ವ್ಯಾಪಕವಾಗಿ ನೋಡಿದರೆ ಮಾನವಿಕ ವಿಜ್ಞಾನಗಳೆಲ್ಲ ಚರಿತ್ರೆಯ ವಿವಿಧ ನಿರೂಪಣೆಗಳೇ ಹೌದು. ಚರಿತ್ರೆಯ ವಿಷಯವನ್ನು ವಿಂಗಡಿಸಿಕೊಂಡಿರುವ ಆಧುನಿಕ ಜ್ಞಾನ ಪ್ರಕಾರಗಳಾದ ಶೈಕ್ಷಣಿಕ ಪ್ರಕಾರಗಳು ಅಂತರ್ ಸಂಬಂಧದಿಂದಲೇ ಹೊಸ ಕಾಲದಲ್ಲಿ ಅಂತರ್‌ಶಿಸ್ತೀಯ ಗದ್ಯ ನಿರೂಪಣೆಗಳನ್ನು ಆಶ್ರಯಿಸಬೇಕು. ಸಾಹಿತ್ಯದಲ್ಲಿ ಸಾಹಿತ್ಯ ಪ್ರಕಾರಗಳು ಹೇಗೋ ಚರಿತ್ರೆಯೂ ಮಾನವಿಕ ಶಾಸ್ತ್ರಗಳ ಒಂದು ಪ್ರಾಥಮಿಕ ಪ್ರಕಾರ. ಗತಕಾಲದ ಘಟನೆಗಳು ಚರಿತ್ರೆಗೆ ಹೇಗೋ ಹಾಗೆಯೇ ಅವು ಜ್ಞಾನಪರಂಪರೆಗೆ ಬೇಕಾದ ಅನುಭವಗಳು. ಈ ಅನುಭವಗಳನ್ನು ಹೇಗೆ ನಿರ್ವಚಿಸುತ್ತೇವೆ ಎನ್ನುವುದರ ಮೇಲೆ ಜ್ಞಾನ ವಿಸ್ತರಣೆ ಆಗುತ್ತದೆ. ವಸಾಹತು ಶಾಹಿ ಹಂಗಿನಲ್ಲಿ ಭಾರತೀಯ ಚರಿತ್ರೆಯನ್ನು ಬರೆದವರು ಅದನ್ನೊಂದು ದಾಖಲೆ ಮಾತ್ರವಾಗಿ ಸಂರಚಿಸಿಕೊಂಡರು. ಚರಿತ್ರೆ ಒಂದು ಭಾಷೆಯ, ಜನಾಂಗದ, ದೇಶದ, ಸಮಾಜದ ಜ್ಞಾನವಾಗಿ ಪರಿವರ್ತನೆಗೊಳ್ಳುವುದು. ಆ ಚರಿತ್ರೆಯ ಅನುಭಾವವನ್ನು ದಾಖಲೆಯ ಅಂಕುಶಕ್ಕೆ ಸಿಲುಕಿಸ ಬಾರದು. ಮಾನವ ಪರಿಸರದ ಮೌಲ್ಯಗಳಾಗಿ ಅವನ್ನು ಕಾಣಬೇಕು. ಒಳ್ಳೆಯ ಕೆಟ್ಟ ಎರಡೂ ಮೌಲ್ಯಗಳು ಒಂದೇ ಸಮಾಜದಲ್ಲಿ ಒಂದೇ ಕಾಲದಲ್ಲಿ ಹೇಗೆ ಉದ್ಭವಿಸುತ್ತವೆ ಎಂಬುದರ ಹಿಂದಿನ ಮಾನವ ಮಿತಿಗಳನ್ನು ಹುಡುಕಿದರೆ ಆಗ ಚರಿತ್ರೆಯು ಜ್ಞಾನ ಪರಂಪರೆಯ ಅನು ಸಂಧಾನವಾಗಿ ವಿಸ್ತರಿಸುತ್ತದೆ.

ಜ್ಞಾನ ಪರಂಪರೆಗಳು ಇಪ್ಪತ್ತೊಂದನೇ ಶತಮಾನದಲ್ಲಿ ಅಳಿವಿನಂಚಿನಲ್ಲಿವೆ ಎಂಬಂತೆ ಕಾಣುತ್ತಿವೆ. ಇದು ನಿಜವೋ ಹುಸಿಯೋ ಎಂಬುದನ್ನು ಚರಿತ್ರೆಯ ನಿಟ್ಟಿನಿಂದ ಗಮನಿಸಬೇಕು. ಓರಿಯಂಟಲ್ ಚಿಂತನಾಕ್ರಮಕ್ಕೆ ಬಹಳ ಹಿಂದೆಯೇ ಪ್ರೆಂಚ್ ಮತ್ತು ಜರ್ಮನ್ ತತ್ವಶಾಸ್ತ್ರಜ್ಞರು ಬಹುದೊಡ್ಡ ಪೆಟ್ಟನ್ನು ಕೊಟ್ಟರು. ವಿಶೇಷವಾಗಿ ಎಡಪಂಥೀಯ ಜ್ಞಾನಪರಂಪರೆ ಎಂದು ಅದನ್ನು ಗುರುತಿಸಬಹುದು. ಇದಕ್ಕೂ ಮೊದಲು ಈಗಲೂ ಕೂಡ ಪಶ್ಚಿಮದ ತತ್ವಶಾಸ್ತ್ರೀಯ ಜ್ಞಾನ ಪರಂಪರೆಗಳೇ ಮುಂಚೂಣಿಯಲ್ಲಿವೆ. ಇಪ್ಪತ್ತನೇ ಶತಮಾನದ ಭಾರತದ ಜ್ಞಾನದ ಕೊಡುಗೆ ಏನು ಎಂದು ಗುರುತಿಸಲು ಪಶ್ಚಿಮದ ಚಿಂತಕರು ಇಲ್ಲಿನ ಯಾವೊಂದು ಸಂಗತಿಯನ್ನು ಪರಿಗಣಿಸಿಲ್ಲ. ಜ್ಞಾನಪ್ರಕಾರಗಳನ್ನು ಸೀಳಿ ವಿಂಗಡಿಸಿ ಅದರಲ್ಲಿ ಉಂಟಾದ ಬಹುಮುಖ್ಯ ಸಂಶೋಧನೆಯೊಂದನ್ನು ಜ್ಞಾನ ಪರಂಪರೆಯ ಪಟ್ಟಿಯಲ್ಲಿ ಸೇರಿಸಿ ಕೊಳ್ಳುವುದು ಪಶ್ಚಿಮದ ಪರಿಪಾಟ. ಜ್ಞಾನ ಪರಂಪರೆಗಳ ಚರಿತ್ರೆಯಲ್ಲಿ ನಮ್ಮ ದೇಶಕ್ಕೆ ಸ್ಥಾನವೇ ಇಲ್ಲ ಎಂಬ ಕೊರತೆ ಪಶ್ಚಿಮದವರ ವಿವರದಿಂದ ಕಾಣುತ್ತದೆ. ಓರಿಯಂಟಲ್ ಚಿಂತನೆಯ ಆಗಿನ ಗತ ಮೃತ ಬೃಹತ್ ಭಾರತಕ್ಕೆ ಮಾತ್ರ ಆಗ ಒಂದಿಷ್ಟು ಅವಕಾಶವನ್ನು ಕೊಡಲಾಗಿತ್ತು. ಈವತ್ತಿನ ಭಾರತದ ಬೌದ್ದಿಕ ನಿರ್ವಚನಗಳು ಪಶ್ಚಿಮಕ್ಕೆ ತಿಳಿದೇ ಇಲ್ಲ. ಯುರೋ ಕೇಂದ್ರಿತ ಚಿಂತನೆಯ ಅಧ್ಯಯನ ತತ್ವಗಳು ಬಹುಪಾಲು ಭಾರತದ ಎಲ್ಲ ವಿಶ್ವ ವಿದ್ಯಾಲಯಗಳ ಪಠ್ಯಪುಸ್ತಕಗಳಲ್ಲಿ ರಾರಾಜಿಸುತ್ತವೆ. ಚರಿತ್ರೆಯ ಭಾಗವಾಗಿ ಇವನ್ನೆಲ್ಲ ವಿವರಿಸುವಾಗ ನಮ್ಮ ದೇಶದ ಯಾವ ವಿವರವೂ ನೆನಪಾಗದು. ಇದೆಲ್ಲ ಚರಿತ್ರೆಯ ತಾರತಮ್ಯ ಹಾಗೂ ನಾವೇ ನಮ್ಮ ಜ್ಞಾನ ಪರಂಪರೆಯ ಭಾಗವಾಗಿ ಸೃಜನಶೀಲ ಅನುಸಂಧಾನಕ್ಕೆ ಮುಂದಾಗದಿರುವುದನ್ನು ತೋರುತ್ತದೆ. ವಸಾಹತುಶಾಹಿ ಪ್ರಭುತ್ವದಿಂದ ಬಿಡಿಸಿಕೊಂಡ ದೇಶಗಳು ಯಾವ ಸ್ವರೂಪದಲ್ಲಿ ತಮ್ಮ ದೇಶಗಳ ಚರಿತ್ರೆಯನ್ನು ಸ್ವಾತಂತ್ರ್ಯ ಪಡೆದ ಮೇಲೆ ಬರೆದುಕೊಂಡಿವೆ ಎಂಬ ವಿವರಗಳೇ ನಮ್ಮ ಮುಂದೆ ಇಲ್ಲ. ದಕ್ಷಿಣ ಅಮೆರಿಕ, ಆಫ್ರಿಕಾ ದಂತಹ ದೇಶಗಳಲ್ಲಿ ಸಂಸ್ಕೃತಿ ಚರಿತ್ರೆಯ ಹೊಸ ನಿರೂಪಣೆಗಳು ಈಗ ತಾನೇ ಗಾಢವಾಗಿ ಸೃಜನಶೀಲ ಅನುಸಂಧಾನದ ಭಾಗವಾಗಿ ತೆರೆದುಕೊಳ್ಳುತ್ತಿವೆ.

ಇದರಲ್ಲೇ ನವವಸಾಹತುಶಾಹಿಯ ಮುಂದುವರಿದ ಭಾಗವಾಗಿ ಆಧುನಿಕೋತ್ತರ ಚಿಂತನೆ ಗಳ ವಿರಚನೆಯ, ಭಗ್ನತೆಯ, ಸಂದೇಹದ ಪ್ರತಿ ವಿಚಾರಗಳು ಯುರೋಪಿನಲ್ಲಿ ಅಲೆದಾಡಿ ಭಾರತಕ್ಕೂ ಬಂದು ಅವು ನಮ್ಮಲ್ಲೂ ಈಗ ಅಬ್ಬರ ಕಳೆದುಕೊಳ್ಳುತ್ತಿವೆ. ಮಾನವಿಕ ಶಾಸ್ತ್ರಗಳು ಕೇವಲ ಪದವಿ ತರಗತಿಗಳಿಗಾಗಿ ಮಾಡಿಕೊಂಡ ಪಠ್ಯಪುಸ್ತಕಗಳ ಪದವಿ ಪರೀಕ್ಷೆಗಳ ಔಪಚಾರಿಕ ಸಂಗತಿ ಅಲ್ಲ. ಯಾವುದೇ ಜ್ಞಾನ ಶಿಸ್ತು ಸಮಾಜದ ವಿಕಾಸವನ್ನು ಪರಿಶೀಲಿಸಿ ಕೊಂಡು ಆ ವಿಕಾಸದ ಅಸ್ತಿತ್ವದ ಮಾನವ ಅಭಿವ್ಯಕ್ತಿಯ ಜಾಗೃತಿಯನ್ನು ಪರಿಷ್ಕರಿಸಿಕೊಳ್ಳಲು ಇರುವ ವಿವೇಚನಾಕ್ರಮಗಳು. ಆದ್ದರಿಂದಲೇ ಚರಿತ್ರೆಯು ಜ್ಞಾನ ಪರಂಪರೆಯ ಸಂಬಂಧಿಯಾ ಗುವುದಷ್ಟೇ ಅಲ್ಲದೆ ಆ ಪರಂಪರೆಯನ್ನು ವಿಸ್ತರಿಸಲು ಬೇಕಾದ ಸೂಚನೆಗಳನ್ನು ಕೂಡ ನೀಡಬೇಕಾಗುತ್ತದೆ. ಇಲ್ಲವಾದರೆ ಜ್ಞಾನ ಪರಂಪರೆಗಳು ಹೊಸ ಕಾಲದ ಭಾವನೆಗಳಿಗೆ ಸ್ಪಂದಿಸದೆ ಅನುಪಯುಕ್ತ ಅರ್ಥವ್ಯರ್ಥದ ಒಣ ಪಾಂಡಿತ್ಯದ ತರ್ಕಗಳಾಗಿ ಸಮಾಜದ ಅಗತ್ಯದ ಆಚೆಯೇ ವ್ಯಹರಿಸಬೇಕಾಗುತ್ತದೆ.

