ದಲಿತ ಇತಿಹಾಸದ ಸಾಕ್ಷ್ಯಾಧಾರದ ನೆಲೆ

ಚರಿತ್ರೆಗೆ ಸಾಕ್ಷಿಯೆ ಮುಖ್ಯ ಎನ್ನುವ ನಿಯಮವಿದೆ. ಸಾಕ್ಷಿ ಇಲ್ಲದ್ದು ಚರಿತ್ರೆಯಾಗ ಲಾರದು ಎಂಬುದನ್ನು ಆ ನಿಯಮ ಧ್ವನಿಸುತ್ತದೆ. ಚರಿತ್ರೆ ಶಿಸ್ತಿನ ನಿಯಮಗಳ ಆಚೆಗೆ ಹೋದಾಗ ಮಾತ್ರ ಚರಿತ್ರೆಯ ಮತ್ತೊಂದು ಚರಿತ್ರೆ ಸಿಗುತ್ತದೆ. ಚರಿತ್ರೆಯ ಚರಿತ್ರೆಯೆ ದಲಿತ ಇತಿಹಾಸದ ಸಾಕ್ಷಿ ಪ್ರಜ್ಞೆ. ಚರಿತ್ರೆಗೆ ಸಾಕ್ಷಿ ಇದ್ದರೆ ಚರಿತ್ರೆಗೆ ಕಾರಣವಾದ ಸಂದರ್ಭ ಗಳಿಗೆ ಮತ್ತು ಸಮುದಾಯಗಳಿಗೆ ಸಾಕ್ಷಿ ಇರುವುದಿಲ್ಲ. ಈ ಮಾತು ಅಮೂರ್ತವಾಗಿ ಕಾಣುತ್ತದೆ ನಿಜ. ರಾಜ ಅರಮನೆಯನ್ನು ಕಟ್ಟಿಸಿದ, ಸಾಮ್ರಾಜ್ಯಗಳನ್ನು ಸದೆ ಬಡಿದು ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ ಎಂದು ಹೇಳುವುದು ಚರಿತ್ರೆಯೆ ಸರಿ. ಆದರೆ ರಾಜನಾದವನು ನಿಜವಾಗಿಯೂ ಯುದ್ಧ ಮಾಡಿದ್ದಾನೆಯೆ ಎಂದು ಖಚಿತಪಡಿಸಿಕೊಳ್ಳಲು ಅನ್ಯ ಸಾಕ್ಷಿಗಳು ಇರಲಾರವು. ಚರಿತ್ರೆಗೆ ಇಲ್ಲಿ ವಸ್ತುನಿಷ್ಟತೆ ಮುಖ್ಯವೇ ಹೊರತು ಆ ವಸ್ತುನಿಷ್ಠತೆಯ ಒಳಗಿನ ವಾಸ್ತವ ಏನೆಂಬುದು ಮುಖ್ಯವಲ್ಲ. ವಸ್ತುನಿಷ್ಠತೆಯ ಆಚೆಗಿನ ಭಾವನಿಷ್ಠೆಯು ಚರಿತ್ರೆಯ ಚರಿತ್ರೆಯಾಗಿರುತ್ತದೆ. ರಾಜನ ದಿಗ್ವಿಜಯದಲ್ಲಿ ಸೋತವರ ಬದುಕು ಏನಾಯಿತು ಎಂಬು ದನ್ನು ಚರಿತ್ರೆಯು ಹುಡುಕುವುದಿಲ್ಲ.

ಗೆದ್ದವರ ದನಿಗಿಂತ ಸೋತವರ ದನಿಯೂ ಚರಿತ್ರೆಗೆ ಬಹಳ ಮುಖ್ಯ. ಅತ್ಯಂತ ಬಲಾಢ್ಯವಾದ ಸೈನ್ಯದಿಂದಲೂ ಸಂಪತ್ತಿನ ಅಪರಿಮಿತ ಸಂಗ್ರಹದಿಂದಲೂ ಯಾವುದೇ ಸಾಮ್ರಾಜ್ಯವು ಮೆರೆದಿದೆ ಎಂದರೆ ಅದು ಅಭಿಮಾನ ಪಡಬೇಕಾದ ಸಂಗತಿಯಲ್ಲ. ಎಲ್ಲಿ ಅಪಾರ ಸಂಪತ್ತು, ಅಧಿಕಾರ, ಸೈನ್ಯ, ಯುದ್ಧ ಹಾಗೂ ದಿಗ್ವಿಜಯಗಳು ಮೆರೆದಿರುತ್ತವೊ ಅಲ್ಲೆಲ್ಲ ಅಪರಿಮಿತವಾದ ಅನ್ಯಾಯ, ದುರಾಕ್ರಮಣ, ಹಿಂಸೆ ಹಾಗೂ ಅನೈತಿಕ ವ್ಯವಸ್ಥೆ ಮತ್ತು ದಂಗೆಕೋರ ಪ್ರಭುತ್ವದ ಕರಾಳತೆಯು ಮಡುಗಟ್ಟಿ ನಿಂತಿರುತ್ತದೆ. ಆದ್ದರಿಂದಲೇ ಚರಿತ್ರೆಯ ಸುವರ್ಣ ಯುಗಗಳ ಕಾಲದಲ್ಲೇ ತಿನ್ನಲು ಗತಿ ಇಲ್ಲದೆ ಸಗಣಿಯಲ್ಲಿದ್ದ ಹುರುಳಿಕಾಳನ್ನು ಕೂಡ ಬಸಿದು ಸೋಸಿ ಬೇಯಿಸಿಕೊಂಡು ತಿನ್ನುತ್ತಿದ್ದ ದಲಿತರು ಕಾಣಸಿಗುತ್ತಾರೆ. ಅಂದರೆ ಚರಿತ್ರೆಯ ಚರಿತ್ರೆಗೆ ಬೇರೆ ಬೇರೆ ಆಯಾಮಗಳಿವೆ. ಚರಿತ್ರೆಯ ಘನತೆಗಾಗಿ ಮಡಿದವರು ಯಾವ ಸಾಕ್ಷಿಗಳನ್ನೂ ಬಿಟ್ಟು ಹೋಗಿರುವುದಿಲ್ಲ. ಆದರೆ ಅಂತಹ ಅಸಂಖ್ಯಾತ ಪ್ರಾಣತ್ಯಾಗದಿಂದ ಸಮಾಜದ ಕೆಲವೇ ಕೆಲವರ ದಿಗ್ವಿಜಯಕ್ಕೆ ಅಧಿಕೃತತೆಯು ಬಂದುಬಿಟ್ಟಿರುತ್ತದೆ.

ಗತಘಟನೆಯ ಪರಿಣಾಮವೆ ಚರಿತ್ರೆ. ಚರಿತ್ರೆಯ ಚರಿತ್ರೆಯಾದವರು ಎಲ್ಲ ನೊಂದವರು ಮತ್ತು ತಿರಸ್ಕೃತರು. ಚರಿತ್ರೆಯಿಂದ ಉಪಯೋಗ ಪಡೆದವರು ಬೇರೆ. ಹಾಗೆ ಹಿಂದೂಜಾತಿ ಪದ್ಧತಿಯ ಚರಿತ್ರೆಯಿಂದ ನಿತ್ಯವೂ ಅನುಭೋಗವಂತ ಪುಣ್ಯವಂತ ಜಾತಿಯವರು ಚರಿತ್ರೆ ಯನ್ನು ಯಾವತ್ತೂ ಆಳುವವರೆ ಆಗಿರುತ್ತಾರೆ. ಭಾವನಿಷ್ಠೆಯಿಂದ ಹೇಳುವುದಾದರೆ ಚರಿತ್ರೆಯ ದಂಡನೆಗೆ ಒಳಗಾಗಿ ಹಿಂಸೆಪಟ್ಟ ಪಾಪಿಗಳು ಚರಿತ್ರೆಯ ತಳಪಾಯದ ಚಪ್ಪಡಿಕಲ್ಲುಗಳನ್ನು ಹೊತ್ತುಕೊಂಡೇ ಮೇಲೆ ದಿಗ್ವಿಜಯದ ಸಂಭ್ರಮದಲ್ಲಿರುವವರ ಬಗ್ಗೆ ದಿವ್ಯವಾಗಿ ಮೌನವಾಗಿ ಸ್ಪಂದಿಸುತ್ತಲೆ ಇರುತ್ತಾರೆ. ಇದು ದಲಿತ ಇತಿಹಾಸದ ನೈತಿಕ ಪ್ರತಿರೋಧವೂ ಹೌದು ಹಾಗೆಯೆ ಎಲ್ಲವನ್ನೂ ಕಳೆದುಕೊಳ್ಳುತ್ತ ಶೋಷಣೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ದ್ವಂದ್ವವೂ ಹೌದು. ದಲಿತ ಇತಿಹಾಸದ ಈ ಬಗೆಯ ವೈರುಧ್ಯಕ್ಕೆ ಹಲವಾರು ಕಾರಣಗಳಿವೆ. ತಾನು ಅನಿವಾರ್ಯವಾಗಿ ಬದುಕಲೇಬೇಕಾದ ಇಕ್ಕಟ್ಟು ನಿರ್ಮಾಣವಾದಾಗ ಸೋತವರು ತನ್ನದಲ್ಲದ ಸಾಕ್ಷಿಯನ್ನೂ ತನ್ನದೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗೆ ಒಪ್ಪುವ ಸಾಕ್ಷಿಯು ಮೇಲೆ ಒಂದು ಬಗೆಯಾಗಿದ್ದರೆ ಅದು ತನ್ನೊಳಗೆ ಬೇರೊಂದು ಸಾಕ್ಷಿ ಪ್ರಜ್ಞೆಯನ್ನು ಅಳವಡಿಸಿಕೊಂಡಿರುತ್ತದೆ. ಮೇಲೆ ಗೆದ್ದ ಸಾಕ್ಷಿಯಿದ್ದರೆ ಒಳಗೆ ಸೋತ ಸಾಕ್ಷಿಯಿರುತ್ತದೆ. ಸಾಕ್ಷಿಯಲ್ಲಿ ಎಲ್ಲಿಯಾದರೂ ಗೆದ್ದ ಹಾಗೂ ಸೋತ ಸಾಕ್ಷಿಗಳಿರುತ್ತವೆಯೇ ಎಂದು ಯಾರೂ ಮೂಗು ಮುರಿಯಬೇಕಾದ್ದಿಲ್ಲ. ಗೆದ್ದವರ ಶಾಸನಗಳು ಸ್ಮಾರಕಗಳು ಸೋತವರ ಸಾಕ್ಷಿಗಳನ್ನು ಹೇಗೆ ನಾಶಪಡಿಸಿ ಅವುಗಳ ಮೇಲೆ ತಮ್ಮ ಸೌಧಗಳನ್ನು ಕಟ್ಟಿಕೊಂಡಿವೆ ಎಂಬುದನ್ನು ಗಮನಿಸಬಹುದು.

ದಲಿತರ ಮನಸಾಕ್ಷಿಯು ಈ ಕಾರಣದಿಂದಲೇ ಅತ್ಯಂತ ಸಂಕೀರ್ಣವಾಗಿರುವುದು. ಭೌತಿಕ ಕಟ್ಟಡಗಳ ಅಥವಾ ಬರಹಗಳ ಸಾಕ್ಷಿಯ ಮೇಲೆ ತನ್ನ ಪತಾಕೆ ನೆಟ್ಟುಕೊಳ್ಳುವುದು ಒಂದು ಬಗೆಯಾದರೆ ಸೋತವರ ಅಥವಾ ನಿರ್ಲಿಪ್ತರ ಸ್ಥಿತಿಯ ಮನಸ್ಸಿನ ಮೇಲೆ ತಮ್ಮ ಆಲೋಚನೆ ಗಳನ್ನು ಹೇರುವುದು ಇನ್ನೊಂದು ಬಗೆಯ ದಾಳಿಯಾಗಿರುತ್ತದೆ. ಹಿಂದುತ್ವದ ಮಾನಸಿಕ ದಾಳಿಯು ಅನೇಕ ತಳಸಮುದಾಯಗಳ ಚರಿತ್ರೆಯ ಸಾಕ್ಷ್ಯವನ್ನು ನುಂಗಿರುವುದರಿಂದ ದಲಿತ ಇತಿಹಾಸಕ್ಕೆ ಸ್ಪಷ್ಟ ಆಧಾರಗಳಿಲ್ಲ ಎನಿಸುವುದು ಸಹಜ. ಯಾವುದೇ ಒಂದು ಘಟನೆಗೆ, ಕಾಲಮಾನಕ್ಕೆ, ಸಂದರ್ಭಕ್ಕೆ ಹಾಗೂ ಹಿನ್ನೆಲೆಗಳಿಗೆ ಸಾಕ್ಷಿ ಇಲ್ಲ ಎಂದಾಗ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಏನೆಂದರೆ, ಇರುವ ಸಾಕ್ಷ್ಯವೇ ಇಲ್ಲದಿರುವ ಸಾಕ್ಷ್ಯದ ಬಗ್ಗೆ ಗುಪ್ತ ಸೂಚನೆಗಳನ್ನು ಬಿಟ್ಟುಹೋಗಿರುತ್ತದೆ. ತನ್ನನ್ನು ಮಾತ್ರ ಸ್ಥಾಪಿಸಿಕೊಳ್ಳಲು ಹುಟ್ಟಿ ಕೊಂಡ ಸಾಕ್ಷ್ಯಗಳೆಲ್ಲವೂ ತನ್ನದಲ್ಲದ ಸಾಕ್ಷ್ಯವನ್ನು ಬಚ್ಚಿಟ್ಟಿರುತ್ತದೆ. ಅಂದರೆ ಇರುವ ಸಾಕ್ಷಿಯ ಮೂಲಕವೇ ಇಲ್ಲದಿರುವ ಸಾಕ್ಷಿಯನ್ನು ಹುಡುಕಬೇಕು. ಹೀಗೆ ಹುಡುಕಲು ತುಂಬ ಕಷ್ಟಪಡಬೇಕಾಗಿಲ್ಲ. ಸರಳವಾಗಿಯೆ ಅಂತಹ ಸಾಕ್ಷ್ಯವನ್ನು ಕಂಡುಕೊಳ್ಳಬಹುದು. ಈ ರಾಜನ ಸಂಪತ್ತು ಯಾರದಾಗಿತ್ತು ಎಂದರೆ ಈ ಸಂಪತ್ತು ರಾಜನದಾಗಿರಲಿಲ್ಲ ಎಂದರೆ ಆಗ ಅದು ಬೇರೊಂದು ಆಧಾರವನ್ನು ಪ್ರಜ್ಞೆಯನ್ನು ಅಸ್ತಿತ್ವದ ಬೇರೆ ಬೇರೆ ದಾರಿಗಳನ್ನು ತೋರುವ ಮೂಲಕ ಮಾನವನ ಘನತೆಯನ್ನು ಪ್ರತಿಬಿಂಬಿಸುವ ಸಾಕ್ಷಿಪ್ರಜ್ಞೆಯನ್ನು ತೋರುತ್ತದೆ. ಸಾಕ್ಷಿಗಿಂತಲೂ ಮಿಗಿಲಾದುದು ಸಾಕ್ಷಿ ಪ್ರಜ್ಞೆ.

