***

ಎಲ್ಲರೂ ನಿರೀಕ್ಷಿಸುತ್ತಿದ್ದಂತೆ ದೇಶಾದ್ಯಂತ ಆಳುವ ಪಕ್ಷ ಒಡೆದುಕೊಂಡಿತು. ರಹಮಾನ್ ಮತ್ತು ನಾಗರಾಜ್ ಕೃಷ್ಣಪ್ಪನನ್ನು ನೋಡಲು ಬಂದರು. ನಾಗರಾಜ್ ಚಿಂತಾಕ್ರಾಂತನಾಗಿದ್ದ. ನಾವು ಪ್ರಧಾನಿಯ ಸರ್ವಾಧಿಕಾರದ ವಿರುದ್ಧ ಸದ್ಯದಲ್ಲಿ ದೇಶದ ಮುಖ್ಯಮಂತ್ರಿಗೆ ಪರಿಮಿತವಾದ ಬೆಂಬಲ ಕೊಡುವುದು ಸರಿಯೆಂದ. ಒಡೆದುಕೊಂಡ ಪಕ್ಷ ತಮ್ಮ ನಾಯಕತ್ವದಲ್ಲೇ ಮಂತ್ರಿಮಂಡಳ ಪುನರ್‌ರಚಿತವಾಗಬೇಕೆಂದು ರಾಜ್ಯಪಾಲರನ್ನು ಕೇಳಿಕೊಂಡಿತ್ತು, ರಹಮಾನ್ ಅತ್ಯಂತ ಸಂದಿಗ್ಧವಾದ ಲೆಖ್ಖಾಚಾರವನ್ನು ಒಂದು ಗಂಟೆ ಮಾಡಿ ಈ ಕಡೆ ಐದು ಜನ ಹಚ್ಚಿರುತ್ತಾರೆಂದು ತೋರಿಸಿದ. ಈಗಾಗಲೇ ಮುಖ್ಯಮಂತ್ರಿ ಕಡೆಯಿಂದ ಹಲವರು ತಮ್ಮ ಜೊತೆ ಸೇರಿದ್ದಾರೆಂದು ಪ್ರಧಾನಿ ಕಡೆಯ ಚಂದ್ರಯ್ಯ ಹೇಳಿಕೆ ಕೊಟ್ಟಿದ್ದ. ಪತ್ರಿಕೆಗಳಲ್ಲಿ ಒಂದು ಪೇಜಲ್ಲಿ ಹೇಳಿಕೆ, ಇನ್ನೊಂದು ಪೇಜಲ್ಲಿ ನಿರಾಕರಣೆಗಳು ಅಚ್ಚಾಗಿ ಗೊಂದಲ ಹುಟ್ಟಿಸುವಂತಿತ್ತು.

ನಾಗರಾಜ್ ಒಂದು ಹೇಳಿಕೆಯನ್ನು ಕೃಷ್ಣಪ್ಪನ ಸಹಿಗೆ ಸಿದ್ಧಪಡಿಸಿ ತಂದಿದ್ದ. ವಾಕರಿಸುತ್ತಲೇ ಅದನ್ನು ಓದಿದ. ತಮ್ಮ ಪಕ್ಷ ಸದ್ಯದ ಮಂತ್ರಿಮಂಡಳವನ್ನು ಬೆಂಬಲಿಸುತ್ತದೆಂದು ಅದು ಹೇಳಿತ್ತು. ಕೃಷ್ಣಪ್ಪ ಅದಕ್ಕೆ ಸಹಿ ಹಾಕಿದ. ರಹಮಾನ್ ಹೇಳಿದ:

‘ಮುಖ್ಯಮಂತ್ರಿ ಪಕ್ಷದಿಂದ ಇನ್ನೂ ಐದು ಜನ ಆ ಕಡೆ ಸೇರಬಹುದು. ನಮ್ಮಡೇಗೆ ಅವರಿಂದ ಜನಾನ್ನ ಪಡಕೊಳ್ಳೋಕೆ ನಿಮ್ಮನ್ನ ಸಿ. ಎಮ್. ಮಾಡಬೇಕಾಗತ್ತೆ. ಕಾಯಾಣ’.

‘ಡಿಸ್‌ಗಸ್ಟಿಂಗ್‌’

ನಾಗರಾಜ್ ಹೇಳಿ ಚಾರ್ಮಿನಾರ್ ಹತ್ತಿಸಿದ:

‘ಈಗಲೇ ದೇಶದಲ್ಲಿ ಅನಾರ್ಕಿಯಿದೆ. ರಾಯಚೂರಲ್ಲಿ ಕಾಲರಾದಿಂದ ಜನ ಸಾಯ್ತಿದ್ದಾರೆ ಅಂತ ಸುದ್ದಿ. ಪ್ರತಿ ನಿತ್ಯ ದರೋಡೆ, ಹೆಂಗಸರ ಮಾನಭಂಗದ ಸುದ್ದಿಗಳಿರುತ್ತವೆ. ನಾವಿನ್ನೂ ಮಂತ್ರಿಮಂಡಳ ರಚಿಸೋ ನಾಟಕ ಆಡಿಕೊಂಡು ಕೂತಿದೀವಿ.’

ರಹಮಾನ್‌ಗೆ ಈಗ ರಾಜಕೀಯ ಚರ್ಚೆಯಲ್ಲಿ ಆಸಕ್ತಿಯಿರಲಿಲ್ಲ. ಕೃಷ್ಣಪ್ಪನ ಮಂತ್ರಿಮಂಡಳದಲ್ಲಿ ಟ್ರಾನ್ಸ್‌ಪೋರ್ಟ್‌ಮಂತ್ರಿಯಾಗುವುದನ್ನು ಅವನು ಆಗಲೇ ಕಲ್ಪಿಸಿಕೊಂಡಿರುವವನಂತೆ ಕಂಡ.

ಕೃಷ್ಣಪ್ಪನ ಹೇಳಿಕೆ ಬಂದ ಮಾರನೇ ದಿನ ಕಿಡಿಪತ್ರಿಕೆಯಲ್ಲಿ ಕೃಷ್ಣಪ್ಪ ಸಂಪೂರ್ಣ ಭ್ರಷ್ಟಾಚಾರದ ತೊತ್ತಾಗಿರುವುದರ ಇನ್ನೊಂದು ಕಥೆಯಿತ್ತು. ವೀರಣ್ಣನ ಫಾರಂನಲ್ಲಿ ಅವನು ಭೋಗದಲ್ಲಿ ಮುಳುಗಿರುವುದಾಗಿಯೂ, ದೇಶದಲ್ಲಿ ಬೆಂಕಿ ಹತ್ತಿ ಉರಿಯುತ್ತಿರುವಾಗ ಅವನ ಕಾಮತೃಪ್ತಿಗೆ ದೆಹಲಿಯ ಬೆಲೆವೆಣ್ಣೊಬ್ಬಳನ್ನು ವೀರಣ್ಣ ಒದಗಿಸಿರುವುದಾಗಿಯೂ ಅಚ್ಚಾಗಿತ್ತು. ತನ್ನ ದೇಹದ ಶುಶ್ರೂಷೆಗಾಗಿ ಹಿಂದೊಮ್ಮೆ ಕ್ರಾಂತಿಕಾರನಾಗಿದ್ದವ ಎಲ್ಲ ಮೌಲ್ಯಗಳನ್ನೂ ಕೈಬಿಟ್ಟಿರುವುದನ್ನು ಛೀಮಾರಿ ಮಾಡಲಾಗಿತ್ತು. ರಿಜಿಸ್ಟರ್ಡ್‌ಅಂಚೆಯಲ್ಲಿ ತನ್ನ ಕೈ ಸೇರಿದ ಈ ಪತ್ರಿಕೆಯನ್ನು ಗೌರಿಗೆ ಕಾಣಿಸಗೊಡದಂತೆ ಸುಡಲು ನಾಗೇಶನಿಗೆ ಕೃಷ್ಣಪ್ಪ ಹೇಳಿದ.