ಈ ಹಿನ್ನೆಲೆಯಿಂದ ಕನ್ನಡನಾಡಿನ ಚರಿತ್ರೆಯ ನಿರ್ವಚನಗಳನ್ನು ನೋಡಿದರೆ ವಸಾಹತೋ ತ್ತರ ನಿರ್ವಚನಗಳು ವಿಭಿನ್ನವಾಗಿಯೇ ಸಾಗುತ್ತಿವೆ. ಉಳಿದ ಮಾನವಿಕ ಜ್ಞಾನಗಳು ಪಶ್ಚಿಮದ ಪಠ್ಯಪುಸ್ತಕಗಳ ನಕಲು ವ್ಯವಸ್ಥೆಯಾಗಿರುವಾಗ ಚರಿತ್ರೆ ಶಿಸ್ತಿನಲ್ಲಿ ಸ್ಥಳೀಯವಾದ, ದೇಶೀಯ ವಾದ, ಸಂಸ್ಕೃತಿ ಚಿಂತನೆಯ, ಸಮಾಜನಿಷ್ಠ ಬಹುರೂಪಿ ಚರಿತ್ರೆಗಳ ಕಥನಗಳು ತೆರೆದುಕೊಳ್ಳು ತ್ತಿವೆ. ಎಲ್ಲ ಮಿತಿಗಳೂ ಹೊಸ ಪೀಳಿಗೆಯಿಂದ ನಿವಾರಿಸಿಕೊಳ್ಳುವುದು ವಿಕಾಸದ ಸಾಧ್ಯತೆ. ವಸಾಹತುಕಾಲೀನ ಚರಿತ್ರೆಗೆ ಅಂಟಿಕೊಳ್ಳದೆ ಮುಂದೆ ಸಾಗುತ್ತಿರುವ ಕನ್ನಡದ ಚರಿತ್ರೆಯಲ್ಲೂ ವಿಶ್ವಾತ್ಮಕ ನಿರೂಪಣೆಗಳಿವೆ. ಜಗತ್ತಿನ ಜ್ಞಾನ ಪರಂಪರೆಗಳು ಯಾರ ಆಧಿಪತ್ಯಕ್ಕೂ ಒಗ್ಗುವಂತವಲ್ಲ. ಹಾಗೆ ನೋಡಿದರೆ ಸ್ವತಃ ಜ್ಞಾನವ್ಯವಸ್ಥೆಯು ತಂತಾನೆ ನಿರಂಕುಶವಾದುದು. ಜ್ಞಾನಕ್ಕೆ ಮಿತಿಗಳಿಲ್ಲ. ಒಂದು ಕಾಲದ ಯಾಜಮಾನ್ಯ ಚಿಂತನೆ ಇನ್ನೊಂದು ಕಾಲಕ್ಕೆ ಉರುಳಲೇಬೇಕು. ಕನ್ನಡದ ಮಟ್ಟಿಗೆ ಹೇಳುವುದಾದರೆ ಒಂದು ಪುಟ್ಟ ಕನ್ನಡನಾಡಿನ ಚರಿತ್ರೆಯನ್ನು ಅರಿಯಲು, ದಾಖಲಿಸಲು, ವಿಶ್ಲೇಷಿಸಲು, ಪ್ರಶ್ನಿಸಲು, ಸರಿದೂಗಿಸಲು, ಪ್ರತಿ ನಿರ್ಮಾಣವನ್ನು ರೂಪಿಸಲು ಎಷ್ಟೊಂದು ಆಯಾಮಗಳಿವೆ ಎಂಬುದೇ ಅದರ ಬಾಹುಳ್ಯವನ್ನು ಮನವರಿಕೆ ಮಾಡುತ್ತದೆ.

ಯುರೋಪಿನ ಯಾವುದೇ ಒಂದು ಗಣರಾಜ್ಯದ ಚರಿತ್ರೆಯನ್ನು ಆ ದೇಶದ ಚರಿತ್ರೆಯನ್ನು ನಿರ್ವಚಿಸಲು ಬಹುಧಾರೆಗಳ ಜ್ಞಾನ ಪರಂಪರೆಗಳು ಅಲ್ಲಿ ಇಲ್ಲ. ಹೆಚ್ಚೆಂದರೆ ಐದಾರು ಬಗೆಯ ತಾತ್ವಿಕ ನೆಲೆಗಳಿಂದ ಸಮುದಾಯಗಳ ಹಿನ್ನೆಲೆಯಿಂದ ಭೌಗೋಳಿಕ ವ್ಯಾಪ್ತಿಯಲ್ಲಿ ಚರಿತ್ರೆಯ ಜ್ಞಾನಕ್ರಮವನ್ನು ಸೈದ್ಧಾಂತಿಕವಾಗಿ ಮಂಡಿಸಲು ಅವಕಾಶವಿರಬಹುದು. ಆದರೆ ನಮ್ಮಲ್ಲಿ ಹಾಗಲ್ಲ. ಒಂದೇ ಭೂಪ್ರದೇಶದ ಚರಿತ್ರೆಯನ್ನು ನಿರೂಪಿಸಲು ಕನಿಷ್ಠ ಒಬ್ಬನೇ ಚರಿತ್ರೆಕಾರನಿಗೆ ಹತ್ತಾರು ಬಗೆಯ ದಾರಿಗಳಿವೆ. ಒಂದೇ ಗ್ರಾಮದ ಸಾಮಾಜಿಕ ರಚನೆಯ ಆಧಾರದಿಂದ ನೋಡಿದರೂ ಆ ಹಳ್ಳಿಯ ಎಲ್ಲ ವರ್ಗ, ವರ್ಣ, ಲಿಂಗ, ಜಾತಿ ಮುಂತಾದ ಹಿನ್ನೆಲೆಗಳಿಂದ  ಬಹುರೂಪಿ ಚರಿತ್ರೆಯ ವಿಸ್ತಾರ ಕಥನಗಳನ್ನು ಮಂಡಿಸಬಹುದು. ಸ್ವತಃ ಒಬ್ಬನೇ ಚರಿತ್ರಕಾರ ತನ್ನ ನಿರೂಪಣೆಗಳಿಗೆ ತಾನೇ ದ್ವಂದ್ವ ನಿರೂಪಣೆಗಳನ್ನು ಮಾಡಬಹು ದಾದಷ್ಟು ಅವಕಾಶಗಳಿರುತ್ತವೆ. ಇನ್ನು ಒಂದು ನಾಡಿನ, ದೇಶದ ಚರಿತ್ರೆಯನ್ನು ನಿರ್ವಚಿಸು ವುದು ಎಂದಾದರೆ ಎಷ್ಟೊಂದು ಜ್ಞಾನಕ್ರಮಗಳು ಎದುರಾಗುತ್ತವೆ ಎಂಬುದನ್ನು ಊಹಿಸ ಬಹುದು. ಯುರೋಪಿನ ಇಡೀ ಒಂದು ಖಂಡವನ್ನು ಇಡಿಯಾಗಿ ಭಾವಿಸಿ ಸೈದ್ಧಾಂತಿಕ ನಿಲುವು ತಳೆಯುವುದು ಸುಲಭ. ಆದರೆ ನಮ್ಮ ಒಂದೇ ಪುಟ್ಟ ಕನ್ನಡ ನಾಡಿನ ಚರಿತ್ರೆಯ ಕಥನವನ್ನು ಒಂದೇ ಧೋರಣೆಯಿಂದ ದಾಖಲಿಸಲು, ವಿವೇಚಿಸಲು, ಅಧ್ಯಯನ ಮಾಡಲು ಬರುವುದಿಲ್ಲ.

ಹೀಗಾಗಿಯೇ ನಮ್ಮಲ್ಲಿ ಬಹುರೂಪಿ ಚರಿತ್ರೆಯ ಕಥನಗಳು ಗಾಢವಾಗಿ ಒಂದು ನೆಲದ, ಸಮುದಾಯದ ಬದುಕಿಗೆ ಅಂಟಿಕೊಂಡಿರುವುದು. ದೇಶೀಯ ಸಾಮ್ರಾಜ್ಯಶಾಹಿ ಹಂಗನ್ನು ಮೀರುವ ಆಶಯಗಳಿರುವಲ್ಲಿಯೇ ಜಾತಿ ಹಾಗು ಲಿಂಗತಾರತಮ್ಯಗಳ ಸಂಕೋಲೆಗಳನ್ನು ಕಳಚಿಕೊಳ್ಳಲು ಹಾತೊರೆವ ಗುಣ ಕನ್ನಡದ ಬಹುಪಾಲು ವರ್ತಮಾನದ ಚರಿತ್ರೆಗಳಿಗಿದೆ. ಚರಿತ್ರೆಯ ರಚನಾ ವಿನ್ಯಾಸದಲ್ಲಿ ವರ್ತಮಾನದ ಪ್ರಶ್ನೆಗಳೇ ನ್ಯಾಯ ರೂಪದಲ್ಲಿ ಆಕೃತಿಗೊಳ್ಳು ವುದು ಚರಿತ್ರೆಯನ್ನು ಸೃಜನಶೀಲಗೊಳಿಸಿದಂತೆ. ಈ ನಿಟ್ಟಿನಲ್ಲಿ ಚರಿತ್ರೆಯ ಶುದ್ಧ ಪರಿಕರಗಳಿಂದ ಬಿಡಿಸಿಕೊಂಡು ನಿರೂಪಿಸಲು ಮುಂದಾದ ಕ್ರಮಗಳೇ ಜ್ಞಾನಪರಂಪರೆಯ ಪಲ್ಲಟಕ್ಕೆ ಕಾರಣವಾಗಿರುವುದು. ಯುರೋಪಿನ ಪುನರುಜ್ಜೀವನದ ಭಾಗವಾಗಿ ಬೆಳೆದ ಅಲ್ಲಿನ ಮಾನವಿಕಶಾಸ್ತ್ರಗಳು ಇಪ್ಪತ್ತೊಂದನೇ ಶತಮಾನದಲ್ಲಿ ಸ್ಥಗಿತವಾಗಿವೆ. ಫ್ರೆಂಚ್ ಹಾಗು ಜರ್ಮನ್ ತತ್ವ ಜಿಜ್ಞಾಸೆಯು ಈಗಲೂ ಭಾರತವನ್ನು ಕೊನೆ ಅಡಿಟಿಪ್ಪಣಿಯ ಅನಪೇಕ್ಷಿತ ವಿವರದಂತೆ ಬಳಸುತ್ತಿದೆ. ಹಾಗೆ ನೋಡಿದರೆ ಭಾರತದ ಉದ್ದಕ್ಕೂ ಸ್ಥಳೀಯವಾಗಿ ಆಗುತ್ತಿರುವ ಚರಿತೆಯ ಬಹುರೂಪಿ ಕಥನಗಳು ಜಗತ್ತಿನ ಯಾವ ಚರಿತ್ರೆಯ ಪುಟಗಳಲ್ಲೂ ಆಗುತ್ತಿಲ್ಲ ಎಂದು ಧೈರ್ಯವಾಗಿ ಹೇಳಬಹುದು. ಎಚ್ಚೆತ್ತ ಅಂಚಿನ ಸಮುದಾಯಗಳು ಮೊದಲು ಕೇಳುವುದೇ ಚರಿತ್ರೆಯ ಪ್ರಶ್ನೆಗಳನ್ನು. ಈ ದಿಸೆಯಲ್ಲಿ ಕನ್ನಡದ ಬಹುರೂಪಿ ಚರಿತ್ರೆಗಳೆಲ್ಲ ಚರಿತ್ರೆರಚನಾ ವಿಜ್ಞಾನದ ಬಗೆಗೆ ಹೆಚ್ಚು ಅಭಿಪ್ರಾಯ ಮಂಡಿಸುತ್ತ ಬಂದಿರುವು ದನ್ನು ವಿಶೇಷವಾಗಿ ಗಮನಿಸಬೇಕು. ಹೊಸ ಪೀಳಿಗೆಯ ಚರಿತ್ರೆ ರಚನಾ ವಿದ್ವಾಂಸರ ಈ ನೋಟವು ಹೆಚ್ಚು ಹೆಚ್ಚು ಅಂಚಿನವರ ನ್ಯಾಯದ ದರ್ಶನವನ್ನು ಒತ್ತಾಯಿಸುವಂತದ್ದೇ ಆಗಿದೆ.