ದಲಿತ ಇತಿಹಾಸದಲ್ಲಿ ಸಾಕ್ಷಿ ಪ್ರಜ್ಞೆಯು ಬಹಳ ದೊಡ್ಡದು. ಬೇಕಿದ್ದರೆ ಈ ಮಾತನ್ನು ಸಾಕ್ಷಿಯ ಸಾಕ್ಷಿ ಎಂದು ಕರೆಯುವ. ಯಾವತ್ತೂ ಸಾಕ್ಷಿಗೆ ಹಲವು ಮುಖಗಳಿರುತ್ತವೆ. ಆ ಸಾಕ್ಷಿಯು ಎಷ್ಟೋ ಬಾರಿ ಒಂದೇ ಆಗಿದ್ದರು ಸಾಕ್ಷಿಯನ್ನು ಅರಿಯುವ ರೀತಿಯು ಬೇರೆ ಬೇರೆಯಾಗಿರುತ್ತದೆ. ಭಾರತೀಯ ಇತಿಹಾಸದ ಒಟ್ಟು ಸಾಕ್ಷಿಗಳನ್ನೇ ನಾವು ಇಲ್ಲದಿರುವ ಸಾಕ್ಷಿಗಳ ಶೋಧನೆಗಾಗಿ ಪುನರ್ ಪರಿಶೀಲಿಸುವ ಮೂಲಕ ದಲಿತ ಇತಿಹಾಸವನ್ನು ದಾಖಲಿಸಬಹುದು. ವಿಜ್ಞಾನದ ಪತ್ತೆ ಕಾರ್ಯದಲ್ಲಿ ಇಂತಹ ವಿಧಾನಗಳಿವೆ. ಒಂದು ತಳಿಯ ಮೂಲವನ್ನು ಹುಡುಕುತ್ತಲೇ ಅದು ಹೇಗೆ ಮತ್ತೊಂದು ತಳಿಗೆ ಜೀವಕೊಟ್ಟು ಗತಕಾಲಕ್ಕೆ ಸರಿದಿರುತ್ತದೆ ಎಂಬುದು ತಿಳಿಯಲ್ಪಡುತ್ತದೆ. ಅಥವಾ ಮೂಲ ತಳಿಯೊಂದು ಕಾಲಾನು ಕ್ರಮದಲ್ಲಿ ಹೇಗೆ ರೂಪಾಂತರಗೊಳ್ಳುತ್ತ ಹಲವು ಚಹರೆಗಳನ್ನು ಪಡೆದುಕೊಂಡಿತು ಎಂಬು ದನ್ನು ಪತ್ತೆ ಮಾಡಬಹುದು. ಉತ್ಖನನದ ಒಂದು ಸಾಕ್ಷಿಯಿಂದ ಹೇಗೆ ಆ ಕಾಲದ ಬೇರೆ ಬೇರೆ ಅದೃಶ್ಯ ಸಾಕ್ಷಿಗಳನ್ನು ಕಂಡುಕೊಳ್ಳಬಹುದೊ ಅದರಂತೆಯೇ ಚರಿತ್ರೆಯ ಯಜಮಾನ್ಯದ ಸಾಕ್ಷಿಯಿಂದ ದಲಿತ ಇತಿಹಾಸದ ಸಾಕ್ಷಿಗಳನ್ನು ಗ್ರಹಿಸಬಹುದು.

ಇಲ್ಲಿ ಮತ್ತೊಂದು ಬಗೆಯ ಸಾಕ್ಷಿತನವಿದೆ. ಅದೆಂದರೆ ತನ್ನ ಬಗೆಗಿನ ತನ್ನ ಸಾಕ್ಷಿಯನ್ನು ತಾನೇ ನಿರಾಕರಿಸಿ ಕಾಲಾತೀತವಾಗಿರುವ ಸ್ವಭಾವದ್ದು. ಸಾಕ್ಷಿಯನ್ನು ನಿರಾಕರಿಸಿಕೊಳ್ಳುವುದು ಕೂಡ ಸಾಕ್ಷಿಯ ಬಗೆಗಿನ ಬಂಡಾಯವೇ. ಇಂತಹ ಬಂಡಾಯವು ಸಾಕ್ಷಿಯ ಪಾವಿತ್ರ್ಯವನ್ನು ಅಲ್ಲಗಳೆಯುತ್ತಿರುತ್ತದೆ. ಅಂತೆಯೆ ಎಲ್ಲ ಸಾಕ್ಷಿಗಳನ್ನು ಆಳುವವರು ನಿಯಂತ್ರಿಸುತ್ತಾರೆ ಎಂಬ ಸಂದರ್ಭವಿದ್ದಾಗ ತನ್ನ ಸಾಕ್ಷಿಯನ್ನು ತಾನೆ ನಾಶಪಡಿಸಿಕೊಳ್ಳುವ ಗುಣವೂ ಇರುತ್ತದೆ. ಹಿಂದೂ ಧರ್ಮದ ದಾಳಿಯಲ್ಲಿ ಸಂಸ್ಕೃತಿಗಳು ಹೇಗೆ ತಮ್ಮ ದಾಖಲೆಗಳನ್ನು ತಮಗೆ ತಾವೇ ಬಚ್ಚಿಡುತ್ತಲೇ ಕಳೆದುಕೊಂಡವು ಎಂಬುದನ್ನು ಗಮನಿಸಬೇಕು. ಇಂತಲ್ಲಿ ಅನೇಕ ಸಾಕ್ಷಿಗಳು ಅಳಿದು ಆ ಸಾಕ್ಷಿಗಳ ಸಾಕ್ಷಿಪ್ರಜ್ಞೆ ಮಾತ್ರ ಉಳಿದುಕೊಂಡಿತು. ಹೀಗೆ ಸಾಕ್ಷಿಗಳನ್ನು ಕಳೆದು ಕೊಂಡವರ ಚರಿತ್ರೆಗೆ ಅಧಿಕೃತ ಸಾಕ್ಷಿ ಮುಖ್ಯವಲ್ಲ. ಅಧಿಕೃತ ಸಾಕ್ಷಿಯು ಅನೇಕ ವೇಳೆ ಅಪರಾಧಗಳಿಂದ ಹುಟ್ಟಿಕೊಂಡಿರುತ್ತದೆ. ಇತಿಹಾಸಕ್ಕೆ ಅಧಿಕೃತ ಸಾಕ್ಷಿಯನ್ನು ಪ್ರತಿಪಾದಿಸುವುದು ಈ ಕಾಲದಲ್ಲಿ ಮತೀಯ ಮೂತಭೂತವಾದಕ್ಕೆ ದಾರಿಮಾಡಿಕೊಟ್ಟಂತಾಗುತ್ತದೆ. ಅಧಿಕೃತವೆಂದು ಮಾನ್ಯಮಾಡಿರುವ ಬಹುಪಾಲು ಸಾಕ್ಷಿಗಳಲ್ಲಿ ಏಕಮುಖ ನಿಲುವೇ ಪ್ರಧಾನವಾಗಿದೆ. ಆಧುನಿಕ ಜಗತ್ತು ಹುಸಿ ಸಾಕ್ಷಿಗಳನ್ನು ನಿರ್ಮಿಸುವುದರಲ್ಲಿ ಅದ್ವಿತೀಯವಾಗಿದೆ. ಯಾವುದೇ ಸಾಕ್ಷಿಗಳನ್ನು ಅದು ಕುಳಿತಲ್ಲೇ ಸೃಷ್ಟಿಮಾಡಿ ಆ ಸಾಕ್ಷಿಯನ್ನೆ ಒಂದು ಬಂಡವಾಳ ಮಾಡಿ ಬಿಡುತ್ತದೆ. ಹೀಗಾಗಿ ಸಾಕ್ಷಿ ಪುರಾವೆ ದಾಖಲೆ ಉಳಿಕೆಗಳೂ ಬಂಡವಾಳಶಾಹಿ ಜಗತ್ತಿನ ಪರವಾಗಿ ಕೆಲಸ ಮಾಡುವಂತೆ ಅವು ಮಾರ್ಪಾಟಾಗಿವೆ. ಸಾಕ್ಷಿಯೇ ಇಂದು ಅತ್ಯಂತ ಅಪ್ರಮಾಣಿಕವಾದುದಾಗಿದೆ. ಗತಕಾಲದ ಸಾಕ್ಷಿಯು ಇವತ್ತಿನ ಸಾಕ್ಷಿಗಳ ಸ್ವರೂಪದಲ್ಲೇ ಪ್ರಭುತ್ವದ ಜೊತೆ ಸ್ಥಾಪಿತವಾಗಿ ಬೆಳೆದು ಬಂದಿದೆ.

ಹೀಗಾಗಿ ಸಾಕ್ಷಿಯ ಸಾಕ್ಷಿಯನ್ನು ಅರ್ಥೈಸುವುದು ಕಷ್ಟವಾಗಲಾರದು. ಸಾಕ್ಷಿಯನ್ನು ನಂಬುವುದಕ್ಕಿಂತ ಸಾಕ್ಷಿಯು ಅಮೂರ್ತವಾಗಿದ್ದರೂ ಅದನ್ನು ಭಾವಿಸಬಹುದು ಮತ್ತು ಅರ್ಥಕ್ಕೆ ಹೊಂದಿಸಿಕೊಳ್ಳಬಹುದು. ಹೀಗೆ ಮಾಡುವಾಗ ನಾವು ಇನ್ನೊಂದು ಮುಖ್ಯ ಸಂಗತಿಯನ್ನು ಗಮನಿಸಬೇಕು. ಒಟ್ಟಿನಲ್ಲಿ ಹಲವು ನೆಲೆಗಳಿಂದ ಪಡೆದ ದಲಿತ ಇತಿಹಾಸದ ಸಾಕ್ಷಿಪುರಾವೆ ಉಳಿಕೆಗಳನ್ನೆಲ್ಲ ನಾವು ಯಾವ ಬಗೆಯ ಚರಿತ್ರೆಗೆ ಬಳಸಬೇಕು ಎಂಬ ಸಮಸ್ಯೆಯನ್ನು ಬಗೆಹರಿಸಿಕೊಂಡರೆ ಮುಂದಿನ ಕೆಲಸ ಸುಲಭ. ಕೇಸರೀಕರಣದ ಇತಿಹಾಸಕ್ಕೆ ಪ್ರತಿಕ್ರಿಯೆಯಾಗಿ ದಲಿತ ಇತಿಹಾಸದ ಸಾಕ್ಷಿಗಳನ್ನು ಹೊಂದಿಸಿ ಜೋಡಿಸುವುದೊ ಅಥವಾ ಅದಕ್ಕೆ ವಿರುದ್ಧ ಎಂತಲೂ ಪರ್ಯಾಯ ಎಂತಲೊ ಪ್ರತ್ಯೇಕವಾಗಿ ಆ ಆಕರಗಳನ್ನು ನಿರೂಪಿಸುವದೊ ಎಂಬುದು ಸ್ಪಷ್ಟವಾಗಿರಬೇಕು.

ಚರಿತ್ರೆಯ ಮೂರನೆ ಆಯಾಮವೆಂದರೆ ದಲಿತ ಇತಿಹಾಸ. ಈ ಮೂರನೆ ದೃಷ್ಟಿಯೂ ಪರಿಪೂರ್ಣ ಚರಿತ್ರೆಯನ್ನು ನಿರೂಪಿಸುವುದಿಲ್ಲವಾದರೂ ಚರಿತ್ರೆಯ ಮತ್ತೊಂದು ನಿರೂಪಣೆ. ಯಾವ ಚರಿತ್ರೆಯ ನಿರೂಪಣೆಗಳು ಅಂತಿಮವಲ್ಲ. ಆದರೆ ಅವೆಲ್ಲ ಪೂರ್ಣತೆಯನ್ನು ಭಾವಿಸುವ ಹುಡುಕುವ ವಿಸ್ತರಿಸುವ ಸಾಧ್ಯತೆಗಳು ಮಾತ್ರ. ವಾಸ್ತವ ಹೀಗಿರುವಾಗ ದಲಿತ ಇತಿಹಾಸದ ಸಾಕ್ಷ್ಯಗಳು ಕೇಸರೀಕರಣ ಮತ್ತು ಎಡಪಂಥೀಕರಣ ಇವೆರಡೂ ನಿರೂಪಣೆಯ ಸಾಧ್ಯತೆಗಳಲ್ಲಿ ಅವು ಬೇರೆ ಬೇರೆಯೇ. ಈ ಕಾರಣದಿಂದಲೇ ಅಲಕ್ಷಿತರ ಇತಿಹಾಸದ ಮಾರ್ಕ್ಸ್‌ವಾದಿ ಚಿಂತನೆಗಳು ಕೂಡ ಹಿನ್ನೆಡೆ ಕಂಡದ್ದು. ಹೊಸ ಬಗೆಯ ನಿರೂಪಣೆಯ ತುಡಿತದಲ್ಲಿ ದಲಿತ ಇತಿಹಾಸವನ್ನು ದಾಖಲಿಸುವಾಗ ಅಥವಾ ಬರೆಯುವಾಗ ಐದು ಮುಖ್ಯ ಸಂಗತಿಗಳನ್ನು ಗಮನಿಸಬೇಕು. ಅವುಗಳೆಂದರೆ ೧. ಭಾಷೆ ೨. ಭಗ್ನತೆ ೩. ನಿರ್ಮಾಣ. ೪. ಅಭಿವ್ಯಕ್ತಿ ೫. ವರ್ತಮಾನ.

