ಇತಿಹಾಸದ ಎಡಪಂಥೀಯ ಗುರಿ

 • ಮಾರ್ಕ್ಸ್‌ವಾದಿ ಆಲೋಚನೆಗಳ ಬೆಳಕಿನಿಂದ ಇತಿಹಾಸದ ಕತ್ತಲನ್ನು ಅರಿಯುವುದು.
 • ವರ್ಗ ಸಂಘರ್ಷದ ಸಂಬಂಧಗಳಿಂದ ಬಡವರ ಪರವಾದ ಚರಿತ್ರೆಯನ್ನು ಬರೆಯುವುದು.
 • ತಿರಸ್ಕೃತರ, ಅಂಚಿನವರ, ತಳದವರ ಹಕ್ಕೊತ್ತಾಯಗಳಿಗೆ ದನಿಗೂಡಿಸುವುದು.
 • ಹುಸಿ ಘನತೆಯ ಭವ್ಯ ಇತಿಹಾಸದ ವಿಕಾರವನ್ನು ಬಯಲು ಮಾಡುವುದು.
 • ಧರ್ಮಾಂಧತೆಯನ್ನು ಇತಿಹಾಸದಿಂದ ಕಿತ್ತು ಹಾಕಲು ತೊಡಗುವುದು.
 • ಸಾಮ್ರಾಜ್ಯಶಾಹಿ ಧೋರಣೆಯ ಅನೀತಿಯನ್ನು ಎತ್ತಿ ತೋರುವುದು.
 • ವರ್ತಮಾನದ ಪ್ರಭುತ್ವದ ನೆಲೆಗಳನ್ನು ಪ್ರಶ್ನಿಸುವುದು.
 • ಮತೀಯ ಮೂಲಭೂತವಾದಿಗಳ ಕುತಂತ್ರವನ್ನು ತಡೆಗಟ್ಟುವುದು.
 • ವಸಾಹತುಶಾಹಿ ಆಲೋಚನೆಗಳಿಗೆ ತಿರುಗೇಟು ನೀಡುವುದು.
 • ಅಲಕ್ಷಿತರ ಇತಿಹಾಸವನ್ನು ಪ್ರಧಾನ ಮಾಡುವುದು.
 • ಲಿಂಗ ಸಮಾನತೆಯ ಇತಿಹಾಸದ ಸಾಧ್ಯತೆಗಾಗಿ ದಾರಿ ಹುಡುಕುವುದು.
 • ವರ್ತಮಾನಕ್ಕೆ ಹೆಚ್ಚಿನ ಗಮನ ಕೊಟ್ಟು ಸಾಮಾಜಿಕ ಸುಧಾರಣೆಗಾಗಿ ಇತಿಹಾಸವನ್ನು ಮರುಚಿಂತನೆಗೆ ಒಳಪಡಿಸುವುದು.
 • ಕೇಸರೀಕರಣದ ಎಲ್ಲ ವಿರೂಪಗಳಿಗೂ ಪ್ರತಿರೋಧವನ್ನು ಒಡ್ಡಿ ನಿಜವಾದ ಬದುಕಿನ ಮೌಲ್ಯಗಳನ್ನು ಪ್ರತಿಪಾದಿಸುವುದು.

