ಚರಿತ್ರೆಯ ನಿರೂಪಣೆಗಳನ್ನು ವಸ್ತುನಿಷ್ಠವಾಗಿ, ಕಾಲಬದ್ಧವಾಗಿ, ಸಾಕ್ಷ್ಯಾಧಾರಗಳ ಮೂಲಕ ನಿರೂಪಿಸುವುದು ಒಂದು ದೊಡ್ಡ ಪರಿಶ್ರಮ. ಆದರೆ ಈ ಮಾದರಿ ಸೃಜನ ಶೀಲತೆಯನ್ನು ಸ್ವೀಕರಿಸಲಾರದು. ವರ್ತಮಾನದ ಸಾಮಾಜಿಕ ಭಾಷೆಯ ವೈವಿಧ್ಯವನ್ನು ಅನ್ವಯಿಸಿಕೊಳ್ಳಲಾರದು. ಚರಿತ್ರೆಯ ಅವ್ಯಕ್ತ ಸಂವೇದನೆಯನ್ನು ಹುಡುಕುವುದೆಂದರೆ ಹೆಚ್ಚು ಸ್ವಾತಂತ್ರ್ಯವನ್ನು ರೂಪಿಸಿಕೊಂಡಂತೆ. ನಿರ್ವಚನದ ಸ್ವಾತಂತ್ರ್ಯವನ್ನು ನಿರ್ದಿಷ್ಟಗೊಳಿಸುವ ಶಿಷ್ಟಚರಿತ್ರೆಯ ಕ್ರಮಗಳು ಅಲಕ್ಷಿತ ಸಮಾಜದವರ ಮೂಲ ಪ್ರಶ್ನೆಗಳನ್ನೇ ತಿರಸ್ಕರಿಸಿ ಬಿಡುತ್ತವೆ.  ಇತಿಹಾಸದ ತತ್ವಶಾಸ್ತ್ರೀಯ ನೆಲೆಯಲ್ಲಿ ಮಾತ್ರ ಅಖಂಡ ಮಾನವ ಪ್ರಜ್ಞೆಯನ್ನು ಹುಡುಕಿದರೆ ಸಾಲದು. ನಮ್ಮ ಅಸ್ತಿತ್ವವನ್ನು ನಿರ್ಧರಿಸಿರುವ ಸಮಾಜದ ಅಧಿಕಾರದ ಕ್ರಮಗಳಲ್ಲಿ ಒಂದಿಷ್ಟಾದರೂ ಮಾನವ ಮೌಲ್ಯಗಳ ಬೆಳಕು ಇರಬೇಕು. ಚರಿತ್ರೆಯಲ್ಲಿ ನಮ್ಮ ವಿಳಾಸವೇ ಇಲ್ಲ. ನಮ್ಮ ಎಲ್ಲ ಚಹರೆಗಳು ನಾಶವಾಗಿವೆ. ನಮ್ಮ ಮೂಲವೇ ಅಳಿಸಿಹೋಗಿದೆ. ನಮ್ಮ ಪರವಾದ ದಾಖಲೆಗಳು ತಿರುಚಲ್ಪಟ್ಟಿವೆ. ನಮ್ಮ ಸೇವೆಗಳಿಗೆ ಯಾವ ಉಲ್ಲೇಖಗಳೂ ಇಲ್ಲ. ನಮಗೆ ಇತಿಹಾಸದಲ್ಲಿ ಯಾವ ನ್ಯಾಯವೂ ಸಿಕ್ಕಿಲ್ಲ. ಸಾಕ್ಷ್ಯವಿಲ್ಲದ ನಮ್ಮ ಆತ್ಮಸಾಕ್ಷಿಯನ್ನೂ ವಿರೂಪಗೊಳಿಸಿದೆ. ಹೀಗೆ ಈ ಎಲ್ಲ ಅಸ್ತಿತ್ವವಾದಿ ಪ್ರಲಾಪಗಳೆಲ್ಲ ಶಿಷ್ಟಚರಿತ್ರೆಗೆ ಕೇವಲ ಭಾವನಾತ್ಮಕವಾಗಿ ಕಾಣುತ್ತವೆ. ಗತವನ್ನು ವರ್ತಮಾನದಿಂದ ನೋಡುವ ಯಾರಿಗಾದರೂ ಚರಿತ್ರೆಯ ನಿಜವಾದ ಸಂವೇದನೆಯಾದ ಭಾವನಾತ್ಮಕ ನಂಟನ್ನು ನಿರಾಕರಿಸಲಾಗದು. ಮಾನವ ಸಂಬಂಧಗಳನ್ನು ಅರ್ಥಪೂರ್ಣವಾಗಿ ದಾಖಲಿಸುವ, ಅದರೊಂದಿಗೆ ಸಂವಾದಿಸುವ, ಬೆಳೆಸುವ, ಉಳಿಸುವ ಗುಣವಿದ್ದರೆ ಮಾತ್ರ ಚರಿತ್ರೆಯ ನಿರೂಪಣೆ ಚೈತನ್ಯಶೀಲವಾಗುವುದು. ಎಲ್ಲರ ಆಶಯಗಳು ಅಂತಿಮವಾಗಿ ಅರ್ಥಪೂರ್ಣ ಮಾನವ ವಿಕಾಸದ ಕಡೆಗೇ ಚಲಿಸಬೇಕು. ಚರಿತ್ರೆ ಅದರ ಬೇರಿನಿಂದಲೆ ತನ್ನ ವರ್ತಮಾನದ ಜೊತೆ ಸ್ಪಂದಿಸಬೇಕು.

ಚರಿತ್ರೆಯನ್ನು ವಸಾಹತುಶಾಹಿ ಪ್ರಜ್ಞೆಯಿಂದ ಓದುವುದು, ಹಾಗೆಯೇ ಬೋಧಿಸುವುದು, ಬರೆಯುವುದು, ವಿಶ್ಲೇಷಿಸುವುದು ಒಂದು ಸಂಪ್ರದಾಯದಂತೆ ಸಾಗಿ ಬಂದಿದೆ. ಮಾರ್ಕ್ಸ್‌ವಾದಿ ಚಿಂತನೆ ಸಾಕಷ್ಟು ಈ ಸಂಪ್ರದಾಯಕ್ಕೆ ಪೆಟ್ಟುಕೊಟ್ಟಿರುವುದು ನಿಜವಿದ್ದರೂ ಚರಿತ್ರೆಯ ಹೊಸ ನಿರ್ವಚನಗಳಿಗೆ ಅದು ಕೂಡ ಅಪೂರ್ಣ ಕಥನವೇ ಆಗಿದೆ. ಚರಿತ್ರೆಯ ವಿಷಯವೇ ಭಾರತದಲ್ಲಿ ತುಂಬ ತಾರತಮ್ಯದಿಂದ ದಾಖಲಾಗಿದೆ. ಎಷ್ಟೋ ಅಪವ್ಯಾಖ್ಯಾನಗಳು ಚರಿತ್ರೆಗೆ ಮಸಿ ಬಳಿದಿವೆ. ಜಾತಿವ್ಯವಸ್ಥೆಯ ಲಿಂಗತಾರತಮ್ಯದ ಅಪರಾಧಗಳೇ ಹಿಂದೂ ಸಾಮ್ರಾಜ್ಯಶಾಹಿ ಇತಿಹಾಸದ ಮೌಲ್ಯಗಳಾಗಿ ದಾಖಲಾಗಿಬಿಟ್ಟಿವೆ. ವಸಾಹತುಶಾಹಿ ಅರ್ಥಜಗತ್ತಿನ ಯಜಮಾನಿಕೆ ಕೂಡ ಭಾರತೀಯ ಇತಿಹಾಸವನ್ನು ಏಕಾಕೃತಿಯ ನೋಟಕ್ಕೆ ಒಳಪಡಿಸಿದೆ. ಚರಿತ್ರೆಯನ್ನು ನಾವು ನಮ್ಮ ನಮ್ಮ ತತ್ವಾಶಯಗಳಲ್ಲಿ ದಾಖಲಿಸುವಾಗಲೆಲ್ಲ ನಮ್ಮ ನಮ್ಮ ತತ್ವಗಳ ವಿಸ್ತಾರ ಎಷ್ಟಿದೆಯೋ ಅಷ್ಟರವರೆಗೆ ಮಾತ್ರ ಇತಿಹಾಸವನ್ನು ಹುಡುಕಿಕೊಳ್ಳುತ್ತೇವೆಯೇ ಹೊರತು ಅದರಾಚೆಗಿನ ಅನಂತ ಸಾಧ್ಯತೆಗಳಿಗೆ ಹೋಗುವುದಿಲ್ಲ. ಚರಿತ್ರೆಯ ಉತ್ಖನನವೇ ಭಾಗಶಃ ಹಂತಹಂತವಾಗಿ ಮನುಷ್ಯನ ನಿರ್ದಿಷ್ಟ ಆಯ್ಕೆಗಳಿಗೆ ದಾರಿ ತೋರು ವಂತಿದೆ. ಚರಿತ್ರೆಯು ಭೌತಿಕವಾದ ಸಾಕ್ಷ್ಯದಿಂದ ತನ್ನನ್ನು ಸ್ಥಾಪಿಸಿಕೊಳ್ಳುವುದೇ ಹೀಗಾಗಲು ಕಾರಣ.

