ವಿಶ್ವಪರಂಪರೆ ಪಟ್ಟಿಯಲ್ಲಿ ಹಂಪಿಯನ್ನು ಅಖಂಡವಾಗಿ ಭಾವಿಸುವ ರೀತಿ ಒಂದು ಬಗೆಯಾದರೆ ಅದೇ ಹಂಪಿಯನ್ನು ಸ್ಥಳೀಯವಾಗಿ ನೋಡುವುದು ಭಿನ್ನವಾಗಿದೆ. ಚರಿತ್ರೆಯಲ್ಲಿ ಮಾನವರ ಮಹತ್ವದ ಹೆಜ್ಜೆ ಗುರುತುಗಳನ್ನು ಕಂಡುಕೊಳ್ಳುವಾಗ ವಿಶ್ವದ ಎಲ್ಲ ಮಾನವ ಯತ್ನಗಳೂ ಯಾವ ಅಂತರವೂ ಇಲ್ಲದೆ ಒಂದಾಗಿ ಬಿಡುತ್ತವೆ. ಡಾರ್ವಿನ್ ಮಾನವರ ಉಗಮ ವಿಕಾಸವನ್ನು ಕುರಿತು ಆಲೋಚಿಸಿದಾಗ ಹೊಮೋಸೆಫಿಯನ್ ಎಂಬ ಒಂದು ಆಧುನಿಕ ಮಾನವ ವರ್ಗವನ್ನು ಪ್ರತಿಪಾದಿಸಿದಾಗ ಆತನಿಗೆ ಇದ್ದದ್ದು ಅಖಂಡಪ್ರಜ್ಞೆ. ಈ ಅಖಂಡತೆಯು ಈ ಭೂಮಿಯ ಮೇಲಿನ ನಿಸರ್ಗದ ವಿಕಾಸದಿಂದ ಬಂದುದಾಗಿತ್ತು. ಆದ್ದರಿಂದಲೇ ಆತ ಏಕತೆ ಕಾಣುವ ಬದಲು ವೈವಿಧ್ಯತೆ ಕಂಡು ಆ ವೈವಿಧ್ಯ ಜೀವಜಾಲದಲ್ಲಿ ವಿಶ್ವಾತ್ಮಕತೆಯನ್ನೆ ಧ್ಯಾನಿಸಬೇಕಾಯಿತು. ಆ ಅರ್ಥದಲ್ಲಿ ವಿಶ್ವದ ಉದ್ದಕ್ಕೂ ಮಾನವ ಬೆಳವಣಿಗೆಯ ಕುರುಹುಗಳು ಇವೆ. ಈ ಕುರುಹನ್ನು ನಾಳಿನ ಜನಾಂಗದ ಭವಿಷ್ಯದ ಹಿನ್ನೆಲೆಯಲ್ಲಿ ಕಾಯಬೇಕಾದುದು ಮಹತ್ವದ ಕರ್ತವ್ಯ. ಇದಕ್ಕೆ ಬೇಕಾದುದು ಬಹಳ ಮುಖ್ಯವಾಗಿ ಸ್ಥಳೀಯಪ್ರಜ್ಞೆ. ವಿಶ್ವಾತ್ಮಕ ನೆಲೆಯನ್ನು ಕಾಯುವುದೇ ಸ್ಥಳೀಯಪ್ರಜ್ಞೆ. ಸ್ಥಳೀಯವಾದದ್ದು ಯಾವತ್ತೂ ತನ್ನ ತಾತ್ಕಾಲಿಕ ಸಮಸ್ಯೆಗಳಿಗೆ ಪರಿಹಾರಕಂಡುಕೊಂಡು ವಿಶ್ವಾತ್ಮಕವಾದ ಸಂಗತಿ ಗಳನ್ನು ಮರೆಯುತ್ತಿರುತ್ತದೆ. ಕೆಲವು ವೇಳೆ ಇದು ನಿಜವಿದ್ದರೂ ಅಂತಿಮವಾಗಿ ಸ್ಥಳೀಯ ಜನಪದವೇ ತನ್ನ ಒಳಗೆ ಹುಟ್ಟಿದ ವಿಶ್ವಾತ್ಮಕ ಸಂಗತಿಯನ್ನು ಸಮರ್ಥವಾಗಿ ಕಾಯಲು ಸಾಧ್ಯವಾಗುವುದು.

ವಿಶ್ವಾತ್ಮಕ ಹಾಗೂ ಸ್ಥಳೀಯಪ್ರಜ್ಞೆ ಎರಡೂ ಮಾನವ ಸಮೂಹದ ಅಭಿವ್ಯಕ್ತಿಗಳೇ. ಇವೆರಡನ್ನೂ ಸಮರ್ಥವಾಗಿ ಕಾಯಬೇಕಾದುದು ವ್ಯವಸ್ಥೆಯ ಕರ್ತವ್ಯ. ಹಂಪಿ ಪರಿಸರದ ಗ್ರಾಮಗಳ ಸ್ಥಳೀಯ ಪ್ರಜ್ಞೆ ಮತ್ತು ವಾಸ್ತವಸ್ಥಿತಿ ಇದರಿಂದಲೇ ಮುಖ್ಯವಾಗುವುದು. ಹಂಪಿ ಪರಿಸರದ ಗ್ರಾಮಗಳು ವಿಭಿನ್ನ ಕಾಲಘಟ್ಟದಲ್ಲಿ ಅನೇಕ ಬದಲಾವಣೆಗೆ ಒಳಗಾಗುತ್ತಲೆ ಬಂದಿವೆ. ಅವ್ಯಕ್ತ ಸಂಸ್ಕೃತಿಯು ಈ ಹಳ್ಳಿಗಳಲ್ಲಿ ಹೇಗೆ ನೆಲೆಗೊಂಡಿದೆ ಎಂದು ತಿಳಿಯುವ ಮೊದಲು ಹಂಪಿ ಪರಿಸರ ಎಂಬ ಪರಿಕಲ್ಪನೆಯನ್ನು ಸ್ಪಷ್ಟಪಡಿಸಿಕೊಳ್ಳುವ. ವಿಜ್ಞಾನದ ಪರಿಭಾಷೆಯಲ್ಲಿ ಹಂಪಿ ಪರಿಸರಕ್ಕೆ ಹಲವು ಜ್ಞಾನಶಾಖೆಗಳ ವಿವರಣೆ ನೀಡಬಹುದು. ಭೂಗೋಳ ಶಾಸ್ತ್ರದ ಹಿನ್ನೆಲೆಯಲ್ಲಿ ಕಾಣುವ ಅರ್ಥವೇ ಬೇರೆ. ನಿಸರ್ಗಕೇಂದ್ರಿತ ವಿಜ್ಞಾನಗಳ ವ್ಯಾಖ್ಯಾನವೇ ನಮ್ಮ ತಿಳುವಳಿಕೆಗಿಂತ ಭಿನ್ನ. ಆದರೂ ಸ್ಥೂಲವಾಗಿ ಹಂಪಿ ಪರಿಸರವನ್ನು ಕೆಳೆಗಿನಂತೆ ಗುರುತಿಸಿಕೊಳ್ಳಬಹುದು.

ಹಂಪಿ ಪರಿಸರದ ಪರಿಕಲ್ಪನೆ

ಹಂಪಿ ಪರಿಸರ ಸ್ವಯಂ ಸುರಕ್ಷಿತ ವ್ಯವಸ್ಥೆಯನ್ನು ರೂಪಿಸಿಕೊಂಡಿರುವ ಬೆಟ್ಟಸಾಲುಗಳ ಪ್ರದೇಶ. ವೈವಿಧ್ಯ ಸಸ್ಯಸಂಕುಲದ ನೆಲೆ. ಆದಿಮ ಸಮಾಜದ ಅಸ್ತಿತ್ವಕ್ಕೆ ಬೇಕಾಗಿದ್ದ ನೈಸರ್ಗಿಕ ಸಂಪನ್ಮೂಲಗಳನ್ನು ಒಳಗೊಂಡಿದ್ದ ವಿಶಿಷ್ಠ ಸ್ಥಳ. ಜೀವಜಾಲದ ಅಂತರ್‌ಸಂಬಂಧಗಳಿಗೆ ತಕ್ಕ ಹೊಂದಾಣಿಕೆಯನ್ನು ರೂಪಿಸಿಕೊಂಡಿರುವ ಭೂಮಿಕೆ. ಆದಿಕಾಲದ ವಿಕಾಸದಲ್ಲಿ ಮಾನವ ವಸತಿನೆಲೆಗಳಿಗೆ ಯೋಗ್ಯವಾಗಿದ್ದ ಸುರಕ್ಷಿತ ತಾಣ. ಜೀವಜಾಲಕ್ಕೆ ಒತ್ತಾಸೆಯಾಗಿ ಹರಿವ ನದಿಯ ಆಸುಪಾಸು. ನಾಗರೀಕ ಸಮಾಜಗಳು ಬೆಳೆಯಲು ಅವಶ್ಯವಾದ ಮತ್ತು ಸಾಮ್ರಾಜ್ಯಗಳು ತಲೆ ಎತ್ತಲು ಅನುವು ಮಾಡಿಕೊಡುವಂತಹ ನೆಲೆ. ಇಡಿಯಾಗಿ ಇವೆಲ್ಲವನ್ನು ಪ್ರತಿನಿಧಿ ಸುವ ಪರಿಸರವನ್ನು ಹಂಪಿ ಪರಿಸರ ಎಂದು ಭಾವಿಸಬಹುದು. ಇಂತಹ ಅಂಶಗಳ ಮೇಲೆಯೇ ಹಂಪಿಯ ಚರಿತ್ರೆ ಕೂಡ ನಿರ್ಮಾಣವಾಗಿರುವುದು. ಇಲ್ಲಿ ಉಲ್ಲೇಖಿಸಿದ ಅಂಶಗಳು ಸಾಮಾನ್ಯವಾಗಿರಬಹುದು. ಆದರೆ ಈ ಗುಣಗಳಿಂದಲೇ ಒಂದು ಪ್ರದೇಶದ ಅನನ್ಯತೆ ತೀರ್ಮಾನವಾಗುವುದು.

ಹಂಪಿ ಪರಿಸರದ ಅನನ್ಯತೆಗಳೇ ಹಂಪಿಯ ಗ್ರಾಮಗಳ ಅನನ್ಯತೆಯೂ ಆಗುತ್ತದೆ. ಭೂಮಿಯ ಆದಿಮ ರಚನೆಯ ಕಾಲದಲ್ಲಿ ಹಂಪಿ ಪರಿಸರ ರೂಪುಗೊಂಡಿದೆ. ಲಕ್ಷಾಂತರ ವರ್ಷಗಳ ಭೂಮಿಯ ವಿಕಾಸದಲ್ಲಿ ಹಂಪಿಯ ಭೌತಿಕ ಸ್ವರೂಪ ನಿರ್ಧಾರವಾಗಿದೆ. ನಿಸರ್ಗದ ಸ್ಪರೂಪವೇ ಅಲ್ಲಿನ ಜೀವಜಾಲದ ಬದುಕಿನ ಸ್ವರೂಪವನ್ನು ತೀರ್ಮಾನಿಸಿರುತ್ತದೆ. ನಾಗರೀಕತೆಗಳು ಆ ನಿಯಮಕ್ಕೆ ಬದ್ಧವಾಗಿಯೇ  ಚಲಿಸಬೇಕಾದುದು. ಭೂಗರ್ಭದ ಲಾವಾರಸ ಉಕ್ಕಿ ಹರಿದು ನಿರ್ಮಾಣವಾದ ಈ ಹಂಪಿಯ ಬೆಟ್ಟಸಾಲುಗಳು ಈ ಪ್ರದೇಶಕ್ಕೆ ಅನನ್ಯತೆಯನ್ನು ತಂದುಕೊಟ್ಟಿವೆ. ಜನಪದರು ಈ ಬಗೆಯ ಹಂಪಿಯ ಪರಿಸರಕ್ಕೆ ನೀಡುವ ಅರ್ಥ ಬೇರೆ ಇರಬಹುದಾದರೂ ಇಂತಹ ಭವ್ಯ ಪರಿಸರವನ್ನು ಮನುಷ್ಯಾತೀತವಾಗಿ ಕಲ್ಪಿಸುವ ಬಗೆಯು ನಿಸರ್ಗದ ಅಗಾಧತೆಯನ್ನು ಒಪ್ಪಿಕೊಂಡೇ ಬರುವಂತದಾಗಿದೆ. ಭೌಗೋಳಿಕವಾಗಿ ಹಂಪಿ ಭೂ ಭಾಗವು ಆಫ್ರಿಕಾ ಖಂಡದ ತುದಿಗೆ ಒಂದು ಕಾಲಕ್ಕೆ ಅಂಟಿಕೊಂಡಿದ್ದ ನೆಲೆ ಯಾಗಿತ್ತು ಎಂದು ದಾಖಲೆಗಳು ತಿಳಿಸುತ್ತವೆ. ಖಂಡಾಂತರ ಚಲನೆಯ ವೇಳೆ ಹಂಪಿಗೂ ಆಫ್ರಿಕಾದ ಕಲಹರಿ ಮರುಭೂಮಿಗೂ ಸಂಬಂಧ ತುಂಡಾಯಿತು. ಹೀಗಾಗಿಯೇ ಆಫ್ರಿಕಾದ ಮರುಭೂಮಿಯ ಕನಿಷ್ಠ ಲಕ್ಷಣಗಳು ಹಂಪಿಯ ಪರಿಸರಕ್ಕೂ ಸಾಧ್ಯವಾಗಿದೆ. ಸಸ್ಯ ಸಂಕುಲದ ಹಿನ್ನೆಲೆಯಲ್ಲಿ ನೋಡಿದರೆ ಈ ಅಂಶಕ್ಕೆ ಹಂಪಿ ಪರಿಸರದಲ್ಲಿ ಹೆಚ್ಚಿನ ವಿವರಗಳು ಸಿಗುತ್ತವೆ. ಹಂಪಿ ಪರಿಸರವು ಜಗತ್ತಿನ ಜೀವದ ತಾಣಗಳ ಹಾಗೆ ಅತ್ಯುನ್ನತ ಜೈವಿಕ ವೈವಿಧ್ಯದ ಪ್ರದೇಶ ಅಲ್ಲ ಎನಿಸಿದರೂ ಜೀವ ಜಾಲದ ಉಗಮ ವಿಕಾಸದ ಸಾಧ್ಯತೆಯಲ್ಲಿ ಇದು ತನ್ನದೇ ಚಹರೆಯನ್ನು ಬಿಟ್ಟಿರುವುದು ವಿಶೇಷವಾಗಿದೆ.

ಹಂಪಿ ಪರಿಸರದ ಆದಿಮ ಕಾಲದ ಮಾನವ ನಿರ್ಮಿತ ಪರಿಸರ ಕೂಡ ಈ ಚರ್ಚೆಗಳಲ್ಲಿ ತುಂಬ ಮಹತ್ವದ್ದು. ಹಂಪಿ ಪರಿಸರದ ಇವತ್ತಿನ ಗ್ರಾಮಗಳ ತಳಪಾಯದಲ್ಲಿ ಅದೆಷ್ಟು ಕಾಲದ ಮಾನವ ವಸತಿಗಳು ಅಡಗಿರುತ್ತವೊ. ಮೊದಲೇ ಹೇಳಿದಂತೆ ಹಂಪಿ ಪರಿಸರವು ಇಂದಿಗಿಂತಲೂ ಅಂದು ಆದಿಮ ಸಮಾಜಗಳು ಅಸ್ತಿತ್ವ ಸ್ಥಾಪಿಸಿಕೊಳ್ಳಲು ಅತ್ಯುತ್ತಮ ನೈಸರ್ಗಿಕ ಸಂರಕ್ಷಣೆಯ ನೆಲೆಯಾಗಿತ್ತು. ಲಕ್ಷಾಂತರ ವರ್ಷಗಳ ಹಿಂದಿನ ಹಂಪಿಯ ಪರಿಸರವು ದಟ್ಟವಾದ ಕಾಡಿನಿಂದಲೇ ಆವೃತ್ತವಾಗಿತ್ತು ಎಂದು ಖಚಿತವಾಗಿಯೆ ಹೇಳಬಹುದು. ಪರಿಸರದ ಬದಲಾವಣೆಯಲ್ಲಿ ಈಗ ನಾವು ಕಾಣುವ ಹಂಪಿಯ ಪರಿಸರ ಬೋಳಾಗಿರಬಹುದಷ್ಟೇ. ಆದರೆ ಆದಿಮ ಹಂತದ ಪರಿಸರವು ಅನೇಕ ಬಗೆಯ ಮಾನವ ವಸತಿ ನೆಲೆಗಳಿಗೆ ತಾವು ನೀಡಿತ್ತು ಎಂಬುದಕ್ಕೆ ಸಾಕಷ್ಟು ಮಾಹಿತಿ ಇದೆ. ಪ್ರಾಕ್ತನ ಶಾಸ್ತ್ರಜ್ಞರು ಈ ನಿಟ್ಟಿನಲ್ಲಿ ಸಂಶೋಧನೆ ಮುಂದುವರಿಸುತ್ತಿದ್ದಾರೆ. ಈ ಹಿನ್ನೆಲೆಯಿಂದ ಗಮನಿಸಿದರೆ ಕನ್ನಡನಾಡಿನ ಜನಪದಗಳ ಉಗಮ ವಿಕಾಸದ ಚರಿತ್ರೆಯಲ್ಲಿ ಹಂಪಿ ಪರಿಸರದ ಪಾತ್ರ ಅಪಾರ. ವಿಶ್ವ ಪರಂಪೆರೆಯ ಹಂಪಿ ಪರಿಸರದಲ್ಲಿ ಮುಖ್ಯವಾಗಿ ಮೂರು ಬಗೆಯ ವಸತಿನೆಲೆಗಳನ್ನು ಗುರುತಿಸಬಹುದು.

