ಸಲಾಂ ಗೌಡರಿಗೆ ಸಲಾಂ. ಹೇಗಿದೆ ನಮ್ಮ ನಾಯಕರ ಆರೋಗ್ಯ?’

ಅವನ ಪಕ್ಷದ ಅಬ್ದುಲ್ ರೆಹಮಾನ್ ಟೋಪಿಯನ್ನು ತೆಗೆದು ನಾಟಕೀಯವಾಗಿ ಬಾಗಿ ಕುರ್ಚಿಯನ್ನೆಳೆದು ಹತ್ತಿರ ಕೂತ. ಹಳೇ ಕಾಲದ ಮೈಸೂರಿನ ಶ್ರೀಮಂತ ಕುಟುಂಬಕ್ಕೆ ಸೇರಿದ ಸಭ್ಯ ಮನುಷ್ಯ. ಉದ್ದನೆಯ ಕೋಟು ಧರಿಸಿ, ಗೆಲುವಾಗಿ, ವಿನಯದಿಂದ, ದೈನ್ಯದ ಸೋಂಕಿಲ್ಲದ ಧ್ವನಿಯಲ್ಲಿ ಮಾತಾಡುವ ರೆಹಮಾನ್ ಕೃಷ್ಣಪ್ಪನಿಗೆ ಪ್ರಿಯವಾದ ವ್ಯಕ್ತಿ. ಆಸ್ತಿಯೆಲ್ಲ ವೈಭವದ ಜೀವನದಲ್ಲಿ ಕರಗಿ ಈಗ ರೆಹಮಾನ್ ಬೀಡಿಕಟ್ಟುವ ಕೆಲಸಗಾರರ ಯೂನಿಯನ್ನಿನ ಪ್ರೆಸಿಡೆಂಟ್. ಮನೆಗೆ ಬಂದವರಿಗೆ ಖಾಲಿ ಟೀ ಹಂಚುವುದರಲ್ಲೂ ಅವನ ಔದರ್ಯವನ್ನು ಈಗಲೂ ಉಳಿಸಿಕೊಂಡವ. ನೋಡಲು ಬೆಳ್ಳಗಿದ್ದ ರೆಹಮಾನ್ ಅರ್ಧ ಹಾಸ್ಯದಲ್ಲಿ ಅರ್ಧ ಜಂಬದಲ್ಲಿ ತನ್ನ ಪೂರ್ವಿಕರು ಅಪ್ಪಟ ಪರ್ಶಿಯನ್ನರೆಂದು ಕೊಚ್ಚಿಕೊಳ್ಳುವುದನ್ನು ಕೇಳಿಸಿಕೊಳ್ಳಲು ಕೃಷ್ಣಪ್ಪನಿಗೆ ತುಂಬ ಖುಷಿ.

ಕೃಷ್ಣಪ್ಪ ಮತ್ತು ರೆಹಮಾನರ ಸ್ನೇಹ ದಟ್ಟವಾದ್ದಕ್ಕೊಂದು ಹಿನ್ನೆಲೆಯಿದೆ. ಮೂರು ವರ್ಷಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಒಂದು ಗಲಭೆಯಾಯಿತು. ಮುಸ್ಲಿಮರು ಗಣಪತಿಯ ಮೆರವಣಿಗೆ ತಮ್ಮ ಮಸೀದಿಯ ಎದುರು ಪ್ರಾರ್ಥನೆಯ ಸಮಯದಲ್ಲಿ ಗದ್ದಲ ಮಾಡಿಕೊಂಡು ಬುರುವುದನ್ನು ಕಲ್ಲೆಸೆದು ಪ್ರತಿಭಟಿಸಿದರು. ಇದಕ್ಕೆ ಪ್ರತೀಕಾರವಾಗಿ ಮುಸ್ಲಿಮರು ಗುಡಿಸಲುಗಳಿಗೆ ಬೆಂಕಿ ಹಚ್ಚಲಾಯಿತು. ಮಸೀದಿಯಲ್ಲಿ ಮದ್ದು ಗುಂಡುಗಳನ್ನು ಬಚ್ಚಿಟ್ಟಿದ್ದಾರೆಂದು ಗಲಭೆ ಬೇರೆ ಬೇರೆ ಕಡೆಗಳಲ್ಲೂ ನಡೆಯಿತು. ಎಷ್ಟೋ ಜನರು ಇದರಿಂದ ಸತ್ತರು. ಪೇಟೆಯ ದಾರಿಯಲ್ಲೇ ಮುಸ್ಲಿಂ ದಂಪತಿಗಳು ತಮ್ಮ ನಾಲ್ಕು ಮಕ್ಕಳ ಜೊತೆಗೆ ಬರುತ್ತಿದ್ದ ಕಾರೊಂದನ್ನು ನಡು ಹಗಲಲ್ಲಿ ನಿಲ್ಲಿಸಿ, ಕಾರಿನ ಮೇಲೆ ಪೆಟ್ರೋಲ್ ಸುರಿದು, ಅವರನ್ನು ನಡು ಬೀದಿಯಲ್ಲೇ ಸುಡಲಾಯಿತು. ಖೊರಾನಿನ ಪ್ರತಿಗಳನ್ನು ಚೌಕದಲ್ಲಿ ಬೆಂಕಿಗೆ ಎಸೆಯಲಾಯಿತು.

ಈ ಸಮಯದಲ್ಲಿ ಎಲ್ಲ ರಾಜಕಾರಣಿಗಳು ಶಾಂತಿ ಶಿಸ್ತು ಬಾಂಧವ್ಯಗಳ ಬಗ್ಗೆ ಭೋಳೆ ಮಾತುಗಳನ್ನು ಮಾತ್ರ ಆಡುತ್ತಿದ್ದಾಗ ಕೃಷ್ಣಪ್ಪ ಚಿಕ್ಕಮಗಳೂರಿಗೆ ಹೋಗಿ ಬಂದು ಹೇಳಿಕೆಯನ್ನಿತ್ತು ಮುಸ್ಲಿಂ ಜನಾಂಗದ ಮೇಲೆ ದೌರ್ಜನ್ಯವೆಸಗಿದ ಹಿಂದೂಗಳನ್ನು ಸ್ಪಷ್ಟ ಮಾತುಗಳಲ್ಲಿ ಖಂಡಿಸಿದ. ಈ ಹೇಳಿಕೆ ಎಲ್ಲರನ್ನೂ ಅವಕ್ಕಾಗಿಸಿತು. ಕೃಷ್ಣಪ್ಪನನ್ನು ಕೊಲ್ಲುವ ಬೆದರಿಕೆ ಪತ್ರಗಳು ಎಲ್ಲೆಡೆಯಿಂದ ಬರತೊಡಗಿದುವು. ಮುಸ್ಲಿಮರು ಹೇಗೋ ಆಳುವ ಪಕ್ಕಕ್ಕೇ ಓಟು ಕೊಡುವಾಗ ನಾವು ಈ ರೀತಿ ಹೇಳಿಕೆ ಕೊಟ್ಟು ಹಿಂದೂಗಳ ಓಟನ್ನು ಕಳೆದುಕೊಳ್ಳುವುದು ಮೂರ್ಖತನವಲ್ಲವೆ ಎಂದು ಪಕ್ಷದ ಜನರೂ ಕೃಷ್ಣಪ್ಪನನ್ನು ಟೀಕಿಸಿದರು. ಅನೇಕ ಒಪ್ಪಂದಗಳನ್ನು ಮಾಡಿಕೊಂಡು ಮೆದುವಾಗಲು ತೊಡಗಿದ್ದ ಕೃಷ್ಣಪ್ಪ ಈ ಘಟನೆಯಿಂದ ಮತ್ತೆ ಹುರಿಯಾದ. ಮೊದಲಿನ ನಿಷ್ಠುರ ನಿಲುವನ್ನು ಪಡೆದ. ಜನರಿಗೆ ಅಪ್ರಿಯವಾಗುವ ಧೈರ್ಯವಿಲ್ಲದವರು ರಾಜಕೀಯ ನಾಯಕನಾಗಲಾರನೆಂಬುದನ್ನು ದೇಶದಲ್ಲಿ ಸ್ಥಾಪಿಸಿದ.

ಇತ್ತ ಮಡಿವಂತ ಮುಸ್ಲಿಮರಿಂದ ಹಿಂದೂಗಳ ಚಮಚಾ ಎಂದೂ ಕುಡಿಯುತ್ತಾನೆಂದೂ ಬೈಸಿಕೊಳ್ಳುವ, ಅತ್ತ ಹಿಂದೂಗಳಿಂದ ಅನುಮಾನಕ್ಕೆ ಒಳಗಾದ ರಹಮಾನ್ ಕೃಷ್ಣಪ್ಪನನ್ನು ಸೋದರನಂತೆ ಭಾವಿಸತೊಡಗಿದ್ದ – ಈ ಘಟನೆಯಾದ ಮೇಲೆ

ಇವತ್ತು ಕೃಷ್ಣಪ್ಪನನ್ನು ನೋಡಲು ಬಂದ ರಹಮಾನ್ ತನ್ನ ಟೋಪಿಯನ್ನು ತೊಡೆಯ ಮೇಲಿಟ್ಟುಕೊಂಡು ಯಾವ ಹಾವ ಭಾವವಿಲ್ಲದೆ ಮೃದುವಾದ ಮಾತುಗಳಲ್ಲಿ ರಾಜಕೀಯ ಪರಿಸ್ಥಿತಿಯನ್ನು ವಿವರಿಸಿದ. ಅವನ ಪ್ರಕಾರ ಮುಖ್ಯವಾಗಿ ದೇಶದ ಮುಸ್ಲಿಮರು ಪ್ರಧಾನಿಗಳ ಕಡೆ ಇರುವುದರಿಂದ ಇಲ್ಲಿಯೂ ಮುಖ್ಯಮಂತ್ರಿಗೆ ವಿರೋಧವಾದ ಬಣದಲ್ಲಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ದೇಶಾದ್ಯಂತ ಆಳುವ ಪಕ್ಷ ಒಡೆದುಕೊಳ್ಳಲಿದೆ. ಆಗ ಪ್ರಧಾನಿ ಪರವಾಗಿ ಹೆಚ್ಚು ಜನರಿರುತ್ತಾರೆ ಅಸೆಂಬ್ಲಿಯಲ್ಲಿ. ಈಗಿನ ಮುಖ್ಯಮಂತ್ರಿ ನಮ್ಮ ಪಕ್ಷದ ಬೆಂಬಲವಿಲ್ಲದೆ ಆಳಲಾರ. ನಮ್ಮ ಪಕ್ಷ ಬೆಂಬಲ ಕೊಟ್ಟರೂ ಐದೇ ಐದು ಜನ ಪ್ರಧಾನಿ ಗುಂಪಿಗಿಂತ ಹೆಚ್ಚಿರುತ್ತೇವೆ. ಆದ್ದರಿಂದ ಶಾಸಕರನ್ನು ಉಳಿಸಿಕೊಳ್ಳಲು ತುಂಬ ಹಣ ಕೊಡಬೇಕಾಗುತ್ತದೆ.

‘ಹಾಗಾದರೆ ನಾವೇನು ಮಾಡೋದು ಸರಿ ರಹಮಾನ್‌?’

