದಾಗಿ ಹಲ್ಲುಗಳನ್ನು ಕಟ್ಟಿಸಿಕೊಂಡಿದ್ದ ರಾಮೇಗೌಡನೂ ತಲೆದೂಗುತ್ತ ತಮ್ಮ ಭಾವನೆಗಳನ್ನೂ ಯಥೋಚಿತವಾಗಿ ಸೇರಿಸಿದರು. ಮಾತಿನ ಮಧ್ಯೆ ಕೃಷ್ಣಪ್ಪ,

‘ವೀರಣ್ಣ, ಗೌರಿ ದೇಶಪಾಂಡೆಯವರ ವಿಮಾನ ಬಂತೋ ಇಲ್ಲವೊ ವಿಚಾರಿಸ್ತೀರ?’ ಎಂದ.

ವೀರಣ್ಣ ಎದ್ದು ನಿಂತ. ಹೊರಗಿಂದ ಕಾರಿನ ಶಬ್ದವಾಗಲು ‘ಅವರೇ ಇರಬಹುದು, ಗೆಸ್ಟ್‌ಹೌಸಿಗೆ ಕಳಿಸಿಬಿಡಿ’ ಎಂದು ಕೂತ.

‘ಈಗ ನಾನು ಅವರ ಹತ್ರ ಮಾತಾಡಬೇಕು. ಆಮೇಲೆ ನೋಡುವ’ ಎಂದು ಕೃಷ್ಣಪ್ಪ ಬಲಗೈ ಎತ್ತಿ ನಮಸ್ಕಾರ ಮಾಡಿದ. ಭಟ್ಟ, ಗೌಡ, ವೀರಣ್ಣ ಎದ್ದು ಕೈಮುಗಿದು ಹೊರಟರು.

***

ಕೃಷ್ಣಪ್ಪನಿಗೆ ತನ್ನ ಕಣ್ಣನ್ನು ನಂಬಲಾಗಲಿಲ್ಲ. ಗೌರಿ ಎದುರು ನಿಂತಿದ್ದಳು – ಬ್ಲೂ ಜೀನ್ಸಿನ ಮೇಲೆ ತೆಳುವಾದ ಲಖ್ನೋ ಜುಬ್ಬ ತೊಟ್ಟು ಅವಳ ಬೆನ್ನಿನ ಮೇಲೆ ಚೆಲ್ಲಿದ್ದ ಉದ್ದ ಕೂದಲನ್ನು ಒಂದು ಕರ್ಚಿಫಿನಿಂದ ಬಿಗಿದಿದ್ದಳು. ಅಲ್ಲಿ ಇಲ್ಲಿ ಬಿಳಿಯ ರೇಖೆಗಳು ಕೂದಲಲ್ಲಿ ಕಂಡವು. ಬಿಟ್ಟರೆ ಹಿಂದಿನ ಗೌರಿಯೇ ಇವಳು. ಅದೇ ಸಪುರವಾದ ಮೈಕಟ್ಟು. ಅದೇ ಹೊಳೆಯುವ ಕಣ್ಣುಗಳು. ತೀವ್ರತೆಯನ್ನು ಸಹಿಸಿಕೊಳ್ಳಲು ಗೌರಿ ನಗುತ್ತ ಹೇಳಿದಳು:

‘ಈಗ ನೀವು ಆಫ್ರಿಕನ್ ಪ್ರಿನ್ಸ್‌ಹಾಗೆ ಕಾಣುತ್ತಿಲ್ಲ. ಗಡ್ಡದಿಂದಾಗಿ ಆಫ್ರಿಕನ್ ಗಾಡ್‌ನಂತೆ ಕಾಣುತ್ತಿದ್ದೀರಿ. ರೂಮಲ್ಲೆ ಇದ್ದೂ ಇದ್ದೂ ಸ್ವಲ್ಪ ಬೆಳ್ಳಗೆ ಬೇರೆ ಆಗಿದ್ದೀರಿ. . . .’

ಕೃಷ್ಣಪ್ಪ ಏನೂ ಮಾತಡಲಾರದೆ ವೀಲ್‌ಚೇರಿನ ಮೇಲೆ ಕೂತಿದ್ದ. ಅವನ ಕಣ್ಣುಗಳಲ್ಲಿ ನೀರಾಡುತ್ತ ಇತ್ತು. ಹಿಂದಿನ ಬಿಗಿ, ಗರ್ವಗಳು ತನ್ನಿಂದ ಮಾಯವಾಗಿರುವುದನ್ನು ಈ ತನ್ನ ಉದ್ವೇಗದಿಂದ ಗೌರಿ ಗಮನಿಸುವಳೆಂಬುದು ಕೃಷ್ಣಪ್ಪನನ್ನು ಬಾಧಿಸಲಿಲ್ಲ. ಅವಳು ಅಮೆರಿಕಕ್ಕೆ ಹೊರಟು ನಿಂತಾಗ ‘ನೀನು ನನಗೆ ಬೇಕು. ಹೋಗಬೇಡ’ ಎಂದು ಅವನು ಅನ್ನಬಹುದಿತ್ತು. ಅಂದಿರಲಿಲ್ಲ. ಆಗ ತಮಗೇನು ಬೇಕೆಂಬುದೇ ಅವನಿಗೆ ಸ್ಪಷ್ಟವಾಗದಷ್ಟು ಚೈತನ್ಯವಿತ್ತು. ಈಗ ಬಲಗೈಯನ್ನು ಮಾತ್ರ ಕೃಷ್ಣಪ್ಪ ಎತ್ತಬಲ್ಲ – ಎತ್ತಿದ. ಗೌರಿ ಅವನ ಬಲ ಪಕ್ಕದಲ್ಲಿ ನಿಂತು ಅವನ ತಲೆಯನ್ನು ತನ್ನ ಹೊಟ್ಟೆಗೆ ಒತ್ತಿಕೊಂಡು ತಲೆಯ ಗುಂಗುರು ಕೂದಲಲ್ಲಿ ಬೆರಳಾಡಿಸಿದಳು. ಅವಳ ಹೊಟ್ಟೆ ಒದ್ದೆಯಾಯಿತು. ಕೃಷ್ಣಪ್ಪನ ಬಲಗೈ ಅವಳನ್ನು ಭದ್ರವಾಗಿ ಅಪ್ಪಿತ್ತು. ‘ದೆಹಲಿಗೆ ಬಂದವಳೇ ಯಾಕೆ ಬರಲಿಲ್ಲ?’ ಎಂದ. ‘ನಿಮಗೆ ನಾನು ಬರೋದು ಬೇಕೊ, ಬೇಡವೊ ಗೊತ್ತಿರಲಿಲ್ಲ’ ಎಂದು ಗಂಭೀರವಾಗಿ ಹೇಳಿ ತನ್ನ ಮಾತಿನ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಲು ಹಾಸ್ಯಮಾಡಿದಳು: ‘ನಿಮ್ಮ ಜಂಬ ಇಳೀಲಿ ಅಂತ ಕಾದಿದ್ದೆ.’

***

ಇಬ್ಬರೂ ನಕ್ಕರು. ಗೌರಿ ಕುರ್ಚಿಯ ಮೇಲೆ ಕೂತು ರೂಮಿಯ ಸುತ್ತ ನೋಡಿದಳು. ಗುಲಾಬಿ ಹೂಗಳಲ್ಲಿ ಅವಳ ಕಣ್ಣುಗಳು ನಿಂತದ್ದು ಕಂಡು ಕೃಷ್ಣಪ್ಪ ಅವಳ ಮನೆಯ ಗುಲಾಬಿ ತೋಟವನ್ನು ನೆನೆಸಿಕೊಂಡ. ಗೌರಿ ಕೂಡ ಕೃಷ್ಣಪ್ಪ ದಿವಾನಖಾನೆಯಲ್ಲಿ ತೋಟದ ಗುಲಾಬಿಯನ್ನು ನೋಡುತ್ತ ಕೂತಿದ್ದ ದಿನವನ್ನೇ ಚಿಂತಿಸುತ್ತಿದ್ದಳು. ಅವನ ಬಾಯಿಯ ಮಾತನ್ನ ಅವಳು ಕಸಕೊಂಡಂತೆ ಹೇಳಿದಳು:

‘ನಂಜಪ್ಪನೋರು ತೀರಿಹೋದರು. ಈಗ ಅಮ್ಮ ಡೆಲ್ಲೀಲಿ ನನ್ನ ಜೊತೆ ಇದಾರೆ.’

‘ಕೆಲಸ ಇಷ್ಟವಾಗ್ತ ಇದೆಯ?’

‘ಇದೆ. ರಿಂಬೋ ಮೇಲೆ ನಾನು ಬಂದ ಒಂದು ಪುಸ್ತಕ ಅಚ್ಚಾಗ್ತ ಇದೆ.’