ಹೀಗೆ ಹತ್ತು ಹಲವು ನಿಟ್ಟಿನಿಂದ ಎಡಪಂಥೀಯ ಧೋರಣೆಯು ಭಾರತೀಯ ಇತಿಹಾಸದ ವಕ್ರತೆಯನ್ನು ಸರಿಪಡಿಸಲು ಪ್ರಾಮಾಣಿಕವಾಗಿ ಪರಿಶ್ರಮಿಸುತ್ತಲೇ ಬಂದಿದೆ. ಇದರಿಂದಾಗಿ ಹಿಂದೂ ಸಾಮ್ರಾಜ್ಯಶಾಹಿ ಇತಿಹಾಸದ ಯಾಜಮಾನ್ಯವನ್ನು ಪ್ರಶ್ನಿಸುತ್ತಲೇ ತಡೆಯುತ್ತಲೇ ಬಂದಿದೆ. ಇಲ್ಲದಿದ್ದರೆ ಅನೇಕ ತಳಸಮುದಾಯಗಳಿಗೆ ಇತಿಹಾಸದ ಮಾತುಗಳೇ ಬಾರದಂತಾಗಿ ಬಿಡುತ್ತಿತ್ತು. ಇತಿಹಾಸದ ಪುನರ್ರಚನೆಯ ಕಾರ್ಯದಲ್ಲಿ ಮಾರ್ಕ್ಸ್‌ವಾದಿ ಇತಿಹಾಸಕಾರರ ಕಾರ್ಯಾಚರಣೆಯು ಅತ್ಯಮೂಲ್ಯವಾದುದು. ಅವರ ಇಂತಹ ಚಿಂತನೆಗಳಿಂದಲೇ ಭಾರತೀಯ ಇತಿಹಾಸದ ಬಗ್ಗೆ ಘನತೆ ಉಳಿದುಕೊಳ್ಳಲು ಸಾಧ್ಯವಾದದ್ದು. ಪಶ್ಚಿಮದವರ ಮುಂದೆ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿಕೊಳ್ಳಲು ತೊಡಗಿದ ಬಲಪಂಥೀಯ ಇತಿಹಾಸಕಾರರು ವಸಾಹತುಶಾಹಿ ಜಗತ್ತನ್ನು ನಿರಾಕರಿಸದೆ ಅದರ ಜೊತೆ ಒಪ್ಪಂದ ಮಾಡಿಕೊಂಡು, ಒಂದು ಕಾಲಕ್ಕೆ ನಮ್ಮಲ್ಲಿಯೂ ಗ್ರೀಕ್, ರೋಮ್ ನಾಗರೀಕತೆಗಳಂತದೇ ಭವ್ಯವೂ ಅರ್ವಾಚೀನವೂ ಆದಂತಹ ಸಂಸ್ಕೃತ, ಧರ್ಮ, ಚರಿತ್ರೆ, ಸಾಹಿತ್ಯ, ತತ್ವಶಾಸ್ತ್ರ, ವಿಜ್ಞಾನ ಎಲ್ಲವೂ ಇತ್ತೆಂದು ಹೇಳಿಕೊಳ್ಳುವುದು ಅಭಿಮಾನದ ಸಂಗತಿಯಾಗಿತ್ತು. ಅಲ್ಲದೆ ಎಲ್ಲ ಉನ್ನತ ನಾಗರೀಕತೆ ಮತ್ತು ಸಂಸ್ಕೃತಿಗಳಿಗೆ ಹಿಂದೂ ಧರ್ಮವೇ ಮೂಲ ಎಂದು ಹೇಳಿಕೊಳ್ಳುವ ಅಹಂ ಇತ್ತು. ಅದಕ್ಕೆ ತಕ್ಕ ಆಧಾರಗಳೂ ಹಿಂದೂ ಇತಿಹಾಸಕಾರರಿಗೆ ಇದ್ದವು. ಪಶ್ಚಿಮದ ವಿದ್ವಾಂಸರೂ ಅದನ್ನು ನಂಬಿದ್ದರು. ಈಗಲೂ ಅಂತಹ ಪಳೆಯುಳಿಕೆಯ ನಂಬಿಕೆಗಳಿವೆ. ಆದರೆ ಮಾರ್ಕ್ಸ್‌ವಾದಿ ಚರಿತ್ರೆಕಾರರ ಘನತೆ ಇರುವುದು ಇಲ್ಲಿಯೇ. ಅವರು ಈ ಬಗೆಯ ವಿಚಾರಗಳನ್ನೇ ಅನುಮಾನಿಸಿದರು. ಡಿ.ಡಿ.ಕೋಸಾಂಬಿ ಹಾಗೂ ಇವತ್ತಿನ ಆರ್.ಎಸ್.ಶರ್ಮಾ ಅಂತವರು ಆ ಬಗೆಯ ಭವ್ಯತೆಯ ಒಳಗೆ ನಿಜವಾಗಿಯು ಇರುವುದೇನು ಎಂದು ಬಿಡಿಸಿ ಹೇಳಿದರು. ಗಮನಿಸಬೇಕಾದ ಅಂಶವೆಂದರೆ, ಬಲಪಂಥೀಯರ ಇಂತಹ ಅನುಸಂಧಾನವೇ ಅಪವಿತ್ರ ಎಂದು ತಿಳಿದ ಮಾರ್ಕ್ಸ್‌ವಾದಿ ಚರಿತ್ರೆಕಾರರು ಪಶ್ಚಿಮದ ಒರಿಯಂಟಲ್ ಮನೋ ಧರ್ಮದ ಸಾಮ್ರಾಜ್ಯಶಾಹಿ ಆಲೋಚನೆಯನ್ನೇ ನಿರಾಕರಿಸಿ ಅದರ ವಿರುದ್ಧದ ಸ್ಥಳೀಯ ಬಂಡಾಯಗಳನ್ನು ದಂಗೆಗಳನ್ನು ಗುಪ್ತ ಚಳುವಳಿಗಳನ್ನು ಹುಡುಕಿ ಅವುಗಳ ಮೂಲಕ ಪರ್ಯಾಯ ಭಾರತದ ಸಾಧ್ಯತೆಗಳನ್ನು ಸಮರ್ಥಿಸಿದರು. ರಂಜಿತ್ ಗುಹಾ ತರದ ಚರಿತ್ರೆ ಕಾರರು ವಸಾಹತುಶಾಹಿ ಜಗತ್ತಿನ ಚಾರಿತ್ರಿಕ ಪ್ರಜ್ಞೆಗೆ ಸವಾಲಾದ ಎಲ್ಲ ಬಗೆಯ ಒಳ ಪ್ರತಿಭಟನೆಗಳನ್ನು ಸಂಯೋಜಿಸಿ ಅಲಕ್ಷಿತರ ಪ್ರತಿರೋಧದ ಭಾರತವನ್ನು ಪಶ್ಚಿಮದ ಮುಂದೆ ಪರಿಚಯಿಸಲು ತೊಡಗಿದರು.

ಅಂದರೆ ಒರಿಯಂಟಲ್ ಚಿಂತನೆಗೆ ದೊಡ್ಡ ದೊಡ್ಡ ಸವಾಲನ್ನು ಮಾರ್ಕ್ಸ್‌ವಾದಿಗಳು ಒಡ್ಡುವ ಮೂಲಕವೇ ಭಾರತದ ಒಳಗೆ ಹಲವು ಭಾರತಗಳಿವೆ ಎಂಬುದನ್ನು ತೋರಿದರು. ಇದು ಬಹಳ ಅಮೂಲ್ಯವಾದ ಯತ್ನ. ಇದರಿಂದಾಗಿಯೆ ಮುಂದೆ ಇತಿಹಾಸದ ಬೇರೆ ಬೇರೆ ಶಾಖೆಗಳು ವಿಸ್ತರಿಸಿಕೊಳ್ಳಲು ಸಾಧ್ಯವಾದದ್ದು. ಪಶ್ಚಿಮದ ಪಾರಮ್ಯವನ್ನು ಮೀರುವ ನಿಟ್ಟಿನಲ್ಲಿ ಇತಿಹಾಸದ ಬೌದ್ದಿಕವಾದ ಕಥನಗಳನ್ನು ಜನತೆಯ ಪರವಾಗಿ ಮಂಡಿಸಿದ್ದರಿಂದ ಚರಿತ್ರೆಗೆ ನೊಂದವರ ದನಿಯು ಸೇರಿಕೊಂಡಿತು. ಹೀಗಾಗಿ ಇತಿಹಾಸದ ಮನೋಧರ್ಮವೇ ಬದಲಾಗಿ ಅದರ ನಿರೂಪಣೆಯ ಕ್ರಮವೂ ಪಲ್ಲಟವಾಯಿತು.