ಭಾಷೆ ಮತ್ತು ದಲಿತ ಇತಿಹಾಸ

ಮೂಲತಃ ಚರಿತ್ರೆಯ ಎಲ್ಲ ನಿರೂಪಣೆಗಳೂ ಭಾಷೆಯ ವಿಸ್ತರಣೆಯೇ ಆಗಿದ್ದು ಅಂತಹ ಭಾಷೆಯ ಮೂಲಕ ತಮ್ಮ ಅಸ್ತಿತ್ವಕ್ಕೆ ಬೇಕಾದ ಬೌದ್ದಿಕ ಗದ್ಯವನ್ನೂ ವೈಚಾರಿಕ ಮೌಲ್ಯಗಳನ್ನು ಅಭಿವ್ಯಕ್ತಿಯ ಸಾಧ್ಯತೆಗಳನ್ನು ಕಂಡುಕೊಳ್ಳುವುದಾಗಿದೆ. ಇತಿಹಾಸಕ್ಕೂ ವ್ಯಾಕರಣವಿದೆ. ಇತಿಹಾಸದ ವ್ಯಾಕರಣವು ಭಾಷೆಗೆ ಸಂಬಂಧಪಟ್ಟಿದ್ದು. ಭಾಷೆ ಎಂದರೆ ಹಲವು ಅರ್ಥಗಳಿವೆ. ಚರಿತ್ರೆಯ ಸಂದರ್ಭದಲ್ಲಿ ಭಾಷೆ ಎಂದರೆ, ಅಣೆ, ಪ್ರಮಾಣ, ಸತ್ಯ, ಮಾತು, ವಚನ, ನಂಬಿಕೆ, ವಿಶ್ವಾಸ ಎಂಬಿತ್ಯಾದಿ ಅರ್ಥಗಳಿವೆ. ದಲಿತ ಇತಿಹಾಸದಲ್ಲಿ ಇಂತಹ ಅರ್ಥಗಳೇ ಮುಖ್ಯ. ಇತಿಹಾಸವನ್ನು ನಿರೂಪಿಸುವ ಭಾಷೆಗೆ ಈ ಬಗೆಯ ಧ್ವನಿಶಕ್ತಿಯಿರಬೇಕು. ಸಾಕ್ಷಿಯ ಭಾಷೆಯಾಗದೇ ಬೇರೆಯಾಗಿ ಬಿಡಬಹುದು. ಆದರೆ ಭಾಷೆಯು ಸಾಕ್ಷಿಯು ಚೌಕಟ್ಟನ್ನು ಮೀರಿ ಮನುಷ್ಯ ಸಂಬಂಧಗಳ ವಿಶ್ವಾಸದ ಮೇಲೆ ಅರ್ಥಗಳನ್ನು ಕಟ್ಟುತ್ತದೆ. ಸಾಕ್ಷಿಗಳಿಗೆ ಒಂದೇ ಅರ್ಥವಿದ್ದರೆ ಭಾಷೆಗೆ ಹಲವಾರು ಅರ್ಥಗಳಿವೆ. ಸಾಕ್ಷಿಯು ಸ್ಥಾವರವಾಗಿದ್ದರೆ ಭಾಷೆಯು ಬಯಲಾಗಿರುತ್ತದೆ. ದಲಿತರ ಚರಿತ್ರೆಯು ಬಯಲಿದ್ದಂತೆ. ಅದರಲ್ಲಿ ಸಾಕ್ಷಿಕಲ್ಲುಗಳಿವೆಯೇ ಹೊರತು ಅನುಶಾಸನಗಳಿರುವುದಿಲ್ಲ. ದಲಿತ ಇತಿಹಾಸದ ಭಾಷೆಯು ತನ್ನ ಕಾಲಕ್ಕೆ ಮಾತನ್ನಷ್ಟೇ ಅಲ್ಲದೆ ಮಾತಿನ ಹಲವು ಧ್ವನಿ ಸಾಧ್ಯತೆಗಳನ್ನು ತಂದುಕೊಡಬೇಕು. ತನ್ನ ಸಾಮಾಜಿಕ ವಾಸ್ತವಕ್ಕೆ ವಿಶ್ವಾಸವನ್ನು ನಿರೂಪಿಸಬೇಕು. ಹಾಗೆಯೇ ಸತ್ಯವನ್ನು ನುಡಿವ ದಾರಿಗಳನ್ನು ತೆರೆಯಬೇಕು. ಅಂಬೇಡ್ಕರ್ ಕತ್ತಲಲ್ಲಿದ್ದವರಿಗೆ ಅಂತಹ ನಂಬಿಕೆಯನ್ನೂ ಧ್ವನಿಯನ್ನೂ ತಂದುಕೊಟ್ಟರು. ಬಹಿಷ್ಕೃತ ಭಾರತದ ಆತ್ಮಸಾಕ್ಷಿಯನ್ನು ಅಂತಹ ಭಾಷೆಯ ಮೂಲಕ ಅವರು ತೆರೆದು ತೋರಿದರು. ಸ್ಪಟಿಕದ ಸಲಾಕೆಯಂತಹ ಅಂಬೇಡ್ಕರ್ ಅವರ ಭಾಷೆಯ ದಲಿತ ಇತಿಹಾಸದ ಅಖ್ಯಾನದಂತಿದೆ.

ಹುಸಿಯನ್ನು ಸಮರ್ಥಿಸುವ ಭಾಷೆಯು ಜಾಣತರ್ಕಗಳನ್ನು ಒಣ ಪಾಂಡಿತ್ಯವನ್ನು ಮಂಡಿಸುತ್ತದೆ. ಹುಸಿಯ ಒಳಗಿನ ಕೇಡಿನ ಭಾಷೆಗೆ ಅಸತ್ಯದ ಎಲ್ಲ ನುಡಿಗಟ್ಟುಗಳು ಸಮರ್ಥವಾಗಿ ತಿಳಿದಿರುತ್ತವೆ. ಇದರಿಂದಾಗಿಯೆ ಕೋಮುದ್ವೇಶದ ಭಾವನೆಗಳನ್ನು ಬಿತ್ತುವ ಭಾಷೆಯು ಮತೀಯ ತರ್ಕಗಳನ್ನು ಸರಾಗವಾಗಿ ಹೇಳುತ್ತದೆ. ಸತ್ಯನುಡಿಯುವುದು ತುಂಬ ಕಠಿಣ. ಸತ್ಯದ ಭಾಷೆಯು ಯಾವತ್ತೂ ಒಂದೇ ನೀತಿಗೆ ಬದ್ಧವಾಗಿರುತ್ತದೆ. ಕೋಮು ಇತಿಹಾಸವು ಸಾಕ್ಷಿಗಳ ಗರ್ವದಲ್ಲಿ ಹುಸಿಯ ತರ್ಕದಲ್ಲಿ ನಿಜದ ನೆಲೆಗಳನ್ನು ಹಿಂಸಿಸುತ್ತಿ ರುತ್ತದೆ. ಅಂದರೆ ಹುಸಿಗೆ ಅಪಾರವಾದ ರೂಪಾಂತರ ಗುಣ ಇರುವುದರಿಂದ ಅದು ಬಲಪ್ರಯೋಗದ ಭಾಷೆ. ಅಧಿಕಾರವಾಣಿಯಾಗಿ ಅದು ಆ ದೇಶದ ಭಾಷೆಯಾಗಿ ಇತಿಹಾಸದ ಹಕ್ಕು ಚಲಾಯಿಸುತ್ತಿರುತ್ತದೆ. ಹುಸಿಯ ಭಾಷೆಯು ಯಾವತ್ತೂ ಗುಂಪಾಗಿರುತ್ತದೆ. ಅಲ್ಲದೆ ಅದು ತನಗೆ ಬೇಕಾದ ಹುಸಿ ನುಡಿಗಳ ಹುಸಿ ಸತ್ಯಗಳನ್ನು ಬೆಳೆಸುತ್ತಲೇ ಇರುತ್ತದೆ. ಹೀಗಾಗಿಯೇ ಕೇಸರೀಕರಣದ ಚರಿತ್ರೆಕಾರರು ಪ್ರತಿದಿನವೂ ಹೊಸ ಹೊಸ ಸಾಕ್ಷಿಗಳ ಶೋಧನೆ ಮಾಡಬಲ್ಲರು. ಆ ಮೂಲಕ ಇತಿಹಾಸವನ್ನು ತಿರುಚಿ ಬಹುಸಂಖ್ಯಾತರ ವಿಶ್ವಾಸವನ್ನು ಭಂಗಪಡಿಸಬಲ್ಲರು. ಇದರಿಂದಾಗಿ ಚರಿತ್ರೆಯಲ್ಲಿ ಯಾರ ಬಗೆಗಾದರೂ ಯಾವ ಘಟನೆಗೆ ಸಂಬಂಧಪಟ್ಟರೂ ನೂರಾರು ಸಾಕ್ಷಿಗಳು ಸಿಗುವುದು. ಭಾರತೀಯ ಇತಿಹಾಸಕ್ಕೆ ಇರುವ ಸಮಸ್ಯೆಗಳೇ ಇವು. ಅಪರಿಮಿತವಾದ ಸಾಕ್ಷ್ಯಗಳು ಇಲ್ಲಿನ ಚರಿತ್ರೆಗೆ ಹುಸಿ ಕೋಟೆಗಳನ್ನು ಬಲವಾಗಿಯೆ ಕಟ್ಟಿವೆ. ಅವು ಅತಿಯಾಗಿವೆಯೆಂದೇ ಕಾಣುತ್ತವೆ. ಇದರಿಂದಲೇ ಬಲಪಂಥೀಯ ಚರಿತ್ರೆಕಾರರು ಇತಿಹಾಸದ ಬಗ್ಗೆ ಗೊಂದಲ ಸೃಷ್ಟಿಸಲು ಸಾಧ್ಯವಾಗಿರುವುದು.

ಈ ಬಗೆಯ ವಿವರಗಳನ್ನು ಗಮನಿಸಿಯೇ ದಲಿತ ಇತಿಹಾಸದ ಭಾಷೆಯನ್ನು ನಿರ್ಧರಿಸ ಬೇಕು. ವಚನ ಭ್ರಷ್ಟರಾಗುವುದು ಎಂದರೆ ಕೊಟ್ಟ ಭಾಷೆಗೆ ತಪ್ಪುವುದು. ದಿನ ನಿತ್ಯವೂ ಸಮಾಜದಲ್ಲಿ ಭಾಷೆಯು ಅಪರಾಧಗಳಿಗೇ ಹೆಚ್ಚು ಬಳಕೆಯಾಗುತ್ತಿರುತ್ತದೆ. ಮಾತಿನ ನಂಬಿಕೆಯನ್ನು ಉಳಿಸಿಕೊಳ್ಳಲಾರದ ಸ್ಥಿತಿಯಲ್ಲಿ ಸಮಾಜ ಸಮುದಾಯ ಕಾಲ ಎಲ್ಲವೂ ಭ್ರಷ್ಟವಾಗುತ್ತಿರುವಾಗ ಚರಿತ್ರೆಕಾರರು ಇಂತಹ ಕಾಲದಲ್ಲೇ ನಿರ್ಣಾಯಕವಾದ ಭಾಷೆಯನ್ನು ಬಳಸಬೇಕಾ ಗಿರುವುದು. ಒಳ್ಳೆಯ ಕಾಲವಿದ್ದರೆ ಚರಿತ್ರೆಕಾರರಿಗೆ ಜವಾಬ್ದಾರಿ ತುಂಬ ಕಡಿಮೆ. ಕೆಟ್ಟಕಾಲದ ಕೆಟ್ಟಸಾಕ್ಷಿಯಲ್ಲಿ ಚರಿತ್ರೆಕಾರರು ತುಂಬ ಗಂಭೀರವಾದ ಚಾರಿತ್ರಿಕ ಜವಾಬ್ದಾರಿಗಳನ್ನು ಹೊತ್ತುಕೊಂಡು ಚರಿತ್ರೆಯ ಕೇವಲ ವಕೀಲರಾಗದೆ ಆದರ್ಶ ನ್ಯಾಯಾಧೀಶರಾಗಬೇಕು. ದಲಿತ ಇತಿಹಾಸಕಾರರು ಕೇವಲ ಕೆಂಪು ಕೇಸರಿಗಳ ಚರಿತ್ರೆಯ ಕಥನಗಳಿಗೆ ಪ್ರತಿಕ್ರಿಯೆಯನ್ನು ನೀಡುವುದಕ್ಕೆ ಮಾತ್ರ ಸೀಮಿತವಾಗಬಾರದು.

