ಎಲ್ಲ ಮಾನವ ಅಭಿವ್ಯಕ್ತಿಗಳು ಅಪರಿಪೂರ್ಣವಾದವುಗಳೇ ಆಗಿವೆ. ಸಂಸ್ಕೃತಿಯು ಇಂತಹ ಅಪೂರ್ಣತೆಯ ಅಸಂಖ್ಯಾತ ಅಭಿವ್ಯಕ್ತಿಗಳ ನಿರಂತರ ಪ್ರಕ್ರಿಯೆ. ಯಾವುದೂ ಕೂಡ ಮೊದಲಲ್ಲ. ಹಾಗೆಯೇ ಕೊನೆ ಅಲ್ಲ. ಒಂದರೊಳಗೆ ಇನ್ನೊಂದು ಮಿಳಿತವಾಗಿ ಸಾಗುವ ಹಂತಗಳಲ್ಲಿ ವ್ಯಕ್ತತೆಯ ಒಳಗೇ ಅನೇಕ ಅವ್ಯಕ್ತ ನೆಲೆಗಳು ಅನ್ಯವಾದಂತೆ ತಮ್ಮ ಪಾಡಿಗೆ ತಾವು ಹೊರಗೇ ಉಳಿದುಬಿಡುತ್ತವೆ. ಆದರೆ ಹಾಗೆ ಹೊರಗೆ ಅನ್ಯವಾಗಿ ಉಳಿದುಬಿಟ್ಟ ಅಭಿವ್ಯಕ್ತಿಗಳೆಲ್ಲ ಅಖಂಡವಾದ ಚಲನೆಗೆ ಸಂಬಂಧಪಟ್ಟಿಲ್ಲ ಎಂದು ಹೇಳಲಾಗದು. ಸಂಬಂಧ ಪಡದಂತೆ ಒಂದು ಅಭಿವ್ಯಕ್ತಿಯು ಯಾಕೆ ಹಾಗೆ ಕಾಣಬೇಕು? ಇದು ಯಾವುದರ ಪರಿಣಾಮ? ಅದರಿಂದ ಉಂಟಾಗುವ ಅರ್ಥ ಆಕರಗಳು ಯಾವುವು? ಇದರಿಂದ ಅಭಿವ್ಯಕ್ತಿಯ ವೈವಿಧ್ಯ ಪರಂಪರೆಗಳು ಯಾವ ಸ್ವರೂಪ ಪಡೆದುಕೊಳ್ಳುತ್ತವೆ? ಎಂಬ ಪ್ರಶ್ನೆಗಳನ್ನೆಲ್ಲ ಅವ್ಯಕ್ತ ಸಂಸ್ಕೃತಿಯ ನೈಸರ್ಗಿಕ ಬೇರಿನ ಹಂಪಿಯ ಹಿನ್ನೆಲೆಯಲ್ಲಿ ಪರಿಶೀಲಿಸಿಕೊಳ್ಳಬೇಕು. ಮೊದಲಿಗೆ ಅವ್ಯಕ್ತ ಸಂಸ್ಕೃತಿ ಎಂದರೆ ಏನು ಎಂಬುದನ್ನು ಭಾವಿಸುವ. ಎಲ್ಲ ಬಗೆಯ ಅಭಿವ್ಯಕ್ತಿಗಳಿಗೂ ಆಧಾರವಾಗಿರುವ ಸುಪ್ತಪ್ರಜ್ಞೆಯೇ ಅವ್ಯಕ್ತ ಸಂಸ್ಕೃತಿ. ವ್ಯಕ್ತವಾದದ್ದೆಲ್ಲವೂ ಮೊದಲಿಗೆ ಆಕೃತಿ ಪಡೆದುಕೊಳ್ಳುವುದೇ ಸುಪ್ತಪ್ರಜ್ಞೆಯ ನಿಕಷದಲ್ಲಿ. ಸುಪ್ತಪ್ರಜ್ಞೆಯು ಅಖಂಡವಾಗಿ ಲೋಕವನ್ನು ಗ್ರಹಿಸಿರುತ್ತದೆ. ಅಭಿವ್ಯಕ್ತಿಯ ಕಾಣದ ಕೈಯಂತೆ ಕಾರ್ಯ ನಿರ್ವಹಿಸುವ ಸುಪ್ತಪ್ರಜ್ಞೆಯು ಸಂಸ್ಕೃತಿಗಳ ವಿಕಾಸಕ್ಕೆ ಬೇಕಾದ ಆಲೋಚನೆಗಳನ್ನು ಒದಗಿಸುತ್ತಿರುತ್ತದೆ.

ಮೇಲಿನ ಈ ಅಭಿಪ್ರಾಯವನ್ನು ಸಂಸ್ಕೃತಿಯ ಉದಾಹರಣೆಯಿಂದಲೇ ಪರಿಭಾವಿಸ ಬಹುದು. ಹಂಪಿಯ ಅನೇಕ ಗ್ರಾಮದೈವಗಳ ಪೈಕಿ ಪಟ್ಟಣದ ಎಲ್ಲಮ್ಮ ಪ್ರಮುಖವಾದುದು. ಹಂಪಿಯ ಆದಿಮ ಸಂಸ್ಕೃತಿಯ ರೂಪಾಂತರ ದೈವಗಳಲ್ಲಿ ಎಲ್ಲಮ್ಮನದೂ ಒಂದೆಂದು ಒಪ್ಪಬಹುದು. ಈ ದೈವವು ಮಾತೃಸಂಸ್ಕೃತಿಯ ನಿಸರ್ಗಾರಾಧನೆಯ ಪ್ರತೀಕವಾಗಿಯೂ ಕಂಡುಬರುತ್ತದೆ. ಈ ದೈವವು ಚಾರಿತ್ರಿಕವಾಗಿ ವಿಜಯನಗರ ದೊರೆಗಳಿಗೆ ಯುದ್ಧ ದೇವತೆ. ಹಾಗೆಯೆ ಪಟ್ಟಣದ ಎಲ್ಲಮ್ಮ ಹಂಪಿಯ ಆದಿಮ ದೈವ ಎನ್ನುವುದಾದರೆ ಅದು ಸಂಸ್ಕೃತಿಯ ಸುಪ್ತಪ್ರಜ್ಞೆಯ ಪ್ರತಿಬಿಂಬ. ಮಾತೃತ್ವದ ನಿಸರ್ಗದ ಆರಾಧನೆಗಳೆಲ್ಲವೂ ಇದೇ ಬಗೆಯ ಅಭಿವ್ಯಕ್ತಿಗಳೇ. ಪಟ್ಟಣದ ಎಲ್ಲಮ್ಮ ಶಕ್ತಿ ದೇವತೆ. ಆದ್ದರಿಂದ ಮಾನವರ ಆದಿಮ ಮೆದುಳಿನಲ್ಲಿ ಅಂತಹ ದೈವಿಕ ಮಾತೃಕೆಯ ಪ್ರಜ್ಞೆ ಸೃಷ್ಠಿಕಲ್ಪನೆಯ ಹಿನ್ನೆಲೆಯಲ್ಲಿ ಪ್ರೇರಣೆ ಒದಗಿಸಿದೆ. ಸಂಸ್ಕೃತಿಯ ವ್ಯಕ್ತ ರೂಪಗಳೆಲ್ಲ ಹೀಗೆ ಸುಪ್ತಪ್ರಜ್ಞೆಯ ಬಿಂಬಗಳೇ. ಈ ಬಿಂಬಗಳೇ ಲೋಕಾನುಭವಗಳ ಜೊತೆ ಆಕೃತಿ ಪಡೆಯುವುದು. ಕಾಲ ಬದಲಾದಂತೆ ಮನುಷ್ಯರ ನಿಸರ್ಗದ ಸಂಬಂಧ ಸ್ಪಷ್ಟವಾದಂತೆ ಅವರವರ ಸುಪ್ತಪ್ರಜ್ಞೆಯ ವ್ಯಕ್ತ ರೂಪಗಳಲ್ಲು ಕೆಲವು ಅಭಿವ್ಯಕ್ತವಾಗದೆ ಹಿಂದೆ ಸರಿದು ಬೇರೆ ಬೇರೆ ರೂಪದಲ್ಲಿ ಸಂದರ್ಭವನ್ನೆ ಮರೆ ಮಾಚಿ ವ್ಯಕ್ತವಾಗಬೇಕಾದ ಇಕ್ಕಟ್ಟಿಗೆ ಒಳಪಡುತ್ತವೆ. ಇಂತಹ ಸ್ಥಿತಿಯಲ್ಲೇ ಅಂತಹ ಅಭಿವ್ಯಕ್ತಿ ಗಳು ಪುರಾಣ ಸ್ವರೂಪದಲ್ಲಿ ಸಂಕೀರ್ಣಗೊಂಡು ಅರ್ಥವನ್ನು ಬಚ್ಚಿಟ್ಟು ಪ್ರತಿಫಲಿಸುತ್ತವೆ. ಇದು ಸುಪ್ತಪ್ರಜ್ಞೆಯೇ ಸ್ವತಃ ಅಪ್ರಜ್ಞಾಪೂರ್ವಕವಾಗಿ ಸಾಧಿಸಿಕೊಳ್ಳುವ ಸಂಬಂಧ. ನಿಸರ್ಗದ ಜೊತೆ ಇಂತಹ ಸಂವಹನ ಮಾಡಲು ಮನುಷ್ಯರಿಗೆ ಸುಪ್ತ ಪ್ರಜ್ಞೆಯು ಅಪ್ರಜ್ಞಾಪೂರ್ವಕ ವಾಹಕದ ನೆರವಿನಿಂದ ಅತೀತವಾದ ಕಲ್ಪನೆಗಳನ್ನೆಲ್ಲ ಗ್ರಹಿಸಲು ಅನುವು ಮಾಡಿಕೊಟ್ಟಿದೆ.

ಪಟ್ಟಣದ ಎಲ್ಲಮ್ಮನ ಆರಾಧನೆಯಲ್ಲಿ ಎಲ್ಲೂ ನೇರವಾಗಿ ಈ ಅಂಶಗಳು ಕಂಡು ಬರುವುದಿಲ್ಲ. ಅವೆಲ್ಲವೂ ವ್ಯಕ್ತವಾದದ್ದರ ಸುಪ್ತ ಸ್ತರದಲ್ಲಿ ಅಡಗಿರುತ್ತವೆ. ಈ ಪರಿಯ ಎಲ್ಲ ಅಭಿವ್ಯಕ್ತಿಗಳೂ ಅವ್ಯಕ್ತ ಸಂಸ್ಕೃತಿಯಲ್ಲಿ ತುಂಬಿ ಹೋಗಿರುತ್ತವೆ. ಅವ್ಯಕ್ತ ಸಂಸ್ಕೃತಿಗಳು ಇದರಿಂದಾಗಿಯೇ ಕಾರ್ಯಕಾರಣ ತರ್ಕಕ್ಕೆ ನಿಲುಕುವುದಿಲ್ಲ. ಅವು ಸಾಧ್ಯವಾದಷ್ಟು ದೂರದಲ್ಲುಳಿದು ಅನ್ಯವಾಗಿರಲು ಯತ್ನಿಸುತ್ತವೆ. ಇದರಿಂದಲೇ ಎಲ್ಲ ಅಭಿವ್ಯಕ್ತಿಗಳೂ ತಂತಾನೆ ಅಪೂರ್ಣ, ಅಸ್ಪಷ್ಟ, ಅತಂತ್ರ ಎನಿಸುವುದು. ಸೃಜನಶೀಲವಾದ ಸ್ವಭಾವ ಕೂಡ ಇಂತಹ ಅವ್ಯಕ್ತ ಸ್ವಭಾವದಿಂದ ಸಾಧ್ಯವಾಗುತ್ತದೆ. ಸಂಸ್ಕೃತಿಗಳು ಇಷ್ಟೊಂದು ಪ್ರಮಾಣದಲ್ಲಿ ಯಾಕೆ ವೈವಿಧ್ಯ ಕಥನಗಳನ್ನು ಕಂಡುಕೊಳ್ಳುತ್ತವೆ ಎಂಬ ಪ್ರಶ್ನೆಗೆ ಇಂತಲ್ಲಿ ಉತ್ತರ ಕಂಡು ಕೊಳ್ಳಬಹುದು. ಒಂದು ವೇಳೆ ಎಲ್ಲ ಅಭಿವ್ಯಕ್ತಿಗಳು ಪೂರ್ಣ ರೂಪದವೇ ಆಗದಿದ್ದರೆ ಪರ್ಯಾಯ ರೂಪಗಳು ಇರುತ್ತಲೇ ಇರಲಿಲ್ಲ. ಹಂಪಿಯ ಒಂದೇ ನೆಲೆಯ ಬಗ್ಗೆ ಆದಿ ಕಾಲದಿಂದಲೂ ಯಾಕೆ ಮೌಖಿಕ ಪರಂಪರೆ ನಿರಂತರವಾಗಿ ಕಥನವನ್ನು ಬೆಳೆಸುತ್ತಲೆ ಇರುತ್ತದೆ ಎಂದರೆ ಪ್ರತಿಯೊಂದು ಅಭಿವ್ಯಕ್ತಿಯ ಅಪರಿಪೂರ್ಣತೆ ಮತ್ತು ಸೃಜನಶೀಲತೆಯ ಒತ್ತಾಯ ಆ ಪ್ರಮಾಣದಲ್ಲಿ ಇರುವುದರಿಂದ.