ಹಾಗೆ ನೋಡಿದರೆ ಪಶ್ಚಿಮೀಕೃತ ಜ್ಞಾನ ಪರಂಪರೆಗಳು ಇಪ್ಪತ್ತೊಂದನೇ ಶತಮಾನದಲ್ಲಿ ಭಿನ್ನ ಸ್ವರೂಪ ಪಡೆದುಕೊಳ್ಳಲು ಬೌದ್ದಿಕ ವಿನ್ಯಾಸಗಳನ್ನು ಹುಡುಕಿಕೊಳ್ಳುತ್ತಿರುವುದು ಪೌರ್ವಾತ್ಯ ಸಂಸ್ಕೃತಿಗಳ ಮೂಲಕವೆ. ಆ ಮಟ್ಟಿಗೆ ಮುಂದಾಗಿರುವ ಪಶ್ಚಿಮವು ಅದರಿಂದ ತನ್ನ ಜ್ಞಾನ ಪರಂಪರೆಗಳನ್ನು ಬಲಪಡಿಸಿಕೊಳ್ಳಬಹುದೇ ವಿನಃ ನಮ್ಮ ಪರಂಪರೆಗಳ ಅರಿವನ್ನು ವಿಸ್ತರಿಸಿದಂತಾಗುವುದಿಲ್ಲ. ಈಗಲೂ ಜರ್ಮನಿಯ ನವ ಓರಿಯಂಟಲ್ ಚಿಂತಕರು ಕನ್ನಡ ನಾಡಿನ ಸಾಂಸ್ಕೃತಿಕ ನೆನಪುಗಳ ಕಡೆಗೆ ವಿಶೇಷವಾಗಿ ಗಮನಹರಿಸುತ್ತಿದ್ದಾರೆ. ಪ್ರೊ. ಶೆಲ್ಡನ್ ಪೊಲಾಕ್ ಅಂತಹ ದೊಡ್ಡ ಓರಿಯಂಟಲ್ ಚಿಂತಕರು ದೇಶೀಯ ಅರಿವಿನ ಮೂಲಕ ವಿಶ್ವಾತ್ಮಕ ಸಂಸ್ಕೃತಿ ಚಿಂತನೆಗಳ ಕಾಲಾವಾಕಾಶವನ್ನು ವಿಸ್ತರಿಸಿಕೊಳ್ಳಲು ಮುಂದಾಗಿದ್ದಾರೆ. ಪಶ್ಚಿಮದ ಬೌದ್ದಿಕ ಕ್ರಮಗಳು ನಮ್ಮಂತಹ ದೇಶಗಳನ್ನು ಬಳಸಿಕೊಳ್ಳುವಲ್ಲಿ ತೋರುವ ಉತ್ಸಾಹ ನಮ್ಮ ಜ್ಞಾನಕ್ರಮಗಳನ್ನು ಮತ್ತೆ ಪರಾವಲಂಬಿಗೊಳಿಸುವಂತೆ ಮಾಡುತ್ತದೆ. ಜ್ಞಾನದ ಗಡಿಗಳು ಯಾರ ಅಳತೆಗೂ ನಿಲುಕುವುದಿಲ್ಲ ಎಂದುಕೊಂಡರೂ ನಮ್ಮ ಅಸ್ತಿತ್ವಕ್ಕೆ ನಮ್ಮದೇ ಚಿಂತನೆ ಇದ್ದಾಗ ವಿಕಾಸದ ಬೇರೆ ಬೇರೆ ಅವಸ್ಥಾಂತರಗಳನ್ನು ಸಲೀಸಾಗಿ ಪ್ರವೇಶಿಸಬಹುದು. ಪಶ್ಚಿಮದ ನಿರಾಕರಣೆ ಎಂದು ಇದನ್ನು ಭಾವಿಸಬೇಕಾದ್ದಿಲ್ಲ. ಪೂರ್ವ ಹಾಗೂ ಪಶ್ಚಿಮಗಳು ಸಂಗಮಿಸುವುದು ಒಳ್ಳೆಯದೇ ಆದರೂ ಆದರ್ಶದಂತೆಯೇ ಜ್ಞಾನದ ಯಾಜಮಾನ್ಯವು ವರ್ತಿಸದು. ಭಾರತದ ಅಸಂಖ್ಯ ಬಹುಸಂಸ್ಕೃತಿ, ಚರಿತ್ರೆ, ಸಮಾಜಗಳೇ ಅಪಾರವಾದ ವಿಶ್ವಾತ್ಮಕ ಚಿಂತನೆಗಳನ್ನು ಅಡಗಿಸಿಕೊಂಡಿವೆ. ಪಶ್ಚಿಮದ ವಿವೇಕವು ನಮ್ಮ ಇರುವಿಕೆಯನ್ನು ಪುನಾರಚಿಸಿಕೊಳ್ಳಲು ಬೇಕೇ ವಿನಃ ಸ್ವತಃ ಪಶ್ಚಿಮದ ಬೌದ್ದಿಕತೆಯೇ ನಮ್ಮ ಜ್ಞಾನ ಪರಂಪರೆ ಗಳ ನಿರ್ಣಯಗಳಾಗಬಾರದು.

ಚರಿತ್ರೆ ಅರ್ಥಾತ್ ಮಾನವಿಕ ವಿಜ್ಞಾನಗಳನ್ನೆಲ್ಲ ಬೀಸುವ್ಯಾಪ್ತಿಯಲ್ಲಿ ಅಳವಡಿಸಿಕೊಂಡು ಹೇಳುತ್ತಿರುವ ಈ ಮಾತುಗಳೆಲ್ಲ ನಿರ್ದಿಷ್ಟ ಚಾರಿತ್ರಿಕ ನಿರ್ವಚನದ ಭಾಗವಾಗಿ ವ್ಯಕ್ತವಾಗು ತ್ತಿಲ್ಲ ಎಂಬ ಊಹೆ ಸರಿಯಾದುದೇ. ವಸ್ತುನಿಷ್ಠವಾದ ನಿರ್ದಿಷ್ಟವಾದ ಚಾರಿತ್ರಿಕ ಕಥನವು ಅಖಂಡತೆಯನ್ನು ಬಿಡಿಯಾಗಿ ಮಾತ್ರ ಧರಿಸಿರುತ್ತದೆ. ಅದು ಹೊರ ರೂಪದಲ್ಲಿ ವ್ಯಕ್ತ ವಾಗದು. ಇತಿಹಾಸದ ತತ್ವವನ್ನು ಅನುಸರಿಸುವ ಯಾರಿಗಾದರೂ ಅಖಂಡತೆಯನ್ನು ಬಿಟ್ಟು ಕೊಡಲಾಗದು. ಇದು ಕೇವಲ ವೈಧಾನಿಕತೆಯ ಸಮಸ್ಯೆಯಲ್ಲ. ಆಲೋಚನೆಯಲ್ಲೇ ಬಿಡಿ ಯಾಗಿ ತರ್ಕಿಸುವ ವಿಧಾನವನ್ನು ವಸಾಹತು ಪ್ರಜ್ಞೆಯೇ ಕಲಿಸಿಕೊಟ್ಟಿರುವುದು. ಸಂಸ್ಕೃತಿಗಳು ಯಾವತ್ತೂ ವಿಶ್ವಾತ್ಮಕವಾಗಿ ತಮ್ಮ ಆತ್ಮಚರಿತ್ರೆಯನ್ನು ಸಮಷ್ಟಿಯಾಗಿ ವ್ಯಕ್ತಪಡಿಸುತ್ತಿರುತ್ತವೆ. ಇಂತಹ ಅಖಂಡ ಭಾವವನ್ನು ಚರಿತ್ರೆಕಾರರು ನಿಖರವಾದ ಸಾಕ್ಷ್ಯಾಧಾರಗಳ ಬಿಡಿ ಬಿಡಿ ರಚನೆಗಳಿಂದ ಅನುಭವಗಳಿಂದ ನಿರ್ವಚಿಸಿದಾಗ ಚರಿತ್ರೆಯ ಸಮಷ್ಟಿಭಾವವೇ ಛಿದ್ರವಾಗಿರುತ್ತದೆ. ಭಾರತೀಯ ಸಂಸ್ಕೃತಿಗಳು ಬಹುರೂಪಗಳಲ್ಲಿದ್ದರೂ ಅವು ತಂತಾನೆ ಸ್ವಯಂ ಸಂಪೂರ್ಣ ಭಾವವನ್ನು ನಿಸರ್ಗದ ಜೊತೆ, ಕಾಲದ ಜೊತೆ ವಿಶ್ವಾತ್ಮಕವಾಗಿ ಬೆರೆಸಿಕೊಂಡಿರುತ್ತವೆ. ಪಶ್ಚಿಮದ ಜ್ಞಾನಕ್ರಮಕ್ಕಿಂತಲೂ ಇದು ಬೇರೆ. ಪಶ್ಚಿಮದ ಬಿಡಿ ಚಿಂತನ ಕ್ರಮದಿಂದ ನಮ್ಮ ಸಂಸ್ಕೃತಿಗಳ ಅಖಂಡ ಪ್ರಜ್ಞೆಯನ್ನು ಬಿಡಿಸುವುದರಿಂದ ಲೌಖಿಕ ವಾಗಿ ಸಾಮಾಜಿಕ ಶ್ರೇಣಿಯಲ್ಲಿ ಛಿದ್ರವಾಗಿರುವ ಸಮಾಜಗಳ ಕಥನಗಳನ್ನು ನಾವು ಮತ್ತಷ್ಟು ಛಿದ್ರಗೊಳಿಸಿದಂತಾಗುತ್ತದೆ. ಸಮುದಾಯಗಳ ಚರಿತ್ರೆಯ ಅನನ್ಯತೆ ಸಾಧಿತವಾಗಬೇಕಾದುದು ಯಾಜಮಾನ್ಯ ಚರಿತ್ರೆಯ ಕಥನಗಳ ಎದುರು. ವಿಶ್ವಾತ್ಮಕವಾದ ಅವುಗಳ ಅನನ್ಯತೆಯನ್ನು ಪ್ರತಿಪಾದಿಸುತ್ತಲೇ ಅವು ಹೊಂದಿರುವ ಸ್ಥಳೀಯವಾದ ಹಾಗೂ ನೈಸರ್ಗಿಕವಾದ ಗುಣಗಳನ್ನು ಜ್ಞಾನ ವಿಕಾಸದ ಭಾಗವಾಗಿ ವಿಶ್ಲೇಷಿಸಬೇಕು. ಇದು ತುಂಬ ಕಠಿಣಹಾದಿ ನಿಜ. ಪಶ್ಚಿಮದ ಚರಿತ್ರೆಯ ಪ್ರಜ್ಞೆಯಿಂದ ಬಿಡಿಯಾಗಿ ನೋಡುವುದು ಒಂದು ವಿಧಾನ ಮಾತ್ರ. ಜಾತಿಶ್ರೇಣಿ ಯಲ್ಲಿ ಸಂಸ್ಕೃತಿಗಳ ಬಹುರೂಪದಲ್ಲಿ ಆಗಿರುವ ವೈರುಧ್ಯಗಳನ್ನು ಘರ್ಷಣೆಗಳನ್ನು ನಿರ್ವಚಿಸ ಬೇಕಾದಾಗ ಸ್ಥಳೀಯ ಹಾಗು ವಿಶ್ವಾತ್ಮಕ ಎರಡೂ ನೆಲೆಯ ಅಧ್ಯಯನ ಕ್ರಮಗಳು ಬೇಕಾಗುತ್ತವೆ. ಇದು ಸಂದಿಗ್ಧಕ್ಕೂ ದಾರಿ ಮಾಡಬಲ್ಲ ವಿಧಾನ. ಒಂದೆಡೆ ಅಖಂಡತೆಯನ್ನು ಪ್ರತಿಪಾದಿಸುತ್ತ ಮತ್ತೊಂದೆಡೆ ಸಮುದಾಯದ ಬಿಡಿ ಅನನ್ಯತೆಯನ್ನು ನಿರ್ವಚಿಸಬೇಕಾದ ಈ ಪರಿಯು ಕೊನೆಗೆ ನಿರ್‌ದ್ವಂದ್ವದ ವಿಕಾಸ ಪ್ರಕ್ರಿಯೆಯಲ್ಲಿ ಜ್ಞಾನ ಪರಂಪರೆಯನ್ನು ವಿಸ್ತರಿಸುವ ಕಡೆಗೇ ಸಾಗಬೇಕಾಗಿದೆ.

