ಚರಿತ್ರೆಯ ನಿರೂಪಣೆಗೆ ನಿರ್ದಿಷ್ಟ ರೂಪವಿಲ್ಲ. ಆದರೆ ಚರಿತ್ರೆಯ ಮೂಲ ಮೌಲ್ಯಕ್ಕೆ ಆಕಾರವಿದೆ. ಮಾನವ ನಿಸರ್ಗದ ಕಾಲಮಾನಗಳಲ್ಲಿ ಹೇಗೆ ವಿವಿಧ ಭೌತಿಕ ಸ್ವರೂಪ ವನ್ನು ಪಡೆದುಕೊಂಡ ಎಂಬುದು ವಿಕಾಸದ ನಡೆಯನ್ನು ಬಿಂಬಿಸುತ್ತದೆ. ಹೀಗೆ ಸಾಗುವ ಹಂತದಲ್ಲಿ ಆತ ಅಸ್ತಿತ್ವದ ಕಾರಣಕ್ಕಾಗಿ ಕಂಡುಕೊಂಡ ವಿವೇಚನೆಯೆ ಮೌಲ್ಯ. ಅಂದರೆ ಮಾನವರ ಅಸ್ತಿತ್ವದ ವಿವೇಚನೆಯು ಚರಿತ್ರೆಯೂ ಆಗಿ ಬಿಡುವ ಮರ್ಮ ಇಲ್ಲಿದೆ. ಹೀಗಾಗಿ ಮೌಲ್ಯಗಳು ಅಸ್ತಿತ್ವವನ್ನು ರೂಪಿಸುತ್ತ ಬರುತ್ತವೆ. ಈ ಮೌಲ್ಯಗಳು ಒಂದೇ ಬಗೆಯಲ್ಲಿ ಇರುವುದಿಲ್ಲ. ಒಳ್ಳೆಯ ಹಾಗು ಕೆಟ್ಟ ಎರಡೂ ಉದ್ದೇಶಗಳಿಗೆ ಮೌಲ್ಯಗಳು ಬಳಕೆಯಾಗುತ್ತವೆ. ಚರಿತ್ರೆಯಲ್ಲಿ ಇದು ಸಾಮಾನ್ಯ. ಮೌಲ್ಯಗಳ ಸಂಘರ್ಷಗಳು ನಿರಂತರ ನಡೆಯುತ್ತಲೆ ಇರುತ್ತವೆ. ಪಶುಪಾಲಕ ಸಮಾಜ ನಿಸರ್ಗ ನಿಷ್ಟ ಮೌಲ್ಯಗಳಿಗೆ ಬದ್ಧವಾಗಿದ್ದರಿಂದಲೆ ಅವರ ಸಂಸ್ಕೃತಿಯಲ್ಲಿ ಹಸಿರು ಮೌಲ್ಯಗಳು ಧಾರಾಳವಾಗಿದ್ದವು. ಕೃಷಿ ಸಮಾಜವಾಗಿ ಬೆಳೆಯುವ ಹೊತ್ತಿಗೆ ಹಸಿರು ಮೌಲ್ಯಗಳು ವಿಸ್ತರಣೆಗೊಂಡು ಪಿತೃಪ್ರಧಾನ ಮೌಲ್ಯಗಳನ್ನು ವ್ಯಾಪಿಸಿ ಕೊಂಡವು. ಭೂಮಿ, ಹೆಣ್ಣು, ಸೃಷ್ಠಿ, ಗಂಡು ಎಂಬ ನಂಬಿಕೆಗಳು ಸಾಂಸ್ಥಿಕ ಆಕಾರ ಪಡೆದು ಚರಿತ್ರೆಯ ಮಹತ್ವದ ಮೌಲ್ಯಗಳಾಗಿ ಸಮಾಜವನ್ನು ಸುತ್ತುವರಿದವು.

ಕೌಟುಂಬಿಕ ಮೌಲ್ಯಗಳು ಕೂಡ ಚರಿತ್ರೆಯ ಪ್ರಾಥಮಿಕ ನಂಬಿಕೆಗಳೇ ಹೌದು. ಚರಿತ್ರೆಯ ಬೇರುಗಳು ಕುಟುಂಬಗಳಿಂದಲೇ ಸಾಗಿ ಬಂದಿವೆ. ಒಂದು ಕುಟುಂಬ ಒಂದು ಸಮುದಾಯವಾಗುತ್ತ ಸಾಗಿ ಅದು ಒಂದು ಭೌಗೋಳಿಕ ವಲಯವನ್ನು ಸ್ಥಾಪಿಸಿಕೊಳ್ಳುವುದನ್ನು ಚರಿತ್ರೆಯಲ್ಲಿಯೆ ಗಮನಿಸುತ್ತೇವೆ. ಒಂದು ಕುಟುಂಬ ಒಂದು ಭಾಷೆಯಾಗುವುದೂ ಹೀಗೆಯೆ. ಅಂತಹ ಆ ಒಂದು ಭಾಷೆಯೇ ಮುಂದೆ ಒಂದು ದೇಶ ಭಾಷೆಯಾಗುವುದು ಚರಿತ್ರೆಯ ವಿವಿಧ ಕಾಲ ಘಟ್ಟಗಳಲ್ಲಿಯೇ. ಚರಿತ್ರೆಯು ಅವ್ಯಕ್ತವಾಗಿರುತ್ತದೆ ಎಂದು ತಿಳಿದರೂ ಅದು ವರ್ತಮಾನದಲ್ಲಿ ನಿತ್ಯವೂ ವ್ಯಕ್ತವಾಗುತ್ತಲೆ ಇರುತ್ತದೆ. ಒಂದು ಕಥನ ಗೀತೆಯನ್ನು ಜನಪದರು ಹಾಡುತ್ತಿದ್ದಾರೆ ಎಂದರೆ ಅದು ಏಕಕಾಲಕ್ಕೆ ತನ್ನ ಗತಕಾಲ ಹಾಗೂ ವರ್ತಮಾನ ಕಾಲಗಳನ್ನು ಒಟ್ಟಿಗೆ ನುಡಿಸುತ್ತ ನಾಳಿನ ಕಾಲವನ್ನು ನಿರೀಕ್ಷಿಸುತ್ತಿರುತ್ತದೆ. ಹೀಗಾಗಿ ಚರಿತ್ರೆಯ ಮೂಲ ಮೌಲ್ಯಗಳು ತಂತಾನೆ ನಿರಂತರವಾಗಿ ಸಾಗಿಬರುತ್ತ ವರ್ತಮಾನದಲ್ಲಿ ಬೇರೆ ಬೇರೆ ಆವರಣಗಳಲ್ಲಿ ನಿಂತು ಪ್ರತಿಧ್ವನಿಸುತ್ತಿರುತ್ತವೆ. ಹೀಗೆ ಒಂದು ಮೂಲ ಘಟಕವು ಅಥವಾ ಅಸ್ತಿತ್ವವು ವಿಕಾಸವಾಗುತ್ತಲೇ ಬಹುರೂಪ ಪಡೆದು ಪ್ರಾದೇಶಿಕವಾಗಿಯೂ ಚರಿತ್ರೆಯನ್ನು ನಿರ್ಮಿಸಿಕೊಳುತ್ತಿರುತ್ತದೆ. ಅಂದರೆ ಒಂದೇ ಕುಟುಂಬವು ಹಲವು ಗುಂಪುಗಳಾಗಿ ವರ್ಗಗಳಾಗಿ ಅಥವಾ ಜಾತಿ ಉಪಜಾತಿಗಳಾಗಿ ವಿಸ್ತರಿಸಿ ತಮಗೇ ಅನನ್ಯವಾಗುವ ಚಹರೆಗಳನ್ನು ನಿರ್ಮಿಸಿಕೊಂಡು ತಮ್ಮೊಳಗೇ ಪೈಪೋಟಿಯನ್ನು ಎದುರಿಸುತ್ತವೆ. ಈ ಸ್ಥಿತಿಯಲ್ಲಿಯೆ ಚರಿತ್ರೆಯ ಮೂಲ ಮೌಲ್ಯದಲ್ಲಿ ಆಕರ್ಷಣೆ, ವಿಕರ್ಷಣೆ ಉಂಟಾಗಿ ತಾರತಮ್ಯ ಬೆಳೆಯು ವುದು.

ಮೌಲ್ಯಗಳು ಎಲ್ಲೆಲ್ಲಿ ಭಗ್ನವಾಗುತ್ತವೆಯೋ ಅಲ್ಲೆಲ್ಲ ಪ್ರತಿ ಸಂಗತಿಗಳು ಹುಟ್ಟಿಕೊಳ್ಳು ತ್ತವೆ. ನಾನು ಶ್ರೇಷ್ಟ ನೀನು ನೀಚ ಎಂಬ ದ್ವಂದ್ವ ಮೌಲ್ಯಗಳು ಘರ್ಷಣೆಗೆ ಒಳಪಡುತ್ತಲೇ ತಮ್ಮ ತಮ್ಮ ಮೌಲ್ಯಗಲನ್ನು ಸಾಧಿಸಿಕೊಳ್ಳಲು ತೊಡಗುತ್ತವೆ. ಹೀಗಾಗಿಯೆ ಚರಿತ್ರೆಯಲ್ಲಿ ಎಷ್ಟೋ ಬಾರಿ ಮೌಲ್ಯಗಳ ಸೋಲುಗೆಲುವುಗಳೇ ಅಂತಿಮವಾಗಿಬಿಡುವುದು. ಮಾತೃಪ್ರಧಾನ, ಪಿತೃಪ್ರಧಾನ ಮೌಲ್ಯಗಳು ಚರಿತ್ರೆಯ ಆಗುಹೋಗುಗಳಲ್ಲಿ ನಿರಂತರವಾಗಿ ಮಾಡಿಕೊಂಡು ಬಂದ ಒಪ್ಪಂದಗಳು, ಸೋಲುಗಳು, ದಿಗ್ವಿಜಯಗಳು, ಸಂದಾನಗಳು, ಉಪಾಯಗಳು, ಅಪಾಯಗಳು, ತಟಸ್ಥ ನೀತಿಗಳು, ಒಳಗಿದ್ದೂ ಹೊರಗೇ ಇರುವ ಗುಪ್ತ ತತ್ವಗಳು ಹಾಗೆಯೇ ಹೊರಗಿದ್ದೂ ಒಳಗಿದ್ದು ಬಿಡುವ ತಂತ್ರಗಳು ಮಾನವರ ಒಟ್ಟು ಚರಿತ್ರೆಯಲ್ಲಿ ಬಹುದೊಡ್ಡ ಚರಿತ್ರೆಯ ಕಥನವನ್ನು ಹೇಳುತ್ತಿವೆ. ಗಮನಿಸಬೇಕಾದ ಅಂಶವೆಂದರೆ ಈ ಬಗೆಯ ರೀತಿ ನೀತಿಯ ವ್ಯಕ್ತತೆಯಲ್ಲಿ ಅವ್ಯಕ್ತವಾಗುವ ಅಂಶಗಳು ಎಷ್ಟು ಅವ್ಯಕ್ತವಾದದ್ದರಲ್ಲಿ ವ್ಯಕ್ತ ವಾಗುವ ಸಂಗತಿಗಳು ಎಷ್ಟು ಎಂಬುದನ್ನು ದಿನದಿನದ ಬದುಕಿನ ಇತಿಹಾಸದಲ್ಲಿ ನಾವಿನ್ನೂ ತಕ್ಕುದಾಗಿ ಸಂರಚಿಸಿಕೊಂಡೇ ಇಲ್ಲ.

ಮೇಲಿನ ಮಾತುಗಳ ಹಿನ್ನೆಲೆಯಲ್ಲಿ ಮೌಖಿಕ ಪರಂಪರೆಯಲ್ಲಿ ಬರುವ ಹೆಣ್ಣು ಗಂಡಿನ ಸಂಬಂಧಗಳ ವ್ಯಕ್ತ ಅವ್ಯಕ್ತ ರೂಪಗಳಲ್ಲಿ ಅಡಗಿರುವ ಮೌಲ್ಯಗಳ ಸಂಘರ್ಷವನ್ನು ಭಾವಿಸುವ. ಮೌಖಿಕ ಪರಂಪರೆ ಬಹುಪಾಲು ರೂಪುಗೊಂಡದ್ದು ಮಹಿಳೆಯರಿಂದಲೇ ಎಂಬ ವಾದವನ್ನು ಒಪ್ಪಿಕೊಂಡು ಬಿಡೋಣ. ಜೈವಿಕವಾಗಿಯು ಈ ಅಭಿಪ್ರಾಯಕ್ಕೆ ಭಾಷಿಕ ಸಾಕ್ಷ್ಯ ವಿದೆ. ಹೆಣ್ಣು ಮಗು ತಂತಾನೆ ಬೇಗನೆ ಭಾಷೆಯನ್ನು ಕಲಿಯುತ್ತದೆ. ಹೆಣ್ಣು ಮಗು ತಾಯ ಗರ್ಭದಲ್ಲಿದ್ದಾಗಲೇ ತಾಯಿ ಆಡುವ ಭಾಷೆಗೆ ಬಹುಬೇಗನೆ ಸ್ಪಂದಿಸುತ್ತದೆ ಎಂಬುದು ಇತ್ತೀಚಿನ ಸಂಶೋಧನೆ. ಹೆಣ್ಣು ಮಗು ಜೈವಿಕವಾಗಿ ಯಾವುದೇ ಸೃಷ್ಟಿಶೀಲ ಸಂಗತಿಗೆ ತಂತಾನೆ ಬಹಳ ಬೇಗನೆ ಮುಂದಾಗುತ್ತದೆ. ಹೆಣ್ಣು ಮಗು ತಾಯಗರ್ಭದಲ್ಲಿದ್ದಾಗಲೇ ಅದರ ಋತುಚಕ್ರ ಆರಂಭವಾಗುವುದನ್ನು ಸಂಶೋಧನೆಗಳು ತೋರಿಸಿಕೊಟ್ಟಿವೆ. ಭಾಷೆ, ಭಾವನೆ, ಸಂವೇದನೆ, ಸಂವಹನ, ಅಭಿವ್ಯಕ್ತಿಯಂತಹ ಸೂಕ್ಷ್ಮ ಸಂಗತಿಗಳನ್ನು ವ್ಯಕ್ತಪಡಿಸಲು ಗಂಡಿಗಿಂತಲೂ ಹೆಣ್ಣಿಗೆ ವಿಶೇಷ ನೈಸರ್ಗಿಕ ಹಾಗೂ ಜೈವಿಕ ಕೌಸಲ್ಯಗಳಿವೆ. ಹೀಗಾಗಿಯೆ ಮಾತೃಪ್ರಧಾನ ವ್ಯವಸ್ಥೆಯ ಮೂಲಕವೆ ಮೊದಲಿಗೆ ಮಾನವ ಯತ್ನದ ಎಲ್ಲ ಸೃಜನಶೀಲ ಕ್ರಿಯೆಗಳು ಸಮರ್ಥವಾಗಿ ಆರಂಭವಾದದ್ದು. ಸಹಜವಾಗಿಯೆ ನಿಸರ್ಗದ ರಹಸ್ಯವನ್ನು ಅರಿತು ಕೃಷಿ ಸಂಸ್ಕೃತಿಯನ್ನು ಮಹಿಳೆಯರು ಚಾಲನೆಗೆ ತಂದರು. ಈ ಹಂತದಲ್ಲಿಯೆ ವಿಶೇಷವಾಗಿ ಭಾಷೆ ಬೆಳೆದದ್ದು. ಇಂತಹ ಅಡಿಪಾಯದಿಂದಲೇ ಮೌಖಿಕ ಪರಂಪರೆಯು ಮಹಿಳೆಯರಿಂದಲೆ ಬಲಗೊಂಡದ್ದು. ಅಂದರೆ ಜೀವ ಜಾಲದ ಸಂಬಂಧ, ಕುಟುಂಬದ ಸಂಬಂಧ, ಸಮಾಜದ ಸಂಬಂಧ, ಬಂದುಬಳಗದ ಸಮುದಾಯದ ಸಂಬಂಧ, ಅನಂತವಾದ ನೀಲಾಕಾಶದ ಸಂಬಂಧ, ಇವೆಲ್ಲವನ್ನು ಮೌಖಿಕ ಪರಂಪರೆಯು ಗಾಢವಾಗಿ ಮೈದುಂಬಿಕೊಂಡು ಹಾಡಿ ಬೆಳೆಸಿದೆ. ಇಂತಹ ಸಂವೇದನಾಶೀಲ ಅಭಿವ್ಯಕ್ತಿಯು ಮಹಿಳೆಯರ ಭಾವ ದೀಪ್ತಿಗೆ ಸಹಜ ನೈಸರ್ಗಿಕವಾಗಿ ಸಾವಯವವಾಗಿ ಹೊಂದಿಕೊಳ್ಳುವಂತಹ ಅತ್ಯುತ್ತಮ ಸಂಗತಿ. ಹೀಗಾಗಿಯೆ ಮೌಖಿಕ ಪರಂಪರೆಯ ಆಳದ ದನಿಯಲ್ಲಿ ಅವ್ಯಕ್ತತೆಯು ಮಟುಗಟ್ಟಿ ಕುಳಿತಿರುವುದು. ಮೌಲ್ಯಗಳು ಮಹಿಳೆಯರಿಂದಲೇ (ಮಾತೃನೆಲೆ) ರೂಪುಗೊಳ್ಳುತ್ತ ಅವು ವಿಘಟನೆಯ ಹಾದಿಯಲ್ಲಿ ಸಾಗು ವಾಗ ಅವರು ವ್ಯಕ್ತತೆಯಲ್ಲೇ ಅವ್ಯಕ್ತತೆಯನ್ನು ಬಚ್ಚಿಡುತ್ತಾ ನಡೆದರು. ಹೀಗೆ ಬಚ್ಚಿಟ್ಟ ಅವ್ಯಕ್ತ ಮೌಲ್ಯಗಳು ವರ್ತಮಾನದಲ್ಲಿ ಪ್ರತಿಫಲಿಸಲೇ ಬೇಕಲ್ಲವೇ? ನಿಜ. ನೆನ್ನೆಯ ಮೌನವು ವರ್ತಮಾನದಲ್ಲಿ ಮಾತಾಗಿ ಬರುವ ಮಾಂತ್ರಿಕತೆಯನ್ನು ಮಹಿಳೆಯರು ಕಂಡುಕೊಳ್ಳಬಲ್ಲರು. ಆದರೆ ಈಗಲೂ ಪುರುಷ ಭಾಷೆಯೆ ಮಹಿಳೆಯರ ಮೌಖಿಕ ಭಾಷೆಗಳನ್ನೆಲ್ಲ ನುಂಗಿಬಿಡ ಬಲ್ಲದು. ಮಹಿಳೆಯರೇ ಹಾಡಿಕೊಂಡ ಪದಗಳಲ್ಲಿ ಗಂಡಸರ ದನಿಯೇ ಅವರ ಮೌಲ್ಯವೇ ದಟ್ಟವಾಗಿ ವ್ಯಕ್ತವಾಗಿರುವುದನ್ನು ಕಾಣಬಹುದು.