ಚರಿತ್ರೆಯ ಸುಪ್ತಪ್ರಜ್ಞೆಯೇ ಅಖಂಡ ಮಾನವರ ಬಹುದೊಡ್ಡ ಆಕರ ಕೇಂದ್ರ. ಭೌತಿಕಸಾಕ್ಷ್ಯಕ್ಕೆ ಅಂಟಿಕೊಂಡವರು ಚರಿತ್ರೆಯ ಅನಂತತೆಯನ್ನು ಕಿರಿದು ಮಾಡಿಬಿಟ್ಟಿದ್ದಾರೆ. ಮನಸ್ಸನ್ನು ಉತ್ಖನನ ಮಾಡುವ ವಿಧಾನಗಳು ಚರಿತ್ರೆಯ ಆಳವನ್ನು ಪತ್ತೆ ಮಾಡಬಲ್ಲವು. ಲಕ್ಷಾಂತರ ವರ್ಷಗಳ ಹಿಂದಿನ  ಚರಿತ್ರೆಯನ್ನು ತಿಳಿಯುವುದೇ ನಿಜವಾದ ಇತಿಹಾಸ. ಕೇವಲ ನಾಲ್ಕೈದು ಸಾವಿರ ವರ್ಷಗಳ ಲಿಖಿತ ಇತಿಹಾಸವನ್ನು ತಿಳಿದು ಈ ಕಾಲದ ಮನುಷ್ಯ ಸಾಧಿಸ ಬೇಕಾದ್ದು ಏನೂ ಇಲ್ಲ. ಮನುಷ್ಯರ ನಡವಳಿಕೆಯಲ್ಲಿ ಈ ನಾಲ್ಕೈದು ಸಾವಿರ ವರ್ಷಗಳು ಕೇವಲ ನಿನ್ನೆ ಮೊನ್ನೆಗೆ ಸಮ. ಮನುಷ್ಯರ ನಡವಳಿಕೆಯಲ್ಲೇ ಲಕ್ಷಾಂತರ ವರ್ಷಗಳು ಅವ್ಯಕ್ತ ಧಾಟಿಯಲ್ಲೇ ವ್ಯಕ್ತವಾಗುತ್ತಿರುತ್ತವೆ. ಆತನ ಒಂದು ಅತಿಮಾನುಷ ಕಲ್ಪನೆ ನಂಬಿಕೆಗೆ ಲಕ್ಷಾಂತರ ವರ್ಷಗಳ ಜೈವಿಕ ಅನುಭವವಿರುತ್ತದೆ. ಚರಿತ್ರೆಗೆ ಜೈವಿಕ ನೆನಪಿನ ಆಧಾರಗಳನ್ನು ಒದಗಿಸುವುದೇ ಮನುಷ್ಯರ ನಡವಳಿಕೆ, ವರ್ತನೆ, ಸ್ವಭಾವ, ನಂಬಿಕೆ, ಆಚಾರ ವಿಚಾರ, ಸಂಪ್ರದಾಯಗಳು. ಪ್ರಭುತ್ವಕೇಂದ್ರಿತ ಚರಿತ್ರೆಗೆ ಸಿಕ್ಕಿರುವಷ್ಟು ಅವಕಾಶ ಬೇರಾವ ಮಾನವ ಇತಿಹಾಸದ ಸಂಗತಿಗಳಿಗೂ ಸಿಕ್ಕಿಲ್ಲ. ಮನುಷ್ಯರ ವರ್ತನೆಯ ಚರಿತ್ರೆ ಬಗ್ಗೆ ಗಮನವೇ ಇಲ್ಲ. ನಿತ್ಯವೂ ಆಹಾರ ಸೇವಿಸಿಯೇ ಬದುಕುವ ಮನುಷ್ಯ ತನ್ನ ಆಹಾರದ ಚರಿತ್ರೆಯನ್ನೇ ತಕ್ಕುದಾಗಿ ಕಂಡುಕೊಂಡಿಲ್ಲ. ಲಕ್ಷಾಂತರ ವರ್ಷಗಳ ಹಿಂದಿನ ಜೀವಜಾಲದ ಯಾವ ನೆನಪೂ ಇತಿಹಾಸದ ಪುಟಗಳಲ್ಲಿ ಸ್ಪಷ್ಟವಾಗಿ ದಾಖಲಾಗಿಲ್ಲ. ಪರಮ ಗತಕಾಲವನ್ನು ತಿಳಿದರೆ ನಾಳಿನ ಕಾಲವನ್ನು ಕೂಡ ತಿಳಿಯಲು ಸಾಧ್ಯ. ಆಹಾರದ ಒಂದೇ ಒಂದು ವಿಚಾರದಿಂದ ನಾಗರಿಕತೆಗಳು ಯಾವ ಹಂತ ತಲುಪಿದವು, ಆಹಾರಕ್ಕೂ ಸಮುದಾಯಗಳ ವಿಕಾಸಕ್ಕೂ ಏನು ಸಂಬಂಧ, ಸಸ್ಯಸಂಪತ್ತಿನಿಂದ ಮಾನವ ಪ್ರಜ್ಞೆಯಲ್ಲಾದ ಪಲ್ಲಟಗಳೇನು ಎಂಬ ಪ್ರಾಥಮಿಕ ವಿವೇಕ ವಿಲ್ಲದೆ ವಿಜಯನಗರ ಸಾಮ್ರಾಜ್ಯದ ಮುತ್ತುರತ್ನಗಳ ಬೀದಿಯ ಬಗ್ಗೆ ಮಾತನಾಡುವುದು ಯೋಗ್ಯವಲ್ಲ.