ಪಟ್ಟಣದ ಎಲ್ಲಮ್ಮ ಸುಪ್ತ ಪ್ರಜ್ಞೆಯ ಭಾಗ ಹೇಗೊ ಹಾಗೆಯೆ ಆಕೆ ಆದಿಮ ಪ್ರಜ್ಞೆಯ ಅವ್ಯಕ್ತ ರೂಪಕವೂ ಹೌದು. ಹಂಪಿಯ ತುಂಬ ಹಬ್ಬಿರುವ ಇಂತಹ ಪ್ರಾಚೀನ ದೈವ ರೂಪಕಗಳು ಸಾಮ್ರಾಜ್ಯದ ಭಾಗವಾಗಿ ಈಗಲೂ ಉಳಿದು ಕೊಂಡು ವರ್ತಮಾನದ ಜನ ಮಾನಸದಲ್ಲಿ ರೂಪಾಂತರಗೊಳ್ಳುತ್ತಲೆ, ಅಪರಿಪೂರ್ಣತೆಯಲ್ಲೇ ಸದ್ಯದ ಅಪೇಕ್ಷೆಗಳಿಗೆ ಪೂರಕವಾಗಿವೆ. ಇದು ಸುಪ್ತಪ್ರಜ್ಞೆಯು ವಿಕಾಸದ ಭಾಗವಾಗಿ ಬೆಳೆಯುವುದರ ಪರಿಣಾಮ. ಇದರಿಂದ ಏಕ ಕಾಲಕ್ಕೆ ಸಂಸ್ಕೃತಿ ಬೆಳೆಯಲೂ ವರ್ತಮಾನದ ಅವಕಾಶಕ್ಕೆ ತಕ್ಕಂತೆ ಗತಕಾಲವು ನವೀಕರಣಗೊಳ್ಳಲು ಅವಕಾಶ ಸಿಕ್ಕಂತಾಯಿತು. ಈ ನಿಟ್ಟಿನಲ್ಲಿ ಅವ್ಯಕ್ತ ಸಂಸ್ಕೃತಿಯು ಸಾಗಿ ಬಂದಿರುತ್ತದೆ. ವ್ಯಕ್ತವಾಗುವುದಕ್ಕಿಂತಲೂ ವ್ಯಕ್ತತೆಯ ಅವ್ಯಕ್ತತೆ ಬಹಳ ಮುಖ್ಯ. ಕಂಡದ್ದೆಲ್ಲ ಕಾಣದ್ದರ ಇನ್ನೊಂದು ಅಸ್ತಿತ್ವದ ಪರಿಣಾಮ. ಕಾಣದ ಹಿಂದಿನ ಶಕ್ತಿಗಳು ನಿಸರ್ಗದಿಂದ ರೂಪುಗೊಂಡಿರುತ್ತವೆ. ಸಂಸ್ಕೃತಿಗಳು ಕಾಣದ ನಿಸರ್ಗದ ಮರೆಯ ಶಕ್ತಿಯಿಂದಲೇ ತಾನೆ ವ್ಯಕ್ತ ರೂಪಗಳನ್ನು ಕಂಡು ಕೊಂಡಿದ್ದು. ಈ ನಿಟ್ಟಿನಲ್ಲಿ ಪಟ್ಟಣದ ಎಲ್ಲಮ್ಮ ಅವ್ಯಕ್ತ ಸಂಸ್ಕೃತಿಯನ್ನು ನಿರ್ವಹಿಸುವ ಒಂದು ದೈವ ರೂಪಕ ಅಷ್ಟೇ. ಅದೊಂದೇ ಅಂತಿಮ ಸಂಸ್ಕೃತಿಯ ಅಭಿವ್ಯಕ್ತಿ ಅಲ್ಲ. ಹಂಪಿಯ ನೈಸರ್ಗಿಕ ಪರಿಸರದಲ್ಲಿ ಇಂತಹ ಸುಪ್ತಪ್ರಜ್ಞೆಯ ದೈವಿಕ ಆಚರಣೆಗಳು ಸಾಕಷ್ಟಿವೆ.

ಸಂಸ್ಕೃತಿಗಳ ಜೈವಿಕತೆ

ಸುಪ್ತ ಪ್ರಜ್ಞೆಯ ಪರಿಕಲ್ಪನೆಯಿಂದ ಅವ್ಯಕ್ತ ಸಂಸ್ಕೃತಿಯನ್ನು ಮೇಲಿನಂತೆ ವಿವರಿಸುವುದು ಒಂದು ಬಗೆಯಾದರೆ ಇದೇ ಅರ್ಥ ಸಾಧ್ಯತೆಯಲ್ಲಿ ಪರಿಸರ ಪ್ರಜ್ಞೆಯ ಮೂಲಕವೂ ವ್ಯಾಖ್ಯಾನಿಸಬಹುದಾದ ಇನ್ನೊಂದ ಕ್ರಮವಿದೆ. ಪರಿಸರ, ಪರಂಪರೆ, ಪ್ರಜ್ಞೆ, ಸಂಸ್ಕೃತಿ, ಸಮಾಜ, ಚರಿತ್ರೆ, ತಂತ್ರಜ್ಞಾನ, ವಿಜ್ಞಾನ ಇವೆಲ್ಲ ಬಿಡಿಯಾಗಿ ಬೇರೆಯಾಗಿದ್ದರೂ ಇಡಿಯಾಗಿ ಒಂದೇ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಪರಿಸರವೇ ಜೀವಜಾಲದ ನಿರ್ಣಾಯಕ ಶಕ್ತಿ. ಮಾನವ ನಿರ್ಮಿತ ಸಾಮಾಜಿಕ ಸಾಂಸ್ಕೃತಿಕ ಚಾರಿತ್ರಿಕ ಹಾಗೂ ಆರ್ಥಿಕ ಪರಿಸರಗಳು ನಿಸರ್ಗದ ಬೇರುಗಳಿಂದಲೇ ನಿರ್ಧಾರವಾಗುವುದು. ನಮಗೆ ಗೋಚರವಾಗುವ ಪರಿಸರ ಎಲ್ಲಿಯೂ ತಾನೇ ಮನುಷ್ಯರ ಇರುವಿಕೆಗೆ ಮೂಲ ಕಾರಣ ಎಂದು ಘೋಷಿಸಿಕೊಳ್ಳುವುದಿಲ್ಲ. ಅದರ ನೇರ ಸಂಬಂಧ ಕಣ್ಣಿಗೆ ಕಾಣುವುದೇ ಇಲ್ಲ. ಆದರೆ ನಿಸರ್ಗದ ಆಚೆ ಹೋಗಿ ಎಲ್ಲಿಯೂ ನಾವು ಬದುಕಲಾಗದು. ನಿರ್ವಾತದಲ್ಲಿ ಜೀವಿಸಲಾರೆವು. ನಮ್ಮ ಆಲೋಚನೆ ರೂಪುಗೊಂಡದ್ದೇ ನಿಸರ್ಗದಿಂದ. ಜೀವಜಾಲದ ಸಂಬಂಧಗಳೇ ನಮ್ಮ ಅಸ್ತಿತ್ವದ ಬುನಾದಿ. ಹೀಗಾಗಿ ನಮ್ಮ ನಿಸರ್ಗವೆ ನಮ್ಮ ಸಂಸ್ಕೃತಿ. ನಮ್ಮ ಮಾನವ ನಿರ್ಮಿತ ಪರಿಸರವೆ ನಿಸರ್ಗದ ಅನುಮತಿ. ನಿಸರ್ಗದ ಅಗಾಧತೆಯನ್ನು ಮನುಷ್ಯ ದೈವಿಕವಾಗಿ ಭಾವಿಸಿರಬಹುದಾದರೂ ಸೃಷ್ಟಿಯ ಸಂಬಂಧದಲ್ಲಿ ಪ್ರತಿ ಕ್ಷಣವು ನಿಸರ್ಗವೆ ದಾರಿ ತೋರುವುದು. ಮನುಷ್ಯ ಜೀವದಿಂದ ಬದುಕಿದ್ದಾನೆ ಎಂದರೆ ಅದು ನಿಸರ್ಗದಿಂದ ಮಾನವನ ಅಸ್ತಿತ್ವ ಪಡೆದಿದ್ದಾನೆ ಎಂದೇ ಅರ್ಥ. ಸಂಸ್ಕೃತಿಗಳಿಗೂ ಜೈವಿಕ ಗುಣವಿದೆ. ನಿಸರ್ಗದ ಫಲ ಇದು. ಚರಿತ್ರೆಯ ಸ್ವಭಾವದಲ್ಲೂ ಇವುಗಳ ಅಂಶಗಳಿವೆ.

ನಿಸರ್ಗವು ಹೇಗೆ ಅನಂತವೊ ಅಂತೆಯೇ ಸಂಸ್ಕೃತಿಗಳೂ ಅನಂತ. ಹೀಗೆ ಅನಂತವಾಗಿರುವ ಪ್ರವೃತ್ತಿಯಿಂದಾಗಿಯೆ ಅಪರಿಮಿತವಾದ ಅಭಿವ್ಯಕ್ತಿಗಳು ಸಾಧ್ಯವಾಗಿರುವುದು. ಹಂಪಿಯ ನೈಸರ್ಗಿಕ ನೆಲೆಯು ಇಲ್ಲಿನ ಸಂಸ್ಕೃತಿಗಳಿಗೆ ಇದೇ ಬಗೆಯ ಸ್ವಭಾವವನ್ನು ತಂದುಕೊಟ್ಟಿದೆ. ಮಾನವರ ಸಂಸ್ಕೃತಿಗಳಲ್ಲಿ ವಿಕಾಸಗೊಂಡಿರುವುದು ನಿಸರ್ಗದ ವಿಕಾಸದಿಂದ. ಪರಿಸರ ಇದ್ದಂತೆಯೇ ಉಳಿದಿದ್ದರೆ ಮಾನವರಿಗೆ ಈ ಸ್ವರೂಪವೇ ಬರುತ್ತಿರಲಿಲ್ಲ. ಮನುಷ್ಯರು ಸ್ವಯಂ ಸುಸಂಸ್ಕೃತರಾಗಲಿಲ್ಲ. ನಿಸರ್ಗಕ್ಕೆ ಆದ ಮಹತ್ವದ ಬದಲಾವಣೆಗಳಿಂದ ಮನುಷ್ಯರಿಗೂ ಜೀವಜಾಲಕ್ಕೂ ಸೃಷ್ಠಿಶೀಲತೆಯಲ್ಲಿ ಪಲ್ಲಟಗಳು ಉಂಟಾದವು. ಜೈವಿಕ ವೈವಿಧ್ಯತೆ ನಿಸರ್ಗದಲ್ಲಾದ ಸ್ಥಿತ್ಯಂತರದ ಪರಿಣಾಮ. ಮಿದುಳಿನ ರಚನೆ ಬದಲಾದದ್ದು ಕೂಡ ಪರಿಸರ ದಲ್ಲಾದ ಬದಲಾವಣೆಯಿಂದ. ಸತತವಾಗಿ ಹಿಮಯುಗವೇ ನಿರಂತರವಾಗಿದ್ದರೆ ಅಂತಹ ಚಳಿಯ ವಾತಾವರಣದಲ್ಲಿ ಮನುಷ್ಯ ಪ್ರಭೇದ ಉಳಿಯುತ್ತಲೂ ಇರಲಿಲ್ಲ. ಹಾಗೆಯೇ ಎಲ್ಲ ಸೌಲಭ್ಯಗಳು ಅಪಾರವಾಗಿ ಸಿಕ್ಕಿ ಆಹಾರದ ಅತಿ ಬಳಕೆಯೂ ಕೂಡ ನಿಸರ್ಗದಿಂದ ಒದಗಿ ಬಂದರೆ ಅದು ಕೂಡ ವಿಕಾಸಕ್ಕೆ ಅಪಾಯಕಾರಿಯೇ. ನಿಸರ್ಗದ ಏರುಪೇರುಗಳು ಮನುಷ್ಯರ ಮೇಲೆ ತುಂಬ ಪರಿಣಾಮ ಮಾಡಿವೆ. ಹಂಪಿಯು ಆದಿಮ ನೆಲೆಗಳಲ್ಲಿ ಒಂದೆಂಬುದು ತಿಳಿದಿರುವ ಸಂಗತಿ. ಅಂತಹ ನೆಲೆಗೆ ಬೇಕಾದ ನೈಸರ್ಗಿಕ ಸವಲತ್ತುಗಳು ಬಹಳ ನಿಧಾನಕ್ಕೆ ಸಂಸ್ಕೃತಿಯನ್ನು ಬಿತ್ತಿರುತ್ತವೆ. ಈ ಬಗೆಯಿಂದ ನೋಡಿದರೆ ಸಂಸ್ಕೃತಿಗಳು ವಿಕಾಸವಾದದ್ದೇ ನಿಸರ್ಗದ ವಿಕಾಸದ ಕ್ರಮವನ್ನು ಅನುಸರಿಸಿ. ನಿಸರ್ಗ ಮತ್ತು ಸಂಸ್ಕೃತಿ ಎರಡೂ ಬೇರೆ ಬೇರೆ ಅಲ್ಲ. ಸಂಸ್ಕೃತಿಯಲ್ಲಿ ಅನೇಕ ಕೊರತೆಗಳು ಎದುರಾಗುವುದು ಕೂಡ ನಿಸರ್ಗದ ಅನಾನುಕೂಲತೆಗಳಿಂದ. ಆದರೂ ಸಂಸ್ಕೃತಿ ಮತ್ತು ನಿಸರ್ಗಗಳ ನಡುವೆ ಅನೇಕ ಬಗೆಯ ಅಸ್ತಿತ್ವವಾದಿ ಹೊಂದಾಣಿಕೆ ಒಪ್ಪಂದಗಳು ಆಗಿರುವುದರಿಂದಲೇ ಮಾನವರ ಯತ್ನಗಳು ಮುಂದುವರಿದಿರುವುದು.

ಅರ್ಥಪೂರ್ಣ ಅಪೂರ್ಣತೆ

ಈ ಬಗೆಯ ಒಪ್ಪಂದಗಳು ಯಾವತ್ತೂ ಕೂಡ ಶಾಶ್ವತವಾದವಲ್ಲ. ಮೊದಲೆ ಹೇಳಿದಂತೆ ಅಪರಿಪೂರ್ಣತೆಯ ಗುಣ ನಿಸರ್ಗದಲ್ಲಿ ಇರುವುದರಿಂದ ಅದು ಸಂಸ್ಕೃತಿಯಲ್ಲಿ ಇದೆ. ಹೀಗಾಗಿ ಹಂಪಿಯ ಚರಿತ್ರೆಯಲ್ಲು ಅಪರಿಪೂರ್ಣ ಕಥನಗಳೇ ಕಾಣಸಿಗುವುದು. ಚರಿತ್ರೆಗೆ ಬೇಕಾದ ಆಧಾರಗಳು ಇದರಿಂದಲೆ ಬಹುರೂಪಿ ಹಾಗೆಯೇ ಅರ್ಥದ ನಿರ್ಧಿಷ್ಠತೆಯನ್ನು ಮೀರಲು ಯತ್ನಿಸುವುದು. ಅವ್ಯಕ್ತ ಸಂಸ್ಕೃತಿಗಳು ಇದರ ಲಾಭ ಪಡೆದು ಮೌಖಿಕ ಪರಂಪರೆಯಲ್ಲಿ ತರ್ಕದಾಚೆಯ ಕಥನಗಳನ್ನು ನಿರೂಪಿಸುವುದು ಇದರಿಂದಾಗಿಯೆ. ಅವ್ಯಕ್ತ ಸಂಸ್ಕೃತಿಯನ್ನು ಮನೋವಿಶ್ಲೇಷಣೆಯಿಂದ ವಿವರಿಸುವ ಈ ಪರಿಯು ವಿಕಾಸವಾದದ ನೆಲೆಯಲ್ಲಿ ಅರ್ಥ ಪಡೆದುಕೊಳ್ಳುತ್ತದೆ. ಡಾರ್ವಿನ್ ಪ್ರತಿಪಾದಿಸಿದ ಜೀವಜಾಲದ ಜೈವಿಕ ಸರಪಳಿಯು ಸಂಸ್ಕೃತಿ ಮತ್ತು ನಿಸರ್ಗಗಳ ಅವಿನಾಭಾವ ಸಂಬಂಧಕ್ಕೂ ಹೊಂದುತ್ತದೆ. ಸಾರ್ವತ್ರಿಕ ತತ್ವಗಳು ಉಗಮ ವಿಕಾಸದಲ್ಲಿ ಒಂದೇ ಆದ್ದರಿಂದ ಹಂಪಿಯ ಪರಿಸರದ ಅವ್ಯಕ್ತ ಸಂಸ್ಕೃತಿಗಳಿಗೂ ಹೊಂದುತ್ತವೆ. ಹಂಪಿ ಜಾನಪದವು ನಿಸರ್ಗದ ಜೊತೆಗಿನ ಅನುಸಂಧಾನವೆ ಆಗಿದೆ. ಜನಪದರ ಆಚರಣೆ, ಕಲೆ, ಮೌಖಿಕ ಸಾಹಿತ್ಯ, ಪಾರಂಪರಿಕ ತಿಳುವಳಿಕೆ, ಕೃಷಿ ವಿಧಾನ, ಆದ್ಯಾತ್ಮಿಕ ನಂಬಿಕೆಗಳು, ಕರಕುಶಲ ತಂತ್ರಜ್ಞಾನ, ಸಾಮಾಜಿಕ ವರ್ತನೆಗಳು, ಸಾಂಸ್ಕೃತಿಕ ಅಭಿವ್ಯಕ್ತಿಗಳು ಅವ್ಯಕ್ತ ಸಂಸ್ಕೃತಿಯಲ್ಲಿ ಸೇರುತ್ತವೆ.