ಅದೇ ಹಿಂದಿನ ನಾಚಿಕೆ ಗಾಂಭೀರ್ಯ ಬೆರೆತ ಧಾಟಿಯಲ್ಲಿ ಗೌರಿ ಮಾತಾಡುತ್ತಿದ್ದಳು.

ಕೃಷ್ಣಪ್ಪನ ಕಣ್ಣುಗಳು ತನ್ನ ಮುಖವನ್ನು ಇಡಿಯಾಗಿ ಪಡೆಯುತ್ತಿರುವುದು ಕಂಡು ಗೌರಿ ಚಿಕ್ಕ ಹುಡುಗಿಯಂತೆ ಕೆಂಪಾದಳು. ಅವನ ಗಮನವನ್ನು ಬೇರೆ ಕಡೆ ಎಳೆಯಲು ಹೇಳಿದಳು:

‘ಅಮೆರಿಕಾದಲ್ಲಿ ನಾನು ಒಬ್ಬ ಸೊಷಿಯಾಲಜಿಸ್ಟನ್ನು ಮದುವೆಯಾಗಿದ್ದೆ. ಮದುವೆ ಅಂದರೆ ಅವನ ಒಟ್ಟಿಗಿದ್ದೆ. ಸಭ್ಯ ಮನುಷ್ಯ – ಮಾರ್ಕ್ಸ್‌‌ವಾದಿ – ಕ್ಯಾಂಪಸ್‌ನಲ್ಲಿ ಮಾರ್ಟಿನ್ ಲೂಥರ್‌ಕಿಂಗ್ ಪರ ಚಳವಳೀಲಿ ಭಾಗವಹಿಸಿದ್ದ – ನಾನೂ ಕೂಡ. ಈಗ ನನಗೂ ರಾಜಕೀಯಾಂದ್ರೆ ಆಸಕ್ತಿ ಗೊತ್ತ? ನಮ್ಮದೊಂದು ಗುಂಪಿದೆ ಡೆಲ್ಲೀಲಿ. ನಮ್ಮ ಪ್ರಧಾನಿ ಡಿಕ್ಟೇಟರ್ ಆಗ್ತಾರೇಂತ ನಮಗೆ ಭಯ. ನೀವು ಏನಾದರೂ ಮಾಡಿ ಪ್ರಧಾನಿ ಕಡೇವರು ಅಧಿಕಾರಕ್ಕೆ ಬರ್ದಿದ್ದಂಗೆ ನೋಡಿಕೋಬೇಕು. ನಾಗೇಶ್ ಎಲ್ಲ ಹೇಳಿದರು. ಸಿಚುಯೇಶನ್ ತುಂಬ ಎಕ್ಸೈಟಿಂಗ್ ಆಗಿದೆ. . . . ಅದೇ ಎಡ್ಡಿ ವಿಷಯ ಹೇಳಕ್ಕೆ ಹೋಗಿ ಏನೇನೊ ಹೇಳಿಬಿಟ್ಟೆ. ನಾನು ಸಿಗರೇಟ್ ಸೇದಬಹುದ?’

ಹಿಂದಿನ ಗೌರಿಯೇ, ಆಳವಾಗಿ ಅನ್ನಿಸಿದ್ದನ್ನು ಬಚ್ಚಿಟ್ಟುಕೊಳ್ಳಲು ಏನೇನೋ ಮಾತಾಡಿಬಿಡುವಳು. ಕೆಣಕಲೆಂದು ಕೆಲವೊಮ್ಮೆ ವಿರುದ್ಧವಾದ್ದನ್ನು ಹೇಳುವಳು. ಗೌರಿ ಪ್ಯಾಕಿನಿಂದ ಸಿಗರೇಟು ತೆಗೆದು ಹಚ್ಚಿ,

‘ನೀವು ಈಗಲೂ ಸೇದುತ್ತೀರ?’ ಎಂದಳು.

‘ಬಿಟ್ಟಿದ್ದೇನೆ. ಈಗ ಕೊಟ್ಟರೆ ಒಂದು ಎಳೀತೀನಿ’ ಎಂದ. ಗೌರಿ ಸಿಗರೇಟು ಸೇದಿಯಾಳೆಂದು ಕೃಷ್ಣಪ್ಪ ಯಾವತ್ತೂ ಊಹಿಸಿರಲಿಲ್ಲ. ಗೌರಿ ತನಗೆ ಹಚ್ಚಿಕೊಂಡ ಸಿಗರೇಟನ್ನ ‘ಇಫ್‌ಯು ಡೊಂಟ್ ಮೈಂಡ್‌’ ಎಂದು ಕೃಷ್ಣಪ್ಪನ ತುಟಿಗಳಿಗೆ ಸಿಕ್ಕಿಸಿದಳು. ಬದಲಾದ ಗೌರಿಯನ್ನು ಒಪ್ಪಿಕೊಳ್ಳಲು ಕೃಷ್ಣಪ್ಪ ಪ್ರಯತ್ನಿಸುತ್ತಿದ್ದಂತೆ,

‘ಈಗಲೂ ನೀವು, ಫ್ಯೂಡಲ್ಲಾಗೇ ಉಳ್ದಿದೀರ? ಐ ಹೋಪ್‌ನಾಟ್. ನಾನು ಸಿಗರೇಟ್ ಸೇತ್ತೀನಿ ಅಂತ ಶಾಕಾಯ್ತ?’

ಎಂದು ತಲೆಯನ್ನು ಹಿಂದಕ್ಕೆ ತಳ್ಳಿ ಕೂದಲನ್ನು ಕೈಯಿಂದ ಎತ್ತಿ ಬೆನ್ನಿನ ಮೇಲೆ ಹಾಕಿ ನಕ್ಕಳು. ಈ ಭಂಗಿ ಕೂಡ ಗೌರಿಯಲ್ಲಿ ಹೊಸದು. ಇದು ಅಸಹಜ ಅಂತ ತನಗೆ ಅನ್ನಿಸಿತೆ, ಅದಕ್ಕೆ ತನ್ನ ಸ್ವಭಾವ ಕಾರಣವೆ? ಎಂದು ಕೃಷ್ಣಪ್ಪ ಯೋಚಿಸುತ್ತಿದ್ದಾಗ ಗೌರಿ ತುಂಟಾಗಿ ಅವನನ್ನು ನೋಡುತ್ತಿದ್ದಳು. ಇದ್ದಕ್ಕಿದ್ದಂತೆ ಗಂಭೀರವಾಗಿ ಹೇಳಿದಳು:

‘ಅಮೇರಿಕನ್ ಮೇಲ್ ಬಗ್ಗೆ ನನಗಿದ್ದ ಭ್ರಾಂತಿ ಬೇಗ ಹರೀತು. ನೀವು ಫ್ಯೂಡಲ್ ಎಂದೆ. ಅವರೂ ಕೂಡ ಹೆಂಗಸರ ಬಗ್ಗೆ ಫ್ಯೂಡಲ್ಲೆ. ಎಡ್ಡಿ ಮಾರ್ಕ್ಸಿಸ್ಟ್‌ಅಲ್ಲವ? ಆದರೂ ಅವನಿಗೆ ಗೊತ್ತಾಗದೇನೇ ಅವನು ಫ್ಯೂಡಲ್ಲಾಗೇ ಉಳಿದಿದ್ದ. ಈಗಲೂ ಫ್ರೆಂಡ್ಸ್‌ಆಗಿ ನಾವು ಉಳ್ದಿದೀವಿ ಅನ್ನಿ.’

ಕೃಷ್ಣಪ್ಪನ ಮುಖ ಕಂದಿದ್ದನ್ನು ಗೌರಿ ಗಮನಿಸಿದಳು. ‘ನಿನ್ನನ್ನು ಹರ್ಟ್‌ಮಾಡಿದನ’ ಎಂದು ಕೇಳಬೇಕೆನ್ನಿಸಿದ್ದನ್ನು ತೆಡೆದುಕೊಂಡಳು. ಅಮೇರಿಕಾದಲ್ಲಿ ತಾನು ಮದುವೆಯಾಗಿದ್ದು ಕೃಷ್ಣಪ್ಪನಿಗೆ ನೋವುಂಟು ಮಾಡಿದೆ ಎಂಬುದನ್ನು ಗಮನಿಸಿ ಅವಳಿಗೆ ಸಂತೋಷವಾಯಿತು. ಆದರೆ ಅದನ್ನು ತೋರಗೊಡದೆ ಗೌರಿ,

‘ನಿಮ್ಮ ಹೆಂಡತಿ ಮಗಳು ಎಲ್ಲಿ?’ ಎಂದಳು.

