ಹೊಂದಾಣಿಕೆಯ ಅಸಂಗತಗಳು

ಊರು ಬೇಡರು ಮಾತ್ರ ಮ್ಯಾಸ ಬೇಡರಿಗಿಂತ ಒಂದಿಷ್ಟು ಪ್ರತಿರೋಧ ಶಕ್ತಿಯನ್ನು  ವಿಸ್ತರಿಸಿಕೊಂಡು ವಿಜಯನಗರ ಸಾಮ್ರಾಜ್ಯದಲ್ಲಿ ತಮಗೆ ದತ್ತಕವಾಗಿದ್ದ ಸ್ಥಾನಮಾನವನ್ನು ಸಾಂಸ್ಕೃತಿಕವಾಗಿ ಆಚರಿಸಿಕೊಂಡು ಹಂಪಿ ಪರಿಸರದಲ್ಲಿ ರಕ್ಷಣೆಯನ್ನು ಪಡೆದುಕೊಂಡರು. ಈ ರಕ್ಷಣೆ ಕೂಡ ಸ್ವಯಂ ಘೋಷಿತ ರಕ್ಷಣೆಯಾಗಿತ್ತೇ ವಿನಃ ಆಗಾಗಲೇ ಸ್ಥಾಪಿತವಾಗಿದ್ದ ವಕ್ಕಲು ಸಮುದಾಯಗಳ ವಾಸ್ತವ ಅಧಿಕಾರವನ್ನು ಮೀರುವ ಹಂತದ್ದಾಗಿರಲಿಲ್ಲ. ವೀರಶೈವ ಸಮಾಜ ಆ ವೇಳೆಗಾಗಲೆ ತನ್ನ ಯಾಜಮಾನ್ಯವನ್ನು ಎಲ್ಲ ಹಂತದಲ್ಲು ಹಂಪಿಯ ಪರಿಸರದಲ್ಲಿ ಸ್ಥಾಪಿಸಿ ಆಗಿತ್ತು. ಹಾಗೆಯೇ ಕುರುಬ ಸಮುದಾಯ ಕೂಡ ಭೂಮಿಯ ಮೇಲಿನ ಅಧಿಕಾರವನ್ನು ತಕ್ಕುದಾಗಿಯೆ ಸ್ಥಾಪಿಸಿಕೊಂಡಿತ್ತು. ವಾಸ್ತವ ಅಧಿಕಾರವನ್ನು ಪಡೆಯದ ಸಾಂಸ್ಕೃತಿಕ ಸಂಪತ್ತು ಎಷ್ಟೇ ಇದ್ದರೂ ಅದು ವರ್ತಮಾನದಲ್ಲಿ ಆಯಾ ಸಮುದಾಯಗಳ ಹಿತವನ್ನು ಕಾಯಲಾರದು. ಪಶುಪಾಲಕ ಸಮುದಾಯಗಳಲ್ಲಿ ಹಿಂದೆ ಬಿದ್ದ ಗೊಲ್ಲ ಹಾಗೂ ಮ್ಯಾಸ ಬೇಡ ಸಮಾಜಗಳು ಸಾಂಸ್ಕೃತಿಕವಾಗಿ ಅನನ್ಯತೆಯನ್ನು ಸಾಧಿಸಿಕೊಂಡರೂ ವಾಸ್ತವ ಸಾಮಾಜಿಕ ವ್ಯವಸ್ಥೆಯಲ್ಲಿ ತಕ್ಕ ಅವಕಾಶವನ್ನು ಪಡೆಯಲಾರದೇ ಹೋದವು. ಇದಕ್ಕೆ ಮೇಲೆ ಪ್ರಸ್ತಾಪಿಸಿದ್ದ ಜಾತಿ ವ್ಯವಸ್ಥೆ ಕಾರಣ ಎಂದು ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಾದ ಅವಶ್ಯಕತೆಯಿಲ್ಲ. ಆದರೆ ಜಾತಿ ವ್ಯವಸ್ಥೆಯ ರಚನೆಯ ಬಲಕ್ಕಿಂತಲೂ ವಿಕಾಸದ ಹಂತದಲ್ಲಿ ಸೂಕ್ತ ಆಯ್ಕೆಯನ್ನು ಮಾಡಿಕೊಳ್ಳದ ಯಾವುದೇ ಜಾತಿಯು ತನ್ನ ಆಯ್ಕೆಯ ಒಪ್ಪಂದಗಳಿಂದಲೆ ತನ್ನ ಸ್ಥಾನವನ್ನು ನಿರ್ಧಸಿರಿಕೊಳ್ಳಬೇಕಾಗಿರುತ್ತದೆಯೇ ವಿನಃ ಜಾತಿ ಅಂಶ ಒಂದೇ ಸಾಮಾಜಿಕ ವ್ಯವಸ್ಥೆಯ ಎಲ್ಲ ರೂಪವಿರೂಪಗಳನ್ನು ಗಟ್ಟಿ ಗೊಳಿಸುವುದಿಲ್ಲ. ಹಾಗೆ ನೋಡಿದರೆ ವೀರಶೈವ ಎಂಬ ಜಾತಿಯೆ ಮಧ್ಯಕಾಲೀನ ಸಮಾಜ ಪೂರ್ವದಲ್ಲಿ ಇರಲಿಲ್ಲ. ಮಧ್ಯಕಾಲೀನ ಸಮಾಜವು ಹೊಸ ಬಗೆಯಲ್ಲಿ ಜಾತಿ ಪದ್ಧತಿಯನ್ನೆ ನಕರಿಸಿ ಯಾರ‍್ಯಾರದೊ ರೂಪವನ್ನೆಲ್ಲ ಅಳಿಸಿ ಯಾರ‍್ಯಾರಿಗೊ ಯಾವುದಾವುದೊ ಸಾಮಾಜಿಕ ಸ್ಥಾನ ನೀಡಿ ವರ್ಣಾಶ್ರಮ ಜಾತಿ ಪಟ್ಟಿಯನ್ನೆ ವಿರಾಟ್‌ಸ್ವರೂಪದಲ್ಲಿ ಪರಿಷ್ಕರಿಸಿತು. ಮಧ್ಯಕಾಲೀನ ಕರ್ನಾಟಕ ಏಕೆ ಇಡೀ ಭಾರತವೆ ಸ್ಥಳೀಯವಾಗಿ ಜಾತಿ ವ್ಯವಸ್ಥೆಯ ಪುನರ್‌ನವೀಕರಣಕ್ಕೆ ಆಗಾಧವಾಗಿ ತೊಡಗಿತು. ಇದರಿಂದಾಗಿಯೆ ಕೇವಲ ಮೂರುನಾಲ್ಕು ಜಾತಿಗಳಿದ್ದ ಸಮಾಜ ಐದು ಸಾವಿರ ಜಾತಿಗಳಾಗಿ ಸೀಳಿಕೊಂಡಿತು.