ಗೌರಿಯ ಬೆತ್ತಲೆ ದೆಹವನ್ನು ತಬ್ಬಿಕೊಂಡು ಕೃಷ್ಣಪ್ಪ ತನ್ನ ಗೊಂದಲಗಳನ್ನು ಮರೆಯಲು ಪ್ರಯತ್ನಿಸಿದ. ಎಷ್ಟೇ ಪ್ರಯತ್ನಿಸಿದರೂ ತಾನು ಹಿಂದಕ್ಕೆ ಹೋಗಲಾರೆ ಎನ್ನಿಸಿತು. ಹಾಗೇ ಈ ಸದ್ಯದ ರಾಜಕೀಯದಲ್ಲೂ ಮುಳುಗಲಾರೆ. ಪ್ರತಿನಿತ್ಯ ಅಚ್ಚಾಗುತ್ತಿದ್ದ ಪಕ್ಷಾಂತರದ ಹೇಳಿಕೆ. ಮಾರನೇ ದಿನ ಅದರ ನಿರಾಕರಣೆಗಳನ್ನು ಓದಿ ಹೇಸಿಕೆಯಾಗುತ್ತಿತ್ತು. ವೀರಣ್ಣ ಇದರಲ್ಲೇ ತನ್ಮಯನಾಗಿದ್ದರಿಂದ ಫಾರಂಗೆ ಬರುತ್ತಿರಲಿಲ್ಲ. ಕೃಷ್ಣಪ್ಪನ ಪಕ್ಷದವರು ಮಾತ್ರ ಪದೇ ಪದೇ ಬರುತ್ತಿದ್ದರು. ನಾಗರಾಜನನ್ನು ಬಿಟ್ಟು ಉಳಿದವರು ಹಿಂದಿಗಿಂತ ಹೆಚ್ಚಾಗಿ ಕೃಷ್ಣಪ್ಪನಿಗೆ ತಾರೀಫು ಮಾಡಲು ಶುರುಮಾಡಿದ್ದರು. ಇನ್ನು ಮುಂದೆ ತನಗೆ ಒಬ್ಬನೇ ಒಬ್ಬ ನಿಜವಾದ ಸ್ನೇಹಿತನಿರಲು ಸಾಧ್ಯವಿಲ್ಲೆಂದ ಕೃಷ್ಣಪ್ಪನಿಗೆ ಮನದಟ್ಟಾಯಿತು. ಇನ್ನು ನನ್ನ ಖಾಸಗಿ ಜೀವನ ಕೊನೆಗೊಂಡಂತೆ ಎಂದು ನಿಟ್ಟಿಸಿರಿಟ್ಟು ಗೌರಿಯ ಕೈಗಳಿಗೆ ತನ್ನ ದೇಹವನ್ನೊಡ್ಡಿ ಮಲಗುತ್ತಿದ್ದ. ಗೌರಿ ಮಾತ್ರ ಈ ದಿವಸಗಳಲ್ಲಿ ಹೆಚ್ಚು ಹೆಚ್ಚು ಪ್ರಸನ್ನಳಾಗುತ್ತ ಹೋಗುತ್ತಿರುವಂತೆ ಕಂಡಿತು. ಅವಳು ಮೌನವಾಗಿ ಫಾರಂನಲ್ಲಿ ಎಲ್ಲೆ ಸುಳಿದಾಡುತ್ತಿರಲಿ ಕೃಷ್ಣಪ್ಪನ ಮನಸ್ಸು ಅವಳಲ್ಲಿ ತಂಗಿರುತ್ತಿತ್ತು. ಅವಳ ಮನಸ್ಸಿನ ಗಾಢವಾದ ಪದರುಗಳ ಕೇಂದ್ರದಲ್ಲೇ ತನ್ನನ್ನು ಶುಭ್ರವಾಗಿ ಅವಳು ಕಾದಿಟ್ಟು ಕಾಪಾಡುತ್ತಾಳೆ ಎಂಬ ನಂಬಿಕೆ ಅವನಲ್ಲಿ ಗಟ್ಟಿಯಾಗತೊಡಗಿತು. ತನ್ನ ಪ್ರಾಣದ ಚಿಂತಾಮಣಿಯನ್ನು ಕಾಪಾಡಬಲ್ಲ ಅವಳು ಮತ್ತೆ ದೆಹಲಿಗೆ ಹೋಗಲೇಬೇಕು. ಅವಳ ಜೀವನ ನಡೆಸಲೇಬೇಕು. ತನಗೆ ಅವಳು ಬೇಕಿರುವಷ್ಟು ಅವಳಿಗೆ ತಾನು ಬೇಕಿರಲಿಲ್ಲ. ಏನಿದ್ದರೂ ತನ್ನ ದೇಹ ಬಿರುಕುಬಿಟ್ಟ ಮಡಿಕೆಯಂತೆಯೇ ಎಂಬ ಭಾವನೆಗಳೂ ಕಿಕ್ಕಿರಿದು ಕೃಷ್ಣಪ್ಪ ಸಂಕಟಕ್ಕೊಳಗಾಗುವನು. ಈ ಹೊಲಸು ರಾಜಕೀಯದಿಂದ ನಿವೃತ್ತನಾಗಿಬಿಟ್ಟು, ಬರೆದಿಟ್ಟುಕೊಂಡ ರಾಜೀನಾಮೆ ಕಳಿಸಿ ಹಳ್ಳಿಗೆ ಹೋಗಿಬಿಡುತ್ತೇನೆ ಎಂದುಕೊಳ್ಳುವನು. ಕಾಲ ನಿರಂತರವೆನ್ನಿಸುವ ಮಧ್ಯಾಹ್ನದ ಹೊತ್ತು ಅಶ್ವತ್ಥಮರದ ಬುಡದಲ್ಲಿ ಕೂತು, ಹೊಳೆಯ ಶಬ್ದದ ಹಿನ್ನೆಲೆಯಲ್ಲಿ ದನಗಳ ಕೊರಳಿನ ಗಂಟೆ ಕೇಳಿಸಿಕೊಳ್ಳುತ್ತ ಎದುರಿನ ಪೇರಳೆ ಮರಕ್ಕೆ ಹಕ್ಕಿಗಳು ಬಂದು ತಂಗುವುದನ್ನು ನಿರೀಕ್ಷಿಸುತ್ತಿರುವ ಆಸೆ ಮೊಳೆಯುವುದು. ಉದ್ದನೆಯ ಬಾಲದ ಬಂಗಾರದ ಬಣ್ಣದ ರೆಕ್ಕೆಯ ಅಪರೂಪದ ಪಕ್ಷಿಯೊಂದನ್ನು, ಹೀಗೇ ಕಾಯುತ್ತಿರುವಾಗ ಯಾವತ್ತೋ ಕೆಲವು ಸಾರಿ ಕಂಡಂತೆ ಮತ್ತೆ ಕಾಣಬೇಕೆನ್ನಿಸುವುದು. ಆಗಿ ಹೋದದ್ದು ಮರುಳುವುದಿಲ್ಲವೆಂಬ ತಿಳುವಳಿಕೆ ಜೊತೆ ಈ ಆಸೆ ಹೊಯ್ದಾಡುವುದು.

ಹೀಗಿರುವಾಗ ಒಂದು ದಿನ ಹೈಸ್ಕೂಲ್‌ದಿನಗಳಲ್ಲಿ ಅವನ ಪ್ರಾಣದ ಗೆಳೆಯನಾಗಿದ್ದ ಹನುಮನಾಯ್ಕ ಬಂದೇ ಬಿಡುವುದೇ? ಮಗಳು ಹರಟುವುದನ್ನು ಕೇಳಿಸಿಕೊಳ್ಳುತ್ತ ಕೂತ ಕೃಷ್ಣಪ್ಪ ಒಳಬಂದ ಹನುಮನಾಯ್ಕನಿಗೆ –

‘ಯಾಕೆ ಬರ್ಲಿಲ್ವೊ ಸುವರ್ ಇಷ್ಟು ದಿನ?’

ಎಂದು ಹುಸಿಕೋಪದಿಂದ ಗದರಿಸಿದ. ಹನುಮನಾಯ್ಕ ತಾನು ಊರಿಂದ ತಂದಿದ್ದ ಬೆತ್ತವನ್ನು ಎರಡು ಕೈಯಲ್ಲೂ ಕೃಷ್ಣಪ್ಪನ ಎದುರು ಒಡ್ಡಿ ಬೆನ್ನು ಬಾಗಿ ನಿಂತು ನಾಟಕೀಯವಾಗಿ ಹೇಳಿದ:

‘ಒಪ್ಪಿಸಿಕೋ ಬೇಕು ಈ ಬೆತ್ತಾನ್ನ. ಈ ನಿಮ್ಮ ಭಂಟ ಖುದ್ದು ಕಡಿದು ತಂದು ಕೆತ್ತಿ ಸಿದ್ಧಪಡಿಸಿದ್ದನ್ನ’ ಎಂದು ಬಾಗಿದ ತನ್ನ ಬೆನ್ನನ್ನು ಎತ್ತಿ ಬೆತ್ತವನ್ನೂರಿ ವಕ್ರವಾಗಿ ನಿಂತ.

‘ಇನ್ನು ಮುಂದೆ ನಮ್ಮ ನಾಯಕ ಹೀಗೆ ನಡೀಲಾರ ಪಾಪ’

ಎಂದು ಠೀವಿಯಿಂದ ನಡೆದು ತೋರಿಸಿ,

‘ಹೀಗೆ ನಡೀಬೇಕಾಗಿ ಬಂದಿದೆ. . . .’

ಎಂದು ಕೋಲೂರಿಕೊಂಡು ಕುಂಟುತ್ತ ನಡೆದ.

ರೂಮೊಳಗೆ ಪ್ಯಾಂಟ್ ತೊಟ್ಟ ಗೌರಿ ಬಂದದ್ದು ಕಂಡು ನಾಲಗೆ ಕಚ್ಚಿಕೊಂಡು ಗಂಭೀರನಾದ. ಅದನ್ನು ಕಂಡು ಕೃಷ್ಣಪ್ಪ ನಕ್ಕ ಬಗೆಯಲ್ಲಿ ಹಿಂದೆಂದೂ ಗೌರಿ ಹಾಗೆ ಅವನು ನಕ್ಕಿದ್ದನ್ನು ಕಂಡಿರಲಿಲ್ಲ. ಕೃಷ್ಣಪ್ಪನ ತಾಯಿ ಹನುಮನಾಯ್ಕನ ಧ್ವನಿ ಕೇಳಿ ಬಂದು,

‘ಎಲ್ಲಿ ಹಡೇ ಅಲಕೊಂಡಿದ್ಯೋ ಹನುಮ? ನೀ ಬರ್ತಿದೀಯ ಅಂತ ಗೊತ್ತಿದ್ರೆ ವಾಟೆಹುಳಿ ತರ್ಲಿಕ್ಕೆ ಹೇಳ್ತಿದ್ದೆ. ಊರಾಗೆಲ್ಲ ಹೇಗಿದಾರೋ? ಯಾವ ಗಂಡಿಗೆ ಯಾವ ಹೆಣ್ಣನ್ನು ಗಂಟುಹಾಕಕ್ಕೆ ಓಡಾಡ್ತಿತ್ತು ಹನುಮನಾಯ್ಕನ ಸವಾರಿ? ಎಂದಳು. ಚೀಲದಿಂದ ಹೊಗೆಸೊಪ್ಪು ಎಲೆಯಡಿಕೆಯನ್ನು ತೆಗೆದು ಅವನಿಗೆ ಕೊಟ್ಟು ತಾನೂ ಎಲೆಗೆ ಸುಣ್ಣ ಹಚ್ಚುತ್ತ ಕೂತಳು.