ವ್ಯಕ್ತ ಹಾಗು ಅವ್ಯಕ್ತ ಸ್ವಭಾವಗಳನ್ನು ಮನೋವಿಶ್ಲೇಷಿಸುವುದಕ್ಕಿಂತ ಅವುಗಳ ಜೈವಿಕ ಗುಣಗಳನ್ನು ಪರಿಶೀಲಿಸುವುದು ಸೂಕ್ತ. ಚರಿತ್ರೆಯಲ್ಲಿ ಯಾಕೆ ಅನೇಕ ಸಂಗತಿಗಳು ವ್ಯಕ್ತವಾಗದೆ ಮರೆಗೆ ಸರಿಯುತ್ತವೆ? ಕೆಟ್ಟದ್ದನ್ನು ಲೋಕಕ್ಕೆ ತೋರಬಾರದು ಎಂಬ ಸ್ವಯಂ ಪ್ರಜ್ಞೆ ಬೇರೆ. ಅದು ಭಾಗಶಃ ನಮ್ಮ ಜೀವವಿಕಾಸದ ಎಚ್ಚರವಿರಬೇಕು. ಒಳ್ಳೆಯದನ್ನು ಮಾತ್ರ ಹೇಳಬೇಕು ಎಂಬ ನಿಯಮವನ್ನು ಹೇರಿಕೊಂಡರೂ ತಪ್ಪನ್ನು ಮತ್ತೆ ಮತ್ತೆ ಮಾಡು ವುದು ಮಾನವ ದೌರ್ಬಲ್ಯ. ಇದಕ್ಕೆ ಜೈವಿಕತೆಯ ಸಂಬಂಧವಿದೆಯೆ? ಆನುವಂಶಿಕ ಗುಣಗಳು ಸಾಗಿಬರಬಲ್ಲವು. ಆದರೆ, ವ್ಯಕ್ತ ಅವ್ಯಕ್ತ ಎಂಬ ಸ್ವಭಾವಗಳನ್ನು ಇನ್ನೂ ಬೇರೆಯ ರೀತಿಯಲ್ಲಿ ಗಮನಿಸಬಹುದು. ಹೇಳಬೇಕಾದ್ದನ್ನು ಮರೆಮಾಚಿ ಯಾಕೆ ಹೇಳಬೇಕು? ಹಾಗೆ ಹೇಳುವುದೂ ಒಂದು ಸಂವಹನ ಅಲ್ಲವೆ? ಇದು ಭಾಷೆಯ ಸಂವಹನದ ತಂತ್ರ ಮಾತ್ರ ಅಲ್ಲ. ಅಧಿಕಾರ ಇಲ್ಲದಿದ್ದಾಗಲೂ ಅವ್ಯಕ್ತ ದನಿಯ ಪಿಸುದನಿ ರೂಪಕವಾಗಿ ಮೂಡಬಲ್ಲದು. ಮೌಖಿಕ ಪರಂಪರೆಗೆ ಮುಕ್ತ ಮೌಖಿಕ ಸ್ವಾತಂತ್ರ್ಯ ಇತ್ತಾದರೂ ಏನನ್ನು ಹೇಳಬೇಕು ಎಂಬುದಕ್ಕೆ ನಿರ್ದೇಶನವಿತ್ತು, ಅಂಕುಶವಿತ್ತು. ಸುಪ್ತಪ್ರಜ್ಞೆಯಲ್ಲಿ ಎಚ್ಚರವಿರುವ ಅವ್ಯಕ್ತತೆಯು ಜಾಗೃತಾ ವಸ್ಥೆಯಲ್ಲಿ ಸುಪ್ತವಾಗಿಬಿಡುತ್ತದೆ. ಕೆಳಗಿನ ಈ ಅಂಶಗಳು ಅವ್ಯಕ್ತತೆಗೆ ಭಾಗಶಃ ಕಾರಣವಿರ ಬಹುದು.

. ಅಭಿವ್ಯಕ್ತಿಯ ಮೇಲಿನ ನಿಯಂತ್ರಣ

ಇದು ಸಾಮಾಜಿಕ ವ್ಯವಸ್ಥೆಯ ನಿರ್ದೇಶನದ ಮೇರೆಗೆ ಭಾಷೆಯನ್ನು ನಿರ್ದಿಷ್ಟಪಡಿಸಿಕೊಂಡಾಗ ಎದುರಾಗುವ ಸಮಸ್ಯೆ. ಹೀಗಾಗಿಯೆ ಇಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಮೌಲ್ಯಗಳನ್ನು ಮಾತ್ರ ವ್ಯಕ್ತಪಡಿಸಬೇಕಾದ ಅನಿವಾರ್ಯತೆ ಎದುರಾಗಿರುತ್ತದೆ. ಭಾಷೆಯನ್ನು ಅನೇಕ ಬಾರಿ ಮೌಲ್ಯಗಳು ಸಂಕುಚಿತಗೊಳಿಸುತ್ತವೆ. ನಿಯಂತ್ರಣ ಸಾಧಿಸಿದ ಸಂಗತಿಗಳು ಉಳಿದ ವಿಷಯಗಳನ್ನು ಮರೆಗೆ ಸರಿಸುತ್ತವೆ. ನಿಯಂತ್ರಣವು ಭಾಷೆಯನ್ನು ಮಾತ್ರವಲ್ಲದೆ ಬುದ್ದಿಯನ್ನು ಕೂಡ ತಡೆ ಹಿಡಿಯಬಲ್ಲದು. ಚರಿತ್ರೆಯ ಮೌಲ್ಯಗಳ ದಿಗ್ವಿಜಯದ ಎದಿರು ವಿವೇಚನೆಯು ಸೋಲೊಪ್ಪಿಕೊಳ್ಳಬೇಕಾಗುತ್ತದೆ. ಹೀಗಾಗಿಯೆ ಮಾತೃಪ್ರಧಾನ ಮೌಲ್ಯಗಳು ಮುಂದೆ ಪಿತೃಪ್ರಧಾನ ವ್ಯವಸ್ಥೆಯ ಕಾಲಮಾನಕ್ಕೆ ಹಿಂದೆ ಸರಿದು ಗೆದ್ದ ಪುರುಷಾಧಿಪತ್ಯದ ಅಂಕೆಶಂಕೆಗೆ ತಕ್ಕಂತೆ ಮೌಖಿಕ ಪರಂಪರೆಯನ್ನು ಅನುಸರಿಸಬೇಕಾಯಿತು.

. ಲಿಂಗ ಸಂಬಂಧಿ ಧೋರಣೆ

ಪುರುಷಾಧಿಪತ್ಯವು ಆಕ್ರಮಣ ಶೀಲವಾದಂತೆಲ್ಲ ಮುಕ್ತ ಭಾವವು ಅವ್ಯಕ್ತದಾಟಿಯಲ್ಲಿ ಮೌಖಿಕತೆಯನ್ನು ರೂಢಿಸಿಕೊಂಡಿದೆ. ನಿಸರ್ಗನಿಷ್ಟ ಸಂವೇದನೆಯು ಮೌಲ್ಯಕಳೆದು ಕೊಂಡಂತೆಲ್ಲ ಸಾಮ್ರಾಜ್ಯಶಾಹಿ ಬಯಕೆಗಳು ಪುರುಷಾಧಿಪತ್ಯದ ವಿಸ್ತರಣೆಯಾಗಿ ಬೆಳೆದವು. ಧರ್ಮದ ಆಚಾರ ವಿಚಾರಗಳು ಪುರುಷಾಧಿಪತ್ಯಕ್ಕೆ ಬೇಕಾದ ಮೌಲ್ಯಗಳಾಗಿ ವಿಸ್ತರಿಸಿದವು. ಲಿಂಗಸಂಬಂಧಗಳ ಅಭಿವ್ಯಕ್ತಿಯ ತುಂಬ ಧಾರ್ಮಿಕ ಅಂಕುಶ ಪ್ರಧಾನವಾಗಿ ಅಡ್ಡ ಬಂದು ನಿಲ್ಲುವುದನ್ನು ಗಮನಿಸಬಹುದು. ಮನುಷ್ಯ ಮಾಡಿಕೊಂಡ ವ್ಯವಸ್ಥೆಗಳೇ ಅವನ ನಿರ್ಧಿಷ್ಟ ಗುರಿಯ ಆಲೋಚನೆಗಳೇ ಅವ್ಯಕ್ತತೆಯನ್ನು ಹೇರಿವೆ. ವಿಶೇಷವಾಗಿ ಮಹಿಳೆಯರ ಮೌಖಿಕತೆಯಲ್ಲಿ ಪುರುಷ ಸಾರ್ವಭೌಮತ್ವವನ್ನು ಒಪ್ಪಬೇಕಾದ ಅಭಿವ್ಯಕ್ತಿಯಿದೆ. ಹಾಗೆಯೆ ಮಹಿಳೆ ತನ್ನ ಇಂತಹ ಇಕ್ಕಟ್ಟಿನ ಅಭಿವ್ಯಕ್ತಿಯಲ್ಲೆ ಅನೇಕ ವ್ಯಕ್ತ ದನಿಗಳನ್ನು ಬೆರೆಸಿ ಹಾಡಿದ್ದಾಳೆ. ವ್ಯಕ್ತತೆಯಲ್ಲಿ ಅನೇಕ ಸಂಗತಿಗಳನ್ನು ಮರೆಸುವ ಹಾಗೆಯೆ ಅವ್ಯಕ್ತತೆಯಲ್ಲಿ ಎಷ್ಟೋ ವಿಷಯಗಳನ್ನು ಗೋಚರಿಸುವಂತೆ ಮಾಡುವ ಕೌಶಲ್ಯವನ್ನು ಮಹಿಳೆಯರು ಮಾಡಿದ್ದಾರೆ. ನಿಯಂತ್ರಣಗಳ ಆಚೆಗೆ ಜಿಗಿಯುವ ಮೌಖಿಕತೆಯಲ್ಲಿ ಅವ್ಯಕ್ತ ಚರಿತ್ರೆಯು ಗುಪ್ತವಾಗಿ ಪ್ರವಹಿಸುತ್ತ ಇರುತ್ತದೆ.

. ಸಂವೇದನಾಶೀಲ ಸಂಯಮ

ಮಹಿಳೆಯರ ಜೈವಿಕತೆಯಲ್ಲೆ ಸಂವೇದನಾಶೀಲ ಸಂಯಮವಿದೆ. ಇದು ಜೀವವಿಕಾಸದ ವಿಶಿಷ್ಟಗುಣ. ಯಾವತ್ತೂ ಕೂಡ ವಿಕಾಸದ ಸಂಯಮವೇ ಯಶಸ್ಸಿನ ಮೂಲ. ಆಕ್ರಮಣ ಸ್ವಭಾವದ ಸ್ವಕೇಂದ್ರಿತ ಬುದ್ದಿಯ ಪುರುಷತ್ವವು ಸಂಯಮವನ್ನು ಗಾಢವಾಗಿ ಆವಾಹಿಸಿಕೊಳ್ಳ ಲಾರದು. ಸಾಧುಸಂತ ಋಷಿ ಮುನಿಗಳ ಸಂಯಮ ಬೇರೆ. ಭೌತಿಕವಾದ ಸ್ವ ನಿಯಂತ್ರಣದ ಸಂಯಮ ಗಾಢವಾದುದಲ್ಲ. ಮಹಿಳೆಯರಿಗೆ ಸ್ವಯಂ ಸಿದ್ಧ ಸಂಯಮ ಸ್ವಭಾವವು ಜೈವಿಕವಾಗಿ ಬಂದಿದೆ. ನಿಸರ್ಗದ ಗುಣ ಹೆಣ್ಣು ದೇಹದಲ್ಲಿ ಹೆಚ್ಚಿರುವುದು ಈ ರೀತಿಗೆ ಕಾರಣವಿರಬಹುದು. ಇಂತಹ ಗುಣವೇ ಜೀವ ವಿಕಾಸದ ಚರಿತ್ರೆಯಲ್ಲಿ ಹೆಣ್ಣಿಗೆ ಅನನ್ಯ ಸ್ಥಾನ ತಂದಿರುವುದು. ಆದರೆ ವಿಪರೀತ ಸಂಯಮ ದಾಸ್ಯಕ್ಕೂ ದಾರಿ ತೋರಬಲ್ಲದು. ಇದರಿಂದ ಜೈವಿಕ ವಿಕಾಸಕ್ಕೂ ಅನೇಕ ಅಡೆತಡೆಗಳಾಗಿ ಲೋಪವೂ ಎದುರಾಗಬಲ್ಲದು. ಎಲ್ಲ ಇಕ್ಕಟ್ಟನ್ನು ನಿಭಾಯಿಸುವುದು ಒಂದು ಸಾರ್ವಕಾಲಿಕ ಸ್ತ್ರೀ ಸಂವೇದನೆಯಾದರೂ ಅದು ಹಾಗೆ ನಿರಂತರವಾಗಿ ತನ್ನ ಮೇಲಿನ ಆಧಿಪತ್ಯವನ್ನು ಒಪ್ಪುತ್ತಲೇ ಒಪ್ಪಂದಗಳಿಂದ ಜಾಣ್ಮೆಯಿಂದ ಸಂಯಮವನ್ನು ವಿಸ್ತರಿಸುತ್ತಲೇ ಸಾಗಿದರೆ ಅದು ಅಂತಿಮವಾಗಿ ವಿಕಾಸದಲ್ಲಿ ಗುಣವಾಗುವ ಬದಲು ಅವಗುಣವಾಗುವ ಸಾಧ್ಯತೆಯೂ ಇರುತ್ತದೆ.