ಆದರೆ ಇಂತಹ ಚರಿತ್ರೆಯ ನಿರೂಪಣೆಯೂ ಪರಿಪೂರ್ಣವಾದುದಲ್ಲ. ಯಾವ ವ್ಯಾಖ್ಯಾನವೂ ತೀರ್ಮಾನವೂ ಅಂತಿಮ ಅಲ್ಲ ಎಂಬುದೇ ನಿಜವಾದ ವಾಸ್ತವ. ಎಡಪಂಥೀಯ ಪ್ರವೃತ್ತಿಯು ಮೂಲತಃ ಬಂಡಾಯ ಸ್ವಭಾವದ್ದು. ಪ್ರತಿರೋಧದ ಮೂಲಕ ಅನ್ಯಾಯದ ಕ್ರಮವನ್ನು ಎದುರಿಸುವಂತದ್ದು. ಇಲ್ಲಿ ಭಗ್ನವೇ ಪ್ರಧಾನ. ಸಂರಚನೆಯು ಅನಂತರದ್ದು. ಹೀಗಾಗುವುದರಿಂದ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಚರಿತ್ರೆಯ ಎಡಪಂಥೀಯ ಧೋರಣೆ ಮಿತಿಯಲ್ಲ. ಆದರೆ ಅದು ಹೊಸ ಬಗೆಯ ಬೌದ್ದಿಕ ಸವಾಲು, ಸಮಸ್ಯೆ, ಗೊಂದಲ ಹಾಗೂ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುತ್ತದೆ. ಆ ಕೆಲವು ಅಂಶಗಳನ್ನಿಲ್ಲಿ ಪ್ರಸ್ತಾಪಿಸಬಹುದು.

 • ಚರಿತ್ರೆಯನ್ನು ಕೇವಲ ವರ್ಗಸಂಘರ್ಷದ ನೆಲೆಯಲ್ಲೇ ವಿವೇಚಿಸುವುದು.
 • ಚರಿತ್ರೆಯನ್ನು ತನ್ನ ತಾತ್ವಿಕ ನೆಲೆಗೆ ಮಾತ್ರವೆ ಸೀಮಿತಗೊಳಿಸುವುದು.
 • ಮುಕ್ತವಾದ ಸಾಕ್ಷ್ಯಾಧಾರಗಳಿಗೆ ಬದಲು ಪೂರಕ ಆಧಾರಗಳನ್ನು ಮಾತ್ರವೆ ಆಯ್ಕೆ ಮಾಡಿಕೊಳ್ಳುವುದು.
 • ವಸಾಹತುಶಾಹಿ ಸಾಮ್ರಾಜ್ಯದ ವಿರುದ್ಧದ ಘಟನೆಗಳಿಗೆ ಮಾತ್ರ ವಿಶೇಷ ಗಮನ ಕೊಡುವುದು ಮತ್ತು ಆ ಬಗೆಯ ನಿಲುವುಗಳಿಗೆ ಒತ್ತು ಕೊಡುವುದು.
 • ತನ್ನ ನೆಲದ ಸ್ವಂತ ತಾತ್ವಿಕ ಚಿಂತನೆಗಳಿಗಿಂತಲೂ ಪ್ರಧಾನವಾಗಿ ಮಾರ್ಕ್ಸ್‌ವಾದಿ ಚಿಂತನೆಗೇ ಹೆಚ್ಚು ವಾಲುವುದು.
 • ವಿಶೇಷವಾಗಿ ರೈತರ ದಂಗೆಗಳಿಗೆ ಗಮನಕೊಟ್ಟು ಅವರ ಎಲ್ಲ ದಂಗೆಗಳನ್ನು ಮಾರ್ಕ್ಸ್ ವಾದದ ನಿಲುವಿಗೆ ಅಳವಡಿಸಿ ಆ ಹೋರಾಟಗಳ ಸ್ವಂತ ತಿಳುವಳಿಕೆಯನ್ನು ಗಮನಿಸದೇ ಹೋಗುವುದು.
 • ಬಹುಸಂಖ್ಯಾತ ಸಮುದಾಯಗಳ ಪ್ರತಿರೋಧದ ನೆಲೆಗಳನ್ನು ಉಪ ಪರ್ಯಾಯ ಎಂದು ಸೀಮಿತವಾಗಿ ಪರಿಭಾವಿಸುವುದು.
 • ತಾತ್ವಿಕವಾಗಿ ಸಮರ್ಥವಾಗಿ ಚರಿತ್ರೆಯನ್ನು ಮಂಡಿಸುತ್ತಲೇ ವರ್ತಮಾನದ ಸಾಮಾಜಿಕ ನ್ಯಾಯದ ಉಳಿದ ಆಲೋಚನೆಗಳ ಬಗ್ಗೆ ಅಂತರವನ್ನು ಕಾಯ್ದುಕೊಂಡು ದೂರ ವಾಗಿರುವುದು.
 • ಚರಿತ್ರೆಗಿಂತಲೂ ತಮ್ಮ ತತ್ವಕ್ಕೆ ಹೆಚ್ಚು ನಿಷ್ಠವಾಗಿರುವುದು ಮತ್ತು ವರ್ತಮಾನದ ಸಮಾಜದ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸದೇ ಇರುವುದು.

ಇಂತಹ ಕೆಲವು ಸಮಸ್ಯೆಗಳನ್ನು ಮಾರ್ಕ್ಸ್‌ವಾದಿ ಚರಿತ್ರೆಯ ಪ್ರಕ್ರಿಯೆಯಲ್ಲಿ ಗಮನಿಸಬಹುದು. ಈ ಸಮಸ್ಯೆಗಳನ್ನು ಬಿಡಿಸಿಕೊಳ್ಳುವುದು ಕಷ್ಟವೇನಲ್ಲ. ಎಡಪಂಥೀಯವಾಗಿ ವಾದಿಸುತ್ತಾ ಬಲಪಂಥೀಯವಾಗಿ ಬದುಕುವ ಅನೇಕ ವಿದ್ವಾಂಸರು ಹೋರಾಟಗಾರರು ಬಲಪಂಥೀಯರಷ್ಟೇ ಅಪಾಯಕಾರಿಯಾಗಿರುವುದನ್ನು ಗಮನಿಸಬಹುದು. ತತ್ವವನ್ನು ಬರೆಯುವುದಕ್ಕಿಂತ ಅಂತಹ ಬದುಕನ್ನು ವಿಸ್ತರಿಸುವುದು ಬಹಳ ಮುಖ್ಯ. ಮಾರ್ಕ್ಸ್‌ವಾದವು ಹೆಚ್ಚಾಗಿ ಮಾತಿನಲ್ಲಿ ಬಲವಾಗುತ್ತಿದ್ದಂತೆಯೇ ಬಲಪಂಥೀಯರು ಯೋಜಿತ ಕಾರ್ಯಚರಣೆಯಲ್ಲಿ ಹಿಂದೂ ಚರಿತ್ರೆಯನ್ನು ಸ್ಥಾಪಿಸಲು ದಾರಿಗಳನ್ನೂ ಹುಡುಕಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದಲಿತರು, ಆದಿವಾಸಿಗಳು ಅಲೆಮಾರಿಗಳು ನಿರೂಪಿಸಬೇಕಾದ ಚರಿತ್ರೆಯು ಬೇರೊಂದಿದೆ. ಅದನ್ನಿಲ್ಲಿ ಚರ್ಚಿಸುವ.