ಈಜುವಾಗ ಮುಳುಗುತ್ತಿದ್ದ ತನ್ನನ್ನು ಬದುಕಿಸಿದ್ದ ಹನುಮನಾಯ್ಕನನ್ನು ಕಂಡು ಕೃಷ್ಣಪ್ಪನಿಗೆ ಖಷಿಯಾಯಿತು. ಯಾವಾಗಲಾದರೊಮ್ಮೆ ತನ್ನನ್ನು ಬಂದು ನೋಡುವ ಈ ಹನುಮನಾಯ್ಕ ತನ್ನನ್ನು ಮತ್ತೆ ಹುಡುಗನನ್ನಾಗಿ ಮಾಡಿಬಿಡುವ ಗೆಣೆಯ. ಅಲೆಮಾರಿ ಜೀವ. ಅವನಿಗೆ ತಾಯಿ ತಂದೆ ಅಣ್ಣ ತಂಗಿ ಯಾರೂ ಇಲ್ಲ. ಓದುವುದು ಬಿಟ್ಟು ಭಾಗವತರಾಟದಲ್ಲಿ ಕೋಡಂಗಿ ಪಾರ್ಟ್‌ಮಾಡಲು ಸೇರಿ ಓಡಾಡಿಕೊಂಡಿದ್ದ ಭಂಡ. ಅವನಿಗೆ ನಿನ್ನೆಯಿಲ್ಲ, ನಾಳೆಯಿಲ್ಲ. ಬೀಡುಬಿಟ್ಟಲ್ಲೇ ಈ ಅಸಾಮಿಗೆ ಪಟ್ಟಣ. ಯಾರ ಮನೆ ಅಂತಿಲ್ಲ – ಸೀದಾ ಹೋಗಿ’ಗೌಡರೆ ಬಂದು ಬಿಟ್ಟೆ’ ಎಂದು, ಅಲ್ಲಿ ನಿಲ್ಲದೆ ಅಡಿಗೆ ಮನೆಗೆ ಹೋಗುವನು. ಹೆಂಗಸರ ಜೊತೆ ಹಡೆಹಡೆಯಾಗಿ ಹರಟಿ ನಗಿಸುವನು. ಊರಲ್ಲೆಲ್ಲ ಸುತ್ತುವವನಾದ್ದರಿಂದ ಬೆಳೆದ ಹುಡುಗಿಯರಿಗೆ ಯಾವ ಬೆಳೆದ ಹುಡುಗನನ್ನು ಗಂಟುಹಾಕಬಹುದೆಂಬ ಹೆಂಗಸರ ಒಳಸಂಚಲ್ಲಿ ಭಾಗವಹಿಸುವನು. ಮನೆಯವರೇ ಖುದ್ದಾಗಿ ವಧೂವರರ ಅನ್ವೇಷಣೆ ಮಾಡುವ ಮುಂಚೆ ಅವರ ಇಂಗಿತವನ್ನು ತಿಳಿದು ಅಲ್ಲಿಂದಿಲ್ಲಿಗೆ ಓಡಾಡಿ ಮುಟ್ಟಿಸುವನು. ಅಡಿಗೆ ಮನೆಯಿಂದ ಆಮೇಲೆ ಬಚ್ಚಲ ಒಲೆಗೋ ಅಡಿಕೆ ಬೇಯಿಸುವ ಒಲೆಗೋ ಹೋಗುವನು. ಅಲ್ಲಿ ಬೆಕ್ಕು ನಾಯಿಗಳ ಹಾಗೆ ಕೂಗಿಯೋ, ಉಬ್ಬು ಹತ್ತುವ ಲಾರಿಯಾಗಿಯೋ ಮಕ್ಕಳನ್ನು ನಗಿಸುವನು. ಒಮ್ಮೆ ತನ್ನಂತೆ ಇನ್ನೊಬ್ಬ ಹಡೆ ಸಿಕ್ಕಾಗ, ಹೂಸಿಗೆ ಒಂದು ತೆಂಗಿನಕಾಯಿಯೆಂದು ಪಣ ಕಟ್ಟಿ ನೂರು ತೆಂಗಿನಕಾಯಿಗಳನ್ನು ಏಕಪ್ರಕಾರ ಕೂತು ಎದ್ದು ಹೂಸು ಬಿಟ್ಟು ಸಂಪಾದಿಸಿದ್ದಿದೆ. ಈ ಶಬ್ದದ ಮೂಲ ಅವನ ಪುಷ್ಠವಲ್ಲ ಬಾಯಿಯೆಂದು ಆಮೇಲೆ ಕಾಯಿಕಳಕೊಂಡವನಿಗೆ ತಿಳಿದದ್ದು.

ಸಂಜೆ ಅವನಿಗಷ್ಟು ಕಳ್ಳೋ ಸಾರಾಯಿಯೋ ಸಿಕ್ಕರೆ ಸಾಕು – ತೃಪ್ತನಾಗಿ ಬಿಡುವ. ಊರಲ್ಲಿ ಯಾರ್ಯಾರು ಹೇಗೆ ಮಾತಾಡುತ್ತಾರೆಂದು ಊಟ ಮುಗಿಸಿ ಕೂತವರಿಗೆ ನಟನೆ ಮಾಡಿ ತೋರಿಸುವ. ಅವನು ಬಂದನೆಂದರೆ ಹೆಂಗಸರಿಗೆ ಮಕ್ಕಳಿಗೆ ಹಬ್ಬ. ಹುಟ್ಟು, ಸಾವು, ಮದುವೆಗಳಂಥ ವಿಶೇಷ ಎಲ್ಲಿ ನಡೆದರೂ ಅಲ್ಲೆಲ್ಲ ಹನುಮನಾಯ್ಕ ಹಾಜರು.

‘ಇವನೇ ಹನುಮನಾಯ್ಕ. ಅವನು ಮಾಡೋ ಪಾರ್ಟೂ ಅದೆ, ಹೆಸರೂ ಅದೇ’ ಎಂದು ಕೃಷ್ಣಪ್ಪ ಗೌರಿ ದೇಶಪಾಂಡೆಗೆ ಅವನನ್ನು ಪರಿಚಯಿಸಿದ. ಸುತ್ತಲಿದ್ದವರು ಆತ್ಮೀಯರೆಂದು ಗೊತ್ತಾದ ಮೇಲೆ ಹನುಮನಾಯ್ಕ ತನ್ನ ಬಾಲಬಿಚ್ಚಿದ.

ನರಸಿಂಹಭಟ್ಟ ಸರ್ಜ್‌‌ಕೋಟು ತೊ‌ಟ್ಟು, ಕೃಷ್ಣಪ್ಪನ ಸನ್ಮಾನಕ್ಕೆಂದು ಹೊಟ್ಟೆ ಹೊತ್ತು ಓಡಾಡುತ್ತ ಮಾತನ್ನಾಡುವ ವೈಖರಿಯನ್ನು ತೋರಿಸಿದ. ಅವನಿಗೆ ಸಗಣಿ ನೀರಿನ ಪ್ರಾಕ್ಷಾಳಣೆಯಾದಾಗ ಅವನ ಮುಖ ಹೇಗಾಗಿದ್ದಿರಬಹುದೆಂಬುದನ್ನು ನಟಿಸಿದ. ತದ್ವತ್ ಉಬ್ಬುಹಲ್ಲಿನ ಮುಖ ಮಾಡುತ್ತ ಅವನು ಭಟ್ಟನೇ ಆಗಿ ಈಗ ಕೃಷ್ಣಪ್ಪನನ್ನು ಹೊಗಳಲು ಶುರುಮಾಡಿದ. ಕೃಷ್ಣಪ್ಪ ಆ ಮುಖವನ್ನು ನೋಡಲಾರದೆ ಹೊಟ್ಟೆ ಹಿಡಿದುಕೊಂಡು ನಕ್ಕ.

ಹನುಮನಾಯ್ಕ ಪಾರ್ಟು ಬದಲಾಯಿಸಿ, ಗೌರಿಯ ಕಡೆ ತಿರುಗಿ ಕೃಷ್ಣಪ್ಪನ ಗಂಭೀರವಾದ ಮುಖ ಮಾಡಿ ಅವನ ಹಾಗೇ ಮುಖವನ್ನುಜ್ಜಿ ಯೋಚಿಸುತ್ತ ನಿಂತ. ನಾಗೇಶನೂ ಗೌರಿಯೂ ನಗಲು ಶುರುಮಾಡಿದರು. ಈಜುವಾಗ ಮುಳುಗುತ್ತಿದ್ದ ಕೃಷ್ಣಪ್ಪ ಕೈ ಎತ್ತಿದಂತೆ ಕೈಯೆತ್ತಿ, ಗಂಭೀರವಾಗಿ,

‘ಮಾರಾಯ ನಾನು ಮುಳುಗ್ತಿದೀನಿ. ನೀನು ಹೋಗಯ್ಯ’ ಎಂದು ಮುಳುಗುವಾಗ ನೀರು ಕುಡಿಯುವ ಶಬ್ದ ಮಾಡಿದ. ಮಗು ಅರಳುಗಣ್ಣಾಗಿರುವುದನ್ನು ಕಂಡು ಬೆಕ್ಕುಗಳು ಜಗಳವಾಡಿ ತೋರಿಸಿದ.