ಲಿಂಗತಾರತಮ್ಯದ ಆಕ್ರಮಣಶೀಲತೆಯನ್ನು ಹೆಣ್ಣಿನ ಸಂಯಮ ಗುಣವು ಈತನಕ ಸಮರ್ಥವಾಗಿ ನಿಭಾಯಿಸಿದ್ದರೂ ಅದರಿಂದ ಅನೇಕ ಬಗೆಯ ಅಪಮೌಲ್ಯಗಳೇ ಹೆಣ್ಣಿನ ಅಭಿವ್ಯಕ್ತಿಯನ್ನು ನಿರ್ಧರಿಸಿಬಿಟ್ಟಿವೆ. ಅವ್ಯಕ್ತವಾಗಿರುವ ಪುರುಷ ಮೌಲ್ಯಗಳು ಹೆಣ್ಣಿನ ಮೂಲಕ ಸ್ವತಃ ಆಕೆಯ ವಿರುದ್ಧವಾಗಿಯೇ ಇದ್ದರೂ ಅವಳಿಂದಲೇ ವ್ಯಕ್ತವಾಗುವಂತಹ ಸಂದಿಗ್ಧತೆ ವಿಚಿತ್ರವಾದದ್ದು. ಇದನ್ನು ಸಂಯಮ ಎಂಬ ಗೌರವದಿಂದ ಹೇಳುತ್ತ ಬಂದಿರು ವುದು ಉಚಿತವಲ್ಲ. ಹೆಣ್ಣಿನ ಸಂಯಮ ಸ್ಥಿತಿ ಗಂಡಸರಿಗೆ ಗುಣವಾಗಿದ್ದರೆ ಅದು ಮಹಿಳೆಯರಿಗೆ ವಿರುದ್ಧವಾಗಿದೆ. ಇದರ ಪರಿಣಾಮವಾಗಿಯೆ ಮಧ್ಯಕಾಲೀನ ಮಹಿಳಾ ಮೌಖಿಕತೆಯೆಲ್ಲವು ತನ್ನ ಮೇಲಿನ ದಿಗ್ವಿಜಯವನ್ನು ಪುರುಷಾರ್ಥದಲ್ಲಿ ಹಾಡಿಕೊಂಡಿರುವುದು. ಸಂಯಮದ ಮೇಲೆ ಅಧಿಕಾರ ಸ್ಥಾಪಿಸುವ ಗಂಡಸಿನ ಅಭಿವ್ಯಕ್ತಿಯಲ್ಲಿ ಯಾವ ಬಗೆಯ ವಿಕಾಸವಾಗಬಲ್ಲದು? ಆತನ ಭಾಷೆಯ ಸ್ವರೂಪ ಸಾಮಾಜಿಕವಾಗಿ ಚಾರಿತ್ರಿಕವಾಗಿ ಸಾಂಸ್ಕೃತಿಕ ವಾಗಿ ಯಾವ ಹಂತವನ್ನು ತಲುಪಬಲ್ಲದು ಎಂದು ಸ್ತ್ರೀಯರ ಸಂವೇದನಾಶೀಲ ಸಂಯಮ ದಿಂದಲೂ ಅಳೆಯಬಹುದು. ಈ ವಿಚಾರದಲ್ಲೂ ವ್ಯಕ್ತ ಅವ್ಯಕ್ತ ಸಂಬಂಧಗಳು ಬೆಸೆದುಕೊಂಡಿವೆ. ಹಾಗೆ ನೋಡಿದರೆ ವ್ಯಕ್ತವಾದ ಸಂಗತಿಗಳೆಲ್ಲವೂ ತತ್ಕಾಲೀನವಾದವು. ಪುರುಷಾಧಿ ಪತ್ಯದ ವ್ಯಕ್ತ ಅಭಿವ್ಯಕ್ತಿಗಳು ಮಾನವತ್ವದ ಬಹುದೂರವನ್ನು ಗ್ರಹಿಸದೆ ಉಂಟಾಗಿರುವ ಸಂಗತಿಗಳಾಗಿವೆ.

ಚರಿತ್ರೆಯ ಸಂರಚನೆಗೆ ಇಂತಹ ಸಂಗತಿಗಳನ್ನು ಸೇರಿಸಿಕೊಳ್ಳಬೇಕು. ಸಾಕ್ಷ್ಯಾಧಾರದ ಲೆಕ್ಕಾಚಾರದಲ್ಲಿ ವ್ಯಕ್ತ ಸಂಗತಿಗಳಿಗೆ ಮಾತ್ರವೆ ಸಾಕ್ಷಿಗಳು ದೊರಕುತ್ತವೆ. ಅವ್ಯಕ್ತ ಸಂವೇದನೆಗೆ ಸಾಕ್ಷಿಯ ಹಂಗು ಇರುವುದಿಲ್ಲ. ಆಧುನಿಕನಾಗುತ್ತ ಬಂದ ಮನುಷ್ಯನಿಗೆ ಸಾಕ್ಷ್ಯವೇ ಪರಮಸತ್ಯ ವಾಗಿ ಕಂಡದ್ದು ದರ್ಶನದ ಕೊರತೆಯಿಂದ. ಅವ್ಯಕ್ತ ಪ್ರಜ್ಞೆಯು ದರ್ಶನದ ಜೊತೆ ಬೆಸೆದು ಕೊಂಡು ವ್ಯಕ್ತಿಯ ಅಂತರಂಗದಲ್ಲೇ ಮಾಗಲು ತೊಡಗುತ್ತದೆ. ಹೀಗೆ ಒಳಗೇ ಮಾಗಿ ಮಾಗಿ ಹದವಾದದ್ದು ಒಂದು ಜನಾಂಗದ ಭಾಷೆಯ ದೇಶದ ಸಮಷ್ಠಿ ಅಭಿವ್ಯಕ್ತಿಯಾಗಿ ಕಲೆಯ ವಿವಿಧ ಪ್ರಕಾರಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ. ಇದು ಸಾಹಿತ್ಯ ರೂಪದಲ್ಲಿ ಗಾಡವಾಗಿ ವ್ಯಕ್ತವಾಗುತ್ತದೆ. ವ್ಯಕ್ತಪ್ರಜ್ಞೆ ಮಾತ್ರವೇ ಚರಿತ್ರೆಯಲ್ಲಿ ವಿಜೃಂಭಿಸುತ್ತದೆ. ಅವ್ಯಕ್ತವಾದದ್ದು  ಮತ್ತೆ ಸೃಜನಶೀಲ ಮನೋಧರ್ಮದಲ್ಲಿ ರೂಪಕ ಸಂಕೇತ ಪ್ರತಿಮೆಗಳಲ್ಲಿ ಅಖಂಡವಾಗಿ ವ್ಯಕ್ತವಾಗುತ್ತದೆ. ಹೀಗೆ ಅವ್ಯಕ್ತ ಪರಂಪರೆ ಭಾಷೆಯಲ್ಲಿ ರೂಪಾಂತರಗೊಳ್ಳುತ್ತಿದ್ದರೆ ಚರಿತ್ರೆಯು ಜಡವಾದ ಗದ್ಯಕ್ಕೆ ಸಿಲುಕಿ ಸಾಕ್ಷ್ಯಾಧಾರಗಳ ಹಂಗಿನಲ್ಲಿ ಒಂದು ಮುಖವನ್ನು ಮಾತ್ರ ಅಧಿಕೃತೀಕರಿಸುತ್ತದೆ.

ಸಂವೇದನೆ ಚರಿತ್ರೆಯ ಒಂದು ಪರಿಕಲ್ಪನೆ ಆಗಬಲ್ಲದು. ಸಂಯಮ ಎಂಬ ಗುಣಕ್ಕೆ ಮೂಲವಾದದ್ದು ಸಂವೇದನೆ. ಎಲ್ಲ ಕಲೆಗಳು ಸಂವೇದನೆಯ ವಿವಿಧ ಅಭಿವ್ಯಕ್ತಿಗಳು. ಚರಿತ್ರೆಯೂ ಆಳದಲ್ಲಿ ಒಂದು ಸಂವೇದನೆಯೆ ಆಗಿದೆ. ಮಹಿಳೆಯರ ಚರಿತ್ರೆಯಲ್ಲಿ ಸಂವೇದನಾಶೀಲ ಸಂಯಮಕ್ಕೆ ತಾಳಿಕೆಯ ಸಾಮಾರ್ಥ್ಯ ಎಂದೇ ವ್ಯಾಖ್ಯಾನಿಸಬೇಕಾಗುತ್ತದೆ. ಪ್ರತಿರೋಧವು ಸಂಯಮದಿಂದಲೂ ವ್ಯಕ್ತವಾಗಬಲ್ಲದು. ಆಕರವಾಗಿ ಕಾಣದ ಸಂವೇದನೆಯು ಇತಿಹಾಸದ ತತ್ವಕ್ಕೆ ಬುನಾದಿ ಒದಗಿಸುತ್ತದೆ. ಲಿಂಗತಾರತಮ್ಯದಲ್ಲಿ ಸಂಯಮ ಸ್ವಭಾವವು ದೌರ್ಬಲ್ಯವಲ್ಲ. ಅದೊಂದು ಶಕ್ತಿ, ಯುಕ್ತಿ, ತಿಳುವಳಿಕೆ ಹಾಗೂ ಬೆಳೆಯುವ ಗುಣ. ಚರಿತ್ರೆಯ ವ್ಯಕ್ತ ಅವ್ಯಕ್ತ ಸಂಬಂಧಗಳನ್ನು ಸಂವೇದನೆಯ ನೆಲೆಯಿಂದಲೂ ಹುಡುಕಬಹುದು. ಹೀಗಾಗಿ ಅವ್ಯಕ್ತ ಸ್ವಭಾವವು ತನಗೆ ತಾನೇ ಸಂತೈಸಿಕೊಳ್ಳುತ್ತ ಒಳಗೆ ಹೆಚ್ಚು ಸಾಮರ್ಥ್ಯವನ್ನು ಸಂಚಲನಗೊಳಿಸಿಕೊಳ್ಳುವ ಕ್ರಿಯೆಯಾಗಿದೆ.

. ಅರಿವಿನ ಪರೋಕ್ಷ ವರ್ತನೆ

ತಟ್ಟನೆ ಮುಚ್ಚಿಲ್ಲದೆ ವ್ಯಕ್ತಪಡಿಸುವ ಯಾವುದೆ ನಿರೂಪಣೆಗೂ ಒಂದು ಸಹಜ ಗುಣವಿರುತ್ತದೆ. ತಾಳಿಕೆಯಿಂದ ಪರೋಕ್ಷವಾಗಿ ಅರಿವನ್ನು ತೋರುವ ಕ್ರಮವು ವಿಶಿಷ್ಟ ವಾದದ್ದು. ಯಾಕೆ ಅರಿವು ಪರೋಕ್ಷಮಾರ್ಗದಲ್ಲಿ ಹರಿಯುತ್ತದೆ? ತತ್ವಜ್ಞಾನವೆಲ್ಲವೂ ರೂಪಕ ಭಾಷೆಯಲ್ಲಿ ನಿರೂಪಿಸಲ್ಪಡುತ್ತದೆ. ತತ್ವಜಿಜ್ಞಾಸೆ ಲೌಕಿಕದ ವ್ಯಕ್ತ ಪರಿಭಾಷೆಗಳ ಹಂಗಿನದಲ್ಲ. ಇರುವುದೆಲ್ಲದರ ಆಚೆಗಿನ ಇರುವನ್ನು ಅದು ಮನಸ್ಸಿನ ಸಾಕ್ಷ್ಯದಿಂದ ಸುಪ್ತ ಪ್ರಜ್ಞೆಯ ಬೆಳಕಿನಿಂದ ವಿವರಿಸುತ್ತದೆ. ಚರಿತ್ರೆಯ ತತ್ವವೂ ಈ ಬಗೆಯ ತತ್ವಶಾಸ್ತ್ರೀಯ ಸಂವೇದನೆ ಯದೇ ಆಗಿದೆ. ತತ್ವಶಾಸ್ತ್ರವು ಮನಸ್ಸಿನ ವಿಜ್ಞಾನವೂ ಹೌದು. ವಿಶ್ವದ ಅನಂತತೆಯನ್ನು ನಿರ್ವಚಿಸುವ ತತ್ವಶಾಸ್ತ್ರವು ಚರಿತ್ರೆಯನ್ನು ಅಲೌಖಿಕ ಪರಿಭಾಷೆಗಳಲ್ಲಿ ಹೇಳುತ್ತದೆ. ಇಂತಹ ಸಂವೇದನೆಯು ತೋರಿಕೆಯ ಸ್ವಭಾವದ್ದಲ್ಲ. ಆದಷ್ಟು ಸುಪ್ತವಾಗಿರುವುದೇ ಅದರ ವರ್ತನೆ. ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತು ಅರಿವಿನ ಸಮಗ್ರತೆಯನ್ನು ಬಿಂಬಿಸು ವಂತದ್ದು. ಹಾಗೆಯೆ ವಾಚ್ಯತೆಯನ್ನು ಅಲ್ಲಗಳೆಯುತ್ತ ಮೌನದ ಕಡೆಗೆ ಚಲಿಸುವಂತದ್ದು.

ಹಾಗಾಗಿಯೆ ಇಲ್ಲಿ ಸಾಮಾಜಿಕ ಪರಿಭಾಷೆಗಳ ಸಂತೆಯಿಲ್ಲ. ಬಸವಣ್ಣ ವಚನದಲ್ಲಿ ಕಹಳೆ ಮೊಳಗಿಸಿದರೆ ಅಲ್ಲಮ ಪ್ರಭು ಮೌನದಲ್ಲಿ ನಿಶ್ಯಬ್ದದ ಶಬ್ದವ ನುಡಿಸುವ ಬೆಡಗನ್ನು ಮಾಡುವುದಿದೆ. ಅಂದರೆ ಅರಿವು ಅವ್ಯಕ್ತತೆಯನ್ನು ಅನುಸರಿಸಿ ವ್ಯಕ್ತಿಯ ಪ್ರಜ್ಞೆಯಲ್ಲಿ ಬೆಳಗುತ್ತದೆ. ಚರಿತ್ರೆಯಲ್ಲು ಇದು ನಿಜ. ಚರಿತ್ರೆಯ ಸುಪ್ತ ಪ್ರಜ್ಞೆಯಿಂದಾಗಿಯೆ ಮನುಷ್ಯ ಪಾಠ ಕಲಿಯುವುದು. ಅವ್ಯಕ್ತ ಚರಿತ್ರೆಗೆ ಸುಪ್ತಪ್ರಜ್ಞೆಯ ಬೆಳಕಿರುವುದುರಿಂದಲೇ ಅದೊಂದು ಅರಿವಿನ ಪರೋಕ್ಷ ಹಾದಿಯಲ್ಲಿ ವ್ಯಕ್ತವಾದ ಎಲ್ಲ ಸಂಗತಿಗಳನ್ನು ಮೀರಿ ನಡೆಯಲು ಸಾಧ್ಯವಾಗುವುದು. ಕಳಿಂಗ ಯುದ್ಧದ ನರಮೇಧಕ್ಕೆ ಹೇಸಿ ಅಶೋಕ ಅಹಿಂಸೆಯ ಬುದ್ಧನ ತತ್ವಕ್ಕೆ ಮಾರುಹೋಗುವುದು ಅವ್ಯಕ್ತ ಚರಿತ್ರೆಯ ಸಂವೇದನೆಯನ್ನು ತೋರುವಂತದ್ದು. ಯುದ್ಧದ ರಾಜಕೀಯ ತಂತ್ರ ಬೇರೆ. ತತ್ವಶಾಸ್ತ್ರವು ಎಲ್ಲ ಗೆಲುವುಗಳ ಕೃತಕತೆಯನ್ನು ಮನೋಜ್ಞವಾಗಿ ಭೋದಿಸುತ್ತದೆ. ಚರಿತ್ರೆಯ ವ್ಯಕ್ತ ದಿಗ್ವಿಜಯಗಳಲ್ಲಿ ವ್ಯರ್ಥವಾದ ಶ್ರಮ ವಿರುತ್ತದೆ. ಈ ಶ್ರಮದ ಮೌನವು ಅವ್ಯಕ್ತ ತಪ್ತತೆಯಲ್ಲಿ ಪರಿವರ್ತನೆಯ ಹಾದಿಯನ್ನು ಶೋಧಿಸಿಕೊಳ್ಳುತ್ತದೆ. ಇದರಲ್ಲೇ ತತ್ವಶಾಸ್ತ್ರವೂ ಚರಿತ್ರೆಯೂ ಎರಡು ಕವಲಾಗಿ ಭಿನ್ನ ಧೋರಣೆಗಳಲ್ಲಿ ಜ್ಞಾನ ಪರಂಪರೆಗಳಿಗೆ ಬೆಸೆದುಕೊಳ್ಳುವುದು.