ಈ ವಿಚಾರಗಳನ್ನೆಲ್ಲ ಅವ್ಯಕ್ತ ಚರಿತ್ರೆಯ ನಿರ್ವಚನದ ಹಾದಿಯಲ್ಲಿ ಸಂಯೋಜಿಸುವುದು ಸಾಧ್ಯ. ಅವ್ಯಕ್ತ ಚರಿತ್ರೆ ಒಂದು ಹೊಸ ಬಗೆಯ ಪರಿಕಲ್ಪನೆ. ಚರಿತ್ರೆಯ ಚರಿತ್ರೆಯನ್ನು ಈಗಾಗಲೆ ಸಾಕಷ್ಟು ವಿದ್ವಾಂಸರು ಸೂಚಿಸಿದ್ದಾರೆ. ಅಲಕ್ಷಿತ ಚರಿತ್ರೆಯ ಸೈದ್ಧಾಂತಿಕ ನಿರ್ವಚನವೂ ತುಂಬ ಆಗಿದೆ. ಸ್ತ್ರೀ ಚರಿತ್ರೆಯ ಸಂರಚನೆಗಳು ಆರಂಭಗೊಂಡಿವೆ. ಮೌಖಿಕ ಇತಿಹಾಸದ ಸಾಧ್ಯತೆ ಬಗ್ಗೆ ಕನ್ನಡದಲ್ಲಿ ವಿವರವಾದ ಬರಹಗಳಿವೆ. ಸಂಸ್ಕೃತಿ ಚರಿತ್ರೆಯ ನಿರ್ವಚನಗಳಂತೂ ಕನ್ನಡ ಜಿಜ್ಞಾಸೆಯ ತುಂಬ ಹರಡಿವೆ. ಚರಿತ್ರೆಯ ಸಾಹಿತ್ಯಾನುಸಂಧಾನ ಕೂಡ ಅಪಾರವಾಗಿದೆ. ಸಾಮ್ರಾಜ್ಯಗಳ ಇತಿಹಾಸ ಈಗಾಗಲೆ ಸಾಕಷ್ಟು ದೃಷ್ಟಿಗಳಿಂದ ದಾಖಲಾಗಿದೆ. ಚರಿತ್ರೆಯ ವಿಮರ್ಶೆಯ ಭಾಗವಾಗಿಯೇ ಇತಿಹಾಸ ರಚನಾವಿಜ್ಞಾನದ ನಿರೂಪಣೆಗಳು ಅಲ್ಲಲ್ಲಿ ತೊಡಗಿವೆ. ಆಳದಲ್ಲಿ ಇವೆಲ್ಲ ಒಂದನ್ನೊಂದು ಸಂಯುಕ್ತವಾಗಿ ವಿಸ್ತರಿಸಿಕೊಳ್ಳುವ ಬಹುರೂಪಿ ನಿರೂಪಣೆಗಳು. ತಳಜಾತಿಗಳ ಇತಿಹಾಸ ಈ ಎಲ್ಲ ಹಂತಗಳಲ್ಲಿ ತೇಲಿ ಹೋಗುವುದೂ ಇದೆ. ಈ ಪರಿಯ ಚರಿತ್ರೆಗಳೆಲ್ಲವೂ ಮುಖ್ಯವಾಗಿ ಚರಿತ್ರೆಯ ಅವ್ಯಕ್ತ ನೆಲೆಗಳತ್ತಲೇ ಮುಖಮಾಡಿರುವುದನ್ನು ಧಾರಾಳವಾಗಿ ಗಮನಿಸಬಹುದು. ಇಷ್ಟು ವೈವಿಧ್ಯ ಚರಿತ್ರೆಯ ನಿರೂಪಣೆಗಳು ಒಂದೇ ಭಾಷೆಯಲ್ಲಿ ಏಕಕಾಲಕ್ಕೆ ಘಟಿಸುವುದು ಸಾಮಾನ್ಯವಲ್ಲ. ಯುರೋಪಿನ  ಸಮುದಾಯಗಳು ಬಹುಶಃ ತಮ್ಮ ಚರಿತ್ರೆಯ ದಾಖಲೆ ಹಾಗು ನಿರ್ವಚನದ ಕಾರ್ಯಗಳನ್ನೆಲ್ಲ ಆಗಲೇ ಮುಗಿಸಿಕೊಂಡು ಬಿಟ್ಟಿವೆ. ಮತ್ತೆ ಮತ್ತೆ ಚರಿತ್ರೆಯ ವಿಮರ್ಶೆ ಮಾಡಿಕೊಳ್ಳುವುದು ಮಾತ್ರವೇ ಯುರೋಪಿಗಿರಬಹುದಾದ ದೊಡ್ಡ ಕಾರ್ಯ. ನಮ್ಮಲ್ಲಿ ಏಕಕಾಲಕ್ಕೆ ಹತ್ತಾರು ಬಗೆಯ ಚರಿತ್ರೆಯ ನಿರೂಪಣೆಗಳು ಒಂದರಿಂದ ಇನ್ನೊಂದು ಪುನರ್‌ಸೃಷ್ಟಿಯಾಗುತ್ತ ಬೆಳೆಯುತ್ತಲೇ ಇರುತ್ತವೆ. ಈ ಪರಿಯನ್ನು ನೋಡಿದರೆ ನಮ್ಮಲ್ಲಿ ಇರುವಷ್ಟು ಚರಿತ್ರೆಯ ನಿರ್ವಚನದ ಪ್ರಜ್ಞೆ ಬೇರೆಲ್ಲೂ ಇಲ್ಲವೇನೋ.

ಅವ್ಯಕ್ತ ಚರಿತ್ರೆಯು ಈ ನಿಟ್ಟಿನಲ್ಲಿ ಭಿನ್ನವಾದೊಂದು ನಿರೂಪಣೆ. ಸಂಸ್ಕೃತಿಗಳು ಯಾವತ್ತೂ ಅವ್ಯಕ್ತ ಸ್ವರೂಪದಲ್ಲಿ ಚರಿತ್ರೆಯನ್ನೇ ಆತ್ಮಕಥನವಾಗಿ ಮಂಡಿಸುತ್ತವೆ. ವ್ಯಕ್ತ ರೂಪಗಳೆಲ್ಲವೂ ಅವ್ಯಕ್ತವಾದ ವಿಚಾರಗಳಿಂದಲೇ ಅಭಿವ್ಯಕ್ತಗೊಳ್ಳುವುದು. ಈ ಬಗ್ಗೆ ಮುಂದಿನ ನಿರೂಪಣೆಗಳಲ್ಲಿ ದೀರ್ಘವಾದ ವಿವರಗಳಿವೆ. ಸಂಸ್ಕೃತಿ ಮತ್ತು ನಿಸರ್ಗ ಎರಡೂ ಆಯಾ ಸಮುದಾಯದ ಚರಿತ್ರೆಯನ್ನು ರೂಪಿಸಿರುತ್ತವೆ. ಯಾವುದೇ ಅತ್ಯುನ್ನತ ವೈಜ್ಞಾನಿಕ ಅಭಿವ್ಯಕ್ತಿಯೂ ತನ್ನ ಕಾಲದೇಶದ ಸಂಸ್ಕೃತಿ ಮತ್ತು ನಿಸರ್ಗದ ಅನುಭವವನ್ನೇ ಅರಿವಾಗಿ ವ್ಯಕ್ತಪಡಿಸುವುದು. ಹೀಗೆ ಸಾಗುವಾಗ ಅವ್ಯಕ್ತ ಮೌಲ್ಯಗಳು ಯಾವತ್ತೂ ಕೂಡ ವ್ಯಕ್ತ ತರ್ಕದ ಹಂಗು ಮೀರಿ ಮಾನವನ ಸುಪ್ತಪ್ರಜ್ಞೆಯ ಕಾಲಾತೀತ ನೆಲೆಗಳನ್ನೆಲ್ಲ ಎಟುಕಿಸಿಕೊಳ್ಳು ತ್ತದೆ. ಮನಸ್ಸಿನಷ್ಟು ಆಳವಾದ ಸಾಕ್ಷ್ಯವು ಬೇರೊಂದಿಲ್ಲ. ಕೇವಲ ಸಾಕ್ಷ್ಯವಾಗಿಯೂ ಮನಸ್ಸನ್ನು ನೋಡಬೇಕಾದ್ದಿಲ್ಲ. ಅದರಾಚೆಗಿನ ಸಂಬಂಧಗಳನ್ನೆಲ್ಲ ಮನಸ್ಸು ಹಿಡಿದಿಟ್ಟಿ ರುತ್ತದೆ. ಮನಸ್ಸು ಜೈವಿಕವಾದದ್ದು. ಆನುವಂಶಿಕ ಗುಣವನ್ನು ಅಂತರ್ಗತವಾಗಿಸಿಕೊಂಡದ್ದು. ಮೆದುಳಿನ ರಚನೆಯ ಸಾವಯವ ರಚನೆಯಾಗಿಯೂ ಮನಸ್ಸು ಜೀವದ ಭಾಗವಾಗಿ ಅಡಕವಾಗಿರುತ್ತದೆ. ಉಗಮ ವಿಕಾಸದ ಎಲ್ಲ ನೆನಪು ಮನಸ್ಸಿಗೆ ಇದೆ. ಮನಸ್ಸು ಅಖಂಡವಾಗಿ ತನ್ನ ಗತಕಾಲವನ್ನು ಸುಪ್ತವಾಗಿ ಇಟ್ಟುಕೊಂಡಿರುತ್ತದೆ. ಆದರೆ ಅದರ ಗತವೆಲ್ಲವು ರೂಪಾಂತರ ಸ್ವರೂಪದಲ್ಲಿ ವಿಕಾಸದ ಜೊತೆ ಸಾಗಿ ಬರುತ್ತಿರುತ್ತದೆ. ಮಿಲಿಯಾಂತರ ವರ್ಷಗಳ ಗತಸ್ಥಿತಿ ಮನಸ್ಸಿನಲ್ಲಿರುತ್ತದೆ. ಹಾಗಾಗಿಯೇ ಮನಸ್ಸು ನಮ್ಮ ನಮ್ಮ ಡಿ.ಎನ್.ಎ. ರಚನೆಯಲ್ಲೂ ಅಂತರ‍್ಗತಗೊಂಡಿರುತ್ತದೆ. ಮನಸ್ಸಿನ ಅಷ್ಟು ದೂರದ ಬೇರು ವರ್ತಮಾನದ ತನಕ ಚಾಚಿ ಕೊಂಡಿರುತ್ತದೆ. ಇರುವ ಸಮಸ್ಯೆ ಎಂದರೆ ಮಿಲಿಯಾಂತರ ವರ್ಷಗಳ ಮಾನವ ಮನಸ್ಸಿನ ಭಾಷೆಗೂ ವರ್ತಮಾನದ ಭಾಷೆಗೂ ಅಪಾರವಾದ ಅಂತರವಿದೆ. ನಿನ್ನೆಯ ಮೊನ್ನೆಯ ಮಾತೇ ಜಾಗೃತಾವಸ್ಥೆಗೆ ಮರೆತು ಹೋಗಿರುತ್ತದೆ. ಇನ್ನು ಮಿಲಿಯಾಂತರ ವರ್ಷಗಳ ಜೈವಿಕ ಕಾಲದ ಪ್ರಜ್ಞೆಯಲ್ಲಿರುವ ನೆನಪನ್ನೆಲ್ಲ ಹೇಗೆ ಬಿಡಿಸುವುದು ಎಂಬುದೇ ಮಾನವ ಸವಾಲು. ಇದು ವ್ಯಕ್ತಿಗತ ಸಮಸ್ಯೆ ಮಾತ್ರ ಅಲ್ಲ. ಮಿಲಿಯಾಂತರ ವರ್ಷಗಳ ಹಿಂದೆ ಮಾನವ ಮೂಲದ ಜೀವಕ್ಕೆ ಇದ್ದ ಭಾಷೆ ಯಾವುದು? ಆ ಭಾಷೆಯ ಅನುಭವ ವರ್ತಮಾನದ ಭಾಷೆಗೆ ತರ್ಜುಮೆ ಆಗಬೇಕಲ್ಲವೆ? ಆದಿಮ ಮನಸ್ಸಿನ ಆ ಭಾಷೆಯ ಸ್ವರೂಪ ಏನು? ಅದು ಹೇಗೆ ಸಂಹವನ ಮಾಡುತ್ತಿತ್ತು. ಅಷ್ಟು ದೀರ್ಘಕಾಲೀನ ಅನುಭವಗಳೆಲ್ಲ ಮೆದುಳಿನ ಒಂದು ಮೂಲೆಯಲ್ಲಿ ಅಡಗಿವೆ ಎಂಬುದನ್ನು ನಂಬಬಹುದು. ಆ ಭಾಷೆಯ ದರ್ಶನ ವಿಶ್ವವನ್ನು ಹೇಗೆ ಗ್ರಹಿಸಿತ್ತು? ಬುದ್ದಿವಂತರೆಂದು ನಾವು ಇಂದು ಕಲಿತಿರುವ ಭಾಷೆ ಮಾತ್ರ ಉನ್ನತವಾದದ್ದಲ್ಲ. ಆದಿಮ ಮನಸ್ಸು ಬಿಡಿಸಿಕೊಂಡ ಪ್ರಶ್ನೆಗಳು ಕೂಡ ನಿಸರ್ಗದ ಜೊತೆ ಅತ್ಯುನ್ನತ ಸಂವಾದ ನಡೆಸಿರಲೇ ಬೇಕು. ಮನುಷ್ಯರ ಜೊತೆ ಮಾತ್ರ ಸಂವಹನ ಮಾಡುತ್ತ ಬೆಳೆದ ಭಾಷೆ ನಿಸರ್ಗದ ಆಚೆಗೆ ಬಂದ ಭಾಷೆ. ನಿಸರ್ಗದ ಮೂಲಕ ಮಾಡನಾಡುವ ಭಾಷೆ ಬೇರೆ. ಅದು ಆದಿಮ ಭಾಷೆ. ಭಾಷೆಯ ವಿಚಾರದಲ್ಲಿ ಹಿಂದೆ ಉಳಿದ ಮಾನವ ಸಮೂಹಗಳು ವಿಕಾಸದ ಪಯಣವನ್ನು ಮುಂದುವರಿಸಲಾಗಲಿಲ್ಲ. ಅಂದರೆ ಅತಿ ದೂರದ ಆಹೊತ್ತಿನ ಮಾನವ ಸಮೂಹಗಳ ನೈಸರ್ಗಿಕ ಭಾಷೆಯು ನಮ್ಮ ಕಾಲದ ಭಾಷೆಗೆ ತರ್ಜುಮೆ ಆಗದಷ್ಟು ಸಂಕೀರ್ಣವಾಗಿವೆ. ಈಜಿಪ್ಟಿನ ಚಿತ್ರಲಿಪಿಯನ್ನು ಓದುವ ಬಗೆ ಬೇರೆ. ನಾಗರಿಕತೆಗಳ ಭಾಷೆಯ ಲಿಪಿಗಳನ್ನು ತಿಳಿಯುವುದೇ ಒಂದು ಸಾಹಸ. ಇನ್ನು ಮಿಲಿಯಾಂತರ ವರ್ಷಗಳ ಭಾಷೆಯ ಸ್ವರೂಪ ಸಂವಹನ ಅರ್ಥ ವಿನ್ಯಾಸಗಳನ್ನು ಅರಿಯುವುದಾದರೂ ಹೇಗೆ?