ರಹಮಾನ್ ಕಣ್ಣು ಮಿಟುಕಿಸಿದ: ‘ನಿಮ್ಮನ್ನು ಚೀಫ್ ಮಾಡಲು ವೀರಣ್ಣ ಹಣ ಚೆಲ್ಲುತ್ತಿದ್ದಾನೆ – ಹಡಬೆ ಹಣ – ಚೆಲ್ಲಲಿ ಬಿಡಿ. ನೀವು ಕಣ್ಣು ಮುಚ್ಚಿಕೊಂಡಿರಿ’ ಎಂದ. ಆಮೇಲೆ ಗಂಭೀರವಾಗಿ ಇಂಗ್ಲಿಷಲ್ಲಿ ಮಾತಾಡಿದ: ದೇಶದ ಪ್ರಶ್ನೆ ಮುಖ್ಯ; ಪ್ರಧಾನಿ ಸರ್ವಾಧಿಕಾರದ ಹಾದೀಲಿದಾರೆ – ಆದ್ದರಿಂದ. ಆ ಗುಂಪೂ ನಮ್ಮ ಬೆಂಬಲ ಕೇಳ್ತಿದೆ. ನಮ್ಮದು ಸಣ್ಣ ಪಕ್ಷವಾದರೂ ಗೌಡರಿಗೆ ಆಲ್ ಇಂಡಿಯಾ ಇಮೇಜಿದೆ ಅಂತ ಅವ್ರಿಗೆ ಗೊತ್ತು. ಅವರು ಸೋಷಲಿಸಂ ಮಾತಾಡ್ತಾರಾದ್ದರಿಂದ ನಮ್ಮ ಪಕ್ಷದಲ್ಲಿ ಕೆಲವರ ಒಲವು ಅಲ್ಲಿದೆ. ಆದರೆ ಈಗಿನ ಮುಖ್ಯಮಂತ್ರೀನ್ನ ಬೆಂಬಲಿಸಿದರೆ, ಅವನು ಹೆಚ್ಚು ವೀಕಾಗಿರೋದರಿಂದ ಗೌಡರ ನಾಯಕತ್ವದ ಮಂತ್ರಿಮಂಡಳಕ್ಕೆ ಅವನು ಬೆಂಬಲಿಸೋ ಹಾಗೆ ಮಾಡೋದು ಸಾಧ್ಯ. ಅವನೂ ಮುಂದಿನ ಚುನಾವಣೆ ತನಕ ಇದಕ್ಕೆ ಒಪ್ಪುತ್ತಾನೆ. ಖದೀಮ – ಗುಟ್ಟಾಗಿ ಪ್ರಧಾನಿ ಪಕ್ಷದಲ್ಲಿ ತಾನಿರೋದಕ್ಕೆ ಅವನೂ ಪ್ರಯತ್ನಿಸುತ್ತ ಇದಾನೆ. ಆದರೆ ಅವರ ರೈವಲ್‌ಗೆ ಇದಿಷ್ಟವಿಲ್ಲ. ನಮ್ಮ ಮುಂದಿರೋ ಪ್ರಶ್ನೆ: ಐದು ಜನರನ್ನು ಈ ಕಡೆಗೆ ಉಳಿಸಿಕೊಂಡಿರೋದು ಹೇಗೆ ಅಂತ. ಈ ಹಿನ್ನೆಲೇಲಿ ಗೌಡರ ಸನ್ಮಾನ ಮುಖ್ಯವಾದ್ದು. ಮುಖ್ಯಮಂತ್ರಿ ಆವತ್ತು ಮಾತಾಡ್ತಾನೆ. ಆಮೇಲಿಂದ ಅಸೆಂಬ್ಲಿ ಸೇರುತ್ತೆ. ಅವತ್ತು ಎಲ್ಲ ನಿರ್ಣಯ ಆಗಬೇಕು. ಗೌಡರು ಏನೂ ರಗಳೆ ಹೆಚ್ಚಿಕೊಳ್ದೆ ವಿಶ್ರಾಂತಿ ತಗೋಬೇಕು. ಗೌಡರ ನಾಯಕತ್ವದಲ್ಲಿ ಸರ್ಕಾರ ರಚಿಸ್ತೀವಿ ಅಂದರೆ ಪ್ರಧಾನಿ ಪಕ್ಷ ಸೇರಿದ ಕೆಲವು ಯುವಕ ಶಾಸಕರು – ಸುಮಾರು ಹತ್ತುಜನ – ಈ ಕಡೆ ಬರೋ ಚಾನ್ಸಿದೆ. ಅದಕ್ಕೇ ಈ ಖದೀಮ ಮುಖ್ಯಮಂತ್ರಿ ನಮ್ಮ ಪಕ್ಷ ಸರ್ಕಾರ ರಚಿಸಿದ್ರೆ ಬೆಂಬಲಕೊಡ್ತೀನಿಂತ ಗವರ್ನರ್‌ಗೆ ಹೋಗಿ ಹೇಳಲಿಕ್ಕೆ ತಯಾರಿದ್ದರಿಂತೆ ಕಾಣ್ತದೆ. ಈಗಾಗ್ಲೇ ಸಹಿ ಸಂಗ್ರಹಣೆ ಶುರುವಾಗಿದೆ. ಎಲ್ಲರೂ ಆಳೋ ಪಕ್ಷ ಒಡಕೊಳ್ಳೋಕೆ ಕಾದಿದ್ದಾರೆ. . . ಇತ್ಯಾದಿ.

‘ಒಟ್ಟಿನಲ್ಲಿ ಇದೆಲ್ಲ ಹೇಸಿಗೆ ಅಂತ ನನಗನ್ನಿಸತ್ತೆ ರಹಮಾನ್.’

‘ಹೇಸಿಗೆ ಪಟ್ಟುಕೊಂಡರೆ ಆಗ್ತದಾ ಗೌಡರೆ’ ಇಂಗ್ಲಿಷಲ್ಲಿ ಮಾತಾಡುತ್ತಿದ್ದ ರಹಮಾನ್ ಕನ್ನಡದಲ್ಲಿ ಹೇಳಿದ. ತಾನು ಹೇಳಿದ್ದು ತಮಾಷೆಗಾಗಿ ಕಾಣಿಸಬೇಕೆಂದಾಗಲೆಲ್ಲ ರಹಮಾನ್ ಇಂಗ್ಲಿಂಷಿಂದ ಕನ್ನಡಕ್ಕೆ ಬದಲಾಯಿಸುತ್ತಿದ್ದ.

‘ಇಂಥ ಪರಿಸ್ಥಿತೀಲಿ ಏನು ಸಾಧಿಸಕ್ಕೆ ಸಾಧ್ಯಾ ಅಂತ ನನಗೆ ಅನುಮಾನ’

‘ಮುಂದಿನ ಚುನಾವಣೆ ಹೊತ್ತಿಗೆ ಪ್ರಧಾನಿ ಕಡೇವ್ರು ಆಳ್ತಾ ಇರಕೂಡದು – ಅಷ್ಟೇ ನಮ್ಮ ಗುರಿ. ಇದ್ರೆ ಅವರ ಅಧಿಕಾರ ನೂರು ವರ್ಷ ಇಲ್ಲಿ ಭದ್ರವಾಗಿರ್ತದೆ. ಅದೇ ನೀವೀಗ ನಾಯಕರಾದರೆ ಪ್ರಧಾನಿ ಪಕ್ಷ ಬಲವಾಗಲ್ಲ. ಗೌಡರೆ ನಾನು ಹೇಳ್ತೀನಿ. ಮೊದಲು ನೀವು ಅಧಿಕಾರಕ್ಕೆ ಬಂದದ್ದೇ ಲ್ಯಾಂಡ್ ಸೀಲಿಂಗನ್ನು ಕೆಳಗಿಳಿಸಿ. ಎರಡನೇದು: ಭೂಹೀನರಿಗೆ ಮಿನಿಮಮ್ ವೇಜ್ ಫಿಕ್ಸ್ ಮಾಡಿ. ಆಗ ಪ್ರಧಾನಿ ಕಡೇ ಹೋಗಿರೋ ಹುಚ್ಚರಲ್ಲಿ ಬಾಳ ಜನ ನಿಮ್ಕಡೇಗೇ ಬರ್ತಾರೆ. ಅದು ಈ ನಮ್ಮ ಖದೀಮನಿಗೂ ಗೊತ್ತು. ನಮ್ಮನ್ನು ಉಪಯೋಗಿಸಿಕೊಂಡು ತಾನೇ ಚೀಪ್‌ಆಗಿ ಇರಕ್ಕ ನೋಡ್ತಿದಾನೆ. ನಮ್ಮ ವೀರಣ್ಣನೋರು ಅದಕ್ಕೆಲ್ಲ ನೋಡ್ಕೊತಾರೆ. ನೀವು ಸದ್ಯ ಕಣ್ಣುಮುಚ್ಚಿಕೊಂಡು ಆರೋಗ್ಯ ಸುಧಾರಿಸಿಕೊಳ್ಳಿ. ಉಳಿದದ್ದು ನಮ್ಗೆ ಬಿಡಿ. ಈಗ ಅಧಿಕಾರನ್ನ ಹಿಡಿಯೋದು ಮುಖ್ಯ. ನಾಗರಾಜನನ್ನು ನಾನು ಒಪ್ಸಿದೀನಿ. ನೀವು ದೊಡ್ಡೋರಾಗೇ ಉಳಿದಿರಬೇಕೂಂತ ನಮಗೆಲ್ಲ ಇಷ್ಟ.’

‘ಸರಿ ರಹಮಾನ್. ಮಂತ್ರಿಮಂಡಲದಲ್ಲಿ ಮುವ್ವತ್ತೊ ಮುವ್ವತ್ತೈದೊ ಹೆಗ್ಗಣಗಳನ್ನು ಸೇರಿಸ್ಕೊಳ್ಳಬೇಕಾಗ್ತದಲ್ಲ.’

‘ಕಾದಿರಿ ಗೌಡರೆ. ಪಕ್ಷ ಒಡೀಲಿ. ನಮ್ಮ ಖದೀಮನ ಕಡೇವ್ರು ಕಾಲು ಹಿಡ್ಕೊಂಡು ಹೇಳ್ದಾಗೆ ಕೇಳೋ ಹಂಗೆ ಮಾಡ್ತೀವಲ್ಲ. ಅವನ ರೈವಲ್ ಮುಖ್ಯಮಂತ್ರಿ ಆಗ್ದಿದ್ರೆ ಸಾಕು ಅವನಿಗೆ. ಈಗ ನಾನು ಹೋಗ್ಲಾ ಗೌಡರೆ?’

ರಹಮಾನ್ ಪ್ರೀತಿಯಿಂದ ಕೃಷ್ಣಪ್ಪನ ಕೈಹಿಡಿದು ಒತ್ತಿ ಹೊರಟುಹೋದ.

***

ಮಹೇಶ್ವರಯ್ಯನ ಮುಖ ಶಾಂತವಾಗಿತ್ತು. ಆದರೆ ನಾಗೇಶ ಆವೇಶದಲ್ಲಿದ್ದ. ತಾನೇ ಹೇಳುವುದೊ, ಮಹೇಶ್ವರಯ್ಯನೇ ಹೇಳಬೇಕೊ ತಿಳಿಯದೆ ಅವನು ಬಿರಿಯುತ್ತ ನಿಂತ. ಮಹೇಶ್ವರಯ್ಯ ಅಡಿಗೆ ಮನೆಯಿಂದ ಸೀತಮ್ಮನನ್ನು ಕರೆದರು. ‘ಏನು’ ಎಂದು ಬಿಗುವಾಗಿ ಬಂದ ಸೀತಮ್ಮನ ಕೈಯಲ್ಲಿ ಹತ್ತು ಸಾವಿರ ರೂಪಾಯಿಗಳ ಡ್ರಾಪ್ಟನ್ನು ಕೊಟ್ಟು, ‘ಮನೆ ಕಟ್ಟಿಸೋಕೆ’ ಎಂದರು.

ನಿಂತಿದ್ದ ಸೀತ ಕುರ್ಚಿ ಮೇಲೆ ಕುಸಿದಳು. ಅವಳಿಗೆ ಏನೆಂದು ಅರ್ಥವಾಗಲಿಲ್ಲ.

‘ಕುದುರೇಂದ ಐವತ್ತು ಸಾವಿರ ಸಿಕ್ತು. ಅಷ್ಟು ಹಣಾನ್ನ ಈ ಇಳಿವಯಸ್ಸಲ್ಲಿ ಹೇಗೆ ಖರ್ಚು ಮಾಡಲಿ? ನಾನು ಬೆಂಗಳೂರಿಗೆ ಬಂದಾಗ ಉಳ್ಕೊಳ್ಳಿಕ್ಕೊಂದು ಮನೆ ಬೇಕಲ್ಲ ನಾಗೇಶ ಹೇಳ್ದ – ನಿಮ್ಮದೊಂದು ಸೈಟಿದೆಯಂತೆ’ ಎಂದು ಕೃಷ್ಣಪ್ಪನ ಕಡೆ ತಿರುಗಿ,

‘ವೀರಣ್ಣೋರು ದುಡ್ಡು ಹಿಂದೆ ಕೊಟ್ರೆ ತಗಳ್ಳಿಕ್ಕಿಲ್ಲ ಅಂತ ನಾಗೇಶ ಹೇಳ್ದ. ಇಕೊ ಅವರ ಹಾಸ್ಟೆಲ್ಲಿಗೆ ಫಂಡ್ ಅಂತ ಹದಿನೈದು ಸಾವಿರ ಬರ್ದಿದೀನಿ’ ಎಂದು ಇನ್ನೊಂದು ಡ್ರಾಫ್ಟ್‌ನ್ನು ಮೇಜಿನ ಮೇಲಿಟ್ಟರು.

‘ನಾಗೇಶ ಒಂದು ಸಿಗರೇಟು ಎಳೀತೀನಿ ಕೊಡೊ’

ನಾಗೇಶ ಅವರಿಗೆ ತನ್ನ ವಿಲ್ಸ್ ಸಿಗರೇಟನ್ನು ಕೊಟ್ಟ. ಮಹೇಶ್ವರಯ್ಯ ಸಿಗರೇಟ್‌ಹತ್ತಿಸಿ ಎಲ್ಲಿ ಗೌರಿ? ಬಂದಿದಾರಂತಲ್ಲ?’ ಎಂದು ಹಿಂದೆ ತಿರುಗಿ ಗೌರಿಯನ್ನು ಗಮನಿಸಿ ನಮಸ್ಕಾರ ಎಂದರು. ಅವರ ಕಣ್ಣುಗಳು ಗೌರಿಯನ್ನು ಕಂಡು ಹೊಳೆದವು.