ಕೃಷ್ಣಪ್ಪ ಒಂದು ನಿಮಿಷ ಮಾತಾಡಲಿಲ್ಲ. ತಲೆತಗ್ಗಿಸಿ ನಿಧಾನವಾಗಿ ಹೇಳಿದ

‘ನಾನು ಯಾವತ್ತಾದರೂ ಸಾಯಬಹುದು ಗೌರಿ, ಯಾಕೆ ಸುಳ್ಳೆ ಸುಳ್ಳೆ ನಿಮ್ಮೆದುರು ನಟನೆ ಮಾಡಬೇಕು? ಹೆಂಡತೀಂತ ಒಬ್ಬಳು ಇದಾಳೆ. ಆದರೆ ಅವಳನ್ನು ನಾನು ಹೊಡೀತೀನಿ.’

ತನ್ನ ನೋವು ಗೌರಿಗೆ ತಿಳಿದಿರಬಹುದು – ಅವಳೂ ಮೂಕವಾದಳು.

‘ನಾಗೇಶಾ’ ಎಂದು ಕೃಷ್ಣಪ್ಪ ಕರೆದ. ನಾಗೇಶ ಸಂಭ್ರಮದಿಂದ ಒಳಗೆ ಬಂದು ಬಡಬಡಿಸಿದ,

‘ನಿಮ್ಮದೊಂದು ಜೀವನ ಚರಿತ್ರೇನ್ನ ಸನ್ಮಾನದ ಹೊತ್ತಿಗೆ ಪಬ್ಲಿಷ್ ಮಾಡ್ತಾರಂತೆ. ಈಗಲೇ ನಾನು ಅದನ್ನು ಬರೀಲಿಕ್ಕೆ ಶುರು ಮಾಡಿಬಿಟ್ಟಿದೀನಿ. ಬಿಹಾರ್‌ನಲ್ಲಿ ನಡೆದ ಆಲ್ ಇಂಡಿಯಾ ಕಿಸಾನ್ ಸಮ್ಮೇಳನಕ್ಕೆ ನೀವು ಪ್ರೆಸಿಡೆಂಟ್ ಆದರಲ್ಲ ಆಗ. . . .’

ಕೃಷ್ಣಪ್ಪ ನಕ್ಕು, ಅವನ ಮಾತು ತಡೆದು,

‘ಬರಿಯಯ್ಯಾ ಬರಿ, ಸೀತೇನ್ನ ಬರಹೇಳು. ಗೌರೀನ್ನೂ ಕರ್ಕೊಂಡು ಬಾ’ ಎಂದು, ಗೌರಿಯ ಆಶ್ಚರ್ಯ ಗಮನಿಸಿ ಹೇಳಿದ:

‘ನನ್ನ ಮಗಳಿಗೆ ನಿಮ್ಮ ಹೆಸರಿಟ್ಟಿದ್ದೇನೆ.’

ನಾಗೇಶ ಸ್ವಲ್ಪ ಹೊತ್ತಾದ ಮೇಲೆ ಗೌರಿಯನ್ನು ಕರೆದುಕೊಂಡು ಬಂದು ಹೇಳಿದ: ‘ಸೀತಮ್ಮನಿಗೆ ತಲೆನೋವಂತೆ – ಮಲಗಿದಾರೆ. ಗೌಡರೇ, ನೀವು ಮಲ್ನಾಡಿನ ಒಂದು ಹಳ್ಳೀಲಿ ಹುಟ್ಟಿ, ಆಲ್ ಇಂಡಿಯಾ ರೈತರ ನಾಯಕರಾದರಲ್ಲ – ಅದರ ಮೇಲೆ ಒತ್ತು ಬೀಳಬೇಕು ನಿಮ್ಮ ಜೀವನ ಚರಿತ್ರೇಲಿ ಅನ್ನಿಸತ್ತೆ’ ನಾಗೇಶನ ಉತ್ಸಾಹದ ಧಾಟಿಯಿಂದ ಕೃಷ್ಣಪ್ಪನಿಗೆ ಮುಜುಗರವಾಗಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಗೌರಿ ಮಗುವನ್ನು ಕೈಗಳಿಂದ ಹಿಡಿದು ಮುಖವನ್ನು ಸವರಿ –

‘ನಿಮ್ಮದೇ ಕಣ್ಣುಗಳು’ ಎಂದಳು.

ತಾಯಿಯ ದುಗುಡದಿಂದ ಮಗು ಮತ್ತೆ ಮೂಕವಾದದ್ದನ್ನು ಕೃಷ್ಣಪ್ಪ ಗಮನಿಸಿದ. ಯಾರಿಂದಲೂ ಸಾಮಾನ್ಯವಾಗಿ ಮುಟ್ಟಿಸಿಕೊಳ್ಳಲು ಇಚ್ಛೆಪಡದ ಮಗು ಇವತ್ತು ಪರಕೀಯಳೊಬ್ಬಳು – ಅದೂ ಪ್ಯಾಂಟ್ ತೊಟ್ಟವಳು – ತಬ್ಬಿಕೊಂಡಾಗಲೂ ಸುಮ್ಮನಿತ್ತು.

‘ಸ್ವೀಟ್ ಚೈಲ್ಡ್‌’ ಎಂದು ಗೌರಿ ಮತ್ತೊಂದು ಸಿಗರೇಟ್ ಹತ್ತಿಸಿದಳು. ತೋರಿಸಿಕೊಳ್ಳದಿದ್ದರೂ ಗೌರಿ ಉದ್ವಿಗ್ನಳಾದ್ದನ್ನು ಕೃಷ್ಣಪ್ಪ ಗಮನಿಸಿ,

‘ನೀವೀಗ ಗೆಸ್ಟ್‌ಹೌಸಿಗೆ ಹೋಗಿ ನಾಳೆ ಬನ್ನಿ. ನಿಮಗೆ ರೆಸ್ಟ್‌ಬೇಕು’ ಎಂದ. ಒಳಗಿನಿಂದ ಅವನ ಹೆಂಡತಿ ಬಿಕ್ಕಿ ಬಿಕ್ಕಿ ಪ್ರಾಯಶಃ ಅಳುತ್ತಿರಬಹುದೆಂದು ಅವನು ಊಹಿಸಿದ. ತನಗೆ ಮಾತ್ರ ಕೇಳಿಸುವಂತಿದ್ದ ಈ ಅಳು ಗೌರಿಗೂ ಕೇಳಿಸುತ್ತಿರಬಹುದೆ? ನಾಗೇಶನಿಗೆ? ಆದರೆ ಬಿಹಾರದಲ್ಲಿ ರೈತರು ತನ್ನನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋದದ್ದನ್ನೇ ಪ್ರಾಯಶಃ ಕಲ್ಪಿಸಿಕೊಳ್ಳುತ್ತಿದ್ದ ನಾಗೇಶನ ಉತ್ಸಾಹದಿಂದ ಬಿರಿಯುತ್ತಿದ್ದ ಮುಖ ನೋಡಿ ಕೃಷ್ಣಪ್ಪನಿಗೆ ಎಲ್ಲ ಅಸಬಂದ್ಧವೆನ್ನಿಸಿತು.

‘ನಿಮಗೂ ಕೂಡ’ ಎಂದು ಗೌರಿ ಎದ್ದು ನಿಂತು ‘ಬೈ’ ಎಂದು ನಾಗೇಶನ ಜೊತೆ ಹೋದಳು. ಮಗುವನ್ನು ತಡವುತ್ತ ಕೃಷ್ಣಪ್ಪ ಸುಮ್ಮನೇ ಕೂತ. ಅವನಿಗೆ ಅರಿವಾಗದಂತೆಯೇ ಜಡವಾಗಿದ್ದ ಅವನ ಎಡಗೈ ಬೆರಳುಗಳು ಎಡಗಾಲು ಚಲಿಸಲು ಹವಣಿಸುತ್ತ ತಮ್ಮ ವ್ಯಾಯಾಮದಲ್ಲಿ ತೊಡಗಿದ್ದವು. ಹೆಂಡತಿ ಅಳುವುದು ಕೂಡ ಜೋರಾಗಿಯೇ ಕೇಳುಸುತ್ತಿತ್ತು. ಕೃಷ್ಣಪ್ಪನಿಗೆ ಸಾಯಬೇಕೆಂಬ ಆಸೆ ಮತ್ತೆ ಮೊಳೆಯಿತು.