ದಲಿತ ಇತಿಹಾಸದ ಸ್ವರೂಪ

ಇತಿಹಾಸದ ಉದ್ದಕ್ಕೂ ಹಲವು ಬಗೆಯ ಕಪ್ಪು ಕೂಪಗಳಿವೆ. ಈ ಕಪ್ಪು ಯುಗಗಳು ದಲಿತರಿಂದಾದುದಲ್ಲ. ಅವು ದಲಿತರನ್ನು ದಂಡಿಸಲಿಕ್ಕಾಗಿ ರೂಪಿಸಲ್ಪಟ್ಟಂತವು. ಕತ್ತಲೆಯಲ್ಲಿದ್ದವರ ಇತಿಹಾಸದ ಕಪ್ಪುನೋಟವೇ ಬೇರೆ. ಹಾಗೆಯೇ ಕತ್ತಲ ಕೂಪವನ್ನು ನಿರ್ಮಿಸಿದವರ ಕಪ್ಪು ಛಾಯೆಯೆ ಬೇರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಕತ್ತಲಲ್ಲಿದ್ದವರ ಕತ್ತಲ ಕಥನಗಳನ್ನು ಕತ್ತಲೆಯಲ್ಲಿದ್ದವರು ತಮ್ಮ ಕತ್ತಲ ನರಕವನ್ನು ಹೇಳುವುದೇ ಬೇರೆ ಅಂತೆಯೇ ಆ ನರಕವನ್ನು ಅಭ್ಯಾಸ ಮಾಡಿ ಹೇಳುವುದು ಕೂಡ ಬೇರೆಯೇ. ನೊಂದವರ ಪರವಾದ ಚಾರಿತ್ರಿಕ ನೋಟವೇ ಬೇರೆ, ತಿರಸ್ಕತರೇ ಅಸ್ಪೃಶ್ಯರೇ ಬರೆದುಕೊಂಡ ಇತಿಹಾಸವೆ ಬೇರೆ. ಇತಿಹಾಸದ ಹೊಡೆತಕ್ಕೆ ಈಡಾದವರ ಇತಿಹಾಸವು ಎಲ್ಲ ಬಗೆಯ ಇತಿಹಾಸದ ಕಥನಗಳಿ ಗಿಂತಲೂ ಭಿನ್ನವಾದುದು. ನೋಯದವರು ಕೂಡ ಮನುಷ್ಯರೇ ಆಗಿರುವುದರಿಂದ ಒಂದು ಕಾಲಕ್ಕೆ ಎಲ್ಲ ಜಾತಿಗಳೂ ಒಂದೇ ಕುಟುಂಬಕ್ಕೆ ಒಳಪಟ್ಟಿದ್ದವಾದ್ದರಿಂದ ನೋವಿಗೆ ಮಿಡಿದ ಮಾನಯತೆ ಇದ್ದೇ ಇದೆ. ಆದರೆ ನೊಂದವರ ನುಡಿಗೆ ಚರಿತ್ರೆಯ ಪ್ರತಿಧ್ವನಿಯಿದೆ. ಚರಿತ್ರೆಯ ದಟ್ಟ ವಿಷಾದ ಮೌನವೂ ಇದೆ. ಹಾಗೆಯೇ ಚರಿತ್ರೆಯ ಆಸ್ಫೋಟಕ ಗುಣವೂ ಇದೆ. ಈ ಹಿನ್ನೆಲೆಯಲ್ಲಿ ದಲಿತ ಇತಿಹಾಸವನ್ನು ವ್ಯಾಖ್ಯಾನಿಸಬಹುದು.

ದಲಿತ ಇತಿಹಾಸವೆಂದರೆ ಪಂಚಮಕಥನ. ಅದು ಎಲ್ಲ ತಳ ಜಾತಿಗಳ ಆತ್ಮಸಾಕ್ಷಿಯ ಆತ್ಮಕಥನ. ನೆನ್ನೆಯ ಮೌನವನ್ನು ವರ್ತಮಾನದ ಧ್ವನಿಯಾಗಿಸುವ ನಿರೂಪಣೆ. ಕತ್ತಲ ಕೂಪಕ್ಕೆ ಎಸೆಯಲ್ಪಟ್ಟರೂ ಕತ್ತಲಲ್ಲೇ ಅಸ್ತಿತ್ವವನ್ನು ಕಾಯ್ದುಕೊಂಡವರ ಪ್ರಜ್ಞೆ. ಹಾಗೆಯೇ ಸಮಾಜದಿಂದ ದೇಶದಿಂದ ಬಹಿಷ್ಕೃತರಾದರೂ ಈ ದೇಶದ ಸೇವೆ ಮಾಡಿ ಜಾತಿಯ ಹೊರೆ ಹೊತ್ತವರ ಅಂತರಾಳದ ನಿವೇದನೆ. ದಾಸ್ಯದ ದೀನ ಸ್ಥಿತಿಯಲ್ಲಿದ್ದುಕೊಂಡೇ ಯಾರಿಗೂ ಕೇಡು ಬಯಸದ ಯಾರ ಮೇಲೂ ಹಿಂಸೆಯ ಯುದ್ಧ ಎಸಗದ, ಯಾರ ಮೇಲೂ ಅಧಿಕಾರವನ್ನೊ ಸಾಮ್ರಾಜ್ಯವನ್ನೋ ಮೇಲರಿಮೆಯನ್ನೊ ಹೇರದ, ಅಂತಃಕರಣದ ಆರ್ದ್ರತೆಯ ಗುಣ. ದಲಿತ ಇತಿಹಾಸ ಗುಣ. ಇಂತಹ ಚರಿತ್ರೆಯು ದ್ವೇಷದ ಕಥನವಲ್ಲ. ಕೇವಲ ಪರ್ಯಾಯವಾದ ಪ್ರತಿಸ್ಪರ್ಧಿಯ ನಿರೂಪಣೆಯೂ ಅದಲ್ಲ. ಶಿಕ್ಷಿಸಿದವರನ್ನು ಕ್ಷಮಿಸುವ ಕಥನ ದಲಿತ ಇತಿಹಾಸ. ದಾಳಿ ಮಾಡಿ ಆಕ್ರಮಿಸಿಕೊಂಡವರನ್ನು ಅಂತರಂಗಕ್ಕೆ ಕರೆದುಕೊಂಡು ಅವರ ಸೇವೆ ಮಾಡಿದ್ದು ದಲಿತ ಇತಿಹಾಸದ ವೈಶಿಷ್ಟ್ಯ. ಇಂತಹ ಸಂವೇದನೆಯನ್ನು ದಟ್ಟವಾಗಿ ಅಳವಡಿಸಿಕೊಂಡಿರುವ ದಲಿತ ಇತಿಹಾಸವು ಆಫ್ರಿಕಾದ ಕರಿಯರ ಇತಿಹಾಸಕ್ಕಿಂತಲೂ ಭಿನ್ನವಾದುದು. ಜಾತಿ ಮತ್ತು ವರ್ಣಗಳ ನಡುವಿನ ಹಿಂಸೆಯನ್ನು ಬಲ್ಲವರಿಗೆ ಇವರಿಬ್ಬರ ನಡುವಿನ ಚರಿತ್ರೆಯ ಅಂತರ ತಿಳಿಯತ್ತದೆ. ಕಪ್ಪು ಇತಿಹಾಸದ ಅರ್ಥವನ್ನೇ ದಲಿತ ಇತಿಹಾಸ ಎನ್ನುವುದಕ್ಕೂ ಅನ್ವಯಿಸಬಹುದು.

