ಇತಿಹಾಸವು ಮೂಲತಃ ಕಾಲದೇಶಗಳ ಪರಿಣಾಮ. ಪ್ರತಿಯೊಂದು ಸಮುದಾಯವು ತನಗೇ ಸೀಮಿತವಾದ ಕಾಲದೇಶವನ್ನು ನಿರ್ದಿಷ್ಟಪಡಿಸಿಕೊಂಡಿರುತ್ತದೆ. ಅದಕ್ಕೆ ತಕ್ಕಂತೆಯೇ ನಾಗರೀಕತೆಯ ಹಂತಗಳು ಸಾಗಿ ಬಂದಿರುತ್ತವೆ. ಸೀಮೀತ ಕಾಲ ದೇಶದ ಗಡಿಯ ಒಳಗೆ ಅಸ್ತಿತ್ವವನ್ನು ರೂಢಿಸಿಕೊಳ್ಳುವ ಒತ್ತಡದಲ್ಲಿ ಸಮುದಾಯಗಳು ತಮ್ಮ ತಮ್ಮ ಚಹರೆಗಾಗಿ ಒಳಸಂಘರ್ಷಗಳಿಗೆ ಇಳಿಯುತ್ತವೆ. ಅಂತಹ ಒಳ ಸಂಘರ್ಷದಲ್ಲಿ ತೊಡಗಿದ ಸಮುದಾಯಗಳು ಕಾಲ ದೇಶಗಳನ್ನು ತಮ್ಮ ಚಹರೆಗೆ ತಕ್ಕಂತೆ ವರ್ಗೀಕರಿಸಿಕೊಳ್ಳುತ್ತವೆ. ಹೀಗಾಗಿಯೇ ನಾಗರಿಕತೆಗಳು, ಸಮಾಜದ ಒಂದೊಂದು ಘಟಕಗಳು ವಿಭಿನ್ನ ವೃತ್ತಿ ಸಮುದಾಯಗಳನ್ನು ನಿಯಂತ್ರಿಸಿರುವುದು. ಈ ನಿಯಂತ್ರಣದಿಂದಲೇ ಕಾಲದೇಶಗಳ ಪರಿಣಾಮವಾದ ಇತಿಹಾಸವು ಅನೇಕ ಬಗೆಯ ಅವ್ಯಕ್ತ ಸಂಗತಿಗಳನ್ನು ಅಲಕ್ಷಿತವಾದ ಪ್ರತಿರೋಧಗಳನ್ನು ಮೌಖಿಕ ಪರಂಪರೆಗಳನ್ನು ರೂಢಿಸಿಕೊಂಡು ಬರುವುದು. ಇಂತವನ್ನೆಲ್ಲ ಸೂತಕವಾಗಿಯೂ ಶಿಷ್ಟ ಚರಿತ್ರೆ ಕಾಣುವುದಿದೆ.

ಭಾರತೀಯ ಇತಿಹಾಸವು ಈ ಬಗೆಯ ಸೂತಕದಿಂದ ತುಂಬಿಹೋಗಿದೆ. ಅದರ ಇಡೀ ನಿರೂಪಣೆಯು ಸೂತಕ ಪ್ರಜ್ಞೆಯಲ್ಲಿ ಇಲ್ಲಿನ ಸಮುದಾಯಗಳನ್ನು ದಾಖಲಿಸಿದೆ. ಅದರ ದಾಖಲೆಗಳೇ ಅಥವಾ ಸಾಕ್ಷಿಗಳೇ ಸೂತಕ ಪ್ರಜ್ಞೆಯವು. ಇತಿಹಾಸದ ಸಾಕ್ಷಿ ಪ್ರಜ್ಞೆಯೇ ಸೂತಕವಾಗಿಬಿಟ್ಟರೆ ಇತಿಹಾಸದ ಸತ್ಯ ದರ್ಶನವೂ ಮೈಲಿಗೆಯದೇ ಆಗಿ ಬಿಡುತ್ತದೆ. ಹರಪ್ಪ ಮತ್ತು ಮೆಹೆಂಜೊದಾರೋದಿಂದಲೂ ಇವತ್ತಿನ ಮಾಹಿತಿ ತಂತ್ರಜ್ಞಾನದ ಸಾಕ್ಷ್ಯಾಧಾರಗಳ ವರೆವಿಗೂ ತಾರತಮ್ಯದ ಸಾಕ್ಷಿ ಪ್ರಜ್ಞೆಯು ಇತಿಹಾಸವನ್ನು ನಿರೂಪಿಸುತ್ತಲೇ ಬಂದಿದೆ. ನಾಗರೀಕತೆಗಳು ನಗರ ಸಂಸ್ಕೃತಿಗಳನ್ನು ಕಟ್ಟಿಕೊಂಡಂತೆಲ್ಲ ಅವು ಖಾಸಗಿಯಾದ ಸಾಕ್ಷಿಗಳನ್ನು ಮಾತ್ರವೆ ವ್ಯವಸ್ಥೆಯ ಬಲದಿಂದ ಸ್ಥಾಪಿಸಿಕೊಳ್ಳುತ್ತವೆ. ಅಂತಲ್ಲಿ ಸಮಾಜದ ತಳಪಾಯದವರ ಸಾಕ್ಷಿಯು ಕೂಪಕ್ಕೆ ಎಸೆಯಲ್ಪಟ್ಟಿರುತ್ತದೆ. ಹಾಗೆಯೇ ಅಂತವರ ಸಾಕ್ಷಿಪ್ರಜ್ಞೆಯನ್ನು ವ್ಯವಸ್ಥಿತವಾಗಿ ನಿಯಂತ್ರಿಸುವ ವಿರೂಪಗೊಳಿಸುವ ತಮ್ಮನ್ನು ಭಜಿಸಿ ಹಾಡುವುದಕ್ಕೆ ಮಾತ್ರವೇ ಸೀಮಿತಗೊಳಿಸುವ ರೀತಿಗೆ ನಿರ್ಬಂಧಿಸಲಾಗಿರುತ್ತದೆ. ಒಂದು ವೇಳೆ ಈ ಹೊತ್ತಿನ ಸರ್ಕಾರದ, ಸಮಾಜ ಸಂಸ್ಥೆಯ, ವ್ಯಕ್ತಿಯ ಊನಗಳನ್ನು ಎತ್ತಿ ತೋರುವಂತೆ ಸಾಮಾನ್ಯನೊಬ್ಬ ದಾಖಲೆ ನೀಡಿದರೆ ಅಂತಹ ದಾಖಲೆಯನ್ನು ಸ್ವೀಕರಿಸಿ ಹೇಗೆ ಆ ದಾಖಲೆಯ ಅಭಿಪ್ರಾಯ ವನ್ನು ಕಣ್ಮರೆಗೊಳಿಸಿ ಕೂಪಕ್ಕೆ ಎಸೆಯಲ್ಪಡಲಾಗುವುದೋ ಅದರಂತೆಯೇ ಗತಕಾಲದ ನೊಂದವರೆಲ್ಲರ ಸಾಕ್ಷಿ ಪ್ರಜ್ಞೆಯನ್ನು ಕತ್ತಲ ತಡಿಗೆ ಹಾಕುವ ಹುನ್ನಾರಗಳನ್ನು ನಾಗರೀಕತೆಗಳು ತಾವು ಕಟ್ಟಿಕೊಂಡ ಸಂರಕ್ಷಣೆಯ ಕೋಟೆಗಳಿಂದ ನಾಶಪಡಿಸಿರುತ್ತವೆ. ಹಾಗೆಯೇ ಎಷ್ಟೋ ವೇಳೆ ತಮ್ಮ ಸುಭದ್ರ ಕೋಟೆಪಾಯಗಳಿಗೆ ಅಂತಹ ಆಕರಗಳನ್ನು ಬಲಿಕೊಟ್ಟು ಅವುಗಳ ಮೇಲೆ ದಿಗ್ವಿಜಯದ ಶಾಸನಗಳನ್ನು ಸ್ಥಾಪಿಸಿರುತ್ತವೆ.

