ಭೂಮಿಯ ಮೇಲಿನ ಪರಿಸರ ಎಂದರೆ ಜೀವ ವಿಕಾಸಕ್ಕೆ ಅವಶ್ಯವಾದ ಕಾಲಾವಕಾಶ. ಮತ್ತು ಬದುಕುಳಿಯಲು ಬೇಕಾದ ಆಯ್ಕೆಗಳ ಒಟ್ಟು ಮೊತ್ತ. ಪರಿಸರವು ತಂತಾನೆ ಸ್ವಯಂ ಪೂರ್ಣ ಅವಕಾಶವಲ್ಲ. ನಿರಂತರವಾಗಿ ಜೀವ ವೈವಿಧ್ಯತೆಯನ್ನು ಬೆಳೆಸುವ ಪರಿಸರವು ಖಚಿತವಾದ ನಿರ್ದಿಷ್ಟ ರೂಪಕ್ಕೆ ಬದ್ಧವಾದುದಲ್ಲ. ಪರಿಸರದಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳ ಲಾಗದ ಯಾವುದು ಕೂಡ ಅಸ್ತಿತ್ವ ಸ್ಥಾಪಿಸಿಕೊಳ್ಳಲಾರದು. ಹೀಗಾಗಿ ಪರಿಸರವು ಎಲ್ಲ ಬಗೆಯ ಅಸ್ತಿತ್ವಕ್ಕೆ ಬೇಕಾದ ಸಮತೋಲನವನ್ನು ರೂಪಿಸಬೇಕಾದ ಒಂದು ವ್ಯವಸ್ಥೆ. ಜೈವಿಕವಾದ ಈ ವ್ಯವಸ್ಥೆಯು ತನಗೆ ಈ ಮೊದಲೆ ದತ್ತಕವಾದ ಜೀವಾಂಶಗಳ ಮೂಲಕ ಸಂಬಂಧ ವನ್ನು ಸಾಧಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಲೆ ಇರುತ್ತದೆ. ಈ ಬಗೆಯ ಯತ್ನದಲ್ಲಿ ಮನುಷ್ಯ ಸಮಾಜದ ಸುಪ್ತಪ್ರಜ್ಞೆಯು ಮಹತ್ವದ ಪಾತ್ರವಹಿಸುತ್ತದೆ. ಸುಪ್ತಪ್ರಜ್ಞೆಯು ಕೇವಲ ನೆನ್ನೆ ಮೊನ್ನೆಯದಲ್ಲ. ನಮ್ಮ ಸುಪ್ತಪ್ರಜ್ಞೆಯು ಜೈವಿಕವಾಗಿ ಲಕ್ಷಾಂತರ ವರ್ಷಗಳ ಎಲ್ಲ ಹಳೆಯ ನೆನೆಪನ್ನೂ ಬಚ್ಚಿಟ್ಟುಕೊಂಡಿರುವ ವ್ಯವಸ್ಥೆ. ಗತಕಾಲದ ಎಲ್ಲವೂ ವ್ಯಕ್ತ ಪ್ರಜ್ಞೆಯಲ್ಲಿ ಪ್ರವಹಿಸಲಾರದು. ಹೀಗೆ ಸುಪ್ತಪ್ರಜ್ಞೆ ಯಾಕೆ ತಂತಾನೆ ಅಭಿವ್ಯಕ್ತ ವಾಗದು ಎಂಬುದಕ್ಕೆ ಪರಿಸರವೆ ಉತ್ತರವನ್ನು ಅಡಗಿಸಿಟ್ಟುಕೊಂಡಿರಬಹುದು. ಆ ಸಂಗತಿಗಳನ್ನೆಲ್ಲ ಇಲ್ಲಿ ಚರ್ಚಿಸಲಾಗದು. ಪರಿಸರವು ಜೈವಿಕ ಗುಣಗಳ ಬಿತ್ತನೆ ಕ್ಷೇತ್ರವೂ ಹೌದು. ಪರಿಸರ ಚಿಂತಕರು ಭವಿಷ್ಯದ ಮಾನವರ ನೆಲೆಯಲ್ಲಿ ಪರಿಸರ ಸಂರಕ್ಷಣೆಯ ವಾದಗಳನ್ನು ಮಂಡಿಸುವಾಗಲೆಲ್ಲ ಭೌತಿಕ ಪರಿಸರದ ಕಡೆಗೇ ಹೆಚ್ಚು ವಾಲುತ್ತಾರೆ.

ಅವ್ಯಕ್ತ ಪರಿಸರವು ಸುಪ್ತ ಪ್ರಜ್ಞೆಯಲ್ಲಿ ದಾಖಲಾಗಿದೆ. ಪ್ರಜ್ಞೆಯಲ್ಲಿರುವ ಕಾಲ ಮತ್ತು ಪ್ರದೇಶಗಳನ್ನು ಬಿಡಿಸಿದರೆ ಕಾಣುವ ಪರಿಸರವು ವ್ಯಕ್ತವಾಗಿರುವ ಇಂದಿನ ಪರಿಸರಕ್ಕಿಂತ ಭಿನ್ನವಾಗಿಯೆ ಕಾಣುತ್ತದೆ. ಇವೆಲ್ಲ ಸಂಗತಿಗಳ ಪದರಗಳ ಮೇಲೆಯೆ ಯಾವುದೇ ಸಮಾಜದ ಸಂಸ್ಕೃತಿ, ಚರಿತ್ರೆ, ಲಿಂಗಸಂಬಂಧ, ಧಾರ್ಮಿಕ ಹಾಗೂ ರಾಜಕೀಯ ಶಕ್ತಿಗಳು ಬೆಳೆಯುವುದು. ಪರಿಸರ ಸಂರಕ್ಷಣೆ ಮಾಡಿದ ಕೂಡಲೆ ಎಲ್ಲವೂ ಸರಿ ಹೋಗುತ್ತದೆ ಎಂದು ಆಶಾದಾಯಕ ವಾಗಿದ್ದರೂ ವಾಸ್ತವದಲ್ಲಿ ಪರಿಸರವನ್ನೂ ಕಾಯುವ ಒಂದೇ ವಿವೇಕದಿಂದ ವಿಕಾಸ ಸರಿದಾರಿಗೆ ಬರುವುದಿಲ್ಲ. ಪರಿಸರ ಸಂರಕ್ಷಣೆ ನಮ್ಮ ಒಂದು ಸ್ವಭಾವವಾಗಬಹುದು. ಒಂದು ನಂಬಿಕೆ ಯಾಗಬಹುದು. ಒಂದೊಂದು ನೀತಿ ನಿಯಮ ಆಗಬಹುದು. ಹೊಣೆಗಾರಿಕೆ ಎಂದು ಘನತೆ ಯಿಂದ ನಾವು ಸಂರಕ್ಷಣೆಯ ಕ್ರಿಯೆಗೆ ಇಳಿಯಬಹುದು. ಆದರೆ ಪರಿಸರ ಸಂರಕ್ಷಣೆಯು ಮನುಷ್ಯರ ಕೈಯಲ್ಲಿ ಇಲ್ಲ. ಮನುಷ್ಯ ಪರಿಸರವನ್ನು ನಾಶಪಡಿಸಲು ಪಳಗಿರಬಹುದೇ ವಿನಃ ಅದನ್ನು ಪೂರ್ಣ ಪ್ರಮಾಣದಲ್ಲಿ ಸಂರಕ್ಷಿಸುವ ಸಾಮರ್ಥ್ಯ ಆತನಿಗಿಲ್ಲ. ನಮ್ಮ ತಿಳುವಳಿಕೆಗೆ ಮೀರಿದ ವಿಕಾಸದ ಜಾಡು ನಿಸರ್ಗಕ್ಕೆ ಮಾತ್ರವೇ ಗೊತ್ತು.

ಮೇಲೆ ವಿವರಿಸಿದ ಪರಿಸರದ ಅರ್ಥದ ಈ ಬಗೆಯಿಂದ ಹಂಪಿ ಪರಿಸರವನ್ನು ಹೇಗೆ ಭಾವಿಸಬಹುದು ಎಂಬುದನ್ನು ಈಗ ಗಮನಿಸುವ. ಹಂಪಿ ಪರಿಸರ ಕುರಿತಂತೆ ಈಗಾಗಲೆ ವಿವರಿಸಲಾಗಿದೆ. ನೈಸರ್ಗಿಕ ಪರಿಸರ ಒಂದೇ ಒಂದು ಪ್ರದೇಶದ ಸಮಗ್ರ ಪರಿಸರವಲ್ಲ. ನಿಸರ್ಗ ಕೇಂದ್ರಿತ ಪರಿಸರ ಏಕಮುಖವಾದ್ದರಿಂದ ಅದರಾಚೆಗಿನ ಪರಿಸರಗಳು ಬಹಳ ಮುಖ್ಯ. ಅಂತವುಗಳು ಅವ್ಯಕ್ತ ಪರಿಸರಗಳು. ಮನಸ್ಸಿನ ಒಳಗಿನ ವಿವಧ ಸ್ತರಗಳು ಜೀವವಿಕಾಸದ ಕಾಲದ ಎಲ್ಲ ನೆನಪುಗಳನ್ನು ಜೈವಿಕ ಗುಣದಲ್ಲಿ ಅಡಗಿಸಿಟ್ಟುಕೊಂಡಿವೆ. ಅವುಗಳ ಮಾನಸಿಕ ಪರಿಸರ ಸುಪ್ತವಾಗಿಯೆ ಉಳಿದು ಬಿಟ್ಟಿರುತ್ತವೆ. ಸಂಸ್ಕೃತಿ, ಚರಿತ್ರೆ, ನಾಗರೀಕತೆ, ವಿಜ್ಞಾನ ಇವೆಲ್ಲವೂ ಮನಸ್ಸಿನ ಪರಿಸರವನ್ನು ವಿಸ್ತರಿಸಿವೆ. ಸುಪ್ತಪ್ರಜ್ಞೆ ಸಂಸ್ಕೃತಿಯ ಪರಿಸರವನ್ನು ನಿರ್ಮಿಸಿದೆ. ಮನುಷ್ಯನ ಪ್ರಜ್ಞೆಯು ಎಲ್ಲ ಬಗೆಯ ವಿವೇಚನಾಶೀಲ ಜ್ಞಾನ ವಿಜ್ಞಾನ ತಂತ್ರ ಜ್ಞಾನದ ಪರಿಸರಗಳನ್ನು ನಿರ್ಮಿಸಿದೆ. ಹೀಗಾಗಿ ಪರಿಸರ ಎನ್ನುವುದು ಭೌತಿಕ ಸ್ವರೂಪ ಕ್ಕಿಂತಲೂ ಆ ಭೌತಿಕ ಸ್ವರೂಪದ ಆಚೆಗಿನ ಅವ್ಯಕ್ತ ಸ್ವರೂಪಗಳೇ ಪರಿಸರದ ಮೂಲಾಂಶ ಗಳು. ಹಂಪಿಯ ಪರಿಸರ ಇಂತದೇ ಬಗೆಯ ಜೈವಿಕ ನೆಲೆಗಳಿಂದ ವಿಕಾಸಗೊಂಡು ಪ್ರಾಚೀನ ಕರ್ನಾಟಕದ ಪಶುಪಾಲಕ ಸಮಾಜಗಳು ತಮ್ಮ ಪರಿಸರವನ್ನು ಕಂಡುಕೊಳ್ಳಲು ಅನುವು ಮಾಡಿದೆ.

ಹಂಪಿಯ ನೈಸರ್ಗಿಕ ನೆಲೆಯು ಇಲ್ಲಿನ ಜನಜೀವನವನ್ನು ನಿರ್ಧರಿಸಿದೆ. ಚರಿತ್ರೆ ನಿರ್ಮಾಣ ವಾಗುವಲ್ಲಿಯು ಇಲ್ಲಿನ ಪರಿಸರ ಕಾರಣವಾಗಿದೆ. ಇವೆಲ್ಲವೂ ಜೀವವಿಕಾಸಕ್ಕೆ ಅವಶ್ಯವಾದ ಕಾಲಾವಕಾಶವಾಗಿ ಮಾರ್ಪಟ್ಟಿರುವುದನ್ನು ಗಮನಿಸಬಹದು. ಬದುಕುಳಿಯಲು ಪಶುಪಾಲಕ ಸಮುದಾಯಗಳು ಹಂಪಿಯ ಪರಿಸರವನ್ನು ಆಯ್ಕೆ ಮಾಡಿಕೊಂಡು ವೈವಿಧ್ಯ ವಿಭಿನ್ನತೆಗಳನ್ನು ಸಾಧಿಸಿಕೊಂಡಿವೆ. ಇದು ನಿಸರ್ಗದಿಂದ ಪಡೆದ ತಿಳುವಳಿಕೆಯಾದ್ದರಿಂದ ಪರಿಸರವೇ ಆಯಾ ಸಮುದಾಯಗಳಿಗೆ ತಮ್ಮ ಅಸ್ತಿತ್ವದ ನೆಲೆಗಳನ್ನು ತೋರುತ್ತದೆ. ನಿರಂತರವಾಗಿ ಹಂಪಿ ಪರಿಸರವು ವಿಭಿನ್ನ ಜನವರ್ಗಗಳಿಗೆ ಬದುಕಿನ ಅವಕಾಶವನ್ನು ಒದಗಿಸುತ್ತಲೇ ಸಾಗಿದೆ. ಜೀವ ವೈವಿಧ್ಯತೆ ಹೇಗೆ ಸಹಜವೊ ಹಾಗೆಯೆ ಹಂಪಿಯಲ್ಲಿ ಸಂಸ್ಕೃತಿ, ಸಮಾಜ, ಚರಿತ್ರೆ ಹಾಗೂ ಮತಧರ್ಮಗಳ ವಿವಿಧ ಪರಿಸರಗಳು ವಿಸ್ತರಿಸಿವೆ. ಈ ಒಂದೊಂದು ಪರಿಸರಗಳು ಹಂಪಿಯ ನಿಸರ್ಗನಿಷ್ಟ ಪರಿಸರದ ಜೊತೆ ಬೆರೆತು ಹೋಗಿವೆ. ಈ ಯಾವನ್ನೂ ಬೇರ್ಪಡಿಸಿ ಅಧ್ಯಯನ ಮಾಡಿದರೆ ಅದು ಅಷ್ಟರಮಟ್ಟಿಗೆ ಅಪೂರ್ಣ ಲೆಕ್ಕಾಚಾರದ ಅಧ್ಯಯನ ಮಾತ್ರ ವಾಗುತ್ತದೆ. ಪರಿಸರದ ಅಖಂಡತೆಯನ್ನು ಪ್ರವೇಶಿಸಲು ನಮ್ಮ ಮುಂದಿರುವ ಸಾಮಾಜಿಕ ತಿಳುವಳಿಕೆ ಕಡಿಮೆ ಇದ್ದರೂ ಕೂಡ ಸಾವಯವ ಸಂಬಂಧಗಳಿಂದ ಒಟ್ಟಾಗಿಯೆ ಎಲ್ಲ ಮಾನವ ನಿರ್ಮಿತ ಪರಿಸರಗಳನ್ನು ನಿಸರ್ಗದ ಬೆಳಕಿನಲ್ಲಿ ಅರ್ಥೈಸಬೇಕಾಗುತ್ತದೆ. ಆ ಬಗೆಯ ಪ್ರಯತ್ನ ವನ್ನಿಲ್ಲಿ ಮಾಡಲಾಗಿದೆ. ಪರಿಸರದ ಭಿನ್ನ ಅರ್ಥೈಸುವಿಕೆಯಲ್ಲಿ ನಮ್ಮ ಅಸ್ತಿತ್ವದ ಬೇರುಗಳ ಹುಡುಕಾಟವೂ ಇದೆ. ಅವ್ಯಕ್ತ ಸಂಸ್ಕೃತಿಯ ಪರಿಕಲ್ಪನೆಗೆ ಹೊಂದುವಂತೆ ಪರಿಸರವನ್ನು ಇಲ್ಲಿ ವಿವರಿಸಲಾಗಿದೆ. ಚರಿತ್ರೆಯ ಪರಿಸರ ಅಲ್ಲಿನ ಸಾಮಾಜಿಕ ಸಾಂಸ್ಕೃತಿಕ ನೆಲೆಗಳನ್ನು ಪ್ರಧಾನವಾಗಿ ಗಣಿಸಲೇ ಬೇಕಾಗುತ್ತದೆ. ಅಂತರ್ ಸಂಬಂಧಗಳು ಹೀಗೆಯೆ ಪರಿಸರದಲ್ಲಿ ಬೆಳವಣಿಗೆಯಾಗಿವೆ.

