ಚರಿತ್ರೆಗೂ ಸ್ವಾತಂತ್ರ್ಯ ಬೇಕು

ಈ ಮೂರು ಬಗೆಯ ಚರಿತ್ರೆಗೆಳು ಹಿಡಿಯಾಗಿ ಜನತೆಯ ಆತ್ಮಕಥನವನ್ನು ನಿವೇದಿಸುವ ಚರಿತ್ರೆಗೆಳು. ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ಈ ಮೂರು ತಿಳುವಳಿಕೆಗಳು ಆಯಾ ಪರಿಸರದಂತೆ ನಿಸರ್ಗದ ಆಧಾರದಲ್ಲಿ ಕ್ರಿಯಾಶೀಲವಾಗಿರುತ್ತವೆ. ಸ್ಥಳೀಯ ಗುಣ ಧರ್ಮಗಳ ಅನುಸಾರ, ಮೌಖಿಕ ಪರಂಪರೆಯ ಸೃಜನಶೀಲ ಅನುಸಂಧಾನದಂತೆ ತಮ್ಮ ಸಂಸ್ಕೃತಿಗಳ ಬೆಳಕಿನಲ್ಲಿ, ತಮ್ಮವರ ಚರಿತ್ರೆಯನ್ನು ಕಟ್ಟಿಕೊಳ್ಳುವ ಕ್ರಮ ಈ ಮೂರು ಚರಿತ್ರೆಗಳ ಮೂಲ ಲಕ್ಷಣ. ಇವು ಸದಾ ಒಂದನ್ನೊಂದು ಅವಲಂಬಿಸಿ ಜೀವನ ಕ್ರಮಗಳ ಜೊತೆ ಪುನರ್‌ಸೃಷ್ಠಿಗೆ ಒಳಗಾಗುತ್ತಿರುತ್ತವೆ. ಈ ಬಗೆಯ ನಿತ್ಯ ನಿರಂತರ ಚರಿತ್ರೆಗಳನ್ನು ಚೌಕಟ್ಟಿನಲ್ಲಿ ಬಂಧಿಸಿಡಲು ಬರುವುದಿಲ್ಲ. ಮನುಷ್ಯರಿಗೆ ಮಾತ್ರ ಸ್ವಾತಂತ್ರ್ಯವಿದ್ದರೆ ಸಾಲದು. ಚರಿತ್ರೆಗೂ ಸ್ವಾತಂತ್ರ್ಯವಿರಬೇಕು. ನಮ್ಮ ಉದ್ದೇಶಗಳಿಗೆ ಅನುಗುಣವಾಗಿ ಚರಿತ್ರೆಯನ್ನು ದಾಸ್ಯಕ್ಕೆ ಒಳಪಡಿಸಬಾರದು. ಆಳುವ ಎಲ್ಲ ಜ್ಞಾನಕ್ರಮಗಳು, ಪ್ರಭುತ್ವಗಳು ಚರಿತ್ರೆಯನ್ನು ತಮ್ಮ ಅಸ್ತಿತ್ವಕ್ಕಾಗಿ ರೂಢಿಸಿಕೊಂಡಿರುವುದು ಕಂಡುಬರುತ್ತದೆ. ಇದಕ್ಕಾಗಿಯೇ ಸಾಕ್ಷ್ಯಗಳು ಅನೇಕ ಬಾರಿ ಹುಟ್ಟಿಕೊಂಡದ್ದು ಮತ್ತು ಸಾಕ್ಷ್ಯಗಳ ವಿರುದ್ಧ ಸ್ವಸಾಕ್ಷಿಗಳು ಬೆಳದು ಬಂದದ್ದು. ಅನ್ಯಸಾಕ್ಷಿಗಳನ್ನು ಮಾನ್ಯ ಮಾಡಲಾರದ ಸಾಮ್ರಾಜ್ಯಗಳು ಸ್ವಸಾಕ್ಷಿಯಿಂದ ಏಕ ಮುಖವಾಗಿ ರುತ್ತವೆ. ಅದನ್ನೆ ನಂಬಿ ನಾವು ತೀರ್ಮಾನಗಳಿಗೆ ಬರಲಾಗದು. ಚರಿತ್ರೆಗೆ ಯಾವಾಗ ಸ್ವಾತ್ತಂತ್ರ್ಯ ಸಿಕ್ಕಿರುತ್ತದೆ ಎಂದರೆ ಸಾಕ್ಷ್ಯಾಧಾರಗಳ ಯಜಮಾನ್ಯವನ್ನು ಮೀರಿದಾಗ. ಸಾಮ್ರಾಜ್ಯಶಾಹಿ ಸಾಕ್ಷ್ಯಗಳು ಜನತೆಯ ಸಂಸ್ಕೃತಿಯ ಕಡೆ ಗಮನ ಹರಿಸಲಾರದಷ್ಠು ಕೊಬ್ಬಿಹೋಗಿರುತ್ತವೆ. ದಾನ, ಧರ್ಮ, ದತ್ತಿ ಸಂಬಂಧಿ ಶಾಸನಗಳು, ಕೆರೆಕಟ್ಟೆ, ಬಲಿದಾನದ ಕುರುಹುಗಳೂ ಕೂಡ ಪ್ರಭುತ್ವದ ಉದ್ದಾರದ ಮುಖ ವಾಣಿಯೆ ಆಗಿರುತ್ತವೆ.

ಈ ಎಲ್ಲ ತಿಳುವಳಿಕೆಯ ಮೂಲಕ ಚರಿತ್ರೆಯನ್ನು ನಿರೂಪಿಸಬೇಕಾದುದು ಅನಿವಾರ್ಯ. ಭಾರತೀಯರು ಅಗೋಚರ ಸಾಕ್ಷಿಗಳಲ್ಲಿ ವಿಶ್ವಾಸವಿಡುವವರು. ಇರುವ ಸಾಕ್ಷ್ಯವನ್ನು ಪೂಜಿಸುವರು. ಹಾಗೆಯೇ ಅಂತಹ ಭೌತಿಕ ಆಧಾರ ಪ್ರಮಾಣಗಳನ್ನು ವಿಧಿಯ ಪರಿಣಾಮ ಎಂದು ಚರಿತ್ರೆಯ ವಸ್ತುನಿಷ್ಠತೆಯ ಆಚೆಗೆ ಹೋಗಿ ಗ್ರಹಿಸುವವರು. ಪಶ್ಚಿಮದವರಿಗೆ ಇಂಥಹ ದರ್ಶನ ಸಾಧ್ಯವಿರಲಿಲ್ಲವಾದ್ದರಿಂದ ಅವರು ಚರಿತ್ರೆಯನ್ನು ಬಿಡಿಯಾಗಿ ಭೌತಿಕವಾಗಿ ಗ್ರಹಿಸಿದರು. ಈ ಕ್ರಮವೇನು ತಪ್ಪಿನದಲ್ಲ. ಇದರಿಂದಲೂ ಉಪಯೋಗವಿದೆ. ಆದರೆ ಚರಿತ್ರೆಯ ಭೌತಿಕ ಮಿತಿಯನ್ನು ಮೀರಿ ಗ್ರಹಿಸುವುದು ಬಹಳ ದೊಡ್ಡ ಪ್ರಯತ್ನ. ವಶಾಹತು ಶಾಹಿ ಅರ್ಥ ಜಗತ್ತಿನ ವ್ಯಾಖ್ಯಾನಕಾರರು ಇದನ್ನೆಲ್ಲ ಗ್ರಹಿಸಲು ವಿಫಲರಾದರು. ಜನಪದರು ಕಾಲವನ್ನು ಎಂದೆಂದೂ ಬಿಡಿ ಘಟಕಗಳಾಗಿ ನೋಡುವುದಿಲ್ಲ. ಚರಿತ್ರೆಯ ಎಲ್ಲ ಕಾಲಗಳನ್ನು ಸಂಯುಕ್ತಗೊಳಿಸಿ ಅರ್ಥವನ್ನು ಜೀವನಕ್ರಮಕ್ಕೆ ಅಳವಡಿಸಿಕೊಳ್ಳುವುದು ಚರಿತ್ರೆಯ ಭೌತಿಕ ಸಾಕ್ಷ್ಯವನ್ನು ಉಳಿಸುವುದಕ್ಕಿಂತಲೂ ಮಿಗಿಲಾದುದು. ಇತಿಹಾಸವನ್ನು ಸಂರಕ್ಷಿಸುವ ಈ ಬಗೆಯ ಅನ್ವಯ ಕ್ರಮವು ಅಪರೂಪದ್ದು. ಹೀಗಾಗಿಯೆ ಜನಪದ ಸಂಸ್ಕೃತಿಗಳು ತಮ್ಮ ಪರಿಸರದ ಜೊತೆ ಚರಿತ್ರೆಯನ್ನು ಜೀವಂತವಾಗಿಟ್ಟುಕೊಳ್ಳುವುದು ಮತ್ತು ಕಾಲದ ಹಂತಗಳನ್ನು ದಾಟುವುದು. ಹೀಗೆ ಮೀರುವಾಗ ಬಹಳ ಒಳಿತೇ ಉಳಿಯುತ್ತದೆ ಎಂದು ಹೇಳುವುದು ಸರಿಯಲ್ಲ. ಜೀವಂತವಾಗಿರುವ ನೆಪದಲ್ಲೆ ಗತಕಾಲವನ್ನು ಅಳಿಸುವ ಆಳುವ ವಿರೂಪಗೊಳಿ ಸುವ ಅಪಾಯಗಳೂ ಎದುರಾಗುತ್ತವೆ. ಇದಕ್ಕಾಗಿಯೇ ಚರಿತ್ರೆಯನ್ನು ಪ್ರತಿಕಾಲಘಟ್ಟದಲ್ಲೂ ಪುನರುಜ್ಜೀವನಗೊಳಿಸುತ್ತಲೇ ಇರಬೇಕು. ಚರಿತ್ರೆಯು ನದಿ ಇದ್ದಂತೆ. ಅದನ್ನು ಪ್ರತಿಯೊಂದು ಕಾಲವೂ ಸಮಾಜವೂ ಬಳಸಿಕೊಳ್ಳುತ್ತಲೆ ಇರುತ್ತವೆ. ಒಳಿತಿಗೂ ಕೆಡುಕಿಗೂ ಬಳಕೆಯಾಗುವ ಚರಿತ್ರೆ ಅಖಂಡವಾಗಿ ಮಾನವ ಘನತೆಗೆ ಅಂತಿಮವಾಗಿ ಏನನ್ನೂ ತಂದುಕೊಂಡುವುದಿಲ್ಲ. ಬೆಳೆಸುವ ಪ್ರವೃತ್ತಿಯೆ ಚರಿತ್ರೆಗೆ ಬೇಕಾದುದು.

ಇಂತಹ ನಿಲುವುಗಳನ್ನೆಲ್ಲ ನಿರ್ಧಿಷ್ಠ ದೂರದವರೆಗೆ ಮಾತ್ರ ನಾವು ಕೊಂಡೊಯ್ಯ ಬಹುದು. ಯಾವುದೇ ಅರ್ಥ ವ್ಯಾಖ್ಯಾನ ಸಿದ್ಧಾಂತವೂ ಅಂತಿಮವಾಗಿ ಅಪರಿಪೂರ್ಣ ಪ್ರಯತ್ನಗಳೇ. ಬಹುಶಿಸ್ತುಗಳ ಅಂತರ್ ಸಂಬಂಧಗಳ ಅನ್ವಯದ ಅಧ್ಯಯನಗಳ ಈ ಕಾಲದಲ್ಲಿ ಚರಿತ್ರೆ ತಂತಾನೆ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ. ಇದು ನಾಳೆ ನಮ್ಮನ್ನು ಯಾವ ಸ್ವರೂಪದ ಅಧ್ಯಯನಶೀಲತೆಗೆ ಒಳಪಡಿಸುವುದೊ ಎಂಬ ದೂರದೃಷ್ಠಿಯೆ ನಮಗೆ ಖಚಿತವಾಗಿಲ್ಲ. ಹಾಗೆಂದು ನಾಳಿನ ತೀರ್ಮಾನ, ಹೋಗಿ ಸೇರುವ ನೆಲೆಗಾಗಿ ಗೊಂದಲ ಗೊಂಡು ಇಂದಿನ ಅರ್ಥದ ನೆಲೆಗಳನ್ನು ನಾವು ಅನುಮಾನಿಸಬೇಕಾದುದಿಲ್ಲ. ಅರ್ಥವಿಕಾಶದ ಹಂತಗಳ್ನು ದಾಟಿಯೇ ಮುಂದಿನ ಕಾಲದ್ದನ್ನು ಮುಂದಿನವರಿಗಾಗಿ ಸೂಚಿಸಿ ಸಾಗಬೇಕು. ನಿಸರ್ಗವು ನಮಗೆ ಹೀಗೆಯೆ ನಿರಂತರವಾಗಿ ವಿಕಾಸದ ಮೂಲಕ ಚಲನೆಯನ್ನು ಅರ್ಥಶೋಧದ ಪರಿಯನ್ನು ತಂದು ಕೊಟ್ಟಿರುವುದು. ಜನಪದ ಸಂಸ್ಕೃತಿಯು ಬದುಕನ್ನು ಅರ್ಥೈಸಿಕೊಂಡಿರುವ ಬಗೆಯೂ ಇದೇ ಮೂಲದ್ದಾಗಿದೆ. ಆದ್ದರಿಂದಲೆ ಚರಿತ್ರೆಯ ನೆನ್ನಯನ್ನು ಜನಪದರು ಭವಿಷ್ಯದ ನಾಳೆಯ ಪ್ರತಿಧ್ವನಿಯನ್ನಾಗಿಯೂ ಕೇಳಿಸಿಕೊಳ್ಳಬಲ್ಲರು. ಜನಪದರ ಕಾಲವನ್ನು ಮಿಥ್ ಆಗಿ ಭಾವಿಸಿವುದು ಈ ಬಗೆಯಲ್ಲಿಯೇ. ಸಾಕ್ಷ್ಯದ ಹಂಗು ತೊರೆದದ್ದೆಲ್ಲ ಸುಪ್ತ ಪ್ರಜ್ಞೆಯಲ್ಲಿ ಪುರಾಣವಾಗಿ ಬಿಡುತ್ತದೆ. ಆ ಮಟ್ಟಿಗೆ ವಿಭಜಿಸಿ ನಮ್ಮ ಸಾಕ್ಷ್ಯದ ಜೊತೆ ಹೊಂದಿಸಿ ಅರ್ಥೈಸಲು ಬರುವುದಿಲ್ಲ. ಉದಾಹರಣೆಯೊಂದರಿಂದ ಈ ಅಂಶವನ್ನು ಪರಿಶೀಲಿಸಬಹುದು.