ಭಾರತೀಯ ಇತಿಹಾಸದ ಕೂಪಗಳಲ್ಲಿ ಸಿಲುಕಿ ನರಳಿದವರ ಚರಿತ್ರೆಯ ದನಿಯು ಪಿಸುಮಾತಿನದು. ಅನೇಕ ಬಾರಿ ಆ ಪಿಸುಮಾತು ನಿಗೂಢವಾದುದು. ತನ್ನ ದನಿಯನ್ನು ತಾನೆ ನುಂಗಿಕೊಳ್ಳುವಂತದ್ದು. ಹಾಗೆ ನುಂಗಿಕೊಂಡ ದನಿಯು ರೂಪಕವಾಗಿಬಿಡುವಂತದು. ಇಂತಹ ರೂಪಕವಾದರೂ ತನ್ನ ಚಹರೆಯನ್ನು ತಾನೇ ಬಚ್ಚಿಟ್ಟು ಪರರ ಚಹರೆಯಲ್ಲಿ ತನ್ನ ನೆರಳನ್ನು ಬಿಟ್ಟು ಹೋಗುವಂತಹದು. ನೆರಳಿನ ಚಹರೆಯನ್ನು ಶೋಧಿಸುವುದೇ ನಿಜವಾದ ಚರಿತ್ರೆಯ ನೈತಿಕತೆ. ನೆರಳಿನಲ್ಲಿರುವ ದಲಿತ ಜನರ ಇತಿಹಾಸವು ಕಾಲದೇಶದ ಹೊರೆಯನ್ನು ಹೊತ್ತಿರುತ್ತದೆ. ಅನಾಮಧೇಯವಾದ ಈ ನೆರಳಿನ ಚಹರೆಯು ಕಪ್ಪು ಚುಕ್ಕೆಯಂತೆ ಚರಿತ್ರೆಯ ಮರೆಯಲ್ಲಿ ಅಡಗಿರುತ್ತದೆ. ನೆರಳಿನಲ್ಲಿರುವ ಪ್ರತಿಬಿಂಬವು ಗತಕಾಲದ ಕನ್ನಡಿಯಲ್ಲಿ ಕಾಣಲು ಸಾಧ್ಯವೇ ಇಲ್ಲ. ವರ್ತಮಾನದ ಕನ್ನಡಿಯಲ್ಲಿ ಗತಕಾಲದ ಒಳಗೆ ಬಚ್ಚಿಡಲ್ಪಟ್ಟಿರುವ ನೆರಳಿನ ಆಕೃತಿಗಳು ರೂಪುಗೊಳ್ಳುತ್ತವೆ. ದಲಿತ ಇತಿಹಾಸದ ಬೇರುಗಳು ಇಂತಹ ನೆರಳಿನ ವಾಸ್ತವ ರೂಪಕ್ಕೆ ದಾರಿಮಾಡಿಕೊಡುತ್ತವೆ.

