ಅರಿವಳಿಕೆ ಸೂಜಿಮೊನೆ ತಾಗಿದ್ದಷ್ಟೇ ಗೊತ್ತು :
ಮೂರ್ತದಿಂದ ಅಮೂರ್ತಕ್ಕೆ ಒಂದೇ ನೆಗೆತ.
ಬರೀ ನಿರಾಕಾರ ಶೂನ್ಯದ ಕಡಲು ಎತ್ತೆತ್ತಲೂ,
ಅಲ್ಲಿ ರವಿಯಿಲ್ಲ, ಶಶಿಯಿಲ್ಲ, ನಕ್ಷತ್ರ-

ವೊಂದೂ ಇಲ್ಲ, ನಾನು ನೀನುಗಳಿಲ್ಲ, ನಾಮ
ರೂಪಗಳಿಲ್ಲ, ಹಿಂದಿಂದು ಮುಂದುಗಳಿ-
ಗರ್ಥವೇ ಇಲ್ಲ. ಸೃಷ್ಟಿಪೂರ್ವದ ಪ್ರಳಯ-
ದಲ್ಲಿ ಹೆಪ್ಪುಗಟ್ಟಿದ ಕಪ್ಪು. ಕಾಲಾತೀತದಲ್ಲಿ

ಲಯವಾಗಿ ಹೋಗಿದ್ದೆನೋ ಏನೊ! ಯಾವುದಕ್ಕೆ
ಹೋಲಿಸಿ ಹೇಳಲಿ ನಾನು ಈ ಅವಸ್ಥೆಯನ್ನು?
ಯೋಗಿಯ ಸಮಾಧಿಯೊಳಗಿನದ್ವೈತವೋ, ಅಥವಾ
ಮಹಾಭ್ರಾಂತಿಯೋ, ಪರಮಶಾಂತಿಯೋ, ಇದನ್ನು

ಈ ಭವದ ಅನುಭವದ ಯಾವುದೆ ಆಕೃತಿ-
ಯೊಳಗೆ ಹಿಡಿದು ತೋರಿಸಲಾರೆ. ಅಷ್ಟು ಹೊತ್ತೂ
ಬಿದ್ದುಕೊಂಡಿದ್ದಾಗ ಈ ದೇಹ ಶಸ್ತ್ರಕ್ರಿಯೆಗೊಳಗಾಗುತ್ತ
‘ನೈನಂಛಿಂದಂತಿ ಶಸ್ತ್ರಾಣಿ’ ಯಾದ ಈ ಆತ್ಮ ಎಲ್ಲಿತ್ತು?


ಥಟ್ಟನೆಚ್ಚರವಾಗಿ ಕಣ್ಣ ಕುಕ್ಕುವ ಬೆಳಕು. ಪ್ರತ್ಯಕ್ಷ-
ವಾದ ಪಂಚೇಂದ್ರಿಯ ಪ್ರಪಂಚದೊಳಗೆರಡು
ಕರುಣಾಪೂರ್ಣ ಕಣ್ಣುಗಳು. ಹಣೆಮೇಲೆ ಹೆಣ್ಣ
ಕೈ ಬೆರಳುಗಳ ಸಾಂತ್ವನದ ಸ್ಪರ್ಶ. ಆ ಕುರುಡು

ಕತ್ತಲೆಯಿಂದ ಈ ಬೆಳಕಿನೆಚ್ಚರದೊಳಗೆ ಬಂ-
ದದ್ದು ಯಾವಾಗ? ನಾನಾರು? ಯಾಕಿದ್ದೇನೆ? ಎಲ್ಲಿ-
ದ್ದೇನೆ? ಅರೆ! ನನ್ನ ಶರೀರವೆಲ್ಲಿ? ನೋಡುತ್ತೇನೆ
ಮೈ ತುಂಬ ಏನೇನೊ ನಳಿಗೆಗಳು ! ಕಾಡುಬಳ್ಳಿ-

ಗಳು ಹೆಣೆದುಕೊಂಡಿರುವೊಂದು ಸಸ್ಯವಿಶೇಷದಂ-
ತಿದ್ದೇನೆ ! ಈ ಮನುಷ್ಯತ್ವದಿಂದ ಹಿಮ್ಮುಖವಾಗಿ
ಸಸ್ಯ ಸ್ಥಿತಿಗೆ ಪಯಣ ಮಾಡುತ್ತ ಸ್ಥಗಿತಗೊಂ-
ಡಿದ್ದೇನೆಯೆ? ಅಥವಾ ಅಲ್ಲಿಂದ ಮೇಲ್ಮುಖವಾಗಿ

ಬರುತ್ತಲಿದ್ದೇನೆಯೆ? ಅಲ್ಲ, ಮರವಲ್ಲ, ಮನುಷ್ಯ.
ಈಗೀಗ ಪ್ರಜ್ಞೆಯೊಳಕ್ಕೆ ತೇಲಿಬರುತ್ತಲಿವೆ ನಿಧ
ನಿಧಾನವಾಗಿ ನೆನಪುಗಳು. ಕ್ಷೀಣದನಿಯಿಂದ
ಕೇಳಿದೆನು ಬಳಿನಿಂತ ಹಸಿರು ಮುಸುಕಿನೊಳಿದ್ದ

ಹೆಣ್ಣನ್ನು : ‘ನಾನು ಎಲ್ಲಿದ್ದೇನೆ? ಟೈಮೆಷ್ಟು?’ ‘ನೀವೀಗ
ಇಂಟೆನ್ಸಿವ್ ಕೇರ್ ಯೂನಿಟ್ಟಿನಲ್ಲಿದ್ದೀರಿ. ಸಮಯ
ಮಧ್ಯಾಹ್ನ ಮೂರೂವರೆ. ನಿಮಗೆ ಆಪರೇಷನ್ ಆಗಿ
ಹದಿನೆಂಟು ಗಂಟೆಗಳಾಯ್ತು ಇನ್ನಿಲ್ಲ ಅಪಾಯ.’

ದತ್ತವಾಗಿದೆ ಮತ್ತೆ ವ್ಯಕ್ತಮಧ್ಯದ ಬದುಕು;
ಮೊದಲಿಗಿಂತಲೂ ಹೊಸದಾಗಿ ಕಂಡಿದೆ ಲೋಕ
ಈವರೆಗು ಮಹಾವಿಸ್ಮೃತಿಯಲ್ಲಿ ಕರಗಿ, ಹೊರಬಂದ
ಅಸ್ತಿತ್ವಕ್ಕೆ ಎಲ್ಲವನ್ನೂ ತಬ್ಬಿಕೊಳ್ಳುವ ತವಕ.