ದಲಿತ ಇತಿಹಾಸದ ಆಶಯಗಳು

 • ಜಾತ್ಯತೀತ ಸಮಾಜದ ನಿರ್ಮಾಣ.
 • ಅಸ್ತಿತ್ವ ಕಾಪಾಡಿಕೊಳ್ಳುವುದು.
 • ಪ್ರತಿರೋಧ ಶಕ್ತಿಯನ್ನು ವಿಸ್ತರಿಸಿಕೊಳ್ಳುವುದು.
 • ಕತ್ತಲಾಳದ ಸಾಕ್ಷಿ ಪ್ರಜ್ಞೆಯನ್ನು ನಿರೂಪಿಸುವುದು.
 • ಚರಿತ್ರೆಯನ್ನು ಮಾನವೀಕರಣಗೊಳಿಸುವುದು.
 • ಚರಿತ್ರೆಯಲ್ಲಿ ತನ್ನ ಅವಕಾಶವನ್ನು ಸ್ಥಾಪಿಸಿಕೊಳ್ಳುವುದು.
 • ಸಮುದಾಯಗಳ ಆತ್ಮಕಥನವನ್ನು ಮಂಡಿಸುವುದು.
 • ಬಹುಸಂಸ್ಕೃತಿಗಳ ಸಾಂಸ್ಕೃತಿಕ ಚರಿತ್ರೆಯನ್ನು ದಾಖಲಿಸುವುದು.
 • ಚರಿತ್ರೆಯ ಚೌಕಟ್ಟಿನ ಆಚೆಗಿನ ಮಾನವ ಸಂಬಂಧಗಳನ್ನು ಸ್ಥಾಪಿಸುವುದು.
 • ಹಿಂದೂ ಧರ್ಮದ ವಕ್ರತೆಯನ್ನು ನಿರಾಕರಿಸುವುದು.
 • ಮರದ ಹೂಕಾಯಿ ಹಣ್ಣುಗಳನ್ನು ಬೇರಿನಿಂದ ಗುರುತಿಸುವುದು.

ಇಂತಹ ಗುರಿಯು ದಲಿತ ಇತಿಹಾಸದ ಕೇಂದ್ರ ಪ್ರಜ್ಞೆಯಾಗಿದೆ. ಅಂಬೇಡ್ಕರ್ ತಮ್ಮ ಬರಹಗಳ ಉದ್ದಕ್ಕೂ ಹಿಂದೂ ಧರ್ಮ ಮತ್ತು ಅದರ ಸಾಮ್ರಾಜ್ಯಗಳ ಒಳ ಮರ್ಮವನ್ನು ತೆರೆದು ತೋರುವ ಮೂಲಕ ದಲಿತ ಇತಿಹಾಸದ ಸಾಧ್ಯತೆಗಳನ್ನು ಸೂಚಿಸಿದ್ದಾರೆ. ಅಂಬೇಡ್ಕರ್ ಅವರು ನೇರವಾಗಿ ಚರಿತ್ರೆಯನ್ನು ಕುರಿತೇ ತಮ್ಮೆಲ್ಲ ಪ್ರತಿರೋಧದ ಆಲೋಚನೆಗಳನ್ನು ಮಂಡಿಸಿದ್ದು. ಹಿಂದೂ ಧರ್ಮದ ವಿಮರ್ಶೆಗೂ ಬ್ರಾಹ್ಮಣ್ಯದ ಖಂಡನೆಗೂ ಹಿಂದೂ ಇತಿಹಾಸದ ಭಗ್ನತೆಗೂ ನೇರ ಸಂಬಂಧವಿದೆ. ಹಿಂದೂ ಇತಿಹಾಸ ಹಿಂದೂ ಧರ್ಮ ಅವಳಿ ಜವಳಿ ಮಕ್ಕಳಿದ್ದಂತೆ. ಇವೆರಡರ ಬಗ್ಗೆ ಬೌದ್ದಿಕ ದಾಳಿಯನ್ನು ಅಂಬೇಡ್ಕರ್ ಮಾಡಿದರು. ಈ ದಾಳಿಯ ಮಾನಯತೆಯ ಆಕ್ರಂದನವನ್ನು ಮಾತ್ರ ಮಾಡಿದೆಯೆ ಹೊರತು ಮಾನವ ದ್ವೇಶವನ್ನು ಮಾಡಲಿಲ್ಲ ಎಂಬುದು ಗಮನಿಸಬೇಕಾದ ಅಂಶ. ಅಂಬೇಡ್ಕರ್ ಅವರ ಚಿಂತನೆಗಳೆಲ್ಲವೂ ದಲಿತ ಇತಿಹಾಸದ ನಿರ್ವಚನಕ್ಕೆ ಬೌದ್ದಿಕವಾದ ಪರಿಕಲ್ಪನೆಗಳನ್ನು ತಂದು ಕೊಡುತ್ತವೆ. ಹಾಗೆ ನೋಡಿದರೆ ದಲಿತ ಇತಿಹಾಸದ ಮೂಲ ನಿರೂಪಕರೇ ಅಂಬೇಡ್ಕರ್ ಅವರಾಗಿದ್ದಾರೆ. ಆಧುನಿಕ ಭಾರತದ ಚರಿತ್ರೆಯ ರಚನಾ ವಿನ್ಯಾಸವನ್ನು ಭಗ್ನಪಡಿಸುವ ಮೂಲಕ ಚರಿತ್ರೆಯ ಹೊಸದೊಂದು ಕಣ್ಣೋಟವನ್ನೂ ಎಲ್ಲರಿಗೂ ತಂದುಕೊಟ್ಟಿದ್ದಾರೆ. ಭಾರತದ ಬಹುದೊಡ್ಡ ಚರಿತ್ರೆಕಾರೆಂದೇ ಅವರನ್ನು ಗುರುತಿಸಬೇಕು. ಸೆರೆಮನೆಯಲ್ಲಿ ಕೂತು ಡಿಸ್ಕವರಿ ಆಫ್ ಇಂಡಿಯಾ ಬರೆದ ನೆಹರು ಅವರಿಗಿಂತ ಅಂಬೇಡ್ಕರ್ ವಿಶಿಷ್ಟವಾಗುತ್ತಾರೆ. ಇಡೀ ಭರತಖಂಡವನ್ನೆ ಮೈದುಂಬಿ ಬರೆದ ಅಂಬೇಡ್ಕರ್ ಅವರು ನ್ಯಾಯದ ಚರಿತ್ರೆಯನ್ನು ಬರೆದರು.