ದಲಿತರ ಭಾಷೆಯು ವೈದಿಕರ ಅಹಂನಿಷ್ಟ ಆದೇಶದ ಭಾಷೆಯಲ್ಲ ಹಾಗೆ ಅಹಂನಿಷ್ಟ ಆದೇಶದ ಭಾಷೆಯಾದ ಕೂಡಲೆ ಅದು ತನ್ನ ಸಮರ್ಥನೆಗೆ ಎಲ್ಲ ಬಗೆಯ ಯಜಮಾನ್ಯದ ಸಾಕ್ಷಿಗಳನ್ನು ನಿರೂಪಿಸಿಬಿಡುತ್ತದೆ. ದಲಿತ ಭಾಷೆಯು ನಿವೇದನಾ ಪ್ರಧಾನವಾದುದು. ಅರಿಕೆ ಮಾಡಿಕೊಳ್ಳುವಂತದ್ದು. ಹಂಬಲದಲ್ಲಿ ತನ್ನ ಪಾಡನ್ನು ಮಂಡಿಸುವಂತದ್ದು. ಹಾಗೆಯೇ ಭಾವನಿಷ್ಠವಾದ ಭಾಷೆಯಾಗಿ ತರ್ಕಗಳ ಆಚೆ ನಿಂತು ನಿರೂಪಿಸುವಂತದ್ದು. ತರ್ಕದ ಭಾಷೆಯು ಸದಾ ಸಾಕ್ಷಿಯನ್ನೆ ನಂಬುತ್ತದೆ. ಭಾವ ನಿಷ್ಠವಾದ ಭಾಷೆಯು ಅಂತಃಸಾಕ್ಷಿಯನ್ನೆ ಅವಲಂಬಿಸಿ ರುತ್ತದೆ. ದಲಿತರ ಅಂತರಾಳದ ಮಾತು ಚರಿತ್ರೆಯ ಪ್ರತಿಧ್ವನಿಯಾಗುವುದು ಇಂತಹ ಭಾವನಿಷ್ಟ ವಾದ ಭಾಷಿಕ ವಿನ್ಯಾಸಗಳಿಂದಲೇ.

ಭಗ್ನತೆ ಮತ್ತು ದಲಿತ ಇತಿಹಾಸ

ಭಗ್ನತೆಯು ವಿನಾಶವಲ್ಲ. ಅದು ಪ್ರತಿಸೃಷ್ಟಿಯ ಕ್ರಿಯೆ. ಚರಿತ್ರೆಯನ್ನು ಭಗ್ನಗೊಳಿಸುವುದೆಂದರೆ ಚರಿತ್ರೆಯ ತಳದಲ್ಲಿರುವ ಬೇರೆ ಬೇರೆ ಸಾಕ್ಷಿಗಳನ್ನು ಶೋಧಿಸುವುದು ಎಂದರ್ಥ. ಚರಿತ್ರೆ ಪುನರ್ ಸೃಷ್ಟಿಯಾಗುವುದು ವರ್ತಮಾನದ ಸ್ಥಿತಿಯಿಂದಲೇ. ವರ್ತಮಾನದ ಅನುಭವಗಳು ಗತಕಾಲದ ಸ್ಥಿತಿಯನ್ನು ಭಗ್ನಗೊಳಿಸಲು ಒತ್ತಾಯಿಸುತ್ತಿರುತ್ತದೆ. ಚರಿತ್ರೆ ನಿರ್ಮಾಣ ವಾಗಿರುವುದೇ ಭಗ್ನತೆಯ ಕಾರಣವಾಗಿ ಒಂದೊಂದು ಕಾಲದ ಆಳ್ವಿಕೆಯನ್ನು ಭಗ್ನಪಡಿಸುತ್ತಲೇ ಸಾಮ್ರಾಜ್ಯಗಳು ಕೋಟೆ ಕಟ್ಟಿರುವುದು. ಸಾಮ್ರಾಜ್ಯದ ಗಡಿಗಳನ್ನು ಭಂಗಪಡಿಸಿಯೇ ಚರಿತ್ರೆಯು ಆವತರಿಸಿರುವುದು. ಭಗ್ನತೆಯು ಚರಿತ್ರೆಯ ಅನಿವಾರ್ಯವಾದ ಕ್ರಿಯೆ. ಭಗ್ನ ಗೊಳ್ಳುತ್ತಲೇ ಸಾಮ್ರಾಜ್ಯಗಳು ಬಲವಾಗಲು ಯತ್ನಿಸಿವೆ. ರಾಜನೀತಿಯೂ ಭಗ್ನತೆಯನ್ನು ಅನುಸರಿಸಿದೆ. ಇವತ್ತಿನ ಭಗ್ನ ನೀತಿ ಬೇರೆ. ಒಡೆದು ಆಳುವ ನೀತಿ ಎಂಬ ಮಾತೂ ಒಂದೆಡೆಗಿದೆ. ವಸಾಹತುಶಾಹಿ ಸಾಮ್ರಾಜ್ಯವು ಭಗ್ನಗೊಳಿಸುತ್ತಲೇ ಭಾರತದ ಚರಿತ್ರೆ ಮೇಲೆ ತಮ್ಮ ಪತಾಕೆಗಳನ್ನು ಹಾರಿಸಿದೆ. ಇಂತಹ ಭಗ್ನತೆಯು ಅಸ್ತಿತ್ವವನ್ನು ಸ್ಥಾಪಿಸಲು ಹಾಗು ಸಮಾನ ಸಮಾಜದ ಕನಸನ್ನು ನನಸು ಮಾಡಲು ಚರಿತ್ರೆಯ ಪೂರ್ವಾಗ್ರಹಗಳನ್ನು ಭಗ್ನಗೊಳಿಸುತ್ತದೆ. ಹೊಸದಾದ ಸಾಕ್ಷಿಗಳನ್ನು ಭಂಗಗೊಳಿಸಿ ಅದು ನೀಗಿಕೊಂಡಿರುವ ನಿಜ ಇನ್ನೊಂದು ಧ್ವನಿಯನ್ನು ಪ್ರತಿಧ್ವನಿಸುತ್ತದೆ. ಗತಕಾಲದ ಪ್ರತಿಧ್ವನಿಯು ಚರಿತ್ರೆಯ ಬೇರೆ ಬೇರೆ ಕಾಲದಲ್ಲಿ ಭಿನ್ನವಾಗಿ ಕೇಳಿಸುತ್ತಿದ್ದು ಅದು ಸಾಗಿ ಬಂದ ಹಾದಿಯ ಉದ್ದಕ್ಕೂ ಪರಿಷ್ಕಾರ ಧ್ವನಿಯಾಗಿ ಮಾರ್ಪಡುತ್ತಲೇ ಇರುತ್ತದೆ. ಹೀಗೆ ವಿಭಿನ್ನ ಧ್ವನಿಯಾಗಿ ರೂಪಾಂತರಗೊಳ್ಳಲು ಭಗ್ನತೆಯು ಅನಿವಾರ್ಯ. ಚರಿತ್ರೆಯ ಅಪರಾಧಗಳು ಪರಿಹಾರವಾಗಲು ಭಗ್ನತೆಯೆ ತಕ್ಕ ಕ್ರಮ.

ಇಂತಹ ಭಗ್ನತೆಯು ಪ್ರಭುತ್ವವನ್ನು ಸದಾ ಎಚ್ಚರಿಸುತ್ತ ತನ್ನ ಕಾಲದ ಪ್ರತಿರೋಧ ಶಕ್ತಿಯನ್ನೂ ಹೆಚ್ಚಿಕೊಳ್ಳುತ್ತಲೇ ಯಾವುದೇ ವ್ಯವಸ್ಥೆಯ ಅಧಿಕೃತ ವಕ್ತಾರ ಸ್ವಭಾವವನ್ನು ಅಲ್ಲಗಳೆಯುತ್ತ ನಿರಂಕುಶ ಚರಿತ್ರೆಯನ್ನು ನಿಯಂತ್ರಿಸುತ್ತಲೇ ಇರುತ್ತದೆ. ಹೀಗಾದಾಗಲೆ ನಿರಂಕುಷ ಸಾಕ್ಷಿಗಳು ಅದರ ನಿರೂಪಣೆಗಳು ತಗ್ಗುವುದು. ದಲಿತ ಇತಿಹಾಸದ ಭಗ್ನತೆಯು ಇಂತಹ ಕಾಯಕದ್ದೇ ಹೊರತು ಕೇವಲ ಭಗ್ನತೆಗಾಗಿ ಭಗ್ನಗೊಳಿಸುವಂತದಲ್ಲ. ಸಮುದಾಯಗಳನ್ನೇ ಭಗ್ನಪಡಿಸಿದ ಚಾರಿತ್ರಿಕ ಸಂದರ್ಭಗಳನ್ನು ದಲಿತ ಇತಿಹಾಸವು ನಿರೂಪಿಸುತ್ತದೆ. ಚರಿತ್ರೆಯ ಆಕ್ರಮಣಗಳಿಗೆ ಒಳಗಾಗಿ ತಾವೇ ಭಗ್ನಗೊಂಡಿದ್ದರೂ ದಲಿತರು ಭಗ್ನಗೊಳಿಸು ವುದು ಭಗ್ನ ಪ್ರಿಯರ ಸಿನಿಕ ಹಿಂಸಾ ಪ್ರವೃತ್ತಿಯನ್ನು. ಹಿಂಸೆಯ ಭಗ್ನತೆಯ ಎದಿರು ಪ್ರೀತಿಯ ಭಗ್ನತೆ ಮಾನವ ಸಂಬಂಧಗಳನ್ನು ಬಲಪಡಿಸುವುದಕ್ಕಾಗಿ ಬೇಕು. ಭಗ್ನತೆಯೂ ಕೂಡ ಹೊಸ ಸಮಾಜವನ್ನು ಸೃಷ್ಟಿಸಬಲ್ಲದು. ಭಗ್ನಗೊಂಡ ದಲಿತ ಸಮುದಾಯಗಳು ಇತಿಹಾಸದ ಭಗ್ನತೆ ಯನ್ನು ಅಖಂಡ ಸಮಾಜದ ಕನಸಿಗಾಗಿ ಮಾಡುತ್ತಿರುತ್ತದೆ. ಇತಿಹಾಸದ ನಿರ್ವಚನಕ್ಕೆ ಆಯಾ ಕಾಲದ ವೈವಿಧ್ಯಮಯ ನಿರೂಪಣೆಗಳೇ ಬೇರುಗಳಿದ್ದಂತೆ. ಕಾಲದ ಅನುಭವಗಳೆಲ್ಲ ಚರಿತ್ರೆಗೆ ಬೇರಾಗಿ ಬೆಳೆಯುವುದು ಇಂತಹ ಸ್ವಭಾವದಿಂದಲೇ. ಭಗ್ನವಾಗಿದ್ದ ಸಮಾಜಕ್ಕೆ ಭದ್ರ ಬುನಾದಿ ಹೇಗಿರಬೇಕು ಎಂಬುದು ಸ್ವಪ್ರೇರಣೆಯಿಂದ ತಿಳಿದಿರುತ್ತದೆ. ಭಗ್ನಕೋರರು ಭದ್ರವಾದ ಸಮಾಜವನ್ನು ಕಟ್ಟಲಾರರು. ದಲಿತ ಇತಿಹಾಸಕ್ಕೆ ಭಗ್ನತೆಯ ದ್ವೇಷವಿಲ್ಲ. ಬದಲಿಗೆ ಸುಭದ್ರ ಭಾವನೆಗಳೇ ಮುಖ್ಯವಾಗಿರುತ್ತವೆ. ಕೆಡವಿ ಕಟ್ಟುವ ರೀತಿಯು ತುಂಬ ಸೂಕ್ಷ್ಮವಾದದ್ದು. ಕೆಡವುದರ ಮೊದಲೇ ಏನನ್ನು ಕಟ್ಟಬೇಕು ಯಾವುದನ್ನು ನಿರ್ನಾಮ ಮಾಡಬೇಕು ಎಂಬುದರ ಸ್ಪಷ್ಟ ಅರಿವಿರಬೇಕು. ಜಾತಿಯ ಕೋಟೆಗಳನ್ನು ಭಗ್ನಪಡಿಸಿ ಧಾರ್ಮಿಕ ಯಾಜಮಾನ್ಯವನ್ನು ಕೆಡವಿ ಪ್ರಭುತ್ವದ ನಿರಂಕುಷತೆಯನ್ನು ಬುಡಮೇಲು ಮಾಡಿ ಜನತೆಯ ಅಂತಃಸಾಕ್ಷಿಯ ಮಾನವ ಸಂಬಂಧಗಳನ್ನು ಕಟ್ಟುತ್ತಿರಬೇಕು. ನಾವು ಭಗ್ನಗೊಳಿಸದೇ ಹೋದರೆ ಮತ್ತೆ ಧುತ್ತೆಂದು ಭಯಂಕರವಾಗಿ ಜೀವಂತಗೊಂಡು ಎಲ್ಲ ಯತ್ನಗಳನ್ನೂ ಅದೇ ಭಗ್ನಪಡಿಸಿ ನಮ್ಮ ಮೇಲೆ ಅದು ತನ್ನ ಪ್ರಭುತ್ವವನ್ನೇ ಮರುಸ್ಥಾಪಿಸಬಲ್ಲದು.