ಚರಿತ್ರೆಗೆ ಬೇಕಿರುವುದು ಅಂತಹ ಮಿಲಿಯಾಂತರ ವರ್ಷಗಳ ಮರೆಯ ಮಾನವ ಭಾಷೆಯೇ ಈಗ ಮುಖ್ಯವಾಗಿ ಬೇಕಿರುವುದು. ಸಾಮ್ರಾಜ್ಯಗಳ ಭಾಷೆಯಿಂದ ರಚಿತವಾದ ಚರಿತ್ರೆ ಅಪ್ರಾಮಾಣಿಕವಾದ, ಆಂಶಿಕವಾದ ತಾರತಮ್ಯದ ವ್ಯಕ್ತ ಭಾಷೆ ಮಾತ್ರ. ಈ ಚರಿತ್ರೆಯನ್ನು ಎಷ್ಟೆಲ್ಲ ಅಗೆದರೂ ಫಲ ಕಾಣದು. ನಿಸರ್ಗದ ಆಚರಣೆಗಳಲ್ಲಿ ಮಾತ್ರ ಸಂಸ್ಕೃತಿಗಳ ನಂಬಿಕೆ, ಸಂಪ್ರದಾಯಗಳ ಕೊನೆಯ ಕೊಂಡಿಗಳಲ್ಲಿ ಮಾತ್ರ ಮಿಲಿಯಾಂತರ ವರ್ಷಗಳ ಆದಿಮ ಭಾಷೆಯು ರೂಪಾಂತರಗಳಲ್ಲಿ ಕಾಣಬಹುದಷ್ಟೆ. ಆ ಮಟ್ಟಿಗೆ ಎಲ್ಲ ಆದಿಮ ಸಂಸ್ಕೃತಿಗಳು ಕೂಡ ನಿಸರ್ಗನಿಷ್ಠವಾದವು. ಈ ಬಗೆಯ ಸಂಸ್ಕೃತಿಗಳ ನಂಬಿಕೆ ಆಚರಣೆ ಪುರಾಣಗಳೇ ಆದಿಮಭಾಷೆಗಳು. ಇಂತಲ್ಲಿ ಮಿಲಿಯಾಂತರ ವರ್ಷಗಳ ಮನಸ್ಸು ವ್ಯಕ್ತವಾಗಬಲ್ಲದು. ಮನಸ್ಸು ಮತ್ತು ಭಾಷೆಯ ಆದಿಮ ಸ್ವರೂಪ ಯಾಕೆ ಬೇಕು? ಅದರಿಂದ ಯಾವ ಚರಿತ್ರೆ ಸಿಗುತ್ತದೆ ಎಂದು ತರ್ಕ ಹೂಡಿದರೆ ಲಾಭವಿಲ್ಲ. ಮನಸ್ಸು ಮತ್ತು ಭಾಷೆ ಎರಡೂ ನಿಸರ್ಗದ ಗುಣಗಳು. ಸತ್ಯಲೋಕ ಕೂಡ ಭಾಷೆಯನ್ನು ತಿಳಿದಿದೆ. ಪ್ರಾಣಿ ಪಕ್ಷಿ ಕೀಟಾದಿಗಳೆಲ್ಲ ಜೈವಿಕವಾಗಿ ನಿಸರ್ಗದಲ್ಲಿ ಅವುಗಳ ಅಸ್ತಿತ್ವದಲ್ಲಿ ಅಸ್ಮಿತೆಯಲ್ಲಿ ಅವುಗಳದೇ ವಿಕಾಸದ ಸಂವಹನದ ಮಾತುಗಳನ್ನು ಆಡಿಕೊಳ್ಳುತ್ತಲೇ ಬಂದಿವೆ. ವಿಕಾಸದಲ್ಲಿ ಮಹತ್ವದ ಒಂದು ಉಪಕರಣ ಅಥವಾ ಜೀವಗುಣ ಎಂದರೆ ಭಾಷೆ. ನಮ್ಮ ವಿಕಾಸದ ಇಂದಿನ ಸ್ಥಿತಿಗೆ ಭಾಷೆ ಕೂಡ ಮುಖ್ಯ ಕೇಂದ್ರ.  ಆ ಆದಿಮ ಭಾಷೆಯು ಸೃಷ್ಟಿಯ ನಿಗೂಢಗಳನ್ನು ಅರಿತಿದೆ ಎಂದೇ ನಾವು ತಿಳಿಯಬಹುದು. ಇಂತಹ ಮನಸ್ಸು ಬೇರೆ ಅಲ್ಲ, ಅದರ ನಿಸರ್ಗ ಬೇರೆ ಅಲ್ಲ, ಹಾಗೆಯೇ ಅದರ ಭಾಷೆ ಬೇರೆ ಅಲ್ಲ. ಆದಿಮ ವಿಕಾಸದಲ್ಲಿ ಅನೇಕ ಬಗೆಯ ಕೊಂಡಿಗಳು ಮರೆತುಹೋಗಿವೆ. ಆದಿಮ ಭಾಷೆಯು ಮರೆತದ್ದಲ್ಲ. ಅದು ಮರೆಗೆ ಸರಿದು ಗುಪ್ತವಾಗಿ ಜೈವಿಕವಾಗಿ ನಮ್ಮೊಳಗೇ ಉಳಿದುಕೊಂಡಿರುವ ನಿಗೂಡ ಗುಣ. ಬೇಕಾದರೆ ಅದು ಖಗೋಳ ಜಗತ್ತಿನ ಜೊತೆ ಮಾತನಾಡಬಲ್ಲದು. ಋಷಿಗಳು ಮೌನವಾಗಿ ನಿಸರ್ಗದ ಜೊತೆ ಮಾತನಾಡು ತ್ತಿದ್ದರು ಎಂಬುದನ್ನು ಪುರಾಣ ಭಾಷೆಯಲ್ಲಿ ಕೇಳಿದ್ದೇವೆ. ಪುರಾಣ ಭಾಷೆ ಎಂದು ಉಪೇಕ್ಷಿಸ ಬೇಕಾದ್ದಿಲ್ಲ. ಅದು ಆದಿಮ ಮನಸ್ಸಿನ ನಿಸರ್ಗದ ಸಂವಹನವನ್ನು ನಿರೂಪಿಸುವ ಭಾಷೆ. ಇದರ ಆಳ ಆಳ ಪಾತಾಳಕ್ಕೆ ಇಳಿಯುತ್ತ ಹೋದರೆ, ಸುಪ್ತಪ್ರಜ್ಞೆಯ ಆಳ ತಳಕ್ಕೂ ಇಳಿದರೆ ಮನಸ್ಸಿನ ಪದರಗಳು ಎಷ್ಟು ಕಾಣಬಹುದೊ. ಹೀಗಾಗಿಯೇ ಮನಸ್ಸಿನ ಚರಿತ್ರೆ ಬೇರೆ. ಅದರ ಬಲದಿಂದಲೇ ಚರಿತ್ರೆಯನ್ನು ವರ್ತಮಾನದಲ್ಲಿ ವಿಭಿನ್ನವಾಗಿ ಕಾಣಲು ಸಾಧ್ಯ.

ಭಾಷೆಯೊಂದನ್ನು ಇನ್ನೊಂದು ಭಾಷೆಗೆ ಭಾಷಾಂತರ ಮಾಡಿಕೊಳ್ಳುವುದು ಸುಲಭ. ಸುಪ್ತಪ್ರಜ್ಞೆಗೂ ಮೀರಿದ ಆದಿಮ ಭಾಷೆಗೆ ಸಮಾನಾಂತರವಾದ ಭಾಷೆ ವರ್ತಮಾನದಲ್ಲಿ ಇದೆಯೇ ಎಂದು ಕೇಳಿಕೊಂಡರೆ ಇಲ್ಲ ಎಂದೇ ಹೇಳಬೇಕಾಗುತ್ತದೆ. ಮಿಲಿಯಾಂತರ ವರ್ಷ ಗಳ ಹಿಂದಿನ ನಿಸರ್ಗದ ಆ ಭಾಷೆಗೆ ಯಾವ ವಿಷಯಗಳಿದ್ದವು? ಆ ಆದಿ ಭಾಷೆ ರೂಪಾಂತರ ಗೊಂಡಂತೆಲ್ಲ ಅದರ ಗತ ಅಳಿದಿರುವುದಿಲ್ಲವೆ ಎಂಬ ಪ್ರಶ್ನೆಗಳು ಸಹಜ. ಚರಿತ್ರೆಯ ಬೆಳಕಲ್ಲಿ ಇವನ್ನೆಲ್ಲ ಬೇರೊಂದು ಕ್ರಮದಲ್ಲಿ ಬಿಡಿಸಲು ಸಾಧ್ಯ. ಆ ಕಾಲದ ಭಾಷೆಗೆ ಸಮಾನಾಂತರ ಭಾಷೆ ಇಲ್ಲದಿದ್ದರೂ ಸಂವೇದನೆ ಎಂಬ ಆ ಕಾಲದ ಭಾಷೆಯ ಜೊತೆ ಸ್ಪಂದಿಸಬಹುದು. ಭಾಷೆಯ ಜೊತೆ ಮಾತನಾಡುವುದು ಸುಲಭ. ತಿಳಿಯದ ಇನ್ನೊಂದು ಭಾಷೆಯ ಜೊತೆ ಸ್ಪಂದಿಸುವುದೇ ಯೋಗ್ಯಕ್ರಮ. ಬೇರೆ ಗ್ರಹಗಳ ಜೀವಿಗಳ ಜೊತೆ ಮಾನವರು ಮಾತನಾಡುವುದು ಸಾಧ್ಯವಿಲ್ಲದಿದ್ದರೂ ಸ್ಪಂದನೆಯಿಂದ ಅದು ಯಾವುದೇ ಭಾಷೆಯಾಗಿದ್ದರೂ ಸಂಪರ್ಕ ವನ್ನು ಸಾಧಿಸಬಹುದು. ಖಗೋಳಲೋಕ ರೂಪುಗೊಂಡದ್ದು ಮೂಲತಃ ಒಂದೇ ಅಸ್ತಿತ್ವ ದಿಂದ ಆದ್ದರಿಂದ ಸಂವಹನದ ಗುಣ ಒಂದಲ್ಲ ಒಂದು ರೀತಿಯಲ್ಲಾದರೂ ಎಲ್ಲ ಅನ್ಯ ಅಭಿವ್ಯಕ್ತಿಗಳ ಜೊತೆಯೂ ಸ್ಪಂದಿಸುವಂತೆ ಮಾಡಬಲ್ಲದು. ಹೀಗೆಯೇ ಆದಿಕಾಲದ ಭಾಷೆ ಕೂಡ ಮನುಷ್ಯ ಮನುಷ್ಯರ ಜೊತೆ ಸ್ಪಂದಿಸುವ ದಾರಿಯಲ್ಲಿ ಸ್ಪಂದಿಸಬಲ್ಲದು. ಇದರಿಂದ ಚರಿತ್ರೆಯ ಹೊಸಬಗೆಯ ನಿರೂಪಣೆ ಸಾಧ್ಯ. ಅಷ್ಟೇ ಅಲ್ಲದೆ ವಿಭಿನ್ನ ಕಾಲಘಟ್ಟದ ಆಕರಗಳು ಕೂಡ ಲಭ್ಯವಾಗುತ್ತವೆ. ನಿಸರ್ಗದ ಜೊತೆ ಸಂವಹನ ಮಾಡಿದ ಆದಿಕಾಲದ ಭಾಷೆಯು ಸಂಸ್ಕೃತಿಗಳಲ್ಲಿ ರೂಪಕ ಸಂಕೇತ ಪ್ರತಿಮೆಗಳಾಗಿ ಪರಿವರ್ತನೆಗೊಂಡಿರುತ್ತವೆ. ಹಿಂದಿನ ಎಷ್ಟೋ ಅನುಭಾವಿ ಕವಿಗಳ ಭಾಷೆಯಲ್ಲಿ ಅಂತಹ ಸಂಗತಿಗಳು ತಂತಾನೆ ಸುಪ್ತ ತಳದಿಂದ ಬಂದು ಸೇರಿರುತ್ತವೆ. ಅವ್ಯಕ್ತವಾಗಿ ಬಂದು ಅವ್ಯಕ್ತವಾಗಿರುವ ಆದಿಕಾಲವನ್ನು ಸಂವಹನಿಸಲು ಸ್ವತಃ ಭಾಷೆಯ ಮೂಲಪ್ರವೃತ್ತಿಯೇ ಪ್ರಯತ್ನಿಸುತ್ತಿರುತ್ತದೆಯಾದರೂ ವರ್ತಮಾನದ ಸಂಕುಚಿತ ಭಾಷೆಗೆ ಅದರ ಅರಿವಾಗುತ್ತಿಲ್ಲ.