ಅಲಕ್ಷಿತರ ಪರವಾದ ಹಕ್ಕೊತ್ತಾಯವನ್ನು ಮಾಡುತ್ತಲೇ ಚರಿತ್ರೆಯ ಕೂಪದಲ್ಲಿದ್ದ ವರನ್ನು ಬೆಳಕಿನಡೆಗೆ ಕರೆತಂದರು. ಚರಿತ್ರೆಯನ್ನು ಬರಿದೆ ಮಾನವರಾಗಿ ನೋಡಿದರೆ ಸಾಕು, ಇಲ್ಲಿ ಭರತ ಖಂಡದಲ್ಲಿ ಎಷ್ಟೊಂದು ಚರಿತ್ರೆಯ ಆಯುಧಗಳು ಕೊನೆಯವರನ್ನು ಹೇಗೆ ಹತ್ಯೆಮಾಡಿವೆ ಎಂಬುದನ್ನು ತೋರಿಸಿಕೊಟ್ಟ ಮೊದಲಿಗ ಅವರು. ಭಾರತದ ಎಲ್ಲ ಪವಿತ್ರ ಸಾಕ್ಷ್ಯಾಧಾರಗಳನ್ನು ಬಂಜಿಸಿದ ಅವರ ಚಾರಿತ್ರಿಕ ಪ್ರಜ್ಞೆಯು ದಲಿತ ಇತಿಹಾಸದ ತಳಪಾಯ ವಾಗಿದೆ. ವೈದಿಕರ ಆಧಾರಗಳ ಮೂಲಕವೇ ದಲಿತ ಇತಿಹಾಸದ ರೂಪ ಏನೆಂದು ತೋರಿಸಿ ಕೊಟ್ಟ ಅವರ ಚಾರಿತ್ರಿಕ ನಿರೂಪಣೆಗಳು ಸಮಾಜಶಾಸ್ತ್ರೀಯ ಆಯಾಮಗಳನ್ನು ಪಡೆದಿವೆ. ದಲಿತರ ಹಕ್ಕೊತ್ತಾಯವನ್ನು ಮಂಡಿಸುವಂತಿರುವ ಅಂಬೇಡ್ಕರ್ ಅವರ ವಾದಗಳು, ವಾಗ್ವಾದಗಳು, ಭಾಷಣಗಳು, ಬರಹಗಳು, ಹೋರಾಟಗಳು ಅಖಂಡ ಮಾನವತ್ವದ ಚರಿತ್ರೆಯನ್ನು ನಿವೇದಿಸಿಕೊಳ್ಳುವಂತೆ ಮಂಡಿತವಾಗಿರುವುದು ಅಸಾಧಾರಣವಾದ ಪ್ರತಿಭೆಯಿಂದ. ದಲಿತ ಇತಿಹಾಸದ ಆದ್ಯರಾದ ಅಂಬೇಡ್ಕರ್ ಅವರು ಎಲ್ಲ ತಳಸಮುದಾಯಗಳ ಚರಿತ್ರೆಗೂ ಆದ್ಯರೇ ಹೌದು. ಮಾರ್ಕ್ಸ್‌ವಾದಿಗಳು ದೂರದ ಮಾರ್ಕ್ಸ್ ಹೆಂಗೆಲ್ಸ್, ಲೆನಿನ್, ಮಾವೊ ಮುಂತಾದ ವರನ್ನೆ ಅಲ್ಲದೆ ಲೋಹಿಯಾ ಅವರ ವಾದಗಳನ್ನು ಹಿಡಿದುಕೊಂಡು ಜಾತಿ ಬಗ್ಗೆ ಮೈದುಂಬಿ ವಾದಿಸುವುದು ಚೋದ್ಯವಾಗಿದೆ. ರಂಜಿತ್ ಗುಹಾರಂತಹ ದೊಡ್ಡ ಸಬಾಲ್ಟ್ರನ್ ಚರಿತ್ರೆಕಾರರು ಕೂಡ ಅಂಬೇಡ್ಕರ್ ಅವರ ಬರಹಗಳನ್ನು ಚರಿತ್ರೆಯ ದೃಷ್ಟಿಯಿಂದ ಪರಿಗಣಿಸಲು ಆಗಲಿಲ್ಲ. ದಲಿತ ಇತಿಹಾಸ ಕೇವಲ ಜಾತಿ ಇತಿಹಾಸವಲ್ಲ. ಅಖಂಡ ಮಾನವ ಪ್ರೀತಿ ಇರುವ ಅದರ ಆಳದ ಹಂಬಲವನ್ನು ಬೌದ್ದಿಕವಾದ ಅಸ್ಪೃಶ್ಯತೆಯಿಂದ ನಿರಾಕರಿಸುವುದು ವಿವೇಕವಲ್ಲ. ಅಂಬೇಡ್ಕರ್ ಅವರ ಚರಿತ್ರೆಯ ಧೋರಣೆಗಳು ಸೀಮಿತವಾದವಲ್ಲ. ಕನ್ನಡದ ಮಟ್ಟಿಗೆ ಕಟ್ಟಿಕೊಳ್ಳುವ ದಲಿತ ಇತಿಹಾಸದ ಕಥನಗಳೂ ಸಂಕುಚಿತವಾದವಲ್ಲ. ಅಂಬೇಡ್ಕರ್ ಅವರು ಕೇವಲ ಸಂಶೋಧಕನ ವಿದ್ವತ್ತಿನ ಮೊಂಡು ಕತ್ತಿಗಳನ್ನು ಹಿಡಿದು ವಾದಿಸಲಿಲ್ಲ. ಇತಿಹಾಸದ ಆಯುಧಗಳನ್ನು ಬಿಟ್ಟು ಅಂಬೇಡ್ಕರ್ ಅವರು ಅಂತಃಸಾಕ್ಷಿಯಲ್ಲಿ ಮನುಷ್ಯತ್ವದ ಸಂದಾನಕ್ಕಾಗಿ ಚರಿತ್ರೆಯ ಕತ್ತಲಲ್ಲಿ ಏಕಾಂಗಿಯಾಗಿ ಹುಡುಕಾಡಿದರು. ಹಿಂದೂ ಇತಿಹಾಸದ ವಕ್ರತೆಯನ್ನು ಬೆತ್ತಲು ಮಾಡಿದ ಅವರ ಬರವಣಿಗೆಗಳು ಚರಿತ್ರೆಗೆ ಸಂಬಂಧಿಸಿದ ಪ್ರತಿಚರಿತ್ರೆ ಗಳೇ ಆಗಿದ್ದು ಹಿಂದೂ ಇತಿಹಾಸದ ಅಪವ್ಯಾಖ್ಯಾನಗಳನ್ನೆಲ್ಲ ಅವರು ಪ್ರಶ್ನಿಸಿದ್ದಾರೆ. ಅಂಬೇಡ್ಕರ್ ಅವರ ಚರಿತ್ರೆಯ ಪ್ರಜ್ಞೆಯು ಎಡಪಂಥೀಯ ಮನೋಧರ್ಮದ್ದಲ್ಲ. ಅದು ಕೇಸರೀಕರಣದ ಆಳದ ಜಾತಿಯ ಬೇರುಗಳನ್ನೇ ಬುಡಮೇಲು ಮಾಡುವಂತಹ ಚರಿತ್ರೆಯ ವಿಮರ್ಶೆಯಾಗಿತ್ತು. ಕೇವಲ ಇತಿಹಾಸವನ್ನು ಬರೆವುದಕ್ಕಿಂತಲೂ ಜನತೆಯ ಸಲುವಾಗಿ ಇತಿಹಾಸವನ್ನೇ ನಿರ್ಮಿಸುವುದು ಮತ್ತೂ ಮಹತ್ವದ ಕೆಲಸ. ಅಂಬೇಡ್ಕರ್ ಅವರು ಚರಿತ್ರೆಯನ್ನು ಬರೆದು ಚರಿತ್ರೆಕಾರರಾಗುವುದಕ್ಕಿಂತ ಸ್ವತಃ ತಾವೇ ಒಂದು ಚಾರಿತ್ರಿಕ ಸ್ಥಿತಿಯಾಗಿ ದಲಿತರಿಗೆ ಚರಿತ್ರೆಯನ್ನು ನಿರ್ಮಿಸಿದ್ದುದು ಅಸಾಧಾರಣವಾದುದು. ಹೀಗಾಗಿ ಅಂಬೇಡ್ಕರ್ ಅವರು ಹಿಂದೂ ಧರ್ಮಕೇಂದ್ರಿತ ಚರಿತ್ರೆಯ ಪೂರ್ವಾಗ್ರಹಗಳನ್ನು ಭಗ್ನಗೊಳಿಸುತ್ತಲೇ ಆಧುನಿಕ ಭಾರತವನ್ನು ಕಟ್ಟುವಂತಹ ಚರಿತ್ರೆಯನ್ನು ಸಾಧ್ಯವಾಗಿಸಿದರು. ದಲಿತ ಇತಿಹಾಸದ ಆಶಯಗಳು ಕೇವಲ ಒಂದು ಜಾತಿಗೆ ಸೀಮಿತವಾದುವಲ್ಲ. ಅವು ಅಖಂಡ ಸಮಾಜದ ಸರ್ವೋದಯದ ಕನಸನ್ನು ಬಿತ್ತುವಂತವು. ಅಂಬೇಡ್ಕರ್ ಅವರ ಚಿಂತನೆಗಳು ಕೂಡ ಅಖಂಡ ಭಾರತವನ್ನು ನಿರ್ಮಾಣ ಮಾಡುವಂತದ್ದಾಗಿದ್ದು ದಲಿತ ಇತಿಹಾಸದ ಪ್ರಜ್ಞೆಯಿಂದಲೇ ಭಾರತದ ಪ್ರತಿಯೊಬ್ಬರಿಗೂ ಅನ್ವಯವಾಗುವಂತಹ ಸಂವಿಧಾನವನ್ನು ರೂಪಿಸಿದರು.