ಮಾರನೇ ಬೆಳಿಗ್ಗೆ ಉರಿಯುವ ದೊಂದಿಯಂತೆ ಕಾಣುವ ಕೆಂಪು ಗುಲಾಬಿಗಳ ಬಂಚೊಂದನ್ನು ಕೈಯಲ್ಲಿ ಹಿಡಿದು ಬಿಳಿ ಸೀರೆ ಬಿಳಿ ಕುಪ್ಪಸ ತೊಟ್ಟು ಸಂಭ್ರಮದಲ್ಲಿ ಜ್ಯೋತಿ ಕೋಣೆಯೊಳಗೆ ಬಂದಳು. ನಿನ್ನೆಯಿಂದ ಅವಳ ಬಾಯ್‌ಫ್ರೆಂಡ್ ಕೆಲಸ ಪ್ರಾರಂಭಿಸಿದ್ದಾನೆ. ಕೃಷ್ಣಪ್ಪ ಮಾತಾಡುವ ಮುಂಚೆಯೇ ಅವಳು –

‘ಅವರು ಹೊರಗೆ ಇದ್ದಾರೆ – ಥ್ಯಾಂಕ್ ಮಾಡಿ ಹೋಗೋಣಾಂತ ಆಟೋರಿಕ್ಷಾ ನಿಲ್ಲಿಸಿಕೊಂಡಿದ್ದಾರೆ.’

ಎಂದು ಕೃಷ್ಣಪ್ಪನ ಒಪ್ಪಿಗೆ ಕಂಡು ಹೊರಗೆ ಓಡಿದಳು. ಸುಂದರವಾದ ಮೀಸೆಯ ಆಟಗಾರನ ಮೈಕಟ್ಟಿನ ತನ್ನ ಗೆಳೆಯನನ್ನು ಒಳಗೆ ಕರೆತಂದು, ‘ಎಡ್ವಿನ್‌’ ಎಂದಳು. ಕೃಷ್ಣಪ್ಪ ಅಸೂಯೆ ಖುಷಿಗಳಿಂದ ಅವನಿಗೆ ಬಲಗೈಯನ್ನು ಒಡ್ಡಿ ‘ಕಂಗ್ರಾಚುಲೇಶನ್ಸ್‌’ ಎಂದ. ಎಡ್ವಿನ್ ಬಲವಾಗಿ ಅವನ ಕೈಕುಲಕಿ ತನ್ನ ಕೃತಜ್ಞತೆ ಹೇಳಿ ಕೆಲಸಕ್ಕೆ ಹೊರಟುಹೋದ. ಹೂವುಗಳನ್ನು ದಾನಿಯಲ್ಲಿ ಮಗ್ನಳಾಗಿ ಜೋಡಿಸುತ್ತ ನಿಂತ ಜ್ಯೋತಿಯ ಓಡಾಟದಲ್ಲಿದ್ದ ಹಿತವಾದ ಆಯಾಸ ಗಮನಿಸಿ ಕೃಷ್ಣಪ್ಪ ಮೃದುವಾಗಿ ನಗುತ್ತ,

‘ನಿನ್ನೆ ಕೆಲಸ ಸಿಕ್ಕಿದ್ದನ್ನ ಸೆಲೆಬ್ರೇಟ್ ಮಾಡಿದಿರ?’ ಎಂದ.

ಹೌದೆಂದು ತನ್ನ ಭಂಗಿಯಲ್ಲಿ ಮಾತ್ರ ಸೂಚಿಸಿ ಹೂಜೋಡಿಸುತ್ತಿದ್ದ ಜ್ಯೋತಿ ಕೃಷ್ಣಪ್ಪನ ಮೌನವಾದ ನಗುವನ್ನು ಊಹಿಸುತ್ತ ಕೆಂಪಾದಳು. ಹುಸಿಕೋಪದಲ್ಲಿ ತಿರುಗಿ, ಕೃಷ್ಣಪ್ಪನನ್ನು ನೋಡಿ, ಪುಟ್ಟ ಹೆಜ್ಜೆಗಳಲ್ಲಿ ಅವನು ಮಲಗಿದ್ದಲ್ಲಿ ಧಾವಿಸಿ,

‘ಡೋಂ‌ಟ್ ಬಿ ನಾಟಿ’ ಎಂದು ಅವನ ಕೆನ್ನೆಯನ್ನು ಚಿವುಟಿ, ತಾನೇನು ಮಾಡಿಬಿಟ್ಟೆನೆಂದು ಹೆದರಿದಂತೆ ಕಣ್ಣರಳಿಸಿ ನಾಲಿಗೆ ಕಚ್ಚಿಕೊಂಡಳು.

‘ಪ್ಯಾನ್‌ರೆಡಿಯಾ?’ ಎಂದಳು, ತನ್ನ ಕಸುಬಿನ ನಿರ್ಭಾವ ಧಾಟಿಯಲ್ಲಿ, ಜ್ಯೋತಿಯ ಕುಶಲವಾದ ಕೈ ಅವನನ್ನು ಶುಚಿಮಾಡುವಾಗ ಅದರ ಧೃಡತೆ, ಮಾರ್ದವ, ಕಸುಬುಗಾರಿಕೆಗಳಿಂದ ಕೃಷ್ಣಪ್ಪ ಚಕಿತನಾಗಿ ಮಗುವಿನಂತೆ ತನ್ನನ್ನು ಒಪ್ಪಿಸಿಕೊಳ್ಳುತ್ತಿದ್ದ. ತಾನು ಹೇಸುತ್ತಿದ್ದ ವಿಸರ್ಜನೆಯ ಕ್ರಿಯೆಗಳನ್ನು ಜ್ಯೋತಿ ಬಹುಸಾಮಾನ್ಯವೆಂಬಂತೆ ನಿರ್ವಹಿಸಿ ಬಿಡುತ್ತಿದ್ದಳು. ತನ್ನ ಮೈಯನ್ನು ಬಿಸಿಯಾದ ಟವಲ್‌ನಿಂದ ಉಜ್ಜಿದ ಮೇಲೆ ಪೌಡರನ್ನು ಇಡೀ ಮೈಗೆ ಬಳೆದು ಇಸ್ತ್ರಿಯಾದ ಬಟ್ಟೆ ತೊಡಿಸಿ, ತಲೆ ಬಾಚಿ, ಕುರ್ಚಿಯ ಮೇಲೆ ಕೂರಿಸಿ, ಹಾಸಿಗೆಯನ್ನು ಬಿಳಿಯಾದ ಶೀಟ್‌ಗಳಿಂದ ಸಿದ್ಧಪಡಿಸಿ ಅವನನ್ನು ಹೊರಗೆ ತಳ್ಳಿಕೊಂಡು ಹೋಗುವಳು. ಇಷ್ಟೆಲ್ಲ ಕೊಳೆ ಕಲ್ಮಷ ಕ್ಷುಲ್ಲಕ ವಿವರಗಳಲ್ಲಿ ಅವಳು ತೊಡಗಿದ್ದರೂ ಸದಾ ಶುಭ್ರೆಯಾಗಿ ಕಾಣುವಳು. ಇವತ್ತು ಅವಳು ಕೃಷ್ಣಪ್ಪನಿಗೆ ಪ್ರಸೆಂಟಾಗಿ ತಂದಿದ್ದ ಕೆಂಡಸಂಪಿಗೆಯ ವಾಸನೆಯ ಕೊಲೋನನ್ನು ಇವನ ಕಂಕುಳ ಸಂದಿ ಕತ್ತು ಎದೆಗಳಿಗೆ ಬಳಿದಳು. ಅದರ ಜ್ಞಾಲೆಯಂಥ ವಾಸನೆ ತನ್ನನ್ನು ಆಪ್ತವಾಗಿ ನೆಕ್ಕುತ್ತಿರುವ ಸುಖದಲ್ಲಿ ಅವನು ಕಣ್ಣುಗಳನ್ನು ಮುಚ್ಚಿಕೂತ.