ಮರದ ಚೆಲುವು ವ್ಯಕ್ತರೂಪ. ಬೇರು ಅವ್ಯಕ್ತ ಸ್ವರೂಪ. ಮರದ ಹೊರಮೈ ಅದರ ಒಳಮೈ ಇವೆರಡಕ್ಕೂ ನಿಸರ್ಗದ ವಿವಿಧ ಆಯಾಮಗಳ ಸಂಬಂಧವಿದೆ. ವ್ಯಕ್ತ ಅವ್ಯಕ್ತ ಎರಡನ್ನೂ ನಿರ್ಧರಿಸುವ “ಆ” ರೂಪಗಳು ನಮ್ಮ ಅರಿವನ್ನು ನಿರ್ಧರಿಸಲು ಇರುವ ಜೈವಿಕಾಂಶ ಗಳು. ಜೀವದ ಅಸ್ತಿತ್ವದ ವ್ಯಕ್ತ ಅವ್ಯಕ್ತತೆಯಲ್ಲೆ ಬೆರೆತುಹೋಗಿರುವ ನಿಸರ್ಗದ ಶಕ್ತಿಗಳು ತತ್ವದಂತೆ ಕಾರ್ಯನಿರ್ವಹಿಸುತ್ತಿರುತ್ತವೆ. ಇಂತಹ ಸಂಬಂಧಗಳನ್ನೆ ತತ್ವಶಾಸ್ತ್ರವು ಹುಡುಕು ವುದು. ಅಂದರೆ ಅರಿವಿನ ರೀತಿಯು ಹೀಗೆ ಪರೋಕ್ಷವಾಗಿದ್ದುಕೊಂಡೇ ಪ್ರತಿಯೊಂದು ಘಟನೆಗಳಲ್ಲು ಅಂತರ್ಗತವಾಗಿರುತ್ತದೆ. ಚರಿತ್ರೆಯ ವ್ಯಕ್ತ ಸ್ವರೂಪದಲ್ಲೆ ಅವ್ಯಕ್ತವಾಗಿರುವ ಸಂಗತಿಗಳು ಅರಿವಿನ ದಾರಿಯಲ್ಲಿ ಸಾಗಿಬರುತ್ತವೆ. ಚರಿತ್ರೆ ರಚನಾ ವಿನ್ಯಾಸದಲ್ಲಿ ಸುಪ್ತಭಾವ ದಂತೆ ಇವನ್ನೆಲ್ಲ ಬೆಸೆಯಬೇಕಾದುದಿದೆ. ನಿಸರ್ಗವೇ ಒಂದು ಬಗೆಯಲ್ಲಿ ಅವ್ಯಕ್ತತೆಯನ್ನು ಹೊದ್ದುಕೊಂಡಿದೆ. ವ್ಯಕ್ತಿಯೂ ಕೂಡ ಲೌಖಿಕದ ಎಲ್ಲ ರೂಪ ವಿರೂಪಗಳನ್ನು ಧರಿಸಿದ್ದಾನೆ. ವ್ಯಕ್ತಿ ಹಾಗೂ ನಿಸರ್ಗ ಎರಡರಲ್ಲು ಇರುವ ಅವ್ಯಕ್ತತೆಗಳು ಜ್ಞಾನಪರಂಪರೆಗಳಲ್ಲಿ ತಮ್ಮ ಸಾರ್ಥಕತೆಯನ್ನು ಪಡೆದುಕೊಳ್ಳುತ್ತವೆ. ಹೀಗಾಗಿಯೆ ಚರಿತ್ರೆಯ ಧ್ಯಾನದಲ್ಲು ದರ್ಶನವನ್ನು ಕಾಣಲು ಸಾಧ್ಯ. ಗಾಢವಾದ ಚರಿತ್ರೆಕಾರ ತತ್ವಶಾಸ್ತ್ರಜ್ಞನೂ ಹೌದು ಹಾಗೆಯೆ ಸಂತನ ಧ್ಯಾನಶೀಲ ಗುಣವನ್ನು ಪಡೆದ ತಪಸ್ವಿಯೂ ಹೌದು. ಚರಿತ್ರೆಯ ರಚನಾ ವಿನ್ಯಾಸಕ್ಕೆ ಇಂತಹ ವ್ಯಕ್ತಿತ್ವ ಅಗತ್ಯವಾಗಿ ಬೇಕು. ಎಲ್ಲ ಚರಿತ್ರೆಯ ನಿರೂಪಣೆಗಳು ವ್ಯಕ್ತತೆಯ ಗರ್ವದಿಂದ ಕೊಬ್ಬಿಹೋಗಿವೆ. ಅರಿವಿಲ್ಲದ ಚರಿತ್ರೆಯು ಮಾನವ ಸಾಧ್ಯತೆಗೆ ಅನುಪಯುಕ್ತ.

. ಜೈವಿಕ ಸ್ವಭಾವ

ಮೇಲೆ ವಿವರಿಸಿದ ಅಂಶಗಳು ಒಂದು ಬಗೆಯಾದರೆ ಜೈವಿಕ ಸ್ವಭಾವದ ಅಂಶಗಳು ಇನ್ನೊಂದು ಬಗೆಯನ್ನು ಅವ್ಯಕ್ತ ನೆಲೆಯಲ್ಲಿ ಬಿಂಬಿಸುತ್ತವೆ. ಅನೇಕ ಸಂಗತಿಗಳಲ್ಲಿ ಕೆಲವನ್ನು ಬಚ್ಚಿಡಬೇಕಾದದ್ದು ಜೀವ ವಿಕಾಸದ ಒಪ್ಪಂದ. ದೇಹಕ್ಕೆ ಎರವಾಗುವ ವೈರಸ್‌ಗಳೆಲ್ಲವು ಸಾವಿರಾರು ವರ್ಷಗಳ ಹಿಂದೆಯೆ ಮಾನವನ ಡಿ.ಎನ್.ಎ ರಚನೆಯ ಒಂದು ವಿಶಿಷ್ಟ ಸೆರೆಮನೆ ಯಲ್ಲಿ ಬಂಧಿಯಾಗಿವೆ ಎಂದು ವಿಜ್ಞಾನ ಹೇಳುತ್ತದೆ. ಅಂತೆಯೇ ವ್ಯಕ್ತಪಡಿಸಲಾಗದ ಎಷ್ಟೋ ಸಂಗತಿಗಳು ಮನಸ್ಸಿನ ಸುಪ್ತಪ್ರಜ್ಞೆಯಲ್ಲಿ ಉಳಿದುಬಿಡುತ್ತವೆ. ಇದರಿಂದಲೆ ಕನಸುಗಳು ಬೀಳುವುದೆಂದು ಮನೋವಿಜ್ಞಾನಿಗಳು ಪ್ರತಿಪಾದಿಸಿದ್ದುದು. ಆದರೆ ಚರಿತ್ರೆಯಲ್ಲಿ ಕನಸುಗಳು ಬೀಳುವುದು ಬೇರೆ. ಚರಿತ್ರೆಯ ಕನಸುಗಳನ್ನು ವ್ಯಕ್ತಿ ಸಾಧಿಸಿಕೊಳ್ಳುವುದು ಕೂಡ ಬೇರೆ. ಮಾನವರ ಒಟ್ಟು ಅಸ್ತಿತ್ವದ ಏಳು ಬೀಳುಗಳು ಒಂದು ಮಾನವ ಪ್ರಜ್ಞೆಯಾಗಿ ಎಚ್ಚರಗೊಳ್ಳುವುದು ವಿಶೇಷ. ಇಟ್ಲರನ ನರಮೇಧ ಕೃತ್ಯಗಳಿಂದ ಯುರೋಪ್ ಜನಾಂಗವೇ ಪ್ರಜ್ಞೆಯನ್ನು ಬೇರೊಂದು ರೀತಿಯಲ್ಲಿ ರೂಪಿಸಿಕೊಂಡಿತು. ಮಾನವ ಲೋಪಗಳ ಪರಿಣಾಮಗಳೆಲ್ಲ ಆದರ್ಶ ರಾಜ್ಯದ ಕನಸನ್ನು ತತ್ವಶಾಸ್ತ್ರೀಯವಾಗಿ ಮಂಡಿಸಿದವು. ಗಾಂಧೀಜಿಯ ರಾಮರಾಜ್ಯದ ಕನಸು ಕೂಡ ಇಂತಹ ಪ್ರಜ್ಞೆಯಿಂದಲೇ ಬಂದದ್ದು. ಇಲ್ಲಿ ಮೇಲೆ ಪ್ರಸ್ತಾಪಿಸಿದ್ದಕ್ಕೆ ಹಿಂತಿರುಗಿ ಹೇಳುವುದಾದರೆ, ಮನುಷ್ಯ ತನ್ನ ಕೇಡನ್ನು ಬಚ್ಚಿಡಲು ಜೀವ ರಚನೆಯಾದ ಡಿ.ಎನ್.ಎ ತರದ ವ್ಯವಸ್ಥೆಯನ್ನು ಸದಾ ಬಯಸುತ್ತಾನೆಯಾದರೂ ಅದು ಅಷ್ಟು ಸುಲಭವಾಗಿ ಆತನ ವಿಕಾಸದ ಹಾದಿಯಲ್ಲಿ ಇನ್ನೂ ಸಾಧ್ಯವಾಗಿಲ್ಲ. ನಮ್ಮ ಜೈವಿಕತೆಯಲ್ಲೇ ಪರಿಪೂರ್ಣತೆಯಿಲ್ಲ. ಮನಸ್ಸು ಎಲ್ಲವನ್ನು ಸುಪ್ತವಾಗಿಟ್ಟುಕೊಳ್ಳಬಲ್ಲದಾದರೂ ಅದು ಎಲ್ಲವನ್ನು ಬೇಕಾದರೆ ಯಾವುದೆ ಹೊತ್ತಿನಲ್ಲು ಹೊರಹಾಕಿಕೊಳ್ಳಬಲ್ಲದು. ಮನಸ್ಸನ್ನು ನಿಯಂತ್ರಿಸಲಾಗದ ಸಮೂಹ ಸಮ್ಮೋಹಿನಿಯು ಹೀಗಾಗಿಯೆ ಚರಿತ್ರೆಯ ಪಾಠಗಳಿಂದ ದೂರವಾಗಿ ವರ್ತಿಸು ವುದು. ಅವ್ಯಕ್ತವಾದ ಸಂಗತಿಯನ್ನು ಅನುಸರಿಸಲು ಸಮೂಹ ಸನ್ನಿಗೆ ಯಾವತ್ತೂ ಸಾಧ್ಯವಿಲ್ಲ. ವ್ಯಕ್ತವಾದದ್ದರ ಬರ್ಬರತೆಯು ಇಂತಲ್ಲಿ ಸಮೂಹಕ್ಕೆ ಉತ್ಸಾಹವನ್ನೆ ಭೋದಿಸಬಲ್ಲದು.

ಹಿಂಸೆಯ ಗುಣ ಜೈವಿಕವಾಗಿಯೂ ಬರುವ ಅಂಶವಾದ್ದರಿಂದ ಆ ಹಿಂಸೆಯ ಅಭಿವ್ಯಕ್ತಿ ಯನ್ನು ಆನಂದಿಸುವ ಅಪಾಯವಿದೆ. ಇದಕ್ಕಾಗಿಯೇ ನೀತಿಯ ಅಂಕುಶವನ್ನು ಮನುಷ್ಯ ಧಾರ್ಮಿಕವಾಗಿ ತೊಟ್ಟುಕೊಂಡದ್ದು. ಧರ್ಮಗಳು ನೀತಿ ಸಾರವನ್ನು ಭೋದಿಸುವುದೇ ಕೇಡನ್ನು ಬಚ್ಚಿಡಲು ಅಥವಾ ನಾಶಪಡಿಸಿಕೊಳ್ಳಲು. ಈ ದಾರಿಯಲ್ಲಿಯೂ ಅವ್ಯಕ್ತ ಸ್ವಭಾವ ಕೆಲಸ ಮಾಡುತ್ತದೆ. ಆದರಿದು ಚರಿತ್ರೆಯ ಸಂದರ್ಭದಲ್ಲಿ ಬೇರೆಯಾಗಿ ವರ್ತಿಸುತ್ತದೆ. ಚರಿತ್ರೆಯ ಸಂದರ್ಭದಲ್ಲಿ ಜೈವಿಕ ಅಂಶವು ಅವ್ಯಕ್ತಸ್ವಭಾವವನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಗ್ರಹಿಸಲು ಸಿದ್ಧಕ್ರಮಗಳಿಲ್ಲ. ಜೀವ ವಿಕಾಸದ ಜೈವಿಕತೆಯು ಕಣ್ಣಿಗೆ ಕಾಣುವಂತದಲ್ಲ. ವಿಕಾಸದ ಚಲನೆಯು ಅತ್ಯಂತ ನಿಧಾನವಾದದ್ದು ಮತ್ತು ಕೇವಲ ಬೆಳವಣಿಗೆಯ ಭೌತಿಕ ಸ್ವರೂಪಕ್ಕೆ ಮಾತ್ರ  ಸೀಮಿತವಾಗುವಂತದಲ್ಲ. ಹೀಗಾಗಿ ಅವ್ಯಕ್ತತೆಯ ಚಲನೆ ಎಲ್ಲ ಅಭಿವ್ಯಕ್ತಿ ಗಳಲ್ಲು ದೃಶ್ಯಸ್ವರೂಪಿಯಾದುದಲ್ಲ. ವ್ಯಕ್ತವಾದದ್ದು ಒಂದು ಬಗೆಯಲ್ಲಿ ಬೆಳವಣಿಗೆ. ಅವ್ಯಕ್ತವಾದದ್ದು ಅದೃಶ್ಯ ಚಲನೆ. ಚಲನೆ ವಿಕಾಸಪರ, ಬೆಳವಣಿಗೆ ವರ್ತಮಾನದ ಒಂದು ಅಸ್ತಿತ್ವದ ವೇಗ. ವೇಗ, ಚಲನೆ, ವಿಕಾಸ, ಅಸ್ತಿತ್ವ, ಅಭಿವ್ಯಕ್ತಿ, ಅವ್ಯಕ್ತ ಹಾಗೂ ವ್ಯಕ್ತ ಇವೆಲ್ಲ ಒಂದರೊಳಗೊಂದು ಬೆರೆತಿರುತ್ತವೆ. ಇದು ಜೈವಿಕತೆಯ ಸಹಜ ಸ್ವಭಾವದ ಚಲನಶೀಲ ವಿಕಾಸ ಪ್ರವೃತ್ತಿ.