ನಾಗೇಶ ತಡೆದುಕೊಳ್ಳಲಾರದೆ ಹೇಳಿದ:

‘ನೋಡಿ ಗೌಡರೆ ನಾನು ಎಷ್ಟು ಬೇಡಾಂದ್ರೂ ಕೇಳದೆ ನನಗೆ ಎರಡುವರೆ ಸಾವಿರ ಕೊಟ್ರು. ನಿಮ್ಮ ನರ್ಸ್‌‌ಗೆ ಮದುವೆ ಪ್ರೆಸೆಂಟೂಂತ ಎರಡೂವರೆ ಸಾವಿರದ ಡ್ರಾಫ್ಟನ್ನು ಕೊಟ್ಟಿದ್ದಾರೆ. ಹತ್ತು ಸಾವಿರ ಸಾಲ ಇತ್ತಂತೆ – ಚೆಕ್ಕಲ್ಲಿ ಕಳಿಸಿದ್ದು. ಅವರ ಖರ್ಚಿಗೆ ಬರೇ ಹತ್ತು ಸಾವಿರ ಇಟ್ಕೊಂಡಿದಾರೆ. . . .’

ಅಡಿಗೆ ಮನೆಯಿಂದ ಬರುತ್ತಿದ್ದ ಕೃಷ್ಣಪ್ಪನ ತಾಯನ್ನು ಕಂಡು ಮಹೇಶ್ವರಯ್ಯ ಎದ್ದು ನಿಂತರು.

‘ಚೆನ್ನಾಗಿದೀರ?’ ಎಂದು ಶಾರದಮ್ಮ ನೆಲದ ಮೇಲೆ ಕೂತಳು. ರುಕ್ಮಿಣಿಯಮ್ಮ ಸತ್ತ ಕ್ರಮವನ್ನು ಹೇಳಿದರು.

‘ಇನ್ನು ಕುದುರೆ ಸಹವಾಸ ಬಿಟ್ಟೆ ಕಣೊ. ಧಾರವಾಡದ ಹತ್ರ ಒಂದು ಗುಡಿಸಲು ಸ್ವಲ್ಪ ತೋಟ ಇದೆ. ಹೋಗಿ ಅಲ್ಲಿ ಇರ್ತೆನೆ.’

ಜ್ಯೋತಿಯ ಡ್ರಾಫ್ಟನ್ನು ಕೃಷ್ಣಪ್ಪನ ಎದುರಿಗಿದ್ದ ಮೇಜಿನ ಮೇಲೆ ಇಟ್ಟರು. ಅವರಿಗೆ ತುಂಬ ಸುಸ್ತಾಗಿದ್ದಂತೆ ಕಂಡಿತು. ಅವರಿಗೆ ತಮ್ಮ ಔದರ್ಯಾದ ಹೊಗಳಿಕೆಯನ್ನು ಕೇಳಿಸಿಕೊಳ್ಳುವುದು ಇಷ್ಟವಿಲ್ಲವೆಂದು ಕೃಷ್ಣಪ್ಪನಿಗೆ ಗೊತ್ತು.

‘ಕೃಷ್ಣಪ್ಪ, ಅದೇನೊ ಸನ್ಮಾನವಂತಲ್ಲ ನಿನಗೆ ನಿನ್ನ ಊರಲ್ಲಿ, ಅವತ್ತಿನ ಹಿಂದಿನ ದಿನವೇ ನಿಮ್ಮೂರಲ್ಲಿ ನಾನು ಹಾಜರ್ – ಆಯಿತ?’

ಮಹೇಶ್ವರಯ್ಯ ಎದ್ದು ನಿಂತು, ‘ನಾಗೇಶಾ ಹೋಗೋಣೋ ಬಾರೊ’ ಎಂದು ಉಳಿದವರು ಮಾತಾಡುವ ಮುಂಚೆಯೇ ನಾಗೇಶನ ಜೊತೆ ಹೋಗಿಯೇಬಿಟ್ಟರು.

ಸೀತೆ ಥಟ್ಟನೆ ಎದ್ದಳು. ಸರಸರನೆ ಹೋಗಿ ಬಾಗಿಲಲ್ಲಿ ನಿಂತು ಮಹೇಶ್ವರಯ್ಯನನ್ನು ಕರೆದಳು. ಕಣ್ಣೊರಸಿಕೊಳ್ಳುತ್ತ,

‘ನನಗೆ ದುಡ್ಡು ಮುಖ್ಯವಲ್ಲ. ನನ್ನ ತಾಳಿ ಗಟ್ಟಿಯಾಗಿದ್ದರೆ ಸಾಕು. ಈ ಹಣ ಬೇಡ ತಗೊಳ್ಳಿ’ ಎಂದಳು. ಅವಳ ಧ್ವನಿಯ ಪ್ರಮಾಣಿಕತೆ ಗಮನಿಸಿ ಮಹೇಶ್ವರಯ್ಯ –

‘ನಿನ್ನ ಗಂಡ ತುಂಬ ದೊಡ್ಡೋನಮ್ಮ. ಅವನನ್ನ ಬೆಳೀಲಿಕ್ಕೆ ನೀನು ಬಿಡಬೇಕು. ನನ್ನ ಹಣ ಅವನ ಹಣ ಬೇರೆಯಲ್ಲ, ಇಟ್ಟುಕೊ’ ಎಂದರು.

‘ದೊಡ್ಡ ಮನುಷ್ಯನ ಹೆಂಡತಿಯಾಗಿರೋ ಕಷ್ಟ ನಿಮಗೇನು ಗೊತ್ತು? ಎಲ್ರೂ ನನ್ನ ಎಷ್ಟು ಕೀಳಾಗಿ ನೋಡ್ತಾರಂತ ನನಗೆ ಗೊತ್ತಿಲ್ವ?’

ಸೀತ ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ್ದನ್ನು ನೋಡಿ ಮಹೇಶ್ವರಯ್ಯ ಬಾಗಿಲಿಗೆ ಬಂದು,

‘ನಿನ್ನ ಕಷ್ಟ ನನಗೆ ಗೊತ್ತಾಗತ್ತಮ್ಮ. ಅವನಿಗೂ ಗೊತ್ತಾಗುತ್ತೆ. ಗೊತ್ತಾಗಕ್ಕೆ ಸ್ವಲ್ಪ ಅವಕಾಶ ಕೊಡು ಅಷ್ಟೆ’ ಎಂದರು.

ನಾಗೇಶ ತಂದ ಆಟೋರಿಕ್ಷಾದಲ್ಲಿ ಧಾರವಾಡದ ಬಸ್‌ಹಿಡಿಯಲು ಹೊರಟು ಹೋದರು.

***

ಸೀತೆ ಬಾಗಿಲಲ್ಲೆ ನಿಂತು ಮಹೇಶ್ವರಯ್ಯ ಹೋದ ದಿಕ್ಕನ್ನು ದಿಟ್ಟಿಸುತ್ತಿದ್ದಾಗ ಗೌರಿ ಇಂಗ್ಲಿಷಲ್ಲಿ ಕೃಷ್ಣಪ್ಪನಿಗೆ ಹೇಳಿದಳು:

‘ಮಹೇಶ್ವರಯ್ಯ ಮಾಡಿರೋದು ಅನ್‌ಫೇರ್. ನಿಮ್ಮ ಹೆಂಡಿತೀನ್ನ ತನ್ನ ಜನರಾಸಿಟೀಂದ ಅವರು ಕ್ರಶ್ ಮಾಡಿದ್ದಾರೆ.

ಒಂದು ಕ್ಷಣ ಕೃಷ್ಣಪ್ಪನಿಗೆ ಏನನ್ನುವುದೋ ತಿಳಿಯದೆ ಸುಮ್ಮನೇ ಕೂತ. ಆಮೇಲೆ ಹೇಳಿದ:

‘ಇದನ್ನು ದಕ್ಕಿಸಿಕೊಳ್ಳಲಾರದೆ ನರಳಬಹುದು ಅವಳು. ಅಥವಾ ನರಳ್ತಾಳಾ ಅಂತ್ಲೂ ನನಗೆ ಅನುಮಾನ. ಬಾಣಂತನ ಮಾಡಲಿಕ್ಕೆ ಬಂದ ತಾಯಿಗೆ ಸೀರೆ ಕೊಡಿಸು ಅಂದ್ರೆ ಅದನ್ನೂ ಮಾಡಲಾರದೆ ಹೋದ್ಲು ಅವಳು. ತುಂಬಾ ವುಮನ್ – ಹಣದಲ್ಲೂ ಸ್ಪಿರಿಟ್‌ನಲ್ಲೂ.’

ಎಷ್ಟು ಸುಲಭವಾಗಿ ಹೆಂಡತಿಯನ್ನು ಇನ್ನೊಬ್ಬಳ ಎದುರು ನಿಂದಿಸಿದೆನೆಂದು ಕೃಷ್ಣಪ್ಪನಿಗಾದ ಆಶ್ಚರ್ಯಕ್ಕಿಂತ ಹೆಚ್ಚು ಗೌರಿಗೇ ಆಗಿ ಅವಳಿಗೆ ಸಿಟ್ಟು ಬಂದಂತೆ ಕಂಡಿತು;

‘ನೀವಿಷ್ಟು ನಿಕೃಷ್ಟವಾಗಿ ಕಾಣೋ ಹೆಂಗಸಿನ ಜೊತೆ ಯಾಕಿದೀರಿ? ನಿಮ್ಮ ಗರ್ವಾನ್ನ ಬೆಳೆಸಿಕೊಳ್ಳೇಕೇಂತ್ಲೆ ನೀವು ನಿಮಗಿಂತ ಕೀಳಾದ ಹೆಣ್ಣನ್ನು ಹುಡುಕಿ ಮದುವೆ ಮಾಡಿಕೊಂಡಂತಿದೆ.’

ಕೃಷ್ಣಪ್ಪನಿಗೆ ಗೌರಿಯ ಮಾತಿನಿಂದ ಶಾಕ್ ಆಯಿತು. ಬಾಯಿಕಟ್ಟಿ ಅವನು ಕೂತಿದ್ದಾಗ ಸೀತೆ ಯಾರನ್ನೂ ಮುಖವೆತ್ತಿ ನೋಡಲಾರದೆ ಸೀದ ಅಡಿಗೆ ಮನೆಗೆ ಹೋದಳು. ಊಟ ಬಿಡಿಸಲು ಕೃಷ್ಣಪ್ಪನ ತಾಯಿಗೆ ನೆರವಾದಳು. ಇನ್ನೂ ಮಗು ಎದ್ದಿರುವುದನ್ನು ನೋಡಿ ಅವಳನ್ನು ಮಲಗಿಸಲೆಂದು ಗೌರಿ ಎದ್ದು ನಿಂತಳು.

***

ಸಿಟಿಯಿಂದ ಸುಮಾರು ಹತ್ತು ಮೈಲಿಗಳಾಚೆ ವೀರಣ್ಣನ ಫಾರಂನಲ್ಲಿ ಈ ಗೆಸ್ಟ್‌ಹೌಸ್‌ಇತ್ತು. ಗೆಸ್ಟ್‌ಹೌಸಿನ ಹಿಂದೆ ಇದ್ದ ಬಂಡೆಗಳನ್ನು ಹಾಗೇ ಇಟ್ಟುಕೊಂಡು ಸುಂದರವಾದ ಲ್ಯಾಂಡ್‌ಸ್ಕೇಪ್ ತೋಟವಿತ್ತು. ಮುಂದೆ ಹೋದರೆ ತೆಂಗು ನಿಂಬೆ ಕಿತ್ತಳೆ ಸಪೋಟ ದಾಳಿಂಬೆ ಪೇರಳೆ ಪನ್ನೀರಳೆ ನೇರಳೆ ಹಲಸು ಮಾವು ಇತ್ಯಾದಿ ಎಲ್ಲ ಜಾತಿಯ ಹಣ್ಣಿನ ಮರಗಳಿದ್ದವು. ಗೆಸ್ಟ್‌ಹೌಸಿನ ಎದುರು ದ್ರಾಕ್ಷಿಯ ತೋಟವಿತ್ತು. ಹೆಂಚುಹೊದಿಸಿದ ಅತ್ಯಾಧುನಿಕವಾದ ಸಜ್ಜಾದ ಈ ಮನೆಯ ಎರಡು ಪಕ್ಕಗಳಲ್ಲೂ ಬಣ್ಣ ಬಣ್ಣಗಳ ಸಪುರವಾದ ಚೀನೀ ಬಿದಿರಿನ ಹಿಂಡಲುಗಳಿದ್ದವು. ಹಣ್ಣಿನ ತೋಟದ ಪಕ್ಕದಲ್ಲಿ ಈಜುವ ಕೊಳವಿತ್ತು. ಕುದುರೆ ಸವಾರಿಯ ಹುಚ್ಚಿದ್ದವರಿಗೆಂದು ವೀರಣ್ಣ ಚೆಂದವಾದ ಆಯಕಟ್ಟಿನ ಮೈಯ ಬಿಳಿಯ ಕುದುರೆಯೊಂದನ್ನು ಸಾಕಿದ್ದ. ಮನೆಯ ಎದುರಿಗೇ ಕಾಣುವಂತೆ ಸುತ್ತ ಬೇಲಿ ಬಿಗಿದ ಹುಲ್ಲಿನಲ್ಲಿ ಎರಡು ಜಿಂಕೆಗಳು ಮೇಯುತ್ತಿದ್ದವು. ಈ ಬೇಲಿಯಾಚೆ ಎರಡು ದೊಡ್ಡ ಗೂಡುಗಳಲ್ಲಿ ಒಂದು ಹಿಂಡು ನವಿಲುಗಳು ಇದ್ದವು. ಹೀಗೆ ಹಳ್ಳಿ ಮತ್ತು ಪಟ್ಟಣಗಳ ಸೊಬಗನ್ನೂ ಸೌಕರ್ಯಗಳನ್ನೂ ಒಟ್ಟಿಗೇ ಒದಗಿಸಿದ್ದ ಈ ಗೆಸ್ಟ್‌ಹೌಸಿಗೆ ಕೃಷ್ಣಪ್ಪ ಬರುತ್ತಿರುವುದು ಇದು ಮೊದಲನೇ ಸಲವಲ್ಲವಾದರೂ ಈ ಬಾರಿ ಬಂದಾಗ ಗೆಸ್ಟ್‌ಹೌಸಿನ ನಿರ್ಮಲವಾದ ಗಾಳಿಯಿಂದ ಉತ್ತೇಜಿತನಾದ.