ಭಾರತೀಯ ಇತಿಹಾಸದಲ್ಲಿರುವ ಕಪ್ಪುಕೂಪಗಳು ಜನಾಂಗ ದ್ವೇಷದಿಂದ ಹುಟ್ಟಿ ಕೊಂಡಂತವು. ಆರ್ಯರು ಭಾರತಕ್ಕೆ ಬಂದು ದಾಳಿ ಮಾಡಿ ಅಧಿಕಾರ ಸ್ಥಾಪಿಸಿ ವರ್ಣಾಶ್ರಮ ಧರ್ಮವನ್ನು ಪ್ರತಿಸ್ಥಾಪಿಸಿದ ಕೂಡಲೆ ಕಾಲದೇಶವು ಯಜಮಾನ್ಯದ ಅಂಕುಶದಿಂದ ಸಮಾಜವನ್ನು ವಕ್ರವಾಗಿ ಸೀಳಿ ಕಪ್ಪು ಕೂಪಗಳನ್ನು ನಿರ್ಮಿಸಿ ಆಯಾಯ ಕೂಪಗಳಲ್ಲಿ ತಳ ಜಾತಿಗಳು ಉಳಿದು ನಿಷೇಧಿತ ಕಾಲದೇಶಗಳಲ್ಲಿ ತಮ್ಮ ಚಹರೆಗಾಗಿ ಹೋರಾಡಬೇಕಾದ ಅನಿವಾರ್ಯತೆಯನ್ನು ಎದುರಿಸಬೇಕಾಯಿತು. ಇಂತಹ ನಿಷೇಧಿತ ಕಾಲ ದೇಶವೇ ಚರಿತ್ರೆಯ ಕಪ್ಪುಯುಗ. ಕಾಲದೇಶಗಳನ್ನು ನಿಯಂತ್ರಿಸಿ ಕೆಲವರ ಪಾಲಿಗೆ ಅವುಗಳನ್ನು ನಿಷೇಧಿಸಿದ ಕೂಡಲೆ ಸ್ವಾತಂತ್ರ್ಯ ಮತ್ತು ಸೃಜನಶೀಲತೆಗಳೆರಡೂ ಕಳೆದು ಹೋಗುತ್ತವೆ. ದಲಿತರು ನಿಷೇಧಿತ ಆವರಣಗಳಲ್ಲಿಯೇ ಬದುಕಿ ಸಣ್ಣ ಸಣ್ಣ ಕೇರಿಗಳೆಂಬ ಜೈಲಿನಲ್ಲೇ ಉಳಿದು ಬಹಿಷ್ಕೃತ ಭಾರತೀಯರೆನಿಸಿದ್ದು ಈ ಬಗೆಯ ಪರಿಯಿಂದಲೆ. ಈ ಹಿನ್ನೆಲೆಯಲ್ಲಿ ದಲಿತ ಇತಿಹಾಸವನ್ನು ನಿರೂಪಿಸಬೇಕಾದ ಚಾರಿತ್ರಿಕ ಒತ್ತಡದಲ್ಲಿ ಅನೇಕ ಬಗೆಯ ಸವಾಲು ಹಾಗೂ ಸಾಧ್ಯತೆಗಳು ಜೊತೆಗೂಡಿಯೇ ಎದುರಾಗುತ್ತವೆ. ಅವುಗಳನ್ನು ಸ್ವಂತಿಕೆಯ ಹುಡುಕಾಟದ ನೆಲೆಯಲ್ಲಿ ಪರಿಶೀಲಿಸಿ ಅಖಂಡವಾದ ಮಾನಯ ಸಂಬಂಧಗಳ ಇತಿಹಾಸವನ್ನು ನಿರೂಪಿಸ ಬೇಕಾಗಿದೆ. ಇದು ಚರಿತ್ರೆಯ ಸೂತಕವನ್ನು ತೊಳೆಯುವ ಕೆಲಸ. ಹಾಗೆಯೇ ಭಾರತೀಯ ಚರಿತ್ರೆಯ ಕಪ್ಪುಯುಗವನ್ನು ಅನಾವರಣಗೊಳಿಸಿ ಬೆಳಕಿನ ಹುಡುಕಾಟವನ್ನು ಮಾಡುವ ಜವಾಬ್ದಾರಿ. ಇತಿಹಾಸದ ಅಪರಾಧಗಳನ್ನು ಪರಿಶೀಲಿಸಿದವರು ಬಹಳಷ್ಟು ಮಟ್ಟಿಗೆ ಎಡಪಂಥೀಯ ಚಿಂತನೆಯಿಂದ ಇತಿಹಾಸದ ಆಚೆಗಿದ್ದವರ ಬಗ್ಗೆ ಮಾನವತಾ ಧೋರಣೆಯಿಂದ ಸಂವೇದಿಸಿದ್ದಾರೆ. ಆದರೆ ಬಹುಪಾಲು ಭಾರತೀಯ ಇತಿಹಾಸದ ಉದ್ದಗಲಕ್ಕೂ ದಟ್ಟವಾದ ಕತ್ತಲ ಕೂಪಗಳ ಅಮಾನಯವಾದ ಮುಖಗಳ ಮುಖವಾಡಗಳನ್ನು ಕಳಚುವುದು ಕಠಿಣ ವಾದ ಕೆಲಸ. ಸಾಮ್ರಾಜ್ಯಗಳು ಜಾತಿನಿಷ್ಠ ಪ್ರಭುತ್ವದ ನಿರಂಕುಶ ನೀತಿಯನ್ನು ನಿರ್ಣಾಯಕ ವಾಗಿ ಉಳಿಸಿ ಹೋಗಿರುವುದರಿಂದ ಗತ ಇತಿಹಾಸದ ಅಡಿಪಾಯವನ್ನು ಬುಡಮೇಲು ಮಾಡುವುದು ಸಾಧ್ಯವೇ ಇಲ್ಲವೇನೊ ಎನಿಸುತ್ತದೆ. ಇರುವ ಆಧಾರಗಳನ್ನೆಲ್ಲ ಇಲ್ಲದಿರುವ ಆಧಾರಗಳ ಪ್ರತಿಬಿಂಬ ಎಂದು ತಿಳಿದು ಅವುಗಳ ಮೂಲ ಕಥನಗಳನ್ನು ಬೆಳಕಿನೆಡೆಗೆ ಕೊಂಡೊಯ್ಯಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ಇತಿಹಾಸಕ್ಕಿರುವ ಎರಡು ಮುಖಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ದಲಿತ ಇತಿಹಾಸದ ಸಾಧ್ಯತೆಯನ್ನು ಮುಂದೆ ವಿಶ್ಲೇಷಿಸೋಣ.