. ಪ್ರಭುತ್ವದ ಹೇರಿಕೆ

ನಾಗರೀಕತೆಯ ವಿಶೇಷ ಲಕ್ಷಣವೆಂದರೆ ಅದು ತನ್ನ ಸ್ವಮುಖ ಚರಿತ್ರೆಯನ್ನು ಹೇರುವುದಕ್ಕಾಗಿ ಪ್ರಭುತ್ವದ ಶಕ್ತಿಗಳನ್ನು ಬಳಸಿಕೊಳ್ಳುವುದು ಮತ್ತು ಹಲವು ಚರಿತ್ರೆಗಳನ್ನು ನಿರಾಕರಿಸುವುದು. ಪ್ರಭುತ್ವವು ತನಗೆ ನ್ಯಾಯ ಎಂದು ಕಂಡದ್ದನ್ನು ಚರಿತ್ರೆಯಲ್ಲಿ ಉಳಿಸಿಕೊಳ್ಳುತ್ತದೆ. ಇದು ಮನುಷ್ಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ದೇಶಿಸುವುದಕ್ಕೆ ಪೂರಕವಾಗಿರುತ್ತದೆ. ಸಾಮ್ರಾಜ್ಯಗಳು ಜನಾಭಿಪ್ರಾಯವನ್ನೇ ಪರಿಗಣಿಸುವುದಿಲ್ಲ ಎಂದ ಮೇಲೆ ಇನ್ನು ಅವು ಸಮಾಜದ ಅವ್ಯಕ್ತ ದನಿಗಳನ್ನು ಆಲಿಸಲು ಸಾಧ್ಯವೇ ಇಲ್ಲ. ಈ ಸ್ಥಿತಿಯಲ್ಲಿ ಅವ್ಯಕ್ತವಾಗಿ ಅಡಗಿರುವ ದನಿಗಳನ್ನು ಚರಿತ್ರೆಕಾರ ಹೇಗೆ ಆಲಿಸಬೇಕು ಎಂಬುದು ವ್ಯಕ್ತಿವಿಶಿಷ್ಟ ಸೃಜನಶೀಲ ಗ್ರಹಿಕೆಗೆ ಬಿಟ್ಟ ಸಂಗತಿ. ಪ್ರಭುತ್ವದ ಎಷ್ಟೇ ಹೇರಿಕೆಯ ನಡುವೆಯೂ ಅಲಕ್ಷಿತ ಸಮುದಾಯಗಳು ತಮ್ಮ ರೂಪಕ ಅಭಿವ್ಯಕ್ತಿಯ ಪರೋಕ್ಷ ಕ್ರಮಗಳನ್ನು ಮರೆಯಲಿಲ್ಲ. ವ್ಯಕ್ತದನಿಗಳು ಪ್ರಬಲವಾದಂತೆಲ್ಲ ಅವ್ಯಕ್ತ ದನಿಗಳೂ ಬಹುರೂಪಗೊಂಡು ರೂಪಕ ಭಾಷೆಯನ್ನು ರೂಪಿಸಿಕೊಳ್ಳುತ್ತಿರುತ್ತವೆ. ಮೌಖಿಕ ಕಾವ್ಯಗಳು ತನ್ನ ಕಾಲದ ರಾಜಶಾಹಿಯ ಬಗ್ಗೆ ಒಂದಿನಿತೂ ಹಾಡದೆ ತನ್ನ ಸುತ್ತಮುತ್ತಲ ಸಂಗತಿಗಳಲ್ಲೇ ಲೋಕ ಲೋಕಾಂತರಗಳನ್ನೆಲ್ಲ ಬಿಂಬಿಸಿ ಹಾಡುವುದು ಅಸಾಮಾನ್ಯವಾದದ್ದು. ಹಾಗಾಗಿಯೆ ಒಬ್ಬ ಜನಪದ ಗಾಯಕ ತನ್ನ ಕಾಲದ ಹಂಗನ್ನು ತೊರೆದು ತನ್ನ ದೊರೆಯ ಸೀಮೆಯನ್ನು ಮೀರಿ ತನ್ನ ಲೌಕಿಕದ ಎಲ್ಲ ಅಸಮಾನ ನ್ಯಾಯದ ಆಚೆಗೆ ಜಿಗಿದು ಲೋಕಾಂತರಗಳಲ್ಲಿ ವಿಹರಿಸಿ ವರ್ತಮಾನದತ್ತ ಕಿರುನೋಟ ಬೀರುವುದು. ಸಾಂಸ್ಕೃತಿಕ ನಾಯಕರನ್ನು ಮುಂದೊಡ್ಡುತ್ತ ಸಾಮ್ರಾಟರನ್ನು ಮರೆವ ಈ ಪರಿಯೆ ಅವ್ಯಕ್ತ ಚರಿತ್ರೆಯ ಸ್ವರೂಪ. ಪ್ರಭುತ್ವ ಇಂತಹ ಸಾಂಸ್ಕೃತಿಕ ನಾಯಕರನ್ನು ಯಾವ ರೀತಿಯಲ್ಲು ಬಂಧಿಸಿಲಾರದು. ದಂಡಿಸುವುದಕ್ಕೂ ಅದಕ್ಕೆ ಮಂತ್ರ ತಿಳಿಯದು. ಮಾಂತ್ರಿಕವಾದ ಜನಪದರ ಭಾಷೆಯು ಲೌಕಿಕದ ಎಲ್ಲ ದಿಗ್ವಿಜಯ ಗಳನ್ನು ಮೀರಿ ಎಲ್ಲೆದಾಟಿ ಹೋಗುವುದು ಪ್ರಭುತ್ವಕ್ಕೆ ತೋರುವ ಪ್ರತಿಕ್ರಿಯೆಯಾಗಿದೆ. ಮಾಂತ್ರಿಕವಾದ, ರಮ್ಯವಾದ, ಅದ್ಭುತವಾದ ಲಹರಿಯ ನಿರೂಪಣೆಗಳೆಲ್ಲ ವ್ಯಕ್ತ ಚರಿತ್ರೆಗೆ ತೋರಿದ ಅವ್ಯಕ್ತ ಚರಿತ್ರೆಯ ಅಭಿವ್ಯಕ್ತಿಗಳೇ ಆಗಿವೆ. ಇಲ್ಲಿ ಚರಿತ್ರೆಗೂ ಚರಿತ್ರೆಯ ಆಕರಕ್ಕೂ ವ್ಯತ್ಯಾಸವೇ ಇಲ್ಲದ ಅವಿನಾಭಾವ ಸಂಬಂಧ ಬೆಸುಗೆ ಆಗಿರುವುದನ್ನು ಗಮನಿಸಬೇಕು. ಅವ್ಯಕ್ತ ಚರಿತ್ರೆಗೆ ಹೀಗಾಗಿಯೇ ದ್ವಂದ್ವವಿಲ್ಲ ಅಂತೆಯೆ ವಸ್ತು ಹಾಗೂ ವಸ್ತು ಭಾವ ಎಂಬ ಅಂತರವಿಲ್ಲ. ತಾನೇ ಸಾಕ್ಷ್ಯ ತಾನೇ ವಾಸ್ತವ ತಾನೇ ಚರಿತ್ರೆ ತಾನೇ ಗ್ರಹಿಕೆ ಎಂಬ ಅಂತರ್ ಸಂಬಂಧ ತಂತಾನೆ ಅವ್ಯಕ್ತ ಚರಿತ್ರೆಯಲ್ಲಿ ಘಟಿಸುತ್ತದೆ. ಚರಿತ್ರೆ ರಚನಾ ವಿನ್ಯಾಸದ ಈ ಪರಿಯ ಸಂಯುಕ್ತ ಅಭಿವ್ಯಕ್ತಿಯು ಸುಪ್ತ ಪ್ರಜ್ಞೆಯ ಕೇಂದ್ರದಿಂದ ನಿರ್ಧಾರವಾಗುತ್ತಿರುತ್ತದೆ.

. ಸುಪ್ತ ಪ್ರಜ್ಞೆಯ ಗುಣ

ಸುಪ್ತ ಪ್ರಜ್ಞೆಯ ಅರಿವಿನಿಂದಾಗಿಯೆ ಮನುಷ್ಯ ಹೆಚ್ಚು ಜಾಗೃತನಾಗಿರುವುದು. ಜಾಗೃತಾ ವಸ್ಥೆಗೆ ಸೀಮಿತ ಪರಿಧಿಯಿದ್ದರೆ ಸುಪ್ತ ಪ್ರಜ್ಞೆಗೆ ಮಾನವನ ಅಖಂಡ ನೆನಪಿನ ವಿಸ್ತಾರ ಸಾಧ್ಯತೆಯಿದೆ. ಚರಿತ್ರೆಯು ಜಾಗೃತಾವಸ್ಥೆಯ ದಾಖಲೆಯಾದರೆ ಅವ್ಯಕ್ತ ಚರಿತ್ರೆಯು ಸುಪ್ತ ಪ್ರಜ್ಞೆಯ ಸಂವೇದನೆಯಾಗಿದೆ. ಬೇಕಂತಲೆ ಇಲ್ಲಿ ‘ದಾಖಲೆ’ ಹಾಗೂ ‘ಸಂವೇದನೆ’ ಎಂಬ ಎರಡು ಅಂಶಗಳನ್ನು ಪ್ರಸ್ತಾಪಿಸಿದೆ. ಮನುಷ್ಯ ಬುದ್ದಿಪೂರ್ವಕವಾಗಿ ವಾಸ್ತವಾಂಶಗಳ ಆಧಾರದಲ್ಲಿ ತನ್ನ ನೆನಪಿನ ಸಾಧನೆಯ ಚರಿತ್ರೆಯನ್ನು ಜಾಗೃತಾವಸ್ಥೆಯ ಆಧಾರದಲ್ಲಿ ರೂಪಿಸಿಕೊಂಡ. ಅದಕ್ಕಾಗಿಯೆ ತನ್ನ ಜಾಗೃತಾವಸ್ಥೆಯ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿಕೊಂಡ. ‘ಬುದ್ದಿಬಂದಾಗಿನಿಂದ’ ಎಂಬ ಅಳತೆಯಿಂದ ನೋಡಿದರೆ ಮನುಷ್ಯ ತನ್ನ ಇತ್ತೀಚಿನ ಜಾಗೃತಿ ಯಿಂದ ಚರಿತ್ರೆ ಬರೆದುಕೊಳ್ಳುವುದನ್ನು ಕಲಿತ. ಹೆಚ್ಚೆಂದರೆ ಮನುಷ್ಯನ ಚಾರಿತ್ರಿಕ ಪ್ರಜ್ಞೆಗೆ ಐದು ಸಾವಿರ ವರ್ಷಗಳ ವ್ಯಾಪ್ತಿಯಿದೆ. ಬೇಸಾಯ ಸಂಸ್ಕೃತಿಗೆ ಬಂದ ನಂತರವೇ ಲಿಖಿತ ಭಾಷೆಯ ಆಕರಗಳೂ ಮನುಷ್ಯ ಚರಿತ್ರೆಗೆ ಸಾಧ್ಯವಾದವು. ಕಳೆದ ಐದುಸಾವಿರ  ವರ್ಷಗಳ ಅವಧಿಯಲ್ಲಿ ಅಳೆದುಸುರಿದು ನೋಡಿದರೆ ಮಾನವ ಕೇವಲ ತನ್ನ ಕಳೆದ ಮೂರುಸಾವಿರ ವರ್ಷಗಳ ನೆನಪನ್ನು ಮಾತ್ರ ಚರಿತ್ರೆಯಲ್ಲಿ ರಕ್ಷಿಸಿಟ್ಟುಕೊಳ್ಳಲು ಸಾಧ್ಯವಾಗಿದೆ. ಅಂದರೆ ವ್ಯಕ್ತವಾದ ಚರಿತ್ರೆಯ ಸಮಯಾವಕಾಶವೇ ಅತ್ಯಂತ ಕಿರಿದು. ಸುಪ್ತಪ್ರಜ್ಞೆಯ ಆಳದ ಅವ್ಯಕ್ತ ಚರಿತ್ರೆಯ ಸಂವೇದನೆಗೆ ಹಾಗಾದರೆ ಎಷ್ಟು ಯುಗಗಳ ನೆನಪಿನ ಶಕ್ತಿ ಇರಬಹುದು. ಮಿಲಿ ಯಾಂತರ ವರ್ಷಗಳ ನೆನಪಿನ ಕೋಶಗಳು ಮನುಷ್ಯನ ಡಿ.ಎನ್.ಎ ರಚನೆಯಲ್ಲಿ ಅಡಗಿವೆ. ಈ ಡಿ.ಎನ್.ಎ ರಚನೆಗೂ ಸುಪ್ತ ಪ್ರಜ್ಞೆಗೂ ನಿಗೂಢವಾದ ಅಂತರ್‌ಜಾಲದ ಸಂಬಂಧವಿದೆ. ಜೀವ ವಿಕಾಸದ ಕೊಂಡಿಯಾಗಿ ಈ ಸಂವೇದನೆಯನ್ನು ಭಾವಿಸಬಹುದು.

ವ್ಯಕ್ತ ಚರಿತ್ರೆಯು ವಾಸ್ತವದ ಒಂದು ದೃಷ್ಟಿಯಲ್ಲಿ ಮಾತ್ರ ನಿಜವಾಗಿದ್ದರೆ ಅನೇಕ ಮುಖಗಳಲ್ಲಿ ಅದು ಅವಾಸ್ತವವೂ ಹುಸಿಯೂ ಆಗಿರುವುದು ಕಾಣುತ್ತದೆ. ಹೆಚ್ಚು ಬಾರಿ ಜಾಗೃತಾವಸ್ಥೆಯೆ ವ್ಯವಸ್ಥಿತವಾಗಿ ವಸ್ತುಸ್ಥಿತಿಯ ಹತ್ತಾರು ಅಂಶಗಳನ್ನು ಬುದ್ದಿಪೂರ್ವಕವಾಗಿ ತರ್ಕಬದ್ಧವಾಗಿ ಸಾಕ್ಷ್ಯಾಧಾರಗಳಿಂದ ಮುಚ್ಚಿಡುತ್ತದೆ. ಅಂದರೆ ಒಂದು ನಿಜವನ್ನು ಸ್ಥಾಪಿಸಲು ಹತ್ತಾರು ಭಿನ್ನ ನಿಜಗಳನ್ನು ಮರೆಮಾಡಲಾಗುತ್ತದೆ. ಹೀಗಾಗಿಯೆ ಇದನ್ನು ದಾಖಲೆ ಎಂದು ಮಾತ್ರ ಪರಿಗಣಿಸಬೇಕೇ ವಿನಃ ಸಂವೇದನೆ ಎಂದು ಹೇಳಲಾಗದು. ಮಾನವ ವಿಕಾಸದ ಚರಿತ್ರೆಯಲ್ಲಿ ಸುಪ್ತ ಪ್ರಜ್ಞೆಯು ಎಷ್ಟೆಲ್ಲ ಬಗೆಯ ಸ್ವರೂಪಗಳನ್ನು ಉಳಿಸಿಕೊಂಡಿದೆಯೋ ಏನೋ! ಒಟ್ಟಿನಲ್ಲಿ ಸುಪ್ತಪ್ರಜ್ಞೆಯ ಈ ಬಹುರೂಪಿ ಸ್ವರೂಪಗಳೆಲ್ಲವೂ ಸಂವೇದನೆಯಾಗಿ ಮಾರ್ಪಟ್ಟಿರುವುದಂತು ನಿಜ. ಹಾಗಾಗಿಯೆ ಚರಿತ್ರೆಯು ಸಂಕೀರ್ಣ ಪುರಾಣವಾಗಿಯು ರೂಪಕ ಸಂಕೇತಗಳ ಭಾಷೆಯಾಗಿ ರೂಪಾಂತರಗೊಳ್ಳುವುದು. ದಾಖಲೆಗೂ ಸಂವೇದನೆಗೂ ಇದರಿಂದಲೇ ಅಂತವಿರುವುದು. ಡಿ.ಎನ್.ಎ ರಚನೆಯಲ್ಲಿ ಸಂವೇದನೆ ಅನುವಂಶಿಕ ಗುಣವಾಗಿ ಸಾಗಿ ರಾಚನಿಕವಾಗಿಯೆ ತನ್ನ ವಿನ್ಯಾಸದ ಸಂಕೀರ್ಣ ಕ್ರಮದಿಂದಲೇ ಅವ್ಯಕ್ತ ಸ್ವರೂಪ ವನ್ನು ಅಂತರ‍್ಗತಿಸಿಕೊಂಡಿದೆ. ಇದು ಮನುಷ್ಯನ ಅವ್ಯಕ್ತ ಪ್ರಜ್ಞೆಗೆ, ಅವ್ಯಕ್ತ ಸ್ವಭಾವಕ್ಕೆ ಅವ್ಯಕ್ತ ಚರಿತ್ರೆಗೆ ಬಹುಮುಖ್ಯ ಕಾರಣವಾಗಿದೆ. ವಿಜ್ಞಾನಿಗಳು ಇದನ್ನು ಬಿಡಿಸಿ ಹುಡುಕಿ ಹೇಳಿದರೆ ಈ ನಿಟ್ಟಿನಲ್ಲಿ ಇನ್ನಷ್ಟು ಉಪಯುಕ್ತ ದಾರಿಗಳು ತೆರೆದುಕೊಳ್ಳಬಲ್ಲವು.