ಹೀಗೆ ಅಂಬೇಡ್ಕರ್ ಅವರು ಮಂಡಿಸಿದ ಸಂವಿಧಾನವು ಹಿಂದೂ ಸಾಮ್ರಾಜ್ಯಶಾಹಿ ಧಾರ್ಮಿಕ ಯಾಜಮಾನ್ಯಕ್ಕೆ ನೀಡಿದ ಅಖಂಡ ಮಾನಯತೆಯ ಉತ್ತರವಾಗಿತ್ತು. ಹಾಗೆಯೇ ಹಿಂದೂ ಇತಿಹಾಸದ ಅಪರಾಧಗಳಿಗೆ ಕೊಟ್ಟ ಕ್ಷಮೆಯೂ ಹೌದು. ಈ ಕ್ಷಮೆಯ ಇತಿಹಾಸದ ಬೆಳಕು. ಕತ್ತಲಲ್ಲಿ ಇದ್ದವರ ಅಂತರಾಳವು ಕತ್ತಲಿನಿಂದ ಕೂಡಿರಲಿಲ್ಲ. ಅವರು ಕತ್ತಲ ಕೂಪದಲ್ಲಿದ್ದರೂ ಅವರ ಪ್ರಜ್ಞೆಯಲ್ಲಿ ಬೆಳಕು ಯಾವಾಗಲೂ ಇತ್ತು. ಆ ಬೆಳಕೇ ಅವರನ್ನು ಕೂಪದಿಂದ ಕಾಪಾಡಿರುವುದು. ಅಂತಹ ಬೆಳಕಿನಿಂದಲೇ ಅಂಬೇಡ್ಕರ್ ಭಾರತೀಯ ಇತಿಹಾಸವನ್ನು ಪರಿಶೀಲಿಸಿದ್ದು. ಬೆಳಕಿನ ಒಳಗಿರುವ ಕತ್ತಲು ಅತ್ಯಂತ ಅಪಾಯಕಾರಿ ಯಾದುದು. ಬೆಳಕಿನ ಗರ್ವವು ಇತಿಹಾಸದ ಸತ್ಯವನ್ನು ಮರೆಮಾಚುತ್ತದೆ. ಹಿಂದೂ ಇತಿಹಾಸದ ಬೆಳಕು ತನ್ನೊಳಗೆ ಅಪರಮಿತ ಕತ್ತಲನ್ನು ತುಂಬಿಕೊಂಡಿದ್ದು ಆ ಕತ್ತಲೆಯೆ ಸಮಾಜದ ಬಹುಸಂಸ್ಕೃತಿಗಳ ಮೇಲೆ ಧಾರ್ಮಿಕವಾದ ದಾಳಿಗಳನ್ನು ಮಾಡುತ್ತಲೇ ಇರುತ್ತದೆ. ದಲಿತ ಇತಿಹಾಸವು ಬೆಳಕಿನ ಒಳಗಿರುವ ಕತ್ತಲನ್ನೂ ಅಂದರೆ ಕೇಸರೀಕರಣವನ್ನೂ ಹಾಗೆಯೇ ಕತ್ತಲ ಒಳಗಿರುವ ಹುಸಿ ಕ್ರಾಂತಿಕಾರರ ಕನಸನ್ನು ಚೆನ್ನಾಗಿ ಬಲ್ಲುದಾಗಿದೆ. ಆದರೆ ಇವೆರಡರ ಆಚೆಗಿನ ಸ್ಥಿತಿಯಲ್ಲಿ ದಲಿತ ಇತಿಹಾಸವು ತನ್ನ ಮೇಲಿರುವ ಎಲ್ಲ ಸಮಾಜಗಳ ಅಂತರಂಗವನ್ನು ಮುಟ್ಟುವಂತೆ ತನ್ನ ಚರಿತ್ರೆಯನ್ನು ನಿರೂಪಿಸಬೇಕಾದ ಸವಾಲಿನಲ್ಲಿದೆ. ಇದು ಅತ್ಯಂತ ಕಠಿಣವಾದ ಹಾದಿಯದು. ರೂಢಿಗೊಂಡ ನಂಬಿಕೆಗಳನ್ನು ನಿರಾಕರಿಸಿ ಹೊಸ ಭಾಷೆಯನ್ನು ನಿವೇದಿಸುವುದಕ್ಕೆ ಇದು ತಕ್ಕ ಕಾಲವಾದರೂ ನಾವು ತಕ್ಕ ಸಿದ್ಧತೆಗಳನ್ನೆ ಮಾಡಿಕೊಂಡಿಲ್ಲ.