ತಾಯಿ ಊಟಕ್ಕೆ ಸಿದ್ಧವಾಗಿದೆ ಎಂದು ಹೇಳಲು ಬಂದವರು –

‘ಎಂಥದೋ ಅದು – ಮೀಸೆ ಹಣ್ಣಾದರೂ ನಿನ್ನ ಮಂಗಾಟ ಬಿಟ್ಟಿಲ್ವಲ್ಲೋ?’ ಎಂದು ಬೈದು ಎಲ್ಲರನ್ನೂ ಊಟಕ್ಕೆ ಕೂರಿಸಿದರು. ಕೃಷ್ಣಪ್ಪನನ್ನು ವೀಲ್‌ಚೇರಿನ ಮೇಲೆ ಕೂರಿಸಿ ಗೌರಿ ತಳ್ಳುವಾಗ’ಪಲ್ಲಕ್ಕಿ ಸೇವೆ’ ಎಂದು ಹನುಮನಾಯ್ಕ ಚೇರನ್ನು ಹಳ್ಳಿಯ ಪೆದ್ದನಂತೆ ನಟಿಸುತ್ತ ಪರೀಕ್ಷಿಸಿದ.

‘ಅತೀ ಮಾಡ್ಬೇಡ’ ಎಂದು ತಾಯಿ ನಗುತ್ತ ಅವನಿಗೆ ಊಟ ಬಿಡಿಸಿ ಉರ ಕಡೆ ವರ್ತಮಾನ ಕೇಳಿದಳು. ಹನುಮನಾಯ್ಕ ಗೆಳೆಯನ ಸನ್ಮಾನ ವಾರ್ತೆಯಿಂದ ಬಡಬಗ್ಗರೆಲ್ಲ ಎಷ್ಟು ಖುಷಿಯಾಗಿದ್ದಾರೆಂದೂ, ತಾನು ಕೃಷ್ಣ ಸಂಧಾನದ ಆಟದಲ್ಲಿ ಯಾವ ಪಾರ್ಟು ಮಾಡಲಿರುವೆ – ಇತ್ಯಾದಿ ವಿವರಿಸಿದ. ನಾಜೂಕಾಗಿ ಗೌರಿ ಅನ್ನವನ್ನು ಬೆರಳ ತುದಿಯಲ್ಲಿ ಕಲಿಸಿ ಬಾಯಿಗೆತ್ತುವುದನ್ನು ಹನುಮನಾಯ್ಕ ಅನುಕರಿಸುತ್ತಿರುವುದನ್ನು ಮೊದಲು ಗಮನಿಸಿದವನು ನಾಗೇಶ. ನಂತರ ಗೌರಿಯೂ ಅದನ್ನು ಕಂಡು ನಗತೊಡಗಿದಳು.

***

ಹನುಮನಾಯ್ಕನ ಪ್ರವೇಶದಿಂದಾಗಿ ಸಂತೋಷ ಬಹಳ ಕಾಲ ಉಳಿಯಲಿಲ್ಲ. ಮಾರನೇ ದಿನದ ಪೇಪರುಗಳಲ್ಲಿ ಭಯಂಕರವಾದೊಂದು ಸಾವಿನ ಸುದ್ದಿ ಬಂದು, ದೇಶದ ರಾಜಕೀಯದಲ್ಲಿ ಹಠಾತ್ತಾಗಿ ಹಲವು ಬದಲಾವಣೆಗಳಿಗೂ ಕೃಷ್ಣಪ್ಪನ ಧರ್ಮಸಂಕಟಕ್ಕೂ ಕಾರಣವಾಯಿತು.

ಈ ಸುದ್ದಿಯನ್ನು ಓದುವುದಕ್ಕೆ ಮುಂಚೆ ಕೃಷ್ಣಪ್ಪ ಬೆಳಗಿನ ಬಿಸಿಲು ಕಾಯಿಸಿಕೊಳ್ಳುತ್ತ ಬಿದಿರು ಹಿಂಡಲಿನ ಬುಡದಲ್ಲಿ ಕೂತಿದ್ದ. ತನ್ನ ಕೆಲಸಕ್ಕೆಂದು ರಜೆ ಹಾಕಿದ್ದ ಜ್ಯೋತಿ ಆರಾಮಾಗಿ ಕೂತು ಗೌರಿಯ ಬಳಿ ತನ್ನ ಮದುವೆಯ ಬಗ್ಗೆ ಮಾತಾಡುತ್ತಿದ್ದಳು. ಹನುಮನಾಯ್ಕ ಮಗುವಿಗೆಂದು ಒಂದು ಬುಗುರಿ ಕೆತ್ತುತ್ತ, ನಲವತ್ತೆರಡರ ಚಳುವಳಿಯಲ್ಲಿ ನಡೆದದ್ದೊಂದು ಘಟನೆಯನ್ನು ನೆನಪುಮಾಡುತ್ತಿದ್ದ. ಹಿಟ್ಲರ್ ಮೀಸೆಯ ಹೆಡ್‌ಮಾಸ್ಟರ್ ಒಬ್ಬರು ಹುಡುಗರೆಲ್ಲ ಸ್ಕೂಲಿನ ಬಾಗಿಲೆದುರು ಮಲಗಿದ್ದಾಗ ವಿದ್ಯಾರ್ಥಿನಿಯಾಗಿದ್ದ ತನ್ನ ಮಗಳ ಕೈಹಿಡಿದು ತುಳಿದುಕೊಂಡೇ ಒಳಗೆ ಹೋಗುತ್ತಿದ್ದುದನ್ನು ನಟಿಸಿ ತೋರಿಸಿದ. ಆಗ ಹನುಮನಾಯ್ಕ ಅವಳ ಲಂಗವನ್ನು ಎತ್ತಿ ಕಂಡದ್ದನ್ನು ಕಣ್ಣರಳಿಸಿ ತೋರಿಸಿ ಕೃಷ್ಣಪ್ಪನನ್ನು ನಗಿಸುತ್ತಿದ್ದಾಗ ನಾಗೇಶ ಪೇಪರ್ ತಂದುಕೊಟ್ಟ.

ಚಂದ್ರಯ್ಯನ ಹೇಳಿಕೆ ಪ್ರಕಾರ ತುಂಬ ಸುಂದರಳಾಗಿದ್ದ ಹುಡುಗಿಯೊಬ್ಬಳು ಬ್ಯಾಂಕಿನಲ್ಲಿ ಸಂಜೆ ಕೆಲಸ ಮುಗಿಸಿ ಸಿನಿಮಾ ನೋಡಿ ಹಿಂದಕ್ಕೆ ಬರುತ್ತಿದ್ದಳು. ಆಗ ಪೋಲೀಸ್ ವ್ಯಾನೊಂದು ಅವಳ ಬಳಿ ಬಂದು ನಿಂತಿತು. ಇನ್ಸ್‌ಪೆಕ್ಟರ್ ಇಳಿದು ಒಂಟಿಯಾಗಿ ಬರುತ್ತಿದ್ದ ಹುಡುಗಿಯನ್ನು ಸಂಶಯದಿಂದ ಪ್ರಶ್ನೆ ಮಾಡಿ ವ್ಯಾನಿನಲ್ಲಿ ಕೂರಿಸಿಕೊಂಡು ಠಾಣೆಯಲ್ಲಿ ಅವಳನ್ನು ಕೂಡಿಹಾಕಿದ್ದಾಗ ಇಬ್ಬರು ತರುಣರು ಅವಳ ರಕ್ಷಣೆಗೆ ಬಂದವರಂತೆ ಬಂದು, ಮುಚ್ಚಳಿಕೆ ಬರೆದುಕೊಟ್ಟು, ಕೃತಜ್ಞಳಾದ ಹುಡುಗಿಯನ್ನು ಕಾರಲ್ಲಿ ಕರೆದುಕೊಂಡು ಹೋದರು. ಅಳುತ್ತಿದ್ದ ಹುಡುಗಿಯನ್ನು ಸಂತೈಸುತ್ತ ಒಂದು ಹೋಟೆಲಿಗೆ ಒಯ್ದರು. ಅವಳು ಇದರಿಂದ ಭಯಪಡುತ್ತ ಮನೆಗೆ ಕರೆದುಕೊಂಡು ಹೋಗುವಂತೆ ಬೇಡಿಕೊಂಡಳು. ಈ ಯುವಕರು ತಾವು ಯಾರೆಂಬುದನ್ನು ಹುಡುಗಿಗೆ ಹೇಳಿ ತಮ್ಮ ಉದ್ದೇಶವನ್ನು ತಿಳಿಸಿ ಒಪ್ಪಿಕೊಳ್ಳುವಂತೆ ಹುಡುಗಿಯನ್ನು ಬಲಾತ್ಕರಿಸಿದರು. ಅವಳ ತಂದೆ ನಿವೃತ್ತ ಉಪಾಧ್ಯಾಯನಾಗಿದ್ದ. ಅವರು ತೋರಿಸಿದ ಆಮಿಷಗಳಿಗೆ ಬಡವಳಾದರೂ ಅವಳು ಜಗ್ಗದಿದ್ದಾಗ ಈ ಯುವಕರು ರೂಮಿನ ಬಾಗಿಲು ಹಾಕಿಕೊಂಡು ಅವಳನ್ನು ಬಲಾತ್ಕಾರವಾಗಿ ಸಂಭೋಗಿಸಿದರು. ಅನಂತರ ಅವಳನ್ನು ಕಾರಲ್ಲಿ ಕೂರಿಸಿಕೊಂಡು ಅವಳ ಮನೆಯ ಬೀದಿ ಮೂಲೆಯಲ್ಲಿ ಇಳಿಸಿ ಹೋಗಿ ಬಿಟ್ಟರು. ರಾತ್ರೆ ಬಹಳ ಹೊತ್ತಾದ ಮೇಲೆ ಮನೆ ಸೇರಿದ ಹುಡುಗಿಯನ್ನು ಯಾಕಿಷ್ಟು ಹೊತ್ತು ಅಂತ ತಾಯಿತಂದೆ ಎಷ್ಟು ಬೈದು ಕೇಳಿದರೂ ಅವಳು ಬಾಯಿ ಬಿಡಲಿಲ್ಲ. ಆದರೆ ಬೆಳಗಾಗಿ ನೋಡುವಾಗ ಅವಳು ಫಾಲಿಡಾಲ್ ಕುಡಿದು ಸತ್ತಿದ್ದಳು. ಸಾಯುವ ಮುಂಚೆ ಅವಳೊಂದು ಚೀಟಿ ಬರೆದಿಟ್ಟಿದ್ದಳು. ಚೀಟಿಯಲ್ಲಿ ತನಗಾದುದನ್ನೆಲ್ಲ ಸೂಕ್ಷ್ಮವಾಗಿ ಹೇಳಿ ತನ್ನಿಂದ ಅವಳ ತಂಗಿಯರ ಮದುವೆಯಾಗಲಾರದೆಂದು ತಾನು ಪ್ರಾಣ ಕಳಕೊಳ್ಳುತ್ತಿರುವುದಾಗಿ ಹೇಳಿದ್ದಳು.