ಮೊದಲಿನದು ಆದಿಮ ಜನವಸತಿಯ ನೆಲೆಗಳು. ಎರಡನೆಯದು ವಿಜಯನಗರ ಸಾಮ್ರಾಜ್ಯ ಪೂರ್ವ ಕಾಲದಿಂದ ಆರಂಭಿಸಿ, ವಿಜಯನಗರ ಪತನದವರೆಗಿನ ಗ್ರಾಮೀಣ ವಸತಿ ನೆಲೆಗಳು ಮೂರನೆಯದು ವಿಜಯನಗರೋತ್ತರ ಕಾಲದಿಂದ ಈವರೆಗೆ ರೂಪುಗೊಂಡ ಹಳ್ಳಿಗಳು. ಈ ಮೂರು ಸ್ವರೂಪದ ಹಳ್ಳಿಗಳು ಹಂಪಿ ಪರಿಸರದಲ್ಲಿ ನಿರಂತರವಾಗಿ ಸಾಗಿ ಬಂದಿವೆ. ಆಶ್ಚರ್ಯ ಎಂದರೆ ಮೇಲೆ ಹೇಳಿದ ಮೂರು ಸ್ತರದ ಜೀವನಕ್ರಮಗಳು ಇಂದಿಗೂ ಜೀವಂತವಾಗಿವೆ. ಆದಿಮ ಜನವಸತಿಯ ಕುರುಹಾಗಿ ಈಗಲೂ ಅಲೆಮಾರಿ ಸಮುದಾಯಗಳು ತಮ್ಮ ಪಶುಪಾಲನಾ ಸಂಸ್ಕೃತಿಯ ಭಾಗವಾಗಿ ಹಂಪಿಗೆ ಬಂದು ಮುಂದೆ ಸಾಗುವ ರೂಢಿ ಉಳಿದುಕೊಂಡಿವೆ. ದನಗಾಹಿ ಮತ್ತು ಅಲೆಮಾರಿ ಬೇಟೆ ಸಮುದಾಯಗಳು ಶಿಲಾಯುಗ ದಿಂದಲೂ ಆರಂಭಿಸಿ ಈ ನೆಲೆಯಲ್ಲಿ ರೂಪಾಂತರಗೊಂಡಿವೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಲ್ಲೂ ಪಶುಪಾಲನ ಸಮಾಜದವರೇ ಪ್ರಧಾನ ಪಾತ್ರವಹಿಸಿದ್ದಿದೆ. ಇನ್ನು ಬೇಡ ಸಮುದಾಯಗಳಂತು ಹಂಪಿ ಪರಿಸರದ ಭಾಗವಾಗಿಯೆ ಚರಿತ್ರೆಯ ಉದ್ದಕ್ಕೂ ಬೆಳೆದಿವೆ. ಪಶುಪಾಲಕರಾಗಿದ್ದ ಬೇಡರು, ಕುರುಬರು, ಗೊಲ್ಲರು ಮುಂತಾದ  ಪಂಗಡಗಳು ವಿಜಯ ನಗರ ಸಾಮ್ರಾಜ್ಯಕ್ಕೂ ಪೂರ್ವದಲ್ಲೇ ತಮ್ಮ ಅಸ್ತಿತ್ವವನ್ನು ಹಂಪಿ ಪ್ರದೇಶದ ಪರಿಸರದಲ್ಲಿ ಸ್ಥಾಪಿಸಿಕೊಂಡಿದ್ದರು. ಇವರ ಮೂಲಕವೇ ಅಂತಹ ವಿಜಯನಗರ ಸಾಮ್ರಾಜ್ಯವು ಪ್ರಬಲ ವಾಗಿದ್ದುದು. ಈ ಹಿನ್ನೆಲೆಯಿಂದ ನೋಡಿದರೆ ಪಶುಪಾಲಕ ಸಮುದಾಯಗಳಿಗೆ ಬಲಿಷ್ಠ ನೈಸರ್ಗಿಕ ನೆಲೆಯಾಗಿದ್ದ ಹಂಪಿಯ ಪರಿಸರವು ಅದೇ ಸಮುದಾಯಗಳ ಮೂಲಕ ಮುಂದೆ ಬಲಿಷ್ಠ ಸಾಮ್ರಾಜ್ಯದ ಅಸ್ತಿತ್ವಕ್ಕೂ ಕಾರಣವಾದದ್ದು ನಿಸರ್ಗದ ಅವ್ಯಕ್ತ ಶಕ್ತಿಯಿಂದಲೇ. ಪಶುಪಾಲಕ ಸಮುದಾಯಗಳೇ ಕರ್ನಾಟಕದ ಬಹುಸಂಖ್ಯಾತ ಸಮುದಾಯಗಳಾಗಿ ಕವಲೊಡೆದಿವೆ. ಒಂದು ಕಾಲಕ್ಕೆ ಹುಲ್ಲುಗಾವಲಿನ ಮೈದಾನ ಪ್ರದೇಶಗಳನ್ನೂ ಬೆಟ್ಟಗುಡ್ಡ ಕಾಡುಗಳನ್ನೂ ಆಕ್ರಮಿಸಿದ್ದ ಈ ಸಮುದಾಯಗಳು ಮುಂದೆ ವಕ್ಕಲು ಸಮುದಾಯವಾಗಿ ಕವಲೊಡೆದದ್ದು ಸಾಮಾಜಿಕ ವ್ಯವಸ್ಥೆಯ ಬೇರೆ ಬೇರೆ ಆರ್ಥಿಕ ಅವಸ್ಥೆಗಳಿಗೆ ಕಾರಣ ವಾಯಿತು. ಯಾವುದೇ ಒಂದು ಸಮುದಾಯವು ತನ್ನ ಆದಿವಾಸಿ ಸ್ಥಿತಿಯಿಂದ ವಕ್ಕಲು ಸಮುದಾಯವಾಗಿ ಮಾರ್ಪಡುವಲ್ಲಿ ಹಸಿರು ಸಂಸ್ಕೃತಿಯನ್ನು ಅಳವಡಿಸಿಕೊಂಡೇ ಸಾಗಿ ಬಂದಿರುತ್ತದೆ. ಹಸಿರು ಸಂಸ್ಕೃತಿ ಕೇವಲ ಮರಗಿಡ ಸಸ್ಯಗಳ ಪರಿಜ್ಞಾನದ ಕ್ರಮವಲ್ಲ. ಅದು ಮಾನವನ ನಿಸರ್ಗದ ಒಪ್ಪಂದ. ಬದುಕುಳಿಯಲು ನಿಸರ್ಗವನ್ನು ಅರ್ಥಮಾಡಿಕೊಳ್ಳುವ ಪರಿ. ನಿಸರ್ಗ ಮತ್ತು ಜೀವಜಾಲದ ನಡುವೆ ಮನುಷ್ಯ ಸ್ಥಾನದ ಹೋರಾಟ ಮತ್ತು ಹೊಂದಾಣಿಕೆಯಾಗಿದೆ. ಹಸಿರು ಸಂಸ್ಕೃತಿಯು ವಕ್ಕಲುತನದ ಮೂಲಕ ಬೇರೆ ಬೇರೆ ಆಯಾಮ ಗಳನ್ನು ಪ್ರವೇಶಿಸುತ್ತದೆ. ಹಸಿರು ಉಸಿರು ಎಂಬ ಜನಪ್ರಿಯ ಮಾತಿದೆ. ನಮ್ಮ ಸುತ್ತಣ ಹಸಿರು ಲೋಕವೇ ನಮ್ಮ ಇರುವಿಕೆಯ ಮೂಲ. ಅದು ನಾಶವಾದರೆ ಜಗತ್ತಿನ ಯಾವ ತಂತ್ರ ಮಂತ್ರವೂ ಅರ್ಥಹೀನ. ವಿಶಾಲವಾದ ಅರ್ಥದಲ್ಲಿ ಹಸಿರು ಸಂಸ್ಕೃತಿ ಎಂದರೆ ನಮ್ಮ ಅಸ್ತಿತ್ವದ ಕೇಂದ್ರವಾಗಿರುವ ನಿಸರ್ಗದ ಜೊತೆಗಿನ ಸಾವಯವ ಸಂಬಂಧದ ವಿಕಾಸ.

ಆದಿಮ ಕರ್ನಾಟಕದ ನೆಲೆ ಹಂಪಿ

ಈ ಹಿನ್ನೆಲೆಗಳಿಂದ ಗಮನಿಸಿದರೆ ಹಂಪಿ ಪರಿಸರದ ಗ್ರಾಮಗಳ ಪರಿಕಲ್ಪನೆಯು ತುಂಬ ವಿಶಾಲವಾದ ಚಾರಿತ್ರಿಕತೆ ಹೊಂದಿರುವ ಸಂಗತಿ. ಭಾಗಶಃ ಪ್ರಾಚೀನ ಕರ್ನಾಟಕದ ಜನವರ್ಗಗಳ ಬಹುದೊಡ್ಡ ನೆಲೆಯಾಗಿದ್ದ ಹಂಪಿ ಪರಿಸರವು ಆದಿಮ ಕರ್ನಾಟಕದ ಮೂಲ ನೆಲೆಗಳಲ್ಲಿ ಒಂದು ಎಂದು ಹೇಳಬಹುದು. ಯಾವುದೇ ಪ್ರಾಚೀನ ಜನವಸತಿಯ ನೆಲೆಯೇ ಹಂತಹಂತವಾಗಿ ಬೆಳೆದು ತನ್ನ ಪರಿಸರದ ಮೇಲೆ ಅಧಿಪತ್ಯ ಸ್ಥಾಪಿಸಿ ಸಾಮ್ರಾಜ್ಯವನ್ನು ಕಟ್ಟಿ ಮೆರೆದ ಹಂತಕ್ಕೆ ಬರುವುದು ಮಾನವ ಸಹಜ ಸ್ವಭಾವ. ಒಂದು ಉನ್ನತ ಸಮಾಜ, ಸಂಸ್ಕೃತಿ, ಸಮುದಾಯ, ಸಾಮ್ರಾಜ್ಯ ದಿqsರನೆ ಒಂದು ರಾತ್ರಿ ತಲೆ ಎತ್ತಿ ನಿಂತು ಬಿಡುವುದಿಲ್ಲ. ದೀರ್ಘಕಾಲೀನ ನೈಸರ್ಗಿಕ ಒಪ್ಪಂದಗಳಿಂದಲೇ ಅದು ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲು ಸಾಧ್ಯವಾಗುವುದು. ಒಂದು ಸಮುದಾಯ ಭೂಮಿಯ ಮೇಲಿನ ಆಧಿಪತ್ಯ ಸ್ಥಾಪಿಸುವುದು ಎಂದರೆ ಅದು ನಿಸರ್ಗದ ಮೇಲಿನ ಯಾಜಮಾನ್ಯವನ್ನು ಸ್ಥಾಪಿಸುವುದೇ ಆಗಿರುತ್ತದೆ. ಸಾಮ್ರಾಜ್ಯಗಳ ಆಧಿಪತ್ಯವೂ ಹೀಗೆಯೆ. ದೀರ್ಘಕಾಲೀನ ಸಂಬಂಧಗಳು ಯಾವುದೇ ಒಂದು ವಸ್ತುಸ್ಥಿತಿಯ ಅಸ್ತಿತ್ವವನ್ನು ನಿರ್ಧರಿಸಲು ಸಹಕಾರಿಯಾಗಿರುತ್ತವೆ. ಹಂಪಿ ಪರಿಸರದ ಗ್ರಾಮ ಗಳ ಪೂರ್ವೇತಿಹಾಸದಲ್ಲಿ ಇಂತಹ ಸಂಗತಿಗಳು ಪಶುಪಾಲಕ ಸಂಸ್ಕೃತಿಯ ಭಾಗವಾಗಿಯೇ ಘಟಸಿದ್ದನ್ನು ಅಲ್ಲಗಳೆಯಲಾಗದು. ಹೀಗಾಗಿ ಹಂಪಿ ಪರಿಸರವು ಕೇವಲ ಆದಿಮ ಜನವಸತಿಯ ನೆಲೆ ಮಾತ್ರವೇ ಆಗಿರದೆ ಅದು ಹಲವಾರು ಪಶುಪಾಲಕ ಸಮುದಾಯಗಳು ಕವಲಾಗಿ ವಿಸ್ತರಿಸಲು ಬೇಕಾದ ಅವಕಾಶವನ್ನು ಹಂತ ಹಂತವಾಗಿ ನಿರ್ಮಿಸಿದೆ. ಇದು ಸಮುದಾಯಗಳ ಅವ್ಯಕ್ತ ಸಂಸ್ಕೃತಿಯಲ್ಲಿ ಅಡಕವಾಗಿರುವ ಸಂಗತಿ. ಚರಿತ್ರೆಯ ಅಸ್ತಿತ್ವಕ್ಕೂ ಪೂರ್ವದಲ್ಲಿದ್ದ ಈ ಬಗೆಯ ಬೇರುಗಳು ಸಂಸ್ಕೃತಿಯಲ್ಲಿ ಚಿಗುರಿರುತ್ತವೆ. ಇದನ್ನು ಸಂಸ್ಕೃತಿಗಳ ಪರಿಸರ ಎಂಬ ಪರಿಕಲ್ಪನೆಯ ರೀತಿಯಲ್ಲೆ ಅರ್ಥೈಸಬಹುದು.

ಪಶುಪಾಲಕ ಸಮುದಾಯಗಳು ಹಸಿರು ಸಂವೃದ್ದಿಯನ್ನು ಹಿಂಬಾಲಿಸಿಯೇ ಜೀವನಾವರ್ತ ಕ್ರಮವನ್ನು ವಾರ್ಷಿಕವಾಗಿ ರೂಢಿಸಿಕೊಂಡಿದ್ದವು. ಪಶುಪಾಲಕ ಸಮಾಜಗಳು ಹಸು, ಕುರಿ, ಮೇಕೆ ಎಮ್ಮೆ ಮುಂತಾದ ಹೈನುಗಾರಿಕೆಗೆ ಸೂಕ್ತವಾದ ಪ್ರಾಣಿಗಳ ಮೂಲಕ ನಿಸರ್ಗದ ಜೊತೆ ಒಪ್ಪಂದವನ್ನು ಮಾಡಿಕೊಂಡವು. ಮನುಷ್ಯರ ಉಗಮ ವಿಕಾಸ ಕೂಡ ನಿಸರ್ಗದ ಜೊತೆ ಇಂತದೇ ಒಪ್ಪಂದ ಮಾಡಿಕೊಂಡಿತ್ತು. ವಾಸದ ನೆಲೆಗಳನ್ನು ಅರಸುತ್ತ ತಾತ್ಕಾಲಿಕ ನೆಲೆಗಳನ್ನು ವಾರ್ಷಿಕವಾಗಿ ಗುರುತಿಸಿಕೊಂಡು ಜೀವನಾವರ್ತ ವಲಸೆಯ ಕ್ರಮವೂ ಮುಂದು ವರಿಯಿತು. ಪ್ರಾಣಿಗಳ ಉತ್ಪನ್ನದ ಜೊತೆ ಬದುಕುವುದನ್ನು ರೂಢಿಸಿಕೊಂಡಾಗ ಪರಿಸರದಲ್ಲಿ ದೊರೆಯುವ ನೀರು, ನೆರಳು, ಆಹಾರ ಇವು ಮುಖ್ಯವಾದವು. ಹಸಿರನ್ನು ಅವಲಂಬಿಸಿಯೇ ಜೀವನದ ಚಲನೆ ಅನಿವಾರ್ಯವಾಯಿತು. ಇಂತಹ ವಿಕಾಸದ ಕಥನಗಳು ಈಗಾಗಲೇ ತಿಳಿದಿರು ವಂತವೇ. ನಾವಿಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ ಪಶುಪಾಲಕ ಸಮುದಾಯಗಳಿಗೆ ಹಂಪಿ ಪರಿಸರವು ಸೂಕ್ತವಾದ ಭದ್ರತೆಯನ್ನು ಒದಗಿಸಿತ್ತು ಎಂಬುದನ್ನು. ಇದರ ಬಲ ದಿಂದಲೇ ಈ ಪ್ರದೇಶವು ಪ್ರಾಚೀನ ಕರ್ನಾಟಕದ ವೈವಿಧ್ಯ ಪಶುಪಾಲಕ ಸಮಾಜಗಳಿಗೆ ಸ್ಪಷ್ಠ ಚಹರೆ ನೀಡಿತು. ಪಶುಪಾಲಕ ಸಮುದಾಯಗಳ ಮಾತೃಸ್ಥಾನದಂತೆ ಕಂಡುಬರುವ ಹಂಪಿ ಪರಿಸರವು ಗಣನೀಯವಾಗಿ ಈ ಸಮುದಾಯಗಳು ಬೆಳೆದು ಅವೇ ಮುಂದೆ ಕರ್ನಾಟಕದ ಹಲವು ನೆಲೆಗಳಿಗೆ ವಲಸೆ ಹೋಗುವಂತೆ ಮಾಡಿತು.