ಈ ಪರಿಸ್ಥಿತಿಯಲ್ಲಿ ಪಶುಪಾಲಕ ಸಮುದಾಯಗಳು ತಮಗೆ ತಿಳಿದಂತೆಲ್ಲ ಜಾತಿ ಶ್ರೇಣಿಯ ಪೈಪೋಟಿಗೆ ಧುಮುಕಿ ಸ್ವತಃ ತಮ್ಮ ಒಳ ಕುಟುಂಬವನ್ನೆ ಸಿಗಿದುಕೊಂಡು ಜಾತಿಯ ಅವತಾರ ಗಳಲ್ಲಿ ಬದುಕುಳಿಯುವ ಅಸ್ವಾಭಾವಿಕ ಜೀವನ ಕ್ರಮಗಳನ್ನು ಬೆಳೆಸಿಕೊಂಡವು. ಇದರಿಂದಲೇ ಸಮಾಜಗಳು ಯಾವತ್ತೂ ಕೂಡ ಸ್ಥಾನಮಾನದ ಪೈಪೋಟಿಯಲ್ಲೇ ಸಂಘರ್ಷಕ್ಕೆ ಇಳಿಯುತ್ತಿ ರುವುದು. ಮಧ್ಯಕಾಲೀನ ಸಮಾಜದಲ್ಲಿ ಉಂಟಾದ ಈ ಪರಿಯ ಸೀಳುವಿಕೆಯ ಸಾಮಾಜಿಕ ವ್ಯಾಧಿಯು ಇಪ್ಪತ್ತೊಂದನೆ ಶತಮಾನದ ತನಕ ಬೆಳೆಯುತ್ತಲೆ ಬಂದಿದೆ. ಇವನ್ನೆಲ್ಲ ಪ್ರತಿಫಲಿ ಸುತ್ತಿರುವ ಸಂಸ್ಕೃತಿಯ ವೈಪರೀತ್ಯಗಳನ್ನು ಸಾಂಸ್ಕೃತಿಕ ಅನನ್ಯತೆ ಎಂದು ಭಾವಿಸುವುದು ಸಮಂಜಸವಲ್ಲ. ಪಶುಪಾಲಕ ವೃತ್ತಿಯೆ ಇಂದು ಮರೆತು ಹೋಗುತ್ತಿರುವ ಜೀವನವಾಗುತ್ತಿದೆ. ಆದರೆ ಆ ಬಗೆಯ ಸಂಸ್ಕೃತಿ ಪಳಿಯುಳಿಕೆಯಂತೆ ಹೊಸ ಗುರುತಿನ ಜೊತೆ ಬೆರೆಯುತ್ತಿದೆ. ಎಲ್ಲಿಯ ಪಶುಪಾಲಕ ಚಹರೆ ಎಲ್ಲಿಯ ಇಪ್ಪತ್ತೊಂದನೆ ಶತಮಾನದ ಒಳ ಜಾತಿಯ ರಾಜಕೀಯ ಚಹರೆ ಎಂದು ಯಾವುದನ್ನು ಯಾವುದರ ಅರ್ಥದ ಜೊತೆ ಬೆಸೆಯುವುದು ಎಂಬುದೇ ಗೊತ್ತಾಗದಂತೆ ಸಂಕೀರ್ಣ ರಾಜಕೀಯ ಸಂಸ್ಕೃತಿ ವ್ಯಾಪಕವಾಗಿ ಹಬ್ಬುತ್ತಿದೆ. ಕುರುಬ ಸಮುದಾಯ ಇಂದು ರಾಜಕೀಯ ಸಮುದಾಯವಾಗಲು ತಕ್ಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಅದು ಪ್ರಬಲ ಸಾಮ್ರಾಜ್ಯದ ಶಕ್ತಿಯ ಜೊತೆ ಲೀನವಾಗಿ ಬಿಟ್ಟಿತ್ತು. ಈಗ ಅದು ವಕ್ಕಲು ಸಮಸುದಾಯಗಳ ನಡುವೆಯೆ ಪೈಪೋಟಿಗೆ ಇಳಿದಿದೆ. ಈ ಪ್ರಕ್ರಿಯೆಗಳೆಲ್ಲವೂ ಬಹಳ ಬದಲಾಗಿವೆ ಎಂದು ಭಾವಿಸ ಬೇಕಾದ್ದಿಲ್ಲ. ಪ್ರಭುತ್ವದ ಜೊತೆಗಿನ ಸಖ್ಯಕ್ಕಾಗಿ ಅಥವಾ ತಾನೆ ಆಧಿಪತ್ಯವಾಗುವ ಅವಕಾಶ ಕ್ಕಾಗಿ ನಿರಂತರವಾದ ಸಮುದಾಯಗಳ ನಡುವಿನ ಅವ್ಯಕ್ತ ಸಂಘರ್ಷವು ಪಶುಪಾಲಕ ಸಂಸ್ಕೃತಿ ಗಳ ಆದಿ ದಿನಗಳಿಂದಲೂ ಆರಂಭವಾಗಿರುವ ಪರಿಯಾಗಿದೆ. ಬದಲಾದ ಕಾಲದಲ್ಲಿ ತಂತ್ರಗಳು ಬದಲಾಗಿ ಅಭಿವ್ಯಕ್ತಿಯ ವಿಧಾನ ರೂಪಾಂತರಗೊಂಡಿದೆಯಾದರೂ ಮೂಲತಃ ಪ್ರಭುತ್ವಭಾವ ಮಾತ್ರ ಸ್ಥಾಯಿಯಾಗಿಯೇ ಬೆಳೆದುಕೊಂಡು ವಕ್ಕಲು ಸಮುದಾಯಗಳಲ್ಲಿ ಸಾಗಿ ಬಂದಿರುವುದನ್ನು ಗಮನಿಸಬೇಕು. ಇದು ಕೇವಲ ಸಂಪತ್ತಿನ ಆಧಿಪತ್ಯದ ದಾಹವಾಗಿರದೆ ಇಡೀ ಸಮುದಾಯಗಳನ್ನೆ ಸಂಪತ್ತನ್ನಾಗಿ ಪರಿವರ್ತಿಸಿಕೊಳ್ಳುವ ಎಲ್ಲ ಅಧೀನ ಜಾತಿಗಳನ್ನು ಬಂಡವಾಳವನ್ನಾಗಿ ಪರಿವರ್ತಿಸಿಕೊಳ್ಳುವ ಹುನ್ನಾರದ ಸ್ವಭಾವವಾಗಿದೆ. ಅಧೀನ ಸಮಾಜ ಗಳನ್ನು ಆಳುವುದು ಆಗ ಪ್ರಬಲ ಸಮುದಾಯಗಳಿಗೆ ಸುಲಭ ತಾನೆ.

ಗಣಿಗಳಲ್ಲಿ ಹೂತು ಹೋಗುತ್ತಿರುವ ಪಶುಪಾಲಕ ಚರಿತ್ರೆ

ಹಂಪಿಯ ನೈಸರ್ಗಿಕ ಸಂಸ್ಕೃತಿಗಳ ಅವ್ಯಕ್ತ ಪಲ್ಲಟಗಳು ಈ ದಾರಿಯಲ್ಲಿ ಸಾಗಿ ಬಂದಿವೆ ಎಂದು ತೋರುವುದು ಇಲ್ಲಿನ ಕಾಳಜಿ. ಇವತ್ತಿಗೂ ಬೇಡ ಮತ್ತು ಕುರುಬ ಸಮುದಾಯಗಳು ಹಂಪಿ ಪರಿಸರದಲ್ಲಿ ಸಾಮರಸ್ಯದಿಂದಲೇ ಬದುಕು ರೂಪಿಸಿಕೊಂಡಿರುವುದು ದೀರ್ಘಕಾಲೀನ ಒಪ್ಪಂದಗಳ ಮೂಲಕವಾಗಿಯೆ. ಹಂಪಿ ಪರಿಸರದಲ್ಲಿದ್ದ ಇತರೆ ಕರಕುಶಲ ಸಮುದಾಯಗಳ ಸಂಸ್ಕೃತಿಗಳ ಸ್ವರೂಪ ಬೇರೆ ಆದ್ದರಿಂದ ಅವನ್ನೆಲ್ಲ ಇಲ್ಲಿ ವಿವರಿಸಲು ಅವಕಾಶವಿಲ್ಲ. ಒಂದು ಕಾಲಕ್ಕೆ ಅಲೆಮಾರಿಗಳಾಗಿದ್ದ ಸಮುದಾಯಗಳೆಲ್ಲ ಈಗಲೂ ಹಂಪಿಯ ಒಟ್ಟು ಪರಿಸರದಲ್ಲಿ ಬಂದು ಸೇರಿಕೊಳ್ಳುವ ಪ್ರಯತ್ನದಲ್ಲಿವೆ. ದೀರ್ಘಕಾಲೀನ ಅಲೆಮಾರಿ ಜೀವನ ನಡೆಸಿ ದಣಿದ ಸಮುದಾಯಗಳು ಈಗ ನೀರು ನೆರಳು ರೊಟ್ಟಿ ಕೇಳುತ್ತಿರುವ ಅವಸ್ಥೆಯಲ್ಲಿ ಪಶುಪಾಲಕ ಸಮುದಾಯಗಳು ಅದೇ ಹೊಸಪೇಟೆ ಮತ್ತು ಹಂಪಿಯ ನೆಲೆಯಲ್ಲಿ ಬದುಕುಳಿ ಯುವ ಕೊನೆ ಅವಕಾಶಕ್ಕಾಗಿ ಬೇಡುತ್ತಿವೆ. ಪಶುಪಾಲಕ ನಿಸರ್ಗ ಜೀವನ ಮರೆಯಾಗಿ ಗಣಿಪಾಲಕರು ಬಲಾಡ್ಯರಾಗಿ ಮೆರೆಯುತ್ತಿರುವಲ್ಲಿ ಅದೇ ಗಣಿಗಳಲ್ಲಿ ಮುಳುಗಿ ತುತ್ತು ಕೂಳಿಗಾಗಿ ಜೀವನವನ್ನೆ ಪಣವಿಡಬೇಕಾದ ಜೀವನಕ್ರಮಗಳು ವಿಕಾಸ ಪ್ರಕ್ರಿಯೆಯಲ್ಲಿ ವಿಪರ‍್ಯಾ ಸಕರವಾಗಿವೆ. ಎಲ್ಲಿಯ ಪಶುಪಾಲಕ ಸಂಸ್ಕೃತಿ ಎಲ್ಲಿಯ ಗಣಿಪಾಲಕರ ಭ್ರಷ್ಟ ಸಾಮ್ರಾಜ್ಯಶಾಹಿ ಪ್ರಜಾರೂಪ ಎಂಬ ವಿಷಾದ ನಮ್ಮನ್ನು ತಟ್ಟದೆ ಬಿಡದು. ಈ ಪ್ರಕ್ರಿಯೆಯಲ್ಲಿ ಸ್ವತಃ ವಕ್ಕಲು ಸಮುದಾಯಗಳೇ ಬೀದಿ ಪಾಲಾಗಿ ಅಲೆಮಾರಿಗಳಾಗಬೇಕಾದ ಸಂದರ್ಭ ಬಂದೊದಗಿದರೆ ಆಶ್ಚರ್ಯಪಡಬೇಕಾಗಿಲ್ಲ. ವಕ್ಕಲುತನಗ ಅವಸಾನದ ಅಂಚಿನ ಕಸುಬಾಗಿದೆ. ವಕ್ಕಲುತನ ಕ್ಕಿಂತಲೂ ಉದ್ಯಮತನವೇ ಲಾಭಕರವಾಗಿ ಕಾಣುತ್ತಿದೆ. ಹಂಪಿಯು ಗಣಿಪಾಲಕರ ಪಾಲಾಗಿದೆ. ಗಣಿ ಸಾಮ್ರಾಜ್ಯದ ಎದಿರು ಅದರ ಆದಿಮ ಕಾಲದ ಜೀವನ ಕ್ರಮ ಯಾವ ಮೌಲ್ಯಕ್ಕೂ ಸಲ್ಲದ್ದಾಗಿದೆ. ಇನ್ನು ಪಶುಪಾಲಕರ ನೆಲೆಯಾಗಿದ್ದ ಹಂಪಿಯು ಪ್ರವಾಸೋಧ್ಯಮದ ಚರಿತ್ರೆಯ ತೆರೆದ ಬಯಲಿನ ಹರಾಜಿನಂತೆ ಮಾರ್ಪಡುತ್ತಿದೆ. ಈ ವೇಗದಲ್ಲಿ ಸ್ವತಃ ಬೇಡ ಕುರುಬ ಗೊಲ್ಲ ಕರಕುಶಲ ಎಲ್ಲ ಸಮುದಾಯಗಳಿಗೂ ವಿಕಾಸ ಪಥದಲ್ಲಿ ಇದ್ದಂತಹ ಸಹಜ ಆಯ್ಕೆಗಳೇ ಇಲ್ಲವಾಗಿವೆ.

ಹಂಪಿಯ ಪಶುಪಾಲಕ ಸಂಸ್ಕೃತಿಯ ಸೌಂದರ್ಯಲಹರಿಗೆ ಈಗ ಕಾಲವಿಲ್ಲ. ಬೆಟ್ಟ ಗುಡ್ಡಗಳ ಮರೆಯಲ್ಲಿ ಗೊಲ್ಲ ಕೊಳಲ ಊದಿ ‘ಗಂಗೆಬಾರೆ ತುಂಗೆಬಾರೆ ಭದ್ರೆಬಾರೆ’ ಎಂದು ಪುಣ್ಯಕೋಟಿಯ ಭಾವಪೂರ್ಣ ಹಾಡನ್ನು ಹಾಡಲು ಅವಕಾಶವೇ ಇಲ್ಲ. ಹಂಪಿಯಲ್ಲಿ ಈಗ ಪುಣ್ಯಕೋಟಿಯೂ ಇಲ್ಲ, ‘ಹಸಿದ ವೇಳೆಗೆ ಸಿಕ್ಕಿದೊಡೆವೆಯ ವಶವ ಮಾಡದೆ ಬಿಡೆನು’ ನಾನು ಎಂದು ಹೇಳಿಯೂ ಬೆಟ್ಟದ ತುದಿಯಿಂದ ಹಾರಿ ಪ್ರಾಣ ಬಿಟ್ಟ ಹುಲಿಯೂ ಇಲ್ಲ. ಈಗ ನಮ್ಮ ವೇಷದಲ್ಲಿಯೇ ಧರ್ಮದ ಹಸು ಹುಲಿಗಳು ಸಮನಾಗಿ ಆರ್ಭಟಿಸುತ್ತಿವೆ. ಹಸು ಕಾದು ಹಾಲುಕರೆದು ಹಾಡಿದ್ದ ಯಾರೂ ಈಗ ಪಶುಪಾಲಕ ಪ್ರಾರ್ಥನೆಯಲ್ಲಿ ನಿಸರ್ಗ ವನ್ನು ಅರ್ಚಿಸುವುದಿಲ್ಲ. ಮತಧರ್ಮದ ಗುಪ್ತ ಕ್ರಿಯಾ ವಿಧಿಗಳು ಧರ್ಮಗಳ ಬಾವುಟಗಳಲ್ಲಿ ಘರ್ಜಿಸುವುದು ಮಾತ್ರ ಬೆಟ್ಟಗುಡ್ಡಗಳಲ್ಲಿ ಪ್ರತಿಧ್ವನಿಸುತ್ತಿರುತ್ತದೆ. ಪಶುಪಾಲಕರಾರೂ ಧರ್ಮದ ಅಮಲಿನಲ್ಲಿ ಯುದ್ಧ ಮಾಡಿರಲಿಲ್ಲ. ದೇವರ ಹೆಸರಲ್ಲಿ ತುಂಗಭದ್ರೆಯಲ್ಲಿ ನೆತ್ತರು ಹರಿಸಿರಲಿಲ್ಲ. ಪಶುಸಂಪತ್ತಿಗಾಗಿ, ತಮ್ಮ ಪಶುಗಳ ಆಹಾರದ ಹುಲ್ಲುಗಾವಲುಗಳಾಗಿ ಪಶುಪಾಲಕರು ಪೈಪೋಟಿಗೆ ಇಳಿದು ಒಳಪಂಗಡಗಳೊ ಕುಲಗಳೊ ಆಗಿ ದೂರ ದೂರ ವಲಸೆ ಹೋಗಿ ಸೂಕ್ತ ಆಯ್ಕೆಗಳೇ ಇಲ್ಲದೆ ಬದುಕುಳಿಯುವ ನೈಸರ್ಗಿಕ ದಾರಿಯಲ್ಲಿ ಅನೇಕ ಬಗೆಯ ಅಭಾವಗಳಿಂದ ಹಿಂದೆ ಉಳಿದರು. ಕಾಲವು ಈ ಎಲ್ಲ ಬದಲಾವಣೆಗಳ ಮೇಲೆಯೇ ನಡೆದು ಬಂದಿರುವುರಿಂದ ಅವ್ಯಕ್ತವಾದ ಮಾನವ ಪಾಡಿನ ಕಥನಗಳು ಅಳಿಸಿ ಹೋಗಿವೆ. ಆದರೂ ಪಶುಪಾಲಕ ಪರಂಪರೆಗಳು ನಿತ್ಯಜೀವನದಲ್ಲಿ ಅಂತಹ ಎಲ್ಲ ನೆನಪುಗಳನ್ನು ಉಳಿಸಿಕೊಂಡೇ ಇಂದಿಗೂ ಬದುಕಿನ ಪೈಪೋಟಿಯಲ್ಲಿ ಮುಖಾಮುಖಿ ಆಗುತ್ತಿವೆ. ಹಂಪಿಯ ಅವ್ಯಕ್ತ ಸಂಸ್ಕೃತಿಯಲ್ಲಿ ಇವೆಲ್ಲ ಕಾಲಾನುಗತಿಯಲ್ಲಿ ಸ್ಪಷ್ಟವಾಗಿ ಕಾಣಸಿಗುವುದಿಲ್ಲ. ಹಾಗೆ ಕಾಣಬೇಕು ಎಂಬ ನಮ್ಮ ಅಪೇಕ್ಷೆಯೂ ತರ್ಕವೂ ಉಚಿತವಲ್ಲ. ಒಂದು ಸಮುದಾಯ ಇನ್ನೊಂದು ಸಮುದಾಯದ ಜೊತೆ ಪೈಪೋಟಿ ಮಾಡುವಾಗ ಆದಷ್ಟು ಮಟ್ಟಿಗೆ ಅಂತಹ ಸ್ಪರ್ಧೆಯ ಕ್ರಮಗಳನ್ನೆ ಬಚ್ಚಿಟ್ಟುಕೊಂಡಿರುತ್ತದೆ. ಇದು ಬದುಕುಳಿಯುವ ತಂತ್ರವೂ ಹೌದು.