ಇತಿಹಾಸದ ಕೇಸರೀಕರಣ ಮತ್ತು ಎಡಪಂಥೀಕರಣ

ಭಾರತೀಯ ಇತಿಹಾಸವನ್ನು ರಚಿಸಿದ ಆರಂಭದ ಇತಿಹಾಸಕಾರರು ಸಹಜವಾಗಿಯೇ ವೈದಿಕ ಮೂಲದವರೇ ಆಗಿದ್ದರು. ಅವರಿಗೆ ಅಪ್ತವಾದ ಇತಿಹಾಸದ ಕಥನಗಳು ವೈದಿಕ ಯುಗದವೇ ಮುಖ್ಯವಾಗಿದ್ದೂ, ಅವರಿಗೆ ಸ್ಪಷ್ಟವಾಗಿ ಗಾಢವಾಗಿ ತಿಳಿದಿದ್ದ ಸಂಗತಿಗಳೆ ಆಗಿದ್ದವು. ಅವುಗಳ ಆಚೆಗಿನ ಕಥನಗಳು ಅವರಿಗೆ ಚರಿತ್ರೆಯ ಸಂಗತಿಯಾಗಿ ಕಂಡಿರಲಿಲ್ಲ. ತಮ್ಮ ನೆಲೆಗೆ ಎಟುಕುವ ಸಾಕ್ಷ್ಯ ಅವರಿಗೆ ಪರಮ ಸಾಕ್ಷ್ಯ ಎನಿಸಿದ್ದವು. ಧಾರ್ಮಿಕ ಅಂಗೀಕಾರವಿದ್ದ ಚಟುವಟಿಕೆಗಳೇ ಆತ್ಯಂತಿಕ ವಿವರಗಳಾಗಿದ್ದವು. ಪಶ್ಚಿಮದವರ ಮುಂದೆ ತಮಗೂ ಘನತೆಯ ಬೃಹತ್ ಪರಂಪರೆಯ ಕಥನಗಳಿವೆ ಎಂಬುದನ್ನು ಸಾಬೀತು ಪಡಿಸಿಕೊಳ್ಳಬೇಕಾದ ಜರೂರಿನಿಂದ ಹಿಂದೂ ಸಾಮ್ರಾಜ್ಯವನ್ನು ದಾಖಲಿಸಬೇಕಿತ್ತು. ಹೀಗೆ ಹಿಂದೂ ಸಮಾಜ, ಸಂಸ್ಕೃತಿ, ಸಾಹಿತ್ಯ, ಚರಿತ್ರೆಗಳನ್ನು ಹೊರ ಜಗತ್ತಿಗೆ ತೋರಿಸುವಾಗ ದಿವ್ಯ ಭವ್ಯ ಸಮೃದ್ಧ ಭಾರತವನ್ನು ಮಾತ್ರವೆ ನಿರೂಪಿಸಬೇಕು ಎಂಬ ರಾಷ್ಟ್ರೀಯವಾದಿ ಪ್ರಜ್ಞೆ ಬಲವಾಗಿ ಅವರ ಬರಹಗಳಲ್ಲಿ ನೆಲೆಸಿತ್ತು. ಆ ಕಾಲದ ಜರೂರಿಗೆ ಅಂತಹ ಚಾರಿತ್ರಿಕ ನಿರೂಪಣೆಗಳು ಅನಿವಾರ್ಯವಾಗಿದ್ದವು. ಆ ಬಗೆಯ ಬರಹದಿಂದ ಅಧಿಕೃತವಾಗಿ ಭಾರತೀಯರು ತಮ್ಮದೇ ಚರಿತ್ರೆಯನ್ನು ಬರೆದುಕೊಳ್ಳುವುದು ಸಾಧ್ಯವಾಯಿತು. ಆ ಮಟ್ಟಿಗೆ ಅಂತಹ ಬರಹಗಳಿಗೆ ಮಾನ್ಯತೆ ಇದ್ದೇ ಇದೆ. ಅವುಗಳನ್ನು ಪರಿಶೀಲಿಸಬಹುದೇ ಹೊರತು ತಿರಸ್ಕರಿಸಲು ಸಾಧ್ಯವಿಲ್ಲ. ಪಶ್ಚಿಮದವರ ಚರಿತ್ರೆಯ ಗರ್ವದ ಎದಿರು ಅವರ ಸಾಮ್ರಾಜ್ಯಶಾಹಿ ಧೋರಣೆಯ ಮುಂದೆ ಬೃಹತ್ ಭಾರತವನ್ನು ಪ್ರತಿಪಾದಿಸಿಕೊಳ್ಳುವಾಗ ಆಗಿನ ಚರಿತ್ರೆಕಾರರಿಗೆ ಇದ್ದ ಮಾದರಿಯೇ ನಮಗಿಂತ ಭಿನ್ನವಾದುದಾಗಿತ್ತು. ರಾಷ್ಟ್ರೀಯವಾದಿ ಇತಿಹಾಸದ ನಿರೂಪಣೆಯು ಆ ಹೊತ್ತಿಗೆ ತನ್ನ ದೇಶಕ್ಕೂ ಒಂದು ಇತಿಹಾಸವಿದೆ ಎಂದು ಸಮರ್ಥಿಸಬೇಕಾಗಿತ್ತು. ಭಾರತೀಯರಿಗೆ ಚಾರಿತ್ರಿಕ ಪ್ರಜ್ಞೆಯು ಇಲ್ಲ. ಹಾಗೆಯೇ ಅವರಿಗೆ ಚರಿತ್ರೆಯನ್ನು ಬರೆದುಕೊಳ್ಳಲಿಕ್ಕೂ ಬರುವುದಿಲ್ಲ ಎಂದು ಲಘುವಾಗಿ ಹೀಗಳೆದಾಗ ಬೃಹತ್ ಭಾರತದ ಅಖಂಡ ಹಿಂದೂ ಕಥನ ಆ ಮಟ್ಟಿಗೆ ಆ ಕಾಲಕ್ಕೆ ತಕ್ಕದ್ದೆ ಆಗಿತ್ತು.

ಇಲ್ಲಿ ಎದುರಾಗುವ ಸಮಸ್ಯೆಯು ಅಧಿಕೃತತೆಯಲ್ಲ. ಒಟ್ಟಿನಲ್ಲಿ ಹಿಂದೂ ಸಮಾಜದ ಗತ ಇತಿಹಾಸವನ್ನು ತನಗೆ ಬೇಕೆನಿಸಿದ ಆ ಕ್ಷಣಕ್ಕೆ ದತ್ತಕವಾದ ಧಾರ್ಮಿಕ ಆಕರಗಳಿಂದ ಸಾಮ್ರಾಜ್ಯಗಳ ಸಾಕ್ಷಿಗಳಿಂದ ತನ್ನ ಗತವನ್ನು ಮೊದಲ ಬಾರಿಗೆ ರಚಿಸಿಕೊಳ್ಳುವಂತದಾಗಿತ್ತು. ಹೀಗಾಗಿ ಅಲ್ಲಿ ಮುಖ್ಯವಾಗಿ ಕಂಡದ್ದು ತನ್ನನ್ನು ತಾನು ಸ್ಥಾಪಿಸಿಕೊಳ್ಳುವುದೇ ಆಗಿತ್ತು. ಹಾಗೆ ಸ್ಥಾಪಿಸಿಕೊಳ್ಳುವಾಗ ಆ ಹೊತ್ತಿನ ಇತಿಹಾಸಕಾರರಿಗೆ ತಮಗಿದ್ದ ಒತ್ತಡಗಳು ಪ್ರೇರಣೆಗಳು ಆಯ್ಕೆಗಳು ಹಾಗೂ ಅವಕಾಶಗಳು ಇರಲಿಲ್ಲ. ಇಂತಲ್ಲಿ ಸಹಜವಾಗಿಯೇ ಏಕಮುಖ ಧೋರಣೆಯ ಇತಿಹಾಸ ಕಥನವೇ ಉಂಟಾಗುತ್ತದೆ. ಇದು ಆ ಕಾಲಮಾನದ ಜರೂರಿನಿಂದಾದ ಮಿತಿಯೂ ಆಗಿತ್ತು. ಅಂತೆಯೇ ಇತಿಹಾಸವನ್ನೂ ರಚಿಸಲು ತೊಡಗಿದವರ ಐತಿಹಾಸಿಕ ಪ್ರಜ್ಞೆಯು ಮುಖ್ಯವಾಗಿ ವೈದಿಕವಾಹಿನಿಯದಾಗಿತ್ತು.