ವಿಶ್ವಪರಂಪರೆಯ ಚೌಕಟ್ಟಿನಲ್ಲಿ ಇಂತಹ ಅಂಶಗಳನ್ನೆಲ್ಲ ಇಡಿಯಾಗಿ ಅವ್ಯಕ್ತ ಸಂಸ್ಕೃತಿ ಎಂದು ಕರೆಯಲಾಗುತ್ತದೆ. ಇಂತಹ ನಂಬಿಕೆಯೇ ಸೂಕ್ತವಾದುದಲ್ಲ. ಸಂಸ್ಕೃತಿ ಎಂಬುದಕ್ಕೆ ಹತ್ತಾರು ಸಿದ್ಧ ಅಭಿಪ್ರಾಯಗಳಿವೆ. ಅದರಲ್ಲಿ ವ್ಯಕ್ತ, ಅವ್ಯಕ್ತ ಎಂಬ ಎರಡು ಗುರುತುಗಳನ್ನು ಸಂಸ್ಕೃತಿ ಎಂಬ ಶಬ್ಧದ ಜೊತೆ ಜೋಡಿಸಲಾಗಿದೆ. ಹಾಗೆ ನೋಡಿದರೆ ಸಂಸ್ಕೃತಿಯನ್ನು ಚರಿತ್ರೆಯ ಉಪಯೋಗದಲ್ಲಿ ಗುರುತಿಸುವಂತೆ ಇದು ಕಾಣುತ್ತದೆ. ಸಂಸ್ಕೃತಿಯು ಚರಿತ್ರೆ ಯನ್ನು ತನಗೆ ಬೇಕಾದ ಹಾಗೆ ಬಾವಿಸುವುದೇ ವಿನಃ ಸ್ವತಃ ಸಂಸ್ಕೃತಿಯೆ ಚರಿತ್ರೆಯ ಉಪಭೋಗವಾಗಲಾರದು. ಚರಿತ್ರೆಯಲ್ಲಿ ಸಾಮ್ರಾಜ್ಯಗಳು ಅಂತಹ ಪ್ರಯತ್ನದಲ್ಲಿ ಮುಂದಾಗಿ ಬಳಸಿ ಕೊಂಡರೂ ಸಂಸ್ಕೃತಿಗಳು ಆ ಪ್ರಕ್ರಿಯೆಯನ್ನೆಲ್ಲ ನಿಸರ್ಗದ ಬಲದಲ್ಲಿ ಮೀರಿರುತ್ತವೆ. ನಿಸರ್ಗ ಮತ್ತು ಸಂಸ್ಕೃತಿಗಳು ವಿಕಾಸದ ನಿಯಮಕ್ಕೆ ಬದ್ಧವಾಗಿರುತ್ತವೆ. ಸಾಮ್ರಾಜ್ಯಗಳು ಅನೇಕ ಬಾರಿ ಈ ನಿಯಮವನ್ನು ಮೀರಲು ನಾಗರೀಕತೆಯ ತಾಂತ್ರಿಕ ಜ್ಞಾನವನ್ನೆಲ್ಲ ಬಳಸಿಕೊಳ್ಳುತ್ತಿರುತ್ತವೆ. ಈ ಸ್ಥಿತಿಯಲ್ಲಿ ಸಂಸ್ಕೃತಿಗಳನ್ನು ಚರಿತ್ರೆಗೆ ಯಾವತ್ತೂ ಪೂರಕ ಅಂಶಗಳೆಂದು ಪರಿಗಣಿಸಬೇಕಾದುದಿಲ್ಲ. ಹಲವಾರು ಸಂಸ್ಕೃತಿಗಳು ಏಕ ಕಾಲದಲ್ಲೆ ಪ್ರಭುತ್ವದ ವಿರುದ್ಧ ಅವ್ಯಕ್ತ ಸಂಘರ್ಷಗಳನ್ನು ರೂಪಿಸಿರುತ್ತವೆ. ಈ ಬಗೆಯ ಅವ್ಯಕ್ತ ಸಂಘರ್ಷದ ಸಂಸ್ಕೃತಿಗಳು ಪ್ರಭುತ್ವದ ಆಚೆ ನಿಂತು ನಿಸರ್ಗದ ಜೊತೆ ಸಂವಹನ ಮಾಡುತ್ತಿರುತ್ತವೆ. ಹಂಪಿಯ ಅವ್ಯಕ್ತ ಸಂಸ್ಕೃತಿಯು ಈ ದಿಶೆಯಲ್ಲಿ ಪ್ರಭುತ್ವದಲ್ಲಿ ಅನ್ಯವಾಗಿಯೇ ತನ್ನ ದೈವಿಕ ಕಥನಗಳನ್ನು ನಿರೂಪಿಸಿಕೊಂಡು ಬಂದಿದೆ. ಈ ಬಗೆಯ ಅನ್ಯತ್ವದ ಕಥನಗಳು ಕೂಡ ನಿಸರ್ಗವನ್ನೆ ಅಪ್ಪಿಕೊಳ್ಳುವುದಿದೆ.

ಅವ್ಯಕ್ತ ಸಂಸ್ಕೃತಿಯ ಬೇರುಗಳು ಇರುವುದು ಈ ದಾರಿಯಲ್ಲಿಯೆ. ಸಂಸ್ಕೃತಿಯ ಸಿದ್ಧ ವ್ಯಾಖ್ಯಾನವನ್ನೆ ಅವ್ಯಕ್ತ ನೆಲೆಗೆ ಅನ್ವಯಿಸಬೇಕಾದುದಿಲ್ಲ. ವ್ಯಕ್ತವಾದದ್ದರ ಅವ್ಯಕ್ತ ಅರ್ಥವು ವ್ಯಕ್ತವಾದದ್ದರ ವಿರುದ್ಧವಾಗಿಯೂ ಇರಬಹುದು. ಆ ಕಾರಣದಿಂದಲೇ ಸಂಸ್ಕೃತಿಯ ಒಳಗಿನ ಸಂಸ್ಕೃತಿ ಖಚಿತ ಅರ್ಥಕ್ಕೂ ಸಿಕ್ಕದು ಹಾಗೆಯೆ ಸುಲಭಕ್ಕೆ ನಮ್ಮ ಭಾವನೆಗಳಿಗೆ ಎಟುಕು ವುದಿಲ್ಲ. ಸಂಸ್ಕೃತಿಯ ಅಭಿವ್ಯಕ್ತಿ ರೂಪುಗೊಳ್ಳಲು ಹತ್ತಾರು ಅನುಭವಗಳು ಒಟ್ಟಾಗಿ ಸಮಷ್ಠಿ ಯಾಗಿ ಕೂಡಿ ಬರಬೇಕು. ಹಾಗೆ ಒಂದು ಅಭಿವ್ಯಕ್ತಿಯ ಸಮಷ್ಠಿ ಪ್ರಜ್ಞೆಯಲ್ಲಿ ಅನೇಕ ತಲೆಮಾರುಗಳು ಬೆರೆತಿರುತ್ತವೆ. ಅಂದರೆ ಮಾನವ ಯತ್ನವೇ ಅಲ್ಲಿ ಘಟಿಸಿರುತ್ತದೆ. ಈ ಮಾನವ ಯತ್ನ ಒಂದು ರೂಪ ಪಡೆದ ಮೇಲೆ ಆ ಒಂದು ರೂಪದ ಹಿಂದಿನ ಹತ್ತಾರು ರೂಪಗಳೆಲ್ಲ ಏನಾದವು? ಅವು ವ್ಯಕ್ತ ಅಭಿವ್ಯಕ್ತಿಯ ಒಂದೇ ರೂಪದಲ್ಲಿ ಕರಗಿವೆ ಎಂದು ಕೊಂಡರೂ ಪೂರ್ಣವಾಗಿ ಆ ಎಲ್ಲ ವಿವಿಧ ಅಭಿವ್ಯಕ್ತಿಗಳು ಒಂದೇ ಆಗಿಬಿಟ್ಟಿರುವುದಿಲ್ಲ. ಮಾನವರ ವೈವಿಧ್ಯ ದಾಹದಲ್ಲಿ ಅಂತಹ ಹತ್ತಾರು ಅಭಿವ್ಯಕ್ತಿಗಳು ಮತ್ತೆ ಕವಲೊಡೆದು ನೂರಾರು ಆಕೃತಿಗಳಲ್ಲಿ ವಿಭಿನ್ನ ಧ್ವನಿಗಳಾಗಿ ಪ್ರತಿಧ್ವನಿಸುತ್ತವೆ. ಇದು ಜೀವಜಾಲದ ವೈವಿದ್ಯದಂತೆ ಸಂಸ್ಕೃತಿಯ ಅಭಿವ್ಯಕ್ತಿಯಲ್ಲು ಅವ್ಯಕ್ತ ಒತ್ತಡಗಳು ಪುನರ್ ಸೃಷ್ಠಿಯಾಗಿ ಭಿನ್ನ ಮಾದರಿಗಳನ್ನು ಸೃಷ್ಟಿಸುತ್ತವೆ. ಇಂತಹ ಪ್ರಕ್ರಿಯೆಯಲ್ಲಿ ಭಿನ್ನವಾಗಿ ಕಂಡು ಬರುವ ಸಂಗತಿಗಳೇ ನಿಜವಾದ ಅವ್ಯಕ್ತ ಸಂಸ್ಕೃತಿಯ ಅಭಿವ್ಯಕ್ತಿಗಳೇ ವಿನಃ ಸಂಸ್ಕೃತಿಯ ಎಲ್ಲ ಅಭಿವ್ಯಕ್ತಿಗಳು ಅವ್ಯಕ್ತ ಸಂಸ್ಕೃತಿಯ ಸಂಗತಿಗಳಲ್ಲ. ಈ ಹಿನ್ನೆಲೆಯಿಂದ ಗಮನಿಸಿದರೆ ಅವ್ಯಕ್ತ ಸಂಸ್ಕೃತಿಯ ವಿಷಯಗಳನ್ನೆ ಪ್ರತ್ಯೇಕವಾಗಿ ನಿರ್ಧಿಷ್ಠಪಡಿಸಿಕೊಳ್ಳಬೇಕಾಗುತ್ತದೆ. ಭೌತಿಕವಾಗಿ ಅವ್ಯಕ್ತ ಸಂಸ್ಕೃತಿಯನ್ನು ಪಟ್ಟಿಮಾಡುವುದು ಸಲೀಸಲ್ಲ.

ಅವ್ಯಕ್ತ ಸಂಸ್ಕೃತಿಯನ್ನು ವಿವರಿಸುವ ಆರಂಭದಲ್ಲಿ ಹಂಪಿಯ ಪರಿಸರದ ಪಟ್ಟಣದ ಎಲ್ಲಮ್ಮನ ಉದಾಹರಣೆಯನ್ನು ಪ್ರಸ್ತಾಪಿಸಲಾಗಿತ್ತು. ಪಟ್ಟಣದ ಎಲ್ಲಮ್ಮ ಸಾಮ್ರಾಜ್ಯದ ದೈವವಾಗಿರಲಿಲ್ಲ ಎಂಬುದು ಸ್ಪಷ್ಟ. ಪಟ್ಟಣದ ಎಲ್ಲಮ್ಮ ಸಾಮ್ರಾಜ್ಯದ ವ್ಯಕ್ತ ರೂಪಗಳ ಅವ್ಯಕ್ತ ಸ್ವರೂಪವಾಗಿದ್ದಳು. ಸಾಮ್ರಾಜ್ಯಗಳು ಇಂತಹ ಅವ್ಯಕ್ತ ದೈವವನ್ನು ಹೇಗೆ ಬಳಸಿ ಕೊಂಡಿದ್ದು ಎಂಬ ಪ್ರಶ್ನೆ ಬೇರೆ. ಸಾಮ್ರಾಜ್ಯಗಳು ಸ್ವಾರ್ಥಕ್ಕೆ ಬಳಸಿಕೊಂಡ ಮೇಲೆ ಏನಾದವು ಎಂಬುದೂ ಮುಖ್ಯವೇ. ಸಾಮ್ರಾಜ್ಯ ಬಳಸಿ ಅಳಿಯಿತಾದರೂ ಪಟ್ಟಣದ ಎಲ್ಲಮ್ಮನ ಜನಪದ ಪ್ರಜ್ಞೆ ಅಳಿಯಲಿಲ್ಲ. ಈ ಪ್ರಕ್ರಿಯೆಯಲ್ಲಿ ಅವ್ಯಕ್ತ ಸಂಸ್ಕೃತಿಯನ್ನು ಗುರುತಿಸಿಕೊಳ್ಳ ಬಹುದು. ಅವ್ಯಕ್ತ ಸಂಸ್ಕೃತಿಯನ್ನು ಸಂಸ್ಕೃತಿಯ ವ್ಯಕ್ತರೂಪದಲ್ಲಿಯೇ ಕಾಣುವ ಸಾಮಾನ್ಯ ನೋಟಕ್ಕೆ ಹೀಗಾಗಿಯೇ ವಿಶೇಷತೆ ಇಲ್ಲ. ಅವ್ಯಕ್ತ ಸಂಸ್ಕೃತಿಯು ವ್ಯಕ್ತ ರೂಪವನ್ನು ಮೇಲು ನೋಟಕ್ಕೆ ಒಪ್ಪಿಕೊಂಡು ಆಳದಲ್ಲಿ ವೈರುಧ್ಯವನ್ನು ಧ್ವನಿಸುತ್ತಿರುತ್ತದೆ. ಪಟ್ಟಣದ ಎಲ್ಲಮ್ಮನ ವ್ಯಕ್ತರೂಪ ವಿಜಯನಗರ ಸಾಮ್ರಾಜ್ಯದ ಕಣ್ಣೋಟದಲ್ಲಿ ಯುದ್ಧೋಪಯೋಗಿ ದೇವತೆ. ಆದೇ ಜನಪದರಿಗೆ ಇವತ್ತಿಗೂ ಆಕೆ ಮಾತೃ ಸ್ವರೂಪದ ದೇವತೆ. ಪುರುಷರ ಯುದ್ಧದಾಹದ ಸಾಮ್ರಾಜ್ಯವನ್ನು ಕಾಯಬೇಕಾಗಿದ್ದ ದೇವತೆ ಆ ಕಾರ್ಯವನ್ನು ಮಾಡಿದಳೊ ಇಲ್ಲವೊ ಎಂಬುದು ಬೇರೆ. ಆದರೆ ಜನಪದರ ಪಾಲಿಗೆ ಪಟ್ಟಣದ ಎಲ್ಲಮ್ಮ ಜನರ ದೈನಂದಿನ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವ ದೈವ. ಇದು ಅವ್ಯಕ್ತ ಸಂಸ್ಕೃತಿಯ ಜನಪದ ಸಮಾಜದ ದೃಷ್ಠಿ. ಹೀಗಾಗಿ ಅವ್ಯಕ್ತ ಸಂಸ್ಕೃತಿಯು ಅಲಕ್ಷಿತರ ಪ್ರಜ್ಞೆ. ನಿಸರ್ಗವೇ ತಮ್ಮನ್ನು ಕಾಯುವ ದೈವ ಎಂದು ನಂಬಿದವರ ಆದಿಮ ಪ್ರಜ್ಞೆಯ ಪ್ರತಿಬಿಂಬ ಅವ್ಯಕ್ತ ಸಂಸ್ಕೃತಿ. ಹಂಪಿಯ ಜನಪದ ಪರಂಪರೆ ಸಾಮ್ರಾಜ್ಯದಿಂದ ಪಡೆದದ್ದು ಏನೂ ಇಲ್ಲವೇ ಇಲ್ಲ ಎಂದೇ ಹೇಳಬೇಕಾ ಗುತ್ತದೆ. ಆದರೆ ವಿಜಯನಗರ ಸಾಮ್ರಾಜ್ಯವು ಹಂಪಿಯ ಗ್ರಾಮ ಸಮಾಜದ ನೈಸರ್ಗಿಕ ಸಂಸ್ಕೃತಿಯ ಬೇರುಗಳಿಂದ ಸಾಕಷ್ಟು ಪಡೆದಿದೆ. ಈ ಪ್ರಕ್ರಿಯೆಯಲ್ಲಿ ಜನಪದರು ಅವ್ಯಕ್ತವಾದ ಅಥವಾ ಪರ್ಯಾಯವಾದ ಹಲವಾರು ಗುಪ್ತ ಅಭಿವ್ಯಕ್ತಿಗಳನ್ನು ಕಂಡುಕೊಂಡಿದ್ದಾರೆ. ಅವೆಲ್ಲವೂ ಬಿಡಿಯಾದ ವಿವರಗಳ ವ್ಯಕ್ತ ರೂಪದ ಹಂಗಿಗೆ ಒಳಪಡುವುದಿಲ್ಲ.