‘ಇದರ ವಾಸನೇಂದ ನಿಮಗೆ ತಲೆನೋವು ಬಂದೀತು?’ ಎಂದು ಅವಳು ಅನುಮಾನಿಸಿದಾಗ,

‘ಇಲ್ಲ ನನಗೊಬ್ಬರು ಜೋಯಿಸ್ರು ಅಂತ ಮೇಸ್ತ್ರೀದ್ದಾರೆ ಊರಲ್ಲಿ. ಅವರ ಮನೆ ಹಿತ್ಲಲ್ಲಿ ಒಂದು ಕೆಂಡಸಂಪಿಗೆ ಮರ ಇತ್ತು. ಅದನ್ನು ಬೆಳಗಿನ ಝಾವ ಕೋತಿ ಹಾಗೆ ಹತ್ತಿ ಬುಟ್ಟಿ ತುಂಬ ಹೂಕೊಯ್ದು ಜೋಯಿಸರ ದೇವರ ಪೂಜೆಗೆ ಕೊಡ್ತಿದ್ದೆ’ ಎಂದ. ಕಣ್ಣು ಮುಚ್ಚಿ ಕೂತಾಗ ಅವನಿಗೆ ನೆನಪಾಗುತ್ತಿದ್ದುದನ್ನು ಜ್ಯೋತಿಗೆ ಅರ್ಥವಾಗದೆಂದು ಹೇಳಲಿಲ್ಲ. ಏಕಾದಶಿ ದಿವಸ ಜೋಯಿಸರಾಗಲೀ, ರುಕ್ಮಿಣಿಯಮ್ಮನಾಗಲಿ ಊಟ ಮಾಡುತ್ತಿರಲಿಲ್ಲ. ಅವತ್ತು ಅವರ ಬತ್ತಿದ ಮುಖ ಕಂಡು ಕೃಷ್ಣಪ್ಪನಿಗೆ ಮೋಜೆನ್ನಿಸುವುದು. ರುಕ್ಮಿಣಿಯಮ್ಮ ಅವತ್ತು ತನ್ನ ಹತ್ತಿರ ಮಾತು ಕೂಡ ಆಡರು. ಆದರೆ ಮಾರನೇ ದಿನ ಸೂರ್ಯೋದಯಕ್ಕೆ ಮುಂಚೆಯೇ ಜೋಯಿಸರ ಮನೆಯಿಂದ ಜಾಗಟೆ ಶಂಖಗಳ ಶಬ್ದ ಕೇಳಿಬಂದದ್ದೇ ಕೃಷ್ಣಪ್ಪ ಓಡಿಹೋಗಿ ಅವರ ಹಿತ್ತಲಲ್ಲಿ ನಿಲ್ಲುವನು, ಬಿಸಿಬಿಸಿ ದೋಸೆಯ ವಾಸನೆ ಹೀರುತ್ತ, ಕಾದ ಹೆಂಚಿನ ಮೇಲೆ ದೋಸೆಯ ಹಿಟ್ಟು ಚುಂಯ್ ಎಂಬ ಸದ್ದು ಮಾಡುವುದು. ಎಲ್ಲ ಸದ್ದುಗಳು ಸ್ತಬ್ಧವಾದಾಗ ದೇವರಿಗೆ ಈ ದೋಸೆಗಳನ್ನು ನೈವೇದ್ಯಕ್ಕಿಡುತ್ತಿದ್ದಾರೆಂದು ಅರ್ಥ. ಸ್ವಲ್ಪ ಹೊತ್ತಾದ ಮೇಲೆ ಹಿತ್ತಲಿನ ಚಾವಡಿಯಲ್ಲಿ ಎಲೆಹಾಕಿ ರುಕ್ಮಿಣಿಯಮ್ಮ ನಸುನಗುತ್ತ ಚಿಮ್ಮಿಕೊಂಡು ಓಡಿ ಬರುವ ಕೃಷ್ಣಪ್ಪನಿಗೆ ಕಾಯುವರು. ಬಿಸಿಯಾದ ದೋಸೆ ಬಡಿಸಿ ತೆಂಗಿನಕಾಯಿ ಚಟ್ನಿಯನ್ನು ಇಕ್ಕುವರು. ತಮ್ಮ ಮನೆಯಿಂದಲೇ ಜೋಯಿಸರಿಗೆ ಪ್ರತಿತಿಂಗಳೂ ಕೊಡುವ ಕಾಯಿಯಿಂದ ಮಾಡಿದ ಖಾರವಾದ ಚಟ್ನಿ. ಕೃಷ್ಣಪ್ಪ ಹೊಟ್ಟೆತುಂಬ ದೋಸೆಯನ್ನು ತಿಂದು, ಎಲೆಯನ್ನು ಬಿಸಾಕಿ, ತಿಂದ ಜಾಗವನ್ನು ಸಗಣಿಯಿಂದ ಸಾರಿಸಿ, ದೊಡ್ಡವ್ವ ಧಾರೆಯಾಗೆರೆಯುವ ನೀರಿನಿಂದ ಚಾವಡಿ ಕೆಳಗೆ ನಿಂತು ಕೈತೊಳೆದು, ಮನೆಗೆ ಓಡಲಿದ್ದಾಗ ಜುಟ್ಟಿನಲ್ಲಿ ತುಳಸಿಯನ್ನು ಮುಡಿದು ಜೋಯಿಸರು ಒದ್ದೆ ಪಾಣಿಪಂಚೆಯನ್ನು ಮೈಮೇಲೆ ಹೊದ್ದು ಚಳಿಯಲ್ಲಿ ನಡುಗುತ್ತ ಹೊರಗೆ ಬಂದು, ಪೂರ್ವದಿಕ್ಕಿಗೆ ತಿರುಗಿ ಕಣ್ಣುಮುಚ್ಚಿ ನಿಂತು, ಹದಿನೆಂಟರ ಮಗ್ಗಿ ಹೇಳೋ ಕಿಟ್ಟಿ ಎನ್ನುವರು. ಹೇಳುತ್ತ ಹೇಳುತ್ತ ಮೆಲ್ಲಗೆ ಕೃಷ್ಣಪ್ಪ ಪರಾರಿಯಾಗಿ ಬಿಡುವನು – ೧೯ರ ಮಗ್ಗಿ ಹೇಳಬೇಕಾದೀತೆಂದು.

