ಭಾರತೀಯ ಪರಂಪರೆಯಲ್ಲಿ ಮೌಖಿಕ ಪರಂಪರೆ ಅತ್ಯಂತ ವಿಶಿಷ್ಟವಾದ ಒಂದು ಮಹಿಳಾ ಸಂಕಥನ. ಗ್ರಾಮೀಣ ಭಾರತದ ಮಹಿಳಾ ಲೋಕದ ಎಲ್ಲ ಬಗೆಯ ಆಕೆಯ ಸಾಂಸ್ಕೃತಿಕ ಸ್ಮೃತಿಕೋಶವು ಮೌಖಿಕ ಕಥನಗಳಲ್ಲಿ ಸೂಕ್ಷ್ಮವಾಗಿ ಬಚ್ಚಿಟ್ಟುಕೊಂಡಿದೆ. ವೈದಿಕ ಜ್ಞಾನ ಕೇಂದ್ರಗಳು ತಿರಸ್ಕರಿಸಿದ್ದನ್ನೆಲ್ಲ ಮೌಖಿಕ ಪರಂಪರೆಗಳು ಸ್ವೀಕರಿಸಿಕೊಂಡು ಅವುಗಳಿಗೆ ತಮ್ಮ ಸಮುದಾಯದ ಪ್ರಜ್ಞೆಯನ್ನು ಅರಿವನ್ನೂ ಉಸಿರನ್ನು ತುಂಬಿರುತ್ತದೆ. ಅದರಲ್ಲೂ ಮೌಖಿಕ ನೆಲೆಯೇ ನೇರವಾಗಿ ವಿಸ್ತಾರವಾಗಿ ಮಹಿಳೆಯ ಸೃಜನಶೀಲ ಕ್ರಿಯೆಗಳಿಂದಲೇ ಬಂದದ್ದು ಎಂಬುದು ಕೇವಲ ಹೇಳಿಕೆಯಾಗದೆ ಅದೊಂದು ಸಹಜ ಸತ್ಯವಾಗಿದೆ. ಇದುವರೆಗಿನ ಮಹಿಳಾ ಸಂಕಥನಗಳು ಮುಖ್ಯವಾಗಿ ಎರಡು ನೆಲೆಗಳಿಂದ ತನ್ನ ಗೃಹೀತವನ್ನು ಕಂಡುಕೊಂಡು ಅವುಗಳಿಂದಲೇ ಎಲ್ಲವನ್ನು ನೋಡುವ, ಅರಿಯುವ, ಬರೆಯುವ ಪ್ರವೃತ್ತಿಗೆ ಒಳಗಾಗುತ್ತಿದೆ. ವೈದಿಕ ಪರಂಪರೆಯಿಂದ ಬಂದ ಅರಿವು ಹಾಗೂ ಆಧುನಿಕ ಪಶ್ಚಿಮ ಜಗತ್ತು ಹೇಳಿಕೊಟ್ಟ ತಿಳುವಳಿಕೆಗಳೆರಡೇ ವಿಶೇಷವಾಗಿ ಮಹಿಳಾ ಚಿಂತನವನ್ನು ಆವರಿಸಿವೆ. ಇದು ತಪ್ಪು ಎಂದು ನನ್ನ ಅಭಿಪ್ರಾಯವಲ್ಲವಾದರೂ ಭಾರತೀಯ ಪರಂಪರೆಯು ಬಹುತ್ವ ಬಗೆಯ ಸಾಂಸ್ಕೃತಿಕ ಸಮುದಾಯಗಳಿಂದ ಒಳಗೊಂಡಿರುವುದರಿಂದ ಮೇಲೆ ಹೇಳಿದ ಎರಡೂ ನೆಲೆಗಳು ಅಪೂರ್ಣ ಎನಿಸುತ್ತವೆ.

ಬಹು ಬಗೆಯ ಸಂಸ್ಕೃತಿಯ ಅನುಭವ, ಅದರ ಅರಿವು ಅದರ ಪ್ರಜ್ಞೆ ಮತ್ತು ಬಿಡುಗಡೆಯ ನೆಲೆಗಳು ಹಾಗೆಯೇ ಅವು ಕಂಡುಕೊಳ್ಳುವ ಸೃಜನಶೀಲ ದಾರಿಗಳು ನಿಸ್ಸಂದೇಹವಾಗಿ ವಿಭಿನ್ನ ವಾಗಿರುತ್ತವೆ. ಸಂಸ್ಕೃತಿಯ ಮಾದರಿ ಮತ್ತು ಅರ್ಥಗಳನ್ನು ನಿರ್ಮಿಸುವಾಗ ಪ್ರತಿಯೊಂದು ಸಮುದಾಯವೂ ಲಿಂಗವೂ ಬೇರೆ ಬೇರೆಯಾದ ನೆಲೆಗಳಿಗೆ ಒಳಪಡುತ್ತವೆ. ಸಂಸ್ಕೃತಿಯ ಚರಿತ್ರೆ ಕೂಡ ಸಮುದಾಯದ ಸ್ಥಾನಮಾನಗಳನ್ನು ರೂಪಿಸಲು ನೆರವಾಗಿರುತ್ತದೆ. ಅಂದರೆ ಸಾಂಸ್ಕೃತಿಕವಾದ ಹಲವು ಸಮಷ್ಠಿ ಅನುಭವವೇ ಅವರವರ ಚಿಂತನಾ ಕ್ರಮಗಳನ್ನು ನಿರ್ದೇಶಿಸುತ್ತಿರುತ್ತವೆ. ಆ ಅರ್ಥದಲ್ಲಿ ಭಾರತೀಯ ಮಹಿಳಾ ಸಂಕಥನವನ್ನು ಅರಿಯುವಾಗ ಅನೇಕ ಬಗೆಯ ಗೊಂದಲ ವೈರುಧ್ಯಗಳಿರುವುದು ಗೋಚರವಾಗುತ್ತದೆ.

ಹೀಗಾಗಿಯೇ ವೈದಿಕ ಪರಂಪರೆ ನಿರ್ಮಿಸುವ ಚಿಂತನಾ ಕ್ರಮಗಳಿಗೂ ದ್ರಾವಿಡ ಮೂಲ ಪರಂಪರೆ ಕಟ್ಟುವ ಅರಿವಿನ ವಿಧಾನವೂ ಹಾಗೆಯೇ ಮಹಿಳಾ ಸಂವೇದನೆ ಕೊಡುವ ಅರ್ಥಗಳಿಗೂ ಬೇರೆ ಬೇರೆ ಆಯಾಮಗಳಿರುವುದು. ಒಂದು ವೇಳೆ ಸ್ವತಃ ಮಹಿಳೆಯೇ ವೈದಿಕ ಪರಂಪರೆಯಿಂದ ಬಂದವಳಾಗಿ ಆಕೆ ತಾಳುವ ನಿಲುವಿಗೂ ಹುಡುಕುವ ದಾರಿಗಳಿಗೂ ಬರುವ ನಿರ್ಣಯಗಳಿಗೂ ಅಂತರವಿದೆ. ಆಕೆ ವೈದಿಕ ಜ್ಞಾನ ಮಾರ್ಗವನ್ನು ತಿರಸ್ಕರಿಸಿ ಮಾತನಾಡುತ್ತಿದ್ದರೂ ಅವಳ ಆಳದಲ್ಲಿ ಮೂಲದಲ್ಲಿ ವೈದಿಕ ಪರಂಪರೆ ರೂಪಿಸಿರುವ  ಅನುಭವದ ಪ್ರತಿಬಿಂಬ ಸಾಮಾಜಿಕವಾಗಿ ಪ್ರತಿಫಲಿಸುವಾಗ ಎಲ್ಲ ಸಮುದಾಯಗಳಿಗೂ ಅದು ಒಪ್ಪವಾಗಿಯೇ ಕಾಣುತ್ತದೆಂಬ ಖಾತ್ರಿ ಇರುವುದಿಲ್ಲ. ಶೋಷಣೆಯ ವಿರುದ್ಧದ ದನಿ ಎತ್ತುವಾಗ ಎಲ್ಲ ಮಹಿಳೆಯರು ಒಂದೇ ರೀತಿ ಕಾಣುತ್ತಾರೆಂಬುದಕ್ಕೂ ನಿಜವಿರುವುದಿಲ್ಲ. ಅವರವರ ಮನೆ ಭಾಷೆಯಲ್ಲಿ, ಸಂವೇದನೆಯಲ್ಲಿ, ಧೋರಣೆಯಲ್ಲಿ, ಅಭಿವ್ಯಕ್ತಿಯಲ್ಲಿ, ಅರ್ಥದಲ್ಲಿ, ಗುರಿಯಲ್ಲಿ ಹಾಗೂ ಪ್ರತಿಭಟನೆಯಲ್ಲಿ ಸಾಕಷ್ಟು ವ್ಯತ್ಯಾಸಗಳು ಅಡಕವಾಗಿ ರುತ್ತವೆ. ಗಾಂಧೀಜಿ ಅವರೊಡನೆ ಚಳವಳಿಯಲ್ಲಿ ಭಾಗವಹಿಸುತ್ತಿದ್ದ ಮೇಲು ಜಾತಿಯ ಮಹಿಳೆಯರಿಗೂ ಅದೇ ಕಾಲದಲ್ಲಿದ್ದ ಅಲ್ಪಸಂಖ್ಯಾತ ಮುಸ್ಲಿಂ ಮಹಿಳೆಯರಿಗೂ ನೇರವಾಗಿ ಸಂಬಂಧವೇ ಇರಲಿಲ್ಲ. ತಾತ್ವಿಕವಾಗಿ ಸಮ ಎಂದು ಕಂಡು ಬಂದ ಎಷ್ಟೋ ಸತ್ಯಗಳು ಒಳಾರ್ಥದಲ್ಲಿ ಭಾರತೀಯ ಮಹಿಳಾ ಸಂದರ್ಭದಲ್ಲಿ ವೈರುಧ್ಯಗಳನ್ನು ಸೃಷ್ಟಿಸಿಕೊಂಡಿರುತ್ತವೆ. ಜಾತಿ ಪ್ರಧಾನವಾದ ವ್ಯವಸ್ಥೆಯಲ್ಲಿ ಮಹಿಳಾ ಚಿಂತನೆಗಳೂ ಹೋರಾಟದ ಅಗತ್ಯಗಳೂ ಬೇರೆ ಬೇರೆಯಾಗಿ ಕವಲುಗಳಾಗಿರುತ್ತವೆ.

ಭಾರತೀಯ ಮಹಿಳಾ ಚಿಂತನೆಗಳ ಬಗ್ಗೆ ಚರ್ಚಿಸುವಾಗ ಅನೇಕರು ಕೇವಲ ಯಾವುದೋ ಒಂದು ಸಮುದಾಯದ ಹಿನ್ನೆಲೆಯಲ್ಲಿ ತೀರ್ಮಾನಗಳಿಗೆ ಬರುತ್ತಾರೆ. ಭಾರತದಲ್ಲೇ ಅಪಾರ ಸಂಖ್ಯೆಯಲ್ಲಿರುವ ಮುಸ್ಲಿಂ ಮಹಿಳೆಯರಾಗಲಿ, ಕ್ರಿಶ್ಚಿಯನ್ ಮಹಿಳೆಯರಾಗಲಿ ಪ್ರಧಾನವಾಗಿ ಅಂತವರ ಚರ್ಚೆಗಳಲ್ಲಿ ಒಳಗೊಂಡಿರುವುದೇ ಇಲ್ಲ. ಕಠಿಣವಾಗಿ ಹೇಳಬೇಕೆಂದರೆ ಮೇಲು ಜಾತಿಯ ಅಥವಾ ಮಧ್ಯಮ ಜಾತಿಯ ಮತ್ತು ನಗರ ಕೇಂದ್ರಿತವಾದ ಉದ್ಯೋಗಸ್ಥ ಮಹಿಳೆ ಯರು ವಿಶೇಷವಾಗಿ ಒಳಗೊಳ್ಳುವಂಥ ಇಂಥಹ ಚಿಂತನ ಕ್ರಮಗಳಲ್ಲಿ ದಲಿತರೂ, ಆದಿವಾಸಿ ಗಳೂ, ಅಲೆಮಾರಿಗಳೂ ಒಳಗೊಂಡಿರುವುದೇ ಇಲ್ಲ. ಇಂತವರು ವೈದಿಕಶಾಹಿ ವ್ಯವಸ್ಥೆಯ ಪುರುಷ ಪ್ರಧಾನ ವಿಕಾರಗಳನ್ನು ಪ್ರಶ್ನಿಸುವಾಗ ಮುಗ್ಧರಂತೆ ಗ್ರಾಮೀಣ ಭಾರತದ ಮೌಖಿಕ ಪರಂಪರೆಯ ಅನೇಕ ಧ್ವನಿಗಳನ್ನು ಸಾಂಸ್ಕೃತಿಕ ಪ್ರತಿರೋಧಗಳನ್ನು ಮರೆತು ಬಿಟ್ಟಿರುತ್ತಾರೆ. ಹೀಗಾಗಿಯೇ ಭಾರತೀಯ ಮಹಿಳಾ ಸಂಕಥನಕ್ಕೆ ಈವರೆಗೂ ಒಂದು ಬಹುತ್ವದ ಸಮಷ್ಠಿ ಪ್ರಜ್ಞೆಯ ಆಳದ ಗಾಢತೆ ಮತ್ತು ತಾತ್ವಿಕ ಸ್ಪಷ್ಟತೆ ಸಾಧ್ಯವಾಗಿಲ್ಲ.

