ಪ್ರತಿಯೊಂದು ಚರಿತ್ರೆಗೂ ಅವ್ಯಕ್ತ ಸಂಸ್ಕೃತಿಯ ಬೇರುಗಳ ಸಂಬಂಧವಿದೆ. ಸಂಸ್ಕೃತಿಯ ವಿಕಾಸದ ಜೊತೆಯಲ್ಲೆ ಚರಿತ್ರೆಯ ಪಯಣ ಆರಂಭವಾಗಿದೆ. ಮೂಲತಃ ಸಂಸ್ಕೃತಿಯು ಮಾನವ ನಿರ್ಮಿತ ಪರಿಸರದ ಪರಿಣಾಮ. ಮಾನವ ಪ್ರಯತ್ನಗಳೆಲ್ಲ ಚರಿತ್ರೆಯ ಸಂಗತಿಗಳೇ. ಈ ಪ್ರಯತ್ನಗಳ ಸರಣಿಯು ನಿರಂತರವಾಗಿ ತನ್ನ ಸುತ್ತಲ ವಿವಿಧ ಪರಿಸರದ ಅವಿನಾಭಾವ ಸಂಬಂಧದಿಂದ ಸಮಾಜಗಳನ್ನು ರೂಪಿಸುತ್ತದೆ. ತನ್ನ ಬದುಕಿನ ಒಪ್ಪಂದದ ಭಾಗವಾಗಿಯೇ ಮನುಷ್ಯ ತನ್ನ ಸಂದರ್ಭ ಮತ್ತು ನಿಸರ್ಗವನ್ನು ಗ್ರಹಿಸುತ್ತಾನೆ. ಹಾಗಾಗಿಯೆ ನಿಸರ್ಗವು ಸಂಸ್ಕೃತಿಯ ಕೇಂದ್ರ. ಇವೆರಡರ ಸಂಬಂಧವನ್ನು ನಾಗರೀಕತೆಗಳು ನಿರಂತರವಾಗಿ ಬೆಳೆಸಿಕೊಳ್ಳುತ್ತಲೆ ಬಂದಿವೆ. ಮಾನವ ನಿರ್ಮಿತ ಪರಿಸರ ಮತ್ತು ನಿಸರ್ಗ ನಿರ್ಮಿತ ಪರಿಸರಗಳು ಚರಿತ್ರೆಯ ಘಟನೆಗಳನ್ನು ನಿರ್ಣಾಯಕವಾಗಿ ರೂಪಿಸುತ್ತದೆ. ಚರಿತ್ರೆ ಯಾವತ್ತೂ ಕೂಡ ನಿರಂತರ ಪ್ರಕ್ರಿಯೆ. ಅದು ಸದಾ ಬೆಳೆಯುವ ಪ್ರಜ್ಞೆ. ಕಾಲದ ಬೇರೆ ಬೇರೆ ಅನುಭವಗಳನ್ನು ವರ್ತಮಾನದ ಜೊತೆ ಅನುಸಂಧಾನ ಮಾಡುವ ಸೂಕ್ಷ್ಮ ಮಾನಸಿಕ ಕ್ರಿಯೆ. ಗತವನ್ನು ಹೇಳುತ್ತಲೆ ವರ್ತಮಾನವನ್ನು ಎಚ್ಚರಿಸುವ ವಿವೇಕ. ಇಂತಹ ನೆಲೆಯಿಂದಾಗಿಯೇ ಚರಿತ್ರೆಯು ಸಮಾಜವನ್ನು ರೂಪಿಸುವ ಕೆಲಸವನ್ನು ಮಾಡುತ್ತಿರುತ್ತದೆ.

ಚರಿತ್ರೆ, ಸಂಸ್ಕೃತಿ, ಪರಿಸರ ಈ ಮೂರೂ ಪರಿಕಲ್ಪನೆಗಳನ್ನು ಬಹುರೂಪಿ ಸ್ತರಗಳಲ್ಲಿ ಅರ್ಥೈಸಬಹುದು. ಅವ್ಯಕ್ತ ಸಂಸ್ಕೃತಿಯ ಜೊತೆಯಲ್ಲಿ ಚರಿತ್ರೆಯ ಸುಪ್ತಪ್ರಜ್ಞೆಯನ್ನು ಗ್ರಹಿಸುವುದು ಮತ್ತೂ ವಿಶೇಷವಾದುದು. ಈ ಅಂಶಗಳನ್ನು ನಿರ್ಧಿಷ್ಟಗೊಳಿಸಿ ನಿರೂಪಿಸಿದಾಗ ಹೊರಡುವ ಅರ್ಥಗಳೇ ಬೇರೆ, ಹಾಗೆಯೇ ಅದೇ ಸಂಗತಿಗಳನ್ನು ಸ್ಥಳೀಯವಲ್ಲದೆ ವಿಶ್ವಾತ್ಮಕವಾಗಿ ನೋಡಿದಾಗ ಹೊಳೆಯುವ ಅರ್ಥವೇ ಬೇರೆ. ಸ್ಥಳೀಯ ಮತ್ತು ವಿಶ್ವಾತ್ಮಕ ನೆಲೆಗಳ ಎಲ್ಲ ಅರ್ಥಗಳು ಆಯಾಯ ಪರಿಸರದ ಸಂದರ್ಭ ಮತ್ತು ಹೊಂದಾಣಿಕೆಯ ಒಪ್ಪಂದಗಳ ಮೂಲಕ ವೈವಿಧ್ಯ ಜ್ಞಾನ ಪರಂಪರೆಗೆ ಕಾರಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಹಂಪಿ ವಿಶ್ವಪರಂಪರೆಯ ಅವ್ಯಕ್ತ ಸಂಸ್ಕೃತಿಯ ಪರಿಸರಪ್ರಜ್ಞೆಯನ್ನು ಪರಿಶೀಲಿಸಬಹುದು.

ಹಂಪಿ ಕೇವಲ ವಿಜಯನಗರ ಸಾಮ್ರಾಜ್ಯದ ಚರಿತ್ರಾರ್ಹ ಸ್ಥಳವಲ್ಲ. ಅದೊಂದು ಚರಿತ್ರೆಯ ಅಖಂಡ ಪ್ರಜ್ಞೆ. ಚರಿತ್ರೆಯ ರೂಪಕ, ಪ್ರತಿಮೆ, ಸಂಕೇತ. ಚರಿತ್ರೆಯ ನಿರಂತರ ಕಥನ. ಭೌತಿಕವಾಗಿ ಹಂಪಿ ಮಹಾಸಾಮ್ರಾಜ್ಯವೊಂದರ ಸ್ಮಶಾನದಂತೆ ಕಂಡರೆ ಅಚ್ಚರಿ ಏನಿಲ್ಲ. ವಿಶ್ವವೇ ಬೆರಗಿನಿಂದ ನೋಡಬಹುದಾದ ಈ ವಿಶಾಲ ವಿನಾಶದ ಇಲ್ಲಿನ ಭಗ್ನ ವಿವರಗಳು ಯಾರಿಗೇ ಆದರೂ ಅವ್ಯಕ್ತವಾದ ಭಾವನೆಗಳನ್ನು ಬಿತ್ತಬಲ್ಲವು. ಮುಂದುವರಿದು ಇಡೀ ಹಂಪಿಯ ಅನುಭವವೇ ಮನುಷ್ಯರ ಸೋಲಿನ, ಪತನದ ದರ್ಶನವನ್ನು ಮಾಡಿಸಬಲ್ಲದು. ಹಂಪಿಯ ಬಗ್ಗೆ ನಮಗಿರುವ ಇಂತಹ ವಾಸ್ತವವಾದಿ ಅರ್ಥಗಳು ಒಂದು ಬಗೆಯಾದರೆ ಇದೇ ಹಂಪಿಯ ಕುರಿತು ಅವ್ಯಕ್ತವಾದ ಸಂಸ್ಕೃತಿಗಳು ನೀಡುವ ಅರ್ಥಗಳೇ ಬೇರೆಯಾಗಿರುತ್ತವೆ. ಬುದ್ದಿಪೂರ್ವಕ ಅರ್ಥಗಳು ಚರಿತ್ರೆಯನ್ನು ಗ್ರಹಿಸುವುದರಿಂದ ಬರುತ್ತವೆ. ಆದರೆ ಸಂಸ್ಕೃತಿಗಳ ಅಳಿವು ಉಳಿವಿನ ಅಸ್ತಿತ್ವದ ಪ್ರಶ್ನೆ ವಿಭಿನ್ನ ಕಾಲಗಳ ಮುಖಾ ಮುಖಿಯಲ್ಲಿ ಎದುರಾಗುವ ಅರ್ಥಗಳೇ ಬೇರೆ. ಭಾವನಾತ್ಮಕ ಅರ್ಥಗಳು ಮತ್ತೊಂದು ಬಗೆ. ಹಂಪಿಯನ್ನು ಕಂಡವರೆಲ್ಲ ಭಾವನಾತ್ಮಕ ಅರ್ಥಗಳಿಗೇ ಯಾಕೆ ಒಳಪಡುತ್ತಾರೆ ಎಂಬುದನ್ನು ಅವ್ಯಕ್ತ ಸಂಸ್ಕೃತಿಗಳ ನೆಲೆಯಿಂದಲು ಚರ್ಚಿಸಬೇಕಾಗುತ್ತದೆ. ಸೂಕ್ಷ್ಮವಾದ ಈ ಸಂಗತಿಗಳನ್ನು ಬಿಡಿಸಲು ಚರಿತ್ರೆಯ ಏಕರೂಪಿ ಶಿಸ್ತಿನ ತಿಳುವಳಿಕೆ ಸಾಲುವುದಿಲ್ಲ. ಅವ್ಯಕ್ತವಾದ ಸಂಸ್ಕೃತಿಯ ಜೀವನಕ್ರಮಗಳು ನಿಸರ್ಗನಿಷ್ಠವಾಗಿರುತ್ತವೆ. ಸಂಸ್ಕೃತಿಗಳ ನಿಸರ್ಗನಿಷ್ಠತೆಯು ಚರಿತ್ರೆಯ ಭೌತಿಕ ಸ್ವರೂಪದಲ್ಲಿ ಕಾಣುವುದಿಲ್ಲ. ಅನೇಕ ಬಾರಿ ಚರಿತ್ರೆಯು ಪರಿಸರದ ಆಚೆಗಿನ ವಿಚಾರದಂತೆ ತೋರಬಲ್ಲದು. ಅಲ್ಲಮಪ್ರಭುವಿನ ವಚನ ದಂತೆ ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದೊಳಗಣ ಉಪ್ಪಿಗೂ ಎತ್ತಣಿಂದೆತ್ತ ಸಂಬಂಧ ವಯ್ಯಾ ಎಂಬಂತೆ ಚರಿತ್ರೆಯ ಗತಿತಾರ್ಕಿಕತೆಗೂ ಸಂಸ್ಕೃತಿ ಮತ್ತು ನಿಸರ್ಗಗಳ ಅಂತರ‍್ಗತ ಬೇರುಗಳಿಗೂ ಸಂಬಂಧವಿರುತ್ತದೆ. ಚರಿತ್ರೆಗೆ ಯಾವತ್ತೂ ಮುಖ್ಯವಾಗುವುದು ಯಾವುದು? ಭೌತಿಕ ಸಾಕ್ಷ್ಯವೇ? ವಸ್ತುಸ್ಥಿತಿಯ ಮಾನಸಿಕ ಸ್ವರೂಪವೇ? ಎಂದು ಪ್ರಶ್ನಿಸಿಕೊಂಡರೆ ನಿಸರ್ಗ ನಿಷ್ಠ ಸಂಸ್ಕೃತಿಯ ಚಾರಿತ್ರಿಕ ಸಂಬಂಧ ಸ್ಪಷ್ಟವಾಗುತ್ತದೆ.