ಜ್ಯೋತಿ ಬಿಸಿಲಲ್ಲಿ ವೀಲ್ ಚೇರನ್ನು ನಿಲ್ಲಿಸಿದಾಗ ಘಮಘಮಿಸುವ ಮೈಯನ್ನು ಸೂರ್ಯನ ಕಿರಣಗಳು ಪ್ರವೇಶಿಸಿ ತುಂಬ ಸುಖವಾಗುವುದು. ಈ ಮಧ್ಯೆ ನಾಗರಾಜ್ ಹೇಳಿದ್ದು ನೆನಪಾಗುವುದು. ಇದು ವೈಯಕ್ತಿಯ ನೈತಿಕ ಪ್ರಶ್ನೆ ಮಾತ್ರವಲ್ಲ. ಆದರೆ ತನ್ನ ಮನಸ್ಸು ಅಳ್ಳಕವಾಗಿ ಭೂತದಲ್ಲಿ ಚಲಿಸುತ್ತ ಸುಖಪಡಲು ಹವಣಿಸುತ್ತಿದೆ. ತನ್ನನ್ನು ಸುತ್ತಿಕೊಳ್ಳುತ್ತಿರುವ ಬಲೆಗಳಿಂದ ಹೊರಬರಲಾರೆ ಎನ್ನಿಸುತ್ತದೆ. ಸನ್ಮಾನದ ಸಿದ್ಧತೆ ನಡೆಯುತ್ತಿದೆ – ಗೌಡ, ಭಟ್ಟ, ವೀರಣ್ಣರ ಮಸಲತ್ತಲ್ಲಿ, ಈ ಮಸಲತ್ತನ್ನೂ ಐತಿಹಾಸಿಕ ಅಗತ್ಯವೆಂದು ಕಾಣಬಹುದಲ್ಲ? ಸಮುದಾಯದ ಹಿತವೇ ನನ್ನ ಹಿತವೆನ್ನುತ್ತಲೇ ನನ್ನ ಹಿತ ಸಾಧಿಸಿಕೊಂಡಾಗ ನಾಗರಾಜ್ ಏನನ್ನುತ್ತಾನೆ? ಅದು ಅಪ್ರಸ್ತುತ ಪ್ರಶ್ನೆ ಎನ್ನುತ್ತಾನೆ. ಅಥವಾ ನೀವು ಪ್ರತಿನಿಧಿಸುವ ವರ್ಗದ ಹಿತ ಇಷ್ಟು ಮಾತ್ರ ಸಮಾಜವನ್ನು ಮುಂದಕ್ಕೆ ಒಯ್ಯುತ್ತದೆ – ಹೆಚ್ಚಲ್ಲ ಎನ್ನುತ್ತಾನೆ. ನಿನ್ನ ಹಿತ ಸಾಧನೆಗೆ ನೀನಿದನ್ನು ಮಾಡುವುದು ಕೂಡ ಆಶ್ಚರ್ಯವಲ್ಲವೆನ್ನುತ್ತಾನೆ. ಶುದ್ಧ – ಅಶುದ್ಧದ ಮಾತು ಅಸಂಬಂದ್ಧವೆನ್ನುತ್ತಾನೆ. ಈ ಗೇಣಿಶಾಸನದಲ್ಲಿ ಭಟ್ಟಗೌಡ ಲಾಭ ಪಡೆದಿದ್ದಾರೆ. ಭೂಮಿಹೀನ ಕೂಲಿಗಾರನ ಪರವಾದ ವ್ಯವಸ್ಥೆ ತರುವುದು ಪಾರ್ಲಿಮೆಂಟರಿ ದಾರಿಯಲ್ಲಿ ಸಾಧ್ಯವಿಲ್ಲ. ಅದಕ್ಕೆ ನೀನು ಬದ್ಧನಾದಾಗ ಈ ಭಟ್ಟ ಗೌಡರುಗಳೇ ವಿರೋಧಿಗಳಾಗುತ್ತಾರೆ. – ಮೊದಲು ಗೇಣಿದಾರರ ಪರ ನಿಂತಾಗ ಅವರು ವಿರೋಧಿಗಳಾಗಿದ್ದಂತೆ. ದೊಡ್ಡ ಫ್ಯೂಡಲ್ ಭೂಮಾಲೀಕರನ್ನು ನಾಶಮಾಡಿದ ಮೇಲೆ, ಈ ಕ್ಯಾಪಿಟಲಿಸ್ಟ್, ಭೂಮಾಲೀಕರು ನಿನ್ನ ರಾಜಕೀಯದ ಫಲವಾಗಿಯೇ ತಲೆಯೆತ್ತಿ ನಿನ್ನ ಬೆಂಬಲಕ್ಕೆ ನಿಂತಿದ್ದಾರೆ. ಚಕ್ರ ಇನ್ನೂ ಸುತ್ತಬೇಕಾದರೆ ನಿಜವಾಗಿ ಭೂಮಿಯಲ್ಲಿ ದುಡಿಯೋನ ಪರವಾಗಿ ನೀನು ನಿಲ್ಲಬೇಕು. . . . ಸದ್ಯದ ಕ್ರೈಸಿಸ್‌ನಲ್ಲಿ ನಿಯೋಕಲೋನಿಯಲ್ ಶಕ್ತಿಗಳು ದೇಶದಲ್ಲಿ ಸೃಷ್ಟಿಸುತ್ತಿರುವ ಫ್ಯಾಸಿಸಮ್ಮನ್ನುವಿರೋಧಿಸುವುದು ಈ ಕ್ಯಾಪಿಟಲಿಸ್ಟ್ ಹಿಡುವಳಿದಾರರ ವರ್ಗಹಿತಕ್ಕೆ ಅಗತ್ಯವಿರಬಹುದು. ಹಾಗಿದ್ದಲ್ಲಿ ಅವರನ್ನೂ ಬಳಸಬೇಕು. . . . ನಾಗರಾಜ್ ಹೀಗೆಲ್ಲ ಯೋಚನೆ ಮಾಡಬಹುದಾದ ಸಂಭವವೂ ಇದೆ. . . . ಕೃಷ್ಣಪ್ಪನಿಗೆ ತಲೆ ಚಿಟ್ಟೆನ್ನಿಸುತ್ತದೆ. ಜ್ಯೋತಿ ತನ್ನ ಮದುವೆಯ ಬಗ್ಗೆ ಮಾತಾಡುತ್ತಿದ್ದಾಳೆ. ಮದುವೆಗೆ ಯಾವ್ಯಾವ ವಸ್ತ್ರ ಕೊಳ್ಳಬೇಕು. ತಾಳಿ ಹೇಗಿರಬೇಕು ಇತ್ಯಾದಿ. ಕೃಷ್ಣಪ್ಪ ಅವಳ ಮಾತಲ್ಲಿ ತಲ್ಲೀನನಾಗಿ ಕಾಲು ಕೈಗಳನ್ನು ಉಜ್ಜಿಸಿಕೊಳ್ಳುತ್ತಾ ಕೂರುತ್ತಾನೆ.

***

ಸದ್ಯ ಸೀತೆ ಬ್ಯಾಂಕಿಗೆ ಹೋದ ಮೇಲೆ ಗೌರಿ ದೇಶಪಾಂಡೆ ಬಂದಳಲ್ಲ; ಸೀರೆಯುಟ್ಟು, ತಲೆಯ ಕೂದಲನ್ನು ಒಂದು ಸಾದಾ ಗಂಟಿನಲ್ಲಿ ಬಿಗಿದು, ಬಗಲಲ್ಲಿ ಒಂದು ಬ್ಯಾಗ್ ಸಿಕ್ಕಿಸಿಕೊಂಡು ಬಂದಿದ್ದಳು. ನಾಗೇಶ ತಂದು ಕೊಟ್ಟ ಕುರ್ಚಿಯಲ್ಲಿ ಕೂತು ಜ್ಯೋತಿಯನ್ನು’ಹಲೋ’ ಎಂದು ಪರಿಚಯ ಮಾಡಿಕೊಂಡಳು. ಕೃಷ್ಣಪ್ಪ ಮಾತಾಡದೆ ಗೌರಿಯನ್ನೇ ಕಣ್ತುಂಬ ನೋಡುತ್ತ ಕೂತ. ನಿನ್ನೆ ರಾತ್ರಿ ಕೆಲವು ಬಿಳಿಯ ಕೂದಲುಗಳು ಮಾತ್ರ ಕಂಡಿದ್ದುವು. ಆದರೆ ಇವತ್ತು ಮುಖದಲ್ಲಿ ವಯಸ್ಸಿನ ಚಿಹ್ನೆಗಳು ಕಂಡವು. ಅದೇ ಹಿಂದಿನ ಕಾಂತಿಯಿದ್ದ ಕಣ್ಣುಗಳ ಸುತ್ತ ಚರ್ಮದಲ್ಲಿ ಸೂಕ್ಷ್ಮ ನಿರಿಗೆಗಳಿವೆ. ತೆಳ್ಳಗೆ ದೃಢವಾಗಿ ಇದ್ದಾಳೆ. ಆದರೆ ಜ್ಯೋತಿಗೆ ಹೋಲಿಸಿದರೆ ಇವಳು ಪ್ರೌಢೆ. ತನಗೆ ಐವತ್ತಾದ್ದರಿಂದ ಗೌರಿಗೆ ನಲವತ್ತರ ಹತ್ತಿರವಿರಬಹುದು. ಅವಳ ಲಕ್ಷ್ಯ ಚುರುಕಾಗಿ ಗೆಲುವಾಗಿ ಸುತ್ತಲೂ ಹರಿಯುತ್ತಿದ್ದರೂ ನಿದ್ದೆಯಿಲ್ಲದ ರಾತ್ರೆಗಳು. ಒಂಟಿತನದ ಭಯಗಳು ಅವಳ ಕಣ್ಣುಗಳನ್ನು ಖಂಡಿತ ಕಾಡಿವೆ. ದಾಂಪತ್ಯವನ್ನು ಹರಿಯುವಾಗ ಅವಳ ಬಾಯಿ ಆಡಬಾರದ್ದನ್ನು ಆಡಿರಬೇಕು. ಮನಸ್ಸು ಕಟುವಾಗಿ ಯೋಚಿಸಿರಬೇಕು. ತನ್ನ ವೃತ್ತಿಯಲ್ಲಿ ಕೌಶಲ ಪಡೆಯಲೆಂದು ಅವಳು ಶ್ರಮಿಸಿದ್ದ ಹಗಲು ರಾತ್ರೆಗಳನ್ನು ಹಿಂದಿನ ಅವಳ ಹಾವ ಭಾವಗಳಲ್ಲಿದ್ದ ಹುಡುಗಾಟಿಕೆ ಸವೆದಿದೆ.

ಗೌರಿ ಸಿಗರೇಟ್ ಹತ್ತಿಸಿ ಕೃಷ್ಣಪ್ಪನ ತುಟಿಯಲ್ಲಿಟ್ಟು ತಾನೊಂದು ಹತ್ತಿಸಿಕೊಂಡು ಜ್ಯೋತಿಯ ಕ್ಷಮೆ ಕೇಳಿ’ಅವಳು ಸೇದಲಿಕ್ಕೆ ನಿಮ್ಮ ಅನುಮತು ಇದೆ ತಾನೆ? ಎಂದಳು. ‘ಇಲ್ಲ – ಆದರೆ ಇದೊಂದು ಪರವಾಗಿಲ್ಲ’ ಎಂದು ಜ್ಯೋತಿ ಕೃಷ್ಣಪ್ಪನ ಅಂಗಾಲನ್ನು ತನ್ನ ಎರಡು ಕೈಗಳಲ್ಲೂ ಹಿಡಿದು ತಿಕ್ಕುತ್ತ ಕೂತಳು ಇನ್ನೊಬ್ಬ ಹೆಂಗಸಿನ ಪ್ರವೇಶದಿಂದ ಅವಳು ಮುಜುಗರಗೊಂಡಂತಿತ್ತು.