ಕೃಷ್ಣಪ್ಪನ ಜೊತೆ ಅವನ ತಾಯಿ, ನಾಗೇಶ, ಗೌರಿ ದೇಶಪಾಂಡೆ ಮಾತ್ರ ಬಂದಿದ್ದರು. ಬ್ಯಾಂಕಿಗೆ ರಜವಿದ್ದ ದಿನಗಳಲ್ಲಿ ಮಾತ್ರ ಸೀತೆಗೆ ಅಲ್ಲಿ ಬರಲು ಸಾಧ್ಯವಾದ್ದರಿಂದ ತುಮಕೂರಲ್ಲಿ ಇದ್ದ ಅವಳ ವಿಧವೆ ತಾಯಿಯನ್ನು ಅವಳ ಜೊತೆಗಿರಲು ಕರೆಸುವ ಏರ್ಪಾಟಾಗಿತ್ತು. ಕೃಷ್ಣಪ್ಪನ ಮನಃಶಾಂತಿಗೆ ಇದು ಅಗತ್ಯವೆಂದು ಎಲ್ಲರಿಗೂ ಗೊತ್ತಿತ್ತು. ಮಗಳನ್ನು ದಿನಬಿಟ್ಟು ದಿನವಾದರೂ ಸ್ಕೂಲ್ ಮುಗಿದ ಮೇಲೆ ಕರೆದುಕೊಂಡು ಬರುವೆನೆಂದು ವೀರಣ್ಣ ಹೇಳಿದ್ದ.

ಏಕಾಂತ ಬಯಸಿ ಕೃಷ್ಣಪ್ಪ ಇಲ್ಲಿಗೆ ಬಂದಿದ್ದರೂ ನಿತ್ಯ ತನ್ನನ್ನು ನೋಡಲು ಬರುತ್ತಿದ್ದ ಜನರಿಲ್ಲದೆ ಅವನಿಗೆ ಬೇಸರವಾಗುತ್ತಿತ್ತು. ಪ್ರಾಯಶಃ ಸಾಯುತ್ತಿರುವಾಗಲೂ ಗುಂಪು ಗುಂಪು ಜನ ನೋಡಲು ಬರುತ್ತಿದ್ದರಿಂದ ತಾನಿನ್ನು ಮುಖ್ಯವ್ಯಕ್ತಿಯಾಗಿ ಉಳಿದಿದ್ದೇನೆಂದು ಸಿಗುತ್ತಿದ್ದ ಸಮಾಧಾನಕ್ಕೆ ಇಲ್ಲಿ ಅವಕಾಶ ಕಡಿಮೆಯಾಗಿತ್ತು. ಕುಗ್ಗುತ್ತಿರುವ ತನ್ನ ಆರೋಗ್ಯ ಮತ್ತು ಸಾಮರ್ಥ್ಯಗಳ ಈ ಇಳಿಗಾಲದಲ್ಲಿ ವೀರಣ್ಣನ ಮೂಲಕ ತನಗೆ ಒದಗುತ್ತಿದ್ದ ಮರ್ಯಾದೆ, ಮೆಹರ್ಬಾನಿ, ಉಪಚಾರ, ಸೌಕರ್ಯಗಳು ತನ್ನಲ್ಲಿನ್ನೂ ಬದುಕುವ ಆಸೆಯನ್ನು ಉಳಿಸಿವೆಯೆಂಬುದು ಅರಿವಾಗುತ್ತ ಕೃಷ್ಣಪ್ಪ ವಿಷಾದಕ್ಕೊಳಗಾದ. ಇಂಥ ಸೌಕರ್ಯಗಳನ್ನೂ ಜನಬೆಂಬಲವನ್ನೂ ತನಗೆ ಒದಗಿಸುತ್ತಿದ್ದ ಭ್ರಷ್ಟಾಚಾರದ ವ್ಯವಸ್ಥೆಗೂ ತನ್ನ ಜೀವಂತಿಕೆಗೂ ಎಷ್ಟು ದಟ್ಟವಾದ ಸಂಬಂಧವಿದೆಯೆಂದು ಚಕಿತನಾದ. ಮುಖ್ಯಮಂತ್ರಿ ಪದವಿ ತನಗೆ ಬೇಡವೆನ್ನುತ್ತಲೇ, ಹೀಗೆ ಅನ್ನುವುದರಿಂದಲೂ ಅದನ್ನು ಪ್ರಾಯಶಃ ಗಟ್ಟಿಮಾಡಿಕೊಳ್ಳುತ್ತಲೇ, ತನ್ನನ್ನು ಆ ಸ್ಥಾನಕ್ಕೆ ತರಲು ಉಳಿದವರೆಲ್ಲ ಮಾಡುತ್ತಿದ್ದ ಸಂಚಿನಲ್ಲಿ ತನ್ನ ಪ್ರಾಮುಖ್ಯತೆಯನ್ನು ಅನುಭವಿಸುತ್ತ ಹೇಗೆ ತನ್ನ ಪ್ರಾಣಶಕ್ತಿ ಚುರುಕಾಗಲು ಹವಣಿಸುತ್ತಿದೆ! ನಾಗರಾಜ್ ಅವನು ಬರೆದುಕೊಟ್ಟ ಅಸೆಂಬ್ಲಿ ಸದಸ್ಯತ್ವದ ರಾಜೀನಾಮೆ ಪತ್ರ ಅವನ ಜೇಬಿನಲ್ಲೇ ಇತ್ತು. ಮಹೇಶ್ವರಯ್ಯನ ಭವಿಷ್ಯ ನುಡಿಯೂ ಸದಾ ನೆನಪಿಗೆ ಬರುತ್ತಿತ್ತು. ಈ ವ್ಯವಸ್ಥೆಯನ್ನೇ ಬಳಸಿಕೊಂಡು ತಾನು ಮುಖ್ಯಮಂತ್ರಿಯಾಗಬೇಕೆಂಬ ಆಸೆ ನಿಜವಾದ್ದೊ? ಅಥವಾ ಇವನ್ನೆಲ್ಲ ತ್ಯಾಗಮಾಡಿ ಭ್ರಷ್ಟಾಚಾರದ ಸೆಲೆಗಳಿಂದ ದೂರವಿದ್ದು, ಜನಹಿತವನ್ನೂ ತನ್ನ ಒಳಗಿನ ಹಿತವನ್ನೂ ಸಾವಿನ ಎದುರಿನಲ್ಲಿ ಮತ್ತೊಮ್ಮೆ ಸಾಧಿಸಬೇಕೆಂಬ ಇನ್ನೊಂದು ಸೆಳೆತ ನಿಜವಾದ್ದೊ? ಹಿಂದೊಮ್ಮೆ ಬೈರಾಗಿ ಉತ್ತರ ಕೊಡಬೇಕಾಗುವಂತೆ ತನ್ನ ಪ್ರಶ್ನೆಯನ್ನು ಅವನಲ್ಲಿ ಕೇಳಲಾರದೆ ಸೋತಿದ್ದು ನೆನಪಾಗುತ್ತದೆ. ಮತ್ತೆ ಈಗ ಅಂಥದ್ದೇ ಸಂದಿಗ್ಧದಲ್ಲಿ ತಾನಿದ್ದೇನೆ.

ಪ್ರಾಯಶಃ ಪ್ರಶ್ನೆಯೇ ಇಲ್ಲ. ಧರ್ಮಸಂಕಟಗಳು ನಿಜವಲ್ಲ. ಹಾಗೆ ಮಾಡಲೋ ಹೀಗೆ ಮಾಡಲೋ ಎಂದು ಕೇಳಿಕೊಳ್ಳುವಾಗ ನಮ್ಮ ಆಳವಾದ ಆಸೆ ಎರಡು ದಿಕ್ಕುಗಳಲ್ಲೂ ಸಮಾನಶಕ್ತಿಯಲ್ಲಿ ತೊಯ್ಯುತ್ತಿರುತ್ತವೆಯೋ ಎಂಬುದೇ ಅನುಮಾನ. ನಮ್ಮ ಪ್ರಾಣಶಕ್ತಿಯನ್ನು ಎರಡರಲ್ಲಿ ಒಂದು ದಿಕ್ಕು ಹೆಚ್ಚು ಸೆಳೆಯುತ್ತಿದ್ದರೆ ಆಗ ಧರ್ಮ ಸಂಕಟ ನಿಜವಲ್ಲ. ಅದು ಲಾಲಸೆ. ತೀಟೆ. ನಮಗೆ ನಾವೇ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ವ್ಯಾಮೋಹ.

ವೀರಣ್ಣ ಒದಗಿಸುತ್ತಿದ್ದ ಈ ಆವರಣ ನನಗೆ ತುಂಬ ಅಪ್ರಿಯವಾಗಿದ್ದಲ್ಲಿ ಅದಕ್ಕೆ ತಾನು ಒಳಗಾಗುತ್ತಲೇ ಇರಲಿಲ್ಲವೆಂದು ನಿಟ್ಟುಸಿರು ಬಿಡುತ್ತಾನೆ. ಆದರೂ ಬಾಧೆಯಾಗುತ್ತದೆ. ನಾಗರಾಜ್ ತನ್ನ ರಾಜೀನಾಮೆಯನ್ನು ಪೋಸ್ಟ್‌ಮಾಡುವುದಿಲ್ಲ ಎಂಬ ಭರವಸೆಯಿಂದ ಅದನ್ನು ತಾನು ಬರೆದಿದ್ದಲ್ಲ – ಅವನ ತೀರ್ಮಾನಕ್ಕೆ ಬಿಟ್ಟದ್ದು ಬರಿ ನಾಟಕವಲ್ಲ ಎಂದು ಕೃಷ್ಣಪ್ಪನಿಗೆ ತನ್ನ ವಿಚಾರಸರಣಿಯಲ್ಲಿ ಮತ್ತೆ ಗೊಂದಲವುಂಟಾಗುತ್ತದೆ.

ವೀರಣ್ಣನಿಗೆ ಫೋನ್ ಮಾಡಿ ಕರೆಸುವಂತೆ ನಾಗೇಶನಿಗೆ ಹೇಳಿ ಕೃಷ್ಣಪ್ಪ ಮಾವಿನ ಮರದ ನೆರಳಲ್ಲಿ ಕೂತು ಬಿದಿರು ಹಿಂಡಿಲಿನಲ್ಲಿ ಗಾಳಿ ಹೊಕ್ಕು ಹೊರಡುವ ಮೃದುವಾದ ನಾದದಲ್ಲಿ ಮಗ್ನನಾಗುತ್ತಾನೆ.