ಈ ಹಿನ್ನೆಲೆಗಳನ್ನು ಗಮನದಲ್ಲಿಟ್ಟುಕೊಂಡು ಹಂಪಿಯ ಪರಿಸರದಲ್ಲಿ ಐದು ಬಗೆಯ ಪರಿಸರಗಳನ್ನು ವಿಂಗಡಿಸಿಕೊಳ್ಳಬಹುದು.

  • ನೈಸರ್ಗಿಕ ಪರಿಸರ.
  • ಸಾಂಸ್ಕೃತಿಕ ಪರಿಸರ.
  • ಧಾರ್ಮಿಕ ಪರಿಸರ
  • ಸಾಮ್ರಾಜ್ಯದ ಪರಿಸರ.
  • ಸಾಮಾಜಿಕ ಪರಿಸರ.

ವಾಸ್ತವದಲ್ಲಿ ಈ ಐದು ಪರಿಸರಗಳು ವ್ಯಕ್ತ ಸ್ವರೂಪದವೇ ಆಗಿದ್ದರೂ ಈ ನೆಲೆಗಳ ಹಿನ್ನೆಲೆಯಲ್ಲಿರುವ ಅವ್ಯಕ್ತ ಸ್ವರೂಪವನ್ನು ಪ್ರಧಾನವಾಗಿ ಗ್ರಹಿಸಲಾಗಿದೆ. ವ್ಯಕ್ತ ಸ್ವರೂಪದ ಮರೆಯಲ್ಲಿರುವ ಜನಪದ ಪರಂಪರೆಗಳು ಪರಿಸರಗಳ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ರೂಪಿಸಿಕೊಂಡಿವೆ. ಅವನ್ನೆಲ್ಲ ಜೊತೆಗೂಡಿಸಿಯೆ ಅವ್ಯಕ್ತ ಸಂಸ್ಕೃತಿಯ ಒಟ್ಟು ನಿಲುವು ವ್ಯಕ್ತವಾಗುವುದು. ವ್ಯಕ್ತ ಅವ್ಯಕ್ತಗಳು ದ್ವಂದ್ವ ಸಂಬಂಧದವು. ದ್ವಂದ್ವ ಎಂದರೆ ವಿರುದ್ಧ ಎಂದು ಅರ್ಥವಲ್ಲ. ಈತನಕ ಹಾಗೇ ಭಾವಿಸಲಾಗಿದೆ. ದ್ವಂದ್ವ ಎಂಬುದರ ಅರ್ಥ ನಿಸರ್ಗದಲ್ಲಿ ಸಂಘರ್ಷ ಎಂದಾಗುತ್ತದೆ. ಸಂಘರ್ಷ ಪರಸ್ಪರ ಆಕರ್ಷಣೆ ಎರಡನ್ನೂ ಸಮನಾಗಿ ಪಡೆದಿರುತ್ತದೆ. ಸೃಷ್ಟಿಯು ಸಾಧ್ಯವಾಗುವುದೇ ಎರಡು ವಿಭಿನ್ನ ಅನನ್ಯತೆಗಳ ಸಂಗಮದಿಂದ. ಎರಡು ವಿಭಿನ್ನತೆಗಳಿಂದಲೇ ನಿಸರ್ಗ ತನ್ನ ಅವಕಾಶವನ್ನು ನಿರಂತರೀಕರಿಸಿಕೊಳ್ಳುವುದು. ಚರಿತ್ರೆ ಎಂಬುದನ್ನು ಕೂಡ ಹೀಗೆಯೆ ಭಾವಿಸಬಹುದು. ಮಾನವರ ಅವ್ಯಕ್ತ ನಂಬಿಕೆಗಳೆಲ್ಲವೂ ಸಂಸ್ಕೃತಿಯಲ್ಲಿ ವ್ಯಕ್ತವಾಗುತ್ತಿದ್ದರೆ ಅದೇ ವ್ಯಕ್ತ ಭಾವನೆಗಳೆಲ್ಲ ಸೃಷ್ಟಿಯ ಸೆಳೆತದಲ್ಲಿ ಸಂಗಮಿಸುತ್ತಿರುತ್ತವೆ. ಇದು ಜೀವಜಾಲದ ಅವಿನಾಭಾವ ಸಂಬಂಧ. ಜನಪದ ಪರಂಪರೆಗಳು ಈ ಹಾದಿಯಲ್ಲಿ ತಮ್ಮ ಬದುಕಿಗೆ ಅಗತ್ಯವಾದ ಎಲ್ಲ ವ್ಯಕ್ತ ಅವ್ಯಕ್ತ ಅಭಿವ್ಯಕ್ತಿಗಳನ್ನು ಸಾಧಿಸಿಕೊಳ್ಳುತ್ತಿರುತ್ತವೆ. ಈ ಅರ್ಥದಲ್ಲಿ ಈ ಐದೂ ಪರಿಸರಗಳನ್ನು ಸಂಕ್ಷಿಪ್ತವಾಗಿ ತಾತ್ವಿಕವಾಗಿ ಹೀಗೆ ಅರ್ಥೈಸಿಕೊಳ್ಳಬಹುದು.

ನೈಸರ್ಗಿಕ ಪರಿಸರ

ಹಂಪಿ ಪರಿಸರವು ಪ್ರಾಚೀನ ಭೂ ಪ್ರದೇಶಗಳಲ್ಲಿ ಒಂದು. ಭೂ ಪದರದ ಅತಿ ಪ್ರಾಚೀನ ಗಚ್ಚುಗಳು ಪಲ್ಲಟಗೊಂಡು ಭೂಕಂಪದ ಲಾವಾದ ಕುದಿತದಲ್ಲಿ ರೂಪುಗೊಂಡ ಹಂಪಿಯ ಬೆಟ್ಟಗುಡ್ಡ ಕಣಿವೆಗಳು ಖಂಡಾಂತರ ಬೇರ್ಪಡೆಯಿಂದಲೂ ಅನನ್ಯವಾಗಿ ಉಳಿದುಕೊಂಡಿವೆ. ಹಂಪಿಯ ಭೌಗೋಳಿಕ ಲಕ್ಷಣಗಳು ಭೌತಿಕವಾಗಿ ಏನೇ ಇದ್ದರೂ ಈ ಬಗೆಯ ಪರಿಸರವು ಸಂಸ್ಕೃತಿಗಳು ಬೆಳೆಯಲು ಯಾವ ಬಗೆಯ ಪ್ರೇರಣೆ ನೀಡಿವೆ ಎಂಬುದು ಮುಖ್ಯ. ಹಂಪಿ ಪರಿಸರವು ಬೆಟ್ಟಗುಡ್ಡ ಕಣಿವೆಗಳ ಸಮುಚ್ಚಯ. ನೀರಿನ ಹಾಗೂ ಆಹಾರದ ವಿಫುಲ ನೆಲೆಯಾಗಿದ್ದುದನ್ನು ಆದಿ ಹಂಪಿಯ ಪರಿಸರದಿಂದ ಗ್ರಹಿಸಬಹುದಾಗಿದೆ. ಸಂತಾನೋತ್ಪತ್ತಿಗೆ ಬೇಕಾದ ಹವಾಗುಣ ಕೂಡ ಜೀವಜಾಲಕ್ಕೆ ಪೂರಕವಾಗಿತ್ತು. ಇಂದಿನ ಪರಿಸರ ವಿಫುಲ ನೈಸರ್ಗಿಕ ಸವಲತ್ತುಗಳನ್ನು ನೀಡುವಂತಿಲ್ಲವಾದರೂ ತುಂಗಭದ್ರಾ ನದಿಗೆ ಕಟ್ಟಲಾದ ಅಣೆಕಟ್ಟೆಯಿಂದಾಗಿ ಇಡೀ ಹಂಪಿ ಪರಿಸರದ ಭೂ ಬಳಕೆಯ ಸ್ವರೂಪವೇ ಬದಲಾಗಿ ಹೋಗಿದೆ. ಕೃಷಿ ಭೂಮಿಯ ಬಳಕೆ ಅತಿಯಾಗಿದೆ. ಏಕರೂಪಿ ಬೆಳೆಗಳಿಂದಾಗಿ ಜೀವ ವೈವಿಧ್ಯಕ್ಕೆ ತೊಡಕಾಗಿದೆ. ಪಾರಂಪರಿಕ ಕೃಷಿ ವಿಧಾನ ಕಣ್ಮರೆಯಾಗಿದೆ. ಸಹಜಕೃಷಿ ಪದ್ಧತಿ ಬೇಡವಾಗಿದೆ. ಮೂಲ ಬೀಜಗಳು ಮರೆಯಾಗಿವೆ. ಹೈಬ್ರೀಡ್ ಧಾನ್ಯಗಳೇ ಮುಖ್ಯವಾಗಿವೆ. ನೀರಾವರಿಯಿಂದ ಬೆಳೆತೆಗೆದು ಭೂಮಿಯ ಮೇಲೆ ಹೆಚ್ಚಿನ ಒತ್ತಡ ಹೇರಲಾಗಿದೆ. ಮಣ್ಣಿನ ಸಹಜ ಗುಣ ಕ್ಷೀಣಿಸುತ್ತದೆ. ವಿಷಕಾರಿ ರಸಗೊಬ್ಬರಗಳು ಮಣ್ಣನ್ನು ವಿಷಯುಕ್ತಗೊಳಿಸಿವೆ. ಆ ಮೂಲಕ ಜೀವಜಾಲಕ್ಕೆ ಆಪತ್ತು ತಂದಿದೆ.

ಸಹಜ ಕುರುಚಲು ಕಾಡು ಇಲ್ಲವಾಗುತ್ತಿದೆ. ಹಂಪಿಯ ಪರಿಸರ ಕೃಷಿ ಚಟುವಟಿಕೆಯಿಂದ ತನ್ನ ಸಹಜ ಸ್ವಭಾವವನ್ನೆ ಕಳೆದುಕೊಳ್ಳುತ್ತಿದೆ. ಆದಿಮ ಹಂಪಿಯ ಎಷ್ಟೋ ಗಿಡ ಮರಗಳು ಪ್ರಾಣಿ ಪಕ್ಷಿಗಳು ಅಳಿವಿನ ಅಂಚಿಗೆ ಸರಿದಿವೆ. ನದಿಯ ಸಹಜ ಹರಿವು ಬದಲಾಗಿ ನದಿಯನ್ನೆ ಅವಲಂಬಿಸಿದ್ದ ಜೀವಜಾಲದ ಕ್ರಮದಲ್ಲಿ ವ್ಯತ್ಯಯ ಉಂಟಾಗಿದೆ. ನದಿಗೆ ಕಲುಷಿತ ನೀರಿನ ಸೇರ್ಪಡೆಯಿಂದಾಗಿ ಜಲಚರಗಳಿಗೆ ತೊಂದರೆ ಆಗಿದೆ. ಮೀನುಗಾರಿಕೆಗೂ ಇದರಿಂದ ತೊಡಕಾಗಿದೆ. ಇಂತಹ ವರ್ತಮಾನದ ಹಂಪಿಯ ಪರಿಸರ ಚರಿತ್ರೆಗೂ ಹಲವಾರು ಆಪತ್ತುಗಳನ್ನು ತಂದೊಡ್ಡಿದೆ. ಉತ್ತಮ ಪರಿಸರ ಪ್ರಜ್ಞೆ ಇದ್ದಲ್ಲಿ ಆ ನೆಲೆಯ ಸಂಸ್ಕೃತಿ ಮತ್ತು ಚರಿತ್ರೆಯ ವಿವೇಕವೂ ಯೋಗ್ಯವಾಗಿರುತ್ತದೆ. ಆದಿಮ ಹಂಪಿಯ ನೆಲೆಯಲ್ಲಿ ದನಗಾಹಿ ಸಂಸ್ಕೃತಿಗೆ ಇದ್ದ ಅಪಾರ ನೈಸರ್ಗಿಕ ಬೆಂಬಲದಿಂದಲೇ ಆ ಕಾಲದ ಮಾನವ ಸಮುದಾಯಗಳು ಸಧೃಡವಾಗಿ ನಿಸರ್ಗ ಮತ್ತು ಸಂಸ್ಕೃತಿಗಳೆರಡನ್ನೂ ಒಂದೇ ಬೇರಿನಿಂದ ರೂಪಿಸಿಕೊಳ್ಳಲು ಸಾಧ್ಯವಾಯಿತು. ಹಂಪಿಯ ಬೆಟ್ಟಗುಡ್ಡಗಳೇ ಅಮೂಲ್ಯ ನೈಸರ್ಗಿಕ ಸಂಪತ್ತು. ಈ ಬೆಟ್ಟಗುಡ್ಡಗಳು ತಕ್ಕುದಾದ ನೀರಿನ ತಾಣಗಳನ್ನು ಒಳಗೊಂಡಿದ್ದವು. ಪಶುಪಾಲನೆಗಂತು ಪೂರಕ ಜೀವ ವಾತಾವರಣವನ್ನು ಒದಗಿಸಿದ್ದ ಹಂಪಿ ಪರಿಸರವು ವಿಶೇಷವಾಗಿ ಸಮುದಾಯಗಳು ವಿಸ್ತರಿಸಲು ಅನುವು ಮಾಡಿಕೊಟ್ಟಿತ್ತು.