ಸುಪ್ತಪ್ರಜ್ಞೆಯು ಅಭಿವ್ಯಕ್ತಿಯ ಅತ್ಯುತ್ತಮ ನಿರ್ವಹಣಾ ವ್ಯವಸ್ಥೆ. ಒಂದು ವೇಳೆ ಮನಸ್ಸಿಗೆ ಅನುಭವವಾಗಿ ಬಂದದ್ದನ್ನೆಲ್ಲ ಯಾವ ತಡೆಯೂ ಇಲ್ಲದೆ ಹೊರ ಹಾಕಿಕೊಳ್ಳುವಂತಾಗಿದ್ದರೆ ಮೆದುಳಿನ ವಿಕಾಸ ಈ ರೂಪದಲ್ಲಿ ಆಗುತ್ತಿರಲಿಲ್ಲ. ಭಾಷೆಯ ಸ್ವರೂಪವೂ ಸಂವಹನದ ರೀತಿಯೂ ಹೀಗೆ ಇರಲಾಗುತ್ತಿರಲಿಲ್ಲ. ವಿವೇಚನೆಯ ಬೆಳವಣಿಗೆಯಲ್ಲು ಸುಪ್ತಪ್ರಜ್ಞೆ ಉಪಕರಿಸಿದೆ. ಮನಸ್ಸಿನ ಸುಪ್ತಕೋಶದಲ್ಲಿ ಮಾಗಿದ್ದುದೆಲ್ಲ ಜ್ಞಾನಪರಂಪರೆಗೆ ಬೇಕಾದ ಅಭಿವ್ಯಕ್ತಿಯ ತುಡಿತವನ್ನು ಸೃಷ್ಟಿಸುತ್ತದೆ. ಭಾಗಶಃ ಕೆಡುಕಿನ ಉತ್ಕಟ ಒತ್ತಡಕ್ಕೂ ಇಲ್ಲೇ ಅವಕಾಶವೂ ಇರಬಹುದು. ಚರಿತ್ರೆಯಲ್ಲಿ ನಾಜಿವಾದದಂತಹ ಭಯಾನಕ ಸಂಗತಿಗಳು ಅಪಸಾಮಾನ್ಯ ಮನೋವಿಕಾರಗಳಾಗಿ ಘಟಿಸಿದ್ದನ್ನು ಮರೆಯಲಾಗದು. ದೇವರು ಹಾಗೂ ಸೈತಾನ ಎಂಬ ಧರ್ಮಗಳ ಕಲ್ಪನೆಯೂ ಇಂತಹ ದಾರಿಯದೇ ಆಗಿದೆ. ವಿಕಾಸದಲ್ಲಿ ಒಳಿತು ಕೆಡುಕು ಎರಡೂ ಕೂದಲೆಳೆಯ ಅಂತರದಲ್ಲಿ ಸಾಗುತ್ತಿದ್ದರೆ ಆಶ್ಚರ್ಯ ಪಡಬೇಕಾಗಿಲ್ಲ. ಧರ್ಮ ಅಧರ್ಮಗಳ ದ್ವಂದ್ವಾಕರ್ಷಣೆಯು ಎಲ್ಲ ನಾಗರೀಕತೆಗಳ ವ್ಯಕ್ತ ಸ್ವಭಾವವೇ ಆಗಿದೆ. ಸುಪ್ತಪ್ರಜ್ಞೆ ಇಷ್ಟಾದರೂ ಮಾನವರ ಲೋಪಗಳನ್ನು ಬಚ್ಚಿಟ್ಟುಕೊಳ್ಳಲು ವಿಶೇಷ ವ್ಯವಸ್ಥೆ ಯನ್ನು ರೂಪಿಸುತ್ತಲೆ ಇರುತ್ತದೆ. ಎಲ್ಲ ಅಭಿವ್ಯಕ್ತಿಗಳಿಗೂ ಅಂಕುಶ ವ್ಯವಸ್ಥೆ ಬೇಕಾಗುವುದು ನೈತಿಕತೆಯ ಹದ್ದು ಮೀರದಿರುವಿಕೆಗೆ. ಚರಿತ್ರೆಯಲ್ಲಾಗುವ ಎಲ್ಲ ಹಿಂಸೆಗಳನ್ನು ಸುಪ್ತ ಪ್ರಜ್ಞೆಯು ಮಾನವ ಭವಿಷ್ಯದ ಎಚ್ಚರಿಕೆಯ ಕಾರಣವಾಗಿ ನೆನಪಿಟ್ಟುಕೊಳ್ಳುತ್ತಲೆ ಇರುತ್ತದೆ. ಆದ್ದರಿಂದಲೆ ಕೇಡನ್ನು ಮರೆಯಲು ಬೇಕಾದ ಭಯವನ್ನು ಸುಪ್ತಪ್ರಜ್ಞೆಯು ಬಿತ್ತುವುದು.

ಅವ್ಯಕ್ತ ಚರಿತ್ರೆ ಸುಪ್ತ ಪ್ರಜ್ಞೆಗೆ ಹೇಗೆ ಸಂಬಂಧಿಸುತ್ತದೆ ಎಂಬುದನ್ನು ಮೇಲಿನ ಗ್ರಹಿಕೆಗಳಿಂದಲೆ ಭಾವಿಸಬಹುದು. ಪ್ರಭುತ್ವದ ಹೇರಿಕೆ ಒಂದೆಡೆಯ ಒತ್ತಡವಾದರೆ ಸ್ವಭಾವತಃ ಸುಪ್ತ ಪ್ರಜ್ಞೆಯೆ ಅಂತಹ ಹೇರಿಕೆಗೆ ಪ್ರತಿರೋಧ ಎಂಬಂತೆ ತನ್ನೊಳಗೆ ತಾನೇ ಅಂತಃಸ್ಥವಾಗಿಬಿಡುತ್ತದೆ. ಅಭಿವ್ಯಕ್ತಿಯು ಇದರಿಂದ ಮತ್ತಷ್ಟು ವೈಶಿಷ್ಟ್ಯತೆಯನ್ನು ಪಡೆಯಲು ಮುಂದಾಗುತ್ತದೆ. ಸಾಮ್ರಾಜ್ಯಶಾಹಿ ಜಾಗೃತಾವಸ್ಥೆಯನ್ನು ಮೀರಲೆಂದೇ ಸುಪ್ತಪ್ರಜ್ಞೆಯ ಕಥನಗಳು ಹುಟ್ಟಿಕೊಳ್ಳುತ್ತವೆ. ಜನಪದ ಕಥೆಗಳಲ್ಲಿ ರಾಜರಾಣಿ ಅರಮನೆ ಗುರುಮನೆ ಸ್ವರ್ಗಸೀಮೆ ವೈಭವದ ಲೋಕಗಳೆಲ್ಲ ಬಂದರೂ ಅವನ್ನೆಲ್ಲ ಕ್ಷಣಿಕವಾಗಿ ಕಂಡು ಅವುಗಳ ವಿರುದ್ಧ ರಮ್ಯ ಮಾಂತ್ರಿಕ ದಿಗ್ವಿಜಯವನ್ನು ಸುಪ್ತಪ್ರಜ್ಞೆಯಿಂದ ಪಡೆಯಲಾಗುತ್ತದೆ. ಜಾಗೃತಾ ವಸ್ಥೆಯ ಪ್ರಶ್ನೆಗಳೆಲ್ಲ ಸುಪ್ತಪ್ರಜ್ಞೆಯಲ್ಲಿ ಉತ್ತರ ಕಂಡುಕೊಳ್ಳುತ್ತವೆ. ಹಾಗಾಗಿಯೆ ಜನಪದ ಕಥನಗಳು ಅವ್ಯಕ್ತ ಧಾಟಿಯಲ್ಲಿ ವರ್ತಮಾನವನ್ನು ನಿರಾಕರಿಸುತ್ತ ವರ್ತಮಾನದಾಚೆಯ ಆ-ವಾಸ್ತವದ ಕಡೆ ಮುಖಮಾಡುವುದು. ಆ-ವಾಸ್ತವ ಎಂದರೆ ವ್ಯಕ್ತವಾದದ್ದರ ವಿರುದ್ಧದ ಮೌನ ಪ್ರತಿಭಟನೆ. ಮೌಖಿಕ ಪರಂಪರೆಯ ಮಹಿಳಾ ಕಥನಗಳು ಪುರುಷಾಧಿಪತ್ಯದ ಎದಿರು ಮೌನ ಪ್ರತಿಭಟನೆಯನ್ನು ಒಡ್ಡುತ್ತ ತನಗೆ ಬೇಕಾದ ಮೌಖಿಕ ಆಕೃತಿಗಳನ್ನು ಕಟ್ಟಿಕೊಳ್ಳುವುದನ್ನು ಗಮನಿಸಬಹುದು. ಸುಪ್ತತೆಗೂ ಅವ್ಯಕ್ತತೆಗೂ ನೇರ ಸಂಬಂಧವಿರುವುದು ಕೂಡ ಮಹಿಳೆಯರ ಅಭಿವ್ಯಕ್ತಿಗಳಲ್ಲಿ ರೂಪಕ ಭಾಷೆ ನೈಸರ್ಗಿಕವಾಗಿ ಬೆಳವಣಿಗೆಯಾಗಲು ಕಾರಣ ವಿರಬಹುದು.

ಸುಪ್ತ ಪ್ರಜ್ಞೆಯಲ್ಲಿಯೆ ಗಾಢವಾದ ಇತಿಹಾಸದ ಎಚ್ಚರವಿರುವುದು. ಆದರೆ ಇದು ವ್ಯಕ್ತವಾಗುವ ಬಗೆ ಜಾಗೃತಾವಸ್ಥೆಯ ಹಂಗಿನ ಸಾಕ್ಷ್ಯಗಳ ವಿನ್ಯಾಸದಲ್ಲಲ್ಲ. ಚರಿತ್ರೆಯ ಪರಿಣಾಮವೆ ಚರಿತ್ರೆಯ ಚರಿತ್ರೆಯಾಗಬಲ್ಲದು. ಸಾಮ್ರಾಜ್ಯಗಳ ಅಳಿವು ಉಳಿವಿನ ಸಂಘರ್ಷ ದಲ್ಲಿ ಇದು ಸ್ಪಷ್ಟವಾಗಿ ಕಾಣುತ್ತದೆ. ಚರಿತ್ರೆಯ ಅವ್ಯಕ್ತ ಪರಿಣಾಮವು ಚರಿತ್ರೆಯ ಪಾಠ ವಾದಂತೆಯೆ ಅದು ಹೊಸ ಕಥನಗಳಿಗೂ ಸೂಚಿಯಾಗಿರುತ್ತದೆ. ಅವ್ಯಕ್ತ ಚರಿತ್ರೆಯು ಕಾಣುವಂತದಲ್ಲ. ಯಾಕೆಂದರೆ ಸುಪ್ತ ಪ್ರಜ್ಞೆಯು ಗೋಚರಿಸಲ್ಪಡುವ ವಸ್ತುವಲ್ಲ. ಅದು ಭಾವನೆಯ ಮೊತ್ತ. ಕಾಲದ ಸಂಕೀರ್ಣ ಪರಿಣಾಮ. ನೆನ್ನೆಯ ನೆನಪು, ಹಾಗೆಯೆ ವರ್ತಮಾನದ ಎಚ್ಚರ ಕೂಡ. ಆದರೆ ಈ ಎಚ್ಚರ ಕೂಡ ಎಲ್ಲಿಂದ ಹೇಗೆ ಯಾರಿಂದ ಆಯಿತು ಎಂಬ ನಿಖರ ರೂಪಗಳಿಗೂ ಬದ್ಧವಾಗುವಂತದಲ್ಲ. ಜೀವವಿಕಾಸದ ಸುಪ್ತಪ್ರಜ್ಞೆಯಲ್ಲಿ ಅವ್ಯಕ್ತ ವಾದದ್ದೇ ನಿರ್ಣಾಯಕವಾದ ಚಲನೆಯಾಗಿದೆ. ಚರಿತ್ರೆಯ ನಿರ್ವಚ ಹಾಗೂ ನಿರೂಪಣೆಯಲ್ಲಿ ಭೌತಿಕವಾದ ಆಕೃತಿಗಳಿಂದ ಆ ಎಲ್ಲ ವ್ಯಕ್ತ ವಾಸ್ತವಕ್ಕಿಂತ ಅದರಾಚೆಗಿನ ಅವ್ಯಕ್ತ ಸಂಗತಿಗಳೆ ಮುಖ್ಯವಾಗಬೇಕು. ವ್ಯಕ್ತ ಚಲನೆಗೂ ಅವ್ಯಕ್ತ ಚಲನೆಗೂ ಸಂಬಂಧ ಜೋಡಿಸುವುದೇ ನಿಜವಾದ ಚರಿತ್ರೆ ರಚನಾ ವಿಜ್ಞಾನ. ಈ ನಿಟ್ಟಿನಲ್ಲಿ ಸುಪ್ತಪ್ರಜ್ಞೆಯ ಅಂತರಾಳವು ಬಹಳ ಮುಖ್ಯವಾದದ್ದು.

. ಮೌನ ಸಂವಹನ

ಚರಿತ್ರೆಯ ಅವ್ಯಕ್ತ ಭಾವನೆಯನ್ನು ಮಾನವರ ಮೌನ ಗುಣದಿಂದಲೂ ಪರಿಭಾವಿಸಬಹುದು. ಚರಿತ್ರೆಯು ಭಾವನೆಗಳ ಮೇಲೆಯೆ ತನ್ನ ನಿರ್ಣಯಗಳನ್ನು ತೆಗೆದುಕೊಳ್ಳುವುದು. ಚರಿತ್ರೆಯೂ ಒಂದು ಸಮುದಾಯದ ವ್ಯಕ್ತಿತ್ವದ ಪ್ರತಿರೂಪ. ಹಾಗಾಗಿ ಭಾವನೆಗಳು ಅದರ ಒಳಕೋಶವಿದ್ದಂತೆ. ಎಲ್ಲ ಭಾವನೆಗಳು ತಮ್ಮ ನಿಜರೂಪದಲ್ಲಿ ಹೊರಬರಲಾರವು. ಆ ಸ್ಥಿತಿಯಲ್ಲಿ ಅವು ಮೌನದ ಸಹವಾಸ ಮಾಡುತ್ತವೆ. ಮಹಿಳೆಯರು ಮೌನದಲ್ಲಿ ಸ್ಪಂದಿಸಬಲ್ಲ ಕೌಶಲ್ಯವನ್ನು ಭಾಷೆಯ ಹಂಗು ಮೀರಿ ಸಾಧಿಸಿಕೊಂಡಿದ್ದಾರೆ. ಚರಿತ್ರೆಯಲ್ಲಿ ಬಾಯಿ ಇದ್ದವರ ಮಾತೇ ದಾಖಲಾಗುತ್ತದೆ ಎಂಬುದು ನಿಜವಿದ್ದರೂ ಮೂಕರ ಮೌನ ಕೂಡ ದಾಖಲಾಗಬಲ್ಲದು. ಮಾತಿನ ಹಂಗು ಮೀರಿದ ಮೌನವು ಘನವಾದ ಭಾವವನ್ನು ತುಂಬಿಕೊಂಡಿರುತ್ತದೆ. ಸಾಮ್ರಾಟರ ಯುದ್ಧದ ಸದ್ದುಗದ್ದಲವಾಗಲಿ, ಪಾಳೆಯಗಾರರ ಪರಾಕ್ರಮದ ಕಹಳೆಗಳಾಗಲಿ, ದೌರ್ಜನ್ಯ ಎಸಗಿ ಮೆರೆವವರ ಆರ್ಭಟವಾಗಲಿ ಮೌನಿಗಳ ಮೌನದಲ್ಲೇ ಸಮಾಧಿಯಾಗ ಬೇಕಾಗಿರುವುದು. ಮೌನವೂ ಒಂದು ಅಭಿವ್ಯಕ್ತಿಯೆ. ಮೌನದ ಅನುಸಂಧಾನವನ್ನು ಮೌಖಿಕ ಪರಂಪರೆಗಳು ಸದ್ದಿಲ್ಲದೆ ಮಾಡಿವೆ. ಮೌಖಿಕತೆ ಎಂದ ಕೂಡಲೆ ಶಾಬ್ದಿಕವಾದ ಹೊರ ಮೈಯನ್ನು ಗಮನಿಸುವುದಕ್ಕಿಂತ ವ್ಯಕ್ತವಾದ ದನಿಯ ಹಿಂದಿನ ಮರೆಯ ದನಿಯನ್ನು ಆಲಿಸಿದರೆ ಮಾತ್ರ ದನಿಯ ದನಿ ಕೇಳಿಸುವುದು. ಮೌಖಿಕ ಪರಂಪರೆಯು ಮಾತಿನ ಮರೆಯಲ್ಲೆ ಬೇರೊಂದು ಮಾತನಾಡುವ ಗುಣವನ್ನು ಸೂಕ್ಷ್ಮವಾಗಿ ಗಳಿಸಿಕೊಂಡಿದೆ. ಮೌನದಲ್ಲಿ ಸಂವಹನ ಮಾಡುವ ವಿಶಿಷ್ಟತೆ ಮೌಖಿಕ ಪರಂಪರೆಯಲ್ಲಿ ಸಂಕೀರ್ಣವಾಗಿದೆ. ಒಂದು ದನಿಯನ್ನು ಹೊರಡಿಸುತ್ತಲೆ ಹತ್ತಾರುದನಿಗಳನ್ನು ವ್ಯಕ್ತಪಡಿಸುವ ವಿಧಾನವು ಅವ್ಯಕ್ತ ಚರಿತ್ರೆಗೆ ಅನೇಕ ಒಳಹುಗಳನ್ನು ನೀಡಬಲ್ಲದು. ಕೆರೆಗೆ ಆಹಾರವಾದ ಭಾಗೀರಥಿಯ ಒಂದೇ ದನಿಯಲ್ಲಿ ಹತ್ತಾರು ಸಾಮಾಜಿಕ ದನಿಗಳಿವೆ. ಕೌಟುಂಬಿಕ ಮಾತುಗಳಿವೆ. ಸಾಂಸ್ಕೃತಿಕವಾದ ತಾರತಮ್ಯಗಳು ಲಿಂಗಬೇಧ ನೀತಿಗಳು ಒಟ್ಟಿಗೇ ಬೆರೆತು ಹೋಗಿವೆ. ಒಂದು ಅಧಿಕೃತ ದನಿಯಲ್ಲಿ ಹಲವು ದನಿಗಳು ಕೂಡಿಕೊಂಡಿದ್ದರೆ ಆ ಅಧಿಕೃತ ದನಿಯನ್ನು ಉಳಿದೆಲ್ಲ ಆ ದನಿಗಳು ನಿರಾಕರಿಸುತ್ತಿವೆ ಎಂದೇ ಅರ್ಥ.