***

ಕೃಷ್ಣಪ್ಪನ ತಾಯಿಗೆ ಮಾತ್ರ ಈ ಫಾರಂಗೆ ಬಂದು ಗೌಜೋ ಗೌಜು. ಸಂಭ್ರಮದಿಂದ ಸೀರೆಯ ಸೆರಗನ್ನು ಗೊಬ್ಬೆ ಕಟ್ಟಿಕೊಂಡು ಅವಳು ಓಡಾಡುವುದನ್ನು ಕಂಡು ಇಂಥ ಒಂದು ಜಾಗಕ್ಕೆ ತಾನು ಒಡೆಯನಾಗಿದ್ದರೆ ಈ ತಾಯಿ ತೃಪ್ತಳಾಗುತ್ತಿದ್ದಳು ಎನ್ನಿಸಿ ಕೃಷ್ಣಪ್ಪನಿಗೆ ನಗುಬಂತು. ಆಕೆಯೇ ಹೋಗಿ ದೊಡ್ಡ ಕೊಳಗದಲ್ಲಿ ಹಸುವನ್ನು ಕರೆದು, ಹಕ್ಕಿ ಹಾರಾಡಿಯೋ ಬೇರೆವರ ಕಣ್ಣು ಬಿದ್ದೋ ದೃಷ್ಟಿಯಾಗದಿರಲೆಂದು ಕೊಳಗವನ್ನು ಸೀರೆಯ ನಿರಿಗೆಯಲ್ಲಿ ಮುಚ್ಚಿಕೊಂಡು ಕೃಷ್ಣಪ್ಪನ ಎದುರು ನಿಂತು ಒಳ ಸಂಚು ಮಾಡುವ ಧಾಟಿಯಲ್ಲಿ,

‘ಇದೆಂಥದೋ ಮಾರಾಯ’ ಎಂದಳು.

ಕೃಷ್ಣಪ್ಪ ಪ್ರಶ್ನಾರ್ಥಕವಾಗಿ ನೋಡಿದ.

‘ಇನ್ನೂ ಎರಡು ಮೂರು ಕೊಳಗದಷ್ಟಾದರೂ ಅದರ ಕೆಚ್ಚಲಲ್ಲಿ ಉಳಿದಿದೆ – ಮಾರಾಯ. ಕೈಬತ್ತಿ ಬಂತೂಂತ ಜವಾನ ಕರೆಸ್ತ ಇದಾನೆ.’

ನೊರೆಗೆರೆಯುವ ಬೆಚ್ಚಗಿದ್ದ ಹಾಲನ್ನು ಕೃಷ್ಣಪ್ಪನಿಗೆ ಒಂದು ಕ್ಷಣ ತೋರಿಸಿ ಮತ್ತೆ ಮುಚ್ಚಿದರು.

‘ಕಾಯ್ಸಿ ಕೊಡ್ತೇನೆ ಕುಡಿ. ನಮ್ಮನೇ ಆಕಳ ಕಾವೇರಿ ಇತ್ತಲ್ಲ ಅದರ ಕೆಚ್ಚಲಿಗೇ ಬಾಯಿ ಹಾಕಿ ನೀನು ಕುಡಿತಿದ್ದದ್ದು ನೆನಪಿದೆಯೇ? ಸಾಧು ಹಸ. ಒಂದ್ಸಲ ಒದ್ದದ್ದಿಲ್ಲ. ಅದರ ಬುಡದ್ದೇ ಹಸಾನ ಈಗಲೂ ನಾನು ಕರೆಯೋದು. ಅಬ್ಬಬ್ಬಾಂದರೆ ಒಂದುಸೇರು ಕರೀತಿದೆ. ಅದರಲ್ಲರ್ಧಾನ್ನ ಜೋಯಿಸ್ರಿಗೆ ಕೊಡ್ತೀನಿ – ದೇವರ ತಲೆಮೇಲೆ ಬ್ರಾಮಣ ಸುರೀಲಿ ಅಂತ. . . .’

ಪ್ಯಾಂಟ್‌ತೊಟ್ಟು ಜುಬ್ಬಹಾಕಿ ಸ್ನಾನ ಮಾಡಿ ಹೊರಬಂದ ಗೌರಿ ತಲೆಯ ಕೂದಲನ್ನು ಒಣಗಿಸಿಕೊಳ್ಳುತ್ತ ದೂರದಲ್ಲಿ ಕೂತಿದ್ದುದು ತಾಯಿಗೆ ಕಾಣಿಸುತ್ತದೆ. ಗೌರಿ ಸಿಗರೇಟ್ ಹಚ್ಚಿದ್ದು ಕಂಡು ತಾಯಿ ಮುಖ ಸಿಂಡರಿಸುತ್ತಾಳೆ. ಕೃಷ್ಣಪ್ಪ ಮುಗುಳು ನಗುತ್ತ,

‘ಹೊಗೆಸೊ‌ಪ್ಪು?’ ಎಂದು ಅಣಕ ಮಾಡುತ್ತಾನೆ.

‘ತಂದದ್ದು ಮುಗೀತ ಬಂತು. ನಾಗೇಶನಿಗೆ ಹೇಳಿ ತರ್ಸು’ ಎಂದು ಗೆಲುವಾಗಿ ಗೌರಿಯನ್ನು ಕರೀತಾರೆ.

‘ಕಡುಬು ಮಾಡಿದೀನಿ. ತಿಂಡಿಗೆ ಬನ್ನಿ’

ಹಿಂದಿನ ರಾತ್ರೆ ಸದಾಶಿವನಗರದ ಮನೆಯಲ್ಲಿ ತಿರುವಿಟ್ಟ ಹಿಟ್ಟಿನಲ್ಲಿ ಸೊಸೆಗಷ್ಟು ಇಟ್ಟು, ಉಳಿದದ್ದನ್ನು ಮರೆಯದೆ ಬೆಳಗಿನ ಝಾವ ಕಾರಲ್ಲಿ ತಂದು, ಬಾಳೆ ಕೊಟ್ಟೆಯಲ್ಲಿ ಬೇಯಿಸಿ, ತೆಂಗಿನ ಚಟ್ನಿ ಮಾಡಿ ಮಗನಿಗೂ ಗೌರಿಗೂ ನಾಗೇಶನಿಗೂ ಬಡಿಸುತ್ತಾರೆ. ಮಗನಿಗೆ ಇಷ್ಟವೆಂದು ತಂದಿದ್ದ – ರುಕ್ಮಿಣಿಯಮ್ಮ ಸಾಯುವ ಮುಂಚೆ ಹಾಕಿದ – ಮಾವಿನ ಮಿಡಿ ಉಪ್ಪಿನಕಾಯನ್ನೂ ರಸವನ್ನೂ ಎಲೆಗೆ ಬಡಿಸುತ್ತ,

‘ಯಾವ ಮರದ್ದು ನೆನಪಾಗತ್ತ ಹೇಳು?’

ಎಂದು ಮಗನನ್ನು ಕೇಳುತ್ತಾರೆ. ಕೃಷ್ಣಪ್ಪ ತನಗೆ ಗೊತ್ತಿದ್ದ ಮರಗಳನ್ನೆಲ್ಲಾ ನೆನಪು ಮಾಡಿಕೊಳ್ಳುತ್ತಾನೆ. ಹುಲಿಯೂರಿನ ಹೊಳೆಯಬದಿ ಒಂದು ಮರವಿದೆ; ಜೋಯಿಸರ ಮನೆಯ ಮೇಲಿನ ಗುಡ್ಡದಲ್ಲಿ ಇನ್ನೊಂದಿದೆ; ದನಕಾಯುವಾಗ ಗುಡ್ಡದ ಕೆಳಗೆ ಬೇಲಿ ಬಿಗಿಯಾಗಿಲ್ಲದೆ ತನಗೆ ಆತಂಕವನ್ನುಂಟುಮಾಡುತ್ತಿದ್ದ ಕೊರಕಲಲ್ಲಿ ಮತ್ತೊಂದಿದೆ. ಮೂರೂ ಮಿಡಿ ಉಪ್ಪಿನಕಾಯಿಗೆ ಪ್ರಶಸ್ತವಾದ ಮರಗಳು. ಮೂರರ ತೊಟ್ಟು ಮುರಿದರೂ ಸೊನೆ ಚಿಮ್ಮುತ್ತದೆ. ವರ್ಷಗಳಾದರೂ ಅವುಗಳ ಉಪ್ಪಿನಕಾಯಿ ಕೆಡುವುದಿಲ್ಲ. ಒತ್ತಿದರೆ ಮೆತ್ತಗೆ ಪಿಚಕ್ಕೆನ್ನದೆ ಕಚ್ಚಿದರೆ ಕಟಮ್ಮೆನ್ನುತ್ತದೆ. ಮೂರರ ರುಚಿಯೂ ಬೇರೆ – ಘಾಟಿನಲ್ಲಿ, ವಾಸನೆಯಲ್ಲಿ, ಉಪ್ಪು ಕಾರಗಳಲ್ಲಿ ಅವು ಹದವಾಗಿ ಮುರುಟಿಕೊಳ್ಳುವ ಸೊಗಸಿನಲ್ಲಿ. ಎರಡು ಸಾರಿ ಕಚ್ಚಿ ನೆನಪು ಮಾಡಿಕೊಳ್ಳಲು ಯತ್ನಿಸುತ್ತಿದ್ದ ತನ್ನನ್ನು ಕುಕ್ಕರು ಕಾಲಲ್ಲಿ ಕೂತು, ಕುತೂಹಲದಿಂದ ತುಂಟತನದಿಂದ ಉಪ್ಪಿನ ಕಾಯಂತೆಯೇ ಸುಕ್ಕಾದ ಮುಖದಿಂದ ನೋಡುತ್ತಿದ್ದ ತಾಯಿಗೆ ಕೃಷ್ಣಪ್ಪ ಅನುಮಾನಿಸುತ್ತಾ ಹೇಳಿದ:

‘ಹೊಳೇ ಬುಡದ್ದಲ್ಲವ?’

ಸಂತೋಷದಿಂದ ತಾಯಿಯ ಮುಖ ಬಿರಿಯಿತು.

ಮಧ್ಯಾಹ್ನ ವೀರಣ್ಣ ಬಂದು’ಏನು ಬರಹೇಳಿದರಂತಲ್ಲ?’ ಎಂದ.

ನಿಂತಿದ್ದ ವೀರಣ್ಣನಿಗೆ ಕೂರಿ ಅಂದ ಕೃಷ್ಣಪ್ಪ. ಸಿಗರೇಟನ್ನು ತುಟಿಗೆ ಸಿಕ್ಕಿಸಿ ಅದನ್ನು ಹಚ್ಚುವಂತೆ ಕೇಳಿದ. ಅವನ ಮನಸ್ಸು ಉದ್ವಿಗ್ನವಾಗಿರುವುದನ್ನು ಗಮನಿಸಿ ವೀರಣ್ಣ ಸಮಾಧಾನದಿಂದ ಕಾದ.

‘ವೀರಣ್ಣೋರೆ ನಿಮ್ಮನ್ನು ಒಂದು ಮಾತು ಕೇಳಬೇಕು. ದಯಾಮಾಡಿ ತಪ್ಪು ತಿಳಿಯಬಾರದು.’

‘ಕೇಳಿ ಗೌಡರೆ’

‘ನನ್ನನ್ನು ಮುಖ್ಯಮಂತ್ರಿ ಮಾಡಲಿಕ್ಕೆ ನಿಮಗಾಗ್ತ ಇರೋ ಖರ್ಚೆಷ್ಟು?’

‘ಗೌಡರೆ ನೀವು ತುಂಬ ನಿಷ್ಠಾವಂತರೂಂತ ನನಗೆ ಗೊತ್ತು. ಆದರೆ ನೀವು ಚಾಣಾಕ್ಷರೂಂತ್ಲೂ ತಿಳ್ದಿದೀನಿ. ರಾಜಕೀಯಕ್ಕೆ ಇಳಿದಮೇಲೆ ಇವೆಲ್ಲ ಇದ್ದೇ ಇದೆ.’

‘ಗೊತ್ತು ನನಗೆ. ಆದರೆ ಅದು ರಾಜಕೀಯ ಅಲ್ಲ.’

‘ಅದೂ ಗೊತ್ತು ನನಗೆ ಗೌಡರೆ. ಆದರೆ ದೇಶದ ಸ್ಥಿತಿ ಸಂದಿಗ್ಧವಾಗಿದೆ. ಸರ್ವಾಧಿಕಾರಾನ್ನ ತಡೆಯೋಕೆ ಬೇರೆ ಮಾರ್ಗಇಲ್ಲ. ನಿಮ್ಮ ರಾಜಕೀಯವನ್ನ ಈ ಅಪಾಯ ಕಳೆದ ಮೇಲೆ ಮಾಡುವಿರಂತೆ’.

‘ನಿಮ್ಮ ಸ್ವಾರ್ಥ ಇದರಲ್ಲಿ ಇಲ್ಲಾಂತ ನಾನು ತಿಳಕೊಳ್ಳಲ?’

ವೀರಣ್ಣ ನೊಂದಂತೆ ಕಂಡಿತು.