ವೈವಿಧ್ಯ ಅಭಿವ್ಯಕ್ತಿಯ ಅವ್ಯಕ್ತ ಪ್ರವೃತ್ತಿ

ಅವ್ಯಕ್ತ ಸಂಸ್ಕೃತಿಯನ್ನು ಭೌತಿಕವಾಗಿ ಗುರುತಿಸುವುದು ಸೂಕ್ತವಲ್ಲ. ಮುಕ್ತವಾದ ಅಭಿವ್ಯಕ್ತಿಗೆ ಯಾವ ಆತಂಕಗಳೂ ಇರುವುದಿಲ್ಲ. ಜನಪದರು ಎಲ್ಲವನ್ನೂ ಮುಕ್ತವಾಗಿ ಅಭಿವ್ಯಕ್ತಿಸಲು ಸಾಧ್ಯವಿರಲಿಲ್ಲ. ಕೃಷ್ಣದೇವರಾಯ ಅಷ್ಟೊಂದು ಯಶಸ್ವಿ ದೊರೆಯಾಗಿದ್ದರೂ ಆತನ ಬಗ್ಗೆ ಜನಪದ ಪರಂಪರೆ ಅವ್ಯಕ್ತ ಸ್ವಭಾವದಲ್ಲಿ ವರ್ತಿಸಿದೆ. ಎಲ್ಲ ಸಾಮ್ರಾಜ್ಯಗಳ ಬಗೆಗೂ ಜನಪದರ ಮೌಖಿಕ ನಿರೂಪಣೆಗಳು ಅವ್ಯಕ್ತ ನಿಲುವನ್ನು ತಾಳುತ್ತವೆ. ಇದು ಆಗಾಗಲೇ ವ್ಯಕ್ತವಾಗಿ ಹೋಗಿರುವ ಲಿಖಿತ ಪರಂಪರೆಯ ವ್ಯಕ್ತ ಸ್ವರೂಪಕ್ಕೆ ಜನಪದ ಮೌಖಿಕ ಪರಂಪರೆಯು ತಾಳುತ್ತಿರುವ ಮೌನವೂ ಆಗಿರಬಹುದು. ಏನನ್ನೂ ಪ್ರತಿಕ್ರಿಯಿಸ ಬಾರದು ಎಂಬ ಪ್ರಜ್ಞೆಯು ನಿಸರ್ಗ ತತ್ವದಿಂದ ಬರುತ್ತದೆ. ನಿಸರ್ಗವನ್ನು ಆರಾಧಿಸುವುದೇ ಜನಪದರಿಗೆ ಮುಖ್ಯವಾಗುವುದು ಇಂತಹ ಅವ್ಯಕ್ತ ಸ್ವಭಾವಕ್ಕೆ ಸಹಕಾರಿಯಾಗಿದೆ. ಸಾಮ್ರಾಜ್ಯಕ್ಕೆ ಪ್ರತಿಕ್ರಿಯಿಸುವಷ್ಟು ಅವಕಾಶವನ್ನು ಜನಪದರಿಗೆ ಸಾಮ್ರಾಜ್ಯಗಳು ಕೊಟ್ಟಿರಲಾರವು. ಬೀದಿಯಲ್ಲಿ ಬೇಡುವ ಹಾಡುಗಾರ ಆಸ್ಥಾನದ ಅಂತರಂಗವನ್ನು ಹಾಡುವುದು ಸಾಮ್ರಾಜ್ಯಗಳಿಗೆ ಘನತೆಯ ವಿಷಯವಾಗಿರಲಿಲ್ಲ. ಅಂತೆಯೆ ಲಿಖಿತ ಪರಂಪರೆ ಅತ್ಯಂತ ಬಲಿಷ್ಟ ವ್ಯಕ್ತ ಪರಂಪರೆ ಅಥವಾ ವ್ಯಕ್ತ ಸಂಸ್ಕೃತಿ. ಇಂತಹ ಬಲಿಷ್ಟ ಲಿಖಿತ ಕವಿಗಳಿಗೂ ಕೂಡ ಅವ್ಯಕ್ತ ಪರಂಪರೆಗಳ ಜನಪದ ಹಾಡುಗಾರರ ಬಗ್ಗೆ ಗೌರವ ಇರಲಿಲ್ಲ. ಈ ಬಗೆಯ ಅಂತರಗಳಲ್ಲೆ ಅವ್ಯಕ್ತ ಸಂಸ್ಕೃತಿ ಕ್ರಿಯಾಶೀಲಗೊಳ್ಳುವುದು.

ಚರಿತ್ರೆಯ ಅನುಕೂಲಕ್ಕಾಗಿ ಅವ್ಯಕ್ತ ಸಂಸ್ಕೃತಿಗಳನ್ನು ಅನುಸಂಧಾನ ಮಾಡುವಾಗ ಈ ಬಗೆಯ ಎಚ್ಚರವಿರಬೇಕು. ಇಲ್ಲವಾದರೆ ವ್ಯಕ್ತ ಸಂಸ್ಕೃತಿಯ ಉಪ ಸಂಗತಿಯಾಗಿ ಅವ್ಯಕ್ತ ಸಂಸ್ಕೃತಿಯ ಎಷ್ಟೋ ವೈರುಧ್ಯಗಳನ್ನು ಸಕಾರಾತ್ಮಕ ಅಂಶಗಳೆಂದು ತಪ್ಪಾಗಿ ಹೊಂದಿಸಿಬಿಡುವ ಅಪಾಯಗಳಿವೆ. ಅವ್ಯಕ್ತ ಸಂಸ್ಕೃತಿ ಪೂರ್ಣ ರೂಪದಲ್ಲಿ ವ್ಯಕ್ತ ಸಂಸ್ಕೃತಿಯ ವಿರುದ್ಧನೆಲೆ ಎಂತಲೂ ಭಾವಿಸಬೇಕಾದುದಿಲ್ಲ. ವೈರುಧ್ಯವನ್ನು ಮೀರುವ ಸ್ವಭಾವ ಅವ್ಯಕ್ತ ಸಂಸ್ಕೃತಿಗಳಿಗೆ ಇರುತ್ತದೆ. ಪ್ರಭುತ್ವದ ಎದುರು ಅಥವಾ ವ್ಯವಸ್ಥಿತವಾದ ಒಂದು ವ್ಯಕ್ತ ರೂಪದ ಮುಂದೆ ಅವ್ಯಕ್ತ ಸಂಸ್ಕೃತಿಯ ಗುಪ್ತ ದನಿಗಳು ಪ್ರತಿರೋಧ ತೋರಿಕೊಳ್ಳುವುದು ಸಾಧ್ಯವಿರುವುದಿಲ್ಲ. ಈ ಕಾರಣವಾಗಿಯೆ ಅವ್ಯಕ್ತ ಸಂಸ್ಕೃತಿಗಳು ಪ್ರತಿರೋಧ ದನಿಯನ್ನೆ ಒಪ್ಪಂದ ಮಾಡಿಕೊಂಡು ಸಂಯುಕ್ತವಾಗಿ ಅನಾಮಧೇಯತೆಯಲ್ಲಿ ಸಂಕೀರ್ಣವಾಗಿ ಧ್ವನಿಸುತ್ತವೆ. ಈ ಸ್ಥಿತಿಯಲ್ಲಿ ವೈರುಧ್ಯದ ವ್ಯಕ್ತ ಸ್ವರೂಪವನ್ನು ದಾಟಿಯೇ ವಿಶಿಷ್ಟ ಭಾವನೆಗಳನ್ನು ವ್ಯಕ್ತ ಪಡಿಸಬೇಕಾಗುತ್ತದೆ. ಅವ್ಯಕ್ತ ಸಂಸ್ಕೃತಿಯನ್ನು ಪರ್ಯಾಯ ಎಂತಲೂ ಗುರುತಿಸಲಾಗದು. ಮೇಲು ನೋಟಕ್ಕೆ ಹಾಗೆ ಕಾಣುವುದಾದರೂ ಮನುಷ್ಯನಿಗೆ ವಿಕಾಸದ ಅಂತರ‍್ಗತ ಅಂಶವಾದ ವೈವಿಧ್ಯ ಅಭಿವ್ಯಕ್ತಿಯ ಪ್ರವೃತ್ತಿ ಅವ್ಯಕ್ತ ಇದಾಗಿದೆ. ಅದಕ್ಕೆಂದೇ ಅವ್ಯಕ್ತ ಸಂಸ್ಕೃತಿಯು ಯಾವತ್ತೂ ಕೂಡ ವೈವಿಧ್ಯ ನೆಲೆಯಲ್ಲಿ ಸಮಾಜಗಳಲ್ಲಿ ಕ್ರಿಯಾಶೀಲವಾಗಿರುವುದು. ಈ ಬಗೆಯ ರೀತಿ ನೀತಿಯಿಂದಲೆ ಅವ್ಯಕ್ತ ಸಂಸ್ಕೃತಿ ಚರಿತ್ರೆಯ ಅಂತರಂಗದ ಸಂಗತಿ. ಚರಿತ್ರೆಯು ತನ್ನ ಸುತ್ತಣ ನೈಸರ್ಗಿಕ ಪರಿಸರದಿಂದ ಹೇಗೆ ಪುಷ್ಟಿ ಪಡೆಯುವುದೊ ಹಾಗೆಯೆ ಸಂಸ್ಕೃತಿ ಕೂಡ ನಿಸರ್ಗದಿಂದ ಪ್ರೇರಿತವಾಗಿರುತ್ತದೆ. ಹೀಗಾಗಿ ನಿಸರ್ಗ ಹಾಗೂ ಸಂಸ್ಕೃತಿ ಎರಡೂ ಕೂಡ ಆಯಾ ಪರಿಸರದ ಚರಿತ್ರೆಯ ನಿರ್ಮಾಣಕ್ಕೆ ದಾರಿ ಮಾಡಿರುತ್ತವೆ. ಈ ಹಿನ್ನೆಲೆಯಲ್ಲಿ ಹಂಪಿ ವಿಶ್ವಪರಂಪರೆಯ ಗ್ರಾಮಗಳ ಅವ್ಯಕ್ತ ಸಂಸ್ಕೃತಿಯು ಹೇಗೆ ಪರಂಪರೆಯ ಭಾಗವಾಗಿ ಸಾಗಿಬಂದಿದೆ ಎಂಬುದನ್ನು ಪರಿಶೀಲಿಸಬೇಕಾಗಿದೆ.