ಲಿಖಿತ ಚರಿತ್ರೆಯು ವ್ಯಕ್ತ ಆಧಾರಗಳನ್ನೇ ಅಧಿಕೃತವೆಂದು ವ್ಯಕ್ತವಾದದ್ದರ ಹಿಂದಿನ ಅವ್ಯಕ್ತ ಅಂಶಗಳನ್ನು ಕೈಬಿಡುವುದು ಚರಿತ್ರೆಯ ಯಾಜಮಾನ್ಯಕ್ಕೆ ಒತ್ತುಕೊಡುವಂತಿದೆ. ಮೌನದ ಚರಿತ್ರೆ ಚರಿತ್ರೆಕಾರರನ್ನೆ ನಂಬುವುದಿಲ್ಲ. ಅದು ಕಲೆಯ ಬೇರೆ ಬೇರೆ ಅಭಿವ್ಯಕ್ತಿ ಪ್ರಕಾರಗಳಲ್ಲಿ ವ್ಯಕ್ತಗೊಳ್ಳಲು ಬಯಸುತ್ತದೆ. ಹೀಗಾಗಿಯೆ ಲೇಖಕನೊಬ್ಬ ಸುಲಭವಾಗಿ ಚರಿತ್ರೆಯಲ್ಲಿ ವ್ಯಕ್ತವಾದದ್ದರ ಮರೆಯ ಮೌನವನ್ನು ಗ್ರಹಿಸಿ ಅದರ ಅವ್ಯಕ್ತರೂಪಗಳನ್ನೆಲ್ಲ ತನ್ನ ಸೃಜನಶೀಲ ಒಳ ನೋಟಗಳಿಂದ ರೂಪಿಸಲು ಸಾಧ್ಯವಾಗುವುದು. ಕಥನಗೀತೆಗಳಲ್ಲಿ ಅವ್ಯಕ್ತವಾದದ್ದೆಲ್ಲ ಮೌನದಲ್ಲೇ ಹದವಾಗಿ ಆಚರಣೆಗಳಲ್ಲಿ ಅದು ಬೇರೊಂದು ಆಯಾಮ ಪಡೆದುಕೊಳ್ಳುವುದಿದೆ. ಮೌನವ್ರತ ಎಂಬ ಪರಿಕಲ್ಪನೆಯನ್ನು ಅವ್ಯಕ್ತ ಚರಿತ್ರೆಯ ರಚನಾ ವಿನ್ಯಾಸದಲ್ಲಿ ಈ ಪರಿಯಿಂದಲೇ ಗುರುತಿಸಬೇಕಾಗಿರುವುದು. ತನ್ನ ಮೇಲಾದ ಪುರುಷಾಧಿ ಪತ್ಯದ ಆಕ್ರಮಣವನ್ನು ಸ್ತ್ರೀಯರು ಮೌನದಿಂದ, ವ್ರತಾಚರಣೆಯಿಂದ, ವಿಧಿನಿಷೇಧಗಳಿಂದ ಅಭಿವ್ಯಕ್ತಿಸುವ ರೀತಿಯನ್ನು ಚರಿತ್ರೆಯ ನಿರ್ವಚನಕ್ಕೆ ಒಳಪಡಿಸಿದಾಗಲೇ ಅವುಗಳ ಮೌನದ ಆಸ್ಪೋಟವನ್ನು ಆಲಿಸಲು ಸಾಧ್ಯವಾಗುವುದು. ಮೌನವೆ ಅವ್ಯಕ್ತ ಚರಿತ್ರೆಯ ಒಂದು ಮುಖ್ಯ ಆಕರ. ಮೌನವನ್ನು ವಹಿಸಿದಷ್ಟೂ ಅದರ ಅರ್ಥ ಹೆಚ್ಚುತ್ತದೆ. ಆ ಯಾವ ನಿರ್ಧಿಷ್ಟ ವಿಷಯ ಮೌನವನ್ನು ಗಾಢವಾಗಿ ಆವಾಹಿಸಿಕೊಳ್ಳುತ್ತದೊ ಅದು ಆಳದಲ್ಲಿ ಪ್ರಬಲ ಪ್ರತಿರೋಧ ಶಕ್ತಿಯಾಗಿಯೂ ಮಾರ್ಪಡುತ್ತದೆ. ಗಾಂಧೀಜಿಯವರು ವಶಾಹತುಶಾಹಿ ಮದ್ದು ಗುಂಡುಗಳ ಸಾಮ್ರಾಜ್ಯಶಾಹಿ ಚರಿತ್ರೆಯ ಗರ್ವವನ್ನು ತಣ್ಣಗೆ ಮೌನದಲ್ಲಿ ಹೊಡೆದುರುಳಿಸಿದರು.

ಈ ಹಿನ್ನೆಲೆಯಿಂದ ನೋಡಿದರೆ ಮೌನವಾಗಿದ್ದ ಸಮುದಾಯಗಳ ದನಿಯೆಲ್ಲವೂ ಆಸ್ಪೋಟಕರವಾಗಿ ನಿರ್ಧಿಷ್ಟ ಚಾರಿತ್ರಿಕ ಒತ್ತಡದಲ್ಲಿ ಹೊರ ಬರಲೇಬೇಕಾಗುತ್ತದೆ. ಹಾಗಾಗಿಯೆ ದಲಿತರ ಅವ್ಯಕ್ತ ಚರಿತ್ರೆಯ ಪ್ರಶ್ನೆಗಳು ಅಂಬೇಡ್ಕರ್ ಅವರ ಮೂಲಕ ಜಾಗತಿಕವಾದ ಆಯಾಮದಲ್ಲಿ ಪ್ರತಿಧ್ವನಿಸಲ್ಪಟ್ಟವು. ಮೌನವು ಹೀಗೂ ಕೂಡ ಒಂದು ಜನಾಂಗದ ದನಿಯಾಗಿ ಚಾರಿತ್ರಿಕವಾಗಿ ಒಬ್ಬ ವ್ಯಕ್ತಿಯ ಮೂಲಕ ಚಿಮ್ಮಬಲ್ಲದು. ಗಾಂಧೀಜಿ ಯವರು ವಶಾಹತುಶಾಹಿ ಪ್ರತಿರೋಧವಾಗಿ ಮೌನವನ್ನು ಮುಂದೊಡ್ಡಿದರು. ಅದೇ ದಲಿತರ ಕಾಲಾಂತರದ ಮೌನವು ಒಂದೇ ಕಾಲಕ್ಕೆ ಅಂಬೇಡ್ಕರ್ ಅವರಲ್ಲಿ ಆಸ್ಪೋಟವಾಗಿ ಸಿಡಿಯಿತು. ಚರಿತ್ರೆಯ ದೊಡ್ಡದನಿಯು ಮೌನವೂ ಆಗುವ ಸಾಧ್ಯತೆಯನ್ನು ಗಾಂಧೀಜಿ ತೋರಿದರೆ, ನೆನ್ನೆಯ ಎಲ್ಲ ಮೌನವೂ ವರ್ತಮಾನದ ಚಾರಿತ್ರಿಕ ಸಂದರ್ಭದಲ್ಲಿ ದನಿಯೂ ಆಗಬಲ್ಲದು ಎಂಬುದನ್ನು ಅಂಬೇಡ್ಕರ್ ಅವರು ತೋರಿಸಿಕೊಟ್ಟಿದ್ದಾರೆ. ವಶಾಹತುಶಾಹಿ ಪ್ರಭುತ್ವದ ಚರಿತ್ರೆಯು ಎಷ್ಟೊಂದು ಅರ್ಥಹೀನವೆಂದು ತೋರಲು ಗಾಂಧೀಜಿ ಅವರು ಮೌನದ ಅಸ್ತ್ರ ಬಳಸಿದ್ದು ಒಂದು ಬಗೆ. ಅದೇ ಅಂಬೇಡ್ಕರ್ ಹಿಂದೂ ಸಾಮಾಜಿಕ ವ್ಯವಸ್ಥೆಯ ಹಿಂಸೆಯು ಎಷ್ಟೊಂದು ಕ್ರೂರವಾಗಿದೆ ಎಂದು ತೋರಲು ಒಂದು ವೇಳೆ ಗಾಂಧಿಯಂತೆಯೆ ಮೌನವನ್ನೆ ಆಶ್ರಯಿಸಿದ್ದರೆ ಆಧುನಿಕ ಭಾರತದ ಮುಟ್ಟಿಸಿಕೊಳ್ಳದವರ ಚರಿತ್ರೆ ಏನಾಗುತ್ತಿತ್ತು?

ಅಂಬೇಡ್ಕರ್ ಮೌನ ಪ್ರತಿಭಟನೆ ಮಾಡಿದ್ದರೆ ದಲಿತ ಚರಿತ್ರೆಗೆ ದನಿಯಾಗಲಿ ವ್ಯಕ್ತ ರೂಪವಾಗಲಿ ಸಾಧ್ಯವಾಗುತ್ತಿರಲಿಲ್ಲ. ಮೌನದ ಮೌನ ಬಹಳ ಪರಿಣಾಮಕಾರಿಯಾದುದು. ನೆನ್ನೆಯ ಮೌನ ವರ್ತಮಾನದಲ್ಲಿ ಪ್ರತಿಧ್ವನಿಯಾಗುವುದು ಸಂವೇದನೆಯ ಸ್ವರೂಪದಲ್ಲಿ. ಆಲೋಚನೆಯ ಕ್ರಮದಲ್ಲಿ ಹಾಗು ಪ್ರತಿಭಟನೆಯ ದಾಟಿಯಲ್ಲಿ. ಗಾಂಧೀಜಿ ಅವರಿಗೆ ಆಧ್ಯಾತ್ಮ ಶೈಲಿಯ ಪ್ರತಿಭಟನೆ ಗೊತ್ತಿತ್ತು. ಮೌನವೇ ಒಂದು ಆದ್ಯಾತ್ಮ ಸ್ಥಿತಿ. ಸುಪ್ತ ಪ್ರಜ್ಞೆಯಲ್ಲಿಯೆ ಮನುಷ್ಯ ಅತೀತವಾದ ಚೈತನ್ಯವನ್ನು ಭಾವಿಸುವುದು. ಗಾಂಧೀಜಿ ಹಾಗು ಅಂಬೇಡ್ಕರ್ ಇಬ್ಬರೂ ಭಿನ್ನ ರೀತಿಯಲ್ಲಿ ಮೌನವನ್ನೆ ಆಸ್ಪೋಟಿಸಿದ್ದಾರೆ. ಗಾಂಧೀಜಿಯವರ ಹೋರಾಟವೆಲ್ಲವೂ ವ್ಯಕ್ತ ಪ್ರತಿಭಟನೆಯ ಸಿದ್ಧ ತರ್ಕಗಳನ್ನು ಮೀರಿದ್ದಾಗಿತ್ತು. ಅಂಬೇಡ್ಕರ್ ಅವರ ಹೋರಾಟದ ಕಿಚ್ಚು ಪ್ರತಿಷ್ಟಿತರ ದಮನಿತ ದೋರಣೆಯ ದನಿಯನ್ನೆ ಅಡಗಿಸುವ ಮಟ್ಟಿಗೆ ಪರಿಣಾಮಕಾರಿಯಾಗಿತ್ತು. ದಮನಿತ ದನಿ ಅಂಬೇಡ್ಕರ್ ಅವರಲ್ಲಿ ಮೌನವನ್ನೂ ಬಿತ್ತುವಂತಿತ್ತು ಹಾಗೆಯೆ ಮೌನವನ್ನು ಮುರಿಯುವಂತಿತ್ತು. ಮೇಲಿನವರ ಜಾತಿ ನಿಷ್ಟ ಗರ್ವದ ದನಿಯನ್ನು ಪ್ರಶ್ನಿಸುವ ದಾಟಿಯಲ್ಲೆ ಅಂಬೇಡ್ಕರ್ ಅವರ ಆಲೋಚನೆಗಳು ಮೇಲಿನವರಲ್ಲಿ ಪಾಪಪ್ರಜ್ಞೆಯನ್ನು ಎಚ್ಚರಿಸುವಂತಿದ್ದವು. ಇದರಿಂದ ದಮನಕಾರಿ ಮನೋ ಭಾವದವರಲ್ಲಿ ತಪ್ಪೊಪ್ಪಿಗೆಯ ಮೌನವನ್ನು ರೂಪಿಸುವ ಅಸಾಧಾರಣ ಪ್ರತಿಭೆ ಅಂಬೇಡ್ಕರ್ ಅವರಿಗೆ ಇತ್ತು. ಇದು ಅವ್ಯಕ್ತ ಚರಿತ್ರೆಯ ಸಂರಚನೆಗೆ ದಾರಿಮಾಡಿಕೊಟ್ಟಿತಲ್ಲದೆ ಮುಂದಿನ ವರಿಗೆ ಅನೇಕ ಬಗೆಯ ಒಳಹುಗಳನ್ನು ತಂದುಕೊಟ್ಟಿತು.

ಹೀಗೆ ಒಂದೆಡೆ ಶೋಷಕರ ಒಳಗೆ ಮೌನವನ್ನು ರೂಪಿಸುತ್ತಲೇ ತನ್ನವರ ಒಳಗಿನ ಮೌನವನ್ನು ದನಿಯಾಗಿಸುವ ಚಾರಿತ್ರಿಕ ಪ್ರಜ್ಞೆಯನ್ನು ಅಂಬೇಡ್ಕರ್ ಅವರು ದಮನಿತ ಸಮುದಾಯಗಳ ನಡುವೆ ಬಿತ್ತಿದ್ದಾರೆ. ಅವ್ಯಕ್ತ ಚರಿತ್ರೆಯ ಸುಪ್ತ ಸ್ವರೂಪ ಇಂತಹ ಒಳದಾರಿ ಗಳಲ್ಲಿ ಚರಿತ್ರೆ ನಿರೂಪಣೆಯ ಕ್ರಮವನ್ನೆ ಬದಲಿಸಿಬಿಟ್ಟಿದೆ. ಮೌನವು ವ್ಯಕ್ತಿತ್ವವನ್ನು ರೂಪಿಸು ತ್ತಲೆ ಚಾರಿತ್ರಿಕವಾಗಿ ಅದು ಸಮುದಾಯಗಳ ಅನೇಕ ಪ್ರಶ್ನೆ ಪ್ರತಿಭಟನೆ ಪ್ರತಿರೋಧಗಳನ್ನು ವರ್ತಮಾನದ ಜೊತೆ ಮುಖಾಮುಖಿಗೆ ಒಳಪಡಿಸಿದೆ. ನವಚಾರಿತ್ರಿಕವಾದಗಳು ಇವನ್ನೆಲ್ಲ ತನ್ನ ತೆಕ್ಕೆಗೆ ತೆಗೆದುಕೊಂಡು ಅನುಸಂಧಾನವನ್ನು ವಿಸ್ತರಿಸಿದರೆ ಚರಿತ್ರೆಯು ಹೆಚ್ಚು ಹೆಚ್ಚು ಚೈತನ್ಯಶೀಲವೂ ಸೃಜನಶೀಲವೂ ಆಗುತ್ತದೆ.