ಇಷ್ಟು; ವರದಿಯ ಸಾರಾಂಶ. ಆದರೆ ಈ ಚೀಟಿಯೇ ಅನೇಕ ಪ್ರಶ್ನೆಗಳನ್ನು ಎತ್ತಿತ್ತು. ಹುಡುಗಿಯ ತಂದೆ ಚೀಟಿಯನ್ನು ಪೋಲೀಸರು ವಶಪಡಿಸಿಕೊಂಡರೆಂದು ಹೇಳಿದರೆ, ಪೋಲೀಸರು ಅಂಥ ಚೀಟಿಯೇ ಇರಲಿಲ್ಲೆಂದೂ, ಅವಳು ಠಾಣೆಯಲ್ಲಿದ್ದುದೂ ಇಬ್ಬರು ಯುವಕರು ಅವಳನ್ನು ಬಿಡಿಸಿಕೊಂಡು ಹೋದದ್ದೂ ತಮಗೆ ತಿಳಿಯದೆಂದೂ ಹೇಳಿದ್ದರು. ಪ್ರಧಾನಿ ಪರ ನಾಯಕನಾದ ಚಂದ್ರಯ್ಯ ಹುಡುಗಿಯ ತಂದೆಯಿಂದ ತನಗೆ ತಿಳಿದ ಪ್ರಕಾರ ಈ ಇಬ್ಬರು ಯುವಕರಲ್ಲಿ ಒಬ್ಬ ಮುಖ್ಯಮಂತ್ರಿಯ ಮಗನೆಂದೂ ಇನ್ನೊಬ್ಬ ವೀರಣ್ಣನ ಮಗನೆಂದೂ, ಹಾಗೆಂದು ಆತ್ಮಹತ್ಯೆ ಮಾಡಿಕೊಂಡ ಲಲಿತ ಬರೆದಿಟ್ಟಿದ್ದಳೆಂದೂ, ಆದರೆ ಈ ಚೀಟಿಯನ್ನೇ ಮುಖ್ಯಮಂತ್ರಿ ಎಗರಿಸಿದ್ದಾನೆಂದೂ ಹೇಳಿಕೆ ಕೊಟ್ಟಿದ್ದ. ಆ ಇಬ್ಬರು ಯುವಕರು ಉಪಯೋಗಿಸಿದ್ದ ಬೂದುಬಣ್ಣದ ಫಿಯಟ್ ಕಾರು ಕೃಷ್ಣಪ್ಪಗೌಡರ ಹೆಸರಲ್ಲಿ ರಿಜಿಸ್ಟರ್ ಆದದ್ದೆಂದೂ ಚಂದ್ರಯ್ಯ ಹೇಳಿದ್ದ.

‘ನಾಗೇಶ, ರಹಮಾನ್ ಮತ್ತು ನಾಗರಾಜ್‌ನ ಕರೆದುಕೊಂಡು ಬಾ.’

ಕೃಷ್ಣಪ್ಪನ ಗಂಟಲು ಒಣಗಿತ್ತು. ಗೌರಿ ಆತಂಕದಿಂದ ಅವನ ಬಳಿ ಬಂದು ಕಾರಣ ಕೇಳಲು ಕೃಷ್ಣಪ್ಪ ಅವಳಿಗೆ ಪೇಪರನ್ನು ಕೊಟ್ಟ. ಅವಳು ಓದಿ ಮುಗಿಸಿದ ಮೇಲೆ ಹೇಳಿದ:

‘ಇದನ್ನು ಓದೋ ತನಕ ನನಗೆ ಮುಖ್ಯಮಂತ್ರಿಯಾಗೋ ಆಸೆ ಇತ್ತು. ಕುಗ್ಗುತ್ತಾ ಇದ್ದ ನನ್ನ ಬದುಕೋ ಆಸೆಗೆ ಅದರಿಂದ ಕುಮ್ಮಕ್ಕು ಸಿಕ್ಕತ್ತು. ಈಗ ನನಗೆ ಏನೂ ಬೇಡ ಅನ್ನಿಸುತ್ತೆ.’

‘ಚಂದ್ರಯ್ಯ ಹೇಳ್ತಿರೋದು ಸುಳ್ಳು ಇರಬಹುದಲ್ಲ’

ತಾನು ಮುಖ್ಯಮಂತ್ರಿಯಾಗುವುದರಲ್ಲಿ ಅಷ್ಟೇನೂ ಉತ್ಸಾಹವನ್ನು ತೋರಿಸದಿದ್ದ ಗೌರಿ ಈಗ ತನ್ನ ಸಮಾಧಾನಕ್ಕೆ ಹೀಗೆ ಮಾತಾಡಿದ್ದಳು.

ಕೃಷ್ಣಪ್ಪ ಯಾವ ಸಮಾಧಾನವೂ ತನಗೀಗ ಬೇಡವೆಂಬಂತೆ ತಲೆಯಾಡಿಸಿದ; ಅಸಹಾಯಕ ಆರ್ತತೆಯಲ್ಲಿ ಅವತ್ತು ತಾನು ವಾರಂಗಲ್ ಠಾಣೆಯಲ್ಲಿ ಬಾಗಿಲನ್ನು ಒದ್ದು ಒದ್ದು ಸುಸ್ತಾಗಿದ್ದು ನೆನಪಾಗಿತ್ತು.

ಗೌರಿ ಕೈಯಲ್ಲಿದ್ದ ಹುಲ್ಲುಗರಿಕೆ ಕಚ್ಚುತ್ತ ನಿಂತಿದ್ದಳು. ಹನುಮನಾಯ್ಕ ಬದಲಾದ ವಾತಾವರಣದಲ್ಲಿ ತಬ್ಬಿಬ್ಬಾಗಿ ನಿಂತಿದ್ದ – ಕೆತ್ತುತ್ತಿದ್ದ ಬುಗುರಿಯನ್ನು ಹಾಗೇ ಪೆದ್ದಾಗಿ ಹಿಡಿದುಕೊಂಡು.

***

ರಹಮಾನ್ ಮತ್ತು ನಾಗರಾಜ್ ಬಂದರು. ರಹಮಾನ್ ಮಾತ್ರ ಮಾತಾಡಿದ. ನಾಗರಾಜ್ ಸಿಗರೇಟ್ ಎಳೆಯುತ್ತ ಹಣೆಯನ್ನು ಒತ್ತಿಕೊಂಡು ಕೂತ. ರಹಮಾನ್ ಮುಖ್ಯಮಂತ್ರಿಯನ್ನೂ ವೀರಣ್ಣನನ್ನೂ ಹೋಗಿ ನೋಡಿದ್ದ. ಇಬ್ಬರೂ ತಮ್ಮ ಮಕ್ಕಳು ಮುಗ್ಧರು ಅಂತ ಹೇಳಿದ್ದರು. ರಹಮಾನ್‌ಗೆ ಆದರೂ ಅನುಮಾನವಿದೆ. ಆದರೆ ಅವರು ಮಾಡಿದರೋ ಇಲ್ಲವೋ ಅನ್ನೋದು ಸದ್ಯದ ಪರಿಸ್ಥಿತೀಲಿ ಇರ್ರೆಲವೆಂಟ್. ಯಾವ ರಾಜಕೀಯಕ್ಕೆ ಚಂದ್ರಯ್ಯ ಅದನ್ನ ಬಳಸ್ತ ಇದ್ದಾನೆ ಅನ್ನೋದು ಮುಖ್ಯ. ರಾಜ್ಯಪಾಲರು ಈ ಸರ್ಕಾರಾನ್ನ ವಜಾಮಾಡುವಂತೆ ಒತ್ತಾಯಮಾಡಲಿಕ್ಕೆ ದೇಶಾದ್ಯಂತ ಗಲಭೆ ಆಗೋ ಹಾಗೆ ಪ್ರಚೋದಿಸ್ತ ಇದಾನೆ. ಪ್ರಧಾನಿ ಕೈಗೊಂಬೆಯಾದ ರಾಜ್ಯಪಾಲರಿಗೂ ಸರ್ಕಾರಾನ್ನ ವಜಾಮಾಡಿ, ಅಸೆಂಬ್ಲೀನ ಸಸ್ಪೆಂಡ್ ಮಾಡಿ, ಶಾಸಕರು ಆ ಕಡೆ ಪಕ್ಷಾಂತರವಾಗೋಕೆ ಅಗತ್ಯವಾದ ಸನ್ನಿವೇಶ ಕಲ್ಪಿಸಲಿಕ್ಕೆ ಇದು ಒಳ್ಳೇ ಚಾನ್ಸು. ಈಗಾಗ್ಲೇ ಐದು ಜನ ಸುವರ್‌ಗಳು ಇದನ್ನೇ ನೆವಮಾಡಿಕೊಂಡು ಚಂದ್ರಯ್ಯನ ಕಡೆ ಸೇರೋ ಹೇಳಿಕೆ ಕೊಡ್ತಿದಾರೇಂತ ಸುದ್ದಿ. ಮುಖ್ಯಮಂತ್ರಿನೂ ಹೇಗಾರೂ ತಾನೇ ಉಳೀಬೇಕೂಂತ ಹವಣಿಸಿದ್ದ. ಖದೀಮನಿಗೆ ಅದು ಕಷ್ಟಾಂತ ಈಗ ಗೊತ್ತಾಗ್ತ ಇದೆ. ಕೃಷ್ಣಪ್ಪ ಗೌಡರನ್ನ ಮುಖ್ಯಮಂತ್ರಿ ಮಾಡಬೇಕೂಂತ ದೇಶಾದ್ಯಂತ ಯುವಕರು ಮೆರವಣಿಗೆ ಮಾಡೋ ಹಾಗೆ ರಹಮಾನ್ ವ್ಯವಸ್ಥೆ ಮಾಡಿದಾನೆ. ವೀರಣ್ಣನೂ ಓಡಾಡ್ತಿದಾನೆ. ಅವನೀಗ ಬೆಂಗಳೂರಲ್ಲಿ ಇಲ್ಲ. ಚಂದ್ರಯ್ಯನ ಕಡೆ ಆರು ಜನ ಮುಸ್ಲಿಂರಿದ್ದಾರೆ. ಅವರಲ್ಲಿ ಮುಖ್ಯನಿಗೆ ಟ್ರಾನ್ಸ್‌ಫೋರ್ಟ್‌ಮಂತ್ರಿ ಆಗ್ಬೇಕಾಗಿದೆ. ನಂಗದು ಬೇಡ’ ಅಂದಿದಾನೆ. ಗೌಡರು ಅಂದ್ರೆ ಅವನಿಗೂ ಗೌರವ. ಅವನ ಕಡೆ ಇರೋ ಐದು ಜನರನ್ನ ಅವ ಕರ್ಕೊಂಡು ಬಂದ್ರೆ ನಾವೇ ಮೆಜಾರಿಟಿ ಆಗ್ತೀವಿ. ನಾಳೆ ಒಳಗೆ ನಮ್ಮ ಖದೀಮ ರಾಜೀನಾಮೆ ಕೊಟ್ಟು ನಿಮ್ಮ ಹೆಸರು ಸೂಚಿಸಬೇಕೂಂತ ಒತ್ತಾಯ ಮಾಡ್ತಿದೀವಿ – ಇತ್ಯಾದಿ.