ವ್ಯಕ್ತ ಹೂವು ಅವ್ಯಕ್ತ ಬೇರು

ಅವ್ಯಕ್ತ ಸಂಸ್ಕೃತಿಯು ಬೇರಿನಂತಿರುತ್ತದೆ. ಚರಿತ್ರೆಯು ಇದರ ಸಾರದಿಂದಲೇ ರೂಪ ಪಡೆಯುವುದು. ಸಮಾಜಗಳ ಅಸ್ತಿತ್ವವು ಇದರಲ್ಲೆ ಲೀನವಾಗಿರುತ್ತದೆ. ನೇರವಾಗಿ ಕಾಣಿಸಿಕೊಳ್ಳದ ಸಂಗತಿಗಳೇ ನಿರ್ಣಾಯಕ ಪಾತ್ರವನ್ನು ವಹಿಸುವುದು. ಆದರೆ ಚರಿತ್ರೆಕಾರರು ಇಂತಹ ಅಂತರ‍್ಗತ ಸಂಗತಿಗಳನ್ನು ಚರಿತ್ರೆಯ ಹೊರಗಿನ ವಿಚಾರಗಳೆಂದು ಉಪೇಕ್ಷಿಸುವುದೇ ಹೆಚ್ಚು. ವಿಶ್ವಪರಂಪರೆಯ ಹಂಪಿ ವ್ಯಾಪ್ತಿಯ ಗ್ರಾಮಗಳ ಅವ್ಯಕ್ತ ಸಂಸ್ಕೃತಿಯು ಹೀಗಾಗಿಯೆ ಚರಿತ್ರೆಯ ಪ್ರಧಾನ ವಿಷಯವಾಗದೇ ಹೊರಗೇ ಉಳಿದಿರುವುದು. ಇಲ್ಲಿ ನೆಲೆ ನಿಂತು ವಾಸಿಸುವ ಸಮುದಾಯಗಳು ತಲೆಮಾರುಗಳಿಂದ ಅವರದೇ ಆದ ಅವ್ಯಕ್ತ ಜ್ಞಾನ ಪರಂಪರೆ ಗಳನ್ನು ಬಿತ್ತನೆ ಮಾಡಿಕೊಂಡು ಬಂದಿರುತ್ತಾರೆ. ಈ ಜ್ಞಾನ ಪರಂಪರೆಗಳಿಗೆ ಸಾಮ್ರಾಜ್ಯದ ನೇರ ಸಂಬಂಧವೇ ಇರುವುದಿಲ್ಲವಾದರೂ ಒಂದು ಸಾಮ್ರಾಜ್ಯವು ತಲೆ ಎತ್ತಲು ಅಂತಹ ಅವ್ಯಕ್ತ ಜ್ಞಾನ ಪರಂಪರೆಗಳೇ ಕಾರಣವಾಗಿರುತ್ತವೆ. ಇದರಿಂದಲೇ ಅಂತಹ ಎಲ್ಲ ಬಗೆಯ ತಿಳುವಳಿಕೆಯನ್ನು ಅವ್ಯಕ್ತ ಸಂಸ್ಕೃತಿ ಎಂದು ಗುರುತಿಸುವುದು. ಹೀಗಾಗಿ ಅವ್ಯಕ್ತ ಸಂಸ್ಕೃತಿಗೂ ಚರಿತ್ರೆಗೂ ಅವಿನಾಭಾವ ಸಂಬಂಧವಿರುವುದು. ಮಾನಸಿಕವಾಗಿ ಗ್ರಹಿಸಬೇಕಾದ ಸಂಗತಿಗಳೆ ಲ್ಲವು ಅವ್ಯಕ್ತ ಸಂಸ್ಕೃತಿಯಲ್ಲಿ ಅಡಗಿರುತ್ತವೆ. ಮಾನವರ ವಿಕಾಸದ ಚರಿತ್ರೆಯಲ್ಲಿ ಅಂತಹ ಸಂಗತಿಗಳನ್ನೆಲ್ಲ ಗ್ರಹಿಸಿದಾಗ ಅಖಂಡವಾಗಿ ಚರಿತ್ರೆ ಮತ್ತು ನಿಸರ್ಗದ ಸಂಬಂಧಗಳು ಹೇಗೆ ಸಂಸ್ಕೃತಿಯಲ್ಲಿ ಸಾಗಿ ಬಂದಿವೆ ಎಂಬುದು ತಿಳಿಯುತ್ತದೆ. ಗತಕಾಲವು ಹೀಗಾಗಿಯೆ ಅವ್ಯಕ್ತ ಸಂಗತಿ. ಇದೇ ಅವ್ಯಕ್ತ ಸಂಸ್ಕೃತಿಯ ಕೇಂದ್ರ ಭಾವ. ಈ ನೆಲೆಯಲ್ಲಿ ಅವ್ಯಕ್ತ ಸಂಸ್ಕೃತಿಯ ಪ್ರಜ್ಞೆ ಮತ್ತು ಪರಿಸರಗಳು ಅಲ್ಲಿನ ಸಮಾಜದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಬಗೆಯಲ್ಲಿಯೆ ವ್ಯಕ್ತತೆಯು ಹೂವಾಗಿ ಕಂಡರೆ ಅವ್ಯಕ್ತತೆಯು ಬೇರಾಗಿ ಮರೆಯಲ್ಲೆ ಉಳಿಯುವುದು. ಆದರೆ ಚರಿತ್ರೆಗೆ ಹೇಗೆ ಪರಿಸರ ಪ್ರಜ್ಞೆ ಹಾಗೂ ಅವ್ಯಕ್ತ ಸಂಸ್ಕೃತಿಗಳು ಪರಂಪರೆಯಾಗಿ ಕೆಲಸ ಮಾಡುತ್ತವೆ ಎಂಬುದು ಮುಖ್ಯ. ಪರಿಸರ ಪ್ರಜ್ಞೆ ಮನುಷ್ಯರಿಗೆ ಬದುಕಿನ ಅಸ್ತಿತ್ವವನ್ನು ಕಲಿಸುತ್ತದೆ. ಈ ಅರಿವನ್ನೆ ಅವ್ಯಕ್ತ ಸಂಸ್ಕೃತಿಯು ಅಭಿವ್ಯಕ್ತಿಸುತ್ತದೆ. ಹೀಗೆ ಇವೆರಡರ ಪರಿಣಾಮವಾಗಿ ತನ್ನ ನಾಡು ನುಡಿ ನೆಲೆಯನ್ನು ಕಂಡುಕೊಳ್ಳುವಂತಹ ಚಾರಿತ್ರಿಕ ಒತ್ತಡಗಳು ಸಮಾಜದಲ್ಲಿ ಹುಟ್ಟಿಕೊಳ್ಳುತ್ತವೆ. ವಿಜಯನಗರ ಸಾಮ್ರಾಜ್ಯವು ಪರಿಸರ ಪ್ರಜ್ಞೆಯಿಂದ ವಿಶೇಷ ಸೌಲಭ್ಯಗಳನ್ನು ಕಂಡುಕೊಂಡಿದ್ದು ಇದರಿಂದಾಗಿಯೇ. ಇಲ್ಲಿನ ಅವ್ಯಕ್ತ ಸಂಸ್ಕೃತಿಯು ಸಾಮ್ರಾಜ್ಯದ ಬದುಕಿನ ಭಾಗವಾಗಿಯೂ ಬೆಳೆದಿದ್ದರಿಂದ ಜನಪದ ಸಮಾಜ ಕೂಡ ತನ್ನ ಅರಿವನ್ನು ವಿಸ್ತರಿಸಿಕೊಂಡಿದೆ.

ಅಂದರೆ ಸಾಮ್ರಾಜ್ಯದ ಉದಯಕ್ಕೂ, ವಿಸ್ತರಣೆಗೂ ಹೇಗೆ ಪರಿಸರ ಪ್ರಜ್ಞೆ ಕೂಡ ಪ್ರಬಲ ಸಾಧನವಾಯಿತೊ ಅದರಂತೆಯೆ ಅವ್ಯಕ್ತ ಸಂಸ್ಕೃತಿಯು ಕೂಡ ಇಲ್ಲಿನ ಸಾಮಾಜಿಕ ಆರ್ಥಿಕ ರಾಜಕೀಯ ಧಾರ್ಮಿಕ ಸಾಂಸ್ಕೃತಿಕ ವಿಚಾರಗಳು ಬೆಳೆಯಲು ಪ್ರಮುಖ ಪ್ರೇರಣೆಯಾಗಿ ಕಾರ್ಯನಿರ್ವಹಿಸಿದೆ. ಹೀಗಾಗಿಯೇ ಹಂಪಿಯ ವಿಜಯನಗರ ಸಾಮ್ರಾಜ್ಯವು ಕಾಲದಲ್ಲಿ ಲೀನವಾಗಿದ್ದರೂ ಇಲ್ಲಿನ ಅವ್ಯಕ್ತ ಸಂಸ್ಕೃತಿಯು ಇನ್ನೂ ಜೀವಂತವಾಗಿ ಉಳಿದುಕೊಂಡಿ ರುವುದು.

ಅವ್ಯಕ್ತ ಸಂಸ್ಕೃತಿಯ ನೈಸರ್ಗಿಕ ಅರ್ಥ, ಗುಣ, ಲಕ್ಷಣ

ಹಂಪಿಯ ಗ್ರಾಮಪರಂಪರೆಗಳು ರೂಪಿಸಿಕೊಂಡು ಬಂದಿರುವ ಅವ್ಯಕ್ತ ಸಂಸ್ಕೃತಿಯ ಗುಣ, ಅರ್ಥ, ಸ್ವಭಾವ, ಲಕ್ಷಣಗಳನ್ನು ಕೆಳಗಿನಂತೆ ಗುರುತಿಸಬಹುದು.

 • ಅವ್ಯಕ್ತ ಸಂಸ್ಕೃತಿಯು ಜನಜೀವನದ ದೈನಂದಿನ ಅಗತ್ಯವಾಗಿರುತ್ತದೆ.
 • ಕಾಲಾತೀತವಾದ ಗುಣ ಅವ್ಯಕ್ತ ಸಂಸ್ಕೃತಿಯ ಇರುವಿಕೆಯನ್ನು ಸಾಧಿಸುತ್ತದೆ.
 • ಯಾವುದೇ ನಿಯಂತ್ರಕ ವ್ಯವಸ್ಥೆಗಳಿಗೆ ಅವ್ಯಕ್ತ ಸಂಸ್ಕೃತಿಯು ಸೀಮಿತವಲ್ಲ.
 • ಸಮಷ್ಠಿಯಾದ ಭಾವನೆ ಇದರಲ್ಲಿರುವುದರಿಂದ ಅದು ಅಳಿಯುವುದಿಲ್ಲ.
 • ಅವ್ಯಕ್ತ ಸಂಸ್ಕೃತಿಯು ಸದಾ ಪುನರ್ ಸೃಷ್ಠಿಗೆ ಒಳಗಾಗುವಂತದು.
 • ಅವ್ಯಕ್ತ ಸಂಸ್ಕೃತಿಯು ಸ್ಥಳೀಯ ಪರಿಸರದ ಅಸ್ತಿತ್ವದ ವಿವೇಕ.
 • ಸಮುದಾಯಗಳು ನೈಸರ್ಗಿಕ ಪ್ರಜ್ಞೆಯಿಂದ ರೂಪಿಸಿಕೊಂಡ ನೀತಿಯೆ ಅವ್ಯಕ್ತ ಸಂಸ್ಕೃತಿ.
 • ಮೌಖಿಕ ಪರಂಪರೆಯ ಜ್ಞಾನ ವಿಕಾಸವೇ ಅವ್ಯಕ್ತ ಸಂಸ್ಕೃತಿಯ ಸಾರ.
 • ಸಾಮಾಜಿಕ ವ್ಯವಸ್ಥೆಯ ವಿಕಾಸವನ್ನು ಚರಿತ್ರೆಯ ಜೊತೆಗೆ ಬೆಸೆಯುವುದೇ ಅವ್ಯಕ್ತ ಸಂಸ್ಕೃತಿಯ ಸ್ವಭಾವ.
 • ಜನಪದರ ದೈವಿಕ ಆಚರಣೆಯು ಅವ್ಯಕ್ತ ಸಂಸ್ಕೃತಿಯಲ್ಲೂ ವಿಸ್ತರಿಸುತ್ತದೆ. ಹಾಗೆ ಅವಲಂಬಿಸಿಕೊಂಡ ಈ ಸಂಸ್ಕೃತಿಯು ಸಾಮ್ರಾಜ್ಯದ ಅಸ್ತಿತ್ವಕ್ಕೆ ಧಾರ್ಮಿಕವಾದ ಆಯಾಮವನ್ನು ತಂದು ಕೊಡುತ್ತದೆ.
 • ಅವ್ಯಕ್ತ ಸಂಸ್ಕೃತಿಯು ನಿರಂತರವಾಗಿರುತ್ತದೆ.
 • ಅಂಚಿನ ಸಮುದಾಯಗಳ ಅನನ್ಯತೆಯನ್ನು ಅದು ಪ್ರತಿಪಾದಿಸುತ್ತಿರುತ್ತದೆ.
 • ಅವ್ಯಕ್ತವಾದ ಸಂಸ್ಕೃತಿಯು ದೂರದ ಮರೆಯಲ್ಲಿ ಸಾಗುತ್ತ ತನ್ನೊಳಕ್ಕೆ ಎಲ್ಲ ಬಗೆಯ ಚರಿತ್ರೆಯ ಸಂಗತಿಗಳನ್ನು ಗರ್ಭೀಕರಿಸಿಕೊಳ್ಳುತ್ತಿರುತ್ತದೆ.
 • ಕಾಲದ ವಿಭಿನ್ನ ನೆಲೆಗಳನ್ನೆಲ್ಲ ಐಕ್ಯವಾಗಿಸಿಕೊಂಡು ವಿಕಾಸದ ಕಡೆ ಸಾಗುವ ಅವ್ಯಕ್ತ ಸಂಸ್ಕೃತಿಯು ಮನುಷ್ಯರ ಸೃಜನಶೀಲ ಹುಡುಕಾಟವನ್ನು ವಿಸ್ತರಿಸುತ್ತದೆ.
 • ಅವ್ಯಕ್ತ ಸಂಸ್ಕೃತಿಯು ಅನಾಮಧೇಯವಾಗಿರುತ್ತದೆ. ಅಧಿಕೃತವಾದ ನಿಲುವುಗಳನ್ನು ಅದು ಸ್ಥಾಪಿಸುವುದಿಲ್ಲ.
 • ಅವ್ಯಕ್ತ ಸಂಸ್ಕೃತಿಯು ಪ್ರಭುತ್ವ ಕೇಂದ್ರಿತವಾದುದಲ್ಲ. ಅದು ಜನಪದರ ಪರವಾದ ಅಭಿವ್ಯಕ್ತಿ. ಸಂಯುಕ್ತವಾದ ತಿಳುವಳಿಕೆಯ ಮೂಲಕ ತನ್ನ ಕಾಲದ ಪ್ರಧಾನ ಚಿಂತನೆ ಮತ್ತು ಅಧಿಕಾರಕ್ಕೆ ಹೊರತಾಗಿ ಅಂತರ ಕಾಯ್ದುಕೊಂಡು ಬೆಳೆಯುತ್ತದೆ.
 • ಅವ್ಯಕ್ತ ಸಂಸ್ಕೃತಿಯು ನಿಸರ್ಗದ ಭಾಗವಾದ್ದರಿಂದ ಮನುಷ್ಯ ನಿರ್ಮಿತ ಮಿತಿಗಳಿಂದ ಪಾರಾಗುವ ದಾರಿಗಳನ್ನು ನಿಸರ್ಗದಿಂದಲೆ ಹುಡುಕುತ್ತಿರುತ್ತದೆ.
 • ಅವ್ಯಕ್ತ ಸಂಸ್ಕೃತಿಯು ಆಧುನಿಕತೆಯ ಒಳಗೂ ತನ್ನ ಮೇಲಿನ ಹೊರ ಒಳಗಿನ ಎಲ್ಲ ಪ್ರಭಾವಗಳನ್ನು ಪಡೆದುಕೊಳ್ಳುತ್ತಿರುತ್ತದೆ. ಹಾಗೆಯೆ ಆ ಬಗೆಯ ಒತ್ತಡಗಳಲ್ಲಿ ತನ್ನ ರೂಪಾಂತರವನ್ನು ಮಾಡಿಕೊಳ್ಳುತ್ತ ಅಂತರ ಕಾಯ್ದುಕೊಳ್ಳುತ್ತದೆ.
 • ಅವ್ಯಕ್ತ ಸಂಸ್ಕೃತಿಯು ಗತಕಾಲದ ಸ್ವಭಾವ. ಗತವನ್ನು ವೈವಿಧ್ಯ ರೂಪಾಂತರಗಳಲ್ಲಿ ಪ್ರತಿಸೃಷ್ಠಿಸುತ್ತಿರುತ್ತದೆ.
 • ಅವ್ಯಕ್ತ ಸಂಸ್ಕೃತಿಯು ಗತದ ಕನ್ನಡಿಯಾಗಿಯೂ ಪ್ರತಿಫಲಿಸುತ್ತದೆ. ಗತವನ್ನು ಇದ್ದಿದ್ದ ರೂಪದಲ್ಲೇ ಅವ್ಯಕ್ತ ಸಂಸ್ಕೃತಿಯು ಇಚ್ಛಿಸುವುದಿಲ್ಲ. ಗತದ ಒಂದು ಅಭಿವ್ಯಕ್ತಿಯು ಸ್ಥಾಪಿತವಾದುದ್ದರಿಂದ ಅದರ ಏಕಾಕೃತಿಯ ಸಂರಚನೆಯನ್ನು ಮೀರಲು ತಂತಾನೆ ಅದು ಗತವನ್ನು ವರ್ತಮಾನದ ಜೊತೆ ಕೂಡಿಸಿಬಿಡುತ್ತದೆ.
 • ಇದರಿಂದಾಗಿ ಗತದ ಪಾವಿತ್ರ್ಯವನ್ನು ಅವ್ಯಕ್ತ ಸಂಸ್ಕೃತಿಯು ಭಂಗ ಪಡಿಸುತ್ತದೆ.
 • ಗತವನ್ನು ಪುನರ್ ಸೃಷ್ಠಿಗೊಳಿಸುವ ಅವ್ಯಕ್ತ ಸಂಸ್ಕೃತಿಯು ತನ್ನ ಅನುಕೂಲಕ್ಕೆ ತಕ್ಕಂತೆ ಚರಿತ್ರೆಯನ್ನು ಅರ್ಥೈಸುವ ಪ್ರಯತ್ನವನ್ನು ಮಾಡುತ್ತದೆ.
 • ಅವ್ಯಕ್ತ ಸಂಸ್ಕೃತಿಯು ಸುಪ್ತ ಪ್ರಜ್ಞೆಯ ಪ್ರಜ್ಞಾ ಪ್ರವಾಹಕವಾಗಿಯು ಗತವನ್ನು ಪುನರಭಿನ ಯಿಸುತ್ತಿರುತ್ತದೆ. ಆದ್ದರಿಂದಲೇ ಅವ್ಯಕ್ತ ಸಂಸ್ಕೃತಿಯು ವ್ಯಕ್ತ ಸಂಸ್ಕೃತಿಯ ನಿರ್ಧಾರ ಗಳನ್ನು ಅದರ ಯಜಮಾನ ಸ್ವರೂಪಗಳನ್ನು ಮೀರಲು ತೊಡಗುವುದು.
 • ಗ್ರಹಿಕೆಗೆ ಒಗ್ಗದ ಸೂಕ್ಷ್ಮ ಸಂಕೀರ್ಣ ಅಭಿವ್ಯಕ್ತಿಗಳನ್ನು ಅವ್ಯಕ್ತ ಸಂಸ್ಕೃತಿಗಳು ಐತಿಹ್ಯ ಪುರಾಣ ಆಚರಣೆಗಳ ಸುಪ್ತ ಸ್ವಭಾವದಲ್ಲಿ ಬಿಂಬಿಸುತ್ತವೆ.
 • ಅವ್ಯಕ್ತ ಸಂಸ್ಕೃತಿಯು ಎಲ್ಲ ಅಭಿವ್ಯಕ್ತಿಗಳ ಹಿಂದಿನ ಅವ್ಯಕ್ತ ಭಾವವಾಗಿರುತ್ತದೆ.
 • ಹೀಗೆ ಅವ್ಯಕ್ತ ಸಂಸ್ಕೃತಿಯ ಬಹುರೂಪಗಳನ್ನು ಪಟ್ಟಿ ಮಾಡಬಹುದು.