ಕಾಲ ದೇಶಗಳ ಅಗತ್ಯಗಳು ಬೇರೆಯಾಗಿವೆ. ಇತಿಹಾಸವನ್ನು ಅರಿಯುವ ವಿಧಾನಗಳು ಬದಲಾಗಿವೆ. ಗತಕಾಲದ ತೀರ್ಮಾನಗಳನ್ನು ಭಗ್ನಗೊಳಿಸುವ ಅವಕಾಶವೂ ಸಾಧ್ಯವಾಗಿದೆ. ಇಂತಹ ಹೊತ್ತಲ್ಲಿಯೇ ಮತ್ತೆ ವೈದಿಕ ಮನೋಧರ್ಮದ ಚಾರಿತ್ರಿಕ ನಿರೂಪಣೆಗಳು ಪುನರುಜ್ಜೀವನಗೊಳ್ಳಲು ಯತ್ನಿಸುತ್ತಲೇ ಇರುತ್ತವೆ. ಅದನ್ನೇ ಚರಿತ್ರೆಯ ಕೇಸರೀಕರಣ ಎನ್ನುವುದು. ಆರಂಭದ ಚರಿತ್ರೆಕಾರರಿಗೆ ಸ್ವಸಾಕ್ಷಿಗಳ ಸ್ವಧರ್ಮ ಮತ್ತು ಮೌಲ್ಯಗಳ ಬಗ್ಗೆ ವ್ಯಾಮೋಹವಿದ್ದುದು ಅಖಂಡವಾದ ಚರಿತ್ರೆಯನ್ನು ನಿರೂಪಿಸುವ ಸಲುವಾಗಿ ಆ ಮೂಲಕ ಹಿಂದೂ ಇತಿಹಾಸವನ್ನು ತಮ್ಮ ಧರ್ಮದ ಮೂಲಕವೇ ದಾಖಲಿಸುವ ಸ್ವಾರ್ಥವೂ ಅದರಲ್ಲಿ ಬೆರೆತು ಹೋಗಿತ್ತು. ಇತಿಹಾಸದ ಮೇಲರಿಮೆಯನ್ನು ಪಶ್ಚಿಮದವರ ಮುಂದೆ ಸಾಬೀತುಪಡಿಸಿ ಕೊಳ್ಳುವಾಗ ಅಂತಹ ಧೋರಣೆಗಳನ್ನು ತತ್ಕಾಲಕ್ಕೆ ಮನ್ನಿಸಬಹುದಾಗಿತ್ತು. ಆದರೆ ಆ ಕಾಲದಲ್ಲಿ ಹಿಂದೂ ಇತಿಹಾಸವನ್ನು ಸಮರ್ಥಿಸುವ ತಿದ್ದುವ ರೀತಿಯು ಅತ್ಯಂತ ಅಪಾಯಕಾರಿ ಯಾದದ್ದು. ಅಲ್ಲಿ ಕೇವಲ ಬ್ರಾಹ್ಮಣವಾದವನ್ನು ಮಾತ್ರವೇ ಪುಷ್ಠೀಕರಿಸುವಂತಹ ಧೋರಣೆಗಳು ಕಾಣಿಸಿಕೊಂಡಿವೆ. ಭಾರತೀಯ ಇತಿಹಾಸ ನಮಗೆ ಮುಖ್ಯವೇ ಹೊರತು ಹಿಂದೂ ಇತಿಹಾಸವಲ್ಲ. ಹಿಂದೂ ಎನ್ನುವುದು ಕೇವಲ ಕಲ್ಪಿತವಾದುದು ಹಾಗೂ ಅಂತಹ ಅಮೂರ್ತ ರೂಪಕ್ಕೆ ನಿಜವಾಗಿಯೂ ಚರಿತ್ರೆಯೆ ಇಲ್ಲ. ಚರಿತ್ರೆಯೆ ಇರದಿದ್ದವರು ಚರಿತ್ರೆಯ ಮೇಲೆ ಯಾಜಮಾನ್ಯ ಸ್ಥಾಪಿಸುವುದು ಹಿಂದಿನಿಂದಲೂ ನಡೆದು ಬಂದ ರೂಢಿ ಚರಿತ್ರೆಯ ನೈತಿಕತೆಯನ್ನು ಪಾಲಿಸದ ಯಾರೂ ಕೂಡ ಚರಿತ್ರೆಯನ್ನು ನಿರ್ಮಿಸಲಾರರು. ಅಂತವರು ಚರಿತ್ರೆಯ ಅಪರಾಧಗಳನ್ನು ಎಸಗಬಲ್ಲವರಾಗಿದ್ದು ಕಾಲದೇಶಗಳನ್ನು ವಿರೂಪಗೊಳಿಸಲು ತಮಗೆ ಬೇಕಾದ ಕುರೂಪಿ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿ ಅಂತಹ ರೂಪ ಆಧಾರವೇ ಚರಿತ್ರೆಯ ಪವಿತ್ರ ಆಧಾರವೆಂದು ಧರ್ಮಗ್ರಂಥಗಳ ಪಾರಮ್ಯವನ್ನು ಪ್ರತಿಪಾದಿಸುತ್ತಾರೆ. ಹೀಗಾಗಿಯೇ ಇತಿಹಾಸದಲ್ಲಿ ಕಪ್ಪು ಚುಕ್ಕೆಗಳು ಉಂಟಾಗುವುದು.

ಚರಿತ್ರೆಯ ಕೇಸರೀಕರಣದ ಮುಖ್ಯ ಗುರಿ

 • ಇತಿಹಾಸವನ್ನು ಏಕಾಕೃತಿಗೆ ಒಳಪಡಿಸುವುದು.
 • ಇತಿಹಾಸದ ಏಕಮುಖ ಸಾಕ್ಷಿಗಳನ್ನು ಪವಿತ್ರೀಕರಿಸುವುದು.
 • ಇತಿಹಾಸದ ಯಾಜಮಾನ್ಯವನ್ನು ಸ್ಥಾಪಿಸುವುದು.
 • ಇತಿಹಾಸದ ಪೂರ್ವಾಗ್ರಹಗಳನ್ನು ಬಲಪಡಿಸಿ ಸ್ವರೂಪವನ್ನು ಸಾರುವುದು.
 • ಇತಿಹಾಸದ ಅಸತ್ಯವನ್ನು ಸಮರ್ಥಿಸಿ ಮತೀಯಗೊಳಿಸುವುದು.
 • ದೇಶದ ಮೇಲೆ ಧಾರ್ಮಿಕ ಒಡೆತನವನ್ನು ಚಲಾಯಿಸುವುದು.
 • ಪ್ರಭುತ್ವದ ಪರವಾಗಿ ನಿರೂಪಿಸುವುದು.
 • ಬಹುರೂಪಿ ಸಾಕ್ಷಿಪ್ರಜ್ಞೆಯನ್ನು ನಾಶಪಡಿಸುವುದು.
 • ಜಾತಿ ಪದ್ಧತಿಯನ್ನು ಪುನರ್ ನವೀಕರಿಸುವುದು.
 • ವರ್ತಮಾನದ ರಾಜಕಾರಣವನ್ನು ಹಿಂದೂಕರಣಗೊಳಿಸುವುದು.
 • ಬಹುಸಂಖ್ಯಾತರ ಚರಿತ್ರೆಯನ್ನು ಬ್ರಾಹ್ಮಣ್ಯದ ಹಂಗಿಗೆ ಒಳಪಡಿಸುವುದು.
 • ಅನ್ಯ ಧರ್ಮೀಯರ ಅಸ್ತಿತ್ವಕ್ಕೆ ಆತಂಕ ಒಡ್ಡುವುದು.
 • ಮೇಲು ಕೀಳಿನ ಭಾವನೆಗಳನ್ನು ಉಳಿಸಿಕೊಳ್ಳುವಂತೆ ಚರಿತ್ರೆಯನ್ನು ತಿರುಚುವುದು.
 • ಜನಾಂಗದ್ವೇಷವನ್ನು ಬೆಳೆಸುವುದು.