ಗತದ ಅಂತರ್ಗತ ವರ್ತಮಾನ

ಹಂಪಿಗೂ ಆನೆಗೊಂದಿಗೂ ಸೇತುವೆಯನ್ನು ನಿರ್ಮಿಸುತ್ತಿದ್ದುದು ನಮ್ಮ ಕಾಲದ ಒಂದು ಆರ್ಥಿಕ ಹಾಗೂ ರಾಜಕೀಯ ಸಾಕ್ಷ್ಯ. ಸರ್ಕಾರ ಅಥವಾ ಪ್ರಜಾಪ್ರಭುತ್ವದ ಒಂದು ನಿರ್ಮಾಣ ವಾಗಿ ಇದು ನೆನೆಗುದಿಗೆ ಬಿದ್ದಿತ್ತು. ಪರಂಪರೆಯ ಸ್ಮಾರಕಗಳಿಗೆ ಧಕ್ಕೆಯಾಗಲು ಸೇತುವೆಯಿಂದ ದಾರಿಯಾಗುತ್ತದೆ ಎಂಬ ಕಾರಣಕ್ಕೆ ಹತ್ತಾರು ಅಡ್ಡಿ ಆತಂಕಗಳು ಸೇತುವೆಯ ಮೂಲಕ ಘಟಿಸಿದ್ದವು. ಜನಪದರಾರೂ ಈ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ವ್ಯವಸ್ಥೆ ಯನ್ನೂ ಪ್ರಶ್ನಿಸಲಿಲ್ಲ. ಆಗೋದೆಲ್ಲ ಆಗಲಿ ದೇವರ ದಯೆ ಒಂದಿರಲಿ ಎಂಬ ಅಮೂರ್ತ ನಿಲುವಿಗೆ ಜನ ಬದ್ಧರಾಗಿದ್ದರು. ಅಂತೂ ಸಂಪೂರ್ಣ ಸೇತುವೆಯನ್ನು ಪೂರ್ಣಗೊಳಿಸಲು ನಮ್ಮ ದೃಷ್ಠಿಗೆ ನಿಲುಕದ ಹತ್ತಾರು ಮಾರ್ಗಗಳಿಂದ ಆನೆಗೊಂದಿ ಸೇತುವೆಗೆ ಮತ್ತೆ ಚಾಲನೆ ದೊರೆಯಿತು. ಇನ್ನೇನೂ ಕೆಲಸ ಮುಗಿಯಿತು ಎನ್ನುವ ವೇಳೆಗೆ ಅಲ್ಲಿ ಕೆಲಸ ಮಾಡುತ್ತಿದ್ದ ಕೂಲಿಯವರ ಕೆಲಸ ಮುಗಿದೇ ಹೋಗಿತ್ತು. ಸೇತುವೆ ಕುಸಿದು ನದಿಗೆ ಬಿದ್ದಿತ್ತು. ಸಾವು ನೋವು ಘಟಿಸಿತ್ತು. ವ್ಯವಸ್ಥೆ ಘಟನೆಯ ತನಿಖೆಗೆ ಹತ್ತಾರು ಊಹೆಗಳನ್ನು ಮಾಡಿತು. ಈ ದುರ್ಘಟನೆಯ ಮೂಲ ಹುಡುಕಲು ಅದು ತನಗೆ ಗೊತ್ತಿರುವ ಸಾಕ್ಷ್ಯಾಧಾರಗಳನ್ನು ಆಯ್ಕೆಮಾಡಿಕೊಂಡಿತು. ಇವುಗಳ ನಡುವೆ ಜನಪ್ರಿಯವಾದ ಸಮೂಹ ಪ್ರಜ್ಞೆ ಒಂದಿರುತ್ತದೆ. ಗಾಳಿಮಾತುಗಳು ಸಮೂಹ ಪ್ರಜ್ಞೆಯಿಂದ ಹುಟ್ಟುತ್ತವೆ. ಅವು ಅನಾಮದೇಯ ಆಕರಗಳು. ಆನೆಗೊಂದಿ ಸೇತುವೆ ಉರುಳಿ ಬಿದ್ದದ್ದಕ್ಕೆ ಗಾಳಿಮಾತಿನ ಅಭಿಪ್ರಾಯಗಳು ಜನಪದರ ಪಾರಂಪರಿಕ ನಿಲುವಿಗಿಂತಲೂ ಭಿನ್ನ. ಪ್ರಜ್ಞಾವಂತರೆಂದು ಗುರುತಿಸಿಕೊಳ್ಳುವವರು ಇದೇ ಘಟನೆಗೆ ಕಂಡುಕೊಳ್ಳುವ ಭ್ರಷ್ಟ ವ್ಯವಸ್ಥೆಯ ಕಾರಣಗಳು ಇನ್ನೊಂದು ದಿಕ್ಕಿನ ಆಧಾರಗಳು. ಹೊರಗಿನಿಂದ ಬಂದು ನೋಡುವ ವಿದೇಶಿ ಪ್ರವಾಸಿಗರು ಈ ಘಟನೆಗೆ  ಕಂಡುಕೊಳ್ಳುವ ಕಾರಣಗಳು ನಮ್ಮ ಗಡಿಯ ಆಚೆಯೆ ಉಳಿಯುತ್ತವೆ. ಈ ಹಲವು ಗ್ರಹಿಕೆಗಳೆಲ್ಲವೂ ಕಾಲಾನಂತರ ಯಾವ ಅರ್ಥಕ್ಕೆ ಹೋಗಿ ಸೇರಿರುತ್ತವೆ ಎಂಬುದನ್ನು ನಿಖರವಾಗಿ ಹೇಳಲಾಗದು. ಇಲ್ಲಿ ಒಂದು ವಸ್ತುಸ್ಥಿತಿಯನ್ನು ಹೀಗೆ ಗ್ರಹಿಸಲಾಗುತ್ತಿದೆ ಎಂಬುದರ ಮೇಲೆ ಅದರ ಸಾಕ್ಷ್ಯ ಸೃಷ್ಠಿಯಾಗುತ್ತದೆ ಅಥವಾ ಸಾಕ್ಷ್ಯವನ್ನು ಮರೆಮಾಚಿಸಲಾಗುತ್ತದೆ. ಪ್ರಭುತ್ವದ ಭಯವಿದ್ದಾಗಲೆಲ್ಲ ಘಟನೆಯ ಮೂಲಕಾರಣಗಳು ಪರೋಕ್ಷವಾಗಿ ಮಾತನಾಡತೊಡಗುತ್ತವೆ. ಜನ ಪದರು ಘಟನೆಯ ಹೊರಮೈಯನ್ನು