ಹಂಪಿಯ ನೈಸರ್ಗಿಕ ಪರಿಸರ ವರ್ತಮಾನದಲ್ಲಿ ಕಡಿಮೆ ಮಳೆ ಪ್ರದೇಶವಾಗಿರಬಹುದು. ಆದರೆ ಫಲವತ್ತಾದ ಪ್ರದೇಶಗಳನ್ನು ಪಡೆದಿರುವುದು ವಿಶೇಷವಾಗಿದೆ. ಕಡಿಮೆ ಮಳೆಯಲ್ಲೇ ಬೆಳೆಯಾಗುವ ಗುಣ ಈ ಪರಿಸರಕ್ಕಿದೆ. ಅಂತಹ ಧಾನ್ಯಗಳು ಕೂಡ ಈ ಪರಿಸರಕ್ಕೆ ತಕ್ಕುದಾಗಿ ಹೊಂದಿಕೊಂಡಿದ್ದರಿಂದ ಹಂಪಿ ಸಂಸ್ಕೃತಿ ಕೂಡ ನಿಸರ್ಗದ ಅಂತಹ ಗುಣವನ್ನೆ ಅಳವಡಿಸಿಕೊಂಡಿದೆ. ಹಂಪಿಯು ಆದಿಮ ಜನವಸತಿಯ ನೆಲೆಗಳಲ್ಲಿ ಒಂದಾಗಿತ್ತೆಂದು ತಿಳಿದ ಸಂಗತಿಯೇ ಆದರೂ ಈ ಪರಿಸರವು ಹೇಗೆ ಕರ್ನಾಟಕದ ದನಗಾಹಿ ಹಾಗೂ ವಕ್ಕಲು ಸಮುದಾಯಗಳ ಅಸ್ತಿತ್ವ ಹಾಗೂ ವಿಸ್ತರಣೆಗೆ ವಿಶೇಷ ಕೊಡುಗೆ ನೀಡಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಅದೆ ಅಲೆಮಾರಿ ಹಾಗು ಬುಡಕಟ್ಟು ಸಮುದಾಯಗಳು ಬಳ್ಳಾರಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ, ತುಮಕೂರು, ದಾವಣೆಗೆರೆ ಹಾಗೂ ಕರ್ನಾಟಕದ ಇನ್ನಿತರ ಬಯಲು ಪ್ರದೇಶಗಳಿಗೆ ಹಬ್ಬಿದ್ದುದು ಹಂಪಿ ಪರಿಸರದ ಬೆಟ್ಟಗುಡ್ಡಗಳ ನಡುವಿನ ಬಯಲು ಪ್ರದೇಶಗಳಲ್ಲಿ ಬೀಡುಬಿಟ್ಟು ಪಶುಪಾಲನಾ ಜೀವನ ಕ್ರಮಕ್ಕೆ ಒಗ್ಗಿ ವ್ಯವಸಾಯದ ಕಡೆಗೆ ಮುಖ ಮಾಡಿದ್ದರ ಪರಿಣಾಮವಾಗಿ ಎಂಬುದನ್ನು ವಿಶೇಷವಾಗಿ ಗಮನಿಸಬೇಕು.

ಹಂಪಿಯು ವಿಶೇಷವಾಗಿ ಬೇಡ, ಗೊಲ್ಲ, ಕುರುಬ ಸಮುದಾಯಗಳ ಮಾತೃನೆಲೆಯಂತೆ ಕಂಡುಬರುತ್ತದೆ. ಪಶುಪಾಲಕ ಸಮುದಾಯಗಳಾದ ಈ ಗುಂಪುಗಳು ತುಂಗಭದ್ರಾ ನದಿಯ ನೆಲೆಯಾದ ಹಂಪಿಯ ಬೆಟ್ಟಗುಡ್ಡ ಕಣಿವೆಗಳ ನಡುವಿನ ಹುಲ್ಲುಗಾವಲುಗಳಲ್ಲಿಯೇ ತಮ್ಮ ಮೊದಲ ಸಾಂಸ್ಕೃತಿಕ ನೆಲೆಯನ್ನು ಸ್ಥಾಪಿಸಿಕೊಂಡಿದ್ದುದು. ಆ ಬಗೆಯ ಜೀವನ ಸಂಸ್ಕೃತಿ ಆರಂಭಗೊಳ್ಳಲು ಹಂಪಿಯ ನಿಸರ್ಗ ತಕ್ಕುದಾಗಿತ್ತು. ಈ ನಿಲುವನ್ನು ಸಮರ್ಥಿಸಲು ತಕ್ಕ ಆಧಾರಗಳು ಕಾಣದಿದ್ದರೂ ಹಂಪಿ ಪರಿಸರದ ಉದ್ದಕ್ಕೂ ಮೇಲಿನ ಅಭಿಪ್ರಾಯಕ್ಕೆ ಬೇಕಾದ ಪಶುಪಾಲನಾ ಸಂಸ್ಕೃತಿಯ ದಟ್ಟ ಕುರುಹುಗಳು ಸಿಗುತ್ತವೆ. ಕರ್ನಾಟಕದಲ್ಲಿ ಈ ಮೂರು ಸಮುದಾಯಗಳಲ್ಲೆ ಹತ್ತಾರು ಉಪ ಪಂಗಡಗಳಿವೆ. ಇವೆಲ್ಲವೂ ಈಗಲೂ ಹಂಪಿ ಪ್ರದೇಶದಲ್ಲಿ ಜೀವಂತವಾಗಿವೆ. ತಮ್ಮ ಮೂಲ ಕುಲಚಹರೆಗಳನ್ನು ಉಳಿಸಿಕೊಂಡೇ ಆಧುನಿಕತೆಯ ಜೊತೆ ಮುಖಾಮುಖಿ ಆಗುತ್ತಿವೆ. ಹಂಪಿಯ ನೈಸರ್ಗಿಕ ಸಂಪತ್ತು ಪಶುಪಾಲಕ ಸಮಾಜಕ್ಕೆ ಪೂರಕವಾಗಿದ್ದು ತದನಂತರ ಹೆಚ್ಚಿನ ಸಮುದಾಯದ ಒತ್ತಡದಿಂದಾಗಿ ಪಶುಪಾಲಕ ಸಮು ದಾಯಗಳು ಕುಲಗಳಾಗಿ ವಿಂಗಡಿಸಿಕೊಂಡು ಕರ್ನಾಟಕದ ಬೆಟ್ಟಗುಡ್ಡಗಳ ಹುಲ್ಲುಗಾವಲುಗಳಿಗೆ ವಲಸೆ ಜೀವನದ ವಾರ್ಷಿಕ ಆವರ್ತನ ಕ್ರಮವನ್ನು ತಮ್ಮ ಪಶುಪಾಲಕ ಸಂಸ್ಕೃತಿಯ ಜೊತೆಗೆ ಬೆಳಸಿಕೊಂಡು ಸಾಗಿರುವುದನ್ನು ಗಮನಿಸಬಹುದು.

ಮುಂದೆ ಇದೇ ಮೂರು ಸಮುದಾಯಗಳೇ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಅಸ್ತಿಭಾರ ಹಾಕಿದ್ದನ್ನು ನಿರಾಕರಿಸಲಾಗದು. ಹಂಪಿಯ ಪರಿಸರದ ಭಾಗವಾಗಿ ಬೆಳೆದ ಈ ಸಮುದಾಯಗಳು ಹಂಪಿಯ ಸಾಮ್ರಾಜ್ಯಗಳ ಭಾಗವಾಗಿಯೂ ಬೆಳೆದವು. ಹಾಗೆಯೇ ಇಂದಿಗೂ ಈ ಪರಿಸರದ ನಿರ್ಣಾಯಕ ಶಕ್ತಿಗಳಾಗಿ ಉಳಿದುಕೊಂಡಿವೆ. ಚರಿತ್ರೆಗೆ ಹೇಗೆ ನಿಸರ್ಗದ ಬೇರುಗಳು ಸಮುದಾಯಗಳಿಗೆ ಕೂಡಿ ಬರುತ್ತವೆ ಎಂಬುದನ್ನು ಈ ಬಗೆಯ ಒಳದಾರಿಗಳ ಸಂಬಂಧದಿಂದ ಕಂಡುಕೊಳ್ಳಬಹುದು.

ಹಂಪಿ ಪರಿಸರದ ನಿರ್ಣಾಯಕ ಪಾತ್ರ ವರ್ತಮಾನದ ತನಕ ಮುಂದುವರಿದಿದೆ. ಇಂದಿನ ಗಣಿ ರಾಜಕಾರಣವು ಹಂಪಿ ಪರಿಸರವನ್ನೆ ನಾಶಪಡಿಸುವ ಮಟ್ಟಕ್ಕೆ ವ್ಯಾಪಿಸಿದೆ. ಚರಿತ್ರೆಯ ಗತಿಶೀಲತೆಯಲ್ಲಿ ನಿಸರ್ಗದ ಪಾತ್ರವನ್ನು ಹೀಗೆಯೇ ಎಂದು ಅಂತಿಮಗೊಳಿಸಲಾಗದು. ಪರಿಸರವೇ ತನಗೆ ತಕ್ಕುದಾದ ಮಾನವ ಪರಿಸರವನ್ನು ರೂಪಿಸಿಕೊಳ್ಳಬಲ್ಲದು. ನಿಸರ್ಗ ನಿರ್ಮಿತ ಪರಿಸರ ಮತ್ತು ಅದರೊಳಗೇ ಇದ್ದು ಅದರ ಮೇಲೆ ಯಾಜಮಾನ್ಯ ಸ್ಥಾಪಿಸುವ ಮಾನವ ನಿರ್ಮಿತ ಸಾಮಾಜಿಕ ಪರಿಸರ ಇವೆರಡೂ ಹೊಂದಾಣಿಕೆಯಲ್ಲೆ ಸಾಗಬೇಕು. ಅತಿಯಾದ ಮಾನವ ಒತ್ತಡ ನಿಸರ್ಗವನ್ನು ಆಕ್ರಮಿಸಿದಂತೆಲ್ಲ ಅದು ಮಾನವರಿಗೇ ಅಪಾಯ ಕಾರಿ. ಈ ಅಂಶ ವಿಜಯನಗರ ಸಾಮ್ರಾಜ್ಯಕ್ಕೂ ಅನ್ವಯಿಸಬಹುದಾದ ದೂರದ ಸಂಬಂಧ. ಒಟ್ಟಿನಲ್ಲಿ ಹಂಪಿಯ ನೈಸರ್ಗಿಕ ಪರಿಸರವು ಭೌತಿಕವಾಗಿ ಕಾಣುವದಕ್ಕಿಂತಲೂ ಮುಖ್ಯವಾಗಿ ಅವ್ಯಕ್ತವಾಗಿ ಅದು ನಿರ್ವಹಿಸುತ್ತಿರುವ ಜೀವಜಾಲದ ಸ್ವರೂಪ ಬಹಳ ಮುಖ್ಯವಾದದ್ದು.