ಹಾಗೆ ನೋಡಿದರೆ ಭಾಷೆ ಸುಧಾರಿಸುತ್ತ ಬಂದಂತೆಲ್ಲ ಅದು ಹೆಚ್ಚುಹೆಚ್ಚು ಖಚಿತ ರೂಪದಲ್ಲಿ ಅರ್ಥದ ನಿರ್ಬಂಧನಕ್ಕೆ ಒಳಗಾಗಿದೆ. ಆದಿಭಾಷೆಗೆ ಅರ್ಥ ಮುಖ್ಯವಾಗಿರಲಿಲ್ಲ. ಈ ಕಾಲದ ಭಾಷೆಗಳು ಅರ್ಥದ ಸಂಕೋಲೆಯಲ್ಲಿ ಭಾಷೆಗಳನ್ನು ರೂಢಿಸಿಕೊಂಡಿದ್ದರಿಂದ ಜೀವಜಾಲದ ಭಾಷಿಕ ಸಂಬಂಧ ಕಳಚಿಹೋಗಿದೆ. ಜನಪದ ಕಥೆಗಳಲ್ಲಿ ಬರುವ ಪ್ರಾಣಿಪಕ್ಷಿಗಳು ಮನುಷ್ಯರ ಭಾಷೆಯನ್ನು ಆಡಬಲ್ಲವಾಗಿದ್ದವು. ಹಾಗೆಯೇ ಮನುಷ್ಯರು ಕೂಡ ಅಥವಾ ದೇವತೆಗಳು ಕೂಡ ಜೀವಜಾಲದ ಭಾಷೆಯನ್ನು ಹಾಡುತ್ತಿದ್ದರು. ಇದು ರಮ್ಯಕಲ್ಪನೆ ಎಂದು ನಾವು ಗೆರೆ ಹಾಕಿದ್ದೇವಷ್ಟೇ. ನಿಜಕ್ಕೂ ಇದು ಒಂದು ಕಾಲಕ್ಕೆ ಸಾಧ್ಯ ವಾಗಿದ್ದ ಸಂಗತಿ ಆಗಿರಬಹುದು. ನಾವು ನಮ್ಮ ಮನಸ್ಸಿನ ತಳಪಾಯದಿಂದ ಸ್ಪಂದಿಸಿದರೆ ನಮ್ಮ ಸುತ್ತ ಮುತ್ತ ಇರುವ ಸಾಕುಪ್ರಾಣಿಗಳ ಜೊತೆ ಸುಲಭವಾಗಿ ಮಾತನಾಡಬಹುದು. ಪಶುಪಾಲಕರು ನಿಸರ್ಗದ ಭಾಷೆಯನ್ನು ಅರಿತಿದ್ದರು. ದನ ಕುರಿ ಕೋಳಿಗಳ ಜೊತೆಯೂ ಈಗಲೂ ಜನಪದರು ಮಾತನಾಡುವುದಿದೆ. ಪಂಚತಂತ್ರದ ನೀತಿಕಥೆಗಳು ಯಾವ ಭಾಷೆಯಲ್ಲಿ ಮಾತನಾಡುತ್ತಿವೆ? ಭೌತಿಕವಾಗಿ ಅದು ಆಯಾ ಪ್ರಾದೇಶಿಕ ಭಾಷಿಕ ರಚನೆಗಳಲ್ಲಿ ಕಂಡರೂ ಕೂಡ ಆ ಭೌತಿಕರೂಪವೇ ಅದರ ನಿಜವಾದ ಭಾಷೆ ಅಲ್ಲ. ಅಲ್ಲಿರುವುದು ನಿಸರ್ಗನಿಷ್ಠ ಸಂಸ್ಕೃತಿ ಭಾಷೆ. ಜೀವಜಾಲದ ಭಾಷೆ. ಹಾಗೆಯೇ ಆದಿಮ ಮನಸ್ಸಿನ ಸುಪ್ತ ಭಾಷೆ. ಅಂದರೆ ಈ ಮಿಲಿಯಾಂತರ ವರ್ಷಗಳಿಂದ ಮಾನವರ ಜೊತೆ ಬೆಳೆಯುತ್ತಲೇ ಬಂದಿದೆ. ಆಚರಣೆ, ನಂಬಿಕೆಗಳು ಭಾಷೆಯಾಗುವುದು ಈ ಹಾದಿಯಲ್ಲಿಯೆ. ಯಾವುದೇ ಸಮುದಾಯದ ಸಮಷ್ಟಿ ಅರ್ಥದ ಭಾವನೆಗಳು ಆಚರಣೆಗಳಲ್ಲಿ ಬಿಂಬಿತವಾಗಿರುತ್ತವೆ. ಇವುಗಳನ್ನು ವಿನ್ಯಾಸಗೊಳಿಸಲು ನಂಬಿಕೆಯ ಕ್ರಮವಿರುತ್ತದೆ. ಆಚರಣೆಗಳಲ್ಲಿ ಮನಸ್ಸು ಸಂವಹನ ಮಾಡುತ್ತಿರುತ್ತದೆಯೇ ವಿನಃ ಶಾಬ್ದಿಕ ಲಯವಲ್ಲ. ಶಬ್ದದ ಸೂತಕವಿಲ್ಲದೆ ಅನಾವರಣಗೊಳ್ಳುವ ರೂಪಕಗಳು ಕೂಡ ಅನುಭಾವಿ ಕವಿಗಳ ಭಾಷಿಕ ಆಚರಣೆಯೇ ಹೌದು. ಶುದ್ಧಪಾರಮಾರ್ಥಿಕವನ್ನು ಹುಡುಕುವ ಕವಿಯು ಭಾಷೆಗಿರುವ ಆಚರಣೆಯ ಬೇರುಗಳನ್ನು ಕಂಡುಕೊಳ್ಳುತ್ತಿರುತ್ತಾನೆ. ಸಂತರು, ಋಷಿಗಳು ಪರೋಕ್ಷ ಕವಿಗಳೇನಲ್ಲ, ನೇರವಾಗಿ ಅವರು ಅನುಭಾವಿ ಕವಿಗಳೇ ಆಗಿದ್ದರು. ಅವರ ಭಾಷೆ ಎಷ್ಟೋ ಬಾರಿ ಮೌನದ ನೆಲೆಯದು. ಶಬ್ದದ ಹಂಗಿನಾಚೆಯದು. ಧ್ಯಾನ ತಪಸ್ಸುಗಳು ಅಧ್ಯಾತ್ಮದ ನಾಡಿಮಿಡಿತದಿಂದಲೇ ಆದಿ ಮನಸ್ಸಿನ ತಳವನ್ನು ತಲುಪಲು ಆತ್ಯಂತಿಕವಾಗಿ ಯತ್ನಿಸುತ್ತಿದ್ದ ಪರಿಯನ್ನು ಅಂತವರು ಮಾಡುತ್ತಿದ್ದರು. ಧ್ಯಾನ ಕೂಡ ಹೀಗಾಗಿ ಪರಿಷ್ಕೃತಗೊಂಡ ಆಚರಣೆ ಹಾಗು ಆದಿ ಭಾಷೆಯ ಕೊಂಡಿ. ಆಚರಣೆಗಳನ್ನು ಅನುವಾದಿಸುವ ಕೌಶಲ್ಯವೇ ಈ ಕಾಲದಲ್ಲಿ ಇಲ್ಲ. ಪುರಾಣಗಳ ಪ್ರಜ್ಞೆಯನ್ನು ಕೂಡ ಬಿಡಿಸುವುದು ಇಲ್ಲಿ ಮುಖ್ಯ. ಸುಪ್ತಪ್ರಜ್ಞೆಯಿಂದ, ನಿಸರ್ಗನಿಷ್ಠ ಧ್ಯಾನದಿಂದ, ಜೈವಿಕವಾದ ವಿವೇಕದಿಂದ ಸಂಸ್ಕೃತಿಗಳ ಆಚರಣೆ ನಂಬಿಕೆ ಸಂಪ್ರದಾಯಗಳನ್ನು ಅನುವಾದಿಸಲು ಸಾಧ್ಯ. ಹಾಗೆಯೇ ಅವುಗಳನ್ನು ಪುನರ್‌ಸೃಷ್ಟಿಸಲು ಸುಲಭ. ಹೀಗೆ ಸಾಗಿದಾಗ ಸುಪ್ತಪ್ರಜ್ಞೆಯ ಬೇರೆ ಬೇರೆ ಕಾಲಗಳ ಸಂಬಂಧಗಳು ನಮ್ಮ ಕಾಲದ ಭಾಷೆಯ ಜೊತೆಗೆ ಭಾವಾನುಸಾರಿ ನೆಲೆಯಿಂದ ಬಂದು ಸೇರುತ್ತವೆ.