ಈ ಬಗೆಯಲ್ಲಿ ನೆಲೆಯಾಗಿದ್ದ ಪ್ರಾಕ್ತನ ಕಾಲದ ಆದಿಮ ಜನ ವಸತಿ ನೆಲೆಗಳು ಈಗಲೂ ಹಂಪಿ ಪರಿಸರದಲ್ಲಿ ಕಾಣಸಿಗುತ್ತವೆ. ಬೃಹತ್ ಶಿಲಾಯುಗದ ಅವಶೇಷಗಳು ನಿಗೂಢ ಗವಿ ಗಳಲ್ಲೂ ಬೆಟ್ಟಸಾಲುಗಳ ಬಯಲು ಪ್ರದೇಶಗಳಲ್ಲೂ ಹೇರಳವಾಗಿ ಸಿಗುತ್ತವೆ. ಇಂತಹ ವಾಸದ ನೆಲೆಗಳು ವಿಶ್ವ ಪರಂಪೆಯ ಅವ್ಯಕ್ತ ಸಂಸ್ಕೃತಿಯ ಬಹು ಮುಖ್ಯ ಕುರುಹುಗಳು. ಇವುಗಳ ರಕ್ಷಣೆಯು ಜರೂರಾಗಿ ಆಗಬೇಕಾಗಿದೆ. ಇಡಿಯಾಗಿ ಹಂಪಿ ಪರಿಸರದ ಎಲ್ಲ ಬೆಟ್ಟಗುಡ್ಡಗವಿಗಳಲ್ಲು ಒಂದಲ್ಲ ಒಂದು ಬಗೆಯಾಗಿ ಪ್ರಾಕ್ತನ ಕಾಲದ ಸಾಕ್ಷಿಗಳು ಉಳಿದಿವೆ. ಈ ಆದಿಮ ಹಂಪಿಯೇ ಆ ನಂತರದ ಪಶುಪಾಲಕ ಜನವರ್ಗಗಳ ಮೂಲ ಗುರುತು. ಬಂಡೆಗಳ ಮೇಲೆ ಚಿತ್ರಿಸಿರುವ ಅನೇಕ ಚಿತ್ರಗಳು ಪಶುಪಾಲಕರ ಪೂರ್ವಿಕರ ಉಳಿಕೆಗಳು. ಅವು ಪ್ರಾಚೀನ ಕರ್ನಾಟಕದ ಚರಿತ್ರೆಯ ಅಕ್ಷರಗಳೂ ಕೂಡ ಆಗಿವೆ.

ಆದಿಮ ಹಂಪಿಯ ಕುರುಹುಗಳನ್ನು ಹಂಪಿಯ ಉದ್ದಕ್ಕೂ ಕಾಣಬಹುದು. ಹಾಗೆ ನೋಡಿದರೆ ಹಂಪಿ ಪರಿಸರವು ಬೃಹತ್ ಪ್ರಮಾಣದಲ್ಲಿ ಬೃಹತ್ ಶಿಲಾಯುಗದ ಜನ ಸಮೂಹವನ್ನು ಒಳಗೊಂಡಿತ್ತು ಎಂಬಂತೆ ತೋರುತ್ತದೆ. ಮುಖ್ಯವಾದ ಆದಿಮ ಹಂಪಿಯ ಕೆಲವು ನೆಲೆಗಳೆಂದರೆ ತಳವಾರಘಟ್ಟ, ಹೇಮಕೂಟ, ಋಷಿಮುಖ ಪರ್ವತ, ಆನೆಗೊಂದಿ, ಮತಂಗ ಪರ್ವತ, ಅಂಜನಾದ್ರಿ ಬೆಟ್ಟ, ಧರ್ಮರ ಬೆಟ್ಟ, ದುರ್ಗಾಬೆಟ್ಟ, ಕರಡಿ ಮಟ್ಟಿ, ವಿಷ್ಣುಪಾದ, ಮೊಸಳಯ್ಯನ ಗುಡ್ಡ, ತಿರುಪತಿ ಗುಡ್ಡ, ಮ್ಯಾಕಿ ಬಂಡೆ ಮುಂತಾದ ನೂರಾರು ನೆಲೆಗಳಲ್ಲಿ ಆದಿಮ ಜನವಸತಿಯ ನೆಲೆಗಳು ಕಾಣಸಿಗುತ್ತವೆ. ಇವತ್ತಿಗೂ ಈ ನೆಲೆಗಳಲ್ಲಿ ದನಗಾಹಿಗಳು ತಮ್ಮ ರಾಸುಗಳ ಜೊತೆ ಬದುಕುವುದಿದೆ. ಭಾಗಶಃ ಇಷ್ಟೊಂದು ವಿಶಾಲವಾದ ವಿರಾಟ್ ಆದಿಮ ಜನವಸತಿಯ ನೆಲೆ ದಕ್ಷಿಣ ಭಾರತದ ಎಲ್ಲೂ ಕಾಣಲಾಗದು. ಬೃಹತ್ ಪ್ರಮಾಣದ ಜನವಸತಿಯಂತೆ ಕಾಣುವ ಈ ನೆಲೆಯು ಆ ಕಾಲಕ್ಕೆ ಆದಿಮ ನಗರವೇ ಆಗಿದ್ದಂತೆ ಭಾಸವಾಗುತ್ತದೆ. ಇದರ ಸಮಾಧಿ ಮೇಲೆಯೇ ವಿಜಯನಗರದ ಭವ್ಯ ನಗರವು ತಲೆ ಎತ್ತಿ ಜಗದ್ವಿಖ್ಯಾತ ಅಲಂಕಾರಿಕ ರಾಜಧಾನಿಯಾಗಿ ಮೆರೆದಿರುವುದು.

ತುಂಗಭದ್ರಾ ನದಿಯ ದಂಡೆಯ ಉದ್ದಕ್ಕೂ ಇಂತಹ ವಾಸದ ನೆಲೆಗಳು ಕಣ್ಣಿಗೆ ರಾಚುವಷ್ಟು ಸ್ಪಷ್ಟವಾಗಿ ಕಾಣುತ್ತವೆ. ವಿಜಯನಗರದ ಕಾಲದ ಚರಿತ್ರೆಗೆ, ಸೀಮಿತವಾಗುವ ಬದಲು ಅದರ ಹಿಂದಿನ ಹಂತಗಳಿಗೆ ಹೋಗಿ ನೋಡಿದ್ದೇ ಆದರೆ ಆಗ ಹಂಪಿ ಪರಿಸರದ ನಿಜವಾದ ಭವ್ಯ ಪರಂಪರೆಯು ಮತ್ತಷ್ಟು ಅರ್ಥಪೂರ್ಣವಾಗಿ ತಿಳಿಯುತ್ತದೆ. ಪ್ರಸ್ತುತ ಜನಪದ ಸಮಾಜಗಳ ನೆಲೆಗಳು ಇಂತಹ ಗತ ಸಂಗತಿಗಳನ್ನು ಮರೆತು ಹೋಗಿದ್ದರೂ ಇಲ್ಲಿನ ಪರಿಸರ ಅವನ್ನೆಲ್ಲ ಉಳಿಸಿಕೊಂಡಿರುವುದು ಗಮನಾರ್ಹವಾಗಿದೆ. ನಿಸರ್ಗದ ತವರಿ ನಲ್ಲಿ ನೆಲೆ ನಿಂತು ಅಳಿದು ಹೋಗಿರುವ ಪ್ರಾಚೀನ ಕರ್ನಾಟಕದ ಜನ ವರ್ಗಗಳ ಈ ಬೀಡನ್ನು ಗ್ರಹಿಸಬೇಕಾದರೆ ಇಲ್ಲಿನ ಪರಿಸರವನ್ನೇ ಪ್ರಧಾನವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಕೇವಲ ಇಲ್ಲಿನ ಜನಪದರ ದೈನಂದಿನ ಬದುಕಿನಲ್ಲಿ ಗತವನ್ನು ಹುಡುಕಲಾಗದು. ಎಷ್ಟೋ ಬಾರಿ ದೈನಂದಿನ ಜನಪದ ಸಮಾಜಕ್ಕೆ ಅದರ ಹಿಂದಿನ ಗತ ರೂಪದ ಸ್ಮೃತಿಯೇ ಕಳೆದು ಹೋಗಿರುತ್ತದೆ. ಅದನ್ನೆ ಮುಂದುವರಿಸುವ ಅವಶ್ಯಕತೆಯೂ ಅದಕ್ಕೆ ಇರುವುದಿಲ್ಲ. ಒಂದೇ ಬಗೆಯ ಕ್ರಮವನ್ನು ಪರಿಸರ ಕೂಡ ಅಪೇಕ್ಷಿಸುವುದಿಲ್ಲ. ನಿಸರ್ಗದ ನಿಯಮಕ್ಕೆ ಕೂಡ ಅದು ಹೊಂದುವುದಿಲ್ಲ. ನಿರಂತರ ಭಿನ್ನತೆಯ ಕಡೆಗೆ ತನ್ನ ಪೂರ್ವ ಚಹರೆಗಳಿಂದ ಚಲಿಸಿ ರೂಪಾಂತರವಾಗುವುದು ನಿಸರ್ಗ ಮತ್ತು ಸಂಸ್ಕೃತಿಗಳ ಒಟ್ಟು ಸ್ಥಿತಿ. ಹೀಗಾಗಿ ಆದಿಮ ಹಂಪಿಯ ಜನವಸತಿಯ ನೆಲೆಗಳನ್ನು ವಿಸ್ತೃತವಾಗಿ ಪ್ರತ್ಯೇಕವಾಗಿ ಗುರುತಿಸಿ ಅಧ್ಯಯನ ಮಾಡಿದರೆ ವಿಜಯನಗರ ಸಾಮ್ರಾಜ್ಯದ ಚರಿತ್ರೆಗೆ ಮೂಲ ಕೊಂಡಿಯನ್ನು ಬೆಸದಂತಾಗುತ್ತದೆ.

ಸಾಮ್ರಾಜ್ಯ ಸೇವಕ ಗ್ರಾಮಗಳು

ಹಂಪಿ ಗ್ರಾಮಗಳ ನೆಲೆಯಲ್ಲಿ ಆದಿಮ ನೆಲೆಯ ನಂತರದ ಗ್ರಾಮೀಣ ಇತಿಹಾಸವು ಇನ್ನು ಅಸ್ಪಷ್ಟವಾಗಿಯೆ ಇದೆ. ಗ್ರಾಮಗಳ ಉಗಮ ವಿಕಾಸದ ಚರಿತ್ರೆಯ ಕಥನಗಳು ಇಲ್ಲದಿ ರುವ ಕಾರಣ ಆದಿಮ ಕರ್ನಾಟಕದ ಗ್ರಾಮಗಳ ಸ್ವರೂಪವನ್ನು ಅನುಸಂಧಾನ ಮಾಡುವುದು ಕಷ್ಟವಾಗಿದೆ. ಆದರೂ ಹಂಪಿ ಗ್ರಾಮಗಳ ದೀರ್ಘಕಾಲೀನ ನೆಲೆಗಳನ್ನು ಊಹಿಸಬಹುದಾಗಿದೆ. ವಿಜಯನಗರ ಸಾಮ್ರಾಜ್ಯಕ್ಕೂ ಪೂರ್ವದಲ್ಲಿ ಹಂಪಿಯನ್ನು ಬೇರೆ ರಾಜವಂಶಗಳು ಆಳಿದ್ದಕ್ಕೆ ಆಧಾರಗಳಿವೆ. ಆ ವೇಳೆಯ ಹಳ್ಳಿಗಳ ಚರಿತ್ರೆಗೂ ಅನಂತರ ವಿಜಯನಗರದ ಕಾಲದ ಹಳ್ಳಿಗಳ ಚರಿತ್ರೆಗೂ ದೊಡ್ಡ ವ್ಯತ್ಯಾಸವಿರಲಾರದು. ಆದರೆ ವಿಜಯನಗರ ಸಾಮ್ರಾಜ್ಯದ ವೇಳೆಗೆ ಅನೇಕ ಹೊಸಬಗೆಯ ಹಳ್ಳಿಗಳು ತಲೆ ಎತ್ತಿವೆ ಎಂಬುದು ಸ್ಪಷ್ಟವಾಗಿದೆ. ಬೃಹತ್ ಸಾಮ್ರಾಜ್ಯಕ್ಕೆ ಬೇಕಾದ ಸೇವೆಗಳಿಗೆ, ಉತ್ಪನ್ನಗಳಿಗೆ, ಸೈನ್ಯಕ್ಕೆ ಮತ್ತು ಎಲ್ಲ ಬಗೆಯ ವಹಿವಾಟಿಗೆ ಹಳ್ಳಿಗಳು ಪ್ರಮುಖ ನೆಲೆಯಾಗಿದ್ದವು. ಹಂಪಿ ರಾಜಧಾನಿ ಆಗಿ ಮಹಾನಗರವಾಗಿ ಬೆಳೆದಿತ್ತಾದರೂ ಅದರ ಬಲವೆಲ್ಲವೂ ಅದರ ಸುತ್ತಲಿನ ಹಳ್ಳಿಗಳನ್ನು ಆಶ್ರಯಿಸಿತ್ತು. ಪ್ರಾಚೀನ ಕರ್ನಾಟಕದ ಹಳ್ಳಿಗಳು ಸ್ವಯಂ ಆರ್ಥಿಕ ಘಟಕಗಳಾಗಿ ವಕ್ಕಲು ಸಂಸ್ಕೃತಿಯನ್ನು ಆ ವೇಳೆಗಾಗಲೇ ಬಲವಾಗಿ ರೂಪಿಸಿಕೊಂಡಿದ್ದವು.

