ಚಳಿಗೆ ಗಡಗಡ ನಡುಗಿ
ಮುದುರಿ ಮೂಲೆಗೆ ಕೂತ
ಹರುಕು ಚಿಂದಿಯ ಪುಟ್ಟ ಹುಡುಗನ್ನ ಕಂಡು
ಬೆಚ್ಚನೆಯ ಬಟ್ಟೆ ತೊಟ್ಟ ನನ್ನೊಳಗೂ
ನಡುಕ ಶುರುವಾಗುತ್ತದೆ.

ಅವನು ಹಾಗಿರೋದಕ್ಕೆ
ನಾನೂ ಕಾರಣ ಅನ್ನಿಸುತ್ತೆ.

ಗೇಟಾಚೆ ತಿರುಪೆಯ ಮುದುಕಿ
ಅನ್ನಕ್ಕೆ ಅರಚುವ ಹೊತ್ತು
ನಾ ಹೇಗೆ ಊಟ ಮಾಡಲಿ ಹೇಳು ?
ಆ ಕೂಗು
ಮನುಷ್ಯರದೋ ಪ್ರಾಣಿಯದೋ
ಅಥವಾ ಶತಮಾನಗಳ ಹಸಿವು ತಾಳಿದಾಕಾರವೋ
ಹೇಗೆ ಕೇಳಲಿ ನಾನು
ಕೇಳಿಯೂ ಹೇಗೆ ಸುಮ್ಮನಿರಲಿ ?

ಆ ಮುದುಕಿ ಹಾಗಿರೋದಕ್ಕೆ
ನಾನೂ ಕಾರಣ ಅನ್ನಿಸುತ್ತೆ.

ತಲೆಯಿಡಲು ನೆಲೆಯಿರದೆ
ಪಾರ್ಕು, ಅಂಗಡಿ ಕಟ್ಟೆ, ಮನೆ ಜಗುಲಿ
ಅಥವಾ ಕೊಳೆಗೇರಿ ಚಿಂದಿಛಾವಣಿಯಲ್ಲಿ
ಹೇಗೋ ಬದುಕಿರುವಸಂಖ್ಯರ ಕಂಡು
ಬೆಚ್ಚನೆಯ ಮನೆಯಲ್ಲಿ
ನಾ ಹೇಗೆ ತೆಪ್ಪಗಿರಲಿ ?

ಅವರೆಲ್ಲ ಹಾಗಿರೋದಕ್ಕೆ
ನಾನೂ ಕಾರಣ ಅನ್ನಿಸುತ್ತೆ.

ಹಗಲೂ ಇರುಳು
ಈ ನೋಟಗಳು
ಈ ಕೂಗುಗಳು, ನೋವುಗಳು
ಈಟಿಯ ಹಾಗೆ ನಾಟಿ ನುಗ್ಗುತ್ತವೆ
ಮನೆಯೊಳಕ್ಕೆ, ಮನದೊಳಕ್ಕೆ
ನಿದ್ದೆಯೊಳಕ್ಕೆ ಮತ್ತೆ ಕನಸಿನೊಳಕ್ಕೆ,
ನಾನೇನೂ ಮಾಡಲಾರದ ಅಸಹಾಯತನಕ್ಕೆ
ತಿವಿದು, ನನ್ನೆಲ್ಲವನ್ನೂ
ಗಾಯಗೊಳಿಸುತ್ತವೆ.

ಈ ಎಲ್ಲವನ್ನೂ ಕಾಣದ ಹಾಗೆ
ಕಂಡರೂ ಕೇಳದ ಹಾಗೆ
ನಟಿಸುತ್ತಾ ಬದುಕುವುದು
ಸಾಧ್ಯವಿದ್ದರೆ
ಆ ಮಾತು ಬೇರೆ.

ರೇಗುತ್ತೇನೆ ನನ್ನ ಮೇಲೆ
ನನ್ನಂಥವರ ಮೇಲೆ
ನನ್ನಂಥವರ ಒಳಗೊಂಡ ಈ
ಸಮಾಜದ ಮೇಲೆ
ಇದರ ಪ್ರತಿನಿಧಿಯಾದ ವ್ಯವಸ್ಥೆಯ ಮೇಲೆ
ಅದು ನಿರಂತರವಾಗಿ ಉಳಿಸಿರುವ ಈ
ಅವಸ್ಥೆಯ ಮೇಲೆ.