ಹೀಗೆ ಇಂತಹ ಭಾವನೆಗಳನ್ನು ಸಾರ್ವತ್ರೀಕರಿಸುವ ಸಲುವಾಗಿಯೇ ಚರಿತ್ರೆಯಲ್ಲಿ ಅಪವ್ಯಾಖ್ಯಾನ ಅಪಸಮರ್ಥನೆಗಳನ್ನು ಮಾಡುವ ಚರಿತ್ರೆಕಾರರು ಈಗಲೂ ನಮ್ಮ ನಡುವೆಯೇ ಇದ್ದಾರೆ. ಇದರಿಂದ ನಮ್ಮ ಗತಕಾಲವನ್ನು ವರ್ತಮಾನದಲ್ಲಿ ಹೊಂದಿಸಿಕೊಳ್ಳು ವುದು ತುಂಬ ಜಟಿಲವಾಗಿ ಇತಿಹಾಸವನ್ನು ಖಾಸಗೀಕರಿಸಿ ಅದನ್ನು ಜಾತಿ ಮತ್ತು ಧರ್ಮಗಳ ಪ್ರಕಾರ ಹಂಚಿಕೊಳ್ಳುವಂತೆ ಮಾಡಲಾಗುತ್ತಿದೆ. ಇದರಿಂದಾಗಿ ಭಾರತೀಯ ಇತಿಹಾಸವನ್ನು ನೋಡುವ ಅರಿಯುವ ಪರಿಯೆ ವಿಪರೀತ ಪೂರ್ವಾಗ್ರಹ ಹಾಗೂ ಸಂಕುಚಿತ ಭಾವನೆಗಳಿಂದ ಬಿಡಿಸಿಕೊಳ್ಳಲಾಗದಂತಿದೆ. ಚರಿತ್ರೆಯನ್ನು ನಾವು ಯಾಕಾಗಿ ನಿರೂಪಿಸಬೇಕು, ಚರಿತ್ರೆ ಮುಖ್ಯ ಗುರಿ ಯಾವುದು, ಯಾರಿಗಾಗಿ ಚರಿತ್ರೆ ಬೇಕು, ಯಾರ ಚರಿತ್ರೆ ಮುಖ್ಯ, ಎಂತಹ ಚರಿತ್ರೆಯನ್ನು ಬೆಳೆಸಬೇಕು, ಯಾರು ಚರಿತ್ರೆಯನ್ನು ನಿರೂಪಿಸಬೇಕು ಎಂಬ ಪ್ರಾಥಮಿಕ ಪ್ರಶ್ನೆಗಳಿಗೆ ಅಖಂಡವಾದ ಉತ್ತರಗಳು ಸಿಗುವ ವೈಯಕ್ತಿಕ ಉತ್ತರಗಳೇ ಎದುರಾಗುತ್ತಿರುವುದು ವಿಷಾದನೀಯ.

ಚರಿತ್ರೆಯನ್ನು ನಾವು ನಿರೂಪಿಸಬೇಕಾಗಿರುವುದು ಗತಕಾಲವನ್ನು ಎಲ್ಲರ ಭವಿಷ್ಯದ ಕಾರಣಕ್ಕಾಗಿ ವರ್ತಮಾನೀಕರಿಸಲು, ಅಂದಿನ ಗತಕಾಲದ ಪೂರ್ವಾಗ್ರಹಗಳನ್ನು ವರ್ತಮಾನದಿಂದ ಸರಿಪಡಿಸಿಕೊಳ್ಳಲು, ಪೂರ್ವದ ಅನುಭವಗಳಿಂದ ವರ್ತಮಾನದ ಸಮಾಜವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಲು. ಹಿಂದಿನವರ ಲೋಪಗಳಿಂದ ಮುಂದಿನವರ ಲೋಪ ಗಳನ್ನು ತಪ್ಪಿಸಲು. ಅಂದರೆ ಚರಿತ್ರೆಯ ನೆನ್ನೆಯವರ ವೈಫಲ್ಯಗಳ ಪಾಠದಿಂದ ನಾಳಿನವರ ನೈತಿಕ ಪಾಠವನ್ನು ಹೊಸದಾಗಿ ಬರೆದುಕೊಳ್ಳಲು ಚರಿತ್ರೆಯನ್ನು ರೂಪಿಸಬೇಕಾಗುತ್ತದೆ. ಮುಖ್ಯವಾಗಿ ಮನುಷ್ಯ ಸಮಾಜದ ಅನಂತ ಹುಡುಕಾಟಗಳ ಜಾಡನ್ನು ಕಂಡುಕೊಳ್ಳಲು ಹಾಗೂ ಆ ಮೂಲಕ ಅಸ್ತಿತ್ವದ ಬೇರೆ ಬೇರೆ ಸಾಧ್ಯತೆಗಳನ್ನು ತಿಳಿಯಲು ಚರಿತ್ರೆಯನ್ನು ನಿರೂಪಿಸುತ್ತಲೇ ಇರಬೇಕಾಗುತ್ತದೆ. ಆದ್ದರಿಂದಲೇ ಚರಿತ್ರೆಯನ್ನು ನಿರಂತರವಾಗಿ ಚಲನಶೀಲಗೊಳಿಸಿ ಆಯಾ ಕಾಲದ ಅನುಭವಗಳನ್ನು ಅದರ ಜೊತೆ ವಿಲೀನಗೊಳಿಸುತ್ತಲೇ ಸಾಗಬೇಕಾಗುತ್ತದೆ. ನಮ್ಮ ಅಸ್ತಿತ್ವವನ್ನು ಸ್ಥಾಪಿಸುವುದೇ ಚರಿತ್ರೆಯಾದುದರಿಂದ ಅದರ ಬಗೆಗೆ ಯಾವತ್ತೂ ಕೂಡ ಚರಿತ್ರೆಕಾರನು ಅತ್ಯಂತ ಜಾಗೃತನಾಗಿ ವ್ಯವಹರಿಸಬೇಕಾಗುತ್ತದೆ. ಚರಿತ್ರೆಯ ಮುಖ್ಯ ಗುರಿ ಅಖಂಡ ಮಾನವತ್ವವನ್ನು ಬಲಪಡಿಸುವುದೇ ಆಗಿದ್ದು ಅದು ನಾಗರಿಕತೆಯ ಮಾನವ ಸಾಧ್ಯತೆಗಳನ್ನು ಬೆಳೆಸಬೇಕಾಗುತ್ತದೆ. ಇಂತಹ ಚರಿತ್ರೆಯೆ ಎಲ್ಲರಿಗೂ ಬೇಕಾಗಿರುವುವಂತದ್ದು. ಈ ಬಗೆಯ ಚಾರಿತ್ರಿಕ ನಿರೂಪಣೆಗಳು ಇತಿಹಾಸದ ಗತವನ್ನು ಮತ್ತೆ ಮತ್ತೆ ಕತ್ತಲ ಕಣ್ಣಿಂದಲೇ ವ್ಯಾಖ್ಯಾನಿಸುವುದಕ್ಕೆ ಮುಂದಾಗುತ್ತಲೆ ಇರುತ್ತವೆ. ಚರಿತ್ರೆ ಯನ್ನು ಕೇಸರೀಕರಣಗೊಳಿಸುವುದರಿಂದ ಅನೇಕ ಬಗೆಯ ಸಮಸ್ಯೆಗಳು ಎದುರಾಗುತ್ತವೆ. ಅಂತಹ ಕೆಲ ಸಮಸ್ಯೆಗಳನ್ನು ಇಲ್ಲಿ ಪಟ್ಟಿ ಮಾಡಬಹುದಾದು.