. ಜಾತಿಯ ಶ್ರೇಣೀಕರಣ

ಚರಿತ್ರೆಯಲ್ಲಿ ಅನೇಕ ಸಂಗತಿಗಳು ಅವ್ಯಕ್ತವಾಗಿಯೇ ಉಳಿಯಲು ಜಾತಿ ವ್ಯವಸ್ಥೆಯೂ ಒಂದು ಕಾರಣ. ಜಾತಿಯ ತುದಿಯಲ್ಲಿದ್ದವರ ಮಾತೇ ಎಲ್ಲೆಡೆ ವ್ಯಕ್ತವಾದದ್ದು ವಿಪರ್ಯಾಸ. ಶ್ರೇಣಿಯ ಸ್ಥಾನಮಾನಗಳಿಗೆ ತಕ್ಕಂತೆಯೆ ಅಭಿವ್ಯಕ್ತಿ ಪರಂಪರೆಗಳು ಬೆಳೆದಿವೆ. ಶಿಷ್ಟರ ಮಾತೇ ಅಧಿಕೃತ, ಪ್ರತಿಷ್ಟಿತರ ತೀರ್ಮಾನಗಳೆ ಮೌಲ್ಯಗಳು, ದೇವ ವಾಣಿಯೇ ಪರಮಾಧಿಕಾರ ಎಂಬ ನಂಬಿಕೆಗಳಿಂದ ಶ್ರೇಣಿಯ ತಳದವರ ದನಿಗೆ ಅವಕಾಶವೆ ಇರಲಿಲ್ಲ. ದಾಸ್ಯದ ಮಾತು ಸೇವೆಯ ಭಾಗವಾಗಿತ್ತು. ಲಿಖಿತ ಭಾಷೆಗಳ ಪ್ರಮಾಣದ ಮುಂದೆ ಮೌಖಿಕತೆಗೆ ಬೆಲೆ ಇರಲಿಲ್ಲ. ಜಾತಿಯ ಯಜಮಾನ್ಯವು ಅನೇಕರ ಅಭಿಪ್ರಾಯಗಳನ್ನು ತಾನೇ ವಕ್ತಾರನಂತೆ ನುಡಿಯುತ್ತಿದ್ದರಿಂದ ಅವ್ಯಕ್ತದನಿಗಳು ಚರಿತ್ರೆಯ ಉದ್ದಕ್ಕೂ ತಲೆಮಾರು ಗಳ ಅಂತರದಲ್ಲಿ ಉಳಿದವು. ಜಾತಿ ವರ್ಗ ವರ್ಣಗಳ ಅಧಿಕಾರದ ಗಡಿಗಳು ಮಾತುಗಳನ್ನು ನಿರ್ದಿಷ್ಟಪಡಿಸಿದ್ದವು. ಇಂತವರು ಮಾತ್ರವೆ ಇಂತಹ ವಿಷಯಗಳನ್ನು ಮಾತನಾಡಬೇಕೆಂಬ ನಿರ್ದೇಶನದಿಂದ ಅನೇಕ ಸಮುದಾಯಗಳು ತಮ್ಮನ್ನು ತಾವು ನಿರೂಪಿಸಿಕೊಳ್ಳಲು ಆಗಲಿಲ್ಲ. ವಿಧಿ ನಿಷೇಧಗಳು ಜಾತಿಯ ಹಿನ್ನೆಲೆಯಲ್ಲಿ ದಮನಿತ ನಿಯಮಗಳಾಗಿ ಕೆಲಸ ಮಾಡಿವೆ. ದಲಿತರು ಮೂಕವಾಗಿದ್ದ ಕಾರಣದಿಂದಲೆ ಹಲವರು ವಿಪರೀತ ವ್ಯಕ್ತಗೊಂಡು ಟೊಳ್ಳಾದದ್ದೂ ಇದೆ. ವೈದಿಕರು ಅಷ್ಟೊಂದು ಪುರಾಣಗಳನ್ನು ನಿರೂಪಿಸಿದರೂ ಅವುಗಳಲ್ಲಿ ನಿಜವಾದ ಮನುಷ್ಯರ ಚರಿತ್ರೆಯೂ ಇಲ್ಲ ದೇವರುಗಳ ಕಥನವೂ ಇಲ್ಲ. ಮನುಷ್ಯರ ಸೀಮಿತ ಚರಿತ್ರೆ ಯನ್ನು ಮಾತ್ರ ಅಲ್ಲಿ ಗಮನಿಸಬಹುದು.

ಜಾತಿಯ ನಿಷೇದವು ಭಾಷೆಯನ್ನು ಮಾತ್ರ ನಿರ್ಭಂದಿಸಿಲ್ಲ. ಅದು ವಿವೇಚನೆಯ ಮೇಲೂ ಹಲ್ಲೆನಡೆಸಿದೆ. ಹೀಗಾದಾಗ ತಳಜಾತಿಗಳು ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳಲು ಯಾವ ಬಗೆಯ ಆಧಾರಗಳನ್ನು ರೂಪಿಸಿಕೊಂಡರು ಎಂಬುದು ಮುಖ್ಯ. ಶಿಷ್ಟ ಚರಿತ್ರೆ ಮತ್ತು ಸಮಾಜ ಯಾವುದನ್ನು ಆಧಾರದಿಂದ ಅಧಿಕೃತಗೊಳಿಸಿತೊ ಆ ಯಾವ ಕ್ರಮಗಳನ್ನು ಅಂಚಿನ ಸಮಾಜಗಳು ರೂಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಪ್ರಭುತ್ವದ ಚಹರೆಯ ಕಥನಗಳ ಮುಂದೆ ಅಂಚಿನ ಕಥನಗಳು ಆಧಾರರಹಿತ ನಿರೂಪಣೆಗಳನ್ನೆ ಆಯ್ಕೆ ಮಾಡಿಕೊಂಡವು. ಆಧಾರ ಪ್ರಮಾಣಗಳು ಪ್ರತಿಷ್ಠಿತ ಜಾತಿಗಳಿಗೆ ಮಾತ್ರ ಸಂಬಂಧಿಸಿದ ವಿಷಯವಾಗಿತ್ತು. ಹಕ್ಕು ಚಲಾಯಿಸಲು ಆಧಾರಗಳು ರೂಪುಗೊಂಡಿದ್ದವು. ತಳಜಾತಿಗಳಿಗೆ ಹಕ್ಕೂ ಇರಲಿಲ್ಲ ಹಾಗೆಯೆ ಆಧಾರಗಳೂ ಇರಲಿಲ್ಲ. ಆದರೆ ಅವರ ಅಸ್ತಿತ್ವ ಮಾತ್ರ ಅವ್ಯಕ್ತವಾಗಿ ಸುಪ್ತವಾಗಿ ಇದ್ದೇ ಇತ್ತು. ಅಂದರೆ ತಮ್ಮ ಅಂತಹ ಅಸ್ತಿತ್ವ ಕಾಯ್ದುಕೊಳ್ಳಲು ಆಯಾ ಸಮಾಜಗಳು ತಮಗೇ ತಿಳಿಯುವ ಆಧಾರಗಳನ್ನು ಕಂಡುಕೊಂಡಿವೆ. ಆಧಾರವಿಲ್ಲದೆ ಅಸ್ತಿತ್ವ ನಿರೂಪಿಸುವ ಕಥನಗಳು ವಿಶ್ವಾತ್ಮಕ ಆಯಾಮದಲ್ಲಿ ತಮ್ಮನ್ನು ಪರಿಚಯಿಸಿಕೊಳ್ಳುತ್ತಿವೆ. ಹೀಗಾಗಿಯೆ ಅಂಚಿನ ಕಥನಗಳು ಇಡೀ ಆಕಾಶ ಭೂಮಿ ಎರಡನ್ನು ತಮ್ಮ ಅಸ್ತಿತ್ವದ ಚಹರೆಯಾಗಿ ಗಡಿಯಾಗಿ ಗುರುತಿಸಿ ಕೊಳ್ಳುತ್ತವೆ. ಆಕಾಶಕ್ಕೆ ಆಧಾರಕೊಡಿ ಎಂದರೆ ಎಂತಹ ಅಭಾಸ ಪ್ರಾಪ್ತವಾಗುವುದೊ ಅಂತೆಯೇ ಅಂಚಿನ ಮಾನವ ಸಂಗತಿಗಳ ಅವ್ಯಕ್ತ ರೂಪಕ್ಕೆ ಆಧಾರ ಕೇಳುವುದು ಕೂಡ ಅಸಂಗತವೆನಿಸುತ್ತದೆ. ಅವ್ಯಕ್ತ ಸಮಾಜದ ರೂಪವನ್ನು ಕಾಣಲು ಅದು ರೂಪಿಸಿಕೊಂಡ ಸಾಮಾಜಿಕ ಮೌಲ್ಯಗಳ ಶ್ರೇಣಿಯನ್ನು ಕೂಡ ಭಗ್ನಪಡಿಸಬೇಕಾಗುತ್ತದೆ.

ಒಂದೊಂದು ಜಾತಿಯೂ ತನ್ನದೇ ಆದ ಅಭಿವ್ಯಕ್ತಿಯನ್ನು ಮಾಡಬೇಕಾದ ನಿಯಮವಿತ್ತು. ಇದರಿಂದ ಚರಿತ್ರೆಯನ್ನು ರಚಿಸುವ ಭಾಷೆಯಲ್ಲಿ ಏನಾಯಿತು ಎಂಬುದನ್ನು ಗಮನಿಸ ಬೇಕು. ಇಂತಹ ನಿರ್ಬಂಧಗಳಿಂದಲೇ ಚರಿತ್ರೆಯ ನಿರೂಪಣೆ ಜೀವರಹಿತವಾಯಿತು. ಕುಟುಂಬ ಗಳ ಚರಿತ್ರೆಯನ್ನು ಹಾಡುವ ಹೆಳವರ ಕಾವ್ಯಗಳು ತಮ್ಮ ಚರಿತ್ರೆಯ ಬಗ್ಗೆ ಏನನ್ನೂ ಹೇಳಲಾರವು. ಹೆಳವರಂತದೇ ಅನೇಕ ತಳ ಸಮುದಾಯಗಳು ಮೇಲುಜಾತಿಗಳ ವಂಶವೃಕ್ಷವನ್ನು ಕೊಂಡಾಡಿ ಹಾಡಬೇಕಾದ ಅನಿವಾರ್ಯ ಸ್ಥಿತಿಯನ್ನು ಮೌಖಿಕ ಪರಂಪರೆಯಲ್ಲಿ ಹೇರಲಾಯಿತು. ಹೀಗಾಗಿ ವ್ಯಕ್ತವಾಗಿರುವ ಮೌಖಿಕತೆಯಲ್ಲೇ ವಿಪರೀತ ಅವ್ಯಕ್ತತೆ ಮಡುಗಟ್ಟಿ ನಿಂತಿರುವುದು. ಎಷ್ಟೋ ಬಾರಿ ಮೌಖಿಕ ಪರಂಪರೆ ತನ್ನದಲ್ಲದ ದನಿಯನ್ನು ಹಾಡುತ್ತ ಸುಳ್ಳನ್ನೇ ಪ್ರತಿಪಾದಿಸಿರುವ ಇಕ್ಕಟ್ಟು ಇಂತದ್ದರಿಂದಲೇ ಉಂಟಾಗಿರುವುದು. ಒಂದು ಜಾತಿ ಇನ್ನೊಂದು ಜಾತಿಯ ಗಡಿಯನ್ನು ದಾಟುವಂತಿರಲಿಲ್ಲ. ಇದು ಭಾಷೆ ಮತ್ತು ಅಭಿವ್ಯಕ್ತಿಯ ಗಡಿಯೂ ಆಗಿ ಮಾರ್ಪಟ್ಟಿತ್ತು. ಆದರೆ ಮಧ್ಯಮ ಜಾತಿಗಳು ಈ ಬಗೆಯ ಗಡಿಗಳನ್ನು ಧಾರಾಳವಾಗಿ ಪ್ರವೇಶಿಸುತ್ತಿದ್ದವು. ತಳಜಾತಿಗಳ ಭಾಷೆ ಮತ್ತು ಭಾವನೆಯ ಮೇಲೆ ತಮ್ಮ ಅರ್ಥದ ಯಜಮಾನಿಕೆಯನ್ನು ಸ್ಥಾಪಿಸಿದ್ದರು. ಆದ್ದರಿಂದಲೆ ಮೇಲು ಜಾತಿಗಳ ಭಾಷಿಕ ಅರ್ಥಕ್ಕೂ ತಳಗಿನವರ ಅರ್ಥಕ್ಕೂ ತದ್ವಿರುದ್ಧ ನಂಬಿಕೆ ಹಾಗೂ ಸಂವಹನ ಸಾಧ್ಯವಾಗಿದ್ದುದು. ಜಾತಿಯ ಲೆಕ್ಕಾಚಾರಗಳು ಮಾನವರ ಅಖಂಡ ಸಂಬಂಧಗಳ ಕಡೆಗೆ ವಾಲುವುದಿಲ್ಲ. ಆದ್ಯಾತ್ಮದ ಪರಿಭಾಷೆಗಳು ಮಾತ್ರ ಅತ್ತ ಗಮನ ಕೇಂದ್ರೀಕರಿಸುತ್ತವೆ. ಹಾಗಾಗಿಯೆ ತಳಜಾತಿಗಳ ಭಾಷೆ ಗಾಢವಾದ ಆದ್ಯಾತ್ಮ ಅರ್ಥದಿಂದ ತನ್ನ ಅವ್ಯಕ್ತ ದನಿಯನ್ನೆಲ್ಲ ಪ್ರತಿಧ್ವನಿಸುವುದು. ಚರಿತ್ರೆಯಲ್ಲಿ ಆಧ್ಯಾತ್ಮವನ್ನು ಒಂದು ಸಂವೇದನೆಯಾಗಿ ಬಳಸಿಕೊಂಡಿರುವುದು ಬಹಳ ಕಡಿಮೆ.

ಹೀಗೆ ಅವ್ಯಕ್ತ ಚರಿತ್ರೆಯ ಸುಪ್ತಸ್ವರೂಪವನ್ನು ವಿವಿಧ ನೆಲೆಗಳಿಂದ ವಿಶ್ಲೇಷಿಸಲು ಸಾಧ್ಯ. ಇದರಿಂದ ಚರಿತ್ರೆ ರಚನಾನಿರ್ವಚನದ ಹೊಸಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಕನ್ನಡ ನಾಡಿನ ಚರಿತ್ರೆಕಾರರು ಈ ದಿಸೆಯಲ್ಲಿ ವಿಶೇಷವಾದ ಪ್ರಯೋಗಗಳನ್ನು ಸೃಜನಶೀಲವಾಗಿ ಮಾಡುತ್ತಿರುವುದು ಆಶಾದಾಯಕವಾಗಿದೆ. ಇದರಿಂದ ದಲಿತ ಇತಿಹಾಸ, ಲಿಂಗಸಂಬಂಧಿ ಸ್ತ್ರೀ ಇತಿಹಾಸ, ಅಲಕ್ಷಿತ ಇತಿಹಾಸ, ಸ್ಥಳೀಯ ಇತಿಹಾಸ ಹಾಗು ಇತಿಹಾಸ ರಚನಾ ವಿಜ್ಞಾನ ದಂತಹ ಹೊಸಶಾಖೆಗಳು ಹೆಚ್ಚು ಜೀವಂತಿಕೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ.