ಹಂಪಿಯ ಪರಿಸರವು ಚರಿತ್ರೆಗೆ ಹೇಗೆ ಸುರಕ್ಷಿತ ನೆಲೆಯಾಗಿತ್ತೊ ಹಾಗೆಯೆ ವಿವಿಧ ಜೀವಜಾಲಕ್ಕೆ ಜೀವ ಸರಪಳಿಯ ವ್ಯವಸ್ಥೆಯನ್ನು ರೂಪಿಸಿಕೊಟ್ಟಿತ್ತು. ಮನುಷ್ಯ ಜೀವಿಗೆ ಪೂರ್ವದಲ್ಲಿ ಭೂಮಿಯ ಕಾಲಾವಕಾಶವನ್ನು ಆಳಿದ್ದ ಪ್ರಾಣಿ ಪಕ್ಷಿ ಜೀವರಾಶಿಯು ನಂತರ ಬಂದ ಮಾನವನಿಗೆ ಅಡಿಯಾಳಾಗಿ ಬದುಕಬೇಕಾದ ಪರಿಸ್ಥಿತಿ ಎದುರಾದದ್ದು ಆದಿಮ ಇತಿಹಾಸದ ಒಂದು ಭಾಗವಷ್ಟೆ. ಹಂಪಿಯ ಜೀವ ಜಾಲವೂ ಮಾನವ ಸಂಸ್ಕೃತಿಗಳ ಜೊತೆ ಹೊಂದಾಣಿಕೆಗೆ ಒಗ್ಗಬೇಕಾಗಿ ಬಂದದ್ದು ಮಾನವ ಯತ್ನದ ಒತ್ತಾಯದಿಂದಲೇ. ಜೀವಿ ವರ್ಗಗಳು ಮಾನವರಿಗೆ ಅನಿವಾರ್ಯವಾಗಿದ್ದವು. ಮನುಷ್ಯ ತಾನೊಬ್ಬನೇ ಅಸ್ತಿತ್ವ ಪಡೆದು ಬದುಕುವುದು ಸಾಧ್ಯವಿಲ್ಲ. ಪರಿಸರದಲ್ಲಿ ಎಲ್ಲ ಅಗತ್ಯ ಜೀವರಾಶಿಗಳು ಒಟ್ಟಾಗಿಯೆ ಪರಿಸರವನ್ನು ಹಂಚಿಕೊಂಡು ಹೊಂದಾಣಿಕೆ ಮಾಡಿಕೊಂಡು ಬದುಕುಳಿಯುವ ಹೋರಾಟ ದಲ್ಲಿ ಅಗತ್ಯ ತಂತ್ರಗಳನ್ನು ಕಂಡುಕೊಂಡಾಗ ಮಾತ್ರ ಪರಿಸರದಲ್ಲಿ ಸಮತೋಲನ ಸಾಧ್ಯ. ಹಂಪಿ ಪರಿಸರದ ಆದಿಮ ನೆಲೆಗಳು ಹಂಪಿಯ ಜೊತೆಗೆ ತಕ್ಕ ಸ್ಥಾನವನ್ನು ಪಡೆದಿದ್ದಕ್ಕೆ ಇಲ್ಲಿ ರೂಪುಗೊಂಡಿದ್ದ ಪಶುಪಾಲಕ ಸಂಸ್ಕೃತಿಯೇ ಆಧಾರ ಒದಗಿಸುತ್ತದೆ. ಈ ನಿಟ್ಟಿನಲ್ಲಿ ಆದಿಮ ಹಂಪಿಯ ಆದಿಮ ಚಿತ್ರಕಲೆಯಂತು ಹೇರಳವಾಗಿ ಆದಿ ಹಂಪಿಯ ಪ್ರಾಣಿ ಹಾಗೂ ಮಾನವ ಜೀವನ ಕ್ರಮಗಳ ಮೇಲೆ ಬೆಳಕು ಚೆಲ್ಲುತ್ತದೆ.

ಆದಿ ಹಂಪಿಯ ಜೀವಜಾಲದ ಸಂಬಂಧಗಳಲ್ಲಿ ಮಾನವ ಪ್ರಾಣಿ ಒಟ್ಟುಗೂಡಿದ ಸಮಾಜವೇ ಪ್ರಧಾನವಾಗಿ ಕಾಣುತ್ತದೆ. ಇದು ಜೀವಜಾಲದ ಜೊತೆಗಿನ ಅನಿವಾರ್ಯ ಜೀವನ ಕ್ರಮದ ಹಂತವಾಗಿದ್ದು ಮನುಷ್ಯ ಪ್ರಾಣಿ ಲೋಕದಿಂದ ಆಗಿನ್ನೂ ಪ್ರತ್ಯೇಕವಾಗಿರಲಿಲ್ಲ ಎಂಬುದನ್ನು ತೋರುತ್ತದೆ. ಪ್ರಾಣಿ ಹಾಗೂ ಮಾನವ ಸಮಾಜದ ಪರಿಸರವನ್ನು ಅನಾಗರೀಕ ಎಂದು ತಿಳಿಯಬೇಕಿಲ್ಲ. ಪಶುಪಾಲಕ ಸಂಸ್ಕೃತಿ ವಿಕಾಸಗೊಳ್ಳುತ್ತಿದ್ದ ಹಂತದಲ್ಲಿ ಪ್ರಾಣಿ ವರ್ಗವನ್ನು ಆಶ್ರಯಿಸಿಯೆ ಮಾನವ ತನ್ನ ಅಸ್ತಿತ್ವ ಸ್ಥಾಪಿಸಿ ಸ್ವತಂತ್ರವಾಗಬೇಕಿತ್ತು. ಪ್ರಾಣಿಗಳ ಅವಲಂಬನೆ ಮತ್ತು ನಿಸರ್ಗದ ರಕ್ಷಣೆ ಇವೆರಡರ ಮಧ್ಯೆ ಜೀವಿಸುವ ಕ್ರಮಗಳಿಗೆ ಒಗ್ಗಿ ಕೊಂಡಿದ್ದ ಮಾನವ ಸಮುದಾಯಗಳು ನಿಸರ್ಗದಿಂದ ಸ್ವಾತಂತ್ರ್ಯಗೊಂಡಿರಲಿಲ್ಲ. ಅಂದರೆ ಮಾನವ ತನ್ನ ಸ್ವಂತ ಶಕ್ತಿಯ ಮೂಲಕ ನಿಸರ್ಗವನ್ನು ನಿರ್ವಹಿಸುವ ಜಾಣ್ಮೆಯನ್ನು ಕೌಶಲ್ಯವನ್ನು ಪಡೆದಿರಲಿಲ್ಲ. ಹೀಗಾಗಿ ಅರ್ಧ ಪ್ರಾಣಿ ಲೋಕ ಇನ್ನರ್ಧ ಮನುಷ್ಯ ಲೋಕ ಇವೆರಡರ ಸಮ್ಮಿಶ್ರಣದ ಜೀವನ ಸಂಸ್ಕೃತಿಯು ಹಂಪಿಯ ಪರಿಸರದಲ್ಲಿ ಪಶುಪಾಲಕ ಸಮುದಾಯಗಳಲ್ಲಿ ರೂಪುಗೊಂಡಿತು. ಈ ಬಗೆಯ ಜೀವನ ಕ್ರಮವನ್ನು ಆದಿ ಹಂಪಿಯ ಬಂಡೆಗಳ ಮೇಲಿನ ಚಿತ್ರಗಳು ವಿವರಿಸುತ್ತವೆ. ಗತ ಜೀವನದ ಅಂತಹ ಪರಿಸರ ಇಂದು ಬದಲಾಗಿದೆ. ಅದು ಜೀವಜಾಲದ ಜೊತೆಗಿನ ಮನುಷ್ಯ ಸಂಬಂಧಗಳು ಸಾಗಿ ಬಂದ ಪರಿಯ ಪರಿಣಾಮ. ಪಶುಪಾಲಕ ಸಮಾಜಗಳು ನಿಸರ್ಗದ ಮೇಲೆ ಅವಲಂಬಿತವಾಗಿ ಬದುಕು ರೂಪಿಸುವ ಹಂತವು ಬಹಳ ಕಡಿಮೆ ಅವಧಿಯದು. ಪಶುಗಳ ಜೊತೆ ಪರಿಸರವನ್ನು ಹೊಂದಿಸುವುದೂ ಅಲ್ಲದೆ ಅದರಲ್ಲಿ ತನ್ನ ಜೀವನವನ್ನು ರೂಪಿಸಿಕೊಳ್ಳವುದು ಸವಾಲಿನ ಕ್ರಮವೇ ಆಗಿತ್ತು. ಹೀಗಾಗಿ ಪಶುಪಾಲಕ ಬದುಕು ರೂಪಾಂತರಗೊಳ್ಳಲೇ ಬೇಕಾಯಿತು. ಅಲ್ಲದೆ ಪಶುಗಳು ದ್ವಿಗುಣಗೊಳ್ಳುವುದು ಸಂಖ್ಯೆ ಕರಗುವುದು ನಿಸರ್ಗದ ಏರುಪೇರುಗಳು ಮನುಷ್ಯ ಬದುಕನ್ನು ಅಸ್ಥಿರಗೊಳಿಸುತ್ತಿದ್ದವು. ಪಶು ಸಂಪತ್ತಿನ ಪೈಪೋಟಿಯು ಬೆಳೆಯು ತ್ತಿತ್ತು.

ಪಶುಪಾಲಕರ ಚಾರಿತ್ರಿಕ ಬಿಕ್ಕಟ್ಟು

ಹಂಪಿಯ ಪರಿಸರದ ಪಶುಪಾಲಕ ಸಮುದಾಯಗಳ ಹಿನ್ನೆಲೆಯಲ್ಲಿ ಈ ಅಂಶವನ್ನು ಮತ್ತಷ್ಟು ವಿಸ್ತರಿಸಬಹುದು. ಬೇಡ ಸಮುದಾಯ ತನ್ನ ಒಳಗೇ ಎರಡು ಬಣಗಳನ್ನು ಮಾಡಿ ಕೊಂಡಿತು. ಮ್ಯಾಸಬೇಡ ಊರುಬೇಡ ಎಂಬ ಈ ಎರಡು ಪಂಗಡಗಳು ಹಂಪಿ, ಕೊಪ್ಪಳ ಹಾಗೂ ಚಿತ್ರದುರ್ಗ ಪರಿಸರಗಳನ್ನು ಆಯ್ದುಕೊಂಡಿದ್ದವು. ಪಶುಪಾಲನೆಯ ಮೇಲಿನ ಹೆಚ್ಚಿನ ಒತ್ತಡವೇ ಇದಕ್ಕೆ ಕಾರಣವಾಗಿದ್ದುದು. ಪಶು ಸಂಪತ್ತು ಕ್ಷೀಣಿಸುತ್ತಿದ್ದಂತೆ ಒಂದು ವರ್ಗ ಪಶುಪಾಲಕ ಜೀವನ ಕ್ರಮದಿಂದ ಪಕ್ಕಕ್ಕೆ ಸರಿದು ಬೆಟ್ಟಗುಡ್ಡಗಳ ಮರೆಯ ಜೀವನವನ್ನು ಬಿಟ್ಟು ಊರಿನ ಜೀವನ ಕ್ರಮವನ್ನು ಅಳವಡಿಸಿಕೊಂಡಿತು. ವಿಶೇಷವಾಗಿ ಇದು ಹಂಪಿ ಪರಿಸರದಲ್ಲೂ ಘಟಿಸಿದೆ. ಈ ಭಾಗದಲ್ಲಿ ಮ್ಯಾಸ ಬೇಡರು ಈಗಲೂ ಪಶುಪಾಲಕ ಜೀವನ ಕ್ರಮದ ಸ್ಮೃತಿಗಳನ್ನು ಉಳಿಸಿಕೊಂಡಿದ್ದಾರೆ. ಆದರೆ ವಿಜಯನಗರ ಸಾಮ್ರಾಜ್ಯದ ಹೊತ್ತಿಗೆ ಊರುಬೇಡರು ವಕ್ಕಲು ಸಮುದಾಯವಾಗಿ ಪರಿವರ್ತನೆಗೊಳ್ಳಲು ಭೂಮಿಯ ಸಂಬಂಧವನ್ನು ವಿಶೇಷವಾಗಿ ಮಾಡಿದೆ. ಅದರಿಂದಾಗಿಯೇ ಭೂಮಾಲೀಕ ಸಮಾಜದ ಅಸ್ಪಷ್ಠಗುಣಗಳೂ ಊರುಬೇಡರ ಸಂಸ್ಕೃತಿಯಲ್ಲಿ ಬಿಂಬಿತವಾಗಿವೆ. ಆದರೆ ಮ್ಯಾಸ ಬೇಡರು ಬೆಟ್ಟಗುಡ್ಡಗಳ ಪರಿಸರವನ್ನೆ ಹೆಚ್ಚಾಗಿ ಆಶ್ರಯಿಸಿ ಹಂಪಿಯಿಂದ ಹಿಡಿದು ಚಿತ್ರದುರ್ಗದ ವರೆಗಿನ ಹುಲ್ಲು ಗಾವಲು ಪ್ರದೇಶಗಳನ್ನು ಆಯ್ಕೆಮಾಡಿಕೊಳ್ಳುವ ಮೂಲಕ ತಮ್ಮ ಹಳೆಯ ಪಶುಪಾಲಕ ಜೀವನ ಕ್ರಮವನ್ನೆ ರೂಪಾಂತರಿಸಿಕೊಂಡರು. ಇಲ್ಲೇ ಒಂದು ವಿಷಯವನ್ನು ನೆನಪಿಸಬಹುದು. ಆಗತಾನೆ ಕನ್ನಡ ಮತ್ತು ತೆಲುಗು ಭಾಷೆಗಳೆರಡೂ ಸ್ಪಷ್ಟವಾಗಿ ಭಿನ್ನಭಾಷಿಕ ನೆಲೆಗಳನ್ನು ಕಂಡುಕೊಳ್ಳುವ ಯತ್ನದಲ್ಲಿದ್ದಾಗ ಕನ್ನಡ ಮತ್ತು ತೆಲುಗು ಭಾಷೆಗಳೆರಡರ ಭೌಗೋಳಿಕತೆ ಯಲ್ಲಿ ಪಶುಪಾಲಕ ಜೀವನ ರೂಪಿಸಿಕೊಳ್ಳುತ್ತಿದ್ದ ಮ್ಯಾಸಬೇಡರು ಈ ಎರಡೂ ಭಾಷಿಕ ಸಮಾಜಗಳ ಬುಡಕಟ್ಟು ಗುಣಗಳನ್ನು ಕಳೆದುಕೊಳ್ಳದೆ ಉಳಿಸಿಕೊಂಡಿದ್ದಾರೆ. ಅಲ್ಲದೆ ಈ ಎರಡೂ ಭಾಷೆಗಳ ಕೊಂಡಿಯಂತೆ ತಮ್ಮ ಭಾಷಿಕ ಸಂಸ್ಕೃತಿಯನ್ನು ವಿಸ್ತರಿಸಿಕೊಂಡಿದ್ದಾರೆ. ಮೂಲ ದ್ರಾವಿಡ ಭಾಷೆಗಳ ವೈವಿಧ್ಯ ಸ್ವರೂಪವನ್ನು ಹೊಂದಿರುವ ಮ್ಯಾಸಬೇಡರ ಕನ್ನಡವು ಪ್ರತ್ಯೇಕವಾಗಿ ತೆಲುಗು ಕನ್ನಡ ಮಿಶ್ರಿತ ವಿಭಿನ್ನ ಉಪಭಾಷೆಯಾಗಿ ಬೆಳೆಯುವ ಅವಕಾಶವಿತ್ತು. ಊರು ಬೇಡರು ಗ್ರಾಮೀಣೀಕರಣಗೊಂಡಿದ್ದರಿಂದ ಕನ್ನಡ ಭಾಷಾ ಪ್ರಭೇದಗಳ ಜೊತೆ ಹೆಚ್ಚು ಆಪ್ತವಾಗಿ ತೆಲುಗಿನಿಂದ ಅಂತರ ಕಾಯ್ದುಕೊಂಡರು. ಆದರೆ ಮ್ಯಾಸಬೇಡರು ತೆಲುಗು ಹಾಗು ಕನ್ನಡ ಎರಡೂ ಭಾಷೆಗಳನ್ನು ಗಾಢವಾಗಿ ಆವಾಹಿಸಿಕೊಂಡರು. ಮ್ಯಾಸಬೇಡರು ಮನೆಯಲ್ಲಿ ತೆಲುಗು ಭಾಷೆಯನ್ನು ಮುಖ್ಯವಾಗಿ ಆಡುವುದು ಕೂಡ ಅವರಲ್ಲೆ ಅಂತರಕ್ಕೆ ಕಾರಣವಾಗಿರಬಹುದು. ಕರ್ನಾಟಕಕ್ಕೆ ನಿರಂತರವಾಗಿ ತೆಲುಗು ಭಾಷಿಕ ಅಲೆಮಾರಿ ಬುಡಕಟ್ಟು ಸಮುದಾಯಗಳು ಬದುಕಿಗಾಗಿ ವಲಸೆ ಬಂದದ್ದು ಮುಂದೆ ಅನೇಕ ಸಾಂಸ್ಕೃತಿಕ ಚಹರೆಗಳ ಪೈಪೋಟಿಗೂ ಕಾರಣವಾಯಿತು. ಊರುಬೇಡರು ಭೂಮಿಯ ಮೇಲೆ ಒಡೆತನ ಸ್ಥಾಪಿಸಿ ಕೊಳ್ಳಲು ಯತ್ನಿಸುತ್ತಿದ್ದ ಹಂತದಲ್ಲೆ ಮ್ಯಾಸ ಬೇಡರು ಇನ್ನೂ ಪಶುಸಂಪತ್ತಿನ ಆಧಿಪತ್ಯದಲ್ಲೇ ಮುಂದುವರಿಯುತ್ತಿದ್ದರು. ಈ ಬಗೆಯ ಎರಡೂ ಜೀವನ ಕ್ರಮಗಳು ಸ್ಪಷ್ಟ ಆಕಾರಕ್ಕೆ ಬರುವ ವೇಳೆಗೆ ವಿಜಯನಗರ ಸಾಮ್ರಾಜ್ಯವು ಎರಡೂ ಸಮುದಾಯಗಳನ್ನು ತನ್ನ ಸಾಮ್ರಾಜ್ಯ ವನ್ನು ಕಾಯುವ ಕಾಯಕಕ್ಕೆ ಒಳಪಡಿಸಿಕೊಂಡಿತು. ಇದರಲ್ಲಿ ಊರು ಬೇಡರು ವಿಜಯನಗರದ ಸೈನ್ಯ ಬಲವನ್ನು ಹೆಚ್ಚಿಸಿ ಆ ಮೂಲಕ ಸೈನಿಕ ಸಮುದಾಯವಾಗಿ ವಿಸ್ತರಿಸಿಕೊಳ್ಳಲು ಅವಕಾಶ ವಾಯಿತು. ಇದರ ಪರಿಣಾಮವೇ ಮುಂದೆ ಬೇಡ ಸಮುದಾಯದಲ್ಲೂ ಪಾಳೆಗಾರಿಕೆಯ ಸಾಮರ್ಥ್ಯ ಬೆಳೆಯಲು ಸಾಧ್ಯವಾಯಿತು. ಈ ಪಲ್ಲಟಗಳ ಪೂರ್ವದಲ್ಲಿ ಪಶುಸಂಪತ್ತಿನ ಪೈಪೋಟಿಯನ್ನು ಎದುರಿಸುತ್ತಿದ್ದ ಈ ಎರಡು ಸಮುದಾಯಗಳು ಹಂಪಿ ಪರಿಸರದಲ್ಲಿ ವಿಜಯನಗರ ಸಾಮ್ರಾಜ್ಯದ ಮೂಲಕ ಆಧುನಿಕತೆಯನ್ನು ಒಂದಿಷ್ಟಾದರೂ ಸಾಧಿಸಿದವು. ಅಷ್ಟೇ ಅಲ್ಲದೆ ಅವು ವಿಜಯನಗರದಲ್ಲಿ ನಿರ್ಣಾಯಕ ಶಕ್ತಿಯಾಗಿಯೂ ಬೆಳೆದಿದ್ದವು. ಆದರೆ ವಿಜಯನಗರ ಪತನವಾದ ನಂತರ ಈ ಸಮುದಾಯಗಳೆರಡೂ ಅತ್ತ ತಕ್ಕ ಚಾರಿತ್ರಿಕ ನಡಿಗೆಗೂ ಒಳಪಡದೆ ಇತ್ತ ಪೂರ್ವದ ಜೀವನ ಕ್ರಮಗಳಿಗೂ ಹಿಂತಿರುಗದೆ ಮದ್ಯಸ್ಥಿತಿಯಲ್ಲಿ ಅತಂತ್ರವಾದವು. ಹೀಗೆ ಒಂದು ಪಶುಪಾಲಕ ಸಮಾಜ ತನ್ನ ಅಸ್ತಿತ್ವದ ನಿಸರ್ಗ ಸಂಬಂಧದಿಂದ ದೂರವಾಗಿ ಬದಲಾದ ಸಂದರ್ಭದಲ್ಲಿ ಸಮರ್ಥ ಜೀವನಾವಕಾಶವನ್ನು ಪಡೆದುಕೊಳ್ಳಲು ಮುಂದೆ ಸಾಧ್ಯವಾಗದೆ ಹೋಗಿದೆ.