ಸ್ವತಃ ಭಾರತೀಯ ಮಹಿಳೆಯರಿಗೇ ಮೌಖಿಕ ಪರಂಪರೆಯ ಒಳಗಿರುವ ಮಹಿಳೆಯರ ಬಹು ದನಿಗಳು ದೂರವಾಗಿಯೆ ಉಳಿದಿವೆ. ಸಂಸ್ಕೃತಿಯನ್ನೇ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳದೆ ಎಷ್ಟೋ ಮಹಿಳಾ ವಾದಿಗಳು ಪ್ರಶ್ನಿಸಿರುತ್ತಾರೆ. ತಮಾಷೆ ಎಂದರೆ ಸಂಸ್ಕೃತ ಭಾಷೆಯಿಂದ ಬಂದ ಸಂಸ್ಕೃತಿಯನ್ನು ವೈದಿಕ ಪರಂಪರೆಯನ್ನು ಬ್ರಾಹ್ಮಣರನ್ನು ಕೂಡಿಸಿ ಅದೇ ಭಾರತೀಯ ಸಂಸ್ಕೃತಿ ಎಂದು ಈಗಲೂ ಅನೇಕರು ಭಾವಿಸಿ ಅದರ ವಿರುದ್ಧ ತಮ್ಮ ಹೋರಾಟವೆಂದೂ ಅದೇ ತಮ್ಮ ಇವತ್ತಿನ ಈ ಸ್ಥಿತಿಗೆ ಕಾರಣ ಎಂದು ಆತುರದಿಂದ ವಾದಿಸುತ್ತಾರೆ. ಇದು ಸೂಕ್ತವಲ್ಲ, ಕೇವಲ ವೈದಿಕ ಪರಂಪರೆಯೇ ಮಹಿಳಾ ಶೋಷಣೆಗೆ ಮೂಲ ಎಂದು ಯಾರೂ ಭಾವಿಸಬೇಕಾದ್ದಿಲ್ಲ. ಸಂಸ್ಕೃತಿಯ ವಿಕಾಸದಲ್ಲಿ ಅನೇಕ ಕಾರಣಗಳಿಗಾಗಿ ಪುರುಷ ಮತ್ತು ಜಾತಿ ಸಂಸ್ಕೃತಿಯ ಸಂಬಂಧದಲ್ಲಿ ಮಹಿಳೆಯ ಸ್ಥಾನಮಾನಗಳು ವ್ಯತ್ಯಯಗೊಂಡಿರುತ್ತವೆ. ಹಾಗೆಯೆ ಸಂಸ್ಕೃತಿಯ ವಿಕಾಸದಲ್ಲಿ ಅದರ ಚಾರಿತ್ರಿಕ ಘಟ್ಟಗಳಲ್ಲಿ ಪರಂಪರೆಯ ನಿರ್ಮಾಣ ಕಾರ್ಯದಲ್ಲಿ ಪುರುಷ ಮತ್ತು ಮಹಿಳೆಯ ಜವಾಬ್ದಾರಿ ಒಬ್ಬರಿಂದ ಇನ್ನೊಬ್ಬರಿಗೆ ಲಿಂಗ ತಾರತಮ್ಯದಿಂದ ಎಷ್ಟೋ ರೀತಿಯ ಒಪ್ಪಂದಗಳು ಘಟಿಸಿರುತ್ತವೆ. ಅಂತಹ ಒಪ್ಪಂದದ ಸೂತ್ರಗಳೇ ಆನಂತರದ ಶೋಷಣೆಗೆ ಆಯುಧಗಳೂ ಆಗಿ ಮಾರ್ಪಟ್ಟಿರುತ್ತವೆ. ಮಾತೃಪ್ರಧಾನ ವ್ಯವಸ್ಥೆ ಪಿತೃ ಮೂಲ ಪದ್ಧತಿಗೆ ಅದಲು ಬದಲಾದಾಗಲೂ ಎಲ್ಲ ಸಮುದಾಯಗಳ ಸಂಸ್ಕೃತಿ ಯಲ್ಲಿ ಸಾಮಾಜಿಕ, ಧಾರ್ಮಿಕ, ರಾಜಕೀಯ ಮಾನದಂಡಗಳು ಏರುಪೇರಿಗೆ ಒಳಗಾಗಿವೆ.

ಜಾತಿನಿಷ್ಟ ಲಿಂಗತಾರತಮ್ಯ

ಸಾಮಾಜಿಕ ಜವಾಬ್ದಾರಿಗಳು ರಾಜಕೀಯ ಪ್ರತಿನಿಧೀಕರಣಗಳು ಸಂಸ್ಕೃತಿಯ ಒಳಕೋಶಗಳಲ್ಲಿ ಮಹಿಳೆಯನ್ನು ಪ್ರಮುಖವಾಗಿ ಯಾಕೆ ಒಳಪಡಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ನಾವು ಈಗ ಕಂಡುಕೊಂಡಿರುವ ಉತ್ತರಗಳಿಗಿಂತ ಭಿನ್ನವಾಗಿರುತ್ತವೆ. ಭಾರತದ ಮಹಿಳಾವಾದವು ಇಂದಿಗೂ ಪೂರ್ಣವಾಗಿ ತನ್ನ ವೈದಿಕಶಾಹಿಯ ಕವಚಗಳಿಂದ ಬಿಡಿಸಿಕೊಂಡೇ ಇಲ್ಲ. ಇಲ್ಲಿ ಎಂತಹ ವೈಪರೀತ್ಯಗಳು ಉಂಟಾಗಿವೆ ಎಂದರೆ, ಆಯಾಯ ಸಮುದಾಯ ಜಾತಿ ಜನಾಂಗ ಗಳಿಂದ ಬಂದ ಆಧಾರದ ಮೇಲೆಯೇ ಚರ್ಚೆಗಳು ಉರುಳುತ್ತಿವೆ. ಒಂದು ಹಂತಕ್ಕೆ ಇದು ಅನಿವಾರ್ಯವೇನೋ ಎನಿಸುವ ಮಟ್ಟಿಗೆ ಗೊಂದಲಗಳು ಏಳುತ್ತಿವೆ. ದಲಿತ ಮಹಿಳೆಯರು ಚಿಂತಿಸುವ ವಿಧಾನಕ್ಕೂ ವೈದಿಕ ಮೂಲದ ಮಹಿಳೆಯರ ಹೋರಾಟಕ್ಕೂ ಇದರಿಂದಲೇ ಭಿನ್ನಾಭಿಪ್ರಾಯಗಳು ಬಂದೊದಗಿವೆ. ಆಳದಲ್ಲಿ ಎಲ್ಲ ಜಾತಿಗಳ ಮಹಿಳೆಯರ ಸಮಸ್ಯೆಗಳು ಒಂದೇ ಎಂದು ತಾತ್ವಿಕವಾಗಿ ನಾವು ಒಪ್ಪಿಕೊಂಡರೂ ಇದು ಮಾತಿನಲ್ಲಿ ಕಂಡಂತೆ ಬದುಕಿನಲ್ಲಿ ಕಾಣಲಾರದು. ಜಾತಿನಾಶವಾಗಬೇಕು ಎಂದು ದಲಿತ ಮಹಿಳೆ ಅಂದಾಗ ಅದರಾಳಕ್ಕಿರಬಹುದಾದ ತಲ್ಲಣ, ಆಕ್ರೋಶ, ಅವಮಾನ, ನೋವು ಅದೇ ಬ್ರಾಹ್ಮಣ ಹೆಣ್ಣು ಮಗಳು ಅದೇ ಮಾತನ್ನು ಜಾತಿಯ ಬಗ್ಗೆ ಹೇಳುವಾಗ ಅಂತಾದ್ದೇ ರೀತಿಯಲ್ಲಿ ಅಭಿವ್ಯಕ್ತವಾಗುತ್ತದೆಂದು ಹೇಳಲಾಗದು. ವಿಚಿತ್ರ ಎಂದರೆ, ಭಾರತೀಯ ಜಾತಿ ಪರಂಪರೆ ಮಹಿಳಾ ಸಮಾಜಕ್ಕೂ ಬಡಿದು ಅವರನ್ನು ಮಾತ್ರ ಪ್ರಧಾನವಾಗಿ ಕಂಡುಕೊಂಡು ಅವರಲ್ಲದ ಹೊರಗಿನವರನ್ನು ದೂರವಾಗಿಯೇ ಕಾಣುವಂತೆ ಮಾಡಿದೆ. ಭಾರತದ ಉದ್ದಕ್ಕೂ ಇರುವ ಇಂತಹ ಅಸಮಾನ ಜಾತಿ ಮನಸ್ಸು ಮಹಿಳಾ ವಾದವನ್ನು ಬಿಚ್ಚಿಕೊಳ್ಳದಂತೆ ಮಾಡುತ್ತಿದೆ.

ಹೀಗಿರುವಾಗ ಜಾತಿಯ ಶೋಷಣೆಯನ್ನು ಯಾರು ಮೊದಲು ಕೇಳುತ್ತಾರೆ ಎಂಬುದು ಸರಳ ಪ್ರಶ್ನೆಯಾಗುವುದಿಲ್ಲ. ಮಧ್ಯಮ ವರ್ಗದ ಉನ್ನತ ಜಾತಿಯ ನಗರ ಕೇಂದ್ರಿತವಾದ ಉದ್ಯೋಗಸ್ಥ ಮಹಿಳೆಯರ ವಾದಕ್ಕೂ, ಲಯನ್ಸ್ ಕ್ಲಬ್‌ಗಳ ಉಪಶಾಖೆಯಂತಿರುವ ಉನ್ನತ ವರ್ಗದವರ ಮಹಿಳೆಯರು ಕಟ್ಟಿಕೊಳ್ಳುವ ಸಂಘಗಳಿಗೂ ಅವರ ಸಮಸ್ಯೆಗಳಿಗೂ ಅವರ ಅಧಿಕಾರ ಸಂಬಂಧಗಳಿಗೂ ಹಾಗೆಯೇ ಸುಶಿಕ್ಷಿತ ಓದಿನ ವಿಶ್ವವಿದ್ಯಾಲಯದ ಮಹಿಳೆಯರು ರೂಪಿಸಿಕೊಳ್ಳುವ ಚಿಂತನೆಗಳಿಗೂ ಮತ್ತು ಗ್ರಾಮೀಣ ಮಹಿಳೆಯರ ಸಮಸ್ಯೆಗಳಿಗೂ ಅಗಾಧವಾದ ಅಂತರಗಳಿವೆ. ಮಹಿಳೆಯೂ ಒಬ್ಬ ದಲಿತಳೇ ಎನ್ನುವುದು ಕೇಳಿಸಿಕೊಳ್ಳುವುದಕ್ಕೆ ಚಂದವೇ ಹೊರತು ಎಲ್ಲ ರೀತಿಯಿಂದಲೂ ಎಲ್ಲಾ ಮಹಿಳೆಯರೂ ದಲಿತರೇ ಎಂಬುದನ್ನು ಸೂಕ್ಷ್ಮ ಮನಸ್ಸಿನ ಯಾರೂ ಒಪ್ಪಲಾರರೆಂದು ನನ್ನ ನಂಬಿಕೆ. ಭಾರತದಂತಹ ವಿಕೃತ ಜಾತಿ ಶ್ರೇಣಿಯ ವಿಭಾಗಗಳು ಇಡಿಯಾಗಿ ಮಹಿಳೆಯರನ್ನು ಒಂದಾಗಿ ಮಾಡಿಲ್ಲ ಎಂಬುದು ನಿಜವಾಗಿದ್ದರೂ ಎಲ್ಲರೂ ಒಂದೇ ರೀತಿಯ ಶೋಷಣೆಗೆ ಒಳಗಾಗಿಲ್ಲ. ಗ್ರಾಮೀಣ ಭಾರತದ ಮಹಿಳಾ ಜಗತ್ತಿನಲ್ಲಿ ಅದರಲ್ಲೂ ಕೆಳ ಹಾಗೂ ಮಧ್ಯಮ ಜಾತಿಗಳಲ್ಲಿ ತುಂಬ ಅಮಾನಯ ವಾದಂತಹ ಹಲ್ಲೆಗಳು ಕಾಲಾಂತರದಿಂದಲೂ ಆಗುತ್ತ ಬಂದಿವೆ. ವೈದಿಕ ಪರಂಪರೆಯ ಸಹವಾಸವೇ ಇಲ್ಲದೆ ಮನುವಿನ ಪರಿಚಯವೇ ಇಲ್ಲದೆ ಜನಪದ ಪರಂಪರೆ ಕೂಡ ಪಿತೃ ಮೂಲ ಆಯುಧಗಳಿಂದ ಹಿಂಸಿಸಿದೆ. ಊಳಿಗಮಾನ್ಯ ವ್ಯವಸ್ಥೆಯ ಮೌಲ್ಯಗಳು ಸಾಮಾಜಿಕ ವಾಗಿ ಮಹಿಳೆಯನ್ನು ಭೀಕರವಾಗಿ ಹಿಂಸಿಸಿವೆ. ಅಂದರೆ ವೈದಿಕಶಾಹಿ ಮಾಡಬಹುದಾದ ಹಲ್ಲೆಗೆ ಪುರುಷ ಪ್ರಧಾನ ಪ್ರಭುತ್ವ ತನಗನಿಸಿದಂತೆಲ್ಲ ನಿಯಮಗಳನ್ನು ರೂಪಿಸಿಕೊಂಡಿದೆ. ಹಿಂದೂ ಧರ್ಮದ ಹೊಸ ಒಡಂಬಡಿಕೆಗಳು ಹೇಗೆ ಕ್ರೂರವಾಗಿದ್ದವೋ ಅದರ ಇನ್ನೊಂದು ಹಂತವಾಗಿ ಮಧ್ಯಯುಗದ ಚರಿತ್ರೆಯ ವೇಳೆಯಲ್ಲಿಯೂ ಕೂಡ ಆಕೆಯ ಅಧಿಪತ್ಯದ ಬಗ್ಗೆ ಊಳಿಗಮಾನ್ಯ ಮೌಲ್ಯಗಳು ಹುಟ್ಟಿಕೊಳ್ಳುವಂತೆ ಮಾಡಿವೆ.