ನಿರ್ಮಾಣ ಮತ್ತು ದಲಿತ ಇತಿಹಾಸ

ನಿರ್ಮಾಣದ ಪ್ರತಿಶೋಧವೂ ಸೃಜನಶೀಲವಾಗಿರಬೇಕು. ನಿರ್ಮಾಣವು ಗತಕಾಲದ ನಿರಂತರ ಪುನರ್ ಸೃಷ್ಟಿಯಾಗಿರುತ್ತದೆ. ಚರಿತ್ರೆಯ ನಂಬಿಕೆಗಳನ್ನು ನಿರ್ಮಿಸುವುದು ನಿರ್ಮಾಣದ ಮುಖ್ಯ ಗುರಿ. ನಂಬಿಕೆಗಳು ಕಳೆದು ಹೋದರೆ ಚರಿತ್ರೆಗೆ ಪರ್ಯಾಯ ದಾರಿಗಳೇ ಇರುವುದಿಲ್ಲ. ಎಲ್ಲ ನಿರ್ಮಾಣಗಳು ಮನುಷ್ಯನ ವಿಶ್ವಾಸವನ್ನು ವಿಸ್ತರಿಸುವಂತವೇ. ಆದರೆ ನಿರ್ಮಾಣಗಳು ಹುಸಿ ನಂಬಿಕೆಗಳನ್ನು ಬಿಡಬಾರದು. ನಂಬಿಕೆಗಳು ಒಂದೊಂದು ತಲೆಮಾರಿಗೂ ಬೇರೆಯಾಗಿರುತ್ತವೆ. ಆ ನಂಬಿಕೆಗಳು ಕಾಲದ ಬೇರೆ ಬೇರೆ ಸಂದರ್ಭಗಳಲ್ಲಿ ಚರಿತ್ರೆಯ ಪರಿಣಾಮಗಳನ್ನು ವಿಭಿನ್ನವಾಗಿ ಮುಂದುವರಿಸುತ್ತಿರುತ್ತವೆ. ನಿರ್ಮಾಣ ಎಂದ ಕೂಡಲೆ ಪರಿಪೂರ್ಣ ಎಂದಲ್ಲ. ಪ್ರತಿಯೊಂದು ನಿರ್ಮಾಣವೂ ಚರಿತ್ರೆಯ ನಿರೂಪಣೆಗಳೆ ಹಾಗು ಗತಕಾಲದ ಅನುಸಂಧಾನಗಳೇ. ಇಂತಹ ಅನುಸಂಧಾನವು ಸೃಜನಶೀಲವಾಗಿದ್ದಾಗ ಚರಿತ್ರೆಗೆ ವೈವಿಧ್ಯತೆ ಸಾಧ್ಯ. ಆಗಾಗ ಚರಿತ್ರೆಯ ಸಿದ್ಧ ನಿರ್ಮಾಣಗಳನ್ನು ಕೂಡ ಪ್ರಶ್ನಿಸುತ್ತಲೇ ಇರಬೇಕಾಗುತ್ತದೆ. ಭಾವ ಜಗತ್ತಿನ ಇತಿಹಾಸದ ನಿರ್ಮಾಣವು ಅನಂತವಾದುದು. ಸ್ಥಾವರದ ನಿರ್ಮಾಣಗಳು ಬೇರೆ. ಜಗದ್ವಿಖ್ಯಾತ ಐತಿಹಾಸಿಕ ನಿರ್ಮಾಣಗಳು ಒಂದು ಬಗೆಯ ಇತಿಹಾಸ ವನ್ನು ಹೇಳುತ್ತಿದ್ದರೆ ಅಂತಹ ಭೌತಿಕ ನಿರ್ಮಾಣದ ಮೂಲ ಕಾರಣವಾದ ಮನಸ್ಸಿನ ಭಾವ ಲೋಕದ ನಿರ್ಮಾಣದ ರೂಪ ಬೇರೆಯೇ ಆಗಿರುತ್ತದೆ. ಆದ್ದರಿಂದಲೇ ಗತ ಇತಿಹಾಸವನ್ನು ಸಾರುವ ನಿರ್ಮಾಣಗಳಿಗಿಂತ ಆ ಸ್ಮಾರಕಗಳ ಹಿಂದಿನ ಮನಸ್ಸಿನ ನಿರ್ಮಾಣ ಸ್ವಭಾವವನ್ನು ದಲಿತ ಇತಿಹಾಸವು ಹುಡುಕುತ್ತದೆ.

ಮನಸ್ಸಿನ ನಿರ್ಮಾಣಗಳು ಬೇರೆಯಾಗಿರುತ್ತವೆ. ವಿಶ್ವಾಸದ ಭಾವ ಜಗತ್ತಿನ ನಿರ್ಮಾಣವು ಭೌತಿಕ ಸ್ಮಾರಕಗಳಿಗಿಂತ ಮಿಗಿಲಾದವು. ಅರಮನೆಗಳನ್ನು ನಿರ್ಮಿಸಿದವರು ಮಹಾರಾಜರು ಎಂಬುದು ಒಂದು ನಂಬಿಕೆಯಾಗಿದ್ದರೆ, ಆ ಐತಿಹಾಸಿಕ ಸ್ಮಾರಕ ಕಟ್ಟಡಗಳನ್ನೆಲ್ಲ ನಿರ್ಮಿಸಿ ದವರ ಮನಸ್ಸಿನ ಸ್ಥಿತಿಯನ್ನು ವರ್ತಮಾನದ ಅವರ ಬದುಕಿನ ಸ್ಥಿತಿಯಿಂದ ಅರಿಯುವುದು ಮಾನಸಿಕ ನಿರ್ಮಾಣವಾಗುತ್ತದೆ. ಮಾನಸಿಕ ನಿರ್ಮಾಣಗಳೇ ಜಗತ್ತಿನ ನಾಗರೀಕತೆಗಳನ್ನು ಬೆಳೆಸಿರುವುದು. ಭಾರತಕ್ಕೆ ಭೂಮಾರ್ಗ, ಸಮುದ್ರ ಮಾರ್ಗ ಕಂಡುಹಿಡಿಯಲು ಹೊರಟಿದ್ದು ಮಾನಸಿಕ ನಿರ್ಮಾಣದ ದಾರಿ. ಹಾಗೆಯೇ ಭಾರತೀಯ ಇತಿಹಾಸದ ಪ್ರಭುತ್ವದ ಹೊರೆ ಯನ್ನೆಲ್ಲ ಹೊತ್ತವರ ಬದುಕಿನ ಪುನರ್ ನಿರ್ಮಾಣವೂ ಅಂತದೇ ಬಗೆಯದು. ಭಾರತದ ಎಲ್ಲ ಕರಕುಶಲ ಸಮುದಾಯಗಳು ಮಾಡಿದ ನಿರ್ಮಾಣಗಳಿಗಿಂತ ಆಯಾ ಸಮಾಜಗಳು ತಮಗೆ ಬೇಕಾದ ನಿರ್ಮಾಣಗಳನ್ನು ಮಾಡಿಕೊಳ್ಳದೇ ಅನಾಥವಾದ ಸ್ಥಿತಿಯನ್ನು ದಲಿತ ಇತಿಹಾಸವು ಗಮನಿಸುತ್ತದೆ. ಆ ಮೂಲಕ ಉತ್ಪಾದಕ ಸಮುದಾಯಗಳ ನಿರ್ಮಾಣ ಶಕ್ತಿ ಯನ್ನು ಪುನರುಜ್ಜೀವನಗೊಳಿಸುವಂತಹ ನಿರೂಪಣೆಗಳನ್ನೂ ಚರಿತ್ರೆಯ ಗತ ನೆಲೆಗಳನ್ನು ಇಟ್ಟುಕೊಂಡು ಮಂಡಿಸುತ್ತದೆ. ಮಾನವ ಸಂಬಂಧಗಳ ನಿರ್ಮಾಣವೆ ಚರಿತ್ರೆಯ ಬಹಳ ದೊಡ್ಡ ನಿರ್ಮಾಣ. ಅಶೋಕ ಚಕ್ರವರ್ತಿಯು ಬುದ್ದನ ತತ್ವಗಳ ಮೂಲಕ ವಿಸ್ತರಿಸಿದ ಮಾನವ ಸಂಬಂಧಗಳ ನಿರ್ಮಾಣವು ಅತ್ಯಂತ ಮಹತ್ವದ್ದು. ದಲಿತ ಇತಿಹಾಸದ ನಿರ್ಮಾಣಕ್ಕೆ ಈ ಅರ್ಥದಲ್ಲಿ ಬುದ್ಧನ ತತ್ವವಿದೆ. ಹಾಗೆಯೇ ಅಂತಹ ನಂಬಿಕೆಗಳ ವೈಚಾರಿಕ ಗದ್ಯ ಮಾದರಿಗಳಿವೆ. ಅಂಬೇಡ್ಕರ್ ನಿರೂಪಿಸಿದ ಗದ್ಯವು ಸಾಮ್ರಾಜ್ಯಗಳ ಭಗ್ನತೆಯ ಮೂಲಕ ಮಾನಯ ಮೌಲ್ಯಗಳ ನಿರ್ಮಾಣವಾಗಿತ್ತು. ಹಾಗಾಗಿಯೇ ಅವರ ಗದ್ಯದ ವೈಚಾರಿಕ ನಿರ್ಮಾಣವು ನೊಂದವರ ಪರವಾಗಿ ಚಿಂತಿಸುವವರ ಭಾಷೆ ಮತ್ತು ಆಲೋಚನೆಗಳನ್ನು ಪ್ರಭಾವಿಸಲು ಸಾಧ್ಯವಾದದ್ದು.

ಮಸೀದಿಗಳನ್ನು ಕೆಡವಿ ರಾಮಮಂದಿರ ನಿರ್ಮಾಣ ಮಾಡುವುದು ಚರಿತ್ರೆಯ ಅಪರಾಧ. ಮತೀಯ ಮೂಲಭೂತ ಭಾವನೆಗಳನ್ನು ಬೆಳೆಸುವುದು ನಿರ್ಮಾಣವಲ್ಲ. ದಲಿತ ಇತಿಹಾ ಕಾರನು ಜಾತಿಗಳ ಕೋಟೆಗಳನ್ನೂ ನಿರ್ಮಿಸಬೇಕಾದ್ದಿಲ್ಲ. ಇಂತಹ ನಿರ್ಮಾಣಗಳನ್ನು ನಿರ್ನಾಮ ಮಾಡಿ ಅವುಗಳ ಚಾರಿತ್ರಿಕ ದುರಂತಗಳ ಅನುಭವದಿಂದ ಸಮಾಜವನ್ನು ಕಟ್ಟಬೇಕು. ವಿಘಟನೆಯ ಛಿದ್ರಾವತಾರದಲ್ಲಿ ಸಾಗುತ್ತಿರುವ ಸಮಾಜ ಮತ್ತು ವ್ಯಕ್ತಿಗಳ ನಡುವೆ ಚರಿತ್ರೆಯ ಕೊಂಡಿಗಳನ್ನು ಬಲಪಡಿಸಬೇಕಾದುದು ಜರೂರಾಗಿದೆ. ಇಂತಹ ನಿರ್ಮಾಣಕ್ಕೆ ಬೇಕಾದುದು ಶುದ್ಧ ಮಾನವ ಪ್ರೀತಿ. ಚರಿತ್ರೆಕಾರನು ಸಮಾಜಕ್ಕೆ ಬೇಕಾದ ಸಂಪರ್ಕ ಸೇತುವೆಗಳನ್ನು ನಿರ್ಮಾಣ ಮಾಡಬೇಕು. ಅಂತದ್ದನ್ನು ಸಾಧ್ಯವಾಗಿಸಲು ಚರಿತ್ರೆಕಾರನು ಪಠ್ಯ ಪುಸ್ತಕಗಳ ಬಿಟ್ಟಿ ಪಾಠ ಮಾಡಿದರೆ ಸಾಲುವುದಿಲ್ಲ. ಆ ಬಗೆಯ ಸಾಮಾಜಿಕ ವಾಸ್ತವಕ್ಕೆ ಬೇಕಾದ ಪರಿಸರವನ್ನು ಮೊದಲು ಸಿದ್ಧವಾಗಿಸುವ ಕಡೆಗೆ ಹೆಚ್ಚಿನ ಆದ್ಯತೆಯನ್ನು ಕೊಡಬೇಕಾಗುತ್ತದೆ. ನಿರ್ಮಾಣ ಮಾಡಲು ಅನೇಕ ಖಾಲಿ ನಿವೇಶನಗಳು ಚರಿತ್ರೆಯಲ್ಲಿ ಅಪಾರವಾಗಿವೆ. ವಿಷಾದದ ಸಂಗತಿ ಏನೆಂದರೆ ಚರಿತ್ರೆಯ ಹಳೆಯ ಕೋಟೆ ಅರಮನೆ ಬತೇರು ಹಾಗು ಗುಹೆಗಳಲ್ಲೆ ಅನೇಕ ಚರಿತ್ರೆಕಾರರು ಸೇರಿಕೊಂಡು ಬಯಲಿನ ಕಡೆಗೆ ಅವರು ಬರದೆ ಚರಿತ್ರೆಯನ್ನೆ ಸ್ಥಾವರ ಮಾಡಿಬಿಟ್ಟಿದ್ದಾರೆ. ದಲಿತ ಚರಿತ್ರಕಾರನು ಶಿಲಾಯುಗದ ಒಂದು ನೆಲೆಯನ್ನು ಶೋಧಿಸಿ ಅದರ ಗತಕಾಲವನ್ನು ವರ್ತಮಾನದ ಬೆಳಕಿನಿಂದ ನೋಡಿ ದಾಖಲಿಸಿದರೂ ಅದು ಹೊಸ ದೊಂದು ನಿರ್ಮಾಣವೇ ಆಗುತ್ತದೆ.