ಗ್ರಾಮಸಮಾಜ ವೃತ್ತಿಪ್ರಧಾನವಾಗಿ ಉತ್ಪಾದಕ ವ್ಯವಸ್ಥೆಯನ್ನು ಒಬ್ಬರಿಗೊಬ್ಬರು ಹೊಂದಾಣಿಕೆಯ ಅವಲಂಬನೆಯಲ್ಲಿ ಸ್ಥಾಪಿಸಿಕೊಂಡಿತ್ತು. ಒಂದು ಉತ್ಪನ್ನ ಇನ್ನೊಂದು ಉತ್ಪನ್ನದ ಪೂರಕ ಚಲನೆಯಾಗಿ ಒಟ್ಟು ಸಮಾಜವೇ ಬದುಕುಳಿಯುವ ಕೊಂಡಿಯಾಗಿ ಮಾರ್ಪಟ್ಟಿತ್ತು. ಮುಂದೆ ಇದು ಜಾತಿ ಹಾಗೂ ಲಿಂಗ ತಾರತಮ್ಯದಲ್ಲಿ ವರ್ಗಗಳ ಅಸಮಾನ ಬೆಳೆವಣಿಗೆಯಲ್ಲಿ ಮತ್ತು ವೃತ್ತಿಗಳ ಮೇಲು ಕೀಳಿನ ಅಳತೆಗಳಲ್ಲಿ ದಿಕ್ಕು ತಪ್ಪಿ ಊಳಿಗಮಾನ್ಯ ವ್ಯವಸ್ಥೆ ಬೆಳೆದು ರಾಜ್ಯಶಾಹಿ ಸಾಮ್ರಾಜ್ಯಗಳು ಅನಂತರ ಹೇಗೆ ಹಳ್ಳಿಗಳನ್ನು ತಮ್ಮ ಅಧಿಕಾರದ ಕಪಿಮುಷ್ಠಿಯಲ್ಲಿ ಹಿಡಿದವು ಎಂಬುದನ್ನು ನೆನೆದರೆ ಹಂಪಿ ಪರಿಸರದ ಗ್ರಾಮಗಳ ಪಾಡೂ ಅಂತದ್ದೇ ಆಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಗ್ರಾಮಗಳು ಸ್ವಯಂಚಾಲಿತ ಆರ್ಥಿಕ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯವಾಗಿದ್ದುದು ಕಳೆದು ಹೋಗಿ ಸಾಮ್ರಾಜ್ಯಶಾಹಿ ನೀತಿ ಜಾರಿಗೊಂಡ ಮೇಲೆ ಜನಪದ ಸಂಸ್ಕೃತಿಯು ಹಿಂದೆ ಸರಿದು ಮತಧರ್ಮಗಳ ಪ್ರಭಾವ ಅಧಿಕವಾಯಿತು. ವಿಜಯನಗರ ಸಾಮ್ರಾಜ್ಯದ ಅವನತಿಯಲ್ಲೂ ಮತ ಧರ್ಮಗಳ ದಟ್ಟ ಪ್ರಭಾವವಿದೆ. ಹಾಗೆಯೆ ಅದರ ಹುಟ್ಟು ಕೂಡ ಜನಪದರಾದಿಯಾಗಿ ಹಿಂದೂಧರ್ಮ ಸಂರಕ್ಷಣೆಯ ಕಾರಣವಾಗಿ ಆಯಿತೆಂಬ ಬಲವಾದ ವಾದಗಳೂ ಇವೆ. ಎಲ್ಲ ರಾಜವಂಶಗಳ ಚರಿತ್ರೆಯಲ್ಲೂ ಧರ್ಮ ಸಂರಕ್ಷಣೆ ಪ್ರಧಾನ ಕಾರ್ಯಸೂಚಿಗಳಲ್ಲಿ ಒಂದಾಗಿರುತ್ತದೆ.

ರಮ್ಯ ಮಾಂತ್ರಿಕ ಆವರಣದ ರಕ್ಷಣೆ

ಜನಪದ ಸಂಸ್ಕೃತಿಗಳು ನಿಸರ್ಗದ ಆರಾಧನೆಯಲ್ಲಿ ವಿಶೇಷ ಕಾಳಜಿ ತಳೆಯುತ್ತವೆ. ನಿಸರ್ಗದ ಸಾಮರ್ಥ್ಯವನ್ನು ನಂಬಿಯೇ ಅವರ ಕೃಷಿ ಜೀವನ ವಿಧಾನ ನಿಂತಿರುವುದು. ಜನಪದ ಪರಂಪರೆಗಳಂತೂ ನಿಸರ್ಗದ ಸಾವಯವ ಸಂಬಂಧದಿಂದಲೇ ತಮ್ಮ ಸುತ್ತಲ ಪರಿಸರವನ್ನು ಕಂಡಿವೆ. ಹಂಪಿಯ ಗ್ರಾಮಗಳೂ ಇದಕ್ಕೆ ಹೊರತೇನಾಗಿಲ್ಲ. ಸಮುದಾಯಗಳು ನಿಸರ್ಗಾ ಧಾರಿತ ಸಂಸ್ಕೃತಿಗಳಿಂದಲೇ ಬೆಳದು ಬಂದಿವೆ. ಧರ್ಮ ಅವರಿಗೆ ಮೊದಲ ಆದ್ಯತೆ ಆಗಿರಲಿಲ್ಲ. ನಿಸರ್ಗವನ್ನು ಗೆದ್ದು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಪ್ರಕ್ರಿಯೆಯಲ್ಲಿ ಎಲ್ಲ ಮಾನವ ಸಮುದಾಯಗಳೂ ಮೊದಲಿಗೆ ಮಂತ್ರ ವಿದ್ಯೆಯನ್ನೇ ನಂಬಿದ್ದುದು. ಮಾಂತ್ರಿಕ ವಿಧಿಕ್ರಿಯೆಗಳು ಇಂದಿಗೂ ಜೀವಂತವಾಗಿವೆ. ಫಲವಂತಿಕೆಯ ಆಚರಣೆಗಳೆಲ್ಲ ಮಂತ್ರವಿದ್ಯೆಯ ಫಲವೇ ಆಗಿವೆ. ನಿಸರ್ಗದ ಜೊತೆಗಿನ ಸಂಘರ್ಷದಲ್ಲಿ ಮನುಷ್ಯ ಮಂತ್ರ ವಿದ್ಯೆಯನ್ನು ಬಹಳ ಕಾಲ ನಂಬಲು ಆಗಲಿಲ್ಲ. ಅದೊಂದು ಅಧಿಕೃತ ನಂಬಿಕೆ ಆಗಲು ಸಾಧ್ಯವಿರಲಿಲ್ಲ. ನಿಸರ್ಗದ ಪ್ರಬಲ ಶಕ್ತಿಯ ಮುಂದೆ ಮನುಷ್ಯರ ಮಾಂತ್ರಿಕ ವಿದ್ಯೆ ದುರ್ಬಲವಾಗಿತ್ತು. ಮಂತ್ರ ವಿದ್ಯೆಯ ಮಿತಿ ಅರಿತ ಮಾನವ ಸಮುದಾಯಗಳು ನಿಸರ್ಗಕ್ಕೆ ತಲೆ ಬಾಗಿದವು.

ಹೀಗೆ ನಿಸರ್ಗಕ್ಕೆ ತಲೆ ಬಾಗಿದ್ದರ ಹಿನ್ನೆಲೆಯಲ್ಲಿ ನಿಸರ್ಗದ ಜೊತೆ ಮನುಷ್ಯ ಅನೇಕ ಒಪ್ಪಂದಗಳನ್ನು ಮಾಡಿಕೊಂಡ. ಈ ಒಪ್ಪಂದಗಳು ಬದುಕುಳಿಯುವ ಅಸ್ತಿತ್ವದವಾಗಿದ್ದವು. ಅವುಗಳೇ ಮುಂದೆ ನಿಸರ್ಗವನ್ನು ಆರಾಧಿಸುವ ಆಚರಣೆಗಳಾಗಿ ಸಂಸ್ಕೃತಿಗಳಾಗಿ ರೂಪಾಂತರ ಗೊಂಡದ್ದು. ಇದು ಎಲ್ಲ ಜನಪದ ಸಮಾಜಗಳ ಸಾಮಾನ್ಯ ಕ್ರಮ. ಬುಡಕಟ್ಟು ಸಮಾಜ ಗಳಂತು ಈ ಒಪ್ಪಂದವನ್ನು ಗಾಢವಾಗಿ ವಿಸ್ತರಿಸಿಕೊಂಡವು. ಪಶುಪಾಲಕ ವರ್ಗಗಳಾದ ಬುಡಕಟ್ಟುಗಳು ನಿಸರ್ಗ ನಿಷ್ಟ ಒಪ್ಪಂದಗಳನ್ನು ಗ್ರಾಮ ಸಮಾಜಗಳ ಸ್ವರೂಪದಲ್ಲಿ ಮಾಡಿಕೊಳ್ಳಬೇಕಾಯಿತು. ಅಪ್ಪಟ ವಕ್ಕಲು ಸಮುದಾಯಗಳಾಗಿ ಬೇರ್ಪಟ್ಟವುಗಳು ಗ್ರಾಮ ಸಂಸ್ಕೃತಿಯ ವ್ಯಾಪ್ತಿಯಲ್ಲಿ ಭೂಮಿಯ ಉತ್ಪಾದನೆಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಲವು ಬಗೆಯ ಫಲವಂತಿಕೆಯ ಆಚರಣೆಗಳನ್ನು ರೂಢಿಸಿಕೊಂಡವು. ರಮ್ಯವಾಗಿ ನಿಸರ್ಗದ ಶಕ್ತಿ ಯನ್ನು ಆವಾಹಿಸಿಕೊಳ್ಳುವ ಫಲವಂತಿಕೆ ಆಚರಣೆಗಳು ಮಾಂತ್ರಿಕ ವಾಸ್ತವದಲ್ಲಿ ಗ್ರಾಮ ರಚನೆಯನ್ನು ರೂಪಿಸಿಕೊಂಡವು. ಇಂತಹ ಭಾವನೆ ರಕ್ಷಣೆ ನೀಡುತ್ತದೆ ಎಂಬ ನಂಬಿಕೆ ಇತ್ತು. ಇಂತಹ ಸಂಗತಿಗಳೇ ವಿಶ್ವಪರಂಪರೆಯ ಪಟ್ಟಿಯಲ್ಲಿ ಸೇರುವ ಹಂಪಿ ಗ್ರಾಮಗಳ ಹೊರಗಿನ ವಿಷಯಗಳಲ್ಲು ಹಂಪಿಯ ಆದಿಮ ಜನವಸತಿ ನೆಲೆಗಳ ಹಿನ್ನೆಲೆಯಲ್ಲೂ ಕಾಣುತ್ತವೆ. ಹೀಗಾಗಿ ಹಂಪಿಯ ಒಟ್ಟು ಜಾನಪದವೇ ನಿಸರ್ಗನಿಷ್ಠ ಅವ್ಯಕ್ತ ಸಂಸ್ಕೃತಿಯ ಮೊತ್ತವಾಗಿದೆ. ಮಂತ್ರಾಚರಣೆಗಳು ಸಂಸ್ಕೃತಿಗೆ ದಾರಿ ಮಾಡಿದಂತೆಯೆ ಅದು ಮತ್ತೊಂದು ಮಹತ್ವದ ಧಾರ್ಮಿಕ ವಿಚಾರಕ್ಕೂ ದಾರಿ ತೋರಿದೆ.

ಧಾರ್ಮಿಕ ವಿಧಿ ನಿಷೇಧಗಳ ಬಲ

ಧರ್ಮ ಎನ್ನುವ ಕಲ್ಪನೆಗೆ ಬಲಬಂದದ್ದೇ ಮಾಂತ್ರಿಕ ವಿದ್ಯೆಯ ಮೂಲಕ. ಸಮುದಾಯ ಗಳು ತಮ್ಮ ಅಸ್ತಿತ್ವಕ್ಕೆ ಬೇಕಾದಂತೆ ನಿಸರ್ಗವನ್ನು ಪರಿಸರವನ್ನು ಆಯ್ಕೆ ಮಾಡಿಕೊಂಡವು. ಹಾಗೆಯೇ ಒಂದೊಂದು ಸಮುದಾಯವೂ ತನ್ನ ಅಸ್ತಿತ್ವಕ್ಕಾಗಿ ಸ್ವ ಅನನ್ಯತೆಯನ್ನು ಬಿಂಬಿಸುವ ಸಂಸ್ಕೃತಿಗಳನ್ನು ಕಂಡುಕೊಂಡವು. ಮಂತ್ರ ವಿದೆಯೂ ಸಾಲದೆನಿಸಿದ ಮೇಲೆ, ಸಂಸ್ಕೃತಿಗಳೂ ಅಪೂರ್ಣ ಎನಿಸಿದ ಮೇಲೆ, ನಾಗರೀಕತೆಗಳು ಬೃಹತ್ತಾಗಿ ವಿಸ್ತರಿಸಿದ ನಂತರ ಧರ್ಮದ ಕುರುಹುಗಳು ಹುಟ್ಟಿಕೊಂಡವು. ಧರ್ಮದ ಮೂಲಕ ಈ ವಿಶ್ವದ ಅನಂತವನ್ನು ಧ್ಯಾನಿಸ ಲಾಯಿತು. ಹಾಗೆಯೇ ತಮ್ಮ ಸಮುದಾಯಗಳನ್ನು ಸ್ಥಾಪಿಸಿಕೊಳ್ಳಲು ಧರ್ಮವು ಪ್ರಮುಖ ಅಸ್ತ್ರವಾಯಿತು. ಧರ್ಮವು ಚಾಣಾಕ್ಷತೆಯಲ್ಲಿ ಮಂತ್ರ ವಿದ್ಯೆಯನ್ನೂ ಸಂಸ್ಕೃತಿಯ ರೀತಿನೀತಿ ಗಳನ್ನೂ ನಿಸರ್ಗದ ನಿಗೂಢಗಳನ್ನು ಬೆರೆಸಿಕೊಂಡು ಅಗಾಧವಾಗಿ ಬೆಳೆಯಿತು. ಧರ್ಮಗಳೇ ಸಾಮ್ರಾಜ್ಯಗಳನ್ನು ಕಟ್ಟಿ ಆಳುವ ಸಾಮರ್ಥ್ಯ ಪಡೆದುಕೊಂಡವು.

ಹಂಪಿಯ ಗ್ರಾಮಗಳಲ್ಲಿ ಇಂದಿಗೂ ಮತಧರ್ಮಗಳು ಬಹುವಿಧವಾಗಿ ತಮ್ಮ ಬಲವನ್ನು ಪ್ರದರ್ಶಿಸುತ್ತಲೇ ಇವೆ. ನಿಸರ್ಗದ ಎಲ್ಲಿಯದೊ ಒಂದು ಬೇರು ಸಂಸ್ಕೃತಿಯಲ್ಲಿ ವಿಸ್ತರಿಸಿ ಧರ್ಮ ಎಂಬ ಮಹಾ ವ್ಯವಸ್ಥೆಯಲ್ಲಿ ಸಿಲುಕಿ ವರ್ತಮಾನದಲ್ಲಿ ಅದು ಪಡೆದು ಕೊಂಡಿರುವ ಸ್ವರೂಪವನ್ನು ಅರ್ಥೈಸಲು ಈ ವಿಚಾರಗಳಿಗೆಲ್ಲ ಬರಬೇಕಾಯಿತು. ಹೀಗಾಗಿ ವಿಜಯನಗರ ಸಾಮ್ರಾಜ್ಯದ ಭಾಗವಾಗಿದ್ದ ಅವತ್ತಿನ ಹಳ್ಳಿಗಳನ್ನು ಅವ್ಯಕ್ತ ಸಂಸ್ಕೃತಿಗಳ ನೆಲೆಯಲ್ಲಿ ಪರಿಶೀಲಿಸಲೇಬೇಕು. ನಿಸರ್ಗದ ವಿಶ್ವಾತ್ಮಕ ನಂಬಿಕೆಗಳನ್ನು ಯಾವ ಕಾಲದ ಜನಪದವೂ ಅಂತಹ ಅನೇಕ ಆಚರಣೆಗಳನ್ನು ಅಳವಡಿಸಿಕೊಂಡು ಬಂದಿವೆ. ಆ ಅಂಶಗಳನ್ನು ಮುಂದಿನ ಸಂದರ್ಭಗಳಲ್ಲಿ ಅವಲೋಕಿಸುವ. ಈ ಹಂತದಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವಿದೆ. ಅದು ಗತಕಾಲದಲ್ಲಿದ್ದು ಈಗ ಕಳೆದು ಹೋಗಿರುವ ಹಂಪಿಯ ಮೃತಗ್ರಾಮಗಳ ಕುರುಹುಗಳು. ಆ ಗ್ರಾಮಗಳು ವಿಶ್ವ ಪರಂಪರೆಯ ಇಂದಿನ ಪಟ್ಟಿಯಲ್ಲಿ ಇಲ್ಲ.