ಹೀಗಾಗಿಯೇ ಹಿಂದೂಧರ್ಮವು ಹೆಣ್ಣನ್ನು ತನ್ನ ಪುರುಷ ಆಕಾರಕ್ಕೆ ಒಗ್ಗಿಸಿಕೊಳ್ಳಲು ಹೆಣಗಾಡಿದೆ. ಇದರ ಪ್ರಭಾವ ಶೋಷಣೆಯ ನಡುವೆಯೂ ನಮ್ಮಲ್ಲಿ ಎಷ್ಟರ ಮಟ್ಟಿಗೆ ಆಗಿದೆ ಎಂದರೆ ಭಾರತದ ಬಹುಪಾಲು ಮಹಿಳೆಯರು ಗಂಡಸರು ರೂಪಿಸುವ ಆಚರಣೆಗಳಲ್ಲಿ ಧ್ಯಾನಿಸಬೇಕಾಗಿದೆ. ಆಧುನಿಕ ಸಮಾಜಗಳಲ್ಲಿ ವಿಮುಕ್ತಿಯ ಧ್ಯಾನ ಕೂಡ ಪುರುಷರ ಗದ್ಯಾಕೃತಿ ಯಲ್ಲೆ ರೂಪುಗೊಳ್ಳುತ್ತಿದೆ. ಆಧುನಿಕ ಗದ್ಯ ಎಂದರೆ ಅದು ಇಪ್ಪತ್ತನೆ ಶತಮಾನದ ಪಶ್ಚಿಮ ಪ್ರಣೀತವಾದ ಒಂದು ಚಿಂತನೆ. ಆ ಗದ್ಯದಿಂದ ಅನಾವರಣಗೊಳ್ಳುವ ಚಿಂತನೆಯ ನೆಲೆಗಳು ಬಹುಮುಖೀ ಸಂಸ್ಕೃತಿಯ ಸಂವೇದನೆಯ ಸಂಯೋಗ ಬಿಂಬವಾಗಿ ಹುಟ್ಟಿರುವುದಿಲ್ಲ. ಪುರುಷ ಪ್ರಣೀತ ಗದ್ಯ ಮಾದರಿಗಳನ್ನು ಪುರುಷ ಪ್ರಧಾನ ಮೌಲ್ಯಗಳ ವಿರುದ್ಧವೇ ಬಳಸ ತೊಡಗಿರು ವುದು ಕುತೂಹಲಕರವಾಗಿದೆ. ಇದು ಆಕೆಯನ್ನು ಎಂತಹ ಚಿಂತನೆಯ ಮಾದರಿಗಳಿಗೆ ತರಬಲ್ಲದೆಂಬುದನ್ನು ಪ್ರಶ್ನಿಸುವಂತೆ ಮಾಡುವುದರ ಜೊತೆಗೆ ಮಹಿಳಾ ಚಿಂತನೆಯ ಮಿತಿಯನ್ನು ಹೇಳುತ್ತಿದೆ.

ಹಾಗೆಯೇ ವಶಾಹತುಶಾಹಿ ಚಿಂತನ ಮಾದರಿಗಳು ಇವತ್ತು ಮಹಿಳಾ ಸಂಕಥನದ ಮೇಲೆ ಸಾಕಷ್ಟು ಪ್ರಭಾವ ಬೀರಿವೆ. ಹೇಗೆ ವೈದಿಕ ಪರಂಪರೆಯ ಆಕೃತಿಗಳು ಮೇಲ್‌ಜಾತಿಯ ಮಹಿಳಾ ಚಿಂತಕಿಯರ ಸಂದರ್ಭದಲ್ಲಿ ಬೇರೂರಿರುತ್ತವೆಯೋ ಅಂತೆಯೇ ಕೆಳಜಾತಿಗಳ ಮಹಿಳಾ ವಾದದಲ್ಲೂ ಅಂತದೇ ಜಾತಿ ನೆಲೆಯೂರಿದೆ. ಹೀಗಿರುವ ಜಾತಿ ಸೂಕ್ಷ್ಮಗಳನ್ನು ಬಿಡಿಸಿಕೊಳ್ಳದೆ ಇರುವುದರಿಂದಲೇ ಎಲ್ಲ ಸಮುದಾಯದ ಮಹಿಳಾ ಚಿಂತನೆಗಳು ಭಾರತದಲ್ಲಿ ಈವರೆಗೆ ಐಕ್ಯವಾಗಲು ಸಾಧ್ಯವಾಗಿಲ್ಲ. ಪ್ರಭುತ್ವವನ್ನು ಪ್ರಶ್ನಿಸುವ ಎಲ್ಲ ಮಹಿಳೆಯರ ಚಿಂತನೆಗಳಲ್ಲೂ ಏಕರೂಪತೆ ಇಲ್ಲ. ಈ ವಿವಿಧ ಧ್ವನಿಗಳಲ್ಲೇ ಇರಬಹುದಾದ ಸಮಷ್ಠಿ ಸಂಗಮ ಬಿಂದುವಿನ ಗುರುತಿಗಾಗಿ ಅನಿವಾರ್ಯವಾಗಿ ಹುಡುಕಾಡುವ ಹಂತದಲ್ಲಿ ಮಹಿಳೆ ಯರು ಒಂದಾಗಬೇಕಾಗಿರುತ್ತದೆ.

ಯಾವುದೋ ಒಂದು ಕಾಲದ ಒಬ್ಬ ತರಲೆ ಮುನಿಯಾದ ಮನುವಿನ ವಿಚಾರಗಳನ್ನು ತಿರಸ್ಕರಿಸಲು ನಮ್ಮ ಮಹಿಳೆಯರು ಇಷ್ಟೆಲ್ಲ ಶಕ್ತಿ ಸಮಯ ವ್ಯಯ ಮಾಡಬೇಕಾದ್ದಿಲ್ಲ. ಮನು ಒಬ್ಬ ಸಾಮಾನ್ಯ ವಿಕಾರಿ ಅಷ್ಟೆ. ಅವನಿಗಿಂತಲೂ ಭೀಕರವಾಗಿರುವವರು ಮಹಿಳೆಯರ ಅಕ್ಕಪಕ್ಕದಲ್ಲೇ ಇರುತ್ತಾರೆ. ಇವತ್ತಿಗೂ ಮನುವಿನ ಬಗ್ಗೆ ಮಾತನಾಡುತ್ತಾ ಕೆಂಡಕಾರುವ ಮಹಿಳಾ ಚಿಂತಕಿಯರಿಗೇನೂ ನಮ್ಮಲ್ಲಿ ಕೊರತೆ ಇಲ್ಲ. ಇಷ್ಟು ಕಾಲದವರೆಗೂ ಅವನ ಬಗ್ಗೆಯೇ ಯಾಕೆ ನಮ್ಮ ಚಿಂತಕಿಯರು ತಲೆಕೆಡಿಸಿಕೊಂಡರೋ ನನಗಂತೂ ವಿಚಿತ್ರ ಎನಿಸುತ್ತದೆ. ಮನುಸ್ಮೃತಿಯ ಮೂಲಕವೇ ನಮ್ಮ ಪ್ರತಿರೋಧಗಳು ಚಿಂತನೆಗಳು ಆರಂಭ ವಾಗಬೇಕೆಂದು ಗಟ್ಟಿಯಾಗಿ ಮಹಿಳೆಯರು ನಂಬಿದ್ದರೆ ಅದು ಸೂಕ್ತವೆಂದು ಕಾಣುವುದಿಲ್ಲ. ‘ಮನು’ ಎಂಬುದು ಪುರುಷ ವ್ಯವಸ್ಥೆಯ ಒಂದು ಸಂಕೇತವೆಂದು ಭಾವಿಸಿ ಅದರ ವಿಕಾರಗಳು ಸಾಮಾಜಿಕವಾಗಿ ಹಬ್ಬಿದ್ದನ್ನು ಬೇರೆ ಬೇರೆ ನೆಲೆಗಳಿಂದ ನಾವಿಂದು ಚರ್ಚಿಸಬೇಕಾಗಿದೆ.

ಇಂತಹ ಹುಡುಕಾಟಗಳಿಗೆ ಜನಪದ ಮೌಖಿಕ ಪರಂಪರೆಯಲ್ಲಿ ಯಥೇಚ್ಛವಾದ ಆಕರಗಳಿವೆ. ವೈದಿಕ ಸಂಕೋಲೆಗಳಿಗೆ ಸಿಲುಕಿದ ಉನ್ನತ ಜಾತಿಯ ಮಹಿಳೆಯರಿಗೆ ಜನಪದ ಪರಂಪರೆಯ ಮಹಿಳೆಗೆ ಇದ್ದಂತಹ ಬಿಡುಗಡೆಯ ಮಾರ್ಗಗಳು ಇರಲಿಲ್ಲ. ವೈದಿಕ ಮಹಿಳೆ ಭಕ್ತಿ ಎಂಬ ಒಂದೇ ಮುಕ್ತಿಯಲ್ಲಿ ಹಾಗೂ ಸಂಸಾರವೆಂಬ ಮೋಹದಲ್ಲಿ ಮುಳುಗಿ ತನಗಿದ್ದ ಹೊರ ಮಾರ್ಗಗಳನ್ನು ಕಂಡುಕೊಳ್ಳಲೇ ಇಲ್ಲ. ದೇವರನ್ನು ಆಚರಿಸುವುದರಲ್ಲೇ ತನ್ನೆಲ್ಲ ಸಂಕಟಗಳನ್ನು ಅರ್ಪಿಸಿಕೊಂಡು ಬೆಳೆದ ಮೇಲ್‌ಜಾತಿಯ ಮಹಿಳೆಯರಿಗೆ ಅಗ್ರಹಾರವೇ ದೊಡ್ಡ ಜಗತ್ತಾಗಿ ಹೋಗಿತ್ತು. ಅಗ್ರಹಾರದ ದೈವಿಕ ಸಂಕೋಲೆಯ ವಿಧಿ ಬರಹದ ಕೋಟೆಯನ್ನು ದಾಟಿ ಬರಲು ಸಾಧ್ಯವೇ ಇರಲಿಲ್ಲ. ಉನ್ನತ ಜಾತಿಯಿಂದ ತಿರಸ್ಕರಿಸಿಕೊಂಡು ಕೆಳಜಾತಿಗಳ ಒಡಲಿಗೂ ಆಕೆ ಬರುವಂತಿರಲಿಲ್ಲ. ಹಾಗೆ ಬಂದವರಿಗೆ ಬೇರೆಯೇ ಪುರಾಣಗಳು ಹುಟ್ಟಿಕೊಳ್ಳುತ್ತಿದ್ದವು. ವೈದಿಕ ಪ್ರಭುತ್ವದ ವಿರುದ್ಧ ಹೋರಾಡಲು ಸ್ವತಃ ಅವಳ ಧರ್ಮದಲ್ಲೇ ಆಕೆಗೆ ತಡೆಯಾಗಿದ್ದು ಅವೆಲ್ಲವನ್ನೂ ಸುಟ್ಟು ಹಾಕುವಂತೆ ಭಾರತೀಯ ಮಹಿಳಾ ಲೋಕ ಎಚ್ಚರಗೊಳ್ಳಬೇಕಾದರೆ ಯುಗಗಳೇ ಕಳೆದು ಹೋದವು.

ಮೌಖಿಕ ಸ್ವಾತಂತ್ರ್ಯದ ವೈರುಧ್ಯ ದನಿ

ದೇವರನ್ನು ಭಜಿಸುವುದು ಪೂಜಿಸುವುದು ಧಾರ್ಮಿಕ ಕ್ರಿಯೆಗಳಿಗೆ ಪೂರಕವಾಗಿರುವುದು ಮತ್ತು ಪುರುಷನಿಗೆ ಎಲ್ಲ ರೀತಿಯಿಂದಲೂ ಒತ್ತಾಸೆಯಾಗಿರುವುದಷ್ಟರಲ್ಲೇ ವೈದಿಕ ಮಹಿಳಾ ಲೋಕ ಅನೇಕ ಶತಮಾನಗಳನ್ನು ಕಳೆದುಕೊಂಡಿದೆ. ಭಾರತದ ಉಳಿದೆಲ್ಲ ಕೆಳಜಾತಿ ಮಹಿಳೆಯರಿಗಿದ್ದ ಎಚ್ಚರ ಅರಿವು ಹೋರಾಟ ಮತ್ತು ಪ್ರಜ್ಞೆಗಳು ಹೆಚ್ಚು ಸುಶಿಕ್ಷಿತ ಎಂದು ತೋರಿಸಿಕೊಂಡ ವೈದಿಕ ಮಹಿಳೆಗೆ ಇಲ್ಲದಿದ್ದದ್ದು ಬಹಳ ಆಶ್ಚರ್ಯಕರವಾಗಿದೆ. ಜನಪದ ಮಹಿಳಾ ಲೋಕ ತನ್ನೆಲ್ಲ ಅಸಹಾಯಕತೆಯನ್ನು ಸೃಜನಶೀಲ ಅಭಿವ್ಯಕ್ತಿಯ ಕಥನ ಮತ್ತು ಕಾವ್ಯದ ಮಾರ್ಗಗಳಲ್ಲಿ ದೇಸೀ ಸಂವೇದನೆಯಲ್ಲಿ ಕಟ್ಟಿಕೊಳ್ಳುತ್ತಾ ಬಂದದ್ದೇ ಆಕೆ ಜನಪದ ಪರಂಪರೆಯಲ್ಲಿ ವಿಸ್ಮೃತಿಗೆ ಒಳಗಾಗದಂತೆ ಉಳಿಸಿರುವುದು. ಆಕೆ ತನ್ನ ಅಸಹಾಯಕ ಸ್ಥಿತಿಯನ್ನೇ ತನ್ನ ಮೌಖಿಕ ಪರಂಪರೆಯನ್ನು ಕಟ್ಟಿಕೊಳ್ಳಲು ಬಳಸಿಕೊಂಡಿದ್ದಾಳೆ. ತನ್ನ ಮತ್ತು ಸಮುದಾಯದ ಅನುಭವವನ್ನು ಕಥನ ಮಾಡಿ ಆ ಕತೆಯ ಒಳಗೇ ಸಾಮಾಜಿಕ ಸಾಂಸ್ಕೃತಿಕ ಸಂಕಥನವನ್ನು ಬೆರೆಸಿ ತನ್ನ ಅಂತರಂಗವನ್ನು ದಾಖಲಿಸಿದ್ದಾಳೆ. ಹೀಗಾಗಿಯೇ ಜನಪದ ಆಚರಣೆ ನಂಬಿಕೆ ಸಂಪ್ರದಾಯಗಳಲ್ಲೂ ಮಹಿಳೆಯರ ಅಂತರಾರ್ಥಗಳು ಸಾಂಕೇತಿಕವಾಗಿ ಬೇರೂರಿರುವುದು. ಅಂತೆಯೇ ಬಹುಪಾಲು ಎಲ್ಲ ಕಾಲದ ಮೌಖಿಕ ಪರಂಪರೆಯಲ್ಲೂ ಮಹಿಳೆಯರದೇ ಆದ ವಿಶಿಷ್ಟ ಛಾಪು ಇರುತ್ತದೆ. ಜಾತಿ ಪ್ರಧಾನವಾದ ಭಾರತದ ಗ್ರಾಮೀಣ ಸಂದರ್ಭದಲ್ಲಿ ಇದೇ ಅಂಶ ಬೇರೆ ಬೇರೆ ರೀತಿಯಲ್ಲೂ ತನ್ನ ಗುಣವನ್ನೂ ಗುರುತನ್ನೂ ತೋರಿಸಿಕೊಂಡಿರುತ್ತದೆ. ಕೆಳಜಾತಿಗಳ ಮಹಿಳೆಯರು ತಮ್ಮ ರೋಷ, ಪ್ರತಿಭಟನೆ, ಅಸಹಾಯಕತೆ, ಕಿಚ್ಚು ಮತ್ತು ತ್ಯಾಗಗಳನ್ನು ತೋರಿಸಲು ಮೌಖಿಕ ಪ್ರಕಾರಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಮೌಖಿಕವಾಗಿ ಹಾಡಿಕೊಳ್ಳುವ ಈ ಸ್ವಾತಂತ್ರ್ಯವು ಅತ್ಯಂತ ಸಂಕೀರ್ಣವಾಗಿ ರೂಪ ವಿರೂಪವನ್ನೆಲ್ಲ ಹಾಡಲು ಅವಕಾಶ ಕೊಟ್ಟಿದೆ. ಅಕ್ಷರದಿಂದ ದೂರವಿದ್ದು, ಶಾಸನಗಳಿಂದ ಆಚೆ ಇದ್ದು, ಬರೆಯುವ ಸಂಸ್ಕೃತಿಗೆ ವಿಮುಖವಾಗಿದ್ದು ಹೇಳುವ ಹಾಡುವ ತೋರುವ ನೆನಪಿಸುವ ರೀತಿಯಲ್ಲಿ ತನ್ನನ್ನೇ ಸಂಕೇತ ಪ್ರತಿಮೆ ರೂಪಕಗಳಿಗೆ ರೂಪಾಂತರಿಸಿಕೊಂಡು ಒಂದು ಬಗೆಯಲ್ಲಿ ಭಾವಾಂತರಿಸಿಕೊಂಡು ಕಟ್ಟಿರುವ ಕಥನಗಳು ಆಕೆಯ ಸಾಂಸ್ಕೃತಿಕ ಪ್ರತಿಭಟನೆಯ ಸ್ವರೂಪವನ್ನು ತೋರಿಸಿಕೊಡುತ್ತವೆ.

ಗ್ರಾಮೀಣ ಭಾರತೀಯ ಮಹಿಳೆಯರು ತಮ್ಮ ಚಿಂತನೆಗಳ ಪ್ರತಿಮಾತ್ಮಕ ಅಭಿವ್ಯಕ್ತಿ ಯನ್ನು ರೂಪಿಸುವಾಗ ಸ್ವತಃ ತನ್ನ ನೆಲದ ದನಿಯ ಹಾಗೂ ಸಾರದಿಂದಲೇ ತನ್ನನ್ನು ಕಟ್ಟಿಕೊಳ್ಳು ತ್ತಲೇ ತನ್ನ ಸುತ್ತಲ ಪರಿಸರವನ್ನೂ ಸಮಷ್ಠಿ ನೆಲೆಯಿಂದ ಕಟ್ಟಿಕೊಡುತ್ತಿರುವುದು ವಿಶಿಷ್ಟ ವಾಗಿದೆ. ದೇಸಿ ಎನ್ನುವುದೇ ಸಮಷ್ಠಿತನವನ್ನು ವ್ಯಕ್ತಿ ನೆಲೆಯಿಂದ ರೂಪಿಸುತ್ತಾ ವ್ಯಕ್ತಿ ನೆಲೆ ಯನ್ನು ಸಮಷ್ಠಿ ತನದಿಂದ ನಿರ್ಮಿಸುತ್ತಾ ಸಮುದಾಯದ ಸಾಂಸ್ಕೃತಿಕ ಸ್ಮೃತಿ ಕೋಶಗಳಿಂದ ತಿದ್ದಿ ರೂಪಾಂತರಿಸುತ್ತಾ ಹೊಸದನ್ನು ಹಳೆಯದರೊಳಗಿಡುತ್ತಾ ಹಳೆಯದನ್ನು ಹೊಸದ ರೊಳಕ್ಕೆ ತುಂಬುತ್ತಾ ತನ್ನ ಅನನ್ಯತೆಯನ್ನು ಉಳಿಸಿಕೊಂಡೇ ಅರಿವಿನ ವಿನಯದಿಂದ ಪರಂಪರೆಯ ಪಯಣವನ್ನು ನಿರಂತರವಾಗಿ ಬೆಳೆಸುತ್ತಾ ಹೋಗುವಂತದಾಗಿರುತ್ತದೆ. ಇಂತಹ ದೇಸೀಯ ಸಂವೇದನೆಯ ತಾತ್ವಿಕತೆಯನ್ನು ಕೂಡ ಅನೇಕರು ಅನುಮಾನಿಸುವುದಿದೆ. ಬಲಪಂಥೀಯರ ದೇಸಿ ಚಿಂತನೆಯನ್ನು ಬಡಿಯುತ್ತಲೆ ದಲಿತ ಮೂಲದ ಇಂತಹ ದೇಸಿ ಚಿಂತನೆಯನ್ನು ದಮನಕಾರಿಯಾಗಿ ಹತ್ತಿಕ್ಕುವ ವಿದ್ವಾಂಸರು ಈಗ ಸಾಕಷ್ಟು ಮುಂದೆ ಬಂದಿದ್ದಾರೆ. ಮಹಿಳೆಯರ, ದಲಿತರ, ಆದಿವಾಸಿಗಳ ಅಲೆಮಾರಿಗಳ ಹಾಗು ಅಲ್ಪಸಂಖ್ಯಾತರ ಹಿನ್ನೆಲೆಯಿಂದ ನಿರ್ವಚಿಸುವ ದೇಸೀವಾದವನ್ನು ಅವ್ಯಕ್ತ ಚರಿತ್ರೆಯ ಬೇರುಗಳಿಂದ ಕಂಡಾಗ ಮಾತ್ರ ವಿರೋಧಿಗಳಿಗೆ ಬೆಳಕು ಕಾಣಲು ಸಾಧ್ಯ. ಬೌದ್ದಿಕ ಅಸ್ಪೃಶ್ಯತೆಯ ಕುರುಡುತನವನ್ನು ಪಾಲಿಸುವವರು ಮಾತ್ರ ಇಂತಹ ದೇಸಿವಾದವನ್ನು ತಿರಸ್ಕರಿಸಬಲ್ಲರು. ಹಾಗೆಯೆ ತಮ್ಮ ಶ್ರೇಷ್ಟತೆಯ ವ್ಯಸನದಲ್ಲಿ ತಾವೇ ಸನಾತನವಾಗಳಿಗಿಂತ ತಮ್ಮ ವಿಚಾರದ ಆಯುಧಗಳನ್ನು ಬೀಸಿ ವಿಚಾರ ಹತ್ಯೆಗೆ ಮುಂದಾಗಬಲ್ಲರು. ಇಂತಹ ವಿಶಿಷ್ಟ ಬಗೆಯ ಸಂವೇದನೆ ಆದಿಮವಾದದ್ದೆಂದರೂ ಒಪ್ಪುತ್ತದೆ. ಮಾತೃ ಪಿತೃ ಎರಡೂ ಸೃಜನಶೀಲ ಶಕ್ತಿಗಳು ಏಕತ್ರವಾಗಿ ಅಭಿವ್ಯಕ್ತಿಗೊಳ್ಳುವುದು ಬಹಳ ಸಂಕೀರ್ಣವಾಗಿರುತ್ತದೆ. ಆದರೆ ನಮ್ಮ ಜನಪದರು ಎಲ್ಲ ಬಗೆಯ ಸಂಕೀರ್ಣತೆಯನ್ನೂ ಅತ್ಯಂತ ಸರಳವಾಗಿ ನಿರೂಪಿಸಿದ್ದಾರೆ. ಇದರ ಪ್ರತಿಭಟನೆಯ ಸ್ವರೂಪವೇ ಬಹಳ ನಿಗೂಢವಾಗಿರುತ್ತದೆ. ಅರ್ಥಗಳನ್ನು ಬಚ್ಚಿಡುವುದೇ ಇಂತಲ್ಲಿ ಹೆಚ್ಚು.

ಇದರ ಜೊತೆಯಲ್ಲೇ ವೈದಿಕ ಮೂಲದ ಸಾಹಿತ್ಯವನ್ನು ಹೆಣ್ಣಿನ ಸ್ಥಾನದಲ್ಲಿಟ್ಟು ನೋಡಿದರೆ ಯಾವುದು ‘ದೇಸೀ’ ಎನ್ನುವುದು ಗೊತ್ತಾಗುತ್ತದೆ. ಈ ಮಾತನ್ನು ಹೇಳಿದ್ದರ ಹಿನ್ನೆಲೆಯಲ್ಲೇ ಮಹಿಳಾ ಜಾನಪದವನ್ನು ಪ್ರತ್ಯೇಕವಾಗಿ ಚರ್ಚಿಸಬಹುದು. ಮಹಿಳಾ ಜಾನಪದ ಎಂದರೆ ಅದು ನಮ್ಮ ಗ್ರಾಮೀಣ ಮಹಿಳಾ ಭಾರತದ ಸಾಂಸ್ಕೃತಿಕ ಸಂಕಥನದ  ಜಾತಿ ಮತ್ತು ಲಿಂಗ ತಾರತಮ್ಯದ ಚರಿತ್ರೆಯ ಪ್ರಸ್ತಾನಗಳನ್ನು ಬಹು ನೆಲೆಯಲ್ಲಿ ಬಹು ಧ್ವನಿಗಳಲ್ಲಿ ಹೇಳುತ್ತಾ ಹೋಗುವಂತದ್ದು. ಹಾಗೆಯೇ ಮಹಿಳಾ ಪರಂಪರೆಯು ಮೌಕವಾಗಿ ತನ್ನ ಸೊಲ್ಲು ಹಾಗೂ ಬದುಕಿನ ನೆಲೆಗಳನ್ನು ಹೇಳುವಾಗ ನಿರ್ಜಾತಿಕರಣದಿಂದಲೂ ಚಾಚಿ ಕೊಂಡಿರುತ್ತದೆ. ತನ್ನ ಊರು ಕೇರಿ ಜನಗಳ ಜೊತೆಯಲ್ಲೇ ನಂಬಿಕೆಯ ಪರಂಪರೆಯ ಬಗ್ಗೆ ಕಥನ ಕಟ್ಟಿ ಹಾಡುವಾಗ ಅದು ಯಾರ ಬದುಕಿನ ಬಗೆಗಾದರೂ ಹೊಂದಿಕೆಯಾಗಬಹುದು ಎಂಬಂತಿರುವುದರಿಂದ ಜಾತಿಯ ನಿಷೇಧಗಳು ಅದಕ್ಕೆ ಅಂಟಿಕೊಂಡಿರುವುದಿಲ್ಲ. ಭಾರತದ ಜಾನಪದದಲ್ಲಿ ಜಾತಿಯೂ ಒಂದು ದೊಡ್ಡ ಶಕ್ತಿಯಾಗಿ ಒಳಗೊಂಡಿದ್ದರೂ ಮಹಿಳಾ ಸಂಕಥನದ ವೇಳೆ ಆಕೆಯ ಮೌಖಿಕ ಪರಂಪರೆಯಲ್ಲಿ ಜಾತಿಯನ್ನು ವಿಶೇಷವಾಗಿ ಕಾಣಲು ಆಗುವುದಿಲ್ಲ. ಜಾತಿಯನ್ನು ಮೀರಿದ ಅನುಭವ ಕಥನಗಳು ಇಲ್ಲಿ ಬರುವುದರಿಂದ ಇಡಿಯಾಗಿ ಮಹಿಳೆಯರನ್ನೆಲ್ಲ ಒಂದಾಗಿ ಕಾಣುವ ವಿಶಾಲ ನೋಟ ಮಹಿಳಾ ಜಾನಪದಕ್ಕೆ ಸಾಧ್ಯವಾಗಿದೆ. ದೊಡ್ಡ ಗದ್ದಲ ಮಾಡದೆಯೆ  ವಿಶೇಷವಾದ ಹೋರಾಟಗಳನ್ನು ರೂಪಿಸದೆಯೇ ಮೌನವಾಗಿ ಗಾಢವಾಗಿ ಅಲಿಖಿತವಾಗಿ ಮೌಖಿಕವಾಗಿ ಸಂಕೇತ ಪ್ರತಿಮೆ ರೂಪಕ ಪ್ರಧಾನವಾದ ಭಾಷೆಯಲ್ಲಿ ತಮ್ಮ ಸುಖ ದುಃಖವನ್ನು ಮಾರ್ಮಿಕವಾಗಿ ಬಿಂಬಿಸಿರುವ ಜನಪದ ಮಹಿಳೆಯರು ನಮ್ಮ ಕಾಲಕ್ಕೆ ವಿಶೇಷವಾಗಿ ಪ್ರಸ್ತುತವಾಗುತ್ತಾರೆ. ಮೌನದಿಂದಲೇ ದೊಡ್ಡ ಪ್ರತಿರೋಧವನ್ನು ತೋರುತ್ತ ಹಾಗೆ ಪ್ರತಿರೋಧದ ಒಳಗೇ ಮಹಿಳಾ ಸಂಸ್ಕೃತಿಯ ಸ್ಮೃತಿಗಳನ್ನು ನಿರೂಪಿಸಿರುವುದು ಚರಿತ್ರೆಯ ದೃಷ್ಟಿಯಿಂದ ಮಹತ್ವದ್ದಾಗಿದೆ.

ಮೇಲು ನೋಟಕ್ಕೆ ಪುರುಷ ವ್ಯವಸ್ಥೆಯನ್ನು ಒಪ್ಪುವಂತೆ ಮಹಿಳಾ ಮೌಖಿಕ ಪರಂಪರೆ ಕಂಡರೂ ಅದರೊಳಗೆ ಪುರುಷ ಮೂಲ ಧೋರಣೆಗಳನ್ನು ತಿರಸ್ಕರಿಸಿರುತ್ತದೆ. ಇಲ್ಲವೇ ಒಪ್ಪಿಕೊಂಡಂತೆ ನಟಿಸಿ ಅದರ ವಿಕಾರವನ್ನು ಹಾಡಿ ಹೊಗಳಿ ಒಪ್ಪಿಯೇ ವ್ಯಂಗ್ಯ ಮಾಡಿದಂತೆ ಆ ವ್ಯಂಗ್ಯದ ಒಳಗೆ ಗಾಢವಾದ ವಿಷಾದವನ್ನು ವಿರೋಧವನ್ನು ತೋರಿರುತ್ತದೆ. ಜಾತಿ ವ್ಯವಸ್ಥೆಯ ಒಳಗೇ ಪುರುಷ ಪ್ರಭುತ್ವದ ವಿಕಾರವನ್ನು ದಿಕ್ಕರಿಸುವ ಎಷ್ಟೋ ವಿವರಗಳು ಜಾನಪದದಲ್ಲುಂಟು. ತನಗೆ ಇಷ್ಟವಿಲ್ಲದ್ದನ್ನು ಮಾಡುತ್ತಲೇ ವಿರೋಧಿಸಬೇಕಾದ ಹಾಗೂ ಆ ವಿಕೃತ ಮೌಲ್ಯಗಳನ್ನು ಒಪ್ಪಿಕೊಂಡೇ ಪ್ರತಿಭಟಿಸಬೇಕಾದ ಸಂಕಷ್ಟ ಮಹಿಳೆಯರಿಗಿದ್ದ ಕಾರಣದಿಂದಲೇ ಅನೇಕ ಕೆಳಜಾತಿಗಳ ಜಾನಪದ ಒಂದೇ ಹಂತದಲ್ಲಿ ಜಾತಿಯನ್ನು ಊಳಿಗ ಮಾನ್ಯ ಪ್ರಭುತ್ವವನ್ನು ಗಂಡಸಿನ ಅಂದರೆ, ಪಿತೃ ಪ್ರಧಾನ ಸಂಸ್ಕೃತಿಯ ವಕ್ರತೆಯನ್ನು ಸಾಂಕೇತಿಕವಾಗಿ ಅಲ್ಲಗಳೆಯುತ್ತಾ ತನ್ನ ಸಂಕಷ್ಟವನ್ನು ತೋಡಿಕೊಳ್ಳುತ್ತದೆ.

ಸಂಸ್ಕೃತಿ ನಿಷ್ಟ ಅಭಿವ್ಯಕ್ತಿ

ಒಂದೇ ಹಂತದಲ್ಲಿ ಭಾರತೀಯ ಮಹಿಳಾ ಲೋಕವು ಅನೇಕ ಸವಾಲುಗಳಿಗೆ ಮುಖಾ ಮುಖಿ ಆಗುತ್ತಿರುತ್ತದೆ. ಕೇವಲ ಪುರುಷನೊಬ್ಬನೇ ಆಕೆಯ ಗುರಿಯಲ್ಲ. ಅದರೊಟ್ಟಿಗೇ ಯಾವುದಾವುದೋ ಸಂಕೋಲೆಗಳು ಆಕೆಯನ್ನು ಬಂದಿಸಿರುತ್ತವೆ. ಜಾತಿವ್ಯವಸ್ಥೆ ಪುರುಷ ವ್ಯವಸ್ಥೆಯ ಮಧ್ಯೆ ಆಧುನಿಕ ಜಗತ್ತಿನ ಸವಾಲುಗಳು ಇವತ್ತು ಮಹಿಳಾ ಸಮಾಜವನ್ನು ಆವರಿಸಿಕೊಂಡಿರುತ್ತವೆ. ತಾಳ್ಮೆಯಿಂದ ನೋಡಿದರೆ ಹೇಗೆ ಜನಪದ ಮೌಖಿಕ ಪರಂಪರೆ ಎಲ್ಲ ಸವಾಲುಗಳನ್ನೂ ಒಟ್ಟಿಗೇ ಎದುರು ಹಾಕಿಕೊಂಡು ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿರುತ್ತದೆ ಎಂಬುದನ್ನು ಕಂಡುಕೊಳ್ಳಬಹುದು. ಸಂಸ್ಕೃತಿಯ ಸ್ಥಿತ್ಯಂತರಗಳಲ್ಲಿ ಎಲ್ಲ ಮಾನಯ ಸಂಬಂಧಗಳು ಪುರುಷ ಮತ್ತು ಮಹಿಳೆಯರಿಬ್ಬರ ಸಂದರ್ಭದಲ್ಲೂ ಉಳಿದು ಕೊಂಡಿರುತ್ತವೆ ಎಂಬುದು ಮುಖ್ಯ. ಗ್ರಾಮ ದೇವತೆಗಳ ಆಚರಣೆಯ ಸಂದರ್ಭಗಳಲ್ಲಿ ಇಂತಹ ನಿಗೂಢ ಅರ್ಥಪೂರ್ಣ ಸಂಬಂಧಗಳು ಉಳಿದುಕೊಂಡು ಬಂದಿರುತ್ತವೆ. ಮಹಿಳೆಯರದೇ ಪ್ರಧಾನವಾದ ಗ್ರಾಮ ದೈವಗಳ ಆಚರಣೆಯ ಮೂಲ ಉದ್ದೇಶ ಸಮುದಾಯದ ಸಮಷ್ಠಿ ಹಿತದ ಆಶಯವಿರುತ್ತದೆ. ಅನೇಕ ಆದಿವಾಸಿಗಳಲ್ಲಂತೂ ಪುರುಷ ಹಾಗೂ ಮಹಿಳೆ ಇಬ್ಬರ ಸಹಭಾಗಿತ್ವದಿಂದಲೇ ಸಂಸ್ಕೃತಿಯ ನಿಯಮಗಳು ಬದ್ಧತೆಗಳು ಕಟ್ಟುವ ಪರಂಪರೆ ತೀರ್ಮಾನವಾಗಿರುತ್ತವೆ. ಮೇಲು ನೋಟಕ್ಕೆ ಮೂಢನಂಬಿಕೆಯಂತೆ ಕಾಣುವ ಜಾನಪದ ಲೋಕ ಅಂತರಂಗದಲ್ಲಿ ನಿಸರ್ಗ ಪ್ರಧಾನವಾದ ಜೀವ ಕೇಂದ್ರಿತವಾದ, ಪುರುಷ ಪ್ರಕೃತಿ ಎರಡನ್ನೂ ಒಂದೇ ನಾದದಲ್ಲಿ ನುಡಿಸುವ ಪ್ರವೃತ್ತಿಯದಾಗಿರುತ್ತದೆ. ಮಾತೃ ಪ್ರಧಾನ ಗುಣಗಳನ್ನು ಮಾತ್ರ ವಿಶೇಷವಾಗಿ ಇಂತಹ ಮಾತುಗಳಿಗೆ ಅನ್ವಯಿಸಿ ಹೇಳಬಹುದು. ನಾವು ಪಶ್ಚಿಮದ ರ‍್ಯಾಡಿಕಲ್ ಚಿಂತನೆಗಳನ್ನು ನಮ್ಮ ಮಹಿಳೆಯರ ಸಂದರ್ಭದಲ್ಲೂ ತಳುಕು ಹಾಕಿ ನೋಡುವುದು ಅರ್ಥಪೂರ್ಣ ಅನಿಸಲಾರದು. ಪಶ್ಚಿಮದ ಬೌದ್ದಿಕ ಚಿಂತನೆಗಳಿಗೆ ಅವರದೇ ಆದ ಸಂಸ್ಕೃತಿಯ ಪ್ರೇರಣೆಗಳಿರುತ್ತವೆ. ವಿಶ್ವದ ಎಲ್ಲ ಮಾನವರಿಗೂ ಮೂಲ ಪ್ರವೃತ್ತಿಗಳು ಒಂದೇ ಆಗಿ ಕಂಡರೂ ಆ ಮೂಲ ಪ್ರವೃತ್ತಿಗಳನ್ನು ನಿರ್ವಹಿಸಿಕೊಳ್ಳುವಾಗ ಎಲ್ಲರೂ ಒಂದೇ ರೀತಿಯಲ್ಲಿ ದಾರಿಗಳನ್ನು ಕಂಡುಕೊಳ್ಳುವುದಿಲ್ಲ. ಹಸಿದ ಅಸ್ಪೃಶ್ಯ ಹೆಣ್ಣುಮಗಳು ತನ್ನ ಮಗುವಿಗೆ ಮಾಡುವ ಆರೈಕೆಗೂ ಅದೇ ಮಧ್ಯಮ ಜಾತಿಯ ಹೆಂಗಸು ತನ್ನ ಹಸಿವಿಗೆ ಕಂಡುಕೊಳ್ಳುವ ತಂತ್ರಗಳಿಗೂ ಅಂತರವಿದೆ. ನಾವು ತಿನ್ನುವ ಆಹಾರ ಪದ್ಧತಿಯಲ್ಲೇ ನಮ್ಮ ನಮ್ಮ ದಾರಿಗಳೂ, ಸಂವೇದನೆಗಳೂ, ಅರ್ಥಗಳೂ ಹುಟ್ಟಿಕೊಂಡಿರುತ್ತವೆ. ಅಂದರೆ ಪಶ್ಚಿಮದ ಚಿಂತನೆ ಮೂಲ ಪ್ರವೃತ್ತಿಗಳ ನೆಲೆಯಿಂದ ಎಲ್ಲದಕ್ಕೂ ಉತ್ತರ ಹೇಳುವಾಗ ಯಾವುದೋ ಹಳ್ಳಿಯ ನಮ್ಮ ಹೆಂಗಸು ಬೇರೆ ಹೇಳುವುದು ಇರುತ್ತದೆ.

ಭಾರತದ ಉದ್ದಕ್ಕೂ ಇರುವ ಜನಪದ ಮಹಾಕಾವ್ಯಗಳನ್ನು ಸಮಗ್ರವಾಗಿ ಈತನಕ ಸಂಗ್ರಹಿಸದೆ ಇದ್ದರೂ ಕೂಡ ಸ್ಥೂಲವಾಗಿ ಜನಪದ ಮಹಾಕಾವ್ಯಗಳಲ್ಲಿ ಮಹಿಳೆಯ ಪ್ರತಿನಿಧೀಕರಣವೂ ಎಂತೆಂತಹ ಮೌಲ್ಯಗಳನ್ನು ಹೇಗೆ ಯಾಕೆ ಯಾವ ರೀತಿಯಿಂದ ಧ್ವನಿಸುತ್ತಿವೆ ಎಂಬುದನ್ನು ಗಮನಿಸಬೇಕಾಗುತ್ತದೆ. ಈ ಹಿಂದೆಯೇ ಗುರುತಿಸಿಕೊಂಡಂತೆ ಮೌಖಿಕ ಕಥನ ಪರಂಪರೆಯು ಮಹಿಳೆಯರಿಗೆ ಒಂದು ವಿಶಿಷ್ಟ ಬಗೆಯ ಸಾಂಸ್ಕೃತಿಕ  ಸ್ವಾತಂತ್ರ್ಯವಾಗಿತ್ತು. ನೇರವಾಗಿ ಹೇಳಲಾಗದ್ದನ್ನು ತನ್ನ ಕಥನದ ಯಾವುದೋ ಪಾತ್ರವೊಂದರಲ್ಲಿ ಪರಕಾಯ ಪ್ರವೇಶ ಪಡೆದು ಅಲ್ಲಿ ಸಂಪೂರ್ಣ ತನ್ನನ್ನು ತನ್ನವರನ್ನು ರೂಪಿಸಿಕೊಂಡು ತನ್ನ ಅಂತರಂಗದ ಪರ ವಿರೋಧಗಳನ್ನು ಹೇಳುವ ಒಂದು ತಂತ್ರ ಇತ್ತು. ಇದು ಭಾರತೀಯ ನಾರಿ ಕಂಡುಕೊಂಡ ವಿಶಿಷ್ಟ ಬಗೆಯ ಮೌಖಿಕ ಸ್ವಾತಂತ್ರ್ಯ ಎಂದು ಭಾವಿಸಿದಾಗ ಆ ಬಗೆಯ ಅರ್ಥಗಳಲ್ಲಿ ಇವತ್ತಿನ ಅರ್ಥಗಳು ಹುಟ್ಟಿಕೊಳ್ಳುತ್ತವೆ. ಜನಪದ ಮಹಿಳೆಯರು ಮೌನವನ್ನೇ ಒಂದು ಅದ್ಭುತವಾದ ಪ್ರತಿರೋಧ ವಿಧಾನವಾಗಿ ರೂಪಿಸಿದ್ದಾರೆ. ಇದು ಆಕೆಯ ಸಂಸಾರದ ಚೌಕಟ್ಟಿನಲ್ಲಿ ಅನಿವಾರ್ಯವಾಗಿತ್ತು. ಕೌಟುಂಬಿಕವಾಗಿ ಬರುವ ಎಲ್ಲ ಬಗೆಯ ಕಥನಗೀತೆ ಅಥವಾ ನಂಬಿಕೆ ಆಚರಣೆಗಳಲ್ಲೆಲ್ಲ ಜನಪದ ಮಹಿಳೆಯರು ಇಡೀ ಕುಟುಂಬ ವ್ಯವಸ್ಥೆಯನ್ನೇ ಹೇಗೆ ಅಳೆದಿದ್ದಾರೆಂದು ತಿಳಿಯಲು ಕೇವಲ “ಗರತಿಯ ಹಾಡು”ಗಳನ್ನು ನೋಡಿದರೆ ವೇದ್ಯವಾಗುತ್ತದೆ.