ಮೆದುಳಿನ ವಿಕಾಸದಲ್ಲಾದ ಪಲ್ಲಟಗಳು ಸಾಮ್ರಾಜ್ಯಗಳಿಂದಲ್ಲ. ನಿಸರ್ಗದಿಂದ ಅರಿವಿನ ವಿಕಾಸ ಸಾಧ್ಯವಾದದ್ದು. ಪಶುಪಾಲಕ ಸಮಾಜದ ಕಾಲವೂ ಬಹಳ ಕಡಿಮೆ ಅವಧಿಯದು. ಕಾಲಕ್ಕೂ ಒಂದು ಚರಿತ್ರೆ ಇದೆ. ಕಾಲದ ಆವರ್ತಗಳು ವಿಶ್ವದ ಅಸ್ತಿತ್ವಕ್ಕೆ ಕಾರಣವಾಗಿವೆ. ಭೌತವಿಜ್ಞಾನದಲ್ಲಿರುವ ಅರಿವು ಚರಿತ್ರೆಯ ಕಥನದಲ್ಲಿ ಈಗಲೂ ಬಂದು ಸೇರಿಕೊಂಡಿಲ್ಲ. ಜನಪದರ ಪುರಾಣಗಳಾಗಲಿ, ಕಾಲದ ಪ್ರಜ್ಞೆಯಾಗಲಿ ಗ್ರೀಕ್ ತತ್ವಜ್ಞಾನಿಗಳ ಕಾಲಜ್ಞಾನ ವಾಗಲಿ, ವೈದಿಕ ಚಿಂತನೆಯ ಕಾಲನಿರ್ಣಯವೇ ಆಗಲಿ ಕೇವಲ ಅಂದಾಜು ಲೆಕ್ಕಾಚಾರವಲ್ಲ. ಚರಿತ್ರೆಕಾರರು ಕಾಲದ ಸಾಕ್ಷ್ಯವನ್ನು ಅಷ್ಟೊಂದು ಪ್ರತಿಪಾದಿಸುವವರು ಕಾಲದ ಚಲನೆಯನ್ನು ಭೌತಿಕ ಆಕೃತಿಗಳಿಗೆ ಕಟ್ಟಿಹಾಕಿ ಬಿಟ್ಟಿರುತ್ತಾರೆ. ವಾಸ್ತವದಲ್ಲಿ ಕಾಲವು ಭೌತಿಕ ಹಾಗು ಆಭೌತಿಕ ಎಂಬ ಎರಡೂ ಅರ್ಥನೆಲೆಗಳನ್ನು ಮೀರಿದ್ದಾಗಿದೆ. ಮೀರಿದ ಇಂತಹ ಕಾಲದ ಗುಣ ನಮ್ಮ ಮೆದುಳಿಗಿದೆ. ಮೆದುಳಿನ ರಚನೆಗೂ, ಸೌರವ್ಯೂಹದ ಚಲನೆಗೂ ಅದರ ಚಲನಶೀಲತೆಗೂ ಅಂತೆಯೇ ಭೂಮಿಯ ಗುಣಕ್ಕೂ ನೇರ ಸಂಬಂಧವಿದೆ. ಅಂದರೆ ಕಾಲದ ಖಗೋಳ ಸ್ವರೂಪಕ್ಕೂ ನಮ್ಮ ಮೆದುಳಿನ ಸುಪ್ತಪ್ರಜ್ಞೆಯ ಗುಣಕ್ಕೂ ಅಂತರ್ಗತ ಸಂಬಂಧವಿದ್ದು ಆ ಮೂಲಕವೇ ಭೌತಜಗತ್ತಿನ ಆಚೆಗಿನ ಲೋಕದ ಕಾಲದ ಸ್ವರೂಪವನ್ನು ಗ್ರಹಿಸಲು ಸಾಧ್ಯ ವಾಗಿರುವುದು. ಚರಿತ್ರೆಯ ನಿರೂಪಣೆಗಳು ಇವನ್ನೆಲ್ಲ ಗ್ರಹಿಸದೆ ಇರುವುದರಿಂದಲೇ ಚರಿತ್ರೆಯ ವಿಷಯವೇ ಬಹಳ ಸಂಕುಚಿತವಾಗಿರುವುದು. ಚರಿತ್ರೆಯ ನಿರೂಪಣೆಗಳು ನಿಸ್ಸಂದೇಹವಾಗಿ ಸೃಜನಶೀಲ ಗ್ರಹಿಕೆಯಿಂದಲೇ ಸಮಾಜೀಕರಣವಾಗಬೇಕು. ಚರಿತ್ರೆ ಸಾಹಿತ್ಯದ ನೇರ ಸಂಬಂಧಿ. ಚರಿತ್ರೆಕಾರ ಘಟನಾವಳಿಗಳ ವಾಸ್ತವ ರೂಪಕ್ಕೆ ಬದ್ಧನಾಗಿ ಗತಕಾಲವನ್ನು ನಿರೂಪಿಸಿದರೆ ಸಾಹಿತಿಯಾದವನು ಅದೇ ಘಟನೆಗಳನ್ನು ಸಂಯುಕ್ತವಾಗಿ ಸಮಷ್ಟಿಯಾಗಿ ಘಟನೆಯ ಹಿಂದಿನ ಅವ್ಯಕ್ತ ಘಟನೆಗಳ ಬೇರನ್ನು ಹಿಡಿದು ನಿರೂಪಿಸುವನು. ಇಬ್ಬರೂ ಸಮೀಪದಲ್ಲೆ ಸಂಧಿಸಿ ಸಮಾಜದ ಜೊತೆ ಸಂವಹನ ಮಾಡುವಲ್ಲಿ ವಿಚಿತ್ರ ಬಗೆಯ ಅಂತರ ಸೃಷ್ಟಿಸಿಕೊಳ್ಳುವರು. ಚರಿತ್ರೆಕಾರ ಗತಕಾಲವನ್ನು ಗತಕಾಲದಿಂದಲೇ ನೋಡಿದರೆ ಆತನ ಪ್ರಜ್ಞೆಯಲ್ಲಿರುವ ಎಲ್ಲ ಗತಕಾಲಗಳ ಬಾಗಿಲುಗಳು ತೆರೆಯಲಾರವು. ಮನದ ಬಾಗಿಲು ಮುಚ್ಚಿದರೆ ಗತಕಾಲವೂ ಕಪ್ಪು ಬಿಳುಪಾಗಿಯೇ ಕಾಣುತ್ತದೆ. ಅಲ್ಲದೆ ವರ್ತಮಾನವು ಅಂತಹ ದೃಷ್ಟಿಗೆ ಗೋಚರ ವಾಗದೇ ಅನ್ಯವಾಗುತ್ತದೆ.

ಯಾವುದೇ ಮಾನವಿಕ ವಿಜ್ಞಾನಗಳ ನಿರೂಪಣೆಗಳು ಸಮಾಜೀಕರಣವಾಗದಿದ್ದರೆ ಅವು ಎಷ್ಟೇ ದೊಡ್ಡ ವಿಚಾರ, ಸಂಶೋಧನೆ, ವಿದ್ವತ್ತಾದರೂ ಪ್ರಯೋಜನವಿಲ್ಲ. ಗಾಂಧಿ ಮತ್ತು ಅಂಬೇಡ್ಕರ್ ಅವರಿಬ್ಬರ ನಿರೂಪಣೆಗಳು ಗಾಢವಾಗಿ ಸಮಾಜೀಕರಣಗೊಂಡ ಮಾದರಿಗಳು. ಈ ಇಬ್ಬರು ನೇತಾರರು ಆಳವಾದ ಸಂಶೋಧಕರೂ ಹೌದು, ಚರಿತ್ರೆಕಾರರೂ ಹೌದು, ಸಮಾಜವಿಜ್ಞಾನಿಗಳೂ ಹೌದು. ಭಾರತದ ಸಾಮಾಜಿಕ ವ್ಯವಸ್ಥೆಗೆ ಇವರಿಬ್ಬರು ಹಾಕಿಕೊಟ್ಟ ನಿರ್ವಚನದ ಕ್ರಮಗಳನ್ನು ಸಂಶೋಧನೆಯ ನಿಟ್ಟಿನಲ್ಲೂ ಪರಿಶೋಧಿಸಬಹುದು. ವಶಾಹತು ಶಾಹಿ ಚರಿತ್ರೆಯ ನಿರೂಪಣೆಗಳು ಆ ಸಮಾಜಗಳಿಗೆ ತಕ್ಕುದಾಗಿವೆ. ವಿಚಾರ, ವಿವೇಕ, ಜ್ಞಾನಕ್ರಮಗಳನ್ನು ಉಲ್ಲೇಖಿಸಿ ತಮ್ಮ ಆಲೋಚನೆಯನ್ನು ವಿಸ್ತರಿಸುವ ಕ್ರಮ ಅತ್ಯುತ್ತಮವಾದುದೇ ಸರಿ. ಆದರೆ ಯಾವುದೇ ಉದ್ಧರಣೆಯಿಲ್ಲದೆ ಸಂಶೋಧನಾ ನಿರೂಪಣೆಗಳನ್ನು ಮಾಡಲಾಗದೇ? ಪಶ್ಚಿಮದ ಅಧ್ಯಯನ ವಿಧಾನಗಳ ಹಂಗಿಲ್ಲದೆ ಸ್ವಂತಿಕೆಯ ವಿಚಾರ ನಿರ್ವಚನ ಮಾಡುವುದು ವಿವೇಕ ಅಲ್ಲವೇ ಎಂಬ ಅನೇಕ ಪ್ರಶ್ನೆಗಳು ವೈಧಾನಿಕತೆಯ ಬೌದ್ದಿಕ ಪ್ರತಿಷ್ಠೆಗೆ ಅಡ್ಡಿಪಡಿಸುವಂತಿವೆ. ಬೌದ್ದಿಕ ಪ್ರತಿಭೆ ಮಾತ್ರವೇ ಒಂದು ದೇಶದ ಅವ್ಯಕ್ತ ಚರಿತ್ರೆಯನ್ನು ನಿರೂಪಿಸಲು ಸಾಲದು. ಸಮಾಜದ ಹತ್ತೂ ನೆಲೆಗಳು ಚರಿತ್ರೆಯನ್ನು ಕೇವಲ ವಿದ್ವತ್ ಗಳಿಕೆಗಾಗಿ ಓದುವುದಿಲ್ಲ. ಸೃಜನಶೀಲ ಬರಹಗಳು ಹೇಗೆ ಸಮಾಜೀಕರಣ ಗೊಂಡಿವೆಯೋ ಅಂತೆಯೇ ಮಾನವಿಕ ವಿಜ್ಞಾನಗಳ ಬರಹಗಳು ಕೂಡ ವಿಸ್ತರಣೆ ಆಗಬೇಕು. ಬಹುಸಂಖ್ಯಾತ ಸಮಾಜಗಳ ಬದುಕಿನ ಅಗತ್ಯಕ್ಕೆ ಬೇಕಾದ ವಿಷಯಗಳನ್ನೆಲ್ಲ ಉನ್ನತ ಶಿಕ್ಷಣದ ಘನ ಗಾಂಭೀರ್ಯ ಚೌಕಟ್ಟಿನಲ್ಲಿ ಸೀಮಿತಗೊಳಿಸಲಾಗಿದೆ.