ಹಂಪಿಯ ಚರಿತ್ರೆಯನ್ನು ಈ ಬಗೆಯ ನೆಲೆಗಳಿಂದ ಬಿಡಿಸಿದರೆ ಸಿದ್ಧ ಮಾದರಿಯ ಚರಿತ್ರೆಯ ಆಚೆಗಿನ ಅವ್ಯಕ್ತ ಸುಪ್ತಪ್ರಜ್ಞೆಯು ವ್ಯಕ್ತವಾಗುತ್ತದೆ. ಇಲ್ಲಿ ಇಷ್ಟು ಭಾರವಾದ ತಾತ್ವಿಕ ಅನುಸಂಧಾನವನ್ನು ವಿಸ್ತರಿಸುವ ಮೊದಲು ಕೆಲವು ಪ್ರಶ್ನೆಗಳನ್ನು ಬಗೆಹರಿಸಿಕೊಳ್ಳ ಬೇಕು. ಅವ್ಯಕ್ತ ಸಂಸ್ಕೃತಿಗಳು ಹೇಗೆ ಪರಿಸರದ ಜೊತೆಗೆ ಚರಿತ್ರೆಗಳನ್ನು ಗ್ರಹಿಸಿರುತ್ತವೆ? ಸ್ಥಳೀಯ ಜೀವನ ಕ್ರಮಗಳು ಯಾವ ಬಗೆಯ ನೈಸರ್ಗಿಕ ಪ್ರಜ್ಞೆಯನ್ನು ಅಳವಡಿಸಿಕೊಂಡಿ ರುತ್ತವೆ.  ನಿಸರ್ಗ, ಸಂಸ್ಕೃತಿ, ಹಾಗೂ ಚರಿತ್ರೆ ಈ ಮೂರೂ ಸಂಗತಿಗಳ ಅಂತರ‍್ಗತ ಸಂಬಂಧ ಗಳು ಹೇಗೆ ನಿರ್ಧರಿಸಲ್ಪಟ್ಟಿರುತ್ತವೆ? ಚರಿತ್ರಕಾರ ಈ ಬಗೆಯಲ್ಲಿ ಯಾವ ರೀತಿಯ ಚರಿತ್ರೆಯ ರಚನಾ ವಿಧಾನವನ್ನು ಅನುಸರಿಸಬೇಕು? ಹೀಗೆ ಸಾಗಿದ ನಿರ್ವಚನದಿಂದ ವರ್ತಮಾನದ ಸಮಾಜಕ್ಕೆ ಯಾವ ತಿಳುವಳಿಕೆ ಸಾಧ್ಯವಾಗುತ್ತದೆ?

ಈ ಐದು ಪ್ರಶ್ನೆಗಳಿಗಿಂತಲೂ ಮೊದಲು ಕೇಳಿಕೊಂಡ ಮೂರು ಪ್ರಶ್ನೆಗಳನ್ನು ಮೊದಲು ಖಚಿತ ಪಡಿಸಿಕೊಳ್ಳಬೇಕು. ಚರಿತ್ರೆಯ ಭೌತಿಕ ಸ್ವರೂಪ ಸೀಮಿತವಾದುದು. ಚರಿತ್ರೆಯ ಸುಪ್ತಪ್ರಜ್ಞೆಯೇ ಬಹುರೂಪಿಯಾದುದು ಹಾಗೂ ಸೃಜನಶೀಲವಾದುದು. ವಸ್ತು ಸ್ಥಿತಿಯು ನಿರ್ಧಿಷ್ಟ ಕಾರಣಕ್ಕೆ ಬದ್ಧವಾಗಿ ನಿರ್ಧಿಷ್ಟ ಅರ್ಥಕ್ರಿಯೆಗೆ ಸಂಬಂಧ ಪಡುತ್ತದೆ. ಉದಾಹರಣೆಗೆ ಹಂಪಿಯ ವಿನಾಶಕ್ಕೆ ವಸ್ತುಸ್ಥಿತಿಯು ಭೌತಿಕ ಸಾಕ್ಷ್ಯಗಳ ಮೂಲಕ ನಿರ್ಧಿಷ್ಟ ಕಾರ್ಯ ಕಾರಣ ಪರಿಣಾಮಗಳ ಅಭಿಪ್ರಾಯಗಳನ್ನು ಹೊಂದಿರುತ್ತದೆ. ಘಟನೆಗೆ ಸಾಕ್ಷ್ಯ ಒದಗಿಸುವ ವಿವರಗಳು ತಂತಾನೆ ಸ್ವತಂತ್ರವಲ್ಲ ಪರಿಪೂರ್ಣವೂ ಅಲ್ಲ ಹಾಗೆಯೇ ಅಂತಿಮವೂ ಅಲ್ಲ. ನಡೆದ ಘಟನೆಯ ವಿವರಗಳು ವಸ್ತುಸ್ಥಿತಿಯ ಭಾಗವಾದರೆ, ಘಟನೋತ್ತರ ವಿವೇಚನೆಯು ಸುಪ್ತಪ್ರಜ್ಞೆಯ ಮೂಲಕ ತಲೆಮಾರುಗಳನ್ನು ಕೂಡ ದಾಟಿಕೊಂಡು ಬಹುರೂಪಿಯಾಗಿ ಬೆಳೆಯಬಲ್ಲದು. ಚರಿತ್ರೆಯ ಸುಪ್ತ ಪ್ರಜ್ಞೆಯು ಒಂದು ಆಲೋಚನೆಯಾಗಿ ಬೆಳೆಯುವುದು ಇಂತಹ ಹಾದಿಯಲ್ಲಿಯೇ. ಅಂದರೆ ಚರಿತ್ರೆಯನ್ನು ಅರ್ಥಮಾಡಿಕೊಳ್ಳಲು, ನಿರ್ವಚಿಸಲು, ರಚಿಸಲು ಮುಖ್ಯವಾಗುವುದು ಸಾಕ್ಷ್ಯವಾಗದೆ ದೂರ ಉಳಿದಿರುವ ಸಂಗತಿಗಳು. ಸಾಕ್ಷ್ಯವು ತರ್ಕಬದ್ಧ ಯೋಜನೆಗಳ ಮೂಲಕ ತನ್ನ ಸ್ವರೂಪರವನ್ನು ಸಾಧಿಸಿಕೊಳ್ಳುತ್ತದೆ. ಎಷ್ಟೋ ಬಾರಿ ಪೂರ್ವನಿರ್ಧಾರಿತ ಉದ್ದೇಶಗಳಿಗೆ ಅನುಗುಣವಾಗಿ ಸಾಕ್ಷಿಗಳು ದಾಖಲಾಗಿರುತ್ತವೆ. ಸಾಕ್ಷ್ಯಮ ಚರಿತ್ರೆಯಲ್ಲಿ ತನ್ನ ಸುಂದರ ರೂಪವನ್ನು ತೋರಿಸಿ ಸ್ಥಾಪಿಸಿಕೊಳ್ಳುವ ಸಲುವಾಗಿಯೇ ಉಂಟಾದವೇನೊ ಎಂಬಂತೆ ಎದುರಾಗುತ್ತವೆ. ಸಾಕ್ಷಿಗಳ ಉದ್ದೇಶವೇ ಅನೇಕ ಸಲ ತುಂಬ ಸರಳವಾಗಿರುತ್ತವೆ. ಎಲ್ಲ ಮೂಲ ಆಧಾರಗಳು ಕೊನೆಗೆ ಏನನ್ನು ಹೇಳುತ್ತವೆ ಎಂದು ಪರಿಶೀಲಿಸಿದರೆ ಅವು ಘನವಾದ ಸಂದೇಶವನ್ನೇನೂ ಹೇಳಲಾಗದ ಸಾಮ್ರಾಜ್ಯಗಳ ವಕ್ತಾರರಾಗುವುದಕ್ಕೆ ಸೀಮಿತವಾಗಿ ಮೌನವಹಿಸುತ್ತವೆ.

ಯಜಮಾನ್ಯ ಸಾಕ್ಷ್ಯದ ಆದೇಶ

ಎಲ್ಲೆಲ್ಲಿ ಸಾಕ್ಷ್ಯಾಧಾರಗಳು ಮಾತನಾಡಲಾರವೊ ಅಲ್ಲೆಲ್ಲ ವಸ್ತುಸ್ಥಿತಿಯ ಆಚೆಗಿನ ಸುಪ್ತಪ್ರಜ್ಞೆಯು ಚರಿತ್ರೆಯ ಭಿನ್ನ ಧ್ವನಿಗಳನ್ನು ಹೊರಡಿಸುತ್ತದೆ. ಚರಿತ್ರೆಗೆ ಬೇಕಾದುದು ಇಂತಹ ದನಿಯೇ. ಈ ಧ್ವನಿತಾರ್ಥಗಳೇ ಸಾಮಾನ್ಯ ನೋಟಕ್ಕೆ ಎಟುಕಲಾರದವು. ಪ್ರಜ್ಞೆಗೆ ಮಾತ್ರ ಅವು ಸ್ಪಂದಿಸಬಲ್ಲಂತವು. ಸಾಂಪ್ರದಾಯಕ ಚರಿತ್ರಕಾರರು ಸಾಕ್ಷ್ಯಾಧಾರಗಳನ್ನು ಪವಿತ್ರ ಎಂದು ನಂಬುತ್ತಾರೆ. ಅವರ ಶ್ರದ್ಧೆ ತಪ್ಪೇನಲ್ಲ. ಆದರೆ ಸಾಕ್ಷ್ಯಗಳು ಅನೇಕ ಅರ್ಥಸಾಧ್ಯತೆಗಳ ಮೇಲೆ ಅಧಿಕಾರ ಚಲಾಯಿಸಿ ತಮ್ಮ ಅರ್ಥವನ್ನು ಮಾತ್ರ ಹೇರಿ ಅರ್ಥದ ಬಹುರೂಪಗಳನ್ನು ಚರಿತ್ರೆಯ ಜೊತೆಗೇ ಸಮಾಧಿ ಮಾಡಿಬಿಟ್ಟಿರುತ್ತವೆ ಎಂಬುದನ್ನು ಅಂತವರು ವಿಶೇಷವಾಗಿ ಗಮನಿಸಿರುವುದಿಲ್ಲ. ಸಾಕ್ಷ್ಯಗಳು ಬಹುಪಾಲು ವೇಳೆ ಅನುಶಾಸನದ ಭಾಗವಾಗಿ ಪ್ರಭುತ್ವದ ಮೊಹರಿನಿಂದ ದಾಖಲಾಗುತ್ತವೆ ಎಂದಾಗ ಆಧಾರಗಳು ಯಜಮಾನಿಕೆಯನ್ನು ನಡೆಸಿಬಿಡುತ್ತವೆ. ಇದರಿಂದಾಗಿಯೇ ಚರಿತ್ರೆಯ ಒಳಗೇ ಹಲವು ಚರಿತ್ರೆಗಳು ಕಾಲದ ಒತ್ತಡದಿಂದ ಮೊಳಕೆ ಒಡೆಯಲು ಕಾರಣವಾಗುವುದು. ಇಂತಹ ಯಜಮಾನಿತ ಸಾಕ್ಷ್ಯಗಳ ದಿಗ್ವಿಜಯ ದಿಂದಲೇ ನಮಗೆ ಧಮನಿತ ಸಾಕ್ಷ್ಯಗಳ ಕುರುಹು ತಿಳಿಯುವುದು. ಇನ್ನೂ ಮುಂದೆ ಹೋಗಿ ಹೇಳುವುದಾದರೆ ಅಗೋಚರ ಸಾಕ್ಷ್ಯಗಳನ್ನು ಪ್ರಜ್ಞೆಯಲ್ಲಿ ಮೂಡಿಸಿ ಸುಪ್ತಪ್ರಜ್ಞೆಯ ಎರಕದಿಂದ ಹೊಸದೊಂದು ರೂಪವನ್ನು ಪಡೆಯಲು ಇದರಿಂದಾಗಿಯೇ ಸಾಧ್ಯವಾಗುವುದು.

ಇಲ್ಲಿ ಅಗೋಚರ ಸಾಕ್ಷ್ಯ ಎಂದರೆ ಯಾವುದು? ಅದರಿಂದ ಚರಿತ್ರೆಯನ್ನು ರಚಿಸಬಹುದೆ ಎಂಬ ಪ್ರಶ್ನೆಗಳು ಎದುರಾಗುವುದು ಸಹಜ. ಚರಿತ್ರೆಯನ್ನು ತಿಳಿಯಲು ಚರಿತ್ರೆಯ ಆ ಕಾಲಕ್ಕೇ ನಾವು ಹೋಗಬೇಕಿಲ್ಲ. ಅಶೋಕ ಕಳಿಂಗ ಯುದ್ಧವನ್ನು ಗೆದ್ದು ಆ ರಕ್ತಪಾತದ ಹಿಂಸೆಯಲ್ಲಿ ಮುಳುಗೆದ್ದು ಹೇಗೆ ಆತ ಬೌದ್ಧ ಧರ್ಮದ ಬೆಳಕಿನ ಕಡೆ ಪಯಣ ಮಾಡಿದ ಎಂಬುದನ್ನು ನಿರೂಪಿಸಲು ನಮಗೆ ಆ ಕಾಲದ ಬಗ್ಗೆ ಪ್ರಜ್ಞೆ ಇರಬೇಕು. ಈ ಪ್ರಜ್ಞೆ ಬಂದದ್ದಾದರೂ ಸಾಕ್ಷಿಗಳು ಇದ್ದಿದ್ದರಿಂದಲ್ಲವೇ ಎಂದು ಕೇಳಬಹುದು. ಆದರೆ ಸಾಕ್ಷ್ಯವಿದ್ದದ್ದೆಲ್ಲವೂ ಎಷ್ಟೋ ಬಾರಿ ನಮ್ಮ ಪ್ರಜ್ಞೆಗೆ ಹೊಂದಿರುವುದೇ ಇಲ್ಲ. ಹಾಗೆಯೆ ಕೆಲವು ಸಂಗತಿಗಳು ಪ್ರಜ್ಞೆಯನ್ನೆ ವಿರೂಪಗೊಳಿಸಬಲ್ಲವು. ಇಂತಲ್ಲಿಯೆ ಚರಿತ್ರೆಯ ಪೂರ್ವಾಗ್ರಹಗಳು ಬೆಳೆಯುವುದು. ಚರಿತ್ರೆಯ ಸುಪ್ತಪ್ರಜ್ಞೆಯು ಪೂರ್ವಾಗ್ರಹಗಳನ್ನು ಮೀರಬಲ್ಲದು. ಸಂಸ್ಕೃತಿಗಳು ನಿಸರ್ಗದ ಭಾಗವಾಗಿ ಅಸ್ತಿತ್ವ ರೂಪಿಸಿಕೊಳ್ಳುವಾಗ ಚರಿತ್ರೆಯ ಮೂಲಕ ಎದುರಾಗುವ ಬಿಕ್ಕಟ್ಟುಗಳನ್ನು ತಮ್ಮ ಸುಪ್ತಪ್ರಜ್ಞೆಯ ಮೂಲಕವೇ ಬಗೆಹರಿಸಿಕೊಳ್ಳುತ್ತವೆ. ಹಂಪಿಯ ವಿಶ್ವ ಪರಂಪರೆಯ ಗ್ರಾಮಗಳ ಅವ್ಯಕ್ತ ಸಂಸ್ಕೃತಿಯ ಪರಿಸರ ತಿಳುವಳಿಕೆಯಲ್ಲೂ ಇಂತಹ ಸಂಬಂಧಗಳನ್ನು ಗಮನಿಸಬಹುದು. ಸ್ಥಳೀಯ ಸಂಸ್ಕೃತಿಗಳು ಅಗೋಚರ ಸಾಕ್ಷಗಳನ್ನು ರೂಢಿಯಾಗಿಸಿಕೊಳ್ಳು ವುದು ಇಂತಹ ಅವ್ಯಕ್ತ ನೆಲೆಗಳಿಂದಲೇ. ವಿಜಯನಗರ ಸಾಮ್ರಾಜ್ಯವು ರೂಪಿಸಿಕೊಂಡ ಸಾಕ್ಷ್ಯವನ್ನು ಆ ಕಾಲದ ಜನಪದ ಸಂಸ್ಕೃತಿಗಳು ಮಾನ್ಯ ಮಾಡಿರುತ್ತವೆ ಎಂದು ಹೇಳಲಾಗದು. ಜನಪದರು ಅವ್ಯಕ್ತ ಸಂಸ್ಕೃತಿಯ ಕ್ರಮದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುತ್ತಾರೆ. ಹಾಗಾಗಿಯೆ ಮೌಖಿಕ ಪರಂಪರೆಯು ಹಂಪಿಯ ಗತಕಾಲವನ್ನು ಹೇಳುವ ರೀತಿಯು ಲಿಖಿತ ಸಾಕ್ಷ್ಯಾಧಾರಗಳಿಗಿಂತ ಭಿನ್ನವಾಗುವುದು.