ಸಂಭ್ರಮ ಗಾನವೆ ಪ್ರತಿರೋಧ

ಕನ್ನಡದ ಜನಪದ ಮಹಾಕಾವ್ಯಗಳಲ್ಲಿ ಹೆಣ್ಣಿನ ಪ್ರವೇಶಿಕೆಯೇ ಪುರುಷನ ಅಂಕುಶ ದಲ್ಲಿದೆ. ವಾಸ್ತವ ಹಾಗೆ ಇದ್ದರೂ ಕೂಡ ವ್ಯವಸ್ಥೆಯನ್ನು ಒಪ್ಪಿಕೊಂಡೇ ಅದನ್ನು ಆರಾಧಿಸು ತ್ತಲೇ ಅದರ ಉದ್ದೇಶವನ್ನು ಬಹಿರಂಗಪಡಿಸುವ ಮಾಂತ್ರಿಕ ವಿಧಾನವೊಂದನ್ನು ಮಹಿಳೆಯರು ಕಂಡುಕೊಂಡಿದ್ದಾರೆ. ಜನಪದ ಮಹಾಕಾವ್ಯಗಳಲ್ಲಿ ಎಲ್ಲವೂ ಮಹಿಳಾ ವಿರೋಧಿ ನಿಲುವನ್ನು ತುಂಬಿರುವುದಿಲ್ಲ. ಹೆಣ್ಣನ್ನು ತೀರ ಕೀಳಾಗಿ ಕ್ಷುಲ್ಲಕವಾಗಿ ನೀಚತನದಿಂದ ನಡೆಸಿಕೊಳ್ಳುವುದರ ವಿವರಣೆಯನ್ನು ಕೊಡುತ್ತಿರುವುದೇ ಅನೇಕ ರೀತಿಯಲ್ಲಿ ಮಹಿಳಾ ಚಿಂತನೆಗಳಿಗೆ ಹೊಸ ರೂಪವನ್ನು ಕೊಡಬಲ್ಲವು. ಅನೇಕ ಕಥನ ಗೀತೆಗಳು, ಸತಿ ಹೋಗುವ ಸಂದರ್ಭದಲ್ಲಿ ಹುಟ್ಟಿಕೊಂಡವು, ಮೇಲು ನೋಟದಲ್ಲಿ ಇಡೀ ಆ ಪದ್ಧತಿಯನ್ನು ವೈಭಕರಿಸಿದಂತೆ ಕಾಣುತ್ತಿದ್ದರೂ ಆಳದ ಹತಾಶೆಯಿಂದಲೇ ಆ ಬಗೆಯ ವೈಭವದಿಂದಲೇ ಒಂದು ದುರಂತವನ್ನು ಧ್ವನಿಸುತ್ತಿರುತ್ತವೆ. ತನಗೆ ಒಪ್ಪದ್ದನ್ನು ವೈಭಕರಿಸಿ ಬಲಿದಾನವಾಗುವುದು ಭಾರತೀಯ ಮಹಿಳಾ ಪ್ರತಿಭಟನೆಯ ಸ್ವರೂಪಗಳಲ್ಲಿ ಒಂದು. ಮಹಿಳಾ ಪ್ರಧಾನವಾದ ಮೌಖಿಕ ಪರಂಪರೆ ಯನ್ನು ಸಾಹಿತ್ಯದ ಮಾನದಂಡಗಳಿಂದ ಅಳೆಯುವುದನ್ನು ಇನ್ನಾದರೂ  ಕೈಬಿಡಬೇಕಾಗಿದೆ. ಮೌಖಿಕ ಪರಂಪರೆ ಸಮ್ಮಿಶ್ರ ಬದುಕಿನ ಸಾಂಸ್ಕೃತಿಕ ಸಂಕಥನ. ಹಾಗೆಯೆ ಅವ್ಯಕ್ತ ಚರಿತ್ರೆಯ ನಿರೂಪಣೆ. ಇದರಲ್ಲೇ ಭಾರತದ ಅವ್ಯಕ್ತ ಮಹಿಳಾ ಚರಿತ್ರೆ ದಾಖಲಾಗಿರುವುದು. ಮಹಿಳೆಯರ ಈ ಚರಿತ್ರೆಯಲ್ಲಿ ಪುರುಷ ಎಂಬುವನು ಆಧುನಿಕ ಮಹಿಳೆಯರ ಚಿಂತನೆಯ ಮಾದರಿಯಂತೆ ಇರದಿರುವುದು ವಿಶೇಷ ಎನಿಸುತ್ತದೆ. ಅಲಿಖಿತ ಪರಂಪರೆಯ ಈ ಮೌಖಿಕ ಪರಂಪರೆಯ ಒಳಗೆ ಅನೇಕ ಯುಗಗಳ ಮಹಿಳಾ ಸಮುದಾಯಗಳ ಸಂವೇದನೆ ಗಾಢವಾಗಿ ಅಡಕವಾಗಿ ರುತ್ತದೆ. ಪಶ್ಚಿಮದ ಸಿದ್ಧ ಮಾದರಿಗಳ ಚಿಂತನೆಯ ಪ್ರೇರಣೆಗಳಿಂದ ಚರ್ಚಿಸುವ ಮಹಿಳೆಯರಿಗೆ ಸ್ವತಃ ಅವರದೇ ಮಹಿಳಾ ಸ್ಮೃತಿಕೋಶ ಏನನ್ನು ಹೇಳುತ್ತದೆ ಎಂಬುದರ ಬಗ್ಗೆ ಕಾಳಜಿ ಇಲ್ಲ. ಮಾರ್ಕ್ಸ್‌ವಾದಿ ಚಿಂತನೆಯಿಂದ ಪ್ರೇರಿತರಾದ ಮಹಿಳಾ ಲೇಖಕಿಯರು ಇಡೀ ಮೌಖಿಕ ಪರಂಪರೆಯನ್ನು ಮಹಿಳಾ ವಿರೋಧಿ ಸೃಷ್ಟಿ ಎಂದು ಭಾವಿಸುವುದು ಉಚಿತವಲ್ಲ. ಚರಿತ್ರೆ, ಸಂಸ್ಕೃತಿ, ಭಾಷೆಯ, ಅಭಿವ್ಯಕ್ತಿಯ ಸಾಧ್ಯತೆಗಳು, ಆಕೆಯ ಸೃಜನಶೀಲತೆ, ಮತ್ತು ಆಕೆಯ ಅಂತರಂಗದ ಆಶಯಗಳು ಸಂಸ್ಕೃತಿಯನ್ನು ರೂಪಿಸುತ್ತಾ ಸಾಮಾಜಿಕವಾಗಿ ಅದನ್ನು ವಿಸ್ತರಿಸುತ್ತಾ ಬಂದದ್ದರ ದೊಡ್ಡ ದಾಖಲೆಯೇ ಮೌಖಿಕ ಪರಂಪರೆಯಲ್ಲಿದೆ. ಭಾರತೀಯ ನಾರಿಯರು ಪುರುಷ ಕೇಂದ್ರಿತ ಚರಿತ್ರೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಪಾಲು ಕೇಳುವುದೇ ವಿಚಿತ್ರವಾಗಿದೆ. ಸ್ವತಃ ಅವರೇ ಇಂತವೆಲ್ಲವನ್ನು ಗಾಢವಾಗಿ ಪರಂಪರೆಯಲ್ಲಿ ರೂಪಿಸಿಕೊಂಡು ಬರಲು ಎಲ್ಲ ಅರ್ಹತೆ ಉಳ್ಳವರು.

ವಿದ್ರೋಹದ ವಿಸ್ಮೃತಿಗೆ ಹೊಣೆ ಯಾರು

ಹಾಗೆ ನೋಡಿದರೆ ಭಾರತದಲ್ಲಿ ಮಹಿಳೆಯರೇ ಹೆಚ್ಚು ವಿಸ್ಮೃತಿಗೆ ಒಳಗಾದಂತಿದೆ. ಮೌಖಿಕ ಪರಂಪರೆಯ ಸಂದರ್ಭದಲ್ಲಿ ಪಿತೃ ಪ್ರಧಾನ ವ್ಯವಸ್ಥೆಯ ವಿರುದ್ಧ ಮಾತೃ ಪ್ರಧಾನ ಮೌಲ್ಯಗಳು ಸಂಘರ್ಷಕ್ಕೆ ಒಳಗಾಗಿ ಕೆಲವೊಂದು ಅಂಶಗಳನ್ನು ತಿರಸ್ಕರಿಸುತ್ತಾ ಮತ್ತೆ ಕೆಲವನ್ನು ಒಪ್ಪುತ್ತಾ, ತಿದ್ದುತ್ತಾ ರೂಪಾಂತರಿಸುತ್ತಾ ಎರಡೂ ಗುಂಪಿನಲ್ಲಿ ಸಂಸ್ಕೃತಿಯನ್ನು ಕಟ್ಟುವ ಮರು ಪರಿಶೀಲಿಸುವ ಸಮರ್ಥಿಸಿಕೊಳ್ಳುವ ಕ್ರಿಯೆಗಳು ನಡೆದಿದ್ದರೂ ಒಟ್ಟಾರೆ ಮಹಿಳಾ ಸಾಧ್ಯತೆಗಳಲ್ಲಿ ಎಲ್ಲವನ್ನೂ ನಿರೂಪಿಸಿಕೊಳ್ಳಲು ಮೌಖಿಕ ಪರಂಪರೆಗೂ ಸಾಧ್ಯವಾಗಿಲ್ಲ. ಭಾರತದ ಪ್ರಾಚೀನ ಪ್ರಭುತ್ವ ವ್ಯವಸ್ಥೆಯಾಗಲಿ ಮಧ್ಯ ಯುಗದ ಚರಿತ್ರೆಯಾಗಲಿ ಆಕೆಯು ಸ್ಮೃತಿಕೋಶದ ಅಗಾಧ ಸಾಧ್ಯತೆಗಳನ್ನು ತಡೆಹಿಡಿದಿವೆ. ವಸಾಹತುಶಾಹಿ ಪ್ರಭಾವಕ್ಕೆ ಒಳಗಾದ ಪುರುಷ ಪ್ರಭುತ್ವ ಭಿನ್ನ ದಾರಿಯಲ್ಲಿ ತನ್ನನ್ನು ಪ್ರತಿಸ್ಥಾಪಿಸಿಕೊಳ್ಳಲು ಹೆಣಗಾಡಿದರೆ ಭಾರತದ ಕೆಳಜಾತಿಗಳ ಮಹಿಳಾ ಸಮುದಾಯಗಳು ಈ ಬಗೆಯ ಚಿಂತನೆಗೆ ಒಳಗಾಗದೆ ಸಾಂಸ್ಕೃತಿಕ ಅಸ್ತಿತ್ವಕ್ಕೆ ಮಾತ್ರವೇ ಹೋರಾಡುವ ಸಂಕುಚಿತ ಆದರೆ ಸಂಕೀರ್ಣ ಇಕ್ಕಟ್ಟುಗಳಿಗೆ ಸಿಕ್ಕಿಕೊಂಡಿತು. ಇಂತಹ ವಿದ್ರೋಹದ, ಹಿಂಸೆಯ, ವಿಸ್ಮೃತಿಗೆ ಪುರುಷಾಧಿಪತ್ಯವೂ ಮುಖ್ಯ ಕಾರಣವಾಗಿದೆ. ನಿಜವಾಗಿಯೂ ಜನಪದ ಮಹಿಳಾ ಲೋಕ ನೇರವಾಗಿ ವಸಾಹತುಶಾಹಿಯ ಪ್ರಭುತ್ವಕ್ಕೆ ಒಳಗಾಗದೆಯೂ ಬೇರೆ ಬೇರೆ ಪರೋಕ್ಷ ಕಾರಣಗಳಿಂದಾಗಿ ಮೌಖಿಕ ಪರಂಪರೆಯ ಅರ್ಥಪೂರ್ಣ ಮರುಸೃಷ್ಟಿಗೆ ಒಳಗಾಗುವಲ್ಲಿ ಹಿಂದೆ ಬಿತ್ತು. ಇವತ್ತಿಗೂ ಇದರ ಪ್ರಭಾವದಿಂದಾಗಿಯೇ ವಸಾಹಾತ್ತೋತ್ತರ ಭಾರತದ ಜಾನಪದ ತನ್ನ ವಿಶಿಷ್ಟವಾದ ಸಮಷ್ಠಿ ಸೃಜನಶೀಲ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಇಕ್ಕಟ್ಟುಗಳು ನೇರವಾಗಿ ವಸಾಹತುಶಾಹಿಯಿಂದಾದ್ದೆಂದು ಗುರುತಿಸಲು ಕಷ್ಟವಾಗುತ್ತದೆ ಯಾದರೂ ಅದರ ವಿಶಾಲವಾದ ಬಾಹುಗಳು ಇವತ್ತಿನ ಜಾನಪದ ಸೃಷ್ಟಿಯಲ್ಲಿ ಬೆರೆತು ಹೋಗಿವೆ. ಅಂತೆಯೇ ಮಹಿಳಾ ಚಿಂತನೆಗಳಲ್ಲೂ.