ಮನೋವಿಶ್ಲೇಷಣೆಯ ಅವ್ಯಕ್ತ ದೃಷ್ಟಿ

ಅವ್ಯಕ್ತ ಸಂಸ್ಕೃತಿ ಜನಪದ ಸಂಸ್ಕೃತಿಯ ವ್ಯಕ್ತ ರೂಪ ಮಾತ್ರ ಅಲ್ಲ. ನಮ್ಮೆಲ್ಲರ ತೀರ್ಮಾನಗಳಿಗೆ ಈ ತನಕ ದತ್ತಕವಾಗದ ಸಂಗತಿಗಳನ್ನು ಅವ್ಯಕ್ತ ಸಂಸ್ಕೃತಿಗಳಲ್ಲಿ ಹುಡುಕಿ ಕೊಳ್ಳುವ ಪ್ರವೃತ್ತಿ ಇತ್ತೀಚಿನದು. ಅಲಕ್ಷಿತವಾಗಿದ್ದ ಸಂಗತಿಗಳು ಪ್ರಧಾನ ಧಾರೆಯಲ್ಲಿ ಸೇರಬೇಕು ಎಂಬ ಆಶಯ ಒಳ್ಳೆಯದೇ ಆಗಿದ್ದರೂ ಈ ಉದ್ದೇಶ ಸಾಧನೆಗೆ ಅವ್ಯಕ್ತ ಮಾಹಿತಿಯನ್ನು ಕೇವಲ ಬಳಸಿಕೊಳ್ಳುವುದು ನ್ಯಾಯವಲ್ಲ. ಇವೆರಡು ಒಂದಕ್ಕೊಂದು ಪೂರಕವೇ ಆಗಿರುತ್ತವೆ ಎಂದು ಅವ್ಯಕ್ತ ಸಂಸ್ಕೃತಿಯ ಬಗ್ಗೆ ಪೂರ್ವಾಭಿಪ್ರಾಯ ಸೂಕ್ತವಾದು ದಲ್ಲ. ಪ್ರಧಾನ ಅಭಿವ್ಯಕ್ತಿಗೆ ಅವ್ಯಕ್ತ ಅಭಿಪ್ರಾಯಗಳನ್ನು ಸೇರ್ಪಡಿಸುವಾಗ ಅಪವ್ಯಾಖ್ಯಾನ ಸಹಜವಾಗಿಬಿಡುತ್ತದೆ. ನಮ್ಮ ಬುದ್ದಿಮತ್ತೆಗೆ ಎಟುಕದಿದ್ದ ಸಂಗತಿ ಅವ್ಯಕ್ತ ಸಂಸ್ಕೃತಿ ಎಂದು ತಿಳಿದಿದ್ದೇನೋ ಸರಿಯಾದುದೇ. ಆದರೆ ಈ ಅವ್ಯಕ್ತ ಭಾವನೆಗಳನ್ನೆಲ್ಲ ಸಾರಾಸಗಟಾಗಿ ಹಂಪಿಯ ವಿಶ್ವಪರಂಪರೆಯ ಭೌತಿಕ ಸಾಕ್ಷ್ಯಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗದು. ಅದರೆ ಬಳಸಿಕೊಳ್ಳುವಾಗ ಆ ಬಗೆಯ ಅವ್ಯಕ್ತ ಮಾನಸಿಕ ರಚನೆಗಳನ್ನೆಲ್ಲ ಒಂದು ಯಜಮಾನ ಅರ್ಥಕ್ಕಾಗಿ ಅರ್ಥವನ್ನೆ ತಿರುಚಿ ಮೂಲದ ಅರ್ಥವನ್ನೆ ಮರೆಮಾಚಿ ಯಜಮಾನ ಅರ್ಥವನ್ನು ರಕ್ಷಿಸುವುದು ನೈತಿಕವಲ್ಲ. ಇದು ಅವ್ಯಕ್ತ ಸಂಸ್ಕೃತಿಯ ಮಾನಸಿಕ ರಚನೆಯನ್ನು ದುರ್ಬಳಕೆ ಮಾಡಿಕೊಂಡಂತಾಗುತ್ತದೆ. ಮನಃಸಾಕ್ಷಿ ಎಂಬ ಅಮೂರ್ತ ಆಕಾರವನ್ನು ನಮ್ಮ ಅಧ್ಯಯನ ಗಳಲ್ಲಿ ಈತನಕ ಪ್ರಧಾನವಾಗಿ ಗ್ರಹಿಸುವ ಪ್ರಯತ್ನವನ್ನೆ ಮಾಡಲಾಗುತ್ತಿಲ್ಲ. ಮನೋವಿಶ್ಲೇ ಷಣೆಯ ಅಧ್ಯಯನ ಕ್ರಮಗಳು ಈ ದಾರಿಯಲ್ಲಿ ಬಹಳ ಮುಂದೆ ಕ್ರಮಿಸಿವೆ.

ಹೀಗಾಗಿ ಮನೋವಿಶ್ಲೇಷಣೆಯ ಅಧ್ಯಯನ ಕ್ರಮಗಳನ್ನು ಅವ್ಯಕ್ತ ಸಂಸ್ಕೃತಿಯ ಅಧ್ಯಯನದಲ್ಲಿ ತೊಡಗಿಸುವುದು ಸೂಕ್ತ. ಸುಪ್ತ ಪ್ರಜ್ಞೆ ಎಲ್ಲಿಯೂ ಕೈಗೆ ಸಿಗುವ ವಸ್ತುವಲ್ಲ, ಆಕರವಲ್ಲ, ಭೌತಿಕ ಸ್ವರೂಪವೂ ಅಲ್ಲ. ಮನೋವಿಜ್ಞಾನಿಗಳು ಮನಸ್ಸಿನ ಪ್ರಜ್ಞೆ ಸುಪ್ತಪ್ರಜ್ಞೆ ಅಪ್ರಜ್ಞಾವಸ್ಥೆಯಂತಹ ಆದಿಮ ಸ್ವರೂಪದ ಮನಸ್ಸಿನ ಸ್ತರಗಳನ್ನು ಅವಲಂಬಿಸಿಯೇ ಮನುಷ್ಯನ ವಿವೇಚನೆಯನ್ನು ಅಳೆದರು. ಸುಪ್ತವಾಗಿರುವ ಅನುಭವಗಳು ಸಾಮಾಜಿಕ ವ್ಯವಸ್ಥೆಯ ತೆರೆಯ ಮರೆಯಲ್ಲಿರುತ್ತವೆ. ಇದು ಮಾನವ ಸ್ವಭಾವ. ಎಲ್ಲ ಬಗೆಯ ಸಂಸ್ಕೃತಿ ಯಗಳಲ್ಲಿ ಇದು ಇರುತ್ತದೆ. ನಮ್ಮ ಮನಸ್ಸು ರೂಪುಗೊಂಡಿರುವುದೇ ನಮ್ಮ ಪರಿಸರದ ಮೂಲಕ. ಅದು ನೈಸರ್ಗಿಕ ಪರಿಸರವಾಗಿರಬಹುದು ಸಾಮಾಜಿಕ ಪರಿಸರವಾಗಿರಬಹುದು. ಇವೆರಡರ ಆಧಾರದಲ್ಲಿ ನಮ್ಮ ಸುಪ್ತ ಪ್ರಜ್ಞೆಯು ಎಲ್ಲ ಬಗೆಯ ಅಭಿವ್ಯಕ್ತಿಯನ್ನು ನಿಯಂತ್ರಿ ಸುತ್ತಿರುತ್ತದೆ. ಯಾವುದನ್ನು ವ್ಯಕ್ತ ಸ್ವರೂಪದಲ್ಲಿ ಬಿಂಬಿಸಬೇಕು ಯಾವುದನ್ನು ಅವ್ಯಕ್ತ ಸ್ಥಿತಿಯಲ್ಲಿ ನಿರೂಪಿಸಬೇಕು ಎಂಬ ಸಂಕಲನ ಕೆಲಸವನ್ನು ಸುಪ್ತಪ್ರಜ್ಞೆ ಮಾಡುತ್ತಿರುತ್ತದೆ. ಸಮಾಜದ ಸಮಷ್ಠಿ ಮನಸ್ಸು ಇದರ ಆಧಾರದ ಮೇಲೆ ನಿರ್ಧಾರವಾಗುತ್ತಿರುತ್ತದೆ. ಈ ಸಾಮಾಜಿಕ ಮನಸ್ಸು ವ್ಯಕ್ತಿಗತ ಮನಸ್ಸುಗಳ ಸಂಯುಕ್ತ ಭಾವ. ಇಲ್ಲಿಯೇ ವ್ಯಕ್ತಿಯ ಅನನ್ಯತೆಯೂ ಸಾಧ್ಯವಾಗುವುದು. ಸಂಸ್ಕೃತಿಗಳು ಸಾಮಾಜಿಕ ಅನನ್ಯತೆಯನ್ನೆ ಜ್ಞಾನವಾಗಿ ಮೌಲ್ಯವಾಗಿ ಅಖಂಡ ಪ್ರಜ್ಞೆಯಾಗಿ ಪ್ರಸರಿಸುತ್ತವೆ ಮತ್ತು ಸ್ಥಾಪಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಯಜಮಾನ್ಯ ನಂಬಿಕೆಗಳು ತಮ್ಮ ಅಸ್ತಿತ್ವ ಸ್ಥಾಪಿಸಿ ಹೇರಿಕೆಯನ್ನು ಉಂಟುಮಾಡಿದಾಗಲೆಲ್ಲ ಸಾಮಾಜಿಕ ಮನಸ್ಸು ಹಾಗೂ ಸಾಂಸ್ಕೃತಿಕ ಮನಸ್ಸು ಕವಲೊಡೆದು ಅವ್ಯಕ್ತ ಧಾರೆಯ ಕ್ರಮಗಳನ್ನು ಸಾಧಿಸಿಕೊಳ್ಳುತ್ತವೆ. ಇದರಿಂದ ಸಾಂಸ್ಕೃತಿಕ ಬಹುತ್ವ ಸಾಧ್ಯವಾಗುತ್ತದೆ ಹಾಗೂ ಯಜಮಾನ್ಯ ಮೌಲ್ಯಗಳನ್ನು ಸುಪ್ತವಾಗಿಯೆ ನಿರಾಕರಿಸುತ್ತದೆ. ಈ ಸಂಕೀರ್ಣ ಅವ್ಯಕ್ತ ಪ್ರಕ್ರಿಯೆಯು ತೋರಿಕೆಯದಲ್ಲವಾದ್ದರಿಂದ ಅದು ಎಷ್ಟೋ ಬಾರಿ ಪ್ರಧಾನ ಧಾರೆಯ ತಿಳುವ ಳಿಕೆಯ ಗಮನಕ್ಕೇ ಬಂದಿರುವುದಿಲ್ಲ. ಹೀಗಾಗಿಯೇ ಅದಕ್ಕೆ ಆ ಬಗೆಯ ಅಭಿವ್ಯಕ್ತಿಗಳೆಲ್ಲ ಅವ್ಯಕ್ತ ಪರಂಪರೆ, ಸಂಸ್ಕೃತಿ, ಜಾನಪದ ಇತ್ಯಾದಿ ಎಂಬ ತಿಳುವಳಿಕೆ ಬರುವುದು.