ಕಣ್ಮರೆಯಾದ ಗತ ಗ್ರಾಮಗಳು

ಹಂಪಿಯ ಮಧ್ಯಯುಗೀನ ಗ್ರಾಮಗಳ ಚರಿತ್ರೆಯನ್ನು ತಿಳಿಯುವುದು ಇಲ್ಲಿ ಅವಶ್ಯವಿಲ್ಲ ದಿದ್ದರೂ ವಿಶ್ವಪರಂಪರೆಯ ನೆಲೆಯ ಕಾರಣಕ್ಕೆ ಆ ಸಂಗತಿಗಳನ್ನು ಪ್ರಸ್ತಾಪಿಸಬಹುದು. ವಿಜಯನಗರ ಪತನದ ಜೊತೆಗೇ ಹಲವಾರು ಹಳ್ಳಿಗಳು ನಾಶವಾದವು. ಸಾಮ್ರಾಜ್ಯ ನಾಶವಾದ ದ್ದಕ್ಕಿಂತಲೂ ದೊಡ್ಡ ನಷ್ಟ ಎಂದರೆ ಆ ಕಾಲದ ಗ್ರಾಮಗಳ ಅವಸಾನ. ಸಾಮ್ರಾಜ್ಯಗಳ ಅಗತ್ಯಕ್ಕಾಗಿ ಹುಟ್ಟಿ ಅವುಗಳ ಸುಖಕ್ಕಾಗಿ ದುಡಿದು ಸಾಮ್ರಾಜ್ಯದ ಜೀತಕ್ಕೆಂದೇ ಸ್ಥಾಪಿತವಾಗಿದ್ದ ಹಳ್ಳಿಗಳು ಸಾಮ್ರಾಜ್ಯದ ಕಾರಣದಿಂದಲೇ ಕಣ್ಮರೆಯಾಗಿರುತ್ತವೆ. ಹಂಪಿಯ ಪರಿಸರದಲ್ಲಿ ಅಂತಹ ಗ್ರಾಮಗಳ ಪಳೆಯುಳಿಕೆಗಳು ಆ ಬಗೆಯ ಅವ್ಯಕ್ತ ಚರಿತ್ರೆಯನ್ನು ವಿಷಾದದಿಂದ ಬಿಟ್ಟುಹೋಗಿವೆ. ಆ ಹಳ್ಳಿಗಳು ವಿಶ್ವಪರಂಪರೆಯ ಇಂದಿನ ಪಟ್ಟಿಯಲ್ಲಿರುವ ಹಳ್ಳಿಗಳಿಗಿಂತಲೂ ಬಹಳ ಮುಖ್ಯ. ಅವುಗಳೇ ನಿಜವಾದ ಅವ್ಯಕ್ತ ಸಂಸ್ಕೃತಿಯ ತಾಣಗಳಾಗಿದ್ದುದು. ಅವ್ಯಕ್ತ ಪರಂಪರೆಯ ಆ ಕರುಹುಗಳು ಆ ಗತಿಸಿದ ಹಳ್ಳಿಗಳಲ್ಲೇ ಮರೆಯಾಗಿವೆ. ಕಳೆದು ಹೋದ ಹಳ್ಳಿಗಳನ್ನು ಗುರುತಿಸುವ ಕೆಲಸವೇ ಆಗಿಲ್ಲ. ವಕ್ಕಲೆಬ್ಬಿಸಲಾಯಿತೊ ತಾವೇ ವಕ್ಕಲೆದ್ದವೊ ಒಟ್ಟಿನಲ್ಲಿ ಎಲ್ಲಿಗೆ ಕಣ್ಮರೆಯಾದವೊ ಎಂಬ ವಿವರವಾದರೂ ಸಿಗದು. ವಿಜಯನಗರದ ಪತನದ ಜೊತೆಗೆ ಹೇಗೆ ಕಳೆದು ಹೋದವೊ ಎಂಬುದಕ್ಕೆ ಜನಪದ ಪರಂಪರೆಗಳಲ್ಲೂ ತಕ್ಕ ಸಾಕ್ಷ್ಯಗಳು ಇಲ್ಲ.

ಹಂಪಿ ಪರಿಸರದ ಬೆಟ್ಟಗುಡ್ಡಗಳಲ್ಲಿ ನೈಸರ್ಗಿಕ ಗ್ರಾಮಗಳು ಅಸ್ತಿತ್ವದಲ್ಲಿದ್ದವು. ಬೆಟ್ಟಗುಡ್ಡಗಳ ನಡುವಿನ ಪ್ರಶಸ್ತ ಬಯಲು ಹಾಗು ಕಣಿವೆಗಳಲ್ಲಿ ನೈಸರ್ಗಿಕ ಸವಲತ್ತುಗಳು ಸಾಕಷ್ಟಿದ್ದವು. ಬೆಟ್ಟಗುಡ್ಡಗಳ ಆಯಕಟ್ಟಿನಲ್ಲಿ ಒಂದು ಕಾಲದ ಪಶುಪಾಲಕ ಸಮಾಜಗಳೇ ವಾಸದ ನೆಲೆಯಾಗಿ ಆರಂಭಿಸಿ ಹಸಿರು ಗ್ರಾಮಗಳನ್ನೆ ರೂಪಿಸಿಕೊಂಡಿರಬೇಕು. ಅಲೆಮಾರಿ ಸಮುದಾಯದ ಕೊನೆಯ ಕಳಚಿದ ಕೊಂಡಿಯಂತಹ ದಿಕ್ಕೆಟ್ಟ ಪಶುಪಾಲಕ ವ್ಯವಸ್ಥೆಯ ಕಳಚಿದ ಕೊಂಡಿಯ ಸಮಾಜಗಳು ಈಗಲೂ ಹಂಪಿಯ ಅವತ್ತಿನ ಆ ನೆಲೆಗಳಿಗೆ ಬಂದು ಸಾಕುಪ್ರಾಣಿಗಳ ಜೊತೆ ಹಿಂತಿರುಗುವ ಕ್ರಮವಿದೆ. ಬೆಟ್ಟಸಾಲುಗಳ ಮಧ್ಯದ ವಿಶಾಲ ಹಾಸು ಬಂಡೆಯ ಮೇಲೆ ಕೃಷಿಯೋಗ್ಯ ಕಟ್ಟೆಗಳನ್ನು ರೂಪಿಸಿಕೊಳ್ಳಲಾಗಿತ್ತು. ಆದಿಮ ಕಾಲದಿಂದಲೂ ಇದ್ದ ನೀರಿನ ನೆಲೆಗಳಿಂದ ಹಂಪಿ ಪರಿಸರವು ಆದಿಮ ಗ್ರಾಮಗಳ ನೆಲೆಗೂ ಸಮರ್ಥವಾಗಿತ್ತು. ಆದಿಮ ಜನ ವಸತಿ ನೆಲೆ, ಆದಿಮ ಗ್ರಾಮಗಳ ನೆಲೆ, ಮಹಾಸಾಮ್ರಾಜ್ಯದ ರಾಜಧಾನಿಯ ನೆಲೆ ಎಂಬ ಈ ಮೂರೂ ಹಂತಗಳಲ್ಲಿ ಆದಿಮ ಪರಿಸರದ ಗ್ರಾಮಗಳ ಸ್ವರೂಪ ಅನೇಕ ಮಾರ್ಪಾಟುಗಳಿಗೆ ಒಳಗಾಗಿದೆ. ಇಲ್ಲಿ ಊಹಿಸಬಹುದಾದ ಸಂಗತಿ ಏನೆಂದರೆ ವಿಜಯನಗರ ಸಾಮ್ರಾಜ್ಯ ಬಲಿಷ್ಟವಾಗಿ ಬೇರು ಬಿಡುತ್ತಿದ್ದಂತೆಯೇ ಬೆಟ್ಟಗುಡ್ಡಗಳಲ್ಲಿ ಇದ್ದ ಗ್ರಾಮಗಳನ್ನು ಸ್ಥಳಾಂತರಿಸಿರಬೇಕು. ರಾಜಧಾನಿ ಎಂಬ ಮಹಿಮೆಗೆ ಒಳಗಾಗುತ್ತಿದ್ದಂತೆಯೇ ಹಳೆ ಹಳ್ಳಿಗಳು ಅಸ್ತಿತ್ವ ಕಳೆದುಕೊಂಡಿರುವ ಸಾಧ್ಯತೆಗಳಿವೆ. ಅಲ್ಲದೆ ಪಶುಪಾಲಕ ವರ್ಗಗಳ ಹಳ್ಳಿಗಳನ್ನು ರಾಜಧಾನಿಯ ಗಡಿಯ ಆಚೆಗೆ    ಎತ್ತಿ ಹಾಕಿರುವುದು ಅಸಾಧ್ಯವೇನಲ್ಲ. ಈ ಪ್ರಕ್ರಿಯೆ ಏನೆ ಆಗಿರಲಿ ಹೀಗೆ ಸಾಮ್ರಾಜ್ಯಗಳ ಕಾಲಕ್ಕೆ ಹಂಪಿ ಪರಿಸರದಲ್ಲಿ ಗ್ರಾಮಗಳು ಇದ್ದವೆಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ.

ಪರಂಪರೆ ಮರೆತ ಹಂಪಿ ಗ್ರಾಮಗಳು

ಅವ್ಯಕ್ತ ಸಂಸ್ಕೃತಿಯ ನೆಲೆಗಳಾಗಿದ್ದ ಗ್ರಾಮಗಳೇ ಅಳಿದು ಹೋದದ್ದು ಚರಿತ್ರೆಯ ವ್ಯಂಗ್ಯದಂತಿದೆ. ಪ್ರತ್ಯೇಕವಾಗಿ ಇಂತಹ ಕಳೆದು ಹೋದ ಗ್ರಾಮಗಳ ಅಧ್ಯಯನದ ಮೂಲಕ ಆ ಕಾಲದ ಅವ್ಯಕ್ತ ಸಂಸ್ಕೃತಿಯ ಕೊಂಡಿಗಳನ್ನು ವರ್ತಮಾನದ ಹಂಪಿ ಗ್ರಾಮಗಳ ಜೊತೆ ಹೊಂದಿಸಿಕೊಳ್ಳಬಹುದು. ಇದು ಜರೂರಾಗಿ ಆಗ ಬೇಕಾದ ಪರಂಪರೆಯ ಶೋಧ. ಅವ್ಯಕ್ತ ಸಂಸ್ಕೃತಿಯ ಪರಿಸರ ಪ್ರಜ್ಞೆಗೆ ಇವತ್ತಿನ ಗ್ರಾಮಗಳಲ್ಲಿ ಗತಕಾಲದ ನೆನಪುಗಳಿಲ್ಲ. ಹಂಪಿಯ ಗ್ರಾಮಗಳಲ್ಲಿ ಅವತ್ತಿನ ಹಳ್ಳಿಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅಲ್ಲೊಂದು ಊರಿತ್ತಂತೆ ಯಾವುದೊ ಶಾಪದಿಂದ ಹಾಳಾಗಿ ಹೋಯಿತಂತೆ ಎಂಬ ಒಂದೇ ಬಗೆಯ ವಿವರ ಮಾತ್ರ ಅಮೂರ್ತವಾಗಿ ಸಿಗುತ್ತದೆ. ಆ ಶಾಪ ಯಾವುದು ಎಂಬುದನ್ನು ಜನಪದರು ಖಚಿತವಾಗಿ ಹೇಳಲಾರರು. ವಿಜಯನಗರ ಸಾಮ್ರಾಜ್ಯದ ವಿನಾಶಕೂಡ ಅನೇಕ ಹಳ್ಳಿಗಳು ಕಳೆದು ಹೋಗಲು ಕಾರಣವಾಗಿದೆ. ಒಂದು ಕಾಲಕ್ಕೆ ಹಳ್ಳಿಗಳಿದ್ದ ನೆಲೆಯನ್ನೆ ವಿಜಯನಗರವಾಗಿ ವ್ಯಾಪಿಸಿಕೊಂಡಿದ್ದರಿಂದ ಆ ಹಳ್ಳಿಗಳೇ ಸಾಮ್ರಾಜ್ಯವೊಂದರ ನಗರವಾಗಿ ಮಾರ್ಪಟ್ಟವು. ಈಗಲೂ ಕೆಲ ಹಳ್ಳಿಗಳು ಹಂಪಿಯ ಕೇಂದ್ರದಲ್ಲಿದ್ದ ಅಂತಹ ಉಪ ಪಟ್ಟಣಗಳಿಗೆ ಈ ಕಾಲದಲ್ಲಿ ಇರುವಂತೆ ಆಗಲೂ ಪ್ರತ್ಯೇಕ ನಿರ್ಧಿಷ್ಟ ಹೆಸರುಗಳಿದ್ದವು. ಅಂತಹ ಪೇಟೆ ಪಟ್ಟಣ ಪುರ ಅಗ್ರಹಾರ ನಗರಗಳೆಲ್ಲವೂ ಒಂದೇ ಬಾರಿಗೆ ಕೇಂದ್ರ ಸ್ಥಾನದಲ್ಲಿ ಹಾಳಾಗಿ ಪಾಳಾದದ್ದು ಈಗ ಇತಿಹಾಸ. ಅವುಗಳ ಹೆಸರುಗಳು ಜನರ ರೂಢಿಯಲ್ಲಿ ತಪ್ಪಿಹೋಗಿಯೆ ಎಷ್ಟೋ ವರ್ಷಗಳು ಉರುಳಿವೆ. ಪ್ರವಾಸಿ ಬರಹಗಳಲ್ಲಿ ಶಾಸನಗಳಲ್ಲಿ ಆಕರ ಗ್ರಂಥಗಳಲ್ಲಿ ಮಾತ್ರ ಅಂತಹ ಸ್ಥಳ ಉಲ್ಲೇಖಗಳು ಸಿಗುತ್ತವೆ.

ಹಂಪಿ ಪರಿಸರದ ಕೇಂದ್ರ ಭಾಗದಿಂದ ಎರಡನೆ ಸುತ್ತಿನ ನೆಲೆಗೆ ಬಂದರೆ ಕೆಲ ಹಳ್ಳಿಗಳು ಜೀವಂತವಾಗಿವೆ ಕೆಲವು ರೂಪಾಂತರಗೊಂಡಿವೆ. ಹೇಮಕೂಟ, ರತ್ನಕೂಟ, ಆನೆಗೊಂದಿಯಂತಹ ಪ್ರಖ್ಯಾತ ನೆಲೆಗಳು ಜೀವಂತವಿದ್ದರೂ ಅವು ಪಳೆಯುಳಿಕೆಯಂತೆಯೂ ಇವೆ. ಆನೆಗೊಂದಿ ಮಾತ್ರ ಪ್ರಾಚೀನ ಆದಿ ಕಾಲದ ವಸತಿ ನೆಲೆಯಿಂದ ಹಿಡಿದು ಇಪ್ಪತ್ತೊಂದನೆ ಶತಮಾನದವರೆಗಿನ ಅವಸ್ಥಾಂತರಗಳನ್ನೆಲ್ಲ ಗರ್ಭೀಕರಿಸಿಕೊಂಡು ಸಾಗುತ್ತಲೇ ಬಂದಿದೆ. ಬೆಟ್ಟ ಕಣಿವೆಗಳ ಇಂತಹ ನೆಲೆಗಳು ನಿಸರ್ಗದ ಭದ್ರ ಕವಚದಿಂದ ಕಾಲದ ಜೊತೆ ಮುಖಾ ಮುಖಿಯಾಗಿ ಪ್ರತಿರೋಧ ಸಾಮರ್ಥ್ಯವನ್ನು ಬೆಳಸಿಕೊಂಡಿವೆ. ಕಣ್ಮರೆಯಾದ ಹಳ್ಳಿಗಳು ಅನೇಕ ವಿಧದಲ್ಲಿ ಬೇರೆ ಬೇರೆ ಗ್ರಾಮಗಳಲ್ಲಿ ಲೀನವಾಗಿವೆ. ಕಮಲಾಪುರ ಆ ರೀತಿಯಲ್ಲಿ ಅನೇಕ ಹಳ್ಳಿಗಳನ್ನು ತನ್ನೊಳಗೆ ಉದುಗಿಸಿಕೊಂಡಿದೆ. ವಿಜಯನಗರ ಪತನವಾದಾಗ ವಿಶೇಷವಾಗಿ ಕಮಲಾಪುರ ವಿಸ್ತೃತವಾಯಿತು. ನಗರದ ಆಸುಪಾಸಿನ ಬೆಟ್ಟಗಳಲ್ಲಿದ್ದ ಹಳ್ಳಿಗಳವರು ಕೇಂದ್ರದ ಹೊರಗಿದ್ದ ಹಳ್ಳಿಗಳಿಗೆ ಸ್ಥಾನಾಂತರಗೊಂಡಿದ್ದಾರೆ. ಕಮಲಾಪುರ ವಿಶೇಷವಾಗಿ ವಿಜನಗರದ ಸೈನ್ಯ ಹಾಗೂ ಇತರೆ ಸೇವೆಗಳಲ್ಲಿದ್ದ ಜನವರ್ಗಗಳನ್ನು ಕರೆದು ಕೊಂಡಿತ್ತೆಂದು ಊಹಿಸಬಹುದು. ಹೊಸಪೇಟೆ ಕೂಡ ಆ ಕಾಲಕ್ಕೆ ವಿಜನಗರದಲ್ಲಿದ್ದ ಜನವಸತಿಗೆ ಬಹುದೊಡ್ಡ ಆಶ್ರಯ ತಾಣವಾಗಿರಲೇಬೇಕು. ಕಮಲಾಪುರ ಹಾಗೂ ಹೊಸಪೇಟೆಗಳಲ್ಲಿರುವ ಬೇಡರ ಏಳು ಕೇರಿಗಳು ವಿಜನಗರ ಕಾಲದ ಪತನದ ಹಳ್ಳಿಗಳಿಂದ ಬಂದ ಬೇಡ ಸಮುದಾಯಗಳಿಗೆ ಸ್ಥಳಾವಕಾಶ ನೀಡಿವೆ. ಇಂದು ಇವುಗಳ ಸ್ವರೂಪ ಬದಲಾಗಿದ್ದರೂ ಚರಿತ್ರೆಯ ನೆನ್ನೆಯ ನೆನಪನ್ನು ಇಂದಿಗೂ ಉಳಿಸಿಕೊಂಡಿವೆ.