‘ಗೌಡರೆ ನಿಮ್ಮಲ್ಲೊಂದು ನಾನು ನೋಡಿದೀನಿ. ನಿಮಗೆ ಸಂಶಯದ ಪ್ರಕೃತಿ. ಹತ್ತಿರದವರನ್ನು ಬೆಳೆಯೋಕೆ ಬಿಡದೇ ಇರೋ ಆಲದಮರದಂತೆ ನೀವು ಅಂತಲೂ ಒಂದು ದೂರು ಕೇಳಿದ್ದೀನಿ. ಆದರೆ ಹತ್ತಿರದವರೆಗೆ ನಿಮ್ಮ ಯೋಗ್ಯತೆ ಇಲ್ಲಾಂತ್ಲೂ ನನಗೆ ಗೊತ್ತು.’

‘ನನ್ನ ಪ್ರಶ್ನೆಗೆ ನೀವು ಉತ್ತರ ಕೊಡಲಿಲ್ಲ.’

‘ನಾನೊಬ್ಬ ವ್ಯಾಪಾರಿ ಗೌಡರೆ. ನನ್ನ ವೃತ್ತಿಧರ್ಮಾನ್ನ ಬಿಡು ಅಂತೀರ?’

‘ಆದರೆ ಅದಕ್ಕೆ ಸಹಾಯ ಮಾಡೋದಕ್ಕೆ ನನ್ನನ್ನು ಜನ ಚುನಾಯಿಸಿಲ್ಲ.’

‘ಅಯ್ಯೋ ಶಿವನೆ. ನಿಮ್ಮ ಮಾತು ಅರ್ಥ ಆಗ್ತಿಲ್ಲ ನನಗೆ. ನಾನೊಬ್ಬ ಮನುಷ್ಯ ಅಲ್ಲವ? ನನಗೂ ಅಭಿಮಾನ ಇಲ್ಲವ? ನಿಮ್ಮನ್ನು ಆ ಸೀಟಿನ ಮೇಲೆ ಒಂದು ವರ್ಷನಾದರೂ ನೋಡಬೇಕೂಂತ ನನಗೆ ಆಸೆ. ನನಗೇನೂ ಮಾಡಬೇಡಿ ನೀವು. ಆಣೆಯಿಟ್ಟು ಹೇಳ್ತೇನೆ; ಯಾವುದಕ್ಕೂ ನಿಮ್ಮ ಹತ್ರ ನಾನು ಬರಲ್ಲ. ಈಗಿರೋ ಖದೀಮ ನಾನು ಹೇಳಿದ್ದನ್ನು ನನಗೆ ಮಾಡಿ ಕೊಡ್ತಾ ಇಲ್ವಾ?’

ತನ್ನ ಮಾತಿನಿಂದ ವೀರಣ್ಣ ಅತ್ಯಂತ ನೊಂದು ಹೊರಟುಹೋಗುತ್ತಾನೆಂದು ತಿಳಿದದ್ದು ಸುಳ್ಳಾಗಿತ್ತು. ಸರಸವಾದ ಧಾಟಿ ಬಿಡದೆ ವೀರಣ್ಣ ಮಾತಾಡಿದ್ದ. ಕೃಷ್ಣಪ್ಪನೂ ನುರಿತ ರಾಜಕಾರಣಿಯಾದ್ದರಿಂದ ವೀರಣ್ಣನೆಷ್ಟು ಗಟ್ಟಿಯೆಂದು ತಿಳಿಯುವ ಆಸೆಯಿಂದ ಕೇಳಿದ:

‘ನಾನು ಚೀರ್ಫ ಆಗಿರೋ ತನಕ ನಿಮಗೆ ಕಂಟ್ರಾಕ್ಟ್‌ಸಿಗಲ್ಲ.’

‘ಬೇಡ’ ವೀರಣ್ಣ ಸರಳವಾಗಿ ಹೇಳಿದ: ‘ನೀವು ಮಾಡೋರಲ್ಲಾಂತ್ಲೂ ನನಗೆ ಗೊತ್ತಿಲ್ವ? ನಾನು ಸಾಕಷ್ಟು ದುಡ್ಡು ಮಾಡಿದೀನಿ ಗೌಡರೆ. ಈಗ ನಿಮ್ಮಂಥ ಒಬ್ಬ ದೊಡ್ಡ ಮನುಷ್ಯನ್ನ ಆ ಸ್ಥಾನದಲ್ಲಿ ಕೂರಿಸೋದರಲ್ಲೇ ನನಗೊಂದು ಸುಖವಿದೆ. ನೀವು ಇದನ್ನ ಅರ್ಥಮಾಡಿಕೊಳ್ಳದೆ ಸಣ್ಣತನ ಮಾಡಿದರೆ ನನಗೆ ದುಃಖವಾಗುತ್ತೆ.’

‘ನೋಡಿ ನನ್ನ ಆರೋಗ್ಯ ಸರಿಯಿಲ್ಲ. ಈ ಖಾಹಿಲೇನ್ನೂ ನಾನು ಉಳಿದವರ ಸಹಾನುಭೂತಿ ಗಳಿಸೋಕೆ ಉಪಯೋಗಿಸ್ತೀದೇನೊ ಅಂತ ಒಂದೊಂದು ಸಲ ಅನುಮಾನವಾಗುತ್ತೆ.’

‘ಬಿಡಿ ಗೌಡರೆ. ನಾನು ಹೇಳೋದಿಷ್ಟು: ನೀವು ನಮ್ಮ ಖದೀಮನ ಜೊತೆ ಅಧಿಕಾರ ಹಂಚಿಕೋಬೇಕಾಗತ್ತೆ. ಆದ್ದರಿಂದ ನಿಮ್ಮ ಮನಸ್ಸಿನಲ್ಲಿರೋದನ್ನೆಲ್ಲ ಈಗ ಮಾಡ್ಲಿಕ್ಕೆ ಆಗಲ್ಲ. ಆದರೆ ಒಂದೆರಡು ಮಾಡಬಹುದು. ನೀವು ನುರಿತ ರಾಜಕಾರಣಿ. ಕೂತು ಮಾತಾಡಿ ಕೈಲಾದ್ದನ್ನು ಮಾಡಿ ಮುಂದಿನ ಚುನಾವಣೆ ಹೊತ್ತಿಗೆ ಇನ್ನಷ್ಟು ಬಲವಾಗಿ.’

‘ನನ್ನನ್ನು ಮುಂದಿಟ್ಟುಕೊಂಡರೆ ಆ ಕಡೇಂದ ಹತ್ತು ಜನ ಈ ಕಡೆ ಬಂದಾರು ಅನ್ನೋದು ನಿಜವ?’

‘ಹಾಗಿಲ್ದೆ ಇದ್ದರೆ ನಮ್ಮ ಖದೀಮನೆ ನಿಮ್ಮನ್ನ ಸೂಚಿಸ್ತಾನ? ಈಗಲೂ ಅವ ಪ್ರಧಾನಿ ಜೊತೆ ಸೇರಿಕೊಳ್ಳೋಕೆ ಒಳಗಿಂದೊಳಗೆ ಪ್ರಯತ್ನಿಸ್ತ ಇದಾನೆ.’

ಕೃಷ್ಣಪ್ಪ ಸಿಗರೇಟನ್ನು ಆರಿಸಿದ, ವೀರಣ್ಣ ಎದ್ದುನಿಂತು ಹೇಳಿದ:

‘ನಂಬಿಕೆ ಬಂತು ತಾನೆ? ಇನ್ನು ನಾನು ಹೋಗ್ತೀನಿ. ಏನಾರೂ ಬೇಕಾದ್ರೆ ಹೇಳಿ ಕಳಿಸಿ.’

ಈ ಸಂಭಾಷಣೆಯ ನಂತರ ಕೃಷ್ಣಪ್ಪ ಆ ಬಗ್ಗೆ ಯಾರ ಹತ್ತಿರವೂ ಮಾತಾಡಲಿಲ್ಲ. ಸಾಮಾನ್ಯವಾಗಿ ಹುರುಪಿನಲ್ಲಿರುತ್ತಿದ್ದ. ಮಾರನೇ ಬೆಳಿಗ್ಗೆ ಜ್ಯೋತಿ ಬಂದು ಗೌರಿಯ ಸಹಾಯದಿಂದ ತನ್ನನ್ನು ಬಿಸಿನೀರು ತುಂಬಿದ ತೊಟ್ಟಿಯಲ್ಲಿಳಿಸಿದಳು. ಕಾಚವನ್ನೂ ಬನೀನನ್ನೂ ಗೌರಿ ಇದ್ದುದರಿಂದ ಬಿಚ್ಚದೆ ಅವನು ತೊಟ್ಟಿಯಲ್ಲಿಳಿದ. ನೀರಿನಲ್ಲಿ ಎಡಗೈ ಎಡಗಾಲನ್ನು ಹೆಚ್ಚು ಶ್ರಮವಿಲ್ಲದೆ ಆಡಿಸಬಹುದೆಂದು ಕಂಡು ಕೃಷ್ಣಪ್ಪನಿಗೆ ಖಷಿಯಾಯಿತು. ನೀರಿನ ಥೆರಪಿಯಲ್ಲಿ ನುರಿತಿದ್ದ ಗೌರಿ ಜ್ಯೋತಿಯನ್ನು ಕಳಿಸಿದಳು. ಇದಾದ ಮೇಲೆ ಕೃಷ್ಣಪ್ಪನ ಬೆಳಗಿನ ವಿಸರ್ಜನೆಗಳಿಗೆ ಸಹಾಯ ಮಾಡಲು ಮಾತ್ರ ಜ್ಯೋತಿ ಬರುತ್ತಿದ್ದಳು.

ತನ್ನ ಎದುರಿನಲ್ಲಿ ಕಾಚ ಬನೀನುಗಳನ್ನು ಬಿಚ್ಚಲು ಮುಜುಗರ ಪಡುವ ಕೃಷ್ಣಪ್ಪನನ್ನು ನೋಡಿ ಗೌರಿ ನಕ್ಕಳು. ಕೃಷ್ಣಪ್ಪ ನಾಚಿದ. ಮಾರನೇ ದಿನ ಬನೀನನ್ನು ಬಿಚ್ಚಲು ಸಮ್ಮತಿಸಿದ.

ಗೌರಿಯ ಕೈ ತನ್ನ ಕೈಕಾಲುಗಳ ಮೇಲೆ ಓಡಾಡುವಾಗ ಅದು ಕೇವಲ ಚಿಕಿತ್ಸಕ ಸ್ಪರ್ಶವೆನ್ನಿಸಲಿಲ್ಲ. ಆ ಸ್ಪರ್ಶವನ್ನು ಅವಳು ಕೂಡ ಬಯಸಿದಂತೆ ಕಂಡು ಕೃಷ್ಣಪ್ಪನಿಗೆ ರೋಮಾಂಚನವಾಯಿತು. ಮೈಬಿಸಿಯಾಯಿತು. ಖಾಯಿಲೆ ಬಿದ್ದ ಮೇಲೆ ಪ್ರಥಮ ಬಾರಿಗೆ ಈ ಅನುಭವವಾಗಿ ಅವನು ಗಲಿಬಿಲಿಗೊಳಗಾದ.

ಕೃಷ್ಣಪ್ಪನನ್ನು ನೀರಿನ ತೊಟ್ಟಿಯಿಂದ ಮೇಲಕ್ಕೇಳಿಸಿಕೊಂಡು ವೀಲ್‌ಚೇರಿನ ಮೇಲೆ ಕೂರಿಸಿ ಗೌರಿ ತೋಟದಲ್ಲಿ ತಳ್ಳಿಕೊಂಡು ಹೋಗುವಳು. ತಾನು ಪ್ಯಾಂಟ್ ತೊಟ್ಟಾಗ ಕೃಷ್ಣಪ್ಪ ಹೆಚ್ಚು ಆರಾಮವಾಗಿರುವುದನ್ನು ಅವಳು ಗಮನಿಸಿ, ಪ್ಯಾಂಟ್ ಜುಬ್ಬಗಳನ್ನು ಹಾಕಿಕೊಂಡು ಕೂದಲನ್ನು ಕರ್ಚೀಪಿನಿಂದ ಬಿಗಿದಿರುತ್ತಿದ್ದಳು. ತೋಟದಲ್ಲಿ ಕೃಷ್ಣಪ್ಪನನ್ನು ಕೂರಿಸಿ, ಅವನಿಗೆ ಕೂತಲ್ಲೇ ವ್ಯಾಯಾಮ ಮಾಡಲು ಸಹಾಯ ಮಾಡುತ್ತ, ಅವಳು ತನಗೆ ಪ್ರಿಯವಾದ ಕಾದಂಬರಿಗಳನ್ನು ಅವನಿಗೆ ಓದುವಳು. ಕೃಷ್ಣಪ್ಪ ತಾನು ದನಕಾಯುತ್ತಿದ್ದಾಗಿನ ದಿನಗಳನ್ನು ಅವಳಿಗೆ ಚಿತ್ರವತ್ತಾಗಿ ಹೇಳುವನು. ಅಶ್ವತ್ಥದ ಮರದ ಬುಡದಲ್ಲಿ ಕೂತಾಗ ಎದುರಿನ ಪೇರಳೆ ಮರಕ್ಕೆ ಅತಿಥಿಗಳಾಗಿ ಬರುತ್ತಿದ್ದ ಹಕ್ಕಿಗಳನ್ನೆಲ್ಲ ವರ್ಣಿಸುವನು. ಬೆಳಗಿನ ಕೆಲಸ ಮುಗಿಸಿದ್ದರೆ ತಾಯಿಯೂ ಅಲ್ಲಿ ಬಂದು ಕೂತಿರುವಳು. ಒಮ್ಮೆ ಗೌರಿ ಏನೋ ಕೆಲಸಕ್ಕೆ ಎದ್ದು ಹೋದಾಗ ಅವಳು,

‘ನೀನು ಇವಳನ್ನೇ ಯಾಕೆ ಮದುವೆಯಾಗಲಿಲ್ಲ?’