ಅವ್ಯಕ್ತ ಸಂಸ್ಕೃತಿಗಳು ಬಹುಪಾಲು ವೇಳೆ ಸುಪ್ತಪ್ರಜ್ಞೆಯ ಜೊತೆಯಲ್ಲೆ ಒಡನಾಟವನ್ನು ಹೊಂದಿರುತ್ತವೆ. ನಿಸರ್ಗ ಕೂಡ ಈ ಬಗೆಯ ಒಡನಾಟಕ್ಕೆ ಇಂಬು ನೀಡಿರುತ್ತದೆ. ಪ್ರಜ್ಞಾ ಪೂರ್ವಕ ಅಭಿವ್ಯಕ್ತಿಗಳೆಲ್ಲ ಯಜಮಾನಿಕೆಯ ಪ್ರತಿರೂಪಗಳಾಗಿ ವ್ಯವಸ್ಥೆಯಲ್ಲಿ ಸ್ಥಾಪಿತವಾಗು ತ್ತವೆ. ಧರ್ಮದಲ್ಲಿ ಪ್ರಜ್ಞಾಪೂರ್ವಕ ವಿಧಿ ವಿಧಾನ ಸಂಹಿತೆಗಳಿವೆ. ಸಂಸ್ಕೃತಿಗೂ ಅಂತಹ ವಿಧಾನಗಳಿದ್ದರೂ ಸಂಸ್ಕೃತಿಗಳು ಯಾವತ್ತು ಕೂಡ ಸುಪ್ತಪ್ರಜ್ಞೆಯ ಆಧಾರದಲ್ಲೆ ತಿಳುವಳಿಕೆಯನ್ನು ಬಿಂಬಿಸುತ್ತವೆ. ಈ ಪ್ರತಿಬಿಂಬ ಸುಪ್ತಪ್ರಜ್ಞೆಯ ಅಭಿವ್ಯಕ್ತಿಗಳಲ್ಲಿ ನೇರವಾಗಿರುವುದಿಲ್ಲ. ಸಾಮ್ರಾಜ್ಯದ ದೊರೆ ಒಬ್ಬನನ್ನು ತೋರುತ್ತಲೇ ಆತನನ್ನು ಯಾವುದೊ ಒಂದು ಜನಪದ ಕಥೆಯ ರಮ್ಯನಾಯಕನನ್ನಾಗಿ ಪ್ರತಿಫಲಿಸಿ ಆತನ ನಿಜವಾದ ರೂಪವನ್ನೆ ತಮಗೆ ಬೇಕಾದ ರೀತಿಯಲ್ಲಿ ಪ್ರತಿ ಎರಕಗೊಳಿಸಲಾಗುತ್ತದೆಯೇ ಹೊರತು ಆ ರಾಜನನ್ನೆ ಯಥಾವತ್ತಾಗಿ ತಮ್ಮ ನಿರೂಪಣೆಗಳಲ್ಲಿ ಸೃಷ್ಟಿಸುವುದಿಲ್ಲ. ವ್ಯಕ್ತರೂಪವನ್ನು ಅವ್ಯಕ್ತಗೊಳಿಸುವ ಮಾನಸಿಕ ಕ್ರಿಯೆ ಅವ್ಯಕ್ತ ಸಂಸ್ಕೃತಿಯಲ್ಲಿ ನಡೆಯುತ್ತಿರುತ್ತದೆ. ಏಕಾಧಿಕಾರದ ಏಕಾಕೃತಿಯ ಅಭಿವ್ಯಕ್ತಿಗಳ ವ್ಯಕ್ತ ರೂಪವನ್ನು ಹೀಗೆ ಜನಪದರ ಅವ್ಯಕ್ತ ಸಂವಹನ ಮಾರ್ಗಗಳು ರೂಪಕ ಪರಿಭಾಷೆಯಲ್ಲಿ ಬಚ್ಚಿಟ್ಟು ಅರ್ಥ ಹೊರಡಿಸುವ ಪರಿಯು ಅನನ್ಯವಾದದ್ದು. ಅವ್ಯಕ್ತವಾದ ದಾರಿಗಳನ್ನೆ ಜನಪದ ಪರಂಪರೆಗಳು ಯಾಕೆ ಆಯ್ಕೆ ಮಾಡಿಕೊಳ್ಳುತ್ತವೆ ಎಂಬುದು ಪ್ರಭುತ್ವ ಶಕ್ತಿಯ ಕಾರಣವಾಗಿ ಹಾಗು ತಮ್ಮ ಅಸ್ತಿತ್ವಕ್ಕೆ ಅಂತಹ ರೂಪಕಗಳೇ ಶಕ್ತಿಶಾಲಿ ವಾಹಕ ಎಂದು ತಿಳಿದಿರುವುದರಿಂದ.

ಹಂಪಿಯ ಅವ್ಯಕ್ತ ಸಂಸ್ಕೃತಿಗಳು ಇದೇ ಹಾದಿಯವು. ಇದು ಸಾರ್ವತ್ರಿಕ ಸ್ವಭಾವ. ಎಲ್ಲ ಪರಂಪರೆಗಳಲ್ಲೂ ಎಲ್ಲ ಕಾಲಗಳಲ್ಲೂ ಅವ್ಯಕ್ತ ಸಂವಹನ ಬೆಳೆದಿದೆ. ಲಿಖಿತ ಪರಂಪರೆ ಗಳು ವಿಜಯನಗರ ಸಾಮ್ರಾಜ್ಯವನ್ನು ಕುರಿತು ನೀಡುವ ಕಥನಗಳ ಎದಿರು ಜನಪದರ ಅವ್ಯಕ್ತ ಕಥನಗಳು ಬಿಂಬಿಸುವ ಅರ್ಥವು ಹೀಗಾಗಿಯೆ ಅವ್ಯಕ್ತ ಸಂವಹನ ಮತ್ತು ಭಿನ್ನ ನೆಲೆಯ ಪ್ರತಿಬಿಂಬ. ಚರಿತ್ರೆಯ ಅನುಭವ ಈ ಎರಡು ವ್ಯಕ್ತ ಅವ್ಯಕ್ತ ಕ್ರಮಗಳಿಗೆ ಒಂದೇ ಆಗುವುದಿಲ್ಲ. ಪರಂಪರೆ ಎರಡನ್ನು ಸಲಹಿದೆ. ಜನಪದರ ಮೌಖಿಕ ಪರಂಪರೆ ಈ ಅರ್ಥದಲ್ಲಿ ಅವ್ಯಕ್ತ ಸಂವಹನ ಮತ್ತು ಅವ್ಯಕ್ತ ಕಥನ. ವ್ಯಕ್ತವಾಗಿರುವ ಕಥನ ಒಂದರಲ್ಲೆ ಅನೇಕ ಬಗೆಯ ಅವ್ಯಕ್ತ ಸಂಗತಿಗಳು ಪ್ರತಿಬಿಂಬಿತವಾಗಿರುತ್ತವೆ. ಅಭಿವ್ಯಕ್ತಿಯ ಅನೇಕ ತೊಡಕುಗಳು ಕೂಡ ಈ ಸ್ಥಿತಿಯಲ್ಲಿ ಎದುರಾಗುತ್ತವೆ. ಪ್ರಭುತ್ವವನ್ನು ಹೊಗಳಿ ಹಾಡಲೇಬೇಕಾದ ಅವ್ಯಕ್ತ ಸಂಸ್ಕೃತಿಯು ಆ ಹೊತ್ತಿನ ಅಭಿವ್ಯಕ್ತಿಯ ಅನಿವಾರ್ಯತೆಯಲ್ಲೇ ತನ್ನ ಅಸ್ತಿತ್ವವನ್ನು ಉಳಿಸಿ ಕೊಳ್ಳಲು ವ್ಯಕ್ತತೆಯ ಒಳಗೇ ಅವ್ಯಕ್ತ ನಿರೂಪಣೆಗಳನ್ನು ಧ್ವನಿಸುವುದು ಸರಳವಾದುದಲ್ಲ. ಈ ಪರಿಯ ಸಂಯುಕ್ತ ಅಭಿವ್ಯಕ್ತಿಯು ಅವ್ಯಕ್ತ ಸಂಸ್ಕೃತಿಯಲ್ಲಿ ಹೇರಳವಾಗಿ ಸಾಗಿ ಬಂದಿರು ವುದನ್ನು ಪರಂಪರೆಯ ಉದ್ದಕ್ಕೂ ಗಮನಿಸಬಹುದಾಗಿದೆ.

ಹೀಗೆ ಅವ್ಯಕ್ತ ಸಂಸ್ಕತಿಯನ್ನು ಮನೋವಿಶ್ಲೇಷಣಾತ್ಮಕ ಪರಿಭಾಷೆಗಳಲ್ಲಿ ಪರಿಶೀಲಿಸಿ ದಾಗ ವರ್ತಮಾನದ ಹಂಪಿಯ ಚರಿತ್ರೆಗೆ ಸುಪ್ತಪ್ರಜ್ಞೆಯ ಸಂಬಂಧ ಯಾವ ಬಗೆಯಲ್ಲಿದೆ ಎಂಬುದು ತಿಳಿಯುತ್ತದೆ. ವ್ಯಕ್ತ ಭಾವನೆಗಳೆಲ್ಲ ಚರಿತ್ರೆಯ ರಾಜಕಾರಣವನ್ನು ಪ್ರತಿನಿಧಿಸಬಲ್ಲವು. ಸುಪ್ತಪ್ರಜ್ಞೆಯಲ್ಲಿರುವ ಚರಿತ್ರೆ ಅವ್ಯಕ್ತವಾದದ್ದು. ಇವೆರಡೂ ಮಾನವ ಪ್ರಯತ್ನಗಳೇ ಎಂಬುದನ್ನು ಗಮನಿಸಿದರೆ ಇಂತಹ ವೈರುಧ್ಯದಿಂದ ವರ್ತಮಾನವು ಏನನ್ನು ಉಳಿಸಿಕೊಳ್ಳಬೇಕು ಹಾಗೂ ಯಾವುದನ್ನು ವಿಮರ್ಶಿಸಿ ತಪ್ಪನ್ನು ತಿದ್ದಿಕೊಳ್ಳಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಇಂತಹ ಸಮಸ್ಯೆಗಳನ್ನೆಲ್ಲ ಇಲ್ಲಿ ವಿಸ್ತರಿಸಲು ಅವಕಾಶವಿಲ್ಲವಾದರೂ ಹೇಗೆ ಅವ್ಯಕ್ತ ಸಂಸ್ಕೃತಿಯ ನೈಸರ್ಗಿಕ ಬೇರುಗಳನ್ನು ಕಂಡುಕೊಳ್ಳಬೇಕು ಎನ್ನುವ ಕಾರಣಕ್ಕೆ ಜೊತೆ ಜೊತೆಯಲ್ಲೆ ಎಲ್ಲ ವ್ಯಕ್ತ ಅವ್ಯಕ್ತ ಅನ್ಯ ಹಾಗೂ ಸ್ವ ಸಂಗತಿಗಳ ವೈರುಧ್ಯಗಳನ್ನೆಲ್ಲ ಬೆರೆಸಿಕೊಳ್ಳಬೇಕಾಗಿದೆ. ವಿಶೇಷವಾಗಿ ಪರಿಸರ ಪ್ರಜ್ಞೆಯ ಮೂಲಕ ಅನುಸಂಧಾನ ಮಾಡುವ ಈ ಕ್ರಮದಲ್ಲಿ ವಿಷಯದ ವ್ಯಷ್ಠಿತನಕ್ಕಿಂತಲು ಸಮುಷ್ಠಿ ಪ್ರಜ್ಞೆಯೆ ಮುಖ್ಯ ಎಂದು ತೋರಿದಂತಾಗುತ್ತದೆ. ಹಂಪಿಯ ಪರಿಸರ ಎಂದ ಕೂಡಲೆ ಕೇವಲ ನಿಸರ್ಗದ ಒಂದೇ ರೂಪ ಎಂದು ತಿಳಿಯ ಬೇಕಿಲ್ಲ. ನಿಸರ್ಗವೇ ಬಹುದೊಡ್ಡ ಶಕ್ತಿ ಎಂದುಕೊಂಡರೂ ಮನುಷ್ಯ ನಿರ್ಲಕ್ಷ್ಯದ ಜೀವಿ ಎಂತಲೂ ಭಾವಿಸಬೇಕಾದ್ದಿಲ್ಲ. ನಿಸರ್ಗ ಜೀವ ಜಾಲವನ್ನು ರೂಪಿಸಿದೆ ಯಾದರೂ ಈ ಜೀವಜಾಲದಲ್ಲಿ ಜೀವಿಗಳ ನಡುವೆ ವಿವೇಚನಾಶೀಲ ಜೀವನ ಕೂಡ ಅಷ್ಟೇ ಮುಖ್ಯ. ಹೊಂದಾಣಿಕೆ ಎಂಬ ಸಂವೇದನೆ ಜೀವ ಜಾಲಕ್ಕೆ ಇಲ್ಲ ಎಂದರೆ ಆಗ ನಿಸರ್ಗದ ಎಲ್ಲ ಶಕ್ತಿ ಇದ್ದೂ ಉಪಯುಕ್ತವಾಗದು.