ಪಶುಪಾಲಕ ಸಮುದಾಯಗಳ ನೆನ್ನೆಯ ಆರ್ಥಿಕ ಹಿನ್ನೆಡೆಯು ಸಮಕಾಲೀನ ಸಮಾಜದ ಆರ್ಥಿಕ ರಚನೆಯಲ್ಲಿ ಪರೋಕ್ಷವಾಗಿ ಬಿಂಬಿತವಾಗುತ್ತಿರುತ್ತದೆ. ವಿಶ್ವ ಪರಂಪರೆಯ ಹಂಪಿಯ ಭವಿಷ್ಯ ಚರಿತ್ರೆಯ ಸಮೃದ್ದಿಯ ಕಥನಗಳ ನಡುವೆ ಪಶುಪಾಲಕ ಸಮುದಾಯಗಳ ಚರಿತ್ರೆ ಮಸುಕಾಗಿರುವುದು ಸಹಜವೇ. ದೇವದಾಸಿ ಪದ್ಧತಿಯಂತಹ ಅಮಾನಯ ಸಂಪ್ರದಾಯಗಳಿಗೆ ಪಶುಪಾಲಕ ಸಮುದಾಯಗಳ ಸ್ತ್ರೀ ಸಮೂಹವನ್ನು ಹಾಗೂ ತೀರ ಕೆಳಜಾತಿಗಳ ಮಹಿಳೆಯರನ್ನು ವಿಜಯನಗರ ಸಾಮ್ರಾಜ್ಯವು ತನ್ನ ಸುಖಕ್ಕಾಗಿ ಬಳಸಿಕೊಂಡದ್ದು ಅವ್ಯಕ್ತ ಚರಿತ್ರೆಯ ಇನ್ನೊಂದು ಮುಖ. ಪಶುಪಾಲಕ ಸಮುದಾಯಗಳು ತಮ್ಮೊಳಗೆ ಪೈಪೋಟಿ ಎದುರಿಸುತ್ತ ತನ್ನ ಅಕ್ಕ ಪಕ್ಕದ ಉಳಿದ ಪಶುಪಾಲಕ ವರ್ಗಗಳ ಜೊತೆಯೂ ಸ್ಪರ್ಧಿಸುತ್ತ ಕೊನೆಗೆ ಇವೆರಡೂ ಇಕ್ಕಟ್ಟುಗಳ ನಡುವೆ ವಿಜಯನಗರ ಸಾಮ್ರಾಜ್ಯದ ಒತ್ತಡಗಳಿಗೂ ಮಣಿಯುತ್ತ ಇರಬೇಕಾದ ಸ್ಥಿತಿಯಲ್ಲಿ ಪಶುಪಾಲಕ ಸಮುದಾಯಗಳ ಮಹಿಳೆಯರ ಸ್ಥಿತಿಗತಿ ಏನಾಗಿತ್ತು ಎಂಬುದು ಅವ್ಯಕ್ತವಾಗಿಯೆ ಉಳಿದು ಬಿಟ್ಟಿದೆ.

ಪಶುಪಾಲಕರ ಮಹಿಳೆಯರು

ಲಿಂಗ ಸಂಬಂಧಗಳ ಸಂಘರ್ಷ ಸಾಮಿಪ್ಯ ಅನನ್ಯತೆಯು ಮಾತೃ ಪ್ರಧಾನ ಸಂಸ್ಕೃತಿಯಲ್ಲಿ ಹೇಗೆ ನಿಸರ್ಗವನ್ನು ಕಾಣುತ್ತಿದ್ದವು ಹಾಗೂ ಅವು ಹೇಗೆ ಪಿತೃ ಪ್ರಧಾನ ವ್ಯವಸ್ಥೆಯ ಹಂತದಲ್ಲಿ ಪುರುಷಾಧಿಪತ್ಯಕ್ಕೆ ರೂಪಾಂತರಗೊಂಡವು ಎಂಬುದನ್ನು ಈಗಾಗಲೇ ಗಮನಿಸಿದ್ದೇವೆ. ಪಶುಪಾಲಕ ಸಂಸ್ಕೃತಿಯ ಪಿತೃ ಪ್ರಧಾನ ಜೀವನ ಕ್ರಮಕ್ಕೆ ತಕ್ಕಂತೆ ರೂಪುಗೊಂಡಿದೆ. ಆಸ್ತಿ ಹಕ್ಕು ಸಂಪತ್ತಿನ ಒಡೆತನ ಜಾಗೃತಗೊಂಡಾಗ ಪಶುಸಂಪತ್ತಿನ ನಿರ್ವಹಣೆಯಲ್ಲಿ ಪುರುಷರೇ ಮುಂದಾಗಿ ಅಧಿಕಾರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಪಶುಪಾಲಕರ ಸಂಸ್ಕೃತಿಯಲ್ಲಿ ಮಹಿಳೆಯ ಸ್ಥಾನ ತುಂಬ ಕೆಳಗಿಳಿದಿದೆ. ಗೊಲ್ಲ ಸಮುದಾಯದಲ್ಲಂತು ಪಿತೃ ಮೌಲ್ಯಗಳು ತಮ್ಮ ಮಹಿಳೆಯರನ್ನು ಶುದ್ಧ ಅಶುದ್ಧ ನಂಬಿಕೆಗಳಲ್ಲಿ ಅತ್ಯಂತ ಅಮಾನಯವಾಗಿ ಹೊರಗಿಟ್ಟು ಅನ್ಯಗೊಳಿಸುವ ಪರಿಪಾಠವನ್ನು ಬೆಳಸಿ ಈಗಲೂ ಮುಂದುವರಿಸಿರುವ ವಾಸ್ತವ ಇದೆ. ಪಶುಪಾಲಕ ವೃತ್ತಿಯು ಆಸ್ತಿಯ ಕಲ್ಪನೆಯನ್ನು ಒಳಗೊಂಡಿದ್ದರಿಂದ ಮಹಿಳೆಯರೂ ಅದೇ ಬಗೆಯ ಆಸ್ತಿಯ ಅರ್ಥಕ್ಕೆ ಒಳಪಟ್ಟರು. ಸೇವಕ ಕೆಲಸಗಳು ಹಾಗೂ ಲೈಂಗಿಕ ಕ್ರಿಯೆಗಳಿಗೆ ಮಹಿಳೆಯರನ್ನು ಬಳಸಿಕೊಳ್ಳುವ ಸ್ವಭಾವ ಎಲ್ಲ ಬಗೆಯ ಪುರುಷಪ್ರಾಧಾನ್ಯ ಪಲ್ಲಟಗಳ ಗುಣ. ಇದು ಪಶುಪಾಲಕರ ಸಮಾಜದಲ್ಲೂ ಬೆರೆತಿದೆ. ಪಳೆಯುಳಿಕೆಯಂತೆ ಮಾತೃ ಪ್ರಧಾನ ನಂಬಿಕೆಗಳು ಉಳಿದಿವೆಯಾದರೂ ಅವು ಯಾವೂ ಕೂಡ ಅಧಿಕಾರ ಹೊಂದಿಲ್ಲ. ಮ್ಯಾಸಬೇಡರಲ್ಲೂ ಸತಿ ಹೋದಂತಹ ಪ್ರಕರಣಗಳು ಚಿತ್ರದುರ್ಗದ ಪರಿಸರದ ಪಶುಪಾಲಕ ಬದುಕಿನಲ್ಲಿ ಘಟಿಸಿವೆ ಎಂದರೆ ಹೇಗೆ ಲಿಂಗ ಸಂಬಂಧಿ ಅಧಿಕಾರಗಳು ಹೊರಗಿನಿಂದ ಬಂದು ದಾಳಿ ಮಾಡಿವೆ ಎಂಬುದು ತಿಳಿಯುತ್ತದೆ.