ಸಾಮ್ರಾಜ್ಯದ ಮುಖವಾಣಿಯಾದ ಆಧಾರಗಳ ಕಡೆಗೆ ಜನಪದ ಸಂಸ್ಕೃತಿ ಮಹತ್ವ ನೀಡಿರುವುದೇ ಇಲ್ಲ. ಹಂಪಿಯ ವಿನಾಶಕ್ಕೆ ಯಾರು ಕಾರಣ, ಯಾವ ಹಿನ್ನೆಲೆ ಎಂಬ ಭೌತಿಕ ತರ್ಕಗಳು ಜನಪದರಿಗೆ ವಿಶೇಷವಾಗುವುದೇ ಇಲ್ಲ. ದೇವಾಲಯಗಳ ಬಗ್ಗೆ ಮಾತ್ರ ಭಕ್ತಿ ತೋರುವ ಪ್ರಜ್ಞೆಯು ಆ ಕಾಲದ ಸಾಮ್ರಾಜ್ಯಗಳ ರಾಜಕೀಯ ಪರಿಸ್ಥಿತಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ದೇವರ ವಿಗ್ರಹಗಳನ್ನೆ ಭಗ್ನ ಪಡಿಸಿದ್ದರೂ ಜನಪದರ ಸಮಾಜ ಅದನ್ನು ಗ್ರಹಿಸುವ ರೀತಿಯೆ ಬೇರೆ. ನಿಸರ್ಗದ ಅನಂತ ಶಕ್ತಿಯನ್ನು ನಾಶಪಡಿಸಲಾಗದು ಎಂಬ ದೈವ ಪ್ರಜ್ಞೆಯು ಭೌತಿಕ ನಾಶದ ನಷ್ಟವನ್ನು ಉಪೇಕ್ಷಿಸುವಂತೆ ಮಾಡಬಲ್ಲದು. ಜನಪದರ ನಿಸರ್ಗ ದೃಷ್ಠಿಯು ವಿಶಾಲವಾದುದು. ಅದು ಸಾಮ್ರಾಜ್ಯಗಳ ಸಾಮರ್ಥ್ಯವನ್ನು ಆಧರಿಸಿರು ವುದಿಲ್ಲ. ಅವರಿಗೆ ಅವರ ಸುತ್ತಲ ಪರಿಸರದ ಸಂಸ್ಕೃತಿಯ ಜೀವನ ವಿಧಾನ ಮುಖ್ಯವೇ ವಿನಃ ಪ್ರಭುತ್ವದ ಗಡಿಗಳಾಗಲಿ, ಆ ಕಾಲದ ಮೌಲ್ಯಗಳಾಗಲಿ ಅಲ್ಲ. ಇದರಿಂದ ನಮಗೆ ತಿಳಿಯುವುದೇನೆಂದರೆ ಮಾನವ ಯಾವತ್ತು ಕೂಡ ತನ್ನ ವರ್ತನೆಗಳನ್ನು ನಿಸರ್ಗತ್ವದ ವಿಕಾಸದ ಜೊತೆಯೆ ದೈವಿಕವಾಗಿ ವಿಸ್ತರಿಸಿಕೊಳ್ಳುವುದು. ಇದು ಪ್ರಜ್ಞಾಪೂರ್ವಕ ವರ್ತನೆ ಅಲ್ಲ. ಸುಪ್ತಪ್ರಜ್ಞೆಯ ಸೃಜನಶೀಲ ಸ್ವಭಾವ. ಕಾಲದ ಎಡರುತೊಡರುಗಳಿಗೆ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿ ಜನಪದ ಸಂಸ್ಕೃತಿಗಳು ಸಾಮ್ರಾಜ್ಯದ ಸಾಕ್ಷಿಗಳನ್ನು ಮರೆತುಬಿಡುವುದು ಇದರಿಂದಲೇ. ಆದರೆ ಈ ಬಗೆಯ ಪ್ರಕ್ರಿಯೆಯಲ್ಲಿ ಎಂತಹ ವೈರುಧ್ಯ ವೈಚಿತ್ರ್ಯ ಇರುತ್ತದೆ ಎಂದರೆ ಶಾಸನ, ಹಸ್ತಪ್ರತಿ, ದೇವಾಲಯ, ಕೋಟೆ, ಕೊತ್ತಲ, ದುರ್ಗ ಹಾಗೂ ಲಿಖಿತ ಆಧಾರಗಳನ್ನೆಲ್ಲ ಪೂಜಿಸುತ್ತಲೇ ಜನಪದರು ಅವನ್ನೆಲ್ಲ ಭಕ್ತಿಯಿಂದಲೇ ದೂರವಿಟ್ಟು ಬಿಟ್ಟಿರುತ್ತಾರೆ. ಆದರೆ ಅವರೇ ಕಟ್ಟಿಕೊಂಡ ಐತಿಹ್ಯ, ಜನಪದ ಕಾವ್ಯ, ಕಥೆ, ಆಚರಣೆಗಳನ್ನು ಬದುಕಿನ ಭಾಗವಾಗಿ ಅನ್ವಯಿಸಿಕೊಂಡಿರುತ್ತಾರೆ. ಲಿಖಿತ ಸಾಕ್ಷಿ ಪ್ರಮಾಣಗಳ ಚರಿತ್ರಕಾರರ ನಿರೂಪಣೆಗಳನ್ನು ಕೂಡ ಜನಪದ ಸಮಾಜ ತನ್ನ ಸಂಸ್ಕೃತಿಯ ಭಾಗವಾಗಿ ಸ್ವೀಕರಿಸಿರು ವುದಿಲ್ಲ. ಅವ್ಯಕ್ತ ಸಂಸ್ಕೃತಿಗಳ ಇಂತಹ ಸ್ವಭಾವದಿಂದಲೇ ಚರಿತ್ರೆಯ ರಚನೆಗೆ ಯಾವುದು ಮುಖ್ಯ ಎಂಬ ಪ್ರಶ್ನೆಯು ತಾತ್ವಿಕವಾಗಿ ಎದುರಾಗುವುದು.

ಅಗೋಚರ ಸಾಕ್ಷ್ಯ ಎಂಬುದೇ ಅವ್ಯಕ್ತ ಸಂಸ್ಕೃತಿಗಳ ಇಂತಹ ಸ್ವಭಾವ. ಈ ಬಗೆಯ ವರ್ತನೆಯಲ್ಲೆ ಚರಿತ್ರೆಯ ಚರಿತ್ರೆ ಅಡಗಿರುವುದು. ಅಂದರೆ ಏಕಕಾಲದಲ್ಲೆ ಚರಿತ್ರೆಯಲ್ಲಾದ ಪ್ರಭುತ್ವವನ್ನು ನಿರಾಕರಿಸುತ್ತಲೇ ಜನ ಪ್ರಭುತ್ವವನ್ನು ಧಾರಣ ಮಾಡಿಕೊಳ್ಳುವುದು ವಿಶೇಷ. ಜನಪದರು ತಮ್ಮ ಅವ್ಯಕ್ತ ಸಂಸ್ಕೃತಿಯ ನಿಯಮಗಳಿಗೆ ಬದ್ಧರೇ ವಿನಃ ಸಾಮ್ರಾಜ್ಯಗಳ ದಂಡಾಧಿಕಾರಕ್ಕಲ್ಲ. ಅವರವರು ಕಂಡುಕೊಂಡ ಸಂಸ್ಕೃತಿಗಳೇ ಅವರವರ ಸಾಂಸ್ಕೃತಿಕ ಅನನ್ಯತೆಯ ಸಾಮ್ರಾಜ್ಯಗಳು. ಇಂತಹ ಸಂಸ್ಕೃತಿ ಸಮಾಜಗಳು ನಿಸರ್ಗಕ್ಕೆ ಬದ್ಧವಾಗಿರುತ್ತವೆ. ಹೀಗಾಗಿಯೇ ಸಾಮ್ರಾಜ್ಯದ ಒಳಗಿನ ಅವ್ಯಕ್ತ ಸಂಸ್ಕೃತಿಗಳು ತಟಸ್ಥ ನೀತಿಯಲ್ಲಿ ಲೌಖಿಕವನ್ನು ಮೀರಲು ಸಾಧ್ಯವಾಗಿರುವುದು. ಆದರೆ ಈ ತಟಸ್ಥ ಸಾಮರ್ಥ್ಯವು ಯಾವತ್ತೂ ಒಂದೇ ಬಗೆಯಾಗಿರುವುದಿಲ್ಲ. ಎಷ್ಟೋ ಬಾರಿ ಅವ್ಯಕ್ತ ಸಂಸ್ಕೃತಿಗಳು ದುರ್ಬಲ ಮನಸ್ಥಿತಿಯಲ್ಲಿ ಪಲಾಯನ ಸ್ವಭಾವವನ್ನೂ ಹೊಂದಿರುವುದರಿಂದ ಅವರ ಸಾಕ್ಷಿ ಪ್ರಜ್ಞೆಯಲ್ಲೂ ಲೋಪಗಳು ಉಂಟಾಗಬಲ್ಲವು. ಚರಿತ್ರೆಯ ಚಲನೆಯಲ್ಲಿ ವಿಕಾಸವು ಎಲ್ಲ ಬಗೆಯ ಪ್ರಭಾವಗಳನ್ನು ಜೀರ್ಣಿಸಿಕೊಂಡೇ ಕಾಲವನ್ನು ಮೀರುತ್ತದೆ. ಇಂತಹ ಅವ್ಯಕ್ತ ವಿಕಾಸ ಪಯಣದಲ್ಲಿ ಗೋಚರ. ಹಾಗೂ ಅಗೋಚರ ವ್ಯಕ್ತ, ಅವ್ಯಕ್ತ ಸಾಕ್ಷ್ಯಾಧಾರಗಳೆಲ್ಲವೂ ಕರಗಿ ಹೋಗಿಬಿಡಬಲ್ಲವು.

ಅಪೂರ್ಣತೆಯ ಸೃಷ್ಠಿಶೀಲತೆ

ಚರಿತ್ರೆಯ ರಚನೆಯು ಯಾವತ್ತೂ ಅಪೂರ್ಣ ಕ್ರಿಯೆಯೇ. ಯಾವತ್ತೂ ಯಾವ ಚರಿತ್ರೆಯೂ ಪೂರ್ಣವಾಗಬಾರದು. ಹಾಗಾದರೆ ಅದು ಮೃತ ಸಂಗತಿಯಾಗಿಬಿಡುತ್ತದೆ. ಪೂರ್ಣಗೊಂಡದ್ದು ಪುನರ್‌ಸೃಷ್ಠಿಗೆ ಅವಕಾಶ ಪಡೆದಿರುವುದಿಲ್ಲ. ಚರಿತ್ರೆಯ ಘಟನೆಗೆ ಒಂದು ಸ್ಥಿತಿ ಇರಬಹುದು. ಆ ಒಂದು ಘಟನೆ ಅಲ್ಲಿಗೇ ನಿಂತಿರಬಹುದು. ಆದರೆ ಘಟನೆಯ ಬಗೆಗಿನ ಘಟನೋತ್ತರ ಪ್ರಶ್ನೆಗಳು, ನೆನಪುಗಳು, ವಿಚಾರಗಳು ಸ್ಥಗಿತವಾಗಿರಬಾರದು. ಘಟನೆಯ ಬಗೆಗಿನ ಅಭಿಪ್ರಾಯಗಳೇ ನಿಜವಾದ ಘಟನೆಗಳು. ಉದಾಹರಣೆಯೊಂದಿಗೆ ವಿವರಿಸುವುದಾದರೇ ವೈಷ್ಣವ ಮತ್ತು ಶೈವ ಪರಂಪರೆಗಳ ನಡುವೆ ಮತಭೇದದಿಂದಾಗಿ ವಿಜಯನಗರ ಕಾಲದಲ್ಲಿ ಸಂಘರ್ಷಗಳು ಘಟಿಸಿದವು ಎಂಬುದು ಒಂದು ಸ್ಥಿತಿ. ಈ ಸ್ಥಿತಿ ಮುಗಿದು ಹೋಗಿರುವ ಸಂಗತಿಯಾಗಿದ್ದರೂ ಆ ಕಾಲದ ಘಟನೆಗಳ  ಪರಿಣಾಮ ಮಾತ್ರ ಬೇರೆ ಬೇರೆ ಕಾಲ ಘಟ್ಟಗಳಲ್ಲಿ ರೂಪಾಂತರವಾಗುತ್ತಲೇ ಸಾಗಿರುತ್ತದೆ. ಇದೇ ರೀತಿ ಮುಸ್ಲಿಮರ ದಾಳಿಯು ಕೇವಲ ನೆನ್ನೆಯ ದಾಳಿ ಮಾತ್ರವಾಗದೆ ಅದು ಬದಲಾದ ಕಾಲದಲ್ಲಿ ಸಮುದಾಯಗಳ ನಡುವೆ ವಿಭಿನ್ನ ನಿಲುವುಗಳನ್ನು ಸ್ಥಾಪಿಸುತ್ತಲೊ ಬದಲಿಸುತ್ತಲೊ ಹೊಂದಾಣಿಕೆ ಮಾಡಿಕೊಳ್ಳುತ್ತಲೊ ಬೆಳೆಯುತ್ತಲೇ ಇರುತ್ತದೆ. ಈ ಪ್ರಕ್ರಿಯೆಯಲ್ಲಿ ಅವ್ಯಕ್ತ ಸಂಸ್ಕೃತಿಗಳು ಯಾವ ನಿಲುವನ್ನು ತಾಳುತ್ತವೆ ಎಂಬುದು ಸೂಕ್ಷ್ಮವಾದ ಸ್ತರ. ಇಂತಲ್ಲಿ ಸಂಸ್ಕೃತಿಗಳ ಸುಪ್ತಪ್ರಜ್ಞೆಯನ್ನು ಗ್ರಹಿಸಿಯೇ ಚರಿತ್ರೆಯನ್ನು ರಚಿಸುವ ವಿಮರ್ಶಿಸುವ ಹೊಣೆಯನ್ನು ಹೊರಬೇಕಾಗುತ್ತದೆ. ಆಗ ಚರಿತ್ರೆಕಾರ ಎಲ್ಲ ಬಗೆಯ ಸಾಕ್ಷ್ಯಾಧಾರಗಳನ್ನು ಮೀರಿಯೆ ಅಪೂರ್ಣವಾಗಿರುವ ಚರಿತ್ರೆಗೆ ತನ್ನ ಒಂದು ಅಪೂರ್ಣ ನಿಲುವನ್ನು ಹೊಂದಿಸಬೇಕಾ ಗುತ್ತದೆ. ಆಗ ಅದು ಅವಕಾಶವನ್ನು ತುಂಬುತ್ತ ಅವಕಾಶವನ್ನು ವಿಸ್ತರಿಸುವ ಕ್ರಿಯೆಯಾಗು ತ್ತದೆ.

ಇಲ್ಲಿ ಜನಪದರು ಚರಿತ್ರೆಯನ್ನು ಗ್ರಹಿಸುವ ರೀತಿಗೂ ಸ್ವತಃ ಚರಿತ್ರೆಕಾರರು ಗ್ರಹಿಸುವ ಕ್ರಮಕ್ಕೂ ವ್ಯತ್ಯಾಸವಿದೆ. ಅವ್ಯಕ್ತ ಸಂಸ್ಕೃತಿಗಳ ಅಂತರಂಗದ ಚರಿತ್ರೆಯ ಅರ್ಥವು ಚರಿತ್ರೆಕಾರರ ಗ್ರಹಿಕೆಯ ಜೊತೆ ಬೆರೆತಾಗ ಬೇರೊಂದು ಆಯಾಮ ಸಾಧ್ಯ. ಈ ಹಿನ್ನೆಲೆಯಲ್ಲಿ ಈ ಹಿಂದೆ ಪ್ರಸ್ತಾಪಿಸಿದ ಐದು ಪ್ರಶ್ನೆಗಳನ್ನು ಮತ್ತಷ್ಟು ವಿವರಿಸಿಕೊಳ್ಳಬಹುದು. ಅವುಗಳಲ್ಲಿ ಮೊದಲನೆ ಯದು ಅವ್ಯಕ್ತ ಸಂಸ್ಕೃತಿಗಳು ಹೀಗೆ ಪರಿಸರದ ಜೊತೆಗೆ ಚರಿತ್ರೆಯನ್ನು ಗ್ರಹಿಸುತ್ತವೆ ಎಂಬುದು.

ಪರಿಸರಕ್ಕೆ ತಕ್ಕಂತೆ ಚರಿತ್ರೆ ರೂಪುಗೊಳ್ಳುತ್ತದೆ. ಹಾಗೆಯೆ ಆಯಾ ಪರಿಸರದ ಪ್ರಭಾವದಲ್ಲಿ ಸಂಸ್ಕೃತಿಗಳು ವಿಕಾಸಗೊಂಡಿರುತ್ತವೆ. ಅಂದರೆ ಪರಿಸರ ಚರಿತ್ರೆ ಸಂಸ್ಕೃತಿ ಇವು ಬೇರೆ ಬೇರೆ ಅಲ್ಲ. ಚರಿತ್ರೆಯು ನಿಸರ್ಗ ಮತ್ತು ಸಂಸ್ಕೃತಿಗಳ ಕೂಸು. ಆದ್ದರಿಂದಲೇ ಸಂಸ್ಕೃತಿಗಳು ಚರಿತ್ರೆಗೆ ಅಧೀನವಲ್ಲ. ಬೇಕಾದರೆ ಸಂಸ್ಕೃತಿಗಳನ್ನು ಚರಿತ್ರೆ ಬಳಸಿಕೊಳ್ಳಬಹುದು, ವಿರೂಪಗೊಳಿಸಬಹುದು. ಆದರೆ ಅಂತಹ ಚರಿತ್ರೆಯ ಯಾಜಮಾನ್ಯವನ್ನು ನಿಸರ್ಗವು ನಿರ್ಣಾಯಕ ವಾಗಿ ಉರುಳಿಸಬಲ್ಲದು. ನಾಗರೀಕತೆಗಳು ಹುಟ್ಟಿ ಬೆಳದು ಆಕ್ರಮಣಕಾರಿಯಾದಾಗಲೆಲ್ಲ ಅವು ನಿಸರ್ಗದ ಅವ್ಯಕ್ತವಾದ ಆದರೆ ನಿರ್ಣಾಯಕವಾದ ತೀರ್ಮಾನಗಳಿಗೆ ಒಳಪಡ ಬೇಕಾಗುತ್ತದೆ. ಗಾಳಿ ನೀರು ಬೆಳಕು ಇವು ನಿಸರ್ಗದ ಅನನ್ಯ ಮೂಲಧಾತುಗಳು. ಇವನ್ನು ಪಡೆಯುತ್ತಲೇ ನಾವು ಅವನ್ನು ಮರೆತು ಎಲ್ಲವನ್ನೂ ವ್ಯವಹರಿಸುತ್ತಿರುತ್ತೇವೆ. ಹೀಗೆಯೆ ಚರಿತ್ರೆಯ ಸುಪ್ತಧಾತುಗಳಾದ ನಿಸರ್ಗ ಮತ್ತು ಸಂಸ್ಕೃತಿಗಳನ್ನು ಲೆಕ್ಕಿಸದೆ ಸಾಮ್ರಾಟರ ದಿಗ್ವಿಜಯಗಳ ಘಟನಾವಳಿಗಳನ್ನು ಕುರಿತು ಗತಕಾಲದಲ್ಲೆ ಕಳೆದು ಹೋಗಿರುತ್ತೇವೆ. ಅದಕ್ಕಾಗಿಯೆ ವಸ್ತುಸ್ಥಿತಿಯ ಸಮಕಾಲೀನ ಮನಸ್ಥಿತಿಯನ್ನು ಗಮನಿಸಬೇಕಾಗುವುದು.

ಇಲ್ಲಿ ವಸ್ತುಸ್ಥಿತಿಯ ಗತಕಾಲವನ್ನು ಗ್ರಹಿಸಲು ನಮಗಿರುವ ಆಕರಗಳು ಯಾವುವು ಎಂದರೆ ಇರುವ ಸಾಕ್ಷ್ಯವೇ ಇಲ್ಲದಿರುವ ಸಾಕ್ಷ್ಯವನ್ನು ಪ್ರತಿಫಲಿಸುತ್ತಿರುವ ಮಾನಸಿಕಸ್ಥಿತಿ. ಚರಿತ್ರೆಯಲ್ಲಿ ಸಾಕ್ಷ್ಯಾಧಾರಗಳದೇ ಒಂದು ಪ್ರಭುತ್ವ ಪ್ರಣೀತ ರಾಜಕಾರಣವಿರುತ್ತದೆ. ಆಳುವ ವ್ಯವಸ್ಥೆ ತನ್ನ ಅಸ್ತಿತ್ವಕ್ಕೆ ಪೂರಕವಾದ ಅಂಶಗಳನ್ನೆ ತೋರುತ್ತದೆ. ತನ್ನ ತಿಳುವಳಿಕೆಗೆ ಶರಣಾದ ಸಂಗತಿಗಳನ್ನೆ ಬಿಂಬಿಸುತ್ತದೆ. ಎಲ್ಲ ಹಂತದಲ್ಲು ಗೆದ್ದವರ ಮನೋಧರ್ಮವೇ ದಾಖಲಾಗುತ್ತದೆ. ಸೋತವರ ದನಿ ಧಮನಿತವಾಗಿರುತ್ತದೆ. ಸೋತವರ ಪ್ರಮಾಣಗಳನ್ನು ನಿರಾಕರಿಸುವುದೇ ಅಲ್ಲದೆ ನಾಶಪಡಿಸುವ ಕ್ರಿಯೆಯೂ ಉದ್ದಕ್ಕೂ ಸಾಗುತ್ತದೆ. ಗೆದ್ದವರ ಪ್ರಮಾಣಗಳೆಲ್ಲ ಧಾರ್ಮಿಕ ಚಹರೆಗೆ ಒಳಪಟ್ಟು ಸೋತವರ ಆಧಾರಗಳೆಲ್ಲ ದುಷ್ಠ ಸಂಹಾರದ ಯಜ್ಞಯಾಗ ದಂಡಾಧಿಕಾರಗಳಲ್ಲಿ ಭಸ್ಮವಾಗಿರುತ್ತವೆ. ಈ ಪ್ರಕ್ರಿಯೆಯಲ್ಲಿ ಸ್ಥಾಪಿತವಾಗುವ ಗೆದ್ದವರ ಸಾಕ್ಷ್ಯಗಳೇ ಗತಿಸಿಹೋದ ಅನೇಕ ಅಗೋಚರ ಸಾಕ್ಷ್ಯಗಳನ್ನು ಪ್ರತಿಫಲಿಸುತ್ತವೆ. ಈ ಬಗೆಯ ಯಜಮಾನ್ಯ ವರ್ತನೆ ಇಂದಿಗೂ ನಡೆಯುತ್ತಲೆ ಇರುತ್ತದೆ. ಎಲ್ಲೆಲ್ಲಿ ಸಾಕ್ಷ್ಯಗಳು ಎದುರಾಗುತ್ತವೊ ಅಲ್ಲೆಲ್ಲ ಅವುಗಳ ಕುರುಹನ್ನು ಭೌತಿಕವಾಗಿ ಹಾಗೂ ಮಾನಸಿಕವಾಗಿ ಅಗೆದರೆ ಮುಚ್ಚಿ ಹೋಗಿರುವ ಆಧಾರಗಳು ತೆರೆದುಕೊಳ್ಳುತ್ತವೆ. ಇದು ಎಲ್ಲ ಬಗೆಯ ಸಾಕ್ಷ್ಯಾಧಾರಗಳ ಮೂಲ ಸ್ವಭಾವ. ಅಪರಾಧಿಗಳ ಸಾಕ್ಷ್ಯವನ್ನು ನಾಶಪಡಿಸುವ ಹೊತ್ತಿನಲ್ಲೇ ತಮಗೆ ತಿಳಿಯದಂತೆ ಹೊಸದೊಂದು ತಿರುವು ನೀಡುವ ಸಾಕ್ಷ್ಯವನ್ನು ತಾವೇ ಸೃಷ್ಠಿಸಿಬಿಟ್ಟಿರುತ್ತಾರಂತೆ. ಚರಿತ್ರೆಯಲ್ಲೂ ಇದು ನಿಜ. ಇರುವ ಆಧಾರಗಳೇ ಇಲ್ಲದಿರುವ ಸಾಕ್ಷ್ಯಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತಿರುತ್ತವೆ. ಉದಾಹರಣೆಗೆ ಹಂಪಿಯ ಈ ವಿಜಯನಗರ ಸಾಮ್ರಾಜ್ಯದ ಸಿರಿಸಂಪತ್ತಿನಲ್ಲಿ ರೈತರಿಗೆ ಏನು ಪಾಲಿತ್ತು, ಕೃಷಿ ಕೂಲಿಯವರಿಗೆ ಎಂತಹ ಪಾಲಿತ್ತು, ಭೂಮಿಯ ಸಂಬಂಧ ಯಾರ ಲೆಕ್ಕದಲ್ಲಿತ್ತು ಎಂದು ಪರಿಶೀಲಿಸಿದರೆ ಇಂತಹ ಪ್ರಶ್ನೆಗಳೇ ಚರಿತ್ರೆಯಲ್ಲಿ ಅಗೋಚರ ಸಾಕ್ಷ್ಯಗಳ ಕಡೆಗೆ ನಮ್ಮನ್ನು ಕರೆದೊಯ್ಯುತ್ತವೆ. ನಾವು ಯಾವ ಬಗೆಯ ಸಾಕ್ಷ್ಯಾಧಾರಗಳನ್ನು ಹುಡುಕುತ್ತೇವೆ ಎನ್ನುವುದಕ್ಕಿಂತ ಯಾವ ಬಗೆಯ ಪ್ರಶ್ನೆ ಮತ್ತು ಆಶಯಗಳ ಮೂಲಕ ಸಾಕ್ಷ್ಯವನ್ನು ಶೋಧಿಸುತ್ತೇವೆ ಎಂಬುದು ಮುಖ್ಯ. ಆಗಲೇ ಅಗೋರ ಸಾಕ್ಷ್ಯವೂ ಗತಕಾಲದ ಸುಪ್ತ ಪ್ರಜ್ಞೆಯೂ ನಮ್ಮ ಪ್ರಜ್ಞೆಯಲ್ಲಿ ಪುನರ್‌ಸೃಷ್ಠಿಗೊಳ್ಳುವುದು.

ನಮ್ಮ ಉದ್ದೇಶಗಳಿಗೆ ಅನುಗುಣವಾಗಿ ಸಾಕ್ಷ್ಯಗಳನ್ನು ಜೋಡಿಸಿಕೊಳ್ಳುವುದು ಸಾಕ್ಷ್ಯಗಳ ನಡುವೆಯೇ ತಾರತಮ್ಯವನ್ನು ಸೃಷ್ಠಿಸಬಲ್ಲದು. ವಸಾಹತುಶಾಹಿ ಅನುಭವದಿಂದ ಸಾಕ್ಷ್ಯವನ್ನು ಬಳಸಿಕೊಳ್ಳುವುದನ್ನು ಕಲಿತಿರುವ ರೀತಿಯೇ ನಮ್ಮ ಅನೇಕ ತಪ್ಪುಗಳಿಗೆ ದಾರಿ ಮಾಡಿದೆ. ಬರಿಯ ಸಾಕ್ಷ್ಯಗಳೇ ಚರಿತ್ರೆಯಲ್ಲ. ಆಧಾರಗಳೆಲ್ಲವೂ ಶರೀರವಿದ್ದಂತೆ. ಸುಪ್ತಪ್ರಜ್ಞೆಯು ಚರಿತ್ರೆಯ ಜೀವ. ಚರಿತ್ರೆಯು ಭೌತಿಕ ಸಾಕ್ಷ್ಯಗಳಲ್ಲಿ ಕಾಣುವ ರೀತಿಯೆ ಬೇರೆ. ಹಂಪಿಯ ಕೋಟೆ ಕೊತ್ತಲ, ಅರಮನೆ, ದೇವಾಲಯಗಳ ಭಗ್ನ ಚಿತ್ರಗಳು ಹೇಳುವ ಇತಿಹಾಸವೆ ಅಂದಿನ ಗತಸುಂದರ ನಗರಿಯ  ಚರಿತ್ರೆಯಾಗುವುದಿಲ್ಲ.  ಹಾಗೆಯೆ ಸಾಕ್ಷ್ಯಗಳ ಹಿಂದಿನ ಘಟನೆಗಳ ಅಗೋಚರ ತೀರ್ಮಾನಗಳು ಹೇಳುವ ಚರಿತ್ರೆಯೆ ಬೇರೆ. ಚರಿತ್ರೆಯ ದೃಶ್ಯ ಸಂಯೋಜನೆ ಯಿಂದ ಕಾಣುವ ಅರ್ಥಕ್ಕೂ ಹೀಗೆ ಸ್ಥಿತಿಯೊಂದು ಘಟಿಸಿ ಆಗಿದೆ ಎಂದು ಸುಪ್ತಪ್ರಜ್ಞೆಯ ಬಿಂಬದಿಂದ ಗ್ರಹಿಸುವದಕ್ಕೂ ನಡುವೆ ಚರಿತ್ರಕಾರ ಸಿಕ್ಕಿಹಾಕಿಕೊಂಡಿರುತ್ತಾನೆ. ಹೀಗೆ ಮಧ್ಯೆ ಸಿಲುಕಿರುವ ಸ್ಧಿತಿಯೆ ಗತಕಾಲಕ್ಕೂ ವರ್ತಮಾನಕ್ಕೂ ಸಂಪರ್ಕ ಕಲ್ಪಿಸಿಕೊಳ್ಳಲು ಸಹಾಯ ಮಾಡಿದೆ.

ಮನಸ್ಸಿನ ಅಖಂಡ ಚಲನೆ

ವಸ್ತುಸ್ಥಿತಿಯ ಮಾನಸಿಕ ಸ್ವರೂಪವನ್ನು ಇನ್ನಷ್ಟು ವಿಸ್ತರಿಸಬಹುದು. ವಸ್ತುಸ್ಥಿತಿಯು ಖಚಿತತೆಯನ್ನು ಬಿಂಬಿಸುತ್ತದೆ. ಆದಷ್ಟು ಪ್ರಾಮಾಣಿಕತೆಗೆ ಬದ್ಧವಾಗಿರುಬೇಕೆಂಬುದನ್ನು ಒತ್ತಾಯಿಸುತ್ತದೆ. ಚೌಕಟ್ಟಿನ ಒಳಗೆ ಏನಾಗಿದೆ ಎಂಬುದನ್ನು ನಿರ್ಧಿಷ್ಠಗೊಳಿಸಿಕೊಳ್ಳುವುದು ವಸ್ತು ಸ್ಥಿತಿಯ ಜಾಯಮಾನ. ಚರಿತ್ರೆಯು ವಸ್ತು ಸ್ಥಿತಿಗೆ ಯಾಕೆ ವಿಶೇಷ ಒತ್ತು ನೀಡುತ್ತದೆ ಎಂದರೆ ಅದು ಬೇರೆ ಬೇರೆ ಘಟನೆಗಳು ಬೆರಕೆ ಆಗದಿರಲಿ ಎಂಬ ಉದ್ದೇಶದಿಂದ. ವಸ್ತುಸ್ಥಿತಿಗೆ ಬದ್ಧವಾದ ಚರಿತ್ರೆಯು ಪ್ರಾಮಾಣಿಕವಾಗಿರುತ್ತದೆ ಎಂದು ನಂಬಲಾಗುತ್ತದೆ. ವ್ಯಾಪ್ತಿಯ ಆಚೆಗಿನ ಸಂಗತಿಗಳಿಂದ ವಸ್ತುಸ್ಥಿತಿಯು ಅಪವ್ಯಾಖ್ಯಾನಗೊಳ್ಳತ್ತದೆಂದೂ ಹಿಂಜರಿಯುವುದಿದೆ. ವಾಸ್ತವವಾದಿ ಚರಿತ್ರಕಾರರು ಎಷ್ಟೇ ವಸ್ತುನಿಷ್ಠವಾಗಿದ್ದರೂ ಅದು ಚರಿತ್ರೆಯ ಚಲನಶೀಲತೆಗೆ ಹೆಚ್ಚಿನ ಉಪಯುಕ್ತತೆಯನ್ನು ತರಲಾರದು. ವಸ್ತುಸ್ಥಿತಿಯ ಆಳದಲ್ಲಿರುವ ಮಾನಸಿಕ ಸ್ವರೂಪವು ಭಾವನಿಷ್ಟತೆಯನ್ನೇ ಆಧರಿಸಿರುತ್ತದೆ. ಸಾಕ್ಷ್ಯಗಳ ವಸ್ತುನಿಷ್ಟತೆ ಮತ್ತು ಭಾವನಿಷ್ಟತೆ ಎರಡೂ ಕೂಡ ಚರಿತ್ರೆಗೆ ಬೇಕು. ವಸ್ತುನಿಷ್ಠತೆಯು ಚರಿತ್ರೆಗೆ ಖಚಿತತೆಯನ್ನು ನೀಡಿದರೆ ಭಾವನಿಷ್ಟತೆಯು ಅದೇ ಚರಿತ್ರೆಗೆ ನಿಜದ ಆಚೆಗಿನ ಸತ್ಯವನ್ನು ಹೊಳೆಸುತ್ತದೆ. ನಿಜ ಮತ್ತು ಸತ್ಯಗಳೆರಡೂ ಸಾಪೇಕ್ಷವಾದವು ಎಂಬುದು ಕೂಡ ಚರಿತ್ರೆಯ ಕಥನಕ್ಕೆ ಇರುವ ಸಾಧ್ಯತೆಗಳ ಮಾತೇ ಆಗಿದೆ. ಇಲ್ಲೇ ಇನ್ನೊಂದು ಅಂಶವನ್ನು ಪ್ರಸ್ತಾಪಿಸಬಹುದು. ಸುಳ್ಳು ಮತ್ತು ಕಲ್ಪನೆ ಕೂಡ ಚರಿತ್ರೆಗೆ ಬೇಕಾದ ಸಂಗತಿಯೇ ಆಗಿವೆ. ಎಷ್ಟೋ ಬಾರಿ ಹುಸಿ ಕಲ್ಪನೆ ಗಳನ್ನು ಬಿಡಿಸಿದಾಗಲೇ ಸತ್ಯದ ಅರ್ಥ ಕಾಣುವುದು. ಹಾಗೆಯೇ ನಿಜ ಮತ್ತು ಸತ್ಯಗಳ ಅಲಂಕಾರಗಳನ್ನು ಸೀಳಿದಾಗಲೂ ಅವುಗಳ ಹುಸಿ ಏನೆಂಬುದು ತಿಳಿಯುವುದು. ಹೀಗಾಗಿ ತಂತಾನೆ ಚರಿತ್ರೆಗೆ ಯಾವ ನಿಜದ ಹುಸಿ ಕಲ್ಪನೆಯ ಸತ್ಯದ ಆಧಾರಗಳೂ ಅಂತಿಮ ಅಲ್ಲ. ಸಾಕ್ಷ್ಯವನ್ನು ನಿರಾಕರಿಸಿದ ಚರಿತ್ರೆಯ ಕ್ರಮವೇ ಬೇರೆ ಇರುತ್ತದೆ. ಚರಿತ್ರೆಯ ದರ್ಶನಗಳೆಲ್ಲವೂ ಕಾಣುವುದು ಸಾಕ್ಷ್ಯಗಳ ಸಂಕೋಲೆಗಳನ್ನು ಬಿಡಿಸಿಕೊಂಡಾಗಲೇ. ಚರಿತ್ರೆಯ ಬಿಡಿಬಿಡಿ ವಿವರಗಳಿಗೆ ಸಾಕ್ಷ್ಯದ ಹಂಗಿರಬಹುದಾದರೂ ಚರಿತ್ರೆಯ ಅಖಂಡ ಭಾವಕ್ಕೆ ಆಧಾರಗಳ ಮುಲಾಜು ಇರಬೇಕಾಗಿಲ್ಲ. ಸಾಮ್ರಾಜ್ಯದ ಪತನಕ್ಕೆ ಕಾರಣಗಳು ಆಧಾರ ವಿವರಗಳು ನೂರಾರಿರಬಹುದಾದರೂ ಆ ಸಾಮ್ರಾಜ್ಯದ  ಅವನತಿಯಿಂದ ಮುಂದೆ ಏನಾಯಿತು ಎಂಬ ಪರಿಣಾಮವು ಸಾಕ್ಷ್ಯಾಧಾರಗಳ ಗಡಿಯ ಆಚೆಗಿನದು. ಇದು ತಿಳಿಯುವುದು ವಸ್ತುಸ್ಥಿತಿಯ ಮಾನಸಿಕ ಸ್ವರೂಪದ ಮೂಲಕವೇ.

