ಚರಿತ್ರೆಯ ನಿರ್ವಚನ ನನ್ನ ಪಾಲಿಗೆ ಸೃಜನಶೀಲ ಕೃತಿ ರಚನೆಯಷ್ಟೇ ಆಪ್ತವಾದ ಸಂಗತಿ. ನನ್ನ ಅನೇಕ ಬರಹಗಳಲ್ಲಿ ಚರಿತ್ರೆಯ ರಚನಾ ವಿಜ್ಞಾನದ ಪ್ರಸ್ತಾಪಗಳು ಆಗಿಂದಾಗ್ಗೆ ಬಂದು ಹೋಗುವುದನ್ನು ಓದುಗರು ಗಮನಿಸಿರಬಹುದು. ವಿದ್ಯಾರ್ಥಿ ಕಾಲದಿಂದಲೂ ಚರಿತ್ರೆಯ ವಿಷಯದ ಬಗ್ಗೆ ತೀವ್ರ ಕುತೂಹಲ ಬೆಳಸಿಕೊಂಡು ಬಂದ ನನಗೆ ಚರಿತ್ರೆಯ ಬರಹಗಳು ಸಾಹಿತ್ಯ ಪ್ರಕಾರದ ಒಂದು ರೂಪವೇ ಇರಬೇಕು ಎಂಬಷ್ಟು ಆಪ್ತತೆಯನ್ನು ಬೆಳೆಸಿವೆ. ಈ ನಿಟ್ಟಿನಲ್ಲಿ ಕರ್ನಾಟಕದ ಬಹುಪಾಲು ಎಲ್ಲ ಎಡಪಂಥೀಯ ಚರಿತ್ರೆಕಾರರು ನನ್ನ ಇಲ್ಲಿನ ನಿರೂಪಣೆಗಳಿಗೆ ಹಿನ್ನೆಲೆಯಂತೆ ನಿರ್ವಚನದ ಸಂದರ್ಭಗಳಲ್ಲಿ ತೇಲಿ ಬರುವುದಿದೆ. ಮೊದಲ ಬಾರಿಗೆ ಪ್ರೊ. ಎಸ್. ಚಂದ್ರಶೇಖರ್ ಹಾಗು ಪ್ರೊ. ಎಸ್. ಶೆಟ್ಟರ್ ಗಾಢವಾಗಿ ಮನಸ್ಸಿನಲ್ಲಿ ಬಂದು ಚರಿತ್ರೆಯ ಅನೇಕ ಕುತೂಹಲಗಳಿಗೆ ಭಾವನಾತ್ಮಕವಾಗಿ ವಿವರ ನೀಡಿದ್ದಾರೆ. ಮಾರ್ಕ್ಸ್‌ವಾದಿ ಚಿಂತಕರ ಬರಹಗಳು ಒಂದಿಲ್ಲ ಒಂದು ಬಗೆಯಲ್ಲಿ ನನ್ನನ್ನು ಪ್ರಭಾವಿಸಿವೆ. ಅವರನ್ನೆಲ್ಲ ಮನದಲ್ಲೇ ಸುಪ್ತವಾಗಿ ನೆನೆಯುವೆನು. ವಿಶೇಷ ಎಂದರೆ, ಚರಿತ್ರೆ ಓದಿನ ನನ್ನ ದಾಹವನ್ನು ತಣಿಸಿದ ಎರಡು ಪ್ರಮುಖ ಗ್ರಂಥಾಲಯಗಳೆಂದರೆ, ಮೈಸೂರಿನ ಮಹಾರಾಜಾ ಕಾಲೇಜಿನ ಗ್ರಂಥಾಲಯ ಹಾಗೂ ಮಾನಸಗಂಗೋತ್ರಿಯ ಗ್ರಂಥಾಲಯ. ಇವೆರಡೂ ಗ್ರಂಥಾಲಯಗಳು ನನ್ನ ಒಟ್ಟು ವ್ಯಕ್ತಿತ್ವದ ಮೇಲೆ ಅಪಾರ ಪ್ರಮಾಣದ ಒತ್ತನ್ನು ಹಾಕಿ ಚರಿತ್ರೆಯ ಬಹುರೂಪಗಳನ್ನು ಕಲಿಸಿವೆ. ಅಲ್ಲಿ ದೊರೆತ ವೈವಿಧ್ಯ ಗ್ರಂಥ ಸಂಬಂಧಿಕರನ್ನು ನಾನು ಯಾವತ್ತೂ ಮರೆಯಲಾರೆ. ಆ ಮಟ್ಟಿಗೆ ಆ ಗ್ರಂಥಾಲಯಗಳನ್ನೂ ಅಲ್ಲಿ ದೊರೆತ ಗ್ರಂಥಗಳನ್ನೂ ಮೈದುಂಬಿ ನೆನೆಯುವೆ.