ಪಶುಗಳ ಕಾಯುವ ಕೆಲಸದ ಜೊತೆಗೇ ಪಶುಪಾಲಕರನ್ನೆ ಕಾಯುವ ಹೊಣೆಯನ್ನು ಪಶುಪಾಲಕರ ಸ್ತ್ರೀಯರು ಹೊಂದಿದ್ದರು. ಈಗಲೂ ಅಲೆಮಾರಿ ಪಶುಪಾಲಕರ ಕುಟುಂಬಗಳನ್ನು ಕಾಯುವವರು ಮಹಿಳೆಯರೇ ಆಗಿದ್ದಾರೆ. ಪಶುಪಾಲಕ ಹಾಗೂ ಅಲೆಮಾರಿ ಸಮುದಾಯಗಳ ಲಿಂಗಸಂಬಂಧದ ವ್ಯಾಪಕ ಅಧ್ಯಯನಗಳು ನಡೆದಿಲ್ಲವಾದ್ದರಿಂದ ಪಶು ಪಾಲಕ ಕುಟುಂಬಗಳ ಒಳಗಿನ ವಿವರಗಳು ಅನ್ಯವಾಗಿಯೆ ಉಳಿದು ಬಿಟ್ಟಿವೆ. ಹಂಪಿಯ ವಿಜಯನಗರ ಸಾಮ್ರಾಜ್ಯವು ವಿಖ್ಯಾತ ನಗರ ಜೀವನವನ್ನು ಸಮೃದ್ಧವಾಗಿ ಹಂಪಿಯಲ್ಲಿ ವ್ಯಾಪಿಸಿಕೊಂಡಿದ್ದಾಗ ವಿಶೇಷವಾಗಿ ಬೇಡ ಸಮುದಾಯವನ್ನೆ ಅದರ ಬುಡಕಟ್ಟು ಹಾಗೂ ಪಶುಪಾಲಕ ಸ್ವಭಾವಗಳನ್ನು ಬಿಡಿಸಿ ಆ ಕಾಲಕ್ಕಾಗಲೇ ನಗರೀಕರಣಕ್ಕೆ ಒಳಪಡಿಸಿಕೊಂಡಿದ್ದ ಅಂಶವನ್ನು ಗಮನಿಸಿದರೆ ಪ್ರಭುತ್ವದ ಸ್ವಾರ್ಥದ ದೃಷ್ಟಿಯಿಂದ ಈ ಪರಿಸರದಲ್ಲಿದ್ದ ಮಹಿಳೆಯರಿಗೆ ಸೀಮಿತವಾಗುವಂತೆ ದೇವದಾಸಿ ಪದ್ಧತಿಯ ಮೂಲಕ ಮುಕ್ತವಾಗಿರುವ ಸ್ವಾತಂತ್ರ್ಯವನ್ನು ನೀಡಿತ್ತು. ಇದು ಲಿಂಗಸಂಬಂಧಗಳ ಪ್ರಭುತ್ವದ ರಾಜಕಾರಣವಲ್ಲದೆ ಬೇರೇನೂ ಅಲ್ಲ. ಬಹುಪಾಲು ಎಲ್ಲ ಜಾತಿಗಳ ಮಹಿಳೆಯರನ್ನು ದೇವದಾಸಿ ಪದ್ದತಿಯ ಚೌಕಟ್ಟಿಗೆ ಒಳಪಡಿಸುವ ಯತ್ನ ನಡೆಯಿತಾದರೂ ಈ ಪ್ರಕ್ರಿಯೆಯಲ್ಲಿ ಕೆಲವೇ ಜಾತಿಗಳು ಮಾತ್ರ ಸಿಲುಕಿ ಉಳಿದ ಮೇಲು ಜಾತಿಗಳು ತಪ್ಪಿಸಿಕೊಂಡಂತೆ ಕಾಣುತ್ತದೆ.

ಪ್ರಭುತ್ವ ಮತ್ತು ಅದರ ರಾಜಕೀಯ ವ್ಯೂಹದ ರಾಜಧಾನಿ ಕೆಲವರನ್ನು ಮಾತ್ರವೇ ಕೆಲವು ಸೇವೆಗಳಿಗೆ ಆಯ್ಕೆಮಾಡಿಕೊಳ್ಳುತ್ತದೆ. ಇಲ್ಲೂ ಅದೇ ಆಯ್ಕೆ ನಡೆದಿರುವುದು. ಗೊಲ್ಲ ಮತ್ತು ಕುರುಬ ಸಮುದಾಯಗಳಲ್ಲಿ ಕೂಡ ದೇವದಾಸಿ ಪದ್ಧತಿ ಬಹಳ ಕಡಿಮೆ ಪ್ರಮಾಣದಲ್ಲಿ ಇದ್ದಿತ್ತೆನ್ನಬಹುದಾದರೂ ಅದು ಆ ಸಮುದಾಯದ ಮಹಿಳೆಯರಿಗೆ ಸಾಮೂಹಿಕವಾಗಿ ಚಹರೆಯನ್ನು ನೀಡುವ ಮಟ್ಟದಲ್ಲಿರಲಿಲ್ಲ. ವೇಶ್ಯಾ ವೃತ್ತಿಯಲ್ಲಿದ್ದ ವಿವಿಧ ಅವ್ಯಕ್ತ ಮಹಿಳಾ ಸೇವೆಗಳು ಬೇರೆ. ಪ್ರಭುತ್ವವು ದಂಡಾಧಿಕಾರದಲ್ಲಿ ಬೇರೆ ಬೇರೆ ಸಮುದಾಯಗಳ ಮಹಿಳೆಯರನ್ನು ಈ ಪ್ರಕ್ರಿಯೆಗಳಲ್ಲಿ ಬಳಸಿಕೊಂಡಿದೆ. ಪಶುಪಾಲಕ ಸಮುದಾಯದ ಮಹಿಳೆಯರಿಗೆ ಹೊರಗಿನ ಸಮಾಜವೂ ಆಕೆಗೆ ಬೇಕಿದ್ದ ಅವಕಾಶವನ್ನು ನೀಡಿರಲಿಲ್ಲ. ಅಂತಯೆ ಅವಳ ಕುಟುಂಬದ ಒಳಗೂ ಸೂಕ್ತ ಸ್ಥಾನ ದಕ್ಕಿರಲಿಲ್ಲ. ಇದು ಎಲ್ಲ ಸಾಮ್ರಾಜ್ಯಶಾಹಿ ಊಳಿಗಮಾನ್ಯ ಪುರುಷಾಧಿಪತ್ಯದ ಕುಟುಂಬಗಳ ಒಂದೇ ಬಗೆಯ ಪರಿಸ್ಥಿತಿ. ಪಶುಪಾಲಕ ಸಮಾಜಗಳ ಕುಟುಂಬದಿಂದ ಹಿಡಿದು ಸಾಮ್ರಾಜ್ಯಗಳ ಕುಟುಂಬಗಳವರೆಗೂ ಸಮಾನವಾಗಿ ಹಬ್ಬಿದ್ದ ಲಿಂಗತಾರತಮ್ಯದ ವಿಪರ‍್ಯಾಸ.