ಸಾಂಸ್ಕೃತಿಕ ಪರಿಸರ

ಹಂಪಿಯ ನೈಸರ್ಗಿಕ ಪರಿಸರದ ಪ್ರತಿಬಿಂಬವೇ ಹಂಪಿಯ ಸಾಂಸ್ಕೃತಿಕ ಪರಿಸರ. ನಿಸರ್ಗ ಮತ್ತು ಸಂಸ್ಕೃತಿಗಳ ಸಾವಯವ ಸಂಬಂಧವೇ ಅಲ್ಲಿನ ಸಾಮಾಜಿಕ ರಚನೆಯನ್ನು ವ್ಯವಸ್ಥೆಗೊಳಿಸಿರುತ್ತದೆ. ಇವುಗಳು ಒಂದನ್ನೊಂದು ಆಶ್ರಯಿಸಿರುವುದರಿಂದ ಚರಿತ್ರೆಗೂ ಸಂಬಂಧ ಸಾಧ್ಯವಾಗಿದೆ. ಹಂಪಿಯ ಸಾಂಸ್ಕೃತಿಕ ಪರಿಸರದಲ್ಲಿ ಮೂರು ಬಗೆಯ ಸಾಂಸ್ಕೃತಿಕ ನೆಲೆಗಳನ್ನು ಕಾಣಬಹುದು. ಮೊದಲನೆಯದು ಮಾತೃನೆಲೆಯ ಶಕ್ತಿ ಆರಾಧನೆಯ ಪರಿಸರ. ಎರಡನೆಯದು ಪಿತೃಪ್ರಧಾನ ದೈವಿಕ ಆವರಣ ಮೂರನೆಯದು ಧಾರ್ಮಿಕ ನೆಲೆ. ಮಾತೃ ನೆಲೆಯ ಪರಿಸರ ಅಪ್ಪಟವಾಗಿ ನಿಸರ್ಗವನ್ನು ಮಾತೃಸ್ಥಾನದಲ್ಲಿ ಆರಾಧಿಸುವಂತರ ಈ ಭಾವನೆಯ ನಿಸರ್ಗವನ್ನೆ ಪ್ರತಿನಿಧಿಸುವಂತದ್ದಾಗಿದು ಹೇಗೆ ಸಂಸ್ಕೃತಿಯು ನಿಸರ್ಗದ ಆರಾಧನೆಯಿಂದ ಆರಂಭಗೊಂಡಿತ್ತೆ ನ್ನುವುದನ್ನು ಸೂಚಿಸುತ್ತದೆ. ಹಂಪಿ ಪ್ರದೇಶದ ಈ ವರೆಗಿನ ಜನಪದ ಸಮುದಾಯಗಳು ಮಾತೃಶಕ್ತಿಯನ್ನು ಗುಪ್ತವಾಗಿ ಕಾಯ್ದುಕೊಂಡು ಬಂದಿರುವುದನ್ನು ಗಮನಿಸಬಹುದು. ಬಹುಪಾಲು ಗ್ರಾಮದೈವಗಳು ನಿಸರ್ಗದ ಪ್ರತಿಬಿಂಬಗಳೇ ಆಗಿರುವುದನ್ನು ಗುರುತಿಸಲಾಗಿದೆ. ಕೃಷಿ ಆಚರಣೆಗಳು ಕೂಡ ಸಂಸ್ಕೃತಿಯ ಪರಿಸರವನ್ನು ನಿಸರ್ಗದ ಜೊತೆ ಬೆಸೆದಿವೆ. ಇದಕ್ಕೂ ಮೊದಲಾಗಿ ಶಕ್ತಿ ಆರಾಧನೆಯ ನಿಗೂಢ ಆಚರಣೆಗಳನ್ನು ಹಂಪಿ ಪ್ರದೇಶದ ಬೆಟ್ಟಗುಡ್ಡಗಳಲ್ಲಿ ಈಗಲೂ ಕಾಪಾಲಿಕರು, ಕಾಳಾಮುಖರು, ಅಘೋರಿಗಳು, ಇತರೆ ಶಕ್ತಿದೇವತೆಯ ಆರಾಧಕರು ಮುಂದುವರಿಸಿದ್ದು ಆ ಪರಂಪರೆಗಳು ಮುಂದುವರಿದಿವೆ. ಅಂದರೆ ಆದಿಮ ಶಕ್ತಿ ದೇವತೆಯ ಕಲ್ಪನೆಯ ಇಲ್ಲಿ ಕೂಡ ಮಾತೃ ದೈವದ ಕುರುಹಾಗಿ ವಿಸ್ತರಿಸಿದೆ.

ಪಿತೃದೈವದ ಸಾಂಸ್ಕೃತಿಕ ಪರಿಸರ ಮಧ್ಯಯುಗೀನ ಸಮಾಜಗಳ ಲಿಂಗ ಸಂಬಂಧಗಳ ಸಂಘರ್ಷದ ಫಲ. ಮಾತೃ ಪರಂಪರೆಯ ಮೇಲೆ ಯಾಜಮಾನ್ಯ ಸ್ಥಾಪಿಸಿದ ಪಿತೃ ಪ್ರಧಾನ ವ್ಯವಸ್ಥೆಯು ಪರೋಕ್ಷವಾಗಿ ನಿಸರ್ಗದ ಶಕ್ತಿಯ ಮೇಲೆಯೆ ಯಜಮಾನ್ಯ ಸ್ಥಾಪಿಸಿತು. ಆಸ್ತಿ ಹಕ್ಕು ಭೂಮಿಯ ಉತ್ಪಾದನೆಗಳ ಮೂಲಕ ಬೇರೆ ಅರ್ಥಪಡೆದುಕೊಂಡದ್ದು ಪಿತೃಪ್ರಧಾನ ವ್ಯವಸ್ಥೆಯಿಂದ. ನೈಸರ್ಗಿಕ ಸಂಪನ್ಮೂಲದ ಮೇಲಿನ ಅಧಿಕಾರ ಸ್ಥಾಪನೆಯಿಂದ ನಿಸರ್ಗಾರಾಧನೆಗಳು ಕೇವಲ ಆಚರಣೆಗಳಾಗಿ ಪಳೆಯುಳಿಕೆಯಂತೆ ಉಳಿದುಕೊಂಡವು. ಕೃಷಿಯ ಉತ್ಪಾದನೆ ಅಧಿಕವಾಗಬೇಕು ಎನ್ನುವ ಕಾರಣದಿಂದ ಮಾತ್ರ ಹಾಗೂ ನಿಸರ್ಗ ತನ್ನ ಪರವಾಗಿ ಇರಲಿ ಎಂಬ ಗುರಿಯಿಂದ ಪುರುಷ ಪ್ರಧಾನ ಸಾಂಸ್ಕೃತಿಕ ಅಧಿಕಾರವು ನಿಸರ್ಗಾರಾಧನೆಯ ಮಾತೃ ಆಚರಣೆಗಳನ್ನೆಲ್ಲ ಉಳಿಸಿಕೊಂಡಿತು. ಈ ಆಚರಣೆಗಳ ಒಡೆತನ ಪಿತೃ ಮೌಲ್ಯಕ್ಕೆ ಅಡಿಯಾಳಿನಂತೆಯೆ ರೂಪಾಂತರಗೊಳ್ಳುವುದು ಅನಿವಾರ್ಯವಾಗಿತ್ತು. ಮಾತೃ ಹಾಗೂ ಪಿತೃ ನೆಲೆಯ ನಿಸರ್ಗಾರಧನೆಗಳು ಸಂಪತ್ತಿನ ಮೇಲಿನ ಹಿಡಿತವನ್ನೆ ಬಿಂಬಿಸುವಂತೆ ಬದಲಾದದ್ದು ಮಧ್ಯಕಾಲೀನ ಸಮಾಜಗಳ ಲಿಂಗ ಸಂಬಂಧಿ ಸೋಲು ಗೆಲುವಿನ ಸಂಘರ್ಷದಿಂದಾಗಿ. ಪಿತೃ ದೈವಗಳ ಸಂಸ್ಕೃತಿಯು ಇದರಿಂದ ಬಲವಾಯಿತು. ಸಂಸ್ಕೃತಿಯನ್ನು ಪರೋಕ್ಷವಾಗಿ ಪಿತೃ ಸ್ವಭಾವಕ್ಕೆ ಪರಿವರ್ತಿಸಲಾಯಿತು. ಇದು ಮುಂದೆ ಉಳಿಗಮಾನ್ಯ ಸಂಸ್ಕೃತಿಗೆ ಅವಕಾಶ ಮಾಡಿತು. ಇದರಿಂದ ಮಾತೃ ಪರಂಪರೆಯ ನಿಸರ್ಗದ ಆಚರಣೆಗಳೆಲ್ಲ ಭೂಮಾಲಿಕ ಸಮಾಜದ ಬಲವರ್ಧನೆಗಾಗಿ ಬಳಕೆಯಾಯಿತು. ಇದು ಸಂಸ್ಕೃತಿ ವಿಕಾಸದ ಮೇಲೆ ಅಡ್ಡ ಪರಿಣಾಮ ಬೀರಿ ಸ್ತ್ರೀ ಸಂವೇದನೆಯ ನೈಸರ್ಗಿಕ ಬೇರುಗಳೆ ತುಂಡಾಗುವಂತೆ ಮಾಡಿತು. ಇದರಿಂದಾಗಿಯೇ ಪಿತೃ ಪ್ರತಿನಿಧಿಯಂತೆ ರಭದ್ರ ಹನುಮಂತ ಮುಂತಾದ ಗ್ರಾಮದೈವಗಳು ಪ್ರಬಲವಾಗಿ ಹಂಪಿ ಪರಿಸರದಲ್ಲೂ ತಮ್ಮ ಆಧಿಪತ್ಯ ಸ್ಥಾಪಿಸಲು ಸಾಧ್ಯವಾಯಿತು. ಇದು ಪಶುಪಾಲಕ ಸಮಾಜಗಳಲ್ಲಿ ಸಾಂಸ್ಕೃತಿಕ ನಾಯಕರ ಹೆಸರಿನ ಪಿತೃ ಪ್ರಧಾನ ದೈವಗಳ ಅವತಾರಗಳಿಗೆ ವಿಶೇಷ ಅವಕಾಶ ಕಲ್ಪಿಸಿತು. ಇಂತಹ ಪಲ್ಲಟಗಳೆಲ್ಲವೂ ಕರ್ನಾಟಕದ ಉದ್ದಕ್ಕೂ ಘಟಿಸಿರುವ ಸಾಂಸ್ಕೃತಿಕ ಪಲ್ಲಟಗಳು. ಈ ಪಲ್ಲಟಗಳು ನಿಸರ್ಗದ ಸಹಜ ಸ್ವಭಾವದವಾಗಿರಲಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಇದು ಸಂಸ್ಕೃತಿ ಮತ್ತು ಸಮಾಜಗಳನ್ನು ಪಿತೃಪ್ರಧಾನ ಪೂರ್ವಾಗ್ರಹದ ನೆರಳಿನಲ್ಲೆ ರೂಪಾಂತರಗೊಳ್ಳುವಂತೆ ಮಾಡಿದೆ. ಹಂಪಿಯ ಗ್ರಾಮ ಪರಂಪರೆಗಳಲ್ಲು ಇದೇ ಬಗೆಯ ಸಾಂಸ್ಕೃತಿಕ ಪರಿಸರವನ್ನು ಕಾಣಬಹುದಾಗಿದೆ.

ಧಾರ್ಮಿಕ ಪರಿಸರ

ಕೂಡ ಸಂಸ್ಕೃತಿ ಪರಿಸರದ ಪ್ರಮುಖ ಅಂಗ. ಸಂಸ್ಕೃತಿಗಳು ನಿಸರ್ಗವನ್ನು ಆಧರಿಸಿ ಬೆಳೆದಿದ್ದರೆ ಧರ್ಮಗಳು ಸಮಾಜಗಳ ವಿವೇಕವನ್ನು ಆಧರಿಸಿ ರೂಪುಗೊಂಡಿರುತ್ತವೆ. ನಿಸರ್ಗದ ಮುಗ್ಧ ಪ್ರೀತಿಯು ಆರಾಧನೆಯು ಧರ್ಮದಲ್ಲಿ ಭಕ್ತಿಯಾಗಿ ಮುಕ್ತಿ ಮಾರ್ಗವಾಗಿ ಕವಲೊಡೆ ದಿರುತ್ತದೆ. ಹಂಪಿಯ ಪರಿಸರವು ಧರ್ಮದ ನೆಲೆಯಲ್ಲಿ ವಿಶೇಷವಾದ ಪಾತ್ರಕ್ಕೆ ಒಳಗಾಗಿದೆ. ಹಿಂದೂಧರ್ಮದ ಸಂರಕ್ಷಣೆಗಾಗಿಯೇ ವಿಜಯನಗರ ಸಾಮಾಜ್ಯ ತಲೆ ಎತ್ತಿತು ಎಂಬ ಧಾರ್ಮಿಕ ಕಥನಗಳಿವೆ. ಶೈವ ವೈಷ್ಣವ ಮತ ಧರ್ಮಗಳು ಹಂಪಿ ಪ್ರದೇಶದಲ್ಲಿ ವಿಶೇಷವಾಗಿ ಬೆಳೆದಿವೆ. ಭಕ್ತಿ ಪಂಥದ ವಿಶಿಷ್ಟ ಭೂಮಿಕೆಯಾಗಿಯೂ ಹಂಪಿ ಕಂಡು ಬಂದಿದೆ. ಹಿಂದೂ ಧರ್ಮದ ಸಂರಕ್ಷಣೆಗಾಗಿ ವಿಜಯನಗರ ಸಾಮ್ರಾಜ್ಯ ನಿರಂತರವಾಗಿ ಹೋರಾಡಿತ್ತು. ಅನ್ಯ ಧರ್ಮಗಳ ಆಕ್ರಣವನ್ನು ಅದು ಸಮರ್ಥವಾಗಿಯೆ ಎದುರಿಸಿತ್ತು. ಚರಿತ್ರೆಯ ನೆನ್ನೆಯ ಧಾರ್ಮಿಕ ನೆನಪುಗಳು, ಬೃಹತ್ ಸ್ಮಾರಕಗಳು ಹಂಪಿ ಪರಿಸರದ ತುಂಬ ಇಟ್ಟಾಡುತ್ತಿವೆ. ವಿಶೇಷವಾಗಿ ಸಾಮ್ರಾಜ್ಯಗಳ ಮೂಲಕ ದೇವಾಲಯ ಪರಂಪರೆ ಹಂಪಿಯಲ್ಲಿ ಬೆಳೆಯಿತು. ಧಾರ್ಮಿಕ ಪರಿಸರ ಹಂಪಿಯ ನೈಸರ್ಗಿಕ ಸಂಪತ್ತಿನಿಂದಲೂ ಸಮೃದ್ಧವಾಗಿತ್ತು. ಇಲ್ಲಿನ ನೈಸರ್ಗಿಕ ಭದ್ರ ಕೋಟೆಯಲ್ಲಿ ಧಾರ್ಮಿಕ ಭಾವನೆಗಳು ಬಲವಾಗಿ ಬೇರು ಬಿಟ್ಟಿದ್ದವು. ಯಾವುದೇ ಧಾರ್ಮಿಕ ಸಂಸ್ಥೆಗಳು ಬೆಳೆಯಲು ಪರಿಸರವು ಮುಖ್ಯ. ಹಂಪಿ ಪರಿಸರದಲ್ಲಿ ಮತ ಧರ್ಮಗಳು ಉನ್ನತ ಮಟ್ಟ ತಲುಪಲು ತಕ್ಕ ಅವಕಾಶಗಳನ್ನು ಪಡೆದಿತ್ತು. ಆದಿಮ ಹಂಪಿಯ ಶಕ್ತಿ ಆರಾಧನೆ, ಜನಪದ ಪರಂಪರೆಗಳ ನಿಸರ್ಗಾರಾಧನೆಗಳೆರಡನ್ನೂ ಒಳಗೊಂಡಂತೆ ಹಿಂದೂಧರ್ಮ ಬಲಿಷ್ಠವಾಗಿಯೇ ತಲೆ ಎತ್ತಿತ್ತು. ಆ ಮೊದಲು ಹಂಪಿಯ ಪರಿಸರವು ಬೌದ್ಧ ಧರ್ಮದ ನೆಲೆಯಾಗಿತ್ತು. ಜೈನ ಧರ್ಮವೂ ಇಲ್ಲಿ ಬೀಡು ಬಿಟ್ಟಿತ್ತು. ವಿಜಯನಗರ ಪೂರ್ವ ಕಾಲದಲ್ಲಿ ಇಡೀ ದಕ್ಷಿಣ ಭಾರತಕ್ಕೆ ಹಂಪಿಯು ಜೈನ ಮತ್ತು ಬೌದ್ದ ಧರ್ಮಗಳ ಬಹುದೊಡ್ಡ ಕೇಂದ್ರವಾಗಿತ್ತು. ಈ ಸಂಬಂಧಿ ಗುಪ್ತ ಕುರುಹುಗಳು ಹಂಪಿ ಪರಿಸರದಲ್ಲಿ ಈಗಲೂ ಕಂಡುಬರುತ್ತವೆ. ಧಾರ್ಮಿಕ ಪರಿಸರಗಳ ಒಂದೊಂದು ಹಂತಗಳ ಮೇಲೆ ಒಂದೊಂದು ಧರ್ಮಗಳು ಇಲ್ಲಿ ಅಡಗಿವೆ. ಒಟ್ಟಾರೆಯಾಗಿ ಹಂಪಿ ಪರಿಸರದ ನೈಸರ್ಗಿಕ ನೆಲೆಯು ಧರ್ಮ ಮತ್ತು ಸಂಸ್ಕೃತಿಗಳೆರಡನ್ನೂ ಗಾಢವಾಗಿ ಬೆಳೆಸಿದೆ.