ವಶಾಹತುಶಾಹಿ ಹೇಳಿಕೊಟ್ಟ ಪರಿಪಾಟದಿಂದಲೇ ಈಗಲೂ ನಮ್ಮ ಚರಿತ್ರೆಗಳನ್ನು ನಮ್ಮ ಅನುಭವದ ಪರಿಭಾಷೆಗಳಲ್ಲಿ ದಾಖಲಿಸಿಕೊಳ್ಳಲು ಆಗದಿರುವುದು. ಚರಿತ್ರೆ ಎಂದರೆ ಘಟನೆಯ ಸಾಕ್ಷ್ಯಾಧಾರಗಳ ಮೊತ್ತ ಎಂದು ನಂಬಿಸಿದ್ದರಿಂದ ದೇಶೀಯ ಸಮಾಜಗಳ ಚರಿತ್ರೆಯ ತಿಳುವಳಿಕೆಯನ್ನೇ ಮರೆಯುವ ಇಕ್ಕಟ್ಟು ಎದುರಾಯಿತು. ಚರಿತ್ರೆಯನ್ನು ಜೀವನ ಕ್ರಮದ ನಿರೂಪಣೆಯನ್ನಾಗಿಸುವ ಹೊಸದೊಂದು ಗದ್ಯಶೈಲಿ ತುಂಬ ಅನಿವಾರ್ಯವಾಗಿದೆ. ಚರಿತ್ರೆಯನ್ನು ಪ್ಯಾಂಟಸಿಯಲ್ಲಿ ಹೇಳಿದರೆ ಅದರ ಭಾವವನ್ನು ನಿರ್ವಚಿಸಿದರೆ ಅದರ ಘನತೆಗೆ ಯಾವ ಕುಂದೂ ಉಂಟಾಗದು. ಚರಿತ್ರೆಯನ್ನು ಹೀಗೆ ಬರೆಯಬೇಕು ಎಂದು ಮಾದರಿ ಯೊಂದನ್ನು ಯಜಮಾನರು ರೂಪಿಸಿದ್ದರ ಹಿನ್ನೆಲೆ ಏನು ಎಂಬುದನ್ನು ಅನೇಕರು ಪ್ರಶ್ನಿಸದೆ ಅನುಸರಿಸುತ್ತಾರೆ. ಚರಿತ್ರೆಯಲ್ಲಿ ಒಂದು ಘಟನೆ ಹೀಗೆಯೇ ಆಗಬೇಕು ಎಂದು ಯಾರಾದರೂ ಮೊದಲೇ ಮಾದರಿಯನ್ನೋ ಮಾನದಂಡಗಳನ್ನೋ ನಿರ್ಮಿಸಿರುತ್ತಾರೆಯೆ? ಚರಿತ್ರೆಯು ನಾವು ಹೇಳಿದಂತೆ ಘಟಿಸುವುದೆ? ಮಾನವ ಸಾಧ್ಯತೆಗಳು ಹಾಗು ಅವರ ವೈಫಲ್ಯಗಳು ಸ್ವಯಂ ಚಾಲಿತವಾಗಿ ಕಾಲದ ಸಾಂದರ್ಭಿಕ ಒತ್ತಡಗಳಿಂದ ಘಟಿಸುತ್ತವೆ. ಅದಕ್ಕೆ ನೆಪವಾಗಿ ಘಟನೆ ಯೊಂದು ಅವಿನಾಭಾವದಂತೆ ಬಂದು ಸೇರಿಕೊಂಡಿರುತ್ತದೆ. ಆದ್ದರಿಂದಲೆ ಚರಿತ್ರೆಯ ನಿರ್ವಚನಕ್ಕೆ ನಾವು ಹಾಕಿಕೊಂಡ ಮಾದರಿಗಳು ಕೂಡ ತಾತ್ಕಾಲಿಕವೂ ನಮ್ಮ ಅನುಸಂಧಾನದ ಅನುಕೂಲಕರ ಅವಕಾಶವೂ ಆಗಿ ಅಲ್ಲಲ್ಲಿಗೇ ನಿಂತು ಮುಂದಿನ ಬೇರೊಂದು ಕಥನಕ್ಕೆ ಬೇರೊಂದು ಕಾಲದೇಶವನ್ನು ಕಾಯುವುದು.