ಹೀಗಿರುವಾಗ ವಿಸ್ಮೃತಿ ಎಂಬುದು ಕೇವಲ ನಮ್ಮ ಸಾಹಿತ್ಯದಲ್ಲಿ ಅಲ್ಲ, ಸಂಸ್ಕೃತಿ ಮತ್ತು ಚರಿತ್ರೆಯಲ್ಲೂ ಅದು ಒಳಗೊಂಡು ಜಾನಪದ ಪರಂಪರೆಯ ಮೇಲೆ ತನ್ನ ಗುರುತನ್ನು ಹಚ್ಚಿದೆ. ಅಂದರೆ ವಸಾಹತುಶಾಹಿ ಪ್ರಜ್ಞೆ ಇಲ್ಲದೆಯೂ ಇವತ್ತು ಜನಪದ ಪರಿಸರ ಬದಲಾಗಿದೆ. ಆ ಹಿನ್ನೆಲೆಯಲ್ಲಿ ಮಹಿಳಾ ಸಂಕಥನಕ್ಕೆ ಮೇಲೆ ಹೇಳಿದ ಅಂಶಗಳು ನೇರವಾಗಿ ಸಂಬಂಧ ಹೊಂದಿಲ್ಲವಾದರೂ ಪಶ್ಚಿಮದ ಚಿಂತನೆಯೇ ಹೇಗೆ ನಮ್ಮನ್ನು ವಿಸ್ಮೃತಿಗೆ ಒಳಪಡಿಸಬಲ್ಲದೆಂಬುದನ್ನು ನೆನಪಿಸಲು ಇದನ್ನೆಲ್ಲ ವಿವರಿಸಬೇಕಾಯ್ತು. ಇನ್ನೆಷ್ಟೋ ಕೆಳಜಾತಿಗಳಲ್ಲಿ ಅವರವರ ಮೇಲು ಜಾತಿಗಳೇ ವಿಸ್ಮೃತಿಗೆ ನೂಕಿರುತ್ತವೆ. ಕೇವಲ ವಸಾಹತು ಶಾಹಿ ಪ್ರಭುತ್ವ ಅಥವಾ ಪಶ್ಚಿಮದ ಆವಿಷ್ಕಾರದ ಧೋರಣೆಗಳಷ್ಟೇ ವಿಸ್ಮೃತಿಯನ್ನು ತಂದಿರುವುದಿಲ್ಲ. ಭಾರತದಲ್ಲಿ ವಿಸ್ಮೃತಿಗೆ ಅನೇಕ ಕಾರಣಗಳಿವೆ. ಭಾರತ ಆಧುನಿಕತೆಗೆ ತೆರೆದುಕೊಳ್ಳುತ್ತಾ ಹೋದಂತೆಲ್ಲ ಈ ಸಂಕಷ್ಟಕ್ಕೆ ಸಿಲುಕಿಯೇ ಹೊಸ ಆಲೋಚನೆಗಳನ್ನು ಕಂಡುಕೊಳ್ಳುತ್ತಾ ಸಾಗುವ ಪ್ರವೃತ್ತಿಯನ್ನು ಗಳಿಸಿಬಿಟ್ಟಿದೆ ಅನಿಸುತ್ತದೆ. ಪ್ರಭುತ್ವ ಎಷ್ಟೋ ಬಾರಿ ಅನೇಕ ಸೃಜನಶೀಲ ದಾರಿಗಳನ್ನು ಮುಚ್ಚಿ ನೆನಪಿನ ಕೋಶಗಳನ್ನು ನಾಶಪಡಿಸಿರುತ್ತದೆ. ಮಧ್ಯಯುಗದ ರಾಜಕೀಯ ಚರಿತ್ರೆ ತನ್ನ ದರ್ಪಿಷ್ಟ ಪ್ರಭುತ್ವದಿಂದ ಹೇಗೆ ದೇಸೀ ಚಿಂತನಾ ನೆಲೆಗಳನ್ನು ಸದೆಬಡಿದವು ಎಂಬುದನ್ನು ಕಾಣಬಹುದು. ಇಂತಹ ಪರಿಸ್ಥಿತಿಯಲ್ಲಿ ಮೌಖಿಕ ಪರಂಪರೆ ಅನೇಕ ರೀತಿಯಲ್ಲಿ ಮಹಿಳಾ ಸಂಕೇತಗಳನ್ನು ಪ್ರತಿನಿಧಿಸಿರುವುದು. ತನ್ನ ಇತಿಮಿತಿಗಳಲ್ಲೇ ಮೌಖಿಕ ಪರಂಪರೆ ಮಹಿಳೆಯ ಆಶಯಗಳನ್ನು ಬಿಂಬಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದು.

ಸೀಮಿತ ಸೃಜನಶೀಲ ಅವಕಾಶ

ಪ್ರತಿಯೊಂದು ಜಾತಿಯೂ ತನ್ನ ಸೃಜನ ಕ್ರಿಯೆಗೆ ಮಾತ್ರ ಬದ್ಧವಾಗುವುದು ಕೂಡ ಮಹಿಳಾ ಸಂಕಥನ ಸಾಂಸ್ಕೃತಿಕವಾಗಿ ವಿಸ್ತರಿಸಿಕೊಳ್ಳಲು ಸಾಧ್ಯವಾಗದಂತೆ ಮಾಡಿರುತ್ತದೆ. ತನ್ನ ಜಾತಿಯ ಮೌಲ್ಯಗಳಿಂದಲೇ ಸಂಸ್ಕೃತಿಯನ್ನು ರೂಪಿಸಿಕೊಳ್ಳುವ ನಿಷ್ಠೆಯಲ್ಲಿ ಪರೋಕ್ಷವಾಗಿ ಆಯಾಯ ಜಾತಿಗಳಾಗಲಿ ಲಿಂಗಸಂಬಂಧಗಳಾಗಲಿ ಸಂಕುಚಿತಗೊಳ್ಳುತ್ತವೆ. ತನ್ನ ಸಮುದಾಯದ ಅಹಂ ನಿಷ್ಠೆಯಿಂದಲೇ ಸಾಂಸ್ಕೃತಿಕವಾಗಿ ಬರಡಾಗುವ ಅನೇಕ ಜಾತಿ ಗುಂಪುಗಳು ಈಗಲೂ ನಮ್ಮ ಎದುರು ಇವೆ. ಅದು ಕೆಳಜಾತಿಯಿರಲಿ ಮೇಲು ಜಾತಿಯಿರಲಿ ಎರಡೂ ಕೂಡ ಜಾತಿ ಕಾರಣದಿಂದಲೇ ಸಾಂಸ್ಕೃತಿಕ ರೂಪಾಂತರಗಳನ್ನು ಸಕಾರಾತ್ಮಕವಾಗಿ ನಿರೀಕ್ಷಿಸಲು ಒಪ್ಪುವುದಿಲ್ಲ. ಅಥವಾ ಜಾತಿಯ ಮೇಲರಿಮೆ ಕೀಳರಿಮೆ ಎರಡೂ ಸಹ ಸಮುದಾಯದ ಒಳಿತನ್ನು ಬಹಳ ಕಾಲದವರೆಗೆ ಕೊಂಡೊಯ್ಯಲಾರವು. ಇದು ಮಹಿಳೆಯರ ಸಂದರ್ಭದಲ್ಲೂ ಸತ್ಯ. ಹೆಣ್ಣನ್ನು ಕಡೆಗಣಿಸಿ ಬೆಳೆಯುವ ಯಾವ ಸಂಸ್ಕೃತಿಯೂ ಉನ್ನತ ಸಂವೇದನೆಯ ಮಟ್ಟವನ್ನು ಮುಟ್ಟಲಾರದು. ಹೆಣ್ಣನ್ನು ಕೀಳು ಎಂದು ಒಪ್ಪಿಕೊಂಡ ಕೂಡಲೆ ಅದನ್ನೊಂದು ಮೌಲ್ಯ ವ್ಯವಸ್ಥೆ ಎಂದು ಸ್ಥಿರೀಕೃತಗೊಳಿಸಿದ ತಕ್ಷಣವೇ ಅಂತಹ ಸಾಂಸ್ಕೃತಿಕ ವ್ಯವಸ್ಥೆ ಹೊಸದನ್ನು ಕಾಣಲಾರದೆ ವಿಸ್ಮೃತಿಗೆ ಬೇರೆ ಬೇರೆ ಕಾಲಘಟ್ಟಗಳಲ್ಲಿ ನಿರಂತರವಾಗಿ ಒಳಗೊಳ್ಳುತ್ತಲೇ ಹೋಗುತ್ತದೆ. ಇಂತಹ ಸ್ಥಿರೀಕೃತ ಮೌಲ್ಯ ವ್ಯವಸ್ಥೆ ತಂತಾನೆ ಮಹಿಳಾ ಸಮಾಜವನ್ನು ಸ್ಥಗಿತಗೊಳಿಸುವುದಲ್ಲದೆ ಆಕೆಗಿರುವ ಸೃಜನಶೀಲತೆಯನ್ನು ಮಸುಕುಗೊಳಿಸುತ್ತದೆ. ಈ ಕಾರಣಗಳಿಂದಾಗಿಯೇ ವೈದಿಕ ಪರಂಪರೆಯಲ್ಲಿ ಸುಶಿಕ್ಷತತೆ ಎದ್ದು ಕಾಣುವಂತಿ ದ್ದರೂ ಅದು ಟೊಳ್ಳಾಗಿ ಮಹಿಳೆಯ ನೆನಪುಗಳೇ ಇಲ್ಲದೆ ಸೊರಗುತ್ತದೆ. ಅದೇ ಜನಪದ ಪರಂಪರೆಯಲ್ಲಿ ಗ್ರಾಮ ದೇವತೆಗಳ ಪ್ರತಿನಿಧೀಕರಣವೇ ಭಾರತದ ಉದ್ದಕ್ಕೂ ಗ್ರಾಮೀಣ ಮಹಿಳೆಯ ಪ್ರತಿಮೆಯಾಗಿ ರೂಪಾಂತರಗೊಂಡಿರುವುದನ್ನು ಕಾಣಬಹುದು.