ಅವ್ಯಕ್ತ ಚರಿತ್ರೆಯ ನೆಲೆಗಳಿಗಾಗಿ ಮೇಲಿನ ವಿಚಾರಗಳನ್ನು ಪ್ರಸ್ತಾಪಿಸಬೇಕಾಯಿತು. ಚರಿತ್ರೆಯ ವಿಷಯವಲ್ಲದಂತೆ ಇವೆಲ್ಲ ಅನೇಕರಿಗೆ ಕಾಣುತ್ತಿರಬಹುದು. ಮನಸ್ಸಿನ ಚರಿತ್ರೆ ತಿಳಿಯಬೇಕಾದರೆ ಮನಸ್ಸಿನ ಭಾಷೆಯ ಬಗ್ಗೆ ತಿಳಿಯಲೇಬೇಕು. ಮನಸ್ಸಿನ ಭಾಷೆಯ ಚರಿತ್ರೆ ಎಂದರೆ ಮನುಷ್ಯನ ಚರಿತ್ರೆ ಎಂದೇ ಭಾವಿಸಬೇಕು. ಅವ್ಯಕ್ತ ಚರಿತ್ರೆಗೆ ಬೇಕಾದ ಮುಖ್ಯ ಆಕರಗಳು ನೈಸರ್ಗಿಕ ಸಂಸ್ಕೃತಿಯ ಆಚರಣೆಗಳು ಹಾಗು ಆ ಆಚರಣೆಗಳ ಸುಪ್ತಪ್ರಜ್ಞೆಗಳು. ಸುಪ್ತಪ್ರಜ್ಞೆಯನ್ನು ಒಂದೇ ಸ್ಥಿತಿಯಲ್ಲಿ ನೋಡಲಾಗದು. ಅದು ಕೂಡ ಮಿಲಿಯಾಂತರ ವರ್ಷಗಳಲ್ಲಿ ವಿವಿಧ ಸ್ತರಗಳಲ್ಲಿ ವೈವಿಧ್ಯ ಘಟ್ಟಗಳನ್ನು ಉಳಿಸಿಕೊಂಡಿದೆ. ಆದರೆ ಸುಪ್ತ ಪ್ರಜ್ಞೆಯ ತಳದ ಅದೇ ರೀತಿಯ ಬೇರೆ ಬೇರೆ ಅವತಾರಗಳು ನಮ್ಮ ಆಧುನಿಕ ಪ್ರಜ್ಞೆಗೆ ಈತನಕ ಬಂದಿಲ್ಲ. ಲಿಪಿಗೊಂಡ ಆಧುನಿಕ ಭಾಷೆಗಳು ತುಂಬ ಸೀಮಿತವಾದವು. ಕೇವಲ ಐದುಸಾವಿರ ವರ್ಷಗಳ ಚರಿತ್ರೆ ಮಾತ್ರ ಭಾಷೆಗಳಿಗಿದೆ. ಈ ಅವಧಿಯ ಆಚೆಗೆ ಇದ್ದ ಭಾಷೆಗಳನ್ನು ಭಾಷೆ ಎಂದು ಕರೆಯಲಾಗದು ಎಂದು ಭಾಷಾ ಪಂಡಿತರು ನಿರಾಕರಿಸಬಹುದು. ನನ್ನ ಮಟ್ಟಿಗೆ ಆಚರಣೆಗಳ ಭಾಷೆಯೇ ಅತ್ಯಂತ ಸಂಕೀರ್ಣವಾದದ್ದು ಹಾಗು ಅರ್ಥದ ಪರಿಮಿತಿಯ ಆಚೆಗಿನ ನೈಸರ್ಗಿಕ ಅಭಿವ್ಯಕ್ತಿಯ ಆತ್ಯಂತಿಕ ಸ್ಪಂದನೆ ಎಂದೇ ಹೇಳಬೇಕಾ ಗುತ್ತದೆ. ಭಾಷೆಗಳು ವಿಕಾಸವಾದದ್ದು ಅರ್ಥದಿಂದಲ್ಲ. ಸ್ಪಂದನೆ, ಸಂವೇದನೆ, ಭಾವನೆ, ತಾದ್ಯಾತ್ಮದಿಂದ ಮಾತ್ರ ಭಾಷೆಗಳು ವಿಕಾಸವಾಗಿವೆ. ಅರ್ಥ ಎಂಬುದು ಕೇವಲ ಮೂರುನಾಲ್ಕು ಸಾವಿರ ವರ್ಷಗಳ ಒಳಗಿನ ವ್ಯಾಪಾರ. ಅರ್ಥದಿಂದ ಭಾಷೆಗಳು ಕಿರಿದಾದವೇ ಹೊರತು ಬೆಳೆದಿಲ್ಲ. ನಾಗರಿಕತೆಯ ವಕ್ತಾರರಾದ ಭಾಷೆಗಳು ಸಾಮ್ರಾಜ್ಯಗಳನ್ನು ಭಜಿಸಿದವು. ಧರ್ಮದ ಯಾಜಮಾನ್ಯ ಮೌಲ್ಯಗಳು ನಿರ್ದೇಶನದ ಅಂಕುಶದಲ್ಲೇ ಸಿಲುಕಿದವು. ಸಾಮ್ರಾಜ್ಯಗಳ ಚರಿತ್ರೆಯನ್ನು ಕೊಂಡಾಡಿದ ಭಾಷೆಗಳು ಸಹಜ ಸಾವಯವ ನೈಸರ್ಗಿಕ ಸಂಬಂಧದಿಂದ ದೂರವಾದ ಕಾರಣದಿಂದಲೇ ಅವು ಆಧುನಿಕತೆಗೆ ಬರಬರುತ್ತ ಅರ್ಥದ ಯಾಜಮಾನ್ಯ ರಾಜಕಾರಣದ ಕಡೆಗೆ ಸಾಗಿದವು.

ಮಂತ್ರ ವಿದ್ಯೆಯ ಬಗ್ಗೆ ಈಗಿನ ಕಾಲದ ಜಿಜ್ಞಾಸೆಗಳು ಮಾನವಶಾಸ್ತ್ರೀಯವಾಗಿ ಬೇರೆ ಇವೆ. ಮಂತ್ರಾಚರಣೆಗಳು ಆದಿಮ ಭಾಷೆಯ ಅಭಿವ್ಯಕ್ತಿಗಳು. ವ್ಯಕ್ತಿಯ ಮಹತ್ ಸಾಧನೆಯ ಯತ್ನದ ವಿಫಲ ಪ್ರಯೋಗಗಳು. ಮಂತ್ರಾಚರಣೆಯ ಶ್ಲೋಕಗಳು ಮುಂದೆ ಬೇರೊಂದು ರೂಪ ಪಡೆದದ್ದೂ ಇದೆ. ಪ್ರಾಚೀನ ಮಂತ್ರ ವಿದ್ಯೆಯು ನಿಸ್ಸಂದೇಹವಾಗಿ ಅಖಂಡಪ್ರಜ್ಞೆಯಲ್ಲಿ ತನ್ನ ಚಹರೆಯನ್ನು ಸ್ಥಾಪಿಸಿಕೊಳ್ಳುವ ಭಾಷೆಯ ಸಾಧ್ಯತೆಯೇ ಆಗಿತ್ತು. ಆಧುನಿಕ ತಂತ್ರಜ್ಞಾನದ ಭಾಷೆಗಳು ಭಾಷೆಗೆ ಇರುವ ಧ್ಯಾನದ ಆವರಣದಿಂದ ಆಚೆಗೆ ಬಂದು ಬಹುಕಾಲವೇ ಆಗಿಹೋಗಿದೆ. ವರ್ತಮಾನದಲ್ಲಿ ಸಂಕುಚಿತ ಭಾಷಿಕ ವಿನ್ಯಾಸಗಳಲ್ಲಿ ಸಿಲುಕಿ ಮಾನವರ ಮಹತ್ ಸಂವಹನವನ್ನು ಹುಡುಕುವುದು ಅನೇಕರಿಗೆ ಅಸಂಗತವಾಗಿ ಕಂಡರೆ ಅಚ್ಚರಿಯೇನಿಲ್ಲ. ಯುರೋಪಿನಲ್ಲಿ ಪುನರುಜ್ಜೀವನ ಉಂಟಾದ ಬಗ್ಗೆ ನಮಗೆಲ್ಲರಿಗೂ ಅಭಿಮಾನವಿದೆ ನಿಜ. ಆದರೆ ಈ ಪುನರುಜ್ಜೀವನದ ಕಾಲಘಟ್ಟದಲ್ಲಿಯೇ ಪಶ್ಚಿಮವು ಮನುಷ್ಯರ ಮಹತ್ ಸಂವಹನದ ನೈಸರ್ಗಿಕ ಸಂಸ್ಕೃತಿಯ ಬಂಧದಿಂದ ಬಿಡಿಸಿ ವ್ಯಕ್ತಿ ಮುಕ್ತಿಯ ಜ್ಞಾನಕ್ರಮಗಳ ಕಂಬಗಳಿಗೆ ಮನುಷ್ಯರನ್ನು ಕಟ್ಟಿಹಾಕಿದ್ದುದು. ಅಪಾರ ಸಾಧ್ಯತೆಯ ಜ್ಞಾನ ಪರಂಪರೆಗಳು ನನ ವಿನ್ಯಾಸದಲ್ಲಿ ಚೆಂದ ಕಂಡರೂ ಅವು ವ್ಯಕ್ತಿನಿಷ್ಠ ಜ್ಞಾನದ ವೃತ್ತಗಳಲ್ಲೇ ಸುತ್ತುವ ಮಿತಿಗಳಿಗೆ ಒಳಗಾದವು. ಚರಿತ್ರೆಗೆ ಹೊಸ ನೀರು ಹರಿದು ಬರಬೇಕು. ಪಶ್ಚಿಮದ ಪುನರುಜ್ಜೀವನ ಒಂದು ಅಮೋಘ ಯತ್ನ ಎಂದೇ ಎಲ್ಲರೂ ಭಾವಿಸಲಾಗಿದೆ. ಅದು ಸರಿ ಎಂಬುದು ಅಂದಿಗೆ ಸರಿ. ಜ್ಞಾನ ಪರಂಪರೆಗಳು ಭಿನ್ನ ದಾರಿ ತುಳಿಯಲು ಅವಕಾಶವಾಯಿ ತಾದರೂ ವ್ಯಕ್ತಿಕೇಂದ್ರಿತ ಆಧುನಿಕ ಚಿಂತನೆ ಮೊಳತದ್ದೇ ಅಲ್ಲಿನ ಆ ಬಗೆಯ ಅರಿವಿನ ದಾರಿಯಿಂದ. ಒಂದು ಕಾಲದ ಅರಿವು ಅಂದಿನ ವರ್ತಮಾನಕ್ಕೆ ವರವಾಗಿ ಪರಿಣಮಿಸಿದ್ದರೆ ತದನಂತರದ ಕಾಲಮಾನಕ್ಕೆ ಅದು ತೊಡಕಾಗುವ ದಾರಿಗೂ ಕೊಂಡೊಯ್ದಿರುತ್ತದೆ. ಆಧುನಿಕ ಭಾಷೆಗಳು ಜ್ಞಾನ ಪರಂಪರೆಗಳನ್ನು ವ್ಯಕ್ತಿವಿಶಿಷ್ಟ ಕಾಣ್ಕೆಯಿಂದ ಭಾವಿಸುತ್ತವೆ. ನಿಸರ್ಗವನ್ನು ಮಾನವಕೇಂದ್ರಿತವಾಗಿ ಗ್ರಹಿಸಲು ಬಂದದ್ದು ಇದರಿಂದಲೇ. ಧರ್ಮಪೂರ್ವ ಮಂತ್ರ ವಿದ್ಯೆ ಯಲ್ಲಿ ನಿಸರ್ಗವನ್ನು ಮಾನವಕೇಂದ್ರಿತ ದೃಷ್ಟಿಯಿಂದಲೇ ನೋಡಲಾಗಿತ್ತಾದರೂ ಮುಂದೆ ಅದು ವಿಫಲವಾಯಿತು. ಧರ್ಮಗಳು ಉದಿಸಿದಾಗ ಧರ್ಮದ ಅವತಾರ ಪುರುಷರೂ ಮಾನವರ ಸೃಷ್ಟಿಯೇ ಆಗಿದ್ದರೆಂಬುದನ್ನು ಮರೆಯಲಾಗದು. ಜ್ಞಾನ ಪರಂಪರೆಗಳು ಹೀಗೆ ಆರಂಭದಿಂದಲೂ ಸಮಷ್ಟಿಯನ್ನು ಬಳಸಿಕೊಂಡು ವ್ಯಕ್ತಿವಿಶಿಷ್ಟತೆಯಿಂದಲೇ ವ್ಯಕ್ತವಾಗುವ ಸ್ವಭಾವವನ್ನು ಗಳಿಸಿವೆ. ಈ ದಿಸೆಯಲ್ಲಿ ಭಾಷೆಗಳು ಭೌತಿಕವಾಗಿಯು ನಿರ್ದಿಷ್ಟಗೊಂಡು ಲಿಪಿಗೊಂಡವು. ಅರ್ಥವೂ ತರ್ಕವಿಲ್ಲದೆ ಆರೋಪಿಸಲ್ಪಟ್ಟು ಇದರ ಅರ್ಥವನ್ನು ಇದು ಹೋಲುತ್ತದೆ, ಹೊಂದುತ್ತದೆ, ಅನ್ವಯಿಸುತ್ತದೆ ಎಂದು ಭಾವನಾತ್ಮಕ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಇಂತಹ ಭಾಷೆಯ ಗುಣದಿಂದ ಚರಿತ್ರೆಯೂ ಜ್ಞಾನಪರಂಪರೆಯೂ ಅದೇ ಬಗೆಯ ಗುಣಕ್ಕೆ ಅಳವಡಿಸಲ್ಪಟ್ಟಿತು. ಹೆಗೆಲ್‌ನ ಭೌತವಾದದಲ್ಲೂ ಈ ಬಗೆಯ ಭೌತಸ್ವರೂಪ ಮತ್ತು ಅರ್ಥಸ್ವರೂಪಗಳ ಜಿಜ್ಞಾಸೆಯಿದೆ. ಭಾಷೆಗಳು ಸಮಷ್ಟಿಧಾರೆಯವು ಎಂಬುದು ಮೇಲುನೋಟಕ್ಕೆ ನಿಜವಿದ್ದರೂ ಆಧುನಿಕತೆಯ ಕಡೆಗೆ ಸಾಗುತ್ತ ಬಂದಂತೆಲ್ಲ ಅವು ವ್ಯಕ್ತಿನಿಷ್ಠ ಅರ್ಥಗಳ ಕಡೆಗೇ ವಿಕಾಸವಾಗುತ್ತಿವೆ. ವ್ಯಕ್ತಿ ಭಾಷೆ, ವರ್ಗ ಭಾಷೆ, ಲಿಂಗಸಂಬಂಧಿ ಭಾಷೆಗಳು ಆಯಾ ಜಾತಿ, ವರ್ಣ, ಸಮಾಜಗಳ ಹಿನ್ನೆಲೆಯಲ್ಲಿ ಸೀಳಿಕೊಳ್ಳು ವುದು ಜ್ಞಾನ ಪರಂಪರೆಗಳ ಲೋಕದೃಷ್ಟಿಯನ್ನು ವ್ಯಕ್ತಿವಿಶಿಷ್ಟತೆಯ ಕಡೆಗೇ ಒಳಗಾಗುವಂತೆ ಮಾಡುತ್ತವೆ. ಇದು ಸರಿ ತಪ್ಪಿನ ಮಾತಲ್ಲ. ಅಖಂಡವಾದ ನೈಸರ್ಗಿಕ ನಿಷ್ಠೆಯ ಆದಿಮ ಭಾಷೆಯ ಸ್ವರೂಪದಲ್ಲಿ ಕಾಲ ಮತ್ತು ಅವಕಾಶಗಳು ಅನಂತವಾಗಿ ಭಾವಿಸಲ್ಪಡುತ್ತಿದ್ದವು. ಅನಂತವನ್ನು ಬಿಡಿಯಾಗಿ ನೋಡುವುದು ತಪ್ಪಲ್ಲವಾದರೂ ಹಾಗೆ ಭಾವಿಸುವ ಪರಿಕ್ರಮದಿಂದ ಮನುಷ್ಯರ ಮಹತ್ ಸಂವಹನ ಸಾಧ್ಯವಾಗದೆ ಅದು ಕಿರುಬಿಂಬಗಳಲ್ಲಿ ಮಾತ್ರ ಕಾಣುವಂತಾಗುತ್ತದೆ.

ಇದರಿಂದ ಮಾನವರ ಅನುಭಾವಗಳನ್ನು ಭಾಷೆ ಹೇಗೆ ವ್ಯಕ್ತಪಡಿಸಬಹುದು? ಭಾಷೆಯೇ ಮನುಷ್ಯರ ಕೊನೆಯ ಉಪಕರಣವಿರಬಹುದು. ಇಂತಹ ಭಾಷೆಯು ವ್ಯಕ್ತಿನಿಷ್ಠವಾಗುತ್ತಿ ದ್ದಂತೆಲ್ಲ ಅದು ವಿಕಾಸದ ಆಚೆ ತುದಿಯನ್ನು ಹೇಗೆ ತಲುಪಬಲ್ಲದು. ನಾಳೆಯ ಕಾಲದ ಅಸ್ತಿತ್ವಕ್ಕೆ ಬೇಕಾದ ಭಾಷೆಯು ವ್ಯಕ್ತಿಕೇಂದ್ರಿತವಾಗಿಯೇ ಮುಂದುವರಿದರೆ ಅದಕ್ಕೆ ಬದುಕುಳಿ ಯುವ ಸಾಧ್ಯತೆ ಇರುತ್ತದೆಯೆ? ಈಗಾಗಲೇ ಅನೇಕ ಭಾಷೆಗಳು ಆಧುನಿಕ ಜೀವನಗಳಲ್ಲಿ ಸಿಲುಕಿ ಕಳೆದುಹೋದರೆ ಅದನ್ನು ಸಹಜ ಸಾವಯವ ಸಾವು ಎಂದು ಒಪ್ಪಿಕೊಳ್ಳಬಹುದು. ಸಾವು ಕೂಡ ನಿಸರ್ಗದ ಸಹಜ ವಿಕಾಸದಲ್ಲಿ ಜೀವಂತವಾದುದೇ. ಭಾಷೆಯೊಂದು ಮೃತವಾದರೆ ಮಾನವ ಸಮೂಹದ ನಾಳೆಯ ಬಾಗಿಲುಗಳು ಮುಚ್ಚಿದಂತೆ. ಚರಿತ್ರೆ ಅಲ್ಲಿಗೆ ಕೊನೆಗೊಂಡಂತೆ. ಅಸಹಜ ಬೆಳವಣಿಗೆ ವಿಕಾಸದಲ್ಲಿ ತೊಡಕು ಮಾಡುತ್ತದೆ. ಹೀಗಾಗಿಯೆ ಆಧುನಿಕ ವಿವೇಕದ ವ್ಯಕ್ತಿವಿಶಿಷ್ಟ ಜಾಗೃತಿಯು ಭಾಷೆಗಳನ್ನು ನಾಳಿನ ವಿಕಾಸದ ಕಡೆ ಅರ್ಥಪೂರ್ಣವಾಗಿ ಕೊಂಡೊಯ್ಯಲು ಆಗದಂತೆ ತಡೆಯುತ್ತಿರುವುದು. ಭಾಷೆಯಿಂದ ವ್ಯಕ್ತವಾಗುವ ಜ್ಞಾನಕ್ರಮ ಗಳು ವಿಕಾಸದಲ್ಲಿ ಅನಂತವಾದ ಭಾವನೆಗಳ ಜೊತೆಯೇ ಬೆಳೆಯಬೇಕು. ಸುಳ್ಳುಗಳಿಂದಲೇ ಭಾಷೆಗಳು ಮೃತವಾಗುವುದು. ವ್ಯಕ್ತಿವಾದಿ ಹಠ ತರ್ಕಬದ್ಧವಾಗಿಯೇ ಸುಳ್ಳನ್ನು ಕಟ್ಟಬಲ್ಲದು. ಇದರಿಂದ ಭಾಷೆ ವಿಸ್ತಾರವಾಗದು. ಒಂದೇ ನಿಜವನ್ನು ಹತ್ತುರೀತಿ ತೋರುವುದು ಸರಿಯೇ ಹೊರತು ಒಂದು ತಪ್ಪನ್ನು ಹತ್ತು ರೀತಿ ತೋರುವುದು ತರವಲ್ಲ. ಆಧುನಿಕತೆಯ ಜೀವನಕ್ಕೆ ಒಗ್ಗಿದ ಭಾಷೆಗಳು ಹೆಚ್ಚು ಹೆಚ್ಚು ಸುಳ್ಳುಗಳನ್ನು ಸೃಷ್ಟಿಸುವುದರಲ್ಲಿ ಪ್ರಭಾವಿಯಾಗಿರುತ್ತವೆ. ಅಂದರೆ ಚರಿತ್ರೆಯ ನಿರೂಪಣೆ ಕೂಡ ನಾಳಿನ ಭಾಷೆಯಲ್ಲಿ ಮತ್ತಷ್ಟು ಸುಳ್ಳುಗಳನ್ನು ಬಲವಾಗಿಯೇ ಬಿತ್ತಲು ಅವಕಾಶವಾದಂತಾಗುತ್ತದೆ. ಈ ಅವಕಾಶ ಚಲನಶೀಲತೆಗೆ ಬೇಕಾದ ಪರಿಸರವಾಗದು. ಮರಳಿ ನಿಸರ್ಗದ ಅನಂತ ಸಾಧ್ಯತೆಯ ಅಂಗವಾಗಿಯೇ ಭಾಷೆ ಮತ್ತು ಮಾನವ ಭಾವನೆಗಳು ಜೊತೆಗೂಡಬೇಕು. ಆ ನಿಟ್ಟಿನಲ್ಲಿ ಮನುಷ್ಯರ ಜೈವಿಕ ಭಾಷೆಗಳ ಆಳಪಾತಾಳಗಳ ಸುಪ್ತಪ್ರಜ್ಞೆಗಳ ಆಚೆಗಿನ ಡಿ.ಎನ್.ಎ. ಜೀವಾಂಶದಲ್ಲಿ ಸಂವಹನ ಅರ್ಥಸಾಧ್ಯತೆ ವಿಸ್ತಾರವಾಗಬೇಕು.

ಸುಪ್ತಪ್ರಜ್ಞೆಯ ಅವ್ಯಕ್ತ ಪಯಣ ವಿಕಾಸದ ಜೊತೆಗಿನ ಮಿಲಿಯಾಂತರ ವರ್ಷಗಳ ಸಂವಹನದ ಬೇರೆ ಬೇರೆ ಅವತಾರಗಳನ್ನೆಲ್ಲ ತೋರಬಲ್ಲದು. ಇದು ಹೇಗೆ ಎಲ್ಲಿಂದ ಯಾವ ಆಕರಗಳಿಂದ ಪ್ರಜ್ಞೆಯ ಆಳಕ್ಕಿಳಿಯಬೇಕೆಂಬುದಕ್ಕೆ ಸಿದ್ಧಮಾದರಿಗಳಿಲ್ಲ. ಸಂವೇದನೆಯ ಹಂದರದಲ್ಲಿ ಆಕಾಶದ ವಿಸ್ತಾರವನ್ನು ತುಂಬಿಕೊಳ್ಳಬಹುದು ಎಂದಾದರೆ ಗತದ ಆಳಕ್ಕೆ ಇಳಿದು ಮಾನವರ ಮಹತ್ ಸಂವಹನೆಯ ಜಾಡನ್ನು ಹಿಡಿಯಲಾಗದೇನು? ಎಲ್ಲವೂ ಸಾಧ್ಯವಿದೆ. ಇದರ ದಾರಿಯಲ್ಲೇ ಅವ್ಯಕ್ತ ಚರಿತ್ರೆಯ ಮೇಲ್ಪದರವನ್ನು ಶೋಧಿಸಲು ಈ ಕೃತಿಯಲ್ಲಿ ಯತ್ನಿಸಲಾಗಿದೆ. ಅನೇಕ ಪರಿಯ ಮಾನವಿಕ ವಿಜ್ಞಾನಗಳ ಅನುಸಂಧಾನದ ಮೂಲಕವೇ ಸೃಜನಶೀಲ ಧ್ಯಾನದಿಂದಲೇ ಇರುವ ತರ್ಕಗಳ ಹಂಗುಮೀರಿ ಬಹುರೂಪಿ ನಿರ್ವಚನದ ನಿರೂಪಣೆಯನ್ನು ಇಲ್ಲಿ ಸಂರಚಿಸಿರುವೆನು. ಕನ್ನಡದ ಓದುಗಲೋಕ ಇಂತಹ ನಿರೂಪಣೆಗಳನ್ನು ಮೆಚ್ಚಿಕೊಂಡಿದ್ದು ಬಹಳ ಕಡಿಮೆ. ಬಹುಪಾಲು ಎಲ್ಲ ಮಾನವಿಕ ವಿಜ್ಞಾನ ಸಂಬಂಧಿ ಬರಹಗಳು ಆಧಾರ ಮಾದರಿಯಲ್ಲಿ ಅರ್ಥದ ಹುಡುಕಾಟವನ್ನು ನಡೆಸುತ್ತವೆ. ಇಲ್ಲಿ ಅರ್ಥದ ಬೆನ್ನೇರಿ ಹೋಗಲು ನಾನು ಯತ್ನಿಸಿಲ್ಲ. ಭ್ರಷ್ಟಗೊಂಡ ಭಾಷೆ ಮತ್ತು ಭಾವಗಳಿಂದ ಬೆಳೆದ ಆಧುನಿಕತೆಯ ಅರ್ಥದಿಂದ ನಾಳಿನ ಲೋಕ ಪಡೆಯಬೇಕಾದದ್ದೂ ಏನೂ ಇಲ್ಲ. ಹೀಗಾಗಿಯೇ ಅರ್ಥನಿರಾಕರಣೆಯ ಈ ನಿರೂಪಣೆಗಳಲ್ಲಿ ಮಾನವ ಸಾಧ್ಯತೆಯ ಚರಿತ್ರೆಯ ಮಹತ್ ಸಂವಹನದ ದಾರಿಗಳನ್ನು ಅರಿಯುವ ದಿಕ್ಕಿಗೆ ಮಾತ್ರ ಗಮನ ಕೇಂದ್ರೀಕರಿಸಿರುವೆನು. ನನ್ನ ಈ ಯತ್ನ ಕೆಲವರಿಗಾದರೂ ಒಪ್ಪಿತವಾದರೆ ನನ್ನ ಸೃಜನಶೀಲ ಧ್ಯಾನದ ಪರಿಶ್ರಮ ಮತ್ತಷ್ಟು ಸೃಜನಶೀಲವಾಗುತ್ತದೆ. ಓದುಗರು ಈ ಬರಹವನ್ನು ವಿಶೇಷವಾದ ಏಕಾಗ್ರತೆಯಿಂದ ಪ್ರವೇಶಿಸಬೇಕೆಂದು ಎಂದಿನಂತೆಯೇ ವಿನಂತಿಸುವೆ.