ನಾಗರಾಜ್ ಹೇಳಿದ: ‘ಕಾಲೇಜಿನ ಹುಡುಗರೆಲ್ಲ ಸ್ಟ್ರೈಕ್ ಶುರುಮಾಡಿದಾರೆ. ಈ ಮುಖ್ಯಮಂತ್ರೀನ್ನ ವಜಾ ಮಾಡ್ಬೇಕೂಂತ. ಲಾ ಅಂಡ್ ಆರ್ಡರ್ ಸಿಚುಯೇಶನ್ ಇನ್ನಷ್ಟು ಬಿಗಡಾಯಿಸೋ ಹಾಗೆ ಕಾಣುತ್ತೆ. ಪೋಲೀಸ್ ಠಾಣೆಗಳ ಮೇಲೆ ಹುಡುಗರು ಕಲ್ಲುಗಳನ್ನು ಎಸೀತಿದಾರೆ. ಫೈರಿಂಗ್ ಆದ್ರೂ ಆಯ್ತೆ.’

ಕೃಷ್ಣಪ್ಪ ನಾಗರಾಜನನ್ನು ಕೇಳಿದ:

‘ವೀರಣ್ಣನ ಮಗನೂ ಮುಖ್ಯಮಂತ್ರಿ ಮಗನೂ ಪೋಲೀಸ್ ಸಹಾಯ ಪಡೆದು ಇಂಥ ಕೆಲಸ ಮಾಡಿದ್ದು ನಿಜವಾಗಿದ್ರೆ. . . .’

‘ಅದು ಇರ್ರೆಲವೆಂಟ್ ಗೌಡರೆ. ಮಾಡಿದಾರೇಂತ್ಲೇ ಇಟ್ಟುಕೊಳ್ಳಿ. ಚಂದ್ರಯ್ಯನ ಮಗನೂ ಅದನ್ನು ಮಾಡಬಹುದು. ಅಧಿಕಾರದಲ್ಲಿ ಇರೋವ್ರನ್ನ ರಕ್ಷಿಸಲಿಕ್ಕೆ ಇರೋದಲ್ವ ಈ ಪೋಲೀಸರು? ಇದರಲ್ಲಿ ಏನು ಆಶ್ಚರ್ಯಪಡೋದು ಇದೆ?’

ಕೃಷ್ಣಪ್ಪನಿಗೆ ಕೋಪ ಬಂತು:

‘ನೀವು ಸಿನಿಕ್ ಥರ ಮಾತಾಡ್ತಿದೀರಿ ನಾಗರಾಜ್. ನಾವು ಮುಟ್ಟಿದ್ದೆಲ್ಲ ರಾಜಕೀಯವಾಗಬೇಕ? ಡಿಸ್‌ಗಸ್ಟಿಂಗ್.

‘ನೋ. ನಾನು ಅಬ್ಜೆಕ್ಟಿವ್ ರಿಯಾಲಿಟಿ ಹೇಳ್ತಿದೀನಿ. ಪೋಲೀಸರು ಇರೋದು ವ್ಯವಸ್ತೇನ್ನ ಕಾಯಲಿಕ್ಕೆ. ರೇಸ್, ದರೋಡೆ, ಕಾಳಸಂತೆಗಳು ಈ ವ್ಯವಸ್ಥೆಯ ನ್ಯಾಚುರಲಿ ಅಂಶಗಳು.’

‘ಹಾಗಾದರೆ ನಾವು ಯಾಕೆ ಅಧಿಕಾರಕ್ಕೆ ಬರಬೇಕು?’

‘ನನಗೂ ಅದರಲ್ಲಿ ಅನುಮಾನವಿದೆ ಅಂತ ಹಿಂದೇನೇ ಹೇಳಿದ್ನಲ್ಲ? ಆದರೆ ವ್ಯವಸ್ಥೆ ಸಂಪೂರ್ಣ ಫ್ಯಾಸಿಸ್ಟ್‌ಆಗ್ದಿದ್ದಂಗೆ ತಡಿಯೋಕೆ ಸಾಧ್ಯಾನಾ ಅಂತ ನನಗೂ ಭ್ರಮೆಯಿದೆ. ಅದಕ್ಕೇ ನಿಮ್ಮನ್ನ ಸಪೋರ್ಟ್‌ಮಾಡ್ತಿದೀನಿ.’

‘ಈಗಿರೋ ಪೋಲೀಸ್ ಅಟ್ರಾಸಿಟಿಗಳನ್ನು ಕಡಿಮೆ ಮಾಡಕ್ಕೆ ಸಾಧ್ಯಾಂತ್ಲಾದ್ರೂ ನೀವು ತಿಳ್ದಿದೀರ?’

‘ಅಲ್ಪಸ್ವಲ್ಪ ಆಗಬಹುದು. ಆದರೆ ಅದರ ಕ್ಲಾಸ್‌ಕ್ಯಾರಕ್ಟರನ್ನೇ ಬದಲು ಮಾಡ್ಲಿಕ್ಕೆ ನಿಮಗೆ ಸಾಧ್ಯವಾಗಲ್ಲ.’

ಕೃಷ್ಣಪ್ಪನಿಗೆ ಕಿರಿಕಿರಿಯಾಯಿತು;

ರಹಮಾನ್ ಬೋರಾಗಿ ಪೇಪರನ್ನು ಓದುತ್ತ ಕೂತ. ನಾಗರಾಜ್ ಉತ್ಸಾಹದಿಂದ ಇನ್ನೊಂದು ಸಿಗರೇಟ್ ಹಚ್ಚಿದ:

‘ವರ್ಗಗಳು ಸಂಪೂರ್ಣ ನಾಶವಾಗೋ ತನಕ ಸ್ಟೇಟ್ ಇರುತ್ತೆ. ಸ್ಟೇಟಿಗೆ ಪೋಲೀಸ್ ಬೇಕಾಗಿರುತ್ತೆ. . . .’

‘ಅಂದರೆ ಈಗ ಆ ಹುಡುಗಿ ಕೊಲೆಯಾಯ್ತಲ್ಲ – ಅದರಿಂದ ದುಃಖಪಡೋದು, ಅದನ್ನ ವಿರೋಧಿಸೋದು. . . . .’

ಕೃಷ್ಣಪ್ಪ ವಾಕ್ಯವನ್ನು ಕೊನೆ ಮಾಡಲಾರದಷ್ಟು ಭಾವವಶನಾದ್ದನ್ನು ಕಂಡು ನಾಗರಾಜ್ ಮೃದುವಾಗಿ ಹೇಳಿದ:

‘ಎಸ್ ಮಾಡಬೇಕು. ಆದರೆ ಪಾರ್ಲಿಮೆಂಟರಿ ರಾಜಕೀಯದ ರಿಯಾಲಿಟಿ ಏನೂಂದ್ರೆ ಹಾಗೆ ಮಾಡೋಂದ್ರಿಂದ ಈಗ ಚಂದ್ರಯ್ಯನ ಕೈನ ಬಲಪಡಿಸಿದ ಹಾಗಾಗುತ್ತೆ ಅಷ್ಟೆ. ವ್ಯವಸ್ಥೆ ಕೊಲ್ಲೋ ಕೆಲಸಾನೂ ಮಾಡತ್ತೆ. ಅದರ ವಿರುದ್ಧ ಪ್ರತಿಭಟನೆಯನ್ನೂ ಬಳಸಿಕೊಳ್ಳುತ್ತೆ.’ ನಾಗರಾಜ್ ಭಾವವಶನಾಗಿ ಮುಂದುವರಿಸಿದ:

‘ಇವೆಲ್ಲ ನಿಜವಿದ್ರೂ ನೀವು ದಲಿತರ ಪರವಾಗಿ ಫೀಲ್ ಮಾಡ್ತೀರಲ್ಲ. ಈಗ್ಲೇ ಏನಾದರೂ ಮಾಡಬಹುದು ಅಂತ ತಿಳ್ಕೊಂಡಿದೀರಲ್ಲ ಅದಕ್ಕೇ ನಾನು ನಿಮ್ಮ ಜೊತೆ ಇರೋದು. . . .’