ಈ ಅತಂತ್ರ ಸ್ಥಿತಿಯಲ್ಲಿ ವಿಜಯನಗರ ಪತನವಾದ ನಂತರ ಹಂಪಿ ಪರಿಸರವನ್ನು ಬಿಟ್ಟು ಮ್ಯಾಸಬೇಡರು ಚಿತ್ರದುರ್ಗ, ಕೊಪ್ಪಳ ಪರಿಸರಕ್ಕೆ ವಲಸೆ ಹೊರಟು ಅಲ್ಲಿ ಮತ್ತೆ ಅವರು ತಮ್ಮ ಪಶುಪಾಲಕ ಜೀವನವನ್ನು ಪುನರುಜ್ಜೀವನಗೊಳಿಸಿಕೊಳ್ಳಲು ಯತ್ನಿಸಿದ್ದಾರೆಂದು ಭಾವಿಸಬಹುದು. ಹಾಗೆ ಅಸ್ತಿತ್ವ ಸ್ಥಾಪಿಸಿಕೊಳ್ಳಲು ಈ ಕಾಲಮಾನದಲ್ಲಿ ಮ್ಯಾಸ ಬೇಡರು ರೂಪಿಸಿಕೊಂಡ ಸಾಂಸ್ಕೃತಿಕ ನಾಯಕರ ಮೂಲಕ ತಿಳಿಯಬಹುದು. ಹಂಪಿ ಮತ್ತು ಚಿತ್ರದುರ್ಗ ಪರಿಸರಗಳಲ್ಲಿ ಬೇಡ ಸಮುದಾಯಗಳು ಮತ್ತೆ ಪೈಪೋಟಿಗೆ ತೊಡಗಿದಂತೆ ಕಾಣುತ್ತದೆ. ಗಾದ್ರಿ ಪಾಲನಾಯಕ, ನಾಯಕನಟ್ಟಿ ತಿಪ್ಪೇಸ್ವಾಮಿಯಂತಹ ಸಾಂಸ್ಕೃತಿಕ ರರು ಪಶುಪಾಲಕ ಸಂಸ್ಕೃತಿಯ ಪುನರುಜ್ಜೀವನಕ್ಕೆ ಯತ್ನಿಸುವುದು ಈ ಬಗೆಯ ಚಾರಿತ್ರಿಕ ಒತ್ತಡಗಳ ಕಾರಣದಿಂದ. ವಿಜಯನಗರದ ಪತನ ಕೂಡ ಬೇಡಸಮುದಾಯಕ್ಕೆ ಸಾಂಸ್ಕೃತಿಕ ನಾಯಕರ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಆದರೆ ಈ ಬಗೆಯ ಅಸ್ತಿತ್ವವಾದಿ ಹೋರಾಟದ ಸಾಂಸ್ಕೃತಿಕ ಪಲ್ಲಟಗಳು ಪಶುಪಾಲಕ ಸಂಸ್ಕೃತಿಯ ಕೊಂಡಿಯನ್ನು ಪುನರ್‌ನಕರಿಸಿಕೊಳ್ಳಲು ಗಾಢವಾಗಿ ಯತ್ನಿಸಿದರೂ ಪ್ರಬಲ ಸಮುದಾಯವಾಗಿ ಕರ್ನಾಟಕದ ಗ್ರಾಮ ಸಮಾಜದಲ್ಲಿ ಸಾಧ್ಯವಾಗ ಲಿಲ್ಲ. ಹಂಪಿ, ಕೊಪ್ಪಳ ಮತ್ತು ಚಿತ್ರದುರ್ಗದ ಗ್ರಾಮೀಣ ಪರಿಸರಗಳಲ್ಲಿ ಈ ಎರಡು ಸಮುದಾಯಗಳು ಅಲ್ಲಲ್ಲಿ ನೆಲೆಗೊಂಡಿದ್ದರೂ ಆ ಬಗೆಯ ನೆಲೆಯು ಪೂರ್ಣ ಸ್ವಾಮ್ಯ ನೆಲೆಯಾಗಿ ಬೇರು ಬಿಡಲು ಸಾಧ್ಯವಾಗಲಿಲ್ಲ. ಆ ವೇಳೆಗಾಗಲೇ ಪಶುಪಾಲಕ ಸಮುದಾಯ ಗಳಲ್ಲೆ ಇನ್ನಿತರ ಗುಂಪುಗಳು ಪ್ರಬಲವಾಗಿದ್ದವು. ಕುರುಬ ಹಾಗೂ ಗೊಲ್ಲ ಸಮುದಾಯಗಳು ಬೇಡ ಸಮುದಾಯಕ್ಕಿಂತಲು ಮುಂದೆ ಹೋಗಿ ಕರ್ನಾಟಕ ವ್ಯಾಪ್ತಿಯಲ್ಲಿ ಗ್ರಾಮ ಸಮಾಜ ವನ್ನು ರೂಪಿಸಿಕೊಳ್ಳುತ್ತಿದ್ದವು. ದಕ್ಷಿಣ ಭಾಗದ ಕರ್ನಾಟಕದಲ್ಲಾಗಲೇ ವಕ್ಕಲು ಸಮುದಾಯ ಗಳು ಅಸ್ತಿತ್ವ ಸಾಧಿಸಿಕೊಂಡಿದ್ದವು. ಇನ್ನು ಅಸಂಖ್ಯಾತ ವೃತ್ತಿ ಸಮುದಾಯಗಳೆಲ್ಲ ಅಲ್ಲಲ್ಲಿ ತಮ್ಮ ಚಹರೆಗಾಗಿ ಹೋರಾಟ ಆರಂಭಿಸಿದ್ದವು. ಶೈವ ಧರ್ಮ ಅಸ್ತಿತ್ವಕ್ಕೆ ಆ ವೇಳೆಗಾಗಲೇ ಎದ್ದು ನಿಂತು ವೀರಶೈವ ಸಮುದಾಯಗಳು ಜಾತಿಯ ಶ್ರೇಣಿಯಲ್ಲಿ ಮೇಲೆ ಬಂದು ಬಿಟ್ಟಿದ್ದವು. ಹಂಪಿ ಪರಿಸರದಲ್ಲಿ ಈ ಎಲ್ಲ ಸಮುದಾಯಗಳು ಸ್ಥಳಾವಕಾಶ ಪಡೆದಾಗಿದ್ದರಿಂದ ಬೇಡ ಸಮುದಾಯ ಬದಲಾದ ಕಾಲದ ಅನೇಕ ಇಕ್ಕಟ್ಟುಗಳಿಗೆ ಸಿಲುಕಿತು. ತನಗಿಂತಲು ಕೆಳಗಿದ್ದ ಜಾತಿಗಳ ಜೊತೆ ಬೇಡ ಸಮುದಾಯ ಅಂತರ ಕಾಯ್ದುಕೊಳ್ಳುವ ಮೂಲಕ ಸ್ಥಾನ ಪೈಪೋಟಿಗೂ ಇಳಿಯಬೇಕಾಯಿತು.