ಲೂಟಿಕೋರರಿಂದಲೂ ಬೆಟ್ಟಗುಡ್ಡಗಳ ಮರೆಯಲ್ಲಿದ್ದ ಹಳ್ಳಿಗಳು ಹೆದರಿ ತಮ್ಮ ನೆಲೆ ಯನ್ನು ಬದಲಿಸಿಕೊಂಡಿರುವ ಸಾಧ್ಯತೆಯೂ ಇದೆ. ಈ ಪರಿಸ್ಥಿತಿಯಲ್ಲಿ ಪರಿಸರ ಪ್ರಜ್ಞೆಯ ಅವ್ಯಕ್ತ ಸಂಸ್ಕೃತಿಯ ಜೀವನ ಕ್ರಮವೇ ಬದಲಾಗಿ ಹೋಯಿತು. ಈಗ ಉಳಿದುಕೊಂಡಿರುವ ಹಳ್ಳಿಗಳು ಕೂಡ ಮೊದಲಿನ ಸ್ವರೂಪವನ್ನು ಕಳೆದುಕೊಂಡಿವೆ. ಹೀಗಾಗಿ ಮರೆತುಹೋದ ಮಹಾ ಸಾಮ್ರಾಜ್ಯದಲ್ಲಿ ಮರೆತುಹೋದ ಹಳ್ಳಿಗಳನ್ನು ನೆನೆಯುವವರು ಯಾರೂ ಇಲ್ಲವಾಗಿದ್ದಾರೆ. ಒಂದು ಸಾಮ್ರಾಜ್ಯವು ಮುಳುಗುತ್ತಿರುವಾಗ ಅದು ಕೇವಲ ಭೌತಿಕವಾಗಿ ಮಾತ್ರ ಅಳಿಯುತ್ತಿರುವುದಿಲ್ಲ. ಮುಖ್ಯವಾಗಿ ಅವ್ಯಕ್ತ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿರುತ್ತದೆ. ಅಂತಹ ಜನಜೀವನವೂ ಮೃತವಾಗುತ್ತಿರುತ್ತದೆ. ಜ್ಞಾನ ಪರಂಪರೆಗಳೂ ಕಣ್ಮರೆಯಾಗುತ್ತಿರುತ್ತವೆ. ಸಾಮ್ರಾಟರು ಹತರಾದ ಕೂಡಲೆ ಅಲ್ಲಿ ಸ್ಥಾಪಿತವಾಗಿದ್ದ ಎಲ್ಲ ಸಾಮಾಜಿಕ ವ್ಯವಸ್ಥೆಯೂ ಕುಸಿದು ಬೀಳುತ್ತದೆ. ಹಂಪಿ ಪರಿಸರದ ಗ್ರಾಮಗಳ ಈ ಬಗೆಯ ಗತವನ್ನು ಅರಿಯದೆ ವರ್ತಮಾನದ ಹಳ್ಳಿಗಳ ಅವ್ಯಕ್ತ ಸಂಸ್ಕೃತಿಯನ್ನು ಅರ್ಧಮಾಡಿಕೊಳ್ಳಲು ಸಾಧ್ಯ ವಾಗುವುದಿಲ್ಲ.

ಮರೆತು ಹೋದ ಕೆಲವು ಹಳ್ಳಿಗಳಲ್ಲಿ ಈಗ ವಲಸಿಗರು ಬಂದು ನೆಲೆಸಿದ್ದಾರೆ. ವಿಠಲಪುರ, ಕೃಷ್ಣಾಪುರ, ರಾಜಾಪುರ, ಅಚ್ಯುತಪುರ, ತಳವಾರಘಟ್ಟ, ಹಳೆಪಟ್ಟಣ, ಪಂಪಾ ಸರೋವರ ಮುಂತಾದ ಸ್ಥಳಗಳು ಒಂದು ಕಾಲಕ್ಕೆ ಗ್ರಾಮ ಸ್ವರೂಪವೂ ಆಗಿ ವಿಜಯನಗರ ಸಾಮ್ರಾಜ್ಯದ ಪ್ರಮುಖ ಪುರಗಳೂ ಅಗ್ರಹಾರಗಳೂ ಆಗಿದ್ದವು. ಈ ಹಳೆಯ ಪಟ್ಟಣಗಳಲ್ಲಿ ಈಗ ಜನವಸತಿ ಇಲ್ಲ. ಸಂಪೂರ್ಣವಾಗಿ ಕಣ್ಮರೆಯೇ ಆಗಿ ಹೋದ ಗೋರಿ ಕೆಳಗಿನ ಗ್ರಾಮವು ವಿಷ್ಣುಪಾದ ಬೆಟ್ಟದ ತಳದಲ್ಲಿ ಇತ್ತೆಂದು ಪ್ರವಾಸಿ ಬರಹಗಳಲ್ಲಿ ತಿಳಿಯುತ್ತೇವೆ. ಶಾಸನಗಳು ಕೂಡ ಈ ಬಗ್ಗೆ ಲಭ್ಯ. ಆದರೆ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ್ದ ಇಂತಹ ಒಂದು ಗ್ರಾಮ ಸಂಪೂರ್ಣವಾಗಿ ಕಣ್ಮರೆಯೇ ಆಗಿ ಹೋಯಿತು. ಇಂತಹ ಎಷ್ಟೋ ಹಳ್ಳಿಗಳ ಮಾಹಿತಿಯನ್ನು ಹುಡುಕುವುದು ಕೂಡ ಬಹಳ ಕಷ್ಟ. ಇಲ್ಲೊಂದು ಊರು ಇತ್ತಂತೆ ಎಂದು ಹೇಳಲಾಗುತ್ತ ದೆಯೇ ವಿನಃ ಅದು ಯಾವ ಊರು ಎಂಬ ಖಚಿತ ವಿವರ ಸಿಗುವುದಿಲ್ಲ. ಆದರೆ ಅಲ್ಲಿ ಕಾಯುವ ಪಾಳುಗುಡಿಗಳು, ಮಂಟಪಗಳು, ಜನವಸತಿ ಕುರುಹುಗಳು ನಮಗೆ ಗತಿಸಿ ಹೋದ ಗ್ರಾಮದ ನೆನಪನ್ನು ಮಾತ್ರ ಹೊಳೆಯಿಸುತ್ತವೆ.

ಚರಿತ್ರೆಯ ಸಮಾಧಿ ಮೇಲೆ ಎದ್ದ ಗ್ರಾಮಗಳು

ಮೂರನೇ ಸ್ತರದ ಹಂಪಿ ಪರಿಸರದ ಗ್ರಾಮಗಳು ವರ್ತಮಾನದ ಮೂಲಕ ತೆರೆದುಕೊಳ್ಳುತ್ತವೆ. ಈ ಹಂತದ ಎಲ್ಲ ಹಳ್ಳಿಗಳು ಒಂದೇ ಬಗೆಗಯ ಚಾರಿತ್ರಿಕ ಸಂಸ್ಕೃತಿಯನ್ನು ಪಡೆದಿಲ್ಲ. ಮೂರನೆ ಹಂತದ ಹಳ್ಳಿಗಳು ಪರಂಪರೆಯ ಬೇರನ್ನು ಗಾಢವಾಗಿ ತಮ್ಮ ಅವ್ಯಕ್ತ ಸಂಸ್ಕೃತಿಗಳಲ್ಲಿ ಉಳಿಸಿಕೊಂಡವಲ್ಲ. ವಿಜಯನಗರ ಪತನವಾದ ಎಷ್ಟೋ ವರ್ಷಗಳ ನಂತರ ವಲಸೆ ಬಂದ ಹೊರಗಿನ ಜನ ವರ್ಗಗಳು ಕಟ್ಟಿಕೊಂಡ ಹಳ್ಳಿಗಳೇ ಮೂರನೆ ಹಂತದಲ್ಲಿ ಪ್ರಬಲವಾಗಿ ಕಾಣುವುದು. ಅಂತಹ ಕೆಲ ಹಳ್ಳಿಗಳೆಂದರೆ ವೆಂಕಟಾಪುರ ಕ್ಯಾಂಪ್, ಗಾಳೆಮ್ಮನ ಗುಡಿ, ಸಾಣಾಪುರ, ಹನುಮನ ಹಳ್ಳಿ, ಹೊಸ ಮಲಪನಗುಡಿ, ಹೆಚ್. ಪಿ. ಸಿ., ರಾಮಾಪುರ, ಲಕ್ಷ್ಮೀಪುರ, ಕೃಷ್ಣಾಪುರ, ವಿರುಪಾಪುರ ಗಡ್ಡೆ, ಅಂಜನ ಹಳ್ಳಿ, ರಂಗಾಪುರ, ಚಿಕ್ಕರಾಮಾಪುರ, ಮಲ್ಲಾಪುರ ಹೀಗೆ ಬಹಳಷ್ಟು ಹಳ್ಳಿಗಳು ಗತ ಸಾಮ್ರಾಜ್ಯದ ನಂತರ ಹುಟ್ಟಿಕೊಂಡ ಊರು ಗಳಾಗಿವೆ. ದೀರ್ಘಕಾಲೀನ ಪರಂಪರೆಗಳೇ ಇಲ್ಲಿನ ಬಹುಪಾಲು ಹಳ್ಳಿಗಳಿಗೆ ಇಲ್ಲ. ತುಂಗಭದ್ರಾ ನದಿಯ ಬೆಟ್ಟಗುಡ್ಡಗಳ ಮರೆಯಲ್ಲಿ ಹುಟ್ಟಿಕೊಂಡ ಈ ಹಳ್ಳಿಗಳು ಹೊರಗಿನಿಂದ ಬಂದವರಿಂದಲೇ ರೂಪುಗೊಂಡವು ಎಂಬುದು ಗಮನಿಸಬೇಕಾದ ಸಂಗತಿ. ಹೊಸ ಊರುಗಳು ವಿಜಯನಗರ ಸಾಮ್ರಾಜ್ಯದ ಸಂಬಂಧವನ್ನೆ ಮಾಡಲು ಈತನಕ ಸಾಧ್ಯವಾಗಿಲ್ಲ. ಮುಂದೆಯೂ ಅಂತಹ ಭಾವನೆ ಬರಲಾರದೇನೊ. ಬಲವಾದ ಚಾರಿತ್ರಿಕ ಬೇರುಗಳಿಂದ ಮಾತ್ರವೇ ಸ್ಥಳೀಯ ವಾದ ಪರಂಪರೆ, ಸಂಸ್ಕೃತಿ, ಭಾಷೆ ಜನಜೀವನ ಬೆಳೆಯುವುದು. ನಡುವಿನಿಂದ ಬೇರು ಕತ್ತರಿಸಿಕೊಂಡು ಬಂದ ಜನವರ್ಗಗಳು ಸ್ಥಳೀಯ ಪರಂಪರೆಯ ಬೇರುಗಳ ಜೊತೆ ಕಸಿ ಮಾಡಿಕೊಳ್ಳಲಾರವು. ರೆಂಬೆಕೊಂಬೆಗಳನ್ನು ಅದರಲ್ಲೂ ಹೊಂದುವಂತಹ ಗುಣ ಪಡೆದ ಗಿಡಮರಗಳನ್ನು ಕಸಿ ಮಾಡಬಹುದು. ಇಲ್ಲವಾದರೆ ಕಸಿ ಅಸಾಧ್ಯ. ಚರಿತ್ರೆಯಲ್ಲೂ ಕೂಡ ಇಂತಹ ಸಂಬಂಧವನ್ನು ಅನ್ವಯಿಸಿ ಜನವರ್ಗದ ರೀತಿನೀತಿಯನ್ನು ತಿಳಿಯಬಹುದು.

ಹೊಸದಾಗಿ ತಲೆ ಎತ್ತಿದ ಹಂಪಿ ಪರಿಸರದ ಮೂರನೆ ಹಂತದ ಗ್ರಾಮಗಳು ಅವ್ಯಕ್ತ ಸಂಸ್ಕೃತಿಯ ನೈಸರ್ಗಿಕ ತಿಳುವಳಿಕೆಯನ್ನೆ ನಿರಾಕರಿಸಿ ಬದುಕುವ ಅನ್ಯಕ್ರಮಗಳನ್ನು ಅಳವಡಿಸಿ ಕೊಂಡಿರುವುದರಿಂದ ವಿಶ್ವಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆಯಾದ ಈ ಹಳ್ಳಿಗಳು ಅನೇಕ ಸಮಸ್ಯೆಗಳನ್ನು ನಿರ್ಮಿಸುವಂತಾಗಿವೆ. ಗತ ಇತಿಹಾಸದ ಸಂಬಂಧವಿಲ್ಲದಿದ್ದಾಗ, ಗ್ರಾಮೀಣ ಪರಂಪರೆಯ ಖಚಿತ ಕುರುಹುಗಳು ಇಲ್ಲದಿದ್ದಾಗ, ಸಂಸ್ಕೃತಿಯ ತಕ್ಕ ನೆಲೆ ಇಲ್ಲದಿದ್ದಾಗ ಹೇಗೆ ವಲಸೆ ಬಂದ ಸಮುದಾಯಗಳು ಅತಂತ್ರ ಪರಂಪರೆಯನ್ನು ರೂಪಿಸಿಕೊಳ್ಳುತ್ತವೆ ಹಾಗೂ ಏಕೆ ಅವು ಹಿಂದೆ ಆಗಿ ಹೋಗಿದ್ದ ಐತಿಹಾಸಿಕ ಪರಂಪರೆಯನ್ನು ಅಲಕ್ಷಿಸುತ್ತವೆ ಎಂಬುದಕ್ಕೆ ಮಾದರಿಯಂತೆ ಹೊಸ ಗ್ರಾಮಗಳು ಇವೆ. ಗಂಗಾವತಿ ತಾಲೂಕಿನಲ್ಲಿ ಬರುವ ಹಂಪಿ ಪ್ರದೇಶದ ಹಳ್ಳಿಗಳು ಈ ಮಾತಿಗೆ ಹೆಚ್ಚು ಹತ್ತಿರವಾಗಿವೆ. ಹೆಚ್ಚೆಂದರೆ ಈ ಹಳ್ಳಿಗಳು ಕೆಲವೇ ವರ್ಷಗಳ ಒಳಗಿನ ಅವಧಿಯವು. ಅದರಲ್ಲೂ ತುಂಗಭದ್ರಾ ನದಿಗೆ ಅಣೆಕಟ್ಟು ಕಟ್ಟಿದ ನಂತರವೇ ಇಂತಹ ಹಳ್ಳಿಗಳು ರೂಪುಗೊಂಡದ್ದು. ಆಂಧ್ರ ಮತ್ತು ತಮಿಳುನಾಡಿನಿಂದ ವಲಸೆ ಬಂದವರು ಈ ಹೊಸ ಹಳ್ಳಿಗಳ ನಿವಾಸಿಗಳಾದರು. ಸ್ಥಳೀಯರು ಅಲ್ಪ ಪ್ರಮಾಣದಲ್ಲಿ ನೆಲೆ ನಿಂತರು.