‘ನನಗೆ ಪ್ರೇಮ ಮುಖ್ಯ. ಅದನ್ನ ಕಳಕೊಂಡು ಎಂಥ ಕ್ರಾಂತಿ ಮಾಡೋಕೆ ಸಾಧ್ಯ? ಮಾಡಿಯೇನು ಪ್ರಯೋಜನ?

ತನ್ನ ಬಾಯಿಂದ ಹಠಾತ್ತನೆ ಹೊರಟ ಈ ಮಾತುಗಳಿಂದ ಕೃಷ್ಣಪ್ಪನೇ ಚಕಿತನಾದ. ಆಡಿಬಿಟ್ಟ ಮಾತುಗಳು ಲೋಕಾಭಿರಾಮವಾಗಿ ಕಂಡುಬಿಟ್ಟೀತೆಂಬ ಆತಂಕದಲ್ಲಿ ಅವನ ದೇಹ ಮನಸ್ಸು ಕಂಪಿಸುತ್ತಿತ್ತು. ಅವನ ಉದ್ವೇಗ ನಾಗರಾಜನಿಗೂ ತಟ್ಟಿರಬೇಕು; ಅವನು ಗಂಭೀರವಾಗಿ ಮೌನವಾಗಿದ್ದ.

***

ಅವತ್ತು ಕೃಷ್ಣಪ್ಪ ತನ್ನ ಇಡೀ ದೇಹಕ್ಕೆ ಪಾರ್ಶ್ವವಾಯು ಬಡಿದವನಂತೆ ನಿಶ್ಚಲವಾಗಿ ಕೂತಿದ್ದು ನೋಡಿ ಗೌರಿಗೆ ಆತಂಕವಾಯಿತು. ಅವನನ್ನು ಕುರ್ಚಿಯಿಂದ ಇಳಿಸಿ ನೆಲದ ಮೇಲೆ ಕೂರಿಸಿ ಅವನು ಈ ದಿನಗಳಲ್ಲಿ ನಿತ್ಯ ತೆವಳುತ್ತಿದ್ದಂತೆ ತವಳಲು ಹೇಳಿದಳು. ಈ ವ್ಯಾಯಾಮದಿಂದ ಅವನ ದೇಹ ಚುರುಕಾಗುವುದೆಂದು ಅವಳಿಗೆ ಗೊತ್ತು. ಕೃಷ್ಣಪ್ಪ ಹಾಲಿನ ಸುತ್ತ ಮಗುವಿನಂತೆ ತೆವಳಿದ. ಎಡಗೈಯಲ್ಲಿ ಹನುಮನಾಯ್ಕ ತಂದು ಕೊಟ್ಟ ಕೋಲನ್ನು ಹಿಡಿದು ಬಾಲನ್ನು ತಳ್ಳುತ್ತ ತಾನೇ ಒಂದು ಆಟವನ್ನು ಸೃಷ್ಟಿಸಿಕೊಂಡ. ಗೌರಿಯೂ ಏನನ್ನೋ ಗಂಭೀರವಾಗಿ ಯೋಚಿಸುತ್ತಿರುವಂತೆ ಕಂಡಿತು. ಏನೆಂದು ಒತ್ತಾಯ ಮಾಡಿದಾಗ ಹೇಳಿದಳು:

‘ನಿಮ್ಮ ಹೆಂಡತಿ ಹತ್ರ ಮಾತಾಡಬೇಕು ಅನ್ನಿಸತ್ತೆ.’

‘ಏನು ಮಾತಾಡ್ತಿ?’

‘ಆಕೆಗೆ ನಾವು ಮೋಸ ಮಾಡ್ತಿದೀವಿ ಅಂತ ನಿಮಗೆ ಅನ್ನಿಸಲ್ವ?’

‘ಅನ್ನಿಸಿದ್ದಿದೆ. ಆದರೆ ಅದು ಅಷ್ಟು ಆಳವಾದ ಫೀಲಿಂಗ್ ಅಲ್ಲ.’

ಗೌರಿ ಚಿಂತಿಸುತ್ತ ನಿಂತಳು:

‘ನನಗೆ ನೀನು ಬೇಕು. ಆದರೆ ನನ್ನ ಕೆಲಸವಿರೋದು ಡೆಲ್ಲೀಲಿ. ನನಗೆ ತುಂಬಾ ಕನ್‌ಫ್ಯೂಸ್‌ಆಗ್ತಿದೆ.’

‘ಗೌರಿ ನೀನು ಕೊಟ್ಟಷ್ಟನ್ನು ಪಡೆಯೋದಕ್ಕಿಂತ ಹೆಚ್ಚು ನಾನು ಕೇಳಲಾರೆ. ನಾನು ಯಾವಗಲಾದ್ರೂ ಸಾಯಬಹುದಾದ ಮನುಷ್ಯ.’

‘ಸೀತೆಗೆ ನಿನ್ನ ಅಗತ್ಯ ಇದೆಯಲ್ಲ?’

‘ಇದೆ. ನನ್ನ ಸೇವೆನೂ ಅವಳು ಮಾಡಿದಾಳೆ. ಅವಳ ದೃಷ್ಟಿಯಿಂದ ಚೆನ್ನಾಗೇ ಮಾಡಿದಾಳೆ.’

‘ಆದರೆ ಒಬ್ಬರನ್ನೊಬ್ಬರು ನೀವು ಡಿಸ್ಟ್ರಾಯ್ ಮಾಡಿಕೋತಿದೀರಿ ಅನ್ನಿಸತ್ತೆ.’

ತಾನು ಯೋಚಿಸುತ್ತಿದ್ದುದೇ ಗೌರಿ ಬಾಯಿಂದ ಬಂದಿತ್ತು.

‘ಹೌದು, ಆದರೆ ನಾನೇ ಅವಳನ್ನ ಹೆಚ್ಚು ಡಿಸ್ಟ್ರಾಯ್ ಮಾಡ್ತಿದೀನಿ ಅನ್ನಿಸತ್ತೆ.’

ಗೌರಿಯ ಸಾನ್ನಿಧ್ಯದಿಂದ ಈ ಮಾತನ್ನಾಡುವುದು ತನಗೆ ಸಾಧ್ಯವಾಯಿತೆಂದು ಕೃಷ್ಣಪ್ಪನಿಗೆ ಅನ್ನಿಸಿ ಮೃದುವಾಗುತ್ತ ಅವಳ ಮುಖ ನೋಡಿದ. ಸ್ವಂತದ ಬಗ್ಗೆ ಅವಳು ಯೋಚಿಸುತ್ತಿರುವಂತೆ ಕಾಣಲಿಲ್ಲ. ನಿಷ್ಠುರವಾಗಿ ಸತ್ಯ ತಿಳಿಯಬಯಸುವವಳಂತೆ ಕೇಳಿದಳು:

‘ಹಾಗಾದರೆ ಏನು ಮಾಡೋದು ಸರಿ?’

‘ನೋಡು ಗೌರಿ, ಈಗ ನಾನು ಮಗು ಹಾಗೆ ತೆವಳೋದನ್ನ ಕಲೀತಿದೀನಿ. ಆಮೇಲೆ ಈ ದೊಣ್ಣೆ ಹಿಡಕೊಂಡು ಕುಂಟಿ ನಡೆಯೋದನ್ನ ಕಲೀತೀನಿ. ಮತ್ತೆಲ್ಲ ಮೊದ್ಲಿಂದ ಶುರುವಾಗಬೇಕು. ಮಹೇಶ್ವರಯ್ಯ ನನ್ನನ್ನು ಎಬ್ಬಿಸಿಕೊಂಡು ಕರಕೊಂಡು ಹೋದ್ರಲ್ಲ – ಆ ಮರದ ಕೆಳಗೆ ಮತ್ತೆ ಕೂರ್ತೀನಿ.’

ಗೌರಿ ವಿಷಾದದಿಂದ ನಕ್ಕಳು;

‘ನೀನು ಸ್ವತಂತ್ರ ಅಂತ ತಿಳಿದಿದೀಯ? ಇವತ್ತಿನ ರಾಜಕೀಯಕ್ಕೆ ನೀನೊಂದು ಸಾಧನವಾಗಿಬಿಟ್ಟಿದೀಯ ಅಷ್ಟೆ’ ಗೌರಿ ಅವನ ಎಡಗಾಲನ್ನು ಒತ್ತುತ್ತ ಅಂದಳು –

ಆದರೆ ಸೀತೆಯನ್ನು ಹೋಗಿ ನೋಡಿ ಮಾತಾಡುವುದರ ಬಗ್ಗೆಯೇ ಗೌರಿ ಯೋಚಿಸುತ್ತಿರಬಹುದೆಂದು ಕೃಷ್ಣಪ್ಪ ಹೇಳಿದ:

‘ಹಿಂಸೆ ಮಾಡದೆ ಏನನ್ನೂ ನಾವು ಪಡೆಯುವುದಿಲ್ಲ ಗೌರಿ’

‘ನಿಜ’

ಗೌರಿ ವಿಷಾದದಿಂದ ಮುಂದುರಿಸಿದಳು:

‘ರಜ ಮುಗಿದ ಮೇಲೆ ನಾನು ಹೋಗಲ? ನೀನು ಬೇಕೂಂದಾಗ ಬರ್ತಾ ಇರ್ತೀನಿ. . .’

ತನ್ನ ಅಗತ್ಯವೇನೆಂದು ತಿಳಿದವಳಂತೆ ಮಾತಾಡಿದ್ದಳು. ತನ್ನನ್ನು ಸ್ಪಷ್ಟಪಡಿಸೆಂಬ ಅವಳ ಮಾತಿನಲ್ಲಿದ್ದ ಯಾಚನೆಯನ್ನು ಕೃಷ್ಣಪ್ಪ ಗಮನಿಸಿದ.

‘ನಾವು ಇಡಿಯಾಗಿ ಉಳಿಯೋದೇ ಇಲ್ಲಾಂತ ಅನ್ನಿಸತ್ತೆ ಗೌರಿ’ ಕೃಷ್ಣಪ್ಪ ಬಹಳ ಕಷ್ಟಪಡುತ್ತ ತನ್ನ ಸದ್ಯದ ಪಾಡನ್ನು ಹೇಳಿಕೊಳ್ಳಲು ನೋಡಿದ. ತನ್ನ ಹೃದಯವನ್ನು ಸೂಚಿಸುವಂತೆ ಎದೆಯನ್ನು ಮುಟ್ಟಿ ಹೇಳಿದ: ‘ಇಲ್ಲೂ ನನಗೆ ಇಂಟಿಗ್ರಿಟಿ ಸಾಧ್ಯಾ ಆಗ್ತಾ ಇಲ್ಲ.’ ಕೈಯನ್ನು ಹೊರಚಾಚಿ ರಾಜಕೀಯ ಪ್ರಪಂಚವನ್ನು ಸೂಚಿಸಲು ಯತ್ನಿಸುತ್ತ ಹೇಳಿದ: ‘ಅಲ್ಲೂ ನನಗೆ ಇಂಟಿಗ್ರಿಟಿ ಸಾಧ್ಯಾ ಆಗ್ತಾ ಇಲ್ಲ.’ ಹೀಗೆ ಹೇಳಿದ ಮೇಲೆ ಹಗುರವಾಗಿ ನಿಟ್ಟುಸಿರಿಟ್ಟು – ‘ಈ ಕೋಲನ್ನು ಆತುಕೊಂಡು ನಿಲ್ಲೋದು ಸಾಧ್ಯವ ಅಂತ ಪ್ರಯತ್ನಿಸೋದಷ್ಟೆ ಸದ್ಯ ನಾ ಮಾಡಬಹುದಾದ್ದು.’

ತಾನು ಆಡಿದ್ದೆಲ್ಲವನ್ನೂ ನಿಜಮಾಡುವಂತೆ ಗೌರಿ ಮೊಣಕಾಲು ಮಡಿಸಿ ಅದರ ಮೇಲೆ ಮುಖವಿಟ್ಟು ಕುಳಿತಿದ್ದಳು. ಕೃಷ್ಣಪ್ಪ ಕೋಲನ್ನು ತೊಡೆಯ ಮೇಲಿಟ್ಟು ಊರಿದ ಬಲಗೈ ಮೇಲೆ ದೇಹದ ಭಾರ ಹಾಕಿ ಹೇಳಿದ:

‘ಇನ್ನೂ ಎರಡು ಆಸೆಗಳು ನನಗಿವೆ. ಅಶ್ವತ್ಥದ ಮರದ ಬುಡದಲ್ಲಿ ಕೂತು ಕಾಲದ ನಿರಂತರತೇನ್ನ ಅನುಭವಿಸಬೇಕು ಅನ್ನಿಸತ್ತೆ. ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದ ಆ ಪಕ್ಷೀನ್ನ ಆಗ ಕಂಡು ಪಡ್ತ ಇದ್ದ ಆಶ್ಚರ್ಯವನ್ನು ಮತ್ತೆ ಪಡಬೇಕೂಂತ ಆಸೆಯಾಗುತ್ತೆ. ದನ ಕಾಯ್ತಾ ಇದ್ದವನು ಆ ಹಕ್ಕೀನ್ನ ಹಿಡಿಬೇಕೂಂತ ಓಡ್ತಿದ್ದೆ. ಅದು ಕಾಡಲ್ಲಿ ಚೂರು ಚೂರು ಕಾಣಿಸಿಕೋತ ಕಾಣಿಸಿಕೋತ ಮರದಿಂದ ಮರಕ್ಕೆ ಕುಪ್ಪಳಿಸ್ತ ಇತ್ತು. ನಾನು ಅದನ್ನ ಬೆನ್ನಟ್ಟಿ ಹೋಗ್ತಾ ಇದ್ದಾಗ ಎಲ್ಲೋ ಮಾಯವಾಗಿ ಬಿಡ್ತಿತ್ತು. ಈಗ ಬೆನ್ನಟ್ಟಬೇಕೂಂತ ಅನ್ನಿಸಲ್ಲ – ಸಾಧ್ಯನೂ ಇಲ್ಲ. ಆದರೆ ಕಾದು ಕೂತಿರಬೇಕು ಅಂತ ಅನ್ನಿಸುತ್ತೆ. ಆ ಆಸೇನ್ನ ನಿನಗೆ ಮತ್ತು ಮಹೇಶ್ವರಯ್ಯನಿಗೆ ಮಾತ್ರ ಹೇಳಲಿಕ್ಕೆ ನನಗೆ ಸಾಧ್ಯ. ಇನ್ನೊಂದು ಆಸೆ ಇದೆ; ಅದು ಇದು ಬೇರೆ ಬೇರೆ ಅಂತ ನನಗೆ ಅನ್ನಿಸಲ್ಲ. ಅದರೆ ಅದನ್ನ ನಿನಗೂ ನಿಜಾಂತ ಅನ್ನಿಸೋ ಹಾಗೆ ನಾನು ಹೇಗೆ ಹೇಳಲಿ – ಗೊತ್ತಾಗಲ್ಲ. ಈ ದೇಶದಲ್ಲಿ ನಾವೆಲ್ಲ ದಡ ಹತ್ತಿರೋ ಜನ. ಈ ಜನದ ಸವಲತ್ತುಗಳನ್ನು ಹೆಚ್ಚಿಸೋ ರಾಜಕೀಯ ಈ ತನಕ ಮಾಡಿದ್ದಾಯ್ತು. ಅದರಿಂದ ನಮ್ಮನ್ನು ಸದಾ ಆವರಿಸೋ ಕ್ಷುದ್ರತೇಂದ ಬಿಡುಗಡೆ ಸಾಧ್ಯ ಇಲ್ಲ ಅನ್ನೋದು ನನಗೀಗ ಗೊತ್ತಾಗ್ತಿದೆ. ಅಣ್ಣಾಜಿ ಹತ್ರ ನಾನು ತುಂಬ ಈ ವಿಷಯ ಚರ್ಚಿಸ್ತ ಇದ್ದೆ. ನಮ್ಮ ದೈನಿಕಗಳೇ ಹೇಗೆ ಪ್ರಭೆ ಪಡೆಯೋದು ಸಾಧ್ಯ ಅಂತ? ಯಾವತ್ತೂ ಚರಿತ್ರೇಲಿ ದಡ ಹತ್ತದೇನೇ ಇದಾರಲ್ಲ ಅವರಿಗೆ ಸಿಟ್ಟು ಬರೋ ಹಾಗೆ ಮಾಡಕ್ಕೆ ಸಾಧ್ಯವಾದರೆ ಆ ಸಿಟ್ಟು ಸಮಾಜದ ಕ್ಷುದ್ರತೇನ ಸುಟ್ಟೀತು ಅಲ್ವ? ಆ ಆಸೆ ಇನ್ನೂ ಉಳ್ಕಂಡಿದೆ.’

ಈ ಮಾತುಗಳು ತನ್ನಿಂದ ಅಪ್ರಯತ್ನವಾಗಿ ಹುಟ್ಟಿ ಹೊರಬರುತ್ತಿರುವ ಬಗ್ಗೆ ಅವನಿಗೆ ಆಶ್ಚರ್ಯವಾಗಿತ್ತು. ತನಗಿದ್ದ ನಂಬುವ ಆಸೆ, ಇದು ಸಾಧ್ಯವೋ ಎಂಬ ಆತಂಕ ಎರಡನ್ನೂ ಗೌರಿಯಲ್ಲಿ ಕಂಡು ಕೃಷ್ಣಪ್ಪನಿಗೆ ಇನ್ನು ಹೆಚ್ಚು ಮಾತಿನ ಅಗತ್ಯವಿಲ್ಲವೆನ್ನಿಸಿತು.

ತನ್ನ ಜೇಬಲ್ಲಿ ಇಟ್ಟುಕೊಂಡಿದ್ದ ರಾಜೀನಾಮೆಯನ್ನು ಅವಳಿಗೆ ಕೊಟ್ಟು, ‘ಇದನ್ನು ಪೋಸ್ಟ್ ಮಾಡಿ ಬಾ. ಹಾಗೇ ರಹಮಾನ್‌ಗೆ ಫೋನ್‌ಮಾಡಿ ಪಕ್ಷದ ಅಸೆಂಬ್ಲಿ ಸದಸ್ಯರನ್ನು ಕೂಡಲೇ ಕರೆಸು’ ಎಂದ.

ನಾಗೇಶನನ್ನು ಕರೆದು ಅರ್ಜೆಂಟಾಗಿ ಮಾತಾಡುವುದಿದೆ ಎಂದು ಹೇಳಿ ಬ್ಯಾಂಕಿನಿಂದ ಸೀತೆಯನ್ನು ಕರೆದುಕೊಂಡು ಬರುವಂತೆ ಹೇಳಿದ.

ಕೋಲಿನಿಂದ ಚೆಂಡನ್ನು ನೂಕುತ ತೆವಳಿದ.