ಪಶುಪಾಲಕರ ನೈಸರ್ಗಿಕ ಪೈಪೋಟಿ

ಅವ್ಯಕ್ತ ಸಂಸ್ಕೃತಿಯ ದಾರಿಯಲ್ಲಿ ಹೇಗೆ ಒಂದೊಂದು ಸಮುದಾಯವೂ ನಿಸರ್ಗದಿಂದ ಪಶುಪಾಲಕ ಜೀವನ ಕ್ರಮದಿಂದ ಪಲ್ಲಟಗೊಂಡವು ಎಂಬುದನ್ನು ತಿಳಿಯಲು ಈ ಬಗೆಯ ಹಿನ್ನೆಲೆಗಳು ಮುಖ್ಯ. ಹೇಗೆ ಮನುಷ್ಯ ಆದಿವಾಸಿಯಿಂದ ಇಂದಿನ ವಾಸದ ನೆಲೆಗೆ ಬಂದನೊ ಹಾಗೆಯೆ ಅವರವರ ಸಂಸ್ಕೃತಿ ಚರಿತ್ರೆ ಕೂಡ ಆಯಾಯ ಹಂತಗಳ ಗುಣಗಳಿಂದ ಸಂಯುಕ್ತ ಗೊಂಡು ವ್ಯಕ್ತವಾಗಿದೆ. ಹಂಪಿಯ ಸಾಮ್ರಾಜ್ಯ ಪೂರ್ವದ ಸಾಮ್ರಾಜ್ಯವಾಗಿದ್ದುದೇ ಪಶುಪಾಲಕ ಸಮುದಾಯಗಳ ಸಾಮ್ರಾಜ್ಯ. ಮೊದಲೇ ಹೇಳಿದಂತೆ ಮಾನವ ಹಾಗೂ ಪ್ರಾಣಿಗಳ ಸಹಜೀವನದಿಂದ ರೂಪುಗೊಂಡಿದ್ದ ಸಂಸ್ಕೃತಿಯು ಸಾಮ್ರಾಜ್ಯಗಳ ಆಸರೆಗೆ ಒಳಪಟ್ಟದ್ದರಿಂದ ಅವುಗಳ ಸಹಜ ನೈಸರ್ಗಿಕ ಸಂಸ್ಕೃತಿಯ ವಿಕಾಸ ಸಾಧ್ಯವಾಗದೇ ಹೋಯಿತು. ಇದರಿಂದಾಗಿಯೆ ಇಂದಿಗೂ ಬೇಡ ಕುರುಬ ಸಮುದಾಗಳು ನಿರ್ಣಾಯಕ ಸಂಸ್ಕೃತಿಗಳಾಗಿ ಬೆಳೆಯಲು ಆಗದೇ ಹೋದದ್ದು. ಮ್ಯಾಸ ಬೇಡರು ಈ ಪರಿಸ್ಥಿತಿಯಲ್ಲಿ ಹೆಚ್ಚು ಹೆಚ್ಚು ಹಿಮ್ಮುಖ ಚಲನೆಗೆ ಮುಂದಾದರು. ಹಾಗೆಯೆ ಗೊಲ್ಲರು ಕೂಡ ಇದೇ ಹಾದಿ ತುಳಿದರು. ಇದು ಪಶುಪಾಲಕ ಜೀವನದ ಅಸ್ವಾಭಾವಿಕ ಕ್ರಮದಂತೆ ಕಾಣುತ್ತದೆ. ಉಳಿದೆಲ್ಲ ಸಮುದಾಯಗಳು ಪರಿಸರದ ಬೇರೆ ಬೇರೆ ಪಲ್ಲಟಗಳನ್ನು ಸಕಾರಾತ್ಮಕವಾಗಿ ರೂಪಿಸಿಕೊಳ್ಳುತ್ತ ತಮ್ಮ ಮೂಲ ಬುಡಕಟ್ಟು ಸ್ವರೂಪದಿಂದ ಜಾರಿಕೊಳ್ಳುತ್ತಿರುವಾಗ ಕೆಲವೇ ಕೆಲವು ಇಂತಹ ಸಮುದಾಯಗಳು ಮೂಲ ಜೀವನದ ವಿಧಾನಕ್ಕೆ ಮರಳಿದ್ದುದು ಅಸಾಭಾವಿಕ ಆಯ್ಕೆ. ಅದರಲ್ಲಿ ಊರುಬೇಡ ಅಥವಾ ಊರ ನಾಯಕ ಸಮುದಾಯ ಮೂಲ ಚಹರೆಯನ್ನು ಉಳಿಸಿಕೊಂಡೇ ನಾಡಿನ ಬೇರೆ ಬಗೆಯ ನಂಬಿಕೆಗಳನ್ನು ಅಳವಡಿಸಿಕೊಂಡದ್ದು ಸಕಾರಾತ್ಮಕ ಅಂಶ. ಸಾಮ್ರಾಜ್ಯಗಳು ತಮ್ಮ ರಾಜ್ಯ ವಿಸ್ತರಣೆ ಮಾಡಿಕೊಳ್ಳುವುದು ಬೇರೆ. ಪಶುಪಾಲಕ ಸಮಾಜಗಳು ನಿಸರ್ಗದ ಜೊತೆ ಅಸ್ತಿತ್ವಕ್ಕೆ ಮಾಡುವ ಹೋರಾಟ ಬೇರೆ. ಮಾನವ ಕುಲಗಳಲ್ಲಿ ನರಭಕ್ಷಕ ವ್ಯವಸ್ಥೆಯೊಂದು ಇದ್ದದ್ದು ನಿಸರ್ಗದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇದ್ದ ಅಡೆತಡೆಗಳ ಕಾರಣವಾಗಿ. ತನ್ನಂತದೇ ಇನ್ನೊಂದು ಮಾನವ ವರ್ಗ ಈ ಪ್ರದೇಶದಲ್ಲಿ ತನ್ನ ಸುತ್ತಲಿನ ಪರಿಸರದಲ್ಲಿ ಇರಬಾರದು ಎಂದು ನಿರ್ಧರಿಸಿ ನಡೆದ ಮಾನವ ಹತ್ಯೆಗಳಲ್ಲಿ ನಿಯಾಂಡರ್ಥಲ್ ಮಾನವ ಸಮೂಹವೆ ನಾಶವಾಯಿತು. ವಾಸದ ನೆಲೆಯ ಕಾರಣಕ್ಕಾಗಿಯೆ ಬುಡಕಟ್ಟುಗಳಲ್ಲಿ ಭಗ್ನಾ ವತಾರ ಹುಟ್ಟಿಕೊಂಡದ್ದು. ಈಗಲೂ ಅನೇಕ ಬುಡಕಟ್ಟುಗಳು ರುಂಡಬೇಟೆ ಆಡುವುದಿದೆ. ಆಫ್ರಿಕಾದಲ್ಲಂತು ಇದು ಒಂದು ಕಾಲಕ್ಕೆ ಅತಿಯಾಗಿ ಎಷ್ಟೋ ಸಮೂಹಗಳು ನಾಶವಾದವು. ವಾಸದ ನೆಲೆಯ ಅಧಿಪತ್ಯ ವಿಸ್ತಾರಗೊಂಡಂತೆಲ್ಲ ನೈಸರ್ಗಿಕ ಸೌಲಭ್ಯಗಳ ಕೊರತೆ ಹೆಚ್ಚಿದಂತೆಲ್ಲ ಸಾವು ಬದುಕಿನ ಹೋರಾಟದ ಪೈಪೋಟಿಯಲ್ಲಿ ಎಷ್ಟೋ ಸಮುದಾಯಗಳು ಬೇರೆ ಚಹರೆಗಳನ್ನೆ ಧರಿಸಿವೆ. ನಿಸರ್ಗದ ಅವಕಾಶ ಕಿರಿದಾದಂತೆಲ್ಲ ಸಮುದಾಯಗಳ ಅವಕಾಶವೂ ಕಿರಿದಾಗುತ್ತದೆ. ಮ್ಯಾಸಬೇಡ ಹಾಗೂ ಊರು ಬೇಡರ ನಡುವೆ ಘಟಿಸುವ ತೆರೆಮರೆಯ ಸೂಕ್ಷ್ಮಸಂಘರ್ಷಗಳು ನಿಸರ್ಗದ ಭಾಗವಾಗಿಯೆ ಪಶುಪಾಲಕ ಸಂಸ್ಕೃತಿಯ ರೀತಿಯಾಗಿಯೆ ಘಟಿಸಿವೆ. ಹಂಪಿ ಪರಿಸರದಲ್ಲಾದ ಇಂತಹ ಅವ್ಯಕ್ತ ಸಂಘರ್ಷದ ಕಾರಣ ದಿಂದಲೇ ಈಗಲೂ ಈ ಎರಡು ಬಣಗಳ ನಡುವೆ ಅತಿಸೂಕ್ಷ್ಮ ಅಂತರಗಳು ಏರ್ಪಟ್ಟಿರು ವುದು. ಪಶು ಸಂಪತ್ತಿನ ಒಡೆತನವನ್ನು ನಿರ್ವಹಿಸಲಾಗದೆ ಮ್ಯಾಸಬೇಡರು ಹಂಪಿ ಪ್ರದೇಶ ದಿಂದ ವಲಸೆ ಹೋದದ್ದು ಕೂಡ ನೈಸರ್ಗಿಕ ಹಿನ್ನೆಲೆಯಿಂದ. ವಾತಾವರಣದಲ್ಲಾದ ಬದಲಾವಣೆಗಳು ಪರಿಸರದ ಪಶು ಆಹಾರದ ಮೇಲೆ ಪರಿಣಾಮ ಬೀರಿವೆ.

ಇದೇ ವೇಳೆಗೆ ಭೂಮಿಯ ಮೇಲಿನ ಒಡೆತನ ಸಾಧಿಸುತ್ತಿದ್ದ ಕೃಷಿ ವ್ಯವಸ್ಥೆಯು ನಿರ್ಸಗದ ಮೇಲೆ ಅವಲಂಬಿತವಾಗಿದ್ದ ಸಮುದಾಯಗಳನ್ನು ಒತ್ತಡಕ್ಕೆ ಸಿಲುಕಿಸಿತು. ಪಶು ಆಹಾರದ ಕೊರತೆಯೂ ಎದುರಾಗುತ್ತಿತ್ತು. ಹವಾಮಾನದ ವೈಪರೀತ್ಯಗಳು ಪಶುಪಾಲಕ ಸಮಾಜಗಳು ಸೀಳಿಕೊಳ್ಳಲು ಮುಂದಾಗುವಂತೆ ಮಾಡಿತ್ತು. ಹಂಪಿಯ ಬೆಟ್ಟಗುಡ್ಡಗಳ ನೆಲೆಗೆ ಅತ್ತ ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಂದಲೂ ಅಲೆಮಾರಿಯಾಗಿ ಬಂದು ಹೋಗುವ ಸಮುದಾಯಗಳ ಸಂಖ್ಯೆಯೂ ಹೆಚ್ಚುತ್ತಿತ್ತು. ವಕ್ಕಲುತನಕ್ಕೆ ಹೆಚ್ಚು ಮುಂದಾಗಿದ್ದ ಕುರುಬ ಸಮುದಾಯದ ಜೊತೆ ಪ್ರಬಲ ಸ್ಪರ್ಧೆಯೆ ಏರ್ಪಟ್ಟು ನೈಸರ್ಗಿಕ ಸಂಪತ್ತಿನ ಸಲುವಾಗಿ ಅಂತಃಕಲಹಗಳೂ ಬೆಳೆದವು. ಇವೆಲ್ಲ ವರ್ತಮಾನದಲ್ಲೂ ಈ ಸಮುದಾಯಗಳ ಸ್ವಭಾವದಲ್ಲಿ ಉಳಿದುಕೊಂಡು ಬಂದಿರುವ ಅವ್ಯಕ್ತ ಸ್ವಭಾವಗಳಾಗಿವೆ. ಇವುಗಳ ಆಧಾರದಿಂದ ನೆನ್ನೆಯ ಅವ್ಯಕ್ತ ಗುಣಗಳನ್ನು ವರ್ತಮಾನದ ವ್ಯಕ್ತ ಧೋರಣೆಗಳಿಂದ ಗ್ರಹಿಸಬಹುದಾಗಿದೆ.