 • ಚರಿತ್ರೆಯ ಸೃಜನಶೀಲ ಗ್ರಹಿಕೆ ಹಾಗೂ ಸ್ವಾತಂತ್ರ್ಯವು ನಾಶವಾಗುತ್ತದೆ.
 • ಕುರೂಪವನ್ನೇ ಪ್ರಧಾನಮಾಡಿ ಪೂರ್ವಾಗ್ರಹ ಮತ್ತು ತಾರತಮ್ಯಗಳನ್ನೇ ಬಿತ್ತುತ್ತದೆ.  ಬಿತ್ತಿ ಬೆಳೆದು
 • ಚರಿತ್ರೆಯ ಸಹಜ ಇತಿಹಾಸವನ್ನು ತಪ್ಪಿಸಿದಂತಾಗುತ್ತದೆ.
 • ಚರಿತ್ರೆಯ ಅಖಂಡತೆಯು ಭಗ್ನಗೊಂಡು ವಿಘಟಿತ ಪ್ರಜ್ಞೆ ಬೆಳೆಯುತ್ತದೆ.
 • ಸುಳ್ಳು ಚರಿತ್ರೆಗೆ ಬೇಕಾದ ಹುಸಿ ಆಧಾರಗಳು ಬೆಳೆಯಲು ಅವಕಾಶವಾಗುತ್ತದೆ.
 • ಚರಿತ್ರೆಯ ಬಗ್ಗೆಯು ಜನಸಾಮಾನ್ಯರಲ್ಲಿ ಅವಿಶ್ವಾಸ ಉಂಟಾಗುತ್ತದೆ.
 • ಜಾತಿವಾದಿ ಇತಿಹಾಸಕ್ಕೆ ಅವಕಾಶವಾಗುತ್ತದೆ.
 • ಚರಿತ್ರೆಯನ್ನು ಮತೀಯಗೊಳಿಸಿದಂತಾಗುತ್ತದೆ.
 • ಚರಿತ್ರೆಯ ಮೂಲಕವೂ ಹಿಂಸೆಯನ್ನು ಉದ್ದೀಪಿಸಿದಂತಾಗುತ್ತದೆ.
 • ಗತಕಾಲದ ದುರುಪಯೋಗವಾಗುತ್ತದೆ.
 • ಭಾವನಾತ್ಮಕ ಗತ ಸಂಬಂಧಗಳನ್ನು ಹೀನ ರಾಜಕಾರಣಕ್ಕೆ ಬಲಿಕೊಟ್ಟಂತಾಗುತ್ತದೆ.
 • ದೇಶದ ಆತ್ಮಕಥನವಾದ ಚರಿತ್ರೆಯನ್ನೇ ವಿಕೃತಗೊಳಿಸಿದಂತಾಗುತ್ತದೆ.

ಹೀಗೆ ಹತ್ತಾರು ರೀತಿಗಳಿಂದ ಚರಿತ್ರೆಯ ಅಪರಾಧಗಳನ್ನು ಕೇಸರೀಕರಿಣ ಪ್ರಕ್ರಿಯೆಯು ಮಾಡಬಲ್ಲದು. ಚರಿತ್ರೆಯ ನೆನಪುಗಳೇ ಬೇಡ ಎಂಬ ಅಸಹನೀಯತೆಯನ್ನು ಕೂಡ ಅಂತಹ ಚರಿತ್ರೆಕಾರರ ಬರಹಗಳು ಸೃಷ್ಟಿಸಬಲ್ಲವು. ಆದರೆ ಇಂತಹ ಅಸಹನೀಯತೆಯ ನಡುವೆಯೇ ಚರಿತ್ರೆಯ ಪ್ರತಿರೋಧ ಗುಣವು ಹುಟ್ಟಿಕೊಳ್ಳುತ್ತದೆ. ಅದು ಚರಿತ್ರೆಯ ಪರ್ಯಾಯ ಕ್ರಮ ಆ ಬಗೆಯ ಪರ್ಯಾಯ ನಿರೂಪಣೆಗಳು ಇತಿಹಾಸವನ್ನು ವಿಸ್ತರಿಸುತ್ತವೆ.