ಇನ್ನು ನನ್ನ ಪರಿಸರದಲ್ಲಿ ಸಾಧ್ಯವಾದ ಚರಿತ್ರೆಯ ಬಗೆಗಿನ ಸಂವಾದಗಳು ನಾನು ಗ್ರಹಿಸಬೇಕಾದ ಕ್ರಮವನ್ನು ತೋರಿಸಿಕೊಟ್ಟವು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಾಧ್ಯವಾದ ಅಂತಹ ವಾತಾವರಣವನ್ನೂ ಅಲ್ಲಿನ ಎಷ್ಟೋ ವಿದ್ವಾಂಸರನ್ನೂ ಗೌರವದಿಂದ ಒಳಗೇ ಸ್ಮರಿಸುವೆನು. ಯಾವತ್ತೂ ಕೂಡ ನನ್ನ ಚರಿತ್ರೆಯ ತಕರಾರುಗಳಿಗೆ ದಿವ್ಯವಾಗಿ ಮಾರ್ಕ್ಸ್‌ವಾದದ ಮಂತ್ರಗಳಿಂದ ಉತ್ತರಿಸುತ್ತಿದ್ದ ಮೈಸೂರು ವಿಶ್ವವಿದ್ಯಾನಿಲಯದ ಚರಿತ್ರೆ ವಿಭಾಗದ ಗೆಳೆಯ ಡಾ. ಅಶ್ವತ್ಥನಾರಾಯಣ ಅವರನ್ನು ಪ್ರೀತಿಯಿಂದ ನೆನೆಯುವೆ. ಪರೋಕ್ಷವಾಗಿ ನನ್ನ ಓದಿಗೆ ಸಿಗುತ್ತಿದ್ದ ಪ್ರೊ. ಸೈಯದ್ ಆಜಂ, ಪ್ರೊ. ಸೆಬಾಸ್ಟಿಯನ್ ಜೋಸೆಫ್ ಹಾಗು ಪ್ರೊ. ಸುರೇಂದ್ರರಾವ್ ಇವರನ್ನು ಈ ಕೃತಿ ಸಂದರ್ಭದಲ್ಲಿ ನೆನೆಯದೆ ಇರಲಾರೆ. ಹಾಗೆಯೇ ಬೆಂಗಳೂರು ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಮಿತ್ರರಾದ ಡಾ. ಅಶ್ವಥ್ ನಾರಾಯಣ ಅವರ ಜೊತೆಗಿನ ಚರಿತ್ರೆಯ ಸ್ನೇಹ ಕೂಡ ನನ್ನ ವಿಶ್ವಾಸವನ್ನು ಹೆಚ್ಚಿಸಿದೆ. ಕನ್ನಡ ವಿಶ್ವವಿದ್ಯಾಲಯದ ಬಳಗದ ಜೊತೆಗಿನ ಚರಿತ್ರೆಯ ನನ್ನ ವಾಗ್ವಾದಗಳು ನಿತ್ಯ ಕಾಯಕದ ಮಾತಾಗಿ ಬೆಳೆದು ನನ್ನ ಎಷ್ಟೋ ಆಲೋಚನೆಗಳಿಗೆ ಒತ್ತಾಸೆಯಾಗಿವೆ. ಈ ದಿಸೆಯಲ್ಲಿ ಚರಿತ್ರೆ ವಿಭಾಗದ ಎಲ್ಲ ಮಿತ್ರರನ್ನೂ ಮರೆಯಲಾಗದು. ಪ್ರೊ. ಲಕ್ಷ್ಮಣ್ ತೆಲಗಾವಿ, ಪ್ರೊ. ವಿಜಯ್ ತಂಬಂಡ ಪೂಣಚ್ಚ, ಡಾ. ಮೋಹನ್‌ಕೃಷ್ಣ ರೈ, ಡಾ. ಸಿ.ಆರ್. ಗೋವಿಂದರಾಜು, ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಹಾಗೂ ಡಾ. ಚಿನ್ನಸ್ವಾಮಿ ಸೋಸಲೆ ಅವರನ್ನೆಲ್ಲ ಪ್ರೀತಿಯಿಂದ ನೆನೆಯುವೆ.

ಇಷ್ಟೊಂದು ಸುಂದರವಾಗಿ ಈ ಕೃತಿ ಪ್ರಸಾರಾಂಗದಿಂದ ಪ್ರಕಟವಾಗುವ ಸಂದರ್ಭದಲ್ಲಿ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರನ್ನೂ, ಕುಲಸಚಿವರೂ, ಜಾನಪದ ವಿಭಾಗದ ಮುಖ್ಯಸ್ಥರೂ ಆದ ಡಾ. ಮಂಜುನಾಥ ಬೇವಿನಕಟ್ಟಿ ಅವರನ್ನು ಹಾಗೆಯೇ ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್ ಹಾಗೂ ಶ್ರೀ ಬಿ. ಸುಜ್ಞಾನಮೂರ್ತಿ ಅವರನ್ನೂ, ಮುಖಪುಟ ರೂಪಿಸಿದ ಕೆ.ಕೆ. ಮಕಾಳಿ, ಡಿ.ಟಿ.ಪಿ. ಮಾಡಿದ ಶ್ರೀ ಕೆ. ವಿರೇಶ್ ಹಾಗೂ ಶ್ರೀ ಜೆ. ಶಿವಕುಮಾರ್ ಅವರನ್ನೆಲ್ಲ ಸ್ಮರಿಸುವೆ.

ಮೊಗಳ್ಳಿ ಗಣೇಶ್
೩೧.೧೨.೨೦೦೯  
ವಿದ್ಯಾರಣ್ಯ