‘ಬಾತ್‌ನಲ್ಲಿ ಅವರನ್ನು ಕೂರಿಸಿದರೆ ಒಳ್ಳೆಯದಲ್ಲ?’ ಎಂದು ಗೌರಿ ಕೇಳಿದಳು.

‘ನೀರಿನ ಥೆರಪಿ ಒಳ್ಳೇದೆ. ಆದರೆ ಇಲ್ಲಿ ಬಾತ್ ಇಲ್ಲವಲ್ಲ.’

ಜ್ಯೋತಿ ಹೇಳಿದಳು.

‘ವೈಟ ಏ ಮಿನಿಟ್. ನಾನಿಳಕೊಂಡ ಗೆಸ್ಟ್‌ಹೌಸ್‌ನಲ್ಲಿ ಬಾತಿದೆ. ನಾನು ಈ ಥೆರಪಿ ಟ್ರೈನಿಂಗ್ ತಗೊಂಡಿದೀನಿ ಫಿಲಡೆಲ್ಫಿಯಾದಲ್ಲಿ. ನಾನು ನೀವೂ ಈ ಕೆಲಸ ಹಂಚಿಕೋಬಹುದು ಅಲ್ಲವ?’

ಗೌರಿಯ ಪ್ರಶ್ನೆಗೆ ಉತ್ತರ ಕೊಡುವುದು ತನಗೆ ಸೇರಿದ್ದಲ್ಲವೆನ್ನುವಂತೆ ಜ್ಯೋತಿ ಸುಮ್ಮನಾದಳು. ಗೌರಿ ತನ್ನ ಯೋಚನೆಯನ್ನು ಕಾರ್ಯಗತ ಮಾಡಲು ಹೊರಗೆ ಹಾಲಿನಲ್ಲಿ ಕೂತ ವೀರಣ್ಣನನ್ನು ಕಂಡು ಮಾತಾಡಿದಳು. ಗೆಸ್ಟ್‌ಹೌಸಲ್ಲಿ ಕೃಷ್ಣಪ್ಪನಿಗೆ ರೆಸ್ಟೂ ಸಿಗುತ್ತದೆ. ಬೆಳಿಗ್ಗೆ ಜ್ಯೋತಿಯನ್ನು ಅಲ್ಲಿಗೆ ಕಾರಲ್ಲಿ ಕರಕೊಂಡು ಬಂದರೆ ಆಯಿತು. ಬೆಳಿಗ್ಗೆ ಅವಳು ನೋಡಿಕೊಂಡರೆ ಉಳಿದದ್ದನ್ನು ತಾನೇ ನೋಡಿಕೊಳ್ಳುವೆ. ಕೃಷ್ಣಪ್ಪನ ಆರೋಗ್ಯ ಸರಿಹೋಗುವ ಬಗ್ಗೆ ತುಂಬ ಕಾಳಜಿಯಿದ್ದ ವೀರಣ್ಣ ಇದನ್ನು ಒಪ್ಪಿಕೊಂಡ ಸೀತೆಯಿಂದ ಕೃಷ್ಣಪ್ಪ ದೂರವಿರವುದು ಅಗತ್ಯವೆಂದು ಎಲ್ಲರಿಗೂ ಗೊತ್ತಿತ್ತು. ಮಾರನೇ ದಿನ ಕೃಷ್ಣಪ್ಪನನ್ನು ಸಾಗಿಸುವುದೆಂದು ತೀರ್ಮಾನವಾಯಿತು.

ಕೃಷ್ಣಪ್ಪನ ತಾಯಿ ಶಾರದಮ್ಮನನ್ನು ಹಳ್ಳಿಯಿಂದ ಮಧ್ಯಾಹ್ನ ಒಬ್ಬ ಹುಡುಗ ಕರೆದುಕೊಂಡು ಬಂದ. ಸಿಗರೇಟು ಸೇದುವ ಗೌರಿಯನ್ನು ಕಂಡು ಆಕೆ ದಿಗ್ಭ್ರಮೆಗೊಂಡು ಮಗನ ಎದುರು ಹೋಗಿ ಕೂತರು. ಎಪ್ಪತ್ತು ವರ್ಷದ ಹೆಗ್ಗಡತಿಯ ಹಾಗೆ ಸೀರೆ ಉಟ್ಟ ತನ್ನ ಮುದಿತಾಯನ್ನು ನೋಡಿ:

‘ಯಾಕಿಷ್ಟು ದಿನ ಬರಕ್ಕೆ? ಒಬ್ಬಳೇ ಅಲ್ಲೇನ್ಮಾಡ್ತಿ? ಇಲ್ಲೇ ಬಂದಿರ್ಬಾರ್ದ?’ ಎಂದು ರೇಗಿದ ಧ್ವನಿಯಲ್ಲಿ ಕೇಳಿದ.

ಮುದುಕಿ ನಗುತ್ತ,

‘ನನ್ಯಾಕೆ ನಿಂಗೆ ಬೇಸಿ ಹಾಕ್ಬೇಕೋ? ಕೈ ಹಿಡಿದ ಹೆಂಡತಿ ಇಲ್ವ?’ ಎಂದು ಮೂದಲಿಸಿ ಇವತ್ತು ಸಂಜೆಗೆ ಮಗನಿಗೆ ಇಷ್ಟವಾದ ತೊಂಡೆಕಾಯಿ ಪಲ್ಯ ಸಾರುಗಳನ್ನು ಮಾಡಲೆಂದು ಅಡಿಗೆ ಮನೆಗೆ ಹೋದಳು.

‘ಅವ್ವಾ ಅವ್ವಾ’ ಎಂದು ಕೃಷ್ಣಪ್ಪ ತಾಯಿಯನ್ನು ಕೂಗಿದ. ಅವಳು ಅಡಿಗೆ ಮನೆಯಲ್ಲಿ ಏನಿದೆ ಏನಿಲ್ಲ ಪರೀಕ್ಷಿಸಿ ತಾನು ಊರಿಂದ ತಂದಿದ್ದ ಗೋಣಿಚೀಲದ ಬ್ಯಾಗಿನಿಂದ ನಿಂಬೆಹಣ್ಣು, ಕಂಚಿಕಾಯಿ, ಚಕೋತ, ಪತ್ರಡೆಗೆ ಕೆಸುವಿನೆಲೆ, ತೊಂಡೆಕಾಯಿಗಳನ್ನು ಹೊರಗೆ ತೆಗೆದು ಮೊರದಲ್ಲಿ ಜೋಡಿಸುತ್ತಿದ್ದಳು. ‘ಬಂದೇ ಕಣೋ ಕೂಗಿಕೋಬೇಡ’ ಎಂದು ಊರಿಂದ ತಂದಿದ್ದ ಮಾವಿನಮಿಡಿ ಉಪ್ಪಿನಕಾಯಿಯನ್ನು ಹಿಡಿದುಕೊಂಡು ರೂಮಿಗೆ ಬಂದು,

‘ಪಾರಿವಾಳದ ರಕ್ತದಲ್ಲಿ ಉಜ್ಜಬೇಕು ಕಣೋ ವಾಸಿಯಾಗುತ್ತೆ. ಸಾಯಂಕಾಲ ಯಾವುದೋ ಪಕ್ಷಿ ನೆತ್ತಿಮ್ಯಾಲೆ ಹಾರಿದರೆ ಹಿಂಗಾಗುತ್ತೆ ಅಂತ ಜೋಯಿಸ್ರು ಹೇಳ್ದ್ರು. ಅವ್ರೂ ಪಾರಿವಾಳದ ರಕ್ತದಲ್ಲಿ ಉಜ್ಜಿಸಬೇಕು ಅಂದ್ರು. ಅಂದಂಗೆ ದೊಡ್ಡವ್ವ ಪುಣ್ಯಾತಗಿತ್ತಿ ಕಣ್ಣು ಮುಚ್ಚಿಬಿಟ್ರು ಕಣೊ. ಒಂದು ದಿನ ಹಾಸಿಗೆ ಹಿಡೀಲಿಲ್ಲ ಅವ್ರು. ಊಟ ಮುಗಿಸಿ ಹತ್ತಿ ಬುಟ್ಟಿ ತಗೊಂಡು, ಚಿಟ್ಟೆಮೇಲೆ ಕೂತು, ದೇವ್ರಿಗೆ ಬತ್ತಿ ಹೊಸೀತ ಇದ್ದಾಗ, ಹಾಗೇ ಮಲಗಿ ಕಣ್ಣುಮುಚ್ಚಿಬಿಟ್ರು. ಈಗ ಜೋಯಿಸ್ರು ಒಬ್ರೇ ಪಾಪ – ಸಾಯೋ ಮುಂಚೆ ಹೆಂಡತಿ ಹಾಕಿಟ್ಟ ಉಪ್ಪಿನ ಕಾಯಲ್ಲಿ ಇಕಾ ನಿನಗಿಷ್ಟಾಂತ ಒಂದು ಜಾಡಿ ಕಳ್ಸಿದಾರೆ.’