ಚರಿತ್ರೆ ರಚನಾ ಸಂದರ್ಭದಲ್ಲಿ ಸೃಜನಶೀಲತೆಯನ್ನು ಅನುಸರಿಸಬೇಕಾದುದು ಚರಿತ್ರೆಯ ಪಾರಂಪರಿಕ ಶಿಸ್ತನ್ನು ಉಲ್ಲಂಘಿಸುವುದಕ್ಕಲ್ಲ. ತಾತ್ವಿಕವಾಗಿ ಇನ್ನಷ್ಟು ಬಲಗೊಳ್ಳಲು ಹಾಗು ನಿರೂಪಣೆಯಲ್ಲಿ ಚೈತನ್ಯವನ್ನು ತಂದುಕೊಳ್ಳಲು. ಸೃಜನಶೀಲ ಗ್ರಹಿಕೆಗಳು ವಿಷಯದ ತಾತ್ವಿಕ ತಳಹದಿಗೆ ಬೇಕಾದ ಅರಿವಿನ ವಿಸ್ತಾರ ನೆಲೆಯನ್ನು ರೂಪಿಸುತ್ತವೆ. ಹೇಳಬೇಕಾದ ತತ್ವ ಆಕರ್ಷಕವಾಗಿರಬೇಕಾದರೆ ಅದರ ಭಾಷೆಯು ಸುಂದರವಾಗಿರಬೇಕಾಗುತ್ತದೆ. ಹಿತವಾದ ಸಂಗತಿಗಳು ಹಿತವಾದ ಭಾವನೆ ಬೆಳೆಸುವುದರ ಜೊತೆಯಲ್ಲೇ ಆ ಅರಿವಿನ ಎಲ್ಲೆಯನ್ನು ವಿಸ್ತರಿಸಿ ಸಾಮಾಜಿಕ ವ್ಯಾಪ್ತಿಯನ್ನು ಹಿಗ್ಗಿಸುತ್ತವೆ. ಆರ್.ಜಿ.ಕಾಲಿಂಗ್‌ವುಡ್ ಚರಿತ್ರೆಯ ತತ್ವ ಮೀಮಾಂಸೆಯನ್ನು ಈ ದಾರಿಯಲ್ಲೇ ಬೆಳೆಸಿ ವಿಕಾಸದ ದೀರ್ಘ ಕಥನಗಳಲ್ಲಿ ಮನುಷ್ಯ ಸಾಧ್ಯತೆಯ ಏರುಪೇರಿನ ಅಸ್ತಿತ್ವವನ್ನು ತಾತ್ವಿಕವಾಗಿ ನಿರ್ವಚಿಸಿದ ಬಗೆಯು ಅಪ್ಪಟ ಸೃಜನಶೀಲ ತತ್ವಶಾಸ್ತ್ರೀಯ ನೆಲೆಯದು. ಕಾರ್ಲ್‌ಮಾರ್ಕ್ಸ್ ಕೇವಲ ದ್ವಂದ್ವಮಾನ ಭೌತವಾದಿ ಚರಿತ್ರೆಯನ್ನಲ್ಲ ನಿರೂಪಿಸಿದ್ದುದು. ಸ್ವತಃ ಮಾರ್ಕ್ಸ್ ಭೌತವಾದಿ ವಿಚಾರಗಳನ್ನೇ ಸೃಜನಶೀಲ ನಿಕಷದ ಆಳದ ಮಾನವ ತಲ್ಲಣಗಳ ಬೇರಿನಿಂದ ಹಿಡಿದು ಬಾಹ್ಯದ ರೂಪ ವಿರೂಪವನ್ನು ತೋರಿದರು. ಅಂದರೆ ವರ್ಗ ಸಂಘರ್ಷದ ವಿಕಾಸದ ಕಥನದಲ್ಲಿ ಸಾಮಾಜಿಕ ಜೀವನ ವಿಧಾನದ ಪಲ್ಲಟಗಳ ಮೌಲ್ಯಗಳನ್ನೇ ಚರಿತ್ರೆಯ ಭಾಷೆಯಾಗಿ ಪರಿವರ್ತಿಸಿದರು. ಇದೇ ಹಾದಿಯನ್ನು ಹಿಡಿದು ಪಶ್ಚಿಮದ ಮಾನವಶಾಸ್ತ್ರಜ್ಞರು ಗಾಢವಾದ ಸಂಸ್ಕೃತಿ ಚರಿತ್ರೆಯ ವಿಕಾಸದ ಕಥನಗಳನ್ನು ಬಿಡಿಸಿದರು. ಅದರಲ್ಲೂ ಮಾನವಶಾಸ್ತ್ರಜ್ಞರು ಅವ್ಯಕ್ತ ಸಂಸ್ಕೃತಿಗಳ ಬೇರುಗಳನ್ನು ಮೊದಲಬಾರಿಗೆ ಲೌಕಿಕವಾಗಿ ಪರಿಶೀಲಿಸಿದರು. ಧರ್ಮಕೇಂದ್ರಿತ ಮೌಲ್ಯ ಗಳನ್ನು ನಿರಾಕರಿಸಿ ಹೊರಟ ಮಾನವಿಕ ವಿಜ್ಞಾನಗಳ ಸಂಶೋಧನೆಯು ಮಾನವ ಕೇಂದ್ರಿತ ಸಂಸ್ಕೃತಿ ಚರಿತ್ರೆಯನ್ನು ವರ್ತಮಾನದ ಜೀವನ ವಿಧಾನಗಳ ಮೂಲಕ ದಾಖಲಿಸಿದ್ದುದು ಸಾಮಾನ್ಯ ಸಂಗತಿ ಅಲ್ಲ. ಕ್ರೈಸ್ತ ಧರ್ಮದ ಹಂಗು ಮೀರಿದ ಮಾನವಿಕ ವಿಜ್ಞಾನಗಳ ಎಲ್ಲ ಆಲೋಚನೆಗಳು ನಾಗರಿಕತೆಗಳ ಚರಿತ್ರೆಯ ವಿಕಾಸವನ್ನು ಮಂಡಿಸಿದವು. ಚಾರ್ಲ್ಸ್ ಡಾರ್ವಿನ್‌ನ ವಿಚಾರಗಳು ಇಲ್ಲೆಲ್ಲ ತಳಹದಿಯಾಗಿ ಸ್ವತಃ ಅನೇಕ ಎಡಪಂಥೀ ಯರಿಗೂ ಕೂಡ ಪ್ರಭಾವಿಸಿದ್ದನ್ನು ಯಾವತ್ತೂ ಮರೆಯಲಾಗದು.

ಡಾರ್ವಿನ್‌ನ ವಿಕಾಸವಾದವು ಸಂಸ್ಕೃತಿ ವಿಕಾಸಕ್ಕೆ ದೊಡ್ಡ ದಾರಿಯನ್ನು ತೆರೆಯಿತು. ಬಹುಪಾಲು ಮಾನವಶಾಸ್ತ್ರದ ಎಲ್ಲ ಶಾಖೆಗಳು ವಿಕಾಸವಾದದ ವಿಚಾರಗಳನ್ನೇ ಪರಿಶೀಲಿಸಿ ಸಿದ್ಧಾಂತಗಳನ್ನು ಮಂಡಿಸತೊಡಗಿದವು. ಸಾಮ್ರಾಜ್ಯಗಳ ಚರಿತ್ರೆಯನ್ನೋ, ಧರ್ಮಶಾಸ್ತ್ರಗಳ  ಚರಿತ್ರೆಯನ್ನೋ, ನಾಗರಿಕತೆಗಳ ವೈಭವವನ್ನೋ ಸ್ಮರಿಸುತ್ತಿದ್ದ ಚರಿತ್ರೆಯ ಎಲ್ಲ ತಾಳು ತುದಿಗಳು ಸಂಸ್ಕೃತಿ ವಿಕಾಸದ ಕಥನಗಳಿಂದ ಉರುಳಿ ಬಿದ್ದವು. ಸಂಸ್ಕೃತಿ ವಿಕಾಸದ ಬಹುದೊಡ್ಡ ನೆಲೆ ನಿಸರ್ಗವೇ ಆಗಿದ್ದು ಎಲ್ಲ ಯಜಮಾನ ಧರ್ಮಗಳ ಹೊರಗಿದ್ದ ನಿಸರ್ಗನಿಷ್ಠ ಸಮುದಾಯಗಳ ಸಾಂಸ್ಕೃತಿಕ ಲೋಕಗಳು ಅಗಾಧವಾಗಿದ್ದವು. ಸಂಸ್ಕೃತಿಯ ವಿಕಾಸಕ್ಕೂ ನಿಸರ್ಗದ ವಿಕಾಸಕ್ಕೂ ಮಾನವ ವಿಕಾಸಕ್ಕೂ ನೇರದಾರಿ ಇದ್ದಿದ್ದರಿಂದ ಸಾಮಾಜಿಕ ಕಥನಗಳು ಲೌಕಿಕದ ವಿಕಾಸವನ್ನೇ ಮುಖ್ಯ ಆಕರವಾಗಿಸಿಕೊಂಡು ಮುನ್ನಡೆಯಬೇಕಾಯಿತು. ಅಂದರೆ ವರ್ತಮಾನದ ಸಂಸ್ಕೃತಿಗಳಿಂದ ಗತಕಾಲದ ಮಾನವ ಸಂಬಂಧಗಳ ಮೌಲ್ಯಗಳು ಹೇಗೆ ಸಾಗಿಬಂದವು ಎಂಬುದನ್ನೇ ಮುಖ್ಯ ತಿರುಳಾಗಿ ನಿರೂಪಿಸುವ ಬರಹಗಳು ಉಂಟಾದವು. ಮ್ಯಾಥ್ಯೂ ಆರ‍್ನಾಲ್ಡ್ ಉನ್ನತ ಚಿಂತನೆಯಿಂದ ಸಂಸ್ಕೃತಿ ವಿಕಾಸದ ಕಥನವನ್ನು ಆ ಮೂಲಕ ಬರೆಯಲು ಸಾಧ್ಯವಾಯಿತು. ಸಮಾಜಶಾಸ್ತ್ರೀಯ ನೆಲೆಯಲ್ಲಿ ವೆಬರ್ ಇನ್ನೊಂದು ದಿಕ್ಕಿನ ಸಾಮಾಜಿಕ ಚರಿತ್ರೆಯ ತತ್ವವನ್ನು ನಿರೂಪಿಸಿದ್ದು ಚರಿತ್ರೆಯ ಬೇರೆ ಬೇರೆ ಸಂಗತಿಗಳು ವೈವಿಧ್ಯ ನಿರ್ವಚನಕ್ಕೆ ತೆರೆದುಕೊಳ್ಳುವಂತೆ ಮಾಡಿತು. ಈ.ಬಿ.ಟೇಲರ್ ಮೊದಲ ಬಾರಿಗೆ ‘ಪ್ರಿಮಿಟೀವ್ ಕಲ್ಚರ್’ ಹೆಸರಿನಲ್ಲಿ ಸಂಸ್ಕೃತಿ ವಿಕಾಸದ ಮಾನವಶಾಸ್ತ್ರೀಯ ಸಿದ್ಧಾಂತವನ್ನು ಮಂಡಿಸಿದ ಕೂಡಲೇ ಆತನ ವಿಚಾರಗಳಿಗೆ ಸರಣಿಯೋಪಾದಿಯಲ್ಲಿ ಮಾನವಶಾಸ್ತ್ರದ ಅನೇಕ ವಿಚಾರಗಳು ಬೆಳಕಿಗೆ ಬಂದವು. ಮಾರ್ಗನ್, ಕ್ರೋಬರ್, ಪ್ರೇಜರ್ ಮೊದಲಾದವರು ಚರಿತ್ರೆಯ ಹಂತಗಳು ಹೇಗೆ ವಿಕಾಸವಾಗಿ ಸಾಗಿವೆ ಎಂದು ಪುನರುಚ್ಚರಿಸಿದರು.