ಹಂಪಿ ಪರಿಸರವು ಪ್ರಾಚೀನ ಕರ್ನಾಟಕದ ಜನವರ್ಗಗಳ ಮೂಲ ನೆಲೆಗಳಲ್ಲಿ ಒಂದು ಎಂದು ಈ ಹಿಂದೆ ಪ್ರಸ್ತಾಪಿಸಿದ್ದೆ. ಇತಿಹಾಸದ ಚಲನೆಯಲ್ಲಿ ಆಕಸ್ಮಿಕಗಳು ನಿರ್ವಹಿಸುವ ಪಾತ್ರವು ತರ್ಕವನ್ನು ಮೀರಿದ್ದಾಗಿರುತ್ತದೆ. ವಿಜಯನಗರ ಸಾಮ್ರಾಜ್ಯದ ಮೇಲೆ ಆದ ದಾಳಿಯು ಹೆಚ್ಚು ಕಡಿಮೆ ಹೊರಗಿನವರದೇ. ಬಹಮನಿ ಸುಲ್ತಾನರ ಇಚ್ಛಾಶಕ್ತಿಯು ಸಾಮ್ರಾಜ್ಯದ ಮಹಾನಗರಿಯನ್ನು ನುಚ್ಚುನೂರು ಮಾಡಿತು. ಅದರೊಳಗೆ ನಮ್ಮವರ ಪಾಲು ಇದ್ದುದು ಬೇರೆ ಮಾತು. ಹಾಗೆ ಹತವಾದ ನಗರ ತನ್ನ ಮೂಲ ಹಳ್ಳಿಗಳ ಸಮೇತ ಕಳೆದು ಹೋಯಿತು. ಹಾಗೆ ಕಳೆದು ಹೋದ ಹಳ್ಳಿಗಳ ಸಮಾಧಿಗಳ ಮೇಲೆ ವಲಸೆ ಬಂದವರು ಸ್ಥಳೀಯ ಜನಜೀವನವನ್ನು ನಿರಾಕರಿಸಿ ತಮ್ಮ ಮೂಲ ಚಹರೆಗಳನ್ನು ಹೊರಗಿನಿಂದ ತಂದು ಸ್ಥಾಪಿಸಿಕೊಂಡರು. ಆದಿಮ ಜನವಸತಿಯ ನೆಲೆಯಾಗಿದ್ದ ಹಂಪಿಯು ಇಂದು ಹೊರಗಿನ ಶಕ್ತಿಗಳ ನಿಗೂಢ ತಾಣವೂ ಆಗುತ್ತಿರುವುದನ್ನು ಗಮನಿಸಿದರೆ ವರ್ತಮಾನದ ಪರಿಸರ ಪ್ರಜ್ಞೆ ಯಾವುದು ಚರಿತ್ರೆಯ ಪ್ರಜ್ಞೆ ಯಾವುದು ಎಂಬ ಹತ್ತಾರು ಪ್ರಶ್ನೆಗಳು ಕಾಡುತ್ತವೆ.

ಈ ಅಂಶಗಳನ್ನೆಲ್ಲ ಅನ್ಯವೆಂದು ಭಾವಿಸಿ ಅವ್ಯಕ್ತ ಚರಿತ್ರೆ ಅವ್ಯಕ್ತ ಸಂಸ್ಕೃತಿ ಹಾಗೂ ಸಮಕಾಲೀನತೆಯನ್ನು ಪರಿಶೀಲಿಸಲು ಬರುವುದಿಲ್ಲ. ಇವೆಲ್ಲವೂ ಒಂದರೊಳಗೊಂದು ಅಡಕವಾಗಿ ಹೊರಗಿನಿಂದ ಬಂದವರು ಎಂಬ ಮಾತು ಚರಿತ್ರೆ ಮತ್ತು ಸಂಸ್ಕೃತಿಯಲ್ಲಿ ಅನೇಕ ಬಗೆಯ ಭಿನ್ನತೆಗೆ ಎಡೆ ಮಾಡಿಕೊಡುತ್ತದೆ. ಹಂಪಿ ಪರಿಸರದ ನೈಸರ್ಗಿಕ ಪ್ರಜ್ಞೆಯನ್ನು ವಿಶ್ವಪರಂಪೆರೆಯ ಹಂಪಿಯ ಹಿನ್ನೆಲೆಯಲ್ಲಿ ನಿರ್ವಚಿಸಬೇಕಾದಾಗ ಒಳಗಿನವರು, ಹೊರಗಿ ನವರು ಎಂಬ ಭಿನ್ನತೆಯನ್ನು ಅನಿವಾರ್ಯವಾಗಿ ಮಾಡಿಕೊಂಡೇ ನೋಡಬೇಕಾಗುತ್ತದೆ. ಕಳೆದು ಹೋದ ಹಳ್ಳಿಗಳಿಗೆ ಬಂದವರು ಯಾರು, ಹೇಗೆ ಬಂದರು, ಹಾಗೆ ಬಂದವರು ಏನನ್ನು ಮಾಡುವರು, ಹೇಗೆ ಬದುಕುವರು, ಸ್ಥಳೀಯ ಪರಂಪರೆಯನ್ನು ಹೇಗೆ ಗ್ರಹಿಸಬಲ್ಲರು ಎಂಬ ಪ್ರಶ್ನೆಗಳನ್ನು ಪರಿಶೀಲಿಸಿದರೆ ಹಂಪಿ ಪರಂಪೆರೆಯ ಬಗ್ಗೆ ಅವರ ನಿಲುವು ಏನೆಂಬುದು ತಿಳಿಯುತ್ತದೆ. ವಿಜಯನಗರ ಸಾಮ್ರಾಜ್ಯದ ಯಾವ ಅರಿವೂ ಇಲ್ಲದೆ ಸ್ಥಳೀಯ ಜನಪದ ಪರಂಪೆಯ ಯಾವ ವಿವೇಕವೂ ಇಲ್ಲದೆ ಇಲ್ಲಿ ಬದುಕುವ ಜನವರ್ಗಗಳು ಹಂಪಿಯ ಪರಂಪರೆಯ ಬಗ್ಗೆ ಯಾವ ತಿಳುವಳಿಕೆಯನ್ನು ಕೊಡಲಾರರು. ಇಂತಹ ಪ್ರಶ್ನೆಗಳು ಇಲ್ಲಿ ಬಂದು ನೆಲೆಸಿದವರ ವಿರುದ್ಧದ ಅಸಮಾಧಾನವಲ್ಲ. ಪರಂಪರೆಯ ಅರಿವಿಲ್ಲದವರು ಪರಂಪರೆ ಯನ್ನು ರಕ್ಷಿಸಲಾರರು. ಹೊರಗಿನಂದ ಬಂದವರಿಗೆ ತಮ್ಮ ತಾತ್ಕಾಲೀನ ಅಸ್ತಿತ್ವ ಮುಖ್ಯ ವಾಗಿರುತ್ತದೆಯೇ ವಿನಃ ಐತಿಹಾಸಿಕ ಪರಂಪರೆಯ ರಕ್ಷಣೆ ಮುಖ್ಯವಾಗಿರುವುದಿಲ್ಲ. ಈ ಹಿನ್ನೆಲೆಯಿಂದ ನೋಡಿದರೆ ಹಂಪಿ ಪರಿಸರದ ಹೊಸ ಗ್ರಾಮಗಳೇ ವಿಶ್ವಪರಂಪರೆಯ ಘನತೆಗೆ ಪೂರಕವಾಗಿ ವರ್ತಿಸುತ್ತಿಲ್ಲ. ಈಗಿನ ಪರಿಸರದಲ್ಲಿ ಅವ್ಯಕ್ತ ಸಂಸ್ಕೃತಿಯ ಮಾಹಿತಿ ಪಡೆಯು ವುದು, ಅವರ ಚಾರಿತ್ರಿಕ ಪ್ರಜ್ಞೆಯನ್ನು ದಾಖಲಿಸುವುದು ಅನೇಕ ಬಾರಿ ಅಸಂಗತವಾಗಿ ಕಾಣುತ್ತದೆ.

ಇಂತವರಿಂದ ನಿಜವಾದ ಅವ್ಯಕ್ತ ಸಂಸ್ಕೃತಿಯ ನೈಸರ್ಗಿಕ ಜ್ಞಾನ ಸಿಗಲಾರದು. ಹಳ್ಳಿಗಳ ಮೂಲ ಬೇರುಗಳೇ ಮರೆಯಾದ ಮೇಲೆ ಅಲ್ಲಿ ಅವ್ಯಕ್ತ ಸಂಸ್ಕೃತಿಯು ನಾಶವಾಗಿರುತ್ತದೆ. ಮರೆತು ಹೋದ ಅವ್ಯಕ್ತ ಸಂಸ್ಕೃತಿಯೇ ಬಹುದೊಡ್ಡ ನಷ್ಟ. ಸಾಮ್ರಾಜ್ಯಗಳು ನಾಶವಾದರೆ ಆಗುವ ಅನಾಹುತಗಳು ಸುಲಭವಾಗಿ ಕಣ್ಣಿಗೆ ಕಾಣುತ್ತವೆ. ಆದರೆ ಸಂಸ್ಕೃತಿಯ ವಿನಾಶವು ಸಾಮ್ರಾಜ್ಯದ ವಿನಾಶಕ್ಕಿಂತಲೂ ದೊಡ್ಡದು. ಹಂಪಿ ಪರಿಸರದ ಅವ್ಯಕ್ತ ಸಂಸ್ಕೃತಿಯೇ ಮರೆತು ಹೋಗಿರುವಾಗ ಅದನ್ನು ಸಂಗ್ರಹಿಸುವುದಾದರೂ ಹೇಗೆ? ಅಳಿದುಳಿದ ಅಸ್ಪಷ್ಠ ಮಾಹಿತಿ ಯಿಂದ ಯಾವ ನಿರ್ಧಾರಕ್ಕೆ ಬರುವುದು? ಹೊರಗಿನವರ ಉಪೇಕ್ಷಿತ ಅಭಿಪ್ರಾಯಗಳು ಎಷ್ಟರಮಟ್ಟಿಗೆ ಉಪಯುಕ್ತ? ಕಲ್ಪಿತವಾಗಿರಬಹುದಾದ ಹಾಗೂ ತಪ್ಪು ತಿಳುವಳಿಕೆಯಿಂದಾಗಿರಬಹುದಾದ ವಿವರಗಳು ಚರಿತ್ರೆಗೆ ಹೇಗೆ ಪೂರಕ? ಇಂತಹ ಹತ್ತಾರು ಪ್ರಶ್ನೆಗಳು ಎದುರಾ ಗುತ್ತವೆ. ಮೂಲ ಹಳ್ಳಿಯ ಜನಪದವೇ ಕಾಲದಲ್ಲಿ ಗತಿಸಿ ಹೋಗಿದೆ. ಆದರ ತಲೆಮಾರುಗಳು ಚದುರಿ ಹೋಗಿವೆ. ವಿಸ್ಮೃತಿ ಕೂಡ ಅಳಿದುಳಿದ ತಲೆಮಾರುಗಳಿಗೆ ಅಪ್ಪಳಿಸಿದೆ. ಬದಲಾದ ಕಾಲ ಕೂಡ ಹಳೆಯದನ್ನು ನಿರಾಕರಿಸುವಂತೆ ಮಾಡಿದೆ. ವಸ್ತು ಸ್ಥಿತಿ ಹೀಗಿರುವಾಗ ನೈಸರ್ಗಿಕ ಪ್ರಜ್ಞೆಯು ಉಳಿಯುವಾದಾದರೂ ಹೇಗೆ? ಈ ಬಗೆಯ ಸಂಕಷ್ಟದಲ್ಲಿ ನೈಸರ್ಗಿಕ ಪ್ರಜ್ಞೆಯನ್ನು ತಿಳಿಯಲು ಅನೇಕ ತೊಡಕುಗಳಿವೆ. ಎಲ್ಲಡೆ ಬದಲಾದ ಕೃಷಿ ಪದ್ಧತಿಯಿಂದ ಉತ್ಪಾದನಾ ವಿಧಾನಗಳು ಪೂರ್ವದ ಜ್ಞಾನವನ್ನು ಉಪೇಕ್ಷಿಸಬೇಕಾದ ಒತ್ತಡ ಉಂಟಾಗಿದೆ. ಹಂಪಿ ಪರಿಸರದ ಹಳ್ಳಿಗಳು ತುಂಗಭದ್ರಾ ನೀರಾವರಿ ಪ್ರದೇಶವಾಗಿ ಮಾರ್ಪಟ್ಟ ಮೇಲೆ ವಲಸೆ ಬಂದವರು ಆಧುನಿಕ ಬೇಸಾಯ ಪದ್ಧತಿಯಲ್ಲಿ ಪರಂಪರಾಗತ ನೈಸರ್ಗಿಕ ಕೃಷಿ ವಿಧಾನಗಳನ್ನು ನಿರಾಕರಿಸಿದ್ದಾರೆ. ಹೀಗಾಗಿ ಗತ ಕಾಲದ ನೈಸರ್ಗಿಕ ತಿಳುವಳಿಕೆಯೇ ಮರೆತು ಹೋಗಿದೆ. ಹಂಪಿಯ ಪೂರ್ವ ಪರಿಸರ ಇಂದು ಉಳಿದಿಲ್ಲ. ಮರ ಗಿಡಗಳನ್ನು ಅವ್ಯಾಹತವಾಗಿ ಕಡಿದು ಉರುವಲಿಗೆ ಬಳಸುವುದು ನಿತ್ಯವೂ ನಡೆಯುತ್ತಿದೆ. ಬಂಡೆಗಳನ್ನು ಹೊಡೆದುರುಳಿಸುವ ಕ್ವಾರಿಗಳು ಕೂಡ ಈಗಾಗಲೇ ಹಂಪಿ ಪ್ರದೇಶದಲ್ಲಿ ಆರಂಭವಾಗಿವೆ. ಯಾವ ಬಂಡೆ ಕಲ್ಲು ಬೆಟ್ಟಗುಡ್ಡಗಳನ್ನು ಪವಿತ್ರವಾಗಿ ಜನಪದರು ಭಾವಿಸಿ ಅವನ್ನೆಲ್ಲ ತಮ್ಮ ಪರಿಸರದ ಭಾಗವಾಗಿ ಸಂಸ್ಕೃತಿಯ ಕೇಂದ್ರದಲ್ಲಿರಿಸಿ ಆರಾಧಿಸಲಾಗುತ್ತಿತ್ತೊ ಅವುಗಳನ್ನೆ ಈಗ ಮಾರಾಟದ ಸರಕಾಗಿಸಿಕೊಳ್ಳಲಾಗುತ್ತಿದೆ. ಅವ್ಯಕ್ತ ಸಂಸ್ಕೃತಿಯ ನೈಸರ್ಗಿಕ ಪ್ರಜ್ಞೆಯೇ ಇಲ್ಲದವರು ಹಂಪಿ ಪರಿಸರಕ್ಕೆ ಮೊದಲ ಶತ್ರುಗಳಾಗಿದ್ದಾರೆ.

ಹಂಪಿ ಗ್ರಾಮಗಳ ಮೇಲೆ ಜಾಗತೀಕರಣದ ನೆರಳು

ನಗರೀಕರಣ ಪ್ರಕ್ರಿಯೆ ಕೂಡ ಹಂಪಿ ಪರಿಸರದ ಮೇಲೆ ದಟ್ಟ ಪರಿಣಾಮ ಬೀರಿದೆ. ಜಾಗತೀಕರಣದ ದೂರ ಸಂಪರ್ಕ ತಂತ್ರಜ್ಞಾನದಿಂದ ಇಡೀ ಹಂಪಿಯೇ ಒಂದು ಜಾಗತಿಕ ಪ್ರವಾಸೋದ್ಯಮ ಮಾರುಕಟ್ಟೆಯ ಪ್ರಮುಖ ನೆಲೆಯಾಗಿದೆ. ಹೊಸದಾಗಿ ತಲೆ ಎತ್ತಿದ ನದಿ ದಂಡೆಯ ಹಳ್ಳಿಗಳು ಪ್ರವಾಸಿಗರ ಆಶ್ರಯದಲ್ಲಿ ಚರಿತ್ರೆಯ ನೆಪದಲ್ಲಿ ಮೋಜಿನ ತಾಣಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಸಾಣಾಪುರ, ರಾಮಾಪುರ, ವಿರುಪಾಪುರ ಗಡ್ಡೆಯಂತಹ ಪ್ರದೇಶಗಳು ವಿದೇಶಿಯರ ತಾಣಗಳಾಗಿ ಪರಿವರ್ತಿಸಿಕೊಂಡಿವೆ. ಪ್ರವಾಸೋದ್ಯಮವು ಹಂಪಿಯ ಸಹಜ ಪರಿಸರಕ್ಕೆ ಪೂರಕವಾಗಿ ಬೆಳೆಯುತ್ತಿಲ್ಲ. ಚರಿತ್ರೆಯ ಬೇರುಗಳನ್ನು ಮಾರಾಟದ ಸರಕಿನಂತೆ ತೋರುವ ಪ್ರವಾಸೋದ್ಯಮವು ಅವ್ಯಕ್ತ ಸಂಸ್ಕೃತಿಯ ಘನತೆಯನ್ನು ಕಾಯಲಾರದು. ಪ್ರವಾಸಿಗರ ಸುಖಕ್ಕೆ ನಮ್ಮ ಅವ್ಯಕ್ತ ಸಂಸ್ಕೃತಿ, ನಿಸರ್ಗ, ಚರಿತ್ರೆ ಬಳಕೆ ಆಗುವುದರಿಂದ ಲಾಭಕ್ಕಿಂತ ಅಪಾಯವೇ ಹೆಚ್ಚು. ಹಂಪಿ ಪರಿಸರದ ಅನೇಕ ಗ್ರಾಮಗಳು ಇಂತಹ ವಿದೇಶೀ ಆಕರ್ಷಣೆಗೆ ಬೇಕಾದಂತೆ ರೆಸಾರ್ಟ್‌ಗಳನ್ನು ತೆರೆದು ಅಲ್ಲಿ ಅವರ ಹಿತಕಾಯುವುದು ಚರಿತ್ರೆಯ ಹಿತಕ್ಕೆ ಮಹತ್ವವನ್ನೇನೂ ತಂದುಕೊಡುವುದಿಲ್ಲ. ಜಾಗತಿಕ ಪ್ರವಾಸೋದ್ಯಮಕ್ಕೆ ಹಂಪಿಯ ನೈಸರ್ಗಿಕ ನೆಲೆಯು ಮಾರಾಟವಾಗುತ್ತಿದೆ ಎಂಬುದು ಮೇಲು ನೋಟಕ್ಕೇ ತಿಳಿಯುತ್ತದೆ.