ಶಾರದಮ್ಮ ಕಣ್ಣೊರಸಿಕೊಂಡಳು. ಕೃಷ್ಣಪ್ಪನಿಗೆ ಬಿಕ್ಕಿ ಅಳುವಂತಾಯ್ತು. ಈಚೆಗೆ ದೇಹ ಕ್ಷೀಣವಾಗಿ ಭಾವನೆಗಳ ಮೇಲೆ ಹತೋಟಿ ಕಮ್ಮಿಯಾಗಿದೆ; ಕಷ್ಟಪಟ್ಟು ತಡೆದುಕೊಂಡ. ಅವ್ವನೂ ಹಾಗೇ ಯಾರೂ ಇಲ್ಲದಾಗ ಕಣ್ಣುಮುಚ್ಚಿಬಿಟ್ಟಾರೆಂಬ ಭಯವಾಗಿ,

‘ನೀನಿನ್ನು ಇಲ್ಲಿಂದ ಹೋಗೋ ಹಾಗೇ ಇಲ್ಲ. ಇಲ್ಲೆ ಇರ್ಬೇಕು’ ಎಂದ. ಶಾರದಮ್ಮ ಹುಸಿಮುನಿಸಿಂದ:

‘ಏನಿದೆ ಇಲ್ಲಿ ಅಂತ ನಾನಿರ್ಲೊ? ಈ ಮನೆ ಸುತ್ತ ಮುತ್ತ ಒಂದೇ ಒಂದು ಹಿಡಿ ಮಣ್ಣು ಸಿಗಲ್ಲ. ಎಲ್ಡು ದಿನಕ್ಕಿಂತ ಹೆಚ್ಚು ನಾನಿಲ್ಲಿ ಇರಲ್ಲಪ್ಪ. ನಿನ್ನ ಗದ್ದೆಯಿದೆಯಲ್ಲ – ಅದನ್ನ ನಾನು ಉಳಿಸಿಕೊಂಡಿರಬಾರ್ದ? ಯಾರಿಗಾರೂ ಉಳಕ್ಕೆ ಕೊಟ್ರೆ ಅವನು ನಾಳೆ ಅದು ನಂದೇ ಅಂತಾನೆ. ಅದೆಂಥದೋ ಕಾನೂನನ್ನು ನೀನೇ ಮಾಡ್ಸಿದಿಯಂತಲ್ಲ – ಅನುಭವಿಸಬೇಕಾಗುತ್ತೆ.’

‘ಒಂದು ಹಿಡಿ ಮಣ್ಣು ಇಲ್ಲಿ ಸಿಗಲ್ಲ’ ಎಂಬ ತಾಯಿಯ ಮಾತು ಕೃಷ್ಣಪ್ಪನನ್ನು ಚುಚ್ಚಿತು. ಗಾಂಧೀ ಬಜಾರಿನ ಮನೆಯಲ್ಲಿ ಇಲ್ಲಿಗಿಂತ ಹೆಚ್ಚು ಲವಲವಿಕೆಯಿತ್ತು; ತಾಯಿ ಅದನ್ನು ಹೆಚ್ಚು ಇಷ್ಟಪಡುತ್ತಿದ್ದಳು.

ತಾಯಿ ಮಗ ಕೂತು ಅದುಇದು ನೆನೆಸಿಕೊಂಡು ಆರಾಮಾಗಿ ಹಳ್ಳಿ ವಿಷಯ ಮಾತಾಡೋದು ಕೇಳಿ ಗೌರಿಗೆ ತುಂಬ ಸುಖವಾಯಿತು. ತಾಯಿಗೆ ಅಡಿಗೆ ಮನೆಯಲ್ಲಿ ಪಾತ್ರೆ  ತೊಳೆಯದೆ ಬಿದ್ದಿದ್ದು ಮಾತಿನ ಮಧ್ಯೆ ನೆನಪಾಗಿ ಕಿರಿಕಿರಿಯಾದ್ದು ಗಮನಿಸಿ ಗೌರಿ ತಾನೇ ಎದ್ದು ಹೋಗಿ ಅಡಿಗೆ ಮನೆಯನ್ನು ಓರಣಮಾಡಿದಳು. ‘ಅದೆಂಥಾ ಹೆಂಗಸೋ ಬೀಡಿ ಸೇದತ್ತೆ’ ಎಂದಳು ಶಾರದಮ್ಮ. ‘ನೀನು ಹೊಗೆಸೊಪ್ಪುತಿನ್ನಲ್ವ?’ ಎಂದು ಕೃಷ್ಣಪ್ಪ ನಕ್ಕ. ‘ಸರಿ ಒಳ್ಳೇವ್ಳ ಹಾಗೆ ಕಾಣತಾಳೆ ಅನ್ನು’ ಎಂದು ಮತ್ತೆ ಊರ ವಿಷಯಕ್ಕೆ ಮರಳಿದಳು. ಯಾವ ಹುಡುಗಿ ಮೈನೆರೀತು? ದನಗಳಿಗೆ ಯಾವ ಕಾಯಿಲೆ ಬಂತು? ಈ ಸಾರಿ ಕೊಳೆರೋಗ ಹೇಗಿತ್ತು? ಯಾರಿಗೆ ಮಗುವಾಯ್ತು? ಯಾವ ಮದುವೇಲಿ ಬೀಗರಿಗೆ ಹಣಾಹಣಿಯಾಯ್ತು – ಇತ್ಯಾದಿ. . . . ಇತ್ಯಾದಿ. . . . ಮಾತಿನ ಮಧ್ಯೆ ಇದ್ದಕ್ಕಿದ್ದಂತೆ ನಿಟ್ಟುಸಿರಿಟ್ಟು ಹೇಳಿದಳು:

‘ಪಾಪ ಜೋಯಿಸ್ರು ಒಂದೊಂದಿನ ಅಡಿಗೇನೇ ಮಾಡ್ಕಳಲ್ಲ ಕಣೊ – ನಾನೇ ಹೋಗಿ ಅವರ ದನಾನ್ನ ಕರೆದುಕೊಡ್ತೀನಿ. ಅದನ್ನು ಕಾಯ್ಸಿಕೊಂಡು ಕುಡಿದು ಬಿಡುತ್ತಾರೆ – ಅಷ್ಟೆ’

‘ಮಾವನ ಮನೇಲೆಲ್ಲ ಹೇಗಿದಾರೆ. . .’

‘ಅಯ್ಯೋ ಅದೊಂದೊ ದೊಡ್ಡ ಕಥೆ. . . .’ ಎಂದು ತಾಯಿ ದೊಡ್ಡ ಪುರಾಣವನ್ನೇ ಬಿಚ್ಚುತ್ತ ಕೂತಳು.

ಸಾಯಂಕಾಲ ಸೀತ ಕೆಲಸಮುಗಿಸಿ ಬಂದಾಗ ಮಗಳು ಅಜ್ಜಿಯ ತೊಡೆಯ ಮೇಲೆ ಕೂತಿರುವುದನ್ನು ನೋಡಿ ಗೆಲುವಾದಳು. ಆದರೆ ರೂಮಲ್ಲಿ ಕೂತ ಗೌರಿಯನ್ನು ಕಂಡು ಸಿಡಿಸಿಡಿಯಾಗಿ ಅಡಿಗೆ ಮನೆಗೆ ನೇರ ಹೋಗಿಬಿಟ್ಟಳು. ಕೃಷ್ಣಪ್ಪನಿಗೆ ಗೌರಿ ಅಂದಳು: ‘ಪಾಪ ಆಕೇದು ತಪ್ಪಿಲ್ಲ. ಎಲ್ಲರೂ ಸೇರಿ ಆಕೆಗೆ ಇನ್‌ಸೆಕ್ಯೂರ್ ಅನ್ನಿಸೋ ಹಾಗೆ ಮಾಡಿದೀರಿ.’ ಕೃಷ್ಣಪ್ಪ ಒಪ್ಪಿಕೊಂಡ. ತನ್ನ ಮುಜುಗರಾನ್ನ ಹೀಗೆ ವ್ಯಾಖ್ಯಾನ ಮಾಡಿ ಕಡಿಮೆ ಮಾಡಿದ್ದಕ್ಕೆ ಗೌರಿಗೆ ಕೃತಜ್ಞನಾದ. ಗೌರಿ ತಾನೇ ಎದ್ದು ಸೀತೆಯನ್ನು ಮಾತಾಡಿಸುವೆನಂದು ಅಡಿಗೆ ಮನೆಗೆ ಹೋದಳು.