ಚರಿತ್ರೆಯ ಎಡಪಂಥೀಯ ಧೋರಣೆ

ಕೇಸರೀಕರಣಕ್ಕೆ ವಿರುದ್ಧವಾದುದು ಎಡಪಂಥೀಯ ಧೋರಣೆ. ಹಿಂದೂಧರ್ಮದ ಹಂಗಿನಿಂದ ಚರಿತ್ರೆಯನ್ನು ಬರೆಯುವ ಅವಶ್ಯಕತೆಯಿಲ್ಲ ಎನ್ನುವ ಧೋರಣೆಯು ಮಾರ್ಕ್ಸ್ ವಾದಿ ನೆಲೆಯಿಂದ ಬಂದುದು. ಎಡಪಂಥೀಯ ಎಂದರೆ ಚರಿತ್ರೆಯನ್ನು ಅಪ್ಪಟ ಮಾನವ ಸಾಧ್ಯತೆಗಳಿಂದ ಅರಿಯುವುದು ಮತ್ತು ಸಮರ್ಥಿಸುವುದು. ಬಲಪಂಥೀಯ ಆಲೋಚನೆಗಳ ಮಿತಿಯನ್ನು ಮುರಿಯುವುದು ಎಡಪಂಥೀಯರ ಗುಣ. ಭಾರತೀಯ ಚರಿತ್ರೆಯನ್ನು ಬಡವರ, ರೈತರ, ಮಹಿಳೆಯರ, ಅಲೆಮಾರಿ ಆದಿವಾಸಿಗಳ ಒಟ್ಟಿನಲ್ಲಿ ತಳದಲ್ಲಿ ತುಳಿಯಲ್ಪಟ್ಟವರ ಪರವಾದ ಇತಿಹಾಸವನ್ನು ಸಮರ್ಥಿಸುವುದು ಮಾರ್ಕ್ಸ್‌ವಾದಿ ಇತಿಹಾಸಕಾರರ ಹಿರಿಮೆ. ನ್ಯಾಯ ನಿಷ್ಠೂರ ವ್ಯಾಖ್ಯಾನವನ್ನು ಎಡಪಂಥೀಕರಣದಿಂದ ಮಾಡಲಾಗುವುದು. ಇತಿಹಾಸವನ್ನು ಪ್ರಗತಿಪರವಾಗಿ ಕ್ರಾಂತಿಕಾರಕವಾಗಿ ವರ್ಗ ಸಂಘರ್ಷದ ಮಾರ್ಕ್ಸ್‌ವಾದಿ ಪರಿಕಲ್ಪನೆ ಗಳಿಂದ ಪರಿಶೀಲಿಸುವುದು ಹಾಗೂ ಅದನ್ನೇ ಬಲಪಡಿಸುವುದು ಇತಿಹಾಸದ ಎಡಪಂಥೀಕರಣವೆನಿಸುತ್ತದೆ. ಇಂತಹ ನಿರೂಪಣೆಯು ಚರಿತ್ರೆಯು ಅಲಂಕಾರಿಕವಾಗಿ ಹೊದ್ದುಕೊಂಡ ಮುಸುಕನ್ನು ಅನಾವರಣಗೊಳಿಸುತ್ತದೆ. ಅಂಚಿನವರ ಬದುಕಿನ ಬಗ್ಗೆ ಇತಿಹಾಸವು ಏಕೆ ಮೌನವಹಿಸಿದೆ ಎಂಬ ಪ್ರಶ್ನೆಗಳನ್ನು ಎತ್ತಿ ಸಾಮ್ರಾಜ್ಯಗಳ ಗರ್ವಕ್ಕೆ ಪೆಟ್ಟುಕೊಟ್ಟು ಬಡವರ ಪರವಾದ ನ್ಯಾಯವನ್ನು ಸಮರ್ಥಿಸುತ್ತದೆ.

ಇತಿಹಾಸದ ಎಡಪಂಥೀಕರಣವು ಬೌದ್ದಿಕವಾದ ಸಂಘರ್ಷವನ್ನು ಅತ್ಯಂತ ಸಮರ್ಥವಾಗಿ ಮಂಡಿಸುತ್ತದೆ. ಅದಕ್ಕೆ ತಕ್ಕುದಾದ ಸಾಕ್ಷ್ಯಾಧಾರಗಳನ್ನು ಆಯ್ದುಕೊಂಡು ಕೇಸರೀಕರಣದ ಒಳಗಿರುವ ಮತೀಯತೆಯನ್ನು ತೋರುತ್ತದೆ. ಮೂಲಭೂತವಾದಿಗಳ ಹುನ್ನಾರವನ್ನು ಬಯಲು ಮಾಡಿ ಚರಿತ್ರೆಯನ್ನು ಯಾವತ್ತೂ ಸಂರಕ್ಷಿಸಿ ಅದನ್ನು ಜನತೆಯ ಕಡೆ ಕೊಂಡೊಯ್ಯುವ ಕೆಲಸ ಮಾಡುತ್ತದೆ. ಮುಖ್ಯವಾಗಿ ಇತಿಹಾಸದ ಪೂರ್ವಾಗ್ರಹಗಳನ್ನು ನಿವಾರಿಸುತ್ತದೆ. ಎಲ್ಲೆಲ್ಲಿ ಇತಿಹಾಸವನ್ನು ತಪ್ಪಾಗಿ ದಾಖಲಿಸಲಾಗಿದೆಯೋ ಅಲ್ಲೆಲ್ಲ ಸರಿಪಡಿಸುವ ಅದಕ್ಕೆ ಸಮರ್ಥವಾದ ಪ್ರತಿವಾದವನ್ನು ಹೂಡುವ ನಿಷ್ಠೂರ ಕರ್ತವ್ಯವನ್ನೂ ಪಾಲಿಸುತ್ತದೆ. ಬಹು ಪಾಲು ಎಡಪಂಥೀಕರಣವು ಕೇಸರೀಕರಣದ ವಿರುದ್ಧ ಪ್ರತಿಕ್ರಿಯಾತ್ಮಕ ಕಾರ್ಯಾಚರಣೆ ಯಲ್ಲೇ ತನ್ನೆಲ್ಲಾ ಶಕ್ತಿಯನ್ನು ವಿನಿಯೋಗಿಸುತ್ತಿರುತ್ತದೆ. ಮಾರ್ಕ್ಸ್‌ವಾದಿ ಚರಿತ್ರೆಕಾರರ ದೊಡ್ಡ ಪಡೆಯೇ ಇಂದು ಭಾರತದ ಉದ್ದಕ್ಕೂ ಚರಿತ್ರೆಯನ್ನು ಜನತೆಯ ಅನುಭವಗಳಿಂದ ಪುನರ್ರಚಿಸಲು ತೊಡಗುತ್ತಿದೆ. ಅದರಲ್ಲೂ ಮತೀಯವಾದಿಗಳ ವಿರುದ್ಧ ಮಾರ್ಕ್ಸ್‌ವಾದಿ ಇತಿಹಾಸಕಾರರು ಬೌದ್ದಿಕ ದಂಗೆಯನ್ನೇ ಸಾರಿದ್ದಾರೆ. ಅಂತವರ ದೊಡ್ಡ ಪಟ್ಟಿಯು ವಿಶ್ವಾಸ ವನ್ನು ಹೆಚ್ಚಿಸುತ್ತದೆ.