ಪುರಾತನ ಸಂಸ್ಕೃತಿಗಳು ರೂಪುಗೊಳ್ಳಲು ತಕ್ಕ ಅವಕಾಶ ಕಲ್ಪಿಸಿದ ಹಂಪಿಯ ನೈಸರ್ಗಿಕ ನೆಲೆಗಳನ್ನು ಮೋಜಿನ ತಾಣಗಳಾಗಿ ಪರಿವರ್ತಿಸಿ ಪ್ರವಾಸೋದ್ಯಮದ ಮಾರಾಟಕ್ಕೆ ಒಡ್ಡುವುದು ನೈತಿಕವಲ್ಲ. ಇಂತಹ ಪ್ರಕ್ರಿಯೆಯು ವಿಶ್ವ ಪರಂಪರೆಯ ನೆಲೆಯಲ್ಲಿ ಯೋಗ್ಯವಾದದ್ದಲ್ಲ. ಇದು ಹಳ್ಳಿಗಳ ನಿಸರ್ಗ ಪ್ರಜ್ಞೆಯನ್ನು ಭ್ರಷ್ಟಗೊಳಿಸುತ್ತದೆ. ಅಷ್ಟೇ ಅಲ್ಲ ಐತಿಹಾಸಿಕ ನೆಲೆಗಳ ಘನತೆಯನ್ನು ಕಳೆದು ಚರಿತ್ರೆಯನ್ನು ಮಾರಾಟ ಮಾಡುತ್ತದೆ. ಈ ಪ್ರವೃತ್ತಿ ವಿಸ್ತರಿಸಿದಾಗ ಅವ್ಯಕ್ತ ಸಂಸ್ಕೃತಿಗಳ ನಿಸರ್ಗನಿಷ್ಟ ಜೀವನ ಮೌಲ್ಯಗಳು ಕುಸಿಯುತ್ತವೆ. ಈಗಾಗಲೇ ಇಂತಹ ಎಲ್ಲ ಅನಾಹುತಗಳು ಹಂಪಿಯ ಪರಿಸರದಲ್ಲಿ ಉಂಟಾಗಿವೆ. ಹೊರಗಿನಿಂದ ಬಂದು ನೆಲೆಸಿದ ಜನವರ್ಗಗಳು ಈ ಪ್ರಕ್ರಿಯೆಗೆ ಬೆಂಬಲವಾಗಿರುವುದು ವಿಷಾದನೀಯ ಅಂತೆಯೇ ಅಪರಾಧ ಕೂಡ. ಇಂತಹ ಬೆಳವಣಿಗೆಗಳನ್ನು ತಡೆಯದಿದ್ದರೆ ಹಂಪಿಯ ಮಹತ್ವವೇ ಕಳೆದು ಹೋಗಿ ಇದೊಂದು ಬೃಹತ್ ತೆರೆದ ಚರಿತ್ರೆಯ ಮ್ಯೂಸಿಯಂ ಮಾತ್ರವಾಗಿ ಉಳಿಯುತ್ತದೆ. ಈಗಲೂ ಇದೇ ಅಭಿಪ್ರಾಯವಿದೆ. ಜಗತ್ತಿನ ಅತ್ಯಂತ ವಿಶಾಲ ತೆರೆದ ಜೀವಂತ ಮ್ಯೂಸಿಯಂ ಎಂದೇ ಹಂಪಿ ಪರಿಸರವನ್ನು ಕರೆಯಲಾಗುತ್ತದೆ. ಹೀಗೆ ಸದ್ಯದ ಹಂಪಿಯ ಗ್ರಾಮಗಳು ಸಾಂಪ್ರ ದಾಯಿಕ ಹಳ್ಳಿಯ ಅವ್ಯಕ್ತ ಸಂಸ್ಕೃತಿಯಿಂದ ಹೊರ ಬರುವ ತರಾತುರಿಯಲ್ಲಿರುವಾಗ ಅವುಗಳ ಮೂಲಕ ಅವ್ಯಕ್ತವಾದ ಎಲ್ಲ ಬಗೆಯ ಚಾರಿತ್ರಿಕ ನೈಸರ್ಗಿಕ ಸಂಗತಿಗಳನ್ನು ಪಡೆಯುವದೇ ಅನೇಕ ತಪ್ಪು ಅಭಿಪ್ರಾಯಗಳಿಗೆ ದಾರಿ ಮಾಡುವಂತಿದೆ. ಈ ನಿಟ್ಟಿನಲ್ಲಿ ತಕ್ಕ ಎಚ್ಚರ ವಹಿಸಲೇ ಬೇಕಾದುದಿದೆ.

ಹೊಸದಾಗಿ ನೆಲೆಯೂರಿದ ಗ್ರಾಮಗಳು ಅವ್ಯಕ್ತ ಸಂಸ್ಕೃತಿಯನ್ನು ಪೂರ್ಣವಾಗಿ ಪಡೆದಿವೆ ಎಂಬ ನಿಲುವು ಸೂಕ್ತವಲ್ಲ. ಹೊರಗಿನಿಂದ ಬಂದವರು ಕೂಡ ಅವರದೇ ಆದ ಕೃಷಿ ಜೀವನ ನೈಸರ್ಗಿಕ ವಿವರಗಳನ್ನು ಹೊಂದಿರುವವರೇ ಆಗಿದ್ದಾರೆ. ತುಂಗಭದ್ರಾ ನೀರಾವರಿಯಿಂದಾಗಿ ಇಡೀ ಪರಿಸರವೇ ರೂಪಾಂತರಗೊಂಡಿದೆ. ಆರ್ಥಿಕವಾಗಿ ಈ ಹಳ್ಳಿಗಳು ಬಲಶಾಲಿಯೂ ಆಗುತ್ತಿವೆ. ಗತಕಾಲದ ನೈಸರ್ಗಿಕ ಸಂಬಂಧವನ್ನು ವಾರ್ಷಿಕ ಆಚರಣೆಗಳಲ್ಲಿ ಉಳಿಸಿಕೊಂಡಿರುವುದೂ ಉಂಟು. ಮಲಪನಗುಡಿ, ಅನಂತಶಯನಗುಡಿ, ನಾಗೇನಳ್ಳಿ, ಆನೆಗೊಂದಿಯಂತಹ ಗ್ರಾಮಗಳಲ್ಲಿ ಅಪ್ಪಟ ಕೃಷಿ ಆಚರಣೆಗಳು ದಟ್ಟವಾಗಿ ಉಳಿದುಕೊಂಡಿವೆ. ಆ ಮೂಲಕ ನೈಸರ್ಗಿಕ ಪ್ರಜ್ಞೆ ಜೀವಂತವಾಗಿದೆ. ರಾಜಶಾಹಿ ವ್ಯವಸ್ಥೆ ಅಳಿದ ಮೇಲೆ ಆ ಕಾಲದ ಜೀವನ ವಿಧಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ ನಿಸರ್ಗದ ಸಂಬಂಧಗಳು ಯಾವತ್ತೂ ಮನುಷ್ಯರಿಗೆ ಇರಲೇಬೇಕಾದುದರಿಂದ ಕೃಷಿ ಆಚರಣೆಗಳು ವಕ್ಕಲು ಸಮುದಾಯಗಳಲ್ಲಿ ಉಳಿದುಕೊಂಡಿವೆ. ಕೃಷಿಗೆ ಸಂಬಂಧಿಸಿದಂತಹ ಸಾಂಪ್ರದಾಯಿಕ ತಿಳುವಳಿಕೆಯು ಸಾಮ್ರಾಜ್ಯಗಳ ಕಾಲದಿಂದಲೂ ಹಾಗೆ ಸಾಗಿ ಬಂದಿವೆ. ಹೊಸದಾಗಿ ಹುಟ್ಟಿದ ಹಳ್ಳಿಗಳಲ್ಲಿ ಮೂಲ ಸ್ವರೂಪ ಬದಲಾಗಿದೆ. ವಲಸೆ ಬಂದವರು ತಮ್ಮ ಮೂಲದ ನೈಸರ್ಗಿಕ ನಂಬಿಕೆಗಳನ್ನು ಸ್ಥಳೀಯ ನಂಬಿಕೆ ಆಚರಣೆಗಳ ಜೊತೆ ವಿಲೀನ ಮಾಡಿಕೊಂಡಿದ್ದಾರೆ. ಇಂತಹ ಆಚರಣೆಗಳು ಸಾಮಾನ್ಯವಾಗಿ ಎಲ್ಲ ಪ್ರದೇಶಗಳಿಗೂ ಸಮುದಾಯಗಳಿಗೂ ಸಮಾನವಾಗಿರುವುದರಿಂದ ನೈಸರ್ಗಿಕ ಜ್ಞಾನದ ಹೊಂದಾಣಿಕೆ ಸಾಧ್ಯವಾಗಿದೆ. ಆದರೆ ಅಂತಹ ಎಲ್ಲ ನೈಸರ್ಗಿಕ ತಿಳುವಳಿಕೆಯನ್ನು ಹಂಪಿಯ ಪರಂಪರೆಯಾಗಿ ಪ್ರತ್ಯೇಕವಾಗಿ ಜನಪದರು ಭಾವಿಸುತ್ತಾರೆಯೇ ವಿನಃ ಸಂಯುಕ್ತವಾಗಿ ಹಂಪಿಯ ಪರಿಸರದ ಚರಿತ್ರೆಯಾಗಿ ಹೊಂದಿಸುವುದಿಲ್ಲ. ಭಾಗಶಃ ಇದು ಜನಸಾಮಾನ್ಯರ ಬದುಕಿಗೂ ಚರಿತ್ರೆಯ ಸಂಬಂಧಕ್ಕೂ ಇದ್ದ ಅಂತರದ ಪರಿಣಾಮ ಎಂದು ಹೇಳಬಹುದು.

ಚರಿತ್ರೆ ಸೀಮಿತವಾದರೆ ನಿಸರ್ಗ ಅನಂತ

ಎಲ್ಲಿಯೂ ಕೂಡ ನೈಸರ್ಗಿಕ ಪ್ರಜ್ಞೆ ಎಂಬುದು ಪ್ರತ್ಯೇಕವಾದ ವಿವರಗಳಿಂದ ಕಾಣುವುದಿಲ್ಲ. ಅದು ಬುದಕಿನ ಸ್ವಭಾವ. ಆದ್ದರಿಂದ ಆ ಪ್ರಜ್ಞೆಯನ್ನು ಬರಿದೆ ವಿವರಗಳಿಂದ ಪಟ್ಟಿಮಾಡಿದರೆ ಮಹತ್ವ ಎನಿಸದು. ಹೇಗೆ ಒಂದು ಪ್ರಾದೇಶಿಕ ಜೀವನವಿಧಾನವು ಚರಿತ್ರೆಯ ಜೊತೆ ನೈಸರ್ಗಿಕ ಒಪ್ಪಂದಗಳನ್ನು ಮಾಡಿಕೊಳ್ಳುತ್ತದೆ ಎಂಬುದನ್ನು ಅವ್ಯಕ್ತ ಸಂಸ್ಕೃತಿ ಯಿಂದಲೇ ಗ್ರಹಿಸಬೇಕಾಗುತ್ತದೆ. ಚರಿತ್ರೆ ಮತ್ತು ನಿಸರ್ಗ ಜನಪದರಿಗೆ ಬೇರೆಯಾಗಿಯೇ ಕಾಣಲ್ಪಡುತ್ತವೆ. ಆದ್ದರಿಂದಲೆ ನೈಸರ್ಗಿಕ ಪ್ರಜ್ಞೆಯು ಹಂಪಿಯ ಚರಿತ್ರೆಯಾಗಿ ಜನಪದರಲ್ಲಿ ಬಿಂಬಿತವಾಗದು. ನಿಸರ್ಗವೇ ದೊಡ್ಡದಾದುದರಿಂದ ಜನಪದರಿಗೆ ಚರಿತ್ರೆ ಚಿಕ್ಕದು. ಇದು ಕೂಡ ಚರಿತ್ರೆಯ ದರ್ಪದಿಂದ ದೂರ ಸರಿಯುವ ಉಪಾಯದ ತಿಳುವಳಿಕೆ. ಜನಪದರು ರಾಜನಿಗಿಂತಲೂ ಮಿಗಿಲಾಗಿ ನಿಸರ್ಗದ ಕಾಣದ ಶಕ್ತಿಯನ್ನು ನಂಬಿದ್ದರು. ನಿಸರ್ಗ ಮತ್ತು ಪ್ರಭು ಇವೆರಡೂ ಆಳದಲ್ಲಿ ವೈರುಧ್ಯದಂತಿವೆ. ಹಂಪಿಯ ವಿನಾಶ ನಿಸರ್ಗವೇ ಮಾಡಿಕೊಂಡ ಪರಿಹಾರ ಎಂದು ಜನಪದರಿಗೆ ಅನಿಸುತ್ತದೆ. ಹಂಪಿಯ ಇಷ್ಟೊಂದು ಭದ್ರ ಕೋಟೆಯ ಪರಿಸರ ಕೂಡ ಯಾಕೆ ಸಾಮ್ರಾಜ್ಯವನ್ನು ಕಾಯಲಾರದೇ ಹೋಯಿತು ಎಂಬ ಪ್ರಶ್ನೆಗೆ ಜನಪದರು ಪಲಾಯನವಾದಿ ಉತ್ತರ ಕೊಡುವ ವಿಧಾನವೊಂದಿದೆ. ದೈವಗಳು ಇರಬೇಕಾದ ನೆಲೆಯಲ್ಲಿ ಮನುಷ್ಯರ ದರ್ಪ ಹೆಚ್ಚಾಯಿತು. ಅದಕ್ಕೆ ಹಂಪಿಯ ದೈವಗಳೇ ಮನುಷ್ಯರ ದರ್ಪವನ್ನು ಅಡಗಿಸಿದವು. ವಯಸ್ಕರಾದ ಹಂಪಿಯ ನಿವಾಸಿಯೊಬ್ಬರ ಈ ಹೇಳಿಕೆ ಚರಿತ್ರೆಯ ಆಚಿನ ಅಭಿಪ್ರಾಯ. ಅವ್ಯಕ್ತ ಸಂಸ್ಕೃತಿಯ ಪ್ರತಿಬಿಂಬ ಎಂತಲೂ ಹೇಳಿಬಿಡಬಹುದು. ತರ್ಕಕ್ಕೆ ಸಿಲುಕದ ಇಂತಹ ನಿಲುವುಗಳೇ ಅವ್ಯಕ್ತ ಸಂಸ್ಕೃತಿಯ ಮೂಲಕ ಹರಿದು ಬರುತ್ತವೆ. ಇವೆನ್ನೆಲ್ಲ ವರ್ತಮಾನದ ತಿಳುವಳಿಕೆಯಿಂದ ವಿಶ್ಲೇಷಿಸಲು ಆಗದು. ಆದರೂ ಸಮಕಾಲೀನ ಹಂಪಿಯ ಪರಿಸರದ ಗ್ರಾಮಗಳ ಅಭಿಪ್ರಾಯಗಳನ್ನು ನಿರಾಕರಿಸಲಾಗದು. ವರ್ತಮಾನದ ಪ್ರಭಾವಗಳಿಂದ ರೂಪಾಂತರಗೊಳ್ಳುತ್ತಿರುವ ಹಂಪಿ ಪರಿಸರದ ಹಳ್ಳಿಗಳು ಸಾಮ್ರಾಜ್ಯವೊಂದರ ಕುರುಹುಗಳನ್ನು ಜತನವಾಗಿ ಕಾಯುವ ಹೊಣೆಗಾರಿಕೆಯನ್ನು ನಿರ್ವಹಿಸಿಯೇ ಅವು ಮುಂದಿನ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ಚರಿತ್ರೆಯ ಪ್ರಜ್ಞೆಯೆ ನಾಳಿನ ಚರಿತ್ರೆಗೆ ದಾರಿ ತೋರಬಲ್ಲದು. ಆ ನಿಟ್ಟಿನಲ್ಲಿ ಹಂಪಿ ಗ್ರಾಮಗಳನ್ನು ಪುನರುಜ್ಜೀವನಗೊಳಿಸಬೇಕಾಗಿದೆ.