ಎಂದಳು. ಈ ಪ್ರಶ್ನೆಯಿಂದ ಕೃಷ್ಣಪ್ಪ ತಬ್ಬಿಬ್ಬಾದ. ತಾಯಿ ಬಿಡಲಿಲ್ಲ. ಮುಗ್ಧವಾಗಿ ಅಂದಳು:

‘ನಮ್ಮ ಕುಟುಂಬದಲ್ಲಿ ಎಷ್ಟೋ ಜನ ಎರಡು ಹೆಂಡಿರನ್ನ ಮಾಡಿಕೊಂಡಿದ್ದಿಲ್ಲವ? ಅದಕ್ಕೇನಂತೆ?’

‘ಅಮ್ಮ ಹಾಗೆಲ್ಲ ಗೌರಿ ಹತ್ತ ಮಾತಾಡಿಬಿಡಬೇಡ’

ಕೃಷ್ಣಪ್ಪ ರೇಗಿ ಹೇಳಿದ.

‘ನಾನ್ಯಾಕೆ ಮಾತಾಡ್ಲೋ, ನೀನು ಬೆಳೆದು ದೊಡ್ಡವನಾಗಿಲ್ವ? ಸುಮ್ಮನೇ ಕೊರಗೋಕಿಂತ ಆಸೆಯಿದ್ದರೆ ಮಾಡಿಕೊ ಅಂದೆ ಅಷ್ಟೆ.’

ತಾಯಿಯ ಸರಳವಾದ ಮಾತು ಅವನನ್ನು ಮುಟ್ಟಿತು. ಆದರೆ ಗೌರಿಗೆ ತನ್ನನ್ನು ಬಿಟ್ಟು ಬೇರೆ ಬದುಕಿದೆ ಎಂದು ಗೊತ್ತಿದ್ದರಿಂದ ಆ ದಿಕ್ಕಿನಲ್ಲಿ ತನ್ನ ಯೋಚನೆಯನ್ನವನು ಹರಿಯಬಿಡಲಿಲ್ಲ.

ಬೆರಳುಗಳು ಈಗ ರಬ್ಬರ್‌ಚೆಂಡನ್ನು ಒತ್ತಬಲ್ಲವು. ಕಾಲನ್ನು ಎತ್ತುವುದು ಕೂಡ ಕ್ರಮೇಣ ಸಾಧ್ಯವಾಗುತ್ತಿದೆ. ಇನ್ನೊಂದು ತಿಂಗಳಲ್ಲೇ ಕ್ರಚ್‌ಗಳ ಮೇಲೆ ನಡೆಯುವುದು ಸಾಧ್ಯವಾಗುತ್ತದೆಂದು ಗೌರಿ ಹೇಳುತ್ತಿದ್ದಳು. ಆದರೆ ಅವಳಿಗಿರುವ ರಜೆ ಒಂದು ತಿಂಗಳು ಮಾತ್ರ. ಆಮೇಲೆ ಹೋಗುವಳೆಂದು ಕೃಷ್ಣಪ್ಪನಿಗಾಗುತ್ತಿದ್ದ ಭಯ ಗಮನಿಸಿ ಗೌರಿ ತಾನು ಹೋಗುವ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ.

ಹಗಲು ಸುಂದರವಾಗಿ ಹಿತವಾಗಿ ಇರುವುದು. ರಾತ್ರೆ ನಕ್ಷತ್ರಗಳು ಖಚಿತವಾಗಿ ಮೂಡಿ ಆಕಾಶ ಸ್ಪಷ್ಟವಾದ ನೀಲಿಯಲ್ಲಿ ಶೋಭಿಸುವುದು. ಒಮ್ಮೊಮ್ಮೆ ಗೌರಿ ಮತ್ತು ಕೃಷ್ಣ್ಪ ಗಾಢವಾಗಿ ಮಾತಾಡುವಾಗ ನವಿಲುಗಳು ಗರಿಗಳನ್ನು ಕೊಡೆಯಂತೆ ಬಿಚ್ಚಿ ನಿಗರಿಸಿಕೊಂಡು ಗಣಬಂದವರಂತೆ ತತ್ತರ ಅದುರಿಸುತ್ತ ಕುಣಿಯುವುವು. ತಾಯಿ ಬರೀ ಹಸು ಹಾಲು ಹಣ್ಣುಗಳ ಬಗ್ಗೆ ಮಾತಾಡುವಳು. ಕಡುಬು ಮಾಡಲು ಹಲಸಿನ ಹಣ್ಣಿಲ್ಲವೆಂದು ದಿನಕ್ಕೊಂದು ಬಾರಿಯಾದರೂ ಕೊರಗಿ, ಮಗನ ಬಾಯಲ್ಲಿ ನೀರೂರುವಂತೆ ಮಾಡುವಳು. ನಾಗೇಶ ಸೀರಿಯಸ್ಸಾಗಿ ಮೇಜಿನ ಎದುರು ಕೂತು ಕೃಷ್ಣಪ್ಪನ ಜೀವನ ಚರಿತ್ರೆಯನ್ನು ಬಣ್ಣಕಟ್ಟಿ ಬರೆಯುತ್ತ ಬರೆದದ್ದನ್ನು ಓದುತ್ತ ಕೃಷ್ಣಪ್ಪನಿಗೆ ನಾಚಿಕೆಯಾಗುವಂತೆ ಮಾಡುವನು.

ಕೃಷ್ಣಪ್ಪ ಅನೇಕ ಬಾರಿ ಒಂದೆರಡು ವಾಕ್ಯಗಳಲ್ಲಿ ತಾನು ಗೌರಿಗೆ ಹೇಳಬೇಕೆಂದಿರುವುದನ್ನು ರಿಹರ್ಸ್‌ಮಾಡಿಕೊಳ್ಳುವನು. ‘ಗೌರಿ ನಾನು ನಿನ್ನ ಪ್ರೀತಿಸ್ತ ಇದ್ದೆ. ಆದರೆ ವಾರಂಗಲ್  ಠಾಣೆಯಲ್ಲಿ ನರಕದ ಅನುಭವವಾಗಿದ್ದರಿಂದ ನಿನ್ನ ಕೇಳಲಾರದೆ ಹೋದೆ.’ ಹೀಗೆ ಹೇಳಿದರೆ ಏನನ್ನೂ ಹೇಳಿದಂತಾಗುವುದಿಲ್ಲವೆಂದು ಸುಮ್ಮನಾಗಿ ಬಿಡುವನು. ಗೌರಿ ಮಧ್ಯವಯಸ್ಸಿನ ಪ್ರೌಢೆಯಾಗಿದ್ದರೂ ಮತ್ತೆ ತನ್ನ ದಳಗಳನ್ನೆಲ್ಲ ಮಡಿಸಿಕೊಂಡು ಮಗ್ಗಿನಂತೆ ಅವನಿಗೆ ಕಾಣುವಳು. ಕ್ರಮೇಣ ಇಬ್ಬರೂ ತಮ್ಮ ಹಿಂದಿನ ದಿನಗಳ ಬಗ್ಗೆ ಮಾತಾಡುವುದನ್ನು ಬಿಟ್ಟರು. ಒಂದು ದಿನ ಬೆಳಿಗ್ಗೆ ಬಿದಿರು ಹಿಂಡಲಿನ ಕೆಳಗೆ ಮಾತಾಡದೆ ಕೃಷ್ಣಪ್ಪ ಕೂತಿದ್ದ. ಗೌರಿಯೂ ಏನೋ ಓದುತ್ತ ಕೂತಿದ್ದಳು. ತಾಯಿ ಅಡುಗೆ ಮನೆಯಲ್ಲಿ ಪತ್ರಡೆ ಮಾಡುತ್ತಿದ್ದಳು. ಕೃಷ್ಣಪ್ಪ ಇದ್ದಕ್ಕಿದ್ದಂತೆ ಹಾಡಲು ಶುರು ಮಾಡಿದ, ಗೌರಿ ವಿಸ್ಮಯದಿಂದ ಕಣ್ಣು ಮುಚ್ಚಿ ಹಾಡುವ ಕೃಷ್ಣಪ್ಪನನ್ನು ನೋಡುತ್ತ ಕೂತಳು. ಅಲ್ಲಲ್ಲಿ ಬೆಳ್ಳಗಾದ ಕ್ರಾಪು ಗಡ್ಡಗಳು ಅವನ ಮುಖದಲ್ಲಿ ಶಾಂತವಾದ ಕಳೆ ಕಂಡು ಅವಳಿಗೆ ಸಂತೋಷವಾಯಿತು. ಕೂತಲ್ಲಿಂದಲೇ ಬೆಳೆದಿದ್ದ ಹಸಿರಾದ ಗರಿಕೆಗಳನ್ನೂ ಪುಟಾಣಿ ಹೂಗಳನ್ನೂ ಆಯ್ದಳು. ಕೃಷ್ಣಪ್ಪ ನಿಲ್ಲಿಸಿದ ಮೇಲೆ ತಾನೂ ಮೆದುವಾಗಿ ಹಾಡತೊಡಗಿದಳು – ಅವನಿಗೆ ಪ್ರಿಯವಾದ ಕಬೀರ್ ಹಾಡುಗಳನ್ನ.