ಈ ಬಗೆಯಲ್ಲಿ ಹಂಪಿ ಪರಿಸರದ ಪಶುಪಾಲಕ ಸಮುದಾಯಗಳು ನಿಸರ್ಗದ ಜೊತೆ ಸಂಬಂಧ ಬೆಳಸಿ ಪಲ್ಲಟಗಳ ಮೂಲಕ ವಿಭಿನ್ನ ಚಹರೆಗಳನ್ನು ಸಾಧಿಸಿಕೊಂಡಿವೆ. ಇದು ಜೀವಜಾಲದ ಜೊತೆಗಿನ ಅವ್ಯಕ್ತ ಪಶುಪಾಲಕ ಸಂಸ್ಕೃತಿಯ ಬೇರುಗಳ ಸ್ವರೂಪ.  ಪಶು ಪಾಲಕ ಸಮುದಾಯಗಳು ವಿಜಯನಗರ ಸಾಮ್ರಾಜ್ಯದಲ್ಲಿ ಪಡೆದುಕೊಂಡಿದ್ದ ಸ್ಥಾನಮಾನ ಗಳು ಇಪ್ಪತ್ತೊಂದನೆ ಶತಮಾನದ ಪ್ರಜಾಪ್ರಭುತ್ವದ ರಾಜಕೀಯ ಪಕ್ಷಗಳ ಸಾಮ್ರಾಜ್ಯಗಳಲ್ಲು ಹೆಚ್ಚು ಕಡಿಮೆ ಒಂದೇ ಬಗೆಯದಾಗಿದೆ.

ವಕ್ಕಲುತನದ ಸಾಂಸ್ಕೃತಿಕ ಚಹರೆ

ಪಶುಪಾಲಕರಲ್ಲೇ ಪ್ರಬಲರಾಗಿದ್ದ ಕುರುಬ ಸಮುದಾಯವು ವಕ್ಕಲು ಸಮುದಾಯವಾಗಿ ರೂಪಾಂತರಗೊಂಡದ್ದು ವಿಜಯನಗರ ಸಾಮ್ರಾಜ್ಯದ ಬಲದಿಂದಲೂ ಇರಬಹುದೆಂದು ಊಹಿಸಬಹುದಾಗಿದೆ. ಹಂಪಿ ಪರಿಸರದಲ್ಲಿ ಬೇಡ ಸಮುದಾಯದ ಜೊತೆ ಪ್ರಬಲ ಪೈಪೋಟಿ ಸಾಧಿಸಿದ್ದು ಕೂಡ ಕುರುಬ ಸಮುದಾಯಕ್ಕೆ ಹೆಚ್ಚಿನ ರಾಜಕೀಯ ಬಲವನ್ನೂ ಸಾಮ್ರಾಜ್ಯದ ಹಿನ್ನೆಲೆಯಲ್ಲಿ ತಂದುಕೊಟ್ಟಿತ್ತು. ಈ ಅಂಶಗಳು ಪಶುಪಾಲಕ ಸಂಸ್ಕೃತಿಯ ಪಲ್ಲಟಗಳನ್ನು ಸೂಚಿಸುತ್ತವೆ. ಕುರುಬ ಸಮುದಾಯ ತನ್ನ ಒಳಗೆ ಬಣ ಸಮಾಜದ ರಚನೆಯಂತೆಯೆ ಒಳಪಂಗಡಗಳನ್ನು ರೂಪಿಸಿಕೊಂಡು ತಮ್ಮಲ್ಲೇ ಸಾಮರಸ್ಯವನ್ನು ಕಾಯ್ದು ಕೊಂಡಿದ್ದವು. ಆದರೆ ಗೊಲ್ಲ ಸಮುದಾಯ ಮಾತ್ರ ಕುರುಬ ಸಮುದಾಯದ ಒಳಬಣದಿಂದಲೇ ಸಿಡಿದು ಹೊರ ಹೋಗಿ ಪ್ರತ್ಯೇಕ ಚಹರೆಯನ್ನು ಉಳಿಸಿಕೊಂಡಿತು. ಬೇಡ ಮತ್ತು ಕುರುಬ ಸಮುದಾಯಗಳೆರಡರ ಪೈಪೋಟಿಯ ಮಧ್ಯೆ ಅನ್ಯವಾಗಿ ರೂಪುಗೊಂಡ ಸಮುದಾಯ ಗೊಲ್ಲ ಸಮುದಾಯ. ವಿಶೇಷವಾಗಿ ನಿಸರ್ಗಾರಾಧನೆಯ ಪಶುಪಾಲನೆಯನ್ನೆ ಮುಖ್ಯ ಜೀವನ ವೃತ್ತಿಯನ್ನಾಗಿ ಮಾಡಿಕೊಂಡ ಗೊಲ್ಲ ಸಮುದಾಯವು ಹಂಪಿ ಪರಿಸರದಲ್ಲಿ ಬೇಡ ಮತ್ತು ಕುರುಬರ ಪೈಪೋಟಿಯನ್ನು ತಾಳಲಾರದೆ ಚಿತ್ರದುರ್ಗದ ಪರಿಸರಕ್ಕೆ ವಲಸೆ ಹೋಗಿರುವಂತೆ ತೋರುತ್ತದೆ. ಈ ಬಗೆಯು ಅವರವರ ಅವ್ಯಕ್ತ ಸಂಸ್ಕೃತಿಗಳಲ್ಲಿ ಪ್ರತಿಫಲನಗೊಳ್ಳುತ್ತಿದೆ. ಈ ಮೂರು ಸಮುದಾಯಗಳ ಸಾಂಸ್ಕೃತಿಕ ವೀರರ ಮಹಾಕಾವ್ಯಗಳ ಸಾಂಸ್ಕೃತಿಕ ನಾಯಕರು ಈ ಬಗೆಯ ಜೀವನಾವರ್ತನದ ಪಲ್ಲಟಗಳನ್ನು ಬಿಂಬಿಸುತ್ತಿದ್ದಾರೆಂಬುದು ಪಶುಪಾಲನಾ ಸಂಸ್ಕೃತಿಯ ಗನಮಾರ್ಹ ಅಂಶವಾಗಿದೆ. ಅವರ ಜನಪದ ಮಹಾಕಾವ್ಯಗಳಲ್ಲಿರುವ ಪಶು ಪಾಲನಾ ಸಂಸ್ಕೃತಿಯ ವಿವರಗಳು ಚರಿತ್ರೆಯ ಪುನರ್ ರಚನೆಗೆ ಬೇಕಾದ ರೂಪಕ ವಿವರಗಳನ್ನು ನೀಡುತ್ತಿರುವುದು ಅವ್ಯಕ್ತ ಚರಿತ್ರೆಯ ಬೇರೊಂದು ನಿರೂಪಣೆಯನ್ನೆ ಬಿಂಬಿಸುತ್ತಿದೆ.

ಪಶುಪಾಲಕ ವೃತ್ತಿಯು ಕುರುಬ ಸಮಾಜಗಳಲ್ಲಿ ವೈವಿದ್ಯ ಸ್ವರೂಪವನ್ನು ಪಡೆದು ಕೊಂಡಿದ್ದು ವಕ್ಕಲುತನದ ಸಂಸ್ಕೃತಿಗೂ ರೂಪಾಂತರಗೊಳ್ಳಲು ಅವಕಾಶ ಮಾಡಿತು. ಭೂಮಿಯ ಸಂಬಂಧದ ಕಡೆ ಕುರುಬ ಸಮುದಾಯ ಹೆಚ್ಚು ಗಮನ ಕೊಟ್ಟಿದ್ದರಿಂದ ಉಳಿದ ಗೊಲ್ಲ ಸಮುದಾಯಕ್ಕೆ ಉಪಕಾರವೇ ಆಯಿತು. ಪಶುಪಾಲನಾ ಪ್ರದೇಶಗಳ ಮೇಲಿದ್ದ ಒತ್ತಡ ಇದರಿಂದ ಕಡಿಮೆ ಆಗಿ ಗೊಲ್ಲ ಸಮುದಾಯಕ್ಕೆ ಹೆಚ್ಚಿನ ಪಶುಪಾಲನಾ ಆಹಾರ ಪರಿಸರ ದೊರೆಯಿತು. ಅಂದರೆ ಗೊಲ್ಲ ಕಸುಬಿಗೆ ಬೇಕಿದ್ದ ವ್ಯಾಪ್ತಿಯು ದೊರೆತು ಮ್ಯಾಸ ಬೇಡರಿಗೂ ಇದರಿಂದ ಅನುಕೂಲವೇ ಆಯಿತು. ಇಂತಹ ಸ್ಥಿತ್ಯಂತರಗಳು ನಿಸರ್ಗದ ಮೇಲಿನ ಅವಲಂಬನೆಯ ಸ್ವರೂಪವನ್ನು ಬದಲಿಸಿದವು. ಎಲ್ಲ ಸಮುದಾಯಗಳು ಪಶುಪಾಲಕ ವೃತ್ತಿ ಯಲ್ಲೇ ಮುಂದುವರಿಯುವ ಅಗತ್ಯ ಇರದಿದ್ದುದರಿಂದ ಸಮುದಾಯಗಳ ಗ್ರಾಮೀಣ ಚಹರೆ ಗಳು ಕೂಡ ಇದರಿಂದ ಭಿನ್ನವಾದವು. ಇತಂಹ ಮಾನವ ಯತ್ನಗಳೆಲ್ಲ ಹಂಪಿ ಪರಿಸರದಲ್ಲಿ ವಿಶೇಷವಾಗಿ ಪಶುಪಾಲನಾ ಸಂಸ್ಕೃತಿಯ ಧಾರೆಗಳಲ್ಲಿ ಘಟಿಸುತ್ತಿದ್ದುದರಿಂದ ಇವನ್ನೆಲ್ಲ ಇಲ್ಲಿ ಹೇಳಬೇಕಾಗಿದೆ. ಮ್ಯಾಸ ಬೇಡರು ಹಾಗೂ ಗೊಲ್ಲರು ಮಾತ್ರ ಈ ಪ್ರದೇಶಗಳಲ್ಲಿ ಪಶುಪಾಲನಾ ಸಂಸ್ಕೃತಿಗೇ ಹೆಚ್ಚಿನ ಒತ್ತು ಕೊಟ್ಟುಕೊಳ್ಳಬೇಕಾಯಿತು. ಇದು ಪಶುಪಾಲನಾ ಸಂಸ್ಕೃತಿಯ ಭಾವನಾತ್ಮಕ ಆಯ್ಕೆಯಾಗಿ ಪರಿವರ್ತನೆ ಹೊಂದಿತೇ ಹೊರತು ಭೌತಿಕವಾಗಿ ಭೂಮಿಯ ಜೊತೆ ಹಕ್ಕು ಸ್ಥಾಪಿಸಿಕೊಳ್ಳುವ ಹಂತದಲ್ಲಿ ಹಿನ್ನಡೆಯನ್ನುಂಟುಮಾಡಿತು. ಭೂಮಿಯ ಒಡೆತನದಲ್ಲಿ ಆಗಾಲೇ ವಕ್ಕಲು ಸಂಸ್ಕೃತಿಯ ಮೂಲಕ ಮುಂದೆ ಹೋಗಿದ್ದ ಸಮುದಾಯಗಳು ಊಳಿಗಮಾನ್ಯ ವ್ಯವಸ್ಥೆಯಲ್ಲಿ ಪ್ರಧಾನ ಅಧಿಕಾರವನ್ನು ಪಡೆದುಕೊಂಡವು. ಪಶುಪಾಲನ ವೃತ್ತಿಯನ್ನೆ ನಂಬಿ ಗ್ರಾಮ ಸಂಸ್ಕೃತಿಯ ಅಂಚಿನಲ್ಲಿ ಬದುಕಲಾರಂಭಿಸಿದ ಗೊಲ್ಲರ ಹಟ್ಟಿಗಳು ಗ್ರಾಮ ವಿಕಾಸದ ರಚನೆಯಲ್ಲಿ ತುಂಬ ಹಿಂದೆ ಉಳಿಯಬೇಕಾಯಿತು. ಮ್ಯಾಸಬೇಡರ ಪರಿಸ್ಥಿತಿ ಇದಕ್ಕಿಂತ ಉತ್ತಮವಾಗೇನು ಇರಲಿಲ್ಲ.

ಸಾಂಸ್ಕೃತಿಕ ಯಜಮಾನ್ಯದ ಗಡಿಗಳು

ಒಂದು ಭೂ ಪ್ರದೇಶದ ಜನವಸತಿಯ ನೈಸರ್ಗಿಕ ಅವಲಂಬನೆಯಲ್ಲಿ ಆಹಾರ ಪರಿಸರದ ನೆಲೆಯಲ್ಲಿ ಇಂತಹ ಅನೇಕ ವೈಪರೀತ್ಯಗಳು ಅವ್ಯಕ್ತವಾಗಿ ಘಟಿಸುತ್ತಲೇ ಇರುತ್ತವೆ. ಇದಕ್ಕೆ ಕಾರಣ ಆ ನಿರ್ಧಿಷ್ಟ ಸಮುದಾಯ ತನ್ನ ಅಸ್ತಿತ್ವಕ್ಕೆ ಆಯ್ಕೆ ಮಾಡಿಕೊಳ್ಳುವ ಕ್ರಮಗಳು ಮತ್ತು ಜೀವನವಿಧಾನಗಳು. ಒಂದು ಕಾಲಕ್ಕೆ ಪಶುಪಾಲನೆಯನ್ನೆ ನಂಬಿದ್ದ ಸಮುದಾಯಗಳು ಬೇರೆ ಬೇರೆ ವೃತ್ತಿಗಳಿಗೆ ಪಲ್ಲಟಗೊಂಡ ನಂತರ ಅವು ವಿಕಾಸ ಪ್ರವಾಹದಲ್ಲಿ ಎಲ್ಲೆಲ್ಲಿಗೊ ಹೋಗಿ ರೂಪಾಂತರಗೊಂಡವು. ನಮ್ಮ ಸಮಾಜದ ಅನೇಕ ಕರಕುಶಲ ವೃತ್ತಿ ಸಮುದಾಯಗಳು ಪ್ರವಾಹದ ಅಂತಹ ಕಾಲದ ಅಲೆಗಳಲ್ಲಿ ಎಲ್ಲೆಲ್ಲಿಗೊ ಹೋಗಿ ಸಿಲುಕಿದ ಮಹಾಕಥನ ಬೇರೆಯೇ ಇದೆ. ಬದುಕುಳಿಯಲು ಬೇಕಾದ ಕೌಶಲ್ಯ ಕೂಡ ಬಹಳ ಕಾಲ ಉಪಯೋಗಕ್ಕೆ ಬರಲಾರದು ಎಂಬ ಸತ್ಯ ಕರಕುಶಲ ಸಮಾಜಗಳ ಕೌಶಲ್ಯದ ಹಿನ್ನೆಲೆಯಲ್ಲಿ ತಿಳಿದು ಬಂದಿ ರುವ ಸಂಗತಿ. ಅಂತಾದ್ದರಲ್ಲಿ ಪಶುಪಾಲನಾ ವೃತ್ತಿ ಯಾವ ಸಮುದಾಯದ ಅನಂತತೆಯನ್ನೂ ತೋರಲಾರದು. ಪಶುಪಾಲನ ಸಂಸ್ಕೃತಿಗೂ ಮಿತಿ ಇದೆ. ಅಂತೆಯೆ ಕೌಶಲ್ಯಕ್ಕಿಂತಲೂ ಮಿಗಿಲಾಗಿ ಬದಲಾದ ಕಾಲದ ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆ ಹಾಗೂ ಪ್ರತಿರೋಧ ಶಕ್ತಿ ಯನ್ನು ಪಡೆಯದ ಹೊರತು ವಿಕಾಸದಲ್ಲಿ ಅಸ್ತಿತ್ವ ಸಾಧ್ಯವಿಲ್ಲ ಎಂಬ ನಿಸರ್ಗ ಸತ್ಯವು ಪಶುಪಾಲನಾ ಹಾಗೂ ಕರಕುಶಲ ತಂತ್ರಜ್ಞಾನದಲ್ಲಿ ವೈಫಲ್ಯ ಎದುರಿಸಿದ ಸಮುದಾಯಗಳ ಚರಿತ್ರೆಯಿಂದ ಇವೆಲ್ಲವೂ ಅವ್ಯಕ್ತ ಹಾಗೆಯೆ ಸಂಕೀರ್ಣ ಸಂಗತಿಗಳು. ಪಶುಪಾಲಕ ಸಮುದಾಯಗಳು ನಿಸರ್ಗದ ಸಂಬಂಧಗಳಿಂದ ದೂರವಾಗುವ ಹಿನ್ನೆಲೆಯಲ್ಲಿ ಜಾತಿವ್ಯವಸ್ಥೆಯ ಪಾತ್ರ ಏನು ಎಂಬುದು ಇನ್ನು ವ್ಯಕ್ತವಾಗದ ಅವ್ಯಕ್ತ ಸಂಗತಿಯೇ ಆಗಿದೆ. ಪಶುಪಾಲಕ ಸಮುದಾಯಗಳು ನಿಸರ್ಗದ ಅಂತರ್‌ಸಂಬಂಧದಿಂದ ದೂರವಾಗುವ ಪ್ರಕ್ರಿಯೆಗೆ ಒಳಗಾಗಿದ್ದುದು ಭೂಮಿಯ ಸಂಪತ್ತಿನ ಖಾಸಗೀತನದಿಂದಲೂ ಹಾಗು ಜನಸಂಖ್ಯೆಯ ಆಹಾರದ ಪ್ರಮಾಣದ ಹಿನ್ನೆಲೆಯಿಂದಲೂ ಎಂಬುದನ್ನು ನೈಸರ್ಗಿಕವಾಗಿ ಭಾವಿಸಬಹುದು.

ಜೀವಜಾಲದಲ್ಲಿ ಪ್ರಾಣಿಲೋಕವು ಆಹಾರ ಹಾಗು ಭೂ ಪ್ರದೇಶದ ಆಧಾರದಲ್ಲಿ ಉಪ ಪ್ರಭೇದಗಳಾಗಿ ಕವಲೊಡೆದು ವಿಕಾಸವಾದವು. ಒಂದೇ ಸಸ್ಯ ತನ್ನ ಅಸ್ತಿತ್ವದ ಕಾರಣಕ್ಕಾಗಿ ಬಹುರೂಪ ಪಡೆದು ವಿಶಿಷ್ಟ ಹೊಂದಾಣಿಕೆ ಹಾಗು ಪ್ರಸರಣ ಗುಣದಿಂದ ಬದುಕುಳಿಯುವ ದಾರಿಗಳನ್ನು ಕಂಡುಕೊಳ್ಳುತ್ತವೆ. ಅಂತೆಯೆ ಮಾನವ ಕುಟುಂಬಗಳು, ಸಮುದಾಯಗಳು, ಸಮಾಜಗಳು ಕೂಡ. ಇಂತಲ್ಲಿಯೆ ಪಣ, ಬಣ, ಕುಲ, ಭಿನ್ನ ಬಂಧುತ್ವ, ಅನ್ಯ ಬಂಧುತ್ವ ಒಳ ಬಂಧುತ್ವ, ಹೊರ ಬಂಧುತ್ವ, ತರದ ಅನೇಕ ಮಾನವ ಸಂಬಂಧಗಳ ಚಹರೆಗಳು ಮೌಲ್ಯಗಳು ಸಾಮಾಜಿಕ ರಚನೆಗಳು ಸಾಧ್ಯವಾಗುವುದು. ಜೀವ ವೈವಿಧ್ಯದಂತೆ ಜನವೈವಿಧ್ಯ ಸಾಮಾಜಿಕವಾಗಿ ರೂಪುಗೊಳ್ಳುವಾಗ ಅಲ್ಲಿನ ಪರಿಸರ, ಭೌಗೋಳಿಕ ರಚನೆ, ಸಸ್ಯಸಂಪತ್ತು, ಖನಿಜ ಸಂಪತ್ತು, ಪ್ರಾಕೃತಿಕ ಸಂಪತ್ತು ಹಾಗು ವಾತಾವರಣಗಳೆಲ್ಲವು ತಮ್ಮದೇ ಆದ ಚಹರೆಯನ್ನು ಜೈವಿಕವಾಗಿ ಅವ್ಯಕ್ತವಾಗಿ ಕೊಟ್ಟು ಮಾನವ ಸಮಾಜದ ಅಸ್ತಿತ್ವಕ್ಕೆ ಬೇರಾಗಿ ರುತ್ತವೆ. ಹಂಪಿ ಪರಿಸರಕ್ಕೂ ಈ ಮಾತನ್ನು ಅನ್ವಯಿಸಬಹುದು. ಇಲ್ಲಿನ ಪಶುಪಾಲಕ ಸಮುದಾಯಗಳು ಜೀವ ವೈವಿದ್ಯದಂತೆಯೆ ಪರಿಸರಕ್ಕೆ ಹೊಂದಿಕೊಂಡು ಬೆಳೆದು ಬಂದವುಗಳು. ಆದರೆ ಆಹಾರದ ಕೊರತೆಯಿಂದಾಗಿ ಪಶುಪಾಲಕ ಸಮಾಜಗಳು ಸಂಕುಚಿತವಾದವು. ಹೀಗಾಗಿಯೆ ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ ಪ್ರದೇಶಗಳ ಮ್ಯಾಸಬೇಡರ, ಗೊಲ್ಲರ ಸಾಂಸ್ಕೃತಿಕ ಅಸ್ಮಿತೆಯಲ್ಲಿ ಆ ಬಗೆಯ ಕೊರತೆಗಳು ಕಾಣುವುದು. ಪಶು ಆಹಾರದ ಪ್ರದೇಶ ಗಳು ಸಾಮ್ರಾಜ್ಯದ ಕಾರಣ ಸೀಮಿತವಾಗುತ್ತ ಸಾಗಿದಂತೆ ಆ ಸಮುದಾಯಗಳೂ ಕಿರಿದಾಗುತ್ತ ಬಂದಿರಲೇಬೇಕು. ಕೆಲವೊಮ್ಮೆ ಇಂತಹ ಭೌತಿಕ ಕೊರತೆಯನ್ನು ನೀಗಿಸಿಕೊಳ್ಳಲು ಪಶುಪಾಲಕ ಸಮುದಾಯಗಳು ಸಾಂಸ್ಕೃತಿಕವಾಗಿ ವಿಸ್ತಾರ ಆಹಾರ ಬಯಲನ್ನು ಗೆದ್ದಂತೆ ಕಥನಗಳನ್ನು ಮಾಡಿಕೊಳ್ಳುವುದೂ ಇದೆ. ಮಧ್ಯಕಾಲೀನ ಸಮಾಜದಲ್ಲಿ ಮ್ಯಾಸಬೇಡರು, ಗೊಲ್ಲರು, ಕುರುಬರು ತಮ್ಮ ಪಶುಸಂಪತ್ತನ್ನು ರಕ್ಷಿಸಿಕೊಳ್ಳುವ ಸಲುವಾಗಿಯೇ ಅನೇಕ ಹೋರಾಟ ಗಳನ್ನು ಮಾಡಬೇಕಾದ ಸ್ಥಿತಿ ಇತ್ತು. ಜನಪದ ಕಾವ್ಯಗಳಲ್ಲಿ ಆ ಬಗೆಯ ಸಂಘರ್ಷದ ಚಿತ್ರಣಗಳನ್ನು ನೋಡಬಹುದು.

ಇಂತಲ್ಲಿಯೆ ವೈಯಕ್ತಿಕವಾದ ಸಂಘರ್ಷಗಳು ಸಾಮಾಜಿಕ ಆಯಾಮ ಪಡೆದು ಭಿನ್ನತೆಗೂ ಭಗ್ನತೆಗೂ ಕಾರಣವಾಗುವುದು. ಇದು ಗೊಲ್ಲರ ನಡುವೆಯೂ ಮ್ಯಾಸಬೇಡರ ನಡುವೆಯೂ ತೀವ್ರವಾಗಿ ಆದಂತಿದೆ. ಸಾಮ್ರಾಜ್ಯಗಳು ಮಧ್ಯಕಾಲೀನ ಸಮಾಜದ ವೇಳೆಗೆ ಬಲಿಷ್ಠವಾಗಿ ದ್ದಂತೆಯೆ ಧರ್ಮವು ತನ್ನ ಅವತಾರವನ್ನು ಎತ್ತಿ ಪಶುಪಾಲಕರ ಸಮುದಾಯಗಳನ್ನು ತನಗೆ ಬೇಕಾದಂತೆ ವಿರೂಪಗೊಳಿಸಿದೆ. ಆದರೆ ಈ ಪ್ರಕ್ರಿಯೆಯ ವಿರುದ್ಧ ಗೊಲ್ಲ ಸಮುದಾಯ ತೀವ್ರವಾದ ಅನ್ಯತೆಯನ್ನು ಸ್ವಯಂ ಬಹಿಷ್ಕೃತ ಆವರಣವನ್ನು ಸೃಷ್ಟಿಸಿಕೊಂಡು ತಮ್ಮ ಅಟ್ಟಿಗಳಲ್ಲೇ ದೂರ ಉಳಿಯಿತು. ಇದು ಕೂಡ ಸೂಕ್ತವಾದ ಆಯ್ಕೆ ಆಗಿರಲಿಲ್ಲ. ನಿಸರ್ಗದ ಸಂಬಂಧ ಒಂದನ್ನೇ ನಂಬಿದ್ದ ಪಶುಪಾಲಕ ಸಮಾಜಗಳು ದಿಕ್ಕೆಟ್ಟಿದ್ದರಿಂದ ಅವುಗಳ ಒಳಗೆ ಜಾತಿಯು ಸುಲಭವಾಗಿ ಪ್ರವೇಶ ಪಡೆಯಿತು. ಜಾತಿಯು ಒಂದು ಚಹರೆಯಾಗಿ ಮೊದಲು ಅವರವರಿಗೆ ಕಂಡಿತ್ತು. ಚಹರೆಯ ವೇಷದಲ್ಲಿ ಬಂದ ಜಾತಿ ವ್ಯವಸ್ಥೆಯು ಮುಂದೆ ಭೂತವಾಗಿ ಸಮುದಾಯಗಳ ಮೈದುಂಬಿ ಸಾಮಾಜಿಕವಾಗಿ ತನ್ನ ಕರಿನೆರಳನ್ನು ಚಾಚಿತು. ಅಪ್ಪಟ ಬುಡಕಟ್ಟು ಸ್ವಭಾವಗಳನ್ನೆ ಮೈದುಂಬಿದ್ದ ಪಶುಪಾಲಕ ಸಮುದಾಯಗಳು ಬದಲಾಗುತ್ತಿದ್ದ ಪ್ರಾಚೀನ ಗ್ರಾಮ ನಾಗರೀಕತೆಯಲ್ಲಿ ಸದಸ್ಯತ್ವ ಪಡೆದು ಜಾತಿಯ ಕ್ರೂರ ಬಲೆಗೆ ಸಿಲುಕಿದವು. ಜಾತಿಯ ಸ್ವರೂಪ ಸಾಂಸ್ಥಿಕವಾಗಿ ಆಗುತ್ತಿದ್ದಂತೆ ಪಶುಪಾಲಕ ವೃತ್ತಿಯಲ್ಲೂ ಬದಾಲಾವಣೆಗಳು ಅವ್ಯಕ್ತವಾಗಿ ಘಟಿಸಿವೆ.

ಜಾತಿಯ ಹೊಸ ಚಹರೆ ನಿರ್ದಿಷ್ಟವಾಗಿ ಯಾವ ಕಾಲಘಟ್ಟದಲ್ಲಿ ಬುಡಕಟ್ಟುಗಳ ಮೇಲಾಯಿತು ಎಂಬುದು ಖಚಿತವಿಲ್ಲ. ದಕ್ಷಿಣ ಭಾರತಕ್ಕೆ ಆರ್ಯರು ಪ್ರವೇಶಿಸಿದ್ದುದು ಬಹಳ ತಡವಾಗಿ. ಬೌದ್ಧಧರ್ಮವೆ ಆ ಮೊದಲು ದಕ್ಷಿಣವನ್ನು ಆವರಿಸಿತ್ತು. ಯಾವ ಧರ್ಮಗಳ ನೆಲೆಗೂ ಸಿಲುಕದೆ ಪಶುಪಾಲಕ ಧರ್ಮದಲ್ಲಿ ತೊಡಗಿದ್ದ ಸಮುದಾಯಗಳು ನಿಸರ್ಗತತ್ವಕ್ಕೆ ಬದ್ಧವಾಗಿದ್ದವು. ಜಾತಿಯ ತತ್ವ ಅಂತರ ಕಾಯ್ದುಕೊಳ್ಳುವುದನ್ನೇ ಮೊದಲು ಬೋಧಿಸುವುದು. ಅಂತರ ಒಂದು ಅರ್ಥದಲ್ಲಿ ನಿಸರ್ಗದಿಂದಲೂ ದೂರ ಮಾಡುತ್ತದೆ. ಸಮಾಜದ ಬಹು ಸಂಬಂಧಗಳಿಗೂ ಗಡಿ ನಿರ್ಮಿಸುತ್ತದೆ. ಮಾನವ ನಿಷ್ಟ ಸಮುದಾಯಗಳು ಮೊದಲ ಬಾರಿಗೆ ಜಾತಿ ವ್ಯವಸ್ಥೆಯಿಂದ ತಮಗೆ ತಾವೆ ಪೈಪೋಟಿ ರೂಪಿಸಿಕೊಂಡು ಒಂದರ ಅನನ್ಯತೆಯನ್ನು ಇನ್ನೊಂದು ನಿರಾಕರಿಸುತ್ತಾ ಮಾನಸಿಕ ಕೋಟೆಗಳನ್ನು ನಿರ್ಮಿಸಿಕೊಂಡವು. ದಕ್ಷಿಣ ಭಾರತಕ್ಕೆ ಬಂದ ಆರ್ಯರ ಜಾತಿತತ್ವವು ತಡವಾಗಿ ಆಗಿದ್ದರಿಂದ ಇಲ್ಲಿನ ಸಮುದಾಯ ಗಳು ಉತ್ಸಾಹದಲ್ಲಿ ಅದರ ಇಕ್ಕಟ್ಟಿಗೆ ಸಿಲುಕಿದವು. ಆ ಮೊದಲು ಪಶುಪಾಲಕ ಸಮುದಾಯ ಗಳ ಒಳಗೇ ಪಶು ಸಂಪತ್ತಿನ ಪೈಪೋಟಿ ಇತ್ತು. ಭೂ ಪ್ರದೇಶದ ಹಂಚಿಕೆಯಲ್ಲಿ ಸಂಘರ್ಷವಿತ್ತು. ಪಶುಪಾಲಕ ಸಂಸ್ಕೃತಿಯಲ್ಲೂ ಅಂತರಗಳು ನಿರ್ಮಾಣವಾಗಿದ್ದವು. ಅಲ್ಲದೆ ಆಯಾ ಸಮುದಾಯಗಳ ಜನಸಂಖ್ಯೆಯೂ ಹೆಚ್ಚಿತ್ತು. ಕೃಷಿ ಚಟುವಟಿಕೆಗಳು ಆರಂಭಗೊಂಡು ಪಶುಪಾಲಕ ವೃತ್ತಿ ಕಷ್ಟವೆನಿಸುತ್ತಿತ್ತು.