ಹಂಪಿ ಪರಿಸರದ ಪಶುಪಾಲಕ ಸಮಾಜಗಳು ಈಗ ಬದಲಾಗಿವೆ ನಿಜ. ಆದರೆ ಪಶುಪಾಲಕ ಸಂಸ್ಕೃತಿಯ ಪುರುಷಪ್ರಧಾನ ನಂಬಿಕೆಗಳು ಗುಪ್ತವಾಗಿ ಉಳಿದುಕೊಂಡಿವೆ. ಅಲೆಮಾರಿ ಪಶುಪಾಲಕ ಕುಟುಂಬಗಳು ಈಗಲೂ ಹಂಪಿಗೆ ಬಂದು ಕುರಿಗಳನ್ನು ಮೇಯಿಸಿ ಕೊಂಡು ಮುಂದಿನ ನೆಲೆಗಳಿಗೆ ಹೋಗುವುದಿದೆ. ಸಾಮ್ರಾಜ್ಯದ ಗತವೂ ಹಾಗೆಯೇ ಇದ್ದು ಹಂಪಿಯ ಪರಿಸರದಲ್ಲಿ ಮಣ್ಣಾಗಿ ಮಲಗಿದೆ. ಅವುಗಳ ಮೇಲೆಯೆ ಅಲೆಮಾರಿಗಳೂ ಅವತ್ತಿನ ಪಶುಪಾಲಕರಾಗಿದ್ದು ಇವತ್ತಿನ ಜಾತಿಗಳಾಗಿರುವ ಬೇಡ, ಕುರುಬ ಸಮುದಾಯಗಳು ಬದುಕುತ್ತಿವೆ. ನೆನ್ನೆಯ ಪಳೆಯುಳಿಕೆಯಂತಿದ್ದು ಈಗಲೂ ಅಪ್ಪಟ ಪಶುಪಾಲಕರೇ ಆಗಿರುವ ಕೆಲವೇ ಪಶುಪಾಲಕ ಕುಟುಂಬಗಳು ಊರೊಳಗೆ ಬಂದು ನೆಲೆ ನಿಂತ ಬೇಡ, ಗೊಲ್ಲ, ಕುರುಬರ ಕಳಚಿದ ಕೊಂಡಿಯಂತೆ ಉಳಿದಿವೆ. ಅವ್ಯಕ್ತ ಚರಿತ್ರೆಯಲ್ಲಿ ಮಾತ್ರ ಈ ಕಳಚಿದ ಕೊಂಡಿಯ ವಿಘಟನೆಗಳಿವೆ. ಇವನ್ನೆಲ್ಲ ಹಂಪಿಯ ಪಶುಪಾಲಕ ಸಂಸ್ಕೃತಿಯ ಭಗ್ನ ಸಂಬಂಧ ಗಳೆಂದೇ ಕರೆಯಬೇಕಾಗುತ್ತದೆ. ಈ ಬಗೆಯ ಹಿನ್ನೆಲೆಗಳಲ್ಲಿ ಹಂಪಿಯ ಪಶುಪಾಲಕ ಸಂಸ್ಕೃತಿಯ ನೈಸರ್ಗಿಕ ಹಾಗೂ ಅಂಶ ಹಿನ್ನೆಲೆಗಳನ್ನು ಕೆಳಗಿನಂತೆ ಪಟ್ಟಿಮಾಡಬಹುದು.

  • ಹಂಪಿಯು ಪಶುಪಾಲಕ ಸಂಸ್ಕೃತಿಯು ಬೇಡ ಗೊಲ್ಲ ಕುರುಬ ಸಮುದಾಯಗಳ ಜೀವನದ ಸ್ವರೂಪವನ್ನು ಪ್ರತಿನಿಧಿಸುತ್ತದೆ.
  • ಹಂಪಿಯ ವಿಜಯನಯಗರ ಸಾಮ್ರಾಜ್ಯದ ಉಗಮ ವಿಕಾಸದ ಎಲ್ಲ ಹಂತಗಳಲ್ಲಿ ಈ ಪಶುಪಾಲಕ ಸಮುದಾಯಗಳ ಪಾತ್ರ ನಿರ್ಣಾಯಕವಾಗಿತ್ತು.
  • ಪಶುಸಂಪತ್ತಿನ ಪೈಪೋಟಿಯಲ್ಲಿ ಈ ಸಮುದಾಯಗಳು ತಮ್ಮೊಳಗೇ ವಿಭಿನ್ನ ಬಣಗಳಾಗಿ ವಿಭಜನೆಗೊಂಡು ಅಂತರ ಕಾಯ್ದುಕೊಂಡಿವೆ.
  • ಪಶುಪಾಲಕ ಸಂಸ್ಕೃತಿಯ ನಿಸರ್ಗ ತತ್ವದ ಮೌಲ್ಯಗಳು ಪುರುಷ ಪ್ರಧಾನ ಮೌಲ್ಯಗಳಿಗೆ ಪಲ್ಲಟಗೊಳ್ಳುವಾಗ ತಮ್ಮ ಒಳಗಿನ ಉಪ ಪಂಗಡಗಳಲ್ಲೆ ಅಸಮಾನತೆಯನ್ನು ರೂಪಿಸಿವೆ.