ಗ್ರಾಮದೇವತೆಗಳಿಗೆ ಸಮನಾಗಿ ಹೆಣ್ಣು ಗಂಡು ಮಕ್ಕಳು ಕಾಣಿಸಿಕೊಂಡರೆ ವೈದಿಕ ದೆವರುಗಳಾರಿಗೂ ಹೆಣ್ಣು ಮಕ್ಕಳೇ ಇಲ್ಲ ಎಂಬಂತಿರುವುದು ಕುತೂಹಲಕರವಾಗಿದೆ. ವೈದಿಕ ಸಮಾಜದ ಮಹಿಳೆಗೆ ಕೇವಲ ಉನ್ನತ ಜಾತಿ ಎಂಬ ವೇಷ ಹಾಕಿ ಆಕೆಗೆ ಮಾತೃ ದೇವತೆಯ ಹುಸಿ ಪದವಿಯನ್ನು ಕೊಡಲಾಗಿತ್ತೇ ಹೊರತು ನಿಜದನಿಯಲ್ಲಿ ಆಕೆಯ ವ್ಯಕ್ತಿತ್ವವನ್ನು ಪುರುಷಾಧಿಪತ್ಯ ನುಂಗಿಬಿಟ್ಟಿತ್ತು. ಇದು ಕೇವಲ ಮಹಿಳೆಯ ವಿಸ್ಮೃತಿಯಾಗಿರದೆ ಇಡೀ ವೈದಿಕ ಪರಂಪರೆಯ ಪುರುಷ ವ್ಯವಸ್ಥೆಯ ವಿಸ್ಮೃತಿ ಎಂದೇ ಹೇಳಬೇಕು. ಸ್ಮೃತಿ ಎಂದರೆ ನನ್ನ ಮಟ್ಟಿಗೆ ಅದೊಂದು ಸಮಷ್ಠಿ ಸಂವೇದನೆಯ ಸೃಷ್ಟಿಶೀಲವಾದ ಮಾನವೀಕರಣದ ಸಮುದಾಯಗಳ ನಿರಂತರ ಕೊಡುಕೊಳೆ ಮತ್ತು ಸದಾ ಅರಿಯುವ ಹುಡುಕುವ ಬೆಳೆಯುವ ಚರಿತ್ರೆಯನ್ನು ವಿಕಾಸಗೊಳಿಸುತ್ತಾ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸಮಷ್ಠಿ ಸೃಜನಶೀಲ ಜ್ಞಾನ ಹರಿದು ಬರುವಂತದಾಗಿರುತ್ತದೆ. ಪರಂಪರೆಯನ್ನು ಕಟ್ಟುವ ಪರಿಯಲ್ಲೇ ಜನಾಂಗಗಳ ಆಯಾ ಕಾಲಘಟ್ಟಗಳ ಸೃಜನಶೀಲತೆಯ ವಿಕಾಸವೂ ಸ್ಮೃತಿ ಕೋಶದಲ್ಲಿ ಅಡಕವಾಗಿರಬೆಕಾಗುತ್ತದೆ. ಸ್ಮೃತಿ ಎಂಬುದೇ ಆಯಾ ಸಮುದಾಯದ ಚರಿತ್ರೆಯ ನೆನಪು. ಸಂಸ್ಕೃತಿಯ ಪ್ರತಿಬಿಂಬ ಹಾಗೂ ಅದರ ಬಹುಮುಖೀ ಆಕಾರಗಳು ಭಿನ್ನ ಕಾಲಘಟ್ಟಗಳಲ್ಲಿ ಸಂಯೋಗವಾಗುತ್ತಾ ಮನುಷ್ಯನ ದುರಂತ ಮತ್ತು ಆನಂದವನ್ನು ಜಾಗೃತಗೊಳಿಸಿಕೊಳ್ಳುವ ಒಂದು ವ್ಯವಸ್ಥೆ. ಇಂತಹ ವ್ಯವಸ್ಥೆ ಯಾವಾಗ ಆಯ ತಪ್ಪುತ್ತದೆ ಎಂದರೆ ಎಲ್ಲಿ ಸ್ಮೃತಿ ಸಂಘರ್ಷಗಳು ಅರ್ಥಪೂರ್ಣವಾಗಿ ಸಾಧ್ಯವಾಗುವುದಿಲ್ಲವೋ ಅಲ್ಲಿ. ಸಂಸ್ಕೃತಿಯ ಸೃಜನ ಶೀಲ ಹುಡುಕಾಟ ಸ್ಥಗಿತಗೊಳ್ಳುವ ಮೊದಲ ಹಂತವೇ ವಿಸ್ಮೃತಿಯ ಆರಂಭ. ಭಾರತದಲ್ಲಿ ವೈದಿಕ ಪರಂಪರೆ ಬೆಳೆಸಿದ ಪ್ರಭುತ್ವ ಮತ್ತು ಮಧ್ಯಯುಗದ ರಾಜ ಪ್ರಭುತ್ವ, ಊಳಿಗಮಾನ್ಯ ವ್ಯವಸ್ಥೆಗಳೇ ಪ್ರಬಲವಾಗಿ ವಿಸ್ಮೃತಿಗೆ ಅನೇಕ ಸಮುದಾಯಗಳನ್ನು ತಳ್ಳಿವೆ.

ಎಷ್ಟೋ ಭಾರಿ ಭಾಷೆಯ ಮೇಲರಿಮೆ ಕೂಡ ಸೃಜನಶೀಲವಾದ ಹುಡುಕಾಟಗಳನ್ನು ತಡೆಯಬಲ್ಲದು. ಭಾರತೀಯ ಪ್ರಾಚೀನ ಕಾವ್ಯ ಮೀಮಾಂಸೆಗಳನ್ನಾಗಲಿ, ತತ್ವಶಾಸ್ತ್ರದ ಜಿಜ್ಞಾಸೆಗಳನ್ನೇ ಆಗಲಿ ಗಮನಿಸಿದವರಿಗೆ ಇದರ ಅರ್ಥ ಹೊಳೆಯುತ್ತದೆ. ಇಡೀ ಭಾರತದ ಕಾವ್ಯಮೀಮಾಂಸೆಯೇ ಈ ಅರ್ಥದಲ್ಲಿ ಅಪೂರ್ಣವೂ ವಿಸ್ಮೃತಿಯ ಹೊಡೆತಕ್ಕೆ ತಕ್ಕನಾದದ್ದೂ ಆಗಿದ್ದು ಪುರುಷ ಸೀಮೆಯ ಪಿಸು ಮಾತುಗಳಿಂದಲೂ ಅದರ ಆಕಾರ ವಿಕಾರ ಮತ್ತು ಪ್ರಜ್ಞೆಗಳಿಂದಲೂ ಕೂಡಿದ್ದು ಮಹಿಳೆಯನ್ನು ಅಲಂಕಾರಿಕವಾಗಿ ಮಾತ್ರ ತೆಗೆದುಕೊಂಡಿದೆ. ಭಾರತೀಯ ತತ್ವಶಾಸ್ತ್ರ ಈ ಬಗೆಯಲ್ಲಿ ಮಹಿಳೆಯನ್ನು ವಂಚಿಸಿದ್ದರಿಂದಲೇ ಪುರುಷ ಮತ್ತು ಮಹಿಳೆ ಎರಡೂ ಸಂವೇದನೆಗಳ ಸಂಯೋಗದ ಸಂವಾದ ಸಾಧ್ಯವಾಗದೆ ಗಂಡಿನ ಸ್ಮೃತಿ ಪ್ರಪಂಚ ಹೇರಳವಾಗಿದೆ. ಈ ಕಾರಣದಿಂದಲೇ ಇವತ್ತಿಗೂ ಒಟ್ಟು ಭಾರತದ ಸಾಹಿತ್ಯ ಮತ್ತು ಸಂಸ್ಕೃತಿ ಅರ್ಧಸತ್ಯದ ಧ್ವನಿಯಾಗಿದೆ. ಇದರಲ್ಲಿ ಪುರುಷನ ಪೂರ್ಣರೂಪವಿದ್ದರೆ ಅರ್ಧದಷ್ಟಿರುವ ಮಹಿಳೆಯರ ಸೌಂದರ್ಯವೇ ಅವರ ಅರಿವೇ ಇಲ್ಲ ಎನ್ನುವಷ್ಟು ಕೊರತೆಯಾಗಿ ಕಾಣುತ್ತದೆ. ಇಂತಹ ತಾತ್ವಿಕ ಮೀಮಾಂಸೆಗಳಿಂದ ಹುಟ್ಟಿಕೊಂಡ ನಿಯಮಗಳು ಸಾಹಿತ್ಯಿಕ ಪ್ರಜ್ಞೆಯ ಕೋಶವನ್ನೇ ಕತ್ತಲಿಗೆ ತಳ್ಳಿದೆ. ವಿಚಿತ್ರ ಎಂದರೆ ಅದೇ ಭಾರತೀಯ ಮಹಿಳೆ ದಲಿತಳಾಗಿದ್ದವಳು ಮೌಖಿಕ ಪರಂಪರೆಯಲ್ಲಿ ಇಂತಹ ವಿಸ್ಮೃತಿಗೆ ಹೀಡಾಗದೆ ಬಿಡಿಸಿಕೊಂಡದ್ದಕ್ಕೆ ಅನೇಕ ಉದಾಹರಣೆಗಳಿವೆ. ಹೀಗಾಗಿಯೇ ಭಾರತದ ಮೌಖಿಕ ಚರಿತ್ರೆ ಯಲ್ಲಿ ಮಹಿಳೆಯ ಸ್ಮೃತಿಕೋಶ ಗಾಢವಾಗಿದ್ದು, ಈಗ ಆ ಪರಂಪರೆ ಆಧುನಿಕ ಮಹಿಳೆಯರಿಂದ ಬೇರೆಯದೇ ವ್ಯಾಖ್ಯಾನಗಳನ್ನು ನಿರೀಕ್ಷಿಸುತ್ತದೆ.

ಮೌಖಿಕ ಪರಂಪರೆಯಲ್ಲೂ ಮಿತಿಗಳಿವೆ

ಜನಪದ ಮೌಖಿಕ ಪರಂಪರೆ ಬಹುಪಾಲು ಎಲ್ಲ ರೀತಿಯಿಂದಲೂ ಸ್ಪಷ್ಟವಾಗಿ ಮಹಿಳೆ ಯನ್ನು ದಾಖಲಿಸಿದೆ ಎಂದಾಗಲೀ ಅರ್ಥಪೂರ್ಣ ಚಿತ್ರಣ ಸಿಗುತ್ತದೆ ಎಂದಾಗಲಿ ಹೇಳುತ್ತಿಲ್ಲ. ಮೌಖಿಕ ಚರಿತ್ರೆಯಲ್ಲೂ ಅನೇಕ ಲೋಪಗಳಿವೆ. ಮಧ್ಯಯುಗದ ಚರಿತ್ರೆ ಜನಪದರ ಮೇಲೂ ಪ್ರಭಾವ ಬೀರಿದೆ. ಪ್ರಭುತ್ವದ ಅಹಂಕಾರ ಮತ್ತು ಕುರುಡು ದೃಷ್ಟಿ ಮೌಖಿಕ ಪರಂಪರೆಯಲ್ಲೂ ನುಸುಳಿ ಹೆಣ್ಣನ್ನು ಬಹಳ ಕೀಳಾಗಿ ನಡೆಸಿಕೊಂಡದ್ದಕ್ಕೂ ಹೇರಳವಾಗಿ ವಿವರಗಳು ಸಿಗುತ್ತವೆ. ತನ್ನ ಅಸಹಾಕತೆಯನ್ನು ಹೇಳಿಕೊಳ್ಳುವುದೂ ಕೂಡ ಚರಿತ್ರೆಯ ವಿವರ ಎಂದೇ ಭಾವಿಸಿರುವುದರಿಂದ ಮತ್ತು ವೈದಿಕ ಮಹಿಳೆಯರಿಗೆ ಇಷ್ಟು ಮಾತ್ರವೂ ಅವಕಾಶ ಇಲ್ಲದಿದ್ದಾಗ ಜನಪದ ಮಹಿಳೆಯರು ತಮಗನಿಸಿದ್ದನ್ನೆಲ್ಲ ಹಾಡು, ಕತೆ, ಆಚರಣೆಗಳಲ್ಲಿ ದಾಖಲಿಸಿರುವುದು ಮತ್ತು ಜನಪದ ಮಹಿಳೆಯರು ಕಟ್ಟಿ ಹೇಳಿರುವುದು ಗಮನಾರ್ಹವಾದದ್ದಾಗಿದೆ. ಮಹಿಳೆಯ ಮೇಲಿನ ಹಲ್ಲೆ ಅತ್ಯಾಚಾರ ‘ಪುರುಷ ಸಿಂಹ’ನ ಘರ್ಜನೆಗಳನ್ನೆಲ್ಲ ತಿಳಿಯಬೇಕಾದರೆ ನಮಗೀಗ ಉಳಿದಿರುವುದು ಮೌಖಿಕ ಪರಂಪರೆ ಮತ್ತು ಆ ಸಂಬಂಧಿ ಆಚರಣೆಗಳೇ. ಮಹಿಳೆ ಯರು ತಮ್ಮ ಸಾಂಸ್ಕೃತಿಕ ಚರಿತ್ರೆಯನ್ನು ಪುನಾಃ ರಚಿಸಲು ಮೌಖಿಕ ಪರಂಪರೆಯ ಸಂಕಥನ ಗಳಿಗೆ ಹೋಗಿಯೇ ನಂತರ ಉಳಿದ ಆಧಾರಗಳಿಗೆ ಹೋಗಬೇಕಾಗಿದೆ.

ಇಂತಹ ವೈಚಾರಿಕ ಆಕೃತಿಗಳು ವಿಸ್ಮೃತಿಯ ತಳದಿಂದಲೆ ಹುಟ್ಟಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ. ಸಾಂಸ್ಕೃತಿಕ ಚರಿತ್ರೆಯ ಆಕೆಯ ಮೊದಲ ಸಂವಾದ ಇಲ್ಲಿನ ಮೌಖಿಕ ಪರಂಪರೆಯಿಂದ ಆರಂಭವಾಗಿ ಆನಂತರ ವಿಶ್ವಾತ್ಮಕವಾದ ಸವಾಲುಗಳ ಜೊತೆ ಮುಖಾಮುಖಿಯಾಗಬೇಕಾಗಿದೆ. ಇಲ್ಲದಿದ್ದರೆ ದಲಿತ ಬಂಡಾಯ ಚಳವಳಿಗಳಂತೆಯೇ ನಿರ್ದಿಷ್ಟ ಕಾಲಾವಧಿಯನ್ನು ದಾಟಿದ ಕೂಡಲೆ ಮಹಿಳಾ ಸಂಕಥನವೂ ಬರಡಾಗಿ ಮುಂದೆ ಕೇವಲ ಅದೊಂದು ಶುಷ್ಕವಾದ ಸಂವಾದ ವೇದಿಕೆಯಾಗಿ ಕೆಟ್ಟ ರಾಜಕೀಯ ಇಚ್ಛಾಶಕ್ತಿಗೆ ಒಳಪಟ್ಟು ಅನೇಕ ಸಮುದಾಯಗಳು ಹೂಡುವ ರಾಜಕೀಯ ಉದ್ದೇಶದ ಮಾತಿಗೆ ಒಳಪಟ್ಟು, ಉಳಿದೆಲ್ಲವನ್ನೂ ಕೈಬಿಡಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ನಿಜಕ್ಕೂ ಇವತ್ತಿನ ಸಾಮಾಜಿಕ ಶಾಪದಿಂದ ಮುಕ್ತವಾಗಬೇಕಾದರೆ  ಮಹಿಳಾ ಸಂಕಥನಗಳೇ ಸ್ಮೃತಿಕೋಶವನ್ನು ಬಿಚ್ಚಿ ವಿಸ್ತರಿಸ ಬೇಕಾಗಿದೆ. ಆ ಮಟ್ಟಿಗೆ ಮಹಿಳಾ ಚಿಂತನೆಗಳಿಗೆ ಇಪ್ಪತ್ತೊಂದನೆ ಶತಮಾನ ಸಿದ್ಧವಾಗಿದೆ.