ಇಂತಲ್ಲಿ ಭಾರತೀಯ ಇತಿಹಾಸದ ಪುನರ್ರಚನೆಯು ಸ್ಥಳೀಯವಾದ ತತ್ಕಾಲೀನ ವಯಕ್ತಿಕ ಅನಿವಾರ್ಯತೆಗಳನ್ನು ಮೀರಿ ಚರಿತ್ರೆಯನ್ನು ನಿರ್ವಹಿಸಬೇಕಾಗಿದೆ. ಸ್ಥಳೀಯತೆಯನ್ನು ಸಮರ್ಥಿಸಿಕೊಳ್ಳುವ ಸಮುದಾಯ ಕೇಂದ್ರಿತ ಇತಿಹಾಸಕ್ಕೆ ಇರುವ ಸಾಕ್ಷ್ಯಾಧಾರಗಳನ್ನು ಸೋಸಿ ತೆಗೆಯುವುದು ಕಠಿಣವಾದ ಕೆಲಸ. ಯಾಕೆಂದರೆ ಪ್ರತಿಯೊಂದು ಜಾತಿಗಳ ಚಾರಿತ್ರಿಕ ಆಕರಗಳು ಜಾತಿಯ ಚೌಕಟ್ಟಿನ ಒಳಗೆಯೇ ವ್ಯವಹರಿಸುತ್ತ ಸೀಮಿತ ಭೌಗೋಳಿಕತೆಗೆ ಒಳಗಾಗಿರುತ್ತವೆ. ಇಂತಹ ಅಪಾಯದಿಂದ ಚರಿತ್ರೆಯ ಸಾಕ್ಷಿಯನ್ನು ಬಸಿದು ಸೋಸಿ ಶುದ್ಧ ರೂಪದಲ್ಲಿ ಅದನ್ನು ಅರ್ಥೈಸುವುದು ಮುಖ್ಯವಾಗುತ್ತದೆ. ಆ ಬಗೆಯ ಕೆಲವು ಅಂಶಗಳನ್ನಿಲ್ಲಿ ಪರಿಶೀಲಿಸುವ.