  • ಪಶುಪಾಲಕ ಸಮುದಾಗಳೆ ಹಂಪಿ ಪ್ರದೇಶದ ಗ್ರಾಮೀಣ ಪರಿಸರವನ್ನು ಜನಪದ ಪರಂಪರೆಗಳನ್ನು ಬೆಳೆಸಿವೆ.
  • ಅವ್ಯಕ್ತ ಸಂಸ್ಕೃತಿಯು ಬಹುರೂಪಿ ಅಭಿವ್ಯಕ್ತಿಗಳನ್ನು ತಮ್ಮ ಅಸ್ತಿತ್ವಕ್ಕಾಗಿ ಹಾಗೂ ಕುಲಗಳಾಗಿ ಭಿನ್ನತೆಯನ್ನು ಸಾಧಿಸಿಕೊಳ್ಳುವುದಕ್ಕಾಗಿ ಕಂಡು ಕೊಂಡಿದೆ.
  • ಈ ಪಶುಪಾಲಕ ಸಮುದಾಯಗಳು ವಿಜಯನಗರ ಸಾಮ್ರಾಜ್ಯದ ರಾಜಕೀಯ ಪ್ರಭುತ್ವದ ದಬ್ಬಾಳಿಕೆಗೂ ಒಳಗಾಗಿ ತಮ್ಮ ಪಶುಪಾಲಕ ಚರಹೆಗಳನ್ನು ಅಸ್ವಾಭಾವಿಕವಾಗಿ ಬದಲಿಸಿಕೊಂಡು ಸಾಂಸ್ಕೃತಿಕ ಅತಂತ್ರತೆಗೆ ಈಡಾಗಿ ಜಾತಿ ಸ್ವರೂಪವನ್ನು ಅಂಗೀಕರಿಸಿವೆ.
  • ಸಾಂಸ್ಕೃತಿಕ ಸಂಪತ್ತನ್ನೆ ಅಧಿಕೃತ ಎಂದು ಭಾವಿಸಿ ಪಶುಪಾಲನ ವೃತ್ತಿಯೇ ಯಾವತ್ತೂ ಯೋಗ್ಯವೆಂದು ನಂಬಿದ ಕೆಲವು ಗುಂಪುಗಳು ಬದಲಾದ ಕಾಲದ ಜಾಯಮಾನಕ್ಕೆ ಹೊಂದಿಕೊಳ್ಳಲಾರದೆ ಸಮುದಾಯಗಳು ಆಧುನಿಕತೆಯ ಪೈಪೋಟಿಯಲ್ಲಿ ಬಹಳ ಹಿಂದುಳಿದಿವೆ.
  • ಲಿಂಗ ಅಸಮಾನತೆಯನ್ನು ಒಪ್ಪಿಕೊಂಡ ಪಶುಪಾಲಕ ಸಂಸ್ಕೃತಿಯ ಮೌಲ್ಯಗಳು ಮಹಿಳೆಯರನ್ನೆ ತಮ್ಮ ಆಸ್ತಿ ಎಂಬ ರೀತಿಯಲ್ಲೆ ಬಳಸಿಕೊಂಡಿವೆ. ಹಾಗೆಯೆ ಪಶುಪಾಲಕ ಸಮುದಾಯಗಳ ಮಹಿಳೆಯರ ಬದುಕು ಕ್ರೂರವಾದ ಸೆರೆಗೆ ಒಳಪಟ್ಟಂತಾಗಿದೆ.

ಸಹಜ ನೈಸರ್ಗಿಕ ಬೇರುಗಳಿಂದ ಪಲ್ಲಟಗೊಳ್ಳುವ ಹಂತದಲ್ಲಿ ಯಾವುದೇ ಸಮುದಾಯಕ್ಕೂ ಭವಿಷ್ಯದ ಎಚ್ಚರ ಇರುವ ಸಾಂಸ್ಕೃತಿಕ ನಾಯಕರು ಹುಟ್ಟಿಕೊಂಡರೆ ಮಾತ್ರ ಅಂತಹ ಸಮುದಾಯವು ನಾಳಿನ ಉತ್ತಮ ಅವಕಾಶವನ್ನು ತನ್ನದಾಗಿಸಿಕೊಳ್ಳಬಲ್ಲದು. ನೆನ್ನೆಯ ಪಶುಪಾಲಕ ಸಮುದಾಯಗಳು ಹೆಚ್ಚು ಕಡಿಮೆ ಈಗಲೂ ಅದೇ ಬಗೆಯಾಗಿ ಬದುಕುತ್ತಿರುವುದು ಹಂಪಿ ಪರಿಸರದಲ್ಲಿನ ವಿಶೇಷ. ಹಾಗೆ ನೋಡಿದರೆ ಹಂಪಿಯು ಪಶುಪಾಲಕ ಸಮುದಾಯಗಳ ಸಂಸ್ಕೃತಿ ಹದಿನೈದು ಹದಿನಾರನೇ ಶತಮಾನದ ಎಷ್ಟೋ ಪಳೆಯುಳಿಕೆಗಳನ್ನು ಈಗಲೂ ಉಳಿಸಿಕೊಂಡು ಬಂದಿದೆ. ಕಾಲ ಬದಲಾಗಿದ್ದರೂ ಈ ಸಮಾಜ ಗಳ ಆಳದ ಅವ್ಯಕ್ತ ಸಂಸ್ಕೃತಿ ಹಾಗೆ ಮುಂದುವರಿದು ಆಧುನಿಕ ವೇಷಗಳಲ್ಲಿ ರೂಪಾಂತರಕ್ಕಾಗಿ ಕಾಯುತ್ತಿದೆ.

ಹಂಪಿಯ ಪಶುಪಾಲಕರ ನೆನ್ನೆಯ ಆ ಪೈಪೋಟಿಯು ಈಗ ಬದಲಾದ ರಾಜಕೀಯ ಇಕ್ಕಟ್ಟಿನಲ್ಲಿ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸವಾಲುಗಳ ಜೊತೆ ಮುಖಾಮುಖಿ ಆಗುತ್ತಿದೆ. ವಿಶ್ವಪರಂಪರೆಯ ಹಂಪಿಯ ಗ್ರಾಮಗಳ ಅವ್ಯಕ್ತ ಚರಿತ್ರೆಯನ್ನು ಪ್ರವಾಸಿಗಳ ವಿಲಾಸಿ ರುಚಿಗೆ ಉಣಬಡಿಸುವ ಬದಲು ಅವರ ವರ್ತಮಾನವನ್ನು ವಿಸ್ತರಿಸುವ ಯೋಜನೆಗಳು ಬೇಕು. ಆಗಲೆ ವಿಶ್ವಪರಂಪರೆಯ ಬವ್ಯಗತದ ನೆನಪಿಗೆ ಅರ್ಥಬರುವುದು