ನಂಬುವುದಿಲ್ಲ. ಹಾಗೆ ನಂಬಿದರೆ ಅದರ ಹೊಟ್ಟೆಗೂ ನೆತ್ತಿಗೂ ಅಪಾಯವಿರುತ್ತದೆ. ಆದ್ದರಿಂದ ಅದು ಅಗೋಚರ ಸಾಕ್ಷ್ಯವನ್ನೆ ಹಾಡಿ ತನ್ನ ವರ್ತಮಾನದ ಸಂಕಟದಿಂದ ಪಾರಾಗಲು ಯತ್ನಿಸುತ್ತದೆ. ಆನೆಗೊಂದಿ ಸೇತುವೆ ಮುರಿದು ಬಿದ್ದದ್ದಕ್ಕೆ ವರ್ತಮಾನದ ಕಾರಣಗಳೂ ಜನಪದರಿಗೆ ಗೊತ್ತಿರುತ್ತದೆ. ಆ ಕಾರಣಗಳನ್ನು ಹೇಳುವ ಬದಲು ಇಡೀ ಘಟನೆಯನ್ನೇ ಜನಪದರ ಸುಪ್ತಪ್ರಜ್ಞೆಯು ತನ್ನ ಗತಕಾಲದ ಪುರಾಣ ಮನಸ್ಸಿನಿಂದ ಹೇಳಲು ತೊಡಗುತ್ತದೆ. ಈ ಸ್ಥಿತಿಯು ನಿಜಕ್ಕೂ ಶೋಚನೀಯ ವಾದುದು. ವಿದ್ವಾಂಸರ ನೈತಿಕತೆಯನ್ನು ಬೇಡುವಂತದ್ದು ಹಾಗೂ ಒಟ್ಟು ವ್ಯವಸ್ಥೆಯ ಕುರೂಪವನ್ನು ಪುರಾಣದ ಕಥನದ ಜೊತೆ ಬೆರೆಸಿ ಪಲಾಯನವನ್ನೂ ಮಾಡುವಂತದ್ದು. ತುಂಬ ಸಂಕೀರ್ಣವಾದ ಈ ಸ್ಥಿತಿಯನ್ನು ಚರಿತ್ರಕಾರ ಗ್ರಹಿಸಬೇಕಾದ ಕ್ರಮವನ್ನೆ ಪ್ರಶ್ನಿಸು ವಂತಿರುವ ಈ ನಡತೆಯು ಬಹಳ ಮುಖ್ಯವಾದ ಅಂಶಗಳ ಕಡೆಗೆ ನಮ್ಮ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತಿದೆ.

ವಿಜಯನಗರ ಕಾಲದ ಅರಸರ ಕಾಲದಿಂದಲೂ ಇಲ್ಲಿ ಸೇತುವೆ ಮಾಡಲು ಹತ್ತಾರು ಯತ್ನಗಳು ನಡೆದಿದ್ದವು. ಆದರೆ ಪ್ರತಿಬಾರಿಯು ಸೇತುವೆ ನಿಲ್ಲದೆ ಅರ್ಧದಲ್ಲೇ ಮುರಿದು ಬೀಳುತ್ತಿತ್ತು. ಹೀಗೇಕೆ ಎಂದು ದೇವರಲ್ಲಿ ಕೇಳಿದಾಗ ದೇವರು ಹೇಳಿತಂತೇ ಇದು ದೇವ ಮಾರ್ಗ, ನದಿಯ ಈಚೆ ದಡದಿಂದ ಆಚೆ ದಡಕ್ಕೆ ಹೋಗಿ ಬರಲು ದೇವತೆಗಳೇ ಕಂಡು ಕೊಂಡಿರುವ ದಾರಿ. ಇಂತಹ ದಾರಿಯಲ್ಲಿ ಸೇತುವೆ ಮಾಡುವುದು ದೇವರಿಗೇ ಇಷ್ಟವಾಗದು. ಹಾಗಾಗಿ ಇಲ್ಲಿ ನೀವು ಎಷ್ಟೇ ಸಲ ಸೇತುವೆ ಕಟ್ಟಿದರೂ ಅದು ನಿಲ್ಲುವುದಿಲ್ಲ. ಮುಂದೆಂದೂ ಇಲ್ಲಿ ಸೇತುವೆ ನಿರ್ಮಿಸಬಾರದು. ಹಾಗೆ ಮಾಡಿದ್ದೆ ಆದರೆ ಅದು ಏನು ಮಾಡಿದರೂ ನಿಲ್ಲುವುದಿಲ್ಲ ಎಂದಿತಂತೆ. ಈಗ ಅದರಂತೆಯೇ ಆಯಿತು ನೋಡಿ ಎಂದು ಆನೆಗೊಂದಿಯ ಜನಪದರು ಕಥೆ ಹೇಳಿದರು. ಇದನ್ನು ನಂಬುವುದು ಬಿಡುವುದು ಎರಡೂ ಸುಲಭ. ವಸ್ತುಸ್ಥಿತಿಯನ್ನು ಮೀರಿದ ಭಾವನಿಷ್ಠ ಅಮೂರ್ತ ಅರ್ಥವನ್ನೆ ಯಾಕೆ ಜನಪದರು ನಂಬುತ್ತಾರೆ ಎಂಬುದನ್ನು ಗ್ರಹಿಸಬೇಕು. ಗತಕಾಲವನ್ನೂ, ವರ್ತಮಾನವನ್ನೂ ಈ ನಿರೂಪಣೆಯು ಪುರಾಣದ ಪರಿಭಾಷೆಯಲ್ಲಿ ವ್ಯಾಖ್ಯಾನಿಸುತ್ತಿದೆ. ಸೇತುವೆ ನಿರ್ಮಾಣವಾಗುತ್ತಿದ್ದ ಸ್ಥಳದಲ್ಲೆ ದೇವಾಲಯಗಳು ಇದ್ದವೆಂದು ಜನಪದರು ಹೇಳುತ್ತಾರೆ. ಅವರ ನಂಬಿಕೆಯ ಪ್ರಕಾರ ದೇವ ಮಾರ್ಗದ ದೇವರ ಸೇತುವೆಯ ಮೇಲೆ ಮಾನವ ಸೇತುವೆ ನಿರ್ಮಿಸುವುದು ದುರ್ಘಟನೆಗೆ ಕಾರಣ ಎಂಬ ಸೂಚನೆಯನ್ನು ಧ್ವನಿಸುತ್ತಿದೆ.