ಅಭಿವ್ಯಕ್ತಿ ಮತ್ತು ದಲಿತ ಇತಿಹಾಸ

ಎಲ್ಲ ಬಗೆಯ ಅಭಿವ್ಯಕ್ತಿಗಳು ವರ್ತಮಾನದ ಪ್ರತಿಬಿಂಬಗಳೆ. ಅಭಿವ್ಯಕ್ತಿಯಿಂದಲೆ ನಾಗರಿಕತೆಗಳು ವಿಕಾಸಗೊಂಡು ಸಮಾಜಗಳು ಕವಲೊಡೆದಿದ್ದು. ಅಭಿವ್ಯಕ್ತಿಯು ಅವರವರ ಅಸ್ತಿತ್ವದ ಪ್ರತಿಬಿಂಬ. ಚರಿತ್ರೆಯ ಒತ್ತಡದಿಂದಲೆ ಅಭಿವ್ಯಕ್ತಿಯು ಆಕೃತಿಗೊಳ್ಳುವುದು ಗತಕಾಲದ ನೆನಪುಗಳು ಅಭಿವ್ಯಕ್ತಿಯಲ್ಲಿ ಜೀವಂತಗೊಳ್ಳುತ್ತವೆ. ಕಳೆದು ಹೋದದ್ದುರ ಬಗ್ಗೆ ಅಭಿವ್ಯಕ್ತಿಯು ಹುಡುಕುತ್ತಲೇ ಆ ಮೂಲಕ ಗತಿಸಿ ಹೋದದ್ದನ್ನು ವರ್ತಮಾನಕ್ಕೆ ಕರೆತರುತ್ತಿರುತ್ತದೆ. ದಲಿತರು ಚರಿತ್ರೆಯ ಮೂಲಕ ಅಭಿವ್ಯಕ್ತಿಸಬೇಕಾದದ್ದು ಅವರು ಕಳೆದು ಹೋದದ್ದನ್ನು ಪುನರ್ ಸೃಷ್ಟಿಸುವಾಗ ಭಾವುಕವಾಗಿರಬೇಕಾದ್ದಿಲ್ಲ. ಭಾವುಕ ನೆಲೆಗಳೆ ಚರಿತ್ರೆ ಯನ್ನು ಏಕಮುಖ ಮಾಡುವುದು ಕಳೆದು ಹೋದದ್ದರ ಬಗ್ಗೆಯೇ ಸಮಾಜಗಳಿಗೆ ವಿಪರೀತ ವಾದ ವ್ಯಾಮೋಹವಿರುತ್ತದೆ. ಯಾವುದೇ ವಸ್ತುಸ್ಥಿತಿ ಜೀವಂತವಿದ್ದಾಗ ಅದರ ಬಗ್ಗೆ ಅಂತಹ ಭಾವನೆಗಳಿರುವುದಿಲ್ಲ. ಅದು ಕಣ್ಮರೆಯಾದ ಕೂಡಲೆ ಅದರ ಬಗ್ಗೆ ಸೆಳೆತ ಹೆಚ್ಚಾಗುತ್ತದೆ. ಈ ಬಗೆಯ ಸೆಳೆತವು ರಮ್ಯವಾದಿಯದು. ಗತದ ಬಗ್ಗೆ ನಮಗೆಲ್ಲ ಇರುವ ರಮ್ಯತೆಯು ಅದರ ವಸ್ತುಸ್ಥಿತಿಯನ್ನು ಮಸುಕು ಮಾಡುತ್ತದೆ. ಹಾಗೆಯೆ ಗತ ವ್ಯಾಮೋಹದ ರಮ್ಯ ಸ್ಥಿತಿಯು ಚರಿತ್ರೆಯನ್ನು ಅಲಂಕಾರಿಕವಾಗಿ ಹೇಳಲು ಒತ್ತಾಯಿಸುತ್ತದೆ. ಅಲಂಕಾರಿಕ ನಿರೂಪಣೆಗಳೆಲ್ಲವೂ ಸತ್ಯವನ್ನು ಮರೆಮಾಚುತ್ತವೆ. ದಿವ್ಯ ಭವ್ಯ ಎಂಬ ಅಂಶಗಳನ್ನು ಬೆರೆಸಿಕೊಂಡೇ ಅಂತಹ ಅಭಿವ್ಯಕ್ತಿಗಳು ಗತ ಇತಿಹಾಸವನ್ನು ಕೊಂಡಾಡುತ್ತವೆ. ಇತಿಹಾಸದ ಕಟು ವಿಮರ್ಶೆ ಕೂಡ ಚರಿತ್ರೆಯ ಚರಿತ್ರೆಯೆ. ಅಭಿವ್ಯಕ್ತಿಯ ತೀಕ್ಷ್ಣತೆಯು ವಸ್ತುನಿಷ್ಠ ಹಾಗು ಭಾವನಿಷ್ಠ ಎರಡನ್ನೂ ಸಂಯೋಜಿಸಿಕೊಂಡು ಅಸ್ತಿತ್ವನಿಷ್ಠವಾಗಿ ನಿರೂಪಣೆಗಳನ್ನು ವರ್ತಮಾನಕ್ಕೆ ಬೆಸೆಯಬೇಕಾಗಿರುತ್ತದೆ.

ಅಭಿವ್ಯಕ್ತಿಯ ಸ್ವಾತಂತ್ರ್ಯವಿರುವುದೇ ದಲಿತ ಇತಿಹಾಸದ ಹಲವಾರು ಸಾಧ್ಯತೆಗಳನ್ನು ಹುಡುಕಿಕೊಳ್ಳಲು. ವ್ಯಕ್ತಿ ಸ್ವಾತಂತ್ರ್ಯ ಹಾಗು ಅಭಿವ್ಯಕ್ತಿ ಸ್ವಾತಂತ್ರ್ಯಗಳೆರಡೂ ಚರಿತ್ರೆಯನ್ನು ಸಮರ್ಥವಾಗಿ ಕಟ್ಟಬಲ್ಲವು. ಆ ಮೂಲಕ ಒಂದು ಸಮುದಾಯದ ಸಮಷ್ಟಿ ಆತ್ಮಕಥನವನ್ನು ರಚಿಸಲು ಸಾಧ್ಯವಾಗುತ್ತದೆ. ಅಭಿವ್ಯಕ್ತಿಗೆ ಅಪಾರವಾದ ಶಕ್ತಿಯಿದೆ. ಸಾಮ್ರಾಜ್ಯಗಳ ಮೇಲೆ ಅಭಿವ್ಯಕ್ತಿಯು ದಂಗೆಯನ್ನು ಸಾರಬಹುದು. ನಿರಂಕುಷ ಮೌಲ್ಯಗಳ ವಿರುದ್ಧ ಸಮರ ಹೂಡಲು ಅಭಿವ್ಯಕ್ತಿಗಿಂತಲೂ ದೊಡ್ಡದಾದ ಇನ್ನೊಂದು ಅಸ್ತ್ರವು ಇರುವುದಿಲ್ಲ. ಅಭಿವ್ಯಕ್ತಿಯು ಮೊದಲೇ ಹೇಳಿದಂತೆ ಅದು ಒಂದು ಭಾಷೆ. ಆ ಭಾಷೆಯೇ ಬದುಕಿನ ಹೋರಾಟ. ಅಭಿವ್ಯಕ್ತಿಸುವುದರಿಂದಲೇ ಅನೇಕ ಸಮುದಾಯಗಳು ಬದುಕುಳಿದಿದ್ದು. ಜೀವಜಾಲದ ವಿಕಾಸದ ವಿರಾಟ್ ಪಯಣದಲ್ಲಿ ಯಾವುದು ಸಮರ್ಥವಾಗಿ ಅಭಿವ್ಯಕ್ತಿಸು ವುದಿಲ್ಲವೋ ಅದು ಅಳಿವಿನಂಚಿನ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ. ಕ್ರೊಮ್ಯಾಗ್ನಾನ್ ಮಾನವ ಸಮೂಹವು ಉಳಿದೆಲ್ಲ ಮಾನವ ಸಮೂಹಗಳಿಗಿಂತ ಮೊದಲೆ ಭಾಷೆಯನ್ನು ರೂಡಿಸಿಕೊಂಡ ಕಾರಣವಾಗಿಯೆ ಅವರು ವಿಕಾಸದಲ್ಲಿ ಮುಂದೆ ಬಂದು ಅಷ್ಟಾಗಿ ಭಾಷೆಯನ್ನು ಸುಧಾರಿಸಿಕೊಳ್ಳ ದಾಗಿದ್ದ ನಿಯೊಂಡರ್ಥಲ್ ಮಾನವರ ಮೇಲೆ ದಿಗ್ವಿಜಯ ಸಾಧಿಸಿದ್ದನ್ನು ಇಲ್ಲಿ ನೆನೆಯ ಬಹುದು. ಹಾಗೆ ನೋಡಿದೆ ಮನುಷ್ಯರ ಎಲ್ಲ ಬಗೆಯ ಉಪಕರಣಗಳಿಗಿಂತಲೂ ಬಲವಾದ ಉಪಕರಣ ಎಂದರೆ ಅವರೇ ಕಂಡುಕೊಂಡ ಭಾಷೆ. ಈ ಭಾಷೆಯ ಉಪಕರಣದ ಮುಂದೆ  ಇಡೀ ಜೀವಜಾಲವೇ ಒಂದು ರೀತಿಯಲ್ಲಿ ಹಿನ್ನೆಡೆ ಅನುಭವಿಸಬೇಕಾಗಿದೆ. ಬಾಯಿದ್ದವನು ಬರದಲ್ಲಿ ಗೆದ್ದ ಎಂಬ ಒಂದು ಗಾದೆ ಮಾತಿದೆ. ಅಂದರೆ ಅಭಿವ್ಯಕ್ತಿಯು ಪ್ರತಿರೋಧದ ಶಕ್ತಿಯೂ ಆಗಿದೆ. ಹಾಗೆಯೇ ಕಟ್ಟುವ, ನಿರೂಪಿಸುವ, ಸಮರ್ಥಿಸುವ, ನಿವೇದಿಸುವ ಮನುಷ್ಯ ಸಾಧ್ಯತೆ. ಚರಿತ್ರೆಯು ನಿಂತಿರುವುದೇ ಇಂತಹ ಅಭಿವ್ಯಕ್ತಿಯ ಅಡಿಪಾಯದ ಮೇಲೆ. ದಲಿತರು ಮಾತಿಲ್ಲದವರಾಗಿದ್ದರು. ಅದರ ಮೂಕಸಾಕ್ಷಿಗೆ ಈಗ ಮಾತು ಬಂದಿದೆ. ಅವರ ಅಂತರಾಳದ ನಿರೂಪಣೆಗಳಿಗೆ ವಿವಿಧ ಮಾದರಿಗಳು ದೊರೆತಿವೆ. ಬಹಳ ಕಾಲ ಮೂಕವಾಗಿದ್ದವರ ಅಭಿವ್ಯಕ್ತಿ ಗಳು ಒಂದೊ ಅತ್ಯುಗ್ರ ವೈಚಾರಿಕತೆಯಾಗಿಯೋ ಇಲ್ಲವೇ ಅತ್ಯಂತ ಆಧ್ಯಾತ್ಮದ ದಿವ್ಯತ್ವದ್ದೊ ಆಗಿರುತ್ತದೆ. ದಲಿತ ಸಂವೇದನೆಯನ್ನು ಬಿತ್ತಿದ ಎಲ್ಲ ತತ್ವಪದಕಾರರು ಆ ಬಗೆಯ ಜನಪದರು ತಮ್ಮ ಇತಿಹಾಸದ ಅಭಿವ್ಯಕ್ತಿಯನ್ನು ಮೌಖಿಕ ಪರಂಪರೆಯಲ್ಲಿ ಅಭಿವ್ಯಕ್ತಿಸಿದ್ದರೆ, ಅಂಬೇಡ್ಕರ್ ಅಂತವರು ತಮ್ಮ ವೈಚಾರಿಕ ಬರಹಗಳಲ್ಲಿ ಅಭಿವ್ಯಕ್ತಿಯ ತೀಕ್ಷ್ಣ ಮಾದರಿ ಗಳನ್ನು ಸೃಷ್ಟಿಸಿದ್ದಾರೆ. ಇವೆರಡೂ ಕ್ರಮಗಳನ್ನು ಹೊಸ ಕಾಲದ ಅರಿವಿನಿಂದ ದಲಿತ ಇತಿಹಾಸದ ನೈತಿಕತೆಗೆ ಸಂಯೋಜಿಸಿದಾಗ ಚರಿತ್ರೆಯು ಬೆಳಕಾಗಿ ಪ್ರಜ್ವಲಿಸಬಲ್ಲದು.

ಅಭಿವ್ಯಕ್ತಿಯು ಆಯಾ ಸಮುದಾಯಗಳ ಭವಿಷ್ಯವನ್ನು ರೂಪಿಸುತ್ತದೆ. ದಲಿತ ಮಹಿಳೆ, ಹಾಗೂ ಅಲ್ಪಸಂಖ್ಯಾತ ಸಮಾಜಗಳು ಅಭಿವ್ಯಕ್ತಿಯ ಒತ್ತಡದಿಂದಲೇ ತಮ್ಮ ಇರುವಿಕೆಯನ್ನು ಪ್ರತಿಪಾದಿಸುವುದು. ಅಲಕ್ಷಿತರ ಕ್ಷೀಣ ಧ್ವನಿಯೂ ಇಂದು ಕೇಳಿಸಬಲ್ಲದು. ಎಲ್ಲ ಕ್ರಾಂತಿಗಳು ಕೂಡ ಅಭಿವ್ಯಕ್ತಿಯ ಆಸ್ಪೋಟಗಳೇ. ಅಂಬೇಡ್ಕರ್ ಒಬ್ಬರೇ ಆಸ್ಫೋಟಿಸಿದ ಅಭಿವ್ಯಕ್ತಿಯು ಅನೇಕ ಜಾತಿಗಳಿಗೆ ಗುರುತು ತಂದುಕೊಟ್ಟಿತು. ಹಾಗೆಯೇ ದೇಶಕ್ಕೆ ನೈತಿಕ ನ್ಯಾಯದ ಪರಮ ಅಭಿವ್ಯಕ್ತಿಯಾದ ಸಂವಿಧಾನವನ್ನು ಕೂಡ ನಿರ್ಮಿಸಿತು. ಚರಿತ್ರೆಯು ಯಾವತ್ತೂ ಕೆಲವರ ಅಭಿವ್ಯಕ್ತಿ ಮಾತ್ರ ಅಲ್ಲ. ಅಭಿವ್ಯಕ್ತಿಯ ಬಹು ರೂಪಗಳಿಂದ ಗತಕಾಲವನ್ನು ನಿರ್ವಚಿಸಿದಂತೆಲ್ಲ ಬಿಟ್ಟು ಹೋದದ್ದನ್ನೆಲ್ಲ ತುಂಬಿಕೊಳ್ಳಲು ಸಾಧ್ಯವಾಗುತ್ತದೆ. ಆದಿವಾಸಿಗಳ ಅಭಿವ್ಯಕ್ತಿಗೂ ಮಹಿಳೆಯರ ಅಭಿವ್ಯಕ್ತಿಗೂ ದಲಿತ ಮತ್ತು ಅಲ್ಪಸಂಖ್ಯಾತರ ಅಭಿವ್ಯಕ್ತಿಗಳಿಗೂ ಅಂತರ್ ಧ್ವನಿಯ ಸಂಬಂಧವಿದೆ. ಇವೆಲ್ಲವೂ ತಮ್ಮ ಸ್ವ ಅನನ್ಯತೆಯಲ್ಲಿ ಚರಿತ್ರೆಯನ್ನು ನಿರ್ವಚಿಸಿದಾಗಲೇ ಮುಟ್ಟಿಸಿಕೊಳ್ಳಲಾಗದ್ದನ್ನು ಮುಟ್ಟಲು ಸಾಧ್ಯವಾಗಿ ಕೇಳಿಸಿಕೊಳ್ಳಲಾಗದ್ದನ್ನು ಕೇಳಿಸಿಕೊಳ್ಳುವ ಅವಕಾಶ ಸಾಧ್ಯವಾಗುತ್ತದೆ. ಅಂತೆಯೇ ಹೇಳಲಾಗದ್ದನ್ನು ಹೇಳಿಕೊಳ್ಳುವ ಸ್ಥಿತಿಯೂ ನಿರ್ಮಾಣವಾಗುತ್ತದೆ. ದಲಿತ ಇತಿಹಾಸದ ಇಂತಹ ನೆಲೆಯ ಅಭಿವ್ಯಕ್ತಿಯು ಉಳಿದೆಲ್ಲ ಚರಿತ್ರೆಯ ಅಭಿವ್ಯಕ್ತಿಗಳಿಗಿಂತ ಭಿನ್ನವಾಗಿರುತ್ತದೆ.