ವಸಾಹತುಶಾಹಿ ಕಾಲದ ಆರಂಭದ ಕ್ರೈಸ್ತ ಮಿಷನರಿಗಳು ಈ ಹೊಡೆತವನ್ನು ತಾಳಲಾರದೆ ಆದಿವಾಸಿಗಳ ಸಂಸ್ಕೃತಿ ಚರಿತ್ರೆಯನ್ನು ಅನಿವಾರ್ಯವಾಗಿ ಮಾನವಶಾಸ್ತ್ರೀಯ ಚೌಕಟ್ಟಿನಲ್ಲೇ ನಿರೂಪಿಸಬೇಕಾಯಿತು. ಅಂದರೆ ಚರಿತ್ರೆಯ ಬಹರೂಪಿ ನಿರ್ವಚನಗಳು ಮಾನವಿಕ ಶಾಸ್ತ್ರಗಳಲ್ಲಿ ಮನುಷ್ಯ ಮತ್ತು ನಿಸರ್ಗದ ಸಂಬಂಧವನ್ನು ಗಾಢವಾಗಿ ನಿರೂಪಿಸುವ ಹೊಸದೊಂದು ಕಣ್ಣೋಟವನ್ನು ಹತ್ತೊಂಬತ್ತನೇ ಶತಮಾನದ ವೇಳೆಗಾಗಲೆ ನಿರ್ಮಿಸಿದವು. ಆದರೆ ಭಾರತದಲ್ಲಿದ್ದ ಪುರಾಣ ಪಾಂಡಿತ್ಯವು ಈ ನಿಟ್ಟಿನಲ್ಲಿ ತನ್ನ ಸಮುದಾಯಗಳ ಚರಿತ್ರೆಯನ್ನು ಸೂಕ್ತವಾಗಿ ನಿರೂಪಿಸಲಾರದೆ ವಶಾಹತುಶಾಹಿಯ ಮುಂದೆ ಪೆಚ್ಚಾಗಿತ್ತು. ಆಗ ಸ್ವತಃ ವಸಾಹತುಶಾಹಿ ವಿದ್ವಾಂಸರೇ ಭಾರತೀಯ ನಾಗರಿಕತೆ, ಧರ್ಮ, ಭಾಷೆ, ಸಂಸ್ಕೃತಿ, ಚರಿತ್ರೆ, ಸಮಾಜ, ಮಾನವಶಾಸ್ತ್ರ ಮುಂತಾದ ಜ್ಞಾನ ಪ್ರಕಾರಗಳನ್ನು ನಿರೂಪಿಸಲು ಮುಂದಾದರು. ಈ ನಿಟ್ಟಿನಲ್ಲಿ ಓರಿಯಂಟಲ್ ವಿದ್ವಾಂಸರ ಕೊಡುಗೆ ಏನು ಎಂಬುದು ಬೇರೆಯ ವಿಚಾರ. ಆದರೆ, ಪಶ್ಚಿಮದಲ್ಲಿ ಅದಾಗಲೆ ನೆಲೆಗೊಂಡಿದ್ದ ಮಾನವಶಾಸ್ತ್ರೀಯ ಆಲೋಚನೆಗಳು ಒಂದೋ ಅಪ್ಪಟವಾಗಿ ಕ್ರೈಸ್ತಧರ್ಮದ ನೀತಿಯನ್ನೇ ಆಳದಲ್ಲಿ ಸ್ಥಾಪಿಸಿ ನಿರ್ವಚಿಸಬೇಕಿತ್ತು. ಇಲ್ಲವೇ ಭೌತವಾದಿ ಆಲೋಚನೆಗಳಿಂದ ಹೊಸ ಜಗತ್ತಿನ ತತ್ವಮೀಮಾಂಸೆಗಳನ್ನು ಅನುಸರಿಸಬೇಕಿತ್ತು. ಈ ಎರಡೂ ಬಗೆಯ ಧೋರಣೆಗಳು ಭಾರತದಲ್ಲಿ ಪ್ರಯೋಗಿಸಲ್ಪಟ್ಟವು. ಇದರಿಂದ ಚರಿತ್ರೆಯ ನಿರೂಪಣೆಯಲ್ಲಿ ಏರುಪೇರಾದದ್ದು ಸಹಜವೆ. ಯುರೋಪಿನಲ್ಲಾದ ಪುನರುಜ್ಜೀವನದ ದೂರದ ಬೆಳಕು ಒಂದಿಷ್ಟಾದರೂ ಭಾರತದ ಅಧ್ಯಯನಗಳ ಮೇಲೆ ಪ್ರತಿಫಲಿಸಿದ್ದರಿಂದ ಇಲ್ಲಿನ ಬಹುಭಾಷೆ, ಸಂಸ್ಕೃತಿ, ಸಮಾಜ, ಜಾತಿ, ಲಿಂಗ, ವರ್ಗಗಳ ಚರಿತ್ರೆಯನ್ನು ಹೊಸದಾಗಿ ನೋಡಲು ಸಾಧ್ಯವಾಯಿತು. ಇಲ್ಲದಿದ್ದರೆ ವೈದಿಕರು ಯಾವತ್ತು ಕೂಡ ಅಲಕ್ಷಿತ ಸಮಾಜಗಳ ಆತ್ಮಚರಿತ್ರೆಯಂತಿದ್ದ ಸಂಸ್ಕೃತಿಗಳನ್ನು ಮುಟ್ಟಿನೋಡಲು ಸಾಧ್ಯವಾಗುತ್ತಿರಲಿಲ್ಲ.