ಚರಿತ್ರೆಯ ಅತಿಮಾನುಷ ನಂಬಿಕೆ

ಇದನ್ನು ವಾಸ್ತವವಾಗಿ ಒಪ್ಪಿಕೊಳ್ಳಲಾಗದು ನಿಜ. ಆದರೆ ಈ ಅರ್ಥದಿಂದ ನಮಗೆ ಒಂದು ಅಂಶ ಹೊಳೆಯುತ್ತದೆ. ಚರಿತ್ರೆಯ ವರ್ತಮಾನವನ್ನು ಕೂಡ ಚರಿತ್ರೆಯ ಗತಕಾಲ ವನ್ನಾಗಿ ಪರಿವರ್ತಿಸುವ ಮಾನಸಿಕ ದೂರವನ್ನು ಬಹಳ ಸಲೀಸಾಗಿ ಜನಪದರು ಎಟುಕಿಸಿ ಕೊಳ್ಳುತ್ತಿದ್ದಾರೆ. ಆದ್ದರಿಂದಲೆ ಅವರು ಚರಿತ್ರೆಯ ನಾಳೆಯನ್ನು ಕೂಡ ಪ್ರತಿಧ್ವನಿಸುವ ಊಹೆಯನ್ನು ಮಾಡಬಲ್ಲರು. ಈ ರೀತಿಗೆ ಘಟನೆಯ ವಾಸ್ತವಾಂಶಗಳ ಹಂಗು ಬೇಕಿಲ್ಲ ಪುರಾಣ ಪ್ರಜ್ಞೆಯಿದ್ದರೆ ಸಾಕು. ಈ ಪ್ರಜ್ಞೆಯು ವಿಶೇಷವಾಗಿ ವ್ಯಕ್ತಿಯ ಸುಪ್ತಪ್ರಜ್ಞೆಯಲ್ಲಿ ಮಾತ್ರವಲ್ಲದೆ ಸಂಸ್ಕೃತಿಗಳ ಸಮಷ್ಠಿಪ್ರಜ್ಞೆಯಲ್ಲಿ ನಂಬಿಕೆಯಾಗಿ ಬೆರೆತು ಹೋಗುತ್ತದೆ. ಚರಿತ್ರಕಾರರು ಇದರ ಜಾಡನ್ನು ತಿಳಿದೇ ಚರಿತ್ರೆಗೆ ಅಮೂರ್ತವಾಗಿ ನಿರ್ಮಾಣವಾಗಿರುವ ಸುಪ್ತ ಪ್ರಜ್ಞೆಯನ್ನು ವಾಸ್ತವಕ್ಕೆ ತಂದು ಬಿಡಿಸಬೇಕು. ವ್ಯಕ್ತಿಗಳ ಸುಪ್ತಪ್ರಜ್ಞೆಯು ಅವರವರ ಸಂಸ್ಕೃತಿಗಳ ಚರಿತ್ರೆಗಳ ಸಮಷ್ಠಿಪ್ರಜ್ಞೆಯಾಗಿ ಮಾರ್ಪಡುವುದು. ವಿಧಿಯ ನಂಬಿಕೆ ಕೂಡ ಚರಿತ್ರೆಯ ಫಲಾಫಲಗಳನ್ನು ನಿರ್ಧರಿಸಲು ಜನಪದರಿಗೆ ಇಂಬು ನೀಡಿರುತ್ತದೆ. ಹೀಗಾಗಿಯೇ ಈ ಎಲ್ಲ ಅಂಶಗಳು ಬೆರತು ಘಟನೆಯೊಂದನ್ನು ಬಿಡಿಯಾಗಿ ನೋಡಲು ಜನಪದರಿಗೆ ಸಾಧ್ಯವಾಗದೆ ಇರುವುದು. ಲೌಖಿಕದ ಅಗತ್ಯಕ್ಕೆ ವಿಭಜನೆಯ ಅರ್ಥನೋಟ ಅನಿವಾರ್ಯ. ಆನೆಗೊಂದಿಯ ಸೇತುವೆ ಮುರಿದು ಬಿದ್ದದ್ದಕ್ಕೆ ಜನಪದರು ನೀಡುವ ದೈವಿಕ ಕಲ್ಪನೆಯ ಕಾರಣಗಳು ಅನೇಕ ಬಾರಿ ನಿಜವಾಗಿ ನಡೆದ ಘಟನೆಯ ವಾಸ್ತವಾಂಶಗಳನ್ನೆ ಮುಚ್ಚಿಹಾಕು ವಷ್ಠರ ಮಟ್ಟಿಗೆ ಅವು ಪ್ರಬಲ ಹಾಗೆಯೆ ದುರ್ಬಲ. ಇವುಗಳ ಆಧಾರದ ಮೇಲೆ ಚರಿತ್ರೆಯನ್ನು ಹೇಗೆ ಬರೆಯಬಹುದು? ಇಂತಹ ನಿರೂಪಣೆಗಳಿಂದ ಸಮಾಜಕ್ಕೆ ಏನು ಪ್ರಯೋಜನ? ಇತ್ಯಾದಿ ಪ್ರಶ್ನೆಗಳು ಸಹಜ.