ವರ್ತಮಾನ ಮತ್ತು ದಲಿತ ಇತಿಹಾಸ

ವರ್ತಮಾನವೇ ಇತಿಹಾಸ. ಗತಕಾಲವು ನೆರಳಷ್ಟೇ. ಇರುವ ಎಲ್ಲ ಕಾಲಗಳೂ ವರ್ತಮಾನದ ಬೇರೆ ಬೇರೆ ರೂಪಗಳೇ. ಗತಕಾಲ ಎಂಬುದು ಇರುವುದಿಲ್ಲ. ಅದನ್ನು ನಾವು ಯಾವಾಗಲೂ ಭಾವಿಸುತ್ತಿರಬೇಕು. ವರ್ತಮಾನದಿಂದಲೇ ಯಾವ ಕಾಲವೂ ನಿರ್ಧಾರ ವಾಗುವುದು. ವರ್ತಮಾನವು ನಮಗೆ ದಿಕ್ಸೂಚಿಯಿದ್ದಂತೆ. ಕಾಲದ ಪಯಣಕ್ಕೆ ವರ್ತಮಾನದ ಮಾನಕವು ಅಂತರ್ ದೃಷ್ಟಿಯನ್ನು ನೀಡುತ್ತದೆ. ಕೇವಲ ಗತದಿಂದಲೇ ಗತವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಚರಿತ್ರೆಗೆ ಬೇಕಿರುವುದು ಮುಖ್ಯವಾಗಿ ವರ್ತಮಾನವೇ ಹೊರತು ಗತಕಾಲದ ಸ್ಥಾವರ ಸ್ಥಿತಿಯಲ್ಲ. ಸಮಾಜಗಳು ಗತಕಾಲಕ್ಕೆ ಹೋಗುವ ಬದಲು ವರ್ತಮಾನದ ಮೂಲಕ ನಾಳೆಯ ಸ್ಥಿತಿಗೆ ವಿಕಾಸವಾಗುತ್ತಿರುತ್ತವೆ. ವಿಕಾಸ ಪ್ರಕ್ರಿಯೆಯು ಹಿಂದಕ್ಕೆ ಹೋಗಿ ಮುಂದಕ್ಕೆ ಸಾಗುವಂತದ್ದಲ್ಲ. ಅದು ತನ್ನ ಗತರೂಪವನ್ನು ವರ್ತಮಾನದ ಬದುಕುವ ರೀತಿಯಿಂದ ಭವಿಷ್ಯದ ರೂಪಗಳನ್ನು ನಿರ್ಧರಿಸಿಕೊಳ್ಳುತ್ತದೆ. ವಿಕಾಸವಾದವು ವರ್ತಮಾನದ ಹೊಂದಾಣಿಕೆಯ ತಂತ್ರಗಳಿಂದ ತಾನು ಬದುಕಿರುವ ಕಾಲದೇಶಗಳ ಆಚೆಗೂ ಪಯಣ ಮಾಡುತ್ತಿರುತ್ತದೆ. ಚರಿತ್ರೆಯೂ ಹೀಗೆ ವಿಕಾಸವಾದದ ಗತಿಯಲ್ಲೇ ವರ್ತಮಾನದ ತಿಳುವಳಿಕೆಯಿಂದ ನಿರೂಪಿಸಲ್ಪಡಬೇಕು.

ದಲಿತ ಇತಿಹಾಸದ ತಿಳುವಳಿಕೆಯು ವರ್ತಮಾನದ ಸಮಾಜದಿಂದಲೆ ಗತ ಸಮಾಜಗಳನ್ನು ಪರಿಶೀಲಿಸುತ್ತದೆ. ಸಾಕ್ಷಿಗಳೇ ನಾಶವಾಗಿದ್ದಾಗ ಸಾಕ್ಷಿ ಪ್ರಜ್ಞೆಯು ವರ್ತಮಾನದ ನಡವಳಿಕೆ ಗಳಲ್ಲಿ ವ್ಯಕ್ತವಾಗುತ್ತಿರುತ್ತದೆ. ಜಾತಿಗಳು ವರ್ತಮಾನದಲ್ಲಿ ಹೇಗೆ ವರ್ತಿಸುತ್ತವೆ ಎಂಬುದರ ಮೇಲೆ ಅವುಗಳ ಗತ ಇತಿಹಾಸವನ್ನು ತಿಳಿಯುವುದು ತುಂಬ ಸುಲಭ. ಗತಕಾಲದಿಂದಲೇ ಗತಕಾಲವನ್ನು ಅರಿಯುವುದು ಅನೇಕ ವೇಳೆ ಅಮೂರ್ತ ತೀರ್ಮಾನಗಳಿಗೆ ಗೊಂದಲದ ನಿಲುವುಗಳಿಗೆ ದಾರಿ ಮಾಡುತ್ತದೆ. ವರ್ತಮಾನದ ಕನ್ನಡಿಯು ಗತಬಿಂಬಗಳನ್ನು ತೋರ ಬಲ್ಲದು. ದಲಿತ ಇತಿಹಾಸದ ಸಂವೇದನೆಗೆ ಗತ ರೂಪಗಳು ಅಂತಹ ಕನ್ನಡಿಯಿಂದ ಸೃಷ್ಟಿ ಯಾಗಿ ಕಾಣಬಲ್ಲವು. ವರ್ಣಾಶ್ರಮ ಧರ್ಮದ ಅಪರಾಧಗಳು ಈಗಲೂ ವರ್ತಮಾನದಲ್ಲಿ ಹೊಸ ರೂಪಗಳಿಂದ ಘಟಿಸುತ್ತಲೇ ಇರುತ್ತವೆ. ಅಂದರೆ ಗತದ ಹೊಸ ರೂಪವು ರೂಪಾಂತರ ವಾಗುತ್ತ ವರ್ತಮಾನದಲ್ಲಿ ಪ್ರತಿಬಿಂಬಗಳನ್ನು ಸೃಷ್ಟಿಸುತ್ತಿರುತ್ತದೆ. ಹೀಗಾಗಿ ವರ್ತಮಾನವೇ ನಿಜವಾದ ಇತಿಹಾಸದ ಪ್ರತೀಕ. ಶಾಸನಗಳ ಮೂಲಕವೊ ಲಿಖಿತ ಆಧಾರಗಳಿಂದಲೋ ಮಾತ್ರವೇ ಇತಿಹಾಸದ ಗತವನ್ನು ತಿಳಿಯಬೇಕಾದುದಿಲ್ಲ. ಅಂತಹ ತಿಳುವಳಿಕೆಯ ಜೊತೆಗೆ ವರ್ತಮಾನದ ಕಣ್ಣಿನಿಂದಲೆ ಹಿಂದಿನ ಕಾಲವನ್ನು ಅನುಸಂಧಾನ ಮಾಡಬೇಕು.

ಹೀಗೆ ಮಾಡಿದಾಗ ಚರಿತ್ರೆಯು ಆನ್ವಯಿಕವಾಗುತ್ತದೆ. ಹಾಗೆಯೇ ವರ್ತಮಾನದ ಸಮಾಜಗಳು ಕೂಡ ಕಾಲವನ್ನು ಬಿಡಿಯಾಗಿ ನೋಡದೆ ಇಡಿಯಾಗಿ ಗ್ರಹಿಸಲು ಸಾಧ್ಯವಾಗುತ್ತದೆ. ಚರಿತ್ರೆಯ ಆಯಾ ಕಾಲಘಟ್ಟಗಳನ್ನು ಮಾತ್ರವೇ ಗಮನಿಸಿ ಅವತ್ತಿನ ಕಾಲದ ನಿಲುವುಗಳಿಗೇ ಬದ್ಧವಾದರೆ ಚರಿತ್ರೆಯು ಮೃತ ಸ್ಥಿತಿಗೆ ಮಾತ್ರ ಸಂಬಂಧಿಸಿದ್ದಾಗುತ್ತದೆ. ಚರಿತ್ರೆಯು ಯಾವತ್ತೋ ಆಗಿ ಹೋದದ್ದಲ್ಲ. ಸತತವಾಗಿ ಆಗುತ್ತಿರುವುದೇ ಇತಿಹಾಸ. ಪುನರ್ಜನ್ಮದಲ್ಲಿ ವಿಶ್ವಾಸವಿಲ್ಲದಿದ್ದರೂ ಇತಿಹಾಸದ ಚಲನೆಯನ್ನು ನಿರಂತರವಾಗಿ ಪುನರ್ ಸೃಷ್ಟಿಯಾಗುತ್ತಿರುವ ಮಾನವ ವಿಕಾಸದ ಪ್ರಜ್ಞೆ ಎಂದು ಭಾವಿಸಬಹುದು. ನಿತ್ಯದ ಬಾಳಿನ ನೀತಿಯು ನಾಳೆಯ ಕಥನವಾಗಿ ಬೇರೆ ಬೇರೆ ತಲೆಮಾರುಗಳಿಂದ ಹುಟ್ಟಿ ಬರುತ್ತಲೇ ಇರುವುದರಿಂದ ಮನುಷ್ಯನ ವಿಚಾರಗಳು ಪುನರ್ ಜನ್ಮ ತಾಳುತ್ತಿರುತ್ತವೆ. ಇಂತಹ ಚಲನಶೀಲತೆಯೇ ಇತಿಹಾಸವನ್ನು ಬೆಳೆಸುವುದು. ಯಾವುದು ಚಲನೆಗೆ ವಿರುದ್ಧವಾಗಿರುತ್ತದೋ ಅದು ಎಂದಿಗೂ ಉಳಿಯಲಾರದು. ಚಲನೆಗೆ ತಕ್ಕುದಾದ ಸಾಮಾಜಿಕ ಪರಿಸರ ನಿರ್ಮಿಸಿಕೊಂಡಾಗ ಮಾತ್ರ ಅಂತಹ ಚಲನೆಗೂ ಘನತೆ ಸಾಧ್ಯ. ಭಾರತೀಯ ಸಮಾಜಗಳು ಚಲನಶೀಲವಾಗದೆ ನಿಂತ ನೀರಾಗುವ ಸ್ವಭಾವವನ್ನು ಆಗಾಗ ಪ್ರತಿನಿಧಿಸುತ್ತಲೇ ಇರುತ್ತವೆ. ದಲಿತ ಇತಿಹಾಸವು ಚಲನೆಗೆ ದೊಡ್ಡ ಸ್ಥಾನ ನೀಡುತ್ತದೆ. ಚಲನೆಯಿಂದಲೇ ನಾಗರೀಕತೆಗಳು ಚರಿತ್ರೆಯನ್ನು ಸ್ಥಾಪಿಸಿಕೊಂಡದ್ದು. ಚಲನೆಯು ವರ್ತಮಾನದ ಆಶೋತ್ತರಗಳಿಂದಾಗುವ ಪ್ರಕ್ರಿಯೆ. ಚಲನೆ ಮತ್ತು ವರ್ತಮಾನಗಳೆರಡೂ ಚರಿತ್ರೆಯನ್ನು ಯಾವತ್ತೂ ಜೀವಂತವಾಗಿಸಿರುತ್ತವೆ.