ಕ್ರೈಸ್ತ ನೈತಿಕತೆಯ ಕಾರಣವಾಗಿಯೂ ನಮ್ಮ ದೇಶದ ಅಂಚಿನವರ ವಿಶೇಷವಾಗಿ ಆದಿವಾಸಿಗಳ, ಅಲೆಮಾರಿಗಳ, ಪಶುಪಾಲಕರ, ಮಹಿಳೆಯರ, ಕೆಳಜಾತಿಗಳ ಚರಿತ್ರೆಗೆ ಬೇಕಾದ ಆಕರಗಳು ಮೊದಲ ಬಾರಿಗೆ ವಸಾಹತುಶಾಹಿ ನೆಲೆಯಿಂದಲೆ ದಾಖಲಾಗಿವೆ. ಪಶ್ಚಿಮದ ಸಂಸ್ಕೃತಿಗಳ ವಿರಾಟ್ ವಿಕಾಸದ ಕಥನಗಳನ್ನೇ ಭಾರತದ ತಳಸಮುದಾಯಗಳ ಸಂಸ್ಕೃತಿಗಳ ಸಂದರ್ಭದಲ್ಲೂ ಪಶ್ಚಿಮವು ಪರಿಭಾವಿಸಿದ್ದರಿಂದ ಅಲಕ್ಷಿತರ ಚರಿತ್ರೆಗೆ ದಾರಿ ಸುಗಮವಾಯಿತು. ಮುಂದೆ ವಸಾಹತೋತ್ತರ ಕಾಲದಲ್ಲಿ ಈ ಬಗೆಗಿನ ಅರಿವು ಸಬಾಲ್ಟ್ರನ್ ಸಂಪುಟ ಗಳಲ್ಲಿ ಭಿನ್ನ ನೋಟದಿಂದ ಬೇರೊಂದು ಸ್ವರೂಪ ಪಡೆದದ್ದು ಕೂಡ ಚರಿತ್ರಾರ್ಹವಾದ ಪಲ್ಲಟವೇ ಹೌದು. ಚರಿತ್ರೆಯಲ್ಲಿ ಯಾಜಮಾನ್ಯ ಸಾಕ್ಷಿಗಳ ಗರ್ವವನ್ನು ಮುರಿವ ಯತ್ನಕ್ಕೆ ಬೇಕಾದ ಪ್ರತಿರೋಧ ಬಂದದ್ದೇ ವಸಾಹತುಶಾಹಿ ಧೋರಣೆಗಳು ಬಿಟ್ಟುಹೋದ ನಿರೂಪಣೆ ಗಳಿಂದ. ಪಶ್ಚಿಮ ತನ್ನ ಕಣ್ಣೋಟವೇ ಸರಿ ಎಂದು ತಿಳಿದು ಮಾಡಿದ ಅಧ್ಯಯನಗಳಲ್ಲಿ ಚರಿತ್ರೆಗೆ ಬೇಕಾದ ವಿವರಗಳು ಸಾಕಷ್ಟಿವೆ. ವಸಾಹತುಶಾಹಿ ಏನೆಲ್ಲ ತೊಂದರೆ ಮಾಡಿದ್ದರೂ, ಅದು ಚರಿತ್ರೆಯ ಬಹುರೂಪಗಳನ್ನು ಒಂದೇ ಮಗ್ಗದಿಂದ ನೇದಿದ್ದರೂ, ಅದರಲ್ಲಿ ಸಾಮ್ರಾಜ್ಯಶಾಹಿ ಧೋರಣೆ ಇದ್ದರೂ ನಮ್ಮ ಕಾಲಕ್ಕೆ ಬೇಕಾದ ಅನೇಕ ಕೊಂಡಿಗಳು ಅದರ ಅಧ್ಯಯನಗಳಲ್ಲೇ ಸಿಗುತ್ತವೆ. ಸರಿಸುಮಾರು ಒಂದು ಶತಮಾನ ಕಾಲ ನಡೆದ ಪಶ್ಚಿಮದ ಮಾನವಿಕ ಅಧ್ಯಯನಗಳ ಸಂಶೋಧನೆಯೇ ಸಾಮಾಜಿಕ ವಿಜ್ಞಾನಗಳ ಚರಿತ್ರೆಯ ಅಧ್ಯಯನದ ಬಹುರೂಪಗಳಂತೆ ಕಾಣುವುದು. ವಶಾಹತುಶಾಹಿ ಅಧ್ಯಯನಗಳು ಗರ್ವದ ನಡುವೆಯೂ ವಿಕಾಸವಾದದ ವಿಶ್ವಾತ್ಮಕ ಸತ್ಯಗಳನ್ನು ಅನುಸರಿಸಿದ್ದರಿಂದ ಭಾರತೀಯ ಸಮಾಜಗಳ ಬಹುರೂಪಿ ಸಾಕ್ಷ್ಯಲೋಕವು ಮಾತನಾಡಲು ಸಾಧ್ಯವಾದದ್ದು.

ಅಂದರೆ ವಸಾಹತುಶಾಹಿ ಜೊತೆಗಿನ ವಿರಸಾನುಸಂಧಾನ ಕೂಡ ಚರಿತ್ರೆಯನ್ನು ಸೃಜನಶೀಲ ಅನುಸಂಧಾನಕ್ಕೆ ದಾರಿ ಮಾಡಿತು. ಎಡಪಂಥೀಯ ಚರಿತ್ರೆಯ ನಿರೂಪಣೆಗಳು ಆ ಮಟ್ಟಿಗೆ ಪಶ್ಚಿಮವನ್ನು ಪಶ್ಚಿಮದ ಅರಿವಿನ ಮಿತಿಯಿಂದಲೇ ಪ್ರಶ್ನಿಸಿ ಪರ್ಯಾಯ ಚರಿತ್ರೆಯ ನಿರೂಪಣೆಗಳನ್ನು ನಮ್ಮ ನಾಡಿನ ಸಾಂಸ್ಕೃತಿಕ ಲೋಕಗಳಿಗೆ ಅಳವಡಿಸಿದ್ದು ತದನಂತರದ ದಲಿತ, ಆದಿವಾಸಿ, ಮಹಿಳಾ ನಿರ್ವಚನಗಳು ತಮ್ಮ ಅಸ್ಮಿತೆಯನ್ನು ವ್ಯಕ್ತಪಡಿಸಲು ಅವಕಾಶವಾಯಿತು. ಚರಿತ್ರೆಯು ಹೀಗೆ ಮಾನವಶಾಸ್ತ್ರೀಯ ಯೋಚನೆಗಳಲ್ಲಿಯೇ ಹೆಚ್ಚು ಆರ್ದ್ರವಾಗಿ ಅರ್ಥಪೂರ್ಣವಾಗಿ ದಾಖಲಾಗಿರುವುದು. ಸಾಮ್ರಾಜ್ಯಶಾಹಿ ನಾಗರಿಕತೆಗಳ ಇತಿಹಾಸಕ್ಕೆ ಚರಿತ್ರೆಯ ಪುಟಗಳಲ್ಲಿ ಹೆಚ್ಚು ಅವಕಾಶ ಸಿಕ್ಕಿದರೆ, ಮಾನವಶಾಸ್ತ್ರಗಳ ಬಹುಶಾಖೆಗಳ ಪುಟಗಳಲ್ಲಿ ಅಧಿಕವಾದ ಸಮುದಾಯನಿಷ್ಠ ಸಂಸ್ಕೃತಿ ಚರಿತ್ರೆಗೆ ಮಹತ್ವದ ಸ್ಥಾನ ಸಿಕ್ಕಿದೆ. ಈ ನಿಟ್ಟಿನಿಂದ ನೋಡಿದರೆ ಚರಿತ್ರೆಯನ್ನು ಮಾನವಶಾಸ್ತ್ರವೇ ಗಾಢವಾದ ಸೃಜನಶೀಲ ಭಾವದಿಂದ ನಿರೂಪಿಸಿರುವುದು ವ್ಯಕ್ತವಾಗುತ್ತದೆ. ಪಶ್ಚಿಮದ ಚರಿತ್ರೆಕಾರರು ಶುದ್ಧ ಚರಿತ್ರೆಯ ನಿಟ್ಟಿನಲ್ಲೇ ಜ್ಞಾನಪರಂಪರೆಗಳನ್ನು ಶೋಧಿಸಲಿಲ್ಲ. ಅಖಂಡವಾಗಿ ಮಾನವಿಕ ಶಾಸ್ತ್ರಗಳನ್ನೆಲ್ಲ ಚರಿತ್ರೆಯ ಸಮಷ್ಟಿಯಲ್ಲಿ ಭಾವಿಸಿದರು. ಮಾನವ ವಿಕಾಸದ ಚರಿತ್ರೆಯನ್ನು ಡಾರ್ವಿನ್ ತತ್ವಶಾಸ್ತ್ರೀಯವಾಗಿಯೂ ದಾಖಲಿಸಿದ್ದುದು ಆ ಕಾಲದ ಜ್ಞಾನ ಶೋಧದ ಅಖಂಡ ಪ್ರಜ್ಞೆಯನ್ನು ಧ್ವನಿಸುತ್ತದೆ. ಹೀಗಾದಾಗ ಒಂದು ಕಾಲಘಟ್ಟಕ್ಕೆ ಇರಬಹುದಾದ ಬಹುಕಾಲ ಸಂದರ್ಭಗಳ ಬೇರುಗಳನ್ನು ಸಮಗ್ರವಾಗಿ ಭಾವಿಸಲು ಸಾಧ್ಯವಾಗುತ್ತದೆ. ಚರಿತ್ರೆಯ ಕಾಲಾವಕಾಶದ ಮಿತಿಯನ್ನು ದಾಟಲು ಸಂಸ್ಕೃತಿ ವಿಕಾಸದ ಚರಿತ್ರೆಯಲ್ಲಿ ಮಾತ್ರ ಸಾಧ್ಯ.