ಹೀಗಾಗಿ ಹಂಪಿ ಪರಿಸರವು ಚರಿತ್ರೆಯ ಜೊತೆ ಬೇರೆ ಬೇರೆ ಕಾಲಘಟ್ಟಗಳ ಜೀವನಕ್ರಮ ಗಳಲ್ಲಿ ಅಡಗಿಸಿಕೊಂಡಿದೆ. ಇವುಗಳನ್ನು ತಿಳಿದಲ್ಲದೆ ಹಂಪಿ ಪರಿಸರದ ಚರಿತ್ರೆಯ ಅವ್ಯಕ್ತ ಸಂಸ್ಕೃತಿಯನ್ನು ಅರಿಯಲಾಗದು. ಧಾರ್ಮಿಕವಾದ ಭಾವನೆಗಳು ವಿಜಯನಗರ ಸಾಮ್ರಾಜ್ಯ ದಲ್ಲಿ ನಿರ್ಣಾಯಕ ಪಾತ್ರವನ್ನೂ ವಹಿಸಿದ್ದವು. ಬಹಮನಿ ಸುಲ್ತಾನರಿಗೂ ವಿಜಯಗರದ ದೊರೆಗಳಿಗೂ ಇದ್ದ ವೈರತ್ವ ಕೇವಲ ಸಾಮ್ರಾಜ್ಯಗಳ ಆಧಿಪತ್ಯಕ್ಕೆ ಮಾತ್ರ ಸಂಬಂಧಿಸಿದ್ದಾಗಿರಲಿಲ್ಲ. ಧಾರ್ಮಿಕ ಅಂಶಗಳು ಯಾವುದೇ ಪರಿಸರವನ್ನು ಪವಿತ್ರೀಕರಿಸುವುದು ಹೇಗೊ ಹಾಗೆಯೆ ಅವು ಜನಾಂಗೀಯ ಭಾವನೆಗಳನ್ನು ಬಲ ಪಡಿಸುತ್ತವೆ. ಹಿಂದೂ ಮುಸ್ಲಿಂ ಎರಡೂ ಭಾವನೆಗಳು ತಕ್ಕ ಮಟ್ಟಿಗೆ ಸ್ನೇಹವನ್ನು ವಿಜಯನಗರ ಸಾಮ್ರಾಜ್ಯದಲ್ಲಿ ಸಾಧಿಸಿಕೊಂಡ ವಾಗಿದ್ದರೂ ಅದು ದಿರ್ಘಕಾಲಿಕವಾದುದಾಗಿರಲಿಲ್ಲ. ಹಾಗೆಯೆ ಪ್ರಾಮಾಣಿಕವಾಗಿರಲಿಲ್ಲ. ಎರಡೂ ಧಾರ್ಮಿಕ ನಂಬಿಕೆಗಳಲ್ಲಿ ಒಬ್ಬರಿಗೊಬ್ಬರು ಗುಪ್ತ ಅವಿಶ್ವಾಸ ನೀತಿಯನ್ನು ಸಾಧಿಸಿ ಕೊಂಡೇ ಬಂದಿದ್ದವು. ಇದೇ ಕೊನೆಗೆ ವಿಜಯನಗರದ ಅವನತಿಗೂ ಹಾಗೆಯೆ ಬಹಮನಿ ಸುಲ್ತಾನರ ಪತನಕ್ಕೂ ಕಾರಣವಾಗಿದ್ದುದು. ಧಾರ್ಮಿಕ ಪರಿಸರ ಆಳವಾದ ಪರಿಣಾಮಗಳನ್ನು ಸಾಮ್ರಾಜ್ಯಗಳ ಹುಟ್ಟು ಸಾವಿನಲ್ಲಿ ಬೀರಿರುತ್ತವೆ.

ಹಂಪಿಯ ಧಾರ್ಮಿಕ ಪರಿಸರದ ಸಾಮರಸ್ಯದ ಬಗ್ಗೆ ಒಳ್ಳೆಯ ಸಾಕ್ಷ್ಯಗಳು ಇರುವಂತೆಯೇ ಅಹಿತಕರ ವಾತಾವರಣ ಇದ್ದಿದ್ದಕ್ಕೂ ಮಾಹಿತಿ ಇದೆ. ಹಿಂದೂ ಧರ್ಮದ ಪರಿಸರದಲ್ಲೇ ಮತ ಬೇಧಗಳು ತೀವ್ರವಾಗಿದ್ದವು. ಶೈವ, ವೈಷ್ಣವ ಅಂತರಗಳು ವಿಜಯನಗರ ಸಾಮ್ರಾಜ್ಯದ ಅವನತಿಯ ಕಾಲದಲ್ಲಿ ವಿಕೋಪಕ್ಕೆ ಹೋಗಿದ್ದವು. ಶೈವ ದೇವಾಲಯಗಳು ರಕ್ಷಣೆಗೆ ಒಳಗಾಗಿ ವೈಷ್ಣವ ದೇವಾಲಯಗಳು ತೀವ್ರತರ ಹಲ್ಲೆಗೆ ಒಳಗಾದದ್ದು ಹಿಂದೂ ಧರ್ಮದ ಒಳಗೇ ಇದ್ದ ವೈರುಧ್ಯಗಳಿಂದಾಗಿ. ಇದೇ ಕಾಲಘಟ್ಟದಲ್ಲಿದ್ದ ಅಂಚಿನ ಮರೆಯ ಶಕ್ತಿ ಆರಾಧನೆಯ ಕ್ರಮಗಳು ಧರ್ಮ ಮತ್ತು ಜನಪದ ಸಂಸ್ಕೃತಿಗಳ ಎರಡೂ ಸಂಬಂಧವನ್ನು ನಿರಾಕರಿಸಿ ಬೆಟ್ಟಗುಡ್ಡಗಳ ನಿಗೂಢ ಗವಿಗಳಲ್ಲಿ ರೂಪಾಂತರಗೊಂಡು ಅನ್ಯವಾಗಿದ್ದುದು ಮತ್ತೊಂದು ಸ್ವಭಾವ. ಧರ್ಮದ ನೇರ ರೀತಿ ನೀತಿಗೆ ಒಳಪಡದ ಶಕ್ತಿ ಆರಾಧನೆಯ ವಿವಿಧ ಬಗೆಗಳು ವಿಜಯನಗರ ಸಾಮ್ರಾಜ್ಯದ ಪತನಾನಂತರ ಇಡೀ ಹಂಪಿಯ ಬೆಟ್ಟಗುಡ್ಡಗಳನ್ನೆ ತಮ್ಮ ಶಕ್ತಿ ಆರಾಧನೆಯ ರಾಜಧಾನಿಯನ್ನಾಗಿ ಮಾಡಿಕೊಂಡದ್ದು ಕಂಡುಬರುತ್ತದೆ. ಸೂಫಿ ಪಂಥ ಕೂಡ ಇದೇ ವೇಳೆಗೆ ಹಿಂದೂ ಹಾಗೂ ಇಸ್ಲಾಂ ಧರ್ಮಗಳ ಸಂಯುಕ್ತ ಭಾವವಾಗಿ ಧರ್ಮದ ಗಡಿ ಮೀರಿ ಬೆಳದದ್ದು ಇನ್ನೊಂದು ಉಪಕ್ರಮ. ಇವೆಲ್ಲವೂ ವಿಜಯನಗರ ಪತನವಾದ ಕೂಡಲೆ ಹಂಪಿ ಪರಿಸರದ ನಿಸರ್ಗದತ್ತ ಭಾವಲೋಕದಲ್ಲಿ ವಿಶೇಷವಾಗಿ ಬೆಳೆದಿವೆ. ಕರ್ನಾಟಕದ ಸಂಸ್ಕೃತಿ ಚರಿತ್ರೆಯ ಅವ್ಯಕ್ತ ಪಲ್ಲಟಗಳಲ್ಲಿ ಇವೆಲ್ಲ ಜೊತೆ ಗೂಡಿ ಶೋಧಿತ ವಾದಾಗ ಬೇರೆ ಬಗೆಯ ಅರ್ಥಗಳು ಸಿಗುತ್ತವೆ.

ಸಾಮ್ರಾಜ್ಯದ ಪರಿಸರ

ವಿಜಯನಗರ ಸಾಮ್ರಾಜ್ಯ ದಕ್ಷಿಣ ಭಾರತದಲ್ಲೇ ಅನನ್ಯವಾದ ಒಂದು ಬೃಹತ್ ಕಥನ. ಅದರ ಸಾಮ್ರಾಜ್ಯದ ಗಡಿಗಳು ದಕ್ಷಿಣ ಭಾರತವನ್ನೆ ಆವರಿಸಿದ್ದು ನಿಜಕ್ಕೂ ಅಚ್ಚರಿಯೇ. ಇಂತಹ ಬೃಹತ್ ಸಾಮ್ರಾಜ್ಯದ ಉದಯಕ್ಕೆ ಹಂಪಿ ಪರಿಸರ ಎಲ್ಲ ಬಗೆಯ ಧಾತುವನ್ನು ಒದಗಿಸಿತ್ತು ಎಂಬುದು ವಿಶೇಷ. ಸಾಮ್ರಾಜ್ಯವೂ ಒಂದು ಪರಿಸರವೇ. ಇಲ್ಲಿ ಮುಖ್ಯವಾಗಿ ವಿಶ್ವಪರಂಪರೆಯ ಹಂಪಿಯ ಒಟ್ಟು ಇಪ್ಪತ್ತೊಂಭತ್ತು ಹಳ್ಳಿಗಳು ಸಾಮ್ರಾಜ್ಯದ ಪರಿಸರವಾಗಿ ಗುರುತಿಸಲ್ಪಟ್ಟಿವೆ. ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯ ಕೇಂದ್ರ ಭಾಗವು ನೈಸರ್ಗಿಕ ಕೋಟೆಗಳ ಪರಿಸರದಲ್ಲಿತ್ತು ಎಂಬುದು ಗಮನಿಸಬೇಕಾದ ಅಂಶ. ವಿಜನಗರದ ಸಾಮ್ರಾಜ್ಯ ಸುರಕ್ಷಿತವಾಗಿದ್ದುದು ಕೂಡ ಹಂಪಿಯ ಪ್ರಾಕೃತಿಕ ರಕ್ಷಣಾ ಕೋಟೆಗಳಿಂದಾಗಿ. ಬಯಲು ಪ್ರದೇಶದಲ್ಲಿ ಹಂಪಿಯಂತಹ ಒಂದು ತಾಣ ರೂಪುಗೊಳ್ಳಲು ಸಾಧ್ಯವಿರಲಿಲ್ಲ. ಎಲ್ಲ ಸಾಮ್ರಾಜ್ಯಗಳು ನೈಸರ್ಗಿಕ ರಕ್ಷಣೆಯ ಬಲದಿಂದಲೇ ತಮ್ಮ ಕೋಟೆ ಕೊತ್ತಲಗಳನ್ನು ನಿರ್ಮಿಸಿ ಕೊಂಡಿರುವುದು. ಶಿವಾಜಿ ವಿಜಯನಗರ ಸಾಮ್ರಾಜ್ಯಾನಂತರ ಬೃಹತ್ ಸಾಮ್ರಾಜ್ಯವನ್ನು ಸ್ಥಾಪಿಸಲು ಸಾಧ್ಯವಾದದ್ದು ನಿಸರ್ಗದ ಬಲದಿಂದಾಗಿ. ಗುಡ್ಡಗಾಡುಗಳಲ್ಲಿ ಅವಿತು ಯುದ್ಧ ಮಾಡುವ ಚಾಣಾಕ್ಷ ತಂತ್ರಗಳನ್ನು ಶಿವಾಜಿ ರೂಪಿಸಿದ್ದರಿಂದಲೇ ಸಾಮ್ರಾಜ್ಯವು ಬಲಿಷ್ಟ ವಾದದ್ದು. ವಿಜಯನಗರ ಸಾಮ್ರಾಜ್ಯಕ್ಕೆ ನೈಸರ್ಗಿಕ ಗಡಿಗಳಿದ್ದವು. ಕೃಷ್ಣಾ ನದಿ, ಭೀಮಾ ನದಿ, ಘಟಪ್ರಭಾ, ಮಲಪ್ರಭಾ ನದಿಗಳು ಒಂದು ಕಡೆ ವಿಜಯನಗರ ಸಾಮ್ರಾಜ್ಯದ ಗಡಿಯನ್ನು ನಿರ್ಧಸಿರಿ ರಕ್ಷಣೆ ನೀಡಿದ್ದರೆ ತುಂಗಭದ್ರಾ ನದಿಯ ಮತ್ತೊಂದು ತುದಿಯಲ್ಲಿ ಸಾಮ್ರಾಜ್ಯದ ಎಲ್ಲೆಯನ್ನು ವಿಭಜಿಸಿ ಕೇಂದ್ರ ಸ್ಥಾನವಾಗಿದ್ದ ರಾಜಧಾನಿ ಹಂಪಿಯನ್ನು ಸಂರಕ್ಷಿಸಿವೆ. ಬೆಟ್ಟಗುಡ್ಡಗಳ ಆವರಣ ಕೂಡ ಹಂಪಿ ಸಾಮ್ರಾಜ್ಯದ ರಕ್ಷಣೆಗಿತ್ತು. ಇವೆಲ್ಲದರಿಂದಾಗಿ ವಿಜಯನಗರದ ಕೇಂದ್ರ ನಗರ ಹಂಪಿಯು ವ್ಯವಸ್ಥಿತ ರಕ್ಷಣಾ ಜಾಲವನ್ನು ರೂಪಿಸಿ ಕೊಂಡಿತ್ತು.

ಸಾಮ್ರಾಜ್ಯದ ಪರಿಸರ ಸುರಕ್ಷಿತವಾಗಿದ್ದಾಗ ಅದು ಮಹಾ ನಗರವನ್ನೆ ರೂಪಿಸಿಕೊಳ್ಳ ಬಲ್ಲದು ಎಂಬುದಕ್ಕೆ ಹಂಪಿ ನಗರವು ಅತ್ಯುತ್ತಮ ಉದಾಹರಣೆ. ಕರ್ನಾಟಕದ ಯಾವುದೇ ರಾಜ ಮನೆತನವು ವಿಜಯನಗರ ಸಾಮ್ರಾಜ್ಯದಷ್ಟು ದೊಡ್ಡ ರಾಜಧಾನಿಯನ್ನು ಹೊಂದಿ ರಲಿಲ್ಲ. ಹಂಪಿಯಂತಹ ಮಹಾನಗರದ ಬಗೆಗಿನ ವರ್ಣನೆಗಳು ಹಂಪಿ ಸಾಮ್ರಾಜ್ಯದ ಭೌತಿಕ ಪರಿಸರ ಹೇಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಉಳಿದೆವೆ. ಹಂಪಿಯ ವಿಶಾಲ ಪ್ರದೇಶವೆಲ್ಲವೂ ನಗರವೇ ಆಗಿತ್ತೆಂದರೆ ವಿಸ್ಮಯವೇ ಸರಿ. ಜಗತ್ತಿನ ಯಾವ ಸಾಮ್ರಾಜ್ಯವೂ ಇಷ್ಟೊಂದು ಬೃಹತ್ ನಗರ ಸಂಸ್ಕೃತಿಯನ್ನು ಆ ಕಾಲಕ್ಕೆ ಹೊಂದಿರಲಿಲ್ಲ. ಮೊಘಲ್ ಸಾಮ್ರಾಜ್ಯಗಳು ನಗರೀಕರಣ ಪ್ರಕ್ರಿಯೆಗೆ ಆದ್ಯತೆ ನೀಡಿ ನಗರ ನಿರ್ಮಾಣಗಳಿಗೆ ಹೆಸರುವಾಸಿಯಾಗಿದ್ದರೂ ಅವರಾರೂ ವಿಜಯನಗರದ ರಾಜಧಾನಿ ಹಂಪಿಯಂತಹ ನಗರವನ್ನು ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಇದರ ಅರ್ಥ ಏನೆಂದರೆ ಮಧ್ಯಯುಗೀನ ಸಾಮ್ರಾಜ್ಯಗಳ ಕಾಲದಲ್ಲಿ ಬೃಹತ್ ನಗರಗಳು ತಲೆ ಎತ್ತಲು ಸಾಧ್ಯವೇ ಇರಲಿಲ್ಲ. ನೈಸರ್ಗಿಕ ಭದ್ರ ಕೋಟೆಗಳ ನೆರವಿಲ್ಲದೆ ನಗರಗಳು ಉಳಿಯುತ್ತಿರಲಿಲ್ಲ. ಬಹುಪಾಲು ಮಧ್ಯಯುಗೀನ ಕಾಲದ ರಾಜಧಾನಿಗೆ ಸಮನಾದ ನೆಲೆಗಳು ಬೆಟ್ಟಗುಡ್ಡಗಳಿಗೆ ಸ್ಥಳಾಂತರಗೊಳ್ಳುತ್ತಿದ್ದುದನ್ನು ಗಮನಿಸಬಹುದು. ಉತ್ತರದಲ್ಲಿ ಮೊಘಲ್ ಸಾಮ್ರಾಟರು ತಮ್ಮ ರಾಜಧಾನಿಗಳನ್ನು ರೂಪಿಸಿಕೊಳ್ಳುವಲ್ಲಿ ಎಂತಹ ಕಷ್ಟ ಪಡುತ್ತಿದ್ದರು ಎಂಬುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. ರಜಪೂತರು ತಮ್ಮ ವಾಸದ ನೆಲೆಗಳನ್ನೆಲ್ಲ ನಿಸರ್ಗದ ರಕ್ಷಣೆಯ ತಾವಿನಲ್ಲೇ ರೂಪಿಸಿಕೊಂಡಿದ್ದುದನ್ನು ನೋಡಬಹುದು. ಮಹಮದ್‌ಬಿನ್ ತುಘಲಕ್‌ನು ರಾಜಧಾನಿಯನ್ನು ದೆಹಲಿಯಿಂದ ದಕ್ಷಿಣದ ದೇವಗಿರಿಗೆ ಸ್ಥಳಾಂತರಿಸಲು ಹೋಗಿ ಏನೇನು ಅನಾಹುತವಾಯಿತು ಎಂಬುದನ್ನು ಗಮನಿಸಿದರೆ ನಿಸರ್ಗದ ರಕ್ಷಣೆ ಹೇಗೆ ಸಾಮ್ರಾಜ್ಯಗಳಿಗೆ ಅವಶ್ಯವಿತ್ತು ಎಂಬುದನ್ನು ತಿಳಿಸುತ್ತದೆ.

ವಿಜಯನಗರ ಸಾಮ್ರಾಜ್ಯದ ಹಂಪಿಯ ಪರಿಸರ ಚರಿತ್ರೆಯ ಅವಿನಾಭಾವ ಸಂಬಂಧದಿಂದ ಬೆಸೆದು ಹೋಗಿದೆ. ನಿಸರ್ಗ, ಸಂಸ್ಕೃತಿ, ಚರಿತ್ರೆ, ಸಮಾಜ ಇವನ್ನೆಲ್ಲ ಬೇರ್ಪಡಿಸಿ ಹಂಪಿ ಪರಿಸರದಲ್ಲಿ ಅಧ್ಯಯನ ಮಾಡಲು ಸಾಧ್ಯವೇ ಇಲ್ಲ. ಸಾಮ್ರಾಜ್ಯಗಳು ಬಯಲು ಪ್ರದೇಶ ಗಳಲ್ಲಿ ಶತ್ರುಗಳ ನೇರ ದಾಳಿಗೆ ಸಿಲುಕಿ ನಾಶವಾಗುತ್ತಿದ್ದವು. ಆ ಕಾಲಕ್ಕೆ ಹಳ್ಳಿಗಳು ಕೂಡ ಬೆಟ್ಟಗುಡ್ಡಗಳನ್ನು ವಿಶೇಷವಾಗಿ ಆಶ್ರಯಿಸುತ್ತಿದ್ದವು. ಲೂಟಿಕೋರತನ ವಿಪರೀತವಾಗಿದ್ದ ಕಾಲದಲ್ಲಿ ಎಷ್ಟೋ ಹಳ್ಳಿಗಳು ಬೆಟ್ಟಗುಡ್ಡಗಳಲ್ಲಿ ಹೋಗಿ ನೆಲೆಸಿದ ದೃಷ್ಠಾಂತಗಳೂ ಇವೆ. ಹೀಗಾಗಿ ಸಾಮ್ರಾಜ್ಯದ ಪರಿಸರ ಯಾವ ಸ್ವರೂಪದ್ದು ಎಂಬುದರ ಮೇಲೆ ಆ ಸಾಮ್ರಾಜ್ಯದ ಭದ್ರ ಬುನಾದಿಯೂ ವ್ಯಕ್ತವಾಗುತ್ತಿತ್ತು. ಹಂಪಿಯ ಆ ಕಾಲದ ಗ್ರಾಮಗಳು ವಿಜಯನಗರದ ರಕ್ಷಣಾ ನೆಲೆಗಳಂತೆಯೂ ಸಾಮ್ರಾಜ್ಯದ ಪರಿಸರವನ್ನು ಕಾದಿವೆ. ಎಷ್ಟೋ ಬಾರಿ ರಾಜಧಾನಿಯ ಆಸುಪಾಸಿನಲ್ಲಿದ್ದ ಹಳ್ಳಿಗಳೇ ಸೈನಿಕ ನೆಲೆಗಳಾಗಿಯೂ ಜವಾಬ್ದಾರಿ ಹೊರಬೇಕಾಗುತ್ತಿತ್ತು. ಹಂಪಿಯ ಗ್ರಾಮಗಳ ಭೌಗೋಳಿಕ ರಚನೆಯನ್ನು ಗಮನಿಸಿದರೆ ಹಾಗೂ ಅವು ರೂಪಿಸಿ ಕೊಂಡಿದ್ದ ಕೋಟೆಗಳನ್ನು ವಿಶ್ಲೇಷಿಸಿದರೆ ಈ ಒಂದೊಂದು ಗ್ರಾಮಗಳೂ ಸ್ವಯಂ ಆದರೆ ನಿಯಂತ್ರಿತ ಸೈನಿಕ ತಾಣಗಳಂತೆಯೂ ಭಾಸವಾಗುತ್ತವೆ. ವಿಜಯನಗರ ಸಾಮ್ರಾಜ್ಯದ ಈ ಬಗೆಯ ಭೌತಿಕ ಪರಿಸರವು ಮುಖ್ಯವಾಗಿ ಹಂಪಿ ಪರಿಸರದ ನಿಸರ್ಗದ ಆಧಾರದಲ್ಲೆ ಇತ್ತೆಂಬುದು ಸ್ಪಷ್ಟ. ಸಾಮ್ರಾಜ್ಯಗಳು ನೈಸರ್ಗಿಕ ಬಲವನ್ನು ತಮ್ಮದನ್ನಾಗಿಸಿಕೊಳ್ಳುವುದು ಕೂಡ ಬದುಕುಳಿಯುವ ಹೋರಾಟದಿಂದಾಗಿ. ಈ ಹಿನ್ನೆಲೆಗಳಲ್ಲಿ ವಿಜಯನಗರದ ಸಾಮ್ರಾಜ್ಯದ ಪರಿಸರವನ್ನು ಅವ್ಯಕ್ತ ಸಂಸ್ಕೃತಿಯ ನೈಸರ್ಗಿಕ ನೆಲೆಗಳಿಂದ ಭಾವಿಸಲಾಗಿದೆ.

ಸಾಮಾಜಿಕ ಪರಿಸರ

ಸಮಾಜವು ಯಾವತ್ತೂ ಕೂಡ ಸ್ವಯಂ ಪೂರ್ಣ ಘಟಕವಲ್ಲ. ಅದು ತನ್ನ ಪರಿಸರದ ಹತ್ತಾರು ಬೇರುಗಳಿಂದ ಸ್ವರೂಪ ಪಡೆಯುತ್ತದೆ. ಹಂಪಿಯ ಆದಿಮ ಪರಿಸರವು ಕರ್ನಾಟಕ ಸಂಸ್ಕೃತಿಗೆ ತನ್ನದೇ ವಿಶಿಷ್ಟ ಕಾಣಿಕೆಯನ್ನು ನೀಡಿದೆ. ಪಶುಪಾಲಕ ಸಂಸ್ಕೃತಿಯ ಆದಿಮ ಬೇರುಗಳು ಹಂಪಿ ಪ್ರದೇಶದಲ್ಲಿ ದಟ್ಟವಾಗಿವೆ. ಕಾವೇರಿ, ಗೋದಾವರಿ ಕೃಷ್ಣಾ ನದಿಗಳ ದಂಡೆಯಲ್ಲಿ ಪ್ರಾಚೀನ ಕಾರ್ನಾಟಕದ ಆದಿ ಸಮುದಾಯಗಳ ವಾಸದ ನೆಲೆಗಳನ್ನು ಗುರುತಿಸಲಾಗುತ್ತದೆ. ಅದು ಸರಿಯಾದುದೇ ಆದರೂ ಹಂಪಿಯ ತುಂಗಭದ್ರಾ ನದಿಯ ಈ ಪ್ರದೇಶದ ಬೆಟ್ಟಗುಡ್ಡ ಕಣಿವೆ ಹಾಗೂ ಹುಲ್ಲುಗಾವಲು ಪ್ರದೇಶಗಳು ಪ್ರಾಚೀನ ಕರ್ನಾಟಕದ ಪಶುಪಾಲಕ ಸಮುದಾಯಗಳಾದ ಬೇಡ, ಗೊಲ್ಲ, ಕುರುಬ ಹಾಗೂ ಇನ್ನಿತರ ಉಪಪಂಗಡಗಳ ಮೊದಲ ಅಸ್ತಿತ್ವದ ನೆಲೆಯಾಗಿತ್ತು ಎಂಬುದನ್ನು ಸಂಶೋಧಕರು ತಕ್ಕುದಾಗಿ ಗುರುತಿಸಿಕೊಂಡಿಲ್ಲ. ಕರ್ನಾಟಕದ ಬೇಡ ಗೊಲ್ಲ ಕುರುಬ ಸಮುದಾಯಗಳು ಚಾರಿತ್ರಿಕವಾಗಿ ತುಂಗಭದ್ರಾ ನದಿಯ ದಂಡೆಯಲ್ಲಿ ತಮ್ಮ ಸಂಸ್ಕೃತಿಯ ಅನೇಕ ಕುರುಹುಗಳನ್ನು ಬಿಟ್ಟಿರುವಂತೆ ಕಾಣುತ್ತದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಗಳು ಆಗಬೇಕಾಗಿದೆ. ಈಗಲೂ ಈ ಸಮುದಾಯಗಳು ತಮ್ಮ ಪೂರ್ವಕಾಲದ ಪಳೆಯುಳಿಕೆಗಳನ್ನು ಹಂಪಿಯ ಪ್ರದೇಶದಲ್ಲಿ ಉಳಿಸಿವೆ. ಈ ಜನವರ್ಗವೆ ಮುಂದೆ ಹತ್ತಾರು ಒಳ ಪಂಗಡಗಳಲ್ಲಿ ಕವಲಾಗಿ ಈ ಪ್ರದೇಶದ ಸಂಸ್ಕೃತಿಯನ್ನು ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಿವೆ.

ವಿಜಯನಗರ ಕಾಲದ ಸಮಾಜದಲ್ಲಿ ಪ್ರಮುಖ ಉತ್ಪಾದಕ ಸಮುದಾಯಗಳಾಗಿ ಇದ್ದುದು ಬೇಡ, ಗೊಲ್ಲ, ಕುರುಬ ಇಂತಹ ಸಮುದಾಯಗಳೆ ಎಂಬುದಕ್ಕೆ ಮೃತ ಸಾಕ್ಷಿಗಳ ಅವಶ್ಯಕತೆ ಇಲ್ಲ. ಜೀವಂತವಾಗಿ ಈಗಲೂ ಈ ಸಮಾಜಗಳು ಹಂಪಿಯಲ್ಲಿ ಬೇರು ಬಿಟ್ಟಿವೆ. ಆದರೆ ವಿಜಯನಗರದ ಚರಿತ್ರೆಯ ಸಂಬಂಧ ಈ ಸಮುದಾಯಗಳ ವರ್ತಮಾನದಲ್ಲಿ ಗೈರುಹಾಜರಾಗಿದೆ ಎಂಬುದು ಪರಿಶೀಲಿಸಬೇಕಾದ ಅಂಶ. ವಿಜಯನಗರದ ಆ ಕಾಲದ ಸಮಾಜದಲ್ಲಿ ಗಣನೀಯವಾಗಿದ್ದ ಸಮಾಜಗಳೆಂದರೆ ಮೇಲೆ ಕಾಣಿಸಿದ ಸಮಾಜಗಳೇ ಎಂಬುದಕ್ಕೆ ಯಾರ ಭಿನ್ನಾಭಿಪ್ರಾಯವೂ ಇರಲಾರದು. ಆಂದ್ರ ಪ್ರದೇಶದಿಂದ ವಲಸೆ ಬಂದವರ ಸಂಖ್ಯೆಯು ನಿರ್ಣಾಯಕವಾದುದಾಗಿರಲಿಲ್ಲ. ವಿಜಯನಗರದ ಸಮಾಜ ಆ ಕಾಲದಲ್ಲಿ ಕೂಡ ಈಗಿನಂತೆ ಬಹುಬಾಷಿಕ ಸಮಾಜವೇ ಆಗಿತ್ತು. ಕನ್ನಡ, ತೆಲುಗು, ಉರ್ದು ಹಾಗೂ ಇತರೆ ದೇಶೀಯ ಭಾಷೆಗಳೆಲ್ಲವೂ ಹಂಪಿ ಪರಿಸರದಲ್ಲಿ ಬೆರೆತಿದ್ದವು. ವಿಜಯನಗರ ಸಾಮ್ರಾಜ್ಯವು ಬಹುಭಾಷಿಕ ಸಾಮ್ರಾಜ್ಯವಾಗಿತ್ತು ಎಂಬುದು ತಿಳಿದಿರುವ ಸಂಗತಿ. ಸಾಮಾಜಿಕ ಪರಿಸರ ಪ್ರಕ್ಷುಬ್ದಗೊಂಡರೆ ಸಾಮ್ರಾಜ್ಯದ ಗತಿ ಏನಾಗುವುದು ಎಂಬುದು ಬಲ್ಲ ಸಂಗತಿಯೇ. ವಿಜಯನಗರ ಸಾಮ್ರಾಜ್ಯವು ಸಮೃದ್ಧವಾಗಿದ್ದರಿಂದ ಅದರ ಸಾಮಾಜಿಕ ವ್ಯವಸ್ಥೆ ಸಂಪತ್ತಿನ ಲೆಕ್ಕಾಚಾರದಲ್ಲಿ ಗರ್ವದಲ್ಲೇ ಇತ್ತೆಂದು ಪರಿಗಣಿಸಬಹುದು. ಆದರೆ ಈ ಅಂಶವು ಸಂಸ್ಕೃತಿ ಮತ್ತು ಚರಿತ್ರೆಯ ಸಂಬಂಧಗಳಲ್ಲಿ ಹೇಗೆ ಪೂರಕವಾಗಿತ್ತು ಎಂಬುದನ್ನು ಅವ್ಯಕ್ತ ಸಂಸ್ಕೃತಿಗಳ ಆಧಾರದಿಂದ ಪರಿಶೀಲಿಸಬಹುದು.

ಜನಪದ ಸಮಾಜ ಸಾಮ್ರಾಜ್ಯಗಳ ಸೇವೆಗೆ ಬದ್ಧವಾಗಿರಬೇಕಾದ ಕ್ರಮವಾಗಿತ್ತು. ಸಾಮ್ರಾಜ್ಯವನ್ನು ನಿರಾಕರಿಸಿ ಸಮಾಜಗಳು ಬದುಕುಳಿಯಲು ಸಾಧ್ಯವಿರಲಿಲ್ಲ. ಜನಪದ ಸಮಾಜದ ಅವ್ಯಕ್ತ ಭಾವನೆಗಳು ಮಾತ್ರ ಸಾಮ್ರಾಜ್ಯದ ಭಾವನೆಗೆ ಹೊಂದುವಂತೇನು ಇರಲಿಲ್ಲ. ಸಾಮ್ರಾಜ್ಯದ ವ್ಯಕ್ತ ಮುಖವಾಣಿಗೆ ಜನಪದ ಸಮಾಜಗಳು ಅವ್ಯಕ್ತವಾಗಿ ಉತ್ತರಿಸಿವೆ. ಸಾಮ್ರಾಜ್ಯದ ಸೇವಕ ಗ್ರಾಮ ಸಮಾಜಗಳು ಎಂದೂ ಸಾಮ್ರಾಜ್ಯದ ಘನತೆಯನ್ನು ಎತ್ತಿ ಹಿಡಿಯುವಂತಹ ಬೃಹತ್ ಕಥಾನಕಗಳನ್ನು ಕಟ್ಟಿಕೊಳ್ಳಲಿಲ್ಲ. ಅವತ್ತಿನ ಚರಿತ್ರೆಯ ಪ್ರತಿಕ್ರಿಯೆಗೆ ಜನಪದರ ಪ್ರತಿಕ್ರಿಯೆಯು ಮೌನವಾಗಿಯೆ ಇತ್ತೆಂದೇ ಅವರ ಮೌಖಿಕ ಪರಂಪರೆಯನ್ನು ಗಮನಿಸಿ ತೀರ್ಮಾನಿಸಬಹುದಾಗಿದೆ. ಮೌಖಿಕ ಪರಂಪರೆ ಅವ್ಯಕ್ತ ಧಾರೆಗಳಲ್ಲಿ ನಿಸರ್ಗವನ್ನು ಆರಾಧಿಸುತ್ತದೆ. ತನ್ನ ಕೃಷಿ ಆರಾಧನೆಗಳಲ್ಲಿ ಅದಕ್ಕೆ ಮೈದುಂಬುವ ಅವಕಾಶವಿದೆ. ತನ್ನ ಕಾಲದ ರಾಜನ ಬಗ್ಗೆ ಮಾತ್ರ ಅದು ಮೌನವಾಗಿರಲು ಬಯಸುತ್ತದೆ. ಇದು ಅವ್ಯಕ್ತ ಚರಿತ್ರೆಯ ಸ್ವಭಾವ ಹಾಗೂ ಸ್ವರೂಪ. ಜನಪದ ಸಮಾಜವು ಉದ್ದಕ್ಕೂ ಹೀಗೆಯೆ ನಡೆದುಕೊಂಡು ಬಂದ ಪರಿಣಾಮವಾಗಿ ಅದು ಹಂಪಿ ನಗರ ಹತ್ತಿ ಉರಿದರೂ ದುಃಖಿಸಲಿಲ್ಲ. ಆ ಬಗೆಯ ದುರಂತವನ್ನು ಕಣ್ಣಾರೆ ಕಂಡರೂ ಕೂಡ ಮಹಾ ಕಥನವೊಂದನ್ನು ಹಾಡಿಕೊಳ್ಳಲಿಲ್ಲ. ಸಾಮ್ರಾಜ್ಯದ ಅವನತಿಯೊಂದನ್ನು ಅದರ ಸಮಾಜವೇ ಮೂಕವಾಗಿ ಸಾಕ್ಷೀಕರಿಸಿ ಅವ್ಯಕ್ತವಾಗಿಯೆ ಉಳಿದುಬಿಟ್ಟಿತು ಎಂದರೆ ಅದು ಕೂಡ ಒಂದು ಅಭಿವ್ಯಕ್ತಿಯೇ. ಚರಿತ್ರೆಗೆ ಭೌತಿಕ ಹಾಗೂ ವಾಚಿಕ ಅಭಿವ್ಯಕ್ತಿಗಳೇ ಮುಖ್ಯ ಅಲ್ಲ ಎಂಬುದು ಇಂತಹ ಅವ್ಯಕ್ತ ಅಭಿವ್ಯಕ್ತಿಯ ಕಾರಣದಿಂದಲೇ.

ವಿಜಯನಗರ ಸಾಮ್ರಾಜ್ಯದಲ್ಲಿದ್ದ ನಗರ ಸಮಾಜ ಕೂಡ ಈ ದುರಂತವನ್ನು ದಾಖಲಿಸದೆ ಪಲಾಯನ ಮಾಡಿದಂತಿದೆ. ಆ ಕಾಲದ ಭಕ್ತಿ ಪಂಥದ ಕವಿಗಳು ದಾರ್ಶನಿಕರು ಸಾಕ್ಷಾತ್ ದುರಂತವನ್ನು ಅನುಭವಿಸಿ ಏನನ್ನೂ ಹೇಳದೆ ವರ್ತಮಾನದ ಸಮಾಜಕ್ಕೆ ಏನನ್ನೋ ಬಾಕಿ ಉಳಿಸಿ ಹೋಗಿದ್ದಾರೆ. ಇವೆಲ್ಲವು ಅವ್ಯಕ್ತ ಸಂಸ್ಕೃತಿ ಹಾಗೂ ಚರಿತ್ರೆಗಳ ಅವ್ಯಕ್ತ ಸ್ವರೂಪಗಳನ್ನು ಬಿಂಬಿಸುವ ಸಂಗತಿಗಳಾಗಿವೆ. ಸಾಮಾಜಿಕ ವ್ಯವಸ್ಥೆಯೊಂದು ಉನ್ನತ ಮಟ್ಟ ತಲುಪಿ ಪತನಗೊಂಡು ದಿಕ್ಕಾಪಾಲದ ಮೇಲೆ ಅದೇ ಸಮಾಜದ ನೆಲೆಯ ಮೇಲೆ ಮತ್ತೆ ಯಾವ ಬಗೆಯ ಸಮಾಜ ಹುಟ್ಟುತ್ತದೆ ಹಾಗೂ ಅದರ ಚಾರಿತ್ರಿಕ ಸಾಂಸ್ಕೃತಿಕ ನಿಲುವು ಏನಾಗಿರುತ್ತದೆ ಎಂಬುದು ಬಹಳ ಮುಖ್ಯ. ಆ ಬಗೆಯ ಹಿನ್ನೆಲೆಗಳಲ್ಲಿ ವರ್ತಮಾನದ ಹಂಪಿಯ ಸಾಮಾಜಿಕ ಪರಿಸರವನ್ನು ಅವಲೋಕಿಸಬೇಕಾಗಿದೆ. ಯಾವ ಕಾಲದ ಸಮಾಜಗಳೂ ಪೂರ್ಣ ಸ್ವಾವಲಂಬಿಯೂ ಅಲ್ಲ ಹಾಗೆಯ ಅತ್ಯುನ್ನತ ನೈತಿಕ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಿರುವುದಿಲ್ಲ. ಹೀಗಾಗಿಯೆ ಸಾಮಾಜಿಕ ವ್ಯವಸ್ಥೆ ನಿರಂತರ ಸ್ಥಿತ್ಯಂತರಗಳಿಗೆ ಒಳಗಾಗುತ್ತಲೆ ಇರುತ್ತದೆ. ಈ ಅರ್ಥದಲ್ಲಿ ಹಂಪಿಯ ಸಾಮಾಜಿಕ ಪರಿಸರದಲ್ಲಿ ಸಾಂಸ್ಕೃತಿಕ, ರಾಜಕೀಯ, ಚಾರಿತ್ರಿಕ, ಆರ್ಥಿಕ ಅಂಶಗಳು ಹಿಡಿತ ಸಾಧಿಸಲು ಸಮುದಾಯಗಳ ನಡುವೆ ಸಂಘರ್ಷಾತ್ಮಕ ಪೈಪೋಟಿಯನ್ನು ಏರ್ಪಡಿಸಿಕೊಂಡಿರುತ್ತವೆ.

ವರ್ತಮಾನದ ಧೋರಣೆ

ಹಂಪಿಯ ಸಾಮಾಜಿಕ ಪರಿಸರ ವರ್ತಮಾನದಲ್ಲಿ ಮೇಲ್ಕಾಣಿಸಿದ ಅಂಶಗಳಿಂದ ಆಧುನಿಕ ರಾಜಕೀಯ ಪಲ್ಲಟಗಳ ಮೂಲಕ ಜಾಗತೀಕರಣ ಪ್ರಕ್ರಿಯೆಯಲ್ಲಿ ಸಾಗುತ್ತಿರುವುದನ್ನು ಗಮನಿಸಬಹುದು. ಅಂದರೆ ಸಂಕೀರ್ಣ ರೂಪಾಂತರಗಳಿಗೆ ಮುಖಾಮುಖಿಯಾಗುತ್ತಿರುವ ಒಟ್ಟು ಭಾರತದ ಆಧುನಿಕತೆಯಲ್ಲೆ ಹಂಪಿ ಸಮಾಜ ಕೂಡ ಪಲ್ಲಟಗೊಳ್ಳುತ್ತಿದೆ. ಹೀಗಾಗಿ ಗತಕಾಲದ ಸಾಮಾಜಿಕ ನಂಬಿಕೆಗಳು ಅಳಿಯುತ್ತ ಹೊಸ ಯುಗದ ಸಂಗತಿಗಳು ಪ್ರಧಾನ ವಾಗುತ್ತಿವೆ. ಹಂಪಿ ಸಮಾಜ ಎಂದರೆ ವಿಶ್ವಪರಂಪರೆಯ ವ್ಯಾಪ್ತಿಗೆ ಒಳಪಟ್ಟಿರುವ ಒಟ್ಟು ಗ್ರಾಮಗಳ ಅವ್ಯಕ್ತ ಹಾಗೂ ವ್ಯಕ್ತ ಸಂಸ್ಕೃತಿಯ ಸ್ವರೂಪವಾಗಿದೆ. ಜಾತಿ ಉಪಜಾತಿಗಳ ಸಮೂಹಗಳು ಭಾರತೀಯ ಜಾತಿ ಪದ್ಧತಿಯ ಮಾದರಿಯಲ್ಲೆ ವಿಂಗಡನೆಗೊಂಡು ಹಂಪಿ ಪ್ರದೇಶದ ಒಟ್ಟು ಜನಜೀವನದಲ್ಲಿ ಒಂದಾಗಿವೆ. ಸಾಂಪ್ರದಾಯಿಕ ಜಾತಿ ವ್ಯವಸ್ಥೆ ಇನ್ನೂ ಈ ಪರಿಸರದಲ್ಲಿ ಪ್ರಬಲ ಶಕ್ತಿಯಾಗಿದ್ದು ಶೈವ ಪಂರಪರೆಯ ದಟ್ಟ ಪ್ರಭಾವದಿಂದಲೂ ಊಳಿಗಮಾನ್ಯ ಮೌಲ್ಯಗಳಿಂದಲೂ ಸಾಮಾಜಿಕ ರಚನೆಯಲ್ಲಿ ನಿರ್ಣಾಯಕ ಶಕ್ತಿಯಾಗಿಯೆ ಮುಂದುವರಿದಿದೆ. ಜಾತಿ ವ್ಯವಸ್ಥೆ ಒಂದು ಸಾಮಾಜಿಕ ವ್ಯವಸ್ಥೆಯ ಸಾಮಾಜಿಕ ರಾಜಕೀಯ ಆರ್ಥಿಕ ಹಾಗೂ ಚಾರಿತ್ರಿಕ ಸಂಬಂಧಗಳಲ್ಲಿ ಯಾವ ಪಾತ್ರವಹಿಸುತ್ತವೆ ಎಂಬುದು ಗೊತ್ತಿರುವ ಸಂಗತಿ. ಆ ಎಲ್ಲ ಗುಣಾವಗುಣಗಳು ಹಂಪಿ ಸಮಾಜದಲ್ಲೂ ಚರಿತ್ರೆಯ ಭಾಗವಾಗಿಯೆ ಸೇರಿಕೊಂಡಿವೆ. ಜಾತಿ ವ್ಯವಸ್ಥೆ ಚರಿತ್ರೆಗೆ ಯಾವ ಬಗೆಯ ಸ್ವರೂಪವನ್ನು ತಂದುಕೊಡುತ್ತದೆ ಎಂಬುದು ಪ್ರತ್ಯೇಕವಾದ ಸಂಗತಿ. ಚರಿತ್ರೆಯ ಒಟ್ಟು ತಳವನ್ನೆ ನಿರ್ಧರಿಸಬಲ್ಲ ಶಕ್ತಿ ಜಾತಿ ಪದ್ಧತಿಗೆ ಇರುವುದರಿಂದ ಅದು ಸಮಾಜದ ಎಲ್ಲ ನೆಲೆಗಳಿಗೂ ಪರಿಣಾಮ ಬೀರಬಲ್ಲದು. ಹಂಪಿಯ ಸಮಾಜವು ಪಶುಪಾಲಕ ಸಮುದಾಯಗಳ ಸಂಯುಕ್ತ ರಚನೆಯಾಗಿದೆ. ಪಶುಪಾಲಕ ಸಮಾಜವು ಜಾತಿ ವ್ಯವಸ್ಥೆಗೂ ಬದ್ಧವಾಗಿದೆ. ಇವನ್ನೆಲ್ಲ ಆಧರಿಸಿಯೆ ಅವ್ಯಕ್ತ ಸಂಸ್ಕೃತಿಯ ಸುಪ್ತಪ್ರಜ್ಞೆಯನ್ನು ಇಲ್ಲಿ ಅರ್ಥೈಸಲು ಪ್ರಯತ್ನಿಸಲಾಗಿದೆ. ಹಂಪಿಯ ಪತನಾನಂತರ ಇಲ್ಲಿಗೆ ಎಲ್ಲೆಲ್ಲಿಂದಲೊ ವಲಸೆ ಬಂದು ನೆಲೆಯೂರಿದ ಅನ್ಯಸಮಾಜಗಳ ಸ್ವರೂಪವನ್ನು ಇಲ್ಲಿ ಮನಗಾಣಬೇಕು. ಸದ್ಯದ ಹಂಪಿಯ ಗ್ರಾಮ ಪರಿಸರದಲ್ಲಿ ಆಂಧ್ರ ಪ್ರದೇಶ ಹಾಗೂ ತಮಿಳು ನಾಡಿನಿಂದ ಬಂದ ಜನವರ್ಗಗಳ ಪ್ರಭಾವ ದಟ್ಟವಾಗಿದೆ. ಒಂದು ಕಾಲಕ್ಕೆ ಪಶುಪಾಲಕ ಸಮುದಾಯಗಳಾಗಿದ್ದ ಬೇಡ, ಗೊಲ್ಲ, ಕುರುಬ ಸಮಾಜಗಳ ನೆಲೆಯೇ ಆಗಿದ್ದ ಹಂಪಿಯ ಗ್ರಾಮಗಳು ಇಂದು ಬೇರೆಯವರ ಗ್ರಾಮಗಳಾಗಿ ಮಾರ್ಪಟ್ಟಿವೆ. ಸ್ವತಃ ಕನ್ನಡದ ಬೇರೆ ನೆಲೆಗಳಿಂದಲೂ ಹಂಪಿಯ ಹಳೆಯ ಹಳ್ಳಿಗಳಿಗೆ ಬಂದು ಕೂಡಿದ ಸಮುದಾಯಗಳು ತಮ್ಮದೇ ಆದ ಸಮ್ಮಿಶ್ರ ಸಾಮಾಜಿಕ ವಾತಾವರಣವನ್ನು ರೂಪಿಸಿಕೊಂಡಿವೆ. ಅಲೆಮಾರಿ ಸಮುದಾಯಗಳು ಮಹಾರಾಷ್ಟ್ರದ ಭಾಗದಿಂದಲೂ ಹಂಪಿಗೆ ಬಂದು ಹೋಗುವ ವಲಸೆ ಕ್ರಮ ಮುಂದುವರಿದಿದೆ. ಈ ಬಗೆಯ ವಲಸೆ ಸಮಾಜಗಳು ಅಲೆಮಾರಿ ಸಮಾಜಗಳು, ಬುಡಕಟ್ಟು ಸಮಾಜಗಳು ಒಟ್ಟಾಗಿಯೆ ಹಂಪಿಯ ಸಾಮಾಜಿಕ ಪರಿಸರವನ್ನು ವೈವಿಧ್ಯವಾಗಿ ರೂಪಿಸಿವೆ. ಅವ್ಯಕ್ತ ಸಂಸ್ಕೃತಿಯ ನೈಸರ್ಗಿಕ ಪರಂಪರೆಗಳು ಈ ಸಮಾಜಗಳ ತಳದಲ್ಲಿ ಉಳಿದಿರುವುದು ಪಳೆಯುಳಿಕೆಯ ಮಾದರಿಯಲ್ಲಿ. ಬದಲಾಗುತ್ತಿರುವ ಕಾಲದಲ್ಲಿ ಇವುಗಳೆಲ್ಲವೂ ವಿಜಯನಗರ ಸಾಮ್ರಾಜ್ಯದ ಗತಕಾಲವನ್ನು ನೆನಪಿಸುತ್ತವೆಯಾದರೂ ವರ್ತಮಾನದಲ್ಲಿ ಅದೇ ಸಮಾಜಗಳು ತಮ್ಮ ಗತಕಾಲವನ್ನೂ ಹಂಪಿಯ ಚರಿತ್ರೆಯನ್ನೂ ನಿರಾಕರಿಸುವಂತೆಯೂ ಬದುಕಿನ ಮುಖಾಮುಖಿಯಲ್ಲಿ ತೊಡಗಿವೆ.

ಅವ್ಯಕ್ತ ಸಂಸ್ಕೃತಿಯ ಬೇರುಗಳ ಈ ಸ್ವರೂಪ ಅಧ್ಯಯನಕ್ಕೆ ಹೊಸ ಬಗೆಯ ಕ್ರಮ. ಆಕರ ಪ್ರಧಾನ ಅಧ್ಯಯನ ಕ್ರಮದಲ್ಲಿ ಅವ್ಯಕ್ತ ಚರಿತ್ರೆಯನ್ನು ವಿವೇಚಿಸಲಾಗದು. ಸಿದ್ಧ ತರ್ಕಗಳು ಕೂಡ ಇಂತಹ ಸಂಗತಿಗಳಿಗೆ ಅಷ್ಟೆನು ಪ್ರಯೋಜನಕಾರಿಯಲ್ಲ. ನಿಸರ್ಗದ ಪ್ರಭಾವಗಳು ಅನ್ಯ ಸ್ವಭಾವದಲ್ಲಿ ಕೆಲಸ ಮಾಡುವುದರಿಂದ ಅದರಿಂದಾಗುವ ಮಾನಸಿಕ ಸಂಗತಿಗಳನ್ನೆಲ್ಲ ಈಗಾಗಲೇ ವ್ಯಕ್ತಮಾಡುವ ಭೌತಿಕ ಸಾಕ್ಷ್ಯದ ಜೊತೆ ಸರಳವಾಗಿ ಹೊಂದಿಸಲು ಬರುವುದಿಲ್ಲ. ಸುಪ್ತಪ್ರಜ್ಞೆಗೂ ಅವ್ಯಕ್ತ ಸಂಸ್ಕೃತಿಗೂ ನೇರವಾದ ಸಂಬಂಧವಿದೆ. ಇವೆರಡೂ ದೃಷ್ಟಿಗೋಚರ ಸಂಗತಿಗಳಲ್ಲ. ಭಾವನೆಗಳಿಗೆ ಸಂಬಂಧಿಸುವ ಅನುಭವಕ್ಕೆ ಬರುವ ಸಂಗತಿಗಳು. ಹೀಗಾಗಿಯೆ ಅವ್ಯಕ್ತ ಸಂಸ್ಕೃತಿಯು ಸುಪ್ತಪ್ರಜ್ಞೆಯ ಮಾನಸಿಕ ಸಂರಚನೆ. ಕಾಣದಂತಿರುವ ರಚನೆಯ ಅರ್ಥಗಳನ್ನು ಪತ್ತೆ ಮಾಡುವುದು ಸಲೀಸಲ್ಲ. ಜನಪದರಿಗೆ ವ್ಯಕ್ತವಾದದ್ದೆಲ್ಲ ಪ್ರತಿಷ್ಟಿತ ಲೋಕದ ಅರ್ಥ ಪರಂಪರೆಗಳಿಗೆ ಅರ್ಥವೇ ಆಗಿರುವುದಿಲ್ಲ. ನಮ್ಮ ವಿವೇಚನೆಗೆ ಕಾಣಲಿಲ್ಲ ಎಂದ ಮಾತ್ರಕ್ಕೆ ಅದನ್ನೆಲ್ಲ ಅವ್ಯಕ್ತ ಸಂಸ್ಕೃತಿ ಎಂದು ತೀರ್ಮಾನಿಸುವುದು ಕೂಡ ನಮ್ಮ ಕಣ್ಣಳತೆಯ ವೈಫಲ್ಯ. ಜನಪದರಿಗೆ ಅವ್ಯಕ್ತ ಸಂಸ್ಕೃತಿಯು ನಿತ್ಯದ ಬದುಕಿನ ವಿಧಾನ. ಅವರ ಪಾಲಿಗೆ ಅವರ ಎಲ್ಲ ಕ್ರಿಯೆಗಳು ವ್ಯವಸ್ಥಿತ ಏಕಾಭಿ ಪ್ರಾಯದ ವಿರುದ್ಧದ ಪ್ರತಿರೋಧ ಅಭಿವ್ಯಕ್ತಿಯೂ ಆಗಿರಬಹುದು. ಈ ಎಲ್ಲ ಹಿನ್ನೆಲೆಗಳಿಂದ ಅವ್ಯಕ್ತ ಸಂಸ್ಕೃತಿಯ ಹಲವು ಪರಿಸರಗಳನ್ನು ವಿವೇಚಿಸಬೇಕು. ಹಂಪಿ ಅವ್ಯಕ್ತ ಸಂಸ್ಕೃತಿಯು ನಮ್ಮ ದೃಷ್ಠಿಯಲ್ಲಿಯೂ ಅವ್ಯಕ್ತ ಅಲ್ಲ. ಅದು ಮನೋಗನ್ನಡಿಯಲ್ಲಿ ಪ್ರತಿಬಿಂಬಿತವಾಗುವ ಸಮಷ್ಟಿಯ ವ್ಯಕ್ತ ಸ್ವರೂಪ ಎಂಬುದನ್ನು ಮನನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.