ಅವ್ಯಕ್ತ ಸಂಸ್ಕೃತಿಯ ನೈಸರ್ಗಿಕ ಬೇರು

ಹಂಪಿಯ ನೈಸರ್ಗಿಕ ಬೇರಿನ ಅವ್ಯಕ್ತ ಸಂಸ್ಕೃತಿಯ ತಾತ್ವಿಕ ಅನುಸಂಧಾನದ ಈ ಭಾಗವು ಚರಿತ್ರೆಯನ್ನು ನಿರೂಪಿಸಲು ಇರುವ ಕ್ರಮಗಳ ಪರಿಶೀಲನೆಯೂ ಆಗಿದೆ. ಅವ್ಯಕ್ತ ಸಂಸ್ಕೃತಿಯ ಸುಪ್ತಪ್ರಜ್ಞೆಯು ಎಲ್ಲ ಸಮಾಜಗಳ ಅನಿವಾರ್ಯ ಪ್ರತಿಕ್ರಿಯೆ. ಇದು ಭಾಷೆ ಮತ್ತು ಭಾವನೆಗಳ ವಿಕಾಸದಲ್ಲಿ ವಿಶೇಷ ಶಕ್ತಿ ತಂದು ಕೊಟ್ಟಿದೆ. ಸಾಮ್ರಾಜ್ಯದ ವ್ಯಕ್ತ ರೂಪಗಳು ಭಗ್ನವಾಗಿ ಬಿಡಬಲ್ಲವು. ಕಾಲದ ಚಲನೆಯಲ್ಲಿ ಕಳೆದು ಹೋಗಿಬಿಡಬಲ್ಲವು. ಆದರೆ ಅವ್ಯಕ್ತ ಸಂಸ್ಕೃತಿಯ ಸುಪ್ತ ಭಾವನೆಗಳು ಕರಗಿ ಹೋಗುವುದಿಲ್ಲ. ಅವು ಪುನರ್ ಸೃಷ್ಠಿಗೆ ಒಳಗಾಗುತ್ತಲೆ ಇರುತ್ತವೆ. ಬಾಕಿ ಉಳಿಸಿದ ಭಾವನೆಗಳು ಮುಂದಿನ ತಲೆಮಾರಿನ ಭಾಷಿಕ ಆಕೃತಿಗಳು ಮತ್ತಷ್ಟು ಗಟ್ಟಿಗೊಳ್ಳಲು ಅವಕಾಶ ಮಾಡಿಕೊಡುತ್ತವೆ. ಚರಿತ್ರೆಯ ಗತಿಶೀಲತೆಯಲ್ಲಿ ಇವೆಲ್ಲ ಸಹಜ ನೈಸರ್ಗಿಕ ಪ್ರಕ್ರಿಯೆಗಳು. ಇವುಗಳನ್ನು ಅಂಚಿನ ಅಭಿವ್ಯಕ್ತಿಗಳೆಂದು ಯಾಜಮಾನ್ಯ ಭಾವನೆ ಗಳು ಕರೆದರೂ ಕೊನೆಗೆ ಇಂತಹ ಅಲಕ್ಷಿತ ಅವ್ಯಕ್ತ ಅಭಿವ್ಯಕ್ತಿಗಳೇ ಭವಿಷ್ಯದ ಕಥನಗಳಿಗೆ ಬೇಕಾದ ಧಾತುವನ್ನು ನೀಡುವುದು. ಆ ಮಟ್ಟಿಗೆ ಹಂಪಿ ಪರಿಸರದ ಗ್ರಾಮಗಳ ನೈಸರ್ಗಿಕ ಪ್ರಜ್ಞೆಯ ಬೇರುಗಳು ನಿರಂತರವಾಗಿ ಕಾಲದ ಬೇರೆ ಬೇರೆ ರೂಪಕಗಳನ್ನು ಒಂದರೊಳಗೊಂದು ಸುಪ್ತಪ್ರಜ್ಞೆಯ ಧಾಟಿಯಲ್ಲಿ ಜೋಡಿಸಿಕೊಂಡು ಸಾಗಿ ಬಂದಿವೆ. ಇವುಗಳೇ ನಿಜವಾದ ಚರಿತ್ರೆಯ ಖಾಲಿ ಬಿಟ್ಟ ಅವಕಾಶಗಳನ್ನು ಸಮರ್ಥವಾಗಿ  ತುಂಬಬಲ್ಲ ವಿಭಿನ್ನ ಅಭಿವ್ಯಕ್ತಿಗಳು ಹಾಗೂ ಚರಿತ್ರೆಯ ನೈಸರ್ಗಿಕ ಬೇರುಗಳು.

ಹಂಪಿಯ ಪರಿಸರವನ್ನು ಬಹುರೂಪಿ ದೃಷ್ಟಿಗಳಿಂದ ನಿರ್ವಚಿಸುವ ಕ್ರಮಗಳನ್ನು ಈ ಮೊದಲೆ ಚರ್ಚಿಸಲಾಗಿದೆ. ಆದರೂ ಹಂಪಿ ಪರಿಸರದ ವೈವಿಧ್ಯ ರೂಪಗಳು ಹೇಗೆ ಅವ್ಯಕ್ತ ಸಂಸ್ಕೃತಿಯ ಭಾಗವಾಗಿ ಬೆಳೆದಿವೆ ಎಂಬುದನ್ನು ಭಿನ್ನವಾಗಿ ಕಾಣಲು ಹಂಪಿ ಪರಿಸರದ ಬಹುರೂಪಗಳನ್ನು ಪ್ರತ್ಯೇಕವಾಗಿಯೆ ಪರಿಶೀಲಿಸಬೇಕಾಗಿದೆ. ಪರಿಸರ ಎಂದ ಕೂಡಲೆ ಹಸಿರು ನೆನಪಾಗುತ್ತದೆ. ಕಣ್ಣ ಮುಂದೆ ನಿಸರ್ಗದ ಚಿತ್ರಗಳು ಎದುರಾಗುತ್ತವೆ. ಕಣ್ಣಿಗೆ ಕಂಡ ನಿಸರ್ಗವೇ ಪರಿಸರ ಮಾತ್ರವಲ್ಲ. ಅವ್ಯಕ್ತವಾದ ನಿಸರ್ಗದ ಕ್ರಮಗಳೂ ಉಂಟು. ವಿಜ್ಞಾನದಲ್ಲಿ ಅದೃಶ್ಯ ನಿಸರ್ಗದ ಸಂಶೋಧನೆ ಈಗಾಗಲೇ ಬಹಳ ದೂರ ಸಾಗಿ ಹೋಗಿದೆ. ಕಣ್ಣಿಗೆ ಕಾಣುತ್ತಿರುವ ನಿಸರ್ಗಕ್ಕೆ ಕಣ್ಣಿಗೆ ಗೋಚರವಾಗದ ನಿಸರ್ಗವೇ ಬೇರಿನಂತಿರುತ್ತದೆ. ನಮ್ಮ ಭಾವನೆಗೆ ತಟ್ಟುವ ಗಾಳಿ ಬೆಳಕು ಕಣ್ಣಿಗೆ ಕಾಣುವ ಸಂಗತಿಗಳಲ್ಲ. ಬೆಂಕಿ ಗಾಳಿಯಲ್ಲಿ ಇದ್ದೂ ಕೂಡ ಅದು ಗುಪ್ತವಾಗಿ ನಮ್ಮ ಉಸಿರಾಟದಲ್ಲಿ ಬೆರೆತು ಹೋಗಿರುತ್ತದೆ. ಹೀಗೆ ನಿಸರ್ಗದ ಒಳಗೆಯೇ ಅವ್ಯಕ್ತ ನಿಸರ್ಗ ಉಂಟು. ಈ ಅವ್ಯಕ್ತ ನಿಸರ್ಗವು ವ್ಯಕ್ತ ನಿಸರ್ಗದ ರೂಪಗಳನ್ನು ನಿರ್ಧರಿಸು ತ್ತಿರುತ್ತವೆ. ಜೀವಜಾಲದ ವಿಕಾಸದಲ್ಲಿ ಅವ್ಯಕ್ತ ಸಂಗತಿಗಳ ಪಾತ್ರ ನಿರ್ಣಾಯಕ. ಇದರ ಪರಿಣಾಮ ಸಂಸ್ಕೃತಿಗಳಲ್ಲು ಪ್ರತಿಫಲಿಸಿದೆ. ವ್ಯಕ್ತವಾದ ಸಂಸ್ಕೃತಿಗಳೆಲ್ಲ ಅವ್ಯಕ್ತವಾದ ಸುಪ್ತ ಪ್ರಜ್ಞೆಯ ಪ್ರತಿಫಲನವೂ ಆಗಿರಬಲ್ಲವು. ಸುಪ್ತ ಮನಸ್ಸಿನ ಪ್ರೇರಣೆಗಳು ಸಮುದಾಯಗಳ ಪರಿಸರವನ್ನು ರೂಪಿಸಿವೆ. ಈ ಅರ್ಥದಲ್ಲಿ ಪರಿಸರ ಎಂದಕೂಡಲೆ ಕಣ್ಣಿಗೆ ಕಂಡ ಜೀವಜಾಲ ಮಾತ್ರ ಪರಿಸರವಲ್ಲ. ಅದು ವ್ಯಕ್ತ ಅವ್ಯಕ್ತ ಗೋಚರ ಅಗೋಚರ ಎಲ್ಲ ಜೀವ ಅಜೀವ ಪ್ರಕ್ರಿಯೆಗಳ ಸಮಗ್ರ ಚಲನೆಯಾಗಿದೆ.

ಪರಿಸರ ಜೀವ ವಿಕಾಸದ ಆವರಣ. ಆದರಿಂದಲೇ ಅದು ಕೇವಲ ಹಸಿರು ಸಂಗತಿ ಅಲ್ಲ. ಭೂಮಿಯ ಒಳಗಿನ ಅವ್ಯಕ್ತ ರೂಪಧಾರೆಗಳೂ ಪರಿಸರವೇ. ಹಾಗೆಯೇ ನಮ್ಮ ನೆತ್ತಿಯ ಮೇಲಿನ ಆಕಾಶವೂ ಪರಿಸರವೇ. ಅಂತೆಯೇ ನಾವು ಬದುಕಲು ರೂಪಿಸಿಕೊಂಡ ಎಲ್ಲ ವ್ಯವಸ್ಥೆಗಳು ಪರಿಸರವೇ ಆಗಿರುತ್ತವೆ. ಮನುಷ್ಯ ನಿಸರ್ಗದ ಭಾಗವಾಗಿಯೆ ತನ್ನ ಬದುಕಿನ ಪರಿಸರವನ್ನು ರೂಪಿಸಿಕೊಂಡಿದ್ದು. ನಿಸರ್ಗದಲ್ಲಿ ಮನುಷ್ಯರು ಭಾವಿಸಿರುವ ಪರಿಸರ ಒಂದು ಬಗೆಯಾಗಿದ್ದರೆ ಅದು ಮನುಷ್ಯೇತರ ಜೀವಿಗಳಿಗೆ ಬೇರೆಯದೇ ಪರಿಸರ. ಕಾಡು ನಾಡಿನ ಪರಿಸರ ಭಿನ್ನತೆಗಳು ಎದ್ದು ಕಾಣುವಂತವು. ಸಾಮ್ರಾಜ್ಯಕ್ಕೂ ಅದರದೇ ಆದ ಪರಿಸರವಿ ರುತ್ತದೆ. ಸಮುದ್ರ ತಟದ ಪರಿಸರವೇ ಬೇರೆ. ಆಕಾಶದ ಅನಂತ ಪರಿಸರ ಮತ್ತೊಂದು ವಿಸ್ಮಯ. ಮನುಷ್ಯ ನಿರ್ಮಿತ ಪರಿಸರ ನಿಸರ್ಗ ನಿರ್ಮಿತ ಪರಿಸರದ ಜೊತೆ ಸಂಪರ್ಕ ಸಂಬಂಧ ಸಾಧಿಸಿಕೊಂಡಿರುವುದು ಸಂಸ್ಕೃತಿಗಳ ಮೂಲಕವಾಗಿಯೆ. ಹೀಗಾಗಿ ಪರಿಸರವನ್ನು ಭಿನ್ನ ನೆಲೆಗಳಲ್ಲಿ ವ್ಯಾಖ್ಯಾನಿಸಬೇಕು.

ಪರಿಸರವನ್ನು ನಿಸರ್ಗದ ನೆಲೆಯಿಂದ ನಿರೂಪಿಸುವುದು ಸಲೀಸು. ಪರಿಸರವನ್ನು ಕೇವಲ ಮಾನವ ಕೇಂದ್ರಿತವಾಗಿ ವಿವರಿಸುವುದೂ ಸುಲಭವೇ. ಜೀವವಿಕಾಸದ ಹಿನ್ನೆಲೆಯಲ್ಲಿ ಪರಿಭಾವಿಸಿದಾಗ ವೈವಿಧ್ಯ ಅರ್ಥಸಾಧ್ಯತೆಗಳ ತೆರೆದುಕೊಳ್ಳುತ್ತವೆ. ತಂತ್ರಜ್ಞಾನದ ಕ್ರಮಗಳಲ್ಲಿ ವಿವೇಚಿಸಿದಾಗ ಪರಿಸರದ ಅರ್ಥವ್ಯಾಪ್ತಿ ಚಿಕ್ಕದಾಗುತ್ತದೆ. ವಿಜ್ಞಾನದ ಅಪಾರ ಸಾಧ್ಯತೆಗಳು ಪರಿಸರವನ್ನು ಅಖಂಡವಾಗಿ ಭಾವಿಸುತ್ತವೆ. ಚರಿತ್ರೆ ಮತ್ತು ಮಾನವ ಸಮಾಜಗಳ ನಾಗರೀಕತೆ ಯಿಂದ ವಿಶ್ಲೇಷಿಸಿದಾಗಲೂ ಪರಿಸರದ ಅರ್ಥವು ಬಹಳ ದೂರ ಹೋಗದು. ಮಾನವಶಾಸ್ತ್ರದ ಅಧ್ಯಯನಗಳು ವಿಕಾಸವಾದದ ನೆಲೆಯಲ್ಲಿ ಪರಿಸರವನ್ನು ತಾತ್ವೀಕರಿಸಿ ವಿವರಿಸುತ್ತವೆ. ಭೂಗೋಳಶಾಸ್ತ್ರಕಾರರ ಕ್ರಮವೇ ಬೇರೆ. ಭೂಮಿಯ ಉಗಮ ವಿಕಾಸದ ರಚನೆಗಳನ್ನು ಅನುಸರಿಸಿಯೇ ಅವರೂ ಕೂಡ ಪರಿಸರವನ್ನು ಅರ್ಥೈಸುತ್ತಾರೆ. ಪರಿಸರವನ್ನು ಎಲ್ಲ ಮಾನವಿಕ ಶಾಸ್ತ್ರಗಳು ತಮ್ಮ ತಮ್ಮ ನೆಲೆಯಲ್ಲಿ ವಿವೇಚಿಸುತ್ತವೆ. ಸಮಾಜಶಾಸ್ತ್ರಜ್ಞ, ಜೀವಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ ಹೀಗಾಗಿಯೆ ಏಕಾಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲ. ಹಾಗೆಂದು ಒಂದು ಅಭಿಪ್ರಾಯಕ್ಕೆ ಬರುವುದು ಉಚಿತ ಎಂಬ ಅಪೇಕ್ಷೆ ಏನೂ ಇಲ್ಲ. ಬಹುರೂಪದ ನಿರೂಪಣೆಗಳೆಲ್ಲವೂ ಪರಿಸರವನ್ನು ವಿವರಿಸುವುದಕ್ಕಾಗಿಯೇ ಹುಟ್ಟಿಕೊಂಡಂತವು. ಪರಿಸರದಲ್ಲಿ ಹೇಗೆ ಜೀವವೈವಿಧ್ಯ ಸಾಧ್ಯವೊ ಹಾಗೆಯೆ ಪರಿಸರ ಕುರಿತ ವಿವೇಚನೆ ಕೂಡ ಬಹುರೂಪಿ ಆಗಿರಬೇಕಾದುದು ಸೂಕ್ತವೇ ಆಗಿದೆ.