ಹೀಗೆ ವರ್ತಮಾನವನ್ನು ಚರಿತ್ರೆಯ ಪ್ರತಿಬಿಂಬವೆಂದು ತಿಳಿದು ಅದೇ ಪ್ರತಿಬಿಂಬವನ್ನು ವರ್ತಮಾನದ ಅನುಭವದಿಂದ ಗ್ರಹಿಸಿದಾಗ ಇತಿಹಾಸದ ಕಥನಗಳು ಜನಪರವಾಗಿ ಜನ ಇತಿಹಾಸವಾಗುತ್ತವೆ. ದಲಿತ ಪರಂಪರೆಗಳನ್ನು ಇಂತಹ ರೀತಿಯಲ್ಲಿ ವರ್ತಮಾನದ ಮೂಲಕವೆ ಪರಿಭಾವಿಸಿದಾಗ ಚರಿತ್ರೆಯ ಬೇರೆ ಬೇರೆ ಸಂಬಂಧಗಳು ಒಂದರ ಒಳಗೊಂದು ಬಂದು ಕೂಡಿಕೊಳ್ಳುತ್ತವೆ. ಗತಕಾಲದ ಪ್ರವೇಶದಿಂದ ದಲಿತರು ಇತಿಹಾಸವನ್ನು ನಿರೂಪಿಸಿದರೆ ಅವರಿಗೆ ಸಿಗುವ ಎಲ್ಲ ಸಾಕ್ಷ್ಯಾಧಾರಗಳೂ ವಿರುದ್ಧವಾದವುಗಳೇ ಆಗಿರುತ್ತವೆ. ಇದು ಕೂಡ ಒಂದು ಉಪಯುಕ್ತ ಕ್ರಮವೇ. ವಿರುದ್ಧ ಸಾಕ್ಷಿಗಳು ಇದ್ದಾಗಲೇ ಇಲ್ಲದಿರುವ ಸಾಕ್ಷ್ಯಗಳು ಯಾವುವು ಎಂಬುದು ತಿಳಿಯುವುದು. ವಿರುದ್ಧವಾದ ಸಾಕ್ಷಿಗಳು ವರ್ತಮಾನ ದಲ್ಲಿರುವ ಸಾಕ್ಷಿಗಳನ್ನು ತೆರೆಯುತ್ತವೆ. ದಲಿತ ಇತಿಹಾಸದ ವರ್ತಮಾನವು ಗತಕಾಲದ ಮನಸ್ಸಿನ ಪದರಗಳನ್ನು ಬಿಚ್ಚಿಡಬಲ್ಲದು. ಚರಿತ್ರೆಯ ವಿವಿಧ ಕಥನಗಳೆಲ್ಲವೂ ಅಂತಿಮವಾಗಿ ಒಂದೇ ಆಗಿರಬೇಕು ಎಂಬುದು ಒಂದು ಒಳ್ಳೆಯ ಆಶಯವೇ. ಆದರೆ ಚರಿತ್ರೆಯು ಬೆಳೆಯ ಬೇಕಾದರೆ ವಿವಿಧ ಆಶಯಗಳ ನಿರೂಪಣೆಗಳೆಲ್ಲವೂ ಬೇರೆಯಾಗಿಯೆ ನಿರೂಪಿಸುವುದು ಅವರವರ ಅಸ್ತಿತ್ವದ ಕಾರಣಕ್ಕಾಗಿ ಅನಿವಾರ್ಯ. ಇತಿಹಾಸದ ಎಲ್ಲ ಕಥನಗಳೂ ಒಂದೇ ಆಗಿಬಿಟ್ಟರೆ ಅದು ಇತಿಹಾಸವಾಗಲಾರದು. ಬದಲಿಗೆ ಅದು ಧಾರ್ಮಿಕ ಯಾಜಮಾನ್ಯವಾಗಿ ಪ್ರಭುತ್ವದ ಹೇರಿಕೆಯಾಗಿ ಮಾತ್ರ ಆಳಬಲ್ಲದು. ಹೀಗಾಗಿಯೇ ಇತಿಹಾಸದ ಬಹುರೂಪಿ ನಿರೂಪಣೆಗಳೆಲ್ಲವೂ ವಿವಿಧ ಚಹರೆಗಳಾಗಿ ಸಂಸ್ಕೃತಿಗಳ ಬಹುತ್ವವನ್ನು ಬಿಂಬಿಸುವುದು.

ಹೀಗೆ ದಲಿತ ಇತಿಹಾಸದ ಪ್ರಧಾನ ಸಂಗತಿಗಳನ್ನು ಬರಹದ ಕ್ರಮದಲ್ಲಿ ಅಳವಡಿಸಿಕೊಳ್ಳ ಬಹುದು. ಮೇಲಿನ ಅಂಶಗಳನ್ನು ಅಳವಡಿಸಿಕೊಂಡು ಕರ್ನಾಟಕದ ದಲಿತ ಸಂಸ್ಕೃತಿ ಇತಿಹಾಸವನ್ನು ನಿರ್ವಚಿಸಲು ಹೊರಟರೆ ಆಗ ಈವರೆಗೆ ದಾಖಲಾಗಿರುವ ಕರ್ನಾಟಕ ಸಂಸ್ಕೃತಿ ಇತಿಹಾಸದ ಕ್ರಮಗಳೆಲ್ಲವೂ ಯಾವ ಬಗೆಯಲ್ಲಿ ಭಿನ್ನ ಹಾಗೂ ಯಾವ ಸೀಮಿತ ಚೌಕಟ್ಟಿನವು ಎಂಬುದು ಬಯಲಾಗುತ್ತದೆ. ದಲಿತ ಸಂಸ್ಕೃತಿ ಇತಿಹಾಸವನ್ನು ಭಾವಿಸುವಂತೆಯೇ ದಲಿತ ರಾಜಕೀಯ ಆರ್ಥಿಕ ಸಾಮಾಜಿಕ ಇತಿಹಾಸಗಳನ್ನು ನಿರೂಪಿಸಬಹುದು. ಆಗ ಚರಿತ್ರೆಯ ಮೂಲ ಕ್ರಮವೇ ಬದಲಾಗಿ ಬಿಡುತ್ತದೆ. ಕೃಷ್ಣದೇವರಾಯನ ಕಾಲದ ಸಂಸ್ಕೃತಿ ವೈಭವವನ್ನು ಹೇಳುವಲ್ಲಿಯೇ ಆ ಕಾಲದ ದಲಿತರ ಸಂಸ್ಕೃತಿ ಇತಿಹಾಸವು ಯಾವ ಬಗೆಯ ಸವಾಲುಗಳ ನಡುವೆ ಅಸ್ತಿತ್ವಕ್ಕಾಗಿ ಹೋರಾಡುತ್ತಿತ್ತು ಎಂಬುದನ್ನು ದಾಖಲಿಸಲು ಸಾಧ್ಯ. ಅಂತೆಯೇ ಎಲ್ಲ ಸಾಮ್ರಾಜ್ಯಗಳ ರಾಜಧಾನಿಗಳ ಚರಿತ್ರೆಯನ್ನು ನಿರೂಪಿಸುವ ಹೊತ್ತಿನಲ್ಲೇ ಅದೇ ಗ್ರಾಮದ ಎಲ್ಲ ತಳಕೇರಿಗಳ ಇತಿಹಾಸವು ಎಂತದಾಗಿತ್ತು ಎಂಬುದನ್ನು ಗ್ರಹಿಸಿ ಬರೆದಾಗ ಇತಿಹಾಸದ ವಿವಿಧ ಇತಿಹಾಸಗಳು ತೆರೆದುಕೊಳ್ಳುತ್ತವೆ.

ಮಧ್ಯಕಾಲೀನ ಕರ್ನಾಟಕದಲ್ಲಿಯೇ ದಲಿತ ಇತಿಹಾಸದ ಹಲವಾರು ಮುಖಗಳು ಮುಖಾಮುಖಿಗೆ ಒಳಗಾಗುವುದು. ಮಧ್ಯಕಾಲೀನ ಕರ್ನಾಟಕದ ಸಂಸ್ಕೃತಿಗಳ ಪಲ್ಲಟಗಳನ್ನು ಕುರಿತು ಆಳವಾಗಿ ಅಧ್ಯಯನ ಮಾಡಿದರೆ ದಲಿತ  ಇತಿಹಾಸದ ಅನೇಕ ಸಾಧ್ಯತೆಗಳನ್ನು ಎತ್ತಿ ಹಿಡಿಯಬಹುದು. ಇದು ಒಂದು ಚಿಕ್ಕ ಕುರುಹಿನ ದಾರಿ ಮಾತ್ರ. ಆ ದಾರಿಯಲ್ಲಿ ಅಖಂಡ ಶೋಧನೆಗಳು ನಡೆದರೆ ಆಗ ಕರ್ನಾಟಕ ಸಂಸ್ಕೃತಿ ಚರಿತ್ರೆಗಳು ಬಹುರೂಪದಲ್ಲಿ ನಾಡಿನ ಆತ್ಮಕಥನಗಳನ್ನು ಬಿಂಬಿಸುತ್ತವೆ. ಇಂತಹ ಯತ್ನಕ್ಕೆ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಹಾಗು ಅಲೆಮಾರಿ ಆದಿವಾಸಿ ಮತ್ತು ಮಹಿಳಾ ಸಮೂಹಗಳೆಲ್ಲ ತಮ್ಮ ತಮ್ಮ ಅನನ್ಯತೆಯಲ್ಲಿ ಎಲ್ಲ ಬಗೆಯ ಚರಿತ್ರೆಯ ಕಥನಗಳನ್ನು ಕೊಳಲಿನ ಒಂದೊಂದು ರಂಧ್ರದಿಂದ ಹೊರಡಿಸಿದಂತೆ ನುಡಿಸಬಹುದು. ಆಗಲೇ ಎಲ್ಲ ಬಗೆಯ ಚರಿತ್ರೆಯ ನಾದಗಳು ಸುಂದರ ರಾಗವಾಗುವುದು. ಇಲ್ಲದಿದ್ದರೆ ವಿದ್ರೋಹದ ರಾಗಗಳಾಗಿ ನುಡಿವ ಮಾತೇ ಅನರ್ಥವಾಗಿ ಬಿಡಬಹುದು. ಚರಿತ್ರೆಯ ಸ್ವಾತಂತ್ರ್ಯವನ್ನು ಕಾಯುವುದರಿಂದ ನಾಳಿನ ಚರಿತ್ರೆಯು ಇನ್ನಷ್ಟು ಅರ್ಥಪೂರ್ಣವಾಗಬಲ್ಲದು. ಒಟ್ಟಿನಲ್ಲಿ ಭಾರತೀಯ ಚರಿತ್ರೆಯನ್ನು ನಿರ್ಮಾಣ ಮಾಡಬೇಕಾದ ಅನಿವಾರ್ಯತೆಯಲ್ಲಿ ದಲಿತ ರೂಪವು ಈವರೆಗೆ ಕಾಣಲಾಗದಿದ್ದ ಕೇಳಲಾಗದಿದ್ದ ಮುಟ್ಟಲಾಗದಿದ್ದ ಹಾಗು ಹೇಳಿಕೊಳ್ಳಲಾಗದಿದ್ದ ಸಂಗತಿಗಳನ್ನು ಚರಿತ್ರೆಯ ಮಾನವೀಕರಣಕ್ಕಾಗಿ ತೊಡಗುವುದನ್ನು ಚರಿತ್ರೆಕಾರರು ಅಂತರಂಗದ ಸಂಗತಿಯಾಗಿ ಸ್ವೀಕರಿಸಬೇಕಾಗಿದೆ. ಯಾವುದೇ ಚರಿತ್ರೆಕಾರನು ನಿಜವಾಗಿಯು ಮನುಷ್ಯ ಪರ ಕಾಳಜಿಯವನಾಗಿದ್ದರೆ ಆತ ತನ್ನ ಕಾಲದ ಭಿನ್ನಾಭಿಪ್ರಾಯಗಳ ಜೊತೆಯೇ ಕಾಲವನ್ನು ಅನುಸಂಧಾನಕ್ಕಿಟ್ಟು ಪಯಣ ಮುಂದು ವರಿಸಬೇಕಾಗಿರುವುದು. ಈ ನಿಟ್ಟಿನಲ್ಲಿ ಚರಿತ್ರೆಯ ರೂಢಿಗತ ಜಾಡುಗಳನ್ನೇ ಬಿಟ್ಟುಬಿಡ ಬೇಕಾಗುತ್ತದೆ. ಚರಿತ್ರೆಯ ಸವೆದ ಮುರುಕು ಮಾನದಂಡಗಳನ್ನು ಕೈಬಿಟ್ಟು ವರ್ತಮಾನದ ಸಾಕ್ಷಿ ಪ್ರಜ್ಞೆಯಲ್ಲಿ ಕಾಲದ ಬೇರೆ ಬೇರೆ ರೂಪಗಳನ್ನೆಲ್ಲ ತನ್ನ ಕಾಲದ ಒಳಗೇ ಹುಡುಕಿಕೊಳ್ಳ ಬೇಕಾಗುತ್ತದೆ. ಇಂತಹ ಅನುಸಂಧಾನವು ಆನ್ವಯಿಕವೂ ಸಮಕಾಲಿಕವೂ ಹಾಗೂ ಅಂತರ್ ಸಂಬಂಧಗಳ ಸಂಯುಕ್ತ ದೃಷ್ಟಿಯದೂ ಆಗಿರುತ್ತದೆ. ದಲಿತ ಇತಿಹಾಸದ ಜೀವನ ದೃಷ್ಟಿಯೂ ಕೂಡ ಇದೇ ಬಗೆಯದಾಗಿದ್ದು ಅದು ಇತಿಹಾಸವನ್ನು ಎಂದೆಂದೂ ಮರೆಯದೆ ಸ್ವತಃ ಇತಿಹಾಸ ವನ್ನೇ ಹಾಸಿಹೊದ್ದು ಮಲಗಿ ಅದನ್ನೆ ಉಸಿರಾಡಿದೆ. ಇತಿಹಾಸವನ್ನು ಮರೆತವರೇ ಇತಿಹಾಸ ಬರೆಯಬಲ್ಲವರಾದರೆ ಇನ್ನು ದಲಿತರು ಇತಿಹಾಸ ಬರೆಯಲು ಯಾಕೆ ಹಿಂಜರಿಯಬೇಕು. ದಲಿತ ಇತಿಹಾಸದ ನಿರೂಪಣೆಗಳು ಭೂಮಿಯ ಸಂಬಂಧದಲ್ಲಿ ಸಾಮಾಜಿಕ ವ್ಯವಸ್ಥೆಯ ಮುಖಾಮುಖಿಯಲ್ಲಿ ಈಗ ತಾನೆ ಎಲ್ಲ ಗತಕಾಲದ ಪಿಸು ಮಾತುಗಳನ್ನು ಧ್ವನಿಯಾಗಿ ರೂಪಿಸಿಕೊಳ್ಳುತ್ತ ಎಲ್ಲ ಮೌನವನ್ನು ಅಂತಃಕರಣದ ಆಸ್ಫೋಟಕ್ಕೆ ಹದ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ದಲಿತ ಇತಿಹಾಸದ ಧ್ಯಾನಶೀಲ ಬರಹಗಳು ಬೆಳೆಯಬೇಕಾಗಿವೆ. ಆ ಮೂಲಕ ಅಖಂಡ ಭಾರತದ ದಲಿತ ಇತಿಹಾಸದ ಗತದ ನೆರಳುಗಳು ಜೀವಂತವಾಗಿ ಆಕೃತಿ ಪಡೆದು ಕೊಳ್ಳಬೇಕಾಗಿದೆ