ಮಾನಸಿಕ ಸ್ವರೂಪ ಕಾಲವನ್ನು ಬಿಡಿಯಾಗಿ ಗ್ರಹಿಸಿದ್ದರ ಫಲವಲ್ಲ. ಮನಸ್ಸು ಯಾವತ್ತೂ ಕೂಡ ಕಾಲವನ್ನು ಅಖಂಡವಾಗಿಯೆ ಭಾವಿಸಿರುತ್ತದೆ. ಮನಸ್ಸು ಘಟನೆಗಳನ್ನು ನೋಡಿರು ವುದಿಲ್ಲ. ಅದು ಘಟನೆಯ ಪರಿಣಾಮಗಳನ್ನು ತಿಳಿದಿರುತ್ತದೆ. ಕಾಲಾನುಕ್ರಮಣಿಕೆಯ ಚರಿತ್ರೆಯನ್ನು ಮೀರುವುದು ನಮ್ಮ ಒಳಗಿನ ಸುಪ್ತಪ್ರಜ್ಞೆ. ಇದರ ಗ್ರಹಿಕೆಯಿಂದಲೇ ಗತಕಾಲವು ಪುನರ್ ದರ್ಶನವಾಗುವುದು. ಹಂಪಿಯ ಗತ ಸಾಮ್ರಾಜ್ಯದ ಸ್ಥಿತಿಯನ್ನು ಅರಿಯಲು ಇಂತಹ ದಾರಿಯಲ್ಲಿ ಅವರವರ ಪರಿಸರ ಮತ್ತು ಸಂಸ್ಕೃತಿಗಳ ಮೂಲಕ ಪ್ರವೇಶಿಸುವುದರಿಂದ ಚರಿತ್ರೆಯ ಚರಿತ್ರೆಯನ್ನು ಗಾಢವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಚರಿತ್ರೆಯ ಮುಖ ಪರಿಚಯವಿರುವುದಕ್ಕಿಂತಲೂ ಚರಿತ್ರೆಯ ಬೆನ್ನು ಪರಿಚಯವಿರುವುದು ಉತ್ತಮ. ಚರಿತ್ರೆಯ ಮುಖ ಪರಿಚಯವೆಂದರೆ ಅದು ಸಾಮ್ರಾಜ್ಯಗಳ ರಾಜಕೀಯ ಮುಖ ಮಾತ್ರ. ಅದೇ ಚರಿತ್ರೆಯ ಬೆನ್ನು ಪರಿಚಯವೆಂದರೆ ಅದು ಜನತೆಯ ಅವ್ಯಕ್ತ ಚರಿತ್ರೆ. ಚರಿತ್ರೆಯ ಚರಿತ್ರೆಯು ಇದರಲ್ಲಿ ಅಡಗಿರುತ್ತದೆ. ಅವ್ಯಕ್ತ ಚರಿತ್ರೆಯನ್ನು ಗ್ರಹಿಸುವುದರಿಂದ ಕಾಲದ ಅಖಂಡ ಚಲನೆ ತಿಳಿಯುತ್ತದೆ. ವಿಭಿನ್ನ ಕಾಲಗಳನ್ನೆಲ್ಲ ಅಂತರ‍್ಗತಿಸಿಕೊಳ್ಳುವ ಅವ್ಯಕ್ತ ಚರಿತ್ರೆಯು ದಾಖಲಾಗ ಬೇಕಾದರೆ ಅವ್ಯಕ್ತ ಸಂಸ್ಕೃತಿಯ ಬಗ್ಗೆ ಗಾಢವಾದ ಜ್ಞಾನವಿರಬೇಕಾಗುತ್ತದೆ. ಸ್ಥಳೀಯ ಇತಿಹಾಸ, ಮೌಖಿಕ ಚರಿತ್ರೆ, ಸಂಸ್ಕೃತಿ ಚರಿತ್ರೆಗಳ ತಿಳುವಳಿಕೆಯಿಂದ ಅವ್ಯಕ್ತ ಚರಿತ್ರೆಯನ್ನು ರಚಿಸಲು ಸಾಧ್ಯ. ಇಂತಹ ಸಂಗತಿಗಳು ಸಾಕಷ್ಟು ಪರಿಚಿತ ಪದಗಳೇ ಆಗಿದ್ದರೂ ಅವುಗಳ ಹಿಂದಿರುವ ಸೈದ್ಧಾಂತಿಕ ಪರಿಕಲ್ಪನಾತ್ಮಕ ಬೌದ್ದಿಕ  ಅರ್ಥಗಳು ಸ್ಪಷ್ಟವಾಗಿ ಜನಜನಿತ ವಾಗಿಲ್ಲ. ಚರಿತ್ರೆಯ ರಾಷ್ಟ್ರೀಯ ಏಕಮಾದರಿಗಳನ್ನು ಮೀರುವ ಇವು ರಚನಾ ವಿಧಾನದಲ್ಲೂ ತುಂಬ ಅಂತರವನ್ನು ಬಯಸುತ್ತವೆ. ಮೌಖಿಕ ಚರಿತ್ರೆ, ಸ್ಥಳೀಯ ಇತಿಹಾಸ, ಸಂಸ್ಕೃತಿ ಚರಿತ್ರೆಗಳನ್ನು ಇಲ್ಲಿ ವಿಶದವಾಗಿ ವಿವರಿಸುವ ಅವಕಾಶ ಇಲ್ಲ. ಆದರೂ ತಾತ್ವಿಕವಾಗಿ ಇವುಗಳ ಅಂತರಂಗದ ಕುರಿತಂತೆ ಸ್ಥೂಲವಾಗಿ ಪ್ರಸ್ತಾಪಿಸಬಹುದು.