ಹೀಗಾಗಿಯೇ ಭೂಗರ್ಭದ ಅಂತರಂಗ ಶೋಧಿಸುವ ವಿಜ್ಞಾನಿಗೆ ಚರಿತ್ರೆ ತನ್ನದೇ ಅಸ್ತಿತ್ವದ ಸಂಗತಿಯಾಗುವುದು. ಭೂಮಿಯ ಆದಿ ವಿಕಾಸದ ಹಾದಿಯಲ್ಲಿ ಮಾನವ ಪರಿಸರದ ಹೆಜ್ಜೆ ಜಾಡನ್ನು ತಿಳಿಯಲು ವಿಕಾಸದ ಹಂತಗಳು ಭೂಗರ್ಭಶಾಸ್ತ್ರಜ್ಞನಿಗೆ ಬೇರೊಂದು ಹೊಳಹನ್ನು ನೀಡುತ್ತವೆ. ಭೂಮಿಯ ಮೇಲಿನ ಪರಿಸರ, ತಿಳುವಳಿಕೆ, ಸಮುದ್ರದ ಆಳದ ಪರಿಸರ ತಿಳುವಳಿಕೆ ಹಾಗೂ ಭೌಗೋಳಿಕ ರಚನೆಯ ಬಹುಸ್ತರ ವಿನ್ಯಾಸ ಇತ್ಯಾದಿ ಇಂತಹ ಜ್ಞಾನ ಶಾಖೆಗಳೆಲ್ಲ ಮಾನವ ಚರಿತ್ರೆಯ ನೈಸರ್ಗಿಕ ಸಂಬಂಧವನ್ನು ಮತ್ತೆ ಮತ್ತೆ ಜೀವನಕ್ರಮದ ಸಂಸ್ಕೃತಿಯ ಜೊತೆ ಬೆರೆಸುತ್ತವೆ. ಸಾಮ್ರಾಜ್ಯಗಳ ಇತಿಹಾಸದ ತಳದಲ್ಲಿರುವ ಈ ಮುಖಗಳು ಅವ್ಯಕ್ತವಾಗಿ ಕಾಲದ ರೂಪಕ ಅಲೆಗಳಲ್ಲಿ ಸಾಗಿ ಹೋಗುತ್ತಿರುತ್ತವೆ. ಇವು ಗತ, ವರ್ತ, ಭವಿಷ್ಯಗಳ ಹಂಗಿಗೆ ಒಳಗಾಗುವುದಿಲ್ಲ. ಮನುಷ್ಯನ ಮಹತ್ ಮೌಲ್ಯಗಳು ಕಾಲದ ಮಿತಿಗೆ ಒಳಗಾಗು ವುದಿಲ್ಲ. ವಿಕಾಸವು ಈ ಗತಿಶೀಲತೆಯಲ್ಲಿ ಸಾಗುವಾಗ ಅದು ಚರಿತ್ರೆಯ ಯಾವುದೋ ಕಾರಣಕ್ಕಾಗಿ ಸಾಕ್ಷಿ ನೀಡಲು ಮುಂದಾಗದು. ಸಾಕ್ಷಿ ಎಂದು ನಿರ್ಧರಿಸುವುದು ಘಟನೋತ್ತರ ಪರಿಶೀಲನೆಯಿಂದ. ಘಟನಾಪೂರ್ವ ಅವ್ಯಕ್ತ ಮುಖಗಳು ಚರಿತ್ರೆಯ ತರ್ಕದ ಆಚೆಗಿರುತ್ತವೆ. ಹೀಗಾಗಿ ಚರಿತ್ರೆಯೂ ಒಂದು ಅನುಭಾವ. ಅದು ಕೂಡ ಒಂದು ಧ್ಯಾನ, ಅಲ್ಲದೆ ಅದೊಂದು ದರ್ಶನವಾಗಿಯೂ ಕಾಣಬಲ್ಲದು. ನಿಸರ್ಗದ ಅಖಂಡತೆಯು ಚರಿತ್ರೆಯಲ್ಲಿ ಸಂಗಮಿಸಿರುತ್ತದೆ. ಇದು ಚರಿತ್ರೆಯ ಬಿಡಿ ಘಟನೆಗಳಲ್ಲಿ ವ್ಯಕ್ತವಾಗದು. ಸಮಷ್ಟಿ ಸಂವೇದನೆ ಎಂಬ ಮಾತೊಂದಿದೆ. ಸಂಸ್ಕೃತಿಗಳ ಸಂಯುಕ್ತ ಭಾವ ಇದು. ಮನುಷ್ಯ ಸಮಾನಾಂತರವಾಗಿ ಕಂಡುಕೊಂಡ ಎಲ್ಲ ಮಾನವ ಮೌಲ್ಯಗಳೂ ನಿರ್ಸಗದ ಬೇರನ್ನು ಬಿಟ್ಟುಕೊಟ್ಟಿಲ್ಲ. ಹಾಗೆಯೇ ಅನಂತವಾದ ಆಕಾಶದ ಆಚೆ ತುದಿಯ ಸಂಬಂಧವನ್ನೂ ಕಡೆಗಣಿಸಿಲ್ಲ. ತಾಳುತುದಿ ಎರಡೂ ಸಂವಾದವು ಚರಿತ್ರೆಯಿಂದಲೇ ಆಗುವುದು. ಈ ಪರಿಯಲ್ಲಿ ಮಾನವಿಕ ಶಾಸ್ತ್ರಗಳು ಒಂದೊಂದು ದಿಕ್ಕಿನಿಂದ ಈ ಸಂಬಂಧವನ್ನು ಅರ್ಥೈಸುತ್ತವೆ. ಖಗೋಳವಿಜ್ಞಾನಿ ಕೂಡ ವಿಶ್ವಸೃಷ್ಟಿಯ ಸಂಸ್ಕೃತಿನಿಷ್ಠ ಪುರಾಣಗಳನ್ನು ಬಿಡಿಸಿ ನೋಡುವಾಗ ಆಕಾಶದ ಚರಿತ್ರೆಯನ್ನು ನಿರೂಪಿಸುವಾಗ ನಿಸರ್ಗ ಮತ್ತು ಸಂಸ್ಕೃತಿಗಳ ಅವಿನಾಭಾವ ಸಂಬಂಧಗಳನ್ನು ಕಡೆಗಣಿಸಲಾರ.