ಇಂತಹ ಆಧಾರ ಕಥೆಗಳನ್ನು ಕಟ್ಟಿಕೊಂಡು ಚರಿತ್ರೆಯನ್ನು ಬರೆದರೆ ಸತ್ಯಾಂಶವನ್ನು ನಾವೂ ಮರೆಮಾಚಿದಂತೆಯೆ ಆಗುತ್ತದೆ. ಬರೆಯಬೇಕಾದುದು ಇಲ್ಲಿ ಕಥೆಗಳ ಕಲ್ಪನೆಯ ಹಿಂದಿರುವ ಸುಪ್ತಪ್ರಜ್ಞೆಯ ಸ್ಥಿತಿಯನ್ನು. ಜನಪದರು ಹೇಳುವ ಕಥನಗಳು ಕೂಡ ಹೇಳಲಾಗದ ಕಥನಗಳನ್ನು ತಮ್ಮ ಒಳಗೇ ಬಚ್ಚಿಟ್ಟುಕೊಂಡಿರುತ್ತವೆ. ಪ್ರಾಕ್ತನ ಮನಸ್ಸನ್ನು ಅಗೆದು ಅಲ್ಲಿ ಅಡಗಿರುವ ವಾಸ್ತವಾಂಶಗಳನ್ನು ಚರಿತ್ರಕಾರ ಕಂಡುಕೊಳ್ಳಬೇಕು ಮತ್ತು ಅಂತಹ ಸ್ವಭಾವ ಹೇಗೆ ವರ್ತಮಾನದ ಜನಪದರ ಜೀವನದಲ್ಲಿ ಪ್ರತಿಫಲಿಸುತ್ತಿದೆ ಎಂದು ಗ್ರಹಿಸಬೇಕು. ಜನಪದರ ಸಾಕ್ಷ್ಯ ಕಥೆಗಳು ತಾರ್ಕಿಕವಲ್ಲ. ಭಾವನಿಷ್ಠ ನಿರೂಪಣೆಗಳು ಅವು. ಆಳದಲ್ಲಿ ಅವುಗಳು ಅರ್ಥವನ್ನು ಬಚ್ಚಿಟ್ಟುಕೊಂಡಿರುತ್ತವೆ. ಆ ಅರ್ಥಗಳನ್ನು ಕಂಡೇ ಇತಿಹಾಸಕಾರ ತನ್ನ ನಿರೂಪಣೆಗೆ ಸಮಗ್ರತೆಯನ್ನು ತಂದುಕೊಳ್ಳಬೇಕು. ಪ್ರತಿಯೊಂದು ಚರಿತ್ರೆಯ ಘಟನೆ ಗಳು ಕಾಲಾನಂತರ ಬೆಳೆಯುತ್ತ ಅರ್ಥ ಬಿಂಬಿಸುತ್ತವೆ. ಯಾವ ಚರಿತ್ರೆಯೂ ಯಧಾವತ್ತು ಕಥನವಲ್ಲ. ಚರಿತ್ರೆಯ ಘಟನೆಗಳು ಮನಸ್ಸಿನಲ್ಲಿ ಪ್ರತಿಸೃಷ್ಠಿಯಾಗುವುದು ಯಾಕೆ ಎಂದರೆ ನಿರ್ಧಿಷ್ಠ ವಸ್ತುಸ್ಥಿತಿಯನ್ನು ಮೀರಲು. ಯಾವುದೇ ಘಟನೆಯು ಕಾಲಕಳೆದಂತೆ ತನ್ನ ತೀವ್ರತೆ ಯನ್ನು ಕಳೆದುಕೊಳ್ಳುತ್ತದೆ. ಆಗ ಅದರ ಸಾಕ್ಷ್ಯವೂ ಜಡಗೊಳ್ಳುತ್ತದೆ. ಹಾಗಾಗಿ ಈ ಜಡತೆಯುನ್ನು ದಾಟಲು ಚರಿತ್ರೆಯ ನೆನ್ನೆಯ ಘಟನೆಗಳು ವರ್ತಮಾನದ ಘಟನೆಗಳಂತೆ ಬಿಂಬಿತವಾಗಬೇಕಾದರೆ ಅವು ಅನಿವಾರ್ಯವಾಗಿ ರೂಪಾಂತರಗೊಂಡು ಭಿನ್ನ ಆಧಾರಗಳು ಸೃಷ್ಠಿಯಾಗುತ್ತವೆ. ಈ ಸ್ಥಿತಿಯಲ್ಲಿ ತಮ್ಮ ಸಂಸ್ಕೃತಿಗಳ ನೆನಪುಗಳ ಮೂಲಕ ಚರಿತ್ರೆಯ ವಿವರಗಳು ಬಣ್ಣಪಡೆದುಕೊಳ್ಳುತ್ತವೆ. ಒಂದು ಸಾಕ್ಷ್ಯ, ಘಟನೆ, ವಿವರ, ಕಥನ ಹೇಗೆ ಭಿನ್ನ ತಲೆಮಾರುಗಳ ಮಧ್ಯೆ ಬೆಳೆಯುತ್ತಾ ಹೋಗುತ್ತವೆ ಎಂಬುದೆ ನಿಜವಾದ ಚಲನಶೀನತೆ. ಈ ಪ್ರಕ್ರಿಯೆಗೆ ನಿರ್ದಿಷ್ಠ ಗುರಿ ಇಲ್ಲ. ಅಧಿಕೃತ ಸಾಕ್ಷಿಯ ಅಂಕುಶವಿಲ್ಲ. ನಿರಂಕುಶ ಸಾಕ್ಷಿಗಳು ಈ ಬಗೆಯ ವಿಕಾಸದಿಂದಲೇ ಅರ್ಥಕಳೆದುಕೊಂಡು ಮೃತ ಸಾಕ್ಷಿಗಳಾಗುವುದು.

ದ್ವಂದ್ವ ಚಲನೆಯ ಪರಿಣಾಮ

ಘಟನೆಯ ಪುರಾಣೀಕರಣ ಪ್ರಕ್ರಿಯೆಯೂ ಹೀಗೆಯೆ. ಅವ್ಯಕ್ತ ಸಂಸ್ಕೃತಿಗಳು ಗತಕಾಲ ವನ್ನು ವರ್ತಮಾನವಾಗಿಸುವುದನ್ನು ಎಷ್ಟು ಸಲೀಸಾಗಿಸಿಕೊಂಡಿರುತ್ತವೊ ಅಷ್ಟೇ ಸುಲಭವಾಗಿ ವರ್ತಮಾನವನ್ನು ಕೂಡ ಗತಕಾಲವನ್ನಾಗಿಸಿ ಬಿಡಬಲ್ಲವು. ಈ ಹಂತದಲ್ಲಿ ಚರಿತ್ರಕಾರ ವ್ಯಕ್ತ ಚರಿತ್ರೆಯನ್ನೂ ಅವ್ಯಕ್ತ ಚರಿತ್ರೆಯನ್ನೂ ಒಂದಾಗಿ ಗ್ರಹಿಸುವ ಕೌಶಲ್ಯವನ್ನು ಕಂಡುಕೊಳ್ಳಬೇಕು. ಚರಿತ್ರೆಯ ಸುಪ್ತಪ್ರಜ್ಞೆಯನ್ನು ಜನಪದ ಕಥನಗಳಲ್ಲಿ ಕಾಣಲು ಸಾಧ್ಯವಾದರೆ ಪ್ರಜ್ಞಾವಂತರ ಪ್ರಜ್ಞಾಪೂರ್ವಕ ಹಾಗೂ  ಪ್ರಭುತ್ವಬದ್ಧ ಸಾಕ್ಷ್ಯಾಧಾರಗಳಲ್ಲಿಚರಿತ್ರೆಯ ವ್ಯಕ್ತ ಪ್ರಜ್ಞೆಯನ್ನು ಕಾಣಬಹುದು. ಚರಿತ್ರೆಯ ಸುಪ್ತ ಪ್ರಜ್ಞೆಯು ಸಾಕ್ಷಿಬದ್ಧವಲ್ಲ, ಕಾಲಬದ್ಧವಲ್ಲ, ಘಟನಾಬದ್ಧವಲ್ಲ, ತರ್ಕ ಹಾಗೂ ಕಾರಣಗಳ ಹಂಗಿನದಲ್ಲ. ಅದು ಸುಪ್ತ ಪ್ರಜ್ಞೆಯನ್ನು ಅಪ್ರಜ್ಞಾಪೂರ್ವಕ ಸ್ಥಿತಿಯನ್ನು ಆಶ್ರಯಿಸಿಯೆ ಅಭಿಪ್ರಾಯಗಳನ್ನು ರೂಢಿಸಿಕೊಳ್ಳುತ್ತಿರುತ್ತದೆ. ಆದ್ದರಿಂದಲೆ ಆನೆಗೊಂದಿ ಸೇತುವೆಯ ದುರ್ಘಟನೆಗೆ ಜನಪದ ಸಮಾಜ ಅವ್ಯಕ್ತ ಚರಿತ್ರೆಯ ಕಥನಗಳನ್ನು ಕಂಡುಕೊಳ್ಳುವುದು. ಚರಿತ್ರೆಯ ಸುಪ್ತಪ್ರಜ್ಞೆ ಕಣ್ಣಿಗೆ ಕಾಣುವಂತದಲ್ಲ. ಅದು ಗ್ರಹಿಕೆಗೆ ಸ್ಪಂದಿಸುವಂತದ್ದು, ಹೊಳೆಯುವಂತದ್ದು. ಇದನ್ನೆ ಅವ್ಯಕ್ತ ಚರಿತ್ರೆ ಎಂದು ತಿಳಿಯ ಬಹುದು. ಜನಪದರ ಅವ್ಯಕ್ತ ಸಂಸ್ಕೃತಿಯಲ್ಲಿ ಅವ್ಯಕ್ತ ಚರಿತ್ರೆಯು ಅಡಗಿರುತ್ತದೆ. ಇವರೆಡೂ ಒಂದನ್ನೊಂದು ನಂಬಿಯೆ ವಿಕಾಸವಾಗುತ್ತವೆ. ವ್ಯಕ್ತಚರಿತ್ರೆ ಯಾವತ್ತೂ ಯಜಮಾನ್ಯ ಕ್ರಮಗಳಲ್ಲಿ ಬೆಳೆದರೆ ಅವ್ಯಕ್ತ ಚರಿತ್ರೆಯು ಯಜಮಾನ್ಯದ ಗಡಿ ಮೀರಿ ಬೆಳೆದಿರುತ್ತದೆ. ಆನೆಗೊಂದಿ ಸೇತುವೆಯ ಪ್ರಕರಣದಲ್ಲಿ ವ್ಯಕ್ತ ಚರಿತ್ರೆ ಹಾಗೂ ಅವ್ಯಕ್ತ ಚರಿತ್ರೆ ಎರಡೂ ಏಕಕಾಲಕ್ಕೆ ಅರ್ಥಗಳನ್ನು ಕಂಡುಕೊಳ್ಳುವುದು ಇಂತಹ ಅಂತರ‍್ಗತ ವಿಕಾಸದ ಕಾರಣದಿದಲೇ.

ವ್ಯಕ್ತಚರಿತ್ರೆ ಹಾಗೂ ಅವ್ಯಕ್ತ ಚರಿತ್ರೆ ಇವರಡರ ಅರ್ಥದ ಪಯಣ ವಿರುದ್ಧ ದಿಕ್ಕಿನದೇ ಆದರೂ ಪರಿಣಾಮದಲ್ಲಿ ಎರಡು ವಿರುದ್ಧ ಚಲನೆಗಳು ಸಂದಿಸುತ್ತವೆ. ಗುರುತ್ವಾಕರ್ಷಣ ಶಕ್ತಿಯು ಭೂಮಿಯ ಅಂತರ‍್ಗತ ಸೆಳೆತದ ಒಂದು ಕ್ರಿಯಾತ್ಮಕ ಪರಿಣಾಮವೆನಿಸಿದರೆ, ಅದೇ ಭೂಮಿಯ ಒಳಗಿನಿಂದಲೇ ಸೆಳೆತವನ್ನು ಮೀರಿ ನೂಕುವ ಪ್ರತಿರೋಧ ಚಲನೆಯೂ ಅದೇ ಕಾಲಕ್ಕೆ ಘಟಿಸುತ್ತಿರುತ್ತದೆ. ಇದು ನಿಸರ್ಗದ ಅನಿವಾರ್ಯ ಕ್ರಿಯೆ. ಗುರುತ್ವಾಕರ್ಷಣೆಗೆ ವಿರುದ್ಧವಾದ ಚಲನೆ ಕಣ್ಣಿಗೆ ಕಾಣುವಿದಿಲ್ಲವಾದರೂ ಸೆಳತೆಕ್ಕೆ ವಿರುದ್ಧವಾಗಿದ್ದರೂ ಈ ಕರ್ಷಣ ಗುಣ ಬದುಕುಳಿಯಲು ಅನಿವಾರ್ಯ ಕ್ರಿಯೆ. ವ್ಯಕ್ತ ಹಾಗೂ ಅವ್ಯಕ್ತ ಪ್ರಜ್ಞಾಪೂರ್ವಕ ಮತ್ತು ಅಪ್ರಜ್ಞಾಪೂರ್ವಕ ಕ್ರಿಯೆಗಳು ಕೂಡ ಜೀವಜಾಲದ ಇಂತದೇ ಆಕರ್ಷಣ ವಿಕರ್ಷಣ ಪ್ರಕ್ರಿಯೆಗಳಲ್ಲಿ ನಿರಂತರವಾಗಿ ಸಾಗುತ್ತಿರುತ್ತವೆ. ಇದು ಸೃಷ್ಠಿಯ ಸಹಜ ಸರಳ ಕ್ರಿಯೆ. ಘನ ಗಂಭೀರವಾಗಿ ಕಾಣುತ್ತಿರಬಹುದಾದರೂ ನಮ್ಮ ಅರಿವಿನ ಆಚಿನ ವಿಕಾಸದಲ್ಲಿ ಇವೆಲ್ಲ ಸಾಮಾನ್ಯ. ಈ ವೈಜ್ಞಾನಿಕ ವಿವರವನ್ನು ಚರಿತ್ರೆಯ ಘಟನೆಗಳ ಪರಿಣಾಮದಲ್ಲಿ ಕಂಡು ಕೊಂಡರೆ ತಪ್ಪೇನಿಲ್ಲ. ಗುರತ್ವಾಕರ್ಷಣ ಕ್ರಿಯೆಗೂ ಚರಿತ್ರೆಯ ಕ್ರಿಯೆಗೂ ನೇರ ಸಂಬಂಧವಿಲ್ಲ ನಿಜ. ಹಾಗೆಯೆ ಗತಕಾಲದ ಜನಪದರ ಪುರಾಣ ಪ್ರಜ್ಞೆಗೂ ಇಂದಿನವರ ವ್ಯಕ್ತಪ್ರಜ್ಞೆಗೂ ಸೇತುವೆ ಕಾಣುವುದಿಲ್ಲ ಎಂಬುದು ದಿಟವೇ. ಆದರ ಅರ್ಥ ಸಂಬಂಧಗಳ ರಹದಾರಿಗಳು ಸುಪ್ತಪ್ರಜ್ಞೆಯ ಅವ್ಯಕ್ತ ಚರಿತ್ರೆಯಲ್ಲಿ ಹೇಗೆ ನಿರ್ಮಾಣಗೊಂಡಿರುತ್ತವೆ ಎಂಬುದನ್ನು ಸುಲಭವಾಗಿ ಗ್ರಹಿಸಲಾಗದು.

ಚಲನೆಯ ಪ್ರತಿಚಲನೆ ಭೌತಲೋಕದ ಸಾಮಾನ್ಯ ನಿಯಮ. ಅರ್ಥದ ಪ್ರತಿ ಅರ್ಥವೂ ವ್ಯಕ್ತತೆಯ ಪ್ರತಿ ಅವ್ಯಕ್ತತೆಯೂ ಸಂಸ್ಕೃತಿ ಲೋಕದ ಸಹಜ ಸಂಹಿತೆ. ವಿರುದ್ಧ ದಿಕ್ಕಿನ ಚಲನೆಗಳು ಪರಿಣಾಮದಲ್ಲಿ ಸಂಧಿಸುತ್ತವೆ ಎಂದು ಮೇಲೆ ಪ್ರಸ್ತಾಪಿಸಿದ್ದೆ. ದ್ವಂದ್ವವಾಗಿದ್ದು ಕೊಂಡೇ ಎಷ್ಟೋ ಚರಿತ್ರೆಯ ಸಂಗತಿಗಳು ಪರಿಣಾಮದಲ್ಲಿ ಬೆಸುಗೆ ಆಗುತ್ತಿರುತ್ತವೆ. ವಿಜಯನಗರ ಸಾಮ್ರಾಜ್ಯದ ಹುಟ್ಟಿಗೂ ಪತನಕ್ಕೂ  ಹತ್ತಾರು ದಿಕ್ಕಿನ ವಿವರಗಳಿವೆ. ಪರ ವಿರುದ್ಧ ಕಾರಣಗಳೂ ಸಮರ್ಥನೆಗಳೂ ಇವೆ. ಇವುಗಳನ್ನು ಆಧರಿಸಿ ರೂಪುಗೊಂಡ ಚರಿತ್ರೆಯ ಚಲನೆಯಲ್ಲಿ ಪರಿಣಾಮಗಳೇ ನಿಜವಾದ ಸಂಪರ್ಕ ಬಿಂದುಗಳು. ಎಲ್ಲ ಬಗೆಯ ಪರಿಣಾಮಗಳೇ ನಾಳಿನ ಅಸ್ತಿತ್ವಕ್ಕೆ ದಾರಿ ತೋರುವುದು. ಚರಿತ್ರೆಯ ನಿರ್ವಚನದಲ್ಲಿ ಇಂತಹ ಮಾನಸಿಕ ಸಂಬಂಧ ಹೆಚ್ಚು ವ್ಯಾಪ್ತಿಯನ್ನು ಆವರಿಸಿಕೊಳ್ಳುವಂತದ್ದು. ಚರಿತ್ರೆಯ ಈ ಬಗೆಯ ಮಾನವ ಸಂಬಂಧಗಳಿಗಾಗಿ ಅವ್ಯಕ್ತ ಸಂಸ್ಕೃತಿಗಳ ಸುಪ್ತ ಪ್ರಜ್ಞೆಯನ್ನು ವಿಶೇಷವಾಗಿ ಆಶ್ರಯಿಸಬೇಕಾಗಿದೆ. ಚರಿತ್ರೆಯಲ್ಲಿ ತುಂಬಿಹೋಗಿರುವ ಮೃತಸಾಕ್ಷಿಗಳಿಂದ ಚರಿತ್ರಕಾರ ಮುಕ್ತನಾಗಬೇಕಾಗಿದೆ. ಅವ್ಯಕ್ತವಾಗಿ ಬೆಳೆಯುತ್ತ ಸಂಸ್ಕೃತಿಗಳ ವಿಕಾಸದಲ್ಲಿ ಚರಿತ್ರೆ ಬೆರೆತು ಹೋಗಿರುತ್ತದೆ. ಇದರಿಂದ ಘಟನೆಗಳು ಮಾತ್ರವಲ್ಲದೆ ಅರ್ಥಗಳೂ ಸಾಕ್ಷಿ ಪ್ರಜ್ಞೆಗಳೂ ಬೆಳೆಯುತ್ತ ಸಾಗುತ್ತವೆ. ಆನೆಗೊಂದಿ ಸೇತುವೆಯ ವಿವರವನ್ನೆ ಇನ್ನೂ ಹಲವು ಧಾರೆಗಳಲ್ಲಿ ವಿಶ್ಲೇಷಿಸಿ ಚರಿತ್ರೆಯ ಸಂವೇದನೆಗೆ ಹೊಂದಿಸುವುದು ಸಾಧ್ಯ. ಹೀಗೆಯೆ ಚರಿತ್ರೆಯ ಅಖಂಡ ಪ್ರಜ್ಞೆಯನ್ನು ತಾತ್ವಿಕವಾಗಿ ಕಂಡುಕೊಳ್ಳಬಹುದು. ವಿಶೇಷವಾಗಿ ಚರಿತ್ರೆಯ ಸುಪ್ತಪ್ರಜ್ಞೆಯನ್ನು ಪ್ರಧಾನ ಆಕರವನ್ನಾಗಿ ಧ್ಯಾನಿಸಬೇಕಾದ ಕಾಲವಿದು. ಆಕರವಾಗಿ ಗ್ರಹಿಸುತ್ತಲೇ ನಮ್ಮ ಅಸ್ತಿತ್ವದ ಪ್ರಜ್ಞೆಯ ವಿಕಾಸವನ್ನು ನಮ್ಮ ಸುತ್ತಣ ಹಲವು ಬಗೆಯ ಪರಿಸರ, ನಿಸರ್ಗ, ಸಂಸ್ಕೃತಿಗಳ ಅನುಸಂಧಾನದಿಂದ ಹೊಸ ಕಥನಗಳನ್ನು ಕಟ್ಟಿಕೊಳ್ಳಬೇಕು.