ಒಂದು ದಿನ ಕೃಷ್ಣಪ್ಪನ ವೀಲ್ ಚೇರನ್ನು ಸ್ವಿಮಿಂಗ್ ಪೂಲ್ ಹತ್ತಿರ ನಿಲ್ಲಿಸಿ ತನ್ನ ಬಟ್ಟೆಯನ್ನು ಬಿಚ್ಚಿ ಬಿಕನಿಯಲ್ಲಿ ನಿಂತಳು. ಅವಳು ಸಹಜವಾಗಿ ಹೀಗೆ ಬಟ್ಟೆ ಬಿಚ್ಚಿದಾಗ ಅವನಿಗೆ ಗೊಂದಲವಾಯಿತು. ಅವಳು ಎತ್ತರದಲ್ಲಿ ನಿಂತು, ಕೈಗಳನ್ನು ಚಾಚಿ, ತನ್ನ ಸಪುರವಾದ ದೇಹವನ್ನು ಹೆದೆಯೇರಿಸಿದ ಬಾಣದಂತೆ ಕ್ಷಣ ನಿಲ್ಲಿಸಿ ನೀರಿಗೆ ಚಿಮ್ಮಿದಳು. ನೀರಿನಲ್ಲಿ ಮಾಯವಾಗಿ ಮತ್ತೆ ಕಪ್ಪು ಕೂದಲು, ಬೆನ್ನು, ಸಣ್ಣ ಸೊಂಟ, ತೋರವಾದ ನಿಂತಬ, ಪುಟ್ಟ ಪಾದಗಳಾಗಿ ನೀರಲ್ಲಿ ಕ್ರಮೇಣ ಕಾಣಿಸಿಕೊಂಡು ಚಲಿಸಿದಳು. ಕೃಷ್ಣಪ್ಪನ ಇಡೀ ದೇಹ ಅವಳ ದೇಹದ ಚಲನೆಯನ್ನು ಕಲ್ಪನೆಯಲ್ಲಿ ಅನುಕರಿಸಿತು. ಬಾಲ್ಯದಲ್ಲಿ ತುಂಬ ಕುಶಲ ಈಜುಗಾರನಾಗಿದ್ದ ಕೃಷ್ಣಪ್ಪ ಮಾರುಗೈಯಲ್ಲಿ ತಾನು ಮಾರುಗೈಯಾಗಿ, ಅವಳ ಬಡಿಯುವ ತಳ್ಳುವ ಕಾಲುಗಳಲ್ಲಿ ತನ್ನ ಕಾಲುಗಳಾಗಿ ಅವಳ ಚಲನೆಯಲ್ಲಿ ತನ್ಮಯನಾದ. ತನ್ನರ್ಧ ದೇಹ ಜಡವಾಗಿದೆ ಎಂಬುದೆ ಒಂದು ಕ್ಷಣ ಅವನಿಗೆ ಮರೆತುಹೋಗಿತ್ತು. ಗೌರಿ ನೀರಿನಿಂದೆದ್ದು ಅವನೆಡೆ ಬಂದಳು. ಅವಳ ನುಣುಪಾದ ಬಿಗಿಯಾದ ಚರ್ಮದ ಮೇಲೆ ನೀರಿನ ಬಿಂದುಗಳು ಮಿನುಗುತ್ತಿದ್ದವು. ಅವಳ ಕೂದಲಿಂದ ನೀರು ಜೊಟ್ಟುತ್ತಿತ್ತು. ಅವಳ ಮೈಮೇಲಿನ ತಂಪು ತನ್ನದೇ ಎನ್ನಿಸಿ ಅವನು ನಡುಗಿದ. ಅವಳ ಚೈತನ್ಯ ಪೂರ್ಣವಾದ ದೇಹ ತನ್ನ ಜಡವಾದ ದೇಹಕ್ಕೆ ಹೇಸೀತೆಂದು ಭಯವಾಯಿತು. ಅಸೂಯೆಯಿಂದ ಅವನು ಕಣ್ಣು ಮುಚ್ಚಿದ. ಗೌರಿಯ ಒದ್ದೆಯಾದ ಕೈಗಳು ತನ್ನ ಕೆನ್ನೆಕತ್ತುಗಳನ್ನು ಸವರುತ್ತಿದ್ದುದನ್ನು ಅರಿತು ಕೃಷ್ಣಪ್ಪ ಚಕಿತನಾಗಿ ಕಣ್ಣುಬಿಟ್ಟ. ‘ನಿನಗೆ ಬಾತ್‌ನಲ್ಲಿ ಮತ್ತೆ ಕೂರಬೇಕೆನ್ನಿಸುತ್ತ?’ ಎಂದಳು. ಅವಳು ಏಕವಚನದಲ್ಲಿ ಆಡಿದ ಮಾತಿನಿಂದ ಅವರಿಗೆ ರೋಮಾಂಚನವಾಯಿತು. ಗೌರಿ ವೀಲ್ ಚೇರನ್ನು ಬಿಕನಿಯಲ್ಲೇ ತಳ್ಳಿಕೊಂಡು ಹೋಗಿ, ಅವನ ರೂಮಿನ ಬಾಗಿಲು ಹಾಕಿಕೊಂಡು, ವಿಶಾಲವಾದ ತೊಟ್ಟಿಯಲ್ಲಿ ಬಿಸಿನೀರು ತುಂಬಿಸಿ ಕೃಷ್ಣಪ್ಪನ ಬಟ್ಟೆಯನ್ನು ಬಿಚ್ಚಿದಳು. ಅವನಿಗಿಷ್ಟು ದಿನವೂ ಅಪರಿಚಿತವಾಗಿದ್ದ ಗಾಢವಾದ ಸ್ವರದಲ್ಲಿ, ‘ಎಲ್ಲವನ್ನೂ ಬಿಚ್ತೀನಿ’ ಎಂದು ಅವನ ಕಾಚವನ್ನೂ ಬಿಚ್ಚಲು ಹೋದಳು. ಕೃಷ್ಣಪ್ಪ ಹೆದರಿದವನಂತೆ ಬೇಡವೆನ್ನಲು ಹೋಗಿ ನಿಸ್ಸಹಾಯಕನಾಗಿ ಸುಮ್ಮನಿದ್ದ. ತನ್ನ ರೋಗಗ್ರಸ್ಥವಾದ ದೇಹದ ಬೆತ್ತಲೆಯಿಂದ ಅವಳು ಹೇಸದಿದ್ದಾಗ ಅವನಲ್ಲಿ ಕೃತಜ್ಞಭಾವ ಮೂಡಿತು. ಅವಳ ಕಣ್ಣುಗಳು ಏನನ್ನೋ ನೋಡದೆ ಆವೇಶದಲ್ಲಿದ್ದಂತೆ ಅನ್ನಿಸಿತು. ಅವಳ ದೇಹ ಕೌಶಲದಲ್ಲಿ ತನ್ನ ದೇಹಕ್ಕೆ ಆತು, ಅದನ್ನೆತ್ತಿ ನೀರಿನಲ್ಲಿಳಿಸಿತು. ನಂತರ ಅವಳೂ ಅದೇ ತೊಟ್ಟಿಯಲ್ಲಿಳಿದು ತನ್ನ ಬಟ್ಟೆಯನ್ನು ಬಿಚ್ಚಿ ಎಸೆದಳು. ನೀರಿನಲ್ಲಿ ಹಗುರವಾದ ತನ್ನ ದೇಹವನ್ನು ಹಗುರಾದ ಅವಳ ದೇಹ ಅಪ್ಪಿತು. ಕೃಷ್ಣಪ್ಪನ ಕಣ್ಣುಗಳಲ್ಲಿ ನೀರು ಉಕ್ಕಿ ಅವನ ದೃಷ್ಟಿ ಮಸುಕಾಯಿತು.

ತುಂಬ ಹೊತ್ತು ಕೃಷ್ಣಪ್ಪನನ್ನು ತಬ್ಬಿಕೊಂಡಿದ್ದ ಗೌರಿ ಎದ್ದು ಮೃದುವಾದ ಬಿಳಿಯ ಟವಲ್ಲುಗಳನ್ನು ತೊಟ್ಟಿಯ ಕೆಳಗೆ ಹಾಸಿದಳು. ನಂತರ ಕೃಷ್ಣಪ್ಪನನ್ನು ಎಬ್ಬಿಸಿ ಅದರ ಮೇಲೆ ಮಲಗಿಸಿ ಅವನನ್ನು ತಬ್ಬಿ ತಾನೂ ಮಲಗಿದಳು. ಅವಳ ತುಟಿ ಮೊಲೆ ತೊಡೆಗಳನ್ನು ಅವನಿಗೆ ಬೆಸೆಯುತ್ತ ಒತ್ತಿದಳು.

‘ನನಗೀಗ ಆಗುತ್ತಿಲ್ಲ ಗೌರಿ’ ಎಂದ, ಆಳವಾದ ಅವನದಲ್ಲವೆನ್ನಿಸುವ ಸ್ವರದಲ್ಲಿ; ಹತಾಶೆಯಲ್ಲಿ.

ಗೌರಿ ಗಾಢವಾದ ಮೌನದ ಮಡುವಾಗಿದ್ದಳು. ಮೊಳೆಯುವ ಬೀಜವನ್ನು ತನ್ನ ಬೆಚ್ಚನೆಯ ಸಹನೆಯ ಕತ್ತಲಲ್ಲಿ ಮುಚ್ಚಿಟ್ಟುಕೊಳ್ಳುವ ಮಣ್ಣಿನಂತಿದ್ದಳು. ಅವಳ ಬೆರಳುಗಳು ಕೃಷ್ಣಪ್ಪನ ಇಡೀ ದೇಹದ ಮೇಲೆ ಆಡಿದುವು. ಚಿಲುಮೆಗಳನ್ನು ತಟ್ಟಿ ಮುಟ್ಟಿ ಎಬ್ಬಿಸುವಂತೆ ಸಂದಿ ಮೂಲೆಗಳಲ್ಲಿ ಹುಡುಕಿದವು. ಅವಳ ಕಣ್ಣುಗಳು ಏಕಾಗ್ರ ತಪಸ್ಸಿನಲ್ಲಿ ಎಂಬಂತೆ ಮುಚ್ಚಿದ್ದುವು. ಬೆಚ್ಚಗೆ ಜಿನುಗುತ್ತಿದ್ದ ಅವಳ ಯೋನಿ ಅವನ ಹೊಟ್ಟೆ, ತೊಡೆ, ಪಕ್ಕೆ ರಟ್ಟೆ, ಕೆನ್ನೆಗಳನ್ನು ಮೃದುವಾಗಿ ಒತ್ತುವಂತೆ ಹಗುರಾಗಿ ಮೈಮೇಲೆ ಹರಿದಾಡಿದಳು. ಅವಳ ತುಟಿಗಳು ಅವನ ಮೈಯನ್ನೆಲ್ಲ ಹಿತವಾಗಿ ಕಚ್ಚುತ್ತ ಮೇಲಿನಿಂದ ಕೆಳಗಿಳಿದವು. ತನಗೆ ಕಣ್ಣುಗಳಿವೆ, ಕಿವಿಯಿದೆ, ಕತ್ತಿದೆ, ಹೊಟ್ಟೆಯಿಂದ, ಲಿಂಗವಿದೆ ಎಂದು ಅನ್ನಿಸುವಂತೆ ಅವನನ್ನು ಮೊಳೆಯಿಸುತ್ತ ಅವಳ ಉಸಿರು ಅವನ ಇಡೀ ಮೈಯ ಮೇಲೆ ಕಚಕುಳಿಯ ಸಂದುಗಳಲ್ಲಿ ಆಡಿತು. ಮೈಯೆಲ್ಲ ಬಿಸಿಯಾಗಿ ಚಿಗುರುತ್ತ ಪುಟಿಯುತ್ತ ಹೋದಂತೆ ಅವನು ಉದ್ರೇಕಗೊಂಡಾಗ ಅಂಗಾತ್ತನೆ ಕೈಚೆಲ್ಲಿ ಮಲಗಿದ ಅವನನ್ನು ಅವಳು ಮೇಲಿನಿಂದ ಪ್ರವೇಶಿಸಿದಳು, ಅವಳ ನಿಧಾನವಾದ ಚಲನೆ ಆಲಾಪದಂತಿತ್ತು. ಕೃಷ್ಣಪ್ಪನ ಕಣ್ಣುಗಳಲ್ಲಿ ನೀರೊಡೆದು ಹರಿಯಿತು, ‘ಅಮ್ಮ’ ಎಂದ. ಗೌರಿ ಹಗುರಾಗಿ ಅವನ ಮೇಲೆ ತನ್ನ ಮೈಯನಿಟ್ಟು ಮಲಗಿದಳು. ಕೃಷ್ಣಪ್ಪ ಗಾಢವಾಗಿ ನಿದ್ದೆ ಹೋದ. ಮತ್ತೆ ಎಚ್ಚರಾದಾಗ ಅದೇನು ಕನಸೋ ಎಂದು ಸೋಜಿಗಪಡುತ್ತ ತಾನು ಟವಲ್ ಮೇಲೆ ಮಲಗಿರುವುದನ್ನೂ ಗೌರಿ ತನ್ನ ಪಕ್ಕದಲ್ಲಿ ಬೆತ್ತಲೆಯಾಗಿ ಸಿಗರೇಟು ಸೇದುತ್ತ ಕೂತಿರುವುದನ್ನೂ ಗಮನಿಸಿದ. ಅವಳ ಮುಖ ನೋಡಿದ: ಅವಳು ಕರುಣೆಯಲ್ಲಿ ಮಾಡಿದ ಚಿಕಿತ್ಸೆಯೆ? ಅನುಮಾನವಾಯಿತು.

ತಾಯಿ ಅವನ ರೂಮಿನ ಪಕ್ಕದ ರೂಮಲ್ಲಿ ಮಲಗುತ್ತಿದ್ದಳು. ಸಾಯಂಕಾಲ ಗೌರಿ ಮತ್ತು ಕೃಷ್ಣಪ್ಪ ಜಿಂಕೆಗಳಿಗೆ ಕೈಯಿಂದ ಹುಲ್ಲು ತಿನ್ನಿಸುತ್ತಿದ್ದಾಗ ಅವಳು ಬಂದು ತಾನು ಗೌರಿಯ ರೂಮಲ್ಲಿ ಮಲಗುತ್ತೇನೆಂದೂ ಗೌರಿ ತನ್ನ ರೂಮಿಗೆ ಬದಲಾಯಿಸಿಕೊಳ್ಳಬೇಕೆಂದೂ ಹೇಳಿದಳು. ಉತ್ತರಕ್ಕೆ ಕಾಯದೆ ಹೋಗಿಬಿಟ್ಟಳು. ಕೃಷ್ಣಪ್ಪ ನಸುನಗುತ್ತ ಗೌರಿಯನ್ನು ನೊಡಿದ.

ರಾತ್ರೆ ಕೃಷ್ಣಪ್ಪನ ಪಕ್ಕದಲ್ಲಿ ಗೌರಿ ಮಲಗಿದಳು. ಅವಳ ದೇಹದ ಕಾವಿನಲ್ಲಿ ಕೃಷ್ಣಪ್ಪ ಗಾಢವಾಗಿ ನಿದ್ದೆ ಮಾಡಿದ. ಬೆಳಿಗ್ಗೆ ಬಂದ ಜ್ಯೋತಿ ಕೃಷ್ಣಪ್ಪನಲ್ಲಾದ ಮಾರ್ಪಾಟನ್ನು ಗಮನಿಸಿದಂತೆ ಕಂಡಿತು.