ಭೂಮಿಯ ಮೇಲಿನ ಖಾಸಗಿ ಒಡೆತನವನ್ನು ಕೆಲವರಾಗಲೆ ಸಾಧಿಸಿಕೊಂಡಿದ್ದರು. ಇಷ್ಟೇ ಅಲ್ಲದೆ ಬೇರೆಲ್ಲೆಲ್ಲಿಂದಲೊ ವಲಸೆ ಬಂದ ಅನ್ಯ ಪ್ರದೇಶಗಳ ಸಮುದಾಯಗಳ ನಡುವೆಯೂ ಸ್ಥಾನಮಾನ ಸಂಘರ್ಷ ಏರ್ಪಟ್ಟಿತ್ತು. ಈ ಸ್ಥಿತಿಯಲ್ಲಿ ಜಾತಿ ವ್ಯವಸ್ಥೆನ್ನು ಭಿತ್ತಲು ವೈದಿಕರಿಗೆ ಯಾವ ಕಷ್ಟವೂ ಉಂಟಾಗಲಿಲ್ಲ. ಸ್ವತಃ ಸಮುದಾಯಗಳೇ, ಕರಕುಶಲ ವೃತ್ತಿಗಳೇ, ಕೃಷಿ ಸಮಾಜಗಳೇ ತಮಗೆ ಜಾತಿಯ ಚಹರೆ ಹೊಸ ಬಗೆಯ ಕಾಲಾವಾಕಾಶವನ್ನು ರೂಪಿಸುತ್ತದೆ ಎಂದು ಭಾವಿಸಿ ಅದನ್ನು ಸ್ವಾಗತಿಸುವ ಇಕ್ಕಟ್ಟಿಗೆ ಒಳಪಟ್ಟವು. ಈ ಪರಿಯ ಸಾಮಾಜಿಕ ಸ್ಥಿತಿಗೆ ಖಚಿತ ಆಧಾರಗಳು ವ್ಯಕ್ತವಾಗದಿದ್ದರೂ ಇಂದಿನ ಆ ಸಮುದಾಯಗಳ ಜೀವನ ಶೈಲಿಯಲ್ಲಿ, ಆಲೋಚನೆಯ ಸುಪ್ತ ಪ್ರಜ್ಞೆಯಲ್ಲಿ ಇವನ್ನೆಲ್ಲ ಗ್ರಹಿಸಬಹುದು.

ವಿಜಯನಗರ ಸಾಮ್ರಾಜ್ಯದ ಪೂರ್ವದಲ್ಲೇ ಘಟಿಸಿಹೋಗಿದ್ದ ಈ ಬಗೆಯ ಪಲ್ಲಟಗಳು ಹಿಂದುತ್ವದ ಸಾಮ್ರಾಜ್ಯವನ್ನು ವಿದ್ಯಾರಣ್ಯರ ಮೂಲಕ ಉದ್ಘಾಟಿಸಿ ಕೊನೆಗೆ ಅದೇ ಹಿಂದುತ್ವದ ಜ್ವಾಲೆಯಲ್ಲಿ ಬಹಮನಿ ಸುಲ್ತಾನರ ನಿರ್ಣಾಯಕ ಯುದ್ಧದಿಂದ ನಾಶವಾದದ್ದು ವಿಚಿತ್ರವಾಗಿ ಪಶುಪಾಲಕ ಸಮುದಾಯಗಳ ಜೊತೆಗಿನ ನೆನ್ನೆಯ ಚರಿತ್ರೆಯೊಳಗೆ ಬೆರೆತುಹೋಗಿದೆ. ಆ ಕಾಲದಲ್ಲಿ ಅನೇಕ ಆದಿವಾಸಿ ಪಶುಪಾಲಕ ಸಮುದಾಯಗಳೆಲ್ಲ ಜಾತಿಯ ಕೂಪಕ್ಕೆ ಸಿಲುಕಿ ಅಲ್ಲಲ್ಲೇ ಉಳಿದುಹೋಗಿವೆ. ಜಾತಿ ಎಂಬ ಸತ್ಯ ನಮ್ಮ ನಿತ್ಯ ಜೀವನದ ವಾಸ್ತವ ಆಗಿರುವಾಗ ಪಶುಪಾಲಕ ಸಂಸ್ಕೃತಿಗಳಲ್ಲಿ ಕೂಡ ಶ್ರೇಣಿಯ ಅಂತರ ನುಸುಳಿದೆ. ನಿಸರ್ಗತತ್ವದ ಆಧಾರದಲ್ಲಿ ರೂಪುಗೊಂಡಿದ್ದ ಪಶುಪಾಲಕ ಸಮಾಜವು ಹಿಂದೂ ಧರ್ಮದ ಜಾತಿ ನೀತಿಗೆ ಒಳಗಾದದ್ದು ಮಧ್ಯಕಾಲೀನ ಸಾಮ್ರಾಜ್ಯಗಳ ಬಿಕ್ಕಟ್ಟುಗಳಿಂದಲೇ. ಸಾಮ್ರಾಜ್ಯಗಳು ಹಿಂದುತತ್ವದ ಮೇಲೆ ಹುಟ್ಟಿ ಬೆಳೆದಿದ್ದವು. ಆದರೆ ಆ ಸಾಮ್ರಾಜ್ಯಗಳ ಸೇವೆಗೆ ಬೇಕಿದ್ದ ಸಮುದಾಯಗಳು ಪೂರ್ಣಪ್ರಮಾಣದಲ್ಲಿ ಹಿಂದೂಧರ್ಮಕ್ಕೆ ಒಳಪಟ್ಟಿರಲಿಲ್ಲ. ಹಿಂದೂ ಧರ್ಮದ ಒಳಗಿದ್ದುಕೊಂಡೇ ಪಶುಪಾಲಕ ಸಮುದಾಯಗಳು ನಿಸರ್ಗ ತತ್ವವನ್ನೆ ಬಲವಾಗಿ ಆಶ್ರಯಿಸಿದ್ದವು. ಆದರೆ ಪಶುಪಾಲಕ ಸಮಾಜಗಳಲ್ಲೆ ಮೇಲೆ ಬಂದು ವಕ್ಕಲು ಸಮುದಾಯವಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಕುರುಬ ಸಮುದಾಯವು ತನ್ನ ಹಿಂದೆ ಇದ್ದ ಗೊಲ್ಲ ಮತ್ತು ಮ್ಯಾಸ ಬೇಡ ಸಮುದಾಯಗಳಿಗೆ ಅಂತಹ ಅವಕಾಶವನ್ನು ಮಾನ್ಯ ಮಾಡಲಿಲ್ಲ ಎಂದು ಊಹಿಸಬಹುದು. ಒಂದು ಕಾಲಕ್ಕೆ ಬೇಡ ಸಮುದಾಯದ ಜೊತೆ ಪಶು ಆಹಾರದ ಜೊತೆ ಭೂ ಪ್ರದೇಶ ಹಾಗೂ ಪಶು ಸಂಪತ್ತಿನ ಜೊತೆ ಪೈಪೋಟಿ ಎದುರಿಸಿದ್ದ ಕುರುಬ ಸಮುದಾಯವು ಮತ್ತೆ ವಕ್ಕಲುತನದಲ್ಲಿ ಅದೇ ಬೇಡ ಗೊಲ್ಲ ಸಮುದಾಯಗಳಿಂದ ಪೈಪೋಟಿಯನ್ನು ಎದುರಿಸಲು ಸಿದ್ಧವಿರಲಿಲ್ಲ ಹಾಗೂ ಅಂತಹ ಬಿಕ್ಕಟ್ಟನ್ನು ತಾನೇ ಸ್ವಾಗತಿಸಲು ಸಾಧ್ಯವಿರಲಿಲ್ಲ. ಈ ಬಗೆಯ ಅತಿ ಸೂಕ್ಷ್ಮ ಸಂಬಂಧಗಳ ಘರ್ಷಣೆಗಳು ಈ ಜನ ಸಮುದಾಯಗಳ ಸಾಂಸ್ಕೃತಿಕ ವೀರರ ಕಥನಗಳಲ್ಲಿ ಅಲ್ಲಲ್ಲಿ ಪರೋಕ್ಷವಾಗಿ ಕಂಡು ಮಸುಕಾಗುವುದನ್ನು ಗಮನಿಸಬಹುದು.